ಕನ್ನಡ ಬಳಗದ ದೀಪಾವಳಿ 2017 ಹಬ್ಬದ ಆಚರಣೆ ‍- ‍‍ಸಿಂಧೂರ ಮೋಹನ್‍ರವರ ವರದಿ

                                 (ಅನಿವಾಸಿ ಬಳಗಕ್ಕೆ ಹೊಸ ಸದಸ್ಯೆ ಸಿ೦ಧೂರರವರಿಗೆ ಆತ್ಮೀಯ ಸ್ವಾಗತ.
ಸಿಂಧೂರ ಮೋಹನ್ ತಮ್ಮ ಪತಿ ಡಾ.ರವಿ ಪ್ರಶಾಂತ್ ಹಾಗೂ ಪುತ್ರ ನಿಖಿಲ್ ಜೊತೆ ಶ್ರೋಪ್-ಶೈರ್ ನ ಶ್ರೂಸ್ ಬರಿ ಪಟ್ಟಣದಲ್ಲಿ ವಾಸಿಸುತ್ತಾರೆ.
ಇವರು ಪೌರಾಣಿಕ ಹಾಗೂ ಐತಿಹಾಸಿಕ ವಿಷಯಗಳ್ಳನಾಧಾರಿತ ನಾಟಕಗಳ್ಳನ್ನು ಬರೆಯುವುದರಲ್ಲಿ ಹಾಗೂ ಅವನ್ನು ನಿರ್ದೇಶಿಸುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ. ಇವರಿಗೆ ಭಾರತೀಯ ಶಾಸ್ತ್ರೀಯ ನೃತ್ಯಗಳಲ್ಲಿ ಆಸಕ್ತಿ ಉಂಟು. ಸ್ಥಳೀಯ ಅನಿವಾಸಿ ಭಾರತೀಯರಿಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಚಿಸಿ ನಿರ್ದೇಶಿಸಿರುತ್ತಾರೆ – ಸ೦)

ಕನ್ನಡ ಬಳಗ ಯು. ಕೆ, ೨೦೧೭ ವರ್ಷದ ದೀಪಾವಳಿ ಹಬ್ಬವನ್ನು ನವೆಂಬರ್ ೪ ರಂದು ಬೆಡ್-ಫೋರ್ಡ್ ನಗರದ ಕಿಂಗ್ಸ್ ಹೌಸ್ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ  ಆಚರಿಸಿತು. ದಿನದ ಬೆಳಕು ಕಮ್ಮಿಯಾಗಿ, ಚಳಿ ಹೆಚ್ಚಾಗುವ ಕಾಲದಲ್ಲಿ ಬರುವ ದೀಪದ ಹಬ್ಬವು ಎಲ್ಲರಿಗೂ ಹೊಸಬೆಳಕು  ಹಾಗೂ ಸಂತೋಷವನ್ನು ತರುತ್ತದೆ. ಆ ದಿನ ಬೆಳಿಗ್ಗೆ ಬಹಳ ಮಳೆ ಇದ್ದರೂ, ಈ ಸಮಾರಂಭಕ್ಕೆ ಬರುವ ಕನ್ನಡಿಗರ ಮನಸ್ಸಿನಲ್ಲಿದ್ದ  ಕಾತುರತೆ, ಉತ್ಸುಕತೆ, ಸಡಗರವು ಯಾವ ರೀತಿಯಲ್ಲೂ  ಕಮ್ಮಿಯಾಗಿರ‌ಲಿಲ್ಲ. ಬ್ರಿಟನ್ನಿನ ಬೇರೆ ಬೇರೆ ಪ್ರದೇಶಗಳಿಂದ ಕನ್ನಡಿಗರು ಆಗಮಿಸಿದ್ದರು. ಕೆಲವರು ಸ್ಕಾಟ್ಲೆಂಡ್ , ಐಲ್ ಆಫ್ ವೈಟ್ ಮುಂತಾದ ದೂರ ಪ್ರದೇಶಗಳಿಂದ ಪ್ರಯಾಣ ಮಾಡಿ ಈ ಸಮಾರಂಭಕ್ಕೆಂದೇ  ಬಂದಿದ್ದು ಬಹಳ ಸಂತೋಷದ ವಿಷಯ. ಕನ್ನಡಿಗರು ನೂತನ ಮಾದರಿಯ ಒಳ್ಳೊಳ್ಳೆ ಬಟ್ಟೆಗಳ್ಳನ್ನು ಧರಿಸಿ ತಮ್ಮ ಸ್ನೇಹಿತರೊಡನೆ ಹಬ್ಬವನ್ನು ಆಚರಿಸಿ, ಆನಂದಿಸಲು ಓಟ್ಟಿಗೆ ಸೇರಿದ್ದರು.

