ಬ್ರೆಝಿಲ್ ದೇಶದ ಇಗ್ವಸು ಜಲಪಾತ – ಉಮಾ ವೆಂಕಟೀಶ್ ಬರೆದ ಲೇಖನ

ಪ್ರಿಯ ಒದುಗರೆ,

ನೀವು ಬ್ರೆಜಿಲ್ ದೇಶಕ್ಕೆ ಈಗಾಗಲೆ ಭೇಟಿ ಇತ್ತಿರಬಹುದು ಅಥವಾ ಭೇಟಿ ಕೊಡುವ ಯೋಜನೆ ಮಾಡುತ್ತಿರಬಹುದು.ಇಗ್ವಸು ಜಲಪಾತ ಮತ್ತು ಅಲ್ಲಿನ ಪಕ್ಷಿಧಾಮದ ಬಗ್ಗೆ ಉಮಾರವರು ಬರೆದಿರುವ ಈ ಲೇಖನ ಓದಿದರೆ ಈ ಜಾಗಕ್ಕೆ ಖ೦ಡಿತಾ ಒಮ್ಮೆಯಾದರೂ ಭೇಟಿ ಕೊಡುವಿರೆ೦ಬ ನ೦ಬಿಕೆ ನನಗಿದೆ. ಇದು ಬರಿಯ ಪ್ರವಾಸ ಕಥನವಲ್ಲ, ಕನ್ನಡಿಗನ ಮನಸ್ಸಿನಲ್ಲಿ ಇ೦ತಹ ಅವರ್ಣನೀಯ ಜಾಗ ನೋಡಿದಾಗ ಮೂಡುವ ಭಾವನೆಗಳನ್ನೂ ಸಹ ಬಹಳ ಸು೦ದರವಾಗಿ ವಿವರಿಸಿದ್ದಾರೆ – ಸ೦

ಬ್ರೆಝಿಲ್ನ ಇಗ್ವಸು ಜಲಪಾತ

ಮೈಸೂರಿನ ವಾಣಿವಿದ್ಯಾಮಂದಿರ ಶಾಲೆಯಲ್ಲಿದ್ದಾಗ, ನಮ್ಮ ಭೂಗೋಳದ ತರಗತಿಯ ಟೀಚರ್, ದಕ್ಷಿಣ ಅಮೆರಿಕೆಯ ಬಗ್ಗೆ ಕೇಳಿದ್ದ ಒಂದು ಪ್ರಶ್ನೆ ಮರೆಯುವಂತಿಲ್ಲ. ನಾವೆಲ್ಲಾ ಬೆಳಗ್ಗೆದ್ದು ಕುಡಿಯುವ ಕಾಫಿಯ ಬೆಳೆಯನ್ನು ಪ್ರಪಂಚದಲ್ಲೇ ಅತಿ ಹೆಚ್ಚು ಬೆಳೆಯುವ ದೇಶ ಯಾವುದು ಕಗೊತ್ತೇ? ಎಂದಾಗ, ನಾವೆಲ್ಲಾ ನಮ್ಮ ಕೊಡಗು ಮತ್ತು ಚಿಕ್ಕಮಗಳೂರು ಎಂದು ಬಹಳ ಆತ್ಮ ವಿಶ್ವಾಸದಿಂದ ಉತ್ತರಿಸಿದ್ದೆವು. ಕೇವಲ ಮೈಸೂರಿನಲ್ಲಿ ಕುಳಿತು, ಪ್ರಪಂಚವೆಂದರೆ ಕೇವಲ ನಮ್ಮೂರು, ನಮ್ಮ ರಾಜ್ಯ ಮತ್ತು ನಮ್ಮ ದೇಶವೇ ಮೇಲು ಎಂದು ತಿಳಿದಿದ್ದ ಮುಗ್ಧ ಜೀವಗಳು ನಾವಾಗಿದ್ದೆವು. ವೃತ್ತಪತ್ರಿಕೆ ಮತ್ತು ರೇಡಿಯೋ ಬಿತ್ತರಿಸುತ್ತಿದ್ದ ಸಮಾಚಾರ ಬಿಟ್ಟರೆ ಮತ್ತೊಂದಿಲ್ಲದ ೬೦ರ ದಶಕದ ದಿನಗಳವು. ಇಂದಿನಂತೆ ಕಂಪ್ಯೂಟರ್ ತೆಗೆದೊಡನೆ, ಗೂಗಲ್ ಪುಟ ತೆಗೆದು, ಕೇವಲ ಬೆರಳಿನ ತುದಿಯಲ್ಲಿ ಥಟಕ್ಕನೆ ಕೀ ಒತ್ತಿ, ಕ್ಷಣಮಾತ್ರದಲ್ಲಿ ಗೋಳವನ್ನು ಸುತ್ತುವ ಸೌಲಭ್ಯವಿರಲಿಲ್ಲ.

ನಮ್ಮ ವಿಶ್ವಾಸದ ಉತ್ತರವನ್ನು ಕೇಳಿ ನಸುನಕ್ಕ ನಮ್ಮ ಭೂಗೋಳದ ಟೀಚರ್, ಅಲ್ಲ, ಪ್ರಪಂಚದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ದೇಶ, ದಕ್ಷಿಣ ಅಮೆರಿಕ ಖಂಡದ ಬ್ರೆಝಿಲ್ನಲ್ಲಿದೆ. ಇದೇ ದೇಶದಲ್ಲಿ ಇನ್ನೂ ಅನೇಕ ಅಪರೂಪದ ಸಂಗತಿಗಳಿವೆ ಎನ್ನುತ್ತಾ, ಬ್ರೆಝಿಲ್ಲಿನಲ್ಲಿರುವ ಅತ್ಯಂತ ದೊಡ್ಡ ನದಿ ಅಮೆಝಾನ್, ಮತ್ತು ಅದರ ದಂಡೆಯಲ್ಲಿ ವಿಸ್ತರಿಸಿರುವ, ಪ್ರಪಂಚದ ಅತಿ ದೊಡ್ಡ ಉಷ್ಣವಲಯದ ಮಳೆ-ಕಾಡಿನ ಬಗ್ಗೆ ನಮಗೆ ಮಾಹಿತಿ ನೀಡಿದ್ದನ್ನು ಇನ್ನೂ ಮರೆತಿಲ್ಲ. ಆದರೆ ಈ ಬ್ರೆಝಿಲ್ ಎಲ್ಲಿದೆ ಎನ್ನುವ ವಿಷಯ ಇನ್ನೂ ನಮ್ಮ ಊಹೆಗೆ ನಿಲುಕದ್ದಾಗಿತ್ತು ಎನ್ನುವುದನ್ನು ಬೇರೆ ಹೇಳಲೇ ಬೇಕಿಲ್ಲ!

falls-and-people2.jpg
ಮನಮೋಹಕ ಇಗ್ವಸು ಜಲಪಾತ(ಗಳು)!

