ಏನಿದೇನಿದು ಜನವರಿ ೨೬ರ ಕಹಾನಿ!! – ವಿನತೆ ಶರ್ಮ ಬರೆದ ಲೇಖನ

ಇಂದು ಜನವರಿ ೨೬, ಭಾರತೀಯರಿಗೆ ಹಬ್ಬ; ದೇಶ ಪ್ರಜಾಪ್ರಭುತ್ವವನ್ನು ಅಧಿಕೃತವಾಗಿ ಆಲಂಗಿಸಿದ ಸುದಿನ. ಅದೇ ದಿನ ಸಾವಿರಾರು ಮೈಲಾಚೆಯ ದಕ್ಷಿಣ ಗೋಳಾರ್ಧದ ದೇಶ ಖಂಡ ಆಸ್ಟ್ರೇಲಿಯಾಕ್ಕೆ ದುಃ ಸ್ವಪ್ನದ ನೆನಪನ್ನು ಕೆದಕುವ ದಿನವಾಗಿದೆಯೇ? ನಮಗರಿಯದ ವಾಸ್ತವವನ್ನು ನಮ್ಮೆದುರು ತೆರೆದಿಡುತ್ತಿದ್ದಾರೆ ವಿನತೆ. ವಸಾಹತುಶಾಹಿಯ ಬರ್ಬರತೆ, ಕುಟಿಲತೆ ಹಾಗೂ ಅನುಕೂಲ ಸಿಂಧು ಇತಿಹಾಸ ಬರೆಯುವ ಮುಖಗಳನ್ನು ಆಸ್ಟ್ರೇಲಿಯಾದಲ್ಲಿ ಬಾಳಿ, ಈಗ ಇಂಗ್ಲೆಂಡ್ ನಲ್ಲಿರುವ ವಿನತೆ ಶರ್ಮ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಲೇಖನಕ್ಕೆ ಪೂರಕವಾದ ಚಿತ್ರಗಳನ್ನು ಹಾಗೂ ಯು-ಟ್ಯೂಬ್ ಕ್ಲಿಪ್ಪನ್ನು ಕೂಡ ಅಳವಡಿಸಿದ್ದಾರೆ. ಓದಿ, ನಿಮ್ಮ ಅನಿಸಿಕೆಗಳನ್ನು ನಮ್ಮೊಡನೆ ಹಂಚಿಕೊಳ್ಳಿ. 

 

ಕ್ಯಾಲೆಂಡರ್ ನ ಸಾಮಾನ್ಯ ದಿನಾಂಕವೊಂದು ಎರಡು ದೇಶಗಳ ರಾಜಕೀಯ ಸ್ಥಿತಿ-ಗತಿಗಳನ್ನು ವಿಭಿನ್ನವಾಗಿ ಬದಲಾಯಿಸಬಹುದೇ?  ಹೌದೆನ್ನುತ್ತದೆ, ಈ ಜನವರಿ ೨೬!! ನಾವೆಲ್ಲರೂ ದಿನನಿತ್ಯ ಬಳಸುವ ಐವತ್ತೆರಡು ವಾರಗಳ ಕ್ಯಾಲೆಂಡರ್ ನಲ್ಲಿ ಅಗೋ ಮತ್ತೊಂದು ಎಂಬಂತೆ ಸುಮ್ಮನೆ ಕುಳಿತಿದ್ದ ಜನವರಿ ೨೬ ರನ್ನು ನಾಟಕದ ಪ್ರಮುಖ ಪಾತ್ರಧಾರಿಯನ್ನಾಗಿ ಮಾಡಿ ಪಟ್ಟಕ್ಕೇರಿಸಿದ್ದು ಇಂಗ್ಲೀಷರು – ಅದು ಆಸ್ಟ್ರೇಲಿಯಾದಲ್ಲಿ ನಡೆದ ನಾಟಕದ ಒಂದು ಅಂಕ. ಇಂದು January ೨೬, Australia Day ಎಂದು ಆಚರಿಸಲ್ಪಡುತ್ತಿದೆ.

೧೯೫೦ರ ಭಾರತದಲ್ಲಿ ಅದೇ ದಿನಾಂಕವು ಸಂವಿಧಾನವನ್ನು ಪರಿಚಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದಿತು. ಆ ದಿನ ಆ ರೂಪದಲ್ಲಿ ಹುಟ್ಟಲು ಕೂಡ ಪರೋಕ್ಷವಾಗಿ ಕಾರಣರಾದದ್ದು ವಸಾಹತುಶಾಹಿಗಳಾಗಿ ಭಾರತವನ್ನು ಆಕ್ರಮಿಸಿದ್ದ ಇಂಗ್ಲೀಷರು. ಹಾಗಾಗಿ Indian Republic Day, ಭಾರತೀಯ ಗಣರಾಜ್ಯೋತ್ಸವ ಎಂದರೆ ಭಾರತೀಯರಿಗೆ ಹಬ್ಬ. ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುವ ವಿಜೃಂಭಣೆಯ ಕಾರ್ಯಕ್ರಮಗಳು ಬಹು ಪ್ರಸಿದ್ಧಿ. ಭಾರತೀಯರೆಲ್ಲರಿಗೂ ಅಷ್ಟೇ ಹೆಮ್ಮೆ ತರುವ ದಿನ ಈ ತಾರೀಕು.

ಆದರೆ ಆಸ್ಟ್ರೇಲಿಯಾದಲ್ಲಿ ಜನವರಿ ೨೬ ಎಲ್ಲರಿಗೂ ಹೆಮ್ಮೆ ತರುವ ದಿನವಲ್ಲ. ದೇಶದಾದ್ಯಂತ ಅದು Australia Day ಆದರೂ ಸುಮಾರು ಜನ ಆಸ್ಟ್ರೇಲಿಯನ್ ಮೂಲನಿವಾಸಿಗಳು (Aboriginal) ಅಥವಾ ಸ್ವದೇಶೀಯರು (Indigenous = Aboriginal and Torres Straight Islanders) ಈ ದಿನವನ್ನು Occupation Day, Foundation Day, Settlers Day ಎಂದು ಕರೆಯುತ್ತಾರೆ. ಕೆಲವರಿಗೆ ಹಬ್ಬವಾದರೆ ಹಲವರಿಗೆ ಅದು ಶೋಕಾಚರಣೆಯ ಸಂಕೇತ. ಇದರ ಹಿನ್ನೆಲೆ ಬರೀ ವಸಾಹತುಶಾಹಿ ಆಳ್ವಿಕೆ ಅಷ್ಟೇ ಅಲ್ಲ; ಅದರ ಜೊತೆಗೆ ನೋವು, ಸಾವು, ನಷ್ಟ, ಮತ್ತು ಪೀಳಿಗೆಗಳಿಗೆ ಅಂಟಿರುವ, ಬೇಕೋ ಬೇಡವೋ ಆದರೂ ಶಾಶ್ವತ ತಿಥಿ.

Aboriginal Australia ವನ್ನು ತೋರಿಸುವ ಭೂಪಟ; ಹಲವಾರು ವರ್ಷಗಳ ಕಾಲ ಬಹು ಶ್ರಮ ಪಟ್ಟು ೧೯೮೮ರಲ್ಲಿ ಸಿದ್ಧಪಡಿಸಿದ್ದು. ಈ ಭೂಪಟ ಅವರ ಭಾಷಾಗುಂಪು ಮತ್ತು ಪ್ರಾದೇಶಿಕವಾಗಿ ವಾಸಿಸಿದ್ದ Blood Line ಜನ ಸಮುದಾಯಗಳನ್ನು ಸೂಚಿಸುತ್ತದೆ. ಕೃಪೆ ಮೂಲ: Australian Institute of Aboriginal and Torres Islanders Studies.

