ತೆರೆಮರೆಯ ಪ್ರತಿಭೆಗಳು (Hidden Figures)

(ಅಮೇರಿಕಾದ ಉನ್ನತ ಸಂಸ್ಥೆ ನ್ಯಾಸದಲ್ಲಿ, ೬೦ನೇ ದಶಕದ ಸಮಯದಲ್ಲಿ,  ವರ್ಣಭೇದ ಮತ್ತು ಲಿಂಗಭೇದ ಪ್ರಚಲಿತವಾಗಿದ್ದು ಅದರಿಂದ ಕಪ್ಪು ಜನರ ಸಮುದಾಯದ ಮೇಲೆ ಆದ ಮಾನಸಿಕ ಆಘಾತಗಳು ಮತ್ತು ಇನ್ನಿತರ ಪರಿಣಾಮಗಳನ್ನು ಕುರಿತ Hidden Figures ಎಂಬ ಚಿತ್ರವನ್ನು ಉಮಾ ಅವರು ತೀಕ್ಷ್ಣ ವಾಗಿ ವಿಮರ್ಶಿಸಿದ್ದಾರೆ.  ಹಾಗೆ ದೇಸಾಯಿಯವರು ತಮ್ಮ ಅನಿಸಿಕೆಗಳನ್ನು ಸೇರ್ಪಡಿಸಿದ್ದಾರೆ. ಈ ಬರಹದ  ಕೊನೆಯಲ್ಲಿ ಚಿತ್ರದ ಒಂದು ತುಣುಕನ್ನು ಒದಗಿಸಲಾಗಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ವರ್ಣಭೇದವನ್ನು ತಡೆಗಟ್ಟಲು, ಸಮತಾ ಭಾವನೆಗಳನ್ನು ಪ್ರಚೋದಿಸಲು ಹಲವಾರು ಕಾನೂನು ತಿದ್ದುಪಡಿಗಳಿದ್ದರೂ ಉಮಾ ಹೇಳಿರುವಂತೆ ಜನರಲ್ಲಿರುವ ಪೂರ್ವಗ್ರಹ ಅಭಿಪ್ರಾಯಗಳು, ಭಾವನೆಗಳು ಕಳೆಯುವವರೆಗೂ ಈ ವರ್ಣಭೇದವೆಂಬ ಪಿಡುಗನ್ನು ತೊಡೆದು ಹಾಕಲು ಸಾಧ್ಯವಿಲ್ಲ. ಅಮೇರಿಕದಂತಹ ಪ್ರಬಲವಾದ ರಾಷ್ಟ್ರದಲ್ಲಿ ಒಬ್ಬ ಕರಿಯ ಅಧ್ಯಕ್ಷ ೮ ವರ್ಷಗಳನ್ನು  ನಿಭಾಯಿಸಿ ಜನಪ್ರಿಯ ನಾಯಕನಾಗಿ ನಿವೃತ್ತಿ ಗೊಂಡಿರುವುದು ಹಾಗೆ ಪ್ರತಿಷ್ಠಿತ ಗಣಿತ ತಜ್ಞೆ ಕ್ಯಾಥರಿನ್ ಗೋಬಲ್ (ಈ ಚಿತ್ರದ ಕೇಂದ್ರ ಬಿಂದು) ಅವರ ಹೆಸರಲ್ಲಿ ಒಂದು ಸಂಶೋಧನಾ ಸಂಸ್ಥೆಯನ್ನು ವರ್ಜಿನಿಯಾದಲ್ಲಿ ತೆರೆದಿರುವುದು ಆಶಾದಾಯಕವಾಗಿದೆ.  ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ವರ್ಣಭೇದವನ್ನು ಬಂಡವಾಳವಾಗಿಸಿಕೊಳ್ಳುವ ಬಲಪಂಥೀಯ ಶಕ್ತಿಗಳು ಬೇರೆ ಬೇರೆ ದೇಶಗಳಲ್ಲಿ ಮತ್ತೆ ತಲೆ ಎತ್ತುತ್ತಿರುವುದು ಆತಂಕದ ವಿಚಾರ.

ಅಮೇರಿಕ ಹಾಗು ಇತರ ದೇಶಗಳಲ್ಲಿ ಇಂದಿಗೂ ಅಮಾಯಕ ಕರಿಯರ ಮೇಲೆ ಇಲ್ಲದ ಆರೋಪ ಹೊರಿಸಿ ಅವರನ್ನು ಬಂಧಿಸುವ ಯತ್ನದಲ್ಲಿ ಅವಶ್ಯಕತೆ ಇರುವುದಕ್ಕಿಂತ ಹೆಚ್ಚಿನ ಬಲಪ್ರಯೋಗ ಮಾಡಿ ಪೋಲೀಸರು ಹಲವಾರು ಸಾವು ನೋವುಗಳನ್ನು ಉಂಟುಮಾಡಿದ್ದಾರೆ. ಇಂತಹ ಸೂಕ್ಷ್ಮವಾದ ಸನ್ನಿವೇಶಗಳಲ್ಲಿ ಸಮುದಾಯದ ಜನ ತಮ್ಮ ತಾಳ್ಮೆಗಳನ್ನು ಕಳೆದುಕೊಂಡು ಗಲಭೆಗೆ ಇಳಿದಿರುವ ವಾರ್ತೆಗಳನ್ನು ಆಗ್ಗಾಗೆ ಕೇಳಬಹುದು. ಕ್ಯಾಥರಿನ್ ಬವಣೆಗಳು ಕಳೆದು ಸುಮಾರು ೬೦ ವರ್ಷಗಳು ಸಮೀಪಿಸುತ್ತಿದ್ದರೂ ವರ್ಣಬೇಧ ಇನ್ನು ವ್ಯಾಪಕವಾಗಿದೆ. ಹಾಗೆ ಲಿಂಗ ಭೇದದಿಂದ  ಸ್ತ್ರೀಯರ ಸಮಾನತೆ ಮತ್ತು ಸ್ವಾತಂತ್ರಕ್ಕೆ ಒದಗಿರುವ ಧಕ್ಕೆಯನ್ನು ವರ್ಣಭೇದದಷ್ಟಿಲ್ಲದಿದ್ದರೂ ಸಮಾಜದಲ್ಲಿ ಸುಲಭವಾಗಿ ಗುರುತಿಸಬಹುದಾಗಿದೆ.  Hidden Figures ರೀತಿಯ ಚಿತ್ರಗಳು ನಮ್ಮ ಸಮತಾ ಭಾವನೆಗಳನ್ನು ಜಾಗೃತಗೊಳಿಸಿ ಅದರ ಬಗ್ಗೆ ಚಿಂತಿಸುವುದಕ್ಕೆ ಮತ್ತು ಚರ್ಚೆ ಮಾಡುವುದಕ್ಕೆ ಒಂದು ಅವಕಾಶ ಕಲ್ಪಿಸುವುದರಲ್ಲಿ ಸಂದೇಹವಿಲ್ಲ.

ಯು.ಕೆ. ಯಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಖಂಡಿತ ವೀಕ್ಷಿಸಿ. ಈ ಚಿತ್ರದ ಒಂದು ಸಂಕ್ಷಿಪ್ತ  ಪರಿಚಯವನ್ನು ಉಮಾ ಅವರು ಈ ಬರಹದ ಕೊನೆ ಎರಡು ಸಾಲಿನಲ್ಲಿ ಮಾಡಿದ್ದಾರೆ ಅದನ್ನು ಇಲ್ಲಿ ಪ್ರಸ್ತಾಪ ಮಾಡುವುದು ಉಚಿತ:

 “ತೊಟ್ಟಿಲು ತೂಗುವ ಕೈ, ಅಂತರಿಕ್ಷಯಾನವನ್ನೂ  ನಿರ್ವಹಿಸಬಲ್ಲುದು”!

