ಹೊಸ ಪರಿಚಯ

ವಿಜಯ್ ನರಸಿಂಹ ಅವರು ಮೂಲತಃ ತುಮಕೂರಿನವರು.B.E Mechanical Engineering ನಲ್ಲಿ ಪದವಿ ಪಡೆದಿರುವ ಇವರು QuEST ಸಂಸ್ಥೆಯಲ್ಲಿ Technical Manager ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಗಳಲ್ಲಿ ಸಾಹಿತ್ಯ ರಚನೆಯೂ ಒಂದು. ಸಾಹಿತ್ಯದಲ್ಲಿ ಕಾವ್ಯ ಪ್ರಾಕಾರ ತುಂಬಾ ಇಷ್ಟ ಎನ್ನುವ ಇವರು ಹಲವು ಕವನಗಳನ್ನು ಬರೆದ್ದಿದ್ದಾರೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಸಂಘದ ಅನಿವಾಸಿ ವಿಭಾಗದಲ್ಲಿ ಎರಡು ಬಾರಿ ಇವರ ಆಯ್ದ ಕವನಗಳಿಗೆ ಮನ್ನಣೆ ದೊರೆತಿದೆ. ರಾಷ್ತ್ರಕವಿ ಕುವೆಂಪು ಮತ್ತು ಮೈಸೂರು ಅನಂತ ಸ್ವಾಮಿ ಪ್ರಶಸ್ತಿಗಳು ದೊರೆತಿವೆ. ಕಾವ್ಯದ ಒರೆಯ ಸೆಲೆತ ಜೋರಾಗಿದ್ದರೆ ಅದನ್ನು ತಡೆಯಲು ಸಮಯಾಭಾವದ ಸೋಗು ಸಾಲದು ಎನ್ನುವ ಇವರು ಕನ್ನಡ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. UK Derby ಯಲ್ಲಿ ಸನ್ಮಿತ್ರರೊಡನೆ ಸೇರಿ 2014ರಲ್ಲಿ ಜೈ ಕರ್ನಾಟಕ ಬಳಗದ ಸ್ಥಾಪನೆಯಲ್ಲಿ ಇವರ ಪಾತ್ರ ಹಿರಿದು.
ವಿಜಯ್ ನರಸಿಂಹ ಅವರ ಕಾವ್ಯ ಪ್ರಕಾರಗಳು ವಿಶಿಷ್ಟವಾದವು . ಈ ಕಾವ್ಯ ಪ್ರಕಾರಗಳು ಇತ್ತೀಚೆಗೆ ವಿರಳವಾಗುತ್ತ ಬರುತ್ತಿವೆ. ನವ್ಯ ಕಾವ್ಯದ ಹೆಸರಲ್ಲಿ ಗದ್ಯ ಪದ್ಯವಾಗುತ್ತಿದೆ. ಕನ್ನಡದ ಹಲವು ಉತ್ತಮ ಪದಗಳು ಬಳಕೆಯಾಗುತ್ತಿಲ್ಲ. ಕನ್ನಡದಲ್ಲಿ ಅಪಾರ ಪಾಂಡಿತ್ಯ ಇರುವ ವಿಜಯ್ ಅವರು ಎರಡು ಭಿನ್ನ ಪ್ರಕಾರಗಳಲ್ಲಿ ಬರಿದಿರುವ ಕೆಳಕಂಡ ಕವನಗಳು ಕನ್ನಡಕ್ಕೆ ಮತ್ತು ಅನಿವಾಸಿಗೆ ಉತ್ತಮ ಕೊಡುಗೆಗಳು. ಅವರು ಕಳಿಸಿದ ನಾಲ್ಕು ಕವನಗಳಲ್ಲಿ ಎರಡನ್ನು ಪ್ರಕಟಿಸುತ್ತಿದ್ದೇನೆ. ಮತ್ತೆರಡನ್ನು ಮುಂದಿನ ತಿಂಗಳುಗಳಲ್ಲಿ ನಿರೀಕ್ಷಿಸಿ
ಪ್ರಸ್ತುತ ಕಾರ್ಯ ನಿಮಿತ್ತವಾಗಿ Isle of White ನಲ್ಲಿ ನೆಲೆಸಿರುವ ಇವರನ್ನು ಅನಿವಾಸಿಗೆ ತುಂಬು ಹೃದಯದಿಂದ ಸ್ವಾಗತಿಸೋಣ-ಸಂ
ಕಾವ್ಯ ಕನ್ನಿಕೆ
ಭಾವವೇ ಜನಕ ಭಾಷೆಯೇ ಜನನಿ
ಇವರೀರ್ವರ ಸವಿ ದಾಂಪತ್ಯದ ಶುಭ
ಮಿಥುನದಿಂದ ಸ್ಪುರಿಸಿ, ಜೀವವಂಕುರಿಸಿ
ಬೆಳೆದು ಅಭಿವ್ಯಕ್ತಿಯ ಪ್ರಸವವಾಗಿ
ಜನಿಸಿ ಬಂದವಳು ನಾನು, ಕಾವ್ಯ ಕನ್ನಿಕೆ
ಅನಂತವನು ಇನಿತುಮಾಡಿ
ಬ್ರಹ್ಮ ಜ್ನಾನವನು ಕವಿ ಜ್ನಾನವು ಶೋಧಿಸಿ
ವಿಶ್ವವಾಣಿಯ ಅಖಂಡ ಭಂಡಾರದಲಿ
ಅಣುರಣಿತ ಆವಿಷ್ಕಾರ ನಾನು, ಕಾವ್ಯ ಕನ್ನಿಕೆ
ಅರಿತವಗೆ ಒಲಿದೆ, ಒಲಿದವರ
ಮನದಲ್ಲಿ ಮನೆಮಾಡಿ ನಲಿದೆ
ಅಂದೂ, ಇಂದೂ, ಎಂದೆಂದೂ ಕವಿಜೀವ
ಜೀವಗಳಲ್ಲಿ ಆಜೀವ ಜವ್ವನೆ ನಾನು ಕಾವ್ಯ ಕನ್ನಿಕೆ!!
