ವಿದೇಶದಲ್ಲಿ ಕನ್ನಡದ ಹೊಸ ಇನ್ನಿಂಗ್ಸ್- ಗಣಪತಿ ಭಟ್

(ವಿದೇಶಗಳಿಗೆ ಹೋಗುವ ಪ್ರತಿ ಕನ್ನಡಿಗರು ತಮ್ಮದೇ ರೀತಿಯ ಹೊಸ ಕನ್ನಡ ಬದುಕನ್ನು ಹುಡುಕುತ್ತಾರೆ. ಆರಿಸಿಕೊಳ್ಳುತ್ತಾರೆ. ಚಾಲ್ತಿಯಲ್ಲಿರುವ ಕನ್ನಡ ಸಂಘಗಳ ಮೂಲಕ ಹೊಸ ಹುರುಪನ್ನು ಪಡೆಯುತ್ತಾರೆ. ಕೆಲವರು ತಪ್ಪದೆ ಭಾಗವಹಿಸುವಿಕೆಯಿಂದ ಕನ್ನಡ ಸಂಘಗಳ ಬೆನ್ನುಲುಬಾಗಿ ನಿಂತರೆ ಇನ್ನು ಕೆಲವರು ಕನ್ನಡ ಸಂಘಗಳ ಸಂಚಾಲನೆಯನ್ನು, ಸಂಘಟನೆಗಳನ್ನು ಮತ್ತು ಆಡಳಿತವನ್ನು ಕೈಗೆತ್ತಿಕೊಂಡು ಹೊಸ ಪ್ರಯತ್ನಗಳಲ್ಲಿ ಮತ್ತೆ ಹಲವು ಕನ್ನಡಿಗರಿಗೆ ದಾರಿ ತೋರುತ್ತಾರೆ. ಖಾಸಗೀ ಬದುಕು, ವೃತ್ತಿಗಳ ನಡುವೆ ಇದು ಸುಲಭ ಸಾದ್ಯವೇನಲ್ಲ.  ಹಣ, ಸಮಯ, ಪ್ರಯತ್ನ, ಆರೋಪ, ಅಡಚಣೆಗಳು, ಕಲಹಗಳು ಇವೆಲ್ಲ ಪ್ರತಿ ಸಂಘಟಕರನ್ನೂ ಹಲವು ಬಾರಿ ಕಂಗೆಡಿಸುತ್ತವೆ. ವಿದೇಶಗಳಲ್ಲಿ ಕನ್ನಡದ ಸೊಗಡನ್ನು ಮುಂದುವರೆಸಲು  ಪ್ರಯತ್ನ ಪಡುವ ಇಂತವರು ಯಾರೇ ಆಗಲಿ ಅವರ ಶ್ರಮಕ್ಕೆ ಹಲವು ನಮನಗಳು. ಹೊರನಾಡಲ್ಲಿ ಕನ್ನಡ ಹಬ್ಬಗಳು, ಹುರುಪು ಉಳಿದಿರಿವುದು ಇಂತಹ ಹಲವರ ಪ್ರಯತ್ನದಿಂದ ಮಾತ್ರ.ಅಂತಹ ಒಬ್ಬ ವ್ಯಕ್ತಿಯಾದ ಗಣಪತಿ ಭಟ್ (ಗಣ) ತಮ್ಮ ಸ್ವಂತ ಅನುಭವವನ್ನು ನಮ್ಮೊಡನೆ ಆತ್ಮೀಯವಾಗಿ ಹಂಚಿಕೊಂಡಿದ್ದಾರೆ.  ಆರಂಭ ಮತ್ತು ತಮ್ಮ ಸಂಘದ ನಿರ್ವಹಣೆಯ ಬಗ್ಗೆ ಒಳನೋಟ ಒದಗಿಸಿದ್ದಾರೆ. ಇತರೆ ಹಲವು ಸಂಘಗಳ ಚಟುವಟಿಕೆಗಳಲ್ಲಿ ಕೂಡ ನಿಯಮಿತವಾಗಿ   ಭಾಗವಹಿಸುತ್ತ ಆ ಅನುಭವಗಳಿಂದ ಕೂಡ  ಕಲಿಯುತ್ತ ನಡೆದಿದ್ದಾರೆ. ಮುಂದೆ ಇನ್ನೂ  ದೊಡ್ಡ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಹುರುಪು ಇವರದು.

ನಿಮ್ಮಲ್ಲಿಯೂ ವಿದೇಶೀ ಕನ್ನಡ ಬದುಕಿನ ಹಲವು ಸ್ವಾರಸ್ಯಕರ  ಅನುಭವಗಳಿರಬಹುದು. ಅವನ್ನು ಮುಂದಿನ ಸಂಪಾದಕಿ ದಾಕ್ಷ ಅವರಿಗೆ ಬರೆದು ಕಳಿಸಿ. ಕಳಿಸಬೇಕಾದ ಮಿಂಚಂಚೆ  ವಿಳಾಸ  drdaksha@doctors.org.uk)  -ಸಂ)

