ನನ್ನೊಳಗಿನ ನನ್ನ ಕಥೆ,ವ್ಯಥೆ!-ಡಾ. ಲಕ್ಷ್ಮೀ ಪ್ರಭು

ಹೊಸ ಪರಿಚಯ-ಡಾ. ಲಕ್ಷ್ಮೀ ಪ್ರಭು

                  laxmi modified image

(ಕಥೆಯನ್ನು ಬರೆಯಲು ಎಲ್ಲರೂ ಕಥೆಗಾರರಾಗಬೇಕೆಂದಿಲ್ಲ!! ನಮ್ಮೆಲ್ಲರೊಳಗೂ ಒಂದು ಕಥೆ ಇದ್ದೇ ಇರುತ್ತದೆ. ಕಾಲಾನುಕ್ರಮದಲ್ಲಿ ನಮ್ಮ ಹಳೆಯ ದಿನಗಳು, ಬದುಕಿ ಬಂದ ದಾರಿ ಮತ್ತು ಬದುಕಿನ ಬದಲಾವಣೆಗಳನ್ನು ಒತ್ತಟ್ಟಿಗಿಟ್ಟರೆ ಅದೇ ಒಂದು ಕಥೆಯಾಗಬಲ್ಲದು!!!

ಸ್ಕಾಟಲ್ಯಾಂಡಿನ ಸ್ಟೆರ್ಲಿಂಗ್ ನಲ್ಲಿ ಹಲವು ದಶಕಗಳಿಂದ ವಾಸವಿರುವ ಡಾ.ಲಕ್ಶ್ಮೀ ಪ್ರಭು ಬದುಕನ್ನು ಹಸನಾಗಿ ಕಂಡವರು.ತುಂಬಿದ ಮನೆಯಲ್ಲಿ ಹುಟ್ಟಿ,ಸಾಂಪ್ರದಾಯಿಕ ಬದುಕನ್ನು ಬದುಕಿ, ಆ ಕಾಲದಲ್ಲಿ ಹೆಂಗಸರಲ್ಲಿ ವಿರಳ  ಎನ್ನಬಹುದಾದ ಉನ್ನತ ವ್ಯಾಸಂಗ ಮಾಡಿ ಬದಲಾವಣೆಯನ್ನರಸಿ ಇಂಗ್ಲೆಂಡಿಗೆ ಬಂದು, ಎದುರಾದ ಬದುಕನ್ನು ಆಲಂಗಿಸಿ ಬದುಕಿದವರು. ಹಲವು ಭಾಷೆಗಳಲ್ಲಿ ಮಾತಾಡಬಲ್ಲ, ಸುಂದರವಾಗಿ ಹಾಡಬಲ್ಲ, ಹುಟ್ಟಿನಿಂದಲೇ ನಾಯಕತ್ವದ ಗುಣಗಳನ್ನು ಮೈವೆತ್ತಿ ಬೆಳೆದ ಇವರು ಸ್ಟೆರ್ಲಿಂಗಿನ ಸುತ್ತ ಮುತ್ತಲಿನ ಭಾರತೀಯರನ್ನೆಲ್ಲ ಒಂದುಗೂಡಿಸಿ ಸಂಘ ಕಟ್ಟಿ ಸುಖ-ದುಃಖವನ್ನು ಕಂಡವರು. ಅಪಾರ  ಆತ್ಮ ವಿಶ್ವಾಸವನ್ನು ಬಿಂಬಿಸುತ್ತ,  ಪ್ರತಿದಿನ ಸೀರೆಯುಟ್ಟು, ಹಣೆಗೆ ಕುಂಕುಮ ಇಟ್ಟು ಕೆಲಸಕ್ಕೆ ತೆರಳಿ, ಇಲ್ಲಿನ ಆಂಗ್ಲರ ಜೊತೆಗೂಡಿ ಒಡನಾಡಿದವರು. ಭಾರತೀಯ ಸಮುದಾಯ ಸೇವೆಗಾಗಿ ಇತರರೊಡನೆ ಕೂಡಿ ಕೆಲಸ ಮಾಡಿ ಮುಂದಾಳತ್ವ ವಹಿಸಿದ್ದಕ್ಕಾಗಿ ಲಾರ್ಡ್ ಪ್ರೊವೋಸ್ಟ್ ಪ್ರಶಸ್ತಿಯನ್ನು ಪಡೆದವರು!!

ಅವರ ಈ ಬರಹದಲ್ಲಿ ಹಳೆ-ಕಾಲದ ಮನೆಯ ಚಿತ್ರಣವಿದೆ. ಭಾರತೀಯ ಸಮಾಜ ಬದಲಾದ ಘಳಿಗೆಯ ಸಂಕಷ್ಟವಿದೆ. ಬದುಕು ತರುವ ಸಂಘರ್ಷಗಳನ್ನು  ಬಿಚ್ಚು ಮನಸ್ಸಿನಲ್ಲಿ ಬರೆದಿರುವ ಅವರ ವ್ಯಕ್ತಿತ್ವವನ್ನು ಈ ದಿಟ್ಟ ಜೀವನ-ಬರಹದಲ್ಲಿ ಕಾಣಬಹುದು!!-ಸಂ)

ನಾನು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬ್ರಂಮ್ಹಾವರದ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ. ಹಳೆಯ ಕಾಲದ ಮನೆಯಲ್ಲಿ ಇದ್ದ ದೊಡ್ಡ ಕುಟುಂಬದಲ್ಲಿ ನಾನು ಒಂಭತ್ತನೆಯವಳು, ಅಮ್ಮನಿಗೆ ಬೇಡದ ಬಸಿರು !  ಯಾಕೆಂದರೆ 45 ಕ್ಕೂ ಹೆಚ್ಚಿನ ಹರೆಯದ ಅಮ್ಮ ತಾನು ಬಸಿರಾಗಿತ್ತೇನೆ ಅಂತ  ಅಂದು ಕೊಂಡಿಲ್ಲದ ಸಮಯದಲ್ಲಿ ನಾನು ಅವಳ ಉದರದಲ್ಲಿ ಅವತರಿಸಿದ್ದೆ!!

