ಸಾಮಾನ್ಯರ ಬದುಕಿನ ಅಸಮಾನ್ಯ ಘಟನೆಗಳು

                                                                               ೧
ಇದೊಂದು  ನಡೆದ ಘಟನೆ.
ಇಂಗ್ಲೆಂಡಿನಲ್ಲಿ  ಬಹಳ ಚಳಿ ಅಂತ ಎಲ್ಲರಿಗೂ ಗೊತ್ತು .
ಸುಮಾರು ಹತ್ತು ದಶಕಗಳ  ಹಿಂದೆ ಗಾಳಿ  ಎಂದರೆ ಸುಂಟರಗಾಳಿ. ಮನೆಮೇಲಿನ ಹೆಂಚುಗಳು ದಡ ದಡಾ ಅಂತ ಉದರಿ ಬೀಳುತಿತ್ತು.  ಆಕಾಶದಿಂದ  ಕಣ್ಣಿಗೆ ಮನೋಹರವಾದ ಮಲ್ಲಿಗೆ ಜಾಜಿ ಬಿಳಿ ಗುಲಾಬಿ ಹೂವಿನ ಮಳೆ ಕರೆದಂತೆ ಮಂಜು ಉದರುತ್ತಿತ್ತು.ಗಿಡ ಮರಗಳ ಮೇಲೆ ಮುತ್ತಿನ ಹಾರ ಹಾಕಿದಂತೆ ತೋರುತ್ತಿತ್ತು. ಎಲ್ಲೆಲ್ಲೂ ಸ್ಪಟಿಕದಂಥ ಶುಭ್ರವಾದ ಮಂಜು ಆಹ್ಲಾದಕರವಾಗಿ  ಹೊಳೆಯುತ್ತಿತ್ತು ಪ್ರಕೃತಿ ದೇವಿ ಬಣ್ಣಬಣ್ಣದ ಹೂವಿನ ಹಾರ ಹಾಕಿದಂತೆ ಕಾಮನಬಿಲ್ಲು ಮಂಜಿನ ಮೇಲೆ ಥಳ ಥಳ ಮಿಂಚುತಿತ್ತು.
ಆಹಾ, ಎಂತ ದೃಶ್ಯ ! ಎಂದು  ಕಣ್ಣಿನ ತುಂಬಾ ಪ್ರಕೃತಿ ಸಿರಿ ದೇವಿಯ ವೈಭವನನ್ನು ನೋಡುತ್ತಾ ವಾಹನವನ್ನು
ಚಾಲಿಸುತ್ತಾ ಬರುತ್ತಿದ್ದಲು  ಗೆಳತಿ  ಕಾಂತಾ. ಸುಮಾರು ಸಾಯಂಕಾಲ ಆರು ಗಂಟೆ.ಆಗಲೇ ಮಸುಕು ಹರಡುತ್ತಾ ಇತ್ತು.
ಅವಳು  ಆಸ್ಪತ್ರೆ ಕೆಲಸ ಮುಗಿಸಿ ಮನೆಗೆ ಹೋಗುವ ಹಾದಿ  ಅದು. ಚೆನ್ನಾಗಿ ಪರಿಚಯವಿದ್ದ ರಸ್ತೆ.
ಹೀಗೆ ಬರುತ್ತಾ ಇರಬೇಕಾದರೆ ಇದ್ದಕಿದ್ದ ಹಾಗೆ ಆಕಾಶವೇ ಮುರಿದು ಬೀಳುವ ಹಾಗೆ ದೊಡ್ಡ, ದೊಡ್ಡ ಆನೆಕಲ್ಲು,ಜ್ಯೂರೂ ಅಂತ ಬೀಸುವ ಗಾಳಿ, ನಿರ್ಜನವಾದ ರಸ್ತೆ , ಕತ್ತಲು ಕವರೆಸುತಿದ್ದ ವಾತಾವರಣ. ಮೈ ಮೇಲೆ  ಭಯದಿಂದ ಬೆವರು ಸುರಿಯಲು  ಹತ್ತಿತ್ತು . ಹಾಗೆ ಧೈರ್ಯ ತಂದುಕೊಂಡು ಮುಂದೆ ಗಾಡಿ ಚಲಿಸಿದಳು.ಒಂದು ಮೈಲಿ ಹೋಗಿರಬಹುದು ಬೃಹದ್ ಆಕಾರದ ಮರ ಒಂದು ಅವಳ ಕಾರ್ ಮುಂದೆ ಪರ್ವತದಂತೆ ಬಿತ್ತು. ಅವಳ ಹೃದಯ ಬಾಯಿಗೆ ಬಂತು. ಕಾರಿನ ಮೇಲೆ ಬಿದ್ದಿದರೆ  ಪ್ರಾಣವೇ ಹೋಗುತ್ತಿತ್ತು ! ಮನೆಯಲ್ಲಿ ಇದ್ದ ಆರು ಮತ್ತು ಎಂಟು ವರುಷದ ಮಕ್ಕಳು, ಗಂಡ,ಸ್ನೇಹಿತರು ಎಲ್ಲಾರು ನೆನಪಿಗೆ ಬಂದು ಗೋಳೂ ಅಂತ ಅತ್ತಳು .
ಮಕ್ಕಳು “ಅಮ್ಮ  ಬರುತ್ತಾಳೆ ಇವತ್ತು ಎಲ್ಲರಿಗು ಪರೋಟ ಮಾಡಿ ಕೊಡುತ್ತಾಳೆ   ಅಂತ  ಕಾಯುತಿರ್ತಾರೆ” ಅಂತ ನೆನಪಾಗಿ ಇನ್ನು ಅಳು ಬಂತು .