ಬುದ್ದಿಮತ್ತೆ, ಧೈರ್ಯ, ಸಾಹಸದ ಗುಣಗಳು, ಯಾವ ಜನಾಂಗದ, ದೇಶದ, ವರ್ಣದ, ಲಿಂಗದ ಸೊತ್ತೂ ಅಲ್ಲಾ! ಈ ವಿಷಯವನ್ನು ಅರ್ಥ ಮಾಡಿಕೊಂಡರೆ ಮಾನವ ಸಮಾಜದ ಏಳಿಗೆಗೆ ಸಹಕಾರಿ!

ಸಂ)

***

ತೆರೆಮರೆಯ ಪ್ರತಿಭೆಗಳು (Hidden Figures) – ಉಮಾ ವೆಂಕಟೇಶ್ ಅವರ ಚಿತ್ರ ವಿಮರ್ಶೆ

hf1-poster

ಅಮೇರಿಕಯಂತಹ ಶ್ರೀಮಂತ ದೇಶದ ಚರಿತ್ರೆಯ ಪುಸ್ತಕದಲ್ಲಿ ಅನೇಕ ಕರಾಳ ಪುಟಗಳಿವೆ. ಗುಲಾಮಿ ಪದ್ಧತಿಯ ಆಚರಣೆಯನ್ನು ಮಾನವ ಇತಿಹಾಸದಲ್ಲೇ ಅತ್ಯಂತ ಅಮಾನುಷವಾದ ಘಟನೆಯೆಂದರೆ ತಪ್ಪೇನಿಲ್ಲ! ಇಂದು ನಾ ನೋಡಿದ Hidden figures ಎನ್ನುವ ಹಾಲಿವುಡ್ ಚಲನಚಿತ್ರದಲ್ಲಿ, ಆಫ಼್ರಿಕನ್ ಮೂಲದ ಅಮೆರಿಕನ್ ಜನಾಂಗದವರು, ೬೦ರ ದಶಕದಲ್ಲೂ ಎದುರಿಸುತ್ತಿದ್ದ ಜನಾಂಗ-ಬೇಧ ನೀತಿಯನ್ನು ಅತ್ಯಂತ ಸೂಕ್ಷ್ಮ ಹಾಗೂ ಪರಿಣಾಮಕಾರಿಯಾಗಿ ಚಿತ್ರೀಕರಿಸಲಾಗಿದೆ. ಈ ಚಲನಚಿತ್ರದ ಕಥೆಯು 1961ರಲ್ಲಿ ನಡೆದ ನಿಜವಾದ ಘಟನೆಗಳನ್ನು ಆಧರಿಸಿದೆ. 1961ರಲ್ಲಿ ಮಾನವ ಬಾಹ್ಯಾಕಾಶವನ್ನು ಪ್ರವೇಶಿಸಿ ತನ್ನ ಬುದ್ದಿಮತ್ತೆಯನ್ನು ಮೆರೆದ ದಶಕ. ಪ್ರಪಂಚದಲ್ಲಿ ವಿಜ್ಞಾನವು ತನ್ನ ಹೆಜ್ಜೆಯನ್ನು ಭದ್ರವಾಗಿ ತಳವೂರಿ, ಮಾನವನ ಜೀವನ ಶೈಲಿ ಮತ್ತು ಗುಣಮಟ್ಟವನ್ನು ಉತ್ತಮಪಡಿಸಲು ಪ್ರಾರಂಭವಾಗಿದ್ದ ದಿನಗಳು.

ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, NASA, ತನ್ನ ಪ್ರತಿಸ್ಪರ್ದಿ ರಶ್ಯಾ ದೇಶವು ತನಗಿಂತ ಮೊದಲೇ ಯೂರಿ ಗಗಾರಿನ್ ಎನ್ನುವ ಬಾಹ್ಯಾಕಾಶಯಾತ್ರಿಯನ್ನು ಯಶಸ್ವಿಯಾಗಿ ಉಪಗ್ರಹದಲ್ಲಿ ಉಡಾಯಿಸಿದ್ದರಿಂದ ಚಿಂತೆಗೀಡಾಗಿತ್ತು. ಅಂದಿನ ಅಮೆರಿಕೆಯ ಅಧ್ಯಕ್ಷನಾಗಿದ್ದ ಜಾನ್. ಎಫ಼್. ಕೆನಡಿಗೆ, ತನ್ನ ದೇಶದ ಬಾಹ್ಯಾಕಾಶ ವಿಜ್ಞಾನಿಗಳು ಅಂತಹುದೇ ಸಾಧನೆಯನ್ನು ಬೇಗನೆ ನಡೆಸಬೇಕು ಎನ್ನುವ ಹಂಬಲ ಮತ್ತು ಆಕಾಂಕ್ಷೆಗಳಿದ್ದವು. ಅದರ ಜೊತೆಗೆ, ಅಮೆರಿಕೆಯಲ್ಲಿ ವರ್ಣೀಯರು ತಮ್ಮ ನಾಗರೀಕ ಹಕ್ಕುಗಳಿಗೆ, ಜನಾಂಗಬೇಧ ನೀತಿಯ ವಿರುದ್ಧ ಸಮಾನತೆಗೆ ಹೊಡೆದಾಡುತ್ತಿದ್ದರಿಂದ, ರಾಜಕೀಯವಾಗಿಯೂ ಅತ್ಯಂತ ಕಷ್ಟಕರವಾದ ಕಾಲವಾಗಿತ್ತು!

ಈ ಚಲನಚಿತ್ರದ ಪ್ರಾರಂಭದಲ್ಲಿ, ಮೂವರು ವರ್ಣೀಯ ಮಹಿಳೆಯರು ಒಟ್ಟಿಗೆ ಕಾರಿನಲ್ಲಿ ವರ್ಜೀನಿಯಾ ರಾಜ್ಯದ ರಸ್ತೆಯೊಂದರಲ್ಲಿ ಹೋಗುವಾಗ, ಅವರ ಕಾರು ಕೆಟ್ಟು ನಿಂತಿರುತ್ತಾರೆ. ಆಗ ಅಲ್ಲೇ ಹೋಗುತ್ತಿದ್ದ ಪೋಲೀಸ್ ವಾಹನವೊಂದು ಅವರ ಬಳಿ ಬಂದು ನಿಂತಾಗ, ತಮ್ಮ ಸಮಸ್ಯೆ ಉಲ್ಬಣಿಸುತ್ತದೆ ಎಂದು ಅವರು ಯೋಚಿಸುತ್ತಿರುವಾಗಲೇ, ಅವರ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡ ಪೋಲೀಸ್ ಅಧಿಕಾರಿ, ಅವರು NASA ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ ಗಣಿತಶಾಸ್ತ್ರಜ್ಞರೆಂದು ತಿಳಿದಕೂಡಲೆ, ಗೌರವದಿಂದ ಅವರನ್ನು ತಾನೇ ಮುಂದಾಗಿ ನಾಸಾ ಸಂಸ್ಥೆಯವರೆಗೂ ಕರೆದೊಯ್ಯುತ್ತಾನೆ. ಈ ಮೂವರು ಮಹಿಳೆಯರಲ್ಲಿ, ಕ್ಯಾಥರೀನ್ ಗೋಬಲ್ ಒಬ್ಬ ಗಣಿತಜ್ಞೆ, ಮೇರಿ ಜಾಕ್ಸನ್ ಒಬ್ಬ ಮಹತ್ವಾಕಾಂಕ್ಷಿ ಇಂಜಿನೀಯರ್ ಹಾಗೂ ಡಾರತಿ ವಾನಳು ಕಂಪ್ಯೂಟರ್ ರೀತಿಯಲ್ಲಿ ಲೆಕ್ಕಾಚಾರ ಮಾಡುತ್ತಿದ್ದ ಆಫ಼್ರಿಕನ್-ಅಮೆರಿಕನ್ ಮಹಿಳೆಯರ ತಂಡದ ಒಬ್ಬಳು ಮೇಲ್ವಿಚಾರಕಿಯಾಗಿ ಕೆಲಸ ನಿಭಾಯಿಸುತ್ತಿರುತ್ತಾರೆ. ಇವರ ಸುತ್ತಮುತ್ತ ಹೆಣೆದ ಈ ಕಥೆ, ಅಂದಿನ ಅಮೆರಿಕನ್ ಸಮಾಜದಲ್ಲಿ, ಅಫ಼್ರಿಕನ್ ಅಮೆರಿಕನ್ ಜನಾಂಗದವರು ಅನುಭವಿಸುತ್ತಿದ್ದ ಜನಾಂಗಬೇಧ ನೀತಿಯ ಅನ್ಯಾಯಗಳನ್ನು ಪ್ರತಿಬಿಂಬಿಸುತ್ತದೆ.

