ಹೊಸ ಪರಿಚಯ–ಅಮಿತ ರವಿಕಿರಣ್

ಉತ್ತರ ಐರ್ಲ್ಯಾಂಡಿನ ಬೆಲ್ ಫಾಸ್ಟ್ ನಲ್ಲಿ ನೆಲೆಸಿರುವ ಶ್ರೀಮತಿ ಅಮಿತ ರವಿಕಿರಣ್ ಹುಟ್ಟಿ ಬೆಳದಿದ್ದು ಉತ್ತರ ಕನ್ನಡದ ಮುಂಡಗೋಡದಲ್ಲಿ. ಬೆಳೆದಿದ್ದು ಉಡುಪಿಯ ಸಾಲಿಗ್ರಾಮದಲ್ಲಿ. ಹಿಂದುಸ್ತಾನಿ ಸಂಗೀತದಲ್ಲಿ ಪದವಿ ಮತ್ತು ಜಾನಪದ ಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು ಅವರ ಮತ್ತೊಂದು ತವರಾದ ಧಾರವಾಡದಲ್ಲಿ! ಹಾಡುವುದು ರಂಗೋಲಿ,ಮೆಹೆಂದಿ ವರ್ಲಿ,ಹಸೆ ಯಂಥ ಜನಪದ ಕಲೆಗಳು ಇವರ ಆತ್ಮೀಯ ಸ್ನೇಹಿತರು.ಇವೆಲ್ಲ ಭಾರವಲ್ಲದ ಆದರೆ ಅವರು ಹೋದಲ್ಲೆಲ್ಲ ಜೊತೆಯಾಗುವ ಲಗ್ಗೇಜುಗಳು ಎನ್ನುತ್ತಾರೆ ಅಮಿತಾ! ಅಪ್ರತಿಮ ಹಾಡುಗಾರ್ತಿಯಾದ ಅಮಿತ ಹಲವು ಗಝಲ್ , ಹಿಂದೂಸ್ತಾನ ಸಂಗೀತ ಮತ್ತು ಭಾವಗೀತೆಗಳ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಕರ್ನಾಟಕದ ಜನಪ್ರಿಯ ಸಂಗೀತ ಕಾರ್ಯಕ್ರಮವಾದ ‘ಸರಿಗಮಪ’ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಇವರ ಪ್ರತಿಭೆಯನ್ನು ನೋಡಿದ ಪ್ರಸಿದ್ದ ಹಿರಿಯ ಕಲಾವಿದೆ ಬಿ. ಜಯಶ್ರೀ ಯವರು ಅಮಿತಾರಿಗೆ ಇಪ್ಪತ್ತು ಸಾವಿರ ರೂಪಾಯಿಗೂ ಹೆಚ್ಚಿನ ನಗದು ಬಹುಮಾನ ಕಳಿಸಿ ಮೆಚ್ಚಿಗೆ ,ಅಭಿಮಾನ ವ್ಯಕ್ತಪಡಿಸಿದ್ದು ಅವರ ಹಾಡುಗಾರಿಕೆಗೆ ಸಾಕ್ಷಿ!
