ಹೊಸ ಪರಿಚಯ

ಅರುಣಾ ಮೂಲತಃ ಶಿವಮೊಗ್ಗದವರು . ಕಳೆದ ೧೦ ವರ್ಷಗಳಿಂದ U K ಯ ಶೆಫೀಲ್ಡ್ ನಗರದಲ್ಲಿ ವಾಸವಾಗಿದ್ದಾರೆ. ಇಂಜಿನಿಯರಿಂಗ್ ಪದವಿ ಮುಗಿಸಿದ್ದು ಶಿವಮೊಗ್ಗದಲ್ಲಿ.ನಂತರ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಈಗ ಶೆಫೀಲ್ಡ್ ನ Sheffield Futures ಸಂಸ್ಥೆಯಲ್ಲಿ Project Admin ಆಗಿ ಕೆಲಸ ಮಾಡ್ತಾ ಇರುವ ಅರುಣಾ ಅವರಿಗೆ ಕನ್ನಡ ಭಾಷೆಯ ಬಗ್ಗೆ ಯಾವಾಗಲು ಅಭಿಮಾನ ಜಾಸ್ತಿ.
ಕನ್ನಡ ದಲ್ಲಿ ಅವರು ಬರೆದಿರುವ ಮೊದಲ ಲೇಖನ ಇದು . ಮೊದಲ ಪ್ರಯತ್ನದಲ್ಲೆ ಉತ್ತಮ ಲೇಖನವನ್ನು ಕನ್ನಡದಲ್ಲಿ ಬರೆದು ಚಿತ್ರ ಸಮೇತ ಕಳಿಸಿಕೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು. ಬರಹದಲ್ಲಿ ಅವರಿಗೆ ಉಜ್ವಲ ಭವಿಷ್ಯವನ್ನು ಕೋರೋಣ. ಅನಿವಾಸಿ ವೇದಿಕೆ ಈ ಬಗೆಯಲ್ಲಿ ಕನ್ನಡ ಲೇಖಕ/ಕಿ ಯರನ್ನು ಸೃಷ್ಟಿಸಬಲ್ಲದಾದರೆ ಅದಕ್ಕಿನ್ನ ಸಾರ್ಥಕತೆ ಬೇರೊಂದಿಲ್ಲ–ಸಂ
ಅವತ್ತು ಒಂದು ದಿನ ಹೀಗೆ ತರಕಾರಿ ತರೋಕೆ ಹೋಗಿದ್ದೆ, ಒಂದು ಫೋನ್ ಕಾಲ್ ಬಂತು, ಯಾರಪ್ಪಾ ಅಂತ ಫೋನ್ ರಿಸೀವ್ ಮಾಡಿದೆ .ಪ್ರೇಮಲತಾ ಕೇಳಿದ್ರು “ಅನಿವಾಸಿ” ಗೆ ಒಂದು ಬರಹ ಬರೀತೀರಾ ಅಂತ. ಹೂಂ ಅಂತ ಏನೋ ಅಂದೆ, ಆದ್ರೆ ಏನಪ್ಪಾ ಬರೀಬೇಕು ಅನ್ನೋ ಚಿಂತೆ ಶುರು ಆಯಿತು. ಯೋಚನೆ ಮಾಡಿ ಮಾಡಿ ಏನೂ ಹೊಳೀತಿಲ್ಲ ಏನಪ್ಪಾ ಮಾಡೋದು ಅಂತ ಇದ್ದಾಗ , ನನ್ನ ಸ್ನೇಹಿತರು ಯಾರೋ ಬುಗುರಿ ತಂದು ಕೊಟ್ಟಿದ್ರು ,ಅದನ್ನ ಕೈಯಲ್ಲಿ ಹಿಡ್ಕೊಂಡು ‘ಅಮ್ಮ ಇದನ್ನ ಹೇಗೆ ಆಡೋದು’ ಅಂತ ನನ್ನ ಮಗ ಶಿವಾಂಶ್ ಕೇಳಿದ…..ಬುಗುರಿ ಅಂದ ತಕ್ಷಣ ಹೊಳೆದಿದ್ದು ನನ್ನ ಅಜ್ಜಿ ಮನೆ ಅನುಭವಗಳು ಹಾಗು ನನ್ನ ಬಾಲ್ಯದ ಆಟಗಳು.ನಾನು ಚಿಕ್ಕವಳು ಇದ್ದಾಗ ಆಡ್ತಾ ಇದ್ದ ಆಟಗಳ ಹಾಗೂ ಅವುಗಳ ಲಾಭಗಳ ಬಗ್ಗೆ ಒಂದು ಚಿಕ್ಕ ವಿಶ್ಲೇಷಣೆ ಬರಿಯೋಣ ಅಂತ ಅನ್ಸ್ತು.
ಆಹಾ ಎಂಥಾ ದಿನಗಳು ಅವು ,ನೆನಸಿಕೊಂಡ್ರೆ ಮನಸ್ಸಿಗೆ ಏನೋ ಸಂತಸ ಹಾಗು ಮುದ. ನನ್ನ ಅಜ್ಜಿ ಮನೆ ಸೊರಬ, ಅಪ್ಪಟ ಮಲೆನಾಡು. ಮೂರು ಹೊತ್ತು ಸೋ ಅಂತ ಸುರಿಯೋ ಮಳೆ, ತಂಪು ಗಾಳಿ, ಘಮ್ ಅಂತ ಮಣ್ಣಿನ ಪರಿಮಳ, ಬಿಸಿ ಬಿಸಿ ಕೆಂಡದಲ್ಲಿ ಸುಟ್ಟಿರೋ ಅಕ್ಕಿ ಹಪ್ಪಳ ,ಗೆಣಸು, ಹೀಗೆ ಮಲೆನಾಡಿನ ಬಗ್ಗೆ ಹೇಳ್ತ ಇದ್ದ್ರೆ ವಿಶೇಷಣಗಳು ಸಾಲಲ್ಲ. ಬೇಸಿಗೆ ರಜಾ ಬಂತು ಅಂದ್ರೆ ಅಜ್ಜಿ ಮನೆಗೆ ಹೋಗೋ ತವಕ ಹಾಗು ಸಂತಸ ನನಗೆ .ಎರಡು ತಿಂಗಳು ಅಪ್ಪ ಅಮ್ಮ ಅಕ್ಕ ಯಾರದ್ದೂ ನೆನಪು ಇರ್ತಾ ಇರ್ಲಿಲ್ಲ .ಹಾಗೆ ಕಳಿತಾ ಇತ್ತು ನನ್ನ ರಜಾ ದಿನಗಳು.