————————————————– ——————————————-ವಿಜಯ್ ನರಸಿಂಹ
ಮಡದಿಯ ಹಾದಿ
ಮೆಲ್ಲ ಮೆಲ್ಲನೆ ನಕ್ಕಾಳು ನನ್ನ ಮಡದಿ
ನಾ ಹಿಡಿದು ಹೊಂಟೇನದರ ಹಾದಿ
ಮುಡಿ ಏರಿ ಕುಳಿತಿತ್ತು ಮಲ್ಲಿಗೆ
ನನ್ನ ಕರೆದು ಸೆಳೆಯುತ್ತಿತ್ತು ಮೆಲ್ಲ ಮೆಲ್ಲಗೆ
ಮಲ್ಲಿಗೆಯ ಸವತಿಯಂತೆ ಕೈಯ ಬಳೆ ಮಾಡುತಿದ್ವ ಕೇಳು ಸದ್ದು
ಮೂಗು ಮಲ್ಲಿಗೆಹಿಂದೆ, ಕಿವಿ ಬಳೆಯ ಹಿಂದೆ ಓಡುತಿದ್ವ ಎದ್ದು ಬಿದ್ದು
ಮೆಲ್ಲ ಮೆಲ್ಲ ನಕ್ಕಾಳು ನನ್ನ ಮಡದಿ
ನಾ ಹಿಡಿದು ಹೊಂಟೇನದರ ಹಾದಿ
ಬಳೆಯ ಸವತಿಗೆ ಗೆಜ್ಜೆ ಸಖಿಯರು ದನಿಯಗೂಡಿಸಿದರು ಆಗ
ಇಷ್ಟು ಸಾಲದೇನು ನನ್ನ ಮನವು ಓಡಲು ಅವಳ್ಹಿಂದೆ ಬೇಗ ಬೇಗ
ಅಷ್ಟರಲ್ಲಿ ಎಲ್ಲ ಸವತಿಯರು ಮೌನತಾಳಿದರು
ಇವರೊಡತಿ ಬಂದಳು ನೂಕಿ ಎಲ್ಲರ, ಏರಿ ಮೊಗದ ತೇರು
ಬಲ್ಲಿರೇನು ಅವಳಾರು ಎಂದು?
ಅವ್ಹಳವಳೆ ಲಜ್ಜೆ
ಅವ್ಹಳಿಂದೆ ಹೆಜ್ಜೆ, ನಾ ಹೀಗೆ ಹಿಡಿದು ಹೊಂಟೇನದರ ಹಾದಿ
ಮೆಲ್ಲ ಮೆಲ್ಲನೆ ನಕ್ಕಾಳು ನನ್ನ ಮಡದಿ
ನಾ ಹಿಡಿದು ಹೊಂಟೇನದರ ಹಾದಿ ……….
————————————————————–-ವಿಜಯ್ ನರಸಿಂಹ
ತುಂಬಾ ಸುಂದರ ಕವನಗಳು ವಿಜಯ ಅವರೇ.ಕಾವ್ಯಕನ್ನಿಕೆಯ ಹುಟ್ಟು, ಅವಳ ಚಿರಯೌವನದ ಗುಟ್ಟು ಕಾವ್ಯಮಯವಾಗಿ ಮೂಡಿ ಮನದಲೊಂದು ಉಲ್ಲಾಸದ ಸೆಲೆ ಹರಿಸಿದೆ.
