ನಮಸ್ಕಾರ ಡೊರೊತಿ, ಹೇಗಿದ್ದೀರ? – ವಿನತೆ ಶರ್ಮ

ಸಂಪಾದಕರ ನುಡಿ

(‘ಒಬ್ಬ ಯಶಸ್ವಿಯಾಗಿರುವ ಗಂಡಸಿನ ಹಿಂದೆ ಯಾವಾಗಲೂ ಒಬ್ಬ ಮಹಿಳೆ ಇರುತ್ತಾಳೆ’ ಎಂಬ ಇಂಗ್ಲೀಷ್ ನಾಣ್ಣುಡಿಯನ್ನು ಕೇಳಿದ್ದೇವೆ. ಈ ಮಹಿಳೆ ಹಲವಾರು ಬಾರಿ ಹೆಂಡತಿ, ಪ್ರಿಯತಮೆ ಅಥವಾ ತಾಯಿಯಾಗಿರುತ್ತಾಳೆ. ಆದರೆ ಪ್ರಖ್ಯಾತ ಕವಿ ವಿಲಿಯಮ್ ವರ್ಡ್ಸ್ ವರ್ತ್ ಅವನ ಯಶಸ್ಸಿನ ಬಗ್ಗೆ ಹೇಳುವುದಾದರೆ ಅವನ ತಂಗಿ ಡೊರೊತಿ ಕಾರಣಳಾಗಿದ್ದಾಳೆ ಎಂದು  ವ್ಯಾಖ್ಯಾನಿಸಬಹುದು. ವರ್ಡ್ಸ್ ವರ್ತ್ ಈ ವಿಚಾರವನ್ನು ಒಪ್ಪಿದ್ದಾನೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ ಆದರೆ ತನ್ನ ಒಂದು ಪ್ರಸಿದ್ಧ ವಾದ  Tintern Abbey ಕವನದಲ್ಲಿ  ತನ್ನ ಪ್ರೀತಿಯ ತಂಗಿಯ ಬಗ್ಗೆ ಹೀಗೆ ಬರೆದಿದ್ದಾನೆ;

My Dear , Dear Friend

And in thy voice I catch The language of my former heart

And read my former pleasure in the shooting lights of thy wild eyes

My dear sister!

ಡೊರೊತಿ ವರ್ಡ್ಸ್ ವರ್ತ್ ೧೭-೧೮ನೇ ಶತಮಾನದಲ್ಲಿ ಒಬ್ಬ ಕವಿಯಿತ್ರಿ ಅಥವಾ ಲೇಖಕಿಯಾಗಬೇಕೆಂಬ ಕಲ್ಪನೆ ಅಥವಾ ಆಸೆಯನ್ನು ಇಟ್ಟುಕೊಂಡಿರಲಿಲ್ಲ ಹಾಗೆ ಆ ಯುಗದಲ್ಲಿ ಒಬ್ಬ ಮಹಿಳೆ ಆ ಮಟ್ಟಕ್ಕೆ ಏರಲು ಸಾಧ್ಯವಿರಲಿಲ್ಲ. ಅವಳು ತನ್ನ ಅಣ್ಣ ವಿಲಿಯಮ್ ಹಾಗು ಗೆಳಯ ಕೋಲ್ ರಿಡ್ಜ್  ಜೊತೆಸಾಕಷ್ಟು ಪ್ರವಾಸಗಳನ್ನು ಮಾಡಿ ಕೊನೆಗೆ ಸುಂದರವಾದ ಲೇಕ್ ಡಿಸ್ಟ್ರಿಕ್ಟ್ ನಲ್ಲಿ ಅಣ್ಣ ವಿಲಿಯಮ್ ಕುಟುಂಬದ ಜೊತೆ ನೆಲಸಿ ಅಲ್ಲಿ ತನ್ನ ದಿನನಿತ್ಯ ಅನುಭವಗಳನ್ನು ಒಂದು ದಿನಚರಿಯ ರೂಪದಲ್ಲಿ ದಾಖಲೆ ಮಾಡಿದ್ದು ಕಾಲಾನಂತರ ಬೆಳಕಿಗೆ ಬಂದು ಜರ್ನಲ್ ರೂಪ ತಳೆದು ಈಗ ಬಹಳ  ಪ್ರಸಿದ್ಧ ವಾಗಿದೆ. ಅವಳ ದಿನಚರಿಯಲ್ಲಿ ಡ್ಯಾಫೋಡಿಲ್ಸ್ ಹೂವನ್ನು ಕುರಿತು ಬರೆದ ಪ್ರಸಿದ್ಧ ಸಾಲುಗಳು ಅವಳ ಅಣ್ಣ ವಿಲಿಯಮ್ ಬರೆದ ಪ್ರಖ್ಯಾತ ಡ್ಯಾಫೋಡಿಲ್ಸ್ ಪದ್ಯಕ್ಕೆ ಸ್ಫೂರ್ತಿಯನ್ನು ಒದಗಿಸಿರಬಹುದು ಎಂದು  ವ್ಯಾಖ್ಯಾನ ಮಾಡಲಾಗಿದೆ  ಆ ಸಾಲುಗಳು ಹೀಗಿವೆ;

We saw a few daffodils close to the water side, little colony had so sprung up — But as we went along there were more and yet more. I never saw daffodils so beautiful they grew among the mossy stones about and about them, some rested their heads upon these stones as on a pillow for weariness and the rest tossed and reeled and danced and seemed as if they verily laughed with the wind that blew upon them over the Lake, they looked so gay ever glancing ever changing.

ಡೊರೊತಿ ತನ್ನ ಸುತ್ತಲಿನ ಸುಂದರ ಪರಿಸರ ಹಾಗು ಪ್ರಕೃತಿಯ ಸೌಂದರ್ಯಕ್ಕೆ ಸ್ಪಂದಿಸುವ ಪ್ರಜ್ಞೆ ಜಾಗೃತವಾಗಿದ್ದು ಅದನ್ನು ಅವಳ ಬರವಣಿಗೆಯಲ್ಲಿ ಗುರುತಿಸಬಹುದು. ಇಷ್ಟು ಪ್ರತಿಭೆಯುಳ್ಳ ಒಬ್ಬ ಮಹಿಳಾ ಲೇಖಕಿ ತನ್ನ ಸಮಯದಲ್ಲಿ ಒಂದು ಮನ್ನಣೆ ಕಾಣದಾದಳು ಎಂಬ ವಿಚಾರ ಇತಿಹಾಸದ ಕೆಲವು ತಪ್ಪುಗಳನ್ನು ಎತ್ತಿಹಿಡಿದಂತೆ ತೋರುತ್ತದೆ . ಮುಂದೆ ಅವಳ ಪ್ರತಿಭೆಯನ್ನು ಗುರುತಿಸಿ ಅವಳ ಡೈರಿ ಹಾಗು ಜರ್ನಲ್ ಗಳು ಡವ್ ಕಾಟೇಜ್ ನಲ್ಲಿ ಪ್ರದರ್ಶಿತವಾಗಿ ಜನ ಸಾಮಾನ್ಯರನ್ನು ತಲುಪಿರುವುದು ನೆಮ್ಮದಿಯ ವಿಚಾರ. ಕಾಲ ಕ್ರಮೇಣ ಡೊರೊತಿ ಅಣ್ಣನಷ್ಟೇ ಪ್ರಸಿದ್ಧಳಾದಳು

ಸ್ತ್ರೀಸಮಾನತೆ, ಸ್ತ್ರೀವಾದ, ಲಿಂಗ ಭೇದ ಮತ್ತು ವರ್ಣ ಭೇದ ಈ ವಿಚಾರಗಳ ಬಗ್ಗೆ ಪ್ರಖರವಾದ ನಿಲುವನ್ನು ತಳೆದು ಆ ವಿಚಾರಗಳ ಬಗ್ಗೆ  ಕವನ ಹಾಗು ಲೇಖನವನ್ನು ಪ್ರಕಟಿಸಿರುವ  ಪ್ರಗತಿಪರ ಲೇಖಕಿ ವಿನತೆ ಶರ್ಮ ಅವರು ಡೊರೊತಿ ಯನ್ನು ನಮಗೆ ಪರಿಚಯಿಸಿರುವುದು ಸೂಕ್ತವಾಗಿದೆ. ಹಾಗೆ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಸುಪಾಸಿನಲ್ಲಿ ಈ ಲೇಖನ ಪ್ರಕಟಿತವಾಗಿದ್ದು ಸಂದರ್ಭೋಚಿತವಾಗಿದೆ – ಸಂ)

 ***

ನಮಸ್ಕಾರ ಡೊರೊತಿ, ಹೇಗಿದ್ದೀರ? ಇಂಗ್ಲಿಷ್ ಕವಿ ವಿಲಿಯಮ್ ವರ್ಡ್ಸ್ ವರ್ತ್ ರ ಮನೆಯಲ್ಲಿ ಸಿಕ್ಕಿದ್ದು  ಡೊರೊತಿ ಮತ್ತು  ಅವರ ಡಾಫೊಡಿಲ್  ಹೂ