ಸಭಾಂಗಣವು ಈ ಉದ್ದೇಶಕ್ಕೆ ಹೇಳಿ ಮಾಡಿಸಿದಹಾಗಿತ್ತು. ಬೇರೆ ಬೇರೆ ಕಾರ್ಯಕ್ರಮಗಳಿಗೆ ಸರಿಹೊಂದುವ ಹಾಗೆ ಹಲವಾರು       ವಿಶಾಲವಾದ  ಆಧುನಿಕ ರೂಮುಗಳು, ಒಳ್ಳೆ ಸ್ಟೇಜ್ ಹಾಗೂ ಆಡಿಯೋ-ವಿಶುಯಲ್  ಸಿಸ್ಟಮ್  ಸೌಲಭ್ಯ ಸಹ ಬಹಳ ಚೆನ್ನಾಗಿತ್ತು. ಸುಮಾರು ೬೫೦ ಜನ ಸೇರಿದ್ದರೂ ಯಾವ  ಒಂದು ಕಡೆಯೂ ಗುಂಪು ಜಾಸ್ತಿಯೆನ್ನಿಸಲಿಲ್ಲ, ಊಟದ ಕ್ಯೂನಲ್ಲಿ  ಬಹಳ ಕಾಯಬೇಕಪ್ಪಾ  ಅಂತ ಅನ್ನಿಸಲಿಲ್ಲ. ಈ ವಿಷಯವನ್ನು ಅಲ್ಲಿಗೆ ಬಂದ ಬಹಳ ಜನ ಮೆಚ್ಚಿ, ಸ್ಥಳೀಯ ಸಂಘಟಕರ ಬೆನ್ನು ತಟ್ಟಿದರು.