ಚಚ್ಚೌಕದ  ಹಳೆಯ ಕಾಲದ ಮನೆಯಲ್ಲಿ ನಾಲ್ಕು ಬದಿಯಲ್ಲೂ ದೊಡ್ಡ ಚಾವಡಿಗಳಿದ್ದವು. ಮದ್ಯೆದಲ್ಲಿ ಒಂದು ದೊಡ್ಡ ಬಾವಿ!! ನಮ್ಮ ಮನೆಯಿದ್ದದ್ದು ಒಂದು ದೊಡ್ಡ ಈಶ್ವರನ ದೇವಾಲಯದ ಪಕ್ಕ. ಅದರ ಪ್ರಾಂಗಣ, ದೊಡ್ಡ ರಥ, ಸನಿಹದಲ್ಲೇ ಇದ್ದ ತಿಳಿಯಾದ ಕೊಳ ಎಲ್ಲವೂ ಈಗಲೂ ನೆನಪಿವೆ. ಪ್ರತಿ ವರ್ಷ ಇಲ್ಲಿ ನಡೆಯುತ್ತದ್ದ ರಥೋತ್ಸವ ಈಗಲೂ ನನ್ನ ಕಣ್ಣಿಗೆ ಕಟ್ಟಿದೆ. ನಾವು ಚಿಕ್ಕವರಿದ್ದಾಗ ಈ ದೇವರು ಮತ್ತು ಪೂಜಾರಿಯಿದ್ದ ತೇರನ್ನು ಎಳೆಯಲು ಉತ್ಸುಕರಾಗಿ ಹೋಗುತ್ತಿದ್ದೆವು. ಈ ದೊಡ್ಡ ಮನೆ ನಮ್ಮ ಅಜ್ಜಿಯ ಕಾಲದಿಂದ ನಮಗೆ ಬಂದ ಮನೆ. ನನಗೀಗ 69 ವರ್ಷ. ಈಗಲೂ ಈ ಮನೆಯ ಅವಶೇಷಗಳು ಉಳಿದಿವೆಯಾದರೂ ಬಹುಭಾಗ ನಾಶವಾಗಿದೆ. ಇಲ್ಲಿ ಮತ್ತೆ ಯಾರೂ ಹೊಸಮನೆಯನ್ನು ಕಟ್ಟಿಲ್ಲ. ಸಂಸಾರ ರಾಜಕೀಯಗಳೂ ಕಾರಣವಿರಬಹುದು. ಆದರೆ ಈ ಮುರಿದ ಮನೆಯನ್ನು ನೋಡಿದಾಗಲೆಲ್ಲ ಮನಸ್ಸಿಗೆ ನೋವಾಗುತ್ತದೆ. ಇಲ್ಲಿ ವರ್ಷಕ್ಕೊಮ್ಮೆ ನಡೆವ ಜಾತ್ರೆಯಿರಲಿ , ಈ ಮನೆಯೇ ಒಂದು ದೊಡ್ಡ ಜಾತ್ರೆಯಾಗಿರಿತ್ತಿತ್ತು. ಜನ ಸದಾಕಾಲ ತುಂಬಿರರುತ್ತಿದ್ದ ಮನೆ!

ಅಡುಗೆಮನೆಯಲ್ಲಿ ಅಡುಗೆಯ ಕೆಲಸ ಯಾವಾಗಲೂ ನಡೆಯುತ್ತಲೇ ಇರುತ್ತಿತ್ತು. ಬಂದ ಜನರಿಗೆಲ್ಲ ತುಂಬು ಮನಸ್ಸಿನ ಪಕ್ವಾನ್ನಗಳು  ಬಡಿಸಲ್ಪಡುತ್ತಿದ್ದವು. ಇದೇ ಅಲ್ಲದೆ ಯಾವುದೇ ಕಾವಿ ತೊಟ್ಟ ಸನ್ಯಾಸಿಗಳು ಕಾಶಿಗೆ ತೆರಳುವ ಮುನ್ನ ಸ್ಡಲ್ಪ ಅಕ್ಕಿ ಮತ್ತು ದುಡ್ಡಿಗಾಗಿ ಈ ಮನೆಗೆ ಬರದೆ ಹೋಗುತ್ತಿರಲಿಲ್ಲ.ನಾನು ಹುಟ್ಟಿದ ಈ ಮನೆಯಲ್ಲೆ ನನ್ನ ಚಿಕ್ಕಪ್ಪ ಮೊಟ್ಟ ಮೊದಲ ಸಿಂಡಿಕೇಟ್ ಬ್ಯಾಂಕಿನ ಕಛೇರಿಯನ್ನು ಆರಂಭಿಸಿದ್ದು! ಇವತ್ತು ಈ ಬ್ಯಾಂಕ್ ಒಂದು ದೊಡ್ಡ ದೇಶೀಯ ಬ್ಯಾಂಕ್ ಆಗಿ ಬೆಳೆದಿದೆ.

