ಬದಲಾಗುತ್ತಿರುವ ಸಮಾಜದಲ್ಲಿ ವೃದ್ಧರು: ಒಂದು ಅವಲೋಕನ – ಡಾ. ಜಿ. ಎಸ್. ಶಿವಪ್ರಸಾದ್ ಬರೆದ ಲೇಖನ

ಈ ಅಕ್ಟೋಬರ್ ಒ೦ದನೆಯ ತಾರೀಖು ”ಅ೦ತರ ರಾಷ್ಟೀಯ ವೃದ್ಧರ ದಿನಾಚರಣೆ’’ ಯೆ೦ದು ಗುರುತಿಸಲಾಗಿದೆ. ಪ್ರಪ೦ಚದಾದ್ಯ೦ತ ವಯಸ್ಸಾದವರ ಸ೦ಖ್ಯೆ ಅತಿ ವೇಗದಲ್ಲಿ ಬೆಳೆಯುತ್ತಿದೆ. ವೃದ್ಧಾಪ್ಯ ಯಾರಿಗೂ ತಪ್ಪಿದ್ದಲ್ಲ. ಜೀವನದ ಈ ಹ೦ತವನ್ನು ಎದುರಿಸುವ ರೀತಿ ಒ೦ದೇ ರೀತಿಯಾಗಿಲ್ಲ. ಇದು ವಯಸ್ಸಾದವರ ಬಗ್ಗೆ ನಮಗಿರುವ ಅಭಿಪ್ರಾಯ, ಸಮಾಜ, ಮತ್ತು ಸ೦ಸ್ಖೃತಿಯನ್ನು ಅವಲ೦ಬಿಸಿದೆ. ಹಿರಿಯರನ್ನು ದೇಶದ ಹಿರಿಮೆಯೆ೦ದು ಗುರುತಿಸಿ,ಗೌರವಿಸುವ ಮನೋಭಾವ ನಮ್ಮಲ್ಲಿ ಮೂಡಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ದೇಶ, ಸಮಾಜ ಮತ್ತು ಹಿರಿಯರೂ ಸಹ ವೈಯುಕ್ತಿಕ ಪ್ರಯತ್ನವನ್ನು ಹೇಗೆ ಮಾಡಬಹುದೆ೦ದು ಡಾ// ಶಿವಪ್ರಸಾದ್ ರವರು ಈ ಲೇಖನದಲ್ಲಿ ನಿಮ್ಮೊ೦ದಿಗೆ ಹ೦ಚಿಕೊ೦ಡಿದ್ದಾರೆ – ಸ೦

ಬದಲಾಗುತ್ತಿರುವ ಸಮಾಜದಲ್ಲಿ ವೃದ್ಧರು:  ಒಂದು ಅವಲೋಕನ

ನಮಗೆ ಕಂಡಂತೆ ಹಲವು ದಶಕಗಳಿಂದ ಸಮಾಜದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿದೆ. ಇಂದು ನಮ್ಮ ಹಿರಿಯರು ಹಿಂದಿಗಿಂತ ಹೆಚ್ಚು ಆರೋಗ್ಯವಂತರಾಗಿ ಧೀರ್ಘ ಆಯುಷ್ಯವನ್ನು ಪಡೆದವರಾಗಿದ್ದಾರೆ. ವೈದ್ಯಕೀಯ ಸೌಲಭ್ಯ ಉತ್ತಮವಾದ ಆಹಾರ, ವ್ಯಾಯಾಮದ ಕಡೆ ಗಮನ ಇವುಗಳಿಂದ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಅವಕಾಶವಿದೆ. ಹಾಗೆ ಜಾಗತೀಕರಣ, ಕಂಪ್ಯೂಟರ್ ಗಳ ಬಳಕೆ, ಅಂತರ್ಜಾಲ ನಮ್ಮ ಬದುಕನ್ನು ಸರಳಗೊಳಿಸಿವೆ. ಈ ತೀಕ್ಷ್ಣ ಹಾಗೂ ಕ್ಷಿಪ್ರ ಬದಲಾವಣೆಗಳ ಜೊತೆಗೆ ಹೊಂದಿಕೊಂಡು ಹೊಸ ತಂತ್ರ ಜ್ಞಾನವನ್ನು ಕಲಿಯುತ್ತ ತಮ್ಮ ಬದುಕನ್ನು ಅಳವಡಿಸಿಕೊಳ್ಳುತ್ತಾ ಸಾಗುವುದು ಇವತ್ತಿನ ಹಿರಿಯರಿಗೆ ಒಂದು ಕಷ್ಟವಾದ ಕೆಲಸ. ಈ ತಾಂತ್ರಿಕ ಬೆಳವಣಿಗೆ ಹಿರಿಯರ ಪಾಲಿಗೆ ಒಂದು ದೊಡ್ಡ ಸವಾಲು.

ಬದಲಾಗುತ್ತಿರುವ ಸಮಾಜದಲ್ಲಿ ವೃದ್ಧರು ಎಂಬ ವಿಚಾರದಲ್ಲಿ ನಾವು ಎರಡು ಅಂಶಗಳನ್ನು ಗಮನಿಸಬೇಕು

  1. ವೃದ್ಧರು ಎಂದರೆ ಯಾರು?
  2. ಬದಲಾಗುತ್ತಿರುವ ಸಮಾಜ ಎಂದರೇನು?

