ಟಾಮಿ
ನಾವಾಗ ಬೆಂಗಳೂರು ಸಮೀಪದ ಮಾಗಡಿ ತಾಲ್ಲೂಕಿನಲ್ಲಿದ್ದೆವು. ದಿವಂಗತ ತಂದೆ ಆಗ ಪುರಸಭಾ ಮುಕ್ಯಾಧಿಕಾರಿಯಾಗಿದ್ದ ಕಾರಣ ಸರ್ಕಾರೀ ಬಂಗಲೆಯಲ್ಲಿ ವಾಸ. ನಾಲ್ಕು ಮಕ್ಕಳಲ್ಲಿ ಎರಡನೆಯವಳಾದ ನನ್ನ ಅಕ್ಕ ದಾಕ್ಷಾಯಣಿ ತುಂಬಾ ತುಂಟಿಯೆಂದೇ ಹೆಸರು ಪಡೆದಿದ್ದಳು. ಪಕ್ಕದಲ್ಲೇ ಇದ್ದ ಟ್ರಾವೆಲ್ಲರ್ಸ ಬಂಗಲೋ (ಟಿ.ಬಿ.)ದ ಮೇಟಿ ಒಂದು ಹೆಣ್ಣು ನಾಯಿಯನ್ನು ಸಾಕಿದ್ದ. ಟಿ.ಬಿ.ಯ ಬಳಿ ಯಾರೇ ಸುಳಿದರೂ ಈ ನಾಯಿ ಅತ್ಯಂತ ಚುರುಕಾಗಿ ತನ್ನ ಗಡಿಯನ್ನು ಕಾದುಕೊಂಡು ಬಹಳ ಹೆಸರು ಮಾಡಿತ್ತು.
ನಾವು ಮಾಗಡಿಯಲ್ಲಿದ್ದ ಕಾಲದಲ್ಲಿ ಈ ಹೆಣ್ಣು ನಾಯಿ ಮರಿ ಹಾಕಿತು. ಈ ವೀರಮಾತೆಗೆ ಹುಟ್ಟಿದ ಮರಿಗಳೂ ಅಷ್ಟೇ ಚುರುಕಾಗಿದ್ದ ಕಾರಣ ನನ್ನಕ್ಕ ದಾಕ್ಷಾಯಣಿ ಆಫೀಸರನ ಮಗಳೆಂಬ ಎಲ್ಲ ವಶೀಲಿ ಉಪಯೋಗಿಸಿ ಮೇಟಿಯ ಮೂಲಕ, ಆ ಅಮ್ಮನ ಕಣ್ಣು ತಪ್ಪಿಸಿ ಒಂದು ನಾಯಿ ಮರಿಯನ್ನು ಹಿಡಿದು ತಂದೇ ಬಿಟ್ಟಳು! ಅವಳು ಹೀಗೆ ನಾಯಿ ಮರಿಯನ್ನು ಹಿಡಿದು ತಂದದ್ದು ಇದೇ ಮೊದಲೇನಾಗಿರಲಿಲ್ಲ!!
ತಾಯಿಯಿಂದ ಬೇರಾಗಿ ಅಪರಿಚಿತರ ಮನೆ ಸೇರಿದಾಗ ಈ ಮರಿಗಳು ರಾತ್ರಿಯೆಲ್ಲ ಕುಂಯ್ ಗುಟ್ಟಿ , ಮನೆಯಲ್ಲೆಲ್ಲ ಉಚ್ಚೆ ಹೊಯ್ದು ಮಿಲಿಟರಿ ಆಫೀಸರಂತೆ ಕಟ್ಟು ನಿಟ್ಟಾದ ತಂದೆಯ ಕೋಪಕ್ಕೆ ಕಾರಣವಾಗಿದ್ದವು. ಅಕ್ಕನಿಗೆ ಮತ್ತು ಅವಳ ಜೊತೆ ಸರೀಕಾಗಿರುತ್ತಿದ್ದ ನಮಗೆಲ್ಲ ಸರಿಯಾಗಿ ಬಯ್ಗುಳಗಳಾಗುತ್ತಿದ್ದವು . “ಎಲ್ಲಿಂದ ತಂದಿರೋ ಅಲ್ಲಿಗೇ ಬಿಟ್ಟು ಬನ್ನಿ…” ಎಂಬ ಅಣತಿ, ತಂದೆಯಿಂದ ಹೊರಟು, ಅತ್ತೂ ಕರೆದು ಹಿಂತಿರುಗಿ ಬಿಟ್ಟು , ಪೆಚ್ಚು ಮೋರೆ ಹೊತ್ತು ವಿಧಿಯಿಲ್ಲದೆ ಮರಳಿದ್ದೆವು. ಹೀಗಾಗಿ ಈ ಬಾರಿ ಮೇಟಿಯ ಮನೆಯ ನಾಯಿ ಮರಿಯನ್ನು ಉಳಿಸಿಕೊಳ್ಳಲು ನಾವೆಲ್ಲ ಪಣ ತೊಟ್ಟಿದ್ದೆವು.
ಮೆತ್ತನೆ ಗೋಣೀಚೀಲದ ಹಾಸಿಗೆ ಮಾಡಿದ್ದೆವು. ಅದನ್ನು ನಮ್ಮ ಹಾಸಿಗೆಯ ಸಮೀಪಕ್ಕೇ ಇಟ್ಟುಕೊಂಡು, ತೆಂಗಿನ ಚಿಪ್ಪಿನಲ್ಲಿ ಹಾಲಿಟ್ಟಿದ್ದೆವು. ಆ ಕಾಲದಲ್ಲಿ ಅದೇಕೋ ಏನೋ ನಾಯಿ -ಬೆಕ್ಕುಗಳಿಗೆ ಇಂಗ್ಲೀಷ್ ಹೆಸರಿಡುವ ರೂಢಿಯಿದ್ದ ಕಾರಣ ಈ ಗಂಡುಮರಿಗೆ ’ಟಾಮಿ’ ಎಂದು ನಾಮಕರಣ ಮಾಡಿದ್ದೆವು. ಆ ಮರಿಯನ್ನು ನೆಲಕ್ಕೇ ಬಿಡದೆ ಕೈಯಿಂದ ಕೈಗೆ ರವಾನಿಸಿ ಎಲ್ಲರೂ ಮುದ್ದು ಮಾಡಿ ಅದರಿಂದ ಮೈ-ಕೈ ಮುಖಗಳನ್ನೆಲ್ಲ ನೆಕ್ಕಿಸಿಕೊಂಡು ತಂದೆ ಆಫೀಸಿನಿಂದ ಹಿಂತಿರುಗಿ ಬರುವುದನ್ನೇ ಅದೈರ್ಯದಿಂದ ಕಾಯತೊಡಗಿದೆವು. ಕಾಫಿ, ಮುಖಾರ್ಜನೆ, ಊಟ ಎಲ್ಲ ಮುಗಿಯುವವರೆಗೆ ಟಾಮಿಯನ್ನು ಕಷ್ಟ ಪಟ್ಟು ಮುಚ್ಚಿಟ್ಟು ನಂತರ ತಂದೆಯ ಮುಂದೆ ಅನಾವರಣ ಮಾಡಿದೆವು.ಅದೇಕೋ ಏನೋ ಅವರೇನೂ ಹೇಳಲಿಲ್ಲ! ಇನ್ನು ಉಳಿದದ್ದು ಅಪ್ಪಾಜಿಯ ಜೊತೆಗಿನ ಟಾಮಿಯ ಮೊದಲ ರಾತ್ರಿ!!