ಲೇಖನ ಮತ್ತು ಚಿತ್ರಗಳು:  ವಿನತೆ ಶರ್ಮ

 

ವ್ಯಂಗ್ಯ ಚಿತ್ರ – ಲಕ್ಷ್ಮೀನಾರಾಯಣ ಗುಡೂರ್

 

 

“ಈ ನನ್ನ ಪ್ರಪಂಚದ ಬೆರಗು, ಅಚ್ಚರಿಗಳ ಬಗ್ಗೆ ಬರೆಯುವುದು ನನಗೆ ಮೆಚ್ಚು.ಅದನ್ನು ಓದುವುದು ಅಣ್ಣನ ಇಷ್ಟ. ಮುಂದಿನ ವಿಷಯ ನನಗೆ ಬೇಡ. ಅದನ್ನು ಅಣ್ಣ ವಿಲಿಯಂಗೆ ಬಿಡುತ್ತೀನಿ” ಎಂದು ಡೊರೊತಿ ವರ್ಡ್ಸ್ ವರ್ತ್ ತಮ್ಮ ದಿನಚರಿಯಲ್ಲಿ ಬರೆದಿದ್ದಾರೆ. ಆಕೆ ವಿವರಿಸಿದ ಡಾಫೊಡಿಲ್ ಹೂಗಳು ಅರಳುವ ಋತುಮಾನ, ಆ ಹೂವಿನ ಅಂದ-ಚೆಂದ, ಆ ಹೂವಿನ ಹಾಸಿಗೆ ಹೇಗೆ ಮನ ತುಂಬುತ್ತದೆ ಎಂಬ ಬರಹಗಳನ್ನು ವಿಲಿಯಂ ವರ್ಡ್ಸ್ ವರ್ತ್ ಮುಂದೆ ತಮ್ಮ ಕವನದಲ್ಲಿ ಉಪಯೋಗಿಸಿಕೊಂಡರು. ಅಣ್ಣ ವಿಲಿಯಂ ಸುಪ್ರಸಿದ್ಧ ಕವಿಯಾಗಿ, ಇಂಗ್ಲೆಂಡ್ ರಾಣಿಯ ಆಸ್ಥಾನ ಕವಿಯಾಗಿ ಬಾಳಿದರು. ತಂಗಿ ಡೊರೊತಿ ಅದೇ ಸುಂದರ ಲೇಕ್ ಡಿಸ್ಟ್ರಿಕ್ಟ್ ನ ಪುಟ್ಟ ಪ್ರಪಂಚದಲ್ಲಿ ಉಳಿದರು. ಅವರ ಆ ಡಾಫೊಡಿಲ್ ಪ್ರಪಂಚದ ಬೆರಗು, ಅಚ್ಚರಿಗಳ ಬಗ್ಗೆ ಇನ್ನಿಲ್ಲದಷ್ಟು ಬರೆದು ಪ್ರಕೃತಿಯ ಒಡಲಿನ ಮುದ್ದು ಕೂಸಾಗೆ ಬದುಕಿದರು.

೨೦೧೩ ರ ನವೆಂಬರ್ ೨೮, ಶುಕ್ರವಾರ ನಾನು ಪ್ರಸಿದ್ಧ ಇಂಗ್ಲಿಷ್ ಕವಿ ವಿಲಿಯಮ್ ವರ್ಡ್ಸ್ ವರ್ತ್ ಮತ್ತು ಅವರ ತಂಗಿ ಡೊರೊತಿ  ವರ್ಡ್ಸ್ ವರ್ತ್ ರ ಮನೆಗೆ ಭೇಟಿ ಇತ್ತದ್ದು. ಅವರ ಮನೆ ‘ಡೋವ್ ಕಾಟೇಜ್’ ಇರುವ ಗ್ರಾಸ್ಮೀರ್ ಹಳ್ಳಿಯಿಂದ ಕೆಲವೇ ಮೈಲಿಗಳ ಮತ್ತೊಂದು ಹಳ್ಳಿಯಲ್ಲಿ ನಾನಿದ್ದದ್ದು. ಸುಮಾರು ಎರಡು ತಿಂಗಳ ಕಾಲ ಇಂಗ್ಲೆಂಡಿನಲ್ಲಿರುವ ಜನಪ್ರಿಯವಾದ ಲೇಕ್ ಡಿಸ್ಟ್ರಿಕ್ಟ್ ನ ಕಂಬ್ರಿಯ ಪ್ರಾಂತ್ಯದಲ್ಲಿ ತಂಗುವ ಅಪರೂಪದ ಅವಕಾಶ ಲಭಿಸಿತ್ತು. ಅಲ್ಲಿಗೆ ಬಂದಾಗಲಿಂದಲೂ ವಿಲಿಯಮ್ ವರ್ಡ್ಸ್ ವರ್ತ್ ರ ಸುಪ್ರಸಿದ್ಧ ಕವಿತೆಗಳು ಹುಟ್ಟಿದ ತಾಣವನ್ನು ನೋಡಬೇಕೆಂಬ ಆಸೆ ನನಗೆ ಇತ್ತು. ಬಂದ ಹೊಸತರಲ್ಲಿ ಪ್ರವಾಸಿ ಮಾಹಿತಿ ಕೇಂದ್ರಕ್ಕೆ ಹೋದಾಗ ಕವಿಯ ಮನೆಯ ಬಗ್ಗೆ, ಜೀವನ ಮತ್ತು ಬರಹಗಳ ಬಗ್ಗೆ ಪ್ರದರ್ಶನವೊಂದು ನಡೆಯುತ್ತಿರುವ ವಿಷಯ ತಿಳಿದುಬಂತು.

ಜೊತೆಗೆ ಕವಿಯ ತಂಗಿ ಡೊರೊತಿಯ ಬಗ್ಗೆ ಕೂಡ ಪ್ರದರ್ಶವೊಂದು ಏರ್ಪಾಡಾಗಿದೆ ಎಂದು ತಿಳಿಯಿತು. ವರ್ಡ್ಸ್ ವರ್ತ್ ಟ್ರಸ್ಟ್ ಈ ಎರಡೂ ಪ್ರದರ್ಶನಗಳನ್ನು ಏರ್ಪಡಿಸಿತ್ತು. ಅದರಲ್ಲೂ ಡೊರೊತಿಯ ಪ್ರದರ್ಶನದ ಹೆಸರು “ಡೊರೊತಿ  ವರ್ಡ್ಸ್ ವರ್ತ್ – ಪ್ರತಿ ದಿನದ ಹರ್ಷ ಮತ್ತು ಬೆರಗು”. ನನ್ನನ್ನು ಮೋಡಿ ಮಾಡಲು ಪ್ರದರ್ಶನದ ಹೆಸರೇ ಸಾಕಿತ್ತು! ನನ್ನ ಕುತೂಹಲ ಗರಿಕೆದರಿತು. ಇದೇ ಮೊಟ್ಟಮೊದಲ ಬಾರಿಗೆ ೨೦೧೩ ಮಾರ್ಚ್ ೨೩ ರಿಂದ ೨೦೧೪ ಜನವರಿ ೫ರ ತನಕ ಡೊರೊತಿ  ವರ್ಡ್ಸ್ ವರ್ತ್ ರ ಜೀವನ ಮತ್ತು ಬರಹಗಳು, ದಿನನಿತ್ಯದ ವಸ್ತುಗಳು, ಆಕೆ ಬರೆದ ಪತ್ರಗಳು ಮತ್ತು ಆಕೆಯ ‘ ಗ್ರಾಸ್ಮೀರ್ ಜರ್ನಲ್ ‘ ಇತ್ಯಾದಿಗಳ ಪ್ರದರ್ಶನವನ್ನು ಡೋವ್ ಕಾಟೆಜ್ ನ ಪಕ್ಕದ ಕಟ್ಟಡ ‘ಜಾರ್ವುಡ್ ಕೇಂದ್ರ’ ದಲ್ಲಿ ಏರ್ಪಡಿಸಿದ್ದರು.