ಬೆಳೆಗ್ಗಿನ ತಿಂಡಿಯನಂತರ, ದೇವರ  ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕನ್ನಡ  ಬಳಗ ಯು.ಕೆ  ಅಧ್ಯಕ್ಷರಾದ  ವಿವೇಕ್  ತೊಂಟದಾರ್ಯ ರವರು ಅಧ್ಯಕ್ಷ ಭಾಷಣವನ್ನು ನೀಡಿದರು. ಅವರು ತಮ್ಮ ಭಾಷಣದಲ್ಲಿ ಕಳೆದ ೧೮ ತಿಂಗಳುಗಳ್ಳಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ಕುಟುಂಬಗಳು ಲೈಫ್ ಮೆಂಬರ್ಸ್ ಆಗಿದ್ದಾರೆಂದು ತಿಳಿಸಿದರು. ಕಳೆದ  ತಿಂಗಳುಗಳಲ್ಲಿ ಸಂಸ್ಥೆಯು ನಡೆಸಿದ ದಾನಶೀಲ ಕಾರ್ಯಗಳಿಗೆ  ಸಹಾಯ ಮಾಡಿದ ದಾನಿಗಳು ಹಾಗೂ ನಿಧಿ ಸಂಗ್ರಾಹಕ   ಕಾರ್ಯಗಳನ್ನು ನಡೆಸಿದ ಸದಸ್ಯರನ್ನು ನೆನೆದರು.  ಅವರು ತಮ್ಮ ಭಾಷಣದಲ್ಲಿ ಕನ್ನಡ ಬಳಗ ಯು.ಕೆ ೧೯೮೨ನಲ್ಲಿ  ಜನ್ಮಿಸಿದ  ಹಿನ್ನೆಲೆಯನ್ನು ವಿವರಿಸಿ  ಕಾರಣಕರ್ತರಾದ  ಹಲವಾರು ಕುಟುಂಬಗಳನ್ನು ನೆನೆದರು. ಸಭೆಯಲ್ಲಿ ಉಪಸ್ಥಿತರಿದ್ದ  ಕೆಲವು  ಸ್ಥಾಪಕರಿಗೆ  ಸನ್ಮಾನ  ಮಾಡಲಾಯಿತು.  ಡಾ. ಸ್ನೇಹಾ ಕುಲ್ಕರ್ಣಿ(ಮೊದಲನೆಯ ಅಧ್ಯಕ್ಷೆ) ಮತ್ತು ಡಾ. ಅರವಿಂದ ಕುಲ್ಕರ್ಣಿ, ಡಾ.  ನಳಿನಿ ವಿಭೂತಿ , ಮತ್ತು ಡಾ.ರೇವಣಸಿದ್ಧ ವಿಭೂತಿ ( ಮೊದಲನೆಯ ಕಾರ್ಯದರ್ಶಿ ) ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳೆವಣಿಗೆಗೆ ಅವರು ಪಟ್ಟಿರುವ ಶ್ರಮವನ್ನು ಗುರುತಿಸಿ ಡಾ .ಶ್ರೀವತ್ಸ ದೇಸಾಯಿಯವರನ್ನು   ಸನ್ಮಾನಿಸಲಾಯಿತು. ಮೊದಲನೆಯ ಖಜಾಂಚಿ  ಡಾ .ಚಂದ್ರಶೇಖರ್ ಕುರುವತ್ತಿ ಅವರ ಅನುಪಸ್ಥಿತಿಯಲ್ಲಿ ಅವರ ಮಗ ಡಾ. ಜೇ ಕುರುವತ್ತಿ ಅವರು ಮೊಮೆಂಟೊ ಸ್ವೀಕರಿಸಿದರು. ಬ್ರಿಟನ್ ದೇಶದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಕಾಲಿಟ್ಟಿರುವ ಸ್ವಿಂಡನ್ ನಗರದ ಕೌನ್ಸಿಲರ್ ಸುರೇಶ್ ಘಟ್ಟಪುರ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಚುಟುಕುಗಳ ಚಕ್ರವರ್ತಿ ಎಂದು ಪ್ರಸಿದ್ಧರಾದ ಹನಿಗವನಗಳ ಖ್ಯಾತ  ಕವಿ ಶ್ರೀ ದುಂಡಿರಾಜ್ ಭಟ್ ರವರು ಆ ದಿನದ ಮುಖ್ಯ   ಅತಿಥಿಗಳಾಗಿ ಆಗಮಿಸಿದ್ದರು . ಅವರು ಸಭೆಯನ್ನು ಉದ್ದೇಶಿಸಿ  ಮಾತನಾಡಿದಲ್ಲದೇ, ಅಂದು ನಡೆದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ  ವಿಚಾರ ವೇದಿಕೆಯ ಕವಿ ಗೋಷ್ಠಿ  ಕಾರ್ಯಕ್ರಮದಲ್ಲೂ ಮುಖ್ಯ ಅತಿಥಿಗಳಾಗಿದ್ದರು. ಈ ಕಾರ್ಯಕ್ರಮದಲ್ಲಿ ಅನೇಕ ಆಸಕ್ತರು ಭಾಗವಹಿಸಿ ಹನಿಗವನಗಳ ರುಚಿಯನ್ನು ಸವಿದರು. ಈ ಕಾರ್ಯಕ್ರಮವು   ಬಹಳ ಯಶಸ್ವಿಯಾಗಿ  ನಡೆಯಿತು.  ಕವಿ ಗೋಷ್ಠಿ  ನಡೆಯುತ್ತಿರುವ ಸಮಯದಲ್ಲಿ ಮುಖ್ಯ ಸಭಾಂಗಣದಲ್ಲಿ ಮಕ್ಕಳ ಕಾರ್ಯಕ್ರಮ ನಡೆಯಿತು.  ಅನೇಕ ಸಂಗೀತ, ನೃತ್ಯ ಹಾಗೂ ಯೋಗ ಕಾರ್ಯಕ್ರಮಗಳ ಮೂಲಕ ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.ದೊಡ್ಡ ಸಭಾಂಗಣದಲ್ಲಿ, ಅನೇಕ ಜನ ವೀಕ್ಷಕರ ಎದುರು, ವೇದಿಕೆಯ ಮೇಲೆ ಧೈರ್ಯವಾಗಿ  ನಿಂತು ತ್ತಮ ಪ್ರತಿಭೆಗಳ್ಳನ್ನು ಬಹಳ ಚೆನ್ನಾಗಿ  ಪ್ರದರ್ಶಿಸಿದ ಈ ಮಕ್ಕಳ ಕಾರ್ಯಕ್ರಮಕ್ಕೆ ಶ್ರೀಮತಿ ಸವಿತಾ ಸುರೇಶ್ ಹಾಗೂ ಶ್ರೀಮತಿ  ಶಾಂತಲಾ ಸಚಿನ್ ರಾವ್  ರವರ  ನಿರೂಪಣೆ ಸೊಗಸಾಗಿತ್ತು.

