ಈ ಅಂಧಾನುಕರಣೆ ಬೇಕೇ? – ವೈಶಾಲಿ ದಾಮ್ಲೆ ಅವರ ಲೇಖನ

(‘ಪರಿವರ್ತನೆ ಜಗದ ನಿಯಮ’ ಎಂಬ ವಿಚಾರ ನಮಗೆಲ್ಲಾ ತಿಳಿದಿದೆ. ಜಾಗತೀಕರಣದ ಯುಗದಲ್ಲಿ ಮಾಧ್ಯಮಗಳ ಮೂಲಕ ಪರಿವರ್ತನೆ ಹಾಗು ಪ್ರಗತಿ ಬಹಳ ಬಿರುಸಾಗಿ ನಡೆದಿದೆ. ಸಮಾಜದ ಆರ್ಥಿಕ ಕೆಳವರ್ಗದವರು ಮೇಲುವರ್ಗದವರನ್ನು ಅನುಕರಿಸುವುದು ಹಾಗೇ ಅಭಿವೃದ್ಧಿ ಗೊಳ್ಳುತ್ತಿರುವ ಬಡದೇಶಗಳು ಅಭಿವೃದ್ಧಿಗೊಂಡ ಶ್ರೀಮಂತ ದೇಶಗಳಲ್ಲಿನ ಭಾಷೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಬದುಕುವ ರೀತಿಯನ್ನು ಅನುಕರಿಸುವುದು ಸಾಮಾನ್ಯವಾಗಿದೆ ಹಾಗೆ ಅನಿವಾರ್ಯವೂ ಆಗಿದೆ. ಆದರೆ ಈ ಪರಿವರ್ತನೆ ಹಾಗು ಬದಲಾವಣೆಗಳನ್ನು ತಮ್ಮದಾಗಿಸಿಕೊಳ್ಳಲು ಸಮಾಜ ಸಿದ್ಧವಾಗಿದೆಯೇ ಎಂಬುದು ಮುಖ್ಯವಾದ ವಿಷಯ. ಬದಲಾಗುತ್ತಿರುವ ಸಮಾಜದಲ್ಲಿ ಯಾವ ಸಾಮಾಜಿಕ ಮೌಲ್ಯಗಳು ಹಾಗು ಬದುಕುವ ರೀತಿ ಸರಿ ಅಥವಾ ತಪ್ಪು ಎಂದು ನಿರ್ಧಾರ ಮಾಡುವುದು ಕಷ್ಟ. ಬಹುಶಃ ಅದನ್ನು ಒಂದು ಕಾಲಮಾನಕ್ಕೆ ಒಳಪಡಿಸಿ ಯಾವ ಪೀಳಿಗೆಗೆ ಅಥವಾ ತಲೆಮಾರಿಗೆ ಅನ್ವಯವಾಗುತ್ತದೆ ಎಂದು ಪರಿಗಣಿಸುವುದು ಉಚಿತ. ಕೆಲವು ಬದಲಾವಣೆಗಳು ಎಲ್ಲ ಕಾಲಕ್ಕೂ ಹಾಗೆ ಸರ್ವರಿಗೂ ಅನ್ವಯವಾಗಬಹುದು.

ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುವುದನ್ನೆಲ್ಲಾ ಅನುಕರಿಸಿ ನಾವು ಮುಂದುವರಿದ ದೇಶಕ್ಕೆ ಕಡಿಮೆ ಇಲ್ಲ ಎಂಬ ಒಂದು ಸುಳ್ಳು ಕಲ್ಪನೆಯಲ್ಲಿ ಜೀವನ ಮಾಡುವುದು ತಪ್ಪು. ಎಷ್ಟೋ ಮೌಲ್ಯಗಳನ್ನು ಬದುಕಿನ ರೀತಿಯನ್ನು ಶೋಧಿಸಿ ನಮ್ಮ ಸಮಾಜಕ್ಕೆ ಅಳವಡಿಸಿಕೊಳ್ಳುವುದು ಜಾಣತನ. ಈ ದಿಸೆಯಲ್ಲಿ ಸಮಾಜ, ಸರ್ಕಾರ ಹಾಗು ಮಾಧ್ಯಮಗಳಿಗೆ ಮಹತ್ತರವಾದ  ಜವಾಬ್ದಾರಿಯಿದೆ. ಪರಿವರ್ತನೆಗಳನ್ನು ನಿಯಂತ್ರಿಸುವ ಅಗತ್ಯವಿದೆ.

ವಿವೇಚನೆಯಿಲ್ಲದ ಅಂಧಾನುಕರಣೆಗಳು ತಂದೊಡ್ಡುವ ಸಮಸ್ಯೆಗಳು ಹಲವಾರು. ಈ ವಿಚಾರವನ್ನು ವೈಶಾಲಿಯವರು ತಮ್ಮ ವೈಯುಕ್ತಿಕ ಅನುಭವದ ಕೆಲವು ಘಟನೆಗಳನ್ನು ಕೈಗೆತ್ತಿಕೊಂಡು ಧೀರ್ಘವಾಗಿ ಚಿಂತಿಸಿದ್ದಾರೆ. ಸಂ)

***

ಈ ಅಂಧಾನುಕರಣೆ ಬೇಕೇ? ವೈಶಾಲಿ ದಾಮ್ಲೆ ಅವರ ಲೇಖನ

anukarane

ನನಗಿಲ್ಲಿ ಮ್ಯಾಂಚೆಸ್ಟರ್ ನಲ್ಲಿ ಈಗ ಭಾರತದ ಟಿವಿ ವಾಹಿನಿಗಳನ್ನು ನೋಡಲಿಕ್ಕಾಗುತ್ತದೆ ಅನ್ನೋದು ಒಂಥರಾ ಖುಷಿಯೇ . ಆದರೆ ಈ ಖುಷಿಯ ಹಿಂದೆ ಕೆಲವೊಮ್ಮೆ ದುಃಖ-ಆತಂಕಗಳ ಕಾರ್ಮೋಡ ಕವಿಯುವುದೂ ಇದೆ. ಹೇಗೆ ಮತ್ತು ಏಕೆ ಎಂದು ಇತ್ತೀಚೆಗಿನ ಒಂದು ಉದಾಹರಣೆಯ ಮೂಲಕ ವಿವರಿಸುತ್ತೇನೆ. ಇದನ್ನು ಅನಿವಾಸಿ ಅಮ್ಮನೊಬ್ಬಳ ಅಂತರಂಗದ ಅಳಲು ಎಂದು ನೀವು ಅರ್ಥ ಮಾಡಿಕೊಳ್ಳುವಿರಾಗಿ ನಂಬುತ್ತೇನೆ.

