ಒಂದು ಶತಮಾನವಾಯಿತು ಮೊದಲ ಮಹಾಯುದ್ಧ ಮುಗಿದು. ಅಂದು ಪರಂಗಿಗಳ ಆಳ್ವಿಕೆಯಲ್ಲಿದ್ದ ಭಾರತದ ಸೈನಿಕರು ಅಪಾರ ಬೆಲೆ ತೆತ್ತರು. ಆದರೆ ಅವರ ಬಲಿದಾನ ಯಾವ ಮಾನ್ಯತೆಯನ್ನೂ ಪಡೆಯಲಿಲ್ಲ. ದಿಲ್ಲಿಯ ಇಂಡಿಯಾ ಗೇಟ್ ನಲ್ಲಿ ಮೊದಲ ಮಹಾಯುದ್ಧದಲ್ಲಿ ಮಡಿದ ಯೋಧರ ಹೆಸರು ಕೆತ್ತಿದ್ದರೂ ಹೆಚ್ಚಿನ ಭಾರತೀಯರಿಗೆ ಇದರ ಮಾಹಿತಿಯೂ ಇಲ್ಲ. ಈ ವಾರ ಮರೆವಿನಂಗಳದಿಂದ ಈ ಕೆಚ್ಚೆದೆಯ ಕಲಿಗಳ ನೆನಪನ್ನು ಹೊರತರುತ್ತಿರುವ ಶಾಂತಾ ರಾವ್ ಅವರ ಪ್ರಯತ್ನವನ್ನು ನಮ್ಮ ಮುಂದೆ ಹಂಚಿಕೊಡಿದ್ದಾರೆ ಶ್ರೀವತ್ಸ ದೇಸಾಯಿಯವರು. ಮಹಾಯುದ್ಧದ ಯೋಧರ ಬಗ್ಗೆ ಸಂಶೋಧನೆ ಮಾಡಿ, ಅಂದು ಹೋರಾಡಿದ ಕನ್ನಡಿಗರನ್ನೂ ನಮಗೆ ಪರಿಚಯ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಮಗೆ ಸಾಧ್ಯವಾದರೆ ನೃತ್ಯರೂಪಕವನ್ನೂ ವೀಕ್ಷಿಸಿ.(ಸಂ)
ಇಂಗ್ಲಂಡಿನ ಹ್ಯಾಲಿಫ್ಯಾಕ್ಸ್ ನ ಶಾಂತಾ ರಾವ್ ಅವರ ನೃತ್ಯ ರೂಪಕದಲ್ಲಿ ಬರುವ ಒಂದು ಹೃದ್ರಾವಕ ದೃಶ್ಯ: ಯುದ್ಧಕ್ಕೆ ಸಜ್ಜಾಗಿ ಹೊರಟ ಆಜಾನಬಾಹು ಸಿಖ್ ಯುವಕನನ್ನು ಹರಸಿ ಕಣ್ಣೀರು ತುಂಬಿ ಬೀಳ್ಕೊಡುತ್ತಿದ್ದಾಳೆ ಹೆತ್ತ ತಾಯಿ. ಆಗಷ್ಟೇ ತಾನೆ ತನ್ನ ಕೈಯಾರೆ ತನ್ನೆದೆಯ ಪ್ರೀತಿ, ವಾತ್ಸಲ್ಯ ಬೆರೆಸಿ ತನ್ನ ಕೈಯಿಂದ ಮಾಡಿದ ಸ್ವಾದಿಷ್ಟ ಊಟ ಕೊನೆಯ ಬಾರಿ ತನ್ನ ಕರುಳ ಕುಡಿಗೆ ತಿನಿಸಿ, ಕೊನೆಯ ಬಾರಿ ಹಾಲಿನ ಜೊತೆಗೆ ಬಹುಶಃ ತನ್ನ ಕಣ್ಣೀರನ್ನೂ ಬೆರೆಸಿದ್ದಾಳೆ! ತಾಯಿಯ ಕಾಲಿಗೆ ನಮಸ್ಕರಿಸಿ ಅಳಬೇಡವೆಂದು ಬಾಯಿ ಮೇಲೆ ಬೊಟ್ಟಿಟ್ಟು ಬೇಡಿ ಹೊರಟ ಆತನ ತಲೆಮೇಲೆ ಸಿಖ್ಕ ಧರ್ಮಗ್ರಂಥ ‘ಗುರುಗ್ರಂಥ ಸಾಹಿಬ್’. ಅದನ್ನು ಭಕ್ತಿಪೂರ್ವಕವಾಗಿ ಶಿರೋಧಾರಣ ಮಾಡಿ ತಾಳಕ್ಕೆ ಸರಿಯಾಗಿ ಹೆಜ್ಜೆಯಿಡುತ್ತ ನೇಪಥ್ಯದತ್ತ ಸರಿಯುವಾಗ ಹಿನ್ನೆಲೆಯಲ್ಲಿ ಮಿಡಿವ ಆರ್ದ್ರತೆಯಲ್ಲಿ ಮಿಂದ ವೇಣು ಗಾನ. ಪ್ರೇಕ್ಷಕರ ಎದೆಯಲ್ಲಿ ಏನೋ ಕಸಿವಿಸಿ, ಕಣ್ಣಂಚಿನ ಕೊನೆಯಲ್ಲಿ ಒಂದು ಅಶ್ರುಬಿಂದು. ಆತನ ಹಿಂದೆ ಬಿಳಿ ಪರದೆಯ ಮೇಲೆ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿದ ಭಾರತೀಯ ಯೋಧರು ಮರಳುಗಾಡಿನಲ್ಲಿ ಪ್ರಾರ್ಥನೆಗೆ ಹೊರಟ ಕಪ್ಪು-ಬಿಳಿ

ಛಾಯಾಚಿತ್ರದ ಪ್ರೊಜೆಕ್ಷನ್. ಪ್ರೇಕ್ಷಕರ ಸುದೀರ್ಘ ಕರತಾಡನದೊಂದಿಗೆ ಕಾರ್ಯಕ್ರಮ ಕೊನೆಗೊಳ್ಳುತ್ತದೆ.