ವರ್ಷಗಳ ಹಿಂದೆ ಬೆಂಗಳೂರಿನ ಕಾಲೇಜ್ನಲ್ಲಿ ಓದುತ್ತಿದ್ದಾಗ ನಾನು ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದೆ. ಆಗ ಓದಿದ್ದ ವಿಲಿಯಂ ವರ್ಡ್ಸ್ ವರ್ತ್ ರ ಕವಿತೆಗಳು, ಅವುಗಳಲ್ಲಿದ್ದ ಪ್ರಕೃತಿಪ್ರೇಮ, ಕವಿಯ ಒಳದೃಷ್ಟಿ ನೋಡುವ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧ, ಪ್ರಾಕೃತಿಕ ಪ್ರಪಂಚಕ್ಕೆ ಹೇಗೆ ನಾವು ಹತ್ತಿರವಾಗಬೇಕು ಎಂಬ ಸವಿನುಡಿಗಳ ನೆನಪು ನುಗ್ಗಿ ಬಂತು. ಆತನ ‘ಡಾಫೊಡಿಲ್’ ಕವನವನ್ನು ಓದಿದ ಮೇಲೆ ಆ ಡಾಫೊಡಿಲ್ ಹೂ ಹೇಗಿರುತ್ತದೆ ಎಂದು ಊಹಿಸಿಕೊಂಡು, ಅದರ ಚಿತ್ರ ನೋಡಲು ಆಗ ಸೇಂಟ್ ಮಾರ್ಕ್ಸ್ ರಸ್ತೆಯ ಬ್ರಿಟಿಷ್ ಲೈಬ್ರರಿಗೆ ಓಡಿದ್ದೆ. ಆತನ ಈ ಬರಹಗಳ, ಆ ಸವಿನುಡಿಗಳ, ಆತನ ಬಾಗಿಲ ಹಿಂದೆ ಇಷ್ಟು ವರ್ಷಗಳ ಕಾಲ ಬಚ್ಚಿಟ್ಟುಕೊಂಡಿದ್ದ ಡೊರೊತಿ ಕಡೆಗೂ ಈಗ ನನಗೆ ಪರಿಚಯವಾದರು.

೧೭೭೧ರಲ್ಲಿ ಹುಟ್ಟಿದ ಡೊರೊತಿ, ವಿಲಿಯಂ ಗಿಂತ ಒಂದೇ ವರ್ಷ ಚಿಕ್ಕವರು. ಐದು ಮಕ್ಕಳ ಕುಟುಂಬದಲ್ಲಿ ಆಕೆ ಮೂರನೇ ಮಗು; ತಂದೆಯ ಸಂಪಾದನೆ ಚೆನ್ನಾಗಿತ್ತು. ಈ ಹುಡುಗಿಗೆ ಐದು ವರ್ಷವಾಗಿದ್ದಾಗ ತಾಯಿ ಸಾಯುತ್ತಾರೆ. ತಂದೆ ಈ ಚಿಕ್ಕ ಹುಡುಗಿಯನ್ನು ಹ್ಯಾಲಿಫಾಕ್ಸ್ ನಲ್ಲಿದ್ದ ಬಂಧುವಿನ (ಆಂಟಿ) ಹತ್ತಿರ ಕಳಿಸುತ್ತಾರೆ. ತಂದೆ ೧೭೮೩ರಲ್ಲಿ ಸತ್ತಾಗ ಕುಟುಂಬಕ್ಕೆ ಹಣಕಾಸಿನ ತೊಂದರೆಯಾಗಿ ಮಕ್ಕಳೆಲ್ಲಾ ಬೇರೆ ಬೇರೆಯಾಗಿ ಬಂಧುಗಳ ಬಳಿ ಬೆಳೆಯುತ್ತಾರೆ. ಡೊರೊತಿ ಒಬ್ಬ ಅಂಕಲ್ನ ಕುಟುಂಬದೊಂದಿಗೆ ಬೆಳೆಯುತ್ತಾರೆ. ಆ ವಿದ್ಯಾವಂತ ಮತ್ತು ಜ್ಞಾನಿ ಅಂಕಲ್ನ ಸಹಾಯದೊಂದಿಗೆ ಹೋಮರ್, ಶೇಕ್ಸ್ ಪೀಯರ್ ಮುಂತಾದ ಕವಿಗಳ ಸಾಹಿತ್ಯವನ್ನ ಓದುವುದಲ್ಲದೆ, ಆ ಕುಟುಂಬದ ಚಿಕ್ಕಮಕ್ಕಳ ಲಾಲನೆ, ಪಾಲನೆಯನ್ನೂ ಬಹಳ ಕುಶಲವಾಗಿ ಮಾಡುತ್ತಾರೆ. ಈ ಹಂತದ ಜೀವನದಲ್ಲಿ ಅವರು ಮಕ್ಕಳ ಹುಟ್ಟು-ಸಾವು, ಲಾಲನೆ-ಪಾಲನೆ, ಸಣ್ಣ, ಪುಟ್ಟ ಖಾಯಿಲೆಗಳಿಗೆ ಮನೆವೈದ್ಯ ಮಾಡುವುದು, ಬಟ್ಟೆ ಹೊಲಿಗೆ, ದೊಡ್ಡ ಕುಟುಂಬವನ್ನು ನಿಯಂತ್ರಿಸುವ ಕುಶಲಗಾರಿಕೆಗಳನ್ನು ಕಲಿಯುತ್ತಾರೆ. ಆಕೆಯ ಮುಂದಿನ ಜೀವನದಲ್ಲಿ ಈ ಅನುಭವಗಳನ್ನು ಅತ್ಯಂತ ಸಫಲವಾಗಿ ಡೊರೊತಿ ಉಪಯೋಗಿಸುತ್ತಾ, ಅಣ್ಣ ವಿಲಿಯಂ ಕುಟುಂಬದ ಆಧಾರ ಸ್ತಂಭವಾಗುತ್ತಾರೆ. ಅಣ್ಣನ ಮಕ್ಕಳನ್ನು ಪ್ರೀತಿಸುತ್ತಾ, ಬೆಳೆಸುತ್ತಾ ಕುಟುಂಬದ ತಾಯಿಯಾಗಿ, ತಂಗಿಯಾಗಿ, ಸ್ನೇಹಿತೆಯಾಗಿ, ಅತ್ತೆಯಾಗುತ್ತಾರೆ. ಎಲ್ಲಕ್ಕೂ ಮಿಗಿಲಾಗಿ ತನ್ನ, ಅವರೆಲ್ಲರ ದಿನನಿತ್ಯ ಬದುಕಿನ ಆಗುಹೋಗುಗಳನ್ನು ದಿನವೂ ತನ್ನ ಜರ್ನಲ್ ನಲ್ಲಿ ಬರೆಯುತ್ತಾರೆ. ಆಗಾಗ ಅನಾರೋಗ್ಯದಿಂದ ಬಳಲುತ್ತಾ, ತಾನು ಮದುವೆಯಾಗದೆ, ಜೀವನದ ಕಡೆಯ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಪರಾವಲಂಬಿಯಾಗಿ ಬದುಕಿ  ೧೮೫೫ರಲ್ಲಿ ಸಾಯುತ್ತಾರೆ.

ಹೆಂಗಸರು ಬುದ್ಧಿಮತಿಗಳಾಗಿ, ಪ್ರತಿಭಾಶಾಲಿಗಳಾಗಿದ್ದರೂ, ವಿವಿಧ ವೃತ್ತಿಗಳಲ್ಲಿ ಮಿಂಚುವ, ಮಿಂಚಿದ ಕಾಲವಲ್ಲ ಅದು. ಸಮಾಜ ಹೆಚ್ಚಾಗಿ ಗಂಡಸರನ್ನೇ ಮೇಲು ಎಂದು ಹೇಳಿದ ಕಾಲ ಆಗ. ಆ ಕಾಲದಲ್ಲಿ ಕೆಲ ಮಹಿಳೆಯರು ಬರೆದರೂ, ಎಷ್ಟೇ ಪ್ರತಿಭೆ ಇದ್ದರೂ ತಮ್ಮ ನಿಜ ಹೆಸರನ್ನು, ತಮ್ಮತನವನ್ನು ಬಚ್ಚಿಟ್ಟುಕೊಂಡು ಬದುಕಿದ ದಿನಗಳು ಅವು. ಬಹಳ ನಂತರ ಮಹಿಳೆಯರನ್ನು ಬರಹಗಾರ್ತಿಯರಾಗಿ ಒಪ್ಪಿಕೊಂಡ ಸಮಾಜ ಡೊರೊತಿ ಯ ಬರಹವನ್ನು ಗುರುತಿಸಿ, ಆಕೆಯ ಬರಹಗಳು ವಿಲಿಯಂರ ಕವನಗಳ ಮೇಲೆ ಬೀರಿದ ಪ್ರಭಾವನ್ನು ಒಪ್ಪಿಕೊಂಡಿದೆ.