ಚೆನ್ನಾಗಿ ಹಿಚುಕಿ ಹಣ್ಣು ಮಾಡಿದ್ದರಿಂದಲೋ, ಹೆಚ್ಚಾಗಿ ಹಾಲು ಕುಡಿಸಿದ್ದರಿಂಲೋ, ಬೆಚ್ಚಗಿನ ಮೆತ್ತೆಯಿಂದಲೋ ಟಾಮಿ ಯಾರನ್ನೂ ಎಚ್ಚರಿಸದೆ ಮೊದಲ ರಾತ್ರಿಯನ್ನು ಕಳೆದು ಪರೀಕ್ಷೆಯಲ್ಲಿ ಉತ್ತೀರ್ಣನಾಗಿಬಿಟ್ಟಿತ್ತು. ನಮಗೆ ನಾಯಿಯನ್ನು ಸಾಕಲು ಪರವಾನಗಿ ಸಿಕ್ಕಿತ್ತು!
ಇಡೀ ದಿನ ಟಾಮಿಯ ಚಾಕರಿ ಅಮ್ಮನದೇ ಆದರೂ ಶಾಲೆಯಿಂದ ಬಂದ ನಂತರ ಟಾಮಿ ನಮ್ಮೆಲ್ಲರ ಕಣ್ಮಣಿಯಾಯ್ತು. ಮೊದಲ ಆರು ತಿಂಗಳು ಟಾಮಿ ಎತ್ತರಕ್ಕೆ ಬೆಳೆದು ಅದರಮ್ಮನಂತೇ ಚೂಪು ಕಿವಿಯ, ಬಿಳಿ ಉದ್ದದ ನಾಮದ, ಕರಿಯ ಮೂಗಿನ ತೀಕ್ಷ್ಣಮತಿ ನಾಯಿಯಾಗಿತ್ತು. ಆದರೆ ಆಗಬಾರದ್ದು ಆಗಿಹೋಯಿತು!!
ಒಂದು ದಿನ ಟಾಮಿಯ ದೇಹದ ಹಿಂಬಾಗಕ್ಕೆ ಲಕ್ವ ಹೊಡೆದು ಬಿಟ್ಟಿತು. ಹಿಂದಿನ ಎರಡೂ ಕಾಲುಗಳ ಸ್ವಾದೀನ ತಪ್ಪಿಹೋಯಿತು.ಯಾವ ವೈದ್ಯರಿಂದಲೂ ಚಿಕಿತ್ಸೆ ದೊರೆಯದಾಯಿತು.
ಆದರೆ ಟಾಮಿಯ ಚೈತನ್ಯ ಅದರ ದುರ್ಬಲ ವಿಧಿಗಿಂತ ಶಕ್ತಿಯುತವಾಗಿತ್ತು. ಮೊದಲು ಹಿಂದಿನ ದೇಹವನ್ನು ಎಳೆದೆಳೆದು ತೆವಳುತ್ತಿದ್ದ ಟಾಮಿ, ನಿಧಾನವಾಗಿ ಸೊರಟಿಕೊಂಡ ಒಂದು ಹಿಂದಿನ ಕಾಲನ್ನು ಗೂಟದಂತೆ ಊರಿ ಮುಂದಿನೆರಡು ಕಾಲು ಮತ್ತು ಹಿಂದಿನ ಒಂದು ಗೂಟದ ಸಹಾಯದಿಂದ ನಡೆಯುವುದನ್ನು ಮತ್ತೆ ಕಲಿಯಿತು. ಎಲ್ಲಕ್ಕೂ ಅಮ್ಮನದೇ ಆರೈಕೆ. ಅದೇ ಸಮಯಕ್ಕೆ ತಂದೆಗೆ ತುಮಕೂರಿಗೆ ವರ್ಗವಾಯಿತು.
“ಈ ಕುಂಟನಾಯಿ ಯಾಕೆ ಬೇಕು..?ಹೋಗಿ ಅದನ್ನು ವೆಟರಿನರಿ ಆಸ್ಪತ್ರೆಯ ಬಳಿ ಕಟ್ಟಿಬನ್ನಿ, ಯಾರಾದರೂ ಒಂದಿಷ್ಟು ಬ್ರೆಡ್ಡು ಹಾಕುತ್ತಾರೆ..” ಅಂತ ತಂದೆಯ ಕಟ್ಟಾಗ್ಞೆಯಾಯ್ತು. ನಮಗೆ ಅಳುವೋ ಅಳು! ಟಾಮಿಗೆ ತಿನ್ನಿಸಿ, ಕುಡಿಸಿ, ಮುತ್ತಿಟ್ಟು ಅತ್ತಿದ್ದಕ್ಕೆ ಅದೂ ವಿಹ್ವಲವಾಗಿ ನಮ್ಮನ್ನೆಲ್ಲ ನೆಕ್ಕಿ ತನಗೆ ತಿಳಿಯಿತೇನೋ ಎಂಬಂತೆ ಆಡಿತು. ನೌಕರರು ಹೋಗಿ ಟಾಮಿ ಯನ್ನು ಕಟ್ಟಿಬಂದರು. ಮುಂದಿನ ನಾಯಿಗಿರಲಿ ಎಂದು ಅದರ ಚೈನು ಮತ್ತು ಕೊರಳಿನ ಬೆಲ್ಟ್ ನ್ನು ಬಿಚ್ಚಿ ನಮಗೆ ಹಿಂತಿರುಗಿಸಿದರು. ಟಾಮಿಯನ್ನು ಹುರಿ ದಾರದಲ್ಲಿ ಕಟ್ಟಿಬಂದಿದ್ದರು.
ಮರುದಿನ ಲಾರಿಗೆ ಸಾಮಾನು ತುಂಬುತ್ತಿದ್ದೆವು. ನಮ್ಮ ಹೃದಯದಲ್ಲೆಲ್ಲ ಸ್ಮಶಾನ ಮೌನ! ತಂದೆಗೆ ಯಾಕೆ ವರ್ಗವಾಗಬೇಕಿತ್ತೋ ಅಂತ ಹಿಡಿ-ಹಿಡಿ ಶಾಪ ಹಾಕಿದೆವು. ಆದರೆ ಮಕ್ಕಳಾಗಿ ನಾವು ಅಸಹಾಯುಕರಾಗಿದ್ದೆವು.
ಯಾವ ಮಾಯೆಯಲ್ಲಿ ಇದು ಟಾಮಿಯ ಅಂತರಾಳಕ್ಕೆ ತಿಳಿಯಿತೋ ಗೊತ್ತಿಲ್ಲ. ಕಟ್ಟಿದ್ದ ದಾರವನ್ನು ಹಲ್ಲುಗಳಿಂದ ತುಂಡರಿಸಿ. ವೆಟರಿನರಿ ಆಸ್ಪತ್ರೆಯ ಸಿಬ್ಬಂದಿಯ ಕಣ್ಣು ತಪ್ಪಿಸಿ ಮನೆಯ ದಾರಿಯನ್ನು ಮೂಸಿ, ಮೂಸಿ ಒಂದೂವರೆ ಮೈಲು ಕುಂಟುತ್ತ ಹಿಂತುರಿಗಿ ಬಂದು ಬಿಟ್ಟಿತ್ತು!! ಈಗದನ್ನು ತಂದೆಯ ಕಣ್ತಪ್ಪಿಸಿ ಲಾರಿಗೆ ಹೇಗಾದರೂ ತುಂಬಿ ಬಿಟ್ಟರೆ, ತುಮಕೂರು ಬಂದ ನಂತರ ಏನಾದರೂ ಮಾಡಿ ಟಾಮಿಯನ್ನು ಮತ್ತೆ ನಮ್ಮದನ್ನಾಗಿ ಮಾಡಿಕೊಳ್ಳಬಹುದಿತ್ತು.
