ಸ್ಕಾಂಡಿನೇವಿಯ ದೇಶಗಳಲ್ಲಿ ಬೇಸಿಗೆಕಾಲದಲ್ಲಿ ಸೂರ್ಯಾಸ್ತಮಯವೇ ಇರುವುದಿಲ್ಲ ಎಂಬುದ್ದನ್ನು ಚಿಕ್ಕಂದಿನಲ್ಲಿ ಓದಿದ್ದ ನೆನಪು. ಆಗ ಇದನ್ನು ಕಣ್ಣಾರೆ ಕಾಣುವ ಬಯಕೆ ಕನಸಿನಲ್ಲಿಯೂ ಇರಲಿಲ್ಲ . ಈ ದೇಶಕ್ಕೆ ಬಂದನಂತರ ಉದ್ಯೋಗದ ಒತ್ತಡ, ಆರ್ಥಿಕಪರಿಸ್ಥಿತಿ , ಮಕ್ಕಳ ವಿದ್ಯಾಭ್ಯಾಸ, ಸಂಸಾರದ ಜವಾಬ್ದಾರಿ ಇವುಗಳ ಮಧ್ಯೆ ಉಳಿದಿದ್ದ ರಜಾದಿನಗಳು ಮಾತಾಪಿತೃಗಳು , ಬಂಧು ಬಳಗದವರು, ಹಳೆಯ ಸ್ನೇಹಿತರುಗಳ ಸೆಳೆತದಿಂದ ಇಂಡಿಯಾ ಪ್ರಯಾಣಕ್ಕೆ ಮೀಸಲು. ಮಕ್ಕಳೂ ಸಹ ಚಿಕ್ಕಂದಿನಲ್ಲಿ ಅಮೇರಿಕ ಯೂರೋಪು ಬದಲು ಇಂಡಿಯಾಗೆ ಹೋಗಲು ಬಯಸುತ್ತಿದ್ದರು. ಮಕ್ಕಳು ದೊಡ್ಡವರಾದಹಾಗೆ ನಮ್ಮ ಜವಾಬ್ದಾರಿಯೂ ಕಡಿಮೆಯಾಗಿ ಬೇರೆ ಬೇರೆ ದೇಶಗಳ ಪ್ರವಾಸ ಮಾಡಲು ಸಾಧ್ಯವಾಯಿತು.
ನಾರ್ವೆಯ ಫಿಯೋರ್ಡ್ ಗಳನ್ನು ನೋಡಬೇಕು ಅದರಲ್ಲೂ ಮಧ್ಯರಾತ್ರಿಯ ಸೂರ್ಯದರ್ಶನ ಮಾಡಬೇಕು – ಇವು ನಮ್ಮ ಬಕೀಟು ಪಟ್ಟಿಯಲ್ಲಿ (bucket list) ಹಲವಾರು ವರ್ಷಗಳಿಂದ ಉಳಿದುಕೊಂಡಿತ್ತು. ಇದನ್ನು ಈ ವರ್ಷ ಪಟ್ಟಿಯಿಂದ ತೆಗೆಯೋಣ ಅಂತ ಮನಸಿಗೆ ಬಂದ ಕೂಡಲೇ land of the midnight sun ಗೆ ಕರೆದೊಯ್ಯುವ cruises ಹುಡುಕುವ ಕೆಲಸ ಶುರು ಆಯಿತು. ನಮ್ಮ ಅದೃಷ್ಟಕ್ಕೆ Thomson ರವರ Celebration cruise ಹಡಗು ಜೂನ್ ೧೧ ರಂದು New Castle ಬಂದರಿಂದ ೧೫ ದಿವಸಗಳ cruise ಕಣ್ಣಿಗೆ ಬಿದ್ದಕೂಡಲೇ ಅದಕ್ಕೆ ಬೇಕಾದ ಹಣ ಕಟ್ಟಿ ನಮ್ಮ ಕ್ಯಾಬಿನ್ಅನ್ನು ಕಾದಿರಿಸಿ ಕೊಂಡೆವು.
ನಮ್ಮ ಪ್ರಯಾಣದ ವಿವರದ ಪ್ರಕಾರ ೧೫ ದಿನಗಳಲ್ಲಿ ನಾವು ೧೦ ಬಂದರುಗಳಲ್ಲಿ ನಿಲ್ಲುವುದಿತ್ತು. ಪ್ರತಿ ಬಂದರಿನಲ್ಲೂ ಅಲ್ಲಿನ ಮುಖ್ಯ ಜಾಗಗಳನ್ನು ನೋಡುವ ಅವಕಾಶವಿತ್ತು. ಈ ಲೇಖನದಲ್ಲ್ಲಿನಾವು ನೋಡಿದ ಕೆಲವು ಜಾಗಗಳ, ತಿಳಿದುಕೊಂಡ ಕೆಲವು ವಿಷಯಗಳ ಅತಿ ಸೂಕ್ಷ್ಮ ಪರಿಚಯ ಮಾಡಲು ಪ್ರಯತ್ನಿಸಿದ್ದೇನೆ.
Newcastle ನಿಂದ ಹೊರಟು ಸತತ ೩೮ ಗಂಟೆಗಳ ಪ್ರಯಾಣ ಮಾಡಿ Flam ಬಂದರನ್ನು ತಲುಪಿದೆವು. Flam Fjord ಪ್ರಪಂಚದಲ್ಲೇ ಅತಿ ಉದ್ದದ ಅತಿ ಆಳದ S೦gne Fjord ನ ಉಪಫಿಯೋರ್ಡ್. ಅಂತರಿಕ್ಷ ಮುಟ್ಟುವಂತಹ ಕ್ಲಿಫ್ ಮುಖಗಳಿಂದ ಆವರಿಸಿರುವ ಜಾಗ. ಈ ಫಿಯೋರ್ಡ್ನಿಂದ ಪ್ರಪಂಚದ ಅತಿ ಕಡಿದಾದ Flamban ರೈಲುದಾರಿ ಬೆಟ್ಟದಲ್ಲಿನ ಹಲವಾರು ಸುರಂಗಗಳಲ್ಲಿ ಸಾಗಿ ೮೬೫ಮೀ ಎತ್ತರಕ್ಕೆ ತಲುಪಿಸುತ್ತದೆ. ಬಹಳ ಜನಪ್ರಿಯವಾದ ಈ ರೈಲುಗಾಡಿಯಲ್ಲಿ ಪ್ರಯಾಣ ಮಾಡಬೇಕೆಂದರೆ ಹಲವಾರು ತಿಂಗಳ ಮೊದಲೇ ಮುಂಗಡ ಹಣ ಕೊಟ್ಟು ಕಾದಿರಿಸಬೇಕು .ಇದು ನಮಗೆ ಸಾಧ್ಯವಾಗಲಿಲ್ಲ.
Flam ನಿಂದ ಬಸ್ಸಿನಲ್ಲಿ Naeroy ಕಣಿವೆಯ ಮುಖಾಂತರ ಬೆಟ್ಟದ ಮೇಲೆ Stalheim ಹೋಟೆಲ್ ನಲ್ಲಿ ಬಹಳ ರುಚಿಯಾದ ಡೇನಿಶ್ ಪೇಸ್ಟ್ರಿ ತಿಂದು ಬಿಸಿ ಬಿಸಿ ಕಾಫಿ ಕುಡಿದು ಹೋಟೆಲನಿಂದ ಹೊರಗೆ ಬಂದರೆ ಕಾಣುವುದು ಅದ್ಭುತ ಕಣಿವೆ. ಅಲ್ಲಿಂದ ೧೩ ಇಳಿಜಾರಿನ ಡೊಂಕುಗಳಿರುವ ದಾರಿಯಲ್ಲಿ ಬರುವಾಗ ಕಾಣುವುದು ಜಲಪಾತಗಳು. ಇಲ್ಲಿಯ ಜನ ಹೇಳುವಹಾಗೆ ನಾರ್ವೆಯಲ್ಲಿ ಜನಗಳಿಗಿಂತ ಹೆಚ್ಚು ಜಲಪಾತಗಳು ಇವೆ ಅನಿಸುತ್ತದೆ. ನಾರ್ವೆ ಯಲ್ಲಿ ಪೂರಾ ವಿಧ್ಯುಚಕ್ತಿ ಉತ್ಪಾದನೆ ಜಲಪಾತ ಗಳಿಂದಲೇ.
Naeroy ಫಿಯೋರ್ಡ್ ನಿಂದ ದೋಣಿ ಯಲ್ಲಿ Aurlands Fijord ನಲ್ಲಿ ೧೭ ಕಿ ಮೀ ದೂರದ Flam ಗೆ ಹೋಗುವಾಗ ಎರಡು ಬದಿಯಲ್ಲೂ ಜಲಪಾತ ಗಳು,ಮುಗಿಲೆತ್ತರ ಬೆಟ್ಟಗಳು.
ಯಾವ ಯುಗದಲ್ಲಿ ಎಂತಹ ಪ್ರಳಯ ಈ ನೈಸರ್ಗಿಕ ಸೌಂದರ್ಯ ರಚನೆಗೆ ಕಾರಣವೋ ಯಾರಿಗೂ ಗೊತ್ತಿರಲಾರದು. ಕಣ್ ತಣಿಸುವ ಮನ ಬೆರಗಾಗಿಸುವ ಈ ಜಾಗ ನಮ್ಮ ಮನಸಿನಲ್ಲಿ ಅಚ್ಚಳಿಯದೆ ನಿಲ್ಲುತ್ತದೆ.
Flam ನಿಂದ ಸಂಜೆ ಹೊರಟು ಮಾರನೆಯ ಬೆಳಿಗ್ಗೆ Bergen ತಲುಪಿದೆವು.
೨. Bergen
Bergen ನಾರ್ವೆ ಯ ಎರಡನೆಯ ದೊಡ್ಡ ನಗರ. ಏಳು ಬೆಟ್ಟಗಳ ಮತ್ತು ಏಳು ಫಿಯೋರ್ಡ್ ಗಳ ಮಧ್ಯೆ ಇರುವ Bergen ಸುಂದರವಾದ ನಗರ. ಮನೆಗಳ ತ್ರಿಕೋಣಾಕಾರ ಮೇಲ್ ಛಾವಣಿಗಳು, ಕಾಮನಬಿಲ್ಲಿನಂತಹ ಬಣ್ಣದ ಮನೆಗಳು, ಇವುಗಳ ಹಿಂದೆ ಮರಭರಿತ ಬೆಟ್ಟಗಳು – ಈ ದೃಶ್ಯವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಂಡರೆ ಅದೇ Bergen. ೧೭೦೨ ರಲ್ಲಿ ಬರ್ ಗೆನ್ ಅಗ್ನಿಗೆ ಆಹುತಿಯಾಯಿತು. ನಗರವನ್ನು ಮತ್ತೆ ಹಿಂದೆ ಇದ್ದಹಾಗೆಯೇ ಪುನಃ ಕಟ್ಟಿದರು. ಈಗ ಇದು Unesco World Heritage Site ಫನಿಕುಲರ್ ರೈಲ್ವೆ ಹತ್ತಿ ಮೇಲೆ ಹೋದರೆ ೧೦೦೦ ಅಡಿಗಳ ಮೇಲಿನಿಂದ ನಗರದ ಬಂದರು ಮರದಕೆಫೆಗಳು , ಮೀನುಗಾರರ ದೋಣಿಗಳು, ಮೀನು ಮಾರುಕಟ್ಟೆ ಮತ್ತು ಇತರ ಮುಖ್ಯ ಜಾಗಗಳನ್ನು ನೋಡಬಹುದು
೩. Hellesylt ಮತ್ತು Gairanger
ನಾರ್ವೆಯ ಪ್ರಖ್ಯಾತ ವಿಸ್ಮಯಗೊಳಿಸುವ ಪ್ರಕೃತಿ ದೃಶ್ಯಗಳನ್ನು ನೋಡಬೇಕೆಂದರೆ Hellesylt ಮತ್ತು Gairanger ಗೆ ಹೋಗಲೇಬೇಕು.