ಮಲೆನಾಡಿನ ಮನೆಗಳು ಅಂದ್ರೆ ಹೆಚ್ಚು ಕಮ್ಮಿ ಒಂದೇ ತರಹ ಮಂಗಳೂರು ಹಂಚಿನ ಮನೆಗಳು ,ದೊಡ್ಡ ಅಂಗಳ, ಅಂಗಳದ ತುಂಬಾ ಬೆಳ್ಳಗೆ ಚೆಂದದ ರಂಗೋಲಿ, ಮನೆ ಮುಂದೆ ಜಗಲಿ ಕಟ್ಟೆ. ಮಲೆನಾಡಿನ ಆ ಸೊಗಡು ತುಂಬಾ ಚೆಂದ .ನಾನು ಹಾಗು ನನ್ನ ಮಾಮನ ಮಗಳು ಕಟ್ಟೆ ಸವಿಯೋ ತನಕ ಕಲ್ಲಾಟ ಆಡ್ತಾ ಇದ್ದ್ವಿ .ಈಗಿನ ಕಾಲದ ಮಕ್ಕಳು ಹೇಗೆ ವೀಡಿಯೋ ಗೇಮ್ಸ್ನಲ್ಲಿ ನಾನು ಅಷ್ಟು ಸ್ಕೋರ್ ಮಾಡಿದೆ, ನಾನು ಇಷ್ಟನೇ ಲೆವೆಲ್ ಗೆ ಹೋದೆ ಅಂತ ಬೀಗ್ತಾರೋ ಹಾಗೆ ನಾವು ಯಾರ ಕಲ್ಲು ಎಷ್ಟು ದುಂಡಗೆ ಆಗತ್ತೆ ಅಂತ ಪೈಪೋಟಿ ಮಾಡ್ತ ಇದ್ದ್ವಿ. ಆಗ ಮನೆಯೊರೆಲ್ಲ ಹೇಳೋರು ಅಷ್ಟು ಕಲ್ಲಾಟ ಆಡಿದರೆ ಮಳೆ ಬರಲ್ಲ ಆಡಬೇಡಿ ಅಂತ. ಆಗಿನ ಆಟಗಳು ಆಗಿನ ಮುಗ್ಧತೆ ಈಗಿಲ್ಲ ಅಂತ ತುಂಬಾ ಬೇಸರ ಆಗತ್ತೆ. ಆಧುನಿಕತೆಯ ಘೀಳಲ್ಲಿ ನಾವು, ನಮ್ಮ ಮಕ್ಕಳು ನಮ್ಮ ಮೂಲವನ್ನೇ ಕಳೆದು ಕೊಳ್ತಾ ಇದೀವಿ ಅಂತ ಅನ್ಸತ್ತೆ.
ನನಗೆ ಅಜ್ಜಿ ಮನೆಗೆ ಹೋಗೋಕೆ ಮುಖ್ಯವಾದ ಆಕರ್ಷಣೆ ಅಂದ್ರೆ ಕಾಡಿಗೆ ಹೋಗೋದು ,ಕವಳೆ ಹಣ್ಣು ಕಿತ್ತು ತಿನ್ನೋದು. ಈಗಲೂ ನೆಂಸ್ಕೊಂಡ್ರೆ ಬಾಯಲ್ಲಿ ನೀರು ಬರತ್ತೆ .ಮಾಮ ನನ್ನ ಹಾಗೂ ನನ್ನ ತಂಗೀನ ಬಜಾಜ್ ಸ್ಕೂಟರ್ ನಲ್ಲಿ ಕಾಡಿಗೆ ಕವಳೆ ಹಣ್ಣು ಮತ್ತು ಚಳ್ಳೆ ಕಾಯಿ ಕಿತ್ತುಕೊಂಡು ಬರೋಕೆ ಕರ್ಕೊಂಡು ಹೋಗ್ತಾ ಇದ್ದ್ರು. ನಮಗೆ ಕಾನಲ್ಲಿ ಅಲೆದಾಡೋದು ಅಂದ್ರೆ ಅದೇನೋ ದೊಡ್ಡ ಉಡುಗೊರೆ ಸಿಕ್ಕಿರೋ ಅಷ್ಟು ಸಂತಸ . ಕಾಡಿಗೆ ಹೋದ್ಮೇಲೆ ಮಾಮ ಮುತ್ತಲ ಎಲೆಯಲ್ಲಿ ಒಂದು ಬಟ್ಟಲು ಮಾಡಿ ಕೊಡ್ತಾ ಇದ್ದ್ರು. ಮುಳ್ಳು ಅಂತಾನೂ ನೋಡದೆ ನಾವು ಕವಳೆ ಕಾಯಿ, ಹಣ್ಣು ಎಲ್ಲಾ ಕಿತ್ತಿದ್ದೋ ಕಿತ್ತಿದ್ದು. ಅದರಲ್ಲಿ ಬಟ್ಟಲಿಗೆ ಹೋಗಿದ್ದು ಕಮ್ಮಿ , ಜಾಸ್ತಿ ಹೊಟ್ಟೆಗೆ ಹೋಗ್ತಾ ಇತ್ತು.ಪೂರ್ಣಚಂದ್ರ ತೇಜಸ್ವಿ ಅವರ “ಪರಿಸರದ ಕಥೆ” ಪುಸ್ತಕದಲ್ಲಿ ಇರೋ ತರಾನೆ ಇರ್ತ ಇತ್ತು ನನ್ನ ಅನುಭವಗಳು. ನಿಸರ್ಗದ ಮಧ್ಯ ಬೇಳಿಯೊ ಸುಖನೇ ಬೇರೆ.
ನಮ್ಮದೆಲ್ಲ ಆಗ “Organic” ಆಟಗಳು ಅಂತಾನೆ ಹೇಳಬಹುದು. ಹುಣಸೆ ಬಿಕ್ಕದಲ್ಲಿ , ಬಳೆ ಚೂರುಗಳಲ್ಲಿ , ಪರಕೆ ಕಡ್ಡಿಗಳಲ್ಲಿ, ಎಲೆ, ಕಲ್ಲು , ಮಣ್ಣು ,ಹೀಗೆ ಇನ್ನೂ ಹಲವಾರು ನೈಸರ್ಗಿಕ ವಸ್ತುಗಳಲ್ಲಿ ಆಟ ಆಡ್ತಾ ಇದ್ದ್ವಿ. ಹಾಗಾಗಿ ಇತ್ತೀಚಿನ ದಿನಗಳ ಹಾಗೆ ಆಟ ಆಡುವುದರಿಂದ ದುಷ್ಪರಿಣಾಮಗಳು ಆಗ್ಬಹುದು ಅನ್ನೋದೇ ಇರ್ಲಿಲ್ಲ. “ಆಡು ಮುಟ್ಟದ ಸೊಪ್ಪಿಲ್ಲ” ಅನ್ನುವ ಗಾದೆ ಮಾತಿನ ಹಾಗೆ ನಾವು ಆಡದೆ ಇರೋ ಆಟಗಳಿಲ್ಲ . ಈಗಲೂ ಕಣ್ಣು ಮುಂದೆ ಕಟ್ಟಿದ ಹಾಗಿದೆ ನಾವು ಆಡ್ತಾ ಇದ್ದದ್ದು. ನಾನು ಆಗ್ಲೇ ಹೇಳಿದ ಹಾಗೆ ವಿಧ ವಿಧವಾದ ಆಟಗಳನ್ನ ಆಡ್ತಾ ಇದ್ದ್ವಿ. ಅದ್ರಲ್ಲಿ ಒಂದು ಬಳೆ ಆಟ. ಈ ಆಟದಲ್ಲಿ ಚೂರಾಗಿರೋ ಬಳೆ ತುಂಡುಗಳನ್ನ ಕೈ ಮೇಲೆ ಹಾಕಿ, ಪ್ರತಿಸ್ಪರ್ಧಿ ಯಾವ ಬಳೆ ಚೂರನ್ನ ಹೇಳ್ತಾರೋ ಆ ಚೂರನ್ನ ಬಿಟ್ಟು ಬೆರೆಲ್ಲದನ್ನ ಕೆಳಗೆ ಹಾಕಬೇಕಿತ್ತು. ಇದೆ ತರಹದ ಇನ್ನೊಂದು ಆಟ “ಕಡ್ಡಿ ಆಟ” ,ಇದು ಹೇಗೆ ಅಂದ್ರೆ ಒಣಗಿರೋ ತೆಂಗಿನ ಗರಿಯನ್ನ ಸ್ವಲ್ಪ ಸ್ವಚ್ಛಗೊಳಿಸಿ ೧೨ ಕಡ್ಡಿಗಳನ್ನ ತಯ್ಯಾರು ಮಾಡಿ ಅದರಲ್ಲಿ ಒಂದು ಕಡ್ಡಿ ಸ್ವಲ್ಪ ಉದ್ದ ಇರ್ತ ಇತ್ತು. ರಾಜ ಕಡ್ಡಿ ಅಂತ ಹೆಸ್ರು ಅದಕ್ಕೆ. ರಾಜ ಕಡ್ಡಿ ಮಿಸುಕಾಡದೆ ಇರೋ ಹಾಗೆ ,ಒಂದೊಂದೇ ಕಡ್ಡಿಗಳನ್ನ ಎತ್ತಬೇಕಿತ್ತು.ಇಂತಹ ಆಟಗಳಿಂದ ಸೈರಣಿಕೆ, ಏಕಾಗ್ರತೆ ಎಲ್ಲ ಬೆಳೀತಾ ಇತ್ತು ಅನ್ನೋದು ನನ್ನ ಅಭಿಪ್ರಾಯ.