ನಮಗಾದ ಸಂತೋಷ, ಸಂಭ್ರಮ, ಸೋಜಿಗಕ್ಕೆ ಲೆಕ್ಕವೇ ಇಲ್ಲ. ಆದರೆ ಅದನ್ನೆಲ್ಲ ಮುಚ್ಚಿಟ್ಟು ಆಳುಗಳಿಗೆ ಕಣ್ಸನ್ನೆ, ಬಾಯ್ಸನ್ನೆಯಲ್ಲಿ ತೆಪ್ಪಗಿರಲು ಹೇಳಿ, ಟಾಮಿಯನ್ನು ಸಾಮಾನುಗಳ ಸಂದಿಯಲ್ಲಿ ತುಂಬಿಯೇ ಬಿಟ್ಟೆವು. ಲಾರಿಯ ಕ್ಯಾಬಿನ್ನಿನಲ್ಲಿ ಕುಳಿತಿದ್ದ ತಂದೆಗೆ ಇದ್ಯಾವುದರ ಅರಿವೂ ಇರಲಿಲ್ಲ. ಅಣ್ಣ ಮತ್ತು ಅಕ್ಕ ಬಹಳ ವಿಧೇಯ ಮಕ್ಕಳಂತೆ ಲಾರಿಯ ಹಿಂಭಾಗದಲ್ಲೇ ಕುಳಿತು ಬರುತ್ತೇವೆಂದು ಹೇಳಿದಾಗ, ಜೊತೆಗೆ ಆಳುಗಳೂ ಇದ್ದ ಕಾರಣ ತಂದೆ ತಕರಾರು ಮಾಡಲಿಲ್ಲ. ನನಗಾಗ ಕೇವಲ ಐದು ವರ್ಷ.
ಲಾರಿ ತುಮಕೂರು ತಲುಪಿದ ನಂತರ ತಂದೆಯ ಕೋಪದ ಅರಿವಿದ್ದ ನೌಕರರು, ಟಾಮಿಯನ್ನು ಗೌಪ್ಯವಾಗಿ ಇಳಿಸಿ ಕೊಟ್ಟರು. ಅದನ್ನು ಹೊಸ ಮನೆಯ ಹಿತ್ತಿಲ್ಲಲ್ಲಿ ಬಚ್ಚಿಟ್ಟೆವು. ನಮ್ಮ ಅವಸ್ಥೆಯನ್ನು ಗಮನಿಸುತ್ತಿದ್ದ ನೌಕರರು ತಂದೆಗೆ ಏನೂ ಹೇಳದೆ, ಕೊನೆಗೂ ಆಫೀಸರನಿಗೆ ಚಳ್ಳೆ ಹಣ್ಣು ತಿನ್ನಿಸಿದ ಖುಷಿಯಿಂದಲೋ ಏನೋ ಕಿರು ನಗೆ ನಗುತ್ತಲೇ ಕೈ ಬೀಸಿ ಮರಳಿ ಹೋದರು!! ಟಾಮಿ ನಮ್ಮನ್ನು ಹುಡುಕಿಕೊಂಡು,ದಾರ ಕಡಿದುಕೊಂಡು ಓಡಿ ಬಂದದನ್ನು ಅಮ್ಮ ತಂದೆಗೆ ನಿಧಾನವಾಗಿ ಹೇಳಿ ಮನಸ್ಸು ಕರಗಿಸಿದರು. ಟಾಮಿ ನಮ್ಮೊಡನೆ ಉಳಿಯಿತು.
ಈ ಹೊಸ ಊರಿನಲ್ಲಿ ಟಾಮಿ ಕುಂಟನಾದರೂ ಎಂಟೆದೆಯ ಭಂಟನೆಂಬ ಹೆಸರು ಗಳಿಸಿತು. ಮನೆಯ ಮುಂಭಾಗದಲ್ಲಿದ್ದ ತಂದೆಯ ಆಫೀಸು ಕೋಣೆಗೆ ಅವರನ್ನು ಹುಡುಕಿಕೊಂಡು ಯಾರೇ ಬರಲಿ , ಟಾಮಿ ಅವರ ಮುಂದೆ ಕಾವಲು ಕೂರುತ್ತಿತ್ತು.ಅವರು ಅಲ್ಲಿದ್ದ ನ್ಯೂಸ್ ಪೇಪರಿಗೆ ಕೈ ಹಾಕಿದರೆ ಸುಮ್ಮನಿರುತ್ತಿದ್ದ ಟಾಮಿ, ಅವರು ಟೇಬಲ್ಲಿನ ಮೇಲಿನ ಪೆನ್ನಿಗೆ ಕೈ ಚಾಚಿದರೆ ವಸಡನ್ನು ಮೇಲೇರಿಸಿ ತನ್ನ ಉದ್ದ ಕೋರೆಹಲ್ಲನ್ನು ಬಿಚ್ಚಿ ಗುರ್ ರ್ ರ್ … ಎಂದು ಶುರುಮಾಡಿಬಿಢುತ್ತಿತ್ತು, ಎಷ್ಟೇ ಹಸಿವಾದರೂ ಅಪ್ಪಿ ತಪ್ಪಿಯೂ ಅಡಿಗೆ ಮನೆಗಯೊಳಗೆ ಕಾಲಿಡುತ್ತಿರಲಿಲ್ಲ. ವಸಿಲ ಬಳಿಯೇ ಕುಳಿತು ಕುಂಯ್ ಗುಡುತ್ತಿತ್ತು. ಜಮೀನಿನಿಂದ ಬಂದ ಕಡಲೇಕಾಯಿಯ ರಾಶಿಯೇ ಬಿದ್ದಿದ್ದರೂ ಅದರಿಂದ ಒಂದು ಕಾಯಿಗೂ ಬಾಯಿ ಹಾಕುತ್ತಿರಲಿಲ್ಲ. ನಾವಾಗಿ ಸುಲಿದು ಮುಂದೆ ಹಾಕಿ ತಿನ್ನು ಎನ್ನುವವರೆಗೆ ಮುಟ್ಟುತ್ತಿರಲಿಲ್ಲ. ನಮ್ಮ ಬೀದಿ, ಕೇರಿಯ ಎಲ್ಲ ನಾಯಿಗಳ ಮೇಲೂ ಕಾಲ್ಕೆರೆದು ಜಗಳವಾಡಿ, ಹಲವಾರು ಬಾರಿ ರಕ್ತ-ಸಿಕ್ತವಾಗಿ ಮನೆಗೆ ಮರಳಿದರೂ ಮರುದಿನ ತನ್ನ ಕೆಚ್ಚನ್ನು ಮತ್ತೆ ತೋರಿಸುತ್ತಿತ್ತು. ಅದರ ಮನದಲ್ಲಿದ್ದ ಚೈತನ್ಯ ದೇಹದ ಊನವನ್ನೂ ಮೀರಿ ಕುಣಿಯುತ್ತಿತ್ತು. ಅಗೆದು ಬಿಟ್ಟಿರುತ್ತಿದ್ದ ಪಾಯದ ಗುಂಡಿಗಳನ್ನೂ, ದೊಡ್ಡ ಚರಂಡಿಗಳನ್ನೂ ನೆಗೆಯಲು ಹೋಗಿ ಹಲವಾರಿ ಬಾರಿ ಬಿದ್ದು ಬಿಡುತ್ತಿತ್ತು. ಅದನ್ನು ಎತ್ತು ತಂದು ,ಸ್ನಾನ ಮಾಡಿಸಿ ಬಿಸಿಲಲ್ಲಿ ಒಣಗಿಸುತ್ತಿದ್ದೆವು. ಸಸ್ಯಹಾರಿಗಳಾದ ನಮ್ಮ ಮನೆಯಲ್ಲಿ ಅದಕ್ಕೆ ನಮ್ಮದೇ ಆಹಾರ ಸಿಗುತ್ತಿತ್ತು. ಒಂದೆರಡು ಮನೆಗಳ ನಂತರವಿದ್ದ ಅಯ್ಯಂಗಾರರ ಬೇಕರಿಯಲ್ಲಿ ಬ್ರೆಡ್ಡು ಬೇಯುತ್ತಿದ್ದರೆ ಟಾಮಿಯ ಬಾಯಲ್ಲಿ ಜೊಲ್ಲು ಸುರಿಯುತ್ತಿತ್ತು. ಹೀಗಾಗಿ ನಿಯಮಿತವಾಗಿ ಟಾಮಿಗೆ ಬ್ರೆಡ್ಡು ಹಾಕಿಸುತ್ತಿದ್ದೆವು. ಟಾಮಿಯ ನಿಯತ್ತನ್ನು ಪರೀಕ್ಷೆಮಾಡಲು ಅಯ್ಯಂಗಾರರ ಮಾಲೀಕ ಬಹಳ ಪ್ರಯತ್ನ ಮಾಡುತ್ತಿದ್ದ. ಆತ ಟಾಮಿಗೆ ಏನೇ ಎಸೆದರೂ, ಟಾಮಿಯ ಬಾಯಿಂದ ಜೊಲ್ಲು ತಟತಟನೆ ಸುರಿಯುತ್ತಿದ್ದರೂ ನಾವು ತಿನ್ನು ಎನ್ನುವವರೆಗೆ ಮುಟ್ಟುತ್ತಿರಲಿಲ್ಲ. ಅವನಿಗೇ ಪ್ರತಿ ಬಾರಿ ಸೋಲು!!