ವೃದ್ಧರು ಎಂದರೆ ಯಾರು? ಎಂಬ ಪ್ರಶ್ನೆಗೆ ಸಮಂಜಸವಾದ ಉತ್ತರ ನೀಡಲು ಕಷ್ಟ. ವೃದ್ಧರು ಎಂಬ ಅರ್ಥ ಹಿರಿಯರು, ಮುದುಕರು, ಇಳಿವಯಸ್ಸಿನವರು ಹೀಗೆ ಹಲಾವರು ಹೆಸರುಗಳನ್ನು ಹಾಗೂ ಅದರೊಡನೆ ಮನದಲ್ಲಿ ಮೂಡುವ Images ಅಥವಾ  ಚಿತ್ರಗಳನ್ನು ಸ್ಮರಿಸಬಹುದು. ವೃದ್ಧರು ಎಂದರೆ ಯಾರು? ಎಂಬ ಪ್ರಶ್ನೆಗೆ ಬಹಳ ಸರಳವಾದ ಒಂದು ಅರ್ಥವನ್ನು ಒಬ್ಬ ವ್ಯಕ್ತಿಯ ವಯಸ್ಸಿನ ಮೂಲಕ ಕಾಣಬಹುದು. ಸಾಮಾನ್ಯವಾಗಿ 60 ವರ್ಷ ಮೀರಿದವರನ್ನು ಈ ಗುಂಪಿಗೆ ಸೇರಿಸುವುದು ಸಾಮಾನ್ಯ. ಹಿಂದೆ ಒಂದು ದೇಶದಲ್ಲಿನ ಗಂಡು ಹೆಣ್ಣುಗಳ ಜೀವಮಾನ (life Expectancy) ಆಧಾರಧ ಮೇಲೆ 60 ಮೀರಿದವರನ್ನು ಹಿರಿಯರು ಎಂದು ಕರೆದು ಸರ್ಕಾರ ಒಂದು ನಿವೃತ್ತಿಯ ಗಾಡಿಯನ್ನು ಹಾಕಿರುವುದುಂಟು. ಆದರೆ ಈಗ ಅದೇ ಜೀವಮಾನ ಮೇಲೆ ತಿಳಿಸಿದ ಕಾರಣಗಳಿಂದ ಹಿಗ್ಗಿದೆ. ಪಾಶ್ಚಿಮಾತ್ಯ  ದೇಶಗಳಲ್ಲಿ  ಇಂದು ನಿವೃತ್ತಿಯ ಗಾಡಿಯನ್ನು 65-70 ಕ್ಕೆ ವಿಸ್ತರಿಸಲಾಗಿದೆ. ಹಾಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಒಬ್ಬ ವ್ಯಕ್ತಿ  65-70 ವರ್ಷದಾಟುವ ವರೆಗೆ ಅವರನ್ನು ವೃದ್ಧರು ಎಂದು ಪರಿಗಣಿಸುವ ಸಾಧ್ಯತೆ ಕಡಿಮೆ.

ವೃದ್ಧಾಪ್ಯ ವೆಂಬುದು ಒಂದು ಮನಸ್ಥಿತಿಯೇ ಅಥವಾ ದೈಹಿಕ ಸ್ಥಿತಿಯೇ ಎಂಬ ಪ್ರಶ್ನೆ ಹಲವರಿಗೆ ಮೂಡಬಹುದು. ಪಾಶ್ಚಿಮಾತ್ಯ ದೇಶದಲ್ಲಿ 60-70 ವರ್ಷಗಳನ್ನು ಮೀರಿದವರು ದೇಹವನ್ನು ಅತಿಯಾಗಿ ದಂಡಿಸಿ ಹತ್ತು ಇಪ್ಪತ್ತು ಮೈಲಿಗಳ ಮ್ಯಾರಥಾನ್ ರೇಸ್ ಗಳಲ್ಲಿ ಭಾಗವಹಿಸುವುದು ಸಾಮಾನ್ಯ. ಹಲವು ವರ್ಷಗಳ ಹಿಂದೆ ನಾನು, ನನ್ನ ಪತ್ನಿ ಪೂರ್ಣಿಮಾ ಹಾಗೂ ಹಲವು ಗೆಳೆಯರು ಕೆನಡಾ ದೇಶದ ರಾಕಿ ಪರ್ವತಗಳಲ್ಲಿ ಪ್ರವಾಸ ಮಾಡುತ್ತಿದ್ದಾಗ ಒಂದು ಕಡಿದಾದ ಹಿರಿದಾದ ಹಿಮ ಪರ್ವತವನ್ನು ನಡುಗೆಯಲ್ಲಿ ಹತ್ತಿರುವ ಬಗ್ಗೆ ನಮ್ಮನ್ನು ನಾವೇ ಪ್ರಶಂಸಿಸಿ ಕೊಳ್ಳುತ್ತಿರುವಾಗ ಆಕಸ್ಮಿಕವಾಗಿ ಪರ್ವತದ ಮೇಲೆ ಹಿರಿಯ ದಂಪತಿಗಳ ಭೇಟಿಯಾಯಿತು. ಕುಶಲ ಪ್ರಶ್ನೆಗಳನ್ನು ಮಾತಾಡಿ ಮುಗಿಸಿದ ನಂತರ ಅವರು 80 ವರ್ಷ ವಯಸ್ಸಿನವರು ಎಂದು ತಿಳಿದಾಗ ಅಚ್ಚರಿಯಾಯಿತು!

ಸಾಮಾನ್ಯರಲ್ಲಿ ಅದೂ ಭಾರತದಲ್ಲಿ ವೃದ್ಧರು ಎಂದ ಕೂಡಲೇ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರ ವೆಂದರೆ ನೆರತು ಉದುರುವ ಕೂದಲು, ನಡುಗುವ ಕೈಗಳು, ಮಬ್ಬಾದ ಕಣ್ಣುಗಳು, ಅಸಹಾಯಕತೆ ಮತ್ತು ಇತರರ ಮೇಲೆ ಅವಲಂಬನೆ. ಇದು ನಮ್ಮ ಕಲ್ಪನೆ! ಇದನ್ನು ಗಮನಿಸಿದಾಗೆ ಇದರಲ್ಲಿ ಒಂದು Negative Image ಹೆಚ್ಚಾಗಿ ಮೂಡಿ ಬರುತ್ತದ್ದೆ. ಇಂಗ್ಲೆಂಡಿನಲ್ಲಿ ನಮ್ಮ ಆಸ್ಪತ್ರೆಗೆ ಬರುವ ಅಥವಾ ಬಹಿರಂಗ ಸ್ಥಳಗಳಲ್ಲಿ ಕಾಣುವ ವೃದ್ಧರು ಒಳ್ಳೆ ಸೂಟು, ಬೂಟು ಟೈ ಗಳನ್ನು  ಧರಿಸಿ, ಬಹಳ ಸ್ವತಂತ್ರರಾಗಿ ತಲೆಯೆತ್ತಿ ನಡೆಯುತ್ತಾ ಎಲ್ಲರನ್ನು ವಿಚಾರಿಸಿಕೊಳ್ಳುತ್ತ ಒಂದು ಘನತೆಯ ಚಿತ್ರವನ್ನು ನೆನಪಿಗೆ ತರುತ್ತಾರೆ.  ಮುಂದುವರಿದ ದೇಶಗಳಲ್ಲಿ ಹಿರಿಯರು ಒಂದು ದೇಶದ Intellectual ಸಂಪತ್ತು ಎಂದು ಪರಿಗಣಿಸಿದರೆ ಇನ್ನು ಕೆಲವು ದೇಶಗಳಲ್ಲಿ ವೃದ್ಧರು ಸಮಾಜಕ್ಕೆ ಹೊರೆ ಎಂಬ ಮನೋಭಾವ ಇರಬಹುದು. ಭಾರತದಲ್ಲಿ ಹಿರಿಯರ ಬಗ್ಗೆ ಒಂದು ಮಾತಿದೆ: ‘ಕಾಡು ಬಾ ಅನ್ನುತ್ತೆ, ನಾಡು ಹೋಗು ಅನ್ನುತ್ತೆ.’ ಬಹುಶಃ ಇದು ಪುರಾತನ ಕಾಲದಲ್ಲಿ ವಯಸ್ಸಾದವರು ನಾಡನ್ನು ತೊರೆದು ವನಗಳಲ್ಲಿ ನೆಲಸುತ್ತಿದ್ದ  ಒಂದು ಹಿನ್ನೆಲೆಯಲ್ಲಿ ಮೂಡಿ ಬಂದಿರಬಹುದು. ವಯಸ್ಸಿಗೆ ಅನುಗುಣವಾಗಿ ನಡೆದುಕೊಳ್ಳುವುದರಲ್ಲಿ ಅರ್ಥವಿದೆ ಆದರೆ ಬದುಕನ್ನು ಪ್ರೀತಿಸಲು ಯಾವ ವಯಸ್ಸಿನ ಮಿತಿ ಇಲ್ಲ!