ಆ ಪ್ರದರ್ಶನದಲ್ಲಿ ಇಟ್ಟಿದ್ದ ಆಕೆಯ ಬರಹಗಳನ್ನು ನಾನು ಓದುತ್ತಾ, ನೋಡುತ್ತಾ ಹೋದಂತೆ ಬಹಳಷ್ಟು ವಿಷಯ ತಿಳಿದಿದ್ದೂ ಅಲ್ಲದೆ ಡೊರೊತಿ  ಬರೆದ ದಿನಚರಿಯ ಕೆಲ ಭಾಗಗಳು ಮುಂದೆ ವಿಲಿಯಂ ರ ಕವನಗಳಾಗಿದ್ದು ತಿಳಿದು ಅಚ್ಚರಿಯ ಜೊತೆ ದುಃಖವೂ ಆಯಿತು. ಆಹ್ ಲೋಕವೇ, ಆಕೆಗೆ ಸಲ್ಲಬೇಕಾದ ಸ್ಥಾನಮಾನ, ಗುರುತು, ಸರಿಯಾದ ಗೌರವ ಇನ್ನೂ ಸಿಕ್ಕಿಲ್ಲ ಎನ್ನಿಸಿತು. ಅಣ್ಣ ವಿಲಿಯಂ ಆ ಕಾಲದಲ್ಲಿ ಬಹಳ ಸಹಜವೆಂಬಂತೆ ತನ್ನ ತಂಗಿ ಡೊರೊತಿಯ ಬರಹಗಳನ್ನು ಉಪಯೋಗಿಸಿಕೊಂಡರು. ಹಾಗೆ ಮಾಡುವುದಕ್ಕೆ ಅವರಿಬ್ಬರ ಮಧ್ಯೆ ಏನೂ ತಕರಾರಿಲ್ಲ ಎಂದೆನಿಸುತ್ತದೆ. ನಮ್ಮ ಕಾಪಿರೈಟ್ ಯುಗದಲ್ಲಿ ಹಾಗೆ ಮಾಡುವಂತಿಲ್ಲ, ಮಾಡಬಾರದು. ಅಲ್ಲದೆ, ನಾವು, ನಮ್ಮ ಸಮಾಜ ಈಗ ಹೆಚ್ಚಿನ ಮಟ್ಟಿಗೆ ಲಿಂಗ ಸೂಕ್ಷ್ಮತೆ, ಸಮಾನತೆಯ ಅರಿವು ಇರುವವರು ಎಂದು ಸ್ವಲ್ಪ ಸಮಾಧಾನವಾಯಿತು.

ಚರಿತ್ರಕಾರರು, ಸಾಹಿತ್ಯಕಾರರು ಡೊರೊತಿ   ಅಣ್ಣ ವಿಲಿಯಂ ಜೊತೆ ಡೋವ್ ಕಾಟೇಜ್ನಲ್ಲಿ ಹಂಚಿಕೊಂಡ ಜೀವನ ಹಾಗೂ ಅಲ್ಲಿ ಆತನ ಸಾಹಿತ್ಯದ ಮೇಲೆ ಆಕೆ ಬೀರಿದ ಪ್ರಭಾವನ್ನು ಕುರಿತು ಸಾಕಷ್ಟು ಚರ್ಚೆ, ಮಾತುಕತೆ ಹಾಗೂ ವಿಮರ್ಶೆಗಳನ್ನು ಹೊರ ತಂದಿದ್ದಾರೆ. ಅವುಗಳ ಹಿನ್ನಲೆ ಹೀಗಿದೆ.

ಹುಡುಗಿ ಡೊರೊತಿ  ಅಣ್ಣ ವಿಲಿಯಂನನ್ನು ಒಮ್ಮೆ  ೧೭೯೫ರಲ್ಲಿ, ಮತ್ತೊಮ್ಮೆ ೧೭೯೮ರಲ್ಲಿ ಭೇಟಿಯಾಗುತ್ತಾಳೆ.  ಅಲ್ಲಿಂದ ಮುಂದೆ ಡೋವ್ ಕಾಟೇಜ್ ನಲ್ಲಿ ಬದುಕಲು ಪ್ರಾರಂಭ ಮಾಡಿ ಇಬ್ಬರೂ ತಮ್ಮ ಜೀವನವನ್ನು ಪರಸ್ಪರ ಹಂಚಿಕೊಳ್ಳುತ್ತಾ ಹೋಗುತ್ತಾರೆ. ಆಗಾಗಲೇ ವಿಲಿಯಂ ಫ್ರೆಂಚ್ ಹುಡುಗಿ ಅನೆಟ್ ಳನ್ನು ಪ್ರೀತಿ ಮಾಡಿ ಅವಳಿಂದ ಒಬ್ಬ ಮಗಳನ್ನು ಪಡೆದಿರುತ್ತಾರೆ. ಡೋವ್ ಕಾಟೇಜ್ ಗೆ ಬರುತ್ತಿದ್ದ ಅವರ ಬಾಲ್ಯದ ಗೆಳತಿ ಮೇರಿಯನ್ನು ಮುಂದೆ  ವಿಲಿಯಂ ಮದುವೆಯಾಗಿ ಮಕ್ಕಳನ್ನು ಪಡೆಯುತ್ತಾರೆ. ವಿಶೇಷವೆಂದರೆ ಡೊರೊತಿ  ಈ ಇಬ್ಬರು ಹೆಂಗಸರಿಗೂ ಸ್ನೇಹಿತೆಯಾಗಿ, ಇಬ್ಬರ ಮಕ್ಕಳಿಗೂ ಅತ್ತೆಯಾಗಿ ಕಡೆಯತನಕ ಉಳಿಯುತ್ತಾರೆ. ಮೇರಿ ತನ್ನ ಬಾಲ್ಯದ ಗೆಳತಿಯಾಗಿದ್ದು, ತಾನು, ಅಣ್ಣ ವಿಲಿಯಂ ಹಂಚಿಕೊಂಡಿದ್ದ ಡೋವ್ ಕಾಟೇಜ್ ಗೆ ಆಗಾಗ ಬಂದು, ಕಡೆಗೆ ಅಣ್ಣನನ್ನು ಪ್ರೀತಿಸಿ ಮದುವೆಯಾದಾಗ ಮೊದಲು ಇಷ್ಟ ಪಡದಿದ್ದರೂ ನಂತರ ಅವಳನ್ನು ತಮ್ಮಲ್ಲಿ ಒಬ್ಬಳನ್ನಾಗಿ ಸ್ವಾಗತಿಸುತ್ತಾರೆ. ಅವರಿಬ್ಬರ ಮದುವೆಗೆ ಹೋಗಲು ಧೈರ್ಯವಾಗದೆ ಇದ್ದರೂ ದಿನಚರಿಯಲ್ಲಿ ತಮ್ಮ ಅಳಲನ್ನು, ಭಾವನೆಗಳನ್ನು ತೋಡಿಕೊಳ್ಳುತ್ತಾರೆ.

ಆಕೆ ಬರೆದ ದಿನಚರಿಯ ದಾಖಲೆ  ಹೀಗಿದೆ: “ಅಕ್ಟೋಬರ್ ೪, ಸೋಮವಾರ ೧೮೦೨ – ನನ್ನ ಸೋದರ ವಿಲಿಯಂನ ಮದುವೆ ಮೇರಿ ಹಚಿಂಸೋನ್ ಜೊತೆಗೆ ಆಯಿತು.” ಮತ್ತೊಬ್ಬ ಸ್ನೇಹಿತೆಗೆ ಬರೆದ ಪತ್ರವೊಂದರಲ್ಲಿ ತಮ್ಮ ದುಗುಡ, ತಳಮಳವನ್ನು, ತನಗೆ ಎಷ್ಟು ಮಾನಸಿಕ ತಲ್ಲಣವುಂಟಾಗಿದೆ ಎಂದು ಹಂಚಿಕೊಂಡಿದ್ದಾರೆ. ಅದೇ ಪುಟದಲ್ಲಿ ಆಕೆ ತಾನು ಬರೆದಿರುವ ಮೂರು ಸಾಲುಗಳನ್ನು ಶಾಯಿಯಿಂದ ಹೊಡೆದು ಹಾಕಿದ್ದಾರೆ. ಇಂದಿಗೂ ಆ ಮೂರು ಸಾಲುಗಳಲ್ಲಿ ಇರುವ ಪದಗಳು ಏನು ಎಂದು ನೋಡುಗರಿಗೆ, ಓದುಗರಿಗೆ ತಿಳಿಯುವುದಿಲ್ಲ. ಪ್ರದರ್ಶನದ ಕ್ಯೂರೆಟರ್ ದೊಡ್ಡ ಪದಗಳಲ್ಲಿ “ಓದುಗರೇ, ಈ ಸಾಲುಗಳಲ್ಲಿ ಆಕೆ ಏನನ್ನು ಬರೆದು ನಂತರ ಹೊಡೆದು ಹಾಕಿದ್ದಾಳೆ? ನೀವೇ ಊಹಿಸಿ, ನೀವು ಏನೆಂದು, ಹೇಗೆಂದು ಇದನ್ನು ಅರ್ಥೈಸಿಕೊಳ್ಳುತೀರ?” ಎಂದು ಬರೆದು ನಮಗೆ ಸವಾಲು ಹಾಕಿದ್ದಾರೆ.