ನಾನು ಆಸ್ಟ್ರೇಲಿಯಾದಲ್ಲಿ ಕಾಲಿಟ್ಟದ್ದು ಫೆಬ್ರವರಿ ತಿಂಗಳಲ್ಲಿ. ಅದಾಗಲೇ Australia Day ವಾರ್ಷಿಕ ಆಚರಣೆ ಮುಗಿದಿತ್ತು. ವಿಶ್ವವಿದ್ಯಾನಿಲಯದಲ್ಲಿ ಹೊಸದಾಗಿ ಪರಿಚಯವಾದ ಆಸ್ಟ್ರೇಲಿಯನ್ನರು ಮತ್ತು ಇತರೆ ದೇಶಗಳ ವಿದ್ಯಾರ್ಥಿಗಳು ಬಹು ಗಮ್ಮತ್ತಾದ ಆ ದಿನದ ಪಾರ್ಟಿಗಳ ಬಗ್ಗೆ, ಎಲ್ಲೆಲ್ಲೂ ನಡೆಯುವ ಬಾಜಾಭಜಂತ್ರಿ, ಪೆರೇಡ್ ಗಳು, ಸಮುದ್ರ ತೀರದಲ್ಲಿ ಏರ್ಪಡುವ BBQ ಗಳ ಬಗ್ಗೆ ವಿವರಣೆ ಕೊಟ್ಟಿದ್ದರು. ಅದರ ಚಾರಿತ್ರಿಕ ಹಿನ್ನೆಲೆಯ ಬಗ್ಗೆ ಹೇಳಿದ್ದು ಈ ದಿನ ಈ ದೇಶವು ಆಸ್ಟ್ರೇಲಿಯಾ ಎಂದು ಅಸ್ತಿತ್ವಕ್ಕೆ ಬಂತು ಎಂದು. ನಾನು ಹೌದಾ ಎಂದು ಸುಮ್ಮನಾದರೂ ಮನಸ್ಸೆಲ್ಲಾ ನಮ್ಮ ಗಣರಾಜ್ಯೋತ್ಸವ ದಿನಕ್ಕೇ ಹೋಲಿಕೆ ಮಾಡುತ್ತಿತ್ತು. ಹಾಗೆ ಇರಬಹುದೇನೋ ಅನ್ನಿಸಿತ್ತು. ಮರು ವರ್ಷ ನಾನೂ ಕೂಡ BBQ ನೋಡಲು ಹೋದರೂ ಸಸ್ಯಾಹಾರಿಯಾದ್ದರಿಂದ ಉಪವಾಸವಿದ್ದು ಮನೆಗೆ ವಾಪಸ್ಸಾಗಿದ್ದೆ. ಆಗಲೂ ನನಗೆ Australia Day ಬಗ್ಗೆ ಹೆಚ್ಚು ಜ್ಞಾನವಿರಲಿಲ್ಲ. ಆಗಾಗ ಜನ ನನ್ನನ್ನು”Are you Aboriginal?” ಎಂದು ಕೇಳಿದಾಗ ವಿಚಿತ್ರವೆನಿಸಿತ್ತು. ನನ್ನ ಬಿಳಿ ಬಣ್ಣದ ಸ್ನೇಹಿತರು, “ಚಿಂತೆ ಮಾಡಬೇಡ, ನೀನು Aboriginals ಥರ ಕಾಣುವುದಿಲ್ಲ”, ಎಂದು ಸಮಾಧಾನ ಪಡಿಸಿದ್ದರು. ನಾನೇನು ಅಷ್ಟು ತಲೆಗೆ ಹಚ್ಚಿಕೊಳ್ಳಲಿಲ್ಲ, ಅಧ್ಯಯನದಲ್ಲಿ ಮುಳುಗಿದ್ದೆ.

ಆ ಪ್ರಶ್ನೆ ನನ್ನ ತಲೆ ತಾಕಿ ಒಳ ಹೊಕ್ಕು ತಿವಿದಿದ್ದು ಮುಂಬರುವ ವರ್ಷಗಳಲ್ಲಿ. ನಾನು ಹೆಚ್ಚು ಹೆಚ್ಚು ಜನನಿಬಿಡ (public spaces) ಪ್ರದೇಶಗಳಿಗೆ ಹೋದಷ್ಟೂ ನನಗೆ ವರ್ಣಬೇಧದ ಪರಿಚಯ ನೇರವಾಗಿ ಆಗಲಾರಂಭಿಸಿತು; ಆ ಪ್ರಶ್ನೆ ಕೇಳುವ ಜನ ಹೆಚ್ಚಾದರು. ಅದರ ಕೂಡ ನನಗೆ ಬಳುವಳಿಯಾಗಿ ಬಂದದ್ದು ಜನಾಂಗದ್ವೇಷದ ಅನುಭವ. ಆಗ ನಾನು ಆಸ್ಟ್ರೇಲಿಯ ದೇಶದ ಇತಿಹಾಸ, ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದೆ. ಆ ಕಾಲದಲ್ಲಿ ನನಗೆ ದೊರೆತ ಅಪರೂಪದ ಸ್ನೇಹಿತೆಯೊಬ್ಬಳು ತನ್ನದೇ ಅನುಭವ ಕತೆಗಳ ಮೂಲಕ ಒಂದಷ್ಟು ಬೆಳಕು ಚೆಲ್ಲಿದಳು. ಮುಂದೆ ನಾನು ಬ್ರಿಸ್ಬನ್ ನಗರದಲ್ಲಿ ಕಳೆದ ವರ್ಷಗಳಲ್ಲಿ ಕೆಲ ಕಾಲ ಒಂದು Aboriginal and Torres Straight Islanders education ವಿಭಾಗದಲ್ಲಿ ಕೆಲಸ ಮಾಡಿದ್ದೆ. ಅಲ್ಲಿ ನನಗೆ ಮುಖಾಮುಖಿಯಾಗಿದ್ದು ಆ ದೇಶದ ಕರಾಳ ಚಾರಿತ್ರಿಕ ಘಟನೆಗಳು, ವರ್ಣಬೇಧ ಮತ್ತು ಜನಾಂಗದ್ವೇಷದ ಕುಲುಮೆಗಳಲ್ಲಿ ಬೆಂದು ಹೋದ ಕುಟುಂಬಸ್ಥರ ನೋವು, ಮತ್ತು ಈ ಎಲ್ಲದರ ಮಧ್ಯೆ ನನ್ನ ನಿಲುವು ಮತ್ತು ಅಸ್ಮಿತೆ ಏನು ಎಂಬ ಪ್ರಶ್ನೆ.

ಬ್ರಿಟಿಷರು ಭಾರತ ಬಿಟ್ಟು ಹೊರ ನಡೆದ ಕಾಲಘಟ್ಟದಲ್ಲಿ ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಂತಹಂತವಾಗಿ ರೂಪುಗೊಂಡಿತು. ಅದನ್ನೆಲ್ಲಾ ನಾವುಗಳು ಶಾಲಾ ಪಠ್ಯದಲ್ಲಿ ಓದಿದ್ದೆವು. ಸ್ವತಂತ್ರ ಭಾರತದಲ್ಲೇ ಹುಟ್ಟಿದ್ದರಿಂದ ನನ್ನಂತಹವರಿಗೆ ಸ್ವಾತಂತ್ರ್ಯವಿಲ್ಲದ ಬದುಕು ಎಂದರೆ ಏನು ಎಂಬ ಕಲ್ಪನೆ ಮೂಡುವುದಿಲ್ಲ.