ಬರವಣಿಗೆ ನನಗೆ ಇಷ್ಟ ಯಾಕಂದ್ರೆ, ಬರೆದಷ್ಟು ನಾ ಹಗುರ ವಾಗುತ್ತೇನೆ, ಓದುದಿದಷ್ಟು ಉಲ್ಲಸಿತಳಗುತ್ತೇನೆ ಎನ್ನುವ ಇವರು ತಮ್ಮ ಬರವಣಿಗೆಗಳನ್ನೆಲ್ಲ ಸೇರಿಸಿ http://bhavanaloka.blogspot.co.uk ಎನ್ನುವ ಬ್ಲಾಗ್ ನ್ನು ಹೊಂದಿದ್ದಾರೆ. ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ .ಅಡುಗೆಯ ಕಲೆಯಲ್ಲಿ ಆಸಕ್ತಿ ಇರುವ ಇವರದ್ದೊಂದು ಫುಡ್ ಬ್ಲಾಗ್ ಕೂಡ ಇದೆ –http:// tastytwist4all.blogspot.com ತಮ್ಮ ಕಲೆಗಳಿಂದಾಗಿ ಉತ್ತರ ಐರ್ಲ್ಯಾಂಡಿನ ಫೆಲ್ಲೋಶಿಪ್ ಗಳಿಸಿದ್ದಾರೆ. ಭಾರತೀಯ ಕಲೆಗಳನ್ನು ಉತ್ತರ ಐರ್ಲ್ಯಾಂಡಿ ಹರಡುತ್ತಿರುವ ಇವರದು ಹುಮ್ಮಸ್ಸಿನ ಬದುಕು!!-ಸಂ
(ಮಳೆಗೂ ಕವಿತೆಗೂ ಇನ್ನಿಲ್ಲದ ಸಂಬಂಧ!! ಮಳೆ ಹನಿ ನೆಲ ತಾಗಲೂ, ಕವಿಯ ಮನದಲಿ ಅಕ್ಷರದ ಚಿಗುರೊಡೆಯಲೂ ಯಾವ ಕಾಯುವಿಕೆಯೂ ಇರುವುದಿಲ್ಲ! ಪ್ರತಿ ಹನಿ ಧೂಳು ತಾಗುತ್ತಲೇ ಮನದಲ್ಲಿ ಕಸಿವಿಸಿ, ಕನಸುಗಳು,ನೆನಪುಗಳು ತಂತಾನೆ ಹರಡಿಬಿಡುತ್ತವೆ. ಭಾವನೆಗಳ ಸುವಾಸನೆ ಮೇಲೇಳುತ್ತದೆ. ಅವನ್ನೆಲ್ಲ ಹಿಡಿದು ಹಾರ ಮಾಡಿದರೆ ಒಂದು ಜೀವನಗಾಥೆಯೇ ಹೊಸೆದುಕೊಂಡುಬಿಡುತ್ತದೆ. ಅಂತಹ ಒಂದು ಪ್ರಯತ್ನದಲ್ಲಿ ಈ ಕವಿಯತ್ರಿ ಕಂಡಿದ್ದಾದರೂ ಯಾವ ಚಿತ್ರಗಳ ಜಾತ್ರೆ?……ಸಂ.)
ಈಗ ಅಲ್ಲಿ
ಮಳೆ ಶುರುವಾಗಿದೆ .
ಇಲ್ಲಿ ನಾನು ನೆನಪುಗಳ ಕಂಬಳಿ ಹೊದ್ದು
ಮನಸ ಕಾಯುಸುತ್ತಿದ್ದೇನೆ !
ಸಂತೆಯಲ್ಲಿ ೨೦ ರುಪಾಯಿಯ
ನೀಲಿ ಬೆಲ್ಟಿನ
ಪ್ಯಾರಗನ್ ನಂತೆ ಕಾಣುತ್ತದೆಂದು ತೆಗೆದುಕೊಂಡ ಚಪ್ಪಲಿ
ಹಸಿರು ಬಣ್ಣದ ಯುನಿಫಾರ್ಮ್ ಮೇಲೆ
ಫ್ರೀಯಾಗಿ ಇತ್ತ ಕೆಮ್ಮಣ್ಣಿನ ಸಂಡಿಗೆ..
ಮರೆಯಾಲಾದೀತೇ??
ಸೋಮವಾರಕ್ಕು ಈ ಮಳೆಗೂ ಅದೇನು ಅನ್ಯೋನ್ಯತೆ ,ಆ ದಿನ ನಮ್ಮೂರ
ಸಂತೆಯೆಲ್ಲ ಕಪ್ಪು ಬಣ್ಣದ ಪುಟ್ಟ ಪುಟ್ಟ ತೇರು
ಆ ತೇರ ಕೆಳಗೆ ಬದನೆ ,ಬಟಾಟೆ
ಮಾರಲು ಕುಳಿತ ಆ ಯವ್ವನ ಗಲ್ಲದ ಮೇಲಿದ್ದ ಹನಿಗಳು
ಮಳೆನೀರೋ ಕಣ್ಣೀರೋ ????
ಹಾಗೊಂದು ಪ್ರಶ್ನೆಗೆ ಉತ್ತರವಿರದು.
ಸಂತೆ ದಾರಿಯಲಿ ಕುಳಿತ
ಬುಟ್ಟಿ ಯಿಂದ ಇಣುಕುವ
ಮೆಣಸು,ಚವಳಿ ಅಗೆಗಳು..
