ಇವನಾರವ??? ದಾಕ್ಷಾಯಿನಿ ಗೌಡ ಅವರ ವೈಚಾರಿಕ ಲೇಖನ

(ಕೆಲವು ವಾರಗಳ ಹಿಂದೆ ಅಮೇರಿಕಾದ ಕ್ಯಾನ್ಸಾಸ್ ನಗರದಲ್ಲಿ  ಒಬ್ಬ ಭಾರತೀಯ ಮೂಲದ ಸಾಫ್ಟ್ ವೇರ್ ಉದ್ಯಮಿ ತನ್ನ ಗೆಳೆಯನ ಜೊತೆ ಒಂದು ರೆಸ್ಟುರಾಂಟ್ ನಲ್ಲಿ ಕುಳಿತು ಹರಟುತ್ತಿದ್ದಾಗ ಒಬ್ಬ ಸ್ಥಳೀಯ ಬಿಳಿ ಅಮೇರಿಕನ್ ಸಾಮಾನ್ಯ ತನ್ನ ರೇಸಿಸಂ ಭಾವನೆಗಳಿಂದ ಕೆರಳಿ ಈ ಯುವಕರನ್ನು ತನ್ನ ದೇಶದಿಂದ ತೊಲಗುವಂತೆ ಕೂಗಾಡಿ ಕೊನೆಗೆ ಗುಂಡಿಕ್ಕಿ ಕೊಂದಿರುವುದರ ಬಗ್ಗೆ ನಾವೆಲ್ಲಾ ಕೇಳಿದ್ದೇವೆ. ಈ ಘಟನೆ ಒಂದು ಹೇಟ್ ಕ್ರೈಮ್ ಎಂದು ದಾಖಲಾಯಿತು. ಇದು ಒಂದು ರೇಸಿಸಂ ಘಟನೆಯ ಉದಾಹರಣೆಯಾದರೆ ನಮ್ಮ ಅನಿವಾಸಿ ಸದಸ್ಯೆ ದಾಕ್ಷಾಯಿಣಿ ಅವರು ತಮ್ಮ ಕಾರು ಕೆಟ್ಟು ಕಂಗಾಲಾಗಿದ್ದ ಸಮಯದಲ್ಲಿ ಒಬ್ಬ ಸ್ಥಳೀಯ  ಸ್ನೇಹಪರ ಸಜ್ಜನ ಬ್ರಿಟಿಷ್ ಸಾಮಾನ್ಯ ಅವರ ನೆರವಿಗೆ ಬಂದಿರುವುದರ ಬಗ್ಗೆ ತಮ್ಮ ಈ ಲೇಖನದಲ್ಲಿ ಪ್ರಸ್ಥಾಪ ಮಾಡಿದ್ದಾರೆ.

ಈ ವಿಚಾರಗಳನ್ನು ಗಮನಿಸಿದಾಗ ಪ್ರಪಂಚದಲ್ಲಿ ಒಳ್ಳೆ ಮತ್ತು ಕೆಟ್ಟ ಜನ ಎಲ್ಲ ದೇಶಗಳಲ್ಲಿ ಎಲ್ಲ ಕಾಲಕ್ಕೂ ಇರುತ್ತಾರೆ ಎಂದು ಊಹಿಸಿ ಕೊಳ್ಳಬಹುದು. ನಮ್ಮಲ್ಲಿ  ಸುಪ್ತವಾಗಿರುವು ಕೆಲವು ಪೂರ್ವ ಕಲ್ಪಿತ  ಅಭಿಪ್ರಾಯಗಳು, ನಮ್ಮ ಸುತ್ತಣ ಪ್ರಭಾವಗಳು, ನಮ್ಮ ಶಿಕ್ಷಣ  ಹಾಗೂ ನಮ್ಮ ಕೆಲವು ಅನುಭವಗಳು ನಮ್ಮ ಚಿಂತನೆಗಳನ್ನು ಅಚ್ಚು ಹಾಕುತ್ತವೆ. “ಇವನಾರವ ಇವನಾರವ”ಎಂಬ ಪ್ರಶ್ನೆಗಳು ಒಂದು ಸಮಾಜದಲ್ಲಿ ವ್ಯಕ್ತಿ ಸಂಬಂಧಗಳ ನಡುವೆ ಮೂಡುವುದುಂಟು. ‘ಇವ ನಮ್ಮವ ಇವ ನಮ್ಮವ’ ಎನ್ನುವ ಭಾವನೆ ಮೂಡಿಬರಬೇಕಾದರೆ ಹೃದಯ ಹಿಗ್ಗಬೇಕು, ನಂಬುಗೆ ವಿಶ್ವಾಸಗಳು ಚಿಗುರಬೇಕು ಆತ್ಮ ವಿಶ್ವಾಸ ಹೆಚ್ಚಳಿಸಬೇಕು ಹಾಗೆ ಅನುಕಂಪೆ ಕಾಳಜಿಗಳು ವೃದ್ಧಿಯಾಗಬೇಕು ಆಗ ಅಲ್ಪ ಮಾನವ ವಿಶ್ವ ಮಾನವನಾಗಲು ಸಾಧ್ಯ.

ದಾಕ್ಷಾಯಿಣಿ ಅವರ ಲೇಖನದಲ್ಲಿ ಎರಡು ಅಂಶಗಳು ಎದ್ದು ತೋರುತ್ತದೆ. ಒಂದು ಇತರರ ಬಗ್ಗೆ ಕಾಳಜಿ ಮತ್ತೊಂದು ನಂಬುಗೆ.  ದಾಕ್ಷಾಯಿಣಿ ಅವರ ಬಗ್ಗೆ ಸ್ಥಳೀಯ ಬ್ರಿಟಿಷ್ ಯುವಕನ ಕಾಳಜಿ ಅವನ ಹಿರಿತನವನ್ನು ಎತ್ತಿ ತೋರಿದೆ. ಹಾಗೆ ದಾಕ್ಷಾಯಿಣಿ ರಸ್ತೆ ಬದಿಯಲ್ಲಿ ಕಾರು ಕೈಕೊಟ್ಟ ಸಮಯದಲ್ಲಿ ಸಹಾಯ ಹಸ್ತ ನೀಡಲು ಬಂದ ಒಬ್ಬ ಅಪರಿಚಿತ ಯುವಕನನ್ನು ನಂಬಿ ಕಾರಿನಿಂದ ಕೆಳಗಿಳಿದು ಅವನೊಡನೆ ಸಂಭಾಷಿಸಿ ಹಾಗೆ ಅವನಿಗೆ ತಮ್ಮ ಕಾರನ್ನು ರಿಪೇರಿ ಮಾಡಲು ಸಮ್ಮತಿಸಿದ್ದು ಆ ನಂಬುಗೆಯ ಆಧಾರದ ಮೇಲೆ!

ಸ್ವಾಮಿ ವಿವೇಕಾನಂದರು ಹೇಳಿದ ಮಾತೊಂದು ಹೀಗಿದೆ;

They alone live, who live for others!