ಇದಕ್ಕೆಲ್ಲ ನಾವು ಟಾಮಿಗೆ ನೀಡಿದ್ದ ತರಭೇತಿ ಸೊನ್ನೆ. ತಾನಾಗಿ ಈ ಎಲ್ಲ ಕಟ್ಟಳೆಗಳನ್ನು ಟಾಮಿ ಯೇ ಹಾಕಿಕೊಂಡಿತ್ತು! ಪ್ರಾಣಿಗಳಿಗೆ ಪ್ರಿನ್ಸಿಪಲ್ಸ್ ಇರುವುದಿಲ್ಲವೆನ್ನುವವರಿಗೆ ಟಾಮಿಯ ನಡತೆ ವ್ಯತಿರಿಕ್ತವಾಗಿತ್ತು. ಹೀಗಾಗಿ ’ಕುಂಟ ನಾಯಿಯ ಮನೆಯವರು ’ ಎಂದು ನಮ್ಮನ್ನು ಹಲವರು ಗುರುತಿಸುತ್ತಿದ್ದುದು ಗೌರವದಿಂದಲೇ ಹೊರತು ಅಸಡ್ಡೆಯಿಂದಲ್ಲ!! ಟಾಮಿಯ ಪ್ರತಾಪಗಳು,ನಿಯತ್ತು, ಕೋಪ,ಸ್ವಾಮಿನಿಷ್ಟೆಯ ಬಗ್ಗೆ ಬರೆಯುವುದಾದರೆ ಅದು ಇನ್ನೊಂದು ಲೇಖನವೇ ಆಗುತ್ತದೆ.
ಹೀಗೆ 12 ವರ್ಷ ಬದುಕಿದ್ದ ಟಾಮಿಯ ಕೊನೆಯ ವರ್ಷದಲ್ಲಿ ಅದಕ್ಕೆ ಒಂದಲ್ಲ ಎಂದು ಎರಡು ಬಾರಿ ಮತ್ತೆ-ಮತ್ತೆ ಲಕ್ವ ಹೊಡೆಯಿತು. (ಪ್ಯಾರಲಿಸಿಸ್ ಸ್ಟ್ರೋಕ್) ಓಡಾಡುವುದಿರಲಿ, ತಿಂದದ್ದು ಏನೂ ಅದಕ್ಕೆ ದಕ್ಕದಾಯಿತು. ವೈದ್ಯರು ಕೈ ಚೆಲ್ಲಿದರು ಯಾವ ಮನುಷ್ಯ ರೋಗಿಗಿಂತಲೂ ಹೆಚ್ಚಿನದಾಗಿ ಅದಕ್ಕೆ ಅಮ್ಮನ ಆರೈಕೆ ನಡೆಯಿತು. ಟಾಮಿಗೂ ಅದರ ಅರಿವಿತ್ತು. ತಾಯಿಯನ್ನು ನೋಡುವ ರೀತಿಯಲ್ಲೇ ಅವರೊಡನೆ ವರ್ತಿಸುತ್ತಿತ್ತು.ಅದರ ಯಾತನೆಯನ್ನು ನೋಡಲಾಗದ ನಾವು ಕೊನೆಗೆ ಟಾಮಿಗೆ ದಯಾಮರಣ ನೀಡಲು ನಿರ್ಧರಿಸಿದೆವು. ಇದೊಂದು ಕಠಿಣ ನಿರ್ದಾರವಾಗಿತ್ತು.
ಈ ಬಾರಿ ನಾನು ಮತ್ತು ನನ್ನ ಅಣ್ಣ ಟಾಮಿಯನ್ನು ವೆಟರಿನರಿ ಆಸ್ಪತ್ರೆಗೆ ಕರೆದೊಯ್ದೆವು. ಆ ದಿನದ ಟಾಮಿಯ ಕಣ್ಣಿನ ಭಾವಗಳು ಇವತ್ತೂ ನನ್ನಲ್ಲಿ ಅಚ್ಚಳಿಯದೆ ಉಳಿದಿವೆ! ವೈದ್ಯರು ನಿರ್ದಾಕ್ಷಿಣ್ಯವಾಗಿ ಸಾವಿನ ಇಂಜೆಕ್ಷನ್ನನ್ನು ಚುಚ್ಚಿ ಹೋದ ಬಹುಕಾಲದ ನಂತರವೇ ಟಾಮಿ ಸತ್ತಿತು. ಟಾಮಿಯ ದೇಹವನ್ನು ಹೊತ್ತು ತಂದು ನಮ್ಮ ಮನೆಯ ತೆಂಗಿನ ಮರದಡಿಯೇ ಹೂತೆವು. ಟಾಮಿಯ ಯಾತನಾಮಯ ಮರಣದ ಕಾರಣ ಬಹುಕಾಲ ಮತ್ತೆ ನಾವು ನಾಯನ್ನು ಸಾಕಲಿಲ್ಲ.
ಹಲವು ವರ್ಷಗಳ ನಂತರ ’ಮಿಂಟಿ’ ಎನ್ನುವ ನಾಯನ್ನು ಸಾಕಿದೆವು. ಟಾಮಿಯ ಪಾದ ದೂಳಿಯಷ್ಟೂ ಗುಣಗಳಿಲ್ಲದ ಈ ನಾಯಿ ಯಾರ ಮನವನ್ನೂ ಗೆಲ್ಲಲಿಲ್ಲ. ನಮ್ಮನ್ನು ಕಡೆಗಣಿಸಿ ಮನೆಗೆ ಬಂದ ಅತಿಥಿಗಳ ಹಿಂದೆ ಬಾಲ ಅಲ್ಲಾಡಿಸುತ್ತ ಓಡುತ್ತಿದ್ದ ಈ ನಾಯಿ ಸೋಮಾರಿಯೂ,ಮಂದಮತಿಯೂ ಆಗಿ ಬೇಗನೆ ನಮ್ಮ ಮನದಿಂದಲೂ, ಮನೆಯಿಂದಲೂ ದೂರ ಸರಿಯಿತು.