ಅಂತಹ ಕಲ್ಪನೆ ನನಗೆ ಬ್ರಿಸ್ಬನ್ ನಗರ ವಾಸದಲ್ಲಿ ಮೂಡಿತು. ನನ್ನ ಮೈ ಚರ್ಮ ಕಂದು/ಕಪ್ಪು ಬಣ್ಣ ಎಂಬ ಕಾರಣಕ್ಕೆ ನನ್ನ ಪಕ್ಕದ ಮನೆಯವರು ಐದು ವರ್ಷಗಳು ನನ್ನನ್ನು, ನನ್ನ ಮಕ್ಕಳನ್ನು ದೂರ ಇಟ್ಟು ಮಾತುಗಳಿಂದ, ನಡತೆಯಿಂದ, ಅವರ ಉಪೇಕ್ಷೆಯಿಂದ ಕಾಟ ಕೊಟ್ಟಿದ್ದರು. ನಾನು ಧೈರ್ಯವಾಗಿ ದೃಢತೆಯಿಂದ ನಿಂತಿದ್ದರಿಂದ ನನ್ನ ಮಕ್ಕಳು ಸಂತೋಷವಾಗಿ ನಮ್ಮ ಮನೆಯ ಹಿತ್ತಲಲ್ಲಿ ಆಟವಾಡಲು ಸಾಧ್ಯವಾಗಿತ್ತು. ಧೈರ್ಯವನ್ನೇ ನಿರ್ಮೂಲನೆ ಮಾಡಿ, ಜನರ ಅಂತಃಶಕ್ತಿಯನ್ನೇ ನಿರ್ನಾಮ ಮಾಡಲೆತ್ನಿಸಿದರೆ ಏನಾಗುತ್ತದೆ?

ಏನಾಯಿತು ಎಂಬ ಕತೆಗಳನ್ನು ನಾನು Aboriginal ಸ್ನೇಹಿತರ ಬಾಯಿಂದ, ಅವರ ಹಿರಿಯರಿಂದ, ಮತ್ತು ಕಿರಿಯ ವಿದ್ಯಾರ್ಥಿಗಳಿಂದ ಕೇಳಿದೆ.

ಈ ಕಾರ್ಟೂನ್ ಎಲ್ಲವನ್ನೂ ಹೇಳುತ್ತದೆ! ಕೃಪೆ: Lefty Cartoons

ಚಾರಿತ್ರಿಕವಾಗಿ ಹೇಳುವುದಾದರೆ ೧೬೦೦-ರಲ್ಲೇ ಆಸ್ಟ್ರೇಲಿಯಾ ದೇಶಕ್ಕೆ ವ್ಯಾಪಾರದ ಮತ್ತು ಚಿನ್ನದ ನಿಕ್ಷೇಪಗಳ ಆಸೆಯಿಂದ ಚೀನಿಯರು ಮತ್ತು ಡಚ್ಚರು ಬಂದಿದ್ದರು. ಚಿನ್ನದ ನಿಕ್ಷೇಪಗಳ ಕತೆ ಯೂರೋಪಿನ ಇತರ ದೇಶಗಳಿಗೂ ಹಬ್ಬಿತ್ತು. ೧೬೦೦ ಮತ್ತು ೧೭೦೦ ರ ಶತಮಾನಗಳಲ್ಲಿ ಯುರೋಪಿಯನ್ನರು ಉತ್ತರ ಮತ್ತು ದಕ್ಷಿಣ ಅಮೇರಿಕ ಖಂಡಗಳನ್ನು ಆಕ್ರಮಿಸಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸಲು ಹೆಣಗಾಡುತ್ತಿದ್ದರು.  ಏಷ್ಯಾದ, ಆಫ್ರಿಕಾದ ಭಾಗಗಳಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಿ ಆ ಭೂಭಾಗಗಳ ಸಂಪತ್ತನ್ನು ಕೊಳ್ಳೆ ಹೊಡೆಯುವ ಪ್ರಯತ್ನದಲ್ಲಿ ಡಚ್ಚರು, ಪೋರ್ಚುಗೀಸರು, ಫ್ರೆಂಚರು, ಇಂಗ್ಲೀಷರು, ಬೆಲ್ಜಿಯನ್ನರು ಎಂಬಂತೆ ಎಲ್ಲರೂ ಕಚ್ಚಾಡುತ್ತಿದ್ದರು. ಭಾರತದಲ್ಲಿ ಇಂಗ್ಲೀಷರ East India Company ತನ್ನ ‘ಒಡೆದು ಆಳು’ ನೀತಿಯನ್ನು ಚಾಣಾಕ್ಷತೆಯಿಂದ ಕಾರ್ಯರೂಪಕ್ಕೆ ತಂದಿತ್ತು.

ಅದೇ ಕಾಲದಲ್ಲಿ ೧೭೭೦ ರಲ್ಲಿ ದೂರದ ಆಸ್ಟ್ರೇಲಿಯಾ – ಈಗಿನ ಸಿಡ್ನಿ ಅಂದರೆ ಪೂರ್ವ ಕರಾವಳಿಗೆ ಬಂದಿಳಿದು, ಕ್ಯಾಪ್ಟನ್ ಕುಕ್ ಆ ಪ್ರದೇಶಕ್ಕೆ New South Wales ಎಂದೂ ಕೂಡ ನಾಮಕರಣ ಮಾಡಿದ್ದ. ಅಲ್ಲಿದ್ದ Aboriginal ಜನ ಸಮುದಾಯಗಳನ್ನು ಭೇಟಿಯಾಗಿ ಒಂದಷ್ಟು ಭಾಂದವ್ಯವನ್ನು ಆರಂಭಿಸಿದ್ದ. ಅದಾದ ನಂತರ ಉತ್ತರ ಅಮೆರಿಕೆಯಲ್ಲಿ ಇಂಗ್ಲಿಷ್ ಸೈನ್ಯಕ್ಕೆ ಹಲವಾರು ಕಡೆ ಪರಾಭವವಾಗಿತ್ತು; ಭಾರತದಲ್ಲೂ ಸವಾಲು, ಪ್ರತಿಭಟನೆಗಳು ಬೆನ್ನುಬಿಡದೆ ಎದುರಾಗಿದ್ದವು. ಬಿಗಡಾಯಿಸಿದ್ದ ಆಂತರಿಕ ಸಮಸ್ಯೆಗಳಿಂದ ನಲುಗಿದ್ದ ಇಂಗ್ಲೆಂಡ್ ತುಂಬಿತುಳುಕಿದ್ದ ಕಾರಗ್ರಹಗಳಿಂದ ಒಂದಷ್ಟು ಜನರನ್ನು ಹಡಗುಗಳಲ್ಲಿ ತುಂಬಿಸಿ ದೂರದ ದ್ವೀಪ ಆಸ್ಟ್ರೇಲಿಯಾಕ್ಕೆ ರವಾನಿಸಲು ಮುಂದಾಗಿತ್ತು.