ಕಬ್ಬಿಣ ಮಾರುವ ಹುಡುಗನ ಮೆತ್ತಗಿನ ನಜರು ,
ಮಡಿಕೆ ಮಾರಲು ಕುಳಿತ ಆ ಪುಟ್ಟ ಹುಡುಗಿ ಮೇಲೆ
ಬೆನ್ನಿಗೆ ಹಾಕಿಪ ಪಾಟೀಚೀಲದಿಂದ
ಹೊಸ ಪಟ್ಟಿ ,ಪುಸ್ತಕ ತೊಯ್ದ ಘಮ ..
ಆಘ್ರಾಣಿಸಿದಷ್ಟು ಹಿತ.
ಒಣಗದ ನೀರ್ಜೀವ ಬಟ್ಟೆಗಳ ಕುರಿತು
ಅಮ್ಮನ ಸಹಸ್ರಾರ್ಚನೆ.
ಅವು ನಮ್ಮಂತೆ.! ಕೇಳಿ ಸುಮ್ಮನಿರುತ್ತವೆ
ಒಣಗುವುದಿಲ್ಲ..
ಡೇರೆ ಗಡ್ಡೆ ಚಿಗುರದು, ಜವಳು ಬಂದಿದೆ ,
ಅರಶಿನ ಎಲೆಗಳು ಪಂಚಮಿ ಹಬ್ಬದೊಳಗೆ
ಚಿಗುರಿದರೆ ಸಾಕು.!
ಎದುರುಮನೆಯವರು ಅಣಬೆ ತಿಂದರೋ ಏನೋ!
ಈ ಬಾರಿ ಕಳಲೆ ಸಿಗುತ್ತೋ ಇಲ್ವೋ !
ಮರಕೆಸ ಹೋದಸಾರಿ ಇದ್ದ ಮರದಲ್ಲೇ ಚಿಗುರಿದ್ರೆ ಪುಣ್ಯ..!!!!
ಈ ಬಾರಿ ದಿನಸಿಗಿಂತ ಆಸ್ಪತ್ರೆ ಬಿಲ್ಲೆ ಹೆಚ್ಚು ಆಗುತ್ತೆ,,
ಈ ಥರ ಮಳೆಲಿ ನೆಂದು ಬಂದರೆ
ಹಾಳಾದ್ ಮಳೆ..
ಮಕ್ಕಳು ಶಾಲೆಯಿಂದ ಬರೋವಾಗ್ಲೆ ಬರುತ್ತೆ..
ಇದೆಲ್ಲ ಅಮ್ಮನ ಉವಾಚ!
ಯಾರೋ ಹೊಸ ಹುಡುಗಿ..
ಹಳದಿ ಬಣ್ಣದ ಲಂಗ
ಮೇ ಫ್ಲವರ್ ಜೂನ್ ನಲ್ಲಿ ಅರಳಿದಂತಿದೆ.
ಇವಳೇ ಇರಬಹುದ ಆಕೆ??ನನ್ನ ಕನಸಿನ ಹುಡುಗಿ!
ಕಾಲೇಜ್ ಮೆಟ್ಟಿಲೇರಿದ
ಜಸ್ಟ್ ಪಾಸು ಹುಡುಗನ ತಲೆಯಲ್ಲಿ
ಹಳದಿ ಹಳದಿ
ಹೊರಗೆ ಹನಿಯುವ ಹೂ ಮಳೆ .
ಆಕೆ ,
ಛೇ !!ಆ ಲೆಕ್ಚರರ್ರು ಅದ್ಯಾಕೆ ಅಷ್ಟು ಚಂದ
ಬೇಕಂತಲೇ ಪೆನ್ನು ಮರೆತು ಬರ್ತಾಳೆ..
ಇರುವದ್ದಕ್ಕಿಂತ ಸ್ಮಾರ್ಟ್ ಆಗಲು ತುಡಿಯುತ್ತಾಳೆ
ಆಕೆ ಕೊಡೆ ತರದ ದಿನ ,ಲೆಕ್ಚರರ್ ಕೊಡೆ ತಂದದಿನ
ಅವ ತನ್ನ ಹಿಂದೆ ಬರುವಾಗ ಬರಬಾರದೇ ಈ ಮಳೆ .
ಆ ದಿನ ಬರುತ್ತದೆ ಮಳೆ
ಆತ ಕರೆದೂ ಇರುತ್ತಾರೆ,
ಎಂದೂ ಇಲ್ಲದ ಮುದ್ದಿನಿಂದ ಅಪ್ಪ ಬೈಕ್ ತಂದು
ಪಕ್ಕದಲ್ಲಿ ನಿಲ್ಲಿಸಿ , ಕೂತ್ಕೋ ಅಂತಾರೆ!!