ಸುತ್ತಲೂ ನೋಡಿದಳು ಯಾರು ಇಲ್ಲ ! ಕಾಡು ಬಿಕೋ ಅನ್ನುತಿದೆ. ಕಪ್ಪು ಕತ್ತಲ ಕತ್ತಲು ಕವೆಯುತ್ತಿತ್ತು. ಮನೆಗೆ ಫೋನ್ ಮಾಡೋಣ ಅಂತ ಯೋಚಿಸಿ ಮೊಬೈಲ್ ಫೋನ್ ತೆಗದು ನೋಡಿದಳು. ದುರಾದೃಷ್ಟಕ್ಕೆ ಬ್ಯಾಟರಿ ಮುಗಿದು ಹೋಯಿತ್ತು. ರೆಸ್ಕ್ಯೂ ಸರ್ವೀಸಿಗೆ ಫೋನ್ ಮಾಡಲು ಅಗಲ್ಲಿಲ್ಲ.ಮತ್ತೆ ಏನು ಮಾಡುವುದು? ಕತ್ತಲು ಇನ್ನು ದಟ್ಟವಾಗಿ ಕರಿ ಪರದೆ ಹಾಕಿದಂತೆ ತೋರುತ್ತಿತ್ತು .ಏನು ಮಾಡಲು ತೋಚುತ್ತಿಲ್ಲ . ಆ ಭಗವಂತನೇ ಕಾಯಬೇಕು. ಊರಿನಲ್ಲಿ ಇರುವ ತಂದೆ ತಾಯಿ ಅಣ್ಣ, ತಮ್ಮ ಎಲ್ಲರು ನೆನಪಿಗೆ ಬಂದು ಉಸಿರು ಸಿಕ್ಸಿ ಕೊಂಡ ಹಾಗೆ ಆಯಿತು . ಇವಳೇ ತಮ್ಮನ್ನ ಮೆಡಿಸಿನ್ ಓದಿಸುತಿದ್ದಳು.
ಇನ್ನು  ಮನೆಯಲ್ಲಿ ಪುಟಾಣಿ ಕಂದಮ್ಮಗಳು. ಓ ದೇವರೇ!ಏನು ಮಾಡಲಿ ಅಂತ ಹಲುಬಿಸಿದಳು.ಒಂದು ಕಾಗದ ಬರೆದಳು .
ನನ್ನ ಕಂದಮ್ಮಗಳೇ,  ಮತ್ತು ಯಜಮಾನರೇ ,ಬಂಧು ಬಳಗದವರೇ “ನಾನು ಪ್ರಕೃತಿದೇವಿಯ ಆರ್ಭಟಕ್ಕೆ ತುತ್ತಾಗಿದ್ದೇನೆ. ಮುಂದೆ ದೊಡ್ಡ ರಾಕ್ಷಸ ಆಕಾರದ ಮರ , ಹಿಂದೆ ಕಗ್ಗತ್ತಲು ಮಂಜು . ಕಾರನ್ನು reverse gear  ನಲ್ಲಿ ಹಾಕಿದರೆ ಹಿಂದೆ ಹೋಗುತ್ತಿಲ್ಲ .
ನಾನು ಮದ್ಯ ಸಿಕ್ಕಿದೇನೆ. ನಿಮ್ಮನೆಲ್ಲ ನೋಡುತ್ತೇನೋ ಇಲ್ಲವೊ  ಗೊತ್ತಿಲ್ಲ . ಕಂದಮ್ಮಗಳೇ ನಿಮ್ಮ ಅಪ್ಪನ ಮಾತು ಕೇಳಿ . ಗುಡ್ ಬೈ ”
ಎಂದು ಬರೆದು ಸೋತು ಮಲಿಗಿಬಿಟ್ಟಳು.
ಕನಸಿನಲ್ಲಿ ಅನ್ನೋ  ಹಾಗೆ ಕಾರಿನ ವಿಂಡೋ  ಮೇಲೆ ಏನೋ ಶಬ್ದ ಕೇಳಿಸಿತು . ಕಣ್ಣು ಬಿಡಲು ಭಯ !
ಯಾರೋ ಕಳ್ಳರು ಇರಬಹುದು. ಮತ್ತೆ ಮತ್ತೆ “sister get up  open  the  window “ಅಂದರು. ಅರ್ಧ ಕಣ್ಣುಬಿಟ್ಟು ನೋಡಿದಳು. Rescue service  ಬಂದು  ಇವಳ ಜೀವ  ಕಾಪಾಡಿದರು .
ಆಮೇಲೆ ಗೊತ್ತಾಯಿತು. ಯಾರೋ bicycle  ನಲ್ಲಿ ಬಂದವನು ರೆಸ್ಕ್ಯೂಸೆರ್ವಿಸ್ ಗೆ  ಅಲರ್ಟ್ ಮಾಡಿದನಂತೆ .
ಕಾಂತ ಇದನ್ನೆಲ್ಲ ಹೇಳಿದಾಗ ಇದು ಒಂದು ಅಸಾಮಾನ್ಯ ಘಟನೆ ಅಲ್ಲವೇ ? ಅನ್ನಿಸಿತು .
ನಿಮ್ಮ ಜೀವನದಲ್ಲೂ ನಡೆದಿದ್ದರೆ ಹಂಚಿ ಕೊಳ್ಳೋಣ.
                                                                                                                                  ವತ್ಸಲಾ ರಾಮಮೂರ್ತಿ

