ದಶವರ್ಷಗಳ ಸಂಭ್ರಮದಲ್ಲಿ ಗಗನರಾಣಿ –ಯೋಗೀಂದ್ರ ಮರವಂತೆ

           ಹೊಸ ಪರಿಚಯ

yogi 4
ಯೋಗೀಂದ್ರ ಮರವಂತೆ

ಯೋಗೀಂದ್ರ  ಮರವಂತೆ,  ಕಳೆದ ಹನ್ನೆರಡು  ವರ್ಷಗಳಿಂದ ಇಂಗ್ಲಂಡ್ ನ ಬ್ರಿಸ್ಟಲ್ ಎನ್ನುವ ಊರಿನ ವಿಮಾನ ತಯಾರಿಕೆಯ   ಕಂಪನಿ  ಏರ್ಬಸ್ ಅಲ್ಲಿ  ವಿಮಾನ  ತಂತ್ರಜ್ಞರಾಗಿ  ಉದ್ಯೋಗಮಾಡುತ್ತಿದ್ದಾರೆ.  ಇವರ ಬರಹಗಳು ಪ್ರಜಾವಾಣಿ ,ಸುಧಾ ಮತ್ತು ಉದಯವಾಣಿ ಪತ್ರಿಕೆಗಳಲ್ಲಿ  ಪ್ರಕಟ ಆಗುತ್ತಿರುತ್ತವೆ .ಮೊದಲು ಕೆಂಡಸಂಪಿಗೆ ಎನ್ನುವ ಅಂತರ್ಜಾಲ  ಪತ್ರಿಕೆಯಲ್ಲಿ ನಿಯಮಿತವಾಗಿ ಅಂಕಣ ಬರೆಯುತ್ತಿದ್ದರು. ಬರವಣಿಗೆಯ ಜೊತೆಗೆ  ಯಕ್ಷಗಾನ ಮತ್ತೆ ಸಾಕ್ಶ್ಯ ಚಿತ್ರ ನಿರ್ಮಾಣದಲ್ಲಿ ಕೂಡ ವಿಶೇಷ  ಆಸಕ್ತಿ ಹೊಂದಿದ್ದಾರೆ. ಬ್ರಿಟನ್ ಆದ್ಯಂತ ಹಲವು ಯಕ್ಷಗಾನ ಪ್ರದರ್ಶನಗಳನ್ನು  ನೀಡಿದ್ದಾರೆ .  ಬ್ರಿಸ್ಟಲ್ ಅಲ್ಲಿ ಪತ್ನಿ ಸೀಮಾ ಅಡಿಗ ಮತ್ತೆ ಮಗಳು ಸುನಿಧಿಯರ ಜೊತೆಗೆ ನೆಲೆಸಿದ್ದಾರೆ .

ಯು.ಕೆ. ಯಲ್ಲಿರುವ ಒಬ್ಬ ಪ್ರತಿಭಾವಂತ ಬರಹಗಾರರು, ಕಲಾವಿದರು ಮತ್ತು  ಏರೋನಾಟಿಕಲ್ ಪರಿಣತರಾದ ಇವರ ಲೇಖನಗಳನ್ನು ಅನಿವಾಸಿ ಬಳಗದ ಹಲವರು ಓದಿದ್ದರೂ, ಅನಿವಾಸಿಯಲ್ಲಿ ಇವರು ಬರೆಯುತ್ತಿರುವುದು ಇದೇ ಮೊದಲು-ಸಂ

 