Hellesylt – ಈ ಹಳೆಯ ವೈಕಿಂಗ್ ಬಂದರಿನ ಸುತ್ತಲೂ ಕಣ್ಣಿಗೆ ಬೀಳುವುದು ಪರ್ವತಗಳು, ಜಲಪಾತಗಳು ಮತ್ತು ಸರೋವರಗಳು. ಬಂದರಿನ ಪಕ್ಕದಲ್ಲೇ ಇರುವ ನೊರೆ ನೊರೆ ಜಲಪಾತ ನೋಡಬೇಕಾದದ್ದೇ.
Hellesylt ನಿಂದ ಬಸ್ಸಿನಲ್ಲಿ ಪರ್ವತ ಕಣಿವೆಗಳ ದಾರಿಯಲ್ಲಿ ಯೂರೋಪಿನಲ್ಲೆ ಬಹು ಆಳವಾದ Hornindalsvannet ಸರೋವರ. ಅಲ್ಲಿಂದ ಮುಂದೆ Nord ಫಿಯೋರ್ಡ್. ನಂತರ ಹಸಿರು ನೀಲಿ ಸುಳಿಸುತ್ತಿನಿಂದ ಮೋಹಿಸುವ ಪ್ರಸಿದ್ಧ ಸ್ಟ್ರಿನ್ ಸರೋವರ .ಮುಂದೆ ಫ್ಲೈಡಾ ಲ್ viewpoint ನಿಂದ ಕಾಣುವುದು ಶೃಂಗ ಹಿಮರಾಶಿ ಮತ್ತು ಸರೋವರಗಳು. ಈ viewpoint ನಿಂದ ನೋಡಿದರೆ ಗೈರೆಂಗರ್ ಫಿಯೋರ್ಡ್ ಪಾತಾಳದಲ್ಲಿ ಇದೆಯೇನೋ ಅನ್ನಿಸುತ್ತದೆ, ಕತ್ತೆತ್ತಿ ನೋಡಿದರೆ ಹಿಮ ಮುಚ್ಚಿದ ಭವ್ಯವಾದ Dalsnibba ಪರ್ವತ. ಒಟ್ಟಿನಲ್ಲಿ ಈ ನಿಸರ್ಗದ ಸೊಬಗನ್ನು ನೋಡಲು ಎರಡು ಕಣ್ಣು ಸಾಲದು
![]()
|
Ring of stone – Bride had to go through the ring before wedding to prove she is not pregnant !

೪. Molde
Molde ಯನ್ನು ಗುಲಾಬಿ ಹೂವುಗಳ ಪಟ್ಟಣ ಎನ್ನುತ್ತಾರೆ. ಇಲ್ಲಿ ಸಾಮಾನ್ಯವಾಗಿ ಸುಖೋಷ್ಣವಾದ ಜಾಗಗಳಲ್ಲಿ ಬೆಳೆಯುವ ಗಿಡಗಳನ್ನು ಬೆಟ್ಟಗಳ ಇಳಿಜಾರಿನಲ್ಲಿ ನೋಡಬಹುದು. ಇಲ್ಲಿನ ವಲಯದ Romsdal ವಸ್ತು ಸಂಗ್ರಹಾಲಯದಲ್ಲಿ ವೈಕಿಂಗ್ ಕಾಲದಿಂದ ೧೯ನೇ ಶತಮಾನದ ಅಂತ್ಯದವರೆವಿಗೂ ಇದ್ದ ಜನ ಜೀವನವನ್ನು ತೋರಿಸುವ ೪೦ಕ್ಕೂ ಹೆಚ್ಚು ಕಟ್ಟಡಗಳಿವೆ. ಇಲ್ಲಿಂದ ವಾರ್ಡೆನ್ viewpoint ಗೆ ಹೋದರೆ ರೊಮ್ಸ್ಡಾಲ್ ಪರ್ವತ, ಫಿಯೋರ್ಡ್ ಮತ್ತು ಪಟ್ಟಣದ ಬಿಳಿಬಣ್ಣದ ಮರದ ಮನೆಗಳು, ಪಚ್ಛೆ ಹಸುರಿನ ತೋಟಗಳ ಭವ್ಯ ದೃಶ್ಯ ಕಾಣುತ್ತದೆ.
A house in Viking period .
೫. Tromso
ಆರ್ಕ್ಟಿಕ್ ವೃತ್ತದಿಂದ ಮೇಲೆ ಇರುವ ಪಟ್ಟಣಗಳಲ್ಲಿ ದೊಡ್ಡಊರು ಟ್ರಾಮ್ಸೋ. ಲೆಕ್ಕವಿಲ್ಲದಷ್ಟು ಉತ್ತರ ಧ್ರುವ ಉದ್ದೇಶಿತ ಪ್ರಯಾಣಿಗರು ಇಲ್ಲಿಂದಲೇ ಹೊರಟಿದ್ದಾರೆ. . ಸೆಪ್ಟೆಂಬರ್ ನಂತರ ನಿಸರ್ಗದ ಬೆಳಕಿನ ಪ್ರದರ್ಶನ ವೇ ಟ್ರಾಮ್ಸೋ ನ ಮುಖ್ಯ ಆಕರ್ಷಣೆ. ಬೇಸಿಗೆಯಲ್ಲಿ ಟ್ರಾಮ್ಸೋನ ವಿಜ್ಞಾನ ಕೇಂದ್ರದ ಪ್ಲಾನೆಟೋರಿಯಂ ನಲ್ಲಿ ಈ ಪ್ರದರ್ಶನದ ರುಚಿ ಸಿಗುತ್ತದೆ.