—————————————————————————————————————–

                                                                                     ೨

ಟೌನ್ ಹಾಲ್ ಮುಂದಿನ ಸರ್ಕಲ್ ನಲ್ಲಿ ಸಿಗ್ನಲ್ ಕೆಂಪುದೀಪಕ್ಕೆ ತಿರುಗಿತು. ಸುತ್ತಲಿನ ನಾಲ್ಕು ರಸ್ತೆಗಳಲ್ಲಿ  ಎರಡರಲ್ಲಿ ಸಣ್ಣಗೆ ಗುರ್ರೆನ್ನುತ್ತ ನಿಂತ ನಾನಾ ವಾಹನಗಳು. ಬಲಕ್ಕೆ ತಿರುಗುವ ದೀಪ ಹಾಕಿಕೊಂಡು ಕೈನೆಟಿಕ್ ಹೊಂಡಾದಲ್ಲಿ  ನಿಂತ ಒಬ್ಬ ತುಂಬು ಗರ್ಭಿಣಿ. ಅವಳ ಹಿಂದೆ ಅವಳಿಗಿಂತ ಹೆಚ್ಚು ಗರ್ಭ ಕಟ್ಟಿಕೊಂಡು ನಿಂತ ಲಾರಿ. ಇವೆರೆಲ್ಲರ ಜೊತೆ ಸರ್ಕಲ್ಲಿನ ಮದ್ಯೆ  ದರಿದ್ರ ಧೂಳನ್ನು ಕುಡಿಯುತ್ತ ನಿಂತ ಪೋಲೀಸು ಪೇದೆ.