____________________________________________________________________________________________

yogi 1
ದಶವರ್ಷಗಳ ಸಂಭ್ರಮದಲ್ಲಿ ಗಗನರಾಣಿ

ಬ್ರಿಟನ್ ಅಲ್ಲಿ  ವಿಮಾನಹತ್ತಿ   ದುಬೈ ಅಥವಾ ಕತಾರ ಮೂಲಕ ಭಾರತವನ್ನು ತಲುಪುವವರಿಗೆಲ್ಲ ಇವಳ  ಪರಿಚಯ ಇರಬೇಕಲ್ಲ! ಇವಳನ್ನು ಇವಳು ಎನ್ನುವಷ್ಟು ಇವಳಲ್ಲಿ  ಸಲಿಗೆ ನನಗೆ . ಕಳೆದ ಹನ್ನೆರಡು  ವರ್ಷ ಇವಳನ್ನು ಹತ್ತಿರದಿಂದ ನೋಡಿದ್ದೇನೆ ಇವಳಿಗಾಗಿ ದುಡಿದಿದ್ದೇನೆ . ಇವಳ ಮಟ್ಟಿಗೆ ಇದು ಸಂಭ್ರಮದ  ಹೊತ್ತು ; ಅಂದರೆ ಗಗನಲೋಕದಲ್ಲಿ ವಿಮಾನವೊಂದರ   ದಶಮಾನೋತ್ಸವ ಆಚರಣೆ ನಡೆಯುತ್ತಿರುವ ಹೊತ್ತು . ಪ್ರತಿ ಪ್ರಯಾಣದಲ್ಲಿ 500 ಕ್ಕೂ ಹೆಚ್ಚು ಜನರನ್ನು ಸಾಗಿಸಬಲ್ಲ ಜಗತ್ತಿನ ಅತಿ ದೊಡ್ಡ ನಾಗರಿಕ   ವಿಮಾನ, ಆಕಾಶದ ರಾಣಿ ಎಂದು ಕರೆಸಿಕೊಳ್ಳುವ  A380 ವಿಮಾನ ಹತ್ತು ವರ್ಷಗಳ ಸೇವೆಯನ್ನು  ಪೂರೈಸಿದೆ.  ಈಗ ಸುಮಾರು  200 A380 ವಿಮಾನಗಳು ಸೇವೆಯಲ್ಲಿವೆ ; ಮುಂದಿನ ಐದು ವರ್ಷಗಲ್ಲಿ ಇನ್ನೂ 100 ವಿಮಾನಗಳು ಸೇವೆ ಆರಂಭಿಸಲಿವೆ . ವಿಮಾನಗಳನ್ನು  ಹೆಣ್ಣಿಗೆ ಹೋಲಿಸುವ ಪದ್ಧತಿ ಎಂದು ಆರಂಭ ಆಯಿತೋ ಗೊತ್ತಿಲ್ಲ , ಆದರೆ ಇವತ್ತಿನ ನಮ್ಮ ಕಥೆಯ  ನಾಯಕಿ  A380 ವಿಮಾನದ ಕಥೆ ಹೇಳಬೇಕೆಂದರೆ ಯುರೋಪಿಯನ್ನರ ಅಮೆರಿಕನ್ನರ ಎಂದೂ ಮುಗಿಯದ ಸರಸ-ವಿರಸಗಳ   ಪುರಾಣದಿಂದಲೇ ಆರಂಭಿಸಬೇಕು  !