ದಕ್ಷಿಣ ಅಮೆರಿಕ ಖಂಡದ ಸುಮಾರು ೪೭.೩% ಭಾಗದಷ್ಟು ಜಾಗವನ್ನಾಕ್ರಮಿಸಿಕೊಂಡಿರುವ ಈ ಬೃಹತ್ ದೇಶ, ಎಷ್ಟು ದೊಡ್ಡದೆಂದರೆ, ನಮ್ಮ ವಿಶಾಲ ಭಾರತದಂತಹ ೩ ದೇಶಗಳನ್ನು ತನ್ನಲ್ಲಿ ಅಡಗಿಸಿಕೊಳ್ಳುವಷ್ಟು ದೊಡ್ಡದಾಗಿದ್ದು, ೪ ಸಮಯದ ವಲಯಗಳನ್ನು ಹೊಂದಿದೆ. ಇಷ್ಟೊಂದು ದೊಡ್ಡ ದೇಶವನ್ನು ಒಂದೇ ಬಾರಿಗೆ ನೋಡಲು ಸಾಧ್ಯವೇ? ಕೇವಲ ಅಟೆನ್ಬರೋ ಮಾತ್ರಾ, ತಮ್ಮ ಕಾರ್ಯಕ್ರಮದಲ್ಲಿ ಇಂತಹದೊಂದ ಭಾರಿ ದೇಶದ ಅಪರೂಪದ ಸಂಗತಿಗಳನ್ನು, ಕೇವಲ ಒಂದೆರಡು ಉಪಾಖ್ಯಾನಗಳಲ್ಲಿ ತೋರಿಸಬಹುದು. ನನ್ನ ಪತಿಯ ಸಮ್ಮೇಳನವಿದ್ದದ್ದು, ಬ್ರೆಜ಼ಿಲ್ಲಿನ ಈಶಾನ್ಯ ದಿಕ್ಕಿನಲ್ಲಿರುವ, ಕರಾವಳಿಯ ಪಟ್ಟಣವಾದ, ನಟಾಲಿನ ವಿಶ್ವವಿದ್ಯಾಲಯದಲ್ಲಿ. ಅಟ್ಲಾಂಟಿಕ್ ಸಾಗರದ ತಡಿಯಲ್ಲಿರುವ ಈ ಪಟ್ಟಣದಲ್ಲಿ, ನಾವು ೯ ದಿನಗಳನ್ನು ಕಳೆಯುವುದು ಎಂದು ತೀರ್ಮಾನಿಸಿದ್ದೆವು. ಆದರೆ, ಇಷ್ಟೊಂದು ದೂರ ಪ್ರಯಾಣಿಸಿ, ಈ ದೇಶದಲ್ಲಿರುವ ಒಂದಾದರೂ ಅಲ್ಲಿನ ಅಪರೂಪದ ನಿಸರ್ಗತಾಣವನ್ನು ನೋಡಲೇಬೇಕು ಎನ್ನುವ ಮಹತ್ವಾಕಾಂಕ್ಷೆ ನಮ್ಮೆಲ್ಲರ ಮನದಲ್ಲಿತ್ತು. ನನಗೋ ಅಮೆಜ಼ಾನ್ ಕಾಡಿನ ಹಂಬಲ ವಿಪರೀತ. ಅಲ್ಲಿನ ಸಸ್ಯ ಮತ್ತು ಪ್ರಾಣಿವರ್ಗವನ್ನು ನೋಡುವ ಆಸೆ. ಆದರೆ, ಅಲ್ಲಿಗೆ ಸುಮ್ಮನೆ ಸಾಮಾನ್ಯರು ಕೈಬೀಸಿಹೋಗಲು ಸಾಧ್ಯವಿಲ್ಲ. ಕೇವಲ ಸಂಘಟಿತ ಪ್ರವಾಸಗಳಲ್ಲಿ ಹೋಗಬಹುದು ಎನ್ನುವ ವಿಷಯ ತಿಳಿದು ಬಹಳ ನಿರಾಸೆಯಾಯಿತು. ಜೊತೆಗೆ ನಾವು ಹೋಗುವ ಜಾಗಕ್ಕಿಂತ, ಪಶ್ಚಿಮಕ್ಕೆ ಬಹಳಷ್ಟು ದೂರದಲ್ಲಿರುವ, ಈ ಮಹಾನದಿ ಮತ್ತು ಮಹದಾರಣ್ಯವನ್ನು, ಮತ್ತೊಮ್ಮೆ ಅವಕಾಶ ಸಿಕ್ಕರೆ ನೋಡೋಣ ಎನ್ನುವ ಅಶಾವಾದದೊಂದಿಗೆ ಕೈಬಿಡಬೇಕಾಯಿತು!

ಈಗ ಹಲವಾರು ವರ್ಷಗಳ ಹಿಂದೆ, ಹಾಲಿವುಡ್ಡಿನ ಪ್ರಸಿದ್ಧ ಚಲನಚಿತ್ರವಾದ Indiana Jones and the Kingdom of the Crystal Skull ನೋಡಿದ್ದಾಗ, ಆ ಚಿತ್ರದ ಅಂತಿಮ ದೃಶ್ಯವನ್ನು ಬ್ರೆಝಿಲ್, ಆರ್ಜೈಟೀನಾ ಮತ್ತು ಪರಗ್ವೆ ದೇಶಗಳ ನಡುವೆ ಹಬ್ಬಿರುವ, ಅತ್ಯಂತ ಪ್ರಸಿದ್ಧ ಇಗ್ವಸು ಜಲಪಾತದಲ್ಲಿ ಚಿತ್ರೀಕರಿಸಲಾಗಿದೆ ಎಂದು ಗೊತ್ತಾಗಿತ್ತು. ಈ ಚಿತ್ರದ ಅಂತಿಮ ದೃಶ್ಯದಲ್ಲಿ, ಈ ಜಲಪಾತವನ್ನು ಸಿನಿಮಾದ ಪರದೆಯ ಮೇಲೆ ನೋಡಿದ್ದಾಗ, ನನ್ನ ಮೈ ರೋಮಗಳು ನಿಮಿರೆದ್ದಿದ್ದವು. ಆಹಾ! ಎಂತಹ ರಮಣಿಯವಾದ ಜಾಗವಿದು? ಎಂದು ಮನದಲ್ಲೇ ಉದ್ಗರಿಸಿದ್ದೆ! ಈಗ ಈ ಖಂಡದಲ್ಲಿ ಕಾಲೂರಿ, ಬ್ರೆಝಿಲ್ ಗೆ ಹೋಗುತ್ತಿದ್ದೇವೆ ಎಂದಾಗ, ಈ ಸ್ಥಳವನ್ನಾದರೂ ನೋಡಲೇಬೇಕು ಎಂದು ನಿರ್ಧರಿಸಿದೆವು. ನನ್ನ ಆಸೆಗೆ ನನ್ನ ಇಬ್ಬರು ಮಕ್ಕಳು ಮತ್ತು ನನ್ನ ಪತಿಯೂ ನೀರೆರೆದರು. ಸರಿ ನಮ್ಮ ಎರಡು ವಾರದ ಬ್ರೆಜ಼ಿಲ್ ಪ್ರವಾಸ ಪೂರ್ಣರೂಪ ತಳೆಯಿತು.