ನಾವುಗಳು ಮನೆ ಒಳಗೆ ಇರ್ತಾ ಇದ್ದದ್ದೇ ಕಮ್ಮಿ ಅಂತಾನೆ ಹೇಳಬಹುದು. ಮೂರು ಹೊತ್ತು ಹೊರಗೆ ಕಾಲ ಕಳಿತಾ ಇದ್ದ್ವಿ. ಹೀಗಿದ್ದಾಗ ಹೊರ ಜಗತ್ತಿನ ವಡನಾಟ ಜಾಸ್ತಿ ಆಗ್ತಾ ಇತ್ತು, ಸ್ನೇಹಿತರೇ ಆಗ್ಬೇಕು ಅಂತಿಲ್ಲ ,ಯಾರನ್ನ ಬೇಕಾದ್ರೂ ಸೇರಿಸಿಕೊಂಡು ಆಟ ಆಡೋ ಮನೋಭಾವ ನಮ್ಮಲ್ಲಿ ಇತ್ತು. ಈಗಿನ ವಿಪರ್ಯಾಸ ಏನಪ್ಪಾ ಅಂದ್ರೆ ,ಮನೆಯ ಮೂರು ಗೋಡೆಯ ಮಧ್ಯ ಕೂತು ಜಗತ್ತಿನ ಯಾವುದೋ ಮೂಲೆಯಲ್ಲಿ ಕಂಡು ಕಾಣದೆ ಇರೋ ವ್ಯಕ್ತಿಯ ಜ್ಯೋತೆ ವೀಡಿಯೋ ಗೇಮ್ಸ್ ಆಡುವುದು. ಪ್ರಪಂಚ ಜ್ಞಾನ, ಆತ್ಮೀಯತೆ ಎಲ್ಲಾ ಜನರ ಖುದ್ದು ಸಂಪರ್ಕದಿಂದ ಬರುತ್ತೆ ಹೊರೆತು ಮನೆಯ ಮೂರು ಗೋಡೆ ಮಧ್ಯೆ ಕೂತ್ಕೊಂಡು ಅಲ್ಲ. ಗೋಲಿ, ಚಿನ್ನಿ ದಾಂಡು,ಲಾಗೋರಿ, ಬುಗುರಿ, ಗಾಳಿಪಟ ಹಾರಿಸೋದು ಹೀಗೆ ಇನ್ನೂ ತರಾವರಿ ಆಟಗಳು ನಮ್ಮದು. ಈ ತರಹದ ಆಟಗಳನ್ನ ಆಡ್ತಾ ಇದ್ದಿದ್ದರಿಂದ “motor skills” , “hand eye coordination” ಇನ್ನೂ ಹಲವಾರು ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅನೂಕೂಲವಾಯಿತು ಅನ್ನೋದು ನನ್ನ ಅನಿಸಿಕೆ. ಇತ್ತೀಚಿನ ಮಕ್ಕಳು ಈ ತರಹದ ಆಟಗಳನ್ನ ಆಡಿದ್ದೇ ನೋಡಿಲ್ಲ ನಾನ. ಯಾವಾಗ್ಲೂ Ipad ಅಥ್ವಾ smart phone ನಲ್ಲಿ ಆಟ, ಬರೀ ಒಂದೇ ಬೆರಳಿನ ಉಪಯೋಗ ನೋಡಿದ್ರೆ Charles Darwin ನರ Theory of Evolution ನೆನಪಾಗಿ, ಮುಂದಿನ ಪೀಳಿಗೆಯ ಬಗ್ಗೆ ಭಯ ಆಗತ್ತೆ.