ಮೊನ್ನೆ ಒಂದು ದಿನ ಟಿವಿ ನೋಡುತ್ತಾ ಚ್ಯಾನೆಲ್ ಬದಲಾಯಿಸುತ್ತಿದ್ದೆ. ಹಿಂದಿಯ ಫೇಮಸ್ (?) ಚ್ಯಾಟ್ ಷೋ ‘ಕಾಫಿ ವಿದ್ ಕರಣ್ ‘ ಪ್ರಸಾರವಾಗುತ್ತಿತ್ತು. ಹಲವು ವರ್ಷಗಳ ಹಿಂದೆ ಕಾಲೇಜು ದಿನಗಳಲ್ಲಿ ಇದರ ಕೆಲವೊಂದು ಎಪಿಸೋಡ್ ಗಳನ್ನು ನೋಡಿ ನಾನು ಖುಷಿ ಪಟ್ಟಿದ್ದಿದೆ (ಇದು ನನ್ನ ಈ ವರ್ಷದ ಕ್ರಿಸ್ಮಸ್ ಕನ್ಫೆಷನ್ ಅಂತ ತಿಳ್ಕೊಳ್ಳಿ) ಹಿಂದಿಯ ಪ್ರಸಿದ್ಧ ನಾಯಕ- ನಾಯಕಿಯರ ಲವ್ ಸ್ಟೋರಿಗಳು, ಅವರ ಜಗಳ- ಸ್ನೇಹಗಳು ಇತ್ಯಾದಿಗಳನ್ನು ನೋಡಿ, ಕೇಳಿ ಆನಂದಿಸಿದ್ದಿದೆ. ಅದಾಗಿ ಈಗ ೧೦-೧೨ ವರ್ಷಗಳ ನಂತರ ಬಾಲಿವುಡ್ ಸಿನೆಮಾಗಳ ಒಲವು ಸ್ವಲ್ಪ ಕಡಿಮೆಯಾದದ್ದೂ ಹೌದು. ಕೆಲವು ಹಿಂದಿ ಸಿನೆಮಾಗಳನ್ನು ವೀಕ್ಷಿಸಿದಾಗಲಂತೂ, ಬಹುಶಃ ಹಿಂದಿ ಸಿನೆಮಾಗಳನ್ನು ನೋಡಿ, ಖುಷಿ ಪಡುವ ನಮ್ಮ ಕಾಲ ಆಗಿ ಹೋಯಿತೇನೋ ಎಂದು ನಾನೂ, ನನ್ನವರೂ ಕೊರಗಿದ್ದಿದೆ. ಅದ್ಯಾಕೋ ಏನೋ, ಅಂದು ‘ ಕಾಫಿ ವಿದ್ ಕರಣ್ ‘ ನ ಆ ಎಪಿಸೋಡ್ ನೋಡುವ ತಪ್ಪು ನಿರ್ಧಾರ ಮಾಡಿದೆ.

ಕರಣ್ ಜೋಹರ್ ತನ್ನ ಎಂದಿನ ಶೈಲಿಯಲ್ಲಿ, ಇನ್ನೊಬ್ಬರ ವೈಯಕ್ತಿಕ ಜೀವನದ ಆಗು-ಹೋಗುಗಳಲ್ಲಿ, ರೂಮರ್ – ಗಾಸಿಪ್ ಗಳಲ್ಲಿ ತಮ್ಮ ಸುಖ ಕಾಣುವ ಹದಿಹರೆಯದ ಕಾಲೇಜ್ ಹುಡುಗಿಯರಂತೆ, ಕಾರ್ಯಕ್ರಮ ನಡೆಸಿಕೊಡುತ್ತಿದ್ದ. ಆ ದಿನ ಕರಣ್ ಕಾರ್ಯಕ್ರಮದ ಅತಿಥಿಗಳು, ಹಿಂದಿ ಸಿನೆಮಾ ಲೋಕದ ಈಗಿನ ಇಬ್ಬರು ಫೇಮಸ್ ಹೀ(ಜೀ? )ರೋಗಳು. ಈಗಿನ ಯುವಪೀಳಿಗೆಯ ರೋಲ್ ಮಾಡೆಲ್ ಗಳು.

ಅವರಲ್ಲೊಬ್ಬನಿಗೆ ಕರಣ್ ನ ಪ್ರಶ್ನೆ: ‘So, you are not in a relationship now, you are single?’
ಆ ಪ್ರಶ್ನೆಗೆ ಹೀರೊ ‘ಯಸ್’ ಅಂದ. ಮುಂದುವರಿದ ಕರಣ್ ‘OK… so what do you do for sex?’ ಅಂತ ಕೇಳಿದ
ಅದಕ್ಕೆ ಹೀರೋನ ಉತ್ತರ: ‘Have it’!!!

ಇದನ್ನು ನೋಡಿ/ ಕೇಳಿ ಕೆಲವು ನಿಮಿಷಗಳ ಕಾಲ ನನಗೆ ದಂಗು ಬಡಿದಂತಾಗಿತ್ತು. ನಾನು ಇಂಗ್ಲೆಂಡಿಗೆ ಬಂದು ಈ ತಿಂಗಳಿಗೆ ಸರಿಯಾಗಿ ಹತ್ತು ವರುಷಗಳಾಗಿವೆ. ಇತ್ತೀಚಿಗೆ ನಾನು ಹಿಂದಿ ಕಾರ್ಯಕ್ರಮಗಳನ್ನು/ ಸಿನೆಮಾಗಳನ್ನು ನೋಡುವುದು ಬಹಳ ಕಡಿಮೆಯಾಗಿದೆ. ಆದರೆ ಈ ಕಾರ್ಯಕ್ರಮವನ್ನು ನೋಡಿ ನನ್ನ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡಿದ್ದಂತೂ ನಿಜ. ಈ ಚ್ಯಾಟ್ ಷೋ ದಲ್ಲಿ ಇದ್ದವನು ಒಬ್ಬ ಸಿನೆಮಾ ನಾಯಕ. ಇಂದಿನ ಯುವಕ- ಯುವತಿಯರು ಅವನನ್ನು ಆರಾಧ್ಯ ದೈವದಂತೆ ಕಾಣುವುದು ಸಹಜ. ಇಂತಹ ತಥಾಕಥಿತ ರೋಲ್ ಮಾಡೆಲ್ ಗಳು, ಈ ತರಹದ ಬೇಜವಾಬ್ದಾರಿಯ ಉತ್ತರವನ್ನು ರಾಷ್ಟ್ರೀಯ ಟಿವಿ ವಾಹಿನಿಯಲ್ಲಿ ಕೊಡುವುದು ಸರಿಯೇ? ಅಥವಾ ಈ ರೀತಿಯ ಕ್ಯಾಶುವಲ್  ಉತ್ತರವನ್ನು ಆ ಟಿವಿ ಚ್ಯಾನಲ್ ಅಷ್ಟೊಂದು ಕ್ಯಾಶುವಲ್ ಆಗಿ ತೋರಿಸುವುದು ಸರಿಯೇ?