____________________________________________________________________

ನಾನು ಇಂಗ್ಲೆಂಡ್ ಬಂದ ಮೊದಲ ಮೂರು ವರ್ಷ ನನ್ನದೇ ಆದ ಒಂದು ಚಿಕ್ಕ ಗೆಳೆಯರ ಗುಂಪಿನಲ್ಲಿ ವಹಿವಾಟು ನಡೆಸಿಕೊಂಡಿದ್ದೆ. ನನ್ನ ಗೆಳೆಯರ ಗುಂಪಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಕನ್ನಡಿಗರಿದ್ದು ಉಳಿದವರೆಲ್ಲ ಹಿಂದಿ ಪ್ರಾಂತ್ಯದಿಂದ ಬಂದವರಾಗಿದ್ದರು.ನಾನು ಕನ್ನಡಿಗರು ಯು. ಕೆ. ಸಂಪರ್ಕದಲ್ಲಿ ಬಂದಿದ್ದು 2010 ರಲ್ಲಿ. ಆಗಿನ ಕೆ.ಯು.ಕೆ.ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿರೂಪಾಕ್ಷ ಪ್ರಸಾದ್ Croydon ನಲ್ಲಿ ನನ್ನನ್ನು ಮೊದಲು ಭೇಟಿ ಆಗಿದ್ದು. ಕನ್ನಡಿಗರು ಯು.ಕೆ. ಮುಖ್ಯವಾಗಿ ಐ. ಟಿ. ಎಂಜಿನೀರ್ಸ್ ತಾಣವಾಗಿದ್ದರಿಂದ ಲಂಡನ್ ಹಾಗು ಸುತ್ತ ಮುತ್ತ ಸಾಕಷ್ಟು ಪ್ರಭಾವ ಹೊಂದಿತ್ತು. ವಿರುಪ್ರಸಾದ್ ಅವರ ಸಹಯೋಗದಿಂದ ಕನ್ನಡ ರಾಜ್ಯೋತ್ಸವದಲ್ಲಿ ಸ್ವಯಂ ಸೇವಕನಾಗಿ ಭಾಗವಹಿಸುವ ಅವಕಾಶ ಸಿಕ್ಕಿತು.
ಆಗಲೇ ನನಗೆ ಗೊತ್ತಾಗಿದ್ದು ಯು.ಕೆ ಯಲ್ಲಿ ಕಳೆದ ೩೫ ವರ್ಷದ ಹಿಂದೆಯೇ ಕನ್ನಡ ಬಳಗ ಎಂಬ ಸಂಸ್ಥೆ ಸಕ್ರೀಯವಾಗಿ ಕನ್ನಡ ಪರ ಚಟುವಟಿಕೆಗಳನ್ನ ನಡೆಸುತ್ತಿದೆ ಎಂದು. ಆಮೇಲೆ ನಾನು 2011 ರಲ್ಲಿ ಲಂಡನ್ ನಲ್ಲಿ ನಡೆದ ಒಂದು ವಿಶ್ವ ಕನ್ನಡ ಸಮ್ಮೇಳನ ಎಂಬ ಕಾರ್ಯಕ್ರಮದಲ್ಲಿ ಕೂಡ ಪ್ರೇಕ್ಷಕನಾಗಿ ಹೋಗಿದ್ದೆ. ಯು.ಕೆ. ಕನ್ನಡಿಗರಲ್ಲಿ ಹಲವಾರು ಸಂಸ್ಥೆಗಳು ಹಾಗೂ ಕನ್ನಡ ಪಂಗಡಗಳಿರುವುದೆಂದು ಆ ಕಾರ್ಯಕ್ರಮದ ನಂತರ ಮನವರಿಕೆ ಆಗಿದ್ದು. ಇವೆಲ್ಲರ ಮದ್ಯ ಕನ್ನಡಿಗರು ಯು.ಕೆ ಸತತವಾಗಿ ಕನ್ನಡ ರಾಜ್ಯೋತ್ಸವವನ್ನು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದುದು ಒಂದು ವಿಶೇಷ ಸಂಗತಿ. 2011 ರಿಂದ 2013 ತನಕ ಅಲ್ಲಲ್ಲಿ ಚಿಕ್ಕ ಪುಟ್ಟ ವಾಲಂಟೀರ್ಸ್ ಕೆಲಸ ಮಾಡಿಕೊಂಡು ನನ್ನ ಕೈಲಾದಷ್ಟು ಕನ್ನಡಿಗರು ಯು.ಕೆ. ಸಂಸ್ಥೆಗೆ ಸಹಯೋಗ ಕೊಡುತ್ತಾ ಇದ್ದೆ. 2014ರಲ್ಲಿ ಕನ್ನಡಿಗರು ಯು.ಕೆ ಯ ಆಗಿನ ಅಧ್ಯಕ್ಷ ವಿವೇಕ್ ಹೆಗ್ಡೆ ಅವರ ಮುಂದಾಳತ್ವದಲ್ಲಿ ನಡೆಸಿದ ದಶಮಾನೋತ್ಸವ ಕಾರ್ಯಕ್ರಮ ಅತ್ಯಂತ ಶ್ಲ್ಯಾಘನೀಯವಾದ ಪ್ರಯತ್ನ ಅಂತ ಹೇಳಬಹುದು. ಅದೊಂದು ಅತಿ ದೊಡ್ಡ ಬಜೆಟ್ನಲ್ಲಿ ಕೆ.ಯು.ಕೆ. ನಡೆಸಿದ ಕಾರ್ಯಕ್ರಮ.ಆ ಕಾರ್ಯಕ್ರಮದ ಕಮಿಟಿಯಲ್ಲಿ ಇದ್ದು ನಾನು ಅತಿ ಹತ್ತಿರದಿಂದ ಕನ್ನಡ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಹೇಗೆ ನಡೆಸಬಹುದು ಎಂಬ ಅನುಭವ ಪಡೆದೆ. ಎಲ್ಲಾ ಕಮಿಟಿ ಸದಸ್ಯರು ಕಾರ್ಯಕ್ರಮದ ಖರ್ಚು ವೆಚ್ಚಕ್ಕೆ ಬಂಡವಾಳ ಕೂಡ ಹೂಡಿದ್ದರು.