ಈ ನಿರೂಪಣೆ ಬರೀ ಕಾಲ್ಪನಿಕ ಕಟ್ಟು ಕಥೆಯಲ್ಲ. ಈ ಸನ್ನಿವೇಶ ಆ 18 ವರ್ಷದ ತರುಣನಂತೆಯೇ ಬ್ರಿಟಿಷ್ ಸೈನ್ಯದಲ್ಲಿ ಸೇರಿ ಅವರ ಪರವಾಗಿ ಯುದ್ಧ ಮಾಡಿ ಮಡಿದ 74,000 ಅವಿಭಾಜಿತ ಭಾರತದ ಯೋಧರ ಕಥೆಯನ್ನು ಹೇಳುತ್ತಿದೆ ಎಂಬ ಸತ್ಯದ ಮನವರಿಕೆ ಮೊದಲ ಸಲ ಆದಾಗ ಸಭಿಕರ ಮೈನವಿರೇಳುತ್ತದೆ! ಮೊದಲನೆಯ ಮಹಾಯುದ್ಧದ (1914-18) ಶತಾಬ್ದಿಯ ಸಂದರ್ಭದಲ್ಲಿ ಈ ನೃತ್ಯ ರೂಪಕವನ್ನು ಯುಕೆ ದಲ್ಲಿf ಕಳೆದೆರಡು ವರ್ಷಗಳಲ್ಲಿ ಹತ್ತಾರು ಕಡೆ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ ನಿರ್ದೇಶಕಿ ಶಾಂತಾ ರಾವ್. ಇದಲ್ಲದೆ ತಾವೇ ಹುಟ್ಟು ಹಾಕಿದ ಅನ್ನಪೂರ್ಣ ಡಾನ್ಸ್ ಕಂಪನಿಯ ವತಿಯಿಂದ ಶಾಲೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಅಂಗ ವಿಕಲ (ಡಿಸೆಬಲ್ಡ್) ಗ್ರುಪ್, ಮಹಿಳಾ ಸಂಘ (Womens Institute) ಗಳಲ್ಲಿ ನೂರಾರು ಪ್ರಾತ್ಯಕ್ಷಿಕೆ, ಕಥಾರೂಪಕಗಳನ್ನು (story telling) ಪ್ರದರ್ಶಿಸಿದ ಹೆಗ್ಗಳಿಕೆ ಇವರದಾಗಿದೆ. ಯು.ಕೆ.ದ ಯಾರ್ಕ್ ಶೈರಿನಲ್ಲಿ 1975 ರಿಂದಲೂ ವಾಸಿಸುತ್ತಿರುವ ಕುಂದಾಪುರದ ಮೂಲದವರಾದ ಶಾಂತಾ ರಾವ್ ಅವರು ಯು ಕೆ ಕನ್ನಡ ಬಳಗದ ಆಜೀವ ಸದಸ್ಯೆ ಸಹ. ಭರತ ನಾಟ್ಯದಲ್ಲಿ ಪಾರಂಗತರಾದ ಶಾಂತಾ ಅವರಿಗೆ ಅ ಮಹಾಯುದ್ಧದಲ್ಲಿ ಮಡಿದು ಮಣ್ಣಾಗಿ ’ನಿರ್ನಾಮವಾಗಿ’ ಹೋದ ಅಜ್ಞಾತ ಯೋಧರಿಗೆ ತಮ್ಮಿಂದ ಒಂದು ಶ್ರದ್ಧಾಂಜಲಿಯಾದರೂ ಸಲ್ಲಬೇಕು ಎಂದು ಪಣ ತೊಟ್ಟು ಕಳೆದ ವರ್ಷ ಕಾರ್ಯಪ್ರವೃತ್ತರಾದರು. ಅದರ ಫಲವೇ ಈ ”Unknown becomes Known” ಎನ್ನುವ ನಾಟ್ಯ ರೂಪಕ.
ಪ್ರಥಮ ಮಹಾಯುದ್ಧದ ಅಜ್ಞಾತ ಭಾರತೀಯ ಯೋಧರು

ತಾಯಿನಾಡಿಗಾಗಿ ಹೋರಾಡಿದರೆ ಆ ವೀರರನ್ನು ದೇಶ ನೆನೆದೀತು. ಜನ ಕೊಂಡಾಡಲೂ ಬಹುದು, ಕಾವ್ಯದಲ್ಲಿ ಅಮರರನ್ನಾಗಿಯೂ ಮಾಡ ಬಹುದು. ಆಂಗ್ಲ ಕವಿ ರೂಪರ್ಟ್ ಬ್ರುಕ್ಕನಂತೆ ಜಗತ್ಪ್ರಸಿದ್ಧನಾಗ ಬಹುದು. (” If I should die, think only this of me: / That there’s some corner of a foreign field / That is forever England.”) ಆದರೆ 1914ರಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಭರ್ತಿಯಾಗಿದ್ದ ಲಕ್ಷಗಟ್ಟಲೆ ಭಾರತೀಯ ಸೈನಿಕರಿಗೆ ತಮ್ಮನ್ನಾಳುವ ದೇಶದ (ಬ್ರಿಟನ್) ಪರವಾಗಿ ಹೋರಾಡುವ ಪ್ರಸಂಗ ಬಂದಿತು. ಆ ಸೈನ್ಯದಲ್ಲಿ ಆಗಿನ ಅಖಂಡ ಭಾರತದ ವಿವಿಧ ಭೂಭಾಗಗಳಿಂದ ಅಂದರೆ ಮುಂದೆ ಹುಟ್ಟಲಿರುವ ಪಾಕಿಸ್ತಾನ, ಬಂಗ್ಲಾ ದೇಶ, ಬರ್ಮಾ, ಭೂತಾನ, ನೇಪಾಲ ಮೂಲದವರಿದ್ದರು. ಅದರಲ್ಲೆಷ್ಟೋ ಜನ ಹಿಂದು, ಮುಸ್ಲಿಂ, ಸಿಖ್ಕರು, ಗುರ್ಖಾ ಸೈನಿಕರು ಬ್ರಿಟಿಶ್ ನಾಯಕರೊಂದಿಗೆ ಮಹಾಯುದ್ಧದಲ್ಲಿ ಹೋರಾಡಿ ಮಡಿದರು. ಈ ವಿಷಯವನ್ನು 18 ತಿಂಗಳು ಕಾಲ ಇಂಪೀರಿಯಲ್ ವಾರ್ ಮ್ಯೂಸಿಯಂ, ಕಾಮನ್ ವೆಲ್ಥ್ ಗ್ರೇವ್ಸ್ ಕಮಿಶನ್ ಸಂದರ್ಶಿಸಿ ಆಳವಾಗಿ ಸಂಶೋಧನೆ ಮಾಡಿದ ಶಾಂತಾ ರಾವ್ ಹೇಳುವ ಪ್ರಕಾರ 1,105,000 ಭರತೀಯ ಯೋಧರನ್ನು ಅವಸರ ಅವಸರವಾಗಿ ವಿದೇಶಕ್ಕೆ ರವಾನಿಸಲಾಯಿತು. ಏಕೆಂದರೆ ಹಠಾತ್ತನೆ ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿದಾಗ ಇಂಗ್ಲಂಡಿನ ಪಡೆ ರಣಸಿದ್ಧವಾಗಿರಲಿಲ್ಲ. ಭಾರತದ ಯೋಧರು ಧರಿಸಿದ್ದ ಸಮವಸ್ತ್ರ ಸಹ ತಾವು ಸೆಣಸಾಡಲಿರುವ ಯೂರೋಪಿನ ರಣರಂಗಕ್ಕಾಗಲಿ

ಹವಾಮಾನಕ್ಕಾಗಲಿ ತಕ್ಕದ್ದಾಗಿರಲಿಲ್ಲ. ಫ್ರಾನ್ಸ್, ಬೆಲ್ಜಿಯಂ, ಮೆಸಪಟೋಮಿಯಾ, ಇಜಿಪ್ಟ್, ಗೆಲಿಪೋಲಿ, ಪ್ಯಾಲಸ್ಟೈನ್ ಮತ್ತು ಸೈನಾಯ್ ಇಂಥ ಪ್ರತಿಕೂಲ ವಾತಾವರಣದ ಯುದ್ಧರಂಗದಲ್ಲಿ ಅವರು ಬಂದಿಳಿದರು. ಇದನ್ನು ಮರೆಮಾಚುವಂತೆಯೋ ಏನೋ ಲಂಡನ್ನಿನ ಟೈಮ್ಸ್ ಪತ್ರಿಕೆ ಇದನ್ನು ಹೀಗೆ ಸಾರಿ ಹೇಳಿತು: “The Indian Empire has overwhelmed the British Nation by the completeness and unanimity of its enthusiastic aid.” ಆದರೆ ದಾರುಣ ಸತ್ಯಾಂಶವೆಂದರೆ ಇವರಲ್ಲಿ ಸಾವಿರಾರು ಜನ – 74,000 ರಷ್ಟು- ಅಲ್ಲೇ ಮಡಿದು ಹುತಾತ್ಮರಾದರು. ಅದೆಷ್ಟೋ ಜನ ಭಾರತದ ಹಳ್ಳಿಗಳಿಂದ ಬಂದವರು. ಕೆಲವರಿಗೆ ಸರಿಯಾಗಿ ಓದು ಬರಹ ಸಹ ಬರುತ್ತಿರಲಿಲ್ಲ. ಕಾಗದ ಬರೆಸಲೂ ಇನ್ನೊಬ್ಬರ ಸಹಾಯ ಬೇಕಿತ್ತು. ಕೆಲವರು ತಲೆತಲಾಂತರಗಳಿಂದ ಹೆಮ್ಮೆಯ ’ಕಂಪನಿ’ಯ ಊಳಿಗದಲ್ಲಿದ್ದವರು. ಹಟಾತ್ತನೆ ಬೆಲ್ಜಿಯಂದಲ್ಲಿ ಏರಿ ಬಂದ ಜರ್ಮನ್ ಸೈನ್ಯವನ್ನು ”ಪಶ್ಚಿಮ ರಂಗ’ (Western Front) ದಲ್ಲಿ ಎದುರಿಸಿದ ಬ್ರಿಟಿಷ್ ವಿಭಾಗದಲ್ಲಿ ಹೋರಾಡಿದ ಮಿಲಿಟರಿಗೆ ಆಘಾತ ಕಾದಿತ್ತು. ”ಸುರಿಯುವ ಮನ್ಸೂನ್ ಜಡಿಮಳೆಯಂತೆ ಗುಂಡಿನ ಸುರಿಮಳೆ!” ಅದಕ್ಕೆ ತುತ್ತಾಗಿ ”ರಣರಂಗದ ತುಂಬ ಬಿದ್ದ ಹೆಣಗಳ ರಾಶಿ ಕಟಾವು ಕಾಲದ ತೆನೆಗಳಂತೆ” ಎಂದು ಒಬ್ಬ ಯೋಧನ ಪತ್ರದಲ್ಲಿಯ ಭಯಭೀತ ಉಲ್ಲೇಖ!’ ಪ್ರಥಮ ಇಪ್ರೆಸ್ (Ypres) ಕಾಳಗದಲ್ಲಿ ತಾನು ಗಾಯಗೊಂಡಿದ್ದರೂ ಅಪ್ರತಿಮ ಧೈರ್ಯ ತೋರಿದ (ಆಮೇಲೆ ಪಾಕಿಸ್ತಾನಕ್ಕೆ ಸೇರಿದ ಪಂಜಾಬ ಪ್ರಾಂತದ ಸಿಪಾಯಿ ) ಖುದಾದದ್ ಖಾನನಿಗೆ ಏಶಿಯಾದ ಪ್ರಥಮ ವಿಕ್ಟೋರಿಯಾ ಕ್ರಾಸ್ ಮೆಡಲ್ ಕೊಡಲಾಯಿತು. ಅವನಲ್ಲದೆ ಇನ್ನೂ ಹತ್ತು ಜನರಿಗೆ ವಿಕ್ಟೋರಿಯಾ ಕ್ರಾಸ್ ದೊರಕಿದೆ. ಯುದ್ಧದಲ್ಲಿ ಗಾಯಗೊಂಡ 12,000 ಯೋಧರನ್ನು ಇಂಗ್ಲಂಡಿನ ದಕ್ಷಿಣ

ಕರಾವಳಿಯಲ್ಲಿಯ ಬ್ರೈಟನ್ ದಲ್ಲಿ ಶುಶ್ರೂಷೆಗಾಗಿ ತರಲಾಯಿತು. ಕೆಲವರು ಮರಣಾಂತಿಕ ಗಾಯಗಳಿಂದಲೋ ಬೇರೆ ಬೇನೆಯಿಂದಲೋ ಅಸು ನೀಗಿದರು. ಅವರಲ್ಲಿ 53 ಭಾರತೀಯರು. ಅವರಿಗಾಗಿ ’ಛತ್ರಿ’ ಎಂಬ ಸ್ಮಾರಕ ಇಂಗ್ಲಂಡಿನ ದಕ್ಷಿಣ ಕರಾವಳಿ ಪಟ್ಟಣ ಬ್ರೈಟನ್ನಿನಲ್ಲಿದೆ.

ನಾ ಕಂಡ ಪಾಶೆಂಡೇಲ್ ಮತ್ತು ”ವೈಪರ್ಸ್” (Ypres ಇಪ್ರೆಸ್):
ಫ್ಲಾಂಡರ್ಸ ಬಯಲಲ್ಲಿ
‘ಪಾಪ್ಪಿ’ಗಳು ನಲಿದಾಡುತ್ತಿವೆ
ಪಾಶೆಂಡೇಲ್ ದ ಹುದುಲಿನಲಿ
ನಿಷ್ಪಾಪಿಗಳ ಬಲಿಯಾಗುತ್ತಿದೆ!