ಯುನೈಟೆಡ್ ನೇಷನ್ಸ್ ಹಿರಿಯ ವಯಸ್ಕರ ಗಣತಿಯ ಪ್ರಕಾರ 2015 ರಿಂದ ಹಿಡಿದು 2030 ವರೆಗೆ 60 ಮೀರಿದವರ ಸಂಖ್ಯೆ ಶೇಕಡಾ 56% ಹೆಚ್ಚಾಗುವ ಸಂಭವವಿದೆ. 2050 ಹೊತ್ತಿಗೆ ಸಂಖ್ಯೆ 2.1 ಬಿಲಿಯನ್ ಆಗುವ ಸಾಧ್ಯತೆ ಇದೆ. ಈ ಹಿಂದೆ ಹೆಂಗಸರ ಜೀವಮಾನ ಗಂಡಸಿಗಿಂತ 4.5 ವರ್ಷ ಹೆಚ್ಚಿನದಾಗಿದ್ದು ಮುಂದಕ್ಕೆ ಗಂಡಸರೂ ಕೂಡ ಧೀರ್ಘ ವಾದ ಜೀವಮಾನವನ್ನು ಪಡೆದು ಈಗಿರುವ ವ್ಯತ್ಯಾಸ ಸಮನಾಗುವು ಸಂಭವವಿದೆ. ಹಾಗೆಯೇ 80 ಮೀರಿದವರ ಸಂಖ್ಯೆ 2015 ನಿಂದ 2030 ಹೊತ್ತಿಗೆ 20% ಹೆಚ್ಚಾಗುವ ಸಾಧ್ಯತೆ ಇದೆ. ಹಿರಿಯರ ಈ ಜೀವಮಾನ ಹೆಚ್ಚಳ ಹಳ್ಳಿಗಳಿಗಿಂತ ನಗರಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಪಂಚದಲ್ಲಿ 80 ಮೀರಿ ದಾಟಿರುವ ಹಿರಿಯರ ಸಂಖ್ಯೆ ಈಗ 125 ಮಿಲಿಯನ್ ಇದ್ದರೆ 2050 ನಲ್ಲಿ  ಇನ್ನು ಮೂರು ಪಟ್ಟು ಹೆಚ್ಚಾಗಿ 434 ಮಿಲಿಯನ್ ಗೆ ಏರುವ ಸಂಭವಿದೆ.  ಒಟ್ಟಿನಲ್ಲಿ ಈ ಶತಮಾನದ ಅರ್ಧದಲ್ಲಿ, ಪ್ರಪಂಚದಲ್ಲಿ ಇರುವ ಜನಸಂಖ್ಯೆಯಲ್ಲಿ, ಐದು ಜನರಲ್ಲಿ ಒಬ್ಬ ವ್ಯಕ್ತಿ 60 ವರ್ಷ ಮೀರಿರುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ವೃದ್ಧರ ಜನಸಂಖ್ಯೆ ಸಮಾಜದ ಆರ್ಥಿಕ ಪರಿಸ್ಥಿತಿ, ವಸತಿ, ಸಾರಿಗೆ ಆರೋಗ್ಯ ಹಾಗೂ ಸಾಮಾಜಿಕ ಒತ್ತಡಗಳನ್ನು ತರಬಹುದು. Birth rate ಹೆಚ್ಚಿರುವ ಹಾಗೂ ಅಭಿವೃದ್ಧಿ ಗೊಳ್ಳು ತ್ತಿರುವ ಭಾರತ, ಬ್ರೆಜಿಲ್ ಆಫ್ರಿಕಾ ದೇಶಗಳಲ್ಲಿ ಹಿರಿಯರಸಂಖ್ಯೆ ಮಹತ್ತರವಾಗಿ ಹಿಗ್ಗ ಬಹುದೆಂದು ಅಂದಾಜು ಮಾಡಲಾಗಿದೆ.

