ಭಾದ್ರಪದದ ಕರಿ ಮೋಡ -ಮುರಳಿ ಹತ್ವಾರರವರ ಕವನ‌

ಪರಿಚಯ‌  –ಮುರಳಿ ಹತ್ವಾರ : ವೃತ್ತಿಯಿ೦ದ ನಿರ್ನಾಳ ಗ್ರಂಥಿ ತಜ್ಞ. ಬೆ೦ಗಳೂರು ಹಾಗು ಬಳ್ಳಾರಿಯಲ್ಲಿ ಕಲಿತದ್ದನ್ನ  ಮಣಿಪಾಲದಲ್ಲಿ ಪಕ್ವಗೊಳಿಸಿ, ಸಧ್ಯ ಲ೦ಡನಿನನಲ್ಲಿ ಕೆಲಸ ಮತ್ತು ವಾಸ. ತಾಯಿ ಭಾಷೆ ಕನ್ನಡ.  ಇ೦ದಿಗೂ ಭಾವದಾಳದ ಲಹರಿ; ಮನದಾಲೋಚನೆಯ ಆಳದಲ್ಲಿ,  ಆಗಾಗ ಅಕ್ಷರಗಳಲ್ಲಿ ಭಾವಗಳಲೆಯ ಹಿಡಿದಿಡುವ ಪ್ರಯತ್ನ. ಅಕ್ಷರಗಳಿಗೆ ನಿಲುಕದ್ದನ್ನು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿವ ಹವ್ಯಾಸ.

ನಿನ್ನೆಯ ಅನುಭಾವಕ್ಕೆ ಇ೦ದಿನ ಅನುಭವವ ಕೂಡಿಸಿ ಬರುವ ನಾಳೆಗೆ ಕಾಯುತ್ತಿರುವ ನನ್ನ ಭಾವಕ್ಕೆ ಬ೦ದ ವಿಚಾರವನ್ನು ಹೀಗೆ ಹರಡಿದ್ದೇನೆ. ನಿಮ್ಮ ಮನಸಿಗೆ ಮುಟ್ಟಿದಲ್ಲಿ, ನಿಮ್ಮ ಭಾವಲಹರಿಯನ್ನು ನನ್ನತ್ತ ಹರಿಬಿಡಿ. ನನ್ನ ನಾಳಿನ ಪಯಣಕ್ಕಾದರೂ ಅನುಕೂಲವಾದೀತು

ಚಿತ್ರ: ಮುರಳಿ ಹತ್ವಾರ

ಭಾದ್ರಪದದ ಕರಿ ಮೋಡ 

ಹನಿಸುತ ಮಣ್ಣಿನ
ಕರಣವ ತಣಿಸಿ
ಸಂಜೆಯ ಹೊನ್ನಿನ
ಕಿರಣವ ಮಣಿಸಿ
ಕಾಮನ ಬಿಲ್ಲಿನ
ತೋರಣ ಹೆಣಿಸಿ
ಬೀಸುವ ತಂಗಾಳಿಯ ಕೂಡ
ಬೀಗುತ ಸಾಗಿದೆ ನೋಡ
ಭಾದ್ರಪದದ ಕರಿ ಮೋಡ!

ಇಂದಿಗೆ ಇರುವಿನ
ನಲಿವನು ತಿಳಿಸಿ
ನಿನ್ನೆಯ ನೆನಪಿನ
ಕಲೆಯನು ಅಳಿಸಿ
ನಾಳೆಗೆ ಒಳಿತಿನ
ಬಲವನು ಉಳಿಸಿ
ಹರಿಯುವ ಹೊನ್ನೀರಿನ ಕೂಡ
ಮೆರೆಯುತ ಸಾಗಿದೆ ನೋಡ
ಭಾದ್ರಪದದ ಕರಿ ಮೋಡ!

ಬಣ್ಣದ ಮಳೆಯಲಿ
ನಯನವ ತೊಳೆಸಿ
ರಂಗಿನ ಸೊಬಗಲಿ
ಒಲವನು ಹೊಳೆಸಿ
ಅನುಭವದರಿವಲಿ
ಬದುಕನು ಬೆಳೆಸಿ
ಮೆರೆಸುತ ಅವನಾಟದ ಗೂಡ
ಸರಿಯುತ ಸಾಗಿದೆ ನೋಡ
ಭಾದ್ರಪದದ ಕರಿ ಮೋಡ!

