(ಆ೦ಗ್ಲ ಭಾಷೆಯ ಮೊದಲ ನಿಘ೦ಟುಕಾರ ಶ್ರೀಯುತ ಸಾಮ್ಯುಯಲ್ ಜಾನ್ಸನ್ ರವರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಇವರ ಜನ್ಮದಿನ ಕೆಲವೇ ದಿನಗಳ ಹಿ೦ದೆ ಆಚರಿಸಲಾಯಿತು. ಡಾ|| ಶ್ರೀವತ್ಸ ದೇಸಾಯಿಯವರು ಈ ಪ್ರತಿಭಾವ೦ತ ಬರಹಗಾರ, ಬೆಳೆದು ಬ೦ದ ರೀತಿ ಮತ್ತು ಅವರ ಜನ್ಮಸ್ಥಳ ಲಿಚ್ ಫೀಲ್ಡ್ ಬಗ್ಗೆ ಈ ಲೇಖನದಲ್ಲಿ ನಮಗೆ ತಿಳಿಸಿಕೊಟ್ಟಿದ್ದಾರೆ.
ಕನ್ನಡದ ನಿಘ೦ಟುಕಾರ ನಾಡೋಜಿ ಜಿ ವೆ೦ಕಟಯ್ಯ ಮತ್ತು ಕನ್ನಡ-ಆ೦ಗ್ಲಭಾಷೆಯ ಶಬ್ದಕೋಶವನ್ನು ಬರೆದ ಫ಼ರ್ಡಿನ೦ಡ್ ಕಿಟಲ್ ರವರ ಪರಿಚಯವನ್ನು ತಾವೆ ಕ್ಲಿಕ್ಕಿಸಿದ ಕೆಲ ಚಿತ್ರಗಳ ಜೊತೆಗೆ ನಮಗೆ ವಿವರವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ.
ನಿ೦ಘಟುಗಳ ಬರೆಯುವ ಈ ಲೇಖಕರ ಪರಿಶ್ರಮ, ತೆಗೆದುಕೊಳ್ಳುವ ಸಮಯ ನಮ್ಮ ಊಹೆಗೂ ನಿಲಕದ್ದು. ಇದನ್ನೆಲ್ಲ ನಮ್ಮ ಅರಿವಿಗೆ ತ೦ದ ಶ್ರೀಯುತ ದೇಸಾಯಿಯವರಿಗೆ ಧನ್ಯವಾದಗಳು.
ಈ ಲೇಖನ ಒದಿದ ನ೦ತರ ಲಿಚ್ ಫೀಲ್ಡ್ ಪಟ್ಟಣಕ್ಕೆ ನೀವು ಬೇಟಿ ಕೊಡುವಿರೆ೦ಬ ನ೦ಬಿಕೆ ನನಗಿದೆ -ಸ೦)


ಈ ವರ್ಷದ ಸೆಪ್ಟೆಂಬರ್ 18ರಂದು ಅಂದರೆ ಇದೇ ವಾರ ಡಾ ಜಾನ್ಸನ್ ಎಂದು ಪ್ರಸಿದ್ಧರಾದ ಸಾಮ್ಯುಯೆಲ್ ಜಾನ್ಸನ್ ಅವರ 308 ನೆಯ ಹುಟ್ಟು ದಿನ. ಅದನ್ನು ತನ್ನ ಗೀಚು ಚಿತ್ರ(doodle) ದಿಂದ ಗೂಗಲ್ ಗುರುತಿಸಿದೆ. ಆತ ಹುಟ್ಟಿದ್ದು (18-09-1709). ಇಂಗ್ಲಂಡಿನ ಸ್ಟಾಫರ್ಡ್ ಶೈರಿನ ಲಿಚ್ ಫೀಲ್ಡ್ ನಲ್ಲಿ ಅವರ ತಂದೆಯ ಪುಸ್ತಕದಂಗಡಿಯ ಮಹಡಿಯಲ್ಲಿರುವ ಒಂದು ಕೋಣೆಯಲ್ಲಿ ಸಾಮ್ಯುಯೆಲ್ ಹುಟ್ಟಿದ್ದು. ಇದು ಕಾಕತಾಳೀಯವಲ್ಲವೇ? ಅವೇ ಪುಸ್ತಕಗಳಲ್ಲಿ ಬಳಸುವ ಶಬ್ದಗಳ ಅರ್ಥ, ವ್ಯಾಖ್ಯೆ, ಉಚ್ಚಾರಣೆಗಳ ಬಗ್ಗೆಯೇ ಬರೆದು “ಇಂಗ್ಲೀಷ್ ನ ಆದಿ ನಿಘಂಟುಕಾರ”ರೆಂದು ಹೆಸರುವಾಸಿಯಾದರು ಅವರು.
ಈಗ ಆ ಮನೆ ಮ್ಯೂಜಿಯಮ್ ಆಗಿದೆ. ಅದಕ್ಕೆ ನೀವೂ ಭೇಟಿ ಕೊಡಬಹುದು. ಜಾನ್ಸನ್ ನಿಘಂಟುಕಾರನೆಂದು ಜಗದಾದ್ಯಂತ ಪ್ರಸಿದ್ಧನಾದರೂ ಆಂಗ್ಲ ಸಾಹಿತ್ಯಕ್ಕೆ ಆತನ ಕೊಡುಗೆ ಕವಿತೆ, ವಿಮರ್ಶೆ, ಪ್ರಬಂಧಗಳಲ್ಲದೆ ಕವಿ-ನಾಟಕಕಾರರ ವಿಮರ್ಶಾತ್ಮಕ ಜೀವನ ಚರಿತ್ರೆ ಈ ಎಲ್ಲ ಕ್ಷೇತ್ರಗಳಲ್ಲೂ ಅಪಾರವಾಗಿದೆ. ಆತನ ಕೃತಿಗಳ ಅಭ್ಯಾಸ ಮಾಡದ ನನ್ನಂಥ ಸಾಮಾನ್ಯನಿಗೂ ಈ ಪಟ್ಟಣದಲ್ಲಿ ಇನ್ನೂ ಎಷ್ಟೋ ಆಕರ್ಷಣೆಗಳಿವೆ!
ಈ ಊರಿನ ಆತನ ಜನ್ಮಸ್ಥಳದ ಮನೆಗೆ ಪ್ರವೇಶ ಶುಲ್ಕವಿಲ್ಲ. ಆದರೆ ಆತ A Dictionary of the English Language ನಿಘಂಟನ್ನು ಯಾವ ಮನೆಯಲ್ಲಿ ಕೂತು ಬರೆದು ಮುಗಿಸಿದನೋ ಆ ಲಂಡನ್ ಮನೆಗೆ ಫೀ ಇದೆ.