೧೭೮೮ ರ ಮೊದಲ ತಿಂಗಳಲ್ಲಿ ಕ್ಯಾಪ್ಟನ್ ಆರ್ಥರ್ ಫಿಲಿಪ್ ತನ್ನ ಹಡಗನ್ನು ಸಿಡ್ನಿ ಕರಾವಳಿಗೆ ತಂದು ನಿಲ್ಲಿಸಿದ. ಅದಾಗಲೇ ಅಲ್ಲಿ ಫ್ರೆಂಚರು ತಮ್ಮ ಹಡಗಿನೊಂದಿಗೆ ಠಿಕಾಣಿ ಹೂಡಿದ್ದರು. ಇಂಗ್ಲೆಂಡ್ ರಾಜ ಮೂರನೇ ಜಾರ್ಜ್ ನೌಕಾಪಡೆಗೆ ಖಚಿತ ಆಜ್ಞೆಯಿತ್ತಿದ್ದರು – ಆ ಕರಾವಳಿಯ ಪ್ರದೇಶದಲ್ಲಿ ಇರುವ ಸ್ಥಳೀಯ ಜನರೊಂದಿಗೆ ಮಾತುಕತೆ ನಡೆಸಿ ಸಾಧ್ಯವಾದಷ್ಟೂ ಸನ್ನಿವೇಶದ ಲಾಭ ಪಡೆದು ಭೂಭಾಗಗಳನ್ನ ತಮ್ಮದಾಗಿಸಿಕೊಳ್ಳಬೇಕು. ಫಿಲಿಪ್ ಗೆ ತನ್ನದೇ ಆದ ರಾಜಕೀಯ ಉದ್ದೇಶಗಳೂ ಇದ್ದವು. ಫ್ರೆಂಚರನ್ನು ಹಿಂದಿಕ್ಕಿ ಇಂಗ್ಲೆಂಡ್ ಬಾವುಟವನ್ನು ಹಾರಿಸುವ ಮಹದಾಕಾಂಕ್ಷೆ ಹವಾಮಾನ ವ್ಯಪರೀತ್ಯವಿದ್ದರೂ ದೋಣಿಯಲ್ಲಿ ಸಾಗಿ ಜನವರಿ ೨೫ರಂದು ಸಿಡ್ನಿ ಕೊಲ್ಲಿಗೆ (Cove) ಬರುತ್ತಾನೆ. ಮರುದಿನ ಬೆಳಗ್ಗೆ ಅಂದರೆ ೨೬ರಂದು ಇಂಗ್ಲೆಂಡ್ ಯೂನಿಯನ್ ಜಾಕ್ ಬಾವುಟವನ್ನು ಹಾರಿಸಿ, ಆ ಭೂಪ್ರದೇಶ ನಮ್ಮ ಇಂಗ್ಲೆಂಡ್ ರಾಜನಿಗೆ ಸೇರಿದ್ದು ಎಂದು ಘೋಷಿಸುತ್ತಾನೆ. ಯಾರ ಲೆಕ್ಕದಲ್ಲಿ, ಯಾಕೆಂದು ಯಾರೂ ಕೇಳಲಿಲ್ಲವೇ?!

ಕ್ಯಾಪ್ಟನ್ ಆರ್ಥರ್ ಫಿಲಿಪ್ ಬ್ರಿಟನ್ನಿನ ಬಾವುಟವನ್ನು ೧೭೮೮, ಜನವರಿ ೨೬ ರಂದು ಸಿಡ್ನಿ ಕೊಲ್ಲಿಯಲ್ಲಿ ಹಾರಿಸುತ್ತಿರುವುದು. ಚಿತ್ರ ಕೃಪೆ: Algernon Talmadge R.A, 1937, ನ್ಯೂ ಸೌತ್ ವೇಲ್ಸ್ ರಾಜ್ಯ ಗ್ರಂಥಾಲಯ.

ಅಲ್ಲಿಂದ ನಿಧಾನವಾಗಿ ಆಸ್ಟ್ರೇಲಿಯಾವನ್ನು ಆಕ್ರಮಿಸುವ ಕಾಲಘಟ್ಟ ಆರಂಭವಾಯಿತು. ಮೊದಮೊದಲು ಸ್ಥಳೀಯರೊಂದಿಗೆ ಸಂಧಾನ, ಮಾತುಕತೆ ನಡೆದರೂ ನಂತರ ಬದಲಾದ ರಾಜಕೀಯ ನಿರ್ಧಾರಗಳು, ಇಂಗ್ಲೆಂಡ್ ಕಾರಾಗೃಹಗಳಿಂದ ಬಂದು ಇಲ್ಲಿ ಸೇರಿಕೊಂಡ ಚಿಕ್ಕ ಪುಟ್ಟ ಖೈದಿಗಳ ಧೋರಣೆಯಿಂದಲೂ, No man’s land, no humans ever lived here ಎಂದು ಸ್ವಲಾಭಕ್ಕಾಗಿ ಸೃಷ್ಟಿಸಿದ ಸುಳ್ಳಿನಿಂದಲೂ, White Supremacy ಕಾನೂನಿನಿಂದಲೂ ಮುಂದಿನ ಶತಮಾನಗಳು ಸ್ವದೇಶಿಯರಿಗೆ ದುಃಸ್ವಪ್ನವಾದವು.

Aboriginal ಜನಸಮುದಾಯಗಳ ಸಾಮೂಹಿಕ ಕಗ್ಗೊಲೆಗಳಾದವು. ಅಮೆರಿಕೆಯಲ್ಲಿ ಆಫ್ರಿಕನ್ ಜನಾಂಗವನ್ನು ಹೇಗೆ ಗುಲಾಮರು ಎಂದು ಹೇಳಿ ಬಲಿಪಶುಗಳನ್ನಾಗಿ ಮಾಡಿದರೋ ಹಾಗೆಯೇ ಆಸ್ಟ್ರೇಲಿಯಾದ ಸ್ವದೇಶಿಯರ ಸ್ಥಿತಿಯಾಯ್ತು. ಕೆಲವರು ಮನರಂಜನೆಗಾಗಿ Aboriginal ಜನರನ್ನು ಸಾಲು ನಿಲ್ಲಿಸಿ ಗುಂಡಿಟ್ಟು ಕೊಲ್ಲುತ್ತಿದ್ದರಂತೆ. ಕಾಲಕ್ರಮೇಣ ಅವರನ್ನು ‘ಸುಧಾರಿಸಿಲು’ ಕೆಲ ಕ್ರಮಗಳನ್ನು ತರಲಾಯಿತು. ಮಕ್ಕಳನ್ನು ಒಟ್ಟು ಕುಟುಂಬ ವ್ಯವಸ್ಥೆಯಿಂದ ಬೇರ್ಪಡಿಸಿ ಹಾಸ್ಟೆಲ್ ಗಳಿಗೆ ಸೇರಿಸಿ ಇಂಗ್ಲಿಷ್ ಭಾಷೆ, ಸಂಸ್ಕೃತಿ ಮತ್ತು ಸಾಕ್ಷರತೆಯನ್ನು ಕೊಡಲಾಯಿತು. ದೇಶದ ತುಂಬಾ ಹುಟ್ಟಿಕೊಂಡ ಬಿಳಿ ಯುರೋಪಿಯನ್ನರ ವ್ಯಾಪಾರ ಮತ್ತು ವ್ಯವಸಾಯ ಸಂಬಂಧಗಳ ಕೆಲಸಗಳಲ್ಲಿ ಗಂಡಸರನ್ನು, ಹೆಂಗಸರನ್ನು ಬಳಸಿಕೊಳ್ಳಲಾಯ್ತು. ಆಗ ನಡೆದ Stolen Generations ಮತ್ತು Stolen Wages ಯುಗದ ಕರಾಳ ಕತೆಗಳನ್ನು ೧೯೮೦ ರ ದಶಕದವರೆಗೂ ಹೊರ ಪ್ರಪಂಚಕ್ಕೆ ಕಾಣಿಸದ ಹಾಗೆ ಮುಚ್ಚಿಡಲಾಗಿತ್ತು. ಉದಾಹರಣೆಗೆ, ನಗರಗಳ ನಿಗದಿತ ಬೀದಿಗಳಲ್ಲಿ, ಅಂಗಡಿ, ಮನರಂಜನೆ, ಸಮುದ್ರ ತಟ ಮುಂತಾದ ಜಾಗಗಳಿಗೆ ಅವರಿಗೆ ಪ್ರವೇಶವಿರಲಿಲ್ಲ. ಅವರು ತಾವು Aboriginal ಎಂದು ಎಲ್ಲೂ ಹೇಳಿಕೊಳ್ಳುವ ಹಾಗಿರಲಿಲ್ಲ. ಈಗಲೂ ಸ್ವದೇಶೀಯರ ಒಟ್ಟು ಜನಸಂಖ್ಯೆ ಎಷ್ಟು ಎಂದು ನಿಖರವಾಗಿ ತಿಳಿದಿಲ್ಲ. ಯಾಕೆಂದರೆ ಕಾಗದದ ಮೇಲೆ ಅವರು ತಮ್ಮ ಅಸ್ಮಿತೆಯನ್ನು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಸರ್ಕಾರಕ್ಕೆ ತಿಳಿದರೆ ಇನ್ನಿಲ್ಲದಷ್ಟು ಕಿರುಕುಳ ಶುರುವಾಗುತ್ತದೆ, ಪೊಲೀಸರು ಮನೆಗೆ ಬರುತ್ತಾರೆ, ಕಿರಿಯರನ್ನು ವಿನಾಕಾರಣ ಲಾಕಪ್ಪಿಗೆ ಹಾಕುತ್ತಾರೆ, ಇತ್ಯಾದಿ. ಹೆಚ್ಚಿನ ಪಾಲು ಕಳೆದುಹೋಗಿರುವ ಸಂಸ್ಕೃತಿಗಳು, ಬಲವಂತವಾಗಿ ಅಳಿಸಿದ ಭಾಷಾ ಸ್ವಂತಿಕೆ, ದುಃಖದಲ್ಲಿ ಮುಳುಗಿದ ಹಿರಿಯರು, ತಮ್ಮ ಅಸ್ಮಿತೆಯ ಬಗ್ಗೆ ಅರೆಬರೆ ತಿಳಿದಿರುವ ಕಿರಿಯರು, ಕಾಡುವ ಆರೋಗ್ಯ ಸಮಸ್ಯೆಗಳು, ಅಷ್ಟೊಇಷ್ಟು ಕೈಗೆಟಕುವ ಶಿಕ್ಷಣ, ಸದಾ ಹಿಂಬಾಲಿಸುವ ಸಮಾಜದ ಅನುಮಾನದ ನೋಟ – ಲೆಕ್ಕ ಇಟ್ಟಿರುವ ಒಟ್ಟು ಜನಸಂಖ್ಯೆಯ ಶೇಕಡ ೪ ರಷ್ಟು ಇರುವ ಸ್ವದೇಶೀಯರ ಸದ್ಯದ ಪರಿಸ್ಥಿತಿ ಇದು. ನ್ಯಾಯಕ್ಕಾಗಿ ದನಿ ಎತ್ತುವ ಜನರಿದ್ದರೂ ಅದು ಸಮುದ್ರದಲ್ಲಿ ಕಳೆದುಹೋಗುವ ಒಂದು ಮಳೆ ಹನಿ.