ಅವರವರ ವೈಯಕ್ತಿಕ ಜೀವನದಲ್ಲಿಅವರು ನಾಲ್ಕು ಗೋಡೆಗಳ ಮಧ್ಯೆ ಯಾರೊಂದಿಗೆ ಏನು ಮಾಡುತ್ತಾರೆನ್ನುವುದು, ಅವರ ವ್ಯಕ್ತಿ ಸ್ವಾತಂತ್ರ್ಯದ ವಿಷಯ. ಅದನ್ನು ಸರಿ- ತಪ್ಪೆಂದು ನಿರ್ಧರಿಸುವುದು ಯಾರ ಜವಾಬ್ದಾರಿಯೂ ಅಲ್ಲ, ಇಲ್ಲಿ ನನ್ನ ಉದ್ದೇಶವೂ ಅದಲ್ಲ. ಹಾಗಂತ, ಕ್ಯಾಶುವಲ್ ಸೆಕ್ಸ್  ಅನ್ನುವುದನ್ನು ಅಷ್ಟೊಂದು ಸಾಮಾನ್ಯ ವಿಷಯವೆಂಬಂತೆ ಮಾತಾಡುವುದು, ಪ್ರಸಾರ ಮಾಡುವುದು ಸರಿಯಲ್ಲ ಅನ್ನುವುದು ನನ್ನ ಅಭಿಪ್ರಾಯ. ಸಿನೆಮಾ ನಟರನ್ನು ಆರಾಧಿಸುವ ಯುವ ಪೀಳಿಗೆ, ಅವರ ಈ ಬೇಜವಾಬ್ದಾರಿಯ ವರ್ತನೆಯನ್ನೂ ಅನುಕರಿಸಿದರೆ ಅದರ ಪರಿಣಾಮ ಒಳ್ಳೆಯದಾಗುವುದೇ? ಪಾಶ್ಚಾತ್ಯರನ್ನು ಅಂಧಾನುಕರಣೆ ಮಾಡುವ ಭಾರತದ ಸೋ ಕಾಲ್ಡ್ ಮಾಡರ್ನ್ ಜನತೆ, ಇಂತಹ ‘ ಮಾಡರ್ನ್’ ವರ್ತನೆಗಳಿಂದಾಗುವ ಅನಾಹುತಗಳನ್ನು ಅರಿತಿದೆಯೇ? ಕ್ಯಾಶುವಲ್ ಸೆಕ್ಸ್ ನೊಂದಿಗೆ ಬರುವ, ಪಾಶ್ಚಾತ್ಯ ದೇಶಗಳಿಗೆ ದೊಡ್ಡ ತಲೆನೋವಾಗಿರುವ ಟೀನೇಜ್ ಪ್ರೆಗ್ನೆನ್ಸಿ, ಡ್ರಗ್ ಎಡಿಕ್ಷನ್, ಲೈಂಗಿಕ ರೋಗಗಳು (sexually transmitted diseases) ಇತ್ಯಾದಿ ಸಮಸ್ಯೆಗಳಿಗೆ ಭಾರತ ತಯಾರಾಗಿದೆಯೇ? ಅಥವಾ ಇಂತಹ ಸಮಸ್ಯೆಗಳನ್ನು, ಪಾಶ್ಚಾತ್ಯರಷ್ಟು ಓಪನ್ ಮೈಂಡೆಡ್ ಆಗಿ, ತೀರ್ಮಾನದ ಧಾಟಿಯಿಲ್ಲದೆ  ಭಾರತದ ಸಮಾಜ ಸ್ವೀಕರಿಸುತ್ತದೆಯೇ? ಇವೆಲ್ಲದರ ವಿವೇಚನೆ ಇಲ್ಲದೆ ಇಂತಹ ಕಾರ್ಯಕ್ರಮಗಳ ನಿರ್ಮಾಣ ಮತ್ತು ಪ್ರಸಾರ ಖಂಡಿತ ಅತ್ಯಂತ ಬೇಜವಾಬ್ದಾರಿಯದು.

ಎಷ್ಟೋಬಾರಿ ನನಗನ್ನಿಸುತ್ತದೆ, ಬಹುಶಃ ನನಗೇ ವಯಸ್ಸಾಯಿತೇನೋ, ಉರುಳುತ್ತಿರುವ ಕಾಲಚಕ್ರದೊಂದಿದೆ ನಾನೇ ಹೆಜ್ಜೆ ಹಾಕುತ್ತಿಲ್ಲವೇನೋ ಎಂದು. ಹಲವು ಬಾರಿ ತಾಯ್ನಾಡಿಗೆ ಹೋದಾಗ ‘ನಾವು ಬಿಟ್ಟು ಬಂದ ಭಾರತ ೧೦ ವರ್ಷ ಮುಂದೆ ಹೋಗಿದೆ, ನಾವಿನ್ನೂ ೧೦ ವರ್ಷ ಹಿಂದಿದ್ದೇವೆ ‘ ಎಂದು ಅನಿಸಿದ್ದಿದೆ. ನಾನು ಮೇಲೆ ವಿವರಿಸಿದ, ಪಾಶ್ಚಾತ್ಯ ದೇಶಗಳಲ್ಲಿ ಸಾಮಾನ್ಯವೆನಿಸುವ ಕೆಲವು ವಿಷಯಗಳು ಇಂದು ಭಾರತದಲ್ಲೂ ವ್ಯಾಪಕವಾಗಿವೆ ಎಂದು ನನ್ನ ಸ್ನೇಹಿತರಿಂದ ಕೇಳಿದಾಗ, ಹೃದಯ ಭಾರವಾಗುತ್ತದೆ. ಪಾಶ್ಚಾತ್ಯರು ಮಾಡುವುದೆಲ್ಲವನ್ನೂ ನಾವು ಮಾಡಲೇ ಬೇಕೇ?  ಅನುಕರಣೆ ಮಾಡುವುದೇ ಆದರೆ, ಅವರ ಶಿಸ್ತು, ಕ್ಲಪ್ತತೆ, ಸ್ವಚ್ಛತೆ, ಇನ್ನೊಬ್ಬರತ್ತ  ವಿಧೇಯತನ,  ಅನಾವಶ್ಯಕವಾಗಿ ಬೇರೆಯವರ ವಿಷಯಗಳಲ್ಲಿ ಮೂಗು ತೂರಿಸದಿರುವುದು- ಇತ್ಯಾದಿಗಳನ್ನು ಅನುಕರಣೆ ಮಾಡಬಹುದಲ್ಲವೇ?