ಎರಡನೆಯ ಮಹಾಯುದ್ಧ ಮುಗಿದು ಸುಮಾರು ಮೂವತ್ತು ವರ್ಷಗಳ  ನಂತರ , ಹಳೆಯ ಕಹಿಯೋ ಅಲ್ಲ ಹೊಸ ಹುಳಿಯೋ ಯುರೋಪಿಯನ್ನರು  ಅಮೆರಿಕಕ್ಕೆ ಸಡ್ಡು ಹೊಡೆಯಬೇಕೆಂದುಕೊಂಡರು. ಅಮೇರಿಕಾದಲ್ಲಿ ಬೋಯಿಂಗ್ ಆಗಲೇ ಗಟ್ಟಿಯಾಗಿ ಬೆಳೆದಿತ್ತು .ವಿಮಾನ ತಂತ್ರಜ್ಞಾನ ಅಮೆರಿಕದವರಿಗೆ ಮಾತ್ರ ಮೀಸಲಲ್ಲ ಅಂದು ತೋರಿಸಲು ಯುರೋಪಿಯನ್ನರು   ಶಬ್ದದ ವೇಗಕ್ಕಿಂತ ಎರಡು ಪಾಲು ಹೆಚ್ಚಿನ ವೇಗದಲ್ಲಿ ಹಾರುವ ವಿಮಾನವನ್ನು ಹಾರಿ ಬಿಟ್ಟರು  .ಫ್ರೆಂಚ್ ರು ಮತ್ತು ಆಂಗ್ಲರು ಸೇರಿ 1970 ರಲ್ಲಿ   ಕಾಂಕರ್ಡ್ ಎನ್ನುವ ವಿಮಾನ ವಿನ್ಯಾಸಗೊಳಿಸಿದ್ದು ,ಹಾರಿಸಿದ್ದು ,ಅದು  ಮೂರು ದಶಕಗಳ  ಸೇವೆ ಸಲ್ಲಿಸಿ,2003ರಲ್ಲಿ  ತನ್ನ ಸೇವೆಯಿಂದ ನಿವೃತ್ತ ಆಗಿರುವುದು ಈಗ ಇತಿಹಾಸ. ಕಾಂಕಾರ್ಡ್ ಸೇವೆ ಆರಂಭಿಸಿದ ನಂತರ   ಆಂಗ್ಲರು ಫ್ರೆಂಚರು ಜೊತೆಗೆ ಜೆರ್ಮನರು ಹಾಗುಸ್ಪೇನ್  ನವರು ಸೇರಿ ವಿಮಾನ ತಯಾರಿಕೆಯ  ಯುರೋಪಿಯನ್ ಒಕ್ಕೂಟ ಸ್ಥಾಪಿಸಿಕೊಂಡರು ಅದರ ಹೆಸರು ಏರ್ಬಸ್ (Airbus). ಏರ್ಬಸ್ ಬೆಳೆದು ಬೆಳೆದು  ಅವರ ಉದ್ದೇಶಗಳು ಫಲಿಸುವಂತೆ ,ನಾಗರಿಕ  ವಿಮಾನ ಮಾರುಕಟ್ಟೆಯ ಅರ್ಧ ಭಾಗವನ್ನು ಅಮೇರಿಕನ್ನರಿಂದ ಕಸಿದುಕೊಂಡರು. ಮಹತ್ವಾಕಾಂಕ್ಷೆಗಳ ಸಮರವೂ ಒಂದು ನಶೆಯೇ ಇರಬೇಕು. ಈ ನಶೆಯನ್ನು ಏರಿಸಿಕೊಂಡದ್ದು ಬರಿಯ ಎರಡು ವಿಮಾನ ತಯಾರಿಸುವ  ಕಂಪೆನಿಗಳಲ್ಲ , ಅವುಗಳ ಹಿಂದಿರುವ ದೇಶಗಳ ಸರಕಾರಗಳು ಕೂಡ .