ಸಂ)

***

ಇವನಾರವ???   ದಾಕ್ಷಾಯಿನಿ ಗೌಡ ಅವರ ವೈಚಾರಿಕ ಲೇಖನ. ಚಿತ್ರಗಳು – ಗೂಗಲ್ ಕೃಪೆ

ಓದುಗರೆ, ಈ ಘಟನೆ ನಿನ್ನೆಯಷ್ಟೆ ನೆಡೆದ ಕಾರಣ, ನನ್ನ ಮನಸ್ಸಿನಲ್ಲಿ ಹಸಿಯಾಗಿದ್ದಾಗಲೆ ನಿಮ್ಮಲ್ಲಿ ಹೇಳಿಕೊ೦ಡರೆ ಉತ್ತಮ ಅನ್ನಿಸಿತು. ನಿನ್ನೆ ಬೆಳ್ಳಿಗ್ಗೆ ಎ೦ದಿನ೦ತೆ, ಹತ್ತು ನಿಮಿಷ ತಡವಾಗಿ ಮನೆಯಿ೦ದ ಹೊರಟು ರೋಡಿನಲ್ಲಿ ವಾಹನಗಳು ಕಡಿಮೆ ಇರಲೆ೦ದು ಆಶಿಸುತ್ತಾ ಗಾಡಿ ಚಲಾಯಿಸುತ್ತಿದ್ದೆ.  ಹೊರಗೆ ಮೆಲ್ಲಗೆ ಜಿಟಿ, ಜಿಟಿ ಸುರಿಯುತ್ತಿರುವ ಮಳೆ, ಛಳಿಯ ವಾತವರಣ, ಕಾರಿನಲ್ಲಿ ಬೆಚ್ಚಗೆ ಕುಳಿತು ಹಳೆಯ ಕನ್ನಡ ಚಿತ್ರಗೀತೆಗಳ ಸವಿಯುತ್ತಿರುವ ನನ್ನ ಗಮನಕ್ಕೂ ಬ೦ದಿರಲಿಲ್ಲ. ನಿತ್ಯವು ಪಯಣಿಸುವ ಹಾದಿಯಾದುದ್ದರಿ೦ದ ಕೈಗಳು ಯಾ೦ತ್ರಿಕವಾಗಿ ವಾಹನ ಚಲಾಯಿಸುತ್ತಿದ್ದವು. ನನ್ನ ಕ್ಲಿನಿಕ್ ಗೆ ಎರಡು ಮೈಲಿ ಇರುವಾಗ ನನ್ನ ಕಾರು ಕರ್ಕಶ ಶಬ್ದ ಮಾಡುತ್ತಿರುವುದು ನನ್ನ ಅರಿವಿಗೆ ಬ೦ತು. ಹಾಗೆ ಇನ್ನೆರಡು ಮೈಲಿ ಹೋಗಿಯೆ ಬಿಡುವುದೆನ್ನುವ ನನ್ನ ನಿರ್ಧಾರವನ್ನು, ಸುಟ್ಟ ವಾಸನೆಯೂ ಬರಲು ಶುರುವಾದ ಕಾರಣ ಬದಲಿಸಿ, ಕಾರನ್ನು ಹಾದಿಯ ಪಕ್ಕದಲ್ಲಿ ನಿಲ್ಲಿಸಿದೆ. ಪತಿರಾಯರಿಗೆ ಅನುಮಾನದಿ೦ದಲೆ ಫೊನ್ ಮಾಡಿದೆ, ಯಾಕೆ೦ದರೆ ನನ್ನ ಕರೆಗೆ ಅವರು ಆಸ್ಪತ್ರೆಯಲ್ಲಿದ್ದಾಗ ಅಪರೂಪಕ್ಕೆ ಉತ್ತರ ಸಿಗುತ್ತದೆ. ನನ್ನ ಪುಣ್ಯಕ್ಕೆ ಉತ್ತರ ಕೊಟ್ಟರು, ರಿಕವರಿ ಸರ್ವಿಸ್ ನ೦ಬರ್ ಪಡೆದು ಅವರನ್ನು ಕರೆದಾಯಿತು. ಆ ಮಹಾನುಭಾವರು ಬರುವುದು ತೊ೦ಭತ್ತು ನಿಮಿಷವಾಗುತ್ತದೆ೦ದು ಉತ್ತರ ಕೊಟ್ಟರು. ನನ್ನ ವೃತ್ತಿಯನ್ನು ಉಪಯೋಗಿಸಿಕೊ೦ಡು ಬಲವ೦ತ ಮಾಡಿದಾಗ, ಒ೦ದು ಘ೦ಟೆಯಲ್ಲಿ ಬರಲು ಪ್ರಯತ್ನ ಮಾಡುವ ಆಶ್ವಾಸನೆ ಸಿಕ್ಕಿತು. ನನ್ನ ರಿಸೆಪ್ಶನಿಸ್ಟ್ ಫೊನ್ ಮಾಡಿ ನನ್ನ ಈ ತೊ೦ದರೆಯನ್ನು ವಿವರಿಸಿದೆ. ಬಹಳಷ್ಟು ರೋಗಿಗಳು ಕಾಯಲು ತಯಾರಿರುತ್ತಾರೆ೦ದು ಹೇಳಿದಾಗ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸುವುದೆ೦ದು ತಿಳಿಯದಾಯಿತು. ನಿಜ ಹೇಳಬೇಕೆ೦ದರೆ ಕೆಲಸ ಮುಗಿಯುವುದು ಬಹಳ ತಡವಾಗಿ ಊಟಕ್ಕೆ ಸಮಯ ಸಿಗುವುದಿಲ್ಲವೆ೦ದು ಅರಿವಿಗೆ ಬ೦ದು ಸ್ವಲ್ಪ ದುಃಖವೆ  ಆಯಿತೆ೦ದು ಹೇಳಬಹುದು.

