ನಾಡಿನಂದ ಈ ದೀಪಾವಳಿ ಬ೦ತು …

ಪ್ರಿಯ ಅನಿವಾಸಿ ಓದುಗರೆ, ನಿಮಗೆಲ್ಲ ದೀಪಾವಳಿ ಹಬ್ಬದ ಶುಭಾಶಯಗಳು.

ಇದನ್ನು ನಾಡಹಬ್ಬವೆ೦ದು ಕರೆದರೆ ತಪ್ಪಾಗಲಾರದು. ಭಾರತದ ಪ್ರತಿಭಾಗದಲ್ಲು ಹಿ೦ದುಗಳಷ್ಟೆ ಅಲ್ಲದೆ, ಬೇರೆ ಬೇರೆ ಧರ್ಮದವರೂ ಸಹ ಆಚರಿಸಿವ ಬೆಳಕಿನ ಹಬ್ಬ ಇದು. ನಮ್ಮ ದೇಶದಲ್ಲಿ ಮಾತ್ರವಲ್ಲ, ಮಲೇಸಿಯಾ, ಮಾರಿಷಸ್ ಮತ್ತು ಸಿ೦ಗಪೊರ್ ಗಳಲ್ಲಿ ಸಹ ಈ ಹಬ್ಬಕ್ಕೆ ಸರ್ಕಾರಿ ರಜಾವಿದೆಯೆ೦ದು ಕೇಳಿದರೆ ಈ ಹಬ್ಬದ ಜನಪ್ರಿಯತೆ ಅರಿವಾಗುತ್ತದೆ.

ಈಗ ಪಾಶ್ಚಿಮಾತ್ಯ ದೇಶಗಳಲ್ಲೂ ಭಾರತೀಯರ ಸ೦ಸ್ಕೃತಿಯನ್ನು ಗುರುತಿಸುವ, ಮನ್ನಿಸುವ ದಿಸೆಯಲ್ಲಿ ಬಹಳ ಪ್ರಯತ್ನಗಳು ನಡೆಯುತ್ತಿವೆ, ದೀಪಾವಳಿ ಅಥವಾ ದೀವಾಳಿ ಹಬ್ಬವನ್ನು ಆಚರಿಸುವುದು ಇದರ ಮುಖ್ಯ ಗುರುತಾಗಿದೆ. ಯು.ಕೆ ದೇಶದ ಬಹಳಷ್ಟು ನಗರಗಳಲ್ಲಿ, ಸ್ಥಳೀಯ ಕೌನ್ಸಿಲ್ ಗಳು ಪ್ರತಿವರ್ಷ ಇದರ ಆಚರಣೆಯನ್ನು ಪ್ರೊತ್ಸಾಹಿಸಿ, ಯೋಜಿಸಿ ಫಲಪ್ರದವಾಗಿವೆ.

ದಕ್ಷಿಣ ಭಾರತದವರು, ನರಕ ಚತುರ್ದಶಿ, ಬಲಿಪಾಡ್ಯಮಿಯನ್ನು ಆಚರಿಸಿದರೆ, ಉತ್ತರ ಭಾರತದವರು ಲಕ್ಷ್ಮಿಪೊಜೆ ಮತ್ತು ಅನ್ನಕೂಟವನ್ನು ಆಚರಿಸುತ್ತಾರೆ. ಒಟ್ಟಿನಲ್ಲಿ ಈ ಹಬ್ಬವನ್ನು ಆಚರಿಸುವುದಕ್ಕೆ ಬಹಳ ಕಾರಣಗಳಿವೆ. ದುಷ್ಟಶಕ್ತಿಗಳ ಮೇಲೆ ಶಿಷ್ಟಶಕ್ತಿಗಳು ಗಳಿಸಿದ ವಿಜಯದ ಸ೦ಕೇತ ಈ ಹಬ್ಬ.

ಪಟಾಕಿ ಪ್ರತಾಪ

ಪಟಾಕಿಯ ಶಬ್ದ ಕೇಳಿಬರದಿದ್ದರೆ ಅದು ದೀಪಾವಳಿಯೆ೦ದೆನಿಸುವುದಿಲ್ಲ. ಚಿನುಕುರುಳಿ ಪಟಾಕಿ, ಸುರು ಸುರು ಬತ್ತಿ ಸಣ್ಣ ಮಕ್ಕಳದಾದರೆ, ರಾಕೆಟ್, ಚಕ್ರಗಳು ಹದಿಹರೆಯದವರ ಸ್ವತ್ತು.  ಸುದರ್ಷನ ಚಕ್ರ ಎತ್ತೆತ್ತಲೋ ತಿರುಗಿ, ರಾಕೆಟ್ ಎನ್ನೆಲ್ಲಿಗೂ ಹಾರಿ ಅನಾಹುತ ಮಾಡಿದ ಕತೆಗಳು ಪ್ರತಿಯೊಬ್ಬರ ಅನುಭವಗಳೆ೦ದರೆ ಅತಿಶಿಯೋಕ್ತಿಯಲ್ಲವೆ೦ದು ಹೇಳಬಹುದು.

ದೀಪಾವಳಿ, ಆ೦ಗ್ಲರ ಹಾಲೋವೀನ್ ಹಬ್ಬದ ಸಮಯದಲ್ಲೇ ಬರುವುದರಿ೦ದ ಎಲ್ಲಾ ದೊಡ್ಡ ಮಾರುಕಟ್ಟೆ ಗಳಲ್ಲಿ ಪಟಾಕಿಗಳು ಇಲ್ಲಿಯೂ ಲಭ್ಯವಿದ್ದು, ಪಟಾಕಿಯ ಪ್ರತಾಪ ಯು,ಕೆ ಯಲ್ಲೇನು ಕಡಿಮೆಯಿಲ್ಲವೆ೦ದು ಹೇಳಬಹುದು.

ಸಿಹಿ ಮತ್ತು ಸಿಹಿ

ವಿಧವಿಧವಾದ ಸಿಹಿ ತಿನಿಸುಗಳನ್ನು ತಯಾರಿಸಿ, ಬ೦ಧುಬಾ೦ಧವರ ಮತ್ತು ಸ್ನೇಹಿತರ ಜೊತೆ ಹ೦ಚಿ ತಿನ್ನುವುದು ಈ ಹಬ್ಬದ ಇನ್ನೊ೦ದು ವಿಶೇಷ. ಅ೦ಗಡಿಗಳು, ಕಛೇರಿಗಳಲ್ಲಿ ಸಹ ಈ ದಿನ ಸಿಹಿಯನ್ನು ಹ೦ಚಿ ತಿನ್ನುವ ಪದ್ಧತಿಯಿದೆ.