ನಾಯಿಗಳಿಗೂ ವ್ಯಕ್ತಿತ್ವವಿರುತ್ತದೆ. ತನ್ನ ಅಂಗ ವಿಕಲತೆಯಿಂದ ಟಾಮಿ ಚುರುಕಾಯಿತೋ, ನಮ್ಮಲ್ಲಿ ಅಪರಿಮಿತ ವಿಶ್ವಾಸವಿಟ್ಟಿತೋ ಗೊತ್ತಿಲ್ಲ. ಇಡೀ ಮನೆಮಂದಿಯ ಮನಸ್ಸಿನಲ್ಲೆಲ್ಲ ಇವತ್ತು ಉಳಿದಿರುವುದು ಒಂದೇ ನಾಯಿ. ಅದು ಪ್ರೀತಿ ಪಾತ್ರ, ಸ್ವಾಮಿನಿಷ್ಟ ಅಪರಿಮಿತ ಪ್ರೀತಿಯನ್ನು ನಮಗೆ ನೀಡಿದ ಟಾಮಿ ಮಾತ್ರ !
-ಡಾ. ಪ್ರೇಮಲತ ಬಿ.
(ನಿಮ್ಮ ನೆನಪಲ್ಲೂ ಇಂತಹ ಮರೆಯಲಾಗದ ಮಿತ್ರರು ನೆಲೆಸಿರಬಹುದು. ಹಾಗಿದ್ದಲ್ಲಿ ಅನಿವಾಸಿಯ ಮುಂದಿನ ಸಂಪಾದಕಿ ಡಾ. ದಾಕ್ಷ ಅವರಿಗೆ ಆ ನೆನಪುಗಳನ್ನು ಬರೆದು ಕಳಿಸಿ.ಅನಿವಾಸಿಗೆ ಕಳಿಸುವ ಮುಂದಿನ ಎಲ್ಲ ಬರಹಗಳನ್ನು ಅವರ ವಿಳಾಸಕ್ಕೆ ಕಳಿಸಿ. ಕಳಿಸಬೇಕಾದ ಮಿಂಚಂಚೆ ವಿಳಾಸ drdaksha@doctors.org.uk)
ಸೋಮು

ನಮ್ಮನೆಯಲ್ಲಿ ಬಂದ , ತಂದ ,ಸೇರಿಕೊಂಡ ನಾಯಿಗಳು ಹಲವು ಅವುಗಳಲ್ಲಿ ಕೆಲವಂತೂ ನಮ್ಮ ಬದುಕಿನ ಭಾಗವೇ ಆಗಿಹೋದವು, ಅಂಥ ಒಂದು ಜೀವ ‘’ಸೋಮು “ .
ಆಗ ನಾನು ಏಳನೇ ತರಗತಿಯಲ್ಲಿದ್ದೆ ಬೇಬಿ ಶ್ಯಾಮಲಿ ಯ ಯಾವುದೋ ಸಿನಿಮ ನೋಡಿ ನನಗೂ ಕುದುರೆಯಂತೆ ಓಡುವ , ಅದರ ಸರಪಳಿಯನ್ನು ಹಿಡಿದು ನಾನು ಹೇಳಿದಾಗ ನಿಲ್ಲುವ ನಾಯಿಯೊಂದು ಬೇಕಿತ್ತು , ಹಾಗೆ ಸಿಕ್ಕ ಸಿಕ್ಕ ದಾರಿನಾಯಿ ಗಳ ಕೊರಳಿಗೆ ಕಾತಿ ಹಗ್ಗ ಕಟ್ಟಿ ಇದನ್ನು ಪ್ರಯತ್ನಿಸಿದ್ದು ಇದೆ ಆಗೆಲ್ಲ , ಆ ನಾಯಿಗಳು ಓಡುವುದಿರಲಿ ನಡೆಯುವುದೇ ಇಲ್ಲ ಎಂದು ನೆಲಕ್ಕೆ ಕಾಲು ಊರಿ ಹಟಕ್ಕೆ ಬೀಳುತ್ತಿದ್ದವು. ನೋಡುಗರಿಗೆ ಆ ದೃಶ್ಯ ಯಮ ಪಾಶ ಹಾಕಿ ನಾಯಿಯನ್ನ ಕರೆದೊಯ್ಯುತ್ತಿರುವಂತೆ ಕಾಣುತ್ತಿತ್ತೋ ಏನೋ ! ಎಲ್ಲರು ಬಯ್ಯೋದೆ, ಆಗ ಮಾತ್ರ ತುಂಬಾ ವಿಧೇಯ ವಾದ ಒಂದು ನಾಯಿ ಬೇಕು ಮತ್ತು ಅದು ಈಗಲೆಬೇಕು ಎನಿಸಿದ್ದು ಅದೆಷ್ಟ ಸಲವೋ.
ಹಾಗೊಂದು ಮುಂಜಾನೆ ಟಿಬೆಟಿಯನ್ ಕಾಲನಿಯಲ್ಲಿ ಕೇಸ್ ನೋಡಲು ಹೋಗಿದ್ದ ಪಪ್ಪಾ (ನನ್ನ ಪಪ್ಪಾ ಪಶುವೈದ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ) ಹತ್ತಿಯಂತೆ ಮೆತ್ತಮೆತ್ತನೆ ಇದ್ದ ಅಂಗೈ ಅಗಲದ ಪುಟ್ಟ ನಾಯಿಮರಿ ತಂದಿದ್ದರು, ಅದಕ್ಕಾಗ ೧೫ ದಿನವಷ್ಟೇ ! ಅದೆಷ್ಟು ಸಂಬ್ರಮ ನನಗು ತಂಗಿಗೂ, ಮನೆಯ ಮುಂದಿದ್ದ ನಮ್ಮ ಶಾಲೆಯಿಂದ ನೆವ ಹೇಳಿಕೊಂಡು ನಾಯಿಮರಿ ನೋಡಲು ಬರುತ್ತಿದ್ದೆವು. ನಮ್ಮ ಮನೆಯಲ್ಲೊಂದು ರೂಡಿ , ಸಾಕುಪ್ರಾಣಿ ಯಾವ ದಿನ ಬರುತ್ತದೆ ಅದೇ ವಾರದ ಮೊದಲ ಅಕ್ಷರದಿಂದ ಅದ್ರ ಹೆಸರು ಇಡುವುದು , ಈಗ ನಮ್ಮಲ್ಲಿ ಬಂದ ನಾಯಿ ಮರಿ ಸೋಮವಾರ ಮುಂಜಾನೆ ಬಂದಿತ್ತು ಅದಕ್ಕೆಂದೇ ಸರ್ವ ಸಮ್ಮತಿಯಿಂದ ಅದನ್ನು ಸೋಮು ಎಂದು ಕರೆಯಲಾಯಿತು. ಇನ್ನು ಕೇಳಿ ಈ ಸೋಮು ಯಾಕೆ ಇಷ್ಟು ವಿಶಿಷ್ಟ ವಿಶೇಷ ಎಂದು.