ಸೋವಿಯಟ್ ಒಕ್ಕೂಟವು ತನ್ನ ಬಾಹ್ಯಾಕಾಶ ಉಪಗ್ರಹ Sputnik 1ನ್ನು ಯಶಸ್ವಿಯಾಗಿ ಉಡಾಯಿಸಿದ ಹಿನ್ನೆಲೆಯಲ್ಲಿ, ನಾಸಾ ಸಂಸ್ಥೆಯ Space Task Force ವಿಭಾಗದ ಮುಖ್ಯಸ್ಥನಾಗಿದ್ದ ಆಲ್ ಹ್ಯಾರಿಸನಿಗೆ, ಅಮೆರಿಕೆಯ ಸರ್ಕಾರವು ಆದಷ್ಟು ಬೇಗ ತನ್ನ ಗಗನಯಾತ್ರಿಯೊಬ್ಬನನ್ನು ಬಾಹ್ಯಾಕಾಶಕ್ಕೆ ಹಾರಿಸಬೇಕೆಂದು ಆದೇಶ ನೀಡಿರುತ್ತದೆ. ಈ ಯೋಜನೆಯಲ್ಲಿ ಅಗತ್ಯವಾಗಿದ್ದ ಗಣಿತೀಯ ಗುಣಾಕಾರಗಳನ್ನು ಕಂಪ್ಯೂಟರ್ ಮಾದರಿಯಲ್ಲಿ ನಡೆಸುವ, ಬಿಳಿ ಪುರುಷ-ಪ್ರಧಾನ ಇಂಜಿನೀಯರುಗಳ ತಂಡದಲ್ಲಿ ಕಾರ್ಯನಿರ್ವಹಿಸಲು ಕ್ಯಾಥರೀನ್ ಗೋಬಲಳನ್ನು ಆಯ್ಕೆಮಾಡುತ್ತಾರೆ. ಕೇವಲ ತನ್ನ ಪ್ರತಿಭೆಯಿಂದ ಆ ಸ್ಥಳವನ್ನು ತಲುಪಿದ್ದ ಕ್ಯಾಥರೀನ್, ಅಲ್ಲಿದ್ದ ವರ್ಣಿಯಬೇಧವನ್ನು ಅನುಭವಿಸುವ ಹಲವಾರು ದೃಶ್ಯಗಳು, ನೋಡುಗರ ಕಣ್ಣುಗಳನ್ನು ತೇವಗೊಳಿಸುತ್ತವೆ. ಕೇವಲ ಬಿಳಿಯರಿದ್ದ ಆ ಕಚೇರಿಯಲ್ಲಿ, ಆಕೆಗೆ ಶೌಚಾಲಯದ ವ್ಯವಸ್ಥೆಯಿರುವುದಿಲ್ಲ. ವರ್ಣೀಯರಿಗೆಂದೇ ಇದ್ದ ಶೌಚಾಲಯವನ್ನು ಉಪಯೋಗಿಸಲು ಆಕೆ ಸುಮಾರು ಅರ್ಧ ಮೈಲಿ ದೂರ ಓಡುವ ದೃಶ್ಯಗಳು ಮನಸ್ಸಿಗೆ ವಿಪರೀತ ನೋವನ್ನುಂಟುಮಾಡುತ್ತವೆ. ಒಮ್ಮೆಯಂತೂ ಸುರಿಯುವ ಮಳೆಯಲ್ಲಿ, ಕೈಯಲ್ಲಿ ತಾನು ಮಾಡುತ್ತಿದ್ದ ಲೆಕ್ಕಗಳ ಪುಸ್ತಕವನ್ನು ಹಿಡಿದು, ಶೌಚಾಲಯಕ್ಕೆ ಓಡುವಾಗ ಆಕೆ ನೆಂದು ತೊಪ್ಪೆಯಾಗುತ್ತಾಳೆ. ವಾಪಸ್ ಬಂದಾಗ, ಆಕೆಯ ಮೇಲಧಿಕಾರಿ ಆಲ್ ಹ್ಯಾರಿಸನಿಗೆ ಅಲ್ಲಿಯವರೆಗೂ ವರ್ಣಿಯರಿಗೆ ಆ ಕಟ್ಟಡದಲ್ಲಿ ಶೌಚಾಲಯವಿರಲಿಲ್ಲ ಎನ್ನುವುದು ತಿಳಿಯದೆ, ಆಕೆಯ ಮೇಲೆ ಕೂಗಾಡಿದಾಗ, ಅಸಹಾಯಕ ಕ್ಯಾಥರೀನ್ ತನ್ನ ಪರಿಸ್ಥಿತಿಯನ್ನು ಅಳುತ್ತಾ ವಿವರಿಸುವ ದೃಶ್ಯ ಮನಕಲಕುತ್ತದೆ. ಜೊತೆಗೆ ಅಲ್ಲಿನ ಸಹೋದ್ಯೋಗಿಗಳ ಜೊತೆಗೆ ಆಕೆಗೆ ಕಾಫ಼ಿ-ಚಹಾ ಕುಡಿಯುವ ವ್ಯವಸ್ಥೆಯಿಲ್ಲದೇ, ವರ್ಣಿಯರಿಗೆ ಎಂದು ಚೀಟಿ ಅಂಟಿಸಿರುವ ಚಹಾ ಕೆಟಲಿನಿಂದ ಆಕೆ ಚಹಾ ತಯಾರಿಸಿ ಕುಡಿಯುವ ದೃಶ್ಯವನ್ನು ಬಹಳ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಈ ಪಾತ್ರವನ್ನು ಅಭಿನಯಿಸಿರುವ ನಟಿ, ತಾರಾಜಿ. ಪಿ. ಹೆನ್ಸನ್ ತನ್ನ ಅಭಿನಯದಲ್ಲಿ ಮಿಂಚಿದ್ದಾಳೆ.