ಇನ್ನೊಂದು ದೃಶ್ಯ

ಜುಲೈ ತಿಂಗಳ ೨೬ನೆಯ ತಾರೀಖು ಮುಂಜಾನೆಯಂದು, ನಾವೆಲ್ಲಾ, ಸುಮಾರು ೯ ಗಂಟೆಗಳ ದೀರ್ಘ ವಿಮಾನ ಪ್ರಯಾಣದ ನಂತರ, ಬ್ರೆಝಿಲ್ನ ಅತ್ಯಂತ ದೊಡ್ಡ ಪಟ್ಟಣವಾದ, ಸಾವೋ ಪಾಲೋವನ್ನು ತಲುಪಿದೆವು. ಬ್ರೆಝಿಲ್ನ ಜನಸಂಖ್ಯೆಯ ಸುಮಾರು ಅರ್ಧದಷ್ಟು ಭಾಗ ಇಲ್ಲಿನ ಪಟ್ಟಣಗಳಲ್ಲಿ ಜೀವಿಸುತ್ತಾರಂತೆ. ಅದರಲ್ಲೂ ಸಾವೋ ಪಾಲೋದಲ್ಲಿ ಸುಮಾರು ೨೦ ಮಿಲಿಯನ್ ಜನಸಂಖ್ಯೆಯಿದ್ದು, ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಬಹಳವಾಗಿದೆ. ಅಪರಾಧದ ಮಟ್ಟವೂ ಬಹಳಷ್ಟಿದ್ದು, ಮಾದಕದ್ರವ್ಯದ ಮಾರಾಟ, ವ್ಯಸನ ಬಹಳ ಎಂದು ಮೊದಲೇ ತಿಳಿದಿತ್ತು. ಆರ್ಥಿಕವಾಗಿ ನಮ್ಮ ದೇಶದಂತೆಯೇ ಮುಂದುವರೆಯುತ್ತಿರುವ ಈ ಬೃಹತ್ ದೇಶದಲ್ಲಿ, ಸಮಸ್ಯೆಗಳೂ ಹೇರಳವಾಗೇ ಇದೆ. ನಾವು ಭೇಟಿ ನೀಡಬೇಕೆಂದಿದ್ದ ಇಗ್ವಾಸು ಜಲಪಾತ, ಇಲ್ಲಿಂದ ಕೇವಲ ೧:೩೦ ಗಂಟೆಯ ವಿಮಾನ ಪ್ರಯಾಣ. ಹಾಗಾಗಿ ನಾವು ಸಾವೋ ಪಾಲೋ ಪಟ್ಟಣವನ್ನು ನೋಡುವ ಉದ್ದೇಶವಿರಲಿಲ್ಲ. ಅಂದೇ ಸಂಜೆ ಅಲ್ಲಿಂದ ಹೊರಟು, ಸುಮಾರು ಸಂಜೆ ೬ರ ವೇಳೆಗೆ, ಇಗ್ವಾಸು ನಗರವನ್ನು ತಲುಪಿದೆವು. ಇಲ್ಲಿನ ವಿಮಾನ ನಿಲ್ದಾಣ ಪುಟ್ಟದಾಗಿದ್ದು, ಚೊಕ್ಕವಾಗಿದೆ.

ಇಗ್ವಸು ಪಟ್ಟಣ, ಕಾಡಿನ ಮಧ್ಯದಲ್ಲಿರುವ ಒಂದು ಸಣ್ಣ ಜಾಗ ಎಂದು ತಿಳಿದಿದ್ದ ನನಗೆ, ಅಲ್ಲಿನ ಗಗನಚುಂಬಿ ಕಟ್ಟಡಗಳನ್ನು ನೋಡಿದಾಗ ಸ್ವಲ್ಪ ನಿರಾಸೆ ಮತ್ತು ಆಶ್ಚರ್ಯಗಳೆರಡೂ ಆದವೆನ್ನಬಹುದು. ಬ್ರೆಝಿಲ್, ಆರ್ಜೈಂಟೀನಾ ಮತ್ತು ಪರ್ಗ್ವೆ ದೇಶಗಳ ನಡುವಿನ ಗಡಿನಾಡಿನಲ್ಲಿ ಅಡಗಿ ವಿಶ್ರಮಿಸಿದಂತಿರುವ, Puerto Iguazu ಪಟ್ಟಣ, ಪ್ರವಾಸೋದ್ಯಮದ ಬಲದ ಮೇಲೆ ನೆಲೆನಿಂತಿದೆ ಎನ್ನಬಹುದು. ಇಗ್ವಾಸು ಜಲಪಾತ ಇಲ್ಲಿಂದ ಸುಮಾರು ೧೮ ಕಿಲೋಮೀಟರುಗಳ ದೂರವಿದ್ದು, ಇಲ್ಲಿನ ಎಲ್ಲಾ ಹೋಟೆಲಿನಲ್ಲೂ, ಈ ಸ್ಥಳಕ್ಕೆ ಭೇಟಿ ನೀಡುವ ಕಲ್ಪಿಸಿದ್ದಾರೆ. ವಿಂಢ್ಯಾಮ್ ಕ್ಲಬ್ ಎನ್ನುವ ಉತ್ತಮವಾದ ಹೋಟೆಲ್ ಒಂದರಲ್ಲಿ ನಮ್ಮ ತಂಗುವ ವ್ಯವಸ್ಥೆಯನ್ನು ಮೊದಲೇ ಮಾಡಿಕೊಂಡಿದ್ದೆವು. ಇಲ್ಲಿನ ಹೋಟೆಲುಗಳಲ್ಲಿ ಉತ್ತಮ ದರ್ಜೆಯ ಕೋಣೆಗಳು, ಸೌಲಭ್ಯಗಳಿದ್ದು, ಸ್ವಚ್ಛತೆಗೆ ಗಮನ ನೀಡಿದ್ದಾರೆ ಎನ್ನುವುದು ಉತ್ತಮವಾದ ಅಂಶ. ಇನ್ನು ಊಟತಿಂಡಿಗಳೂ ಕೂಡಾ ಉತ್ತಮ ಗುಣಮಟ್ಟದ್ದಾಗಿದ್ದು, ಅಂತರಾಷ್ಟ್ರೀಯ ಪ್ರವಾಸಿಗರನ್ನು ತೃಪ್ತಿಪಡಿಸುವಂತಹ ಎಲ್ಲಾ ರೀತಿಯ ಆಹಾರವಿಧಗಳನ್ನೂ ಇಲ್ಲಿ ಕಾಣಬಹುದಾಗಿದೆ. ಹಣ್ಣುಹಂಪಲುಗಳಂತೂ ಅನೇಕ ವಿಧಗಳಿದ್ದು, ನಮ್ಮ ಭಾರತದ ಹಣ್ಣಿನ ರಾಜ ಮಾವು, ಪರಂಗಿ, ಕಲ್ಲಂಗಡಿ, ಕರ್ಬೂಜಾ ಎಲ್ಲವನ್ನೂ ಬೆಳಗಿನ ಉಪಹಾರದ ಸಮಯದಲ್ಲಿ ಇಟ್ಟಿರುತ್ತಾರೆ. ಅನ್ನ ಮತ್ತು ಕಾಳುಗಳೂ ಲಭ್ಯವಿದೆ. ಹಾಗಾಗಿ ಸಸ್ಯಾಹಾರಿಗಳು ನಿರಾಶರಾಗಬೇಕಿಲ್ಲ. ಜೊತೆಗೆ ಪಾಸ್ತಾ, ಪಿಜ್ಜಾಗಳೂ ಸಿಗುತ್ತವೆ.