೬. Honningsvag- Honnigsvag ಆರ್ಕ್ಟಿಕ್ ವೃತ್ತದ ಅಂತರಾಳದಲ್ಲಿ ಮ್ಯಾಗೇರೋಯಾ ದ್ವೀಪದಲ್ಲಿರುವ ಊರು. ಈ ಊರು ಯೂರೋಪಿನ ಉತ್ತರದ ಕೊನೆ. ಇಲ್ಲಿಂದ ಬಸ್ಸಿನಲ್ಲಿ north cape ಗೆ ಹೋದೆವು. ಬೆಟ್ಟಗಳ ಮಧ್ಯೆ ಮಾಡಿರುವ Hairpin ತಿರುವುಗಳ ರಸ್ತೆ, ಪಕ್ಕದಲ್ಲಿ ಹಿಮವತ್ಪರ್ವತ, ಅಲ್ಲಿ ಓಡಾಡುತ್ತಿದ್ದ ಹಿಮ ಸಾರಂಗಗಳು, ಮಧ್ಯೆ ನಿರ್ಜನ ಜಾಗದಲ್ಲಿ ವಾಸಿಸುತ್ತಿರುವ ‘ಸಾಮಿ’ ಜನ. ಸಾಮಿ ಜನಗಳು ಅಂದರೆ ನಾರ್ವೆಯ ಸ್ಥಳೀಯ ಜನ ಎನ್ನಬಹುದು. ಇವರ ವೇಷ ಭೂಷಣಗಳನ್ನು ನೋಡಿದರೆ ನೂರಾರು ವರ್ಷಗಳ ಹಿಂದೆ ಹೇಗಿದ್ದರೋ ಹಾಗೆಯೇ ಇದ್ದಾರೆ ಅನಿಸುತ್ತದೆ. ಪ್ರಾಯಶಃ ಇದು ಪ್ರವಾಸಿಗರ ಫಾಯಿದೆ ಗಾಗಿ ಇರಬಹುದು. ನಮ್ಮ ಗೈಡ್ ಹೇಳಿದ – ಅವರ ಗಂಡಸರ ಟೋಪಿಯಲ್ಲಿ ಒಂದು ಕುಚ್ಚು ಇದೆ ನೋಡಿ. ಕುಚ್ಚು ಬಲಗಡೆ ಇದ್ದರೆ ಅವನಿಗೆ ವಿವಾಹವಾಗಿದೆ ಅಂತ, ಎಡಗಡೆ ಇದ್ದರೆ ಅವನಿನ್ನೂ ಬ್ರಹ್ಮಚಾರಿ, ಮಧ್ಯದಲ್ಲಿದ್ದರೆ ಅವನು desperate ಅಂತೆ.
ಇವೆಲ್ಲವೂ ದಾಟಿ ನಾರ್ತ್ ಕೇಪ್ ತಲುಪಿದೆವು. ೭೧deg ೧೦min ೨೧sec ನಲ್ಲಿರುವ ನಾರ್ತ್ ಕೇಪ್ ಯೂರೋಪಿನ ಉತ್ತರದ ಕೊನೆ. ಸುಮಾರು ಮೂರು ಶತಮಾನಗಳಿಂದಲೂ ಪ್ರಪಂಚದ ಎಲ್ಲ ಕಡೆಯಿಂದಲೂ ಇಲ್ಲಿಯ ನಿಸರ್ಗದ ಸೊಬಗನ್ನು ಆಸ್ವಾದಿಸಲು ಬರುತ್ತಿದ್ದಾರೆ . ನಾರ್ತ್ ಕೇಪ್ನಲ್ಲಿ ನನ್ನ ಮನಸ್ಸಿಗೆ ಬಹಳ ಹಿಡಿಸಿದ್ದು ಪ್ರಪಂಚದ ಮಕ್ಕಳ ಸ್ಮಾರಕ. ೧೯೮೯ ರಲ್ಲಿ ಪ್ರಪಂಚದ ವಿವಿಧ ದೇಶಗಳ ಏಳು ಮಕ್ಕಳು ರಚಿಸಿದ ಈ ಸ್ಮಾರಕ ಎಲ್ಲಾ ಎಲ್ಲೆಗಳನ್ನು ತೊರೆದ ಸಹಕಾರ, ಸ್ನೇಹ, ನಿರೀಕ್ಷೆ , ಸಂತೋಷ ಗಳ ಸಂಕೇತ.
A Sami Man
೭. Harstad ಮತ್ತು Leknes
Honningsvag ನಿಂದ ಹೊರಟ ಮೇಲೆ ಮುಂದಿನ ಎರಡು ಊರುಗಳಲ್ಲಿ – Harstad ಮತ್ತು Leknes – ಕಾಲದ ಅಭಾವದಿಂದ ನಾವು ಬರಿ ಊರಲ್ಲಿ – ಅದರಲ್ಲೂ ಮುಖ್ಯರಸ್ತೆಯಲ್ಲಿ – ಸುತ್ತಾಡಲು ಮಾತ್ರ ಸಾಧ್ಯವಾಯಿತು. ಅಂಗಡಿಗಳಲ್ಲಿ ನಿತ್ಯಜೀವನಕ್ಕೆ ಅವಶ್ಯಕ ವಸ್ತುಗಳ ಬೆಲೆ ನೋಡಿ ಹೆದರಿಕೆಯೂ ಆಯಿತು. ಇದರ ಬಗ್ಗೆ ಒಂದು ಸೂಪರ್ ಮಾರ್ಕೆಟ್ ನಲ್ಲಿ ಒಬ್ಬರನ್ನ ಕೇಳಿದ್ದಕ್ಕೆ ಅವರ ಉತ್ತರ – ಇಲ್ಲಿ ಆದಾಯವೂ ಹೆಚ್ಚು, ತೆರಿಗೆಯೂ ಹೆಚ್ಚು, ಅದಕ್ಕೆ ತಕ್ಕಂತೆ ಖರ್ಚು ಮಾಡುತ್ತೇವೆ, ಅದೂ ಅಲ್ಲದೆ ಸರ್ಕಾರದಿಂದ ಸಾಕಷ್ಟು ನಿವೃತ್ತಿ ವೇತನ, ವೈದ್ಯಕೀಯ ಇತ್ಯಾದಿ ಸಹಾಯಗಳೂ ಇವೆ. ಖನಿಜತೈಲದ ಆದಾಯದಿಂದ ನಾರ್ವೆ ಒಂದು ಸಮೃದ್ಧಿ ದೇಶವಾಗಿದೆ.