ಆಹಾ ಆ ಮಡದಿಯ ನಗು,ಅವಳ ಮುಡಿಯ ಮಲ್ಲಿಗೆಯ ರಾಗ ರಂಗಿಗೆ ಕೈಬಳೆಗಳ ತಾಳ,ಗೆಜ್ಜೆಯ ಸರಗಮ,ಲಜ್ಜೆಯ ತನನ ,ಮನ ಹುಚ್ಚಾಗಿ ಎದ್ದೋಡದಿದ್ದೀತೆ ಅವಳ ಹಿಂದೆ ಹಿಂದೆ !? ಶೃಂಗಾರರಸ ಭರಿತ ಸುಂದರ ಕವನ.ನಿಮ್ಮ ಇನ್ನಷ್ಟು ಕವನಗಳ ರಸಾಸ್ವಾದನೆಗೆ ಕಾಯುತ್ತಿರುವೆ.ಅಭಿನಂದನೆಗಳು ವಿಜಯ ನಾರಸಿಂಹ ಅವರೇ.
ಸರೋಜಿನಿ ಪಡಸಲಗಿ
LikeLiked by 1 person
ಸೊಗಸಾಗಿದೆ ವಿಜಯ್ ನರಸಿಂಹ ಅವರೆ ನಿಮ್ಮ ಕವನಗಳು !
LikeLike
ವಿಜಯ್ ನರಸಿಂಹ ಅವರೇ
ಕಾವ್ಯಕ್ಕೆ ಕನ್ನಿಕೆಯ ರೂಪವನ್ನು ಕೊಟ್ಟು ಕವನದ ವಿವಿಧ ಸ್ವರೂಪ ಹಾಗು ವ್ಯಾಪ್ತಿಯನ್ನು ತೋರುವ ಕಲ್ಪನೆ ಸೊಗಸಾಗಿದೆ.
” ಬಾರೆ ನನ್ನ ದೀಪಿಕಾ ಮಧುರ ಕಾವ್ಯ ರೂಪಕ”ಎಂಬ ಇನ್ನೊಂದು ಕವನದ ಸಾಲನ್ನು ನೆನಪಿಗೆ ತರುವಂತಿದೆ. ಭಾಷೆ ಉತ್ಕೃಷ್ಟವಾಗಿದೆ ಹಾಗೆ ಕುವೆಂಪು ಅವರ ಕವನ ಓದಿದ ಅನುಭವ ಮೂಡುತ್ತದೆ.
ನಿಮ್ಮ ಎರಡನೇ ಕವನದಲ್ಲಿ ಹೆಂಗಸಿನ ಅಂದ ಚಂದ ಮತ್ತು ಲಜ್ಜೆಗಳ interface ಮತ್ತು ಪೈಪೋಟಿ ಚೆನ್ನಾಗಿ ಮೂಡಿಬಂದು ಬೇಂದ್ರೆ ಹಾಗು ಕೇ ಎಸ್ ಏನ್ ಶೈಲಿ ನೆನಪಿಗೆ ಬರುತ್ತಿದೆ
Overall very subtle and refreshing poems.
LikeLiked by 1 person
ಮೊದಲ ಕವನ ಸಾಹಿತ್ಯಕ ಭಾಷೆಯ ಸಂಪತ್ತನ್ನು ನಮ್ಮ ಮುಂದಿಟ್ಟರೆ, ಎರಡನೆಯ ಕವನ ಜಾನಪದ ಆಡು/ಹಾಡು ಭಾಷೆಯಲ್ಲಿದೆ. ವಿಜಯ್ ಅವರೇ ಖಚಿತ ಪಡಿಸಿರುವಂತೆ ಕವನಗಳಲ್ಲಿ ಮುದ್ರಾ ರಾಕ್ಷಸನ ಯಾವ ಹಾವಳಿಯೂ ಇಲ್ಲ. ಹಾಗಾಗಿ ಅಂತಹ ಯಾವ ಪೂರ್ವಾಗ್ರಹ ಪೀಡನೆಯೂ ಇಲ್ಲದೆ, ಕವನಗಳನ್ನು ಅವುಗಳ ರಚನೆಯ ಮೂಲ ರೂಪದಲ್ಲಿಯೇ ಓದಿ ಆನಂದಿಸಿ.
LikeLike
ನಮಸ್ಕಾರ ವಿಜಯ ಅವರಿಗೆ , ಅನಿವಾಸಿ ವೃಂದಕ್ಕೆ ಸ್ವಾಗತ. ಅನಿವಾಸಿಯಲ್ಲಿ ನಿಮ್ಮ ಮೊದಲ ಕೊಡುಗೆಯ ಎರಡು ಕವನಗಳನ್ನು ಮತ್ತೆ ಮತ್ತೆ ಓದಿ ಸವಿದು ಆನಂದಿಸಿದೆ.