ನಾನು ಕೆಲ ವರ್ಷಗಳ ಹಿಂದೆ ಬೆಲ್ಜಿಯಮ್ ದೇಶದ ನೈರುತ್ಯ ಭಾಗದ ಫ್ಲಾಂಡರ್ಸ್ ಪ್ರದೇಶದ ಸಂಚಾರ ಮಾಡಿ ಬಂದೆ. ಕೆನೇಡಿಯನ್ ಡಾಕ್ಟರ್ ಮೆಕ್ಕ್ರೇ ಬರೆದ “In Flanders Fields poppies blow” ಕವನ ಜಗತ್ಪ್ರಸಿದ್ಧವಾದದ್ದು. ಆತನ ಎರಡನೆಯ ಇಪ್ರೆಸ್ ಕಾಳಗದಲ್ಲಿ ಮಡಿದ ತನ್ನ ಮಿತ್ರನ ನೆನಪಿಗೆ ಬರೆದ ಕವನ ಅದು. ಫ್ಲಾಂಡರ್ಸ್ದಲ್ಲಿಯ ಪಾಶೆಂಡೇಲ್ ರಣರಂಗವನ್ನು, ಮತ್ತು ಅದರ ಹತ್ತಿರದ ಮ್ಯೂಜಿಯಂನಲ್ಲಿ ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸಿದ (ಕಂದಕ) ಟ್ರೆಂಚ್ ’ಜೀವನ’ವನ್ನು ಕಣ್ಣಾರೆ ಕಂಡಾಗ ಹೊಟ್ಟೆ ತೊಳೆಸುವಂತಾಯಿತು. ಪಕ್ಕದಲ್ಲೇ ಮೆನಿನ್ ಗೇಟ್ ಎಂಬ ಹುತಾತ್ಮರ ಸ್ಮಾರಕವಿದೆ. ಅದು ದೆಹಲಿಯ ಇಂಡಿಯಾ ಗೇಟ್ ನೆನಪಿಗೆ ತರುತ್ತದೆ. ಅದರ ಗೋಡೆಯ ಮೇಲೆ 54,000 ಹೆಸರುಗಳಿವೆ. ಆಗಸ್ಟ್ ತಿಂಗಳಿನಲ್ಲಿ ಮಳಿ ಬಿದ್ದಾಗ ಯುದ್ಧ ಮೈದಾನದಲ್ಲಿ ಸೊಂಟದವರೆಗೆ ಕೆಸರು! ಎಷ್ಟೋ ಜನರ ಮೃತ ದೇಹದ ಕುರುಹು ಸಹ ಸಿಗಲಿಲ್ಲ. ಸಿಕ್ಕವರನ್ನು ಪಕ್ಕದಲ್ಲಿಯ ಅತಿ ಶಿಸ್ತಿನಿಂದ ಕಾಯ್ದಿರುವ ಟೈನ್ ಕಾಟ್ ಅಥವಾ ಬಟ್ಸ್ ಸಿಮೆಟರಿಗಳಲ್ಲಿ ಮಣ್ಣುಮಾಡಿದ್ದಾರೆ. ಕುರುಹು ಸಿಗದವರಿಗ್ಗೆ ಗೋರಿಗಳಿಲ್ಲ. ಮೃತರ ಯಾದಿಯಲ್ಲಿ ಎಷ್ಟೋ ಭಾರತೀಯ ಮೂಲದ ಹುತಾತ್ಮರ

ಹೆಸರು ಹಾಗೂ ಹುದ್ದೆಗಳನ್ನು (ಸುಬೇದಾರ್, ನಾಯಿಕ್, ಹವಾಲ್ದಾರ್ ಇತ್ಯಾದಿ) ಗುರುತಿಸಿದೆ. ಆದರೆ ಇನ್ನೆಷ್ಟೋ — ನೂರಾರಲ್ಲ, ಸಾವಿರಾರು ಸಿಪಾಹಿಗಳ ಹೆಸರು, ಗುರುತು ಪತ್ರ ಯಾವುದೂ ಸಿಕ್ಕಿಲ್ಲ. ಇವರನ್ನ ಈಗಲಾದರೂ ನೆನೆಯ ಬೇಕಲ್ಲ. ಇವರನ್ನು “ಗತಿಸಿ ಹೋದ ಬ್ರಿಟಿಶ್ ಎಂಪಾಯರ್” ಅಲಕ್ಷಿಸಿತು; ಅವರು ಹುಟ್ಟಿದ ಜನ್ಮಭೂಮಿ ಸಹ ಅವರನ್ನು ನೆನಪಿಸಿಕೊಳ್ಳಲಿಲ್ಲ. ಸ್ಮಾರಕ ಕಟ್ಟಲಿಲ್ಲ. ಭಾರತದ ಜನತೆಗೆ ಅವರ ಮೇಲೆ ಕೋಪವೋ, ಉದಾಸೀನತೆಯೋ – ಇವರು ನಮ್ಮನ್ನು ಆಳಿದವರ ಪರವಾಗಿ ಹೋರಾಡಿದರು ಎಂದು! ಮಹಾಯುದ್ಧದ ನಂತರ ನಿಮಗೇ ಸ್ವಯಂ ಆಡಳಿತ ಕೊಡುತ್ತೇವೆ ಎಂದು ಕೊಟ್ಟ ಮಾತನ್ನು ಉಲ್ಲಂಘಿಸಿದ ವಸಹಾತುಶಾಹಿಗಳ ಮೇಲೆ ಆಗಿನ ಭಾರತದ ರಾಜಕೀಯ ಧುರೀಣರಿಗೆ ಅಸಮಾಧಾನ. ಇವೆಲ್ಲರ ಮಧ್ಯೆ ಈ ಯೋಧರು ನಿಜವಾಗಿಯೂ Unknown ಆಗಿಯೇ ಉಳಿದಿದ್ದಾರೆ. ಇತ್ತೀಚೆಗೆ ಇವರಿಗಾಗಿ ಸ್ಮಾರಕವನ್ನು ಕಟ್ಟಲು ಭಾರತ ಸರಕಾರದ ಪಾರ್ಲಿಮೆಂಟ್ ನಿರ್ಧಾರವನ್ನು ಪಾಸು ಮಾಡಿದರೂ. (Budget 2014) ಆ ಕಾರ್ಯ ಇನ್ನೂ ಪೂರ್ತಿಯಾಗಿಲ್ಲ. ಆದರೆ ಇಂಗ್ಲಂಡಿನ ಮಧ್ಯದ ಸ್ಟ್ರಾಫ಼್ಫ಼ರ್ಡ್ ಶೈರ್ ದ ಅಲ್ರೆವಾಸ್ ದಲ್ಲಿ ಮಡಿದ ಯೋಧರೆಗೆ ಮತ್ತು ಬೇರೆ ಸ್ತ್ಯುತ್ಯ ಕಾರ್ಯ ಮಾಡುತ್ತುರುವ ಸಂಘಗಳಿಗಾಗಿ The National Memorial Arboretum ಎಂಬ ಒಂದು ರಾಷ್ಟ್ರೀಯ ಸ್ಮಾರಕವಿದೆ.
ಅದರಲ್ಲಿ ಒಬ್ಬ ಸಿಖ್ಕ ಸೈನಿಕನ

ಮೂರ್ತಿಯನ್ನು ಕೆಲವರ್ಷಗಳ ಹಿಂದೆ ಪ್ರಥಮ ಮಹಾ ಯುದ್ಧದ ಎಲ್ಲ ಹುತಾತ್ಮರ ಪರವಾಗಿ ಒಂದು ಸ್ಮಾರಕವನ್ನು ಸ್ಥಾಪಿಸಿದ್ದಾರೆ. ಇದು ಈ ದೇಶದಲ್ಲಿ ನೆಲಸಿದ ಭಾರತದ ಮೂಲದ ಪಂಜಾಬಿಗಳ ಕೊಡುಗೆ.