ಜೂನ್ ೧೯ ಸಂಜೆ Honningsvag ಬಿಟ್ಟಾಗ ಮೋಡ ಕವಿದ ವಾತಾವರಣ ಆಗಾಗ ತುಂತುರು ಮಳೆ. ಮಧ್ಯ ರಾತ್ರಿಯ ಸೂರ್ಯ ದರ್ಶನಕ್ಕೆ ಈ ವಾತಾವರಣ ಕೊಕ್ಕೆ ಹಾಕುತ್ತೇನೋ ಎನ್ನುವ ಕಳವಳ. ನಮ್ಮ ಅದೃಷ್ಟಕ್ಕೆ ಮಧ್ಯ ರಾತ್ರಿ ಹತ್ತಿರ ಬರುತ್ತಿದ್ದಂತೆ ತುಂತುರು ಮಳೆ ನಿಂತು ಸೂರ್ಯನಿಗೆ ದಾರಿ ಮಾಡಿಕೊಡುವಂತೆ ಮೋಡಗಳು ಸರಿದಾಗ ನಮಗೆ ಸೂರ್ಯ ದರ್ಶನ ಪ್ರಾಪ್ತಿಯಾಯ್ತು. ಕಣ್ಣು ಕುಕ್ಕುವ ಉಜ್ವಲ ಪ್ರಕಾಶ, ನೀರಿನಲ್ಲಿ ಸೂರ್ಯ ಕಿರಣಗಳ ತೀಕ್ಷಣ ಪ್ರತಿಬಿಂಬ.
Midnight Sun partially behind clouds
Sun at Midnight
On the deck just after midnight
ಈ ಜಾಗಗಳಲ್ಲಿ ಜೂನ್೧೨ ರಿಂದ ಜುಲೈ ೧ ರವರೆಗೂ ಸೂರ್ಯ ಬಾನಂಚಿನ ಕೆಳಗೆ ಹೋಗುವುದಿಲ್ಲವಾದ್ದರಿಂದ ೨೪ ಘಂಟೆ ಹಗಲು ಇರುತ್ತದೆ. ಸ್ಕಾಂಡಿನೇವಿಯದ ಇತರ ದೇಶಗಳಲ್ಲೂ ಹಾಗೂ ರಷ್ಯಾದಲ್ಲೂ ಮಧ್ಯ ರಾತ್ರಿ ಸೂರ್ಯ ನೋಡಬಹುದಂತೆ. ಆದರೆ ಫಿಯೋರ್ಡಿನಿಂದ ಕರ್ಕಾಟಕ ಸಂಕ್ರಾಂತಿ (Summer Solstice) ಯಂದು ನಾವು ನೋಡಿದ ಮಧ್ಯ ರಾತ್ರಿಯ ಸೂರ್ಯನ ಉಜ್ವಲ ಪ್ರಕಾಶ ನೀರಿನಲ್ಲಿ ಅದರ ಪ್ರತಿಬಿಂಬ ಎಂದೂ ಮರೆಯಲಾಗುವುದಿಲ್ಲ.
ಮುಂದಿನ ಎರಡು ರಾತ್ರಿಯೂ ನಾವು ಮಧ್ಯ ರಾತ್ರಿಯಲ್ಲಿ ಸೂರ್ಯ ದರ್ಶನ ಮಾಡಿದೆವು.
೮. Alesund
Alesund ಫೀನಿಕ್ಸ್ ತರಹ ಬೂಧಿ ಯಿಂದ ಮತ್ತೆ ಹುಟ್ಟಿದ ಸಣ್ಣ ನಗರ. ಜನವರಿ ೨೩,೧೯೦೬ ರಲ್ಲಿ ಅಗ್ನಿದೇವನಿಗೆ ಆಹುತಿಯಾದ ಈ ಸಣ್ಣ ನಗರವನ್ನು Art Nouveau ಶೈಲಿ ಮತ್ತೆ ಕಟ್ಟಿದರು. ಈ ನಗರ ಸಾಗರದಲ್ಲಿ ಚೆಲ್ಲಿರುವ ಹಲವಾರು ದ್ವೀಪಗಳ ಬದಿಯಲ್ಲಿದೆ. ಹಲವಾರು ಸೇತುವೆಗಳು ಮತ್ತು ಸಮುದ್ರದ ಕೆಳಗಿನ ಸುರಂಗ ಗಳ ಮುಖಾಂತರ ಸಾಗ ದ್ವೀಪ ಎಂದು ಹೆಸರುವಾಸಿಯಾಗಿರುವ Giske ಮತ್ತು Godoy ದ್ವೀಪಗಳ ನೋಡಬೇಕಾದ್ದೇ. Giske ವೈಕಿಂಗ್ ನ ಮುಖ್ಯಸ್ಥ ರೋಲೋವಿನ ಜನ್ಮಸ್ಥಳವಂತೆ. Giske ಯಲ್ಲಿನ ಕ್ರಿ.ಶ ೧೧೫೦ ರಲ್ಲಿ ಕಟ್ಟಿದ್ದ ಕ್ರೈಸ್ತ ದೇವಾಲಯ ಚಿಕ್ಕದಾದರೂ ಬಹಳ ಸುಂದರವಾದದ್ದು.