gana article

                                                                ದಶಮಾನೋತ್ಸವ ೨೦೧೪

ಅಧ್ಯಕ್ಷರ ಜವಾಬ್ದಾರಿ ತಂಡವನ್ನು ಒಗ್ಗಟ್ಟಾಗಿಡುವದಲ್ಲದೆ ಸಕಲ ಕಾರ್ಯಕ್ರಮದ ಆಯೋಜನೆಯ ಮುಂದಾಳತ್ವವನ್ನು ವಹಿಸುವುದೇ ಅತಿ ಮುಖ್ಯವಾದದ್ದು. ಅರ್ಧಕ್ಕಿಂತ ಹೆಚ್ಚು ಸಮಯ ನಾವು ಕಾರ್ಯಕ್ರಮದ ಪಬ್ಲಿಸಿಟಿ ಮಾಡೋ ಪ್ರಯತ್ನದಲ್ಲೇ ಮುಳುಗಿದ್ದೆವು. ಒಂದು ಪ್ರಮುಖವಾದ ವಿಷಯವೇನೆಂದರೆ ಎಲ್ಲರೂ ಕಂಪ್ಯೂಟರ್ ಹಿನ್ನೆಲೆಯಿಂದ ಬಂದವರಾಗಿದ್ದರಿಂದ, ಕನ್ನಡಿಗರು ಯು.ಕೆ ಅಂತರ್ಜಾಲ ಹಾಗೂ ಟಿಕೆಟ್ ವ್ಯವಸ್ಥೆ ತುಂಬಾ ಹಿಂದಿನಿಂದಲೇ ಹೈ- ಟೆಕ್. ಪ್ರಾರಂಭದಿಂದಲೇ ಕೆ.ಯು.ಕೆ ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿನಯ್ ರಾವ್ ಆನ್ ಲೈನ್ ಪೇಮೆಂಟ್ಸ್ ವಿಷಯದಲ್ಲಿ ಎಂದಿನಿಂದಲೇ ಪಳಗಿದವರು. ದಶಮಾನೋತ್ಸವ ಕಾರ್ಯಕ್ರಮದಲ್ಲಿ ೧೦ ಕ್ಕಿಂತ ಹೆಚ್ಚು ಕರ್ನಾಟಕದಿಂದ ಬಂದ ಕಲಾವಿದರನ್ನ ಮ್ಯಾನೇಜ್ ಮಾಡಿದ್ದಲ್ಲದೆ, ಕಾರ್ಯಕ್ರಮದ ಊಟ ತಿಂಡಿ ಹಾಗೂ ಕಲಾವಿದರ ವಸತಿ ವ್ಯವಸ್ಥೆಯಿಂದ ಹಿಡಿದು ಸುಗಮವಾಗಿ ಎಲ್ಲರ ಸಹಯೋಗದಿಂದ ಮಾಡಿದ್ದು ಅತ್ಯಂತ ಶ್ಲಾಘನೀಯ. ಕೆ.ಯು.ಕೆ ಕೊನೆಯಲ್ಲಿ ಲಾಸ್ ಮಾಡಿದ್ದೇನೋ ನಿಜ ಆದರೆ ಊಟದ ವ್ಯವಸ್ಥೆಯಲ್ಲಿ ಒಂದೆರಡು ಲೋಪ ದೋಷಗಳನ್ನ ಬಿಟ್ಟರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು ಮುಂದಿನ ಕನ್ನಡಿಗರು ಯು.ಕೆ ಕನ್ನಡ ಕಾರ್ಯಕ್ರಮಗಳಿಗೆ ದಶಮಾನೋತ್ಸವ ಒಂದು ಮಾದರಿ ಆಯಿತು.
ಆರಂಭದಲ್ಲಿ ಕನ್ನಡಿಗರು ಯು.ಕೆ ಅಜೀವ ಸದಸ್ಯತ್ವಕ್ಕೆ ಕೇವಲ 5 ರಿಂದ 10 ಪೌಂಡು ಮಾತ್ರ ಇತ್ತು. ಸದಸ್ಯತ್ವದಿಂದ ಸಂಗ್ರಹವಾದ ಹಣ ಯಾವುದೇ ದೊಡ್ಡ ಉಪಯೋಗಕ್ಕೆ ಬರುವಂತ ಮೊತ್ತ ಅಲ್ಲ. ಕನ್ನಡಿಗರು ಯು.ಕೆ ಸಂಸ್ಥೆಯ ಅಜೀವ ಸದಸ್ಯರ ಸಂಖ್ಯೆ ಕೂಡ ಅತಿ ಕಡಿಮೆ. ಇತ್ತೀಚಿಗೆ ಮಾಡುವಂಥ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವೆಚ್ಚ ಸುಮಾರು 15 ರಿಂದ 20 ಸಾವಿರ ಪೌಂಡು. ಸದ್ಯದಲ್ಲೇ ಯುಗಾದಿ ಪ್ರಯುಕ್ತ ನಡೆದ ಮಿಲ್ಟನ್ ಕೇನ್ಸ್ ಶಾಖೆಯ ಕಾರ್ಯಕ್ರಮಕ್ಕೆ ಕೇವಲ ೧೨ ಪೌಂಡು ಟಿಕೆಟ್ ದರದಲ್ಲಿ ಕರ್ನಾಟಕದ ಪ್ರತಿಭಾವಂತ ನೆರಳು ಬೆಳಕು ಕಲಾವಿದರಾದ ಶ್ರೀ ಪ್ರಹ್ಲಾದ್ ಆಚಾರ್ಯರನ್ನು ಬರಮಾಡಿ ೩೦೦ ರರಷ್ಟು ಜನರನ್ನು ಒಟ್ಟುಗೂಡಿಸಿದ ಯಶಸ್ಸು ಕೂಡ ಕನ್ನಡಿಗರು ಯು.ಕೆ. ಗೆ ಸಲ್ಲುತ್ತದೆ. ಅಮೇರಿಕಾ ದಲ್ಲಿ ನಡೆಯುವ ಅಕ್ಕ ಸಮ್ಮೇಳನದಲ್ಲಿ ನಮ್ಮ ಕರ್ನಾಟಕ ಸರ್ಕಾರ ಆರ್ಥಿಕ ಸಹಾಯ ಮಾಡುವ ವಿಷಯ ಕೇಳಿದ್ದೇನೆ. ಆದರೆ ಇಲ್ಲಿ ಇಂಗ್ಲೆಂಡಿನಲ್ಲಿ ನೆಡೆಯುವ ಯಾವುದೇ ಕಾರ್ಯಕ್ರಮದ ಹಣಕಾಸಿಗೆ ಮುಖ್ಯ ಬಂಡವಾಳ ನಮ್ಮ ಕನ್ನಡ ಪ್ರೇಕ್ಷಕರ ಟಿಕೆಟ್ ಹಣದಿಂದ ಸಂಗ್ರವಾದ ಮೊತ್ತ ಹಾಗೂ ಚಿಕ್ಕ ಪುಟ್ಟ ಪ್ರಾಯೋಜಕರ ಹಣ. ಹೀಗಾಗಿ ಎಲ್ಲ ಕಾರ್ಯನಿರ್ವಾಹಕ ಸಮಿತಿ ಸದಸ್ಯರು ಕಾರ್ಯಕ್ರಮದ ಪ್ರಾರಂಭಿಕ ಖರ್ಚು ವೆಚ್ಚಕ್ಕೆ ಬಂಡವಾಳ ಹೂಡುವದು ಅನಿವಾರ್ಯವಾಗಿದೆ. ಕಳೆದ ವರ್ಷದ ವೀಕೆಂಡ್ ಇನ್ ಲಂಡನ್ ವಿಥ್ ರಮೇಶ್ (ರಾಜ್ಯೋತ್ಸವ) ಕಾರ್ಯಕ್ರಮ ವೆಚ್ಚದ ಕೇವಲ ಶೇಕಡಾ 80 ಮಾತ್ರ ಟಿಕೆಟ್ ಹಾಗೂ ಪ್ರಯೋಜಕತ್ವದಿಂದ ಸಂಗ್ರಹವಾದದ್ದು. ಹೀಗಾಗಿ ಕನ್ನಡ ಸಂಘದಿಂದ ಮಾಡುವ ಯಾವುದೇ ಕಾರ್ಯಕ್ರಮಕ್ಕೆ ಎಲ್ಲಾ ಕನ್ನಡಿಗರ ಹೆಚ್ಚಿನ ಪ್ರಮಾಣದ ಹಾಜರಾತಿ ಹಾಗೂ ಟಿಕೆಟ್ ವೆಚ್ಚ ಕೊಟ್ಟು ಒಂದು ಒಳ್ಳೆಯ ಕನ್ನಡ ಕಾರ್ಯಕ್ರಮವನ್ನು ನೋಡಲು ಸಿದ್ದ ಎನ್ನುವ ಮನೋಭಾವನೆಯೇ ಕಾರ್ಯಕ್ರಮದ ಯಶಸ್ಸಿಗೆ ಕಾರಣ ಹಾಗೂ ಜನ ಹೆಚ್ಚು ಬಂದರೆ ಆಯೋಜಕರಿಗೂ ಅಬ್ಬಾ ಲಾಸ್ ಆಗಿಲ್ಲವಲ್ಲ ಅನ್ನುವ ತೃಪ್ತಿ.

 

gana article.jpg 2
                                                            ಕರಿ ಕೋಟಿನಲ್ಲಿರುವವರು -ಗಣಪತಿ ಭಟ್

