ಹೊಸ ಪರಿಚಯ

(ಕನ್ನಡ ಬಳಗದ ವಲಯದಲ್ಲಿ ಬಹು ಪರಿಚಿತ ಹೆಸರಾದರೂ, ಶ್ರೀಯುತ ಸಿ.ಹೆಚ್. ಸುಶೀಲೇಂದ್ರ ರಾವ್, ಅನಿವಾಸಿಗೆ ಬರೆಯುತ್ತಿರುವುದು ಇದೇ ಮೊದಲು!
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿವರಗೆ ವಿದ್ಯಾಭ್ಯಾಸ. ಪದವಿ ನಂತರ ನಾಲ್ಕು ವರ್ಷ ಕರ್ನಾಟಕ PWD ಯಲ್ಲಿ ಕೆಲಸ.ನಂತರ ಇಂಗ್ಲೆಂಡ್ ನಲ್ಲಿ ಮ್ಯಾಕಲ್ಸ್ ಫೀಲ್ಡ್ ಕೌನ್ಸಿಲ್ ಮತ್ತು ಮ್ಯಾಂಚೆಸ್ಟರ್ ಕೌನ್ಸಿಲ್ ಗಳಲ್ಲಿ ನಿವೃತ್ತಿಯಾಗುವವರೆಗೂ ಕೆಲಸ.
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅಭಿರುಚಿ . ಕನ್ನಡ ಸ್ವದೇಶೀ ಸ್ಪರ್ಶ ಭಾವನೆ. ಆಗಾಗ ಮನಸ್ಸಿಗೆ ತೋಚಿದ ವಿಷಯಗಳನ್ನು ಸಂಕ್ಷಿಪ್ತವಾಗಿ ಬರೆಯಯುವ ಅಭ್ಯಾಸ. ನಿವೃತ್ತಿಯಾದ ನಂತರ ಕಾಲ ಕಳೆಯಲು ಶಾಸ್ತ್ರೀಯ ಸಂಗೀತ ಅಭ್ಯಯನ. ಕನ್ನಡ ಬಳಗದ ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಮೊಟ್ಟ ಮೊದಲ ಪ್ರಾರಂಭದ ಮಿಲನದಲ್ಲಿ ಭಾಗವಹಿಸಿ ಕಾರ್ಯಕಾರಿ ಸಮಿತಿಯ ಸದಸ್ಯನಾಗಿಸೇವೆ ಸಲ್ಲಿಸಿ ಅಧ್ಯಕ್ಷಿಣಿ ಸ್ನೇಹ ಕುಲಕರ್ಣಿ ಹಾಗೂ ಎಲ್ಲ ಕಾರ್ಯಕಾರಿ ಸಮಿತಿ ಸದಸ್ಯರೊಡನೆ ಬಳಗದ ಸಂವಿಧಾನ ರಚನೆ ಮತ್ತು ಚಾರಿಟಿ ಕಮಿಷನ್ ರಿಜಿಸ್ಟ್ರೇಷನ್ ಕೆಲಸಗಳಲ್ಲಿ ಪಾತ್ರ. ಎರಡು ವರ್ಷಗಳ ನಂತರ ಚುನಾವಣೆಯಲ್ಲಿ ಅಧ್ಯಕ್ಷ ಪದವಿಗೆ ಆಯ್ಕೆ ಯಾಗಿ ನಂತರದ ಎರಡು ವರ್ಷಗಳಕ ಕಾಲ ಅಳಿಲು ಸೇವೆ.