ಕೆಲವೇ ತಿಂಗಳ ಹಿಂದೆ ನನ್ನ ಶಾಲೆಯ ಸಹಪಾಠಿಯೊಂದಿಗೆ ಲಿಚ್ ಫೀಲ್ಡ್ ಗೆ ಹೋದೆ. ಆ ಮನೆಗೆ ಕೊಟ್ಟ ಭೇಟಿ ಅವಿಸ್ಮರಣೀಯ. ಸಾಧಾರಣ ಪ್ರಮಾಣದ ಪಟ್ಟಣ ಲಿಚ್ ಫೀಲ್ಡ್. ಅದಕ್ಕೆ ’ಸಿಟಿ’ ಉಪಾಧಿ ಬಂದುದು ಅದರ ವೈಭವಯುತ ಕೆಥಿಡ್ರಲ್ ದಿಂದ. ಊರ ಮಧ್ಯದ ಮಾರ್ಕೆಟ್ ಸ್ಕ್ವೇರ್ದಲ್ಲಿ ಎತ್ತರದ ಪೀಠದ ಮೇಲೆ ವಿಚಾರಮಗ್ನನಾಗಿ ವಿರಾಜಮಾನಾದ ಬಿಳಿ ಶಿಲೆಯ ಆತನ ಮೂರ್ತಿಯನ್ನು ತಲೆಯೆತ್ತಿ ನೋಡಬೇಕು. ಅದು ಆತನ ಮನೆಯ ಎದುರಿಗೇ ಇರುವದರಿಂದ ಮನೆಗೆ ಬಂದು ಹೋಗುವವರ ಮೇಲೆ ಆತ ಕಣ್ಣಿಟ್ಟಂತಿದೆ! ಆತನ ಎಡಬದಿಯಲ್ಲಿ ಸೇಂಟ್ ಮೇರಿ ಚರ್ಚಿನ ಹೊರ ಗೋಡೆಯಮೇಲೆ ಮೂರು ಫಲಕಗಳು ಹಿಂದಿನ ಕಾಲದಲ್ಲಿ

ಅಗ್ನಿಗಾಹುತಿಯಾದ ಹುತಾತ್ಮರ ಹೆಸರುಗಳನ್ನು ಸಾರುತ್ತವೆ. ಹದಿನೇಳು ಮತ್ತು ಹದಿನೆಂಟನೆಯ ಶತಮಾನಗಳಲ್ಲಿ ಪ್ರಜೆಗಳು ಅನುಭವಿಸಿದ ಭೀಕರ ಶಿಕ್ಷೆಗಳ ವರ್ಣನೆ ಮಾನವನ ಹೇಯ ಕೃತಿಗಳಿಗೆ ಸಾಕ್ಷಿಯಾಗಿವೆ.
ಪುಸ್ತಕಗಳನ್ನು ಮಾರುವದಲ್ಲದೆ ಜಾನ್ಸನ್ನನ ತಂದೆ ಪುಸ್ತಕಗಳ ಮುದ್ರಣ ಮತ್ತು ಪ್ರಕಾಶನ ವೃತ್ತಿಯಲ್ಲೂ ತೊಡಗಿದ್ದನಾದರೂ ಮನೆಯ ಆರ್ಥಿಕ ಸ್ಠಿತಿ ಅಷ್ಟು ಚೆನ್ನಾಗಿರಲಿಲ್ಲ. ಅತ್ಯಂತ ಪ್ರತಿಭಾವಂತನಾಗಿದ್ದ ಆ ಹುಡುಗ ಅಂದರೆ ಸಾಮ್ಯುಯೆಲ್ ಗೆ ಅವನ ಮೂರನೆಯ ವಯಸ್ಸಿನಲ್ಲೇ ಓದಲು ಕಲಿಸಿದ್ದ. ಆಯುಷ್ಯವಿಡೀ ಅನಾರೋಗ್ಯದಿಂದ ಬಳಲಿದ ಸಾಮ್ಯುಯೆಲ್ ನ ಆಕ್ಸ್ಫರ್ಡ್ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲ ಬೇಕಾಯಿತಂತೆ. ಚಿಕ್ಕಂದಿನಲ್ಲೇ ಸ್ಕ್ರೋಫುಲಾ (ಗಂಡುಮಾಲೆ)ಅಂಟಿತು. ಆತನ
ಮುಖದ ಮೇಲೆ, ಗಂಟಲು ಅಲ್ಲದೆ ಕಣ್ಣಿನಲ್ಲೂ ಕಲೆಗಳಾಗಿ ಆತನ ಒಂದು ಕಣ್ಣಿನ ದೃಷ್ಟಿ ಅಷ್ಟಕ್ಕಷ್ಟೇ ಇತ್ತು. ಅದಲ್ಲದೆ ಮುಖದಲ್ಲಿ ತನಗರಿವಿಲ್ಲದೆ ಪದೇ ಪದೇ ಬರುವ ಅಸಹ್ಯ ಅನೈಚ್ಛಿಕ ಸೆಳೆತಗಳು(tics). ಆತನ ಮರಣಾನಂತರ ಆ ಲಕ್ಷಣಗಳನ್ನು ಗುರುತಿಸಿದ ತಜ್ಞರು ಅದು ಟೂರೆಟ್ ಸಿಂಡ್ರೋಮ್ ದ (Tourette syndrome) ಲಕ್ಷಣಗಳು ಎಂದು ವಾದಿಸಿದ್ದಾರೆ. ಈ ’ಮುಖದ ಮೇಲಿನ ’ಅಂಗ ಚೇಷ್ಟೆ’ಯಿಂದಾಗಿ ಆತನಿಗೆ ಕೆಲಸ ದೊರಕಿಸಲು ಕಠಿಣವಾಯಿತು. ಆದರೂ ಆತನ ಹರಿತವಾದ ಬುದ್ಧಿ, ಜ್ಞಾಪಕಶಕ್ತಿ ಮತ್ತು ಓದಿನ ಹರಹು ಆತನ ಬಗ್ಗೆ ಜನರಿಗೆ ಆಶ್ಚರ್ಯ ಮತ್ತು ಗೌರವ ಹುಟ್ಟಿಸುತ್ತಿತ್ತು. ಇಪ್ಪತ್ತೈದನೆಯ ವಯಸ್ಸಿಗೆಲ್ಲ ಇನ್ನೇನೂ ಓದುವದು ಉಳಿದಿರಲಿಲ್ಲವೇನೋ ಅನ್ನುವಂತೆ ಲಭ್ಯವಿದ್ದ ಪುಸ್ತಕಗಳೆಲ್ಲವನ್ನೋದಿ ಅರಗಿಸಿಕೊಡಿದ್ದ. ಆತನ ಬರಹಗಳು ಮಹತ್ತರವಾದವು. ಆದರೆ ಜನರಲ್ಲಿ ಅವನ ಖ್ಯಾತಿ ಬೆಳೆದುದು ಮೇಲೆ ಹೇಳಿದ ಆ ಡಿಕ್ಷನರಿಯಿಂದಲೇ.