ಮೊದಲ ದಿನ ಬೆಳಿಗ್ಗೆದ್ದು, ಹೋಟಲಿನಲ್ಲಿರುವ ಪ್ರವಾಸಿಗರ ಆಫೀಸಿನ ವತಿಯಿಂದ, ಇಗ್ವಾಸು ಜಲಪಾತವನ್ನು ಬ್ರೆಜ಼ಿಲಿನ ದಂಡೆಯಿಂದ ನೋಡಲು ಲಭ್ಯವಿದ್ದ ಒಂದು ದಿನದ ಪ್ರವಾಸಕ್ಕೆ ಹೋಗಲು ನಿರ್ಧರಿಸಿ ಹೊರಟೆವು. ಇದರ ಜೊತೆಗೆ ಅಲ್ಲಿಯೇ ಹತ್ತಿರದಲ್ಲಿರುವ ಪಕ್ಷಿಧಾಮವನ್ನೂ ನೋಡಲು ಅವಕಾಶ ಕಲ್ಪಿಸಿದ್ದರು. ಈ ಮೊದಲೆ ಈ ಸ್ಥಳವನ್ನು ಸಂದರ್ಶಿಸಿದ ನಮ್ಮ ಗೆಳತಿಯೊಬ್ಬಳು, ಇಗ್ವಸು ಜಲಪಾತದ ಜೊತೆಗೆ ಈ ಪಕ್ಷಿಧಾಮವನ್ನು ಖಂಡೀತಾ ತಪ್ಪದೆ ನೋಡಿ ಎಂದು ಹೇಳಿದ್ದರಿಂದ, ಅದನ್ನು ನೋಡಲು ಮೊದಲೇ ತೀರ್ಮಾನಿಸಿದ್ದೆವು. ಬ್ರೆಝಿಲ್ಲಿನಲ್ಲಿರುವ ಪ್ರಾಣಿ ಪಕ್ಷಿ ಸಂಕುಲದ ವೈವಿಧ್ಯತೆಯನ್ನು ಆದಷ್ಟೂ ನೋಡಬೇಕೆನ್ನುವ ಚಪಲ ನಮಗೆಲ್ಲಾ ಇದ್ದೇ ಇತ್ತು. ಜಲಪಾತಕ್ಕೆ ಹೋಗುವ ಮೊದಲೇ ಇಲ್ಲಿಗೆ ಕರೆದೊಯ್ಯುತ್ತಾರೆ ಎಂದು ತಿಳಿದಿತ್ತು. ಈ ಸ್ಥಳವನ್ನು ನೋಡಲು ಎರಡು ಗಂಟೆಗಳ ಕಾಲದ ಅವಧಿ ನೀಡಿದ ಮಾರ್ಗದರ್ಶಿ ನಮ್ಮನ್ನೆಲ್ಲ ಪ್ರವೇಶದ್ವಾರದ ಬಳಿ ಬಿಟ್ಟು ಹೊರಟುಹೋದ.

 

      ಪ್ರವೇಶದ್ವಾರದ ಹೊರಗಿರುವ ಬೃಹದಾಕಾರದ ಫಲಕದ ಮೇಲೆ ಪ್ರದರ್ಶಿಸಿದ್ದ ವರ್ಣಮಯ ಪಕ್ಷಿಗಳತ್ತ ನೋಡಿದಾಗ ನನ್ನ ಕೈ ಕ್ಯಾಮೆರಾವನ್ನು ತಾನೇ ತಾನಾಗಿ ಸಿದ್ಧಪಡಿಸಿತು. ಬ್ರೆಜ಼ಿಲಿನ ಅಮೆಜಾನ್ ಕಾಡಿನಲ್ಲಿರುವ ಟೌಕನ್, ಬಣ್ಣ ಬಣ್ಣದ ಮೆಕಾವ್ ಗಿಳಿಗಳು, ಫ಼್ಲೆಮಿಂಗೋಗಳನ್ನು ಅಮೆರಿಕೆಯ ಇತರ ಮೃಗಾಲಯ ಅಥವಾ ಸಫ಼ಾರಿಗಳಲ್ಲಿ ನೋಡಿದ್ದರೂ, ಇದೇ ಹಕ್ಕಿಗಳನ್ನು ಅವುಗಳ ತೌರಿನಲ್ಲಿ ನೋಡುವ ಮಜಾ ಬೇರೆಯಲ್ಲವೇ! ಸರಿ ಬಾಗಿಲಲ್ಲಿದ್ದ ಹಲವಾರು ಉಷ್ಣವಲಯದ, ನನಗೆ ಪರಿಚಿತವಾದ ಗಿಡಮರಗಳು ನನ್ನಲ್ಲಿ ಒಂದು ಅತಿಉದ್ವೇಗದ ಭಾವನೆಗಳನ್ನೆಬ್ಬಿಸಿದ್ದವು. ಪಕ್ಷಿಲೋಕವನ್ನು ಹೊಕ್ಕಾಗ ಅಲ್ಲಿನ ಚಿಲಿಪಿಲಿ ಕಲರವದೊಂದಿಗೆ, ಹಕ್ಕಿಗಳ ವರ್ಣರಂಜಿತ ಗರಿಗಳನ್ನು ನೋಡಿ ಬೆಕ್ಕಸಬೆರಗಾದೆ. ಸುಮಾರು ೧೦೦೦ದಷ್ಟು ಸಂಖ್ಯೆಯ ಪಕ್ಷಿಗಳು ಈ ಪ್ರದೇಶದಲ್ಲಿವೆ ಎಂದು ಅಲ್ಲಿ ಬರೆದಿದ್ದನ್ನು ನೋಡಿ, ನಿಸರ್ಗದ ಲೀಲೆಗೆ ನನ್ನ ಮನ ಮಾರುಹೋಯಿತು. ಶ್ವೇತವರ್ಣದಿಂದ ಹಿಡಿದು, ಕಾಮನಬಿಲ್ಲಿನ ಎಲ್ಲಾ ವರ್ಣಗಳನ್ನೂ ತಮ್ಮ ಗರಿಗಳಲ್ಲಿ ಅಡಗಿಸಿಕೊಂಡ ಈ ಜೀವಿಗಳ ಸೌಂಧರ್ಯಕ್ಕೆ ಮನಮರುಳಾಗದವರು ಇದ್ದಾರೆಯೇ! ಅಲ್ಲಿನ ಎಲ್ಲಾ ಪಕ್ಷಿಗಳಿಗೂ ಇದ್ದರಲ್ಲಿ ಅಲ್ಲೇ ಹಾರಾಡಿಕೊಂಡಿರುವ ಅವಕಾಶ ಕಲ್ಪಿಸಿದ್ದಾರಲ್ಲದೇ, ಅಮೆಜಾನ್ ಕಾಡಿನ ಒಂದು ವಾತಾವರಣವನ್ನೂ ಕಲ್ಪಿಸಿದ್ದಾರೆ. ಅಲ್ಲಿದ್ದ ನೂರಾರು ಪ್ರವಾಸಿಗರು, ಟೌಕನ್ ಪಕ್ಷಿಯ ಜೊತೆ ಸೆಲ್ಫೀ ತೆಗೆದುಕೊಳ್ಳುವುದರಲ್ಲಿ ತೊಡಗಿದ್ದರು. ಟೌಕನ್ ಪಕ್ಷಿಗಳ ಬಳಿ ಒಂದು ದೊಡ್ಡ ಕ್ಯೂ ಇತ್ತು! ನಮ್ಮ ಕನ್ನಡ ಚಲನಚಿತ್ರದ ಅಚ್ಚುಮೆಚ್ಚಿನ ವರನಟ, ರಾಜಕುಮಾರ್ ಚಿತ್ರ ನೋಡಲು ಜನ ಜಮಾಯಿಸುತ್ತಿದ್ದ ದಿನಗಳು ನೆನಪಿಗೆ ಬಂದು ನಸುನಕ್ಕೆ! ಇನ್ನು ಜನಪ್ರಿಯ ಹಕ್ಕಿ ಮೆಕಾವ್ ಗಿಳಿಗಳ ದಂಡನ್ನಂತೂ ನೋಡಬೇಕು. ತಮ್ಮ ದೊಡ್ಡ ಕರ್ಕಶ ಕಂಠದಿಂದ ಎಬ್ಬಿಸುವ ಅವುಗಳ ಕಲರವ ನನ್ನ ಕಿವಿಗಳಿಗೆ ಆಪ್ಯಾಯಮಾನವಾಗಿತ್ತು. ಪಂಚವರ್ಣದ ಈ ಗಿಳಿಗಳ ಸೌಂಧರ್ಯವನ್ನು ನೋಡಿದಾಗ, ಪ್ರಕೃತಿ ತನ್ನ ಬಿಡುವಿನ ವೇಳೆಯಲ್ಲಿ ರಚಿಸಿರುವ ಅತ್ಯುತ್ತಮ ಚಿತ್ರವಿರಬಹುದೇ ಎಂದು ನನ್ನ ಮನ ಬೆರಗಾಯಿತು. ಅವುಗಳ ದಟ್ಟವಾದ ಕೆಂಪು, ಹಸಿರು, ನೀಲ, ಹಳದಿ ಮತ್ತು ಕೇಸರಿಗಳ ಬಣ್ಣಗಳನ್ನು ನೋಡಿ, ಪ್ರೈಮರಿ ಶಾಲೆಯಲ್ಲಿ ನಮಗಿದ್ದ “ಬಾರೆಲೆ ಹಕ್ಕಿ, ಬಣ್ಣದ ಹಕ್ಕಿ” ಪದ್ಯದ ಸಾಲುಗಳು ನೆನಪಾದವು. “ಗೆಳೆಯರು ಯಾರೂ ಆಡಲು ಇಲ್ಲ, ಕಳೆಯುವುದೆಂತು ವೇಳೆಯನೆಲ್ಲಾ, ಎನ್ನುವ ಸಾಲಿನಲ್ಲಿ ಸಣ್ಣ ಮಗುವೊಂದು ಹಕ್ಕಿಯ ಬಣ್ಣಕ್ಕೆ ಮೋಹಗೊಂಡು, ಅದರೊಡನೆ ಆಡುವ ಇಚ್ಛೆ ವ್ಯಕ್ತಪಡಿಸುವುದನ್ನು, ಕವಿ ನಿಜಕ್ಕೂ ಸುಂದರವಾಗಿ ವರ್ಣಿಸಿದ್ದಾನೆ. ಸುಮಾರು ೩೦ ವಿವಿಧ ರೀತಿಯ ಗುನುಗು ಹಕ್ಕಿ ಅಥವಾ ಹಮ್ಮಿಂಗ್ ಬರ್ಡ್ಗಳಂತೂ ನೋಡುವ ಕಣ್ಣುಗಳಿಗೆ ಹಬ್ಬ! ಅವಿರತವಾಗಿ ರೆಕ್ಕೆಬಡಿಯುತ್ತಾ ಮಕರಂದವನ್ನು ಹೀರುವ ಈ ಪಕ್ಷಿಜಾತಿಯ ಬಗ್ಗೆ, ಸರ್ ಡೇವಿಡ್ ಅಟೆನಬರೋ ನೀಡುವ ಮಾಹಿತಿ ಕೇಳಿದರೆ, ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳಿಡಬೇಕಾಗುತ್ತದೆ! ಅಮೆಜಾನ್ ಕಾಡಿನ ವಾತಾವರಣವನ್ನು ಸೃಷ್ಟಿಸಿರುವ ಈ ಜಾಗದಲ್ಲಿ, ತಾಪಮಾನ ಸುಮಾರು ೩೦-೩೫ರವರೆಗಿತ್ತು. ಎರಡು ಗಂಟೆಗಳ ಕಾಲ ತಿರುಗಿದ ಮೇಲೆ, ಚೆನ್ನಾಗಿ ಬೆವರಿದ್ದ ನಮ್ಮ ದೇಹ ತಂಪುಪಾನೀಯವನ್ನು ಬಯಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲಾ! ಆದರೆ ಅಲ್ಲಲ್ಲೇ ಬುಟ್ಟಿಗಳಲ್ಲಿ ತೆಂಗಿನ ಎಳನೀರನ್ನು ಪೇರಿಸಿಟ್ಟಿದ್ದರು. ನಿಮಗೆ ಬೇಕಾದ ಬುರುಡೆಯನ್ನು ಆರಿಸಿ, ಅಲ್ಲೆ ಹತ್ತಿರದ ಅಂಗಡಿಗೆ ಹೋದರೆ, ಅದನ್ನು ಕೆತ್ತಿ ಕೊಡುತ್ತಾರೆ. ಒಣಗಿದ್ದ ಬಾಯಿಗಂಟಲುಗಳಿಗೆ, ಎಳನೀರು ಅಮೃತದಂತಿತ್ತು. ಕೇವಲ ಒಂದು ಡಾಲರ್ ಮಾತ್ರಾ ಅದರ ಬೆಲೆ! ಬ್ರೆಝಿಲ್ಲಿನಲ್ಲಿರುವವರೆಗೂ, ನಾವೆಲ್ಲಾ ತೆಂಗಿನ ಎಳನೀರನ್ನು ಯಥೇಚ್ಛವಾಗಿ ಸೇವಿಸಿ ಸುಖಿಸಿದೆವು.