yogi 2

ವಿಶ್ವ ಸಂಸ್ಥೆಯ ಅಂತರಾಷ್ಟ್ರೀಯ ವ್ಯಾಪಾರಗಳ ನ್ಯಾಯಾಲಯದಲ್ಲಿ (W.T.O ) ಬೋಯಿಂಗ್ ಮತ್ತು ಏರ್ಬಸ್ ಗಳು, ಸರಕಾರಗಳು ಹೊಸ ವಿಮಾನಗಳ ತಯಾರಿಗೆ ಸಬ್ಸಿಡಿ ಅಥವಾ ಸಾಲ ನೀಡಬಾರದು ಅದು ಎರಡು ವಿಮಾನ ಕಂಪೆನಿಗಳ ಸ್ಪರ್ಧೆ ಆಗದೆ ದೇಶಗಳ ಸರಕಾರಗಳ ನಡುವಿನ ಸ್ಪರ್ಧೆ ಆಗುತ್ತದೆ ಎಂದೆಲ್ಲ ಉದಾತ್ತ ಮೌಲ್ಯಗಳ ಮಾತಾಡುತ್ತಾ ಒಬ್ಬರು ಇನ್ನೊಬ್ಬರ ಮೇಲೆ ಅಪಾದನೆ ಮಾಡಿ ಕೇಸು ಹಾಕಿಕೊಂಡು  ಕುಳಿತಿದ್ದಾರೆ .W.T.O ದ ಕಟಕಟೆಯಲ್ಲಿ ನಡೆಯುತ್ತಿರುವ ಸುದೀರ್ಘವಾದ ಕೇಸು ಇದು.  ಅಮೆರಿಕದ ಮತ್ತು ಯುರೋಪಿನ ದೇಶಗಳ ಸರಕಾರಗಳು ತಮ್ಮ ವಿಮಾನ ಉದ್ಯಮದ ಹಿತಾಸಕ್ತಿಗೋಸ್ಕರ ಸಾಲ ಸಬ್ಸಿಡಿ ನೀಡುವುದು ನಿಲ್ಲಿಸಿಲ್ಲ, ನಿಲ್ಲಿಸುವುದೂ ಇಲ್ಲ. ಯಾಕೆದಂರೆ ಮೇಲ್ನೋಟಕ್ಕೆಕಟ್ಟಿ ಬೀಸುತ್ತಿರುವುದು  ಏರ್ಬಸ್ ಮತ್ತು ಬೋಯಿಂಗ್ ಮಧ್ಯವಾಗಿ ಕಂಡರೂ ಹಿಂದೆ ನಿಂತು ಶಕ್ತಿ ತುಂಬುತ್ತಿರುವವರು ಆಯಾಯ ದೇಶದ ಸರಕಾರಗಳೇ .  ೨೦೦೦ನೆಯ ಇಸವಿಯ ಆಸುಪಾಸಿಗೆ ಏರ್ಬಸ್ ಕಂಪೆನಿಯಲ್ಲೊಬ್ಬರಿಗೆ  ಜಗತ್ತಿನ ಅತ್ಯಂತ ದೊಡ್ಡ ವಿಮಾನವನ್ನು  ತಾವು ಯುರೋಪಿಯನ್ನರು  ತಯಾರಿಸಬೇಕೆಂಬ ಬೆಳಗಿನ ಜಾವದ ಕನಸು ಬಿತ್ತು.ಆ ಕಾಲದಲ್ಲಿ  ಬೋಯಿಂಗ್  ಕಂಪೆನಿಯ ‘747’ ವಿಮಾನವೇ ಜಗತ್ತಿನ ಅತಿ ದೊಡ್ಡ ನಾಗರಿಕ ವಿಮಾನ ಆಗಿತ್ತು . ಯುರೋಪಿನ ಮಿತ್ರರ ಕನಸಿಗೆ ಅಮೆರಿಕನ್ನರು ನಕ್ಕು, ಈ ಯುರೋಪಿನನವರು ಬರೇ ಭಾವವೇಶದಲ್ಲೇ ಬದುಕುವವರು ಎಂದು   ನುಡಿದರು. ಜಗತ್ತಿನ ಅತಿ ದೊಡ್ಡ (ಡಬಲ್ ಡೆಕ್ಕರ) ವಿಮಾನ ಮಾಡಿದರೆ ಅದಕ್ಕೆ   ಮಾರುಕಟ್ಟೆಯಲ್ಲಿ ಯಶಸ್ಸು ಸಿಕ್ಕೀತೆ  ಇಲ್ಲವೇ, ಸುರಿದ ಬಿಲಿಯನ್ ಗಟ್ಟಲೆ ಯುರೋ ಹಣ ವಸೂಲಿ ಆದೀತೆ ಇಲ್ಲವೇ ಎಂದು ಶಾಂತ ಮನಸ್ಸಿನಿಂದ ಯೋಚಿಸದೆ ,ಬರಿಯ  ಹೃದಯದ ಬಡಿತವನ್ನು  ಆಲಿಸಿ  ಏರ್ಬಸ್  ತೆಗೆದುಕೊಂಡ ನಿರ್ಧಾರ ಅದಾಗಿತ್ತು.

 