ನಾನೂ ಕೂಡ ಬಗ್ಗಿ ಬಗ್ಗಿ ಗ್ಲಾಸ್ ಬಾಕ್ಸ್ ಒಳಗಿರುವ ಡೊರೊತಿ ಯ ದಿನಚರಿಯ ಆ ಎರಡು ಹಾಳೆಗಳನ್ನು ಮತ್ತೆ ಮತ್ತೆ ನೋಡಿದೆ. ಓದಲು ಪ್ರಯತ್ನಿಸಿದೆ. ಉಹುಂ, ಆಕೆ ಹೊಡೆದು ಹಾಕಿರುವ ಆ ಮೂರು ಸಾಲುಗಳಲ್ಲಿ ಏನಿದೆ, ಆ ರಹಸ್ಯವೇನು ಎಂದು ಕಡೆಗೂ ಹೊಳೆಯಲಿಲ್ಲ. ಇಲ್ಲದ್ದನ್ನೆಲ್ಲ ಊಹಿಸಿಕೊಳ್ಳಲು ಹೋಗದೆ ಮುಂದೆ ಸಾಗಿದೆ.

ತನ್ನ ಕಾಲದಲ್ಲಿ ಡೊರೊತಿ ತಾನು ಬರೆದಿದ್ದನ್ನ ಪ್ರಕಟಗೊಳಿಸದೆ, ಇಷ್ಟಪಡದೆ ಅನಾಮಿಕವಾಗಿಯೇ ಉಳಿದರೂ, ಡೊರೊತಿ   ಮತ್ತು ವಿಲಿಯಂರ ಕೆಲ ಸ್ನೇಹಿತರು ತಮ್ಮ ಬರಹಗಳಲ್ಲಿ ಆಕೆಯ ಬಗ್ಗೆ, ಬರವಣಿಗೆಯ ಬಗ್ಗೆ ಬರೆದಿದ್ದಾರೆ. ಇವರಲ್ಲಿ ಆಪ್ತ ಸ್ನೇಹಿತ ಕವಿ ಸಾಮ್ಯುಯೆಲ್ ಕೋಲ್ರಿಜ್ ಒಬ್ಬರು. ಮತ್ತೊಬ್ಬರು ತಾಮಸ್ ಕ್ವಿನ್ಸಿ. ಈ ಇಬ್ಬರೂ  ಡೊರೊತಿ, ಮತ್ತಾಕೆಯ ಬರವಣಿಗೆ ವಿಲಿಯಂರ ಮೇಲೆ ಹೇಗೆ, ಎಷ್ಟು ಪ್ರಭಾವ ಬೀರಿತ್ತು ಎಂದು ಸಾಕಷ್ಟು ಬರೆದಿದ್ದಾರೆ.

ಡೊರೊತಿಯ ಬರಹಗಳಲ್ಲಿ ತಾನೇತಾನಾಗಿ ಸ್ಪಷ್ಟವಾಗುವ ಕವಿದೃಷ್ಠಿ, ಓದುಗರನ್ನು ಹಿಡಿದಿಡುವ ಬರವಣಿಗೆಯ ಶೈಲಿ, ನಿತ್ಯ ಜೀವನದ ಆಗುಹೋಗುಗಳನ್ನೇ ಆಕೆ ಅಷ್ಟೂ ಅಚ್ಚರಿ, ಬೆರಗು ಕಣ್ಣುಗಳಿಂದ ನೋಡುವುದು, ಅವುಗಳ ಬಗ್ಗೆ ಸ್ವಗತವೆಂಬಂತೆ ಹೇಳುವುದು, ಹಂಚಿಕೊಳ್ಳುವುದು ದಾಖಲಾಗಿದೆ. ಉದಾಹರೆಣೆಗೆ, ೧೭೯೯ರಲ್ಲಿ ಅಣ್ಣ, ತಂಗಿ ಡೋವ್ ಕಾಟೇಜ್ ನಲ್ಲಿ ವಾಸವಾಗಿರಲು ಬರುತ್ತಾರೆ. ೧೮೦೨ರ ಜೂನ್ ತಿಂಗಳಲ್ಲಿ ತನ್ನ ಮಲಗುವ ಕೋಣೆಯ ಕಿಟಕಿಯಲ್ಲಿ ಗೂಡು ಕಟ್ಟುತ್ತಿದ್ದ ಸ್ವಾಲೊ ಹಕ್ಕಿಗಳ ಬಗ್ಗೆ ತಮ್ಮ ‘ದ ಸ್ಟೋರಿ ಆಫ್ ದ ಸ್ವಾಲೋಸ್’ ಸ್ವಗತದಲ್ಲಿ ವಿವರವಾಗಿ ಬರೆಯುತ್ತಾ ಹೋಗುತ್ತಾರೆ. ಆ ಹಕ್ಕಿಗಳ ಮೊದಲ ವಿಫಲ ಪ್ರಯತ್ನ, ಮತ್ತೆ ಆಕೆ ಅವುಗಳನ್ನು ಹುಡುಕುವುದು, ಕೆಲ ದಿನಗಳ ನಂತರ ಅವುಗಳನ್ನು ತಮ್ಮ ಮನೆಯ ಹಿಂದುಗಡೆ ಇದ್ದ ತೋಟದಲ್ಲಿ ನೋಡಿದ್ದನ್ನು ದಾಖಲಿಸುತ್ತಾರೆ. ನನಗೆ ಈ ಬರಹದ ಶೈಲಿ ಬಹಳ ಇಷ್ಟವಾಯಿತು. ಸರಳವಾಗಿ, ಸುಂದರವಾಗಿ ಮನ ಮುಟ್ಟುವಂತೆ ವಿವರಿಸುವ ಆ ಧಾಟಿ, ಪ್ರತಿಯೊಂದನ್ನೂ ಮಗುವಿನಂತೆ ಕುತೂಹಲದಿಂದ ನೋಡಿ ಅದರ ಬಗ್ಗೆ ಮರುಚಿಂತನೆ ಮಾಡುವ ಅವರ ಸ್ವಭಾವ ನನಗೆ ಬಹಳ ಆಪ್ತವೆನಿಸಿತು. ಆ ಒಂದು ಭಾವನಾತ್ಮಕ ಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಅವರ ಏಕಾಗ್ರತೆ, ಆ ಧ್ಯಾನ – ಇದು ನಮ್ಮನ್ನು ಹಿಡಿದಿಡುತ್ತದೆ.

ಸಾಹಿತ್ಯದ ಬಗ್ಗೆ ಆಕೆಗಿದ್ದ ಪ್ರೀತಿ ಅವರ ಜರ್ನಲ್ ನಲ್ಲಿ ನಮ್ಮ ಗಮನಕ್ಕೆ ಬರುತ್ತದೆ. ಆಕೆ ಓದುತ್ತಿದ್ದ ಜರ್ಮನ್, ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳ ಸಾಹಿತ್ಯದ ಬಗ್ಗೆ ಆಗಾಗ ತಮ್ಮ ಮೂವರು ಸ್ನೇಹಿತೆಯರಿಗೆ (ತನ್ನ ಶಾಲಾ ಗೆಳತಿ ಜೇನ್ ಪೋಲಾರ್ದ್, ಕ್ಯಾಥರೀನ್ ಚೆರ್ಕಸೊನ್, ಲೇಡಿ ಬೋಮೊಂಟ್) ಪತ್ರದಲ್ಲಿ ಬರೆದು ಹಂಚಿಕೊಳ್ಳುತ್ತಾರೆ. ಅದರಲ್ಲೂ ಶಾಲಾ ಗೆಳತಿ ಜೇನ್ ಪೋಲಾರ್ದ್ ಬಳಿ ಜೀವನದ ಸುಮಾರು ವಿಷಯಗಳನ್ನು ಹೇಳಿದ್ದಾರೆ.

ಸಾಹಿತ್ಯ ಪ್ರಪಂಚ ಡೊರೊತಿಯ ಬರಹಗಳಲ್ಲಿ ಗುರುತಿಸಿರುವುದು ಆಕೆಯಲ್ಲಿದ್ದ ಓದುವ ಅಭಿಲಾಷೆ, ಆಸಕ್ತಿ, ಕೊನೆ ಮೊದಲಿಲ್ಲದ ನಡಿಗೆ, ಚಾರಣದ ಬಗ್ಗೆ ಇದ್ದ ಪ್ರೀತಿ, ತಿರುಗಾಟ, ನಿಸರ್ಗ ಪ್ರೇಮ, ಅವಿರತವಾಗಿ ಮಾಡುತ್ತಿದ್ದ ತೋಟದ ಕೆಲಸ. ಅಷ್ಟಲ್ಲದೇ ಕುಟುಂಬದ ಬಗ್ಗೆ ಇದ್ದ ಪ್ರೀತಿ, ಕಾಳಜಿ, ತಾನು ಎಲ್ಲರನ್ನೂ ಇನ್ನಿಲ್ಲದಷ್ಟು ಪ್ರೀತಿಸುವುದು ಮತ್ತು ಅವರೆಲ್ಲರಿಂದ ಪ್ರೀತಿ ಕಾಳಜಿಯನ್ನು ಅಪೇಕ್ಷಿಸುವುದು. ಎಲ್ಲವನ್ನೂ, ಎಲ್ಲರನ್ನೂ ಆಕೆ ಮುಚ್ಚಟೆಯಿಂದ, ಬಿಮ್ಮಾನವಿಲ್ಲದೆ ಆದರದಿಂದ ನೋಡುತ್ತಿದ್ದರು.