ಹಸಿ ಮಣ್ಣ ವಾಸನೆ
ಬಟ್ಟೆಗೂ ಹಸಿ ವಾಸನೆ
ಬಾಡಿ ಸ್ಪ್ರೇ ಹೋಗಿ ರೂಂ ಪ್ರೆಷ್ನರ್,
ಹಾಕಿದರು ಹೋಗದು..
ದೇವರೇ ದಯವಿಟ್ಟು ಈ ತಿಂಗಳನ್ನು
ಸ್ಕಿಪ್ಪ್ ಮಾಡು ಶಾಪ ಕೊಡಬೇಡ..
ಎಂದು ಬೇಡಿದಷ್ಟು
ಬೇಗ ಬರುತ್ತದೆ ಅದು ಅಭ್ಯಾಗತನಂತೆ!
…ನೆನಪು ಗಳು ನಿಲ್ಲುತ್ತಿಲ್ಲ..
ಇಲ್ಲಿನ ಮಳೆಗೆ ಊರಿನ ಮಳೆಯ ಚಲುವಿಲ್ಲ
ಎಂದು ಕಿಟಕಿ ಪಕ್ಕ ಹಬೆಯಾಡುವ ಕಾಫಿ ಹಿಡಿದು
ನಿಲ್ಲುತ್ತೇನೆ!!
ಮಳೆಯಲ್ಲೂ ಎಂಥ ಚಲುವು ಕಾಣಿಸುತ್ತೆ ನಿನಗೆ???
ಎಂದು ಕೀಟಲೆ ಮಾಡಿ ನಗುವ ಇವರ
ಕುರಿತು ಬರೆದ ಅದೆಷ್ಟೋ ಪ್ರೇಮ ಪತ್ರಗಳು..
ಮತ್ತೆ ಮತ್ತೆ ಓದುವಾಗ ಆ ಮಳೆಗಾನ ದ ಹಿನ್ನೆಲೆ
ಧಿಂ ಎಂದು ನೆನಪಾಗುತ್ತದೆ..
ಮಲ್ಹಾರ ರಾಗ ಬಳಗ
ಹಳೆಮನೆಯ ಹಿತ್ತಲಲ್ಲಿ ಕಹಿ ಕಂಚಿ ಹೂವಿನ ಕಂಪು
ಬಚ್ಚಲ ಹಂಡೆಗೆ ಹಾಕಿದ ಹಸಿ ಸೌದೆ .
ಗೆಣಸು,ಹಲಸ ಹಪ್ಪಳ ಸುಟ್ಟ ವಾಸನೆ.
ಒಂದೇ ಎರಡೇ
ಹೀಗೇ ….
ನನ್ನ ನೆನಪುಗಳ ಪರಿಷೆ ಸಾಗುತ್ತಲೇ ಇರುತ್ತದೆ.
-ಅಮಿತ
ಚಿತ್ರಗಳು- ಗೂಗಲ್ ಇಮೇಜಸ್
ಧನ್ಯವಾದಗಳು. ತುಂಬಾ ಖುಶಿಯಾಯಿತು!!! ತಮ್ಮೆಲ್ಲರ ಪ್ರತಿಕ್ರಿಯೆ, ನನ್ನನ್ನು ಮತ್ತೆ ಮತ್ತೆ ಬರೆಯುವಂತೆ ಪ್ರೇರೇಪಿಸಿತು. ಅನಿವಾಸಿ ಎಂಬ ಸಾರಸ್ವತ ಲೊಕಕ್ಕೆ ಪರಿಚಯಿಸಿದ ಪ್ರೇಮಲತಾರಿಗೆ ನಾ ಸದಾ ಋಣಿ.