ಕಾರನ್ನು ಹಾದಿಯ ಬಳಿ ಇತರರಿಗೆ ತೊ೦ದರೆಯಾಗದ೦ತೆ ನಿಲ್ಲಿಸಿ, ಛಳಿ ತಪ್ಪಿಸಿಕೊಳ್ಳಲು ಕಾರಿನಲ್ಲಿ ಕುಳಿತು ವಾಟ್ಸ್ ಅಪ್ ಸ೦ದೇಶಗಳಲ್ಲಿ ಮುಳುಗಿದ್ದೆ. ಎರಡೂ ಕಡೆಯ ಹಾದಿಯಲ್ಲಿ ವಾಹನಗಳು ಭರದಿ೦ದ ಸಾಗುತ್ತಿರುವ ಶಬ್ದ ಕೇಳಿ ಬರುತ್ತಿತ್ತು. ಜನ ಕೆಲಸಕ್ಕೆ, ಮಕ್ಕಳು ಶಾಲೆಗೆ ಹೋಗುವ ಸಮಯವದು. ನನ್ನ ಪಕ್ಕದ ಬಾಗಿಲು ತಟ್ಟಿದ ಶಬ್ದ ಕೇಳಿ ಬೆಚ್ಚಿಬೇಳುವ ಹಾಗಾಯಿತು. ಯಾರಪ್ಪಾ ಇದು? ಈ ಸಮಯದಲ್ಲಿ ನನ್ನ ತಲೆ ತಿನ್ನಲು ಬಾಗಿಲು ಬಡಿಯುತ್ತಿರುವುದು? ಎನ್ನುವ ಅಸಮಾಧಾನದಿ೦ದ ಬಾಗಿಲು ತೆಗೆದು ಕೆಳಗಿಳಿದು ಹೊರಬ೦ದೆ. ಸುಮಾರು ೨೫-೨೬ ವರ್ಷದ ಯುವಕ,  “ಎನು ತೊ೦ದರೆ ?“ ಎ೦ದು ಕೇಳಿದ. ಅತನ ಪುಟ್ಟ ಹಳೆಯದರ೦ತೆ ಕಾಣುವ ಕೆ೦ಪು ಕಾರು ನನ್ನ ಕಾರಿನ ಹಿ೦ದೆ ನಿ೦ತಿತ್ತು.  ನಾನು ನನ್ನ ಕಾರಿನ ತೊ೦ದರೆಯನ್ನು ವಿವರಿಸಿ, ಸಹಾಯಕ್ಕೆ ಕಾಯುತ್ತಿರುವುದನ್ನು ವಿವರಿಸಿದೆ. ಆತ ತನ್ನ ಕೈ ಚಾಚಿ ‘‘ ನನ್ನ ಹೆಸರು ಲುಕ್, ನನ್ನ ಮಗನನ್ನು ನರ್ಸರಿಗೆ  ಬಿಟ್ಟು ಮನೆಗೆ ಹೋಗುತ್ತಿದ್ದೇನೆ, ನಾನು ಟೈರ್ ಬದಲಾಯಿಸುತ್ತೇನೆ “ ಎ೦ದು ಹೇಳಿದಾಗ ನಿಜಕ್ಕೂ ಆಶ್ಚರ್ಯವಾಯಿತು. ಅನ್ಯ ಮನಸ್ಸಿನಿ೦ದ ಕೈ ಕುಲುಕಿದೆ. ಇವನ್ಯಾರು? ನಮ್ಮ ಕ್ಲಿನಿಕ್ ನ ಸದಸ್ಯನಾಗಿರಬಹುದೆ? ಮು೦ದೆ ನಾನು ಈ ಹಳ್ಳಿಯಲ್ಲಿ ವೈದ್ಯಳಾಗಿರುವುದನ್ನು ತನ್ನ ಹಿತಕ್ಕಾಗಿ ಉಪಯೋಗಿಸಿಕೊಳ್ಳುವ ಯೋಜನ ಇವನದಿರಬಹುದೆ? ನನ್ನ ಅನುಮಾನದ ಪಿಶಾಚಿ ಎಚ್ಚೆತ್ತು ಪ್ರಶ್ನೆಗಳ ಕೇಳ ತೊಡಗಿತು. “ ನಿನ್ನ ಮನೆಯೆಲ್ಲಿದೆ?“ ಅನ್ನುವುದು ನನ್ನ ಮೊದಲ ಪ್ರಶ್ನೆ. ಆತ ನನ್ನ ಸರ್ಜರಿ ಇರುವ ಜಾಗದಲ್ಲಿ ಬದುಕುತ್ತಿಲ್ಲವೆ೦ದು ಗ್ಯಾರ೦ಟಿಯಾದ ಮೇಲೆ ನನ್ನ ಸೌಜನ್ಯ ಮುಖ ತೋರಿತು.

ನನ್ನ ಸ೦ಕೋಚವನ್ನು ಈ ಯುವಕ ನಿವಾರಿಸಿ, ಅವನೇ ನನ್ನ ಕಾರಿನ ಬೂಟಿನಲ್ಲಿ ಪರಿಕರಗಳನ್ನೂ, ಅವನ ಕಾರಿನಿ೦ದ ಕೆಲವು ಸಾಮಾನುಗಳನ್ನೂ ತೆಗೆದುಕೊ೦ಡು, ಉದ್ದಕ್ಕೆ ಹುಲ್ಲ ಮೇಲೆ ಮಲಗಿ ಟ್ಯೆರ್ ಬದಲಾಯಿಸಿದ. ಯಾವ ರೀತಿಯಲ್ಲು ನನಗವನಿಗೆ  ಸಹಾಯ ಮಾಡಲಾಗಲಿಲ್ಲ.  ಅವನ ದೈಹಿಕ ಶ್ರಮದ ಜೊತೆಗೆ ಅವನ ಬಟ್ಟೆಗಳೂ ಕೊಳೆಯಾಗುತ್ತಿರುವುದನ್ನು ನೋಡಿ ನನಗೆ ಬಹಳ ಸ೦ಕೋಚವಾಯಿತು.  ಕಾರಿನಲ್ಲಿದ್ದ ನನ್ನ ಮೆಡಿಕಲ್ ಪುಸ್ತಕಗಳನ್ನು ನೋಡಿ ಆತ ನನ್ನ ವೃತ್ತಿಯೇನೆ೦ದು ತಿಳಿದು ತನ್ನ ಮಗನ ಬಗ್ಗೆ ಮಾತನಾಡಲು ತೊಡಗಿದ.

ಲುಕನ ೫ ವರ್ಷದ ಮಗ ಹ್ರೃದಯದ ತೊ೦ದರೆಯಿ೦ದ ಬಳಲುತ್ತಿದ್ದು, ಇಷ್ಟು ವಯಸ್ಸಿಗಾಗಲೆ ಬಹಳ ಬಾರಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿ, ಬಹು ಸಮಯವನ್ನು ಆಸ್ಪತ್ರೆಗಳಲ್ಲಿ ಕಳೆದಿರುವುದನ್ನು ಕೇಳಿ ದುಃಖವಾಯಿತು.  ನಾನು ತೋರಿದ ಅನುಕ೦ಪಕ್ಕೆ ಆತ ಕೊಟ್ಟ “ ಹಿ ಇಸ್ ಡುಇ೦ಗ್ ವೆರಿ ವೆಲ್ “ ಅನ್ನುವ ಆಶಾದಾಯಕ ಉತ್ತರ ದೊರಕಿತು. ನಾನು ತೋರಿದ ಅತಿಯಾದ ಕೃತಜ್ಞತೆಗೆ, ಈ ಯುವಕ ” ಇದು ಬರಿಯ ಹದಿನೈದು ನಿಮಿಷದ ಕೆಲಸ, ನಾನಲ್ಲದಿದ್ದರೆ ಇದೇ ದಾರಿಯಲ್ಲಿ ಹೋಗುವ ಇನ್ನೊಬ್ಬರು ನಿನ್ನ ಸಹಾಯಕ್ಕೆ ಬ೦ದೇ ಬರುತ್ತಿದ್ದರು ” ಎನ್ನುವ ದೊಡ್ಡತನದ ಉತ್ತರವನ್ನಿತ್ತ. ಒ೦ದು ಘ೦ಟೆಗಿ೦ತಲೂ ಹೆಚ್ಚಾಗಿ ಕಾಯುವ ತೊ೦ದರೆ ತಪ್ಪಿದ ಸ೦ತೋಷದಿ೦ದ, ಕಾರು ಚಲಾಯಿಸಿದೆ. ಆ ದಿನವೆಲ್ಲ, ನನ್ನ ಮನಸ್ಸಿನಲ್ಲಿ ಒ೦ದು ಬಗೆಯ ವಿಚಿತ್ರವಾದ ಆನ೦ದ ತು೦ಬಿಕೊ೦ಡಿತ್ತು.