ಇನ್ನೂ ಆಟಗಳನ ಬಿಟ್ಟು ಅಜ್ಜಿ ಮನೆಯ ಬೇರೆ ಅನುಭವಗಳ ಬಗ್ಗೆ ಹೇಳ್ಬೇಕು ಅಂದ್ರೆ ಮೊದಲು ನೆನಪಾಗೋದು,ಮಾವಿನ ಮರ. ನನ್ನ ಅಜ್ಜಿ ಮನೆಯ ಹಿತ್ತಲಲ್ಲಿ ಎರಡು ದೊಡ್ಡ ದೊಡ್ಡ ಮಾವಿನ ಮರಗಳಿದ್ದ್ವು. ನನಗೆ ಅವೆರೆಡು ಮರಗಳು ಬರೀ ಮರಗಳಲ್ಲ ಒಂಥರಾ ಸ್ನೇಹಿತರ ತರಹ ಅನ್ಸ್ತಾ ಇತ್ತು. ಈ ಮರಗಳು ಇಲ್ಲದೆ ಅಜ್ಜಿ ಮನೆನ ನೆಂಸ್ಕೊಳೋಕೆ ಸಾಧ್ಯನೇ ಇರ್ತ ಇರ್ಲಿಲ್ಲ. ಆ ಮರಗಳ ನೆರಳಿನ ತಂಪು ಈಗ್ಲೂ ಹಿತ ಕೊಡತ್ತೆ ಮನಸ್ಸಿಗೆ. ಒಂದು ಮಜವಾದ ಸಂಗತಿ ನೆನಪಾಗತ್ತೆ ಮಾವಿನ ಮರ ಅಂದ್ರೆ, ಈ ಎರಡು ಮಾವಿನ ಮರಗಳಲ್ಲಿ ಒಂದು ಗಿಣಿ ಮೂತಿ ಮಾವಿನ ಕಾಯಿ ಮರ. ಗಿಣಿ ಮೂತಿ ಮಾವಿನ ಕಾಯಿ ಅಂದ್ರೆ ಕೇಳಬೇಕೆ ಯಾರಿಗಾದ್ರೂ ಬಾಯಲ್ಲಿ ನೀರು ಬರತ್ತೆ. ನನ್ನ ಅಜ್ಜಿ ಮನೆ ಹತ್ತಿರ ಒಂದು ಶಾಲೆ ಬೇರೆ ಇತ್ತು, ಇನ್ನು ಮುಗೀತಲ ಕಥೆ . ಪ್ರತಿದಿನ ಶಾಲೆ ಬಿಟ್ಟ ಮೇಲೆ ಮಕ್ಕ್ಳು ಕಲ್ಲು ತೂರೊದು,ನಾವು ಅದಕ್ಕೆ ಶಾಲೆ ಬಿಡುವ ಮೊದಲೇ ಕಾವಲು ನಿಲ್ತ ಇದ್ದ್ವಿ. ಯಾರು ಕಲ್ಲು ಹೊಡೀತಾರೋ ಅವರನ್ನ ಹಿಡಿಯೋಕೆ ಪ್ರಯತ್ನ ಮಾಡೋದು. ಈ ಕೆಲಸವನ್ನ ಅದೆಷ್ಟು ಹೆಮ್ಮೆ ,ನಿಷ್ಠೆ ಇಂದ ಮಾಡ್ತ ಇದ್ದ್ವಿ ಅಂದ್ರೆ ನೋಡಿದವ್ರು ಮೆಚ್ಚ್ಕೋಬೇಕು. ನನಗೆ ತಿರುಗಿ ಸ್ಪಂದಿಸದೆ ಇರೋ ಒಂದು ಮರದ ಬಗ್ಗೆ ನನಗೆ ಅಷ್ಟು ಒಲವು ಇರೋಕೆ ಕಾರಣ , ಆಗಿನ ನಿಷ್ಕಲ್ಮಶ ವಾತಾವರಣ ಹಾಗು ನಿಸರ್ಗದ ಜ್ಯೋತೆಗೆ ನನಗಿದ್ದ ಒಡನಾಟ ಅನ್ಸತ್ತೆ. ಈಗಲೂ ನೆನಪಿದೆ ಇರುವೆ ಸಾಲು ಹೋಗ್ತಾ ಇದ್ದ್ರೆ ,ನಾನು ಅದಕ್ಕೆ ದಾರಿ ಮಾಡಿ ಕೊಡ್ತಾ ಇದ್ದೇ. ಅಮ್ಮ ಯಾವಾಗ್ಲೂ ಸಕ್ಕರೆ ಅಥವಾ ಪುಟಾಣಿ ಕೊಡ್ತಾ ಇದ್ದ್ರು ಹೋಗಿ ಆ ಸಾಲಿಗೆ ಹಾಕೋಕೆ. ಆ ಇರುವೆಗಳು ಸಕ್ಕರೆ ಹರಳನ್ನ ಎತ್ತಿಕೊಂಡು ಹೋಗ್ತಾ ಇದ್ರೆ ಅದನ್ನೇ ಘಂಟೆ ಗಟ್ಟಲೆ ನೋಡ್ತಾ ಕೂತ್ಕೊತಾ ಇದ್ದೇ. ಅದೇ ಇಂದಿನ ಮಕ್ಕಳಿಗೆ ಏನೇ ಹೊಸ ಆಟದ ಸಾಮಾನು ಕೊಡಿಸಿದ್ರು ಕೇವಲ ೫ ನಿಮಿಷ ,ಆಮೇಲೆ ಅಮ್ಮ “Bore” ಅಂತ ಶುರು ಮಾಡ್ತಾರೆ. ನನಗೆ ಇದ್ದ ಆ ತರಹದ ವಾತಾವರಣ ನನ್ನ ಮಗನಿಗೆ ಇಲ್ಲ ಅಂತ ತುಂಬಾ ಬೇಸರ ಆಗತ್ತೆ ಕೇಳೊವೊಮ್ಮೆ.
ಮಲೆನಾಡು ಅಂದ ತಕ್ಷಣ “ಯಕ್ಷಗಾನ” ದ ಬಗ್ಗೆ ಹೇಳಿಲ್ಲ ಅಂದ್ರೆ ತಪ್ಪಾಗತ್ತೆ. ಎಂಥಾ ಅದ್ಭುತವಾದ ಅನುಭವ ಅಂತೀನಿ. ಆಹಾ ಕಣ್ಣಿಗೆ ಹಬ್ಬ.’ಇವತ್ತು ರಾತ್ರಿ ಯಕ್ಷಗಾನ ಇದೆ’ ಅಂತ ಮಾಮ ಹೇಳಿದ್ರೆ ಸಾಕು ಕುಶಿನೋ ಕುಶಿ ನಮಿಗೆಲ್ಲ. ಬೇಗ ಬೇಗನೆ ಊಟ ಮಾಡಿ ,ಊರ ದೇವಸ್ಥಾನದ ಹತ್ರ ಹೋಗಿ ಮುಂದಿನ ಸಾಲಿನಲ್ಲಿ ಕೂತ್ಕೊಂಡು ಬಿಡ್ತಾ ಇದ್ದ್ವಿ. ರಾತ್ರಿ ಸರಿಯಾಗಿ ೯.೩೦ ಗೆ ಆರಂಭ ಆಗಿದ್ದು ಬೆಳಗಿನ ಜಾವ ಮುಗಿಯೋದು. ಮನೆಗೆ ಬಂದ ಮೇಲೆ ಎರಡು ಮೂರು ದಿನ ಯಕ್ಷಗಾನದ ಪಾತ್ರಗಳನ್ನೇ ಮೆಲುಕು ಹಾಕ್ತಾ ಇದ್ದ್ವಿ. ಯಾವ 3D /4D ಸಿನಿಮಾನೂ ಅಷ್ಟು ಕುಶಿ ಕೊಡಲ್ಲ, ಅಷ್ಟು ಸವಿತಾ ಇದ್ದ್ವಿ ಯಕ್ಷಗಾನದ ಅನುಭವವನ್ನ. ಇನ್ನು ವಾರದ ಸಂತೆ ಬಗ್ಗೆ ಹೇಳಲೇಬೇಕು ನಾನು. ಏನು ಹುಮ್ಮಸ್ಸು ನಮಗೆ ಸಂತೆಗೆ ಹೋಗೋದು ಅಂದ್ರೆ. ಎಷ್ಟು ವರ್ಣರಂಗೀತವಾಗಿ ಇರ್ತಾ ಇತ್ತು ಸಂತೆ. ಒಂದು ಕಡೆ ಊರಿಂದ ಬೆಣ್ಣೆ ಹೊತ್ತು ತಂದು ಮಾರ್ತಿರೋ ಅಜ್ಜಿಗಳು, ಇನ್ನೊಂದೆಡೆ ಬಣ್ಣ ಬಣ್ಣದ ಅಂಗಿ, ಪೇಟಿಕೋಟ್ ,ಚಡ್ಡಿ ಮಾರ್ತಿರೋರು, ತರತರಾವರಿ ಕಾಳುಗಳನ್ನ ನೋಡಿದ್ದೆ ನಮ್ಮೋರ ಸಂತೇಲಿ ನಾನು. ಜೇಡಿ ಮಣ್ಣಿನಲ್ಲಿ ಮಾಡಿದ ಮಕ್ಕಳ ಅಡುಗೆ ಸಾಮಾನು, ಗಿರ್ಗಿಟ್ಲೆ,ಇನ್ನೂ ಹತ್ತು ಹಲವಾರು ರಂಗು ರಂಗಿನ ಸಾಮಾನುಗಳ ಸಾಗರ ಆಗಿತ್ತು ನಮ್ಮೋರ ಸಂತೆ. ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ ಸಂತೆಯ ಚಿತ್ರಣ. ನಮ್ಮ ಮನೆಗೆ ಧೈಯಣ್ಣ ಅಂತ ಒಬ್ಬ್ರೂ ಬರೋರು. ಅವ್ರು ಸಂತೇಲಿ ಖರೀದಿ ಮಾಡಿದ ಸಾಮಾನು ಹೊತ್ತುಕೊಂಡು ಬರೋಕೆ ಸಹಾಯ ಮಾಡೋಕೆ ಅಂತಾನೆ ಬರ್ತಾ ಇದ್ದ್ರು. ಮಂಗಳವಾರ ಬಂತು ಅಂದ್ರೆ ಸರಿಯಾಗಿ ಬೆಳಗ್ಗೆ ೯ ಘಂಟೆಗೆ ದೊಡ್ಡ ದೊಡ್ಡ ಚೀಲಗಳನ್ನ ಹಿಡ್ಕೊಂಡು ಹಾಜರಿ ಹಾಕ್ತಾ ಇದ್ದ್ರು . ನಾವೂ ಅಷ್ಟೇ ಅವತ್ತು ಬೇಗ ಎದ್ದು ಸಂತೆಗೆ ಹೋಗೋಕೆ ತಯಾರು. ಸಂತೇಲಿ ಮಾಮಾನ ಹಿಂದೆ ಧೈಯಣ್ಣ ,ಅವರ ಹಿಂದೆ ನಾವು ಸಾಲಾಗಿ ಹೋಗೋದು. ಸೌತೆಕಾಯಿ, ಗಜ್ಜರಿ ತಗೊಂಡ್ರೆ ಚೀಲಕ್ಕೆ ಹೋಗೋ ಮೊದ್ಲು ಎರಡು ಸೌತೆಕಾಯಿ ನಮ್ಮ ಕಯ್ಯಿಗೆ ಬರೋದು, ತೊಳಿಯೋದೆಲ್ಲ ದೂರದ ಮಾತು ,ಸೀದಾ ಬಾಯಿಗೆ ಹೋಗ್ತಾ ಇತ್ತು. ಹೀಗೆ ಏನೇ ತಗೊಂಡ್ರು ಮೊದ್ಲು ನಮಗೆ ನೈವೇಧ್ಯ ಆಗ್ತಾ ಇತ್ತು. ಆಗಿನ ಖರೀದಿಯ ಇನ್ನೊಂದು ವಿಶೇಷತೆ ಏನಂದ್ರೆ ಪ್ಲಾಸ್ಟಿಕ್ ಬಳಕೆ ಬಹಳ ಕಮ್ಮಿ, ನಾವು ಏನೇ ಖರೀದಿ ಮಾಡಿದ್ರು ಅದನ್ನ ಒಂದೇ ಚೀಲಕ್ಕೆ ಹಾಕಿಸ್ತಾ ಇದ್ದ್ವಿ, ಅನಂತರ ಮನೆಗೆ ಬಂದು ಹಿತ್ತಲಲ್ಲಿ ಚಿಕಮ್ಮ ಹಾಗು ಅಮ್ಮನ ಜ್ಯೋತೆ ಕೂತು ಎಲ್ಲಾ ತರಕಾರಿ, ಹಣ್ಣುಗಳನ್ನ ಬೇರ್ಪಡಸ್ತಾ ಇರುವಾಗ ಯಾವ ತರಕಾರಿ ಹೇಗೆ? ಎಲ್ಲಿ? ಬೆಳೆಯತ್ತೆ ,ಹೀಗೆ ಇನ್ನೂ ಎಷ್ಟೊಂದು ಮಾಹಿತಿಗಳನ್ನ ತಿಳಿದುಕೊಳ್ಳ್ತ ಇದ್ದ್ವಿ. ಮಕ್ಕಳಲ್ಲಿ ತರಕಾರಿಗಳ ಬಗ್ಗೆ ಒಟ್ಟಾಗಿ ಹಸಿರಿನ ಬಗ್ಗೆ ಆಸಕ್ತಿ ,ಒಲವು ಹುಟ್ಟಿಸಲು ಎಷ್ಟು ಚೆಂದದ ವಿಧಾನ ಅಲ್ವಾ?!
ಹೀಗೆ ಇನ್ನೂ ಹೇಳ್ತಾ ಹೋದ್ರೆ ನನ್ನ ಅಜ್ಜಿ ಮನೆ ಕಥೆಗಳ ಪಟ್ಟಿ ಮುಗಿಯಲ್ಲ. ನಾನು ಆಧುನಿಕತೆಯ ವಾತಾವರಣದಿಂದ ದೂರ, ಪರಿಸರದ ಜ್ಯೋತೆಗೆ ಬೆಳೆಯಲು ಎಷ್ಟು ಪುಣ್ಯ ಮಾಡಿದ್ದೆ ಅನ್ಸತ್ತೆ. ಪ್ರಕೃತಿ ಒಂದು ಅದ್ಭುತ ಪಾಠಶಾಲೆ,ತನ್ನದೇ ಆದ ವಿಸ್ಮಯ ಹಾಗು ಸರಳ ರೀತಿಯಲ್ಲಿ ನಮಗೆ ಎಲ್ಲವನ್ನು ಹೇಳಿಕೊಡತ್ತೆ. ನಾನು ಬಾಲ್ಯದಲ್ಲಿ ಕಲಿತ ಆಟ, ಪಾಠಗಳು ,ಅತ್ಯಾಮೂಲ್ಯವಾದದ್ದು,ನನ್ನ ಅನುಭವಗಳು ಕೇವಲ ನನ್ನ ಸ್ವತ್ತು , ನಾನು ಆಸ್ವಾಧಿಸಿರೋದನ್ನ ಯಾರಿಂದಲೂ ಕಸಿಯಲು ಸಾಧ್ಯ ಇಲ್ಲ ಅನ್ನೋ ಸಂತಸ ನನ್ನದು.ನಾನು ಈ ಲೇಖನ ಬರೆಯುತ್ತಿದ್ದಾಗ ನನಗೆ ಚಿ ಉದಯ್ ಶಂಕರ್ ಅವರ ಸಾಹಿತ್ಯ “ಮುನಿಯನ ಮಾದರಿ” ಚಿತ್ರದ ಹಾಡು ನೆನಪಾಯಿತು
“ಇಂದಿಗಿಂತ ಅಂದೇನೆ ಚೆಂದವು ,ಆಹಾ ಎಂಥ ಸೊಗಸು ಆ ನಮ್ಮ ಕಾಲವು
ಅಂಥ ವಯಸು , ಅಂಥ ಮನಸು ಬಾರದು ಬಯಸಲು ,ದೊರಕದು ಬೇಡಲು
ಯಾರೇ ಬರಲಿ ಯಾರೇ ಇರಲಿ ನಮ್ಮ ಮಾತೆ ನಮ್ಮದು,
ಕಲ್ಲು ಮುಳ್ಳೇನು ಚಳಿ ಗಾಳಿ ಮಳೆಯೇನು ನಮ್ಮ ತಡೆಯೋರು ಯಾರು
ತೋಟ ನಮ್ಮದು, ಬಾವಿ ನಮ್ಮದು ,ಊರು ಕೇರಿ ನಮ್ಮದು
ಮೀನು ನೀರಲ್ಲಿ ,ಮರ ಕೋತಿ ಮರದಲ್ಲಿ ,ಏನು ಆ ನಮ್ಮ ಜೋರು
ಅಂದು ಯಾರಿಲ್ಲ ನಮ್ಮನ್ನು ಹಿಡಿಯೋರು.