ಬೆಳಗಿನ ಕಾರ್ಯಕ್ರಮ ಮುಗಿಯುವ ಹೊತ್ತಿಗೆ  “ಶಿವಳ್ಳಿ” ರೆಸ್ಟೋರೆಂಟ್ ನವರು ತಯಾರಿಸಿದ ಬಿಸಿ ಬಿಸಿ ಊಟವು ಎಲ್ಲರನ್ನು ಕಾಯುತ್ತಿತು. ಇದನ್ನು ಬಡಿಸಲು ಎರಡು ವಿಶಾಲವಾದ ಕೊಠಡಿಗಳಲ್ಲಿ ಬಹಳ ಚೆನ್ನಾಗಿ ವ್ಯವಸ್ಥೆ ಮಾಡಲಾಗಿತ್ತು. ರುಚಿಯಾದ ಊಟವನ್ನು ಸವಿಯುತ್ತಾ ಬಹಳ ದಿನಗಳ ನಂತರ ಭೇಟಿಯಾದ ಸ್ನೇಹಿತರ ಜೊತೆ ಹರಟೆ ಹೊಡೆದ ನಂತರ, ಎಲ್ಲರೂ ಮಧ್ಯಾಹ್ನದ ಕಾರ್ಯಕ್ರಮವನ್ನು ವೀಕ್ಷಿಸಲು ಮುಖ್ಯ ಸಭಾಂಗಣದಲ್ಲಿ ಸೇರಿದರು.

 ಮಧ್ಯಾಹ್ನದ  ಕಾರ್ಯಕ್ರಮದಲ್ಲಿ   ಮಕ್ಕಳ  ಹಾಡುಗಾರಿಕೆ,  ಬೇರೆ ಬೇರೆ  ಪ್ರಾಂತ್ಯಗಳಿಂದ ಬಂದ ಮಕ್ಕಳ ತಂಡಗಳಿಂದ ನೃತ್ಯ ಪ್ರದರ್ಶನಗಳು ಪ್ರೇಕ್ಷಕರ  ಮನ ರಂಜಿಸಿದವು. ಇಲ್ಲೇ ಹುಟ್ಟಿ ಬೆಳೆಯುತ್ತಿರುವ ಮಕ್ಕಳು ಹಾಗೂ ಎರಡನೆಯ ತಲೆಮಾರಿನ  ಯುವಕ  – ಯುವತಿಯರು ಕನ್ನಡದಲ್ಲಿ ಹಾಡುಗಳ್ಳನ್ನು ಹೇಳಿದಾಗ  ಸಭಿಕರು ಅದನ್ನು ಮೆಚ್ಚಿ, ಜೋರಾದ  ಚಪ್ಪಾಳೆಯಿಂದ     ಪ್ರೋತ್ಸಾಹಿಸಿದರು. ಆ ದಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ಜಾಸ್ತಿ ಇದ್ದಿದ್ದರಿಂದ ಸಮಯದ ಮೇಲೆ ಪ್ರಭಾವವಾಯಿತು. ಇದನ್ನು ನಾವು ಬೆಳೆವಣಿಗೆಗೆ ವಿಷಯವಾಗಿ ನೋಡಿ, ಕನ್ನಡ ಬಳಗದ ಮುಂದಿನ ಕಾರ್ಯಕ್ರಮಗಳನ್ನು ಆಯೋಜಿಸುವಾಗ ನಾವು ಈ ವಿಷಯವನ್ನು ಸುಧಾರಿಸಿ, ಬೆಳೆಯಬಹುದೆಂದು ಭಾವಿಸುತ್ತೇನೆ.