ಸರಿ ಇಲ್ಲಿನ ಎರಡು ಗಂಟೆಗಳ ತಿರುಗಾಟ ಮುಗಿಸಿ, ವಾಪಸ್ ನಮ್ಮ ವ್ಯಾನಿನ ಕಡೆಗೆ ನಡೆದು ನಮ್ಮ ಮಾರ್ಗದರ್ಶಿಯನ್ನು ಕೂಡಿಕೊಂಡೆವು. ಪಾರ್ಕಿನ ಪ್ರವೇಶದ್ವಾರದಲ್ಲಿ ನಮ್ಮನ್ನು ಇಳಿಸಿದಾಗ, ಅಲ್ಲಿ ಮತ್ತೊಬ್ಬ ಮಾರ್ಗದರ್ಶಿ ನಮ್ಮನ್ನೆಲ್ಲಾ ಒಳಗಡೆ ಕರೆದೊಯ್ಯಲು ಸಿದ್ಧವಾಗಿದ್ದ. ಇಂಗ್ಲೀಶ್, ಪೋರ್ಚುಗೀಸ್ ಮತ್ತು ಸ್ಪಾನಿಶ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಇಲ್ಲಿನ ಮಾರ್ಗದರ್ಶಿಗಳು, ಜಲಪಾತದ ಒಳಗೆ ಹೇಗೆ ಎಲ್ಲಿ ಎಷ್ಟು ದೂರ ನಡೆದು ಹೋಗಬೇಕು ಎನ್ನುವುದನ್ನು ವಿವರಿಸಿದನು. ಈ ಪ್ರವಾಸದ ಪ್ರವೇಶದರದಲ್ಲಿ, ಜಲಪಾತದ ಬಳಿಗೊಯ್ಯುವ ದೋಣಿಯ ವಿಹಾರದ ಹಣವೂ ಸೇರಿರುತ್ತದೆ. ಅಲ್ಲಿಂದ ಸುಮಾರು ನಾಲ್ಕು ಕಿಲೋಮೀಟರುಗಳ ದೂರದಲ್ಲಿರುವ ಇಗ್ವಸು ಜಲಪಾತದ ಪ್ರದೇಶವನ್ನು, ಇಗ್ವಾಸು ನ್ಯಾಶನಲ್ ಪಾರ್ಕ್ ಎನ್ನುತ್ತಾರೆ. ಇದೊಂದು ಸಂರಕ್ಷಿತ ಅರಣ್ಯವಾಗಿದ್ದು, ಜಲಪಾತವು ಅರಣ್ಯದಿಂದ ಸುತ್ತುವರೆದಿದೆ.