ನಮ್ಮ ಮುಂದಿನ ಪ್ರಶ್ನೆ ಬದಲಾಗುತ್ತಿರುವ ಸಮಾಜ ಎಂದರೇನು? ಎಂಬುದರ ಬಗ್ಗೆ ವಿಚಾರ ಮಾಡೋಣ. ಹಲವು ದಶಕಗಳ ಹಿಂದೆ ನಮ್ಮ ಜಾಯಿಂಟ್ ಫ್ಯಾಮಿಲಿ ಕುಟುಂಬ ವ್ಯವಸ್ಥೆ ಯಿಂದಾಗಿ ವೃದ್ಧರು ತಮ್ಮ ಮಕ್ಕಳು ಮೊಮ್ಮಕ್ಕಳೊಡನೆ ನೆಮ್ಮದಿಯಾಗಿ ಅವರ ಆಶ್ರಯದಲ್ಲಿ ಬದುಕಬಹುದಿತ್ತು. ಹಲವಾರು ಅಣ್ಣ, ತಮ್ಮ, ಅಕ್ಕ ತೆಂಗಿಯರು ತಂದೆತಾಯಿಗಳನ್ನು ಸರದಿಯಲ್ಲಿ ನೋಡಿಕೊಳ್ಳುವ ಒಂದು ವ್ಯವ್ಯಸ್ಥೆ ಇದ್ದು ಎಲ್ಲ ಹೊಂದಿಕೊಂಡು ನಡೆಯುತ್ತಿದ್ದ ಪರಿಸ್ಥಿತಿ ಇತ್ತು. ಈಗ ಸಣ್ಣ ಕುಟುಂಬ ಅಥವಾ Nuclear Family ವ್ಯವಸ್ಥೆ ಬಹಳ ಮಟ್ಟಿಗೆ ರೀತಿಯಲ್ಲಿದೆ. ಮೇಲಾಗಿ ಗಂಡ ಹೆಂಡತಿಯರು ವೃತ್ತಿಯಲ್ಲಿ ತೊಡಗಿ  ವೃದ್ಧರಿಗೆ ಬೆಂಬಲ ಸಹಾಯ ಮಾಡುವ ಅವಕಾಶ ಕುಗ್ಗಿದೆ. ಅದಲ್ಲದೆ ವೃದ್ಧ ತಂದೆ ತಾಯಿಗಳಿಗೆ ಮೂಮ್ಮಕ್ಕಳನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಹೊರಲಾಗಿದೆ. ಒಂದು ಕುಟುಂಬದ ಆರ್ಥಿಕ ಪರಿಸ್ಥಿತಿಯ ಒತ್ತಡ ಹಾಗೂ ಹಲವಾರು ತೊಂದರೆಗಳಲ್ಲಿ ವೃದ್ಧ ತಂದೆ ತಾಯಿಯಾರು ಅನಿವಾರ್ಯವಾಗಿ ಸಿಕ್ಕಿಕೊಂಡು ಹೊರಬರುವುದು ಕಷ್ಟವಾಗಿದೆ. ಇನ್ನು ಕೆಲವು ಕುಟುಂಬಗಳಲ್ಲಿ ಮಕ್ಕಳು ವೃತ್ತಿಯ ಬದ್ದತೆ ಗಳಿಂದಾಗಿ ಹೊರನಾಡಿಗೆ ಅಥವಾ ಹೊರದೇಶಕ್ಕೆ ವಲಸೆ ಹೋಗಲು ನಿರ್ಧರಿಸಿದಾಗ ಇನ್ನು ಹೆಚ್ಚಿನ ಬಿಕ್ಕಟ್ಟುಗಳನ್ನು ಒಡ್ಡುತ್ತದೆ. ಇದರ ಜೊತೆಗೆ ಹಿರಿಯ ದಂಪತಿಗಳಲ್ಲಿ ಒಬ್ಬರ ಅನಾರೋಗ್ಯ ಅಥವಾ ಅಕಾಲ ಮರಣ ಇನ್ನು ಹೆಚ್ಚಿನ ಸಮಸ್ಯೆಗಳನ್ನು ತೆರದಿಡುತ್ತದೆ. ಇದರ ಒಟ್ಟಾರೆ ಪರಿಣಾಮ ಒಂಟಿತನ ಹಾಗೂ ಇಳಿವಯಸ್ಸಿನಲ್ಲಿ ಬದುಕನ್ನು ಒಬ್ಬರೇ ಎದುರಿಸುವ ಪರಿಸ್ಥಿತಿ ಉಂಟಾಗುತ್ತದೆ.

ಮೇಲೆ ಪ್ರಸ್ತಾಪಿಸಿರುವ ವಿಷಯಗಳಾದ ಜಗಾತಿಕರಣ  ಹಾಗೂ ಕಂಪ್ಯೂಟರ್ ಶಿಕ್ಷಣ (Computer Literacy) ಇತ್ತಿಚಿನದಿನಗಳಲ್ಲಿ ಬಹಳ ಮುಖ್ಯವಾದ ವಿಚಾರ. ಮನೆಗೆ ಸಂಬಂಧಪಟ್ಟ ಹಾಗೂ ಬ್ಯಾಂಕ್ ಗಳಲ್ಲಿನ ವ್ಯವಹಾರ, ಸಂಪರ್ಕ ಇವುಗಳನ್ನು ಸಮರ್ಪಕವಾಗಿ ನೆರವೇರಿಸಲು ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯ. ವಾಣಿಜ್ಯ ಹಾಗು ಸರ್ಕಾರದ ಪೇಪರ್ ರಹಿತ ವಹಿವಾಟುಗಳು ಅಡಚಣೆ ತರಬಹುದು. ಇತ್ತೀಚಿನ ದಿನಗಳಲ್ಲಿ ಹೊರದೇಶದಲ್ಲಿ ನೆಲಸಿರುವ ಮಕ್ಕಳು ಮೊಮ್ಮಕ್ಕಳು ಇವರೊಡನೆ ಸಂಪರ್ಕಿಸಲು ಕಂಪ್ಯೂಟರ್ ಶಿಕ್ಷಣ ಹಾಗೂ ಸೋಶಿಯಲ್ ಮೀಡಿಯಾಗಳ ಬಳಕೆಯನ್ನು ವೃದ್ಧರು ರೂಡಿಸಿಕೊಳ್ಳಬೇಕು.

60 ವರ್ಷಗಳು ಮೀರಿದಂತೆ ದೇಹಶಕ್ತಿ ಕುಗ್ಗುತ್ತಿರುವಾಗ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಕ್ಯಾನ್ಸರ್, ಸ್ಟ್ರೋಕ್, ಕಣ್ಣಿನಲ್ಲಿ ಪೊರೆ , ಗಂಡಸರಲ್ಲಿ ಪ್ರಾಸ್ಟೇಟ್ ತೊಂದರೆ, ಮೂಳೆಗಳು ಸವಿದು ಮಂಡಿ ಮತ್ತು ಸೊಂಟಗಳಲ್ಲಿ ನೋವು, ಸಕ್ಕರೆ ಖಾಯಿಲೆ, ರಕ್ತ ಒತ್ತಡ ಹಾಗು ಮುಖ್ಯವಾಗಿ ಮಾನಸಿಕ ತೊಂದರೆಗಳು ಹಿರಿಯರನ್ನು ಬಾಧಿಸುತ್ತವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಆಲ್ಜಿಮೆರ್ಸ ಖಾಯಿಲೆ (Alzheimer’s Disease) ಒಂದು ಭಯಂಕರ ಸಮಸ್ಯೆಯಾಗಿದೆ. ಹಿಂದೊಮ್ಮೆ ಅರವತ್ತರ ಅರುಳು ಮರುಳು ಎಂದು ಪರಿಗಣಿಸಲ್ಪಟ್ಟ ಈ ಖಾಯಿಲೆ ಅಷ್ಟು ಸರಳವಲ್ಲ.