ದೊಡ್ಡವರ  ಕಾರ್ಯಕ್ರಮಗಳು ಕೂಡ  ಬಹಳ ಚೆನ್ನಾಗಿ ಮೂಡಿ ಬಂತು. ಡಾ .ಸುಮನಾ ನರೈನ್ ರವರಿಂದ ಭರತನಾಟ್ಯ ನೃತ್ಯ, ಡಾ .ಪಾರ್ವತಿ ರಾಜಮಣಿ ಅವರಿಂದ ಒಡಿಸ್ಸಿ ನೃತ್ಯ  ಕಣ್ಣಿಗೆ ಹಬ್ಬವಾಗಿತ್ತು.   ಡಾ .ಸುಜಾತ ಮೆರ್ವೆ, ಡಾ.ಆಶಿರ್ವಾದ್ ಮೆರ್ವೆ,  ಡಾ .ರಶ್ಮಿ ಮಂಜುನಾಥ ಹಾಗೂ ಡಾ .ಪಿ.ಮಂಜುನಾಥ … ಈ ನಾಲಕ್ಕು ಜನದ ತಂಡ ಶೇಪ್ ಓಫ್ ಯು ಹಾಡಿಗೆ ಮಾಡಿದ ಫ್ಯೂಶನ್ ನೃತ್ಯವು ಜನರ ಮನಸೆಳೆಯಿತು.  ದೇಶಭಕ್ತಿ  ಹಾಡುಗಳು, ಚಲನಚಿತ್ರ ಹಾಡುಗಳು ಅಲ್ಲಿ ಸೇರಿದ  ಜನರ ಮನಸ್ಸನ್ನು  ಕರುನಾಡಿಗೆ ಕರೆದೊಯ್ಯಿತು.

ಭಾರತ ದೇಶದ ಸ್ವಾತಂತ್ರ್ಯದ ೭೦ನೇ ವರ್ಷದ ಪ್ರಯುಕ್ತ ದೇಶದ ಬೇರೆ ರಾಜ್ಯಗಳಿಂದ ಬಂದ ಅನಿವಾಸಿಗಳನ್ನು ಆಹ್ವಾನಿಸಲಾಗಿತ್ತು. ಹೀಗೆ ಬಂದ ಇತರ ರಾಜ್ಯಗಳ ಅನಿವಾಸಿಗಳಿಬ್ಬರು ಕನ್ನಡದಲ್ಲಿ ಹಾಡುಗಳ್ಳನ್ನು ಹೇಳಿದರು.  ಡಾ. ಜಿತೇಂದ್ರ ನಾಯರ್ ರವರು ” ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು …..”  ಹಾಡನ್ನು ಹಾಗೂ ಡಾ. ಬದರಿ ಪಾರ್ಥಸಾರಥಿಯವರು  “ಬಾನಿಗೊಂದು ಎಲ್ಲೆ ಎಲ್ಲಿದೆ….” ಹಾಡನ್ನು ತಡವರಿಸದೇ ಅಚ್ಚುಕಟ್ಟಾಗಿ ಹಾಡಿದಾಗ, ಸಭಿಕರು ಅದನ್ನು ಮೆಚ್ಚಿ ಎದ್ದು ನಿಂತು ಚಪ್ಪಾಳೆ ಹೊಡೆದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ನಿರೂಪಕರಾದ  ಡಾ. ರಶ್ಮಿ ಮಂಜುನಾಥ, ಡಾ ಕುಮಾರ್  ನಾಯಕ್  ಹಾಗೂ  ಡಾ. ಆಶೀರ್ವಾದ್ ಮೆರ್ವೆ ರವರು ಮಧ್ಯಾನ್ಹದ  ಕಾರ್ಯಕ್ರಮವನ್ನು  ಚೆನ್ನಾಗಿ ನಡೆಸಿಕೊಟ್ಟರು.

ನಂತರ ಶ್ರೀ ಡುಂಡಿರಾಜ್ ರವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಅವರು ತಮ್ಮ ಹನಿಗವನಗಳಿಂದ ಹಾಗೂ ಹಾಸ್ಯದ ಮಾತುಗಳಿಂದ ಜನರನ್ನು ಬಹಳ ನಗಿಸಿ ಮನೋರಂಜಿಸಿದರು. ಅವರ ಪ್ರತಿಯೊಂದು ಮಾತಿಗೂ, ಸಭೆಯು ನಗುವಿನ ಶಬ್ದದಿಂದ ತುಂಬಿಹೋಗಿ, ಜನ ಇದನ್ನು ಎಷ್ಟು ಮೆಚ್ಚುತ್ತಿದ್ದಾರೆಂದು ತೋರುತ್ತಿತ್ತು.