ನನ್ನ ಹಿರಿಯರು, ಆತ್ಮೀಯರನೇಕರು ನನಗೆ ಯಾವಾಗಲೂ ಹೇಳುತ್ತಾರೆ ”ಇಬ್ಬರು ಹೆಣ್ಣು ಮಕ್ಕಳಿದ್ದಾರೆ ನಿನಗೆ, ಹೊರದೇಶದಲ್ಲಿ ಇನ್ನು ಹೆಚ್ಚು ದಿನ ಇರಬೇಡ, ಹೆಣ್ಣು ಮಕ್ಕಳನ್ನು ಬೆಳೆಸುವ ದೇಶ ಅಲ್ಲ ಅದು, ಬೇಗ ಊರಿಗೆ ಬಂದು ಬಿಡು” ಎಂದು. ನಾನು ಯಾವಾಗಲೂ ಈ ವಿಷಯದ ಬಗ್ಗೆ, ನಾವು ಇಲ್ಲಿರುವ, ಊರಿಗೆ ಮರಳಿ ಹೋಗುವ ಸಾಧ್ಯತೆಗಳ  ಗುಣಾವಗುಣಗಳ  ಬಗ್ಗೆ ನನ್ನ ಪತಿಯೊಂದಿಗೆ, ಅಪ್ಪ, ಅಮ್ಮ, ತಮ್ಮನೊಂದಿಗೆ ಚರ್ಚೆ ಮಾಡುತ್ತಿರುತ್ತೇನೆ. ನನ್ನ ದೊಡ್ಡ ಮಗಳು ಪ್ರತಿ ದಿನವೂ ಒಂದಲ್ಲ ಒಂದು ಪ್ರಶ್ನೆಯನ್ನು ತೆಗೆದುಕೊಂಡು ಬರುತ್ತಾಳೆ. ”ಅಮ್ಮ, ನೀನು ಯಾಕೆ ಹಾಗೆ ಮಾಡುವುದಿಲ್ಲ? ಅಮ್ಮ, ನಾನು ಯಾಕೆ ಹೀಗೆ ಮಾಡಬಾರದು? ” ಇತ್ಯಾದಿ. ಅವಳ ಹೆಚ್ಚಿನ ಎಲ್ಲ ಪ್ರಶ್ನೆಗಳಿಗೂ ನಾನು ಒಂದೇ ಉತ್ತರ ನೀಡುತ್ತೇನೆ ”ಪುಟ್ಟಿ, ನಾವು ಭಾರತದಿಂದ ಬಂದಿದ್ದೇವೆ. ಭಾರತದಲ್ಲಿ ನಾವು ಹಾಗೆ ಮಾಡುವುದಿಲ್ಲ”. ಅವಳಿಗೆ ಸದ್ಯಕ್ಕಂತೂ ಈ ಉತ್ತರ ಸಮಂಜಸವೆನಿಸುತ್ತದೆ. ಆದರೆ, ಭಾರತದಲ್ಲಿಯೂ ಇಲ್ಲಿ ನಡೆಯುವ ಹಲವು ‘ ಮಾಡರ್ನ್’ ವಿಷಯಗಳು ನಡೆಯುತ್ತಿರುವಾಗ, ಅಲ್ಲಿ ಅವಳು ಈ ಪ್ರಶ್ನೆಗಳನ್ನು ಕೇಳಿದರೆ ನಾನೇನು ಉತ್ತರ ಕೊಡಲಿ ಎಂಬ ಅಭದ್ರತೆ ನನ್ನನ್ನು ದಿನವೂ ಕಾಡುತ್ತದೆ.

ಬೆಳೆಯುವ ವಯಸ್ಸಿನಲ್ಲಿ ಒಡನಾಡಿಗಳ, ಸಮಾನ ವಯಸ್ಕರ ಒತ್ತಡ, ಬೆಳೆಯುವ ಮನಸ್ಸಿನ ಕುತೂಹಲ, ಈ ಕುತೂಹಲದಿಂದಾಗುವ ಅನಾಹುತಗಳು ಎಲ್ಲರಿಗೂ ಗೊತ್ತಿರುವ ವಿಷಯಗಳೇ. ಹೀಗಿರುವಾಗ, ಮಾಧ್ಯಮಗಳೂ, ಸಿನೆಮಾ ತಾರೆಗಳೂ, ಈ ಬೆಳೆಯುವ ಸಿರಿಗಳನ್ನೂ ಹಾಗೂ ಇಂದಿನ ಯುವ ಜನತೆಯನ್ನೂ ಮಾರ್ಗದರ್ಶನ ಮಾಡಿ ಸನ್ನಡತೆಯತ್ತ ಒಯ್ಯಬೇಕೇ ಹೊರತು, ತಮ್ಮ ಬೇಜವಾಬ್ದಾರಿಯ ವರ್ತನೆಯಿಂದ, ಹೇಳಿಕೆಗಳಿಂದ   ದಾರಿ ತಪ್ಪಿಸಬಾರದು ಅಲ್ಲವೇ?

 

9 thoughts on “ಈ ಅಂಧಾನುಕರಣೆ ಬೇಕೇ? – ವೈಶಾಲಿ ದಾಮ್ಲೆ ಅವರ ಲೇಖನ

  1. ವೈಶಾಲಿಯವರೆ, ಡಿ.ವಿ ಗು೦ಡಪ್ಪನವರು ಹೇಳಿದ ಹಾಗೆ ” ಹೊಸ ಯುಕ್ತಿ ಹಳೆತತ್ವದೊಡೆಗೊಡೆ ಧರ್ಮ” ಅನ್ನುವುದನ್ನು ಅಳವಡಿಸಿಕೊಳ್ಳುವುದರಲ್ಲಿ ನಾವು ಅಸಫ಼ಲರಾಗಿದ್ದೇವೆಯೆ? ಎನ್ನುವುದು ನನ್ನ ಪ್ರಶ್ನೆ.
    ನಮ್ಮ ಹಿರಿಯರ ಪ್ರತಿಯೊ೦ದು ಆಚರಣೆಯನ್ನು ನಾವು ಅಳವಡಿಸಿಕೊ೦ಡಿಲ್ಲ. ಅನಿವಾಸಿಗಳು ಮಾತ್ರವಲ್ಲ, ಭಾರತದಲ್ಲಿರುವ ನನ್ನ ಸಮಕಾಲೀನರಲ್ಲೂ ತಿನ್ನುವುದರಲ್ಲಿ, ಮಾತನಾಡುವುದರಲ್ಲಿ, ಧರ್ಮದ ಆಚರಣೆಯಲ್ಲಿ ಬಹಳ ಬದಲಾವಣೆಗಳಾಗಿವೆ. ಈ ಬದಲಾವಣೆ ಅವರ ಜೀವನದಲ್ಲಿ ಹೊಕ್ಕಿರುವುದರ ಅರಿವು ಅಲ್ಲಿ ಬಹಳ ಜನರಿಗಿಲ್ಲ.