ಕನ್ನಡಿಗರು ಯು. ಕೆ. ತನ್ನ ಆಂತರಿಕ ಸಂಘಟನೆಯನ್ನು ಮೂರು ವಿಭಾಗದಲ್ಲಿ ಸಂಘಟಿಸಿಕೊಂಡಿದೆ. ಮೊದಲನೆಯ ಸಂಘಟನೆ ಕೆ.ಯು.ಕೆ. ಇವೆಂಟ್ಸ್ ಟೀಮ್. ಈಗಾಗಲೇ ಯುನೈಟೆಡ್ ಕಿಂಗ್ಡಮ್ನ ಬೇರೆ ಬೇರೆ ಪ್ರದೇಶಗಳಿಂದ ೩೦ ಕ್ಕೂ ಹೆಚ್ಚು ಕನ್ನಡ ಪರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಸದಸ್ಯರು ಈ ತಂಡದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ. ಕೆ.ಯು.ಕೆ. ಇವೆಂಟ್ಸ್ ಟೀಮ್ ನಲ್ಲಿ ವಿದ್ಯಾರ್ಥಿಗಳ ಪ್ರಾತಿನಿಧ್ಯ ಕೂಡ ಇದ್ದು, ಈಗಾಗಲೇ ಘೋಷಿಸಿರುವ ಕನ್ನಡ ಹಬ್ಬಕ್ಕೆ ತಂಡದಲ್ಲಿ ಇನ್ನಷ್ಟು ಉತ್ಸಾಹ ತಂದಿದೆ. ಎರಡನೆಯದಾಗಿ ಕನ್ನಡ ಕಲಿ ಶಿಕ್ಷಕರ ತಂಡ. ಈ ತಂಡದಲ್ಲಿ ಹ್ಯಾರೋ, ಬೇಸಿಂಗ್ ಸ್ಟೋಕ್, ಸ್ಲೋವ್,ಇಲ್ಫೊರ್ಡ್ ಹಾಗೂ ಮಿಲ್ಟನ್ ಕೇನ್ಸ್ ನಿಂದ ವಿಶೇಷವಾಗಿ ಮಹಿಳಾ ಶಿಕ್ಷಕಿಯರು ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿ ತಿಂಗಳು ಕನ್ನಡ ಕಲಿ ವಿಚಾರದ ಬಗ್ಗೆ ಆಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಯುತ್ತದೆ. ಕೊನೆಯದಾಗಿ ಕೆ.ಯು.ಕೆ. ಕಾರ್ಯನಿರ್ವಾಹಕ ಸಮಿತಿ (ಎಸ್ಎಕ್ಯುಟಿವ್ ಕಮಿಟಿ). ಕಾರ್ಯಕ್ರಮದ ಪರಿಕಲ್ಪನೆಯಿಂದ ಹಿಡಿದು ಅದನ್ನು ಯಶಸ್ವಿಯಾಗಿ ಮುಂದುವರಿಸಿ ಪೂರ್ಣ ನಿರ್ವಹಣೆ ಮಾಡುವದೇ ಕೆ.ಯು.ಕೆ. ಕಾರ್ಯನಿರ್ವಾಹಕರ ಮುಖ್ಯ ಜವಾಬ್ದಾರಿ. ಹಣಕಾಸಿನ ಅಗತ್ಯವಿದ್ದಾಗ ಎಲ್ಲ ಕಾರ್ಯನಿರ್ವಾಹಕ ಸಮಿತಿ ಸದಸ್ಯರು ಕಾರ್ಯಕ್ರಮದ ಖರ್ಚು ವೆಚ್ಚಕ್ಕೆ ಆರಂಭಿಕ ಬಂಡವಾಳ ಹೂಡುವದು ಸಾಮಾನ್ಯದ ವಿಷಯ. ಹಾಗೆಯೇ ಕೆಲವೊಮ್ಮೆ ಯಾವುದೇ ರೀತಿಯ ಹಣಕಾಸಿನ ನಷ್ಟ ಆದಾಗ ಕಾರ್ಯನಿರ್ವಾಹಕ ಸಮಿತಿ ಅದನ್ನು ಪೂರ್ಣಪ್ರಮಾಣದಲ್ಲಿ ಸ್ವೀಕರಿಸುತ್ತದೆ.
ಕನ್ನಡಿಗರು ಯು. ಕೆ. ಕಳೆದ ಏಳೆಂಟು ವರ್ಷದಿಂದ ಕನ್ನಡ ಕಲಿ ಶಿಬಿರವನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಪ್ರಾರಂಭದಲ್ಲಿ ಕನ್ನಡ ಪ್ರಾಧಿಕಾರ ಈ ಪ್ರಯತ್ನಕ್ಕೆ ಧನ ಸಹಾಯ ಮಾಡಿತ್ತು ಆದರೆ ನಿರಂತರವಾಗಿ ಇದು ಐದಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ನಡೆಯಬೇಕೆಂದರೆ ಕ್ಲಾಸ್ ರೂಮ್ ರೆಂಟಲ್ ಹಾಗೂ ಇತರೆ ವೆಚ್ಚದಿಂದ ಸಾಮಾನ್ಯವಾಗಿ ಒಂದು ವರ್ಷಕ್ಕೆ ಒಂದು ಸಾವಿರ ಪೌಂಡಿಗಿಂತ ಹೆಚ್ಚು ಅಗತ್ಯ ಇರುತ್ತದೆ. ಆಗಾಗ ಕನ್ನಡ ರಾಜ್ಯೋತ್ಸವ ಅಥವಾ ಬೇರೆ ಚಿಕ್ಕ ಪುಟ್ಟ ಕಾರ್ಯಕ್ರಮಗಳಲ್ಲಿ ಚಾರಿಟಿ ಬಕೆಟ್ ಇಟ್ಟು ಹಣ ಸಂಗ್ರಹ ಮಾಡುವ ಪ್ರಯತ್ನ ಕನ್ನಡಿಗರು ಯು. ಕೆ. ಮಾಡಿತ್ತು. ಇಲ್ಲಿಯವರೆಗೆ ಸಂಗ್ರಹವಾದ ಹಣ ತುಂಬಾ ಕಡಿಮೆ. ಹಣಕ್ಕಿಂತ ಮುಖ್ಯವಾಗಿ ಕಳೆದ ಒಂದು ವರ್ಷದಿಂದ ಕನ್ನಡ ಕಲಿ ಪ್ರಯತ್ನಕ್ಕೆ ಹಲವಾರು ವಾಲಂಟೀರ್ ಶಿಕ್ಷಕಿಯರು ಮುಂದೆ ಬಂದು ಕೈಗೂಡಿರುವದು ತುಂಬಾ ಸಂತಸದ ಸಂಗತಿ. ಮುಖ್ಯವಾಗಿ ಒಂದು ಶಿಸ್ತು ಹಾಗೂ ಸ್ಥಿರ ಪ್ರಮಾಣದಲ್ಲಿ ಎಲ್ಲಾ ಪ್ರದೇಶದಲ್ಲಿ ಕನ್ನಡ ಕಲಿ ತರಗತಿಯನ್ನು ನಡೆಸುವ ಪ್ರಯತ್ನ ಕನ್ನಡಿಗರು ಯು.ಕೆ ಕನ್ನಡ ಕಲಿ ತಂಡದ್ದಾಗಿದೆ. ಈ ನಿಟ್ಟಿನಲ್ಲಿ ಇಂತಹ ಒಂದು ವಿಶೇಷ ಪ್ರಯತ್ನಕ್ಕೆ ಎಲ್ಲಾ ಯು.ಕೆ. ಕನ್ನಡಿಗರ ಸಹಕಾರ ಅತ್ಯಗತ್ಯ. ಕನ್ನಡಿಗರು ಯು.ಕೆ. ಅಂತರ್ಜಾಲದಲ್ಲಿ “Contribute to KUK Kannada Kali Fund “ಎಂಬ ಸ್ಪೆಷಲ್ ಲಿಂಕ್ ಮೂಲಕ ಸದ್ಯದಲ್ಲಿ ಹಣ ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ಸ್ವ–ಇಚ್ಛೆಯಿಂದ ಎಲ್ಲಾ ಕನ್ನಡಿಗನೂ ಆದಷ್ಟು ದೇಣಿಗೆ ನೀಡಿದ್ದಲ್ಲಿ ಈ ಕಾರ್ಯಕ್ರಮ ಇನ್ನಷ್ಟು ಯಶಸ್ವಿಯಾಗುವದು ಖಂಡಿತ. ನಾವು ಎಷ್ಟೊಂದು ಕಡೆ ಬೇರೆ ಬೇರೆ ಚಾರಿಟಿ ಗೋಸ್ಕರ ಹಣ ನೀಡುತ್ತೇವೆ. ಮುಂದಿನ ಪೀಳಿಗೆ ಕನ್ನಡ ಕಲಿತು ನಮ್ಮ ಸಂಕೃತಿಯನ್ನು ಇನ್ನಷ್ಟು ಬೆಳೆಸುವದಕ್ಕೋಸ್ಕರ ಕೈಲಾದಷ್ಟು ಯಾಕೆ ಸಹಾಯ ಮಾಡಬಾರದು?