ತನ್ನ ಪ್ರತಿಭೆಯಿಂದ ಹ್ಯಾರೀಸನ ಮೆಚ್ಚುಗೆ ಗಳಿಸುವ ಕ್ಯಾಥರೀನ್ ಬಹುಬೇಗನೆ ಒಂದು ಸಂಕೀರ್ಣವಾದ ಗಣಿತೀಯ ಸಮಸ್ಯೆಯನ್ನು ಯಶಸ್ವಿಯಾಗಿ ಬಿಡಿಸಿ, ಸಹೋದ್ಯೋಗಿಗಳ ಮತ್ತು ಮೇಲಧಿಕಾರಿಗಳ ವಿಶ್ವಾಸ ಗಳಿಸುತ್ತಾಳೆ. ಬಾಹ್ಯಾಕಾಶ ನೌಕೆ, ಭೂಮಿಯ ವಾತಾವರಣವನ್ನು ಛೇಧಿಸಿ ಮರಳಲು ಆಸ್ಪದವೀಯುವ ಒಂದು ಅತಿಮುಖ್ಯವಾದ ಹಾಗೂ ಕ್ಲಿಷ್ಟವಾದ ಸಮೀಕರಣವನ್ನು ನಿರೂಪಿಸಿ ಕ್ಯಾಥರೀನ್, ಅಮೆರಿಕೆಯ ಪ್ರಪ್ರಥಮ ಗಗನಯಾತ್ರಿ ಜಾನ್ ಗ್ಲೆನ್ನನ ಮೆಚ್ಚುಗೆ ಮತ್ತು ಗೌರವಗಳನ್ನು ಸಂಪಾದಿಸುತ್ತಾಳೆ.

ಅವಳ ಗೆಳತಿ ಡಾರತಿಯ ಅಧಿಕೃತ ಬಡ್ತಿಯನ್ನು, ಅವಳ ಬಿಳಿಯ ಮೇಲಧಿಕಾರಿ ವಿವಿಯನ್ನಳು ತಡೆಹಿಡಿದಿರುತ್ತಾಳೆ. ಆದರೆ ದೃತಿಗೆಡದ ಡಾರತಿಗೆ, ತನ್ನ ಮತ್ತು ತನ್ನ ಸಹೋದ್ಯೋಗಿಗಳ ಸ್ಥಾನವನ್ನು ತುಂಬಲು IBM ಕಂಪನಿಯ ಕಂಪ್ಯೂಟರ್ IBM 7090 ಯಂತ್ರಗಳು ಸಿದ್ಧವಾಗುತ್ತಿವೆ ಎಂದು ತಿಳಿದು ಬರುತ್ತದೆ. ಜಾಣ್ಮೆಯಿಂದ ಡಾರತಿ, ಆ ಕಂಪ್ಯೂಟರ್ ಯಂತ್ರದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾಗಿದ್ದ FORTRAN ಎಂಬ ತಂತ್ರಾಂಶದ ಪ್ರೋಗ್ರಾಮ್ ಭಾಷೆಯನ್ನು ತಾನೆ ಸ್ವತಃ ಕಲಿಯುವುದಲ್ಲದೇ, ಅದನ್ನು ತನ್ನ ಸಹೋದ್ಯೋಗಿ ಮಹಿಳೆಯರಿಗೂ ಕಲಿಸಿ ಸಿದ್ಧವಾಗುತ್ತಾಳೆ. ಅವಳ ಈ ಕೌಶಲ್ಯವನ್ನು ಕಡೆಗಣಿಸಲು ಸಾಧ್ಯವಾಗದೆ, ನಾಸಾ ಅವಳನ್ನು, ಅವಳ ತಂಡದ ಸದಸ್ಯರೊಡನೆ ಮುಂದಿನ ಯೋಜನೆಯ ಕಾರ್ಯನಿರ್ವಹಣೆಗೆ ನೇಮಿಸುತ್ತಾರೆ.

ವರ್ಜೀನಿಯಾ ರಾಜ್ಯದಲ್ಲಿ ವರ್ಣೀಯ ಮಹಿಳೆಯರಿಗೆ ಇತರ ಶ್ವೇತ ವರ್ಣದ ಸದಸ್ಯರೊಂದಿಗೆ ಶಾಲೆ ಮತ್ತು ಕಾಲೇಜುಗಳಲ್ಲಿ ಬೆರೆತು ಅಧ್ಯಯನ ಮಾಡುವ ಸೌಲಭ್ಯವಿರಲಿಲ್ಲ. ಅವರಲ್ಲಿ ಮೂರನೆಯ ಮಹಿಳೆ ಮೇರಿ ಜ್ಯಾಕ್ಸನ್, ಅಲ್ಲಿನ ಕೋರ್ಟ್ ಒಂದರಲ್ಲಿ, ಜಡ್ಜ್ ಕೂಡ ಯಶಸ್ವಿಯಾಗಿ ವಾದಿಸಿ, ಅಲ್ಲಿನ ವಿಶ್ವವಿದ್ಯಾಲಯದ ಇಂಜಿನೀಯರಿಂಗ್ ಶಾಲೆಯಲ್ಲಿ ಸಂಜೆಯ ತರಗತಿಗೆ ಪ್ರವೇಶ ಗಿಟ್ಟಿಸುವುದಲ್ಲದೇ, ಅಲ್ಲಿ ಡಿಗ್ರಿ ಪಡೆಯುವುದರಲ್ಲೂ ಯಶಸ್ವಿಯಾಗುತ್ತಾಳೆ.

Friendship 7 ಅಂತರಿಕ್ಷನೌಕೆ ಯಾತ್ರೆಯ ಕಕ್ಷದ ನಿರ್ದೇಶಾಂಕಗಳ ಲೆಕ್ಕಾಚಾರಗಳಲ್ಲಿ ಅಸಮಂಜತೆಗಳು ಎದುರಾದಾಗ, ಆ ನೌಕೆಯ ಅಂತರಿಕ್ಷಯಾತ್ರಿ, ಜಾನ್ ಗ್ಲೆನ್, ತಾನು ಕೇವಲ ಕ್ಯಾಥರೀನಳ ಗಣಿತೀಯ ಲೆಕ್ಕಾಚಾರಗಳಲ್ಲಿ ವಿಶ್ವಾಸವಿಡುತ್ತೇನೆ. ಹಾಗಾಗಿ ಅವಳನ್ನು ಈ ಕಾರ್ಯಕ್ಕೆ ನೇಮಿಸಿ ಎಂದು ತಿಳಿಸುತ್ತಾನೆ. ಕೇವಲ ಬಿಳಿಯ ವರ್ಣದ ಪುರುಷರೇ ಪ್ರಧಾನರಾಗಿದ್ದ ಕಂಟ್ರೋಲ್ ಕೋಣೆಗೆ ಹ್ಯಾರಿಸನ್, ಕ್ಯಾಥರೀನಳನ್ನು ಕರೆತರುತ್ತಾನೆ. ಕ್ಯಾಥರೀನ್ ಕಂಟ್ರೋಲ್ ಕೋಣೆಯನ್ನು ಪ್ರವೇಶಿಸಿದೊಡನೆ, ಅಲ್ಲಿನ ಶ್ವೇತವರ್ಣೀಯ ಪುರುಷರು ಆಕೆಯನ್ನು ಪ್ರಾಣಿಸಂಗ್ರಹಾಲಯದ ಮೃಗವನ್ನು ನೋಡುವಂತೆ, ಆಶ್ಚರ್ಯದಿಂದ ನೋಡುವ ಆ ದೃಶ್ಯವನ್ನು ನಿಜಕ್ಕೂ ಪರಿಣಾಮಕಾರಿಯಾಗಿ ಚಿತ್ರೀಕರಿಸಲಾಗಿದೆ. ಅವಳ ನಿಖರವಾದ ಲೆಕ್ಕಾಚಾರಗಳ ಸಹಾಯದಿಂದ, Friendship 7 ಅಂತರಿಕ್ಷನೌಕೆಯ ಕಕ್ಷವು ಯಶಸ್ವಿಯಾಗಿ ಭೂಮಿಗೆ ಮರಳುತ್ತದೆ.