    ಕ೦ಪ್ಯೂಟರ್ ಜನಾ೦ಗದ ನಮ್ಮ ಮಕ್ಕಳು, ನಮ್ಮ೦ತಿರಬೇಕೆ೦ದು ಬಯಸುವುದು ನ್ಯಾಯವೆ?
    ನಮ್ಮ ಈ ಬಯಕೆ, ನಮ್ಮ ದೇಶದ ಅಮ್ಮ೦ದಿರನ್ನು ಕಾಡುತ್ತಿಲ್ಲ. ನಮಗಿರುವ ತುಮುಲಗಳು ಪರದೇಶಿಗಳಿಗೆ ಮಾತ್ರ ಸೀಮಿತವೆ೦ದು ಕಾಣುತ್ತದೆ. ಸಮಾಜದಲ್ಲಿರುವ ಒಳಿತನ್ನು ಅಳವಡಿಸಿಕೊ೦ಡು ಬೆಳೆಯುವ ಭಾಗ್ಯ ನಮ್ಮ ಮಕ್ಕಳಿಗೆ ಸಿಗಲೆ೦ದು ಹಾರೈಸುವೆ.

    ದಾಕ್ಷಾಯನಿ

    Like

  2. ವೈಶಾಲಿಯವರ ಲೇಖನದಲ್ಲಿಯ ಅನಿವಾಸಿ ಅಮ್ಮನ ಅಂತರಂಗದ ಅಳಲನ್ನು ಅರ್ಥಮಾಡಿಕೊಂಡೇ ಇದನ್ನು ಬರೆಯುತ್ತಿದ್ದೇನೆ. ಈ ಮೊದಲೇ ಕಮೆಂಟ್ ಮಾಡಿದ ಡಾ ಅರವಿಂದನಕುಲಕರ್ಣಿಗಿಂತ ಸ್ವಲ್ಪ ಯುವ ತಲೆಮಾರಿನವ ನಾನು. ನಿಮ್ಮಂಥ ಕಳವಳ, ದುಗುಡವನ್ನು ನಾವೂ ಅನುಭವಿಸಿದ್ದೇವೆ. ನಿಮ್ಮ ವಿಚಾರ ಧಾರೆಯನ್ನು ಚೆನ್ನಾಗಿ ಚಿತ್ರಿಸಿದ್ದೀರಿ. ಅನಿವಾಸಿಗಳಾದ ನಾವುತಾಯ್ನಾಡಿನಿಂದ ’ವಲಸೆ” ಬಂದಾಗ ಅಂದಿನ ಭಾರತ, ಆಗಿನ ಬದುಕಿನ ಆದರ್ಶ, ಮೌಲ್ಯಗಳನ್ನು ಹೊತ್ತು ತಂದಿರುತ್ತೇವೆ. ನಮ್ಮ ಮನಸ್ಸಿನಲ್ಲಿ ಅವು ಬಂಗಾರದ ಚೌಕಟ್ಟಿನಲ್ಲಿ ಹಾಗೆಯೇ ಇರುತ್ತವೆ,. ಬದಲಾದ ಭಾರತದ ಹವೆ ಸೋಂಕಿದೊಡನೆ ಆಘಾತ ಆದದ್ದು ಆಶ್ಚರ್ಯವಲ್ಲ. ನೀವು ಬರೆದಂತೆ ನಮ್ಮ ನೇತಾರರು, ಕಲಾ ಲೋಕದ ಹೀರೋಗಳಷ್ಟೇ ಅಲ್ಲದೆ, ಶಾಲೆಯ ಗುರುಗಳು ಸಹ ರೋಲ್ ಮಾಡೆಲ್ ಆಗಿರುತ್ತಾರೆ ಅನ್ನುವ ಜವಾಬ್ದಾರಿಯಿಂದ ಅವರು ವರ್ತಿಸುತ್ತಾರೆಯೇ? ಈ ಕೊನೆಯ ವಿಷಯವನ್ನು ಮನಮುಟ್ಟುವಂತೆ ಡಾ ಗುರುರಾಜ ಕರಜಗಿಯವರು ರಮೇಶ್ ಅವರೊಡನೆ ಚರ್ಚಿಸಿದ್ದನ್ನುಈ ಯು ಟೂಬ್ ಕ್ಲಿಪ್ಪಿನಲ್ಲಿ ನೋಡಬಹುದು: https://www.youtube.com/watch?v=CiijwY1Sq5A (ಇದರ 10 ರಿಂದ 12ನಿಮಿಷಗಳ ನಡುವೆ). ಶಾಲೆಯ ವಾತಾವರಣ ಬೇರೆ ಸರಿ. ಶಾಲೆಯಲ್ಲಿಯ ಶಿಕ್ಷಕ-ನಾಯಕರಂತೆ ಯುವ ಮನಸ್ಸಿನ ಮೇಲೆ ಪರಿಣಾಮ ಮಾಡುವ ’ಸೆಲೆಬ್ರಿಟಿ’ಗಳು, ಮೀಡಿಯಾದವರು, ಕೇಶವ ಅವರು ಇಲ್ಲಿಯೇ ಹೇಳಿದಂತೆ ಸಾಮಾಜಿಕ ಮತ್ತು ಇತರ ಇಂಟರ್ನೆಟ್ ತಾಣಗಳು ಇತ್ತ ದೃಷ್ಟಿ ಹರಿಸಿಯಾವೋ, ಅನುಮಾನವೇ. ಅದಕ್ಕೇ ನಮ್ಮ ಮೇಲೆ ಗುರುತರವಾದ parental responsibility. ಅದನ್ನು ಒಬ್ಬೊಬ್ಬರೂ ಒಂದೊಂದು ರೀತಿಯಿಂದ ನಿಭಾಯಿಸುತ್ತಾರೆ, ಎಂದು ಹೇಳಿದರೆ ನಿಮ್ಮಂಥ ಎಳೆಯ ಮಕ್ಕಳ ತಾಯಿ-ತಂದೆಗಳಿಗೆ ಸಾಂತ್ವನ ಹೇಳಿದಂತಾಗುವದಿಲ್ಲ, ಸರಿ!