ನಾನು ಈ ಪ್ರದರ್ಶನದಲ್ಲಿ ಆಕೆಯ ಬರಹ, ದಿನಚರಿಗಳನ್ನು ಓದುತ್ತಾ ಮುಂದೆ ಮುಂದೆ ಹೋದಾಗ ಆಕೆಯ ಬಗ್ಗೆ ಇನ್ನಷ್ಟು, ಮತ್ತಷ್ಟು ಅಭಿಮಾನ ಮೂಡಿತು. ನಿಸರ್ಗದ ಬಗ್ಗೆ ಡೊರೊತಿ ತೋರುತ್ತಿದ್ದ, ತೋರಿಸಿದ ಅಪ್ರತಿಮ ಕುತೂಹಲ, ಆಸಕ್ತಿ, ಪ್ರೀತಿ, ಅಚ್ಚರಿ, ನಿರಂತರವಾಗಿ ಕಲಿಯುತ್ತಿದ್ದ ರೀತಿ, ಮತ್ತದನ್ನು ದಾಖಲಿಸುತ್ತಿದ್ದ ಅಭ್ಯಾಸ – ಈ ನಿಷ್ಠೆ ಮತ್ತು ಶ್ರದ್ಧೆ ಅಪರೂಪವಲ್ಲವೇ ಎನ್ನಿಸಿತು. ಆಕೆ ತನ್ನ ಪ್ರತಿದಿನದ ಜೀವನವನ್ನು ಅತ್ಯಂತ ಬೆರಗು, ಸಂಭ್ರಮದಿಂದ ನೋಡುತ್ತಿದ್ದ ಆ ಪರಿ, ಆಕೆಯ ಆ ‘ನಿಸರ್ಗ ವಿಟಮಿನ್’ ಈ ನಮ್ಮ ಕಾಲಕ್ಕೆ ಎಷ್ಟು ಅತ್ಯವಶ್ಯಕವಾಗಿ ಬೇಕಿದೆ ಎಂದೆನಿಸಿತು. ಹಾಗೆ ಇನ್ನೂರು ವರ್ಷಗಳ ಹಿಂದಿನ ಅವರ ಕಷ್ಟಕರವಾದ ಜೀವನ ಶೈಲಿ, ಅತಿರೇಕದ ಚಳಿಗಾಲ, ಆ ಪುಟ್ಟ ಮನೆಗೆ ಬರುತ್ತಿದ್ದ ಅಷ್ಟೊಂದು ಜನರ ಸಂಭಾಳಿಕೆ, ಅಣ್ಣನ ಬೆಳೆಯುತ್ತಿದ್ದ ಕುಟುಂಬ… ಇಷ್ಟೆಲ್ಲದರ ಮಧ್ಯೆಯೂ ಆಕೆ ಬರೆದಿದ್ದೆ ಬರೆದಿದ್ದು. ವಾಹ್,  ಡೊರೊತಿ , ನೀವು ಭೇಷ್ ಭೇಷ್ ಎಂದುಕೊಂಡೆ.

ಅಣ್ಣ ವಿಲಿಯ0 ನ ಖಾಸಗಿ ಸೆಕ್ರೆಟರಿಯಂತೆ ಪಾತ್ರ ವಹಿಸುತ್ತ ಆತ  ಬಾಯಲ್ಲಿ ಹೇಳಿದಂತೆ ತಾನು ಆತನ ಕವನಗಳನ್ನು ಬರೆಯುವುದು. ನಿರಂತರವಾಗಿ ಅಣ್ಣನ ಜೊತೆ ಸಾಹಿತ್ಯ, ನಿಸರ್ಗ, ಕವನಗಳ ಬಗ್ಗೆ ಚರ್ಚೆ. ತಾನು ಬೆಳೆಯುತ್ತಿದ್ದ ತೋಟದ ತರಕಾರಿ ಹಣ್ಣುಗಳು, ಹವಾಮಾನ ಬದಲಾದಂತೆ ಹುಟ್ಟುತ್ತಿದ್ದ ಬಣ್ಣ ಬಣ್ಣದ ಹೂಗಳು, ಆ ಹವಾಮಾನದಲ್ಲಿನ ಬಿಸಿಲು, ಚಳಿ, ಹಿಮ, ಹತ್ತಿ ಇಳಿಯುತ್ತಿದ್ದ ಬೆಟ್ಟಗಳು, ಕೈಗೊಂಡ ಕಾಲ್ನಡಿಗೆಗಳು, ಚಾರಣಗಳು, ಎಲ್ಲವೂ ಅವರ ಬರಹಗಳಲ್ಲಿ ಸೊಗಸಾಗಿ ಮೂಡಿದೆ.

ಡಾಫೊಡಿಲ್ ಹೂ ಬಗ್ಗೆ ಅವರು ಬರೆದ ಸುದೀರ್ಘ ಸ್ವಗತದ ತುಣುಕುಗಳನ್ನು ನಾನು ಓದಿದೆ. ಆ ಹೂ ಹುಟ್ಟುವ ಮುಂಚಿನ ಋತುಮಾನ, ನಂತರ ಬರುವ ವಸಂತ ಮಾಸ, ಹೂವಿನ ಗಿಡ ಹೂ ಬಿಡಲು ತಯಾರಾಗುವುದು, ಹೂ ಬಂದ ಮೇಲೆ ಅದರ ಸೌಂದರ್ಯ, ಅ ಹೂವಿನ ಹಾಸಿಗೆಯ ಮನಮೋಹಕತೆ – ಓಹ್, ಎಷ್ಟು ಚೆನ್ನಾದ ವಿವರಣೆ. ಅಲ್ಲೇ ನಿಂತು ಓದುತ್ತಾ ಬೇರೊಂದು ಲೋಕಕ್ಕೆ ಹೋದ ಅನುಭವವಾಯಿತು. ಕಡೆಗೂ ನಾನು ವಿದ್ಯಾರ್ಥಿ ಜೀವನದಲ್ಲಿ ಆ ಡಾಫೊಡಿಲ್ ಹೂ ಹೇಗಿರುತ್ತದೆ ಎಂದು ಊಹಿಸಿಕೊಂಡು ಮಾಡಿದ್ದ ಕಲ್ಪನಾ ಚಿತ್ರ ಈಗ ಸಂಪೂರ್ಣವಾದ ತೃಪ್ತಿ ಸಿಕ್ಕಿತು. ಈ ಬರಹಗಳನ್ನು ಓದಿದ ಮೇಲೆ ನನಗ್ಯಾಕೋ ವಿಲಿಯಂರ ಡಾಫೊಡಿಲ್ ಕವನಕ್ಕಿಂತಲೂ ಡೊರೊತಿ ಯ ಈ ಡಾಫೊಡಿಲ್ ಸ್ವಗತದ ಬರಹವೇ ಮುದ್ದಾಗಿದೆ ಎನಿಸಿತು. ಈ ಅನಾಮಿಕ ತಂಗಿ ತಾನು ದಾಖಲಿಸಿದ ಹೂವಿನ ಸೌಂದರ್ಯದ ವಿವರಗಳೇ ಮುಂದೆ ವಿಲಿಯಂ ರ ಕವನವಾಯಿತು! ಡೊರೊತಿ  ತನ್ನ ನಿಜ ಕಣ್ಣುಗಳಿಂದ ನೋಡಿದ ಆ ಹೂವಿನ ಬೆರಗಿನ ವಿವರಣೆಯ ಮುಂದೆ ವಿಲಿಯಂರ ಪ್ರಪಂಚ ಪ್ರಸಿದ್ಧ ಕವನ ಸ್ವಲ್ಪ ಬಿಳಿಚಿಕೊಂಡಿದೆಯೇನೋ ಎಂದೆನಿಸಿತು. ಡೊರೊತಿಗೆ ಬೈ ಎಂದು ವಿದಾಯ ಹೇಳಿ ಹೊರಬಂದ ಮೇಲೆ ನನ್ನ ಕಣ್ಣು ಕಟ್ಟಡದ ಅಕ್ಕಪಕ್ಕ ಎಲ್ಲಾದರೂ ಡಾಫೊಡಿಲ್ ಹೂ ಕಾಣುತ್ತದಾ ಎಂದು ಹುಡುಕಿತು. ಅರೆ, ಏನಿದು ಡೊರೊತಿ ಯ ಪ್ರಭಾವವೇ ಎಂದು ಮನಸ್ಸು ನಕ್ಕಿತು.