ಸೋಮು ಗೆ ನಮ್ಮಲ್ಲಿನ ಇತರ ನಾಯಿಗಳಿಗಿಂತ ಹೆಚ್ಚಿನ ಅಕ್ಕರೆ ಮುದ್ದು ದೊರೆತಿದ್ದು ಅದು ಜೂಲಿ ನಾಯಿ ಎಂದು, (ಪೋಮೆರಿಯನ್ ಕ್ರಾಸ್ ಬ್ರೀಡ) ಅದನ್ನು ಸೂಕ್ಷ್ಮವಾಗಿ ಸಾಕಬೇಕು ಸಿಕ್ಕ್ಸಿಕ್ಕಿದ್ದನ್ನ ತಿನ್ನೋಕೆ ಕೊಡಬಾರದು, ಅದಕ್ಕೆ ಹೊಸ ಉಟದ ಬಟ್ಟಲು ಏನೇನೋ ನಿಯಮಗಳನ್ನ ನಾನು ನನ್ನ ತಂಗಿ ಮಾಡಿಕೊಂಡಿದ್ದವು ಮತ್ತು ಅವು ಬರೀ ನಿಯಮಗಳಾಗೆ ಉಳಿದವು. ಅದು ಬಲು ಸ್ವತಂತ್ರ ಸ್ವಭಾವದ ನಾಯಿ ಅದಕ್ಕೆ ಸರಪಳಿ ಕಂಡರೆ ಆಗುತ್ತಿರಲಿಲ್ಲ. ಅದಕ್ಕೆ ಕೆಲವು ವಿಚಿತ್ರ ರೂಡಿಗಳಿದ್ದವು,
ಅದಕ್ಕೆ ತಿರುಗುವ ಹುಚ್ಚು, ಪಪ್ಪಾ ಸೈಕಲ್ ಸ್ಟಾಂಡ್ ತೆಗೆಯುತ್ತಲೇ ಅದಕ್ಕೆ ಹುಚ್ಚು ಖುಷಿಯಾಗುತ್ತಿತ್ತು ಸೈಕಲ್ ಗೆ ಬೆನ್ನತ್ತಿ ಓದಲು ಶುರು ಮಾಡುತ್ತಿತ್ತು ಪಪ್ಪಾ ಎಲ್ಲೆಲ್ಲಿ ನಿಲ್ಲಿಸುತ್ತಾರೋ ಯಾವ ಯಾವ ಅಂಗಡಿಗೆ ಹೋಗುತ್ತಾರೋ ಅಲ್ಲಲ್ಲಿ ಹೋಗಿ ನಿಂತು ಅವರ ಜೊತೆಗೆ ವಾಪಸ್ ಬರುತ್ತಿತ್ತು. ಕೆಲವೊಮ್ಮೆ ಅದನ್ನು ಇತರ ನಾಯಿಗಳ ಆಕ್ರಮಣದಿಂದ ಕಾಪಾಡುವುದೇ ಕೆಲಸವಾಗುತ್ತಿತ್ತು , ಜೊತೆಗೆ ನನ್ನ ಮನೆಮಂದಿ ಇದ್ದಾರೆ ಅನ್ನೋ ಹುರುಪಿನಲ್ಲಿ ತನ್ನ ತಾಕತ್ತಿಗೆ ಮೀರಿದ ಜಗಳದಲ್ಲಿ ಭಾಗಿ ಆಗಲು ಹೋಗ್ತಿತ್ತು, ಇವೆಲ್ಲ ಕಿರಿಕಿರಿ ನಿಲ್ಲಿಸಲು ಪಪ್ಪಾ ಒಂದು ಉಪಾಯ ಮಾಡಿದರು ಒಂದು ಪ್ಲಾಸ್ಟಿಕ್ ಕೈಚೀಲದಲ್ಲಿ ಅ ಸೋಮುವನ್ನು ಹಾಕಿದರು ಅದನ್ನ ಸೈಕಲ್ ಹಾಂಡಲ್ಗೆ ತೂಗು ಹಾಕಿದರು . ಸೋಮು ಆ ಚೀಲದಿಂದ ತನ್ನೆರಡು ಕಾಲು ಮತ್ತು ಕತ್ತು ಆಚೆ ಹಾಕಿ ಹೊರಗಿನ ದೃಶ್ಯ ಆಗು ಹೋಗು ನೋಡುತ್ತಿತ್ತು , ಇದು ದಿನದ ರೂಡಿ ಆಯಿತು ಆ ಚೀಲವನ್ನ ತನ್ನ ಆಸ್ತಿಯಂತೆ ನೋಡುತ್ತಿತ್ತು,
ಮನೆಗೆ ಯಾರೇ ನೆಂಟರು ಬರಲಿ ಸೋಮುವಿನ ಉತ್ಸಾಹ ಇಮ್ಮಡಿಸುತ್ತಿತ್ತು, ಅದರ ಖುಷಿ ಇರುವುದು ಅವರೊಂದಿಗೆ ಪೇಟೆ ಸುತ್ತಬಹುದು ಎನ್ನೋ ಆಲೋಚನೆಯಲ್ಲಿ. ಅವರು ವಾಪಸ್ ಹೋಗುವಾಗ ಬಸ ನಿಲ್ದಾಣಕ್ಕೆ ಇದು ಹೋಗುತಿತ್ತು ಬಸ್ ಬಂತು ಎಂದ ಕೂಡಲೇ ಎಲ್ಲರಿಗಿಂತ ಮೊದಲು ತಾನೇ ಹತ್ತಿ ಕೊನೆ ಸೀಟಿನ ಕೆಳಗೆ ಹೋಗಿ ಅಡಗಿ ಕೊಳ್ಳುತ್ತಿತ್ತು. ಮೊದೆಲೆರಡು ಸಲ ಮುದ್ದು ತಮಾಷೆ ಎನಿಸಿದ ಈ ಅಭ್ಯಾಸ ಆಮೇಲಾಮೇಲೆ ಕಿರಿಕಿರಿ ಆಗತೊಡಗಿತು. ನಂತರದಲ್ಲಿ ಮನೆಗೆ ಬಂದ ಸಂಬಂಧಿಕರು ಹೊರಟು ನಿಲ್ಲುವ ಮೊದಲೇ ಇದನ್ನು ಕಟ್ಟಿ ಹಾಕುತ್ತಿದ್ದೆವು. ಆಗ ಅದರ ಆಕ್ರೋಶ ನೋಡಬೇಕು.!
ಹಾಗೇ ಇನ್ನೊಮ್ಮೆ ಪಪ್ಪನ ಸಹೋದ್ಯೋಗಿ ಒಬ್ಬರ ಮದುವೆಗೆ ಬಾಳೆಹೊನ್ನೂರಿನ ಹತ್ತಿರದ ಹಳ್ಳಿಗೆ ಹೋಗುವುದಿತ್ತು, ಅವರು ಒಂದು ಮಿನಿ ಬಸ ವ್ಯವಸ್ಥೆ ಮಾಡಿದ್ದರು ಅದರಲ್ಲಿ ಎಲ್ಲಕ್ಕಿಂತ ಮೊದಲು ಹತ್ತಿ ಕೂತಿದ್ದು ಸೋಮು. ಅದನ್ನು ಎಲ್ಲರು ಗಮನಿಸಿದ್ದು ತುಂಬಾ ತಡವಾಗಿ .ತುಂಬಾ ದೂರ ಕ್ರಮಿಸಿದ್ದರಿಂದ ಅದನ್ನು ವಾಪಸ್ ಬಿಡುವ ಮಾತೇ ಇರಲಿಲ್ಲ. ಅವರ ಮದುವೆಯ ಬುಂದಿಉಂಡೆ ಊಟ ಮಾಡಿ ವಧುವರರನ್ನು ಭೇಟಿ ಮಾಡಿ ಅವರ ಮದುವೆ ವಿಡಿಯೋದಲ್ಲೂ ಕಾಣಿಸಿಕೊಂಡಿತು.