ಕಳೆದ ನಾಲ್ಕೈದು ವರ್ಷದಿಂದ ಯುನೈಟೆಡ್ ಕಿಂಗ್ಡಮ್ ನಲ್ಲಿ ಕನ್ನಡ ಪರ ಚಟುವಟಿಕೆಗಳು ಹೆಚ್ಚಾಗುತ್ತಾ ಇದೆ. ಇಂಗ್ಲೆಂಡ್ ಹಾಗೂ ಸುತ್ತಮುತ್ತ ಬೇಕಾದಷ್ಟು ಕನ್ನಡಿಗರಿದ್ದಾರೆ. ಆದರೆ ನಾವೆಲ್ಲ ಕನ್ನಡಿಗರು ವರ್ಷದಲ್ಲಿ ಒಮ್ಮೆಯಾದರೂ ಅತಿ ಹೆಚ್ಚು ಸಂಖ್ಯೆಯಲ್ಲಿ ಒಟ್ಟುಗೂಡುತ್ತೇವೆಯೇ? ವರ್ಷದಲ್ಲಿ ಒಮ್ಮೆ ನಡೆಯುವ ಕನ್ನಡ ಬಳಗ ದೀಪಾವಳಿ ಕಾರ್ಯಕ್ರಮಕ್ಕಾಗಲಿ ಅಥವಾ ಕನ್ನಡಿಗರು ಯು.ಕೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕಾಗಲಿ, ಮಕ್ಕಳು ದೊಡ್ಡವರನ್ನ ಸೇರಿಸಿ ಹೆಚ್ಚೆಂದರೆ ಒಂದು 700 ಕನ್ನಡ ತಲೆಗಳು ಮಾತ್ರ ಇತ್ತೀಚಿಗೆ ಭಾಗವಹಿಸುತ್ತಿರುವದನ್ನು ನೋಡಿದ್ದೇನೆ. ನಿಜವಾಗಲೂ ನಮ್ಮ ಯು. ಕೆ. ಕನ್ನಡಿಗರು ಕೇವಲ 700 ಸಂಖ್ಯೆಗೆ ಮಾತ್ರ ಸೀಮಿತವೇ? ವರ್ಷದಲ್ಲಿ ಎಷ್ಟೊಂದು ಕನ್ನಡ ಕಾರ್ಯಕ್ರಮ ಆದರೂ ಗುಜರಾತಿ, ಪಂಜಾಬಿ ಸಮೂದಾಯದ ತರಹ ನಮ್ಮ ಕನ್ನಡಿಗರು ಒಂದು ಸಾವಿರಕ್ಕೂ ಹೆಚ್ಚು ಯಾಕೆ ಸೇರುತ್ತಿಲ್ಲ?
ಸ್ವಾಭಾವಿಕವಾಗಿ ಕನ್ನಡಿಗರು ಸ್ವಲ್ಪ ಸಂಕೋಚ ಸ್ವಭಾವದವರು. ನಾನು ನೋಡಿ ತಿಳಿದ ಪ್ರಕಾರ ಕೆಲವು ಕನ್ನಡಿಗರಿಗೆ ಸಾಮೂಹಿಕ ಕನ್ನಡ ಕಾರ್ಯಕ್ರಮಕ್ಕೆ ಬರಲು ಮುಜುಗರ. ಎಷ್ಟೋ ಕನ್ನಡಿಗರು ಹೊರ ದೇಶಕ್ಕೆ ಬಂದು ಅವರವರ ಕೆಲಸದಲ್ಲಿ ಮಗ್ನನಾಗುತ್ತಾರೆ. ಈ ಕನ್ನಡ ಸಂಘಗಳ ತಲೆ ಬಿಸಿ ಯಾಕಪ್ಪ ಬೇಕು ಎಂಬ ಒಂದು ಭಾವನೆ ಕೆಲವು ಜನರ ಮನದಲ್ಲಿ ಇರಬಹುದೋ ಏನೋ. ಆದರೆ ನಾನು ಸಾಮಾಜಿಕ ಅಂತರ್ಜಾಲದಲ್ಲಿ ಸಾಕಷ್ಟು ಹೊಸ ಕನ್ನಡ ಮುಖಗಳನ್ನು ನೋಡುತ್ತಿರುತ್ತೇನೆ. ಕೆಲವೊಂದು ಕನ್ನಡ ಪರ ವಿಷಯ ಬಂದಾಗ ಹೆಮ್ಮೆಯಿಂದ ಪ್ರೋತ್ಸಾಹಿಸುತ್ತಾರೆ. ಆದರೆ ಕನ್ನಡ ಸಂಘದ ಚಟುವಟಿಕೆ ಅಥವಾ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವಿಚಾರ ಬಂದಾಗ  ಯಾಕಪ್ಪ ನನಗೆ ಬೇಕು ಎಂಬ ಭಾವನೆ ಜನರಲ್ಲಿ ಇರಬಹುದಾ ಎಂಬ ಪ್ರಶ್ನೆ ನನ್ನನ್ನು ಆಗಾಗ ಕಾಡುತ್ತಿರುತ್ತದೆ. ಏನೇ ಇರಲಿ, ನಮ್ಮ ಭಾಷೆ ನಮ್ಮ ಸಂಸ್ಕೃತಿಯನ್ನು ಆಂಗ್ಲ ನಾಡಿನಲ್ಲಿ ಈಗಿನಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿ ಬಿತ್ತರಿಸಲು ಯು. ಕೆ. ಕನ್ನಡಿಗರೆಲ್ಲ ವರ್ಷಕ್ಕೊಮ್ಮೆ ಒಂದೇ ಚಾವಣಿಯ ಕೆಳಗೆ ಒಟ್ಟುಗೂಡಿದರೆ, ಇದಕ್ಕಿಂತ ಸಂತೋಷ ಬೇರೆ ಏನಿಲ್ಲ.