 

ಇಗ್ವಾಸು ನದಿಯಿಂದ ಸೃಷ್ಟಿಸಲ್ಪಟ್ಟ ಈ ಜಲಪಾತ, ಪ್ರಪಂಚದಲ್ಲೇ ಅತ್ಯಂತ ದೊಡ್ಡ ಜಲಪಾತವಾಗಿದೆ. ಕುರಿಟಿಬಾ ಎಂಬ ಸ್ಥಳದಲ್ಲಿ ಉಗಮವಾಗುವ ಈ ನದಿ, ಬಹಳಷ್ಟು ದೂರ ಬ್ರೆಝಿಲ್ಲಿನಲ್ಲೇ ಹರಿದು ಕ್ರಮಿಸಿದರೂ, ಅದರ ಪ್ರಮುಖ ಜಲಪಾತಗಳು ಇರುವುದು ನೆರೆಯ ಆರ್ಜಂಟೈನಾದಲ್ಲಿ. ಇದನ್ನು ನೋಡಿದಾಗ, ಉತ್ತರ ಅಮೆರಿಕೆಯಲ್ಲಿರುವ ನಯಾಗರಾ ಜಲಪಾತದ ದೊಡ್ಡ ಭಾಗ, ನೆರೆಯ ದೇಶವಾದ ಕೆನಡಾದಲ್ಲಿರುವುದು ನೆನಪಿಗೆ ಬರುತ್ತದೆ. ಆದರೆ ನಯಾಗರ ಜಲಪಾತಕ್ಕಿಂತಲೂ, ಇಗ್ವಾಸು ಬಹಳ ಪಾಲು ದೊಡ್ಡದು! ಇಗ್ವಾಸು ಜಲಪಾತದ ಸೃಷ್ಟಿಯ ಹಿಂದೆ ಒಂದು ದಂತಕಥೆಯಿದೆ. ದೇವತೆಯೊಬ್ಬನಿಗೆ, ನೈಪಿ ಎನ್ನುವ ಸುಂದರ ಕನ್ಯೆಯನ್ನು ಮದುವೆಯಾಗುವ ಆಸೆಯಿತ್ತು. ಅವಳು ಅದಕ್ಕೊಪ್ಪದೆ, ತನ್ನ ಮಾನವ ಪ್ರೇಮಿಯೊಂದಿಗೆ ಸಣ್ಣ ದೋಣಿಯಲ್ಲಿ ಪಲಾಯನಮಾಡಲು ಯತ್ನಿಸಿದಾಗ, ತನ್ನನ್ನು ನಿರಾಕರಿಸಿದ ಕೋಪಕ್ಕೆ, ಆ ದೇವತೆ, ನದಿಯನ್ನು ಸೀಳಿ ಇಬ್ಭಾಗಿಸಿ ಈ ಜಲಪಾತವನ್ನು ಸೃಷ್ಟಿಸಿ, ಪ್ರೇಮಿಗಳಿಬ್ಬರನ್ನೂ ಅದರಲ್ಲಿ ಕೆಡವಿ ಕೊಂದನೆಂಬ ಪ್ರತೀತಿಯಿದೆ.

ಇದು ದೈವ ಸೃಷ್ಟಿಯೋ, ಇಲ್ಲಾ ನಿಸರ್ಗದ ಪವಾಡವೋ! ಏನಾದರೂ ಸರಿ, ಈ ಜಲಪಾತದ ರುದ್ರ ರಮಣೀಯತೆಗೆ ಮನಸೋಲದಿರಲು ಸಾಧ್ಯವೇ ಇಲ್ಲಾ. ೧೫೪೧ರಲ್ಲಿ, ಯೂರೋಪಿಯನ್ ಪ್ರವಾಸಿಗನೊಬ್ಬ ಮೊಟ್ಟಮೊದಲಿಗೆ ಕಂಡ ಈ ಜಲಪಾತದ ಸದ್ದನ್ನು ಬಹಳ ದೂರದಿಂದಲೇ ಕೇಳಬಹುದು. ಬ್ರೆಝಿಲ್ ಮತ್ತು ಆರ್ಜಂಟೈನಾದ ನಡುವೆ ಸೀಮಾರೇಖೆಯಾಗಿರುವ ಈ ಮನೋಹರ ನೀರಿನ ರಾಶಿಯನ್ನು ಎರಡೂ ದೇಶಗಳಿಂದ ನೋಡುವ ವ್ಯವಸ್ಥೆಯಿದೆ. ಇಗ್ವಾಸು ನದಿಯು, ಪರಾನಾ ಪ್ರಸ್ಥಭೂಮಿಯ ಅಂಚಿನಿಂದ ಕೆಳಕ್ಕೆ ಧುಮುಕಿದಾಗ ಸೃಷ್ಟಿಯಾಗಿರುವ ಈ ಜಲಪಾತವು, ಕೇವಲ ಒಂದೇ ಧಾರೆಯಲ್ಲ.

ಸುಮಾರು ೨.೭ ಕಿಲೋಮೀಟರುಗಳಷ್ಟು ಉದ್ದವಾಗಿರುವ ಈ ಜಲಧಾರೆಯು, ಸುಮಾರು ೧೯೭- ೨೬೯ ಅಡಿಗಳಷ್ಟು ಎತ್ತರವಿರುವ, ೧೫೦-೩೦೦ ಜಲಪಾತಗಳನ್ನು ಸೃಷ್ಟಿಸಿದೆ. ಈ ಅಗಾಧವಾದ ಜಲರಾಶಿಯನ್ನು ಮೊದಲ ಬಾರಿಗೆ ನೊಡಿದಾಗ, ನೋಡುಗರ ಮನ ದಿಗ್ಬ್ರಮೆ ಹೊಂದಿ, ಮೂಗಿನ ಮೇಲೆ ಬೆರಳಿಡುತ್ತಾರೆ. ಇಲ್ಲಿರುವ ಪ್ರತಿಯೊಂದು ಜಲಪಾತಕ್ಕೂ ಪ್ರತ್ಯೇಕವಾದ ಹೆಸರುಗಳಿವೆ. ಉದಾಹರಣೆಗೆ, U ಆಕಾರದ Devil’s throat (ದೈತ್ಯನ ಕಂಠದ) ಅಳತೆ ಸುಮಾರು 269ft* 492ft * 2,297ft ಗಳಷ್ಟಿದೆ. ಇದರ ಮುಂದೆ ನಿಂತಾಗ, ಅಲ್ಲಿನ ಸದ್ದು ಗಡಚಿಕ್ಕುವಂತಿದ್ದು, ನೀರಿನಿಂದ ಹೊರಟ ಆವಿ, ಸೂರ್ಯನ ಕಿರಣದೊಂದಿಗೆ ಸಮ್ಮಿಳನಗೊಂಡು, ಅಲ್ಲಿ ಅನೇಕ ಕಾಮನಬಿಲ್ಲುಗಳು ಸೃಷ್ಟಿಯಾಗುತ್ತವೆ. ಈ ಮನಮೋಹಕ ದೃಶ್ಯವನ್ನು ಕ್ಯಾಮೆರಾಗಳು ಸೆರೆಹಿಡಿಯುವಲ್ಲಿ ವಿಫಲವಾಗುತ್ತವೆ ಎಂದು ನನ್ನ ಅನಿಸಿಕೆ. ಮನದ ಕಣ್ಣುಗಳಿಂದ ಸೆರೆಹಿಡಿದ ಚಿತ್ರವೇ, ನಮ್ಮ ಮನದಲ್ಲಿ ಚಿರಂತನವಾಗಿ ಉಳಿಯುತ್ತದೇನೋ! ವಿವಿಧ ಹಂತಗಳಲ್ಲಿ ಬೀಳುವ ಈ ಅಸಂಖ್ಯಾತ ಜಲಪಾತಗಳನ್ನು ನೋಡಲು ಹಲವಾರು ಕಿಲೋಮೀಟರ್ ಕಾಲುದಾರಿಯಲ್ಲಿ ನಡೆಯುತ್ತಾ ಹೋಗಬೇಕು.