ಭಾರತದ ಬಿಜ್ಝಿ  ರಸ್ತೆಗಳ  ಒಂದು ಸಾಮಾನ್ಯ ದೃಶ್ಯವೇ!

ಕೈನೆಟಿಕ್ ಹೋಂಡದ ಮೇಲಿದ್ದವಳ ಮನಸ್ಸಿನಲ್ಲಿ ಮಾತ್ರ ಚೊಚ್ಚಲ ಮಗುವಿನ ಸುಂದರ ಕನಸು. ಅವಳ ಹೆರಿಗೆಯ ದಿನಕ್ಕೆ ಹತ್ತು ದಿನಗಳಿದ್ದವು. ಸ್ವಂತ  ಉದ್ಯೋಗದಲ್ಲಿದ್ದ ಅವಳು ಆಗಲೇ ಕೆಲಸ ನಿಲ್ಲಿಸಿದ್ದಳು. ಕೆಲಸ ಮಾಡಲು ಸಹಾಯಕನನ್ನು ನೇಮಿಸಿಕೊಂಡಿದ್ದಳು. ಅವತ್ತು ಆ ಸಹಾಯಕ ಇವಳಿಗೆ ಫೋನಾಯಿಸಿದ್ದ. ತನಗೆ ತಿಳಿಯದ ವಿಚಾರವೊಂದಕ್ಕೆ ಸಹಾಯ ಕೋರಿದ್ದ. ಅದಕ್ಕಾಗಿ ಹೊರಟ  ಅವಳಲ್ಲಿ ತುಂಬಿದ್ದೆಲ್ಲ ಭವಿಷ್ಯದ ಹೊಂಗನಸು.

ಕೆಂಪು ದೀಪ ಹಸಿರಾಯ್ತು. ಕೈನೆಟಿಕ್ ಮುಂದೆ ಚಲಿಸಿತು. ದಬ್ಬನೆ ಗುದ್ದಿದ ಸದ್ದು!! ಮುಂದಿದ್ದ ಕೈನೆಟಿಕ್ ನೆಲಕ್ಕೆ ಬಿತ್ತು, ಬೀಳದಂತೆ ಆಧಾರಕ್ಕಾಗಿ ನೆಲಕ್ಕೆ ಊರಿದ  ಅವಳ ಕಾಲು ಅದರಡಿ  ಸಿಕ್ಕಿಕೊಂಡಿತ್ತು. ಕೈನೆಟಿಕ್ ಮೇಲೆ ಲಾರಿಯ ಮುಂದಿನ ಚಕ್ರ ಹರಿಯಿತು.

“ನಿಲ್ಸೀ….. “ಎನ್ನುವ  ಅವಳ  ಆಕ್ರಂದನಕ್ಕೆ ಎಲ್ಲರ ಗಮನ ಅವಳೆಡೆ ಹರಿಯಿತು. ಲಾರಿ ಹಿಂತೆಗೆಯಿತು. ಟ್ರಾಫಿಕ್ ಬಂದಾಯ್ತು. ಪೋಲೀಸು  ಪೇದೆ ಸ್ಥಳಕ್ಕೆ ಧಾವಿಸಿದ. ಹಲವರು ಸೇರಿ  100 ಕೆಜಿ ಭಾರದ ಕೈನೆಟಿಕ್ ಹೋಂಡವನ್ನು ಮೇಲೆತ್ತಿದರು. ನುಜ್ಜು ಗುಜ್ಜಾದ  ಅವಳ ಬಲಗಾಲನ್ನು ಎಳೆಯುತ್ತ ನಿಂತ ಅವಳ ಕೈ ತನ್ನ ಹೊಟ್ಟೆಯ ಮೇಲೆ.