ಅಂತ್ಯದಲ್ಲಿ ನಾಸಾ ಸಂಸ್ಥೆಯು ತನ್ನೆಲ್ಲ ಕಾರ್ಯಗಳಿಗೂ ಕಂಪ್ಯೂಟರ್ ಯಂತ್ರಗಳನ್ನು ಬದಲಾಯಿಸಿದರೂ ಕೂಡಾ, ಡಾರತಿಗೆ ಅದೇ ವಿಭಾಗದಲ್ಲಿ ಉತ್ತಮವಾದ ಸ್ಥಾನ ದೊರಕುತ್ತದೆ. ಮೇರಿಗೆ ಅವಳಿಗೆ ದೊರೆತ ಇಂಜಿನಿಯರಿಂಗ್ ಪದವಿಯ ಫಲವಾಗಿ, ನಾಸಾ ಸಂಸ್ಥೆಯಲ್ಲೇ ಕೆಲಸ ಖಾಯಂ ಆಗುತ್ತದೆ. ಕ್ಯಾಥರೀನ್ ಅಲ್ಲೇ ತನ್ನ ಕೆಲಸವನ್ನು ಮುಂದುವರೆಸುತ್ತಾಳಲ್ಲದೇ, ನಾಸಾ ಸಂಸ್ಥೆಯ ಅಪೊಲೋ ೧೧ ಮತ್ತು ಅಪೊಲೊ ೧೩ ಚಂದ್ರಾಯಣದ ಯೋಜನೆಗಳಲ್ಲಿ, ಅತಿ ಮುಖ್ಯವಾದ ಕಾರ್ಯಗಳನ್ನು ನಿರ್ವಹಿಸುತ್ತಾಳೆ. ಅವಳ ಈ ಕಾರ್ಯವನ್ನು ಮೆಚ್ಚಿ , ೨೦೧೫ರಲ್ಲಿ ಅವಳಿಗೆ ಅಮೆರಿಕ ಸರ್ಕಾರವು, ಅಧ್ಯಕ್ಷೀಯ ಸ್ವಾತಂತ್ರ್ಯ ಪದಕವನ್ನು ನೀಡುತ್ತಾರೆ ಎನ್ನುವಲ್ಲಿಗೆ ಈ ಚಲನಚಿತ್ರವನ್ನು ಮುಕ್ತಾಯಗೊಳಿಸಿದ್ದಾರೆ. ಈಗ ಕ್ಯಾಥರೀನ್ ೯೭ ವರ್ಷಗಳ ವೃದ್ಧೆ. ಈ ಮೂವರು ಮಹಿಳೆಯರ ನಿಜವಾದ ಚಿತ್ರಗಳನ್ನು ಚಲನಚಿತ್ರದ ಕೊನೆಯಲ್ಲಿ ತೋರಿಸಿದ್ದಾರೆ.

ಈ ಕಥೆಯ ಅಂತ್ಯವು ಸುಖಕರವಾಗಿದ್ದರೂ ಕೂಡಾ, ಈ ಮಹಿಳೆಯರು ಆರಂಭದಲ್ಲಿ ಎದುರಿಸುವ ಜನಾಂಗಬೇಧ ನೀತಿಯನ್ನು ಪರಿಣಾಮಕಾರಿಯಾಗಿ ಈ ಚಲನಚಿತ್ರದಲ್ಲಿ ನಿಭಾಯಿಸಿದ್ದಾರೆ. ಇಂದು ಅಮೇರಿಕಾ ದೇಶ ವರ್ಣೀಯ ಅಧ್ಯಕ್ಷರನ್ನು ಕಂಡಿದೆ. ಅಫ಼್ರಿಕನ್ ಅಮೆರಿಕನ್ ಜನಾಂಗದವರು ಉತ್ತುಂಗದ ಸ್ಥಾನಗಳನ್ನೂ ಅಲಂಕರಿಸಿದ್ದಾರೆ. ಆದರೂ ದಕ್ಷಿಣದ ರಾಜ್ಯಗಳಲ್ಲಿ ಅವರ ಮೇಲಿನ ವರ್ಣ-ದ್ವೇಷ, ದಬ್ಬಾಳಿಕೆ ನಡೆಯುತ್ತಲೇ ಇದೆ. ಹಲವು ಹತ್ತು ಸಮಸ್ಯೆಗಳು ಈ ಜನಾಂಗದ ಸದಸ್ಯರನ್ನು ಇನ್ನೂ ಕಾಡುತ್ತಲೇ ಇವೆ. ಮಾನವರ ಮನಗಳಲ್ಲಿ ಆಳವಾಗಿ ಬೇರೂರಿರುವ ಪೂರ್ವಾಗ್ರಹಗಳು ಸಂಪೂರ್ಣವಾಗಿ ಅಳಿಸದ ಹೊರತು, ಈ ಸಮಸ್ಯೆಗಳಿಗೆ ಪರಿಹಾರವಿಲ್ಲ.

ಪ್ರೇಕ್ಷಕರು ಮತ್ತು ವಿಮರ್ಶಕರಿಬ್ಬರಿಂದಲೂ ಶಭಾಸಗಿರಿ ಪಡೆದ ಈ ಚಲನಚಿತ್ರವನ್ನು ನೋಡಿದಾಗ, ಪ್ರೇಕ್ಷಕನ ಮನಸ್ಸಿನಲ್ಲಿ ದುಃಖ, ನೋವು, ನಾಚಿಕೆ, ಹೆಮ್ಮೆ ಹೀಗೆ ಹಲವು ಹತ್ತು ಭಾವನೆಗಳು ಉಕ್ಕಿ, ಅನೇಕಬಾರಿ ಕಣ್ಣೀರು ಒಸರುವುದಂತೂ ಖಂಡಿತಾ. ಬ್ರಿಟಿಷರ ಆಳ್ವಿಕೆಯಲ್ಲಿ ೨೦೦ ವರ್ಷಗಳನ್ನು ನೋಡಿರುವ ಭಾರತೀಯರು, ಈ ಸಮಸ್ಯೆಗೆ ಸ್ಪಂದಿಸಲು ಸಾಧ್ಯ.

ಪ್ರಮುಖ ಪಾತ್ರಗಳಲ್ಲಿರುವ ಆಕ್ಟೇವಿಯಾ ಸ್ಪೆನ್ಸರ್, ತಾರಾಜಿ ಹೆನ್ಸನ್ ಮತ್ತು ಜಾನೆಲ್ ಮೊನೆ ತಮ್ಮ ಪಾತ್ರಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ನಾಸಾ ಸಂಸ್ಥೆಯ ಮೇಲಧಿಕಾರಿ ಆಲ್ ಹ್ಯಾರಿಸನ್ ಪಾತ್ರದಲ್ಲಿ ಅಭಿನಯಿಸಿರುವ ಪ್ರಸಿದ್ಧ ನಟ ಕೆವಿನ್ ಕಾಸ್ಟ್ನರ್, ಮತ್ತು ಇತ್ತೀಚೆಗೆ ಟಿವಿ ಜನಪ್ರಿಯ ಸರಣಿ Big-Bang Theory ಯಲ್ಲಿ ನಟಿಸಿರುವ, ಶೆಲ್ಡನ್ ಪಾತ್ರದ ನಟ ಜಿಮ್ ಪಾರ್ಸನ್ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತಮ ನಟವರ್ಗ, ನಿರ್ದೇಶನ, ಸಂಭಾಷಣೆ ಮತ್ತು ಹಿನ್ನೆಲೆ ಸಂಗೀತವಿರುವ ಈ ಚಲನಚಿತ್ರ ಇತ್ತೀಚೆಗೆ ನಾನು ನೋಡಿದ ಉತ್ತಮ ಚಿತ್ರಗಳಲ್ಲಿ ಒಂದು.