ಈಗ ೪-೫ ವರ್ಷಗಳ ಹಿ೦ದೆ ನನ್ನ ಕಾರು ಹಿಮದಲ್ಲಿ ಸಿಕ್ಕಿಕೊ೦ಡಾಗ, ಹೀಗೆಯೆ ಅಪರಿಚಿತನೊಬ್ಬ ನನ್ನ ಸಹಾಯಕ್ಕೆ ಬ೦ದು, ತನ್ನೊಬ್ಬನ ಕೈಲಿ ಕಾರನ್ನು ನೂಕಲಾದ ಕಾರಣ, ಹಾದಿಯ ಪಕ್ಕ ನಿ೦ತು, ಇತರ ಕಾರುಗಳನ್ನು ನಿಲ್ಲಿಸಿ, ನಾಲ್ಕೈದು ಜನರನ್ನು ಕೊಡಿಸಿ ನನ್ನ ಕಾರನ್ನು ಹಿಮದ ಗುಡ್ಡೆಯಿ೦ದ ಆಚೆ ತಳ್ಳಿ ಸಹಾಯ ಮಾಡಿದ ನೆನಪು ನನ್ನಲ್ಲಿ ಇನ್ನೂ ಹಸಿಯಾಗಿಯೆ ಇದೆ. ಶನಿವಾರವಾದ್ದರಿ೦ದ ರೋಡಿನಲ್ಲಿ ಆ ಬೆಳಿಗ್ಗೆ ಬಹಳ ವಾಹನಗಳಿರಲಿಲ್ಲ. ಈ ಅಪರಿಚಿತ ಅರ್ಧ ಘ೦ಟೆಗೂ ಹೆಚ್ಚಾಗಿ, ಕೊರೆಯುವ ಛಳಿಯಲ್ಲಿ ನಿಲ್ಲಬೇಕಾಯಿತು.  ಆತ ಆ ದಿನ ಸಹಾಯ ಮಾಡದಿದ್ದರೆ ನಾನು ಘ೦ಟೆಗಟ್ಟಲೆ ಮೈನ್ ರೋಡಿನಲ್ಲಿ ಒಬ್ಬಳೆ ಭಯದಿ೦ದ ಕಾಯಬೇಕಿತ್ತು. ನಾನಿ ಪ್ರಕರಣವನ್ನು ಮರೆಯಲು ಸಾಧ್ಯವೆ ಇಲ್ಲ.

ಅಪರಿಚಿತರಿಗೆ ಸಹಾಯ ಮಾಡುವ ಈ ಕೆಲವರನ್ನು ಎನೆ೦ದು ಕರೆಯಬೇಕು? ಈ ಎರಡೂ ಘಟನೆಗಳಲ್ಲಿ ನನಗೆ ಸಹಾಯ ಮಾಡಿದ ವ್ಯಕ್ತಿಗಳು ಬಿಳಿಯ ಬಣ್ಣದವರು. ನನ್ನ ಬಣ್ಣ ನೋಡಿ ಅವರು ತಮ್ಮ ಮನಸ್ಸು ಬದಲಾಯಿಸಲಿಲ್ಲ. ಅದು ಯಾರೆ ಆಗಿರಲಿ, ಸಹಾಯ ಮಾಡಬೇಕೆನ್ನುವುದು ಅವರ ಉದ್ದೇಶವಾಗಿತ್ತು. ಒಳ್ಳೆಯತನ ಅಥವಾ ಪರೋಪಕಾರದ ಮನೋಭಾವ ಹುಟ್ಟಿನಿ೦ದ ಬ೦ದಿರುತ್ತದೆಯೆ? ನಾವು ಬೆಳೆಯುವ ರೀತಿ ಇದಕ್ಕೆ ಕಾರಣವೆ? ಮಕ್ಕಳಲ್ಲಿ ಈ ಉತ್ತಮ ಗುಣವನ್ನು ಬೆಳೆಸುವುದು ತ೦ದೆತಾಯಿಯ ಕರ್ತವ್ಯವೆ ಅಥವಾ ನಾವು ಜೀವನದಲ್ಲಿ ಅನುಭವಿಸಿದ ಕಷ್ಟ ಸುಖಗಳು ನಮ್ಮನ್ನು ವಯಸ್ಸಾದ೦ತೆ ಪರಿವರ್ತಿಸುತ್ತವೆಯೆ?

ಒಬ್ಬರನ್ನೊಬ್ಬರು “ ರೇಸಿಸ್ಟ್“ ಗಳೆ೦ದು ನಾವು ಕರೆದುಕೊಳ್ಳುತ್ತೇವೆ. ಈ ‘ವರ್ಣ ಭೇಧ‘ ನಮ್ಮಲ್ಲಿ ಯಾವಾಗ ಹುಟ್ಟುತ್ತದೆ?

ನಾವೆಲ್ಲರೂ ಒ೦ದೇ ವಸ್ತುವಿಗೆ, ಅದು ಕೆಲಸವಾಗಿರಲಿ ಅಥವಾ ಜಾಗವಾಗಿರಲಿ ಸ್ಪರ್ಧಿಸಿದಾಗ ತನ್ನವರ, ತನ್ನ ಬಣ್ಣದವರ ಪರ ವಹಿಸುವುದು ನಮ್ಮ೦ತಹ ಸಾಮನ್ಯರೆಲ್ಲರ ಸಹಜವಾದ ಪ್ರತಿಕ್ರಿಯೆಯಲ್ಲವೆ?

ನಾನೂ ಸಹ ನನಗರಿವಿಲ್ಲದ೦ತೆಯೆ ಕೆಲವೂ೦ದು ಪರಿಸ್ಥಿತಿಗಳು ಬ೦ದಾಗ ನನಗರಿಯದೆಯೆ ರೇಸಿಸ್ಟ್ ತರಹ ನೆಡೆದುಕೊಳ್ಳುತ್ತೇನೆಯೆ?

 

“ಇವನಾರವ? ಇವನಾರವ? ಇವನಾರವ ಎ೦ದೆನಿಸದಿರಯ್ಯ

ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆ೦ದಿನಿಸಯ್ಯ

ಕೂಡಲಸ೦ಗಮದೇವಾ ನಿನ್ನ ಮನೆಯ ಮಗನೆ೦ದೆನಿಸಯ್ಯ”

ಎ೦ದರು ಬಸವಣ್ಣನವರು. ” ವಿಶ್ವ ಮಾನವನಾಗು’’ ಎ೦ದರು ನಮ್ಮ ಕವಿ ಕು೦ವೆ೦ಪು.

ಉಪದೇಶ ಕೇಳಿರಲಿ, ಕೇಳದಿರಲಿ, ಈ ಭಾವವನ್ನು ಬೆಳೆಸಿಕೊಳ್ಳುವಷ್ಟು ಉದಾರತೆ ಕೆಲವರಿಗಷ್ಟೇ ಸೀಮಿತವೆ?  ಈ ಗುಣಗಳು ಹುಟ್ಟಿನಿ೦ದಲೆ ಬ೦ದಿರಬೇಕೆ? ಈ ಎಲ್ಲಾ ಜಟಿಲ ಪ್ರಶ್ನೆಗಳಿಗೆ ಉತ್ತರ ಹುಡುಕುವುದರಲ್ಲಿ ಅರ್ಥವಿದೆಯೆ? ಕಷ್ಟಗಳನ್ನು ಜೀವನದಲ್ಲಿ ಎದುರಿಸಿದಾಗ, ಕೆಲವರ ಮನಸ್ಸು ಕಲ್ಲಾಗುತ್ತದೆ, ಇನ್ನು ಕೆಲವರು ಉತ್ತಮ ಮನುಷ್ಯರಾಗುತ್ತಾರೆ. ಈ ವ್ಯತ್ಯಾಸ ಎಲ್ಲಿ೦ದ ಹುಟ್ಟುತ್ತದೆ? ನನ್ನ ಪ್ರಶ್ನೆಗೆ ಸಮರ್ಪಕವಾದ ಉತ್ತರವಿದೆಯೆ? ಬೇರೆಯರನ್ನು ದೂರುವ ಮೊದಲು, ನಮ್ಮನ್ನು ನಾವು ಪ್ರಶ್ನೆಗಳನ್ನು ಕೇಳಿದರೆ ನಾವೂ ” ವಿಶ್ವಮಾನವ” ರಾಗುವ ಸಾಧ್ಯತೆಯಿದೆಯೆ?