ಪೋಲೀಸು ಪೇದೆ ಕರೆದ ಕಾರಣಕ್ಕೆ ಒಲ್ಲೆ ಎನ್ನಲಾಗದೆ ಬಂದು ನಿಂತ ಆಟೋದಲ್ಲಿ 300 ಅಡಿ ದೂರದಲ್ಲಿಯೇ ಇದ್ದ ಸರಕಾರೀ ಆಸ್ಪತ್ರೆಗೆ  ದಾಖಲು. ಪೋಲೀಸು ಪೇದೆಯ ಕಣ್ಣು ಅವಳ ಕೈ ಬ್ಯಾಗ್ ಮೇಲೆ. ಅವಳ ಪೂರ್ತಿ ವಿಚಾರ ತನ್ನ ಕಂದನ ಸೌಖ್ಯದ ಬಗ್ಗೆ ಮಾತ್ರ. ಸುರಿದು ನಿಂತು ಆಟೋದ ತಳವನ್ನೆಲ್ಲ ತೋಯಿಸಿದ್ದ ರಕ್ತಧಾರೆಗೆ ತುರ್ತಾಗಿ ಬ್ಯಾಂಡೇಜು ಚಿಕಿತ್ಸೆ. ಇತ್ತ   ಮುಂದಿನ  ನಿಮಿಷಗಳಲ್ಲಿ ಅದೇ ರಸ್ತೆಯಲ್ಲಿ  ಟಾಟಾ ಸೂಮೋದಲ್ಲಿ ಹಾದು ಹೋದ  ಅವಳ ಅಣ್ಣ, ರಸ್ತೆಯನ್ನು ತೋಯಿಸಿದ್ದ ರಕ್ತ ನೋಡಿ ಯಾರೋ ಸತ್ತಿರಬಹುದೆಂದು ಮುಂದೆ ಹೋಗಿದ್ದ!

ತುರ್ತಾಗಿ ಅವಳ ಮನೆಗೆ ಕರೆ ಹೋಯ್ತು. ಬೇರೊಂದು  ಖಾಸಗಿ ಆಸ್ಪತ್ರೆಗೆ  ಅವಳ ದಾಖಲಾಯ್ತು. ಧಾವಿಸಿ ಬಂದ ಸ್ನೇಹಿತರು ಮತ್ತು ಬಂಧುಗಳಲ್ಲಿ ಆರು ಜನರಿಂದ ರಕ್ತದಾನ. ಮೊದಲು ಮಗುವಿನ ಒಳಿತಿಗಾಗಿ ಹೆರಿಗೆಯ  ತುರ್ತು ಶಸ್ತ್ರ ಚಿಕಿತ್ಸೆ.  ಅದರ ಹಿಂದೆಯೇ ರಸ್ತೆಯ ಧೂಳಲ್ಲಿ ಮಿಂದಿದ್ದ ಕಾಲಿನ ಗಾಯಕ್ಕೆ ಶಸ್ತ್ರ ಚಿಕಿತ್ಸೆ. ಅವಳಿಗೆ ಮಗುವಿನ ಸ್ಪರ್ಷವಿಲ್ಲ. ಮಗುವಿಗೆ ಅಮ್ಮನ ಸಾಮೀಪ್ಯವಿಲ್ಲ.