1775ರಲ್ಲಿ ಹೊರಬಿದ್ದ ಎರಡು ಸಂಪುಟಗಳ ಆ ಶಬ್ದಕೋಶದಲ್ಲಿ 40,000 ಪದಗಳ ವ್ಯಾಖ್ಯಾನವಲ್ಲದೆ 114,000 ಉಲ್ಲೇಖನಗಳಿವೆ. ಆತನ ಲಿಚ್^ಫೀಲ್ಡ್ ಮನೆಯಲ್ಲಿ ಅದರ ಎರಡು ಪ್ರತಿಗಳಿವೆ. ನಾನು ಶಾಲೆಯಲ್ಲಿದ್ದಾಗ ಅದರ ಬಗ್ಗೆ ಕೇಳಿದ ನನಗೆ ಈ ಅವೃತ್ತಿಯ 12″ಉದ್ದದ ಪುಟಗಳನ್ನು ತಿರುವಿ ಹಾಕಿದಾಗ ಮೈ ನವಿರೆದ್ದಿತು. ಮೂರು ವರ್ಷಗಳಲ್ಲಿ ಪೂರ್ತಿ ಮಾಡುತ್ತೇನೆಂದು ಆರಂಭಿಸಿದ ನಿಘಂಟಿನ ಯೋಜನೆ ಮುಗಿಸಲು ಆತನಿಗೆ ಒಂಬತ್ತು ವರ್ಷಗಳು ಹಿಡಿದವು. ಸಂಭಾವನೆ: 1500ಗಿನಿಗಳು. ನಿಘಂಟುಕಾರನ (ಆರು ಜನರ ಸಹಾಯ ಇದ್ದರೂ ಸಹ) ಏಕಾಂಗಿತನವನ್ನು ’ಡಲ್” (dull) ಶಬ್ದದ ಅರ್ಥವನ್ನು ಕೊಡುವಾಗ ಆತ ವರ್ಣಿಸುತ್ತಾನೆ: ಸಪ್ಪೆ, ಬೇಸರ ತರಿಸುವ; ಉದಾ: ನಿಘಂಟು ಬರೆಯುವದು ನೀರಸ ಕೆಲಸ. ನಿಘಂಟುಕಾರ ಅಂದರೆ? Lexicographer: a writer of dictionaries; a harmless drudge (ಕತ್ತೆ ದುಡಿತದವ).

ಆತನ ನಿಘಂಟಿನ ಬಗ್ಗೆ ಬರೆಯುವಾಗ ಕನ್ನಡದ ಇಬ್ಬರು ಪ್ರಸಿದ್ಧ ನಿಘಂಟುಗಾರರ ನೆನಪು ಬರುತ್ತದೆ. ಒಬ್ಬರು ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿಯಿಂದ ಗೌರವಿತರಾದ ಶತಾಯುಷಿ ನಾಡೊಜ ಜಿ ವೆಂಕಟಸುಬ್ಬಯ್ಯನವರು. ಈ ನಿಘಂಟುಬ್ರಹ್ಮನ ಹತ್ತು ಸಾವಿರ ಪುಟಗಳ ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟಿನ ಬಗ್ಗೆ ಅವರೆ ಹೇಳಿದಂತೆ ಅದರ ಕೆಲಸವನ್ನು 50ವರ್ಷಗಳ ಹಿಂದೆಯೇ ಪ್ರಾರಂಭಮಾಡಿದ್ದರೂ ನಂತರ ಸತತವಾಗಿ 25 ವರ್ಷಕ್ಕೂ ಹೆಚ್ಚು ಕಾಲಾವಧಿಯ ದುಡಿತದ ಫಲ. ಅದು ಎಂಟು ಸಂಪುಟಗಳ ಅದ್ವಿತೀಯ ನಿಘಂಟು. ಬೇರಾವ ಭಾರತೀಯ ಭಾಷೆಯಲ್ಲೂ ಇಂಥ ಕೆಲಸ ಆಗಿಲ್ಲವೆಂದು ಈ ”ಶಬ್ದ ಬ್ರಹ್ಮ”ಎಂದೇ ಕರೆಯಲ್ಪಡುವ ”ಜಿ ವಿ’ ಹೆಮ್ಮೆಯಿಂದ ಹೇಳುತ್ತಾರೆ. ಅವರಿಗೆ ಸಹಾಯಕರಾಗಿ 80 ರಿಂದ 90 ಜನ ಶಬ್ದಗಳನ್ನು ಕಲೆಹಾಕಿದರಂತೆ. ಅಕಾರಾದಿಯಾಗಿ ಶಬ್ದಗಳನ್ನು ಹೊಂದಿಸಲೇ 10 ವರ್ಷ ಬೇಕಾಯಿತಂತೆ! ಮೂರು ಶತಮಾನಗಳ ಹಿಂದಿನ ಲಿಚ್ ಫೀಲ್ಡ್ ಗೂ ಇಂದಿನ ಬೆಂಗಳೂರಿಗೂ ಎಷ್ಟೊಂದು ಅಂತರ!