ದೊಡ್ಡವರ ಕಾರ್ಯಕ್ರಮಗಳು ನಡೆಯುತ್ತಿರುವಾಗ, ಬೇರೊಂದು ಕೊಠಡಿಯಲ್ಲಿ,  ಮಕ್ಕಳಿಗೆ ಸರಿ ಹೊಂದುವ ಹಾಗೆ, ಕನ್ನಡ ಭಾಷೆಯನ್ನು ಒಳಗೊಂಡ ಆಟಗಳ ಹಾಗೂ ಮನೋರಂಜನಾ ಕಾರ್ಯಕ್ರಮದ  ವ್ಯವಸ್ಥೆ ಮಾಡಲಾಗಿತ್ತು. ಸಂಜೆಯ ವೇಳೆಯಲ್ಲಿ, ಮಕ್ಕಳಿಗೆಂದೇ ತೋರಿಸಿದ ಚಲನಚಿತ್ರವನ್ನು ದಣಿದ ಮಕ್ಕಳು ಕುಳಿತು ನೋಡಿದರು. ಇದರಿಂದ ಮಕ್ಕಳೂ ಸಂತೋಷವಾಗಿದ್ದರು ಹಾಗೂ ಅವರ ತಂದೆ- ತಾಯಂದಿರು ಸಂಜೆಯ ಕಾರ್ಯಕ್ರಮಗಳ್ಳನ್ನು  ನಿಶ್ಚಿಂತರಾಗಿ  ಆನಂದಿಸಿದರು. ವಿರಾಮದಲ್ಲಿ ರುಚಿಯಾದ ಸಮೋಸ, ಬಜ್ಜಿ  ತಿಂದು, ಟೀ/ಕಾಫಿ  ಕುಡಿದು , ಎಲ್ಲರೂ ಸಂಜೆಯ ಮನೋರಂಜನೆಗೆ ಸಿದ್ದರಾದರು.

(ಮಂಜುಳಾ ಗುರುರಾಜ್ ಅವರೊಡನೆ್ ಡುಯೆಟ್ ಹಾಡುತ್ತಿರುವವರು ಯು ಕೆ. ಕ.ಬ.ದ ಹರೀಶ್ ಚಿಕ್ಕಣ್ಣ.  ಕ್ಲಿಕ್ಕಿಸಿಇಲ್ಲೇ  ಕೇಳಿ)

ಕರ್ನಾಟಕದ  ಪ್ರಸಿದ್ಧ ಗಾಯಕಿ, ಮಧುರ ಕಂಠದ ಶ್ರೀಮತಿ ಮಂಜುಳಾ ಗುರುರಾಜ್ ರವರು ಆ ಸಂಜೆಯ ಕಾರ್ಯಕ್ರಮಕ್ಕೆ ಅತಿಥಿ ಕಲಾವಿದರರಾಗಿ ಆಗಮಿಸಿದ್ದರು. ಅವರು ೨೦೦೦ ಕ್ಕೂ ಹೆಚ್ಚು ಚಲನಚಿತ್ರ ಹಾಡುಗಳಿಗೆ ಗಾಯಕಿಯಾಗಿದ್ದು, ಅನೇಕ ಪ್ರಶಸ್ತಿಗಳ್ಳನ್ನು ಪಡೆದು, ಕನ್ನಡಿಗರ ಮೆಚ್ಚಿನ ಗಾಯಕಿಯಾಗಿದ್ದರೆ. ಆ ಸಂಜೆ ಅವರು ತಮ್ಮ” ಹೃದಯದಲಿ ಇದೇನಿದು …”, ”ನದಿಯೊಂದು ಮೂಡಿದೆ…” , “ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು…” “ಮುಂತಾದ  ಪ್ರಸಿದ್ಧ ಹಾಡುಗಳ್ಳನ್ನು ಹಾಡಿ ಜನರನ್ನು ಮನೋರಂಜಿಸಿದರು. ಕನ್ನಡ ಬಳಗದ ಸದಸ್ಯರಾದ   ಡಾ.ಹರೀಶ್ ಚಿಕ್ಕಣ್ಣ, ಡಾ.ಪ್ರಶಾಂತ್ ಸಾಯೀಶ್ವರ್ ರವರು ಶ್ರೀಮತಿ ಮಂಜುಳಾ ಗುರುರಾಜ್ ರವರ ಜೊತೆ ಡುಯೆಟ್ ಹಾಡುಗಳಿಗೆ ಜೊತೆ ನೀಡಿದರು. ಹಾಡುಗಾರಿಕೆ ಬಹಳ ಚೆನ್ನಾಗಿದ್ದು,  ಜನರು ಅದನ್ನು ಆನಂದಿಸುತ್ತಾ, ಹಾಡಿಗೆ ಹೆಜ್ಜೆ ಹಾಕಿದರು.
ರಾತ್ರಿಯ ಭೋಜನದ  ನಂತರ ಜನರು ಡಿಸ್ಕೋ ಹಾಡುಗಳಿಗೆ ಡಾನ್ಸ್ ಮಾಡಿ, ಆ ದಿನದ ಕಾರ್ಯಕ್ರಮಗಳೆಲ್ಲಾ ಎಷ್ಟು ಚೆನ್ನಾಗಿ ನಡೆಯಿತೆಂದು ಮಾತನಾಡುತ್ತಾ , ಸುಮಾರು ೧೦ ಘಂಟೆಯ ಹೊತ್ತಿಗೆ ಅಲ್ಲಿಂದ ಹೊರಟೆವು. .ಎಲ್ಲ ಚಿಕ್ಕ ಹಾಗೂ ದೊಡ್ಡ ವಿಷಯಗಳಿಗೆ  ಗಮನಕೊಟ್ಟು , ಹಲವಾರು ತಿಂಗಳುಗಳಿಂದ ಪರಿಶ್ರಮಿಸಿದ ಸಂಘಟನಾ ತಂಡ ಹಾಗೂ ಅವರಿಗೆ ಬೆಂಬಲವನ್ನು ನೀಡಿದ ಎಲ್ಲರಿಗೂ ದೀಪಾವಳಿ ೨೦೧೭ ಕಾರ್ಯಕ್ರಮದ ಯಶಸ್ಸಿಗೆ ಅಭಿನಂದನೆಗಳು. ಈ ಕಾರ್ಯಕ್ರಮವನ್ನು ಆನಂದಿಸಿದ ಎಲ್ಲರೂ ಕನ್ನಡ ಬಳಗ ಯು.ಕೆ ಯ ಮುಂದಿನ ಕಾರ್ಯಕ್ರಮಗಳನ್ನು ಎದುರು ನೋಡುತ್ತಾರೆಂಬುವುದರಲ್ಲಿ ಸಂದೇಹವೇ ಇಲ್ಲ.