ಮರುದಿನ ಫ್ಯಾಮಿಲಿ ವೈದ್ಯರು ಬಂದರು. ಅವಳ ಕೋಣೆಯ ಬಾಗಿಲಿಗೆ ಅಗುಳಿ ಹಾಕಿದರು. ಭಾರತೀಯ ಅಬ್ಯಾಸದಂತೆ ಬ್ಯಾಡ್ ನ್ಯೂಸ್ ಬ್ರೇಕ್ ಮಾಡಿದರು.  ಕಾಲಿನ ಶಸ್ತ್ರ ಚಿಕಿತ್ಸೆ ಫಲಕಾರಿಯಾಗಲಿಲ್ಲವೆಂತಲೂ, ಬಲಗಾಲನ್ನು ಕತ್ತರಿಸಿ ತೆಗೆಯಬೇಕೆಂತಲೂ  ಹೇಳಿ ಧೈರ್ಯ ನೀಡಿ ಹೊರಟು ಹೋದರು.

ಬಹು ಚರ್ಚೆಯ ನಂತರ ಅವಳ ಕುಟುಂಬ ಅವಳನ್ನು ತತ್ ಕ್ಷಣವೇ  ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಗೆ ಸೇರಿಸಲು ನಿರ್ಧರಿಸಿದರು. ಸೈರನ್ ಹೊಡೆದುಕೊಳ್ಳುವ  ಆಂಬ್ಯುಲೆನ್ಸ್ ನಲ್ಲಿ ಒಂದು ದಿನದ ಮಗುವಿನೊಂದಿಗೆ ಪ್ರಯಾಣ. ಅಲ್ಲಿ ಅವಳ ಕಾಲಿನ ಮೇಲೆ ಮತ್ತೆ ಮೂರು ಸರ್ಜರಿಗಳು. ಒಟ್ಟು ಮೂರು ತಿಂಗಳ ಅಸ್ಪತ್ರೆಯ ವಾಸ.

ಆಕ್ಸಿಡೆಂಟ್ ಆದಾಗಿನಿಂದ ನೋವೆನ್ನದೆ ಸಹಕರಿಸಿದ್ದ ಅವಳ ದೇಹದಲ್ಲಿ  ಈಗ ಯಮ ಯಾತನೆ. ಅಲ್ಲದೆ, ಮಲಗಿದೆಡೆ ಮಲಗಬೇಕಾದ ಸಂಕಟ. ಪ್ರತಿದಿನ ಎಲ್ಲದ್ದಕ್ಕೂ ಬೇರೆಯವರ ಮೇಲೆ ಅವಲಂಬಿತವಾಗಬೇಕಾದ ಅಸಹಾಯಕತೆ. ಕಂದನನ್ನು ಎತ್ತಿ ಆಡಿಸಲಾಗದೆ ದೂರದಿಂದ ನೋಡಬೇಕಾದ ಅನಿವಾರ್ಯತೆ. ಅಪಾರ ನೋವಿನ ಕಾರಣ 6 ವಾರಗಳ ಕಾಲ ಪ್ರತಿದಿನವೂ ಜ್ವರ. ನೋವು ನಿವಾರಕ ಪೆತೆಡಿನ್ ಮತ್ತಿತರ ನಿದ್ದೆ   ಬರುವ  ಔಷದಗಳ ಕಾರಣ ಮಗುವಿಗೆ ಹಾಲೂಡಿಸದಿರಲು ವೈದ್ಯರಿಂದ  ಅಣತಿ. ಅಸಿಲಿಗೆ ನೋವಿನ ಕಾರಣ  ಅವಳೆದೆಯಲ್ಲಿ ಹಾಲೂಡುತ್ತಲೂ ಇರಲಿಲ್ಲ. ಪ್ರತಿ ದಿನ ಪ್ರಗತಿಯ ನಿರೀಕ್ಷೆ.

ನಿಧಾನವಾಗಿ ಫಿಸಿಯೋತೆರಪಿ, ವ್ಯಾಯಾಮ, ಪ್ರೋಟೀನು ಭರಿತ ಊಟಗಳು  ಇತ್ಯಾದಿ. ಇಷ್ಟೆಲ್ಲ ಆದರೂ ಅವಳ ಗಂಡನ ಪತ್ತೆಯಿರಲಿಲ್ಲ. ಆದರೆ ಪರೀಕ್ಷೆ ಬರೆದು  ಇಂಗ್ಲೆಂಡಿನಲ್ಲಿ ಮೊದಲ ಕೆಲಸಕ್ಕೆ ಸೇರಿದ್ದ ಅವನಿಂದ  ಬಹುತೇಕ ಪ್ರತಿದಿನ ಫೋನುಗಳ ಕರೆ. ಇವಳಿಂದಲೇ ಅವನಿಗೆ ಧೈರ್ಯದ ರವಾನೆ!!