ವೃದ್ಧಾಪ್ಯದಲ್ಲಿ ಎಲ್ಲರನ್ನು ಹೆಚ್ಚು ಭಾದಿಸುವ ಸಮಸ್ಯೆ ಎಂದರೆ ಒಂಟಿತನ ಮತ್ತು ಬೇಸರ. ಹಲವು ತಿಂಗಳ ಹಿಂದೆ  ಬಿ ಬಿ ಸಿ ವಾರ್ತೆಯಲ್ಲಿ ಇಲ್ಲಿ ಸ್ಥಳೀಯ ಹಿರಿಯ ವ್ಯಕ್ತಿ, ಸುಮಾರು 89 ವರ್ಷದ ಜೋ ಬಾರ್ಟ್ಲಿ, ಮನೆಯಲ್ಲಿ ಒಬ್ಬಂಟಿಗನಾಗಿ ಕುಳಿತು ಬೇಸರವಾಗಿ ಕೆಲಸಕ್ಕೆ ಅರ್ಜಿ ಹಾಕಿದ್ದು ಒಂದು ದೊಡ್ಡ ಸುದ್ದಿಯಾಗಿ ಎಲ್ಲ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರಗೊಂಡಿತು. ಕೊನೆಗೆ ಆತನಿಗೆ ಒಂದು ಸಣ್ಣ ಹೋಟೆಲಿನಲ್ಲಿ ಕೆಲಸ ದೊರಕಿತು. ಜೋ ಈಗ ಕೆಲಸಕ್ಕೆ ಮರಳಿದ್ದಾನೆ!  ಅವನಿಗೆ ಎಲ್ಲಿಲ್ಲದ ಹುರುಪು ಉತ್ಸಾಹ !  ಆದರೆ ನಾನು ಆಲೋಚಿಸುವುದು ಜೋ ತರಹದ ವ್ಯಕ್ತಿಗಳಿಗೆ ಬದುಕಿನಲ್ಲಿ ಯಾವ ಹವ್ಯಾಸ ಇರಲಿಲ್ಲವೇ?

ನಾವು ಬದುಕಿನಲ್ಲಿ ಸಂಗೀತ, ಸಾಹಿತ್ಯ, ಕಲೆ, ವ್ಯಾಯಾಮ ಮುಂತಾದ ಹವ್ಯಾಸಗಳನ್ನು ಬೆಳಸಿಕೊಂಡು ಅದನ್ನು ಪೋಷಿಸುತ್ತ ಬದುಕುವುದನ್ನು ಕಲಿತರೆ ಇಳಿವಯಸ್ಸಿನಲ್ಲಿ ಒಂಟಿತನ ಮತ್ತು ಬೇಸರಗಳನ್ನು ಕಡಿಮೆ ಮಾಡಿಕೊಳ್ಳ ಬಹುದು. ಸೋಶಿಯಲ್ ಕ್ಲಬ್ ಗಳ ಸದಸ್ಯರಾಗಿ ಸ್ನೇಹಿತರನ್ನು ಗಳಿಸಿದವರಿಗೆ ಹೃದ್ರೋಗ ಕಡಿಮೆಯಾಗಿರುವುದರ ಬಗ್ಗೆ ವೈದ್ಯಕೀಯ ಸಂಶೋಧನೆ ಮಾಹಿತಿಗಳಿವೆ. ನನಗೆ ತಿಳಿದ ಕೆಲವು ಸಾಹಿತ್ಯ ಹಾಗೂ ಕವಿ ಮಿತ್ರರು ನಿವೃತಿಯ ಬಳಿಕ ಇನ್ನು ಹೆಚ್ಚಿನ ಬರವಣಿಗೆಯಲ್ಲಿ ತೊಡಗಿ ಸಮಯ ಅಭಾವದ ಬಗ್ಗೆ ಗೊಣಗಿರುವುದು ಉಂಟು! ಹವ್ಯಾಸಗಳಿಂದ ಬುದ್ಧಿ  ಶಕ್ತಿಯನ್ನು ತೀಕ್ಷ್ಣ ವಾಗಿ ಉಳಿಸಿಕೊಂಡವರಿಗೆ ಡಿಮೆನ್ ಶಿಯ (Dementia) ರೀತಿಯ ಮಾನಸಿಕ ತೊಂದರೆಗಳು ಕಡಿಮೆ

ಇನ್ನು ಇಳಿವಯಸ್ಸಿನಲ್ಲಿ ಆರ್ಥಿಕ ಸುಭದ್ರತೆ ಬಹಳ ಮುಖ್ಯ. ಇಂಗ್ಲಿಷ್ ಸಂಸ್ಕೃತಿಯಲ್ಲಿ ಒಂದು ನಾಣ್ನುಡಿ ಇದೆ; ‘Save for a rainy day’ ದುಡಿಯುವ ಶಕ್ತಿ ಇರುವಾಗ ಮುಂಬರುವ ಕಷ್ಟಗಳ ದಿನಕ್ಕಾಗಿ ಕೂಡಿಡುವ ಆಲೋಚನೆಯನ್ನು ಕಿರಿಯರು ಪರಿಗಣಿಸಬೇಕು. ಇಂಗ್ಲೆಂಡಿನ ಹಿರಿಯರು ನರ್ಸಿಂಗ್ ಹೋಂಗಳಲ್ಲಿ  ಸೇರಬೇಕಾದರೆ ಬಹಳಷ್ಟು ಹಣ ಬೇಕಾಗುತ್ತದೆ. ಪೆಂಶನ್ (Pension)  ಹಣ ಸಾಕಾಗದೆ ಹಲವಾರು ಹಿರಿಯರು ತಮ್ಮ ಮನೆಗಳನ್ನು ಅಡವಿಟ್ಟು ಅಥವಾ ಮಾರಿ ನರ್ಸಿಂಗ್ ಹೋಂ ಸೇರಿಕೊಂಡಿರುವ ಬಗ್ಗೆ ಕೇಳುತ್ತೇವೆ.