ನಾನು ಚಿಕ್ಕವಳಿರುವಾಗ ನನ್ನ ಚಿಕ್ಕಪ್ಪ ನಮ್ಮನ್ನು ಮೊದಲ ಬಾರಿಗೆ ಮಣಿಪಾಲಿಗೆ ಕರೆತಂದಿದ್ದರು. ಯಾವುದೋ ಒಂದು ಗುಡ್ಡದ ಮೇಲೆ ತಂಗಿದ ನೆನಪು. ಇದೇ ಗುಡ್ಡದ ಮೇಲೆ ಈಗ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲುಗಳಾಗಿವೆ. ಈ ಪ್ರದೇಶದಲ್ಲಿ ಚಿರತೆ,ಹುಲಿಗಳೂ, ಕಾಳಿಂಗ, ಕೇರೆ ಹಾವು, ಕನ್ನಡಿ ಹಾವುಗಳು ಯಥೇಚ್ಚವಾಗಿದ್ದ ಕಾಲವದು.

ಮೇಲೆ ಹೇಳಿದ ದೊಡ್ಡ  ಮನೆಯ ಕಾಂಪೌಂಡಿನ ಹೊರಗಿದ್ದ ಸಣ್ಣ ತೊರೆಯನ್ನು ದಾಟುವಾಗ ಎರಡು ಬಾರಿ ನನಗೆ ಹಾವುಗಳು ಕಚ್ಚಿದ್ದವು! 14-15 ವರ್ಷದವಳಿರುವಾಗ ಕಡಿದ ಹಾವಿನ ವಿಷದ ಕಾರಣ ಮಣಿಪಾಲಿನ ಆಸ್ಪತ್ರೆಯಲ್ಲಿ ಡ್ರಿಪ್ಪನ್ನು ಹಾಕಿಸಿಕೊಂಡು ಮಲಗಿದ್ದು , ತಂಡೋಪ ತಂಡವಾಗಿ ಜನರು  ಬಂದು ಸಾಯುತ್ತಿರುವ ನನ್ನನ್ನು ನೋಡಲು ಸಾಲುಗಟ್ಟಿ ನಿಂತದ್ದು ಚೆನ್ನಾಗಿ ನೆನಪಿದೆ!!

ಎಸ್.ಎಸ್.ಎಲ್.ಸಿ ಮುಗಿಸಿದಾಗ ನಮ್ಮ ಸಂಸಾರ ಬೆಂಗಳೂರಿಗೆ ಬಂದಿತು. ನಾನು ಮಹಾರಾಣಿ ಕಾಲೇಜಿಗೆ ಸೇರಿ ಬಿಎಸ್ಸಿ ಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದೆ. ಅಕ್ಕನನ್ನು ಹೊರತು ಪಡಿಸಿ ಎಲ್ಲರೂ ಬ್ಯಾಂಕಿನ ನೌಕರಿಗೆ ಸೇರಿಬಿಡಲು ಸಲಹೇನೀಡಿದರು. ಡಾಕ್ಟರಿಕೆ ಮಾಡುತ್ತ ಸಮಯ ಹಾಳುಮಾಡದೆ ಬ್ಯಾಂಕಿನಲ್ಲಿ ನೌಕರಿಗಳಿಸಿ ದುಡ್ಡು ದುಡಿಯುವುದು ಸೂಕ್ತ ಎಂಬುದು ಇತರರ  ಅಭಿಪ್ರಾಯವಾಗಿತ್ತು. ಅದರ ಜೊತೆ ನನ್ನ ಸಹೋದರರ ಖರ್ಚಿಗೆ ದುಡ್ಡಾಗಲಿ ಎಂಬ ತರ್ಕವೂ ಇತ್ತು. ಹುಡುಗಿ ಜಾಸ್ತಿ ಓದಿದಂತೆಲ್ಲ ಜಾಸ್ತಿ ಓದಿದ ಗಂಡನ್ನು ತರಬೇಕು, ಅದಕ್ಕೆ ತಕ್ಕಂತೆ ವರದಕ್ಷಿಣೆ ಕೊಡಬೇಕು ಎಂಬ ಅಂಜಿಕೆಯೂ ಇತ್ತು. ನನ್ನ ಅಕ್ಕನ ವಕಾಲತ್ತಿನ ಸಹಾಯ ಪಡೆದು ನಾನು ಹಠ ಮಾಡಿ ಬೆಂಗಳೂರು ಮೆಡಿಕಲ್ ಕಾಲೇಜಿಗೆ ಸೇರಿದೆ.ಅಕ್ಕಂದಿರ ಜೊತೆ ಮಾಡಿದ  ವಾದಗಳ ಪರಿಣಾಮ ಕಾಲೇಜಿನ ಚರ್ಚಾ ಪಟುವಾದೆ! ಸಂಗೀತ, ಇತರೆ ಸ್ಪರ್ದೆಗಳಲ್ಲೂ ಗೆಲ್ಲ ತೊಡಗಿದೆ.