ಸುಶೀಲೇಂದ್ರ ಅವರು ಇತ್ತೀಚೆಗೆ ಭಾರತಕ್ಕೆ ಹೋದಾಗ ಅಲ್ಲಿನ ರಾಜಕೀಯದ ಬಗ್ಗೆ ಮೂಡಿದ ಸೋಜಿಗವನ್ನು ಕವನ ರೂಪದಲ್ಲಿ ಹೀಗೆ ಬರೆದಿದ್ದಾರೆ. ವಿಶ್ವದ ಎಲ್ಲ ರಾಜಕೀಯ ವಲಯಕ್ಕೂ ಅನ್ವಯವಾಗುವ ಕವನ!-ಸಂ)
ರಾಜಕೀಯ
ರಾಜಕೀಯ ಎಂಬುದು ಒಂದು ದೊಡ್ಡ ಹುಚ್ಚರ ಸಂತೆ
ಅಲ್ಲಿ ಮಾರುವುದೆಲ್ಲಾ ಬರೀ ಸುಳ್ಳಿನ ಕಂತೆ
ಅಲ್ಲಿ ವ್ಯವಹಾರ ಮಾಡುವವರೆಲ್ಲ ಮೂರ್ಖರಂತೆ
ಅದಕ್ಕೆ ಜನಸಾಮಾನ್ಯರು ಮಾಡ್ಬೇಕಿಲ್ಲ ಚಿಂತೆ
ಕೆಲವರು ಹೇಳುವುದು ಅದು ಮುಳ್ಳಿನಬೇಲಿಯಿಂತೆ
ಅರಿಯದೆ ಆಲ್ಲಿ ನುಗ್ಗಿದರೆ ಚುಚ್ಚುವುದು ಖಚಿತವಂತೆ
ಅರಿತವರು ಹಾವು ಹಲ್ಲಿ ಓತಿಕ್ಯಾತಗಳಂತೆ ನುಸುಳಿಸುವರಂತೆ
ನಿಜಕ್ಕೂ ಅದು ಸುಳ್ಳರ ಮೋಸಗಾರರ ಬೊಂತೆ
ಅಲ್ಲಿ ಸಂತೆಹೊತ್ತಿಗೆ ಮೂರುಮೊಳ ನೇಯುವುದು ನಿತ್ಯ ನಿಯಮವಂತೆ
ಅವರವರೇ ಸೇರಿದಾಗ ಬಂಡತನ ಬಂಡವಾಳತನ ಕೊಚ್ಚಿಕೊಂಡು ಮೆರೆಯುವರಂತೆ
ಅದೆಲ್ಲಾ ಬಯಲಾದಾಗ ಕುಡಿದು ಕೊರಗದವರಂತೆ ನಟನೆ ಮಾಡುವರಂತೆ
ಅವರ ಹೆಂಡಿರು ಮಕ್ಕಳಿಗೆಲ್ಲಾ ಇದೊಂದು ದೊಡ್ಡ ಚಿಂತೆ
ಅವರ ಮುಖ್ಯ ಅಸ್ತಿ ಮಾತಿನ ಚಕಮಕಿಯಂತೆ
ಸಗಣಿ ವರ್ಣಿಸಿ ಅದು ತಿನ್ನಲೇಬೇಕೆಂಬ ನಂಬಿಕೆ ಹುಟ್ಟಿಸುವರಂತೆ
ಒಮ್ಮೊಮ್ಮೆ ಬೇರೆ ಪಂಗಡಗಳೊಡನೆ ಸಂತೆಯಲಿ ವಿವಾಹವಂತೆ
ಹುಚ್ಚರ ಮದುವೆಯಲಿ ಉಂಡವರೇ ಜಾಣರೆಂಬುದು
ನಮ್ಮ ಕನ್ನಡದ ಗಾದೆ ಅನುಭವದ ಮಾತಂತೆ
ಸಿ. ಹೆಚ್. ಸುಶೀಲೇಂದ್ರ ರಾವ್
(Image courtesy-Google)
ಸಂತೆ ಹೊತ್ತಿಗೆ ಮೂರುಮೊಳ ನೇಯುವವರ ಸಂಖ್ಯೆಯೇನೂ ಕಡಿಮೆಯಿಲ್ಲ! ಚುನಾವಣೆ ಸಮಯದಲ್ಲಿ, ವೋಟಿಗೆ ನಾಲಿಗೆ ಚಾಚುತ್ತಾ ಬರುವ, ಕ್ಷುದ್ರ ರಾಜಕಾರಣಿಗಳನ್ನು ನೋಡುತ್ತಾ ಸುಸ್ತಾಗಿದೆ! ಅಕ್ಷರತೆ, ಅನಕ್ಷರತೆ ಎಲ್ಲವೂ ಒಂದೇ! ಯಾರಿಗೂ ಬಗ್ಗದ ಜಾತಿಯಿದು. ಇವರ ಮೆದುಳಿನೊಳಗೆ ಸ್ಕಾನ್ ಮಾಡಿ, ನೋಡಿ ಪರಿಶೀಲಿಸಬೇಕು ಎಂದು ಇತ್ತೀಚೆಗೆ ಜನಪ್ರಿಯ ಚಲನಚಿತ್ರ ನಟನೊಬ್ಬ ಹೇಳಿರುವುದನ್ನು ಕೇಳಿದರೆ, ಈ ಜಾತಿಯ ಜನರ ಮೆದುಳು ನಿಜಕ್ಕೂ ವಿಚಿತ್ರವಾಗಿಯೇ ಇರಬೇಕೇನೋ ಎನ್ನಿಸುತ್ತದೆ.