ಮಾಗಡಿ ದಾಸಪ್ಪ ಮತ್ತು ಮೈಸೂರ್ ಲಾನ್ಸರ್ ಸ್
ಈ ಮಹಾಯುದ್ಧದಲ್ಲಿ ಕರ್ನಾಟಕದವರು ಯಾರಾದರೂ ಭಾಗ ವಹಿಸಿದ್ದರೆ ಖಚಿತವಾದ ದಾಖಲೆ ನನಗೆ ಸಿಕ್ಕಿಲ್ಲ. ಆದರೆ ಇದೇ ನಮ್ಮ ಅನಿವಾಸಿ ಪತ್ರಿಕೆಯಲ್ಲಿ ಈ ಯುದ್ಧದಲ್ಲಿ ಪಾಲುಗೊಂಡು ಇಜಿಪ್ಟ್ ದಲ್ಲಿ ಗಾಯಗೊಂಡು ನಿವೃತ್ತನಾದ ಕನ್ನಡಿಗ ದಾಸಪ್ಪನ ಸ್ವಾರಸ್ಯಕರ ಆದರೆ ದುಃಖಾಂತದ ಕಥೆಯನ್ನು ರಾಜಾರಾಂ ಕಾವಳೆಯವರು ಬರೆದಿದ್ದಾರೆ.( https://wp.me/p4jn5J-uB). 1918ರಲ್ಲಿ ಮೈಸುರು ಲಾನ್ಸರ್ ಸ್ ಪಡೆಯ ಯೋಧರು ಭಾರತದ ಜೋಧಪುರ್ ಮತ್ತು ಹೈದರಾಬಾದ ಸಂಸ್ಥಾನದ ಅಶ್ವಪಡೆಗಳೊಂದಿಗೆ ಸೇರಿ ಇಸ್ರೇಲಿನ ಹೈಫಾ ಪಟ್ಟಣವನ್ನು ಓಟ್ಟೊಮನ್ ಸಾಮ್ರಾಜ್ಯದ ಆಧಿಪತ್ಯದಿಂದ ಬಿಡುಗಡೆ ಮಾಡಿದರ ದಾಖಲೆಯಿದೆ. ಮರಳಿ ಬಂದ ಸೈನಿಕರಿಗೆ ಆಗ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ವಿಜೃಂಭಣೆಯ ಸ್ವಾಗತವನ್ನೇರ್ಪಡಿಸಿದ್ದರಂತೆ.
ಈ ನಿಟ್ಟಿನಲ್ಲಿ ಶಾಂತಾ ರಾವ್ ಅವರ “Unknown becomes Known” ಬ್ರಿಟನ್ನಿನ ಜನತೆಗೆ ಈ ವೀರರ ಕಥೆ ಹೇಳುವದರಲ್ಲಿ ಸಫಲವಾಗಿದೆಯೆಂದು ಹೇಳಬಹುದು. ಆದರೆ ಇವರದು ಸಣ್ಣ ಸಂಸ್ಥೆ (www.annapurnadance.com). ತಮ್ಮ ನೃತ್ಯ ರೂಪಕವನ್ನು ಎಲ್ಲೆಡೆಗೆ ತೆಗೆದುಕೊಂಡು ಹೋಗಿ ಪ್ರಚಾರ ಮಾಡುವ ಸಂಪನ್ಮೂಲ ಇರದಿದ್ದರೂ ಅವರ ಆಸ್ಥೆ ಮತ್ತು ಉತ್ಸಾಹಕ್ಕೆ ಎಣೆಯಿಲ್ಲ. ತಮ್ಮ ಕನಸಿನ ಕೂಸಿನ ಬಗ್ಗೆ ಮಾತಾಡುವಾಗ ಅವರು ಭಾವನಾಪರವಶರಾಗುತ್ತಾರೆ. ”ನೋಡಿ, ನನ್ನ ಹಿರಿಯರು ತೀರಿ ಹೋದಾಗ ತಾಯಿನಾಡಿಗೆ ಹೋಗುವ ಅವಕಾಶವಾಗಲಿಲ್ಲ. ಯಾರೂ ಇವರ ತುತ್ತೂರಿ ಊದದ ಈ ಅಜ್ಞಾತ, ಅನಾಥ ಯೋಧರ ಶ್ರಾದ್ಧವೆನ್ನುವಂತೆ ಈ ಕೆಲಸ ಮಾಡುತ್ತಿದ್ದೇನೆ. ಇದರಿಂದ ನನಗೆ ಒಂದು ಅನೂಹ್ಯವಾದ ಸಮಾಧಾನ ಸಿಕ್ಕಿದೆ,”
ಅನ್ನುತ್ತಾರೆ ಅವರು. ಎರಡು ವರ್ಷಗಳಿಂದ ಇದೇ ಸಂಗತಿ ಅವರ ಜೀವಿತದ ಪ್ರತಿಕ್ಷಣವನ್ನೂ ಆವರಿಸಿಬಿಟ್ಟಿದೆ. ತಮ್ಮ ನೃತ್ಯ ನಾಟಕ-ಪ್ರದರ್ಶನವನ್ನು ಯಾರ್ಕ್ ಶೈರಿನ ಹತ್ತಾರು ಶಾಲೆ, ಸಂಘ ಸಂಸ್ಥೆಗಳಲ್ಲಿ ಒಯ್ದು ಎಳೆಯರಿಂದ ಹಿರಿಯರ ವರೆಗೆ, ಭಾರತೀಯ ಮೂಲದವರಿಂದ ಹಿಡಿದು ಬ್ರಿಟಿಷ್-ಯೂರೋಪಿಯನ್ ಪ್ರಜೆಗಳಿಗೆ ಈ ಅಜ್ಞಾತರ ವೀರಗಾಥೆಯನ್ನು ಪಸರಿಸುತ್ತಿದ್ದಾರೆ. ಸಭಿಕರನ್ನು ಮಂತ್ರಮೂಕರನ್ನಾಗಿಸಿದ್ದಾರೆ. ಇತ್ತೀಚೆಗೆ ಕುಂದಾಪುರದ ಶಾಂತಾ ಅವರೊಡನೆ ಮಾತಾಡಿದಾಗೆಲ್ಲ”ಹಂದೇರ ಮಾಣಿಗೆ ಒಂದೇ ಮಂತ್ರ”,ಎನ್ನುವಂತೆ! ಅದಲ್ಲದೆ 2018ಕ್ಕಾಗಿ ತಾವು ಯೋಜಿಸಿರುವ ಕಾರ್ಯಕ್ರಮಗಳ ಪಟ್ಟಿ ಕೊಡುತ್ತಾರೆ. ಅದರ ಹರಹು ಲಂಡನ್ನಿನ ನೆಹರು ಸೆಂಟರ್ ನಿಂದ ಕಾರ್ನ್ ವಾಲ್ ವರೆಗೆ, ಪಶ್ಚಿಮ ಯಾರ್ಕ್ ಶೈರಿನಿಂದ ನಾರ್ಥ್ ಯಾರ್ಕ್ ಶೈರಿನ ಸ್ಕಾರ್ ಬರಾ ವರೆಗೆ ಇದೆ. ಈ ವರ್ಷ (2018) ಆ ಕಾರ್ಯಕ್ರಮವನ್ನು “Soldiers of the Empire” ಎಂದು ಕರೆದಿದ್ದಾರೆ. ನಿಮಗೆ ಅನುಕೂಲವಾದರೆ ಕೆಳಗಿನ ಕಾರ್ಯಕ್ರಮಗಳಿಗೆ ಹೋಗಿ ನಿಮ್ಮದೂ ಒಂದು ಶ್ರದ್ಧಾಂಜಲಿ ಅರ್ಪಿಸ ಬಹುದೆ?
ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್, ಯು ಕೆ.

(Conflict of interests: None)
”Soldiers of the Empire” show
1) 10 March, 2018 5 30 PM Huddersfield University, St Paul’s hall
https//www.huddlitfest.org.uk/event
2) 28 April, 2018 7 30 PM Scarboro: Stephen Jones Theatre,, Westborough, Scarborough YO11 1JW
3) 12 May, 2018 (Time TBC) Holmfirth Festival of Folk https://www.holmfirthfrstivalpffolk.co.uk/
4) 2nd July, 2018 6 30PM The Nehru Centre,
The High Commission of India, 8 South Audley Street London W1K 1HE
Excellent research work by Dr.S.P.Desai..in bringing out contribution all stalwarts irrespective religion during the first world war. Equal credit goes to Shania Rao for effort to educate all of us through her performance
We wish all the success in her present endeavour and also in her future efforts
LikeLike
ನಿಮಗೆ ಧನ್ಯವಾದಗಳು, ನನ್ನ ಮತ್ತು ಶಾಂತಾ ಅವರ ಪರವಾಗಿ.
LikeLike
Very nice article…we are all proud about her..
LikeLike
Thank you on behalf of her. Desai
LikeLike
We’ll written. My heart felt congratulations to Shanta rao.
Best wishes.
LikeLike
ಪ್ರಿಯ ಶ್ರೀವತ್ಸ ದೇಸಾಯಿ ಅವರೆ,
ವಂದನೆಗಳು.
ನಿಮ್ಮ ಬರಹಕ್ಕೆ ಬಂದ ಪ್ರತಿಕ್ರಿಯೆಗಳನ್ನು, ಅದರಲ್ಲಿ ನನ್ನ ನೃತ್ಯ ಕಾಯಕದ ಕುರಿತು ಬಂದ ಪ್ರಶಂಸೆಗಳನ್ನು ಓದಿ ಮನಸ್ಸು ತುಂಬಿ ಬಂತು. ಪ್ರತಿಫಲದ ಯಾವ ಅಪೇಕ್ಷೆಯಿಲ್ಲದ, ಇಷ್ಟು ವರ್ಷದಿಂದ ನಾನು ಪಟ್ಟ ಪರಿಶ್ರಮ ಕೊನೆಗೂ ಕನ್ನಡಿಗರ ಜನಮನವನ್ನು ತಲುಪಿತು ಎಂಬುದು ನನಗಂತೂ ತುಂಬಾ ಖುಷಿ ಕೊಟ್ಟಿದೆ. ಆ ಬರಹ ಇಷ್ಟೊಂದು ಸುಪುಷ್ಟವಾಗಲು ನೀವು ಎಷ್ಟೆಲ್ಲಾ ಓಡಾಡಿ, ವಿವರಗಳನ್ನು ಹುಡುಕಿ ಸಂಗ್ರಹಿಸಿದಿರಿ! ಎಂತಲೇ ಅದು ಅಷ್ಟೊಂದು ಓದುಗರ ಗಮನ ಸೆಳೆಯಿತು ಎಂದೇ ನನಗನಿಸುತ್ತದೆ. ಒಬ್ಬ ಕನ್ನಡಿಗರಾಗಿ ನೀವು ತೋರಿದ ಆಸ್ಥೆ ನಿಜಕ್ಕೂ ಮಹತ್ವದ್ದು.
ಅದಕ್ಕಾಗಿ ನಿಮಗೂ, ಪತ್ರ ಬರೆದು ಮೆಚ್ಚುಗೆ ತಿಳಿಸಿದ ಎಲ್ಲರಿಗೂ ನಾನು ಅತ್ಯಂತ ಅಭಾರಿ ಆಗಿದ್ದೇನೆ. ಈ ಸ್ಪಂದನ ನನ್ನಲ್ಲಿ ಇನ್ನಷ್ಟು ಉತ್ಸಾಹ ತುಂಬಿದೆ. ಹುಟ್ಟಾ ಕನಸುಗಾತಿ ನಾನು. ನನ್ನ ಇನ್ನೂ ಅನೇಕ ಕನಸುಗಳನ್ನು ನೆನಸು ಮಾಡಿಕೊಳ್ಳುವಲ್ಲಿ ಈ ಉತ್ಸಾಹ ನನಗೆ ಖಂಡಿತವಾಗಿಯೂ ನೆರವಾಗುತ್ತದೆ.
ಎಂದು,
ನಿಮಗೆ ಇನ್ನೊಮ್ಮೆ ಆಭಾರ ಸಲ್ಲಿಸುವ,
ಶಾಂತಾ ರಾವ್.
LikeLiked by 2 people
ಶಾಂತಾ ಅವರೆ, ಕೆಲಸ ನಿಮ್ಮದು, ಯೋಜನೆ ನಿಮ್ಮ ಕನಸಿನ ಕೂಸು. ನಾನು ಮಾಡಿದ್ದು ಅತ್ಯಲ್ಪ. ಓದುಗರಿಗೆ ತಿಳಿಸುವದರಲ್ಲಿ ಸಫಲವಾಗಿದ್ದರೆ ನನಗೆ ತೃಪ್ತಿ. ನಿಮ್ಮ ಸಾಧನೆ ಮುಂದುವರೆಯಲಿ. ಶುಭೇಚ್ಛೆಗಳು.
LikeLike
Thank you for all your hardwork and good wishes once again !