ಮಧ್ಯ ವಯಸ್ಕರು ಅದರಲ್ಲೂ ಸಕ್ಕರೆ ಹಾಗೂ ರಕ್ತ ಒತ್ತಡ ಖಾಯಿಲೆ ಇರುವವರು ಆಹಾರ ಮತ್ತು ವ್ಯಾಯಾಮಗಳ ಕಡೆ ಗಮನ ಕೊಡದಿದ್ದಲ್ಲಿ ಇಳಿವಯಸ್ಸಿನಲ್ಲಿ  ಈ ಖಾಯಿಲೆಗಳ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.  ಒಬ್ಬ ವ್ಯಕ್ತಿ 50 ರ ಕೊನೆಯಲ್ಲಿ ಅಥವಾ ಅರವತ್ತರಲ್ಲಿ  ಇರುವಾಗ  ಗಂಡ ಅಥವಾ ಹೆಂಡತಿಯ ಅಕಾಲ ಮರಣದಿಂದ ಉದ್ಭವಿಸುವ ಒಂಟಿತನವನ್ನು ಎದುರಿಸುವುದು ಬಹಳ ಕಷ್ಟ. ಮಾನಸಿಕವಾಗಿ ಈ ಅಘಾತದಿಂದ ಚೇತರಿಸಿಕೊಳ್ಳುವುದು ಕಠಿಣ. ಹಿರಿಯ ವಯಸ್ಸಿನಲ್ಲಿ ಕಾಮಾದಿ ಬಯಕೆಗಳನ್ನು ಮೀರಿ ಸಾಂಗತ್ಯಕ್ಕೆಂದು ಮರು ಮದುವೆಯಾಗುವುದು ಅಥವಾ ಮದುವೆಯಾಗದೆ ಗಂಡು ಹೆಣ್ಣುಗಳು ಒಟ್ಟಿಗೆ ಇರುವುದು ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾನ್ಯ. ಈ ವಿಚಾರದ ಬಗ್ಗೆ ನಮ್ಮ ಭಾರತದ ಸಂಸ್ಕೃತಿಯಲ್ಲಿ  ಒಂದು ಸಾಂಪ್ರದಾಯಕ ನಿಲುವು ಹಾಗೂ ಮಡಿವಂತಿಕೆ ಇರುವುದನ್ನು ಗಮನಿಸಬಹುದು. ಈ ವಿಚಾರದ ಬಗ್ಗೆ ಮುಂದಿನ ಪೀಳಿಗೆ ಹಿರಿಯರು ಆಲೋಚನೆ ಮಾಡಬಹುದು

ವೃದ್ಧರ ಏಳಿಗೆ, ಅನುಕೂಲ, ಆರೋಗ್ಯ ಮತ್ತು ಕಲ್ಯಾಣ ಇವುಗಳ ಬಗ್ಗೆ ಸಮಾಜ, ಸರ್ಕಾರ ಹಾಗೂ ಚಾರಿಟಿ ಸಂಘಗಳು ಗಮನ ಹರಿಸಬೇಕು. ಯೋಜನೆಗಳನ್ನು ಹಾಕಿಕೊಳ್ಳಬೇಕು. ವೃದ್ಧರು ಸಮಾಜದ ಆಸ್ತಿ , ಅವರು  ಸಮಾಜಕ್ಕೆ  ಹೊರೆ ಅಲ್ಲ ಎಂಬ ಆರೋಗ್ಯಕರವಾದ ಚಿಂತನೆಯನ್ನು  ಕಿರಿಯರು ಬೆಳಸಿಕೊಳ್ಳಬೇಕು. ವೃದ್ಧರಿಗೆ ಹಲವು ರೀತಿ ಆರ್ಥಿಕ ರಿಯಾಯಿತಿ ಹಾಗೂ ಆರೋಗ್ಯ ವಿಮೆ ದೊರಕುವಂತಾಗಬೇಕು. ಇನ್ನು ಹೆಚ್ಚಿನ ಹಾಗೂ ವಿವಿಧ ಹಂತಗಳ ವೃದ್ಧಾಶ್ರಮ ಹಾಗೂ ಸಾಮೂಹಿಕ ವಸತಿಗಳ ಸೌಕರ್ಯಗಳನ್ನೂ ಕಲ್ಪಿಸಬೇಕಾಗಿದೆ.

ವೃದ್ಧಾಪ್ಯದ ಸಮಸ್ಯೆಗಳು ನಾವು ಎದುರಿಸಬೇಕಾದ ಬಹಳ ದೊಡ್ಡ ಸವಾಲು. ಇದು ಗಡಿ, ದೇಶ ಹಾಗೂ ಸಂಸ್ಕೃತಿಗಳನ್ನು ಮೀರಿದ್ದು ಮಾನವ ಕುಲದ ಒಂದು ಸಮಸ್ಯೆ. ಒಂದಲ್ಲ ಒಂದು ದಿನ ಎಲ್ಲರು ಎದುರಿಸಬೇಕಾದ ಪರಿಸ್ಥಿತಿ. ಈ ಅನಿವಾರ್ಯತೆಯನ್ನು ಒಪ್ಪಿಕೊಂಡು ಇಳಿವಯಸ್ಸಿನಲ್ಲಿ ಧೈರ್ಯ ಹಾಗೂ ಆತ್ಮ ವಿಶ್ವಾಸಗಳೊಂದಿಗೆ ನೆಮ್ಮದಿಯಾಗಿ ಬದುಕಿನ ಸಂಜೆಯನ್ನು ಕಡಲಂಚಿನಲ್ಲಿ ಕಾಣುವ ಸೂರ್ಯಾಸ್ತದ ಪ್ರಶಾಂತತೆಯಷ್ಟೇ ಹಿತಕರವಾಗಿ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.

ಜಿ.ಎಸ್. ಶಿವಪ್ರಸಾದ್                                                                                                                                                          

5 thoughts on “ಬದಲಾಗುತ್ತಿರುವ ಸಮಾಜದಲ್ಲಿ ವೃದ್ಧರು: ಒಂದು ಅವಲೋಕನ – ಡಾ. ಜಿ. ಎಸ್. ಶಿವಪ್ರಸಾದ್ ಬರೆದ ಲೇಖನ

  1. According to oxford Dictionary middle age is between 45-70 years!!! So old age should start from 7o onwards. Good health and happy life should keep one feeling younger. Some are lucky to have it despite the fact that many attempt to acheive it! Timely article.