ಹೌದು ಕನ್ನಡ ಸಂಘಗಳ ವ್ಯವಸ್ಥೆ ಸ್ವಲ್ಪ ನಿಧಾನ. ಇತ್ತೀಚಿಗೆ ಹಲವಾರು ಕನ್ನಡ ಗುಂಪುಗಳು ತಮ್ಮ ಸ್ಥಳೀಯ ಕನ್ನಡ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವದನ್ನು ನೋಡಿದ್ದೇನೆ. ವಾಟ್ಸಪ್ಪ ಗ್ರೂಪ್ ನಿಂದ ಈಗ 50 ರಿಂದ 100 ಕನ್ನಡಿಗರ ಗುಂಪು ಸ್ರಷ್ಟಿಸಿ ಕೆಲವೇ ಘಂಟೆಗಳಲ್ಲಿ ಒಂದು ಕನ್ನಡ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಆಯೋಜಿಸಿ, ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿ, ಸಾಕಷ್ಟು ಜನರನ್ನು ಟ್ಯಾಗ್ ಮಾಡಿ, ಎಲ್ಲರೂ ಬಂದ ಖರ್ಚನ್ನು ಹಂಚಿ ಪಾಲು ಮಾಡಿಕೊಳ್ಳೋಣ ಎಂದು, ಎಲ್ಲರನ್ನೂ ವೇದಿಕೆಯ ಮೇಲೆ ಹತ್ತಿಸಿ, ಪಕ್ಕದಿಂದಲೇ ಊಟ ತಿಂಡಿ ತರಿಸಿ ಯಶಸ್ವಿಯಾಗಿ ಒಂದು ಉತ್ತಮ ಕಾರ್ಯಕ್ರಮವನ್ನು ಕೊಡಬಹುದು. ಇನ್ನು ಕಮರ್ಷಿಯಲ್ ಆಗಿ ಹೋದರೆ, ಒಂದು ಪ್ರೈವೇಟ್ ಕಂಪನಿ ಸ್ಥಾಪಿಸಿ ಕನ್ನಡ ಫಿಲಂ ಸ್ಟಾರ್ ಕರೆಸಿ ಅಥವಾ ಚಲನ ಚಿತ್ರವನ್ನು ಪ್ರದರ್ಶಿಸಿ ಕನ್ನಡ ಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ ಎನ್ನುವದರಲ್ಲಿ ಕೂಡ ಒಂದು ರೀತಿಯ ಅರ್ಹತೆ ಇದೆ. ನಮ್ಮ ಕನ್ನಡಿಗರು ಅವರ ಅನುಕೂಲಕ್ಕೆ ಸರಿಯಾಗಿ ಇದ್ದರೆ ಹಾಗೂ ಅದರ ಗುಣಮಟ್ಟ ಚೆನ್ನಾಗಿದ್ದಲ್ಲಿ ಖಂಡಿತ ಎಲ್ಲ ತರಹದ ಕಾರ್ಯಕ್ರಮವನ್ನು ಪ್ರೋತ್ಸಾಹಿಸುತ್ತಾರೆ.
ಕನ್ನಡ ಸಂಘದಲ್ಲಿಯೇ ಇದ್ದು ಇಲ್ಲಿಯವರೆಗೆ ಅನುಭವ ಪಡೆದು, ನಿಮ್ಮೊಂದಿಗೆ ಹಂಚಿಕೊಳ್ಳಬೇಕಾದ ವಿಷಯವೇನೆಂದರೆ ಒಂದು ಸಂಸ್ಥೆಯನ್ನು ಸ್ಥಾಪಿಸಿ ಕಮ್ಯೂನಿಟಿ ಇಂಟರೆಸ್ಟ್ ಕಂಪನಿ (ಲಾಭಕ್ಕಾಗಿ ಅಲ್ಲ) ಅಥವಾ ಚಾರಿಟಿ ಸಂಸ್ಥೆ ತರಹ ಕಾರ್ಯ ನಿರ್ವಹಣೆ ಮಾಡಿ ಸರಕಾರಕ್ಕೆ ತೆರಿಗೆ ರಿಟರ್ನ್ ನೀಡಿ ಅದನ್ನು ವರ್ಷ ವರ್ಷ ನಿರ್ವಹಿಸಿಕೊಂಡು ಹೋಗುವದು ಸಾಮಾನ್ಯ ವಿಷಯವಲ್ಲ. ಎಲ್ಲಾ ತರಹದ ಪ್ರಯಾಸಕ್ಕೆ ನಮ್ಮ ಯು. ಕೆ. ಕನ್ನಡಿಗರ ಬೆಂಬಲ ಸದಾ ಇರಲಿ.

                                                                                                               ಚಿತ್ರ -ಬರಹ-ಗಣಪತಿ ಭಟ್

3 thoughts on “ವಿದೇಶದಲ್ಲಿ ಕನ್ನಡದ ಹೊಸ ಇನ್ನಿಂಗ್ಸ್- ಗಣಪತಿ ಭಟ್

  1. ನಾನು ಈ ದೇಶಕ್ಕೆ ಬಂದ ಹೊಸತರಲ್ಲಿ ಯಾವ ಕನ್ನಡ ಸಂಘಗಳ ಪರಿಚಯವೂ ಇರಲಿಲ್ಲ. ಇಂಗ್ಲೆಂಡಿನಲ್ಲಿ ನಾಲ್ಕು ವರ್ಷ ಕಳೆದರೂ ಯಾವ ಕನ್ನಡ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸಲಾಗಿರಲಿಲ್ಲ. ಸ್ಕಾಟ್ಲ್ಯಾಂಡ್ಗೆ ಹೋದಾಗ ಅಲ್ಲಿನ ಭಾರತೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡೆ. ಅವರಿಂದ ಸ್ಕಾಟ್ಟಿಷ್ ಕನ್ನಡ ಸಂಘದ ಪರಿಚಯವಾಯ್ತು. ಅವರ ಮೂಲ ಕೆಬಿಯುಕೆಯ ಪರಿಚಯ. ಕೆಬಿಯುಕೆಯ ಪರಿಚಯದಿಂದ ಅದರದ್ದೇ ಇನ್ನೊಂದು ತುಣುಕು ಯಾರ್ಕ್ ಶಯರ್ ಬಳಗದ ಪರಿಚಯಾಯ್ತು. ಅವರಿಂದ ಅನಿವಾಸಿಯ ಪರಿಚಯ. ಆನಿವಾಸಿಯ ಕಾರಣ ಕೆಯುಕೆಯ ಪರಿಚಯ. ಇವೆಲ್ಲ ಸಂಘಗಳ ಯಾವ ಸಹಾಯವೂ ಇಲ್ಲದೆ ಮೊದಲ ವರ್ಷದಲ್ಲೇ ಭರ್ಜರಿ ಯಶಸ್ಸು ಕಂಡ ಲೆಸ್ಟರ್ ಕನ್ನಡ ಕಸ್ತೂರಿಯ ಪರಿಚಯವಾಯ್ತು!!

    ಈ ಎಲ್ಲದರಲ್ಲೂ ಯಾವ ಅಧಿಕಾರಕ್ಕೂ ತಡಕಾಡದೆ ಮುಕ್ತ ಮನಸ್ಸಿನಿಂದ ಭಾಗವಹಿಸಿದ್ದೇನೆ. ಹಲವು ಸಂಘಗಳಿರದೆ ಒಂದೇ ಒಂದು ಸಂಘ ಏಕಸ್ವಾಮತ್ವದ್ದಾಗಿದ್ದರೆ ಖಂಡಿತವಾಗಿ ನನಗೆ ಕನ್ನಡ, ಜೀವನದ ಎಲ್ಲ ಘಟ್ಟಗಳಲ್ಲಿ ಇಂಗ್ಲೆಂಡಿನಲ್ಲಿ ಸಿಗುತ್ತಿರಲಿಲ್ಲ. ಎಲ್ಲ ಸಂಘಗಳು ತಮ್ಮದೇ ರೀತಿಯಲ್ಲಿ ಭಿನ್ನ, ಮುಖ್ಯ ಮತ್ತು ವಿಶೇಷ. ಕಲಾವಿದರಿಗೂ ಹೆಚ್ಚು ಅವಕಾಶ. ಜನತೆಗೆ ಭಿನ್ನ ಕಾರ್ಯಕ್ರಮಗಳ ಭೋಜನ. ಹೀಗೆ ಭಾಗವಹಿಸುವಾಗ ನನ್ನಲ್ಲಿ ಪ್ರಾಂತೀಯತೆಯ ವಿಚಾರವಂತೂ ಇರುವುದೇ ಇಲ್ಲ. ಚಟುವಟಿಕೆಗಳು ಹತ್ತಿರವಿದ್ದರೆ ಅನುಕೂಲವೆನ್ನುವುದು ಮಾತ್ರ ಖಂಡಿತ ನಿಜ.