LikeLike
ಮೊದಲ ಮಹಾಯುದ್ಧದ ಶತಮಾನದ ಸಂದರ್ಭದಲ್ಲಿ ಮೂಡಿ ಬಂದ ಸುಂದರ, ಮಾಹಿತಿ ಪೂರ್ಣ, ಚಿಂತನಾತ್ಮಕ ಲೇಖನ ಶ್ರೀವತ್ಸ ದೇಸಾಯಿಯವರದು.ನಿಜಕ್ಕೂ ಆ ಯೋಧರು “ಅನಾಮಧೇಯರಾಗಿ” ಹೋದರಲ್ಲಾ ಅಂತ ಕಳವಳ.ಕಂಪನಿ ಸರ್ಕಾರ ದ ಪರವಾಗಿ ಹೋರಾಡಿದರು ಅಂತ ತೌರಲ್ಲಿ, ಭಾರತೀಯ ಯೋಧರು ಅಂತ ಕಂಪನಿ ಸರ್ಕಾರ ಅವರನ್ನ ಉದಾಸೀನ ಮಾಡಿತೇ?ಅವರತ್ಯಾಗ, ಬಲಿದಾನ ಗಣನೆಗೆ ಬಾರದೇ ಅವರ ಜೊತೆಗೆ ಮಣ್ಣಲ್ಲಿ ಮಣ್ಣಾಗಿ ಹೋಯ್ತೇ ಅಂತ ತಳಮಳವಾಗಿ ಕಣ್ಣು ತುಂಬಿ ಬರದೇ ಇರದು.ಈಗ ಕನ್ನಡತಿ ನೀಡುತೀರುವ ಶ್ರದ್ಧಾಂಜಲಿ ಅನುಪಮ ವಾದ್ದು.ಮಾತಾಡಬಹುದು, ಬರೆಯಬಹುದು, ಸಾಕ್ಷ್ಯಚಿತ್ರ ತೋರಿಸಬಹುದು.ಆದರೆ ನೃತ್ಯದ ಮೂಲಕ ಆ ಭಾವ, ಆ ಭೀಷಣತೆ,ಆ ತಳಮಳ,ಕಳವಳ ವ್ಯಕ್ತಪಡಿಸುವ, ಶ್ರದ್ಧಾಂಜಲಿ ಅರ್ಪಿಸುವ ಶಾಂತಾ ರಾವ್ ಅವರ ಪರಿ ಸ್ತುತ್ಯಾರ್ಹ.ಅವರಿಗೆ ನನ್ನ ನಮನಗಳು.ಇದನ್ನೆಲ್ಲ ಆಳವಾಗಿ ಅಭ್ಯಸಿಸಿ , ಚಿಂತಿಸಿ, ಅದಕ್ಕೆ ಶಬ್ದರೂಪ ಕೊಟ್ಟು ಪ್ರಭಾವ ಪೂರ್ಣವಾಗಿ ಮನಮಿಡಿಯುವಂತೆ ಓದುಗರ ಮುಂದಿಟ್ಟ ಶ್ರೀವತ್ಸ ದೇಸಾಯಿಯವರ ಪ್ರಯತ್ನ ಆಸ್ಥೆ ಇನ್ನೂ ಸ್ತುತ್ಯಾರ್ಹ.ಅಭಿಮಾನದ ಕನ್ನಡತಿ ಶಾಂತಾ ರಾವ್ ಅವರಿಗೆ ಧನ್ಯವಾದಗಳು.ಇಂತಹ ಸಮಯೋಚಿತ , ಅರಿವು ಮೂಡಿಸುವ ಲೇಖನ ನೀಡಿದ್ದಕ್ಕೆ ಶ್ರೀವತ್ಸ ದೇಸಾಯಿ ಯವರಿಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು.
ಸರೋಜಿನಿ ಪಡಸಲಗಿ
LikeLike
Great. Every one visits India Gate when in Delhi. This is a wonderful tribute to those unknown soldiers. Kudos to Shanta Rao and Dr Desai
LikeLiked by 1 person
ಮೊದಲನೆಯ ಮಹಾಯುದ್ಧ ನಡೆದು ೧೦೦ ವರ್ಷಗಳಾದವು. ಆ ಮಹಾಯುದ್ಧದಲ್ಲಿ ಮಡಿದವರೆಷ್ಟೋ ಮಂದಿ! ಈ ಮಹಾಯುದ್ಧದ ದಾರುಣ ಚಿತ್ರವನ್ನು , ಅಲ್ಲಿ ಮಡಿದ ಭಾರತದ ಸೈನಿಕರ ತ್ಯಾಗವನ್ನು ಚಿತ್ರಿಸುವ ಪ್ರಯತ್ನ ವೊಂದನ್ನು ಕನ್ನಡತಿಯೊಬ್ಬರು ನಡೆಸಿದ್ದಾರೆ ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಆ ಯುದ್ಧಭೂಮಿಯ ರೌದ್ರ ಚಿತ್ರಣವನ್ನು ನೃತ್ಯದ ಮಾಧ್ಯಮದಲ್ಲಿ ನಿರೂಪಿಸುವುದು ಸುಲಭ ವಿಷಯವಲ್ಲ! ಅಂತಹ ಸಾಧನೆಯನ್ನು ಲೇಖನದ ಮೂಲಕ ನಮಗೆ ತಲುಪಿಸುವ ದೇಸಾಯಿಯವರ ಪ್ರಯತ್ನ ಮತ್ತಷ್ಟು ಹೆಗ್ಗಳಿಕೆಯ ವಿಷಯ. ಉತ್ತಮವಾದ ಲೇಖನ. ಈ ಮಹಾಯುದ್ಧ ನಡೆದ ಸಮಯದ ಬಗ್ಗೆ ನಮಗಿರುವ ಮಾಹಿತಿ ಕೇವಲ ಲೇಖನಗಳು ಮತ್ತು ಹಲವಾರು ಸಾಕ್ಷ್ಯಚಿತ್ರಗಳು ಮಾತ್ರ. ಹಾಗಾಗಿ, ನೃತ್ಯ ಮಾಧ್ಯಮದಲ್ಲಿ ಈ ಯುದ್ಧದ ಚಿತ್ರಣವನ್ನು ನೋಡುವ ಅವಕಾಶವಂತೂ ಇನ್ನು ಕಡಿಮೆಯೇ ಎನ್ನಬಹುದು. ಶಾಂತಾ ರಾವ್ ಅಂತಹ ಕಲಾವಿದೆಯ ನೃತ್ಯ-ನಾಟಕ ಪ್ರದರ್ಶನ ನಿಜಕ್ಕೂ ಪ್ರಶಂಸನೀಯ. ಇಂತಹ ಲೇಖನಗಳು ಮತ್ತಷ್ಟು ಬರಲಿ.