ಹತ್ತಿಪ್ಪತ್ತು ಸಾವಿರ  ಜನರಿಗೆ , ವಿಮಾನ ಬದುಕಿರುವವರೆಗೆ ಅಂದರೆ ಇಪ್ಪತ್ತು ಮೂವತ್ತು ವರ್ಷಗಳ ಕಾಲ ನಿರಂತರ ಉದ್ಯೋಗ ಒದಗಿಸಬಲ್ಲದು ಮತ್ತು ತಮ್ಮ ಪತಾಕೆಯನ್ನು ಇನ್ನೂ ಮೇಲೆ ಹಾರಿಸಬಲ್ಲುದು  ಎಂದು ಫ್ರಾನ್ಸ್ ,ಜರ್ಮನಿ, ಬ್ರಿಟನ್ , ಸ್ಪೇನ್ ಸರಕಾರಗಳು ಈ ನಿರ್ಧಾರಕ್ಕೆ ಹೂಂ ಗುಟ್ಟಿದ್ದೆ ತಡ, ಜಗತ್ತಿನ ಅತಿ ದೊಡ್ಡ ವಿಮಾನದ ಕೆಲಸ ಆರಂಭ ಆಯಿತು. ಏರ್ಬಸ್ ಸಂಸ್ಥೆಯ ಎಲ್ಲ ವಿಮಾನಗಳ ಹೆಸರು ‘A3xx’ ನಿಂದ ಆರಂಭ ಆಗುತ್ತದೆ. ವಿಮಾನದ ಮೂಗಿನಿದ ಬಾಲದ ವರೆಗೂ ಎಂಭತ್ತು ಮೀಟರು  ಉದ್ದ , ಎಡ ರೆಕ್ಕೆಯ ಇಚೆ ತುದಿಯಿಂದ ಬಲ ರೆಕ್ಕೆಯ ಆಚೆ ತುದಿಗೂ ಎಂಭತ್ತು ಮೀಟರು ಆಗಲ, ಹಾಗಾಗಿ ಒಳ್ಳೆ ಮುಹೂರ್ತ ನೋಡಿ ಯಾರೋ ಈ ಕೂಸಿಗೆ ‘A380′  ಎಂದು ನಾಮಕರಣ ಮಾಡಿದರು. ಅಲ್ಲಿಂದಾಚೆಗೆ ಯುರೋಪಿನ ಸುದ್ದಿ ಮಾಧ್ಯಮಗಳಲ್ಲಿ ಇವಳದೇ ಕಲರವ . ಯುದ್ಧ , ವಿಮಾನಗಳು ಎಂದರೆ ಮಾತೆ ಮುಗಿಸದ ಯುರೋಪಿನ ಜನರಿಗೆ  ಈ ವಿಮಾನದ ಬೆಳವಣಿಗೆಯೇ ರೋಚಕ ಅನುಭವ ಆಯಿತು .’A380’  ಬಾಲ್ಯ, ಯೌವ್ವನ ಕಳೆದು , ಇನ್ನೇನು ಇವಳು ಆಕಾಶದಲ್ಲಿ ಮೊದಲ ಬಾರಿ ಹಾರಬೇಕು, ಜಗತ್ತು ನಿಬ್ಬೆರಗಾಗಿ ನೋಡಬೇಕು. ಆ ಸಮಯಕ್ಕೆ ವಿಮಾನ ಜೋಡಣೆಯಲ್ಲಿ ಕೆಲವು  ಅಡಚಣೆಗಳು  ಎದುರಾಗಿ, ವಿಮಾನ ಆಕಾಶಕ್ಕೆ ಏರುವುದು ಮುಂದೂಡಲ್ಪಟ್ಟಿತು. ಇಂತಹ ಅಡಚಣೆಗಳು, ಹೊಸ ತರದ ವಿಮಾನದ ತಯಾರಿಯಲ್ಲಿ ಸಾಮಾನ್ಯ. ತೀರ ಕ್ಷುಲ್ಲಕ ಎನ್ನುವ ಕಾರಣಗಳು, ಕಣ್ಣ ತಪ್ಪುಗಳು , ವಿಮಾನದ ಸಿದ್ಧವಾಗುವುದನ್ನು  ವರುಷದಷ್ಟು ತಡ ಮಾಡಬಲ್ಲದು  , ಮುಂದೂಡ ಬಲ್ಲದು. ಅಮೆರಿಕದ ವಿಷಯ ಬಂದರೆ ಒಗ್ಗಟ್ಟಾಗಿ ತಾವು ಯುರೋಪಿಯನ್ನರೆಂದು ಎದೆ ತಟ್ಟಿ ಮಾತಾಡಿದರೂ, ಫ್ರಾನ್ಸ್ ,ಜರ್ಮನಿ, ಬ್ರಿಟನ್ , ಸ್ಪೇನ್ ಗಳನ್ನು .ಅವರ ನಡುವಿನ ತಪ್ಪು ತಿಳುವಳಿಕೆಗಳು, ಸಂಶಯ, ಮುನಿಸು, ಅಸೂಯೆ, ಅಹಂಕಾರ ಮತ್ತೆ ವಿಮಾನ ವಿನ್ಯಾಸದ ಎಂದಿನ ಸವಾಲುಗಳು  ಸಂಕೀರ್ಣತೆಗಳು  ತೊಡಕಾಗಿ ಕಾಡುತ್ತಿರುತ್ತವೆ. ಯುರೋಪಿನ ಭಿನ್ನ ಭಿನ್ನ ಸಂಸ್ಕೃತಿಯ, ಭಾಷೆಯ  ನಾಲ್ಕು ಪಾಲುದಾರ ದೇಶಗಳು ಕೆಲಸ ಹಂಚಿಕೊಂಡು , ಇನ್ನುಳಿದ ಚೂರುಪಾರು ಕೆಲಸಗಳನ್ನು ಸ್ವೀಡನ್, ಜಪಾನ್, ಮಲೇಶಿಯ , ಭಾರತ ಇನ್ನಿತರೆಡೆಗಳಿಗೆ ಹಂಚಿ , ಆಮೇಲೆ ಎಲ್ಲವನ್ನು ಜೋಡಿಸಿ ಪ್ರಯೋಗ ಪರೀಕ್ಷೆಗಳಲ್ಲಿ ಉತೀರ್ಣಗೊಂಡು , ಸರ್ಟಿಫಿಕೆಟ್ ಹಿಡಿದು ಕುಣಿಯುತ್ತ ವಿಮಾನ ಮಾರುಕಟ್ಟೆಗೆ ಬರುವ ಹೊತ್ತಿಗೆ ಬೆವರಿಳಿದಿರುತ್ತದೆ  . ಹಳೆಯ ತಪ್ಪುಗಳ ಬಗ್ಗೆ ಚರ್ಚಿಸುತ್ತ , ಹೊಸ ಪಾಠಗಳನ್ನು ಕಲಿಯುತ್ತ, ಸುರಕ್ಷತೆಯ ಜಪ ಮಾಡುತ್ತಾ ವಿಮಾನಗಳು ರೂಪ ಪಡೆಯುತ್ತವೆ. 2005 ರ ಹೊತ್ತಿಗೆ ನೂರೆಂಟು ವಿಘ್ನಗಳಿಂದ ಪಾರಾಗಿ ಪರೀಕ್ಷಾರ್ಥವಾಗಿ A380 ಮೊದಲ ಬಾರಿಗೆ ಆಕಾಶಕ್ಕೆ ಹಾರಿತು  . ನಂತರ 2007ರಲ್ಲಿ ಸಿಂಗಾಪುರ ಏರ್ಲೈನ್ಸ್ ಮುಖಾಂತರ ತನ್ನ ನಾಗರಿಕ  ಸೇವೆ ಆರಂಭಿಸಿತು.