ನಿಧಾನವಾಗಿ  ಬೆಂಬಲದ ಸಹಾಯದಿಂದ ಇವಳು ನಡೆದಾಡುವ ವೇಳೆಗೆ ಅವನ ಆಗಮನ. ವೀಸಾಕ್ಕೆ ಓಡಾಟ. ವೀಲ್ ಚೇರಿನಲ್ಲಿ      ಮೂರು ತಿಂಗಳ ಮಗುವಿನಿನೊಂದಿಗೆ  ಇಂಗ್ಲೆಂಡಿಗೆ  ಆಗಮನ.

ಇದೆಲ್ಲ ನಡೆದು 15 ವರ್ಷಗಳಾಗಿವೆ. ಬದುಕು ಮತ್ತೆ ತೆರೆದುಕೊಂಡಿದೆ.ಪ್ರತಿದಿನ ಓಡಾಡುವಾಗ ಅವಳು ತನ್ನಿಂದ ಬೇರೆಯಾಗದ ಕಾಲನ್ನು ನೋಡಿಕೊಳ್ಳುತ್ತಾಳೆ. ಆಕ್ಸಿಡೆಂಟ್ ಆದ ಮರುದಿನ ಪೇಪರಿನಲ್ಲಿ ಹೀಗಂತ ಹಾಕಿದ್ದರಂತೆ

“ ಲಾರಿ ಹರಿದರೂ ಪವಾಡ ಸದೃಶವಾಗಿ ಬದುಕುಳಿದ ಗರ್ಭಿಣಿ ಮತ್ತು ಮಗು….. “

ಯಮಯಾತನೆಯನ್ನು ಅನುಭವಿಸುತ್ತಿದ್ದಾಗ ಕೃತಕ ಎನ್ನಿಸಿದ್ದ ಈ ವರದಿ ಇದೀಗ ನನ್ನ ಬದುಕಿನಲ್ಲಿ ನಿಜಕ್ಕೂ ಪ್ರಮಾಣಿತವೇ!!

                                                                                                                                         -ಡಾ. ಪ್ರೇಮಲತ ಬಿ.

4 thoughts on “ಸಾಮಾನ್ಯರ ಬದುಕಿನ ಅಸಮಾನ್ಯ ಘಟನೆಗಳು

  1. ಸಾಮಾನ್ಯರ ಬದುಕಿನ ಅಸಾಮಾನ್ಯ ಘಟನೆಗಳು ,ಸಾಮಾನ್ಯರಲ್ಲಿಯ ಅಸಾಮಾನ್ಯ ಗುಣಗಳನ್ನು ಹೊರ ಹಾಕಲೆಂದೇ ಬಂದೊದೊಗುತ್ತವೆಯೋ ಏನೋ ಎನಿಸುತ್ತದೆ ಈ ಲೇಖನಗಳನ್ನೋದಿದಾಗ. ಅವರಲ್ಲಿಯ ಮನಸ್ಥೈರ್ಯ ,ಮನಃಶಕ್ತಿ ಗಟ್ಟಿಯಾಗಿ ಹೊಮ್ಮುತ್ತವೆಯೋ ಏನೋ ,ಅಲ್ಲವೆ? ಕಾಯುವವನಿದ್ದಾಗ ಕೊಲ್ಲುವವನು ಯಾವ ಲೆಕ್ಕಕ್ಕೆ ?? ನೂರೆಂಟು ಪ್ರಶ್ನೆಗಳು ,ತರ್ಕಗಳು.ತುಂಬಾ ಮನ ಮುಟ್ಟುವ ಬರಹಗಳು. ಇಬ್ಬರೂ ಲೇಖಕಿಯರಿಗೆ ಅಭಿನಂದನೆಗಳು.
    ಸರೋಜಿನಿ ಪಡಸಲಗಿ