ನಲ್ಮೆ
ಅಮಿತಾ ರವಿಕಿರಣ್
LikeLike
ಮಳೆ, ಮಾರುಕಟ್ಟೆ, ಮನೆ ಇವುಗಳ ಸುತ್ತ ಗಿರಕಿ ಹೊಡೆಯುತ್ತ ಎಷ್ಟೊಂದು ವಿಚಾರಗಳ ಮೇಲ್ಮೈ ಸವರಿದಂತೆ ಮಾಡಿ ಆ ಜೀವಗಳ ತಳಮಳದ ಅಂತರಾಳಕ್ಕಿಳಿಯುವ ಈ ನವ್ಯ ಕಾವ್ಯ ಬಹಳ ಆತ್ಮೀಯವಾಗಿದೆ. ಮಳೆ ಬಡಿದೆಬ್ಬಿಸುವ ನಮ್ಮ ನಾಡಿನ ದೇಶೀ ಭಾವನೆಗಳನ್ನು ಹಸಿ ಹಸಿ ಯಾಗಿ ಹಿಡಿದಿಡುವಾಗಲೂ, ಉದ್ದವಾದ ಕಾವ್ಯದ ಬಗ್ಗೆ ಸ್ವಗತ ಉದ್ಗಾರವೆಳೆದು ಈ ಮಳೆಯ ಮಾಯೆಯನ್ನು ಚೆನ್ನಾಗಿ ಅಭಿನಂದಿಸಲಾಗಿದೆ. ನಿಮ್ಮಿಂದ ಮತ್ತೂ ಬರಹಗಳು ಬರಲಿ.
LikeLiked by 1 person
ನಮಸ್ಕಾರ ಅಮಿತ್ ಅವರಿಗೆ. ನಿಮ್ಮ ಕವನದ ಎಲ್ಲಾ ಸಾಲುಗಳಲ್ಲೂ ಪ್ರತಿಯೊಂದು ಮಳೆಯಲ್ಲಿ ನೆನೆದು ಒದ್ದೆಯಾಗಿದೆ. ಆದರೆ ಈ ಮಳೆಗಾಲದ ದೃಶ್ಯಗಳ ಬಗ್ಗೆ ನಿಮ್ಮ ಮನಸ್ಸಿನ ನೆನಪಿನ ಸಾಲುಗಳಂತೂ ಬಹಳ ಬೆಚ್ಚಗಿವೆ. ಊರಿನ ಮಳೆಯ ವಾಸನೆ ಇಲ್ಲಿನ ಮಳೆಯ ಹನಿಗಳಿಗಿಲ್ಲ ಎನ್ನುವುದು ನಮ್ಮ ಮನದ ಭಾವನೆಯೇ! ಕೇಶವ ಅವರ ನೀಲುಗಳು ಕವನದಲ್ಲೂ, ಅದರ ಸೃಷ್ಟಿಗೆ ಉತ್ತೇಜನ ಪಡೆದ ಕನ್ನಡದ ಬಂಡಾಯ ಕವಿ ಲಂಕೇಶರ ಅಭಿಪ್ರಾಯವು ಇದೆ ಎನ್ನುವುದು ಬಹಳ ಸ್ವಾರಸ್ಯಕರ ಸಂಗತಿ. ಅನಿವಾಸಿ ಅಂಗಳಕ್ಕೆ ಸ್ವಾಗತ. ನಿಮ್ಮ ಲೇಖನಿಯಿಂದ ಮತ್ತಷ್ಟು ಕವನಗಳು ಹೊರಬೀಳಲಿ. ನೂತನ ಶೈಲಿಯ ಕವನಗಳು ನಮ್ಮ ವೇದಿಕೆಗೆ ಅಗತ್ಯ. ಅಂತೆಯೇ ನೂತನ ಕವಿಗಳು ಕೂಡಾ ನಮಗೆ ಬೇಕು. ಮಳೆಗಾಲದಲ್ಲಿ ಎಷ್ಟೇ ತಾಪತ್ರಯಗಳಿದ್ದರೂ ಅದನ್ನರಿಯದ ಅಮಾಯಕ ಮಕ್ಕಳ ಹೃದಯಗಳು, ಮಳೆಯ ಸ್ವಾದವನ್ನನುಭವಿಸುವ, ಆ ಬಾಲ್ಯ ಕಳೆದ ನಂತರ, ಕೇವಲ ಮಳೆಯ ತಾಪತ್ರಯಗಳಲ್ಲೇ ಮುಳುಗುವ, ಪ್ರೌಢಾವಸ್ಥೆ ನಿಜಕ್ಕೂ ಜೀವನದ ಅನೇಕ ಸಂತೋಷಗಳನ್ನು ಹೀರಿಬಿಡುತ್ತದೆ ಅಲ್ಲವೇ! ಕೊಚ್ಛೆಯಲ್ಲಿ ನೆಗೆದು, ಫ್ರಾಕು, ಚೆಡ್ಡಿಗಳ ಮೇಲೆ ಮೂಡುವ ಕೆಸರಿನ ಚಿತ್ತಾರಗಳನ್ನು, ಪ್ರೌಢಾವಸ್ಥೆಯಲ್ಲಿ ಸವಿಯಲಾಗದು! ಇದುವೇ ಜೀವನ! ಉತ್ತಮ ಕವನ. ನಿಮ್ಮನ್ನು ಪರಿಚಯಿಸಿದ ಪ್ರೇಮಾಲತಾರಿಗೂ ಅಭಿನಂದನೆಗಳು.