    Like

  3. ನನ್ನ ಎರಡು ಲೇಖನಗಳನ್ನು ಪ್ರಕಟಿಸಿದ ‘ಅನಿವಾಸಿ’ ಸಂಪಾದಕ ಮಂಡಳಿಗೂ, ಪೂರಕ ಟಿಪ್ಪಣಿಯನ್ನು ಬರೆದ ಡಾಕ್ಟರ್ ಪ್ರಸಾದ್ ರವರಿಗೂ, ಇಲ್ಲಿ ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿದ ಎಲ್ಲ ಸಹೃದಯರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಸಮಯದ ಅಭಾವದಿಂದ ಈ ಮುಂಚೆ ಪ್ರತಿಕ್ರಿಯಿಸಲಾಗಲಿಲ್ಲ, ಕ್ಷಮಿಸಿ.

    ನಿಜ, ಬದಲಾವಣೆ ಜಗದ ನಿಯಮ. ಆದರೆ, ಸಾಮಾಜಿಕ ಮೌಲ್ಯಗಳನ್ನು, ನಮ್ಮ ಪರಂಪರೆಯನ್ನು ವಿರೋಧಿಸುವುದೇ ಪ್ರಗತಿಯೇ? ನೈತಿಕ ಮೌಲ್ಯಗಳ ಪರಿಧಿಯನ್ನು ಮೀರದೆ, ಪ್ರಗತಿ ಸಾಧ್ಯವೇ ಇಲ್ಲವೇ? ಇದು ನನ್ನನ್ನು ಕಾಡುವ ದ್ವಂದ್ವ. ನೀವು ಬಹಳ ಸೂಕ್ತವಾಗಿ ತಿಳಿಸಿರುವಂತೆ, ನಮ್ಮ ಮಕ್ಕಳಿಗೆ ನಮ್ಮ ಪರಂಪರೆಯ, ನೈತಿಕತೆಯ ಅರಿವು ಮೂಡಿಸುವ ಕಾರ್ಯವನ್ನು ನಾವು ಜತನದಿಂದ ಮಾಡಿದರೆ, ಪ್ರಗತಿಪರರೆಂಬ ಭ್ರಮೆಯಲ್ಲಿ ನಮ್ಮ ಮೌಲ್ಯಗಳನ್ನು ಅವರು ಗಾಳಿಗೆ ತೂರುವ ಸಾಧ್ಯತೆಗಳು ಕಡಿಮೆಯಾಗಬಹುದು ಅನ್ನಿಸುತ್ತದೆ. ನೀವು ವಿಶ್ಲೇಷಿಸಿದಂತೆ, ನಮ್ಮ ಸಾಮಾಜಿಕ ಮೌಲ್ಯಗಳ ಚೌಕಟ್ಟಿನೊಳಗಿದ್ದುಕೊಂಡೇ ಪ್ರಗತಿ ಸಾಧಿಸಬಹುದಲ್ಲವೇ? ಪ್ರಗತಿಯ ಪ್ರತೀಕವೆನಿಸಿಕೊಳ್ಳುವ ‘ವ್ಯಕ್ತಿ ಸ್ವಾತಂತ್ರ್ಯ’ಕ್ಕೂ, ಈಗಿನ ಯುವಜನರ ‘ಸ್ವೇಚ್ಛೆ’ಗೂ ಬಹಳ ವ್ಯತ್ಯಾಸವಿದೆಯಲ್ಲವೇ?
    ಡಿವಿಜಿ ಯವರ ‘ಕಗ್ಗ’ದ ಈ ಸಾಲುಗಳು ಇಲ್ಲಿ ಬಹಳ ಪ್ರಸ್ತುತವೆನಿಸುತ್ತವೆ;
    ಹೊಸಚಿಗುರು ಹಳೆಬೇರು ಕೂಡಿರಲು ಮರ ಸೊಗಸು ।
    ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ ।।
    ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ।
    ಜಸವು ಜನಜೀವನಕೆ – ಮಂಕುತಿಮ್ಮ ।।

    Liked by 1 person

  4. ಕತ್ತೆಗಳಿಗೆ ಕೋಲಿದ್ದವನೇ ಮಾಲೀಕ!! ಹಾಗೆಯೇ, ಸ್ವಂತ ಬುದ್ದಿಯಿಲ್ಲದವರಿಗೆ ಅನುಕರಣೆಯೇ ಬದುಕಿನ ವಿಧಾನ!!
    ಸೆಕ್ಸ್ ವಿಚಾರ ಬಿಡಿ. ಅದು ಬಹಳ ವಯಕ್ತಿಕವಾದ್ದು. ಆದರೆ ಉಣ್ಣುವುದು, ತಿನ್ನುವುದು ,ಯೋಚಿಸುವುದು ಕೂಡ ಅಂಧಾನುಕರಣೆಗೆ ತಿರುಗುತ್ತಿರುವುದು ನಿಜ!!!
    ಭಾಷೆ, ಸಂಸ್ಕೃತಿ, ವೈಚಾರಿಕತೆ ಇರುವವರು ಯಾವ ಯುಗದಲ್ಲಿದ್ದರೂ, ಯಾವ ಜಗದಲ್ಲಿದ್ದರೂ ಎರಡರ ಲಾಭವನ್ನೂ ಪಡೆಯುತ್ತಾರೆ. ಮಿಕ್ಕವರು ಅಂಧಾನುಕರಣೆಯಲ್ಲಿ ನಿರತರಾಗಿ ನಾವು ಈಗಿನ ಕಾಲದಲ್ಲಿ ಸಂದಿದ್ದೇವೆ ಎಂದುಕೊಳ್ಳುತ್ತಾರೆ. ನಮ್ಮ ದೇಶದ ಹಲವು ಉತ್ತಮಗಳನ್ನು ಮುಂದುವರೆಸಲು ಎಲ್ಲ ವಿಚಾರವಂತರು ಕೂಡಿ ಪ್ರಯತ್ನಿಸಬೇಕು.
    ಭ್ರಷ್ಟಾಚಾರ ಇರುವ ದೇಶಗಳಲ್ಲಿ ಅಮೂಲ್ಯ ವಿಚಾರಗಳು ಮಣ್ಣು ಸೇರುವುದು ತುಂಬ ಖೇದನೀಯ!!!

    Like

  5. ವೈಶಾಲಿಯವರ ಲೇಖನ ಸೊಗಸಾಗಿ ಹೊಸ-ಹಳೇ ವಿಚಾರಗಳ ತಾಕಲಾಟವನ್ನು ಬಿಚ್ಚಿಟ್ಟಿದೆ. ಇಂದಿನ ಯುಗದಲ್ಲಿ ಟ್ರೆಂಡ್ ಸೋಂಕಿನಂತೆ ಹರಡುತ್ತದೆ. ಮನೆ ಮನೆಗಳಲ್ಲಿ ನಮ್ಮತನವನ್ನು, ನಮ್ಮ ಪ್ರಜ್ಞೆಯನ್ನು ಬಿತ್ತಿ ಬೆಳೆಸುವುದೊಂದೇ ಸೂಕ್ತ ಉಪಾಯ.