ಇ೦ಗ್ಲೆಂಡ್ ಗೆ ಬ೦ದ ನ೦ತರ ಭಾರತದ ವಿವಿಧ ಭಾಗದಿ೦ದ ಬ೦ದವರು ಹೇಗೆ ಬೇರೆ, ಬೇರೆ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ೦ದು ಅರಿವಾಗುತ್ತಿದೆ.

ನಮ್ಮ ರಾಜ್ಯದಲ್ಲಿಯೂ ಬೇರೆ, ಬೇರೆ ಪ್ರಾ೦ತ್ಯದಲ್ಲಿ ಹಬ್ಬವನ್ನು ಅವರದೇ ಆದ ಪದ್ಧತಿಯಲ್ಲಿ ಆಚರಿಸುತ್ತಾರೆ. ರಾಜಧಾನಿ ಬೆ೦ಗಳೂರಿನ ಸುತ್ತ ಮುತ್ತ ಒ೦ದು ರೀತಿಯಾದರೆ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಈ ಹಬ್ಬವನ್ನು ಆಚರಿಸುವ ವಿಧಾನ ಇನ್ನೂ೦ದು ರೀತಿ.

ಡಾ// ಅರವಿ೦ದ ಕುಲಕರ್ಣಿಯವರು ಮತ್ತು ಡಾ// ವೈಶಾಲಿ ದಾಮಲೆಯವರು ಅವರ ವಿಶಿಷ್ಟ ರೀತಿಯ ಆಚರಣೆಯನ್ನು ನಮಗೆ ಪರಿಚಯ ಮಾಡಿಕೊಡುತ್ತಾರೆ

1. ನಮ್ಮ ಉತ್ತರ ಕರ್ನಾಟಕದ ದೀಪಾವಳಿ 

ನಮ್ಮ ಸಾಂಪ್ರದಾಯಿಕ ಮನೆಯಲ್ಲಿ 7 ದಶಕಗಳ ಹಿಂದೆ ನಾನು ಚಿಕ್ಕವನಿದ್ದಾಗ ಅಜ್ಜ, ತಂದೆ ತಾಯಿಯರ ಜೊತೆಗೆ ದೀಪಾವಳಿ ಹಬ್ಬ ಆಚರಿಸಿ ಆನಂದಪಟ್ಟ ದಿನಗಳ ನೆನಪು  ಇನ್ನೂ ಹಸಿರಾಗಿದೆ. ಅಂದು ಎಲ್ಲ ಮನೆಯ ಮುಂದೆ ಆಕಾಶ ಕಂದೀಲುಗಳು ಝಗ ಝಗಿಸುತ್ತಿದ್ದವು. ಹಿರಿಯರು,ಮಕ್ಕಳು, ಸೂರ್ಯೋದಯದ ಮುನ್ನ ಎದ್ದು ದೀಪಾವಳಿ ಹಬ್ಬ ಆಚರಿಸುತ್ತಿದ್ದರು. ಹಿರಿಯರು ಕೊಟ್ಟ ಉಡುಗರೆಯಾದ  ಹೊಸ ಬಟ್ಟೆ, ಕೋಟು, ಅಂಗಿ, ಚಣ್ಣಗಳನ್ನು ಉತ್ಸುಕತೆಯಿಂದ ಹಾಕಿಕೊಂಡು, ತಲೆಯ ಮೇಲೆ ಟೋಪಿ ಹಾಕಿ ಎಲ್ಲ ಮಕ್ಕಳು ಸಾಲಾಗಿ ನೆಲದಮೇಲೆ ಕುಳಿತಿರುತ್ತಿದ್ದೆವು. ಮನೆ ತುಂಬ ಎಣ್ಣೆ ದೀವಿಗೆ ಸಾಲಾಗಿ ಇಟ್ಟು, ದೇವರ ಮುಂದೆ ರಂಗೋಲಿ ಹಾಕಿ, ತಾಯಿಯ ಕೈಯಲ್ಲಿ ಆರತಿ ತಾಟು ಹಿಡಿದು ತಂದೆ, ಅಜ್ಜ ಮತ್ತು ಎಲ್ಲ ಮಕ್ಕಳ ಕೈಯಲ್ಲಿ ಬೆಳ್ಳಿಯ ರೂಪಾಯಿಯನ್ನಿಟ್ಟು ಆರತಿ ತಾಟಿನಲ್ಲಿ ಹಾಕಬೇಕೆಂದು ಹೇಳುತ್ತಿದ್ದರು.

ನಮ್ಮಮನೆಯಲ್ಲಿ ದೀಪಾವಳಿ ಆರತಿ -ಚಿತ್ರ: ಅರವಿಂದ ಕುಲಕರ್ಣಿ

ನಾವೆಲ್ಲರೂ ಹಾಕಿಕೊಂಡ ಟೊಪ್ಪಿಗೆಗಳನ್ನು ತೆಗೆದು, ತಲೆಗೆ ಸುವಾಸನೆಯ ಎಣ್ಣೆ ಹಚ್ಚಿ, ಹಣಿಗೆ ಕುಂಕುಮ ಇಟ್ಟು ಆರತಿ ಹಾಡನ್ನು ಹಾಡುತ್ತ ತಾಯಿ ನಮ್ಮ ತಂಗಿಯರೊಂದಿಗೆ ಆರತಿ ಮಾಡುತ್ತಿದ್ದಳು. ಅದಾದ ನಂತರ ಎಲ್ಲರೂ ಮೊದಲು ದೇವರಿಗೆ, ಆಮೇಲೆ ಅಜ್ಜ, ತಂದೆ ತಾಯಿ ಹಾಗು ಉಳಿದೆಲ್ಲ ಹಿರಿಯರಿಗೆ ಸಾಷ್ಟಾಂಗ ನಮಸ್ಕಾರ ಮಾಡುವ ಸಂಪ್ರದಾಯ ಮನಸಾ ಪಾಲಿಸುತ್ತಿದ್ದೆವು. ಆಮೇಲೆ ತಾಯಿ ಅಕ್ಕರೆಯಿಂದ ಮಾಡಿದ ಉಂಡಿ, ಚಕ್ಕಲಿ, ಶಂಕರಪಾಳೆ, ಧಾರವಾಡದ ಅವಲಕ್ಕಿ, ಬಿಸಿ ಬಿಸಿ ಉಪ್ಪಿಟ್ಟುಗಳೆನ್ನೆಲ್ಲ ಹೊಟ್ಟೆ ಬಿರಿಯುವ ಹಾಗೆ ತಿಂದು ತೇಗಿದ ನಂತರ ಎಣ್ಣೆ ಹಚ್ಚಿ ಸ್ನಾನ ಮಾಡುತ್ತಿದ್ದೆವು. ಹಬ್ಬದ ನಿಮಿತ್ತ ಕೆಲವು ದಿವಸ ಶಾಲೆಗೆ ಸೂಟಿ! ಹೀಗಾಗಿ ಹೊಟ್ಟೆ ಭಾರ ಕಡಿಮೆ ಮಾಡಲು ಗೆಳೆಯರೊಂದಿಗೆ ಆಟ. ಮತ್ತೆ ಹಸಿವು. ಪುನಃ ಬಾಯಲ್ಲಿ ಜೊಲ್ಲು ಸುರಿಸುತ್ತ ಮನೆಗೆ ಬಂದು ಹೋಳಿಗೆ, ಚೀರುತಾ, ಪೂರಿ ಭಾಜಿ, ಚಿತ್ರಾನ್ನ, ತುಪ್ಪಾನ್ನ, ಮೊಸರನ್ನ ತಿಂದು ಮಜ್ಜಿಗೆಕುಡಿದು ಪುನಃ ಆಟಕ್ಕೆ ಹಾಜರ!