    ಸ್ಪರ್ಧೆ ಮತ್ತು ಬದಲಾವಣೆಗಳು ಕೂಡ ಜನರಿಗೆ/ಸಂಘಗಳಿಗೆ ತುಂಬ ಮುಖ್ಯ. ಇಲ್ಲದಿದ್ದಲ್ಲಿ ಅವು ಜಡ್ಡು ಹಿಡಿದುಬಿಡುತ್ತವೆ. ಹೊರಗಿನಿಂದ ಕರೆಸುವ ಕಲಾವಿದರಿಗಿಂತ ಇಲ್ಲಿ ಬೆಳೆಯುವ ನಮ್ಮ ಮಕ್ಕಳಿಗೆ, ನಮಗೆ, ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೂಡ ಸ್ಥಳೀಯ/ಪ್ರಾಂತೀಯ ಸಂಘಗಳು ಮುಖ್ಯ ಪಾತ್ರ ವಹಿಸುತ್ತವೆ. ಒಟ್ಟುಗೂಡುವ ವಿಚಾರದಲ್ಲಿ ಯಾವುದನ್ನು ಮುರಿಯುವ ಅಗತ್ಯವೂ ಇಲ್ಲ.ಒಂದೇ ಬೀದಿಯಲ್ಲಿ, ನಗರದಲ್ಲಿ ಹಲವಾರು ಸಂಘಗಳಿದ್ದರೆ ಅದು ಅನಗತ್ಯ ಎನ್ನಬಹುದು. ಬರಿಯ ವಯಸ್ಸು ಮತ್ತು ದುಡ್ಡಿನ ಆಧಾರದ ಮೇಲೆ ಸಂಘಗಳ ಕಿಮ್ಮತ್ತನ್ನು ಅಳೆಯುವ ಧೋರಣೆ ಬೇಡ.ಕೆಲವೊಮ್ಮೆ ಪುಟ್ಟ ಸಂಘಗಳಲ್ಲಿ ದೊರೆಯುವ ಆತ್ಮೀಯತೆ ಸಾವಿರಾರು ಮಂದಿ ಸೇರುವಲ್ಲಿ ಸಿಗುವುದಿಲ್ಲ. ಹಾಗಾಗಿ ಹಲವು ಸಂಘಗಳ ಉಪಸ್ಥಿತಿ ಅನಿವಾರ್ಯ. ಎಲ್ಲ ಒಂದಾಗಲು ಆಗದಿದ್ದರೂ ವಿಶಾಲ ಮನಸ್ಸಿರುವ ಹಲವು ಸಂಘಗಳು ಒಂದಾಗಿ ಕೆಲವು ವರ್ಷಗಳಲ್ಲಿ ಒಮ್ಮೆ ಒಂದು ಅತಿದೊಡ್ಡ ಕಾರ್ಯಕ್ರಮ ಮಾಡಬಹುದು.ಅದಕ್ಕೆ ಸೋಪಾನ ಹಾಕೋಣ.
    ಅನಿವಾಸಿ ಮಾತ್ರ ಇಡೀ ಯುಕೆ ಯ ಎಲ್ಲ ಬರಹಗಾರರಿಗಿರುವ ಒಂದೇ ಒಂದು ವೇದಿಕೆ ಎಂದು ಸದ್ಯಕ್ಕೆ ಸಂತಸ ಪಡೋಣ!!

    Like

  2. ಗಣಪತಿ ಭಟ್ಟರೆ ‘ಯು.ಕೆ ಕನ್ನಡಿಗರು‘ ಬೆಳೆದು ಬ೦ದ ರೀತಿ, ಮಾಡುತ್ತಿರುವ ಕಾರ್ಯ ನಮಗೆಲ್ಲ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.
    ಕನ್ನಡ ಭಾಷೆಯ ಮೇಲಿನ ಒಲವು ಇದಕ್ಕೆ ಪ್ರಚೋದನೆ ಎನ್ನುವುದರಲ್ಲಿ ಸ೦ದೇಹವಿಲ್ಲ. ನಮ್ಮ ಮಕ್ಕಳಿಗೆ ಕನ್ನಡ ಮಾತನಾಡಲಷ್ಟೇ ಅಲ್ಲ, ಒದಿ ಬರೆಯುವುದನ್ನು ಕಲಿಸುವ ನಿಮ್ಮ ಪ್ರಯತ್ನ ನಿಜಕ್ಕು ಮೆಚ್ಚುವ೦ತಹದ್ದು.
    ನಮಗೆ ಗೊತ್ತಿರುವವರ ಜೊತೆ, ನಮಗೆ ಅನುಕೂಲವಿರುವ ಜಾಗದಲ್ಲಿ ಬೆರೆಯುವುದು ನಮ್ಮೆಲ್ಲರ ಸಹಜ ಗುಣ.
    ಇ೦ಗ್ಲೆಡ್ ಅನ್ನುವ ಈ ಸಣ್ಣ ದ್ವೀಪದಲ್ಲಿ, ಪ್ರಾ೦ತೀಯ ಕನ್ನಡ ಸ೦ಘಗಳು ಹುಟ್ಟಿವೆ ಮತ್ತು ಬೆಳೆಯುತ್ತಿವೆ, ಇದರಲ್ಲಿ ತಪ್ಪೇನಿಲ್ಲ.
    ವರುಷಕೊಮ್ಮೆಯಾದರು ನಾವೆಲ್ಲ ಭೇಟಿ ಮಾಡಿದರೆ, ಸಾವಿರಾರು ಜನರು ಸೇರುವುದರಲ್ಲಿ ಸ೦ದೇಹವಿಲ್ಲ. ನಮ್ಮ ನಾಡಿನಿ೦ದ ಕಲಾವಿದರನ್ನು ಕರೆಸಿ, ಅವರನ್ನು ಪರಿಚಯಿಸಿ, ಗೌರವಿಸಿ, ಹೊರನಾಡಿನ ಈ ಕನ್ನಡಿಗರಿಗೆ ರ೦ಜನೆಯ ರಸದೂಟ ಮಾಡಿಸುವುದು ಮುಖ್ಯ, ಇದನ್ನು ಸಾಧಿಸಲು ಕನ್ನಡಿಗರು ಹೆಚ್ಚಿನ ಸ೦ಖ್ಯೆಯಲ್ಲಿ ಒ೦ದೆಡೆ ಸೇರಬೇಕು.

    ‘ಅನಿವಾಸಿ‘ ಯು.ಕೆ ಕನ್ನಡಿಗರೆಲ್ಲ ಬರೆಯುವ, ಓದುವ, ಒ೦ದೇ ತ೦ಗುದಾಣವಾಗಿದ್ದರೆ ಮಾತ್ರ ಬೆಳೆಯಲು ಸಾಧ್ಯ. ಇದನ್ನು ಬೆಳೆಸುವುದರಲ್ಲಿ ಎಲ್ಲಾ ಪ್ರಾ೦ತೀಯ ಕನ್ನಡ ಸದಸ್ಯರು ಒ೦ದಾಗಬೇಕು. ಈ ದಿಸೆಯಲ್ಲಿ ನಿಮ್ಮೆಲ್ಲರ ಬೆ೦ಬಲವಿರಲಿ.