yogi 3

ತನ್ನ ಪ್ರಸಿದ್ಧಿ, ಗಾತ್ರ , ತೂಕ , ಗಂಬೀರ ಚಲನೆಯಿಂದ ಆಕಾಶಕ್ಕೆ ತಾನೇ ಯಜಮಾನತಿಯಂತೆ ಓಡಾಡುತ್ತಾ ಗಗನಯಾನದ  ಹತ್ತು ವರ್ಷ ಮುಗಿಸಿತು. ಆಕಾಶದಲ್ಲಿ ಹಾರುತ್ತಿರಲಿ ಅಥವಾ ನಿಲ್ದಾಣದಲ್ಲಿ ಇಳಿದಿರಲಿ ,ಇನ್ಯಾವ ವಿಮಾನ ಇವಳ  ಪಕ್ಕಕ್ಕೆ ನಿಂತಿರಲಿ A380 ವಿಮಾನಕ್ಕೆ  ಎಲ್ಲರ ನೋಟವನ್ನು  ಸುಲಭವಾಗಿ ತನ್ನತ್ತ ಆಕರ್ಷಿಸುವ ಶಕ್ತಿ ಇದೆ  .ಈ ಆಕರ್ಷಣೆಗೆ ಕಾರಣ ಇವಳ  ರೂಪವೋ,ಗಾತ್ರವೋ ,ಬಣ್ಣವೋ, ಅಂದವೋ  ಅಥವಾ ಇವಳ ಇತಿಹಾಸವೋ ನೋಡಿದವರು  ಹೇಳಬೇಕು .  ಇವಳ ಜೊತೆ ಒಮ್ಮೆ ಪ್ರಯಾಣ ಮಾಡಿದವರು ಮತ್ತೆ ಇವಳ ಜೊತೆ ಯಾನ ಮಾಡಬೇಕು ಎಂದು ಬಯಸುತ್ತಾರೆ ಎಂದು ಏರ್ಲೈನ್ಸ್ ಅವರು ಹೇಳುತ್ತಾರೆ . ನೆಲ ಬಿಡುವಾಗಲೂ ನೆಲಮುಟ್ಟುವಾಗಲೂ  ಅಲುಗಾಡದೆ ಹೆಚ್ಚು ಸದ್ದು  ಮಾಡದೆ ತನ್ನೊಳಗೆ ಕೂತವರನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾಳೆ ಎನ್ನುವ ಹೆಗ್ಗಳಿಕೆಯೂ ಇವಳದ್ದು. ಪ್ರಯಾಣಿಕರಿಂದ ಹೊಗಳಿಸಿಕೊಳ್ಳುತ್ತ  , ಇವಳ ಮಾಲಕ  ಏರ್ಲೈನ್ಸ್ ಗಳಿಂದ ಮುದ್ದಿಸಿಕೊಳ್ಳುತ್ತ  ಮತ್ತೆ ಈಕೆಯ ಹುಟ್ಟಿಗೆ ಕಾರಣರಾದ   ಯುರೋಪಿಯನ್ ರಿಂದ ಭೇಷ್ ಅನ್ನಿಸಿಕೊಳ್ಳುತ್ತ 10 ವರ್ಷಗಳ ಗಗನಯಾನ ಕಳೆದಿದೆ . ವಿಮಾನಗಳ ವ್ಯವಹಾರ ಎಂದರೆ ಬರಿಯ  ಹೆಗ್ಗಳಿಕೆ ಹೊಗಳಿಕೆಗಳಿದ್ದರೆ ಸಾಲದು. ವಿಮಾನವೊಂದನ್ನು ಹೆಚ್ಚು ಏರ್ಲೈನ್ ಗಳು ಕೊಳ್ಳಬೇಕು ಸೇವೆಗೆ ಬಳಸಬೇಕು .  ಆಗ ಮಾತ್ರ ವಿಮನವೊಂದು ದೀರ್ಘ ಕಾಲ ಸೇವೆಯಲ್ಲಿರುತ್ತದೆ . ಕಳೆದ ಕೆಲವು ವರ್ಷಗಳಿಂದ ಹೊಸ ಗ್ರಾಹಕ ಏರ್ಲೈನ್ ಗಳನ್ನು ಪಡೆಯದ A380 ಯ ಭವಿಷ್ಯ ಸದ್ಯಕ್ಕೆ ತೂಗುಯ್ಯಾಲೆಯಲ್ಲಿದೆ . ಕಳೆದ ವಾರ ನಡೆದ ಪ್ಯಾರಿಸ್ ಏರಶೋ ದಲ್ಲಿ ಎ ೮೦ ವಿಮಾನ ಸಣ್ಣ ಬದಲಾವಣೆ ಗಳೊಂದಿಗೆ ಹೊಸ ರೂಪ ಪಡೆಯಲಿದೆ ಎನ್ನುವ ಘೋಷಣೆ ಆಗಿದೆ . ದಶಕದ ಸಂಭ್ರಮ ಮತ್ತೆ ತನ್ನ ವಿನ್ಯಾಸಕ್ಕೆ ಹೊಸ ಸೇರ್ಪಡೆಗಳೊಂದಿಗೆ A380 ಇನ್ನೂ ಹಲವು ವರ್ಷ ಹಾರುತ್ತಿರಲಿ ; ಗಗನರಾಣಿಯಾಗಿ ಮೆರೆಯುತ್ತಿರಲಿ .

ಚಿತ್ರ ಲೇಖನ   — ಯೋಗೀಂದ್ರ ಮರವಂತೆ

 

4 thoughts on “ದಶವರ್ಷಗಳ ಸಂಭ್ರಮದಲ್ಲಿ ಗಗನರಾಣಿ –ಯೋಗೀಂದ್ರ ಮರವಂತೆ

 1. ಇವಳ ಉದರ ಹೊಕ್ಕಾಗಲೆಲ್ಲ ಅರಿವಿಲ್ಲದೇಯೇ ಅವಳ ಗಾತ್ರ, ತೂಕ, ಬಲಗಳ ಬಗ್ಗೆ ಹೊಳೆದುಬಿಡುತ್ತದೆ. ಈ ವಿಮಾನಗಳಲ್ಲಿ ಪ್ರಯಾಣ ಮಾಡುವಾಗಲೆಲ್ಲ ವಿಮಾನಗಳ ಬಗ್ಗೆ ಅಚ್ಚರಿ ಹುಟ್ಟುತ್ತಿತ್ತು. ಆದರೆ ಅವಳ ಆಗು -ಹೋಗುಗಳ ಈ ಸ್ವಾರಸ್ಯಕರ ಲೇಖನದಿಂದ ಖಂಡಿತಾ ಮನಸ್ಸಿಗೆ ಮುದ ದೊರಕಿತು. ಭವಿಷ್ಯತ್ತು ಅವಳನ್ನು ಇತರೆ ರೂಪಗಳಲ್ಲಿಯಾದರೂ ಉಳಿಸಿಕೊಳ್ಳಲಿ