ನಾವು ಕಳೆದ ಅಂದಿನ ದಿನಗಳು ಮತ್ತೆ ಹಿಂದಿರುಗಿ ಬರಲಿ, ಇಂದಿನ ಮಕ್ಕಳು ಕೇವಲ ತಂತ್ರಜ್ಞಾನ ಅಷ್ಟೇ ಅಲ್ಲದೆ ಪ್ರಕೃತಿ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ಬೆಳಸಿಕೊಳ್ಳಲಿ ಹಾಗು ಅದರ ಬಗ್ಗೆ ಒಲವು ಮೂಡಿಸಿಕೊಳ್ಳಲ್ಲಿ ಅನ್ನೋದು ನನ್ನ ಆಶಯ .
ಚಿತ್ರ -ಲೇಖನ -ಅರುಣಾ ಹಾಲಪ್ಪ
ಚಿತ್ರ ಕೃಪೆ-Google Images
ಅರುಣಾ, ನಿಮ್ಮ ಲೇಖನ ಬಲು ಇಷ್ಟವಾಯಿತು. ‘ಅನಿವಾಸಿ’ ಬಳಗಕ್ಕೆ ಸ್ವಾಗತ. ಆಟಗಳು ಎಂದರೆ ನನಗೆ ಯಾವಾಗಲೂ ತುಂಬಾ ಪ್ರಾಣ. ನಿಮ್ಮ ಪಟ್ಟಿಗೆ ಇದೂ ಸೇರಬಹುದೇನೋ – ನಾಲ್ಕು ಮನೆ ಕಲ್ಲಾಟ, ಬಚ್ಚಿಟ್ಟು ಕೊಳ್ಳೋ ಆಟ, ಮರಕೋತಿ, ಏರೋಪ್ಲೇನ್, ಗೋಲ್ಡನ್ ಗೇಟ್, ಗೋಲಿ, ಜೂಟಾಟ, ಕುಂಟು ಬಿಲ್ಲೆ… ಪಟ್ಟಿ ದೊಡ್ಡದಾಗುತ್ತಿದೆ. ಈ ಆಟಗಳನ್ನ ಈ ಚಳಿ ದೇಶದಲ್ಲೂ ನಾವು ನಮ್ಮ ಮಕ್ಕಳಿಗೆ ಹೇಳಿಕೊಡುವ ಅಗತ್ಯವಿದೆ. ಊರಿನಲ್ಲಿ ಮಲೆನಾಡಿನ ಹಣ್ಣುಗಳನ್ನ ತಿನ್ನೋ ಹಾಗೆ ಇಲ್ಲಿ ಕೂಡ ನಾನಾ ತರಹದ berri ಗಳಿವೆ. ಇಂಗ್ಲೆಂಡಿನ ಹಳ್ಳಿಗಳಲ್ಲಿ ವಾಸಿಸುತ್ತಿರುವ ನಮ್ಮಂತಹವರಿಗೆ ಮಕ್ಕಳನ್ನ ಕಟ್ಟಿಕೊಂಡು ಮರ ಪೊದೆಗಳನ್ನ ಜಾಲಾಡಿ ಹಣ್ಣುಗಳನ್ನ ತಿನ್ನೋ ಹೇರಳ ಅವಕಾಶಗಳಿವೆ. ಹಾಗೆ ಮಾಡುವ ಮತ್ತು ಪ್ರಕೃತಿಯನ್ನ ಪ್ರೀತಿಸಿ ಕಾಪಾಡುವ ಕಾಳಜಿಯುಳ್ಳ ಅನೇಕ ಗುಂಪುಗಳಿವೆ.
ಗಮನಿಸಿ: ಕನ್ನಡ ಜಾನಪದ ಲೋಕ ಪ್ರಕಟಿಸಿರುವ ‘ದೇಸಿ ಆಟಗಳು’ ಪುಸ್ತಕ ಅತ್ಯಮೂಲ್ಯ.
ವಿನತೆ ಶರ್ಮ
LikeLiked by 1 person
ಅರುಣ ಅವರೆ – ನಿಮ್ಮ ಚೊಚ್ಚಿಲ ಲೇಖನ ಓದಿ ಭಲೇ ಖುಷಿ ಆಯ್ತು . ನಮ್ಮಾಕಿಯಿಂದ ಕೇಳಿದ ಅವಳ ಚಿಕ್ಕಂದಿನ ಆಟ ಹುಡುಗಾಟಗಳೆಲ್ಲಾ ನೀವು ಸೊಗಸಾಗಿ ವರ್ಣಿಸಿದ್ದೀರಿ ಚಿಕ್ಕಂದಿನಲ್ಲಿ ನಮ್ಮ ಮನೆ ಗಂಡು ಪಾಳ್ಯ. ನಮ್ಮ ಆಟಗಳೇ ಬೇರೆ.
ಆದರೂ ಬಾಲ್ಯದ ದಿವಸಗಳ ಹಿಂದಿರುವ ಮುಗ್ಧತೆ , ಅಲ್ಪದಲ್ಲೇ ಪಡುತ್ತಿದ್ದ ತೃಪ್ತಿ , ಸಣ್ಣ ಪುಟ್ಟ ವಿಷಯಗಳಿಗೆ ಆಗುತ್ತಿದ್ದ ಧಿಡೀರ್ ಜಗಳಗಳು, ಅಷ್ಟೇ ವೇಗದಲ್ಲಿ ಮತ್ತೆ ಒಂದಾಗುವುದು ಇತ್ಯಾದಿಗಳೆಲ್ಲಾ ಸಮಾನ ಅಂಶಗಳು.