ಖಾಯಿಲೆಯಾಗಿ ಮಲಗಿದ್ದ  ಅಮ್ಮನನ್ನು ಸಂಪ್ರೀತಗೊಳಿಸಲು ವಾಣಿವಿಲಾಸ  ಆಸ್ಪತ್ರೆಯಲ್ಲಿ M D ,D G O ಮಾಡುವಾಗ ಮದುವೆಯಾದೆ. ಪರದೇಶದ ಯಾವ ಕನಸೂ ಇಲ್ಲದಿದ್ದ ಕಾಲದಲ್ಲಿ ನನ್ನನ್ನು ವರಿಸಿದ ಹುಡುಗ ಇಗ್ಲೆಂಡಿನಲ್ಲಿ ಐದು ವರ್ಷ ಕಳೆದು ಬಂದವನಾಗಿದ್ದ!  ಇದೀಗ ಮದುವೆಯಾಗಿ 40 ವರ್ಷಗಳೇ ಆಗಿವೆ. ಮೊದಲು ಬಂದದ್ದು ಲಂಡನ್ನಿಗೆ. ನಂತರ ಗ್ಲಾಸ್ಕೋ. ವಾರಕ್ಕೆ 120-140 ಗಂಟೆಗಳ ಕಾಲ ಇಬ್ಬರೂ ಕೆಲಸಕ್ಕೆ ತೊಡಗಿಕೊಂಡೆವು.ಜೊತೆಗೆ ಭಾರತದಿಂದ  ಆಕಾಂಕ್ಷಿಗಳಾಗಿ ಬರಿತ್ತಿದ್ದ ಹಲವರಿಗೆ ಮನೆಯಲ್ಲಿ ವಾಸ,ಊಟ ಎಲ್ಲ ನಡೆಸುತ್ತಿದ್ದ ಕಾಲವದು. ವಾರಾಂತ್ಯ ಬಂತೆಂದರೆ ಹೆಸರನ್ನು ಬರೆದ ಪ್ಲಕಾರ್ಡ ಹಿಡಿದು ಏರಪೋರ್ಟಗೆ ಓಡುತ್ತಿದ್ದೆವು, ಸ್ನೇಹಿತರಿಗೆ ಹಪ ಹಪಿಸಿ ಅಡುಗೆ, ವಾಸ, ಕೆಲಸ ಎಲ್ಲಕ್ಕೂ ವ್ಯವಸ್ಥೆ ಮಾಡುತ್ತಿದ್ದೆವು, ಈಗ ಅವರಿಗೂ ನಮಗೂ ಇದು ಮರೆತ ಕಾಲ!!!

editorial image 1

ಕನ್ನಡದವರಿರಲಿ, ಭಾರತೀಯರನ್ನು ಕಾಣುವುದು ದುರ್ಲಭವಾದ ಕಾಲವದು.ಭಾರತಕ್ಕೆ ಹಿಂತಿರುಗಲು ಬಂದ ದುಡ್ಡನ್ನೆಲ್ಲ ಕೂಡಿಟ್ಟೆ. ರಾತ್ರೋ ರಾತ್ರಿ ಎದ್ದು ಕುಳಿತು ನಾವ್ಯಾಕೆ ಈ ಪರದೇಶದಲ್ಲಿದ್ದೇವೆ, ಹಿಂತಿರುಗೋಣ ಅಂತ ಬಡಬಡಿಸುತ್ತಿದ್ದೆ. ಈ ಚಡಪಡಿಕೆಯಲ್ಲಿ ನನ್ನದೇ ನರ್ಸಿಂಗ್ ಹೋಂ ತೆಗೆಯಲು ಬೇಕಾದ ಥಿಯೇಟರ್ ಪರಿಕರಣಗಳನ್ನು, ಅನೆಸ್ಥೆಟಿಕ್ ಉಪಕರಣಗಳನ್ನು, ಅವಾಗ ಲಭ್ಯವಿದ್ದ ಅತ್ಯುತ್ತಮೆ ಎನ್ನಬಹುದಾದ ವೆಂಟಿಲೇಟರುಗಳನ್ನು ಖರೀದಿಸಿಟ್ಟೆ. ಇಷ್ಟರಲ್ಲಿ  ನಮ್ಮ ಕೈ ಖಾಲಿಯಾಗಿತ್ತು. ಇಲ್ಲಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟೆ. ಮಗಳನ್ನು ಅಕ್ಕನ ಮನೆಗೆ ಕಳಿಸಿದೆ.ಇಂಡಿಯಾಗೆ ಹೋದರೆ ನರ್ಸಿಂಗ್ ಹೋಂ ಮಾಡಲು ಒಂದಿಷ್ಟು  ಹಣ ಮಾಡಿಕೊಂಡು ಹೋಗೋಣ ಅಂತ ನನ್ನ ಹಿರಿಯ ಸಹೋದ್ಯೋಗಿಯ ಸಲಹೆಯ ಮೇರೆಗೆ ಜೆಡ್ಡಾದ ಪ್ರಸಿದ್ದ ಆಸ್ಪತ್ರೆಯಲ್ಲಿ ಕೇವಲ ಕೆಲ ಕಾಲ ಕೆಲಸಕ್ಕೆ ಸೇರಿದೆ. ಅಲ್ಲಿನ ಆಸ್ಪತ್ರೆಯಲ್ಲಿ ಈ ದೇಶದಿಂದ  ಹೋಗಿದ್ದ  ಮಹಿಳಾ ಪ್ರಸೂತಿ ತಙ್ನೆ ನಾನೊಬ್ಬಳೇ!!