ಬಿಳಿ ಅಮೃತಶಿಲೆಯಲ್ಲಿ ಕಟ್ಟಿದ ಈ ದೇವಾಲಯ ಈಗ ಅಮೃತಶಿಲೆ ಯನ್ನು ಕಾಪಾಡುವುದಕ್ಕಾಗಿ ಹೊರಗಡೆ ಪ್ಲಾಸ್ಟರ್ ಹಚ್ಚಿದೆ. ಮರದಲ್ಲಿ ಕೆತ್ತಿರುವ ದೇವಾಲಯದ ಪವಿತ್ರ ಪೀಠ (Altar) ಮತ್ತು ವೇದಿಕೆ ಗಳು ಅತಿ ಅಲಂಕೃತವಾಗಿವೆ. ಗೊಡೊಯ್ ನ ದೀಪಗೃಹ (Lighthouse) ಹತ್ತಿ ಮೇಲೆ ಹೋದರೆ ಕಾಣುವ ದೃಶ್ಯ ಹತ್ತಿದ ಶ್ರಮವನ್ನು ಮರೆಸುತ್ತದೆ.
Alesund ನಲ್ಲಿ ನಮ್ಮ ನಾರ್ವೆ ಸಂಚಾರ ಮುಕ್ತಾಯವಾಯಿತು. ಅಲ್ಲಿಂದ ಹೊರಟು ನಮ್ಮ ಹಡಗು North Seaಗೆ ಬಂದಿತು. North Sea ಯ ಪ್ರಯಾಣ ಅಷ್ಟೇನೂ ಸುಖಕರವಾಗಿರಲಿಲ್ಲ. ಆದರೂ ನಮ್ಮ ಅನುಭವಗಳನ್ನು ಸಹಪ್ರವಾಸಿಗರೊಂದಿಗೆ ಹಂಚಿ ಕೊಳ್ಳುತ್ತಾ, ಮಧ್ಯ ರಾತ್ರಿಯ ಸೂರ್ಯ ದರ್ಶನ ಮತ್ತು ನಮ್ಮ ಪ್ರವಾಸದ ಇತರ ರಸನಿಮಿಷಗಳನ್ನು ಮೆಲಕುಹಾಕುತ್ತ ಸುಮಾರು ೩೮ ಘಂಟೆ ಪ್ರಯಾಣ ಮಾಡಿ New Castle ತಲುಪಿದೆವು.
ಭೂವಿಜ್ಞಾನದ ಪ್ರಕಾರ ಫಿಯೋರ್ಡ್ ಗಳು ಉಂಟಾಗಿದ್ದು ಬೃಹತ್ ಹಿಮರಾಶಿ ಗಳ ಕರಗುವಿಕೆಯಿಂದ. ಇದಕ್ಕೆ ಎಷ್ಟು ಕೋಟಿ ಕೋಟಿ ಸಂವತ್ಸರಗಳು ಬೇಕಾಯಿತೋ ಯಾರಿಗೆ ಗೊತ್ತು
ನಾರ್ವೆ ಯಲ್ಲಿನ ಸಾವಿರಕ್ಕೂ ಮೇಲ್ಪಟ್ಟು ಇರುವ ಫಿಯೋರ್ಡ್ ಗಳು ನಾರ್ವೆಯ ಮುಖ್ಯ ಸಂಕೇತವೇ ಸರಿ. ಉಪ್ಪು ನೀರಿನ ನೀಲಿ ಸರೋವರಗಳಂತಿರುವ ಫಿಯೋರ್ಡ್ ಗಳು ಎರಡು ಬದಿಯಲ್ಲೂ ಅಂತರಿಕ್ಷ ಮುಟ್ಟುವಂತಹ ಕಡಿದಾದ ಮುಖವುಳ್ಳ ಬೆಟ್ಟಗಳ ಮದ್ಯೆ ಸಮುದ್ರದ ವಿಸ್ತರಿಸಿದ ತೋಳುಗಳಂತೆ ನಾಡಿನ ಒಳಭಾಗದವರೆಗೂ ಚಾಚುತ್ತವೆ. ಮಧ್ಯೆ ಮಧ್ಯೆ ಭಾರಿ ಜಲಪಾತಗಳು.
ನಮ್ಮ ಮಟ್ಟಿಗೆ ನಾರ್ವೆಯ ಆಕರ್ಷಣೆ ಪ್ರಕೃತಿ ಸೌಂದರ್ಯ ಮತ್ತು ಮಧ್ಯ ರಾತ್ರಿಯ ಸೂರ್ಯ ದರ್ಶನ,
ಹಲವರಿಗೆ ಫಿಯೋರ್ಡ್ ಗಳ ಇನ್ನೊಂದು ಆಕರ್ಷಣೆ ನಾರ್ವೆ ಯ ಗತಕಾಲದ ಪ್ರತಿಬಿಂಬ – ಅತಿ ಕಡಿದಾದ ಬೆಟ್ಟ ಗುಡ್ಡಗಳ ಕಠಿಣ ವಾತಾವರಣದಲ್ಲಿ ಹಿಮಸಾರಂಗ, ಮೀನು, ಹಣ್ಣು ಹಂಪಲುಗಳಲ್ಲಿ ಜೀವನ ನಡೆಸುತ್ತಿದ್ದ ಜನರ ಜೀವನ.