    Liked by 1 person

  6. ವೈಶಾಲಿ ದಾಮ್ಲೆಯವರ ಲೇಖನ ತುಂಬ ಸಕಾರಣಿಕವೂ ಹೌದು ಸಕಾಲಿಕವೂ ಹೌದು. ಇದು ಬರೀ ಒಬ್ಬ ಅನಿವಾಸಿ ಅಮ್ಮನ ಅಳಲು ಅಲ್ಲ ಎಲ್ಲ ಪಾಲಕರ ಗೋಳೂ ಇದೇ. ಅನುಕರಣೆ ಇಲ್ಲದೇ ಜೀವನ ಇಲ್ಲ,ಅನುಕರಣೆಯಿಂದಲೇ ಮಗು ಮಾತು ಶುರು ಮಾಡೋದು. ಶ್ರೀಮಂತರನ್ನ ಬಡವರು, ಮುಂದುವರಿದವರನ್ನ ಹಿಂದುಳಿದವರು ಅನುಕರಿಸುವುದು ನಡೆದುಕೊಂಡೇ ಬಂದ ಮಾತು ,ಗೆದ್ದೆತ್ತಿನ ಬಾಲ ಹಿಡಿಯುವಂತೆ. ಆದರೆ ಈ ಅನುಕರಣೆ ಈಗ ದಾರಿ ತಪ್ಪುತ್ತಿದೆ .ಬದಲಾವಣೆ ಜೀವನದ, ಜಗತ್ತಿನ ನಿಯಮ.ಅದನ್ನು ತಡೆಯಲು ಸಾಧ್ಯಇಲ್ಲ.ಒಳ್ಳೆಯದು ಆದರೆ ತಲೆನೋವಿಲ್ಲ.ಆದರೇನು ಮಾಡುವದು ಯಾವುದು ಸುಲಭವಾಗಿ ದಕ್ಕುವುದೋ ಆಕಡೆ ಮನ ವಾಲುತ್ತಿದೆ.ವಿವೇಚನಾ ಶಕ್ತಿಯನ್ನು ಹೆಚ್ಚಿಸುವ ಶಿಕ್ಷಣ ಇಂದು ಸೋಲುತ್ತಿದೆ ಎಂಬನಿಸಿಕೆ.ಯುವ ಜನಾಂಗದ ಅಹಂ ಹೆಚ್ಚಿ ಅವರನ್ನ ಕುರುಡಾಗಿಸುತ್ತಿದೆ .ಅಜ್ಜ ನೆಟ್ಟ ಆಲದ ಮರ ಅಂತ ಹಳೆಯದಕ್ಕೇ ಜೋತು ಬೀಳಬೇಕಿಲ್ಲ . ಆದರೆ ಸಾಮಾಜಿಕ ಆರೋಗ್ಯ ,ಮೌಲ್ಯಗಳಿಗೆ ಧಕ್ಕೆ ಬರದಂತೆ ,ನಮ್ಮದೇ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಒಳ್ಳೆಯ ಬದಲಾವಣೆ,ಅನುಕರಣೆ ಸ್ವಾಗತಾರ್ಹ. ಸಿನಿಮಾಗಳು ಕನಸು ಹುಟ್ಟಿಸುವದು ಮೊದಲಿನಿಂದಲೂ ಇದ್ದದ್ದೇ . ಇಲ್ಲಿಯೂ ವಿವೇಚನೆ ಬೇಕು ಅಷ್ಟೇ. ಕನಸುಗಳಿಲ್ಲದೇ ಜೀವನ ಇಲ್ಲ.ಮಿಡಿಯಾದವರು ಸಾರಾಸಾರ ವಿಚಾರವಿಲ್ಲದೇ ಮೌಲ್ಯರಹಿತ ಕಾರ್ಯಕ್ರಮಗಳ ಪ್ರಸಾರ ಮಾಡಿ ಯುವ ಜನಾಂಗದ ಬಿಂದಾಸ್ ವರ್ತನೆಗೆ ನೀರೆರೆಯದಿದ್ದರೆ ಸಾಕು.ನಿಜಕ್ಕೂ ವೈಶಾಲಿಯವರೇ ನಿಮ್ಮ ಲೇಖನ ನೂರು ಥರ ವಿಚಾರ ಮಾಡ ಹಚ್ಚುತ್ತದೆ.ಅನುಕರಣೆ ಮಾಡುವಲ್ಲಿ ,ಹೆಚ್ಚುಗಾರಿಕೆ ತೋರುವಲ್ಲಿ ಒಂದು ವೈಚಾರಿಕ ನೆಲೆಗಟ್ಟಿರಲಿ ಅಂತ ಆಶಿಸೋಣ.ಇಂತಹ ವಿಚಾರಪೂರ್ಣ ಲೇಖನ ನೀಡಿದ್ದಕಕ್ಕೆ ಧನ್ಯವಾದಗಳು ವೈಶಾಲಿಯವರೇ‌.
    ಸರೋಜಿನಿ ಪಡಸಲಗಿ.

    Liked by 1 person

  7. ಭಾರತದ ನಗರದ ಯುವಕರು ಈಗ ಈಗಿನ ಯುವಕರು ಅಂತರಜಾಲದ ಸ್ಮಾರ್ಟ್ ಫೋನ್ ಜನಾಂಗ. ಈಗ ನಗರಗಳಲ್ಲಿ ಇರುವ ಯುವಕರಾರೂ ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಮಾಡಿದವರಲ್ಲ, ಅವರಿಗೆ ಅವರ ಮಾತೃಭಾಷೆ ಓದಲು ಬರೆಯಲು ಇಷ್ಟವಿಲ್ಲ. ಫೇಸ್ ಬುಕ್ ಗೆಳೆಯರು, ಟ್ವಿಟರ್ ಫಾಲೋಅರ್ ಗಳು, ಇನ್ಸ್-ಟಾಗ್ರಾಂ ಮಿತ್ರರು, ವಾಟ್ಸ್-ಆಪ್ ಗುಂಪುಗಳು!