ಸಿಂಧೂರ ಮೋಹನ್

6 thoughts on “ಕನ್ನಡ ಬಳಗದ ದೀಪಾವಳಿ 2017 ಹಬ್ಬದ ಆಚರಣೆ ‍- ‍‍ಸಿಂಧೂರ ಮೋಹನ್‍ರವರ ವರದಿ

  1. ಸಿಂಧೂರ ಅವರೇ
    ನಮಸ್ಕಾರ. ಕನ್ನಡ ಬಳಗ ( ಯು.ಕೆ)ದ ಕಳೆದ ದೀಪಾವಳಿ ಹಬ್ಬದ ಕಾರ್ಯಕ್ರಮದ ಎಲ್ಲ ವಿವರಗಳನ್ನು ಬಹಳ ಚೆನ್ನಾಗಿ ಬರೆದಿರುವಿರಿ. ಧನ್ಯವಾದಗಳು. ನಿಮ್ಮಂತಹ ನಿಪುಣ ಕನ್ನಡ ಅಭಿಮಾನಿಗಳಿದ್ದಲ್ಲಿ ಬಳಗ ಹಾಗು ಅನಿವಾಸಿ ಉನ್ನತ ಮಟ್ಟಕ್ಕೆ ತಲಪುವದರಲ್ಲಿ ಯಾವ ಸಂದೇಹವಿಲ್ಲ ಎಂದು ನನಗೆ ವಿಶ್ವಾಸವಾಗುತ್ತಿದೆ. ನಿಮ್ಮಲ್ಲಿರುವ ವಿವಿಧ ಕಲೆ,ಚಾತುರ್ಯತೆಗಳು ನಿಮ್ಮ ಲೇಖನ,ಕವನಗಲ್ಲಿ ಮೂಡಲಿ ಎಂದು ಆಶಿಸುವೆ.