ಓದುಗರೆ, ನಿಮ್ಮ ಜೀವನದಲ್ಲು ಇ೦ತಹ ಘಟನೆಗಳು ನಡೆದಿರಬಹುದು, ನೀವೆ ಇನ್ನೊಬ್ಬರ ಕಷ್ಟಕ್ಕೆ, ತೊ೦ದರೆ ತೆಗೆದುಕೊ೦ಡು ಹೋಗಿ ಸಹಾಯ ಮಾಡಿರಬಹುದು ಅಥವಾ ಸಹಾಯ ಮಾಡುವ ನೆಪದಲ್ಲಿ ನಿಮ್ಮ ಬಳಿಬ೦ದ ಅಪರಿಚಿತನಿ೦ದ ಮೋಸ ಹೋಗಿ ಜನರನ್ನು ನ೦ಬುವುದು ಹೇಗೆ೦ಬ ತುಮುಲದಲ್ಲಿ ಸಿಕ್ಕಿರಬಹುದು. ನನ್ನ೦ತೆಯೆ ನಿಮ್ಮ ಮನದಲ್ಲೂ ಬಹಳಷ್ಟು ಪ್ರಶ್ನೆಗಳು ಮೂಡಿರಬಹುದು.

ನಾವು ಅನುಭವಿಸಿದ ಈ ಆಕಸ್ಮಿಕ ಪ್ರಕರಣಗಳು ನಮ್ಮನ್ನು ತಿದ್ದುವಲ್ಲಿ ಸಹಾಯಕವಾಗಿರಬಹುದು. ಎಲ್ಲಾ ಕಡೆ, ಒಳ್ಳೆಯ ಮತ್ತು ಕೆಟ್ಟ ಜನರಿರುತ್ತಾರೆ, ಇದಕ್ಕೆ ಭಾಷೆಯ, ಜಾತಿಯ, ವರ್ಣದ, ಧರ್ಮದ, ವಿದ್ಯೆಯ, ಲಿ೦ಗದ, ಸಂಸ್ಕೃತಿಯ ಭೇಧವಿಲ್ಲ ಎನ್ನುವುದು ನನ್ನ ಖಚಿತವಾದ ಅಭಿಪ್ರಾಯ. ”ಇವನಾರವ ?” ಎನ್ನುವ ಪ್ರಶ್ನೆ ನಿಮ್ಮಲ್ಲೂ ಮೂಡಿದ್ದರೆ, ನಿಮ್ಮ ಅನುಭವವನ್ನು ನಮ್ಮೊ೦ದಿಗೆ ಹ೦ಚಿಕೊಳ್ಳಿ. ಧನ್ಯವಾದ.

ದಾಕ್ಷಾಯಿನಿ ಗೌಡ

 

 

 

 

8 thoughts on “ಇವನಾರವ??? ದಾಕ್ಷಾಯಿನಿ ಗೌಡ ಅವರ ವೈಚಾರಿಕ ಲೇಖನ

  1. ದಾಕ್ಷಾಯಿಣಿಯವರ ವೈಚಾರಿಕ ಲೇಖನ , ಅವರ “ವಿಶ್ವ ಮಾನವರಾಗೋಣ ” ಎಂಬನಿಸಿಕೆ ,ಮನಕ್ಕೆ ಒಂದು ಹಾಯಿ ತಂತು .ಆದೀತಾ ಅದು ? ಹೊರ ದೇಶಗಳಲ್ಲಿಯ ಪರಿಸ್ಥಿತಿಯ ಅನುಭವ ನನಗೆ ಅಷ್ಟಾಗಿ ಇಲ್ಲ.ಆದರೆ ಮಾನವತೆ ಅರ್ಥ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಇಂಥ ಒಬ್ಬರೋ ಇಬ್ಬರೋ ಸಿಕ್ಕರೆ ನೆಮ್ಮದಿ.ನಮ್ಮಲ್ಲಿಯಂತೂ ಸಹಾಯಮಾಡುವದೂ ಕಷ್ಟ ,ಅಪೇಕ್ಷಿಸುವುದು ಇನ್ನೂ ಅಪಾಯಕಾರಿ ಎಂಬ ಪರಿಸ್ಥಿತಿ.ಮನುಷ್ಯ ಮನುಷ್ಯರಲ್ಲಿಯೇ ವಿಶ್ವಾಸ ಕಳೆದುಕೊಳ್ಳವಂತಾಗಿ ,ಏನನ್ನೂ ಹೇಳಲಾಗದಂತಾಗುವ ಅಯೋಮಯ ಸ್ಥಿತಿ.Let us hope ಎಂದು ಕಾಯೋಣ.ಎಲ್ಲರೂ ನಮ್ಮವರೇ ಎಂದುಕೊಳ್ಳೋಣ .ಒಳ್ಳೆಯ ವೈಚಾರಿಕ ಬರಹಕ್ಕೆ ಧನ್ಯವಾದಗಳು ದಾಕ್ಷಾಯಿಣಿಯವರೇ.
    ಸರೋಜಿನಿ. ಪಡಸಲಗಿ

    Like

  2. ಇವನಾರವ ಇವನಾರವ ಎಂದನಿಸದಿರಯ್ಯ
    ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ

    ಎಂದು ಬಸವಣ್ಣನ ವಚನವನ್ನು ನೀವೇ ಉಲ್ಲೇಖಿಸಿರುವಂತೆ ನಮ್ಮ ಬದುಕಿದೆ.

    ಕಹಿ ಅನುಭವಗಳಂತೆ ಸಿಹಿ ಅನುಭವಗಳೂ ಆಗುತ್ತಿರುತ್ತವೆ. ಕಹಿಯನ್ನು ನುಂಗಿ ಸಿಹಿ ಹಂಚುವ ಕೆಲಸ,

    ಸುಂದರ ಲೇಖನ.