ಆಸ್ಟ್ರೇಲಿಯನ್ ಸ್ವದೇಶಿಯರಿಗೆ (Indigenous) ೧೯೬೨ ಮಾರ್ಚ್ ತಿಂಗಳಲ್ಲಿ ಚುನಾವಣೆಗಳಲ್ಲಿ ತಮ್ಮ ಮತವನ್ನು ಚಲಾಯಿಸುವ ಹಕ್ಕು ಬಂದಿತು ಎಂದರೆ ಅದುವರೆಗೂ ನಡೆದ ಹೋರಾಟ ನಿಮಗೆ ಅರ್ಥವಾಗಬಹುದು. ೧೯೯೦ ರ ದಶಕದಿಂದ ಈಚೆಗೆ ರಾಜಕೀಯ ಪರಿಸ್ಥಿತಿಯಲ್ಲಿ ಸುಧಾರಣೆಗಳು ಬಂದಿವೆ. ೨೦೦೮ ರಲ್ಲಿ ಆಗಿನ ಪ್ರಧಾನ ಮಂತ್ರಿ ಕೆವಿನ್ ರಡ್ ಸ್ವದೇಶೀಯರಿಗೆ sorry ಎಂದು ಹೇಳಿದರು. ಆದರೂ ನಿಜ ಜೀವನದಲ್ಲಿ ಈಗಲೂ Aboriginal ಜನರು ಎಂದರೆ ಅನಾಗರೀಕರು, ಭಾಷೆಯಿಲ್ಲದವರು, ಕುಡುಕರು, ಸರ್ಕಾರ ಕೊಡುವ Dole (welfare benefits) ಹಣಕ್ಕೆ ಬಾಯಿ ಬಿಡುವವರು, ವಿದ್ಯೆಯಿಲ್ಲ, ಕೆಲಸ ಮಾಡದ ಸೋಮಾರಿಗಳು ಎಂದೆಲ್ಲಾ ಹೇಳುತ್ತಾರೆ. ಮೂರು ಶತಮಾನಗಳ ಕಾಲ ಅವರಲ್ಲಿ ತುಂಬಿದ ಅಧೈರ್ಯ, ಕೀಳರಿಮೆ, ಭಯ, ತಮ್ಮತನವನ್ನು ಬಿಟ್ಟು ಬೇರೆಯವರ ನಿರೀಕ್ಷೆಯಂತೆ ಇರಬೇಕಾದ ಅನಿವಾರ್ಯಗಳನ್ನ ಓದಿದರೆ ಇನ್ನೆಷ್ಟು ಶತಮಾನಗಳು ಕಳೆದರೂ ಪರಿಸ್ಥಿತಿ ಸರಿಹೋಗುವುದಿಲ್ಲ ಎನ್ನಿಸುತ್ತದೆ.

ಜನವರಿ ೨೬ ಒಂದು ಕಾಲಕ್ಕೆ ಫೌಂಡೇಶನ್ ಡೇ, ಆನಿವರ್ಸರಿ ಡೇ, Mourning Day, Survival Day, Invasion Day ಎಂಬಂತೆ ಬೇರೆ ಬೇರೆ ಹೆಸರುಗಳಿದ್ದರೂ ಸುಮಾರು ೧೯೩೫ರ ಹೊತ್ತಿಗೆ ಆಸ್ಟ್ರೇಲಿಯಾ ಡೇ ಎಂಬುದು ಸ್ಥಿರವಾಯಿತು. ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ೧೯೯೪ ನೇ ವರ್ಷ ಜನವರಿ ೨೬ರಂದು ಸರ್ಕಾರಿ ರಜಾ ದಿನ ಎಂದು ಅಂಗೀಕರಿಸಿದವು. ಅಲ್ಲಿಂದ ಆ ದಿನವನ್ನು ಬಹಳ ಸಡಗರದಿಂದ ಆಚರಿಸಿದರು. ನಾನು ಕಂಡ ಹಾಗೆ ಆಸ್ಟ್ರೇಲಿಯಾ ದೇಶದ ಯೂನಿಯನ್ ಜಾಕ್ ಬಾವುಟವನ್ನು ಹಿಡಿದುಕೊಂಡು, ಇದು ನಮ್ಮ ದೇಶ, ನಾವು ಇಲ್ಲಿನ ವಾಸಿಗಳು ಎಂದು ಬೀದಿಗಳಲ್ಲಿ, ಬೀಚ್ ಗಳಲ್ಲಿ, ವ್ಯಾಪಾರ ಸ್ಥಳಗಳಲ್ಲಿ ಸಾದರಪಡಿಸುತ್ತಾರೆ. ನೇರವಾಗಿ, ಪರೋಕ್ಷವಾಗಿ ಸ್ವದೇಶೀಯರಿಗೆ ಇದು ನಿಮ್ಮ ನೆಲವಲ್ಲ ಎಂದು ಸಾರುತ್ತಾರೆ.

ಮೊದಮೊದಲು ಅಂತಹ ಆಚರಣೆಗಳಿಗೆ ಸ್ವದೇಶಿ ಜನರಿಂದ ತೀವ್ರ ಪ್ರತಿರೋಧ ಬಂದಿತ್ತು. Aboriginal ಮತ್ತು Torres Straight Islanders ಬಾವುಟಗಳನ್ನು ರಾಷ್ಟ್ರ ಬಾವುಟಗಳೆಂದು ಈಗ ಅಂಗೀಕರಿಸಲಾಗಿದೆ, ಆದರೆ ಅವಕ್ಕೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ. ಹೆಚ್ಚು ಬಿಳಿಜನರು ಆ ಬಾವುಟಗಳನ್ನು ತಿರಸ್ಕರಿಸುತ್ತಾರೆ ಇಲ್ಲವೇ ಮುಖ ದಪ್ಪ ಮಾಡಿಕೊಂಡು ‘ಸಹಿಸಿ’ಕೊಳ್ಳುತ್ತಾರೆ.