ಈ ಸಾಪ್ರದಾಯವನ್ನು ಆಂಗ್ಲ ದೇಶದಲ್ಲಿ ಹುಟ್ಟಿ, ಬೆಳೆದ ಮಕ್ಕಳು, ಮೊಮ್ಮಕ್ಕಳೊಂದಿಗೆ ಪ್ರತಿ ವರುಷ ತಪ್ಪದೆ ಇನ್ನೂ ಆಚರಿಸುತ್ತಿರುವೆವು. ಆದರೆ ಇಷ್ಟೇ ಬದಲಾವಣೆ ಎಂದರೆ ಹೊರಗಡೆ ಕಂದೀಲಿನ ಬದಲು ಎಲೆಕ್ಟ್ರಿಕ್, ಒಳಗೆ ಎಣ್ಣೆಯ ಬದಲು ಮೋಂಬತ್ತಿ ದೀಪ! ಬೆಳ್ಳಿ ರೂಪಾಯಿಯ ಬದಲು ’ಬೆಳ್ಳಿ-ಬಂಗಾರ’ ಮಿಶ್ರಿತ ಪೌಂಡ್ ನಾಣ್ಯ ಮಕ್ಕಳ ಕೈಯಲ್ಲಿ! ತಲೆಯ ಮೇಲೆ ಕರಿ ಟೋಪಿಯ ಬದಲು ಬಿಳಿ ಟೋಪಿ, ಬಿಳಿಯರ ನಾಡಿನಲ್ಲಿ. ಆದರೂ ನಸುಕಿನಲ್ಲೆದ್ದು ಅದೇ ಆರತಿ, ತಿಂಡಿ, ತಿನಸು, ಎಣ್ಣೆ ಹಚ್ಚಿಸಿಕೊಂಡು ಸ್ನಾನ, ಬದಲಾಗಿಲ್ಲ! ಅಲ್ಲದೆ ಮಕ್ಕಳಿಗೆಲ್ಲ ದೀಪಾವಳಿ ಹಬ್ಬದ ಕಥೆ, ಮಹತ್ವಗಳ ಬೋಧನೆ ಮಾಡಲು ಯತ್ನಿಸುತ್ತಿರುವೆವು. ಮುಂದಿನ ಪೀಳಿಗೆಯಯಲ್ಲೂ ನಮ್ಮ ಉತ್ತರ ಕರ್ನಾಟಕದ ಪದ್ಧತಿ ಉಳಿಯಲಿ ಎಂದು ಆಶಿಸುವೆ.

ಡಾ ಅರವಿಂದ ಕುಲಕರ್ಣಿ, ರಾಡ್ಲೆಟ್, ಯು ಕೆ.

 2. ನಮ್ಮ ದಕ್ಷಿಣ ಕನ್ನಡ ದೀಪಾವಳಿ

ಇಂಗ್ಲೆಂಡಿನಲ್ಲಿ ಆಗಲೇ ಚಳಿ ಶುರುವಾಗಿದೆ, ಶರದೃತುವಿನ ಆರಂಭವಾಗಿ  ಮರಗಳೆಲ್ಲ ಬೋಳಾಗುತ್ತಿವೆ. ಇನ್ನೇನು, ಗಡಿಯಾರದ ಮುಳ್ಳು ಹಿಂದೆ ಸರಿದು ದಿನದ ಹದಿನಾರು ಗಂಟೆಗಳನ್ನು ಕತ್ತಲಿನಲ್ಲಿ ಕಳೆಯಬೇಕಲ್ಲಾ ಎಂಬ ಬೇಸರ ಎಲ್ಲರನ್ನೂ ಕಾಡತೊಡಗಿದೆ. ಕತ್ತಲೆಯ ದಿನಗಳ ಬಗ್ಗೆ ಇಷ್ಟು ಬೇಗ ಯೋಚಿಸಿ ಖಿನ್ನರಾಗದಿರಿ ಎನ್ನಲೇನೋ ಎಂಬಂತೆ ಈ ಬಾರಿ ನಮ್ಮ ಬೆಳಕಿನ ಹಬ್ಬ ಒಂದು ತಿಂಗಳಿನಷ್ಟು ಮುಂಚಿತವಾಗಿಯೇ ಬಂದಿದೆ.