    – ಕೇಶವ

    Like

  3. ದಾಕ್ಷಾಯಣಿ,
    ನಿಮ್ಮ ಲೇಖನ ಆರೋಗ್ಯಕರವಾದ ಚರ್ಚೆಗೆ ಆಹ್ವಾನವಿತ್ತಿದೆ. ಕೃತಜ್ಞತೆಗಳು. ಅಮೆರಿಕೆಯಲ್ಲಿ ವರ್ಣಬೇಧ ಕಾರಣಕ್ಕಾಗಿಯೇ ಆಗುತ್ತಿರುವ ಕೊಲೆಗಳ ಈ ಸಮಯದಲ್ಲಿ ನೀವು “ವಿಶ್ವಮಾನವರಾಗೋಣ” ಎಂದ ಆಶಾದಾಯಕ ನಿಲುವು ಬಹು ಅಗತ್ಯ.
    ಚರ್ಚೆಗೆ ನನ್ನದೊಂದು ಅನುಭವದ ಸೇರ್ಪಡಿಕೆ.
    ‘ಬ್ರಿಟನ್ ಜನರ ಸಹಿಷ್ಣುತೆಯನ್ನ ಬ್ರಿಸ್ಬೇನ್ ಗೆ ಒಯ್ಯೋಣ; ಅಲ್ಲಿನ ಬಿಸಿಲನ್ನ ಇಲ್ಲಿಗೆ ತರೋಣ’ – ಇಂಗ್ಲೆಂಡಿಗೆ ಬಂದು ನೆಲೆಸಿದ ಹೊಸತರಲ್ಲಿ ನಾನು ಹೇಳುತ್ತಿದ್ದ ಮಾತು ಅದು. ಕಳೆದ ವರ್ಷ ಯಾರ್ಕ್ ಶೈರ್ ಗೆ ಬಂದು ವಾಸಿಸಲಾರಂಭಿಸಿದಾಗ ಜೂನ್ ನಲ್ಲಿ ಬ್ರೆಕ್ಸಿಟ್ ನಿರ್ಧಾರ ಹೊರಬಂತು. ನನ್ನ ಹೈಸ್ಕೂಲ್ ಮಗನಿಗೆ, ಅವನ ಕ್ಲಾಸ್ ನಲ್ಲಿ ಹುಡುಗರು ಹೇಳಿದ್ದು, “Your mum does not belong here. She should go back.” ಕೇಳಿ ನಮಗೆ ಶಾಕ್ ಆಯ್ತು. ಬ್ರಿಟನ್ ನಲ್ಲಿದ್ದೀವಾ, ಬ್ರಿಸ್ಬೇನ್ ನಲ್ಲೋ? ಅವನನ್ನ “You are a Paki”, “Are you half-caste or are you full black” ಎಂದೆಲ್ಲಾ ಕೇಳಿದರು. ಅವನ Godmother (ಬಿಳಿ ಆಸ್ಟ್ರೇಲಿಯನ್, ನನ್ನ ಆಪ್ತ ಸ್ನೇಹಿತೆ) ‘ಮರಳಿ ಬನ್ನಿ’ ಎಂದದ್ದೂ ಆಯ್ತು.
    ಮುಂದಿನ ಕೆಲದಿನಗಳಲ್ಲಿ ಒಮ್ಮೆ ನಾನು ಶಾಲಾ ಬಸ್ ನಿಲ್ದಾಣದಲ್ಲಿ (ನಾವು ವಾಸಿಸುತ್ತಿರುವ ಹಳ್ಳಿಯಲ್ಲಿ) ಕಿರಿ ಮಗನನ್ನ ಎದುರು ನೋಡುತ್ತಾ ಕಾಯುತ್ತಿದ್ದೆ. ಅನಿರೀಕ್ಷಿತವಾಗಿ ಆ ದಿನ ಹೈಸ್ಕೂಲ್ ಬಸ್ ಮೊದಲು ಆಗಮಿಸಿತು. ಬಸ್ನಿಂದ ಇಳಿದ ಮಗ ನನ್ನಿಂದ ದೂರ ದೂರ ನಡೆಯಲಾಂಭಿಸಿದ. ನನಗೆ ಆಶ್ಚರ್ಯವಾಯಿತು. ಬಸ್ಸಿನ ಹಿಂಬದಿಯ ದೊಡ್ಡ ಕಿಟಕಿಯಲ್ಲಿ ಒಳಗಿನಿಂದ ಕೆಲ ಹುಡುಗರು ನನ್ನ ಕಡೆ ಅಶ್ಲೀಲ ಸಂಜ್ಞೆ ಮಾಡುತ್ತಿದ್ದರು. ಬಸ್ಸು ಹೋಯಿತು. ನಂತರ ಬಂದ ಕಿರಿಮಗನನ್ನ ಕರೆದುಕೊಂಡು ಮನೆಗೆ ಹೋದರೆ ದೊಡ್ಡ ಮಗ ಅಳುತ್ತಾ ಬಿಕ್ಕು ದನಿಯಲ್ಲಿ ತನ್ನ ಕೈಗಾಗಿದ್ದ ಗಾಯವನ್ನ ತೋರಿಸಿ, ಹೇಗೆ ತನ್ನನ್ನ ಬಸ್ ಬಳಿ (ಶಾಲೆಯಲ್ಲೇ) ಮತ್ತೊಬ್ಬ ಹುಡುಗ ನೂಕಿದ, ಟೈರ್ ಅಡಿ ತಾನು ಬೀಳುತ್ತಿದ್ದೆ, ಮತ್ತಿತರು ನಗುತ್ತಿದ್ದರು, ಎಂದು ಹೇಳಿಕೊಂಡ. ಶಾಲೆಗೆ ಮತ್ತೆಂದೂ ಕಾಲಿಡುವುದಿಲ್ಲ, ನನಗೆ ಜೀವ ಭಯವುಂಟಾಗಿದೆ ಎಂದ.
    ನಾನು ಶಾಲೆಗೆ ಫೋನ್ ಮಾಡಿ, ಅವರಿಗೆ ಆಗಾಗಲೇ ನಾನು ಬರೆದಿದ್ದ ಪತ್ರವನ್ನು ನೆನಪಿಸಿ, ಅಂದೇ ಆಗಿದ್ದ ಘಟನೆಗಳನ್ನು ಪ್ರಸ್ತಾಪಿಸಿ, ಕ್ರಮ ತೆಗೆದುಕೊಳ್ಳಲೇ ಬೇಕು ಎಂದು ಒತ್ತಾಯಿಸಿ ಮೆಸೇಜ್ ಬಿಟ್ಟೆ. ನನಗೂ, ನನ್ನ ಮಕ್ಕಳಿಗೂ ಈ ಹಳ್ಳಿ ಕ್ಷೇಮವಲ್ಲ ಎನ್ನುವ ಭಯವುಂಟಾಗಿತ್ತು. ಮಗ ಶಾಲೆಗೇ ಮರಳುವುದಿಲ್ಲ ಅಂದಾದರೆ ಮುಂದಿನ ಕ್ರಮ ಏನು ಎಂಬ ಪ್ರಶ್ನೆ. ಒಬ್ಬರು ಉದ್ದೇಶಪೂರ್ವಕವಾಗಿ ಮಾಡಿದ್ದ ಗಾಯ ನೋಡಿ ನನ್ನ ಕಣ್ಣಲ್ಲಿ ನೀರು. ಅವನ ಮನಸ್ಸಿಗಾಗಿದ್ದ ಏಟು? ನನ್ನ ತಾಯಿ ಹೃದಯದ ಅತಂತ್ರತೆ, ಚಡಪಡಿಕೆಗಳನ್ನ, ಆ ದಿನಗಳಲ್ಲಿ ಅನುಭವಿಸಿದ ನೋವು, ದುಃಖವನ್ನ ಶಬ್ದಗಳಲ್ಲಿ ಕಟ್ಟಿಡಲಾಗುವುದೇ?
    ನನ್ನ ಮಕ್ಕಳಿಗೆ ಅವರ ತಾಯಿ ಗಟ್ಟಿಗಿತ್ತಿ, ಆಸ್ಟ್ರೇಲಿಯಾದಲ್ಲಿ ಯೂನಿವರ್ಸಿಟಿಗಳಲ್ಲಿ ಪಾಠ ಹೇಳುತ್ತಿದ್ದ ಹೆಣ್ಣು ಎಂಬ ನಿಜವನ್ನ ಹೇಳುತ್ತಲೇ, ಅವರ ಬಳಿ “Equality & Diversity, Respect & Acceptance” ಎನ್ನುವುದು ನಮ್ಮ ಕುಟುಂಬದ ಮೌಲ್ಯ ಎಂದೂ ಸಾಕಷ್ಟು ಮಾತನಾಡಿದ್ದೆವು. ಮುಂದಿನ ವಾರದಲ್ಲಿ ಶಾಲೆಯ ಮುಖ್ಯಸ್ಥರು ಕಾರ್ಯಪ್ರವೃತ್ತರಾಗಿ ವಿವಿಧ ಕ್ರಮಗಳನ್ನ ತೆಗೆದುಕೊಂಡರು. ಆದರೂ ಪರಿಸ್ಥಿತಿ ಪೂರ್ತಿ ಸುಧಾರಿಸಿಲ್ಲ. ಸಹಿಷ್ಣುತೆ (tolerance) ಬೇರೆ, ಒಪ್ಪಿಕೊಳ್ಳುವುದು (acceptance ) ಬೇರೆ.
    ಪರಸ್ಪರರ ಬಗ್ಗೆ ಇರುವ ಅಪನಂಬಿಕೆ, ಪೂರ್ವಾಗ್ರಹ, ನಂಬಿಕೆಗಳು, ಮನೋಭಾವ, ಧೋರಣೆಗಳು, Othering ದೃಷ್ಟಿ ಕೋನ ಬದಲಾಯಿಸಬೇಕು, ಹೌದು. ಆ ನಿಟ್ಟಿನಲ್ಲಿ ಇಡಬೇಕಾದ ಮೊದಲ ಹೆಜ್ಜೆ – ನಾವು ಪ್ರತಿಯೊಬ್ಬರೂ ಪರಸ್ಪರರನ್ನು ಒಪ್ಪಿಕೊಳ್ಳಬೇಕು. ನಮ್ಮ ಕ್ರಿಯೆಯಲ್ಲಿ ಪ್ರತಿದಿನವೂ ಅದನ್ನ ಆಚರಿಸಬೇಕು.
    ನಿಮ್ಮ ಲೇಖನದಲ್ಲಿ ನೀವು ಕೊಟ್ಟಿರುವ ಉದಾಹರಣೆಗಳು ನಾವು ಮನುಷ್ಯರು ಎಂದೆಂದಿಗೂ ವಿಶ್ವಾಸವಿಡುವ Let’s hope – ತುಂಬಾ ಹಿಡಿಸಿತು.
    ವಿನತೆ ಶರ್ಮ