    `ಟಿಂಡರ್`ನಲ್ಲಿ ಫೋಟೊ ನೋಡಿ, ಏಡಕ್ಕೋ ಬಲಕ್ಕೋ ಸ್ವೈಪ್ ಮಾಡಿ ,ಇವತ್ತಿನ ಸಂಜೆ/ರಾತ್ರಿ ಯಾರ ಜೊತೆ ಕಳೆಯಬಹುದು ಎಂದು ನಿರ್ಧರಿಸುವ ಜನಾಂಗ ಇಲ್ಲಿ ಅಷ್ಟೇ ಅಲ್ಲ, ಭಾರತದಲ್ಲೂ ರೂಪಗೊಳ್ಳುತ್ತಿದೆ. `ಕಾಫಿ ವಿತ್ ಕರಣ್`ನಲ್ಲಿ ಬಿತ್ತರಗೊಂಡಿರುವುದೂ ಅದೇನೇ!

    ಸಿನೆಮಾದವರು ಮಾಡುವುದನ್ನು ಜನ ಅನುಕರಿಸುತ್ತಾರೋ, ಅಥವಾ ಜನರ ಸುಪ್ತ ಮನಸ್ಸಿನ ಆಸೆ ಕನಸುಗಳನ್ನು ಸಿನೆಮಾ ಮಂದಿ ಪರದೆ ಮೇಲೆ ತೋರಿಸಿ ಅದರಂತೆ ಹೇಗೆ ಬದುಕುವುದು ಎಂದು ಸಿನೆಮಾ ಮಂದಿ ಜನರಿಗೆ ಕಲಿಸುತ್ತಾರೋ ಎನ್ನುವ ಚರ್ಚೆ ಕಪ್ಪು ಬಿಳುಪು ಸಿನೆಮಾದಿಂದಲೂ ನಡೆಯುತ್ತಲೇ ಇದೆ.

    ಇದೆಲ್ಲ ಬೇಕಾ ಬೇಡವಾ ಎಂದು ನಾವು ಕೇಳುತ್ತೇವೆ, ಅದನ್ನು ಕೇಳಲು ನೀವಾರು ಎನ್ನುತ್ತಾರೆ.

    ಇದನ್ನು ನಾವು ಅಂಧಾನುಕರುಣೆ ಎನ್ನುತ್ತೇವೆ, ಅವರು ನಮಗೆ ಅಂಧರು ಅನ್ನುತ್ತಾರೆ.

    ನಿಮ್ಮ ದುಗುಡ ಅರ್ಥವಾಗುತ್ತೆ, ನನ್ನದೂ ಅದೇ ತರಹದ ದುಗುಡ ಕೂಡ. ಆದರೆ ಸಂಪಾದಕರು ಹೇಳುವಂತೆ, ಬದಲಾವಣೆಯೇ ಜಗದ ನಿಯಮ.

    Liked by 1 person

  8. ಡಾಕ್ಟರ್ ವೈಶಾಲಿಯವರಿಗೆ
    ನಮಸ್ಕಾರ.
    Nimma ಲೇಖನ ಬಲು ಸೂಕ್ತವಾಗಿದೆ.
    ನೀವು Nimma ಲೇಖನದಲ್ಲಿ ಸೂಚಿಸಿದ , ಸಮಂಜಸ ವಿಚಾರಗಳೆಲ್ಲ nammellara ಇಲ್ಲಿಯ peeLigeya makkaLige anvayisiruvalu. ಮಕ್ಕಳು ಸಣ್ಣಂದಿರುವಾಗ್ಯೆ ಮಣ್ಣಿನ muddryaagiruvaru. ತಂದೆ ತಾಯಿಯರು hege ಪಾಲನಾ, ಪೋಷಣೆ maaDi ಬೆಳೆಸುತ್ತಾರೆ ಹಾಗೆ ಮಕ್ಕಳು anvayisikoNDu ದೊಡ್ಡವರಾಗುವರು ಅಲ್ಲವೇ?
    yee pramuKha kartavyavannu ಪರ ದೇಶದಲ್ಲಿ yaShasviyaagi ಕಾರ್ಯಗತ ಮಾಡುವದು sulaBhavalla. Allade ಇಲ್ಲಿಯ ಮಕ್ಕಳು ಶಾಲೆಯಲ್ಲಿ ತಮ್ಮ geLeyaroNdige
    ಬೆರತು ,avara ಹಾಗೆಯೇ ಪರಿವರ್ತನ ಮಾಡಿಕೊಳ್ಳಬೇಕು ಎಂಬ haNbala yiruvadu sahajika. ಆದರೆ ಮನೆಯಲ್ಲಿ ಮಾತ್ರ್ರ ತಂದೆ ತಾಯಿಯವರೆಲ್ಲ ತಮ್ಮ makkaLa
    ಮಾನಸಿಕ,ಬೌದ್ಧಿಕ viChaaragaLaNnalla ಅರಿತುಕೊಂಡು,ಯಾವದು ಹಿತ, yaavadu ಅಹಿತ ಎಂಬುವದನ್ನು ತಿಳಿಸಿ,ಮನವರಿಕೆ ಮಾಡಿದಲ್ಲಿ makkaLigaadaroo ವಿಶ್ವಾಸ ಬೆಳೆದು ತಂದೆ taayara bennu ಹಿಂದೆ ತಪ್ಪು kelasa maDuva pravrutti ಬರವದು ದುಸ್ತರ ಎಂದು ನನ್ನ ಅನುಭವದ ವಿಚಾರ. Nammellara ತಾಯಿನಾಡಿನಲ್ಲಿ ಇತ್ತಿಚೆಗೆ ಅಲ್ಲಿರುವ ಮಕ್ಕಳು ಬಹುಷಃ paasChimaatye jeevana ಅಣಿಕರಣೆ ಮಾಡಿಕೊಳ್ಳುವ ಲವಲಲಿಕೆ ಹೆಚ್ಚುತ್ತಿರುವದು ವಿಷಾದಕರ. ಇದಕ್ಕೆಲ್ಲ ಯಿಂದಿನ ನವ peeLigeyare ಟಿವಿ,ChalanaChitra ಮುಖಾಂತರದಿಂದಲೇ ಆಗುತ್ತಿದೆ ಎಂದು ನನ್ನ ಮತ. ಮಕ್ಕಳನ್ನು ದೊಷಿಸುವದು ತಪ್ಪು. ತಂದೆ taayiyaru ತಮ್ಮನ್ನು ತಾವೆಯೇ ಕುಲಂಕಾಶಿತ ದ್ರಿಷ್ಟಿಯಿಂದ viCHaara ಮಾಡುವದರಿಂದ ತಮ್ಮ makkaLa ಬೆಳೆವಣಿಗೆ taaveye kaaraNaru ಎಂಬುವದು ಗೋಚರವಾಗುವದು. Yidannu mayamaDale beau.

    ಡಾಕ್ಟರ್ ಅರವಿಂದ

    Liked by 1 person

Leave a comment

This site uses Akismet to reduce spam. Learn how your comment data is processed.