    Like

  2. ನನ್ನ ಮೇಲಿನ ಲೇಖನ ಪ್ರಕಟಿತವಾದ ಸಮಯದಲ್ಲಿ ನಾನು ಚೈನಾ ಪ್ರವಾಸದಲ್ಲಿದ್ದು ನಿಮ್ಮ ಅನಿಸಿಕೆಗಳಿಗೆ ಸ್ಪಂದಿಸಲು ಸಾಧ್ಯವಾಗಲಿಲ್ಲ
    ಎಲ್ಲರಿಗೂ ಧನ್ಯವಾದಗಳು. ನನ್ನ ಬರವಣಿಗೆಗೆ ಸೂಕ್ತವಾದ ಚಿತ್ರಗಳನ್ನು ಒದಗಿಸಿದ ದಾಕ್ಷಾಯಿಣಿ ಅವರಿಗೆ ಧನ್ಯವಾದಗಳು

    Like

  3. ’You are as old as you feel.’
    ”Study Finds Those Who Feel Younger Might Actually Live Longer’
    ಇವು ವೃದ್ಧಾಪ್ಯದ ಬಗೆಗಿನ ಪತ್ರಿಕೆ ಹೆಡ್ ಲೈನುಗಳು. ನಮ್ಮ ನಿಲುವು ಅಥವಾ ಮನೋಧೋರಣೆಯೇ ನಮ್ಮ ನಿಜವಾದ ವಯಸ್ಸಿಗಿಂತ ವ್ಯಕ್ತಿಯ ವೃದ್ಧಾಪ್ಯವನ್ನು ನಿರ್ಧರಿಸುತ್ತದೆಯೇ? ಅಥವಾ ನಮ್ಮ ಆರೋಗ್ಯ ಸರಿಯಾಗಿದ್ದರೆ ನಮಗೆ ಅಷ್ಟು ವಯಸ್ಸಾಗಿಲ್ಲ ಎನ್ನುತ್ತೇವೆಯೋ? ವೃದ್ಧಾಪ್ಯದ ಬಗ್ಗೆ ಒಳ್ಳೆಯೆಯ ವಿಚಾರಾತ್ಮಕ ಲೇಖನ ಬರೆದಿದ್ದಾರೆ ಶಿವಪ್ರಸಾದ ಅವರು. ಅಕ್ಟೋಬರ್ ಒಂದರಂದೇ ಅಲ್ಲ, ಓದುಗರೊಬ್ಬರು ಗಣಿಸುವ ನನ್ನಂಥ ಹಿರಿಯರಷ್ಟೇ ಅಲ್ಲ, welfare state ಸರಕಾರಗಳೂ ಯೋಚಿಸಿವ, ಯೋಜಿಸುವ ವಿಷಯ ಇದು. ಆದರೆ ಹವ್ಯಾಸಗಳನ್ನು ’ಮುಪ್ಪಿನಲ್ಲಿ’ ಪ್ರಾರಂಭಿಸುವ ಕಷ್ಟ. ಅದಕ್ಕೇ ಇಂಥ ಲೇಖನಗಳಿಗೆ ಎಲ್ಲರೂ ಸ್ವಾಗತಿಸಿ ಓದ ಬೇಕಾಗಿದೆ. ಎಳೆ ವಯಸ್ಸಿನಿಂದಲೇ ಆರೋಗ್ಯ ಕಾಯ್ದು ಕೊಂಡು ಹವ್ಯಾಸಗಳನ್ನು ಬೆಳೆಸಿಕೊಂಡು ಯುವ ಜನಾಂಗ ’grow old gracefully’ ಆಗ ಬೇಕಾಗಿದೆ

    Like

  4. ತುಂಬಾ ವಿಚಾರಪೂರ್ಣ ಲೇಖನ ಶಿವಪ್ರಸಾದ್ ಅವರೇ.ನಮ್ಮ ಬದುಕಿನಲ್ಲಿ ನಾವೆ ಇಣುಕಿ ನೋಡಿ ನಮ್ಮ ಇರಿಸರಿಕೆ , ವ್ಯವಹಾರಗಳನ್ನು ,ವ್ಯಕ್ತಿತ್ವ, ನಡೆ ನುಡಿಯನ್ನು ಅವಲೋಕಿಸಹಚ್ಚುತ್ತದೆ ಎಂಬಲ್ಲಿ ಎರಡು ಮಾತಿಲ್ಲ. ಬದಲಾವಣೆಯೇ ಜೀವನದ ನಿಯಮ ಎಂದ ಮೇಲೆ ಬದಲಾವಣೆಗೆ ಹೊಂದಿಕೊಳ್ಳುವುದೇ ಜೀವನ . ಅದು ಹಿರಿಯರು ಕಿರಿಯರು ಇಬ್ಬರಿಗೂ ಅನ್ವಯ.ಈಗಿನ ಸುಧಾರಿತ ಜೀವನಶೈಲಿ , ಆರೋಗ್ಯದತ್ತ ಹೆಚ್ಚು ಗಮನ ಇವೆಲ್ಲ ವೃದ್ಧಾಪ್ಯವನ್ನೂ ಮುಂದೂಡುತ್ತಿವೆ.ಆರೋಗ್ಯಪೂರ್ಣ ಮನ ,ವಿಚಾರಸರಣಿ ಚಿರಯೌವನಿಗರನ್ನಾಗಿಸಿ ಉತ್ಸಾಹ ಉಲ್ಲಾಸಪೂರ್ಣ ಜೀವನದ ಹರಿಕಾರರು ಈ ಹಿರಿಯರಾಗಿ ಸಮಾಜದ ಆಸ್ತಿ ಎನಿಸಬಹುದಲ್ಲವೆ ? ಆದರೆ ಇದೇ ಆದರದ ಮನೋಭಾವ ಕಿರಿಯರಲ್ಲೂ ಇರುವುದೂ ಅಷ್ಟೇ ಮುಖ್ಯ.ಈ ಗಣಕೀಕೃತ ಯುಗ ,ಲೆಕ್ಕಾಚಾರದ ಜೀವನಶೈಲಿ ಸಂಬಂಧಗಳಲ್ಲಿಯೂ ಇಣುಕಿ ಮನದ ನೆಮ್ಮದಿ ಹಾಳು ಮಾಡುವುದು ಖಂಡಿತ. ಅದಕ್ಕೇ ಹಿರಿಯರಿಗೆ. ಒಂದು ಕಿವಿಮಾತು , ( ನಾನು ವೃದ್ಧರು ಅನ್ತಿಲ್ಲ ) — ನೀವು ನಿಮ್ಮ ಜೀವನ ನಿಮ್ಮದೇ ರೀತಿಯಲ್ಲಿ ಜೀವಿಸಿಯಾಗಿದೆ .ಈಗ ಕಿರಿಯರಿಗೆ. ಆ. ಅವಕಾಶ ಬಿಟ್ಟು ಬಿಡೋಣ. ಯಾವುದೇ ರೀತಿಯ ಹೆಚ್ಚಿನ ನಿರೀಕ್ಷಣೆ ಜೀವನದಿಂಂದಾಗಲೀ ,ಮಕ್ಕಳಿಂದಾಗಲೀ ಬೇಡವೇ ಬೇಡ.ಆಗ ಕಿರಿಯರ ಅಲ್ಪ ಆದರವೇ ನಮಗೆ ಬೋನಸ್ ಅನಿಸಿ ಮನ ಮುದಗೊಂಡೀತು. ಕಿರಿಯರೂ ನಿರಾಳವಾದಾರು ,ಹಿರಿಯರು ಭಾರ ಅನಿಸಲಿಕ್ಕಿಲ್ಲ.ಆರೋಗ್ಯ ಪೂರ್ಣ ಮನಕ್ಕೆ ನೂರು ಆರೋಗ್ಯ ಪೂರ್ಣದಾರಿ ,ಹವ್ಯಾಸಗಳು ಕಂಡಾವು.ಶಿವಪ್ರಸಾದ್ ಅವರು ಹೇಳಿದಂತೆ ಬದುಕನ್ನು ಪ್ರೀತಿಸಲು ವಯಸ್ಸಿನ ಮಿತಿ ಇಲ್ಲ. ಒತ್ತಡವಿಲ್ಲದ ,ವ್ಯವಸ್ಥಿತ ,ಸರಳ ಜೀವನಶೈಲಿ ತಮ್ಮದಾಗಿಸಿಕೊಂಡು ಭಾರ ಎನಿಸಿಕೊಳ್ಳದೇ ಬಾಳುವುದೆಷ್ಟು ಸೊಗಸು ! ಎಲ್ಲರಿಗೂ ಇಂತಹ ವೃದ್ಧಾಪ್ಯವೇ ಬರಲಿ. ಇಂತಹ ಸುಂದರ ವೈಚಾರಿಕ ,ಭಾವಪೂರ್ಣ ಲೇಖನ ನೀಡಿದ್ದಕ್ಕೆ ಶಿವಪ್ರಸಾದ್ ಅವರಿಗೆ ಧನ್ಯವಾದಗಳು.
    ಸರೋಜಿನಿ ಪಡಸಲಗಿ.