Babakiueria ಎಂಬ ಈ ಕಿರುಚಿತ್ರವನ್ನು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಸ್ತುವನ್ನಾಗಿ ಉಪಯೋಗಿಸುತ್ತಾರೆ.  Aboriginal ಜನರ ಸ್ಥಾನದಲ್ಲಿ ಬಿಳಿಜನರನ್ನು (white fella) ಹಾಕಿ, ಪಾತ್ರ ಅದಲುಬದಲು ಮಾಡಿದರೆ ಏನಾಗುತ್ತದೆ ಎಂದು ಮಾಡಿರುವ ವಿಡಂಬನಾತ್ಮಕ ಕಿರುಚಿತ್ರ ಇದು. ಇಲ್ಲಿ ಅದರ ಸಣ್ಣ ತುಣುಕನ್ನ ಮಾತ್ರ ಬಳಸಲಾಗಿದೆ.

ಕ್ರಮೇಣ ನಗರಗಳಲ್ಲಿ ಸ್ವದೇಶೀಯರು (Indigenous), ಅವರ ಬೆಂಬಲಿಗರು ಶಾಂತಿಯಿಂದ ತಮ್ಮದೇ ಆದ ಬೇರೆ ಪೆರೇಡ್ ನಡೆಸುತ್ತಾರೆ. “ನಾವು ನೀವು ಇಬ್ಬರೂ ಕೂಡಿ ಶಾಂತಿಯಿಂದ ಬದುಕೋಣ, ನಮ್ಮನ್ನು ಹೀನಾಯಿಸಿ ನೋಡುವುದನ್ನು ಬಿಡಿ, ಗೌರವದಿಂದ ಇಬ್ಬರೂ ಸಹಬಾಳ್ವೆ ನಡೆಸೋಣ” ಎನ್ನುವ ಮಾತುಗಳು ಬರುಬರುತ್ತಾ ಹೆಚ್ಚಾಗಿ ಕೇಳುತ್ತಿವೆ. ಅವರನ್ನು ಬೆಂಬಲಿಸುವ ಇತರೇ ದೇಶಗಳ ಜನರ ಸಂಖ್ಯೆ ಹೆಚ್ಚುತ್ತಿದೆ. ಬ್ರಿಸ್ಬನ್ ನಗರದಲ್ಲಿ ೨೬ರಂದು ನಡೆಯುವ Settlers Day/Survival Day ಪೆರೇಡ್ ನಲ್ಲಿ ಭಾರತೀಯ ಮುಖಗಳು ಹೆಚ್ಚುತ್ತಿವೆ. ಪರಸ್ಪರರನ್ನು ಒಪ್ಪಿಕೊಂಡು, ಇಬ್ಬರ ಸಂಸ್ಕೃತಿಯನ್ನೂ ಬಿಂಬಿಸುವ ಜನಜೀವನದ ನಿರೀಕ್ಷೆ ಮತ್ತಷ್ಟು ಗರಿಕೆದರುತ್ತದೆ.

ನಾನು ಭಾರತೀಯಳು; ಒಂದಷ್ಟು ವರ್ಷ ಆಸ್ಟ್ರೇಲಿಯಾದಲ್ಲಿ ಇದ್ದು ಜೀವನ ಮಾಡಿದವಳು. ಸಂಸ್ಕೃತಿಗಳ ಮಿಲನ, ಜನಸೌಹಾರ್ದತೆ, ಶಾಂತಿ-ಸಾಮರಸ್ಯದಿಂದ ಪರಸ್ಪರ ಗೌರವ ತೋರುವ ಆಸ್ಟ್ರೇಲಿಯಾ ಸಮಾಜವನ್ನು ಮತ್ತು ಭಾರತೀಯತೆಯನ್ನು ಎದುರು ನೋಡುವವಳು. ಆ ಎರಡೂ ರಾಷ್ಟ್ರಗಳಲ್ಲಿ ಜನವರಿ ೨೬ ಎಂಬ ಸಾಮಾನ್ಯ ದಿನಾಂಕವು ವಿಶೇಷ ದಿನವಾಗಿ ಪರಿವರ್ತನೆಯಾಗಲು ಕಾರಣವಾದ ಇಂಗ್ಲೆಂಡ್ ದೇಶದಲ್ಲಿ ಕೂತು ನಾನು ಇದನ್ನು ಬರೆಯುತ್ತಿರುವುದರ ಬಗ್ಗೆ ನನಗೆ ಎಡಬಿಡದ ಅಚ್ಚರಿ!!

ವಿನತೆ ಶರ್ಮ

10 thoughts on “ಏನಿದೇನಿದು ಜನವರಿ ೨೬ರ ಕಹಾನಿ!! – ವಿನತೆ ಶರ್ಮ ಬರೆದ ಲೇಖನ

  1. ವಿನುತೆಯವರೆ, “ಆಸ್ಟ್ರೇಲಿಯಾ ಡೇ“ ಬಗ್ಗೆ ತಿಳಿಸಿಕೊಟ್ಟಿದ್ದಕಾಗಿ ವ೦ದನೆಗಳು.
    ಚರಿತ್ರೆ ಶೋಷಣೆ ಮತ್ತು ದೌರ್ಜನ್ಯದಿ೦ದ ತು೦ಬಿದೆ ಎನ್ನಿಸುತ್ತದೆ. ಆಸ್ಟ್ರೆಲಿಯಾ ಮತ್ತು ಅಮೆರಿಕಾ ದೇಶದ ಮೂಲವಾಸಿಗಳನ್ನು ಅವರದೇ ನಾಡನ್ನು ಆಕ್ರಮಿಸಿ, ತಮ್ಮ ಮದ್ದುಗು೦ಡುಗಳಿ೦ದ ಸದೆಬಡಿದ ಯೂರೋಪಿಯನ್ನರ ದೌರ್ಜನ್ಯಕ್ಕೆ ಮಿತಿಯಿಲ್ಲ.
    ಈಗ ಆಸ್ಟ್ರೇಲಿಯಾದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಇದನ್ನು ಅವರ ಚರಿತ್ರೆಯ ಭಾಗವಾಗಿ ಕಲಿಸುವ ಪ್ರಯತ್ನದ ಅಗತ್ಯವಿದೆ. ಆದರೆ ಅದಕ್ಕೆ ಅಲ್ಲಿನ ರಾಜಕೀಯದ ಬೆ೦ಬಲ ಸಿಗುತ್ತದೆಯೆ ಎನ್ನುವುದು ದೊಡ್ಡ ಪ್ರಶ್ನೆ !!!