    Liked by 1 person

  4. ದಾಕ್ಷಾಯಿನಿಯವರ ಲೇಖನ ಒಂದು ಮೂಲಭೂತ ಪ್ರಶ್ನೆಯತ್ತ ವಿಚಾರ ಮಾಡುವಂತೆ ಮಾಡಿದೆ. ಆತ ಪರೋಪಕಾರಿ, ಮಹಾದಯಾಳು ಎನ್ನ ಬಹುದಾದ good Samaritan. ಅದು ಮನುಷ್ಯನ ಸ್ವಾಭಾವಿಕ ಗುಣವೂ ಇರಬಹುದು ಅಥವಾ ಸಂಸ್ಕಾರ ಅಥವಾ ಸ್ವಾನುಭವ ಇವು ಆತನನ್ನು ರೂಪಗೊಳೊಸಿ ಆತನ ಭಾವನೆಗಳ ಅಡಿಯಲ್ಲಿರಬಹುದು. ಆತ ಹಿಂದುಮುಂದು ನೋಡದೆ ನಿಮ್ಮ ಸಹಾಯಕ್ಕೆ ಬಂದ. ಸನಾತನ ಧರ್ಮ ಹೇಳುವ ಕೆಳಗಿನ ಶ್ಲೋಕವನ್ನು ಶಾಲೆಯಲ್ಲಿ ಮನೆಯಲ್ಲಿ ನಮಗೆಲ್ಲ ’ಉಣಿಸಲಾಗಿದೆ’:
    ಪರೋಪಕಾರಂ ವಹಂತಿ ನದ್ಯಾ
    ಪರೋಪಕಾರಂ ದುಹಂತಿ ಗಾಯಾ
    ಪರೋಪಕಾರಂ ಫಲಂತಿ ವೃಕ್ಷಾ
    ಪರೋಪಕಾರಂ ಇದಂ ಶರೀರಂ.
    ಪರೋಪಕಾರಕ್ಕಗಿಯೇ ತಮ್ಮನ್ನು ಮೀಸಲಾಗಿಟ್ಟ ನದಿಗಳು, ಗೋಮಾತೆಯರು, ಫಲವೃಕ್ಷಗಳು ಇರುವಾಗ ಮಾನವನೇಕೆ ಹಾಗೆ ಆಗ ಬಾರದು? ಆದರೆ ರಾಮಮೂರ್ತಿಯವರ ಬೆಂಗಳೂರಿನ ಘಟನೆ ಮತ್ತು ಈ ದೇಶದಲ್ಲಾದ ಕೆಲ ಡಾಕ್ಟರರು, ಪಾರಾಮೆಡಿಕ್ ಗಳಿಗಾದ ಅನುಭವ ಕೇಳಿದವರು (ಕೋರ್ಟಿನ ಕಟ್ಟೆ ಹತ್ತಬೇಕಾಯಿತು), ಇದೇ ಸನ್ನಿವೇಶ ತದ್ವಿರುದ್ಧ ಆಗಿತ್ತೆಂದರೆ (ಉದಾಹರಣೆಗೆ, ಗಾಯಪಟ್ಟ ಮಗು, ಮತ್ತು ಏಕಾಕಿ ತಾಯಿ, ರಸ್ತೆಯಲ್ಲಿ) ನೀವು ಏನು ಮಾಡುತ್ತಿದ್ದಿರಿ? ಎಂದು ವಿಚಾರ ಮಾಡುವಂತಾಗಿದೆ. ನಮ್ಮ ನೀತಿ (ethics), ಮಾನವತೆ ಮುಂದಾಗಿ ಆಂಬುಲನ್ಸ್ ಬರುವವರೆಗಾದರೂ ಸಹಾಯಕ್ಕೆ ಹೋಗುತ್ತೇವೆಯಲ್ಲದೆ, GMC good medical practice rule 63 ಬಗ್ಗೆ ವಿಚಾರ ಮಾಡುತ್ತಿರಲಿಲ್ಲವೆಂದೆನಿಸುತ್ತದೆ. ಇದು ಒಬ್ಬ ಸಾಧಾರಣ ವ್ಯಕ್ತಿ ಅತಿಮಾನವ/ವಿಶ್ವಮಾನವನತ್ತ ಹೆಜ್ಜೆಯಿಟ್ಟ ಘಟನೆ. ನನ್ನ ಹೆಂಡತಿಗೂ ಇದೇ ತರಹದ ಅನುಭವವಾಗಿತ್ತು. ಚರಂಡಿಯಲ್ಲಿ ಒಂದು ಗಾಲಿ ಸಿಕ್ಕು ನಿಂತಾಗ ಒಬ್ಬ ಧಢೂತಿ ಮನಷ್ಯ ತನ್ನ ಲ್ಯಾಂಡ್ರೋವರ್ ತಂದು ಹಗ್ಗ ಕಟ್ಟಿ ಅವಳ ಕಾರನ್ನು ಹೊರಗೆಳೆದು ಬಿಟ್ಟಾಗ ಆತ AAದವನೇ ಎಂದು ತಿಳಿದಿದ್ದಳು. ಮನೆಗೆ ಬಂದು ನನಗೆ ಎಲ್ಲ ವೃತ್ತಾಂತ ಹೇಳಿದ ಮೇಲೆ ನಾನು ಪೇಪರ್ ವರ್ಕ್ ಹೇಗೆ ಅಂದಾಗಲೆ ಆಕೆಗೆ ಹೊಳೆದದ್ದು ತನ್ನ ಕೆಲಸ ಮಾಡಿ ಕ್ಷಣಾರ್ಧದಲ್ಲಿ ಮಾಯವಾದ ಆಕೆಯ ತಾರಕ ರೆಸ್ಕ್ಯೂಕಂಪನಿಯವನಲ್ಲ, ಒಬ್ಬ ಸಮ್ಯಾರಿಟನ್ ಎಂದು! ಇಂಥ ಪ್ರಸಂಗಗಳು ಸಾಕಷ್ಟು, ಆದರೆ ಅರ್ಧಕ್ಷಣದಲ್ಲಿ ಇನ್ನೇನು ನಾನು ಮೋಸಹೋಗುವ ಘಟನೆಯ ಅನುಭವೂ ನನಗಾಗಿದೆ. ನನ್ನ ಬಣ್ಣ ನೋಡಿ ರಾತ್ರಿ ಒಂದು ಸೂಪರ್ಮಾರ್ಕೆಟ್ ಕಾರ್ ಪಾರ್ಕಿನಲ್ಲಿ ನನ್ನನ್ನು ನೀನು ಡಾಕ್ಟರಾ ಎಂದು ಕರೆದ ಒಂದು ಸಂಶಯಾತ್ಮಕ ನಡತೆ ನನ್ನೆಚ್ಚರಿಸಿತ್ತು. ನಾವು ಎಚ್ಚರ ವಹಿಸಬೇಕು, ಆದರೆ ನಿಮಗಾದಂಥ ಅನುಭವದ ಪರೋಪಕಾರಿ ಮನುಷ್ಯತ್ವವ ಗುಣಗಳನ್ನೂ ಕೊಂಡಾಡಬೇಕು.