ಆದರೆ ಪ್ರಪಂಚದ ನಂಬಿಕೆಗಳಂತೆ, ಜೆಡ್ಡಾದ ಜನ, ನನ್ನನ್ನು ಮುಸ್ಲಿಂ ಮಹಿಳೆಯಂತೆ ಉಡುಪು ಧರಿಸಲು ತಾಕೀತು ಮಾಡಲಿಲ್ಲ. ಆದರೆ ವಿಧಿ ಇನ್ನೇನೋ ಬಗೆದಿತ್ತು. ನಾನು ಜೆಡ್ಡಾಗೆ ಬಂದ 7 ದಿನಗಳಲ್ಲಿ ಅಮ್ಮ ತೀರಿಹೋದಳು. ಅವಳ ಶವ ಸಂಸ್ಕಾರಕ್ಕೂ ಹೋಗದ ಜಿಗುಟು ಪರಿಸ್ಥಿತಿ.ನಾನು ಜೆಡ್ಡಾಗೆ ಬಂದ ನಂತರ ಬರೆದ ಮೊದಲ ಪತ್ರ ಅವಳ ಸಾವಿನ ಎರಡು ದಿನಗಳ ನಂತರ ತಲುಪಿತಂತೆ. ಕೊನೆಯ ದಿನಗಳಲ್ಲಿ ಈ ದೇಶದಲ್ಲಿ ನಾನು ಏನು ಪರಿಸ್ಥಿತಿಯನ್ನು ಅನುಭವಿಸುತ್ತೇನೋ ಅನ್ನುವ ಕೊರಗಲ್ಲಿ ಅವಳ ದಿನಗಳು ಕಳೆದವಂತೆ.  ಬದುಕಿನ ಹಂಬಲಗಳಲ್ಲಿ ನಾವು ಹೆತ್ತವರೊಡನೆ, ಮಕ್ಕಳೊಡನೆ ಸಾಕಸ್ಷ್ಟು ಸಮಯ ಕಳೆಯದಿದ್ದ ಬಗ್ಗೆ ನನ್ನಲ್ಲಿ ಇವತ್ತಿಗೂ ಪಶ್ಚಾತ್ತಾಪವಿದೆ.

ಗಂಡ ನಾನು ಬೇಕಾದರೆ ಇಂಡಿಯಾಗೆ ತೆರಳಬಹುದೆಂದೂ, ತಾನು ಆಗಾಗ ಬಂದು ಭೇಟಿನೀಡುತ್ತೇನೆಂದು ಭರವಸೆಯಿತ್ತ !ಆದರೆ ಇದಕ್ಕೆ ಮನೆಯವರಿಂದ ತೀವ್ರ ವಿರೋಧ ಬಂತು. ಈ ನಡುವೆ ಕುವೈತ್-ಇರಾಕ್ ಯುದ್ದ ಶುರುವಾಗಿ ನಾನು ಯು. ಕೆ. ಗೆ ಹಿಂತುರುಗಿದೆ. ಮಗಳನ್ನು ವಾಪಸ್ಸು ಕರೆಸಿಕೊಂಡೆ. ನಾವು ಪ್ರಯತ್ನ ಪಡುವುದು ಒಂದಕ್ಕೆ, ದೈವ ನೀಡುವುದು ಇನ್ನೊಂದು ಎನ್ನುವುದು ಇದಕ್ಕೇ ಇರಬೇಕು.

ಏನೇ ಆದರೂ, ತಾಯ್ನೆಲದ ಹಂಬಲ ಮಾತ್ರ ತಣಿಯುತ್ತಿರಲಿಲ್ಲ. ಸ್ಟೆರ್ಲಿಂಗ್ ಗೆ  ಬಂದ ನಂತರ, ಅಲ್ಲಿನ ಎಲ್ಲ ಬಾರತೀಯ ಭಾಷೆ ಮಾತಾಡುವ ಜನರನ್ನು ಕೂಡಿಸಿ ಫೋರ್ತ ವ್ಯಾಲಿ ಇಂಡಿಯನ್ ವುಮನ್ ಅಸೋಸಿಯೇಷನ್ನಿನ ಕಾರ್ಯ  ಆರಂಭಿಸಿ ನಡೆಸಲು ಶುರುಮಾಡಿದೆ. ಭಾರತೀಯ ಪ್ರತಿಯೊಂದು ಧರ್ಮ, ರಾಜ್ಯ, ಪಂಗಡಗಳನ್ನು ಸಂತಸಗೊಳಿಸುವ ಹಬ್ಬ ಆಚರಿಸುವ ಕಾರ್ಯ ನಿರಂತರವಾಗಿ  ಹಲವು ವರ್ಷ ನಡೆಸಿದೆ. ಇದಕ್ಕಾಗಿ ಅಲ್ಲಿನ ಕೌನ್ಸಿಲ್ ಲಾರ್ಡ್ ಪ್ರವೋಸ್ಟ್ ಪ್ರಸಸ್ತಿಯನ್ನು 2010 ರಲ್ಲಿ ನೀಡಿ, ಸ್ಟೆರ್ಲಿಂಗ್ ಕ್ಯಾಸಲ್ ನಲ್ಲಿ ಸನ್ಮಾನಿಸಿದೆ.

ಎಲ್ಲಿಯೋ ಹುಟ್ಟಿ,  ಸ್ವಂತ ತಂದೆ ಜೂಜಾಡಿ ಕರ್ತವ್ಯ ಮರೆತರೂ, ಚಿಕ್ಕಪ್ಪಂದಿರ ಪ್ರೀತಿಯಲ್ಲಿ ವಿದ್ಯೆಗಳಿಸಿ, ಹಾವು ಕಡಿದರೂ ಬದುಕುಳಿದು   ಪ್ರಸೂತಿ ವೈದ್ಯಳಾಗಿ, ಯಾವುದೋ ದೇಶಗಳಲ್ಲಿ  ಸೇವೆ ಸಲ್ಲಿಸಿ , ಇಂದಿಗೂ ಹಿಂತಿರುಗಿ ಹೋಗದ ಬಗ್ಗೆ ಪಶ್ಚಾತ್ತಾಪ ಪಡುತ್ತಲೇ ನಿವೃತ್ತರಾಗಿ ಈಗ ವಿಶ್ರಾಂತ ಜೀವನ ಸಾಗಿಸಿದ್ದೇವೆ. ಒಂದು ಕನಸಿಗಾಗಿ ಕಳೆದುಕೊಂಡ ಭಾರತೀಯ ಬದುಕಿರಲಿ, ಮದುವೆಯ ,ಮಕ್ಕಳ ಔಚಿತ್ಯವನ್ನು ಪ್ರಶ್ನಿಸಿಕೊಳ್ಳುವ  ವೃಧ್ಧಾಪ್ಯದ  ಈ ಕಾಲದಲ್ಲಿ ನಾನು ಎಲ್ಲಿಯೋ ಕಳೆದುಹೋಗಿದ್ದೇನೆ ಎನಿಸುತ್ತದೆ!

(ಚಿತ್ರ ಕೃಪೆ-ಗೂಗಲ್)

 

 

 

 

 

 

9 thoughts on “ನನ್ನೊಳಗಿನ ನನ್ನ ಕಥೆ,ವ್ಯಥೆ!-ಡಾ. ಲಕ್ಷ್ಮೀ ಪ್ರಭು

 1. ಮೊಟ್ಟ ಮೊದಲು ಪ್ರೇಮಲತಾ ಅವರಿಗೆ ಅಭಿನಂದನೆಗಳು. ಇಂಗ್ಲಂಡಿನಲ್ಲಿ ಹೊಸ ಬರಹಗಾರರನ್ನು ಹುರಿದುಂಬಿಸಿ ಕನ್ನಡದಲ್ಲಿ ಬರೆಯಲು ಅನಿವಾಸಿಗೆ ತರಲು ಶ್ರಮಿಸುತ್ತಿದ್ದಾರೆ. ಕುಡೋಸ್!

  ಲಕ್ಷ್ಮೀ ಪ್ರಭು ಅವರ ಕತೆ ಐದು ನಿಮಿಷದ ಕಿರುಚಿತ್ರದಂತೆ ಬೇಗ ಮುಗಿದರೂ ದಶಕಗಳ ಚಿತ್ರವನ್ನೇ ಮುಂದಿಟ್ಟಿದೆ. ಬರಹ ಮನ ಮುಟ್ಟುವಂತಿದೆ.

  – ಕೇಶವ

  Like

 2. ನಮ್ಮ ಅಲ್ಪ ಸಂಖ್ಯಾತ ಭಾರತೀಯ ಸಮುದಾಯದ ಹಲವು ಧರ್ಮ,ಜಾತಿ,ಪಂಗಡಗಳನ್ನು, ಹಲವು ಭಾಷೆಯ ಜನರನ್ನು ಒಂದುಗೂಡಿಸಿ, ಸಮುದಾಯ ಚಟುವಟಿಕೆಗಳನ್ನು ಏರ್ಪಡಿಸಿ ಸದಾಕಾಲ ಗುಂಪು ಚಟುವಟಿಕೆಗಳನ್ನು ಮಾಡುತ್ತ ಹತ್ತು ಹಲವು ಕುಟುಂಬಗಳಿಗೆ ನೆರವಾಗಿರುವ ನಿಮ್ಮ ಬದುಕಿನ ಹಿನ್ನೋಟದ ಕಥೆಯಲ್ಲಿ ಹಲವು ಸಾರ್ಥಕತೆಗಳಿವೆ!.
  ಮಕ್ಕಳು, ಸ್ನೇಹಿತರು, ಇದೇ ಸಮುದಾಯ ಎಲ್ಲರೂ ತಮ್ಮ ತಮ್ಮ ಬದುಕುಗಳಲ್ಲಿ ಮುಳುಗುತ್ತ ಕೆಲವೊಮ್ಮೆ ಎಲ್ಲವನ್ನು ಮರೆತಾಗ ಇವೆಲ್ಲ ಯಾಕೆ ಬೇಕಿತ್ತು ಎನ್ನುವ ಸಂಕಷ್ಟಕ್ಕೆ ಬದುಕು ಸಿಲುಕುವುದು ಕೂಡ ಸಹಜವೇ. ಆದರೆ ನಿಮ್ಮ ನಾಯಕತ್ವ ಗುಣಗಳು ನಿಮ್ಮ ಜೀವಾಳವಾಗಿ
  ಬದುಕಿನ ತುಂಬ ಹುರುಪನ್ನು ತುಂಬುತ್ತಲೇ ಸಾಗಲಿ. ನಿಮ್ಮ ಅನಿಸಿಕೆಗಳನ್ನು ನಮ್ಮೊಡನೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