ಉತ್ತಮ ಕವನ.
ಉಮಾ ವೆಂಕಟೇಶ್
LikeLike
ಆಡು ಮುಟ್ಟದ ಸೊಪ್ಪಿಲ್ಲ, ಕವಿಯ ಹೃದಯವ ತಟ್ಟದ ವಿಚಾರವಿಲ್ಲ ಎನ್ನುವಂತೆ, ರಾಜಕೀಯ ಎಂಬ ವಿಚಾರದ ಬಗ್ಗೆ ಬಹಳ ಸೊಗಸಾಗಿ ಬರೆದಿರುವಿರಿ. ಕವನದಲ್ಲಿ ರಾಜಕೀಯದ ಎಲ್ಲ ಮಜಲುಗಳ ದಟ್ಟ ಪ್ರದರ್ಶನವಿದೆ.
ದೇಸಾಯಿಯವರು ಹೇಳಿರುವಂತೆ, ಈ ದೇಶದ ಚುನಾವಣೆಯ ವಾತಾವರಣದಲ್ಲಿ ಜನಸಾಮಾನ್ಯರ ಚಿಂತನೆಯನ್ನು ಈ ಕವನ ಬಿಂಬಿಸುತ್ತದೆ. ಎಲ್ಲ ದೇಶಗಳ ರಾಜಕೀಯವನ್ನು ಪ್ರತಿ ಬಿಂಬಿಸುವ ಕವನ.
LikeLike
ರಾಜಕೀಯ ಹುಚ್ಚರ ಸಂತೆಯೋ ,ಮೂರ್ಖರ ಮೇಳವೋ ಆ ದೇವರೇ ಬಲ್ಲ.ಇದಕ್ಕೆ ಯಾವ ಡಿಗ್ರಿ ವಗೈರೆ ಬೇಕಿಲ್ಲ.ಜನರನ್ನು ಮೂರ್ಖರಾಗಿಸುವ, ಅವರು ಮಾತನಾಡಲು ಬಾರದಂತೆ ಮಾಡುವ ಕಲೆಯೊಂದಿದ್ದರೆ ಸಾಕು.ಅವರ ವರ್ಣನೆಗೆ ಪದಗಳ ಕೊರತೆ.ನಮ್ಮ ಭಾರತದ ರಾಜಕೀಯದ ವಸ್ತುಸ್ಥಿತಿಯ ವಾಸ್ತವಿಕ ಕವನ.ನಿಮ್ಮ ಸುಂದರ ಕವನಕ್ಕೆ ಅಭಿನಂದನೆಗಳು.
ರಾಜಕೀಯ ಎಂದರೆ ಹುಚ್ಚರ ಸಂತೆಯೋ
ಮೂರ್ಖರ ಮೇಳವೋ ನಾ ಕಾಣೆ
ಬೇಕಿಲ್ಲ ಯಾವ ಅರ್ಹತೆ,ಅಕ್ಷರತೆ
ಶಿಷ್ಟಾಚಾರತೆ ಗೊತ್ತಿದ್ದರೆ
ಅರ್ಥವಿಲ್ಲದ ಮಾತು ಕತೆ
ಎಲ್ಲಿಯೂ ಸಲ್ಲದವರು ಸಲ್ಲುವರು
ಇಲ್ಲಿ ಎಂದರೆ ಸಾಕೆ ?
ಎಂಬುದನ್ನು ಸುಂದರವಾಗಿ ಬಿಂಬಿಸುವ ಕವನ.