ಮುರಳಿ ಹತ್ವಾರ

ಚಿತ್ರ: ಥೆಮ್ಸ್ ನದಿಯ ಮೇಲಿನ ಕಾಮನ ಬಿಲ್ಲು

9 thoughts on “ಭಾದ್ರಪದದ ಕರಿ ಮೋಡ -ಮುರಳಿ ಹತ್ವಾರರವರ ಕವನ‌

  1. ಕೇಶವ ಕುಲಕರ್ಣಿ, ಶೀ್ರವತ್ಸ ದೇಸಾಯಿ, ದಕಾ್ಷ, ಸೇ್ನಹ ಅರವಿ೦ದ, ಪ್ರೇಮಲತಾ, ಸರೋಜಿನಿ ಮತು್ತ ವಿನತಿ ಶರ್ಮರಿಗೆ ಧನ್ಯವಾದ – ನಿಮ್ಮ ಉದಾರ ಉತೇ್ತಜಕ ಪದೋಪಚಾರಕ್ಕೆ

    Like

  2. ಮಾಘಮಾಸದಲ್ಲಿ ಭಾದ್ರಪದದ ಮೋಡ!

    ಮುರಳಿ, ತುಂಬ ಚೆನ್ನಾಗಿದೆ ನಿಮ್ಮ ಭಾವ ಲಹರಿ. ಇನ್ನೂ ಇರಬೇಕಿತ್ತು ಎನ್ನುವಷ್ಟರಲ್ಲಿ ಕವನ್ ಮುಗಿದೇ ಹೋಯಿತು!

    Like

  3. ಮುರಳಿಯವರೆ, ಅನಿವಾಸಿ ಬಳಗಕ್ಕೆ ಸ್ವಾಗತ.
    ಭಾದ್ರಪದದ ಕರಿಮೋಡ ‍ನಿಮ್ಮ ಭಾವಲಹರಿಯಲ್ಲಿ ಮಿoದು ಸoದರರೂಪವನ್ನು ತಾಳಿದoತಿದೆ. ನಿಮ್ಮ ಲೇಖನಗಳನ್ನು ಮತ್ತೆ, ಮತ್ತೆ ಓದುವ ಅವಕಾಶ ನಮ್ಮದಾಗಲೆoದು ಆಶಿಸುವೆ.

    Like

  4. ನಿಮ್ಮ ಕವಿತೆ ಚೆನ್ನಾಗಿದೆ. ‘ಅನಿವಾಸಿ’ ಬಳಗಕ್ಕೆ ಸ್ವಾಗತ
    .
    ವಿನತೆ ಶರ್ಮ

    Like

  5. ಭಾದ್ರಪದದ ಕರಿ ಮೋಡದಲ್ಲಿ ಜೀವನದ ಪ್ರತಿಫಲವನ್ನು ಕಾಣುವ ಸುಂದರ ಕವನ.ಆ ಕರಿಮೋಡದಲ್ಲಿಯೂ ಕಾಮನಬಿಲ್ಲು ಕಂಡು ಅಲ್ಲಿ ಬಾಳಿನ ನವರಂಗು ಕಾಣುವ , ನಿನ್ನೆ , ನಾಳೆಗಳ ಕನಸು ನೆನಪುಗಳ ನಡುವೆ ಇಂದಿನ ಒಲವು ನಲಿವು ಕಾಣುವ ಕವಿಮನದ ಸುಂದರ ಭಾವನೆಗಳ ಗೊಂಚಲು!!! ಅಭಿನಂದನೆಗಳು ಮುರಳಿಯವರೇ.
    ಸರೋಜಿನಿ ಪಡಸಲಗಿ

    Like

  6. ವಾಹ್… ಮುರಳಿಯವರೇ,
    ಬಹಳ ಚೆಂದದ ಪದ್ಯ. ಕಾಮನ ಬಿಲ್ಲಿನಂತ ಪ್ರತಿಭೆಯ ನೀವು ನಮ್ಮಿಂದ ಮರೆಯಾಗಿ. ಇಷ್ಟು ದಿನ ಥೇಮ್ಸ್ ನದಿಯಲ್ಲಿ ಅಡಗಿದ್ದಿರೇನು?

    ಅನಿವಾಸಿಗೆ ಕಾಮನ ಬಿಲ್ಲಿನಂತ ಪದ್ಯ ಬರೆದ ನಿಮಗೆ ಅಭಿನಂದನೆಗಳು.

    Like

  7. ಮುರಳಿಯವರೇ
    ನಿಮ್ಮ ಕವನ ಓದುಗರ ಕಲ್ಪನಾ ಶಕ್ತಿಯನ್ನು ಪರೀಕ್ಷಿಸುವದರಲ್ಲಿ ಸಂದೇಹವಿಲ್ಲ. ಮನ ತಲ್ಲಣಿಸುವ ಕವನ ಬಹಳ ಸುಂದರವಾಗಿದೆ. ಹೀಗೆಯೇ ಬರೆಯುತ್ತಿರಿ.

    ಅರವಿಂದ ಕುಲ್ಕರ್ಣಿ

    Like

Leave a comment

This site uses Akismet to reduce spam. Learn how your comment data is processed.