ಉಮಾ ವೆಂಕಟೇಶ್
LikeLiked by 1 person
ಅಮಿತಾ ಅವರೇ
ಮಳೆಗಾಲದ ನೆನಪುಗಳ ಹಲವಾರು ಚಿತ್ತಾರಗಳನ್ನು ಬಹಳ ಯಶಸ್ವಿಯಾಗಿ ಕವನದಲ್ಲಿ ರೂಪಿಸಿದ್ದೀರಿ. ಮನೆ ಹೊರಗೆ, ಒಳಗೆ, ಸಂತೆಯಲ್ಲಿ ಕಬ್ಬಿಣ ಮಾರುವವನ ನಯವಾದ ನೋಟದಲ್ಲಿ, ಅಮ್ಮನ ಮನೆಗೆಲಸದಲ್ಲಿ, ಜಸ್ಟ್ ಪಾಸಾದ ಹುಡುಗನ ತಲೆಯಲ್ಲಿ, ಹೀಗೆ ಹಲವಾರು ಚಿತ್ತಾರಗಳು!!, ಹಾಗೆ ವಾಸನೆಯಲ್ಲಿ ಎಂಬ ಎರಡನೇ ಆಯಾಮವನ್ನು ಕೂಡ ಕೊಟ್ಟಿದ್ದೀರಿ. ಶಬ್ದದ ಚಿತ್ರಣವಿದ್ದರೆ ಮೂರನೇ ಆಯಾಮ ಒದಗುತ್ತಿತ್ತು . It would have been a 3D poem!! ನನಗೆ ಅರುಂಧತಿ ರಾಯ್ ಅವರ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ನಲ್ಲಿನ ಕೇರಳದ ಮಳೆ ಚಿತ್ತಾರಗಳು ನೆನಪಿಗೆ ಬಂತು. ನಿಮ್ಮ ಹಾಡುಗಾರಿಕೆಯನ್ನಷ್ಟೇ ಕೇಳಿದ್ದ ನನಗೆ ನಿಮ್ಮ ಬಹುಮುಖ ಪ್ರತಿಭೆ ಈಗ ಪರಿಚಯವಾಯಿತು. ‘ಅನಿವಾಸಿ’ ಅಂಗಳಕ್ಕೆ ನಿಮಗೆ ಆಹ್ವಾನ.
LikeLike
ಮಳೆಗಾಲದಲ್ಲಿ ಎಲ್ಲರ ಭಾವನೆಗಳಿಗೂ ಬಣ್ಣವನ್ನು ಪ್ರತಿ ಹನಿಯಲ್ಲಿ ತುಂಬಿ ಕಳಿಸುತ್ತಾನೆ…. ಹೀಗೆ ಕೆಲವರು ಬರೆದ ಮಳೆ ಚಿತ್ರ ನೋಡಿ ನಮ್ಮ ಹನಿಯ ನೆನಪಾಗಿ ಮತ್ತೆ ಮಳೆಗಾಲ ರಂಗೇರುತ್ತದೆ…. ಒಳ್ಳೆಯ ಕವನ
LikeLike
ಮಳೆಯ ಹನಿ ಹನಿಯಲ್ಲೂ ನೂರು ಕನಸು ಕಾಣುವ ,ನೂರು ಹಾಡು ಉಲಿಯುವ ನನ್ನ ಮನ ಅಮಿತಾ ಅವರ ಮಳೆ ಕವನ ಓದಿ ನನ್ನೂರ ಮಳೆಯತ್ತ ಜಾರಿತು.ಕಾಲಲ್ಲಿ ಸ್ಲಿಪರ್ ಫಟ್ ಪಟ್ ಅಂತ ಕೆಸರಿನ ರಂಗೋಲಿ ಬಿಡಿಸುವಾಗ ಮಳೆಯಲ್ಲಿ ನೆನೆಯುತ್ತ ಓಡುವ ದಿನ ನೆನಪಿಸ್ತು.ಅಲ್ಲ ಆತನ ಕೊಡೇಲಿ , ಜೊತೆಗೇ ಹೋಗಬೇಕೆನ್ನುವಾಗಲೇ ಅಪ್ಪನ ಸ್ಕೂಟರ್ ಸವಾರಿಯ ಕರೆ ಬರಬೇಕಾ ? ತುಂಬಾ ಸುಂದರ ಭಾವಗಳ ಛಂದ ಕವನ.ಅಭಿನಂದನೆಗಳು ಅಮಿತ ಅವರೇ.