ಲೇಖನ ಮತ್ತು ಚಿತ್ರಗಳು – ವಿನತೆ ಶರ್ಮ

 

 

7 thoughts on “ನಮಸ್ಕಾರ ಡೊರೊತಿ, ಹೇಗಿದ್ದೀರ? – ವಿನತೆ ಶರ್ಮ

 1. ಗೂಡೂರರ ಸುಂದರ ಚಿತ್ರ ಲೇಖನಕ್ಕೆ ಕಳೆ ಕೊಟ್ಟಿದೆ. .

  ಎಲ್ಲ ದೊಡ್ಡ ಲೇಖಕರ ಬದುಕನ್ನು ಸಂಶೋಧಿಸಿದರೆ ಇಂತ ಎಷ್ಟು ಉಪಯುಕ್ತ ಮಾಹಿತಿಗಳು ಸಿಗುತ್ತವೋ?
  ಡೋರೋತಿಯ ಪರಿಚಯವನ್ನು ವಿನತೆಯವರು ಮಾಡಿದ ಮೇಲೆ ,ಡೊವ್ ಕಾಟೇಜಿಗೆ ಹೋಗಲು ಉತ್ಸಾಹ ಬಂದಿದೆ.

  ಇಬ್ಬರಿಗೂ ಅಭಿನಂದನೆಗಳು.

  Like

 2. ವಿನತೆಯವರ ಆತ್ಮೀಯ ಬರಹ ಓದಿ ಮತ್ತೆ ಆ ಮನೆಯ ಮುಂದೆ ನಿಂತಂತೆ ಭಾಸವಾಯಿತು. ತುಂಬ ಉಪಯುಕ್ತ ಲೇಖನ. ಬುಕ್ ಮಾರ್ಕ್ಡ್! – ಕೇಶವ

  Like

 3. ವರ್ಡ್ಸ್ವರ್ತನ ತಂಗಿ ಡೊರೊತಿಯ ಪರಿಚಯ ಅದ್ಭುತವಾಗಿ ಮೂಡಿ ಬಂದಿದೆ. ಹೆಸರು ಮಾಡಿದ ಪುರುಷನ ಹಿಂದಿನ ತ್ಯಾಗ ಮಯಿ ತಂಗಿ ತನ್ನದೇ ರೀತಿಯಲ್ಲಿ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರ. ಅಂದು ಸ್ತ್ರೀಯರಿಗಿದ್ದ ನಿರ್ಭಂಧನೆಗಳ ಚೌಕಟ್ಟಿನಲ್ಲೇ ಡೊರೊತಿಯ ಸಾಹಿತ್ಯಿಕ ಹಾಗೂ ಸಾಂಸಾರಿಕ ಕೈಂಕರ್ಯಗಳ ಪ್ರಭಾವ ಊಹೆಗೆ ಮೀರಿದ್ದು. ಇವನ್ನೆಲ್ಲ ನೀವು ಸಂಶೋದಿಸಿ ನಮ್ಮ ಮುಂದೆ ತೆರೆದಿಟ್ಟಿದ್ದಕ್ಕೆ ಕೃತಜ್ಞತೆಗಳು. ನಾನೂ ಗ್ರಾಸ್ಮಿಯರ್ನಲ್ಲಿ ವರ್ಡ್ಸ್ವರ್ತನ ಮನೆಗೆ ಭೆಟ್ಟಿ ನೀಡಿದ್ದೇನೆ. ಆದರೆ, ನಿಮ್ಮಷ್ಟು ಗಹನವಾಗಿ ತಾಸುಗಟ್ಟಲೆ ಅಲ್ಲಿನ ಬರಹಗಳನ್ನು ಓದುವ ಕಷ್ಟ ತೆಗೆದುಕೊಂಡಿಲ್ಲ. ನೀವೇ ಬಾಳೆ ಹಣ್ಣನ್ನು ಸುಲಿದು ಬಾಯಿಗಿಟ್ಟಿದ್ದೀರಿ.
  ಗುಡೂರರ ಕಲೆ ಈ ಲೇಖನಕ್ಕೆ ಹೊಸ ಆಯಾಮವನ್ನಿತ್ತಿದೆ. ಹೀಗೇ ಅವರ ಕಲೆ ನಮ್ಮ ವೇದಿಕೆಯ ಲೇಖನಗಳಿಗೆ ಮೆರಗು ಕೊಡುತ್ತಿರಲಿ.

  Like

 4. ವಿನುತೆ ಅವರು ಡೊರೊತಿ ಅವರ ಕೈಕುಲುಕಿ ನಿಂತಿರುವ ಚಿತ್ರವನ್ನು ಬಿಡಿಸಿರುವ ಗುಡೂರ್ ಅವರಿಗೆ ಅಭಿನಂದನೆಗಳು. ವರ್ಡ್ಸ್ವರ್ಥನ ಜೀವನದಲ್ಲಿ ಅವನ ಸೋದರಿ ಡೊರತಿಯ ಪಾತ್ರ ಎಷ್ಟು ದೊಡ್ದದು ಎನ್ನುವುದನ್ನು ತಮ್ಮ ಲೇಖನದಲ್ಲಿ ವಿನುತೆ ಬಹಳ ಸುಂದರವಾಗಿ ತಿಳಿಸಿಕೊಟ್ಟಿದ್ದಾರೆ. ಈಗ ಕೆಲವು ವರ್ಷಗಳ ಹಿಂದೆ ವರ್ಡ್ಸ್ ವರ್ಥನ ಡ್ಯಾಫ಼ೋಡಿಲ್ಸ್ ಕವನದ ಬಗ್ಗೆ ಇಂತಹುದೇ ಒಂದು ಲೇಖನವನ್ನು ನಮಗೆ ತಲುಪಿಸಿದ್ದ ದೇಸಾಯಿ ಅವರ ಲೇಖನವೂ ಇಷ್ಟೇ ಸೊಗಸಾಗಿತ್ತು. ನಮ್ಮ ಪೀಳಿಗೆಯವರಿಗೆ ವರ್ಡ್ಸ್ ವರ್ತನ ಕವನಗಳು ಪರಿಚಿತ. ಆದರೆ ಈ ಕವನಗಳ ಹಿಂದೆ ಅವನ ಸೋದರಿಯ ಕೈವಾಡ ಎಷ್ಟಿತ್ತು ಎನ್ನುವುದು ತಿಳಿದದ್ದು ಈ ಲೇಖನದ ಮೂಲಕವೇ! ಅವನ ಈ ಅನಾಮಿಕ ತಂಗಿಯ ಜೀವನದ ಬಗ್ಗೆ ನಮಗೆ ತಿಳಿಸಿಕೊಟ್ಟ ವಿನುತೆ ಅವರಿಗೆ ಧನ್ಯವಾದಗಳು. ಅಣ್ಣನ ಜೀವನದ ಆಧಾರ ಸ್ಥಂಭವಾಗಿದ್ದ ಆಕೆಯ ತ್ಯಾಗವನ್ನು ಬಲ್ಲವರು ಬಹಳ ಕಡಿಮೆ. ತೆರೆಮರೆಯಲ್ಲಿದ್ದುಕೊಂಡು ತನ್ನ ಪ್ರತಿಭೆಯನ್ನು ಪ್ರಪಂಚದ ಕಣ್ಣುಗಳಿಂದ ಮರೆಯಾಗಿಟ್ಟಿದ್ದ ಡೊರತಿಯ ಜೀವನ ನಿಜಕ್ಕೂ ಒಂದು ಅಪರೂಪವಾದ ಕಥೆಯೇ ಸರಿ. ಅದನ್ನು ನಮಗೆ ತಿಳಿಸಿಕೊಟ್ಟ ವಿನುತೆ ಅವರಿಗೆ ಮತ್ತೊಮ್ಮೆ ಧನ್ಯವಾದಗಳು.
  ಉಮಾ ವೆಂಕಟೇಶ್

  Liked by 1 person

 5. ಡೊರೊತಿಯೊಂದಿಗೆ ಅವರ ಅಚ್ಚುಮೆಚ್ಚಿನ ತೋಟದಲ್ಲಿ ನನ್ನನ್ನ ನಿಲ್ಲಿಸಿ, ಆತ್ಮೀಯವಾಗಿ ಅವರ ಕೈ ಕುಲುಕುತ್ತಾ ಇರುವ ಆ ರೇಖಾಚಿತ್ರ ಎಷ್ಟು ಚೆನ್ನಿದೆ! ಹೌದು, ತೋಟದಲ್ಲಿ ಆ ದಿನ ಮುಸ್ಸಂಜೆ ಕೂತಾಗ ಅವರ ಜೊತೆ ಮಾತನಾಡಿ ಕನಸಿಸಿದ್ದೆ. ಮನಸ್ಸು ಎಷ್ಟೆಲ್ಲಾ ಸಂಭ್ರಮಿಸಿತ್ತು!
  ವಿನತೆ ಶರ್ಮ