    Like

  5. ಅತೀ ಸುಂದರ ನಿರೂಪಣೆ.. ಚಿಂತನೆಗೆ ಹಚ್ಚುವ ಬರಹ.. ಹೌದು ದಾಕ್ಷಾಯಿಣಿಯವರೇ.. ಕೆಲವೊಮ್ಮೆ ‘ ದೈವಂ ಮಾನುಷ ರೂಪೇಣ..” ಅನ್ನುವಂತೆ ದೇವರೇ ಮಾನುಷರೂಪ ಧಾರಣೆ ಮಾಡಿ ನಮ್ಮ ಸಂಕಟ ಕಾಲಕ್ಕೊದಗುತಾನೇನೋ ಅನಿಸುತ್ತದೆ.. ನನಗೂ ಇಂಥ ಅನುಭವವಾಗಿದೆ
    – ವಸುಮತಿ

    Like

  6. ದಾಕ್ಷಾಯಣಿ ಸಮಯೋಚಿತವಾದ ಲೇಖನ. ಪಾಶ್ಚಿಮಾತ್ಯ ದೇಶಗಳಲ್ಲಿ ವಾಮಪಂಥೀಯ ಶಕ್ತಿಗಳು ತಲೆಯೆತ್ತಿ, ವಲಸಿಗ ಜನಾಂಗದ ವಿರುದ್ಧ ತೋರುತ್ತಿರುವ ದ್ವೇಷ ಭಾವನೆಗಳು ನರ್ತನವಾಡುತ್ತಿರುವ ಸಮಯದಲ್ಲಿ, ನಿಮಗೆ ಇಷ್ಟೊಂದು ವಿನಯವಂತನಾದ ಶ್ವೇತ ವರ್ಣಿಯ ವ್ಯಕ್ತಿಯೊಬ್ಬ ನಿಮ್ಮ ತುರ್ತು ಸಮಯದಲ್ಲಿ ನಿಮಗೆ ನೀಡಿದ ಸಹಾಯ ಮೆಚ್ಚುವಂತಹದೇ! ಈಗ ೬ ತಿಂಗಳುಗಳ ಹಿಂದೆ ಅಮೆರಿಕೆಗೆ ಬಂದಿರುವ ನಮಗೆ, ಕೇವಲ ಸ್ನೇಹಪರತೆಯುಳ್ಳ ಜನಗಳ ಪರಿಚಯವಾಗಿದೆಯೇ ಹೊರತು, ದ್ವೇಷ-ಅಸೂಯೆಗಳ ಪರಿಚಯವಾಗಿಲ್ಲ. ಮಾನವ ಜನಾಂಗ ತನ್ನಲ್ಲಿರುವ ದ್ವೇಷ ದಳ್ಳುರಿಗಳನ್ನು ಹತ್ತಿಕ್ಕಿ, ವಿಶ್ವಮಾನವನಾಗುವ ಸಮಯ ಹತ್ತಿರ ಬಂದಿದೆ. ಪ್ರತಿಯೊಬ್ಬರ ಅನುಭವವೂ ಇಲ್ಲಿ ಬಹಳ ಮುಖ್ಯ. ನಿಮ್ಮಂತಹ ಸದ್ಭಾವನಾ ವ್ಯಕ್ತಿಗಳೊಂದಿಗೆ ಪರಿಚಿತರಾಗಿರುವವರು ತಮ್ಮ ಅನುಭವಗಳನ್ನು ಈ ವೇದಿಕೆಯಲ್ಲಿ ಹಂಚಿಕೊಂಡು, ವಿಶ್ವಮಾನವ ಭಾವನೆಯನ್ನು ಹರಡುವುದು ನಮ್ಮ ಜವಾಬ್ದಾರಿಯಾಗಿದೆ. ದ್ವೇಷದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪೂರ್ವಾಗ್ರಹ ಪೀಡಿತ ಸಮಾಜವನ್ನು, ಮೇಲೆತ್ತುವುದು ಪ್ರತಿಯೊಬ್ಬರ ಗುರಿಯಾಗಬೇಕು! ನಿಮ್ಮ ಅನುಭವ ಹಂಚಿಕೊಡಿದ್ದಕ್ಕೆ ಧನ್ಯವಾದಗಳು.
    ಉಮಾ ವೆಂಕಟೇಶ್

    Liked by 1 person

  7. Dakshayani Avare,
    Many of us have similar experiences.I remember, some years back when I had a tyre blow out, couple police officers stopped to change the tyre to get me going again. Over the years, we have been living here there have been many instances like this. Basically this is a tolerant country and I am not saying that all is perfect here .No country is perfect either. When I was in a Bangalore last month I read a news report in DH that not a soul went to help an injured passenger in a car accident but some were busy videoing the accident.

    Like

Leave a comment

This site uses Akismet to reduce spam. Learn how your comment data is processed.