ಈಗಿನ Electronic Gadget ಹಿಡಿದ ಮಕ್ಕಳು, ಅಂದಿನ Cotton Wool ನಲ್ಲಿ ಸುತ್ತಿ ಬೆಳೆದ ಅನುಕೂಲಸ್ಥರ ಮಕ್ಕಳನ್ನು ನೆನೆದರೆ ಅಯ್ಯೋ ಅನಿಸುತ್ತೆ ಆಲ್ವಾ?
LikeLiked by 1 person
ಅರುಣಾ,
ನಿಮ್ಮ ಲೇಖನ ಬಲು ಇಷ್ಟವಾಯಿತು. ‘ಅನಿವಾಸಿ’ ಬಳಗಕ್ಕೆ ಸ್ವಾಗತ. ಆಟಗಳು ಎಂದರೆ ನನಗೆ ಯಾವಾಗಲೂ ತುಂಬಾ ಪ್ರಾಣ. ನಿಮ್ಮ ಪಟ್ಟಿಗೆ ಇದೂ ಸೇರಬಹುದೇನೋ – ನಾಲ್ಕು ಮನೆ ಕಲ್ಲಾಟ, ಬಚ್ಚಿಟ್ಟು ಕೊಳ್ಳೋ ಆಟ, ಮರಕೋತಿ, ಏರೋಪ್ಲೇನ್, ಗೋಲ್ಡನ್ ಗೇಟ್, ಗೋಲಿ, ಜೂಟಾಟ, ಕುಂಟು ಬಿಲ್ಲೆ… ಪಟ್ಟಿ ದೊಡ್ಡದಾಗುತ್ತಿದೆ. ಈ ಆಟಗಳನ್ನ ಈ ಚಳಿ ದೇಶದಲ್ಲೂ ನಾವು ನಮ್ಮ ಮಕ್ಕಳಿಗೆ ಹೇಳಿಕೊಡುವ ಅಗತ್ಯವಿದೆ. (ಗಮನಿಸಿ: ಕನ್ನಡ ಜಾನಪದ ಲೋಕ ಪ್ರಕಟಿಸಿರುವ ‘ದೇಸಿ ಆಟಗಳು’ ಪುಸ್ತಕ ಅತ್ಯಮೂಲ್ಯ).
ಊರಿನಲ್ಲಿ ಮಲೆನಾಡಿನ ಹಣ್ಣುಗಳನ್ನ ತಿನ್ನೋ ಹಾಗೆ ಇಲ್ಲಿ ಕೂಡ ನಾನಾ ತರಹದ berri ಗಳಿವೆ. ಇಂಗ್ಲೆಂಡಿನ ಹಳ್ಳಿಗಳಲ್ಲಿ ವಾಸಿಸುತ್ತಿರುವ ನಮ್ಮಂತಹವರಿಗೆ ಮಕ್ಕಳನ್ನ ಕಟ್ಟಿಕೊಂಡು ಮರ ಪೊದೆಗಳನ್ನ ಜಾಲಾಡಿ ಹಣ್ಣುಗಳನ್ನ ತಿನ್ನೋ ಹೇರಳ ಅವಕಾಶಗಳಿವೆ. ಹಾಗೆ ಮಾಡುವ ಮತ್ತು ಪ್ರಕೃತಿಯನ್ನ ಪ್ರೀತಿಸಿ ಕಾಪಾಡುವ ಕಾಳಜಿಯುಳ್ಳ ಅನೇಕ ಗುಂಪುಗಳಿವೆ.
ವಿನತೆ ಶರ್ಮ
LikeLike
ಅರುಣಾ ಅವರೇ ತುಂಬ ಸೊಗಸಾದ ಲೇಖನ. ಬಾಲ್ಯ ಜೀವನದ ಸುಂದರ ಸಮಯ !! ಯಾವ ಏಚು ಪೇಚು, ಚಿಂತೆ ಕಾಳಜಿಯಿಲ್ಲದ ಸರಳ ಸುಲಲಿತ ಸಮಯ ಎನ್ನುವುದರಲ್ಲಿ ಎರಡು ಮಾತಿಲ್ಲ !! ನೀವು ಕಲ್ಲಾಟ ಅಂದಿರಲ್ಲ ,ಅದನ್ನ ನಾವೂ ಆಡಿದೀವಿ.ಅದನ್ನೇ ಗಜ್ಜುಗವನ್ನ ಬಳಸಿಯೂ ಆಡ್ತಿದ್ದಿವಿ.ಹುಣಸೇಬೀಜಗಳನ್ನ ಒಂದು ಗುಡ್ಡೆ ,ಚಿಕ್ಕದು ಹಾಕಿ ಅದನ್ನ ಜೋರಾಗಿ ಊದಿ ಗುಡ್ಡೆಯಿಂದ ಈಚೆ ಬಂದ ಬೀಜಗಳನ್ನು ಒಂದೊಂದಾಗಿ ತಕ್ಕೋಬೇಕು.ಅದು ಬೇರೆ ಯಾವ ಬೀಜವನ್ನೂ ಅಲುಗಿಸಬಾರದು.ಅಂದರೆ ಏಕಾಗ್ರತೆ ಎಷ್ಟಿರಬೇಕೂಂತ ಊಹಿಸಿ.ಕುಂಟೆಬಿಲ್ಲೆ ,ಕಳ್ಳ ಪೊಲೀಸ ,ಕಣ್ಣುಮುಚ್ಚಾಲೆ ಒಂದೇ ಎರಡೇ!! ಬರೆದಷ್ಟೂ ಕಡಿಮೆನೇ .ಇನ್ನು ಕವಳೀಹಣ್ಣು ,ಬೋರೇಹಣ್ಣು ,ಪೇರಲಹಣ್ಣು ….ವಾವ್ !!ಇನ್ನೊಂದಿದೆ ಬಾಯಿ ನೀರೂರುತ್ತದೆ ಇಂದಿಗೂ!! ಹುಣಸೇಹಣ್ಣು,ಉಪ್ಪು ಖಾರ ಸಕ್ಕರೆ ಕೂಡಿಸಿ ತಿನ್ನೋದು, ಸೀಸನ್ನಿನಲ್ಲಿ ನೆಲ್ಲಿಕಾಯಿ ಮಾವಿನಕಾಯಿ !! ಎಷ್ಟೋ ಸಲ ಅಮ್ಮನ ಕೈಯಿಂದ ಬೈಸಿಕೊಂಡದ್ದಿದೆ ಅದರ ಸಲುವಾಗಿ.ನಿಜಕ್ಕೂ ಈಗಿನ ಮಕ್ಕಳು ಇವೆಲ್ಲ ಮೋಜು ಮಸ್ತಿಗಳಿಂದ ವಂಚಿತರೇ !!! ಅರುಣಾ ಅವರೇ ನಿಮ್ಮ ಲೇಖನ ನನ್ನನ್ನ ಎಲ್ಲೆಲ್ಲೋ ಅಲೆದಾಡಿಸಿ ಮೈ ಮರೆಸಿಬಿಟ್ತು !! ಛಂದದ ಬರಹಕ್ಕೆ ಅಭಿನಂದನೆಗಳು. ಒಂದು ಕ್ಷಣ ಬಾಲ್ಯದ ನೆನಪುಗಳಲ್ಲಿ ತೇಲಿಸಿ ಆ ದಿನಗಳಿಗೆ ಕೊಂಡೊಯ್ದದ್ದಕ್ಕೆ ಧನ್ಯವಾದಗಳು .