ಸರೋಜಿನಿ ಪಡಸಲಗಿ
LikeLike
ಸುಶೀಲೇಂದ್ರರಿಗೆ ನಿಮ್ಮ ರಾಜಕೀಯ ಕವನ ಬಲು ಸ್ವಾರಸ್ಯವಾಗಿದೆ.ಹೃತ್ಪೂರ್ವಕ ನಮಸ್ಕಾರ. ನಿಮ್ಮಲ್ಲಿ ಇದು ವರೆಗೆ ಸೂಪ್ತವಾಗಿದ್ದ ಕವಿತೆ ಬರೆಯುವ ಕಲೆ ಇಷ್ಟು ಮೌಲ್ಯವಾಗಿದ್ದನ್ನು ಕಂಡು ನಮ್ಮಿಬ್ಬರಿಗೂ ಅತೀವ ಹರ್ಷವಾಯಿತು.ಇದು ವರೆಗೆ ನಮ್ಮ ಅನಿವಾಸಿ ವೃಂದದಲ್ಲಿ ಏಕೆ ನೀವು ಲೇಖನ ,ಕವಿತೆ ಬರೆದಿಲ್ಲ ಎಂದು ದಿಗಿಲು ಬಿದ್ದಿತ್ತು. ಇನ್ನು ಮಾತ್ರ ನಿಮ್ಮಲ್ಲಿರುವ ಉತ್ಸಾಹ,ಅಭಿಮಾನ,ಕನ್ನಡದ ಬರವಣಿಗೆ ಎಲ್ಲ ಕನ್ನಡ ಮಿತ್ರರಿಗೆ ಸದಾ ಮುಟ್ಟಲಿ ಎಂದು ಕಳಕಳಿಯ ಕೋರಿಕೆ. ನಿಮ್ಮಂತಹ ಹೀರಿಯ ಕನ್ನಡ ಬಳಗದ ಆಜೀವ ಸದಸ್ಯರ ಸಲಹೆ,ಸಹಕಾರ ನಿರಂತರ ಇದ್ದಲ್ಲಿ ನಮ್ಮ ಅನಿವಾಸಿ ಪ್ರಗತಿಯಾಗಲು ಸಾಧ್ಯ .ನಾನಾದರೂ ಈ ಅನಿವಾಸಿ ವೃಂದಕ್ಕೆ ಹೊಸಬ. ಮನಸ್ಸಿನಲ್ಲಿದ್ದ ವಿಚಾರಗಳನ್ನು ನೀರೂಪಿಸಲು ಯತ್ನಿಸುತ್ತಾ ಗಾಡಿ ಸಾಗಿಸುತ್ತಿದ್ದೇನೆ ! ನಿಮ್ಮಿಂದ ಇನ್ನೂ ಲೇಖನ,ಕವಿತೆ ಬರುವ ಆಶೆ
– from .ಡಾಕ್ಟರ್ ಅರವಿಂದ ಕುಲ್ಕರ್ಣಿ
LikeLike
ಡಾ ಸಾಮ್ಯುಯೆಲ್ ಜಾನ್ಸನ್ ಅಂದ ಮಾತು: Patriotism is the last refuge of the scoundrels. ಅದನ್ನು ದೇಶ ಭಕ್ತಿಯ (patriotism) ಬದಲು politicsಗೂ ಅನ್ವಯಿಸ ಬಹುದು. ಆ ’ದೇಶಭುಕ್ತ’ ರಾಜಕಾರಣಿಗಳು ಜಗತ್ತಿನ ಎಲ್ಲೆಡೆಯೂ ಅದೇ ವರ್ಗದವರು ಎಂಬ ಸತ್ಯವನ್ನುಸದ್ಯ ಈ ದೇಶದಲ್ಲೂ ಕಾಣುತ್ತಿದ್ದೇವೆ ಅಲ್ಲವೆ? ಆ berexit ’ಸಗಣಿ ವರ್ಣಿಸಿ’ ತಾವೂ ತಿಂದು, ನಮಗೂ ಉಣಿಸುತ್ತಿದ್ದಾರೆ, ’ಮಾಡಿದ್ದುಣ್ಣೋ ಮಹಾರಾಯ!’ ಅಂದಂತೆ. ಮುಂದಿನವಾರದ (ಜೂನ್ ೮) ಚುನಾವಣೆಗೆ ಮೊದಲು ಸರಿಯಾಗಿ ಬಂದ ಸುಶೀಲೇಂದ್ರರಾವ್ ಅವರ (topical) ಮೊದಲ ಕವನವನ್ನು ಸ್ವಾಗತಿಸುತ್ತ ಅವರಿಗೂ ಸುಸ್ವಾಗತಂ ಹೇಳೋಣ. ಇನ್ನಷ್ಟು ಬರೆಯಿರಿ, ರಾಯರೇ!
LikeLike