ನಾವು cruise ನಲ್ಲಿ ಇದ್ದಿದ್ದರಿಂದ ಊಟ, ತಿಂಡಿ, ವಸತಿ ಇವುಗಳ ಯಾವ ಯೋಚನೆಯೂ ಇಲ್ಲದೆ ನಮ್ಮ ಪ್ರವಾಸ ಸುಗಮವಾಗಿ ಆರಾಮವಾಗಿ ಉಲ್ಲಾಸಕರವಾಗಿ ಅನುಭವಿಸಲು ಸಾಧ್ಯವಾಯಿತು. ಇದರ ಜೊತಗೆ ಫಿಯೋರ್ಡ್ ಗಳಲ್ಲಿ ಎರಡು ಕಡೆಯೂ ಬೆಟ್ಟಗಳಿದ್ದರಿಂದ ಅಂತರ್ಜಾಲ ಮತ್ತು ಟಿವಿಗಳಿಂದ ದೂರವಾಗಿ ಹಡಗಿನಲ್ಲಿ ಮನೋರಂಜನೆ ಕಾರ್ಯಕ್ರಮಗಳು, ಇತರ ಚಟುವಟಿಕೆಗಳು ಹಾಗೂ ಸಹಪ್ರವಾಸಿಗಳೊಡನೆ ಪರಸ್ಪರ ಪ್ರತಿಕ್ರಿಯಣೆ ಇವುಗಳನ್ನು ಅನುಭವಿಸಲು ಸಾಧ್ಯವಾಯಿತು.
“ನಾರ್ವೆ ಫಿಯೋರ್ಡ್ಸ್ ಮತ್ತು ಮಧ್ಯ ರಾತ್ರಿಯ ಸೂರ್ಯ” ನ ನಮ್ಮ ಬಕೆಟ್ ಲಿಸ್ಟ್ ನಿಂದ ತೆಗೆದುಹಾಕಿದ್ದಾಯಿತು.
New Castle ನಿಂದ ಹೊರಟು ಮನೆ ಸೇರಿದಮೇಲೆ ವಾಸ್ತವತೆ ಹೊಡೆದೆಬ್ಬಿಸಿತು!!
ಚಿತ್ರ ಲೇಖನ- ಬೆಳ್ಳೂರು ಗಧಾಧರ್
.
ಮಾನ್ಯ ಪ್ರಸಾದ್, ಉಮಾ ವೆಂಕಟೇಶ್ , ಶ್ರೀವತ್ಸ ದೇಸಾಯಿ ಮತ್ತು ಪ್ರೇಮಲತಾ ಅವರೆ
ಅನಿವಾಸಿಯ ಆಧಾರಸ್ಟಂಭಗಳಾದ ನೀವುಗಳು ನನ್ನ ಈ ಲೇಖನದ ಬಗ್ಗೆ ಬರೆದಿರುವ ಮೆಚ್ಚುಗೆಯ
ಮಾತುಗಳಿಗೆ ಧನ್ಯವಾದಗಳು. ಇದು ನನ್ನ ಮೊದಲ ಪ್ರವಾಸ ಲೇಖನ. ಸಧ್ಯ ಪ್ರಥಮ ಚುಂಬನೇ ದಂತ ಭಗ್ನವಾಗಲಿಲ್ಲ
LikeLiked by 1 person
ಗದಾಧರ್ ಅವರೇ
ಹಲವು ವರ್ಷಗಳ ಹಿಂದೆ ನಾನು ಅಲಾಸ್ಕ ಪ್ರವಾಸ ಕೈಗೊಂಡಿದ್ದು ನಾರ್ವೆ ಫ್ಯೋರ್ಡ್ ಗಳು ಅದೇ ರೀತಿ ಇರುವುದರ ಬಗ್ಗೆ ಕೇಳಿದ್ದೆ.
ನಾರ್ವೆ ಪ್ರವಾಸದ ಬಗ್ಗೆ ಆಲೋಚನೆ ಮಾಡುತ್ತಿದ್ದ ನನಗೆ ನಿಮ್ಮ ಈ ಪ್ರವಾಸ ಕಥನ ನನ್ನ ಕಾತರತೆಯನ್ನು ಹೆಚ್ಚಿಸಿದೆ.
ನಿರೂಪಣೆ ಮತ್ತು ಮಾಹಿತಿ ತುಂಬಿದ ನಿಮ್ಮ ಪ್ರವಾಸ ಕಥನ ನನಗೆ ಉತ್ತಮ ಕೈಪಿಡಿ ಅಥವಾ Guide ಬುಕ್ ಆಗಿದೆ.
ನಾನು ನಾರ್ವೆಗೆ ಹೊರಡುವ ಮುನ್ನ ಮತ್ತು ಪ್ರವಾಸದ ವ್ಯವಸ್ಥೆ ಮಾಡುವಾಗ ಮತ್ತೊಮ್ಮೆ ಓದುವ ಆಲೋಚನೆ ಇದೆ.
ಯಾವುದೇ ಪ್ರವಾಸ ಕಥನ ಓದುಗರಿಗೆ ಆ ಪ್ರವಾಸ ಕೈಗೊಳ್ಳಲು ಉತ್ತೇಜನ ನೀಡಿದ್ದಲ್ಲಿ ಅದು ಯಶಸ್ವಿಯಾದ ಬರವಣಿಗೆ ಎನ್ನಬಹುದು.
LikeLike
ಸುಂದರವಾದ ಚಿತ್ರ ಬರಹ. ನಾರ್ವೆಯ ಬಗ್ಗೆ ನಿಮ್ಮ ಈ ಲೇಖನದಿಂದ ಬಹಳ ತಿಳಿಯಿತು. ಉಮಾ ಅವರು ಹೇಳಿರುವ ಹಾಗೆ ಒಂದಾನೊಂದು ಕಾಲದಲ್ಲಿ ಹೆಣ್ಣಿಗೆ ಅಂತಹ ಪರೀಕ್ಷೆ ಇತ್ತು ಎಂದು ಓದಿ ಸೋಜಿಗವಾಗುತ್ತದೆ.
ಈ ಲೇಖನದಿಂದ ನಾರ್ವೆಯನ್ನು ನೋಡುವ ಕುತೂಹಲ ಮೂಡಿದೆ.