ನಿಜ-ಜೀವನದ ಕಥೆಯನ್ನಾಧರಿಸಿ ನಿರ್ಮಿಸಿರುವ ಈ ಚಲನಚಿತ್ರದಲ್ಲಿ, “Get the girl to check the numbers,” ಎಂದು ನುಡಿಯುವ ಅಂತರಿಕ್ಷಯಾತ್ರಿ ಜಾನ್ ಗ್ಲೆನ್ನನ ಸಂಭಾಷಣೆ, ಮಹಿಳೆಯರ ಮನಗಳಲ್ಲಿ ಹೆಮ್ಮೆಯ ಭಾವನೆ ಮೂಡಿಸುವುದರಲ್ಲಿ ಸಂದೇಹವೇ ಇಲ್ಲ!

katherine_johnson_in_2008ಕ್ಯಾಥರೀನ್ ಗೋಬಲ್ ಜಾನ್ಸನ್

“ತೊಟ್ಟಿಲು ತೂಗುವ ಕೈ, ಅಂತರಿಕ್ಷಯಾನವನ್ನೂ  ನಿರ್ವಹಿಸಬಲ್ಲುದು”!

ಬುದ್ದಿಮತ್ತೆ, ಧೈರ್ಯ, ಸಾಹಸದ ಗುಣಗಳು, ಯಾವ ಜನಾಂಗದ, ದೇಶದ, ವರ್ಣದ, ಲಿಂಗದ ಸೊತ್ತೂ ಅಲ್ಲಾ! ಈ ವಿಷಯವನ್ನು ಅರ್ಥ ಮಾಡಿಕೊಂಡರೆ ಮಾನವ ಸಮಾಜದ ಏಳಿಗೆಗೆ ಸಹಕಾರಿ!

ಉಮಾ ವೆಂಕಟೇಶ್

***

ಸಿನಿಮಾ ನೋಡಿ ಶ್ರೀವತ್ಸ ದೇಸಾಯಿ ಬರೆದದ್ದು:

ಈ ಚಿತ್ರ ಯು ಕೆ ದಲ್ಲಿ ತಡವಾಗಿ ಫೆಬ್ರುವರಿ 17ರಂದು ಬಿಡುಗಡೆಯಾಯಿತು. ನಾನು ಇಂದೇ ನೋಡಿ ಬಂದೆ. ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವೆ.

ಬಾಹ್ಯಾಕಾಶವನ್ನು ಮೊದಲು ಗೆಲ್ಲಲು ರಷ್ಯ-ಅಮೆರಿಕಗಳ ಪೈಪೋಟಿಯನ್ನು ಆರಂಭದಿಂದಲೂ ನೋಡುವ ಅವಕಾಶ ಸಿಕ್ಕ ತಲೆಮಾರಿನವನು ನಾನು! ಮೊದಲ ಸಲ ರೇಡಿಯೋದಲ್ಲಿ ಸ್ಪುಟ್ನಿಕ್ಕಿನ”ಬೀಪ್ ಬೀಪ್’ ಕೇಳಿದಾಗ ನಾನು ಶಾಲೆಯಲ್ಲಿದ್ದೆ. ಮಾನವ ಚಂದ್ರನ ಮೇಲೆ ಮೊದಲ ಹೆಜ್ಜೆಗಳನ್ನಿಟ್ಟ ರೋಮಾಂಚಕ ಸುದ್ದಿಯನ್ನು ಆಗ ತಾನೆ ಕಾಲೇಜು ಮುಗಿಸಿ ಮುಂಬಯಿಯಲ್ಲಿದ್ದಾಗ ಆ ಮುಂಜಾನೆ ರೇಡಿಯೋದಲ್ಲಿ ಕೇಳಿದ್ದು, ಇತ್ಯಾದಿ ಎಲ್ಲ ನೆನಪಿಗೆ ತಂದಿತು ಈ ಚಿತ್ರ. ಇದು ಸತ್ಯ ಘಟನೆಗಳನ್ನಾಧರಿಸಿದ ಚಿತ್ರವೆಂದು ಪ್ರಚಾರಮಾಡಿದ್ದಾರೆ. ಅಮೆರಿಕೆಯಲ್ಲಿಯ 1961 ರಲ್ಲಷ್ಟೆ ಅಲ್ಲ, ಇಂದಿಗೂ ಎಲ್ಲೆಡೆ ಇರುವ ವರ್ಣ ಭೇದ, ಸರ್ವತ್ರ ಕಾಣುವ ಲಿಂಗ ಭೇದ ಇವೆಲ್ಲ ವಿಷಯಗಳು ಸಿನಿಮಾಕ್ಕೆ ಹೊಸತಲ್ಲವಾದರೂ ಅವುಗಳ ಚಿತ್ರೀಕರಿಸಿದ ರೀತಿ ಮನ ಕಲುಕುತ್ತದೆ. ಮೂವರು ಕರಿಯ (ಆಫ್ರಿಕನ್-ಅಮೆರಿಕನ್) ಹೆಣ್ಣುಮಕ್ಕಳ ಜೀವನದ ಸುತ್ತಿ ಹೆಣೆದ ಕಥೆ ಇದು. ನಾಸಾ ದಲ್ಲಿ ಕೆಲಸ ಮಾಡುವ ಹಣಿತ ಪ್ರವೀಣೆ ವಿಸರ್ಜನೆಗೆಂದು ಅರ್ಧಮೈಲಿ ದೂರದ ಟಾಯ್ಲೆಟ್ಟಿಗೆ ಓಡಿ ಹೋಗುವ ಕ್ಯಾಥರಿನ್ನಳ ಪರದಾಟ, ರಾತ್ರಿಯಾಗುವವರೆಗೆ ಕೆಲಸ ಮಾಡಿ ತಮ್ಮ ಕುಟುಂಬಕ್ಕೆ ಮರಳುವ ಮಹಿಳೆಯರು ಇವೆಲ್ಲ ಕ್ಲೀಷೆ ಆಗದಂತೆ ಚಿತ್ರೀಕರಿಸಲಾಗಿದೆ. ಈ ಮೂವರು ಗೆಳತಿಯರಲ್ಲದೆ ಕೆವಿನ್ ಕಾಸ್ಟ್ನರ್ ಅಭಿನಯಿಸಿದ ಆಲ್ ಹಾರಿಸನ್ ಪಾತ್ರ ಇಲ್ಲಿ ಮುಖ್ಯ. ಮಹಿಳೆಯರಿಗಷ್ಟೇ ಸೀಮಿತವಾದ coloured only ಫಲಕವನ್ನು ಒಡೆದು ”’ನಾಸಾ’ದಲ್ಲಿ ಎಲ್ಲರ ವಿಸರ್ಜನೆಯ ಬಣ್ಣ ಒಂದೇ” ಎಂದು ಅನ್ನುವದು, ಇಂಥ ’ಕಣ್ಣೀರಿನ ಕ್ಷಣ”ಗಳಿದ್ದರೂ ಒಟ್ಟಿನಲ್ಲಿ ಈ ಚಿತ್ರದಲ್ಲಿ feel good factors ಸಾಕಷ್ಟಿವೆ.ಉದಾ: ಚಿತ್ರದ ಆರಂಭದ ದೃಶ್ಯದಲ್ಲೇ ಕಾರು ಕೆಟ್ಟುಬಿದ್ದ ಈ ’ನಾಸ”ದ ಕರ್ಮಚಾರಿಗಳನ್ನು ಎಸ್ಕೋರ್ಟ್ ಮಾಡುವ ಪೋಲೀಸ್ ಅಧಿಕಾರಿಯ ಕಾರಿನ ಹಿಂದೆ ಕೀಟಲೆ ಮಾಡುತ್ತ ಹೋಗುವದು, ಇದಲ್ಲದೆ ಕೊನೆಯಲ್ಲಿ ಕ್ಲೈಮ್ಯಾಕ್ಸ್ ಘಟ್ಟವೆಂದರೆ ಜಾನ್ ಗ್ಲೆನ್ನನ Friendship 7 capsule ನಾಯಕಿ ಕ್ಯಾಥರಿನ್ ಆ ಮೊದಲೇ ಲೆಕ್ಕ ಹಾಕಿದ್ದ ವಿಕ್ಷೇಪ ಪಥ (trajectory) ವನ್ನನುಸರಿಸುವಾಗ ಕ್ಯಾಪ್ಸೂಲಿಗೆ ಹತ್ತಿದ ಬೆಂಕಿಯನ್ನು  ವೀಕ್ಷಿಸಿದಾಗ ಅವಳು ಮತ್ತುಳಿದ ನಾಸಾ ಕರ್ಮಚಾರಿಗಳಿಗೆ ಆಗುವ ಅಗ್ನಿಪರೀಕ್ಷೆಯ ದೃಶ್ಯ ನವಿರೇಳಿಸಿದರೂ ಸ್ವಲ್ಪ dramatic ಏನೊ ಅನಿಸುತ್ತದೆ. ಆದರೆ ಅದರ ಹಿಂದಿನ ಸತ್ಯ, ಅಂತರಿಕ್ಷ ಪ್ರಯಾಣದ ಸಾಫಲ್ಯಕ್ಕೆ ಬಹಳಷ್ಟು ಸವೆದ ’ಕೋಟಿಜ್ಯ, ವಿಶ್ಲೇಷಕ ಜ್ಯಾಮಿತಿ, ವರ್ಗಮೂಲಗಳಲ್ಲಿ (cosine, analytical geometry, square root) ಪರಿಣಿತರಾದ ಹೆಣ್ಣುಮಕ್ಕಳ ಪರಿಶ್ರಮ ಮತ್ತು ಕಷ್ಟ ಸಹಿಷ್ಣುತೆಯನ್ನು ಕೊಂಡಾಡುವ ಈ ಚಿತ್ರವನ್ನು ಅವಶ್ಯ ನೋಡಿ ಬನ್ನಿ. ಚಿತ್ರದ ಶೀರ್ಷಿಕೆಯಲ್ಲಿ ಹುದುಗಿದ ಇನ್ನೊಂದು ಅರ್ಥವೇನೋ ಅನ್ನುವಂತೆ ಎತ್ತಿ ತೋರಿಸುವ ಒಂದು ದೃಶ್ಯವನ್ನು ಚಂದವಾಗಿ ಚಿತ್ರಿಸಲಾಗಿದೆ. ಅದು ಹೀಗಿದೆ: ದ್ವಿವಿಧವಾದ ಭೇದಕ್ಕೆ ಬಲಿಯಾದ ಕ್ಯಾಥರಿನ್ ಗೆ classified data ನೋಡುವ ಅಧಿಕಾರವಿರುವದಿಲ್ಲ ಎಂಬ ನೆಪದಲ್ಲಿ ಅವಳ ಸಹೋದ್ಯೋಗಿ ಕರಿ ಮಸಿಯಿಂದ ಹೊಡೆದು ಹಾಕಿದ ಲೆಕ್ಕಾಚಾರ (hidden figures)ವಿದ್ದ ಕಾಗದವನ್ನುಬೆಳಕಿಗೆ ಹಿಡಿದು ಕಂಡು ಹಿಡಿದು ತನ್ನ ಲೆಕ್ಕ ಕೌಶಲ್ಯವನ್ನು ಪ್ರದರ್ಶಿಸಿದ್ದು! ಅದಕ್ಕೆ ಅವಳ ಬಾಸ್ ನ ಆಜ್ಞೆ? ಇನ್ನೂ ದಟ್ಟವಾದ ಕರಿ ಮಸಿ! ಮುಖ್ಯ ಪಾತ್ರದಲ್ಲಿ ಅಭಿನಿಯಿಸಿದ ತರಾಜಿ ಹೆನ್ಸನ್ ಮಾತಿನಿಂದ ಮುಗಿಸುವೆ. ಆಸ್ಕರ್ ಪ್ರಶಸ್ತಿಗೆ ಸೂಚಿಸಿದಲಾದ ಈ ಚಿತ್ರವನ್ನು ನೋಡಿ: Have a good day!