ಉಮಾ ವೆಂಕಟೇಶ್
LikeLike
ಶ್ರೀವತ್ಸ ಹಾಗು ಶಾಂತಾ ರಾವ್ ಅವರಿಗೆ
ಅನಂತ ಧನ್ಯವಾದಗಳು. ಶಾಂತಾ ಅವರು ಅಪಾರ ಸಾಧನೆ ,ದೇಶಾಭಿಮಾನಗಳಿಂದ ಎಲ್ಲ ಜನರಿಗೆ ತಮ್ಮ ನಾಟ್ಯಗಳ ಮುಖಾಂತರ ದೇಶದ ಸ್ವಾತಂತ್ರಕ್ಕೆ ಬಲಿದಾನ
ನೀಡಿದ ನಮ್ಮ ಸೈನಿಕರ ಬಗ್ಗೆ ಅರಿವು ಮಾಡಿಕೊಳ್ಳುವ ಮಹಾಕಾರ್ಯ ಕೈಗೊಳ್ಳುತ್ತಿರುವದು ಶ್ಲಾಘನೀಯ. ಶ್ರೀವತ್ಸರಾದರೂ ಈ ವಿಷಯದ ಬಗ್ಗೆ ಆಳವಾದ ಅಭ್ಯಾಸ,
ಸಂಶೋಧನೆ ,ಸಮಂಜಸ ಚಿತ್ರಗಳಿಂದ ಓದುಗರ ಮನಸ್ಸನ್ನು ಸ್ಪಂಧನಗೊಳಿಸಿರುವರು. ಎಂಥಹ ಮಹಾ ಲೇಖನ. ನಮ್ಮ ಅನಿವಾಸಿ ಸದಸ್ಯರಲ್ಲಿ ಸೂಪ್ತವಾಗಿರುವ ಎಲ್ಲ
ಕಲೆ,ಚಾತುರ್ಯತೆಗಳು ಚಿಮ್ಮಿಸಿತ್ತಿರುವವು.
Aravinda Kulkarni
LikeLike
ದೇಸಾಯಿಯವರೆ, ಉತ್ತಮ ಲೇಖನ. ನಮ್ಮ ನಾಡಿನ ಸೈನಿಕರನ್ನು ನೆನೆವ ನೃತ್ಯರೂಪಕವನ್ನು ರಚಿಸಿ, ಪ್ರದರ್ಶಿಸುತ್ತಿರುವ ಶಾ೦ತಾರಾವ್ ರವರ ಪ್ರಯತ್ನ ನಿಜಕ್ಕೂ ಪ್ರಶ೦ಸಾರ್ಹ. ನಿಮ್ಮ ನಿರೂಪಣೆಯೂ ಸಹ ಬಹಳ ಪರಿಣಾಮಕಾರಿಯಾಗಿದೆ. ಭಾರತದಿ೦ದ ಬ೦ದು, ಯಾವ ತರಹದ ಸೌಲಭ್ಯ, ತರಬೇತಿಯಿಲ್ಲದೆ ಮಡಿದ ನಮ್ಮ ಯುವ ಸೈನಿಕರ ಬಗ್ಗೆ ಓದಿ ಕಣ್ಣುತೇವವಾಯಿತು.
ಈ ದೇಶ ಈಗಲಾದರು, ಇವರ ಸಾಹಸವನ್ನು ನೆನೆಯುವ ಪ್ರಯತ್ನ ಮಾಡಬೇಕು. ಇದರ ಬಗ್ಗೆ ಯೋಚಿಸುವ೦ತೆ ಮಾಡಿದ ನಿಮ್ಮ ಲೇಖನ, ಅದಕ್ಕೆ ಪೂರಕವಾದ ಚಿತ್ರಗಳು ಮತ್ತು ಪಟ್ಟ ಪರಿಶ್ರಮಕ್ಕೆ ವ೦ದನೆ.
ದಾಕ್ಷಾಯಿನಿ
LikeLike
ಲೇಖನವಷ್ಟೇ ಅಲ್ಲ ಶಾಂತಾ ರಾವ ಅವರ ಪರಿಶ್ರಮ, ಶ್ರದ್ಧೆ (ಅಹುದು, ಶ್ರಾದ್ಧದಂತ ಶ್ರದ್ಧೆ)ಯನ್ನು ಮೆಚ್ಚಿಕೊಂಡ ಎಲ್ಲರಿಗೂ ಧನ್ಯವಾದಗಳು
LikeLike
Hi
This is a really a graphic presentation of the past event that about our own Soldiers who laid their life for some other country !!!
As I read I felt I m personally walking thro the past as one of them
Thank Mr Desai
A job well done
LikeLike
ದೇಸಾಯಿವರದು ವಿದ್ವತ್ ಪೂರ್ಣ ಲೇಖನ.
ಹುಡುಕಿ, ಅಧ್ಯಯನ ಮಾಡಿ, ಓದಿ, ನೋಡಿ, ಮನನ ಮಾಡಿಕೊಂಡು ಇದರ ಬಗ್ಗೆ ಒಂಚೂರೂ ಗೊತ್ತಿಲ್ಲದ ನನ್ನಂಥ ಓದುಗನ ಕಣ್ಣು ತೆರೆಸಿದ್ದೀರಿ.
ಇಂಥ ಒಳ್ಳೆಯ ಲೇಖನಕ್ಕೆ ತುಂಬ ಧನ್ಯವಾದಗಳು.
– ಕೇಶವ
LikeLiked by 1 person
ಎಷ್ಟೊಂದು ವಿಷಯಗಳನ್ನು ಗಮನವಿಟ್ಟು ಅಧ್ಯಯನ ಮಾಡಿ ಅವನ್ನು ಹೊರಗೆಳೆದಿದ್ದೀರಾ! ಎಂತಹ ಅಪರೂಪದ ವಿಷಯವನ್ನು ಶಾಂತಾ ರಾವ್ ಆರಿಸಿಕೊಂಡು, ಅದರ ಅನುಭವವನ್ನು ನೃತ್ಯ ಪ್ರಕಾರವನ್ನು ಬಳಸಿ ಜನತೆಗೆ ಮುಟ್ಟಿಸುತ್ತಿದ್ದಾರೆ. ಒಬ್ಬ ನೃತ್ಯಗಾರ್ತಿ ಇಂತಹ ಒಂದು ಪ್ರಯತ್ನವನ್ನು ಮಾಡಬಹುದು ಎಂದು ಕಲ್ಪಿಸಿಕೊಳ್ಳಲೂ ನನಗೆ ಆಗಿರಲಿಲ್ಲ. ನಿಮ್ಮ ಲೇಖನದಿಂದ ಅದು ಸಾಧ್ಯವಾಗಿದೆ, ಮತ್ತು ನಮ್ಮ ಕನ್ನಡತಿ ಅಂತಹ ಅಪರೂಪದ ರತ್ನ ಎಂದು ತಿಳಿದು ಮತ್ತಷ್ಟು ಅಭಿಮಾನಿಸಿದೆ, ನಾನು. ದೇಸಾಯಿಯವರೇ, ನಿಮಗೆ ಬಹು ಅಭಿನಂದನೆಗಳು.ಲೇಖನಕ್ಕೆ ಪೂರಕವಾದ, ಸಾಮಾನ್ಯಕ್ಕೆ ಸಿಗಲಾರದ ಫೋಟೋಗಳು ಕೂಡ ಇವೆ! ಬಂಪರ್ ಭಲಿರೇ!! ವಿನತೆ
LikeLiked by 1 person