ಸರೋಜಿನಿ ಪಡಸಲಗಿ
LikeLiked by 1 person
ಅದೆಷ್ಟು ಸಲ ಕೈಯಲ್ಲಿ ಕಾಫಿ ಹಿಡಿದು ಇಲ್ಲಿಯ ಮಳೆಯನ್ನು ನೋಡಿ ಆ ಧಾರವಾಡದ ಶ್ರಾವಣದ ಕೊಳೆಯ ನೆನಪಿಸುತ್ತ ಅಮಿತಾ ಅವರು ಅಂದಂತೆ ”ಇಲ್ಲಿನ ಮಳೆಗೆ ಊರಿನ ಮಳೆಯ ಚಲುವಿಲ್ಲ” ಎಂದು ಅಂದು ಕೊಂಡಿದ್ದೇನೆ! ನೆನಪಿನ ’ಕೆಂಪು ಸಂಡಿಗ”ಯೊಂದಿಗೆ, ಹಸಿ ಸೌದೆ, ಒಣಗದ ಬಟ್ಟೆ,’ ಬುಟ್ಟಿ ಯಿಂದ ಇಣುಕುವ
ಮೆಣಸು,ಚವಳಿ ಅಗೆಗಳ” (ಎಷ್ಟು ಚಂದ), ಒಂದೇ ಎರಡೇ ವರ್ಣನೆಗಳು ಅಲ್ಲಿಯ ’ಜಿಟಿ ಜಿಟಿ’ ಮಳೆಯಂತೆ ನಿಲ್ಲದೆ ಒಂದರ ಮೇಲೊಂದು ಹರಿಸಿದ್ದಾರೆ. ಕಳೆದ ದೀಪಾವಳಿ ಕಾರ್ಯಕ್ರಮದಲ್ಲಿ ಡಾರ್ಬಿಯ ಹಿಂದಿನ ಪೋಯೆಟ್ ಲಾರೇಟ್ ಕ್ಯಾಥಿ ಗ್ರಿಂಡ್ ರಾಡ್ ಅವರು ಕವಿಗಳಿಗೆ ಕೊಟ್ಟ ’ಟಿಪ್’ನಲ್ಲಿ ಒಂದು: Pile them high! ಅದು ನೆನಪಾಯಿತು. ’ಮತ್ತೆ ಮಳೆ ಬರುತಿದೆ, ಎಲ್ಲ ನೆನಪಾಗುತ್ತಿದೆ!’ ಅಮಿತಾ ಅವರಿಗೆ ’ಅನಿವಾಸಿ’ಗೆ ಸುಸ್ವಾಗತ!
LikeLike
ಮಳೆ ಮಳೆ ಇಳೆಗೆ ಇಳಿಯುತಿರೆ ಮನದಲ್ಲಿ ನೆನೆಪುಗಳ ಸುರಿಮಳೆ! ಅಮಿತ ಅವರಿಗೆ ಸ್ವಾಗತ ಅನಿವಾಸಿಗೆ. ನಿಮ್ಮ ಕವನ ತುಂಬಾ ಆಪ್ತವಾಗಿದೆ.
‘ಆ ದಿನ ಬರುತ್ತದೆ ಮಳೆ
ಆತ ಕರೆದೂ ಇರುತ್ತಾರೆ,
ಎಂದೂ ಇಲ್ಲದ ಮುದ್ದಿನಿಂದ ಅಪ್ಪ ಬೈಕ್ ತಂದು
ಪಕ್ಕದಲ್ಲಿ ನಿಲ್ಲಿಸಿ , ಕೂತ್ಕೋ ಅಂತಾರೆ!!’
ತುಂಬಾ ಇಷ್ಟವಾದ ಸಾಲುಗಳು.
– ಕೇಶವ
LikeLike