    Liked by 1 person

  2. ಇಂಥ ನಂಬಲಾರದಂಥ ಘಟನೆಗಳನ್ನು ಹಂಚಿಕೊಂದದ್ದಕ್ಕೆ ಇಬ್ಬರೂ ಲೇಖಕಿಯರಿಗೂ ಧನ್ಯವಾದಗಳು. ಯಾವುದೋ ಒಂದು ಕಣ್ಣಿಗೆ ಕಾಣದ ಕಾಯುವ ಶಕ್ತಿ ನಮ್ಮ ಮೇಲೆ ಕಣ್ಣಿಟ್ಟಿರುತ್ತದೆಯೇ ಎಂದೆನಿಸುವಂಥವು ಇವು.

    Like

  3. ಈ ಅಸಮಾನ್ಯ ಘಟನೆಗಳು, ನಮ್ಮ೦ತಹ ಸಮಾನ್ಯರ ಜೀವ ಮತ್ತು ಜೀವನವನ್ನು ನಡುಗಿಸಬಲ್ಲವು. ನಿಮಗೆ ತಿಳಿದ ಈ ಘಟನೆಯನ್ನು ಹ೦ಚಿಕೊ೦ಡ ವತ್ಸಲ ಮತ್ತು ಪ್ರೇಮರವರಿಗೆ ಧನ್ಯವಾದಗಳು.
    ಮೊದಲ ಘಟನೆಯ ಕಾ೦ತ ಕೊದಲು ಕೊ೦ಕಿಲ್ಲದ ಹಾಗೆ ಪಾರಾದರೆ, ಮತ್ತೊಬ್ಬ ಮಹಿಳೆ, ಬಹಳ ಕಾಲ ನೋವನ್ನು ಅನುಭವಿಸಬೇಕಾಯಿತು.

    ಇ೦ತ ಅನುಭವಗಳು ದೇವರ ಆಸ್ತಿಥ್ವವನ್ನು ಕೆಲವು ಬಾರಿ ಪ್ರಶ್ನಿಸುವ ಹಾಗೆ ಮಾಡುತ್ತವೆ. ಯಾವ ತಪ್ಪೂ ಮಾಡದೆ ನೋವನ್ನು ಅನುಭವಿಸುವ ಶಿಕ್ಶೆ ಕೆಲವೊಮ್ಮೆ ಈ ದೇವರು ಯಾಕೆ ತಪ್ಪಿಸುವುದಿಲ್ಲ? ಬಿರುಗಾಳಿಗೆ ತುತ್ತಾಗಿ, ಮನೆ ಮಠ, ಆತ್ಮೀಯರನ್ನು ಕಳೆದುಕೊ೦ಡ ಜನರ ತಪ್ಪೇನು? ಇ೦ಥ ಶಿಕ್ಶೆಗೆ ತುತ್ತಾಗದೆ ನೊಡಿಕೊಳ್ಳಲೆ೦ದು ನಾವು ದೇವರನ್ನು ಪ್ರಾರ್ಥಿಸಬೇಕೆ?

    ಅಸಮಾನ್ಯ ಘಟನೆಗಳು, ಸಾಮನ್ಯರು ಬಹಳಷ್ಟು ಪ್ರಶ್ನೆಗಳನ್ನು ಕೇಳುವ ಹಾಗೆ ಮಾಡುತ್ತವೆ.

    ದಾಕ್ಷಾಯನಿ

    Like

  4. ಮನಮುಟ್ಟುವ ಲೇಖನ. ಎಲ್ಲರ ಬದುಕಲ್ಲೂ ಇಂಥ ಮಎಯಲಾಗದ ಘಟನೆಗಳಿರಬಹುದು. ನನಗೂ ಸಹ ಆದರೆ ನೆನಪಾಗುತ್ತಿಲ್ಲ.. ನೆನಪಾದಾಗ ಹಂಚಿಕೊಳ್ಳುತ್ತೇನೆ

    Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.