ಇನ್ನೊಬ್ಬ ನಿಘಂಟುಕಾರ ಎಂದರೆ ಭಾರತಕ್ಕೆ ಮಿಶನರಿಯಾಗಿ ಬಂದ ಫರ್ಡಿನಂಡ್ ಕಿಟಲ್. ಈತ ಸಹ ಕನ್ನಡ-ಇಂಗ್ಲಿಷ್ ಶಬ್ದಕೋಶವನ್ನು ಒಂಟಿಯಾಗಿಯೇ ಬರೆದುದ್ದು. 1894 ರಲ್ಲಿ ಪ್ರಕಟವಾದ 1750ಪುಟಗಳ ಆ ಕನ್ನಡ ಕೋಶದಲ್ಲಿ 70,000 ಶಬ್ದಗಳ ಅರ್ಥವಿದೆ. ಜೊತೆಗೆ ಪ್ರತಿಯೊಂದು ಶಬ್ದದದ ಉಚ್ಚಾರ, ಪಂಪ, ನಾಗವರ್ಮ, ಹರಿಹರನಿಂದ ಹಿಡಿದು ಲಕ್ಷ್ಮೀಶ, ಸರ್ವಜ್ಞ, ವರೆಗೆ, ಮತ್ತು ಸಮಕಾಲೀನ ಗ್ರಂಥಗಳಿಂದ ಆಯ್ದ ಉದಾಹರಣೆಗಳಿವೆ. ನಾನು ಚಿಕ್ಕಂದಿನಲ್ಲಿ ಕಂದು ಬಣ್ಣದ ರಿಬೈಂಡ್ ಮಾಡಿದ ಅಪರೂಪದ ಕಾಪಿಯನ್ನು ನನ್ನ ಅಜ್ಜ ಮತ್ತು ತಂದೆ ಯಾವಾಗಲು ರೆಫೆರ್ ಮಾಡುತ್ತಿದ್ದುದನ್ನು ನೋಡಿದ್ದೆ. ಇತ್ತೀಚಿನ ವರೆಗೆ ನನಗೆ ಅದರ ಪ್ರತಿ ಸಿಕ್ಕಿರಲಿಲ್ಲ. ಏಶಿಯಾಟಿಕ್ ಪ್ರೆಸ್ ಅವರ 2001ರಲ್ಲಿ ಅಚ್ಚಾದ ಹತ್ತನೆಯ ಪುನರ್ಮುದ್ರಣದ ಹಸಿರುಬೈಂಡಿನ ಕಾಪಿ ಈಗ ಈ ಲೇಖನ ಬರೆಯುವಾಗ ಸಾಥ್ ಕೊಡುತ್ತಿದೆ! ಧಾರವಾಡದಲ್ಲಿ ಬೆಳೆದ ನನಗೆ ಆ ಊರಿನ ಬಾಸೆಲ್ ಮಿಷನ್ ಸಂಸ್ಥೆಗಳಲ್ಲಿ (ಈಗ ಆತನ ಹೆಸರಿನ ಕಿಟಲ್ ಕಾಲೇಜು ಇದೆ) ಕೆಲಸ ಮಾಡುತ್ತ ಬರೆದ ಆ ನಿಘಂಟಿನ ಮೇಲೆ ಬಹಳಷ್ಟು ಮಮತೆ. ಆತ ಧಾರವಾಡದಲ್ಲಿ ಪ್ರತಿ ಮಂಗಳವಾರದ ಸಂತೆಗೆ ಹೋಗಿ ಹಳ್ಳಿಯವರು ಆಡುತ್ತಿದ್ದ ಮಾತನ್ನು ಕೇಳಿ ಶಬ್ದಗಳು, ಗಾದೆಗಳನ್ನು ಸಂಗ್ರಹಿಸುತ್ತಿದ್ದ ಎಂದು ಆ ಶಾಲೆಯಲ್ಲಿ ಶಿಕ್ಷಕರಾಗಿದ್ದ ವರದರಾಜ ಹುಯಿಲಗೋಳ ಮಾಸ್ತರರು ದಾಖಲಿಸಿದ್ದಾರೆ. ಹೇಗೆ ಜಾನ್ಸನ್ನನದು ಇಂಗ್ಲಿಷ್ ಭಾಷೆಯ ಪ್ರಥಮ ಡಿಕ್ಷನರಿ ಅಲ್ಲವೋ ಹಾಗೆಯೇ ಕಿಟ್ಟಲ್ ನ ”Kannada English Dictionary” ಕನ್ನಡದ ಮೊದಲ ಶಬ್ದ ಕೋಶವಲ್ಲ. 10ನೆಯ ಶತಮಾನದ ರನ್ನನ ರನ್ನಕಾಂಡ ಮೊದಲನೆಯದು ಎಂದು ಹೇಳಲಾಗಿದೆ. ಆದರೆ ಇದರಲ್ಲಿಯಷ್ಟು ಪಂಪನ ಆದಿ ಪುರಾಣದಿಂದ ಹಿಡಿದು, ಶಬ್ದಮಣಿದರ್ಪಣ,ಶಬ್ದಮಣಿದರ್ಪಣ,ಕುಮಾರ ವ್ಯಾಸ ’ಭಾರತ’ ಇತ್ಯಾದಿಗಳಿಂದ ಉಲ್ಲೇಖಿಸಿದಷ್ಟು ಶಬ್ದಗಳು, ಸಂಸ್ಕೃತ ಶಬ್ದಗಳ ತತ್ಸಮ-ತದ್ಭವಗಳು ಮತ್ತು ಗಾದೆಗಳ ಸಂಗ್ರಹವನ್ನುಒಂದು
ಶತಮಾನದ ವರೆಗೆ ಬೇರಾವುದೂ ನಿಘಂಟು ಕಿಟಲ್ ಡಿಕ್ಶನರಿಯನ್ನು ಮೀರಿಸಿಲ್ಲ ಎನ್ನಬಹುದು. ಅದರಲ್ಲಿ 1740ಪುಟಗಳ ಈ ಪುಸ್ತಕವನ್ನು ಹೇಗೆ ಬರೆದೆ ಮತ್ತು ಹೇಗೆ ಉಪಯೋಗಿಸಬೇಕೆಂದು ಸೂಚಿಸುವ ಮುನ್ನುಡಿಯೇ 45 ಪುಟಗಳಷ್ಟು ಉದ್ದ! ಕನ್ನಡ ನಾಡಿನಲ್ಲಿ ಸಿಗುವ ಹೂ-ಹಣ್ಣು ಹಂಪಲು, ಮತ್ತು ಗಿಡಗಳ ಸಸ್ಯಶಾಸ್ತ್ರದ ಪ್ರಭೇದದ ಹೆಸರುಗಳನ್ನು ( Linnaeus classification – botanical names) ಸಹ ಕೊಟ್ಟಿದೆ ಅದರಲ್ಲಿ ಅಂದ ಮೇಲೆ ಆತನ ಶ್ರದ್ದೆ, ಅಭ್ಯಾಸ ಮತ್ತು ಪರಿಶ್ರಮಕ್ಕೆ ಎಣೆಯೇ ಇಲ್ಲ. ಮುನ್ನುಡಿಯ ಕೊನೆಗೆ ತನ್ನ ಪ್ರಯತ್ನದಲ್ಲಿ ಕುಂದು ಕೊರತೆಗಳ ಅರಿವು ತನಗಿದೆ ಎಂದು ಹೇಳುವಷ್ಟು ನಮ್ರತೆಯಿತ್ತು ಆತನಲ್ಲಿ!