  Liked by 1 person

 6. ಡೊರೋತಿ ಯವರ “ಪ್ರತಿ ದಿನದ ಹರ್ಷ ಪ್ರತಿ ದಿನದ ಬೆರಗು ” ಇಷ್ಟೇ ಸಾಕಲ್ಲ ಅವರ ಜೀವನದ ಜೀವಾಳ ತಿಳಿಯಲು ! ಈ ಪ್ರಪಂಚವನ್ನು ದಿನ ದಿನವೂ ಹೊಸ ದೃಷ್ಟಿಯಿಂದ ,ಹೊಸ ಬೆರಗಿನಿಂದ ನೋಡಿರಬೇಕಾದರೆ ಅವರು ನಿಸರ್ಗದ ಮಡಿಲಲ್ಲಿ ಅದೆಷ್ಟು ರೂಪಗಳನ್ನು ಕಂಡಿರಬೇಕು ? ಈ ಕವಿ ಹೃದಯ ಕೊನೆಯ ವರೆಗೂ ತೆರೆಮರೆಯ ಹಿಂದೆ ಉಳಿಯಿತಲ್ಲ ಅಂತ ತಳಮಳ ವಾಗದೇಇರದು.ಅವಳ ಭಾವ ಲಹರಿಗೆಕವನದ ರೂಪ ಕೊಟ್ಟ Willam Wordsworth ಪ್ರತಿಭಾಶಾಲಿಯೋ , ಈ ಪ್ರಪಂಚದ ,ನಿಸರ್ಗದ ಹೊಸ ಹೊಸ ರೂಪಗಳನ್ನು ತನ್ನದೇ ದೃಷ್ಟಿಯಿಂದ ಕಂಡು ಪದರು ಪದರಾಗಿ ಬಿಡಿಸಿಟ್ಟ ಡೊರೋತಿ ಪ್ರತಿಭಾನ್ವಿತಳೋ ಎಂಬ ಪ್ರಶ್ನೆ ಹುಟ್ಟಿದರೆ ಅಚ್ಚರಿಯೇನಿಲ್ಲ.ಅವಳು ಡ್ಯಾಫಡಿಲ್ಸ ಹೂಗಳನ್ನು ಕೆರೆ ಪಕ್ಕ ಕಂಡಾಗ ಬರೆದ ಒಂದು ವಾಕ್ಯ ನನ್ನ ಮನ ಸೂರೆಗೊಂಡಿತು –“some rested their heads upon these stones as on a pillow for weariness” . ಇಂತಹ ಅದ್ಭುತ ಭಾವಗಳ ಒಡತಿ ತಾನೇ ಬರೆದಿದ್ದರೆ ಹೇಗಿರುತ್ತಿತ್ತು ಎಂಬ ಯೋಚನೆ ಬಾರದಿರದು.ಆದರೂ ಅವಳ ಪ್ರತಿಭೆ ಕೊನೆಗಾದರೂ ಗುರುತಿಸಲ್ಪಟ್ಟಿತು ಎಂಬ ಸಮಾಧಾನ.ಹೀಗೆ ಅದೆಷ್ಟುಪ್ರತಿಭೆಗಳು ನಿರ್ಲಕ್ಷ್ಯಕ್ಕೊಳಗಾಗಿ ಕಮರಿವಿಯೋ ಅನಿಸದಿರದು. ಇಷ್ಟು ಚನ್ನಾಗಿ ಡೊರೊತಿಯವರನ್ನ ಪರಿಚಯಿಸಿದ್ದಕ್ಕೆ ವಿನತೆಯವರಿಗೆ ಧನ್ಯವಾದ ಹೇಳದಿರಲಾದೀತೆ ?
  ಸುಂದರ ಲೇಖನಕ್ಕೆ ಅಭಿನಂದನೆಗಳು
  ಸರೋಜಿನಿ ಪಡಸಲಗಿ.

  Liked by 1 person

 7. ಮತ್ತೊಮ್ಮೆ ನಮಸ್ಕಾರ ಡೊರೊತಿ, ಹೇಗಿದ್ದೀರ?
  ಹಿಂದೊಮ್ಮೆ ನಿಮ್ಮನ್ನು ಅನಿವಾಸಿ ಅಂಗಳಕ್ಕೆ ಸ್ವಾಗತಿಸಿದ್ದೆ. https://anivaasi.com/2015/04/10/wordsworths-daffodils/ ಆಗ ನಮ್ಮ ಅನಿವಾಸಿ ಬಳಗಕ್ಕೆ ನಾನು ಮಾಡಿಸಿದಕ್ಕಿಂತ ಹತ್ತು ಪಟ್ಟು ಸುಂದರವಾಗಿ ವಿನತೆಯವರು ನಿಮ್ಮ ವ್ಯಕ್ತಿತ್ವವನ್ನು ಚಿತ್ರಿಸಿದ್ದಾರೆ. ನಿಮ್ಮೊಡನೆ ಕೈಕುಲುಕಿದವರು ಅವರಲ್ಲವೆ? ಆ ಚಿತ್ರ ನೋಡಿ ಅಸೂಯೆ, ನನಗೆ! ”ಆತನ ಈ ಬರಹಗಳ, ಆ ಸವಿನುಡಿಗಳ, ಆತನ ಬಾಗಿಲ ಹಿಂದೆ ಇಷ್ಟು ವರ್ಷಗಳ ಕಾಲ ಬಚ್ಚಿಟ್ಟುಕೊಂಡಿದ್ದ ಡೊರೊತಿ ಕಡೆಗೂ ಈಗ ನನಗೆ ಪರಿಚಯವಾದರು” ಎಂದು ಎಷ್ಟು ಆತ್ಮೀಯವಾಗಿ ನಿಮ್ಮನ್ನು ಕೊಂಡಾಡಿದ್ದಾರೆ. ನಿಮ್ಮನ್ನು ಇನ್ನಷ್ಟು ಹತ್ತಿರದಿಂದ ನೋಡಿದ ಹಾಗಾಯಿತು. ನಿಮ್ಮ ಪ್ರಕೃತಿ ಪ್ರೇಮ, ಅದರ ಬಗ್ಗೆ ನಿಮ್ಮ ಬೆರಗು ಇವೆಲ್ಲವನ್ನು ಬಿಚ್ಚಿಟ್ಟಿದ್ದಾರೆ. ನಾನೂ ಹಲವಾರು ವರ್ಷಗಳ ಕೆಳಗೆ ಡವ್ ಕಾಟೇಜಿಗೆ ಬಂದಿದ್ದೆ. ಆಗ ನೀವು ಆ ಗ್ಲಾಸ್ ಕ್ಯಾಬಿನಟ್ಟಿನಲ್ಲಿ ಬಚ್ಚಿಟ್ಟುಕೊಂಡಿದ್ದಿರೆಂದು ಬರಿ ನಿಮ್ಮ ಜರ್ನಲ್ಲಿನ ಪುಟಗಳ ಹಸ್ತಾಕ್ಷರದ ನಕಲು ನೋಡಿ ಬಂದಿದ್ದೆ. ನೀವು ಕಾಟು ಹಾಕಿದ ಸಾಲುಗಳ ಹಿಂದಿನ ರಹಸ್ಯ ನನ್ನನ್ನು ಇನ್ನೂ ಕಾಡುತ್ತಿದೆ. ಅದರ ಹಿಂದೆ ಏನು ಅಡಗಿದೆಯೋ? ಇನ್ನಷ್ಟು ಪ್ರಕೃತಿಯ ವರ್ಣನೆಯೋ, ನಿಮ್ಮ ಅಣ್ಣನ ಸೆಲೆಂಡೈನ್ ಪುಟ್ತ ಹೂವಿನ ಮೇಲಿನ ಅಗಾಧ ಪ್ರೇಮದ ಬಗ್ಗೆ ಶರಾವೋ (https://www.youtube.com/watch?v=-E-KiQ4o0qI೦) ಅಥವಾ ಕೋಲ್ರಿಜ್, ಕ್ವಿನ್ಸಿಯರ ಮತ್ತೇರಿದ ರಾತ್ರಿಯ ಧಾಂದಲೆಯೋ (ತಮಾಷೆ ಮಾಡಿದೆ) ಕುತೂಹಲ. ನಿಮ್ಮನ್ನು ಸ್ವಾಗತಿಸಿ ನಿಮ್ಮ ಭೇಟಿಯನ್ನು ಅನಿವಾಸಿಗಳಿಗೆಲ್ಲ ಮಾಡಿಸಿದ ನಿಮ್ಮ ಗೆಳತಿ ವಿನತೆಯವರಿಗೆ ನನ್ನ ಧನ್ಯವಾದಗಳನ್ನು ತಲುಪಿಸುತ್ತೀರಾ?
  ಶ್ರೀವತ್ಸ ದೇಸಾಯಿ

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.