  Like

 2. ಯೋಗಿಂದ್ರ ರವರ ಸ್ವಾರಸ್ಯಕರ ಲೇಖನದ ಹಿನ್ನೆಲೆಯಲ್ಲಿ ಸರ್ಕಾರದ ಬೆಂಬಲದಿಂದ ಅಮೇರಿಕಾ ಕಂಪನಿಗಳಿಂದ ಯೂರೋಪ್ ಕಂಪನಿಗಳಿಗೆ ಸಾಕಷ್ಟು ಅನ್ಯಾಯವಾಗಿದೆ. .
  ಅದಕ್ಕಿಂತ ಮುಖ್ಯವಾಗಿ ಅಮೆರಿಕನ್ನರ Not Invented Here ಮನೋಭಾವದಿಂದ ತಾಂತ್ರಿಕ ವಿಜ್ಞಾನದ ಏಳಿಗೆಗೆ ಆಗಿರುವ ಅಡಚಣೆ ಶೋಚನೀಯ. ಕಾನ್ ಕಾರ್ಡ,
  ಬೀಟಾ ಮ್ಯಾಕ್ಸ್ ಗಳ ವಾಣಿಜ್ಯ ವಿಫಲತೆ ಇದಕ್ಕೆ ಉದಾಹರಣೆಗಳು.

  Like

 3. “ಇವಳ ಜೊತೆ ಒಮ್ಮೆ ಪ್ರಯಾಣ ಮಾಡಿದವರು ಮತ್ತೆ ಇವಳ ಜೊತೆ ಯಾನ ಮಾಡಬೇಕು ಎಂದು ಬಯಸುತ್ತಾರೆ” ಎಂದು ಬರೆಸಿಕೊಂಡ ಈ ‘ಗಗನ ಸಖಿ’ಯ ವಯಸ್ಸು, ಹಿಂದಿನ ‘ಹಿಸ್ಟರಿ’ ಸ್ವಾರಸ್ಯಕರವವಾಗಿ ಬರೆದು ಯೋಗೀಂದ್ರ ಅವರು ಅವಳ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ! ಅವರಿಗೆ ಅವಳ ಭವಿಷ್ಯವನ್ನೂ ಹೇಳುವಷ್ಟು ಸಲುಗೆಯಿದೆಯಲ್ಲವೇ? ಮುಂದಿನ ಸಲ ಪ್ರಯಾಣ ಮಾಡುವಾಗ ಅವಳ ಸಖ್ಯ ಲಭಿಸೀತು ಎಂದುಕೊಂಡಿದ್ದೇನೆ!

  Like

 4. ಸ್ವಾರಸ್ಯ ವಾಗಿದೆ. ನಾನು ಮೂರು ಸಲಿ ಇದರಲ್ಲಿ ಪ್ರಯಾಣ ಮಾಡಿದ್ದೇನೆ. ಆದರೆ ಇವತ್ತಿನ ಟೆಲೆಗ್ರಾಫ್ ಪ್ರಕಾರ ಈ ೩೮೦ ಯ ಪ್ರೊಡಕ್ಷನ್ ಕಡಿಮೆ ಮಾಡುತ್ತಾರೆ. ಹೆಚ್ಹಿನ ವ್ಯಾಪಾರ ಇಲ್ಲ.
  ಬೋಯಿಂಗ್ ೭೪೭-೪೦೦ ಮೇಲೆ ನ್ಯಾಷನಲ್ ಜಿಯೋಗ್ರಾಫಿಕ್ ಟಿವಿ ನಲ್ಲಿ ಬಹಳ ಒಳ್ಳೆ ಪ್ರೋಗ್ರಾಮ್ ಇತ್ತು, ನೋಡಿ.
  Ramamurthy, Basingstoke

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.