 

ಕ್ಯಾಥರಿನ್ ಜಾನ್ಸನ್:” So yes, they let women do some things at NASA, Mr. Johnson. And it’s not because we wear skirts. It’s because we wear glasses. Have a good day.”

ಶ್ರೀವತ್ಸ ದೇಸಾಯಿ

 

5 thoughts on “ತೆರೆಮರೆಯ ಪ್ರತಿಭೆಗಳು (Hidden Figures)

 1. ಜುಗಲ್ಬಂದಿ ಲೇಖನ ಸೊಗಸಾಗಿದೆ. ತಾರತಮ್ಯತೆ ದಿನ ಬೆಳಗೂ ಜಗತ್ತಿನೆಲ್ಲೆಡೆ ಇದೆ, ಇದ್ದೆ ಇರುತ್ತದೆ. ಸಮರ ಸದಾ ಮನೆ-ಮನೆಯಲ್ಲಿ, ಗಲ್ಲಿ-ಗಲ್ಲಿಯಲ್ಲಿ ನಡೆಸಿಯೇ ಗೆಲ್ಲಬಹುದು. ಮಹಿಳೆಯರ, ಅಬಲರ ಶೋಷಣೆ ಅನಾದಿ ಕಾಲದಿಂದ ನಡೆಯುತ್ತಲೇ ಇದೆ. ಇಂತಹ ಲೇಖನಗಳು, ಚಲಚ್ಚಿತ್ರಗಳು ನಾವು ತೂಕಡಿಸುತ್ತಿರುವಾಗ ಬಡಿದೆಬ್ಬಿಸುತ್ತವೆ.

  Like

 2. ಆತ್ಮೀಯ ಉಮಾ,
  ನಿಮ್ಮ ಬರಹ ಸದ್ಯದಲ್ಲೇ, ಮಾರ್ಚ್ ೮ರಂದು, ಬರಲಿರುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಒಳ್ಳೆಯ ಪ್ರಸ್ತುತಿಯಾಗಿದೆ. ಕೃತಜ್ಞತೆಗಳು.
  ನಿಮ್ಮ ಲೇಖನವನ್ನ ಓದಿದಾಗ ಮಿಶ್ರ ಭಾವನೆ ಹುಟ್ಟಿತು. ಈಗ ಚಲನಚಿತ್ರವನ್ನ ನೋಡಲೇ, ಬೇಡವೇ ಎಂಬ ದ್ವಂದ್ವ ನನಗೆ.