ಚಿತ್ರಗಳು: ವೈಶಾಲಿ ದಾಮಲೆ

ನಾನು ಹುಟ್ಟಿ-ಬೆಳೆದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೀಪಾವಳಿಯ ಆಚರಣೆಗೆ ತನ್ನದೇ ಆದ ವೈವಿಧ್ಯ ಹಾಗೂ ಪ್ರಾದೇಶಿಕ ಸೊಗಡಿದೆ. ಆಶ್ವಯುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯ ದಿನ ನಮ್ಮಲ್ಲಿ ದೀಪಾವಳಿಯ ಸಂಭ್ರಮ ಶುರುವಾಗುತ್ತದೆ. ಆದಿನ ಸಂಜೆ ಬಚ್ಚಲು ಮನೆಯ ಒಲೆಯನ್ನು ಸಾರಿಸಿ, ಎದುರುಗಡೆ ರಂಗೋಲಿ ಹಾಕುತ್ತಾರೆ. ನೀರಿನ ಹಂಡೆಯನ್ನು ಶುಚಿಗೊಳಿಸಿ, ಅರಿಶಿನ- ಕುಂಕುಮವನ್ನು ಏರಿಸಿ, ಮನೆಯ ಅಂಗಳದಲ್ಲೇ ಬೆಳೆದ ಸೌತೆಯ ಬಳ್ಳಿ ಹಾಗೂ ಥರ-ಥರದ ಹೂವುಗಳಿಂದ ಹಂಡೆಗೆ ಶೃಂಗಾರ ಮಾಡುತ್ತಾರೆ. ನರಕ ಚತುರ್ದಶಿಯ ದಿನ ಪ್ರಾತಃಕಾಲ ಮನೆಯ ಸದಸ್ಯರೆಲ್ಲ ಈ ಹಂಡೆಯಲ್ಲಿ ಕಾಯಿಸಿದ ನೀರಿನಲ್ಲಿ ತೈಲಾಭ್ಯಂಗ  ಮಾಡುವುದು ವಾಡಿಕೆ. ದೀಪಾವಳಿಗೆ ದೀಪಗಳು ಎಷ್ಟು ಮುಖ್ಯವೋ, ದಕ್ಷಿಣ ಕನ್ನಡಿಗರಿಗೆ ಅಷ್ಟೇ ಮುಖ್ಯ ದೋಸೆ. ದೇವರಿಗೆ ದೋಸೆ ಹಾಗೂ ಸಿಹಿ ಅವಲಕ್ಕಿಯ ನೈವೇದ್ಯ ದೀಪಾವಳಿಯ ವಿಶೇಷ. ಅಕ್ಕಿ, ತೆಂಗಿನ ಕಾಯಿ ಹಾಗೂ ಬೆಲ್ಲವನ್ನು ಉಪಯೋಗಿಸಿ ಮಾಡುವ ಖಾದ್ಯಗಳು ದಕ್ಷಿಣ ಕನ್ನಡದಲ್ಲಿರುವಷ್ಟು ಬಹುಶಃ ಇನ್ನೆಲ್ಲೂ ಇಲ್ಲವೇನೋ. ನಾವು ಮೂಲತಃ ರೈತವರ್ಗಕ್ಕೆ ಸೇರಿದ ಸಮುದಾಯವಾಗಿದ್ದು, ಅಕ್ಕಿ-ಕಾಯಿಗಳನ್ನು ಮನೆಯಲ್ಲೇ ಬೆಳೆಯುತ್ತಿದ್ದುದರಿಂದ ಹಾಗೂ ಹೊರಗಿನಿಂದ ದುಬಾರಿ ಸಾಮಾನುಗಳನ್ನು ತಂದು ಹಬ್ಬವನ್ನಾಚರಿಸುವಷ್ಟು ಆರ್ಥಿಕ ಅನುಕೂಲ ಹಿಂದಿನ ಕಾಲದಲ್ಲಿ ಇರಲಿಲ್ಲವಾದ್ದರಿಂದ ದೋಸೆ ಮತ್ತು ಸಿಹಿ- ಅವಲಕ್ಕಿಯನ್ನು ದೀಪಾವಳಿಯ ಸಮಯದಲ್ಲಿ ವಿಶೇಷ ಅಡುಗೆಯಾಗಿ ಮಾಡುವ ಸಂಪ್ರದಾಯ ಶುರುವಾಗಿರಬೇಕು ಎಂದು ನಮ್ಮ ತಂದೆ-ತಾಯಿ  ಚಿಕ್ಕಂದಿನಲ್ಲಿ ಹೇಳಿದ ನೆನಪು. ತುಳುನಾಡಿನ ಒಡೆಯನೆಂದು ಕರೆಯಲಾಗುವ ಬಲಿ ಚಕ್ರವರ್ತಿಯು ಪ್ರತಿವರ್ಷ ದೀಪಾವಳಿಯ ಸಂದರ್ಭದಲ್ಲಿ ಭೂಲೋಕಕ್ಕೆ ಬರುತ್ತಾನೆಂದು ಪ್ರತೀತಿ. ದೀಪಾವಳಿ ಹಬ್ಬದಲ್ಲಿ ಬಲಿಚಕ್ರವರ್ತಿಯನ್ನು ಭೂಮಿಗೆ ಸ್ವಾಗತಿಸಿ, ಪೂಜಿಸುವ ಬಲೀಂದ್ರ ಪೂಜೆ ತುಳುನಾಡಿನ ವಿಶಿಷ್ಟ ಆಚರಣೆ. ಮರದ ಕೊಂಬೆಗಳಿಂದ ತಯಾರಿಸಿದ ಆಕೃತಿಯೊಂದನ್ನು ಹೂ-ಹಾರಗಳಿಂದ ಅಲಂಕರಿಸಿ, ಅದರ ಮೇಲೆ ದೀಪವನ್ನಿಟ್ಟು ಪೂಜಿಸುತ್ತಾರೆ. ದೀಪರೂಪಿ ಬಲಿಚಕ್ರವರ್ತಿಗೆ ಅಕ್ಷತೆ ಕಾಳು ಹಾಕುತ್ತಾ ತುಳುಭಾಷೆಯ ಈ  ನುಡಿಗಟ್ಟನ್ನು ಹೇಳುತ್ತಾರೆ:

ಅಳೀಂದ್ರ ದೇವೆರೇ ಬಲೀಂದ್ರ ದೇವೆರೇ

ಆ ರಾಜ್ಯೊಂತಾ ಫೊಲಿ ಕೊಣೊಫಾಡ್ಲೆ

ಈ ರಾಜ್ಯಂತಾ ಬಲಿ ಕೊಣೊಪೋಲೆ

ಅಳೀಂದ್ರಾ ಬಲೀಂದ್ರಾ ಕೂಊಊಊಊಊ

ಬಲಿಚಕ್ರವರ್ತಿಯೇ, ಪಾತಾಳಲೋಕದ ಸಂಪತ್ತನ್ನು ನಮ್ಮ ಭೂಲೋಕಕ್ಕೂ ತಂದುಹಾಕು, ನಮ್ಮ ಪ್ರೀತಿಪೂರ್ವಕ ಕಾಣಿಕೆಗಳನ್ನು ಸ್ವೀಕರಿಸಿ ಸಂತೃಪ್ತನಾಗು ಎಂಬುದು ಇದರ ಭಾವಾರ್ಥ. ಇದನ್ನು ಹೇಳಿ ಕೊನೆಗೆ ಕೂ…….. ಎಂದು ಕೂಗುವಾಗ ಯಾರು ಜೋರಾಗಿ ಹಾಗೂ ಹೆಚ್ಚು ಹೊತ್ತು ಕೂಗುತ್ತಾರೆ ಎಂದು ಮನೆ ಮಕ್ಕಳ ನಡುವೆ ನಡೆಯುವ ಸ್ಪರ್ಧೆ ಹಬ್ಬದ ಮೆರುಗನ್ನು ಇನ್ನಷ್ಟು  ಹೆಚ್ಚಿಸುತ್ತದೆ. ಬಲಿಪಾಡ್ಯಮಿಯಂದು ನಡೆಸುವ ಗೋಪೂಜೆ, ಹಬ್ಬದ ನನ್ನ ಅಚ್ಚುಮೆಚ್ಚಿನ ಆಚರಣೆ. ವರ್ಷವಿಡೀ ನಮ್ಮ ಹೊಲವನ್ನು ಹಸನಾಗಿಸಿ, ನಮಗೆ ಹಾಲು, ಬೆಣ್ಣೆಗಳನ್ನು ಕೊಟ್ಟು ಸಾಕಿ-ಸಲಹುವ ಕಾಮಧೇನುವಿಗೆ ಮಾಡುವ ಪೂಜೆ, ನಾವು ಅದಕ್ಕೆ ಅರ್ಪಿಸುವ ಕೃತಜ್ಞತೆಯ ಸಂಕೇತ ಎಂದು  ನನ್ನ ಭಾವನೆ. ಮನೆಯಲ್ಲಿ ಮಾಡಿದ ದೋಸೆ, ಅವಲಕ್ಕಿಗಳಲ್ಲಿ ಒಂದು ಪಾಲು ಮನೆಯ ಆಕಳುಗಳಿಗೇ ಮೀಸಲು. ಅರಿಶಿನ- ಕುಂಕುಮ, ಹೂ-ಹಾರಗಳಿಂದ ಸಿಂಗರಿಸಿಕೊಂಡ ಹಸುಗಳ, ಅದರಲ್ಲೂ ಪುಟ್ಟ ಕರುಗಳ ಚಂದ ನೋಡಲು ಎರಡು ಕಣ್ಣುಗಳು ಸಾಲದು. ದೀಪಾವಳಿಯ ಸಂದರ್ಭದಲ್ಲಿ ದೀಪ ಬೆಳಗುವುದರಿಂದ ನಮ್ಮ ಮನೆ-ಮನಗಳಲ್ಲಿ ತುಂಬಿದ ಅಂಧಕಾರ, ಅಜ್ಞಾನಗಳು  ಮಾತ್ರವಲ್ಲ ಎಲ್ಲಾ ಪಾಪಕರ್ಮಗಳೂ ನಿವಾರಣೆಯಾಗುವುವು ಎಂಬುದು ನಂಬಿಕೆ. ದಕ್ಷಿಣ ಕನ್ನಡದಲ್ಲಂತೂ ದೀಪಾವಳಿಯಿಂದ ಆರಂಭವಾಗಿ, ಕಾರ್ತಿಕ ಮಾಸದಾದ್ಯಂತ ಹಲವು ದೇವಸ್ಥಾನಗಳಲ್ಲಿ ದೀಪೋತ್ಸವಗಳು ನಡೆಯುತ್ತವೆ, ಲಕ್ಷ-ಲಕ್ಷ ದೀಪಗಳು ಬೆಳಗುತ್ತವೆ. ಈ ಸಮಯದಲ್ಲಿ ಹಚ್ಚಲಾಗುವ ಗೂಡುದೀಪ ಅಥವಾ ಆಕಾಶದೀಪವೂ ಕೂಡಾ ಕಾರ್ತಿಕ ಮಾಸದ ವಿಶೇಷ ಆಚರಣೆ. ನಮ್ಮ ತೋಟದಲ್ಲಿ ಬೆಳೆದ ಬಿದಿರು ಕಡ್ಡಿಗಳನ್ನು ವಿವಿಧ ಗಾತ್ರಗಳಲ್ಲಿತುಂಡರಿಸಿ, ಬಾಗಿಸಿ, ಅದಕ್ಕೆ ವಿಧವಿಧದ ಬಣ್ಣದ ಕಾಗದಗಳನ್ನು ಅಂಟಿಸಿ ನಮ್ಮ ತಂದೆಯವರು ಸುಂದರವಾದ ಆಕಾಶದೀಪವನ್ನು ತಯಾರಿಸುತ್ತಿದ್ದರು. ಅದರ ಒಳಗೆ ಹಣತೆ ಅಥವಾ ವಿದ್ಯುಚ್ಚಾಲಿತ ದೀಪವನ್ನು ಉರಿಸಿ, ಮನೆಯ ಎದುರು ನೇತುಹಾಕುತ್ತಿದ್ದೆವು. ಮನೆಯ ಅಂಗಳದಲ್ಲಿ ಕೂತು ಈ ಗೂಡುದೀಪ ಹಾಗೂ ಹಣತೆಗಳು  ಪ್ರಜ್ವಲಿಸುವುದನ್ನು ನೋಡುವಾಗ ಮನಸ್ಸಿಗೆ ಸಿಗುತ್ತಿದ್ದ  ಶಾಂತಿ ಹಾಗೂ ಪ್ರಫುಲ್ಲತೆ ಅವರ್ಣನೀಯ.