    Like

  5. ಶಿವಪ್ರಸಾದ ಅವರೆ ನಿಮ್ಮ ಲೇಖನ ಬಹಳ ಸಮಯೋಚಿತವಾಗಿದೆ. ಬದಲಾಗುತ್ತಿರುವ ಇಂದಿನ ಸಮಾಜದಲ್ಲಿ, ವೃದ್ಧಾಪ್ಯದ ಬಗ್ಗೆ, ವೃದ್ಧರ ಬಗ್ಗೆ ನಮ್ಮ ಜನಗಳ ಮನದಲ್ಲಿರುವ ಅಭಿಪ್ರಾಯಗಳು ಬದಲಾಗುತ್ತಿವೆ. ಹೆಚ್ಚುತ್ತಿರುವ ಆಯಸ್ಸು, ಬದಲಿಸುತ್ತಿರುವ Demography ಗಳು, ವೃದ್ಧಾಪ್ಯದ ಬಗ್ಗೆ ಇರುವ ಆಲೋಚನೆಗಳನ್ನು, ಪೂರ್ವಾಗ್ರಹಗಳನ್ನು ಪರಿವರ್ತಿಸುತ್ತಿವೆ. ಇಂದು ನಿವೃತ್ತಿಯ ವಯಸ್ಸನ್ನು ಹೆಚ್ಚಿಸಿಲಾಗಿದೆ. ವಿಗ್ನಾನಿಗಳಂತೂ, ೮೦ನೆಯ ವಯಸ್ಸಿನಲ್ಲೂ ಕಾರ್ಯನಿರ್ವಹಿಸಿ ಉತ್ತಮವಾದ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಇದನ್ನು ಇಲ್ಲಿ ಅಮೆರಿಕೆಯಲ್ಲಿ ನಾನೇ ನೋಡುತ್ತಿದ್ದೇನೆ. ಇತ್ತೀಚೆಗೆ ೧೦೦ ವರ್ಷ ವಯಸ್ಸಿನ ಪುರುಷ, ಮ್ಯಾರಥಾನ್ ಓಡಿದ ಸಮಾಚಾರ ಓದಿದ್ದೇನೆ. ೬೦ನೆಯ ವಯಸ್ಸಿಗೆ ವಾನಪ್ರಸ್ಥಾಶ್ರಮ ಎನ್ನುವ ಕಾಲ ಹೋಯಿತು. ಕನ್ನಡದಲ್ಲಂತೂ, “ಮೂವತ್ತಾದರೆ ಆಗಲೆ ಮುದುಕ“ ಎನ್ನುವ ಅಸಂಬದ್ಧ ಆಡುನುಡಿಯನ್ನು ನಾನೆ ಜನ ಹೇಳಿದ್ದನ್ನು ಕೇಳಿದ್ದೆ ಆದರೆ ೭೦ರ ದಶಕದ ಭಾರತದಲ್ಲಿ! ನೀವು ಹೇಳಿದ ಪ್ರಕಾರ, ಮನುಷ್ಯ ತನ್ನ ಆರೋಗ್ಯ ಮತ್ತು ಮನಸ್ಸಿನ ದಾರ್ಢ್ಯವನ್ನು ಉತ್ತಮವಾಗಿ ಕಾಪಾಡಿಕೊಂಡರೆ, ೮೦ರ ವಯಸ್ಸಿನಲ್ಲೂ ಸಮಾಜಕ್ಕೆ ಕ್ರಿಯಾಶೀಲನಾಗಿ ಉತ್ತಮವಾದ ಸೇವೆ ಸಲ್ಲಿಸಿ ಜೀವನವನ್ನು ತೃಪ್ತಿಯಿಂದ ಸಾಗಿಸಿಕೊಂಡು ಹೋಗಬಹುದು. ಒಳ್ಳೆಯ ವೈಚಾರಿಕ ಲೇಖನ. ಧನ್ಯವಾದಗಳು.
    ಉಮಾ ವೆಂಕಟೇಶ್

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.