ಈಗ ಮತ್ತೆ ಬರುವಾ ಲಿಚ್ ಫೀಲ್ಡಿಗೆ. ಜಾನ್ಸನ್ನನ lexicon (ನಿಘಂಟು) ಆತನನ್ನು ಶ್ರೀಮಂತನಾಗಿಯೇನೂ ಮಾಡಲಿಲ್ಲ. ಅಲ್ಲಿಯವರೆಗಿನ ಸಾಹಿತಿಗಳಾದ ಶೇಕ್ಸ್ ಪಿಯರ್, ಮಿಲ್ಟನ್, ಡ್ರೈಡನ್ ಅಂಥ ಮಹಾನ್ ಬರಹಗಾರರ ಕೃತಿಗಳಿಂದ ಉದಾಹರಣೆಗಳನ್ನು ವಿಪುಲವಾಗಿ ಬಳಸಿದ ಈ ಗ್ರಂಥ ಮುಂದಿನ ನಿಘಂಟುಕಾರರಿಗೆ ಮಾದರಿಯಾಗಿತು. ಈ ಕಾರ್ಯವನ್ನು ನಿಯೋಜಿಸಿದ ಪುಸ್ತಕ ವ್ಯಾಪಾರಿಗಳಿಗೆ ಇದು ಪ್ರಕಟವಾದ ಮೇಲೆ ಆಗಿನ ಆಂಗ್ಲ ಭಾಷೆಯನ್ನು ಸ್ಥಾಯಿ(fix)ಯಾಗಿಸುವ, ಅಂದರೆ ವ್ಯವಸ್ಥಿತವಾಗಿ ವರೆದಿಡುವ ಉದ್ದೇಶವಿತ್ತು. ಜಾನ್ಸನ್ ಅದರ ಮುನ್ನುಡಿಯಲ್ಲಿ ಬರೆದಂತೆ ಭಾಷೆ ಚಲನಶೀಲವಲ್ಲವೆ?. ಜಿ ವಿ ಅವರೂ ಇತ್ತೀಚೆಗೆ ಅದನ್ನೇ ಹೇಳಲಿಲ್ಲವೆ? ಭಾಷೆ ಒಂದು ಸಾಗರ; ಹೊಸ ಹೊಸ ಪದಗಳು ಸೇರ್ಪಡೆಯಾಗುತ್ತಿರುವಾಗ ಅದನ್ನು ಕಟ್ಟಿ ಹಾಕಲು ಸಾಧ್ಯವೆ? ನಿಘಂಟು ಪ್ರಕಟವಾದ ಕೂಡಲೆ ಅದನ್ನು ಜರೆದ ಪಂಡಿತರಿದ್ದರು. ಯಾಕಂದರೆ ಆತನ ಡೆಫೆನಿಷನ್ ನಲ್ಲಿ ಸರಳತೆ ಇರದೆ ಒಮ್ಮೊಮ್ಮೆ ಸೊಕ್ಕು, ಕೊಂಕು ಮತ್ತು ವ್ಯಂಗ ಇದ್ದಂತೆ ಕಾಣುತ್ತಿತ್ತು. (ಉದಾ: Oats: a grain which in England is generally given to a horse, but in Scotland it supports the people). ಆದರೂ ಸಾಮಾನ್ಯ ಜನ ಅದನ್ನು ಉತ್ಸಾಹದಿಂದ ಸ್ವೀಕರಿಸಿದರು. ಆಂಗ್ಲ ಸಾಮ್ರಾಜ್ಯದ ಸಾಹಿತ್ಯ ಲೋಕದಲ್ಲಿ ಜನಮಾನಸದ ಮೇಲೆ ತನ್ನ ಗಾಢ ಅಚ್ಚೊತ್ತಿತು; ವಿಶೇಷ ಪ್ರಭಾವ ಬೀರಿತು. ಅದು ಪ್ರಕಟವಾದ ಕೆಲ ಸಮಯದ ನಂತರ ಸ್ಕಾಟ್ಲಂಡಿನ ಜೇಮ್ಸ್ ಬಾಸ್ವೆಲ್ ಆತನನ್ನು ಹುಡುಕಿಕೊಂಡು ಲಂಡನ್ನಿಗೆ ಬಂದು ಆತನ ಸಖ್ಯ ಬೆಳೆಸಿದ. ಆತ ಮಾತಾಡಿದ್ದು, ಆತನ ಬಾಯಿಂದ ಬಂದ ಒಂದೊಂದು ನುಡಿಮುತ್ತು, ಜಾಣ್ನುಡಿ, ವ್ಯಂಗೋಕ್ತಿ ಎಲ್ಲವನ್ನು ಬರೆದಿಟ್ಟುಕೊಂಡು “Life of Samuel Jonson” ಎಂಬ ಆತನ ಜೀವನ ಚರಿತ್ರೆಯನ್ನು ಬರೆದು ಜಾನ್ಸನ್ನನ ಕೀರ್ತಿಯನ್ನು ಇನ್ನೂ ಹರಡಿದ. ಅದರಲ್ಲಿ ಆತ ದಾಖಲಿಸಿದ ಅವರ ಮೊದಲ ಭೇಟಿಯಲ್ಲಿ ನಡೆದ ಸಂಭಾಷಣೆಯನ್ನು ಯಾವ ಇಂಗ್ಲಿಷ್ ಓದುಗನೂ ಮರೆತಿರಲಿಕ್ಕಿಲ್ಲ:
ಬಾಸ್ವೆಲ್: “Mr. Johnson, I do indeed come from Scotland, but I cannot help it.
” ಜಾನ್ಸನ್: “That, Sir, I find, is what a very great many of your countrymen cannot help.”

ಆದರೂ ಅವರಿಬ್ಬರ ಗೆಳೆತನ ಕೊನೆಯ ವರೆಗೂ ಗಾಢವಾಗಿತ್ತು. ವಿಪರ್ಯಾಸವೆಂದರೆ ಆ ನಿಘಂಟಿನ ಕೆಲಸಕ್ಕೆ ಸಹಾಯ ಮಾಡಿದ ಐದಾರು ಜನರಲ್ಲಿ ಸ್ಕಾಟ್ಲಂಡಿನವರೆ ಹೆಚ್ಚಾಗಿದ್ದರು! ಆತನ ವ್ಯಂಗ ಸ್ಕಾಟ್ ಜನಕ್ಕಷ್ಟೇ ಸೀಮಿತವಾಗಿರಲಿಲ್ಲ. ಫ್ರೆಂಚರೂ ಆತನ ಚಾಟೆಯೇಟಿನಿಂದ ಬಚಾವಾಗಿರಲಿಲ್ಲ. ಆ ನಿಘಂಟಿನಲ್ಲಿಯ ಒಂದು ಉದಾಹರಣೆಗಳನ್ನು ನೋಡುವಾ.
“Monsieur: a term of reproach for a Frenchman.” ಇನ್ನೊಂದು ಹೀಗೆ: Trolmydames: of this word I know not the meaning.
ಫ್ರೆಂಚ್ ಮೂಲದ ಈ ಪದದಿಂದ ಅವರಿಗೆ ಕೀಟಲೆ ಕೊಟ್ಟನೋ, ಅಥವಾ ಅದೊಂದು ಆತನ ಕೊಂಕು ನುಡಿಯೋ?