ಹೀಗೆ ನನ್ನ ಬಾಲ್ಯದ ನೆನಪುಗಳಲ್ಲಿ ವಿಶೇಷ ಮಹತ್ವ ಪಡೆದಿರುವ ದೀಪಾವಳಿಯ ಆಚರಣೆಯನ್ನು ನಾವು ಈ ದೇಶದ ಇತಿ-ಮಿತಿಗಳಲ್ಲೇ ಆಚರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕೆಲವು ವರ್ಷಗಳಿಂದ ನಮ್ಮೊಂದಿಗೆ ಹಬ್ಬದ ಆಚರಣೆಯಲ್ಲಿ ಭಾಗಿಗಳಾಗುವ ನಮ್ಮ ಸ್ಥಳೀಯ ಸ್ನೇಹಿತರು ಈಗೀಗ ಹಬ್ಬಕ್ಕೆ ಒಂದು ತಿಂಗಳು ಮೊದಲೇ ನಮಗೊಂದು ರಿಮೈಂಡರ್ ಕಳಿಸುತ್ತಾರೆ. ಮಕ್ಕಳು ಮಾತ್ರವಲ್ಲ, ದೊಡ್ಡವರೂ ಕೂಡಾ ಭಾರತೀಯ ಉಡುಗೆ-ತೊಡುಗೆಗಳನ್ನು ತೊಟ್ಟು, ಪಟಾಕಿ ಒಡೆದು ಸಂಭ್ರಮಿಸುತ್ತಾರೆ. ನಾನು ಬಿಡಿಸಿದ ರಂಗೋಲಿಯಲ್ಲಿ ಬಣ್ಣ ತುಂಬುತ್ತಾರೆ. ತಮ್ಮ ಮನೆಯಲ್ಲಿ ನಮಗೆಂದು ಕೇಕ್, ಕುಕೀಗಳನ್ನು ತಯಾರಿಸುತ್ತಾರೆ; ಉಡುಗೊರೆ, ಶುಭಾಶಯ ಪತ್ರಗಳೊಂದಿಗೆ ಇವನ್ನು ನಮಗೆ ಕೊಟ್ಟು ಶುಭ ಹಾರೈಸುತ್ತಾರೆ. ಭಾರತೀಯ ಆಚರಣೆಗಳ ಹಿಂದಿರುವ ಆಶಯ ಹಾಗೂ ನಮ್ಮ ಪೌರಾಣಿಕ ಕಥೆಗಳು ಸಾರುವ ಸಂದೇಶ ಎಷ್ಟು ಉನ್ನತವಾದುದು ಎನ್ನುತ್ತಾರೆ. ಶಾಲೆಗೆ  ಹೋಗುವ ಅವರ ಮಕ್ಕಳು ದೀಪಾವಳಿಯ ಆಚರಣೆಯ ಬಗ್ಗೆ ಕಥೆ, ಪ್ರಬಂಧಗಳನ್ನು ಬರೆದು ಅವರವರ ಶಾಲೆಯಲ್ಲಿ ಓದುತ್ತಾರೆ. ತನ್ಮೂಲಕ, ಒಂದು ದೀಪದಿಂದ ಇನ್ನೊಂದು ದೀಪವನ್ನು ಬೆಳಗುವ ದೀಪಾವಳಿಯ ಆಚರಣೆಗೆ ನಿಜವಾದ ಅರ್ಥ ಬರುವಂತೆ ಮಾಡಿದ್ದಾರೆ. ಔಡ್ರೆ  ಲಾರ್ಡ್ ಎಂಬ ಅಮೆರಿಕನ್ ಚಿಂತಕನ ಈ ಮಾತುಗಳು ಇಲ್ಲಿ ಬಹಳ ಪ್ರಸ್ತುತವೆನಿಸುತ್ತವೆ; ”It is not our differences that divide us. It is our inability to recognise, accept and celebrate those differences ”

ಮತಾಂಧತೆ, ಭಯೋತ್ಪಾದನೆಗಳಂಥ ದ್ವೇಷ, ದಳ್ಳುರಿಗಳಿಂದ ವಿಶ್ವವೇ ತತ್ತರಿಸುತ್ತಿರುವ ಈ ಸಮಯದಲ್ಲಿ ಬೇರೆ ಸಂಸ್ಕೃತಿ ಹಾಗೂ ಮತ-ಧರ್ಮಗಳ ಬಗ್ಗೆ ತಿಳಿದುಕೊಳ್ಳುವ, ಅವುಗಳಲ್ಲಿರುವ ಒಳ್ಳೆಯ ಅಂಶಗಳನ್ನು ಗೌರವಿಸುವಂತಹ ಸ್ನೇಹಿತರು ಸಿಕ್ಕಿದ್ದು ನಮ್ಮ ಸೌಭಾಗ್ಯ. ಹಾಗೆಯೇ, ಈ ಹಬ್ಬದ ಆಚರಣೆಯ ಮೂಲಕ, ನಮ್ಮ ಸಂಪ್ರದಾಯಗಳ ಬಗ್ಗೆ ಅವರಲ್ಲಿ  ಅರಿವು, ಆಸಕ್ತಿ ಮೂಡಿಸುವಲ್ಲಿ. ತನ್ಮೂಲಕ  ‘ವಸುಧೈವ ಕುಟುಂಬಕಮ್’ ಎಂಬ ನಮ್ಮ ತತ್ವೋಕ್ತಿಯ ಮಹತ್ವವನ್ನು ಸಾರುವಲ್ಲಿ ಒಂದು ಸಣ್ಣ ಕೊಡುಗೆ ನೀಡಿದ್ದೇವೆ  ಎಂಬ ತೃಪ್ತಿಯೂ ಇದೆ.

ವೈಶಾಲಿ ದಾಮ್ಲೆ

 

8 thoughts on “ನಾಡಿನಂದ ಈ ದೀಪಾವಳಿ ಬ೦ತು …

  1. ಡಾ. ಅರವಿಂದ್ ಕುಲಕರ್ಣಿ ಅವರಿಗೆ, ನಮಸ್ಕಾರ ಹಾಗೂ ಧನ್ಯವಾದಗಳು. ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ದೀಪಾವಳಿ ಆಚರಣೆ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ.ನನಗೂ ಅದು ಕಂತ್ರಾಟನೇ ಅನಿಸುತ್ತಿತ್ತು.ಈಗ ಪರವಾಗಿಲ್ಲ. ನಿಮ್ಮ ಮತ್ತಷ್ಟು ಲೇಖನಗಳು ಬರಲಿ
    ಸರೋಜಿನಿ ಪಡಸಲಗಿ

    Like

  2. ಸರೋಜಿನಿ ಪಡಸಲಗಿ ಬರೆಯುತ್ತಾರೆ:

    ವಿದೇಶದಲ್ಲಿ ದ್ದು ಕೊಂಡೂ , ಪ್ರತಿ ಹಬ್ಬವನ್ನೂ ವೈಶಿಷ್ಟ್ಯ ಪೂರ್ಣ ವಾಗಿ ಆಚರಿಸುತ್ತಾ,ಅದರ ವಿವರಣೆ ಯನ್ನೂ ನೀಡುವ ಅನಿವಾಸಿ ಬಳಗಕ್ಕೆ ನನ್ನ ಅಭಿನಂದನೆಗಳು.ಜೊತೆಗೇ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.ದೀಪದಿಂದ ದೀಪ ಬೆಳಗಿಸಿ,ಮನೆ ಮನವನ್ನೂ ಬೆಳಗುವ ದೀಪಾವಳಿ ಸಂಭ್ರಮ ಸಡಗರದ ಹಬ್ಬ.ದೀಪಗಳ ಆವಳಿ ಅಂದರೆ ದೀಪಗಳ ಸಾಲು, ದೀಪಾವಳಿ ಅಂತ. ಅದಕ್ಕೇ ದೀಪಾವಳಿ ಹಬ್ಬ ಅಂದರೆ ದೀಪಗಳ ಹಬ್ಬ.ಉತ್ತರಕರ್ನಾಟಕದಲ್ಲಿ ಈ ಹಬ್ಬದ ಸಂಭ್ರಮ ವಿಶೇಷ ವಾದ್ದು.ಗೋವತ್ಸ ದ್ವಾದಶಿ ಯಿಂದ ಮೊದಲು ಗೊಂಡು ಜಲಪೂರ್ಣ ತ್ರಯೋದಶಿ ,ನರಕಚತುರ್ದಶಿ ,ಅಮಾವಾಸ್ಯೆ ಬಲಿಪಾಡ್ಯಮಿ ,ಭಾವ ಬಿದಿಗೆ ,ಅಕ್ಕನತದಿಗೆ ,ಅಂತ ಕಡೆ ಪಂಚಮಿ ವರೆಗೂ ಸಂಭ್ರಮ ಸಡಗರ.ನರಕಚತುರ್ದಶಿಯ ಆರತಿಯ ನಂತರ ಬೆಳಿಗ್ಗೆ ಐದು ಗಂಟೆಗೇ ಗಲ್ಲಿ ಗಲ್ಲಿಗಳಲ್ಲಿ ತಿರುಗಿ ಯಾರ ಮನೆ ಆಕಾಶ ಬುಟ್ಟಿ ದೊಡ್ಡದು, ಛಂದ, ಎಷ್ಟು ಮೇಲೆ ಏರಿಸಿ ದಾರೆ ಅಂತ ನೋಡಿ ಬರೋದು ಅವಕ ನಂಬರ್ ಕೊಡೋದು ದೊಡ್ಡ ಕೆಲಸ.ಅಷ್ಟಾದಮೇಲೆ ನೀರು ತುಂಬುವ ಹಬ್ಬದ ದಿನ ಪೂಜೆ ಗೊಂಡ ಹಂಡೆಯಲ್ಲಿ ಕಾದು ನೀರಿನಿಂದ ಅಭ್ಯಂಜನ.ಆಮೇಲೆ ಫರಾಳಧ ಗದ್ದಲ.ಆವಾಗೆಲ್ಲ ನನ್ನೂರಿನಲ್ಲಿ ಪಟಾಕಿ ಅವಾಂತರ ಇರಲಿಲ್ಲ.ಮಧ್ಯಾಹ್ನ ಪೂರಿ ಖೀರು ಊಟಾ ನೇ ಆಹೊತ್ತು.ಆಮೇಲೆ ಬರ್ತಾ ಇತ್ತು ನೋಡಿ ಪಗಡೆ ಯಾಟದ ಸಂಭ್ರಮ.ಏನು ಹೇಳಲಿ ಆ ಮಜಾ!! ಕಾಯಿ ಹಚ್ಚಿದಾಗ ಲೂ ಕೇಕೆ.ಇನ್ನು ಕಡತ ಮಾಡಿ ಗೆಲ್ಲಿ ಸಿದವರನ್ನು ಹೊತ್ತು ತಿರುಗಾಡುವ ದೂ ಇತ್ತು.ದಿನಾಲೂ ಒಬ್ಬೊಬ್ಬ ರಿ ಮನೆ ಫರಾಳ , ಪಗಡೆ.ಶಾಲೆ , ಅಭ್ಯಾಸ ತಮ್ಮ ಪಾಡಿಗೆ ತಾವಿರುತ್ತಿದ್ದವು.ಈಗ ನಾವೆಲ್ಲ ದೊಡ್ಡ ವರು, ಬೆಂಗಳೂರು ಸೇರಿ ದೇವೆ.ಆದರೂ ನನ್ನ ಎಲ್ಲ ಅಣ್ಣತಮ್ಮಂದಿರು, ತಂಗಿ ಜೊತೆ ಯಾಗಿ ಅದೇ ಗದ್ದಲ ಸಂಭ್ರಮ ಸಡಗರ ದೊಂದಿಗೆ ದೀಪಾವಳಿ ಆಚರಣೆ , ಪಗಡೆ ಯಾಟ ಬಿಟ್ಟಿಲ್ಲ.ಅಲ್ಪ ಬದಲಾವಣೆ ಉಂಟು.ಡಾ.ಕುಲಕರ್ಣಿ ಮತ್ತು ಡಾ.ವೈಶಾಲಿಯವರ ಬರಹಗಳು ನನ್ನನ್ನು ಈ ಎಲ್ಲ ಸಿಹಿ ನೆನಪು ಗಳನ್ನು ಮೆಲುಕು ಹಾಕುವಂತೆ ಮಾಡಿದವು.ಅವರ ವೈಶಿಷ್ಟ್ಯ ಪೂರ್ಣ ಬರಹಗಳಿಗೆ ಅಭಿನಂದನೆಗಳು ಜೊತೆಗೇ ಧನ್ಯವಾದಗಳು.ಸುಂದರ ಹಾಡಿನಿಂದ ಅಂದಗೊಳಿಸಿದ ಶ್ರೀವತ್ಸ ದೇಸಾಯಿ ಯವರಿಗೂ ನನ್ನ ಧನ್ಯವಾದಗಳು.ಇನ್ನೊಮ್ಮೆ ಅನಿವಾಸಿ ಬಳಗಕ್ಕೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

    ಸರೋಜಿನಿ ಪಡಸಲಗಿ.

    Like

    • ಸರೋಜಿನಿಯವರಿಗೆ,
      ನಮಸ್ಕಾರ .ನಿಮ್ಮಹಾಗೂ ಎಲ್ಲ ಓದುಗರ ಪ್ರತಿಕ್ರಿಯೆಗಳು ನನಗೆ ಮತ್ತಿಷ್ಟು ಬರೆಯಲು ಪ್ರೋತ್ಸಾಹನ ಹೆಚ್ಚಿಸುತ್ತಿದೆ.
      ನಮ್ಮ ಎಡಿಟೋರ ( ಡಾಕ್ಟರ್ ದಾಕ್ಷಾಯಣಿ) ಅವರು ನನಗೆ ಲೇಖನಗಳನ್ನು ನನ್ನ ಹಸ್ತಾಕ್ಷರದಲ್ಲಿ ಬರೆಯಲು ಅನುಮತಿ
      ಕೊಟ್ಟಲ್ಲಿ ಲೇಖನಗಳನ್ನು ಬೇಗ ಮುಗಿಸಲು ಸಾಧ್ಯವಾಗುವದು. ನನ್ನ yiLiವಯಸ್ಸಿನಲ್ಲಿ ತಂತ್ರಜಾಲದ ಕಂತ್ರಾಟದಲ್ಲಿ ಸಿಕ್ಕು ಪೇಚಾಡುತ್ತಿರುವೆ! ಕ್ಷಮಿಸಿ.