    ಅರವಿಂದ ಕುಲ್ಕರ್ಣಿ

    Like

  2. ಸಿಂಧೂರ ಅವರಿಗೆ ಆತ್ಮೀಯ ಸ್ವಾಗತ ಅನಿವಾಸಿ ವೇದಿಕೆಕೆ. ಬರೆಯುತ್ತಿರಿ, ಅನಿವಾಸಿ ಬಳಗದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ – ಕೇಶವ

    Like

  3. ಸಿಂಧೂರ ಅವರ ಸುಂದರ ನಿರೂಪಣೆ, ಯು.ಕೆ.ಅನಿವಾಸಿ ಕನ್ನಡ ಬಳಗದ ದೀಪಾವಳಿ ಹಬ್ಬದ ಆಚರಣೆ ಕಣ್ಣಿಗೆ ಕಟ್ಟುವಂತೆ ಇದೆ.ನಾವೂ ಇಲ್ಲಿಂದಲೇ ನಿಮ್ಮೊಂದಿಗೆ ಸಂಭ್ರಮದ ಲ್ಲಿ ಪಾಲ್ಗೊಂಡ ಅನಿಸಿಕೆ.ಈಗ ೨-೩ವಾರಗಳಿಂದ ಬರುತ್ತಿರುವ ದೀಪಾವಳಿ ಆಚರಣೆ ವರದಿ ಗಳನ್ನು ಓದಿದಾಗ , ನಾವು ಎಲ್ಲೇ ಇರಲಿ, ಎಂತೇ ಇರಲಿ, ಎಷ್ಟೇ ಬದಲಾವಣೆಗಳನ್ನು ಒಪ್ಪಿಕೊಂಡಿರಲಿ ನಮ್ಮ ಮನದಾಳದಲ್ಲಿರುವ ತೌರಿನ ಹಸಿ ನೆನಪುಗಳ ,ಆಚಾರ ವಿಚಾರ, ಸಂಸ್ಕೃತಿಯ ಛಾಪು ತನ್ನದೇ ರೀತಿಯಲ್ಲಿ ಸಂಭ್ರಮದ ರೂಪ ತಾಳಿ ಹೊರಬರುವುದು ಎಷ್ಟು ಹರ್ಷದಾಯಕ ಅಲ್ಲವಾ??ಆ ಸಂತೋಷ, ತೃಪ್ತಿ ಗೆ ಸಾಟಿ ಇಲ್ಲ ಅನಿಸುತ್ತದೆ.ನಿಜಕ್ಕೂ ಯುಕೆ ಕನ್ನಡ ಬಳಗ ತನ್ನತನವನ್ನು ಮೆರೆಯುವ ಪರಿ ಅಭಿನಂದನಾರ್ಹ.ಈ ನಾಲ್ಕು ಮಾತು ಹೇಳುವ ಅವಕಾಶ ಮಾಡಿ ಕೊಟ್ಟ ಸಿಂಧೂರ ಅವರ ಲೇಖನಕ್ಕೂ,ಅವರಿಗೂ ಧನ್ಯವಾದಗಳು ಹಾಗೂ ಅಭಿನಂದನೆಗಳು.
    ಸರೋಜಿನಿ ಪಡಸಲಗಿ.

    Liked by 1 person

  4. ಸಿಂಧೂರ ಅವರಿಗೆ ಅನಿವಾಸಿ ಬಳಗಕ್ಕೆ ಸ್ವಾಗತ.
    ಒಳ್ಳೆಯ ವರದಿ ಬರೆದಿದ್ದೀರಿ.
    ಮುಂದೆಯೂ ಬರೆಯುತ್ತಿರಿ.

    Like

  5. ನಡೆದ ಕಾರ್ಯಕ್ರಮದ ಸುಂದರ ನಿರೂಪಣೆಯೊಂದಿಗೆ ಆ ದಿನದ ನೆನಪುಗಳನ್ನು ಮತ್ತೆ ಮೆಲಕುಹಾಕುವಂತಾಯಿತು. ವಂದನೆಗಳು

    Like

  6. ಸಿoಧುರರವರೆ, ಅನಿವಾಸಿ ಬಳಗಕ್ಕೆ ಸ್ವಾಗತ.

    ಬೆಳಗಿನಿoದ ರಾತ್ರಿಯವರೆಗೂ ನಡೆದ ಎಲ್ಲಾ ವಿದ್ಯಮಾನಗಳನ್ನು ನೆನಪಿಟ್ಟುಕೊoಡು, ಪ್ರತಿಯೊoದು ಕಾರ್ಯಕ್ರಮದ ಬಗ್ಗೆ, ಅಚ್ಚುಕಟ್ಟಾದ ವರದಿಯನ್ನು, ವಿವರವಾಗಿ ಬರೆದಿದ್ದೀರಿ. ಧನ್ಯವಾದಗಳು.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.