ಕೊನೆಗೆ 53ನೆಯ ವಯಸ್ಸಿನಲ್ಲಿ ಎರಡನೆಯ ಜಾರ್ಜ ಮಹಾರಾಜನಿಂದ ಪೆನ್ಶನ್ ಸಿಕ್ಕ ಮೇಲೆ ಆತನ ಆರ್ಥಿಕ ಪರಿಸ್ಠಿತಿ ಸ್ವಲ್ಪ ಸುಧಾರಿಸಿ ಅವನ ಜೀವನಕ್ಕೆ ನೆಮ್ಮದಿ ಬಂತು. ಅದನ್ನು ಸ್ವೀಕರಿಸುವಾಗ ತನ್ನ ನಿಘಂಟಿನಲ್ಲಿ ತಾನೆ ಬರೆದ ವ್ಯಾಖ್ಯಾನದ ನೆನಪು ಬಂತೋ ಇಲ್ಲವೋ! Pension: An allowance made to any one without an equivalent. In England it is generally understood to mean pay given to a state hireling for treason to his country.”(ಪಿಂಚಣಿ: ಇಂಗ್ಲಂಡಿನಲ್ಲಿ ದೇಶದ್ರೋಹಿಗೆ ಕೊಟ್ಟ ಸಂಬಳ!). ಆದರೆ ಆತನ ಜನಪ್ರಿಯತೆ ಏನೂ ಕಡಿಮೆಯಾಗಲಿಲ್ಲ.
ನಾವು ಆತ ಹುಟ್ಟಿದ ಮನೆಗೆ ಭೇಟಿ ಕೊಟ್ಟು ಹೊರಬರುವಾಗ ಮೊದಲ ಕೋಣೆಯಲ್ಲಿಯ ಒಂದು ಹ್ಯಾಂಡ್ ಬಿಲ್ಲು ಕಂಡಿತು. (ಚಿತ್ರ ನೋಡಿರಿ). ಅದು 1771ರಲ್ಲಿ ಮುದ್ರಿತವಾದ ಪ್ರಕಟಣೆ, ಹೀಗಿತ್ತು:

”ಸಾರ್ವಜನಿಕ ಹರಾಜು: ಆಫ್ರಿಕದಿಂದ ಬಂದ ಒಬ್ಬ ಹತ್ತು ವರ್ಷದ ನೀಗ್ರೋ ಹುಡುಗನನ್ನು ಈ ದಿನ ಹರಾಜು ಮಾಡಲಾಗುವದು.” ಅದನ್ನೋದಿದಾಗ ಆಗ ಇನ್ನೂ ಗುಲಾಮಗಿರಿ ಮುಗಿದಿರಲಿಲ್ಲವೆಂದು ತಿಳಿದು ಮೈಜುಮ್ಮೆಂದಿತು. ಮುಂದೆ 1833 ರಲ್ಲಿ ಗುಲಾಮಗಿರಿಯನ್ನು ರದ್ದುಗೊಳಿಸುವ ಕಾಯಿದೆ ಬಂದ ನಂತರವೇ ಪಶ್ಚಿಮ ದೇಶಗಳಲ್ಲಿ ಅದರ ನಿರ್ಮೂಲನೆ ಪ್ರಾರಂಭವಾಯಿತು.

1752 ರಲ್ಲಿ ಸಾಮ್ಯುಯೆಲ್ ಜಾನ್ಸನ್ ಬಳಿ ಫ್ರಾನ್ಸಿಸ್ ಬಾರ್ಬರ್ ಎನ್ನುವ ಹತ್ತು ವರ್ಷದ ಗುಲಾಮಗಿರಿಯಿಂದ ಮುಕ್ತನಾದ ಜಮೈಕನ್ ಕರಿಯ ಹುಡುಗ (ಬೇರೆಯವ) ಲಂಡನ್ನಿಗೆ ಕೆಲಸಕ್ಕೆ ಬಂದು ಸೇರಿ ಕೊಂಡ. ಅದಕ್ಕೂ ಮೊದಲು ಆ ಹುಡುಗ ಚಿಕ್ಕವನಿದ್ದಾಗ ಒಬ್ಬ ಪ್ಲಾಂಟೇಷನ್ ಮಾಲಕ ಜಮೈಕಾದಿಂದ ವಾಪಸ್ ಇಂಗ್ಲಂಡಿಗೆ ಬರುವಾಗ ಕರೆತಂದು ಬೋರ್ಡೀಂಗ್ ಶಾಲೆಯಲ್ಲಿ ಕೆಲ ವರ್ಷಶಿಕ್ಷಣ ಕೊಡಿಸಿದ್ದ. ಜಾನ್ಸನ್ ಅವನನ್ನು ಚೆನ್ನಾಗಿಯೇ ನೋಡಿಕೊಂಡ. ತಾನು ಸಹ ತನ್ನ ರೂಪ, ಅಂಗ ವಿಕಾರಗಳಿಂದ ಜನರಿಂದ ಅನುಭವಿಸಿದ ಪ್ರತಿಕ್ರಿಯೆಗಳಿಂದಾಗಿಯೋ ಏನೋ ಆತನಲ್ಲಿ ಅನುಕಂಪವಿತ್ತು. ಎಳೆಯನ ಮುಂದಿನ ಶಿಕ್ಷಣದ ವ್ಯವಸ್ಥೆ ಮಾಡಿದ. ಅಷ್ಟೇ ಅಲ್ಲ, ನಂತರ ಲಂಡನ್ನಿನಲ್ಲಿ 1784ರಲ್ಲಿ ತೀರಿಕೊಳ್ಳುವ ಮೊದಲು ಜಾನ್ಸನ್ ತನ್ನ ಉಯಿಲಿನಲ್ಲಿ ಅವನಿಗೆ 70 ಪೌಂಡುಗಳ (ಅದು ಆಗ ದೊಡ್ಡ ಮೊತ್ತ) ದೇಣಿಗೆ ಕೊಟ್ಟ. ಆತ ಮುಂದೆ ಲಂಡನ್ ಬಿಟ್ಟು ಲಿಚ್ ಫೀಲ್ಡಿಗೆ ತೆರಳಬೇಕೆಂದು ಬರೆದಿದ್ದ. ಫ್ರಾನ್ಸಿಸ್ ಹಾಗೆಯೇ ಮಾಡಿ ಆ ಊರಿನ ಪಕ್ಕದಲ್ಲಿ ಒಂದು ಶಾಲೆ ಪ್ರಾರಂಭಿಸಿದನಂತೆ. ಆತನ ವಂಶಜರು ಇನ್ನೂ ಅಲ್ಲೇ ಸುತ್ತಮುತ್ತ ಇದ್ದಾರೆಂದು ವದಂತಿ. ಜಾನ್ಸನ್ನಿನ ಮನೆಯಲ್ಲಿ ಜೋಶುವಾ ರೆನಾಲ್ಡ್ ಸ್ ಎಂಬ ಪ್ರಸಿದ್ಧ ವರ್ಣಚಿತ್ರಕಾರ ಪೇಂಟ್ ಮಾಡಿದ ಒಬ್ಬ ಕರಿಯ ಮನುಷ್ಯನ ಚಿತ್ರವಿದೆ. ಆತ ಫ್ರಾನ್ಸಿಸ್ ಬಾರ್ಬರ್ ಎಂದು ಕೆಲವರು ತಿಳಿಯುತ್ತಾರೆ.