      ಅರವಿಂದ ಕುಲ್ಕರ್ಣಿ

      Like

  3. ನಮ್ಮ ಮುಖ್ಯ ಹಬ್ಬಗಳಲ್ಲೊಂದು ದೀಪಾವಳಿ ಎಂದ ಮೇಲೆ ಅದನ್ನು ಈ ಮೂರು ಲೇಖನಗಳಿಂದ ಗುರುತಿಸಿದ್ದು ಮುಖ್ಯ. ವಿಡಿಯೋ ಹಳೆಯ ನೆನಪುಗಳನ್ನು ತಂದುದು ಸಂತೋಷ. ಅಲ್ಪ ಸಮದಲ್ಲಿ ಲೇಖನಗಳನ್ನು ಒದಗಿಸಿದವರಿಗೆ ಅಭಿನಂದನೆಗಳು. ಪಾಲ್ಗೊಳ್ಳಲು ಅವಕಾಶ ಕೊಟ್ಟದ್ದಕ್ಕೆ ಕೃತಜ್ಞತೆಗಳು!

    Like

  4. ಕರ್ನಾಟಕದಲ್ಲೆ ಹುಟ್ಟಿ ಬೆಳೆದಿದ್ದರೂ ವಿವಿಧ ಭಾಗಗಳಲ್ಲಿ ದೀಪಾವಳಿ ಹೇಗೆ ಆಚರಿಸುತ್ತಾರೆ೦ದು ನನಗೆ ತಿಳಿದಿರಲಿಲ್ಲ.
    ಅರವಿ೦ದ್ ನೀವು ಪರನಾಡಿನಲ್ಲೂ, ಈ ಸ೦ಪ್ರದಾಯವನ್ನು ಉಳಿಸಿಕೊ೦ಡು ಹೋಗುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಪರ೦ಪರೆ ಮು೦ದುವರೆಯಲೆ೦ದು ಆಶಿಸುವೆ

    ವೈಶಾಲಿಯವರೆ, ದಕ್ಷಿಣಕನ್ನಡದ ದೀಪಾವಳಿಯ ಬಗ್ಗೆ ಬಹಳ ಚ೦ದದ ಪರಿಚಯ ಮಾಡಿಕೊಟ್ಟಿದ್ದೀರಿ.
    ಬಲಿ ಚಕ್ರವರ್ತಿಯ ನುಡಿಗಟ್ಟು ಬಹಳ ಚೆನ್ನಾಗಿದೆ. ನೀವು ಈ ಹಬ್ಬಕ್ಕೆ ತಯಾರಿಸುವ ಸಿಹಿ ಸಹ ಬಹಳ ವಿಶಿಷ್ಟವಾದದ್ದು.

    ಚಿತ್ರಗಳನಷ್ಟೇ ಅಲ್ಲದೆ, ವಿಡಿಯೊ ಸಹ ಸೇರಿಸಿ ಈ ಲೇಖನಕ್ಕೆ ಮೆರುಗು ಕೊಟ್ಟ ಡಾ// ಶ್ರೀವತ್ಸ ದೇಸಾಯಿಯವರಿಗೆ
    ಧನ್ಯವಾದಗಳು.

    Like

  5. ಸಮಯಕ್ಕೆ ತಕ್ಕ ಬರಹ. ಇಬ್ಬರೂ ಲೇಖಕರಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಕೃತಜ್ಞತೆಗಳು. ಲೇಖನಕ್ಕೆ ಸರಿ ಹೊಂದುವ ಯು-ಟ್ಯೂಬ್ ವಿಡಿಯೋ ಆರಿಸಿ ಹಾಕಿದ ಸಂಪಾದಕ ಬಳಗಕ್ಕೂ ಶ್ಲಾಘನೆ ಸಿಗಲೇಬೇಕು. ಹಳೆಯ ನೆನಪುಗಳನ್ನು ಮೆಲಕು ಹಾಕುತ್ತ, ವರ್ತಮಾನಕ್ಕೆ ಅದನ್ನು ತಳಕು ಹಾಕುವ ಉಚಿತತೆಯನ್ನು ಲೇಖಕರು ತಮ್ಮ ಬರಹಗಳಲ್ಲಿ ಉತ್ತಮವಾಗಿ ಪ್ರತಿಪಾದಿಸಿದ್ದಾರೆ.

    Liked by 1 person

  6. ದಾಕ್ಷಾಯಣಿಯವರಿಗೆ
    ದೀಪಾವಳಿಯ ಶುಭಾಶಯಗಳು. ಈ ಹಬ್ಬದ ಹಿನ್ನಲೆ ಹಾಗು ಕರ್ನಾಟಕದ ವಿವಿಧ ಭಾಗಗಳಲ್ಲಿ ಹೇಗೆ ಹಬ್ಬ ಆಚರಿಸುವರು ಎಂಬುವ ನಿಮ್ಮ ವಿಚಾರ ತುಂಬಾ ಆಕರ್ಷಣಿಯದು.
    ಧನ್ಯವಾದಗಳು.

    ಅರವಿಂದ ಕುಲ್ಕರ್ಣಿ

    Like

  7. ವೈಶಾಲಿಯವರಿಗೆ

    ದೀಪಾವಳಿಯ ಶುಭಾಶಯಗಳು. ನೀವು ದಕ್ಷಿಣ ಕನ್ನಡದಲ್ಲಿ ದೀಪಾವಳಿ ಹಬ್ಬವನ್ನು ಹೇಗೆ ಆಚರಿಸುತ್ತಿದ್ದೀರಿ ಎಂಬುದನ್ನು ಸಾಂಪ್ರದಾಯಕವಾಗಿ ವಿವರಿಸಿರುವಿರಿ. ಉತ್ತರ ಕನ್ನಡದ ಜನರಿಗೆ ಈದಾವದು ಗೊತ್ತಿರುವದಿಲ್ಲ. ಹೀಗೆಯೇ ಉಳಿದ ಭಾಗದ ಕನ್ನಡ ಅಭಿಮಾನಿಗಳು ತಮ್ಮ ತಮ್ಮ ಅನುಭವಗಳನ್ನು ಯೇಲ್ಲರಿಗೂ ಹಂಚಲು ಲೇಖನ ಬರೆಯಲು
    ಬಿನ್ನಹ. ಅಂದಲ್ಲಿ ಬಳಗದ ಭಾಂಧವ್ಯ ಭದ್ರವಾಗಿ ಬೆಳೆಯುವದು.
    ಪುನಃ ಎಲ್ಲ ಅನಿವಾಸಿ ಹಾಗು ಕನ್ನಡ ಬಳಗದ ಸದಸ್ಸಿರಿಗೆಲ್ಲ ದೀಪಾವಳಿಯ ಹಾರ್ದಿಕ ಶುಭಾಶಯಗಳು.

    ಅರವಿಂದ. ಕುಲ್ಕರ್ಣಿ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.