ಬ್ರೆಝಿಲ್ ಮತ್ತು ಅರ್ಜಂಟೈನಾ ದೇಶಗಳೆರಡೂ ಕಡೆಯಿಂದ ನೋಡಿದ ಈ ಜಲಪಾತದ ಅದ್ಭುತ ದೃಶ್ಯಗಳು, ಜೀವನದಲ್ಲಿ ಬಹುಕಾಲದವರೆಗೂ ಅಚ್ಚಳಿಯದೇ ಉಳಿಯುವ ನೆನಪುಗಳು.ಜಲಪಾತದ ರಮಣೀಯ ಭೋರ್ಗರೆತವನ್ನು ಬಹಳ ಹತ್ತಿರದಿಂದ ನೋಡಲು, ವೇಗವಾಗಿ ಓಡುವ ದೋಣಿವಿಹಾರದ ಪ್ರವಾಸವನ್ನು ಮೊದಲೇ ಕಾಯ್ದಿರಿಸಿದ್ದೆವು. ಹಾಗಾಗಿ ಈ ಅದ್ಭುತ ಜಲಧಾರೆಯನ್ನು ಅವುಗಳ ಹತ್ತಿರಕ್ಕೆ ಹೋಗಿ ನೋಡಲು ಸಾಧ್ಯವಾಯಿತು. ನದಿಯ ಅಸಾಧ್ಯವಾದ ಸೆಳೆತಗಳ ಮೇಲೆ, ವೇಗವಾಗಿ ಓಡಿಸುತ್ತಾ, ಆ ಉನ್ನತವಾದ ಜಲಧಾರೆಯ ಹತ್ತಿರ ಕರೆದೊಯ್ದಾಗ, ಅಲ್ಲಿಯ ನೀರಿನ ಭೋರ್ಗರೆತದಿಂದ ಕಿವಿಗಳು ಗಡುಚಿಕ್ಕಿ, ನಮ್ಮಮೇಲಾದ ನೀರಿನ ಸುರಿತದಿಂದ ಕುಳಿತಿದ್ದವರೆಲ್ಲರ ಬಾಯಿಂದ ಹೊರಟ ಒಂದೇ ಉದ್ಗಾರವೆಂದರೆ, Oh No!” ಮೊದಲೇ ಈ ವಿಷಯ ಗೊತ್ತಿದ್ದರಿಂದ ನಮ್ಮೆಲ್ಲರ ಬಳಿಯೂ, ಟವಲ್ ಮತ್ತು ಮತ್ತೊಂದು ಜೋಡಿ ಬಟ್ಟೆಗಳಿದ್ದವು. ಕನ್ನಡ ವಿಖ್ಯಾತ ಕವಿ, ಸಾಹಿತಿ, ನಿಸ್ಸಾರ್ ಅಹಮದ್ ಅವರ ಜನಪ್ರಿಯ ಕವನ “ಜೋಗದ ಸಿರಿಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ” ಅನೇಕಬಾರಿ ನನ್ನ ಬಾಯಲ್ಲಿ ಹರಿದಾಡಿತು. ಇದೇ ಕವಿ, ಇಗ್ವಾಸು ಜಲಪಾತದ ಮನೋಹರ ದೃಶ್ಯವನ್ನು ಕಂಡಾಗ, ಅವರ ಲೇಖನಿಯಿಂದ ಇನ್ನೆಂತಹ ಕವನ ರಚನೆಯಾಗಬಹುದು ಎಂದು ನನ್ನ ಮನ ಊಹಿಸಲು ಯತ್ನಿಸಿತು.

“ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ? ಸಾಯೋತನ್ಕ ಸಂಸಾರ್ದಲ್ಲಿ ಗಂಡಾಗುಂಡಿ, ಹೇರಿಕೊಂಡು ಹೋಗೋದಿಲ್ಲ ಸತ್ತಾರ್ ಬಂಡಿ,ಇರುವುದ್ರೊಳಗ್ ಒಮ್ಮೆ ನೋಡು ಜೋಗದ್ ಗುಂಡಿ” ಅನ್ನುವ ಕವನವನ್ನು ನನ್ನ ತಾಯಿ ಹಾಡುತ್ತಿದ್ದನ್ನು ಜ್ನಾಪಿಸಿಕೊಂಡೆ. ಜೋಗದ್ ಗುಂಡಿ ನೋಡುವ ಅವಕಾಶ ಹೆಚ್ಚು, ಆದ್ರೆ, ಇಗ್ವಸುವಿನಂತಹ ಅಪೂರ್ವ ಜಲರಾಶಿಯನ್ನೊಮ್ಮೆ ನೋಡುವ ಸುವರ್ಣವಕಾಶ ಸಿಕ್ಕರೆ, ಕಳೆದುಕೊಳ್ಳದೆ ಖಂಡಿತಾ ನೋಡಬೇಕು. ಈ ರಮಣೀಯ ದೃಶ್ಯ ನಮ್ಮ ಮನಗಳಲ್ಲಿ ಅಚ್ಚಳಿಯದೆ ಬಹಳ ಕಾಲ ಉಳಿಯುವುದರಲ್ಲಿ ಸಂದೇಹವೇ ಇಲ್ಲಾ!

 

ಲೇಖನ ಮತ್ತು ಚಿತ್ರಗಳು:  ಉಮಾ ವೆಂಕಟೇಶ್

6 thoughts on “ಬ್ರೆಝಿಲ್ ದೇಶದ ಇಗ್ವಸು ಜಲಪಾತ – ಉಮಾ ವೆಂಕಟೀಶ್ ಬರೆದ ಲೇಖನ

 1. ಉಮಾ ಅವರೇ, ಪಕ್ಷಿ ಸಂಕುಲದ ವರ್ಣಮಯ ವರ್ಣನೆಯಿಂದ ರಮಣೀಯ ಇಗ್ವಸು ಜಲಪಾತದತ್ತ ಕರೆದೊಯ್ದ ನಿಮ್ಮ ಲಾಲಿತ್ಯಪೂರ್ಣ ಬರಹಕ್ಕೆ ಭಲೇ ಎಂಬೆ.ನಯಾಗರಾವನ್ನೇ ಕಂಡು ಬೆರಗಾದ ನಾನು ನೀವುಕಣ್ಣಿಗೆ ಕಟ್ಟುವಂತೆ ಬರೆದ ಇಗ್ವಸು ಜಲಪಾತದತ್ತ ಈಗ ಜಾರುತ್ತಿದ್ದೇನೆ ನನಗರಿಯದಂತೆ.ಆ ಮನಮೋಹಕ ಜಲಪಾತದ ಮಡಿಲಲ್ಲ, ಜೋಗದ ಗುಂಡಿಯ ಸಿರಿಯನ್ನು ನೆನೆದ ನಿಮ್ಮ ಕನ್ನಡಾಭಿಮಾನಕ್ಕೆ ತಲೆಬಾಗಿದೆ. ನಿಮಗೆ ಇದ್ದಲ್ಲಿಯೇ ಆದರೆ ಅದ್ಭುತ ಜಲಪಾತದ ದರ್ಶನವನ್ನು ಮಾಡಿಸಿ, ಒಮ್ಮೆಯಾದರೂ ಆ ನಿಸರ್ಗದ ಮಡಿಲಲ್ಲಿ ಮೈಮರೆಯುವ ಆಸೆ ಮೂಡಿಸಿದೆ ನಿಮ್ಮ ಸುಂದರ ಬರಹಕ್ಕೆ ಧನ್ಯವಾದಗಳು ಉಮಾ.
  ಸರೋಜಿನಿ ಪಡಸಲಗಿ