ಈ ಊರಲ್ಲಿ ಭವ್ಯವಾದ ಲಿಚ್ಫೀಲ್ಡ್ ಕೆಥಿಡ್ರಲ್, ’ಆದಿ ನಿಘಂಟುಕಾರ ಜಾನ್ಸನ್’ ಹುಟ್ಟಿದ ಮನೆ ಅಲ್ಲದೆ ಇನ್ನು ಕೆಲವು ಟೂರಿಸ್ಟ್ ಆಕರ್ಷಣೆಗಳಿವೆ. ನೀವು ಹೋದಾಗ ಚಾರ್ಲ್ಸ್ ಡಾರ್ವಿನ್ನನ ಅಜ್ಜ ಎರಾಸ್ಮಸ್ ಡಾರ್ವಿನ್ನನ ಮನೆ ಮತ್ತು ಅದಕ್ಕೆ ಹತ್ತಿದ ಔಷಧಿ ಮೂಲಿಕೆಗಳ ತೋಟ, ಆತನ ಅವಿಷ್ಕರಣಗಳು, ಸಂಶೋಧನೆಯ ಉಪಕರಣಗಳು ಇವನ್ನು ನೋಡಲು ಮರೆಯದಿರಿ. ಆತ ಪ್ರಸಿದ್ಧ ವೈದ್ಯನಲ್ಲದೆ, ಸಸ್ಯಶಾಸ್ತ್ರಜ್ಞ, ವಿಜ್ಞಾನಿ, ಕವಿ, ಶಿಕ್ಷಣ ತಜ್ಞ ಎಲ್ಲವೂ ಆಗಿದ್ದ. ಆತನಿಂದಲೇ ಅವನ ಸಾನ್ನಿಧ್ಯದಿಂದಲೇ ಮೊಮ್ಮಗ ಚಾರ್ಲ್ಸ್ ಡಾರ್ವಿನ್ನನಲ್ಲಿ ವಿಕಾಸವಾದದ ಬೀಜ ಬಿತ್ತಿರಬೇಕೆಂದು ಪ್ರತೀತಿ.
”ತತ್ವಜ್ಞಾನಿಗಳ ತವರೂರೆಂದು” ಕರೆಯಲ್ಪಟ್ಟ ಲಿಚ್ ಫೀಲ್ಡ್ ಸಿಟಿ ನಿಸ್ಸಂಶಯವಾಗಿಯೂ ಇಂಗ್ಲಂಡಿನ ಒಂದು ಪ್ರೇಕ್ಷಣೀಯ ಸ್ಥಳವೆನ್ನ ಬಹುದು.
(ವಿವಿಧ ಆಧಾರಗಳಿಂದ)
ಲೇಖನ ಮತ್ತು ಉಳಿದ ಚಿತ್ರಗಳು: ಶ್ರೀವತ್ಸ ದೇಸಾಯಿ
Dear Dr.Desai, It has been my pleasure and privilege to have studied medicine with you and have shared many hilarious moments of a medical student’s life. Ever since those days we have exchanged many joyful moments. Your poems, jokes, anecdotes and many other such literary works bring much needed recharge to the exhausted batteries of our souls and spirits. Please keep us recharged periodically, so that we can function fully….Your friend Down under…Albert
LikeLike
Dear Albert, Likewise! You are kind. ಕನ್ನಡ ಓದುವ ಚಟ ಇನ್ನೂ ಇದೆಯಾ?”ಅನಿವಾಸಿ’ಗೆ ಸ್ವಾಗತ!
LikeLike
SP ( We used to address Desai as SP in childhood, my school classmate ) Well written, informative and gained knowledge. Keep it up. VITTHAL GUDI
LikeLike
ಈ ಶಹರ ಮತ್ತು ಅದರ ಗಣ್ಯವ್ಯಕ್ತಿಗಳ ಬಗ್ಗೆ ಆಸ್ಥೆ ಹುಟ್ಟಿದ್ದು ಸಂತೋಷ. ಶರಾ ಬರೆದ ಎಲ್ಲರಿಗೂ ಧನ್ಯವಾದಗಳು!
LikeLike
ಶ್ರೀವತ್ಸರಿಗೆ
ನಮಸ್ಕಾರ
ನಿಮ್ಮ litchfield ,ಸ್ಯಾಮ್ಯುಯೆಲ್ ಜಾನ್ಸನ್,ಕಿಟೆಲ್ ಅವರ ಬಗ್ಗೆ ಬರೆದ ಲೇಖನ ತುಂಬಾ ಚೆನ್ನಾಗಿದೆ. ನೀವು ಇಷ್ಟು ಸಂಶೋಧನ ಮಾಡಿ ಓದುವ ಎಲ್ಲ ಜನರಿಗೆ
Litchfield ಶಹರವನ್ನು ನೋಡುವ ಕುತೂಹಲತೆ ಕೆರಳಿಸುವದರಲ್ಲಿ ಸಂದೇಹವಿಲ್ಲ.
ಅರವಿಂದ ಕುಲ್ಕರ್ಣಿ
LikeLiked by 1 person
ದೇಸಾಯಿಯವರೇ,
ಎಷ್ಟು ಮಾಹಿತಿಪೂರ್ಣ ಲೇಖನವಿದು! ನೀವು ಆಸ್ಥೆಯಿಟ್ಟು ಮಾಹಿತಿಯನ್ನು ಸಂಶೋಧಿಸಿ, ಓದುಗರಿಗೆ ವಿಷಯದ ಆಳ-ಅಗಲ ಎರಡರ ಪರಿಚಯವನ್ನೂ ಮಾಡಿಸಿದ್ದೀರಿ. ಅಭಿನಂದನೆಗಳು. ‘ಅನಿವಾಸಿ’ ಯಲ್ಲಿ ಇಂತಹ ಲೇಖನಗಳು ಮತ್ತೆ ಮತ್ತೆ ಪ್ರಕಟವಾಗಲಿ!