ನನ್ನ ಮಟ್ಟಿಗೆ ಇವು ಹೊಸ ಶೈಲಿಯ ರಚನೆ ಎನಿಸುತ್ತದೆ. ಪದಗಳೊಡನೆಯ ಚೆಲ್ಲಾಟ ಅದ್ಭುತ. ಬರುವ ತಿಂಗಳಲ್ಲಿ ಬರುವ ನಿಮ್ಮ ಕವನಗಳನ್ನು ಎದುರುನೋಡುವೆ.
LikeLike
ಕವನಗಳು ಸೊಗಸಾಗಿವೆ. ವಿಜಯ ನರಸಿಂಹ ಅವರೆ ವೇದಿಕೆಗೆ ಸ್ವಾಗತ. “ ಬಳೆಯ ಸವತಿಗೆ, ಗೆಜ್ಜೆ ಸಖಿಯರು ದನಿಗೂಡಿಸಿದರು“ ಸಾಲುಗಳು ಬಹಳ ಚೆನ್ನಾಗಿದೆ. ಬರಹ ಮುಂದುವರೆಯಲಿ. ಇನ್ನೂ ಹೆಚ್ಚಿನ ಕವನಗಳು ಹೊರಬರಲಿ.
ಉಮಾ ವೆಂಕಟೇಶ್
LikeLike
ಸ್ವಾಗತ ವಿಜಯನಾರಸಿಂಹ. ಕವನಗಳು ಸೊಗಸಾಗಿ ಮೂಡಿಬಂದಿವೆ. ನವ ಪ್ರತಿಭೆಗಳು ಅನಿವಾಸಿ ಸೇರುತ್ತಿರುವುದು ತುಂಬಾ ಸಂತೋಷ. ಸಂಪಾದಕಿ ಪ್ರೇಮಲತಾಗೆ ಕೃತಜ್ಞತೆಗಳು. ಅವರಲ್ಲಿ ಒಂದು ಮನವಿ, ಸ್ವಲ್ಪ ಮುದ್ರಾ ರಾಕ್ಷಸನ ಹಾವಳಿ ಕಡಿಮೆ ಆಗುವಂತೆ ಗಮನವಿರಲಿ.
LikeLiked by 2 people
ವಿಜಯ್ ಅವರೇ,
ಅನಿವಾಸಿ ವೃಂದಕ್ಕೆ ಸ್ವಾಗತ. ನಿಮ್ಮ ಎರಡೂ ಕವನಗಳು ಓದುಗರ ಕುತೂಹಲತೆಯಿಂದ ಮನಸ್ಸು ಹಿಗ್ಗಲೂ ಸಾಕು.
ಕನ್ನಡ ಸಾಹಿತ್ಯದಲ್ಲಿರುವ ಅಭಿಮಾನ,ಆಸಕ್ತಿ, ಈ ನಿಮ್ಮ ಕವನಗಳಲ್ಲಿ ತುಂಬಿ ತುಳುಕುತ್ತಿದೆ. ನಿಮ್ಮಿಂದ ಹೊಸ ಹೊಸ ಕವನ, ಲೇಖನ,
ಹೆಚ್ಚಿಗೆ ಬರಲಿ ಎಂದು ಆಶಿಸುವೆ.
ಅರವಿಂದ ಕುಲ್ಕರ್ಣಿ.
LikeLiked by 1 person
ಕವಿತೆಯ ಪರಿಭಾಷೆಯನ್ನೇ ಸುಂದರವಾಗಿ ಬಣ್ಣಿಸಿದ ಕವಿತೆ ಮೊದಲನೆಯದಾದರೆ, ‘ಗಮ ಗಮಾಡಸ್ತಾ’ ಇರುವ ಮಲ್ಲಿಗೆಯ ಹಿಂದೆ ಬಾ ಎಂದು ಆಕರ್ಷಿಸುವಾಕೆಯ ‘ಮೊಗದ ತೇರೇರಿದ’ ಲಜ್ಜೆಯ ಸೊಗಡು, ಎರಡನೆಯ ಕವಿತೆಯಲ್ಲಿದೆ! ಆಹಾ, ವಿಜಯ ನರಸಿಂಹರೇ, ನಿಮ್ಮ ಬೆನ್ನು ಹತ್ತಿ ಹೊಂಟೀನಿ, ಮುಂದಿನ ಕವನಗಳನ್ನೋದಲು!
ಶ್ರೀವತ್ಸ
LikeLiked by 1 person
ಕಾವ್ಯ ರಸಿಕರಿಗೆ ನನ್ನ ನಮನಗಳು
LikeLike