ಅದಕ್ಕೆ ಇನ್ನೊಂದು ಪ್ರೀತಿಯ ವಿಷಯ ಕುರುಕಲು ತಿಂಡಿ ಮತ್ತು ಮೀನು . ಪಪ್ಪಾ ಅವಕ್ಕೆಂದೇ ರಸ್ಕ ಟೋಸ್ಟ್ ಪ್ಯಾಕ್ಗಳನ್ನ ನಡುಬಾಗಿಲಿನ ಮೇಲಿದ್ದ ಮೊಳೆ ಗೆ ತೂಗು ಹಾಕುತ್ತಿದ್ದರು . ತನಗೆ ಬೇಕಾದಾಗೆಲ್ಲ ಅದು ಕತ್ತು ಮೇಲೆ ಮಾಡಿ ನೋಡುತ್ತಿತ್ತು.
ಸೆಖೆ ಅನಿಸಿದಾಗ ಸೀಲಿಂಗ್ ಫ್ಯಾನ್ ಸ್ವಿಚ್ ಕಡೆಗೆ ನೋಡಿ ಮಿದು ದನಿಯಲ್ಲಿ ಬೊಗಳುವುದನ್ನು ನೋಡಲೆಂದೇ ನಾವು ಫ್ಯಾನ್ ಹಾಕುತ್ತಿರಲಿಲ್ಲ.
ಸೋಮುವಿನ ಮತ್ತೊಂದು ವಿಲಕ್ಷಣ ಗುಣ ವರುಷಕ್ಕೆಮ್ಮೆ ಗುಳೇ ಹೋಗುತ್ತಿದ್ದುದು. ಶ್ರಾವಣ ಮಾಸದಲ್ಲಿ ನಮ್ಮಲ್ಲಿ ಕಪ್ಪು-ಕಡಿ (ಮೀನು ಇತ್ಯಾದಿ..) ತರುತ್ತಿರಲಿಲ್ಲ , ಪ್ರತಿವರುಷ ಈ ಸಮಯದಲ್ಲಿ ಸೋಮು ಮನೆಬಿಡುತ್ತಿದ್ದ ಅವ ಎಲ್ಲಿ ಹೋದ ಎಂಬುದರ ಸುಳಿವೇ ಇರುತ್ತಿರಲ್ಲ್ಲ ಮೊದಮೊದಲು ಹೆಂಡತಿ ಹುಡುಕಿಕೊಂಡು ಹೋಗಿರಬೇಕು ಎಂದು ತಮಾಷೆ ಮಾಡಿ ನಗುತ್ತಿದ್ದ ನಾವು ಎರಡು ತಿಂಗಳಾದರೂ ಬರದಿದ್ದಾಗ ಸಿಕ್ಕ ಸಿಕ್ಕವರಲ್ಲಿ ಕೇಳಿ ಅವನ ರೂಪವನ್ನು ವರ್ಣಿಸುತ್ತ ಎಲ್ಲಾದರೂ ಕಂಡರೆ ದಯಮಾಡಿ ತಿಳಿಸಿ ಎಂದು ವಿನಂತಿಸುತ್ತಿದ್ದೆವು.
ಆ ವರುಷ ವು ಹಾಗೆ ಹೋದವನು ಬಾರದಿದ್ದಾಗ , ಯಾರೋ ಪಪ್ಪನಿಗೆ ಹೇಳಿದರು ನಿಮ್ಮ ನಾಯಿ ಒಬ್ಬ ಡಾಕ್ಟರ್ ಮನೆಯಲ್ಲಿದೆ. ಕಟ್ಟಿಯೇ ಇಡುತ್ತಾರೆ , ಒಮ್ಮೆ ಕೇಳಿ ನೋಡಿ ಅಂದರು. ಪಪ್ಪಾ ಹೋಗಿ ಅವರನ್ನು ಕೇಳಿದರೆ ಅವರು ನಾನು ಇದನ್ನ ೩೦೦ ರುಪಾಯಿ ಕೊಟ್ಟು ಕೊಂಡುಕೊಂಡಿದ್ದೇನೆ ಅಂದರು , ನಿಮ್ಮದೇ ಅನ್ನಲಿಕ್ಕೆ ಸಾಕ್ಷಿ ಏನು ? ಪಪ್ಪನ ದನಿ ಕೇಳಿದ್ದೆ ಹಿತ್ತಲಿನಿಂದ ಸೋಮು ಜೋರು ದನಿಯಲ್ಲಿ ಕೂಗ ತೊಡಗಿದ್ದ . ಸುಮಾರು ಹೊತ್ತಿನ ವಾದ ವಿವಾದ ದ ನಂತರ ಸೋಮುವಿನ ಸರಪಳಿ ಬಿಚ್ಚಿ ಅವನನ್ನು ಮನೆಗೆ ಕಳಿಸಿಕೊಡಲಾಗಿತ್ತು.
ನಾನು ಕೆಲವೊಮ್ಮೆ ಬೆಳಗಿನ ಮೊದಲ ಬಸ್ಸಿಗೆ ಧಾರವಾಡ ಹೋಗಬೇಕಾದರೂ ಪ್ರತಿಬಾರಿ ಸೋಮು ನಾನು ಬಸ್ಸು ಹತ್ತುವ ತನಕ ಇದ್ದು ನನ್ನ ಕಳಿಸಿಕೊಟ್ಟೆ ಮನೆಗೆ ಮರಳುತ್ತಿದ್ದ .
ಹಾಗೆ ಒಮ್ಮೆ ಮನೆಯಿಂದ ಹೋದವನು ವಾಪಾಸ್ ಬರಲೇ ಇಲ್ಲ ಅವನ ಗುಣ ಗೊತ್ತಿದ್ದ ನಾವು ಜಾಸ್ತಿ ಚಿಂತೆ ಮಾಡಲೂ ಇಲ್ಲ ಸುಮಾರು ತಿಂಗಳ ಹತ್ತಿರ ಇಲ್ಲವಾದಾಗ ಚಿಂತೆ ಶುರುವಾಯಿತು, ಎಲ್ಲ ಕಡೆ ಹುಡುಕಿದರೂ ಸೋಮುವಿನ ಯಾವ ಸುಳಿವು ಸಿಗಲಿಲ್ಲ ಯಾರೋ ಕದ್ದುಕೊಂಡು ಹೋದರು ಎಂದೆ ಭಾವಿಸಿ ಕದ್ದವರಿಗೆ ಶಪಿಸುತ್ತಾ ಇದ್ದರು ಅಮ್ಮ .