    ದಾಕ್ಷಾಯಿನಿ

    Like

  2. ನನ್ನ ಲೇಖನದ ಬಗ್ಗೆ ಭರವಸೆಯ ಮಾತುಗಳನ್ನ ಹೇಳಿದ್ದೀರಿ – ಕೃತಜ್ಞತೆಗಳು

    Like

  3. ತುಂಬಾ ಮನ ಕಲಕುವ , ಸುಂದರ ಲೇಖನ.ಯಾವಾಗಲೂ ಮನುಷ್ಯ ಮನುಷ್ಯನ ಮೇಲೆ , ಬಲಹೀನನ ಮೇಲೆ ಬಲಾಢ್ಯ ಮೇಲ್ಮೆಯನ್ನು ಸಾಧಿಸುತ್ತಾ ಬಂದಿರುವುದನ್ನು ಕಾಣುತ್ತಲೇ ಬಂದಿದ್ದೆವೆ.ಅದಕ್ಕೆ ಈ ಜಾತಿ ಭೇದ, ವರ್ಣಭೇದ, ಜೊತೆಗೆ ಲಿಂಗ ಭೇದ ಒಂದು ಸಾಧನದಂತೆ ಉಪಯೋಗಿಸುತ್ತಾ ಬಂದಿದ್ದಾನೆ ಮಾನವ ಅನಿಸ್ತದೆ.ಬರೀ ಪುಸ್ತಕಗಳಲ್ಲಿ ಓದಿದ ವರ್ಣಭೇದ ದ ಕರಾಳತೆಯನ್ನು ಸ್ವತಃ ಅನುಭವಿಸಿ ಬರೆದ ವಿನತೆಯವರ ಲೇಖನ ಮನದಲ್ಲಿ ಕಸಿವಿಸಿ ಕಳವಳ ಉಂಟು ಮಾಡಿದರೂ ಅವರ ಧೃಡಮನಕ್ಕೆ, ಧೈರ್ಯ ಕ್ಕೆ ಅಭಿಮಾನ ತುಂಬಿ ಬರುತ್ತದೆ.ಸುಂದರ ಬರಹಕ್ಕೆ ಧನ್ಯವಾದಗಳು ಹಾಗೂ ಅಭಿನಂದನೆಗಳು ವಿನತೆಯವರೇ.ಜೊತೆಗೇ ‘ಅವಧಿ’ಯಲ್ಲಿ “poet of the week” ಆಗಿರೋದಕ್ಕೆ ಅಭಿನಂದನೆಗಳು.
    ಸರೋಜಿನಿ ಪಡಸಲಗಿ.

    Liked by 1 person

  4. ರಾಮಮೂರ್ತಿಯವರು ಹೇಳಿರುವುದು ನಿಜ. ಎಲ್ಲ ಉಲ್ಟ-ಪಲ್ಟ ಆಗಿರೋದು ನಿಜ. ಆದ್ರೆ ಭಾರತ ಪೂರ್ತಿ ಕೆಟ್ಟಿಲ್ಲ. ಈ ದೇಶಗಳು ಪೂರ್ತಿ ಬದಲಾಗುವುದೂ ಇಲ್ಲ.”ದೊಡ್ಡವರ’ ಗುಣಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಮನಕಲಕುವ ಲೇಖನ.

    Like

  5. ವಿನತೆ ಅವರೆ
    ವರ್ಣ ಭೇದ, ಜಾತಿ ಭೇದ, ಶೋಷಣೆ ಮತ್ತು ದಬ್ಬಾಳಿಕೆ ಇವುಗಳನ್ನು ಮನುಷ್ಯ ಶತಮಾನಗಳಿಂದ ಪ್ರಪಂಚದ ಎಲ್ಲ ಪ್ರದೇಶಗಳಲ್ಲಿ ಅನುಷ್ಠಾನ ಮಾಡಿಕೊಂಡು ಬಂದಿದ್ದಾನೆ. ಇದರ ಕರಾಳ ಚಹರೆಯನ್ನು ತಾವು ಸ್ವತಃ ಕಂಡಿದ್ದೀರಿ. ‘ಅಲ್ಪಮಾನವ’, ‘ವಿಶ್ವ ಮಾನವ’ನಾಗುವ ಕುವೆಂಪು ಪರಿಕಲ್ಪನೆ ಮುಂದೊಮ್ಮೆ ನನಸಾಗುವವರೆಗೆ ಈ ರೀತಿಯ ಶೋಷಣೆಗಳು ನಮ್ಮ ಬದುಕಿನ ಅನಿವಾರ್ಯ ಆಗುಹೋಗುಗಳಾಗಿ ಉಳಿಯಬಹುದು. ಈ ಪರಿವರ್ತನೆಗೆ ಇನ್ನು ನೂರಾರು ವರ್ಷ ಕಾಯಬೇಕಾಗಬಹುದು.

    ಮೇಲೆ ನಿರೂಪಿಸಿದ ಕಾರ್ಟೂನ್ ಗಮನಿಸಿದಾಗ ನಮ್ಮಲ್ಲಿ ಕೆಳ ಜಾತಿಯವರಿಗೆ ಮೀಸಲಾದ ರಿಸರ್ವೇಷನ್ ಬಗ್ಗೆ ಕೆಲವರು ಗೊಣಗುವುದು ನೆನಪಿಗೆ ಬಂತು. ವರ್ಣ ಭೇದದಷ್ಟೇ ಪ್ರಚಲಿತವಾಗಿರುವ ಅಥವಾ ಆಗಿದ್ದ ಜಾತಿ ಭೇದದ ಉದಾಹರಣೆಗಳನ್ನು ದೂರದ ಆಸ್ಟ್ರೇಲಿಯ ಏಕೆ ನಮ್ಮ ಭಾರತದಲ್ಲಿ ಕೂಡ ಕಾಣಬಹುದು. ನಾವು ನಮ್ಮ ಇತಿಹಾಸ ಪುಟಗಳೊಮ್ಮೆ ತಿರುವಿ ಆತ್ಮ ಶೋಧನೆ ಮಾಡಿಕೊಳ್ಳಬೇಕು.

    ” ದೀಪವಿರದ ದಾರಿಯಲ್ಲಿ ತಡವರಿಸುವ ದನಿಗಳೇ
    ಉಸಿರನಿಡುವೆ, ಹೆಸರ ಕೊಡುವೆ, ಬನ್ನಿ ನನ್ನ ಹೃದಯಕೆ”

    ಎಂಬ ಡಾ. ಜಿ.ಎಸ್.ಎಸ್. ಅವರ ಕವನದಲ್ಲಿನ ಅನುಕಂಪೆ ಎಲ್ಲರಲ್ಲಿ ಮೂಡಿಬರಲಿ ಎಂದು ಹಾರೈಸುತ್ತೇನೆ.

    ಬಹಳ ಮನಮುಟ್ಟುವ ವೈಚಾರಿಕ ಲೇಖನ.

    Sorry about the e mail forward, I did not realize it has crept inappropriately into my post below.(Now removed -Ed)

    Like

  6. ಒಂದೇ ದಿನಾಂಕ, ಒಂದೇ ದೇಶದ ಕೆಲವರಿಗೆ ಹಬ್ಬ, ಕೆಲವರಿಗೆ ಕರಾಳ ದಿನ.

    ಇತಿಹಾಸದ ಪುಟಪುಟಗಳಲ್ಲಿ ನಮಗೆ ಮನುಷ್ಯನ ಸಿಗುವುದು ಕರಾಳ ದೌರ್ಜನ್ಯ.

    ಬಣ್ಣ, ಧರ್ಮ, ದೇಶ, ಜಾತಿ, ಲಿಂಗ, ಅಧಿಕಾರ, ಅಂತಸ್ತು, ವಯಸ್ಸುಗಳ ಆಧಾರದ ಮೇಲೆ ಮನುಷ್ಯ ಮನುಷ್ಯರನ್ನು ಒಡೆಯುತ್ತಲೇ ಬಂದಿದ್ದಾನೆ.

    ಮನಮುಟ್ಟುವ ಲೇಖನ.