ಸರೋಜಿನಿ ಪಡಸಲಗಿ.
LikeLiked by 1 person
ಅರುಣಾ ಅವರೇ
ನಮಸ್ಕಾರ. ನಿಮ್ಮ ಚೊಚ್ಚಲ ಲೇಖನ ತುಂಬಾ ಚೆನ್ನಾಗಿದೆ. ನಿಮ್ಮ ಬಾಲ್ಯದಲ್ಲಿ ಆಡಿದ ಆಟ,ಕವಳಿ ಹಣ್ಣು ತಿಂದು ಆನಂದ ಪಟ್ಟದ್ದನ್ನು ಓದಿ ನನ್ನ ೭೦ ವರುಷಗಳ ಹಿಂದಿನ ದಿನಗಳು ಮರಕಳಿಸಿದವು! ಧಾರವಾಡದಲ್ಲಿರುವ ಹತ್ತಿಕೊಳ್ಳದ ಕವಳಿ ಹಣ್ಣು ಬಹಳ ಸಿಹಿ,ಕದ್ದು ತಿಂದ ಮಾವಿನ ಹಣ್ಣು ಇನ್ನೂ ಹೆಚ್ಚಿಗೆ ರುಚಿ! ಗಿಲ್ಲಿ ದಾಂಡು, ಖೋಖೋ ,ಗುಂಡಾಟ, ಕಣ್ಣು ಮುಚ್ಚಯಾಟ, ಆಡಿದ್ದು ಇನ್ನು ಸರಿಯಾಗಿ ಜ್ಞಾಪದಲ್ಲಿದೆ. ನೀವು ಹೇಳಿದ ಹಾಗೆ, ಆಗ್ಯೆ ದೈಹಿಕ ಎಕ್ಸರ್ಸೈಜ್ ಇದ್ದಿದ್ದರಿಂದ ಮಕ್ಕಳು ದಷ್ಟ ಪುಟ್ಟರಾಗಿದ್ದರು.ಆದರೆ ಈಗಿನ ಮಕ್ಕಳು ಟಿವಿ,ಐಪ್ಯಾಡ್,ಐಫೋನ್ ,ಅಡ್ಡಿಕ್ಟಿವ್ ಗೇಮ್ಸ್ಗಳಿಗೆ ಮಾರುಹೋಗಿ ಬೊಜ್ಜ ಬೆಳೆಸುತ್ತಿರುವರು. ಇದನ್ನು ತಪ್ಪಿಸುವದು ತಂದೆ ತಾಯಿಯರ ಕರ್ತವ್ವ .
ನಮ್ಮೆಲ್ಲರ ನಚ್ಚಿನ ಅನಿವಾಸಕ್ಕೆ ಸುಸ್ವಾಗತ. ಹೊಸ ಮಿತ್ರರ ಅನುಭವ, ನವೀನ ವಿಚಾರ, ವಿನಾಮೆಗಳಿಂದ ಅನಿವಾಸಿ ಪ್ರಗತಿಯಾಗಲು ಸಾಕು.
ಅರವಿಂದ ಕುಲ್ಕರ್ಣಿ
LikeLiked by 1 person
ಲೇಖನ ಚೆನ್ನಾಗಿದೆ
LikeLike
ಸೊಗಸಡ ಬರೆಹ…;)
LikeLike
ನಿಜವಾಗಿಯೂ ಮೊದಲ ಲೇಖನವಾ ಅನ್ನುವಷ್ಟು ಚೆನ್ನಾಗಿ ಮೂಡಿದೆ ಅರುಣಾ ಅವರೆ! ಅಭಿನಂದನೆಗಳು. ಮತ್ತು ಅನಿವಾಸಿಗೆ ಸುಸ್ವಾಗತ. ಇಷ್ಟು ದಿನ ಎಲ್ಲಿ ಬಚ್ಚಿಟ್ಟುಕೊಂಡಿದ್ದಿರಿ? ನಿಮ್ಮನ್ನು ಬೆಳಕಿಗೆ ತಂದ ಪ್ರೇಮಲತಾ ಅವ್ರಿಗೂ ಅಭಿನಂದನೆಗಳು. ಬಾಲ್ಯದ ಆಟ, ಅನುಭವ ಮತ್ತು ಸವಿ ನೆನಪುಗಳನ್ನು ಹಂಚಿಕೊಂಡಿದ್ದಿರ. ಊರಲ್ಲಿ ಬೆಳೆದ ನಮ್ಮೆಲ್ಲರ ಅನುಭವ ಅದೇ ಅಲ್ಲವೆ. Needless ‘Sterile’ sterility, Health and Safety rules, ಇವೆಲ್ಲ ಬಾಲ್ಯದ ಮುಗ್ಧ ಸಂತೋಷವನ್ನು ದೋಚಿಕೊಂಡಿವೆ ಈ ದೇಶದ ನಮ್ಮ ಮಕ್ಕಳಿಗೆ ಸಿಗದಂತೆ. ಇಲ್ಲಿ ಕ್ರಿಸ್ಟಾಫರ್ ರಾಬಿನ್ನಿನ ಮಕ್ಕಳ ಆಟ ”ಫೂ ಸ್ಟಿಕ್ಸ್” (Pooh Sticks) ಇಂಟರ್ನ್ಯಾಶನಲ್ ಚಾಂಪಿಯನ್ಶಿಪ್ ವರೆಗೆ ಪ್ರಸಿದ್ಧಿಯಾಯಿತು. (ನ)ನಿಮ್ಮ ಕಲ್ಲಾಟ ಆ ಜನಪ್ರಿಯತೆಯ ಮಟ್ಟಕ್ಕೆ ಏರದಿದ್ದರೂ ಅದಕ್ಕೂ ಹೆಚ್ಚು ಸಂತೋಷ ಕೊಡುತ್ತಿದೆ ಸಾವಿರಾರು ಮಕ್ಕಳಿಗೆ ಭಾರತದಾದ್ಯಂತ ಇಂದಿಗೂ! ನೀವಂದಂತೆ:”ನಾನು ಆಸ್ವಾಧಿಸಿರೋದನ್ನ ಯಾರಿಂದಲೂ ಕಸಿಯಲು ಸಾಧ್ಯ ಇಲ್ಲ ಅನ್ನೋ ಸಂತಸ ನನ್ನದು.” ಮುಂದಿನ ತಲೆಮಾರಿನವರ ಸಂತೋಷ ಅವರಿಗೇ ಬಿಟ್ಟದ್ದು? ನಮ್ಮಗಳ ಪ್ರತಿಕ್ರಿಯೆ ನಿಮಗೆ ಇನ್ನಷ್ಟು ಬರೆಯಲು ಈಗಾಗಲೇ ಹುರಿದುಂಬಿಸಿರ ಬೇಕು. ’ಅನಿವಾಸ” ಎದುರು ನೋಡುತ್ತಿದೆ!
LikeLike