ಹಾಗೊಂದು ದಿನ ತಂಗಿ ಹಿತ್ತಲ ಮೂಲೆಗೆ ಹೋದಾಗ , ಕಪ್ಪು ಬಿಳಿ ರೋಮದ ರಾಶಿ ಕಂಡಾಗಲೇ ಸೋಮು ಸತ್ತು ಹೋಗಿದ್ದು ನಮಗೆ ತಿಳಿದದ್ದು. ಅವ ಕಳದು ಹೋಗಿದ್ದರೆ ಚನ್ನಾಗಿತ್ತು ಕಡೆ ಪಕ್ಷ ಮತ್ತೆ ಮನೆಗೆ ಬರುತ್ತಾನೆ ಅನ್ನೋ ನಿರೀಕ್ಷೆ ಇರುತಿತ್ತು, ನಮ್ಮಲ್ಲಿ ಯಾವಾಗಲು ಹೇಳೋದಿದೆ ನಂಬಿಗಸ್ತ ನಾಯಿ ಮನೆಮಂದಿ ಮುಂದೆ ಪ್ರಾಣ ಬಿಡುವುದಿಲ್ಲ, ಯಜಮಾನನ ಮನಸ್ಸು ಎಂದಿಗೂ ನೋಯಬಾರದು ಎನ್ನುವ ಕಾರಣಕ್ಕೆ . ಸೋಮು ಹಾಗೆ ಹೇಳದೆ ಕೇಳದೆ ಹೋಗಿಬಿಟ್ಟ .
ಈಗ ಸೋಮು ಇದ್ದಿದ್ದರೆ ೨೧ ವರುಷದವನಾಗುತ್ತಿದ್ದ .ಇಂದಿಗೂ ಸೋಮು ಎಂದರೆ ಆ ತುಂಟ ಮುದ್ದು ನಾಯಿಮರಿಯ ಮುಖ ಕಣ್ಣು ಮುಂದೆ ಬರುತ್ತದೆ. ಅವ ನೆನಪುಗಳಲ್ಲಿ ಯಾವಾಗಲು ಜೀವಂತ .
– ಅಮಿತ ರವಿಕಿರಣ್
( ಅಮಿತ ಅವರ ಈ ಲೇಖನ ಈಗಾಗಲೇ ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ)
ತುಂಬಾ ಚೆನ್ನಾಗಿದೆ. ನಾಯಿಗಳು ನಿಯತ್ತಿನ ಪ್ರಾಣಿಗಳು.
LikeLike
ಟಾಮಿ ಮತ್ತು ಸೋಮು,
ನಿಮ್ಮಿಬ್ಬರ ಅನುಭವವನ್ನು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.
ಮನುಷ್ಯನ ನಿಜವಾದ ಸ್ನೇಹಿತ ಎ೦ದೇ ಕರೆಸಿಕೊಳ್ಳುವ ಈ ಪ್ರಾಣಿ ತೋರುವ ಪ್ರೀತಿ ಸಾಕಿದವರಿಗಷ್ಟೇ ಗೊತ್ತು.
ನಮ್ಮ ಹಾಗೆಯೆ, ವಿಭಿನ್ನ ಸ್ವಭಾವ ಇವುಗಳದು. ಟಾಮಿ ಮತ್ತು ಸೋಮು ತಮ್ಮದೇ ಆದ ತು೦ಟತನ, ನಿಷ್ಟೆ, ವಿನೋದ ತೋರಿವೆ.
ಇಲ್ಲಿನ ಅ೦ಗ್ಲ ಜನ, ಹಿ ಅಥವಾ ಶಿ ಅ೦ತ ಮಾತನಾಡುವಾಗ, ಗೊ ತೊ ಮುಮ್ಮಿ ಅ೦ಥ ನಾಯಿಗೆ ಹೇಳುವಾಗ ನನಗದು ಅತಿರಿಕ್ಥ ಅನ್ನಿಸುವುದಿಲ್ಲ. ಮಕ್ಕಳ ಹಾಗೆ ಮನರ೦ಜಿಸಿ, ಅತಿ ಪ್ರೀತಿ ತೋರುವ ಇದು ನನ್ನ ನೆಚ್ಚಿನ ಪ್ರಾಣಿ. ಕೆಲಸದಿ೦ದ ರಿಟೈರ್ಡ್ ಆದ ಮೇಲೆ, ನಾಯಿ ಸಾಕುವ ಭಾಗ್ಯ ಸಿಗಬಹುದೆ೦ದು ನನ್ನ ಆಸೆ.
LikeLike
ಟಾಮಿ ಮತ್ತು ಸೋಮು,
ನಿಮ್ಮಿಬ್ಬರ ಅನುಭವವನ್ನು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.
ಮನುಷ್ಯನ ನಿಜವಾದ ಸ್ನೇಹಿತ ಎ೦ದೇ ಕರೆಸಿಕೊಳ್ಳುವ ಈ ಪ್ರಾಣಿ ತೋರುವ ಪ್ರೀತಿ ಸಾಕಿದವರಿಗಷ್ಟೇ ಗೊತ್ತು.
ನಮ್ಮ ಹಾಗೆಯೆ, ವಿಭಿನ್ನ ಸ್ವಭಾವ ಇವುಗಳದು. ಟಾಮಿ ಮತ್ತು ಸೋಮು ತಮ್ಮದೇ ಆದ ತು೦ಟತನ, ನಿಷ್ಟೆ, ವಿನೋದ ತೋರಿವೆ.
ಇಲ್ಲಿನ ಅ೦ಗ್ಲ ಜನ, ಹಿ ಅಥವಾ ಶಿ ಅ೦ತ ಮಾತನಾಡುವಾಗ, ಗೊ ತೊ ಮುಮ್ಮಿ ಅ೦ಥ ನಾಯಿಗೆ ಹೇಳುವಾಗ ನನಗದು ಅತಿರಿಕ್ಥ ಅನ್ನಿಸುವುದಿಲ್ಲ. ಮಕ್ಕಳ ಹಾಗೆ ಮನರ೦ಜಿಸಿ, ಅತಿ ಪ್ರೀತಿ ತೋರುವ ಇದು ನನ್ನ ನೆಚ್ಚಿನ ಪ್ರಾಣಿ. ಕೆಲಸದಿ೦ದ ರಿಟೈರ್ಡ್ ಆದ ಮೇಲೆ, ನಾಯಿ ಸಾಕುವ ಭಾಗ್ಯ ಸಿಗಬಹುದೆ೦ದು ನನ್ನ ಆಸೆ.
LikeLike
ಪ್ರಾಣಿಪ್ರಿಯರ ನೆನಪುಗಳು ಚೆನ್ನಾಗಿವೆ
LikeLike
ಅಮಿತ ಅವರೇ,
ನಿಮ್ಮ ಸುಂಟರಗಾಳಿ ಸೋಮುವಿನ ಬಗ್ಗೆ ಓದಿ ನಕ್ಕೂ, ನಕ್ಕೂ ಸಾಕಾಯ್ತು. ನಾಯಿಗಳಿಗೆ ೨-೩ ವರ್ಷದ ಮಕ್ಕಳಿಗಿರುವ ಬುದ್ದಿಯಿರುತ್ತದಂತೆ.
ಕೆಲವು ಗಂಭೀರ ಮಕ್ಕಳು ಮತ್ತೆ ಕೆಲವು ತುಂಟಾಟದ ಮಕ್ಕಳು. ಅವುಗಳ ಆಟವೇ ಆಟ.
ನನ್ನ ಮಕ್ಕಳಿಗೆ ನಾಯಿ ಬೆಳೆಸುವ ಯೋಗ ಕಲ್ಪಿಸಲಾಗಿಲ್ಲವೆಂಬ ಬೇಜಾರಿದೆ ನನಗೆ. ನನ್ನ ಮಕ್ಕಳು ಕೂಡ ಕೇಳಿ, ಕೇಳಿ ಸುಮ್ಮನಾಗಿದ್ದಾರೆ.ನಿಮ್ಮ ಲೇಖನವನ್ನು ಓದಿ ಎಲ್ಲ ನೆನಪಿಗೆ ಬಂದದ್ದು ಸುಳ್ಳಲ್ಲ.
LikeLiked by 2 people
Thank you very much.
LikeLike