    – ಕೇಶವ

    Like

  7. ಬ್ರಿಟಿಷರು ಈ ಭೂಮಂಡಲದಲ್ಲಿ ಕಾಲಿಟ್ಟು ಅತ್ಯಾಚಾರ ನಡೆಸದ ಜಾಗವೇ ಇಲ್ಲ ಅಲ್ಲವೇ! ಸೂರ್ಯ ಮುಳುಗದ ಸಾಮ್ರಾಜ್ಯ ಎನ್ನುವ ಹೆಸರಿನಿಂದ ಮೆರೆಯುತ್ತಿದ್ದ ಆ ದಿನಗಳಲ್ಲಿ, ಈಸ್ಟ್ ಇಂಡಿಯಾ ಕಂಪನಿಯಾ ದರ್ಬಾರು ಮತ್ತು ಪ್ರಭಾವಗಳು ಎಷ್ಟಿತ್ತೆಂದರೆ, ಅವರು ಅಂದಿನ ರಾಣಿ ವಿಕ್ಟೊರಿಯಾಳನ್ನು ಹೆದರಿಸುತ್ತಿದ್ದರೆಂದು ಇತ್ತೀಚಿಗೆ ಓದಿದ ಒಂದು ಲೇಖನದಿಂದ ತಿಳಿದುಬಂತು. ಭಾರತದಲ್ಲಿ ನಡೆಸಿದ ವ್ಯವಹಾರವನ್ನೇ ಆಸ್ಟ್ರೇಲಿಯಾದಲ್ಲೂ ಅಲ್ಲಿನ ಮೂಲಜನಾಂಗದ ಮೇಲೆ ನಡೆಸಿ ಅವರನ್ನು ನಿರ್ಮೂಲ ಮಾಡಲು ಯತ್ನಿಸಿರುವುದು ದುರಾದೃಷ್ಟಕರ ಸಂಗತಿ. ವಿನುತೆ ಅವರಿಗೆ ಅಲ್ಲಿನ ವರ್ಣಭೇಧ ನೀತಿಯ ನಡುವಳಿಕೆಯನ್ನು ಸ್ವತಃ ನೋಡಿರುವುದರಿಂದ ಅವರ ಲೇಖನದಲ್ಲಿ ಅಲ್ಲಿನ ವಿದ್ಯಮಾನಗಳ ಬಗ್ಗೆ ಸಿಕ್ಕುವ ಮಾಹಿತಿ ಬಹಳ ಪ್ರಾಮಾಣಿಕವಾದದ್ದು. ಇತ್ತೀಚಿಗೆ ಪ್ರಸಿದ್ಧ ಮಹಿಳಾ ಟೆನಿಸ್ ಆಟಗಾರ್ತಿ ಆಸ್ಟ್ರೇಲಿಯಾದ ಅಬ್ ಆರಿಜನ್ ಬುಡಕಟ್ಟಿನ ಮಹಿಳೆ ಇವಾನಿ ಗುಲಗಾಲ್ ತನ್ನ ಅನುಭವಗಳ ಬಗ್ಗೆ ಬರೆದ ಲೇಖನವನ್ನು ಓದಿದಾಗ, ಆಕೆಯ ಟೆನಿಸ್ ವೃತ್ತಿಪರ ಜೀವನದಲ್ಲಿ ಆಕೆ ಎದುರಿಸಬೇಕಾದ ವರ್ಣನೀತಿಯ ಬಗ್ಗೆ ಓದಿದಾಗ ಬಹಳ ನೋವಾಯಿತು. ಪ್ರಪಂಚ ಈ ವರ್ಣಬೇಧ ನೀತಿಎಂಬ ಮುಳ್ಳಿನ ಬೇಲಿಯನ್ನು ಸಂಪೂರ್ಣವಾಗಿ ಕಿತ್ತೆಸೆಯುವುದು ಅಸಾಧ್ಯ ಎಂದು ಕಂಡುಬರುತ್ತಿದೆ. ಇಂದಿಗೂ ಅಮೇರಿಕ ಯುರೋಪಿನಲ್ಲಿ ನಡೆಯುತ್ತಿರುವ ಸಂಗತಿಗಳು ಇದಕ್ಕೆ ಸಾಕ್ಷಿ! ಮಾಹಿತಿಪೂರ್ಣ ಲೇಖನ. ಧನ್ಯವಾದಗಳು ವಿನುತೆ.
    ಉಮಾ ವೆಂಕಟೇಶ್

    Liked by 1 person

  8. ವಿಚಾರವನ್ನು ಪ್ರಚೋದಿಸುವ, ವಸಹಾತುಶಾಲಿಗಳ ಮುಖವಾಡವನ್ನು ಕಿತ್ತೆಸೆಯುವ ಪ್ರಯತ್ನ ಮಾಡುವ ಪ್ರಾಮಾಣಿಕ ಬರಹ. ಇದರ ಬಗ್ಗೆ ಈ ಮೊದಲೇ ಸ್ವಲ್ಪ ಓದಿ ತಿಳಿದಿದ್ದೆ. ಆ ನಂತರ ಈ ’ವರ್ಣದ್ವೇಷ’ವನ್ನ ಆ ಖಂಡಕ್ಕೆ ಪ್ರವಾಸಿಯಾಗೆ ಹೋದಾಗ ಸ್ವಲ್ಪವೇ ಅರಿತಿದ್ದರೂ ನಿಮ್ಮ ಲೇಖನದಲ್ಲೇ ನೈಜ ಸ್ಥಿತಿಯನ್ನು ಕಂಡಿದ್ದು. ನಮಗೆ ಯತಾರ್ಥತೆಯನ್ನು ತೋರಿಸಿದ್ದಕ್ಕೆ ಧನ್ಯವಾದಗಳು.ನಿಮ್ಮ ಅನುಭವವನ್ನು ಓದಿ ಮೈ ನವಿರೆದ್ದಿತು. ಮೆಡಿಕಲ್ ಪಾಸಾದ ನಂತರ, ನಾನು ಇಂಗ್ಲಂಡಿಗೆ ಬಂದೆ, ನನ್ನ ಕ್ರಿಷ್ಚಿಯನ್ ಕ್ಲಾಸ್ಮೇಟ್ ಆಸ್ಟ್ರೇಲಿಯಾಕ್ಕೆ ಹೋದ. ಇಂಗ್ಲಂಡಿನಿಂದ ವಲಸೆ ಹೋದ ಬಿಳಿಯ ಸೆಕ್ರೆಟರಿಯನ್ನು ಮದುವೆಯಾದನೆಂತಲೋ, ಗಂಡಸು ಎಂತಲೋ ಆತನ ಅನುಭವಗಳು ಸ್ವಲ್ಪ ಭಿನ್ನ ಎಂದು ನಾಲ್ಕು ದಶಕಗಳ ಪತ್ರ್ಯ ವ್ಯವಹಾರದಿಂದ ಅರಿತಿದ್ದೆ. ಮೊನ್ನೆ ಸಹ ಈ- ಮೇಲಿನಲ್ಲಿ ಇತ್ತೀಚೆಗೆ ಅಲ್ಲಿಯ ಪ್ರಥಮ ಸ್ವದೇಶೀಯ ಮಹಿಳಾ ಸಂಸದ್ ಸದಸ್ಯೆಗೆ ಕೊಲ್ಲುವ ಬೆದರಿಕೆಯ ಸುದ್ದಿ ಬರೆದಿದ್ದ. ”ನಿಮ್ಮ ಬೇಽಲಿ ಅಡ್ಡ ಹೆಸರು ಅಂದ ಮೇಲೆ ಐರಿಷ್ ಇರಬೇಕೆಂಬ” ಕೊಂಕು ಮಾತುಗಳನ್ನು ಕೇಳಿ ನೊಂದಿದ್ದ. ಈಗ ಅಲ್ಲಿಯ ಸ್ವದೇಶೀ ಜನರು ಎದ್ದೇಳುತ್ತಿರುವದನ್ನು ನಾವು ಸಪ್ಪೋರ್ಟ್ ಮಾಡಲೇ ಬೇಕೆನಿಸುತ್ತದೆ. Disturbing but true! ಒಳ್ಳೆಯ ಲೇಖನ.

    Like

  9. My apologies for writing in English. Vinate Avare,
    This is a thought provoking article. I remember Australia’s whites only policy in the sixties. To attract white immigrants from the UK, £10 fare was offered to sail to Australia. Here in the UK, until the late sixties it was quite legal to refuse housing and employment based on colour. How things have changed! This is now a totally different country with a new mindset. Australia also has progressed in the right direction
    Regretfully India is now a more divided and intolerant country.

    Liked by 1 person

Leave a reply to premalatha B Cancel reply

This site uses Akismet to reduce spam. Learn how your comment data is processed.