  Like

 3. ವೈದ್ಯಕೀಯ ವೃತ್ತಿ , ಸಂಸಾರ, ಮಕ್ಕಳ ಬೆಳವೆಣಿಗೆ, ಶ್ರೇಯಸ್ಸು ಈ ವ್ಯೂಹದಲ್ಲಿ ಸಿಕ್ಕಿ ತಾಯ್ನಾಡಿಗೆ ಹಿಂತಿರುಗಾಲಾಗದ ವ್ಯಥೆ ಹಿಂಡುತ್ತಿದ್ದರೂ ವೈದ್ಯಕೀಯ , ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ
  ಡಾ. ಲಕ್ಷ್ಮಿ ಪ್ರಭು ಅವರ ಸಾಧನೆ ಶ್ಲಾಘನೀಯ. ಹೃದಯದಿಂದ ಬಂದ ಕಿರುಆತ್ಮಕಥೆ ಹೃದಯ ತಟ್ಟುವಂತಹುದು. ಇದುವರೆಗೂ ಕಳೆದ ಕಾಲ ವ್ಯರ್ಥವಾಗಿಲ್ಲ , ಕಳೆದು ಹೋಗುವುದಕ್ಕೆ ಮುಂದಿನ ಕಾಲ ಇನ್ನೂ ಬಂದಿಲ್ಲ

  Like

 4. ಜೀವನದಲ್ಲಿ ಧ್ವನಿಸುವ ರಾಗಗಳು, ಸ್ವರಗಳು ಎಷ್ಟೋ! ಯಾವುದೂ ‘ಅಪ’ಸ್ವರವಲ್ಲ! ನಿಮ್ಮ ಜೀವನಾನುಭವಗಳ ಕಣಜದ ಬಾಗಿಲನ್ನ ಈಗಷ್ಟೆ ತೆರೆದು ಆಹ್ವಾನಿಸಿದ್ದೀರ. ನಿಮ್ಮ ಆತ್ಮವಿಶ್ವಾಸದ ಕಥೆಗಳು ಮತ್ತಷ್ಟು ಬರಲಿ. ನಮಗೆ ಬೆಳಕು ಕೊಡಲಿ. ವಿನತೆ ಶರ್ಮ

  Liked by 1 person

 5. ಡಾ. ಲಕ್ಷ್ಮೀ ಅವರೆ ನಿಮ್ಮ ಕಿರು ಆತ್ಮ ಕಥೆ ಹೃದಯ ಸ್ಪರ್ಶಿಯಾಗಿದೆ
  ಕಳೆದು ಹೋಗಿರುವುದು ಕಾಲ, ನೀವಲ್ಲ! ಈ ವ್ಯಥೆಗಳ ನಡುವೆ ಸ್ಥೈರ್ಯದಿಂದ ಬದುಕಿ ನಿಮ್ಮನು ನೀವು ಮತ್ತೆ ಕಂಡುಕೊಂಡಿದ್ದೀರ.
  ಅದಕ್ಕೆ ತಕ್ಕ ಪುರಸ್ಕಾರವು ದೊರಕಿದಿ. ನಿಮ್ಮ ನಿವೃತ್ತಿ ಜೀವನವನ್ನು ನೆಮ್ಮದಿಯಿಂದ ಕಳೆಯುವಿರೆಂದು ಹಾರೈಸುತ್ತೇನೆ

  Liked by 1 person

 6. ಜೀವನದ ರಾಗಗಳು, ಸ್ವರಗಳು ಎಷ್ಟೋ! ಎಲ್ಲೂ ‘ಅಪ’ ಶ್ರುತಿ ಎಂಬುದು ಇರುವುದಿಲ್ಲ. ವ್ಯಥೆಗಿಂತಲೂ ಅನುಭವಗಳು ತುಂಬಿರುವ ಕಣಜವನ್ನೇ ನಮ್ಮೊಡನೆ ಹಂಚಿಕೊಂಡಿದ್ದೀರಿ. ಪರಿಸ್ಥಿತಿಯನ್ನು ಎದುರಿಸಿ ಮುಂದೆ ಸಾಗಿದ ನಿಮ್ಮ ಆತ್ಮವಿಶ್ವಾಸ ನನಗೆ ಬಹಳ ಮೆಚ್ಚುಗೆಯಾಯಿತು.
  ವಿನತೆ ಶರ್ಮ