ವಿನತೆ ಶರ್ಮ
LikeLiked by 1 person
ದೇಸಾಯಿ ಅವರೆ ಎಂದಿನಂತೆ ನಿಮ್ಮ ಲೇಖನದಲ್ಲಿ ಮಾಹಿತಿಯ ಕಣಜವೇ ಅಡಗಿದೆ. ಲಿಚ್ ಫ಼ೀಲ್ಡಿನ ಸ್ಥಳ ಮಹಿಮೆಯನ್ನು ಬಹಳ ಚೆನ್ನಾಗಿ ಅಲ್ಲಿಯ ವ್ಯಕ್ತಿಗಳ ಸಾಧನೆಗಳ ಜೊತೆಗೂಡಿಸಿ ಬರೆದೆದ್ದೀರಿ. ಇಂದು ಕೇವಲ ಕಂಪ್ಯೂಟರ್ ಕೀಲಿಮಣೆಯ ಕೀಲಿಯನ್ನೊತ್ತಿ, ಕನ್ನಡ, ಇಂಗ್ಲೀಶ್ ಮತ್ತು ಪ್ರಪಂಚದ ಎಲ್ಲಾ ಭಾಷೆಗಳ ಶಬ್ದಕೋಶಗಳನ್ನು, ಲೀಲಾಜಾಲವಾಗಿ ಕಂಪ್ಯೂಟರ್ ಪರದೆಯ ಮೆಲೆ ಓದುವ ನಾವು, ಅಸಲಿನಲ್ಲಿ ಈ ಶಬ್ದಕೋಶಗಳನ್ನು ರಚಿಸಿದ ಅಪ್ರತಿಮ ವ್ಯಕ್ತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಂತಹ ಒಬ್ಬ ವ್ಯಕ್ತಿ ಸಾಮ್ಯಯಲ್ ಜಾನ್ಸನ್ ಬಗ್ಗೆ ಎಶ್ಟೊಂದು ವಿಷಯಗಳನ್ನು ಕ್ರೋಢೀಕರಿಸಿ ಬರೆದಿದ್ದೀರಿ! ಜೊತೆಗೆ ಕನ್ನಡ ನಿಘಂಟಿನ ಜಿಎಸ್ ವಿ ಬಗ್ಗೆ ಮತ್ತು ಕಿಟಲ್ ನಂತಹ ಮತ್ತೊಬ್ಬ ಮೇಧಾವಿಯ ಸಾಧನೆಗಳನ್ನೂ ಸೇರಿಸಿ ನಮಗೆಲ್ಲಾ ಒಳ್ಳೆಯ ಮಾಹಿತಿ ಒದಗಿಸಿಕೊಟ್ಟಿದ್ದೀರಿ. ಧನ್ಯವಾದಗಳು.
ಉಮಾ ವೆಂಕಟೇಶ್
LikeLiked by 1 person
ಅಪರೂಪದ ಲೇಖನ. ಕತೆ, ಕಾದ೦ಬರಿ, ಪದ್ಯ, ನಾಟಕ ಬರೆದವರ ಬಗ್ಗೆ ನಮಗೆಲ್ಲ ಹೆಚ್ಚು ಗೊತ್ತಿರುತ್ತದೆ. ಆದರೆ ಅವನ್ನೆಲ್ಲ ಬರೆಯಲು ಬೇಕಾಗುವ ಬಾಷಾ ಸ೦ಪತ್ತನ್ನು ಒದಗಿಸಿಕೂಟ್ಟ ನಿಘ೦ಟುಕಾರರ ಪಾತ್ರ ಕೆಲವೊಮ್ಮೆ ಪರದೆಯ ಹಿ೦ದೆ ಹೋಗಿಬಿಡುತ್ತದೆ. ಕನ್ನಡ ಮತ್ತು ಆ೦ಗ್ಲ ಭಾಷೆಯ ಅತಿ ಮುಖ್ಯ ನಿಘ೦ಟುಕಾರರನ್ನು ಪರಿಚಯಿಸಿದ ದೇಸಾಯಿಯವರಿಗೆ ಧನ್ಯವಾದಗಳು.
ನಮಗೆ ಬಹಳ ದೂರವಿಲ್ಲದ ಲಿಚ್ ಫ಼ೀಲ್ಡ್ ಸ್ಥಳದ ಬಗ್ಗೆ ಸಹ ನಮಗೆ ಹೆಚ್ಚು ತಿಳಿದಿರಲಿಲ್ಲ. ಈ ಜಾಗಕ್ಕೆ ಭೇಟಿ ಕೊಡುವ ಹ೦ಬಲ ಈ ಲೇಖನ ನಮ್ಮಲ್ಲಿ ಮೂಡಿಸಿದೆ.
ದಾಕ್ಷಾಯಿನಿ
LikeLiked by 1 person
ತುಂಬಾ ಸುಂದರ ಮಾಹಿತಿ ಪೂರ್ಣ ಲೇಖನ. ಎಷ್ಟೊಂದು ವಿಶಿಷ್ಟ ವಿಷಯಗಳ ಆಗರ ಈ ಬರಹ ಎನಿಸದೇ ಇರದು ಅದನ್ನು ಓದಿದಾಗ.ಯಾವುದೇ ಭಾಷೆಯನ್ನು ಕಟ್ಟಿ ಹಾಕಲಾಗದು .ಸಾಗರದಲೆಗಳನ್ನು ಕಟ್ಟಿ ಹಾಕುವೆ ಅಂದ ಲೆಕ್ಕವೇ ಅದೂ. ಭಾಷೆಯ ಸಿರಿಶವಂತಿಕೆಗೆ ಭಾಷೆ ಚಲನಶೀಲವಾಗಿರುವುದೂ ಅಷ್ಟೇ ಮುಖ್ಯವೆಂಬುದರಲ್ಲಿ ಎರಡು ಮಾತಿಲ್ಲ. ಈ ವಿಷಯದಲ್ಲಿ ನಿಘಂಟುಗಳ ಪಾತ್ರ ಮುಖ್ಯವೆಂಬುದು ಈ ಬರಹ ಓದಿದಾಗ ಮನದಟ್ಟಾಗುತ್ತದೆ.ಓದದೇ ಇರುವವರಿಗೂ ಆ ನಿಘಂಟುವನ್ನು ಓದಲೇಬೇಕೆಂಬ ಭಾವ ಮೂಡುತ್ತದೆ.ನನ್ನೆಣಿಕೆಯಂತೆ ದಿನಕ್ಕೆ ಸ್ವಲ್ಪ ವೇಳೆಯನ್ನಾದರೂ ನಿಘಂಟುಗಳ ಅಧ್ಯಯನಕ್ಕೆ ಮೀಸಲಿಡುವುದು ಸೂಕ್ತ. ಇಷ್ಟೆಲ್ಲಾ ವಿಚಾರಗಳ ಹುಟ್ಟು ಹಾಕುತ್ತದೆ ಈ ಲೇಖನ . ಇಂತಹ ಅಪರೂಪದ ಲೇಖನ ನೀಡಿದ ಶ್ರೀವತ್ಸ ದೇಸಾಯಿಯವರಿಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು
ಸರೋಜಿನಿ ಪಡಸಲಗಿ
LikeLiked by 1 person
Desai Avare. A fine piece, very informative and interesting.
Ramamurthy, Basingstoke.
LikeLiked by 1 person
Thank you. When you visit the place, ನಮ್ಮ ಮನೆಗೂ ಬನ್ನಿ!
LikeLike