    Like

  3. ಯು. ಕೆ. ಯಲ್ಲಿ ಯು. ಕೆ. ಕನ್ನಡ ಬಳಗ (KBUK) ಮುಖ್ಯವಾಹಿನಿ ಸಂಸ್ಥೆ ಯಾಗಿ ಕಳೆದ ೩೫ ವರ್ಷಗಳಿಂದ ಬೆಳೆದು ಆರ್ಥಿಕವಾಗಿ ಸುಭದ್ರತೆಯನ್ನು ಕಂಡು ತನ್ನದೇ ಆದ ಪ್ರಜಾಪ್ರಭುತ್ವ ಆಡಳಿತ ಹಾಗು ಸಂವಿಧಾನ ಇತ್ಯಾದಿಗಳನ್ನು ಒಳಗೊಂಡು ಸುವ್ಯವಸ್ಥಿತವಾದ ಸಂಘಟನೆಯಾಗಿರುವಾಗ ಇದನ್ನು ತ್ಯಜಿಸಿ ಧಿಕ್ಕರಿಸಿ ಇತರ ಕನ್ನಡ ಸಂಘಗಳನ್ನು ಹುಟ್ಟು ಹಾಕಿ ಬೆಳಸುವ ಅವಶ್ಯಕತೆಯನ್ನು ಹಾಗು ಉದ್ದೇಶವನ್ನು ನಾನು ಕಾಳಜಿಯಿಂದ ಚಿಂತಿಸಿದ್ದೇನೆ. ಹಾಗೆ ಇದರ ಔಚಿತ್ಯವನ್ನು ಪ್ರಶ್ನಿಸುತ್ತೇನೆ.

    ಯು. ಕೆ ಕನ್ನಡಿಗರಲ್ಲಿ ಒಮ್ಮತ ಇಲ್ಲದಿರುವುದಕ್ಕೆ ಕೆಲವು ವೈಯುಕ್ತಿಕ ಭಿನ್ನಾಭಿಪ್ರಾಯಗಳು ಹಾಗೂ ಚಾರಿತ್ರಿಕ ಹಿನ್ನಲೆಗಳಿರಬಹುದು. ಯಾವುದೇ ಒಕ್ಕೂಟ ಅಥವಾ ಸಂಘಟನೆಯಲ್ಲಿ ಭಿನ್ನಾಭಿಪ್ರಾಯಗಳು ಬಂದಾಗ ಅದನ್ನು ಸಂಘದ ಒಳಗಿದ್ದುಕೊಂಡು ಬಗೆಹರಿಸುವ ಬದಲು “ಬ್ರೆಕ್ಸಿಟ್” ಮಾದರಿಯಲ್ಲಿ ಹೊರಬಂದು ಬೇರೊಂದು ಅಸ್ಥಿತ್ವವನ್ನು ಪಡೆದುಕೊಳ್ಳುವುದು ನನ್ನ ಮಟ್ಟಿಗೆ ವ್ಯರ್ಥ ಪ್ರಯತ್ನ.

    ಪ್ರವಾಸ, ರೆಸ್ಟೋರೆಂಟ್ ಗಳಲ್ಲಿಯ ಭೋಜನ ಇವುಗಳಿಗೆ ಧಾರಾಳವಾಗಿ ಖರ್ಚು ಮಾಡುವ ಯು.ಕೆ. ಕನ್ನಡಿಗರು ತಮ್ಮ ಸಂಸ್ಕೃತಿ ಭಾಷೆ ಇವುಗಳನ್ನು ಪ್ರಚೋದಿಸುವ ಕಾರ್ಯಕ್ರಮದ ನೋಂದಣಿ ಶುಲ್ಕದ ಬಗ್ಗೆ ಗೊಣಗುವುದು, ಜಿಪುಣತನ ಮಾಡುವುದು ಖೇದವಾದ ವಿಚಾರ. ನಾನು ಅತ್ಯಂತ ಕನಿಕರ ಮತ್ತು ವ್ಯಥೆಯಿಂದ ಈ ಜನರನ್ನು ತಿರಸ್ಕರಿಸುತ್ತೇನೆ. ಒಂದು ಒಳ್ಳೆಯ ಭೋಜನ ಮನೋರಂಜನೆ, ಉತ್ತಮವಾದ ಸಭಾಂಗಣ ಒದಗಿಸಲು ೧೦-೨೦ ಪೌಂಡ್ ಗಳಲ್ಲಿ ಹೊಂಚುವುದು ಕಷ್ಟದ ಕೆಲಸ. ಇದಕ್ಕಾಗಿ ಶ್ರೀಮಂತ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಸರ್ಕಾರದಿಂದ ಧನಸಹಾಯವನ್ನು ನಿರೀಕ್ಷಿಸುವುದು, ಬ್ಯಾಂಕ್ ಮತ್ತು ಇತರ ಉದ್ಯಮಿದಾರರಿಗೆ ಮೊರೆ ಹೋಗುವುದು ನಮ್ಮ ಸ್ವಾಭಿಮಾನಕ್ಕೆ ತಕ್ಕ ವಿಚಾರವಲ್ಲ. ಇದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ.

    ನಮ್ಮ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ ಮತ್ತು ಭಾಷೆಯನ್ನು ಬೆಳೆಸಲು ಪೂರಕವಾಗಬೇಕು. ಸಾಹಿತ್ಯ ಸಂಗೀತ ಮತ್ತು ಇತರ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಾವು ಆಯೋಜಿಸಬೇಕು. ಇದಕ್ಕೆಲ್ಲ ಹಣ ಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ವಿಚಾರವನ್ನು ಅರಿತು ಯು. ಕೆ. ಕನ್ನಡಿಗರು ಒಂದಾಗಬೇಕು. ಶುರುವಿನಲ್ಲಿ ಕೆ.ಯು.ಕೆ ಮತ್ತು ಯು.ಕೆ ಕನ್ನಡ ಬಳಗ ಈ ಎರಡು ದೊಡ್ಡ ಸಂಘಗಳು ಬೆಸೆಯಬೇಕು. ಇತರ ಚಿಕ್ಕ ಪುಟ್ಟ ಸಂಘಗಳು ಮುಂದೆ ಈ ಮುಖ್ಯ ವಾಹಿನಿಯ ಜೊತೆ ಬೆರೆಯಬಹುದು. ಯು.ಕೆ ಯಲ್ಲಿರುವ ವಿವಿಧ ಸಂಘಗಳ ನಾಯಕರು ನಮ್ಮ ಸ್ವತಂತ್ರ ಪೂರ್ವ ಭಾರತದ ರಾಜರು ಹಾಗು ಸಾಮಂತರ ರೀತಿಯಲ್ಲಿ ವರ್ತಿಸದೆ ಎಲ್ಲ ಒಂದಾಗುವುದರಲ್ಲಿ ನಮ್ಮ ಹಿತಾಸಕ್ತಿಗಳು ಅಡಗಿವೆ ಎಂಬ ವಿಚಾರವನ್ನು ಅರಿಯಬೇಕು.

    ನಾನು ನನ್ನ ಅನಿಸಿಕೆಗಳನ್ನು ಕನ್ನಡದ ಬಗ್ಗೆ ಇರುವ ಕಾಳಜಿಯಿಂದ ತೋಡಿಕೊಂಡಿದ್ದೇನೆ. ಇಲ್ಲಿ ಯಾವ ಸಂಘಗಳ ಬಗ್ಗೆ ವೈಯುಕ್ತಿಕವಾಗಿ ನನಗೆ ದ್ವೇಷವಿಲ್ಲ. ಗಣಪತಿ ಭಟ್ ಅವರ ಕಾಳಜಿ ನನಗೆ ಅರ್ಥವಾಗಿದೆ. ನಾನು ನನ್ನ ಅನಿಸಿಕೆಗಳ ಮೂಲಕ ಸ್ಪಂದಿಸಿದ್ದೇನೆ. ಅವರು ಪ್ರಸ್ತಾಪ ಮಾಡಿರುವ ವಿಚಾರಗಳನ್ನು ನಾನು ಸಮ್ಮತಿಸುತ್ತೇನೆ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.