  Like

 7. ಡಾ.ಲಕ್ಷ್ಮಿಪ್ರಭು ಅವರ ಜೀವನಗಾಥೆ ಒಂದು ಅಭಿಮಾನ ಮೂಡಿಸಿದರೆ ,ಆ ಕಥೆಯೊಳಗಿನ ವ್ಯಥೆ ನೋವಿನೆಳೆಯನ್ನು ಮೂಡಿಸಿತು.ಅವರೆದುರಿಸಿದ ಸವಾಲುಗಳು ,ತಾಯ್ನಾಡಿನ ತುಡಿತ ,ಮರಳಿ ಬರಲಾಗದ ಸ್ಥಿತಿ ಮನ ಕಲಕಿತು.ಬಹುಶಃ ಎಲ್ಲ ವಲಸೆಗಾರರದು ,ಆದಶಕಗಳಿರಬಹುದು ಅಥವಾ ಈಗಿನ ಪ್ರಸಕ್ತ ಕಾಲವಿರಬಹುದು ಈ ಗೊಂದಲ ,ತುಮುಲ ಇದ್ದೇ ಇದೆ ಅನಿಸ್ತದೆ. ಅಲ್ಲಿರಲಾರೆ ಇಲ್ಲಿ ಬರಲಾರೆ ಎಂಬ ತ್ರಿಶಂಕು ಸ್ಥಿತಿ ಇಂದಿಗೂ ಕಾಣುತ್ತದೆ. ಅಂತೆಯೇ ಪ್ರತಿ ವ್ಯಕ್ತಿಯ ಎದೆಯಾಳದೊಂದು ಕಥೆ ಇದ್ದೇ ಇದೆ.ಜೀವನದ ಹಾದಿಯಲ್ಲಿ ಮುಂದೆ ಮುಂದೆ ಸಾಗಿದಂತೆ ಎದೆಯ ಗೂಡಲ್ಲಿ ಕವಾಟಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆಯೋ ಏನೋ !! ಒಂದೊಂದರಲ್ಲಿಯೂ ಒಂದು ಕಥಾವಸ್ತುವನ್ನ ಹುದುಗಿಸಿ ಸೀಲ್ ಮಾಡಿ ಮುಂದೆ ಸಾಗುವದೇ ಜೀವನವೋ ಏನೋ! ಅಂಥ ಒಂದು ಕಥೆ ಡಾ.ಲಕ್ಷಿ ಪ್ರಭು ಅವರ ಲೇಖನಿಯಿಂದ ಹೊರ ಬಂದು ಮನ ಮುಟ್ಟಿ ,ನಮ್ಮನ್ನೂ ಎಲ್ಲಿ ಕಳೆದು ಹೋಗಿದ್ದೇವೆ ಎಂದು ಹುಡುಕ ಹಚ್ಚಿದೆ. ತುಂಬಾ ಸುಂದರ ಕಥೆ ಎನ್ನಲೇ ,ಬರಹ ಎನ್ನಲೇ‌.ಅಭಿನಂದನೆಗಳು ಡಾ.ಲಕ್ಷ್ಮಿ ಅವರೇ.
  ಸರೋಜಿನಿ ಪಡಸಲಗಿ

  Like

 8. ಡಾ ಲಕ್ಷ್ಮಿ ಪ್ರಭು ಅವರ ಸಾಹಸಿ ಜೀವನ ಕಥೆ ಮನ ತಟ್ಟಿತು. ಅವರ ತಾಯಿನಾಡಿನ ತುಡಿತ, ವೈಯಕ್ತಿಕ ಜೀವನದ ದುರಂತಗಳು, ಮರಳಿ ಹೋಗಲಾಗದ ಅವಸ್ಥೆ, ಎದೆ ಕಲುಕಿತು. ಆ ದಶಕದಲ್ಲಿ ವಲಸೆ ಬಂದ ಅನೇಕ ಡಾಕ್ಟರುಗಳ ಜೀವನದಲ್ಲೂ ಇದೇ ತರದ ಧರ್ಮ ಸಂಕಟಗಳನ್ನು ಕಂಡಿದ್ದೇವೆ. ಇದರ ಮೇಲೊಂದು ವೈಚಾರಿಕ ಲೇಖನವನ್ನೂ ಸಂಪಾದಕರು ಪ್ರಕಟಿಸಿದ್ದಾರೆ. ಕಷ್ಟಗಳು ಬಂದವು, ಆದರೂ ಎದೆಗುಂದದೆ ಸ್ಕಾಟ್ಲಂಡಿನಲ್ಲೆ ಮನೆ ಮಾಡಿ ಸಮಾಜ ಸೇವೆ ಸಲ್ಲಿಸಿ ಆ ನೆಲದವರಿಂದ ಪುರಸ್ಕೃತರಾದ ದಿಟ್ಟ ಮಹಿಳೆಗೆ ಅಭಿನಂದನೆಗಳು! ಅವರ ಜೀವನಗಾಥೆಯ ಕನ್ನಡಿಯಲ್ಲಿ ಇಲ್ಲಿ ನೆಲಸಿರುವ ಹಿರಿಯ ಕನ್ನಡಿಗರಲ್ಲದೆ ಬೇರೆ ಭಾರತೀಯರು ಸಹ ತಮ್ಮ ಜೀವನದ ತುಂಡುಗಳನ್ನು ಕಂಡಿರಲಿಕ್ಕೆ ಸಾಕು. ಇಂಥದೊಂದು ಜೀವನದ ಸಾಕ್ಷ್ಯ ಚಿತ್ರ ಕೆಲ ವರ್ಷಗಳ ಹಿಂದೆ ( “I for India”) ಬೆಳಕಿಗೆ ಬಂದಿತ್ತು. ಈ ಲೇಖನದ ಕೊನೆಯ ವಾಕ್ಯ ಅಂಥ ಅದೆಷ್ಟು ಜನರ catch phrase ಆಗಿರಬಹುದಲ್ಲ!

  Liked by 2 people

 9. ನಿಮ್ಮ ಜೀವನ ವೃತಾಂತ ಒಂದು ಸಿನೆಮಾ ಕಥೆಯ ತರ ನನ್ನ ಕಣ್ನ ಮುಂದೆ ಓಡಿತು. ,neevu patta shrama adakke sikka puraskaara, aadaroo doorada Bharathada koragu nodidaaga nenapige bandiddu-iruvudellava biTTu iradudaredege tuDivude jeevana.

  Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.