LikeLike
ಗದಾಧರ ಅವರೆ, ನಿಮ್ಮ ಪ್ರವಾಸ ಕಥನ ಓದಿ ನಿಮ್ಮ ಅನುಭವವನ್ನು ಪರೋಕ್ಷವಾಗಿ ಅನುಭವಿಸಿದೆ. ಹತ್ತು ವರ್ಷದ ಕೆಳಗೆ ನಾನು ಜೂನ್ ಎರಡನೆಯ ವಾರದಲ್ಲಿ ಕೆಲವೊಂದು ನಾರ್ವೆಯ ಪಟ್ಟಣಗಳಿಗೆ ಹೋಗಿದ್ದೆ. ಆದರೆ ನಿಮ್ಮಷ್ಟು ಉತ್ತರದ ದಿಕ್ಕಿಗೆ ಹೋಗಿರಲಿಲ್ಲ. ಹೀಗಾಗಿ ಮಧ್ಯರಾತ್ರಿಯ ಸೂರ್ಯನ ದರ್ಶನ ಆಗಿದ್ದಿಲ್ಲ. ಇಂದು ಆಯಿತು! ನಿಮ್ಮ ವರ್ಣನೆಯಿಂದ ಆ ಪ್ರವಾಸದ ನೆನಪು ಮರುಕಳಿಸಿತು, ಎಲ್ಲ ಕಡೆ ಲಕ ಲಕ ತೊಳೆದು ನಿಲ್ಲಿಸಿದಂಥ ಹಳ್ಳಿಗಳು, ಜುಳು ಜುಳು ನೀರಿನ ಜಲಪಾತಗಳು, ಹವೆ ಎಷ್ಟು ಸ್ವಚ್ಛವಾಗಿದೆಯಲ್ಲವೆ? ಅಲ್ಲಿಯ ಫೋಟೋ ಸಹ ಬಹಳ ಸುಂದರ.ಎಂದು ತೋರಿಸಿದ್ದೀರಿ. ನಿಮ್ಮ ಬಕೆಟ್ ಲಿಸ್ಟಿನಲ್ಲಿ ಮುಂದಿನ ದೇಶ ಯಾವುದು ಅಂತ ಕುತೂಹಲ ಹುಟ್ಟಿಸಿದ್ದೀರಿ!
LikeLike
ಗದಾಧರ್ ಅವರೆ, ನಿಮ್ಮ ನಾರ್ವೆಯ ಪ್ರವಾಸ ಲೇಖನ ಸೊಗಸಾಗಿದೆ. ಹೈಸ್ಕೂಲಿನಲ್ಲಿ ನಡೆಯುತ್ತಿದ್ದ ಕ್ವಿಜ಼್ ಸ್ಪರ್ದೆಯಲ್ಲಿ ಲ್ಯಾಂಡ್ ಆಫ಼್ ಮಿಡ್ ನೈಟ್ ಸನ್ ಯಾವುದು ಎಂದರೆ, ನಾರ್ವೆ ಎಂದು ಸುಲಭವಾಗಿ ಬರೆಯುತ್ತಿದ್ದೆವು. ಆದರೆ ಮದ್ಯರಾತ್ರಿಯ ಸೂರ್ಯದರ್ಶನ ಮಾಡಿದ ವ್ಯಕ್ತಿಯ ನೇರವಾದ ಅನುಭವವನ್ನು ಈಗಲೇ ಓದಿದ್ದು. ದಿ ಗ್ರೇಟ್ ಬ್ರಿಟಿಷ್ ಬೇಕಿಂಗ್ ಟ್ರಿಪ್ ಎನ್ನುವ ಬಿಬಿಸಿ ಕಾರ್ಯಕ್ರಮದಲ್ಲಿ, ಮೋಟಾರು ಬೈಕಿನಲ್ಲಿ ಕುಳಿತು, ನಾರ್ವೆಯ ಪ್ರವಾಸ ಗೈದ ವ್ಯಕ್ತಿಗಳ ಅನುಭವವನ್ನು ಟೆಲಿವಿಶನ್ನಿನಲ್ಲಿ ನೋಡಿದ್ದೆ. ನೀವು ಭೇಟಿ ನೀಡಿರುವ ಹಲವಾರು ಜಾಗಗಳನ್ನು ಆ ಕಾರ್ಯಕ್ರಮದಲ್ಲಿ ತೋರಿಸಿದ್ದರು. ಬೆಟ್ಟಗುಡ್ಡಗಳಿಂದ ಆವೃತವಾದ ಈ ಸುಂದರ ದೇಶವನ್ನು ಅಲ್ಲಿನ ಸುಂದರತೆಯನ್ನು ನಿಮ್ಮ ಪದಗಳಲ್ಲಿ ಓದಿದ್ದು ಬಹಳ ಚೆನ್ನ ಎನಿಸಿತು. ಮದ್ಯರಾತ್ರಿಯಲ್ಲಿ ಸೂರ್ಯನನ್ನು ನೋಡುವ ಅನುಭವವನ್ನು ಅನುಭವಿಸಿಯೇ ತಿಳಿಯಬೇಕು. ರಿಂಗ್ ಆಫ಼್ ಸ್ಟೋನ್ ವೃತ್ತಾಂತ ಬಹಳ ಕುತೂಹಲಕಾರಿಯಾಗಿದೆ. ಕೇವಲ ನಮ್ಮ ದೇಶದ ರಾಮಾಯಣ ಕಥೆಯ ಸೀತೆ ಅಗ್ನಿ ಪರೀಕ್ಷೆ ಅನುಭವಿಸಿದ್ದಾಳೆ ಎಂದುಕೊಂಡಿದ್ದ ನನಗೆ, ಪಾಶ್ಚಾತ್ಯ ದೇಶಗಳಲ್ಲೂ, ಹೆಣ್ಣು ಇಂತಹ ಪರೀಕ್ಷೆಗೊಳಗಾಗುತ್ತಾಳೆ ಎನ್ನುವುದನ್ನು ತಿಳಿದು, ಆಶ್ಚರ್ಯವಾಯಿತು! ಮಾನವನ ಸ್ವಭಾವ ದೇಶ ಕಾಲದಿಂದ ಬದಲಾಗುವುದಿಲ್ಲ ಅಲ್ಲವೇ?
ಉಮಾ ವೆಂಕಟೇಶ್
LikeLike