  Liked by 2 people

 2. ಮೊದಲ ಸಲ ಇದನ್ನು ಓದಿ ಕೆಲ ದಿನಗಳಾದರೂ ಇಗ್ವಸುವಿನ ಭೋರ್ಗರೆತ ಇನ್ನೂ ಕಿವಿಯಲ್ಲಿ ಗಡಚಿಕ್ಕಿದೆ! Travelogue, geology, ornithology, botany ಇವೆಲ್ಲವುಗಳು ಕೂಡಿದ ವರ್ಣರಂಜಿತ ವರ್ಣನೆ. ಬರೀ ಜೋಗ, ನಯಾಗರಾ ನೋಡಿಯೇ ಬೆರಗಾಗಿದ್ದೆ. ಈಗ ಇನ್ನೊಂದು ಜಲಪಾತ ಕರೆಯುತ್ತಿದೆ! ಈ ಮೊದಲೆ ಕೆಲವರು ಶ್ಲಾಘಿಸಿದಂತೆ ಭಾಷೆಯ ಬೆಡಗು ಇನ್ನಷ್ಟು ಮೆರುಗು ಕೊಟ್ಟಿದೆ. ಪ್ರವಾಸಕ್ಕೆ ಮೊದಲು ಓದ ಬೇಕಾದಂಥದು. ಬಂದ ಮೇಲೆ ಮತ್ತೊಮ್ಮೆ ಓದಿ ಬರೆಯಬೇಕು. ಅಭಿನಮ್ದನೆಗಲು, ಉಮಾ!

  Liked by 1 person

 3. ನಿಮ್ಮ ದನಿಯಲ್ಲಿನ ಸಡಗರ ಈ ಲೇಖನದಲ್ಲಿ ಜಲಪಾತದಷ್ಟೇ ಜೋರಾಗಿ ಧುಮ್ಮಿಕ್ಕಿದೆ.ಓದುಗರನ್ನು ಅಲ್ಲಿಗೆ ಕರೆದೊಯ್ಯುವುದರಲ್ಲಿ ಸಫಲವಾಗಿದೆ. ಮಾಹಿತಿಗಳೂ ಚೆನ್ನಾಗಿವೆ. ಉತ್ತಮ ಲೇಖನ.

  Liked by 1 person

 4. ಉಮಾ,
  ನೀವು ಹೃದಯದಲ್ಲಿ ಕನ್ನಡ ಸಾಹಿತ್ಯವನ್ನು ಮುಡಿಗೇರಿಸಿಕೊಂಡು, ತಲೆಯಲ್ಲಿ ಸಸ್ಯಶಾಸ್ತ್ರ ವಿಜ್ಞಾನಿಯಾಗಿದ್ದು, ಮನಸ್ಸಿನಲ್ಲಿ ಒಬ್ಬ ಪ್ರವಾಸಿಯಾಗಿ ಮನ ತಣಿಯುವಷ್ಟು ಕುತೂಹಲವನ್ನು ಬಗಲಿಗೇರಿಸಿಕೊಂಡು … ಈ ಲೇಖನವನ್ನ ನಮಗೆ ಕೊಟ್ಟಿದ್ದೀರಾ. ಕೈಹಿಡಿದು ಆ ರೋಮಾಂಚನಕಾರಿ ಜಲಪಾತದೆಡೆಗೆ ನಡೆಸಿದ್ದೀರಾ. ಎಂತಹ ಉತ್ತಮ ಬರಹ! ಬಹು ಕೃತಜ್ಞತೆಗಳು. ವಿನತೆ ಶರ್ಮ

  Liked by 1 person

 5. ಉಮಾ ಅವರೇ
  ಎರಡು ವರ್ಷಗಳ ಹಿಂದೆ ನಾನು ಪೂರ್ಣಿಮಾ ದಕ್ಷಿಣ ಅಮೇರಿಕಾ ಪ್ರವಾಸ ಕೈಗೊಂಡಿದ್ದು ಇಗ್ವಾಸು ಜಲಪಾತವನ್ನು ನೋಡುವ ಅವಕಾಶ ಒದಗಿಬಂತು. ೨. ೫ ಕಿ ಮೀ ಉದ್ದದ ಈ ಜಲಪಾತವನ್ನು ( ಜಲಪಾತಗಳನ್ನು) ಮೇಲಿಂದ ಮತ್ತು ಸ್ಪೀಡ್ ದೋಣಿಗಳಲ್ಲಿ ತಳದಿಂದ ನೋಡಿ ಬೆರಗಾದೆವು. ೨೫೦ ರಿಂದ ೩೦೦ ಜಲಪಾತಗಳಾಗಿ ಧುಮ್ಮಿಕ್ಕುವ ಇಗ್ವಾಸು ಪ್ರಪಂಚದಲ್ಲಿ ಅತಿಸುಂದರ ಎನ್ನುವುದನ್ನು ಸಮ್ಮತಿಸುತ್ತೇನೆ. ನಿಮ್ಮ ಲೇಖನ ಹಾಗು ಚಿತ್ರಗಳು ಇಗ್ವಾಸುವಿನ ನನ್ನ ಹಲವಾರು ಸವಿನೆನಪುಗಳನ್ನು ಕೆದಕಿವೆ. ಅಮೇರಿಕದ ಮಾಜಿ ಅಧ್ಯಕ್ಷರ ಪತ್ನಿ ಎಲೆನಾರ್ ರೂಸೊವೆಲ್ಟ್ ಇಗ್ವಾಸುಗೆ ಭೇಟಿ ನೀಡಿದಾಗ ನಯಾಗರ ಜಲಪಾತಕ್ಕೆ ಹೋಲಿಸಿ ‘ಬಡ ನಯಾಗರವೇ’ ಎಂದು ಉದ್ಗಾರ ಮಾಡಿದಳಂತೆ!

  Liked by 1 person

 6. ಉಮಾರವರಿ೦ದ ಇನ್ನೊ೦ದು ಅತ್ಯುತ್ತಮ ಬರಹ.
  ಇಗ್ವಜು ಜಲಪಾತವನ್ನು ನೋಡಬೇಕೆ೦ದಿರುವವರಿಗೆ ಏಲ್ಲಾ ರೀತಿಯ ವಿವರಣೆ ಈ ಲೇಖನದಲ್ಲಿದೆ. ಜಲಪಾತವನ್ನು ಹೇಗೆ ತಲುಪಬಹುದು, ಅದಕ್ಕೆ ಬೇಕಾಗುವ ಸಮಯ, ಸಿಗಬಹುದಾದ ಆಹಾರ ಪ್ರತಿಯೊ೦ದರ ಮಾಹಿತಿ ಇದರಲ್ಲಿದೆ. ಇದನ್ನು ಒದಿದ ಮೇಲೆ, ಸ್ಥಳೀಯ ಗೈಡ್ ನ ಅವಶ್ಯಕತೆಯಿದೆ ಅನ್ನಿಸುವುದಿಲ್ಲ.
  ಜಲಪಾತ, ಸಸ್ಯಸಿರಿ, ಹಕ್ಕಿಗಳ ಮತ್ತು ಪ್ರಾಣಿಗಳ ಬಳಗ ಪ್ರತಿಯೊ೦ದನ್ನು ನೋಡಿ ’ಜೋಗದ ಸಿರಿ ಬೆಳಕಿನಲ್ಲಿ’ ನೆನಪಿಗೆ ಬ೦ದದ್ದು ಲೇಖಕಿಯ ಕವಿಹೃದಯವನ್ನು ಪರಿಚಯಿಸಿದ್ದಷ್ಟೇ ಅಲ್ಲದೆ, ಒದುಗರ ಮನವನ್ನೂ ಮೀಟುತ್ತದೆ.
  ಧನ್ಯವಾದಗಳು ಉಮಾ.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.