  ನಾನು ಭಾರತದಲ್ಲಿದ್ದಾಗ ಸಾಕಷ್ಟು ಲಿಂಗತಾರತಮ್ಯತೆಯನ್ನ ಅನುಭವಿಸಿದ್ದೆ; ಪಿತೃಪ್ರಧಾನ ವ್ಯವಸ್ಥೆಯ ಸಮಾಜದ ಮನೋಭಾವನೆಯನ್ನ ವಿಶ್ಲೇಷಿಸುತ್ತಾ ಪ್ರಶ್ನೆಗಳನ್ನೆತ್ತಿದ್ದೆ. ಮುಂದೆ ತಳಸಮುದಾಯಗಳ ಜೊತೆ ಸೇರಿ ಸಾಮಾಜಿಕ ನ್ಯಾಯಕ್ಕಾಗಿ ದನಿ ಎತ್ತಿದ್ದು ನನ್ನದೊಂದು ಕೆಲಸದ ಕ್ಷೇತ್ರವಾಯಿತು. ಆಗ ಜಾತಿ ವ್ಯವಸ್ಥೆಯ ಪಿಡುಗು, ಧರ್ಮಗಳನ್ನು ವ್ಯಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವ ಷಡ್ಯಂತ್ರ, ನಾನಾ ಕಾರಣಗಳಿಂದ ಮಕ್ಕಳ ಮೇಲೆ, ಮಹಿಳೆಯರ ಮೇಲೆ, ಪರಿಸರದ ಮೇಲೆ, ತಳಸಮುದಾಯಗಳ ಮೇಲೆ ನಡೆಯುವ ನಿರಂತರ ಶೋಷಣೆಯ ಬಹುಮುಖಗಳ ಪರಿಚಯ ಮತ್ತಷ್ಟು ಆಳವಾಗಿ ಆಯ್ತು. ನನ್ನ ‘ದನಿ’ ಇನ್ನೂ ಜಾಗೃತವಾಗಿದ್ದಾಗಲೇ ಆಸ್ಟ್ರೇಲಿಯಾಗೆ ಹೋದೆ. ಅಲ್ಲಿ ನಾನೇ ಸ್ವತಃ ವರ್ಣಬೇಧ ತಾರತಮ್ಯತೆಯನ್ನು ನೇರವಾಗಿ ಅನುಭವಿಸಿದೆ. ಆಸ್ಟ್ರೇಲಿಯಾದ Aboriginal ಸಮುದಾಯಗಳ ಕೆಲವರು ನನ್ನ ಸ್ನೇಹಿತರಾದಾಗಲೇ ಆ ದೇಶದಲ್ಲಿ ಅತ್ಯಂತ ಆಳವಾಗಿ ಬೇರೂರಿರುವ ವರ್ಣಬೇಧ, ಜನಾಂಗೀಯ ವಿಭಜನೆ, ವಸಾಹತುಶಾಹಿಗಳ ದಬ್ಬಾಳಿಕೆಯ ಪರಿಣಾಮಗಳ ವಿಕೃತ ಸ್ವರೂಪ ತಿಳಿಯಿತು.

  ಶೋಷಣೆಗಳು ಎಷ್ಟೆಷ್ಟೋ ಕಾರಣಗಳಿಗಾಗಿ ನಮ್ಮನಮ್ಮಲ್ಲೇ ಪ್ರತಿದಿನ ನಡೆಯುತ್ತಿವೆ. ಮೇಲ್ಜಾತಿಯಲ್ಲಿ ಹುಟ್ಟಿದ್ದು, ಗಂಡು ಎಂಬ ಕಾರಣಕ್ಕಾಗಿ, ಬಿಳಿಯ ಬಣ್ಣದ ಚರ್ಮ ಇರುವುದು, ‘ನಾನು ಮೇಲು’ ಎಂಬ ಅಹಂ, ಇಂಗ್ಲಿಷ್ ಭಾಷೆ ಶ್ರೇಷ್ಠ ಅನ್ನುವ ಪ್ರತಿಪಾದನೆ, transgender ಕಾರಣಕ್ಕಾಗಿ ಅವಮಾನ … ನಮ್ಮಲ್ಲಿರುವ Othering ಅನ್ನುವ ಅಮಾನುಷ, ಅಸಹ್ಯ ರೂಪಕ್ಕೆ ಇನ್ನೂ ಎಷ್ಟೋ ಪದರಗಳು ಇವೆ. ನಮ್ಮ ನಂಬಿಕೆಗಳು, ಮನೋಭಾವಗಳು, ಆಚರಣೆಗಳು ಬದಲಾಗಿ, ಅಮಾನುಷತೆ ಕಡಿಮೆಯಾಗಿ, ಮಾಯವಾಗಲು ನಾವು ಪ್ರತಿಯೊಬ್ಬರೂ Hidden – ಅಲ್ಲಲ್ಲಾ – Prominent Figures ಆಗಬೇಕು. ಅದನ್ನು ನೀವು ಲೇಖನದಲ್ಲಿ ಹೇಳಿದ್ದೀರಿ, ಕೃತಜ್ಞತೆಗಳು. You added more relevance to this year’s International Women’s Day. Cheers!

  ವಿನತೆ ಶರ್ಮ

  Liked by 2 people

 3. ಉಮಾ ಹಾಗೂ ದೇಸಾಯಿಯವರು ಬರೆದ Hidden Figures ಮೂವೀಯ ವಿಶ್ಲೇಷಣೆ ಓದಿ ಅದನ್ನು ನೋಡುವ ಉತ್ಕಟ ಅಪೇಕ್ಷೆ.ಇಂಥ ಚಿತ್ರಗಳಿಂದ ಸುಧಾರಣೆಗಳಾಗಿ ,ಸಮಸ್ಯೆನಿವಾರಣೆಯಾಗುವುದು ನಿಜವೇ ಆದರೆ ಯಾರ್ಯಾರಿಗೆ ಈ ಚಿತ್ರ ತೋರಿಸಲಿ ಅಂತ ಯೋಚನೆ ನಿಜ.ಈಗ ಇಂಡಿಯಾದಲ್ಲೂ ಮೊದಲಿನಷ್ಟು ಜಾತಿ ಭೇದ ಲಿಂಗಭೇದ ಇಲ್ಲವೇನೋ !? ಆದರೂ ಏನೂ ಹೇಳದ ಪರಿಸ್ಥಿತಿ.ಮೊನ್ನೆ ನನ್ನ ಸ್ನೇಹಿತೆ, ಕ್ಲಾಸ್ 1 ಆಫೀಸರ ಅಂತ ಕೆಲಸ.ಅವಳ ಕಡೆ ಹೋದಾಗ ಕಾಫಿಗೆ ಕಪ್ ತಗೊಳಲು ಹೋದಾಗ ,” ಏ ಅದ ತಗೋಬೇಡ್ವೇ, ಯಾರಾದರೂ ಕೆಳ ಜಾತಿಯವರು ಬರ್ತಾನೇ ಇರ್ತಾರೆ .ಅವರಿಗೋಸ್ಕರ ಅದು “.ಒಂದು ಕ್ಷಣ ತಬ್ಬಿಬ್ಬಾದೆ.ಎಲ್ಲ ಬದಲಾಗಿದೆ, ಕ್ರಾಂತಿಕಾರಿ ಬದಲಾವಣೆಗಳೇ ಒತ್ತಾಯಪೂರ್ವಕವಾಗಿ ಬಂದದ್ದು.ದೇವಸ್ಥಾನದಲ್ಲಿ ಮೇಲ್ಜಾತಿಯವ,ರದೊಂದು ಸಾಲುಊಟ ಬೇರೆ ,ಇತರರದು ಬೇರೆ. ದೇವರಿಗೇ ಗೊತ್ತಿರದ ಭೇದ ಇವರಿಗೆ ಗೊತ್ತು.ಇದಕೆ ಕೊನೆಯುಂಟೆ ? ಇದೇ ಲಿಂಗಭೇದದಲ್ಲಿಯೂ ಕಾಣುತ್ತೇವೆ .ತೊಟ್ಟಿಲು ತೂಗಿ ಸೃಷ್ಟಿಯ ನಿರ್ಮಾಣದ ಅಡಿಗಲ್ಲಿಟ್ಟ ಹೆಣ್ಣಿಗೆ ಯಾವುದು ಅಸಾಧ್ಯ ?ಅವಳು ಸುಕುಮಾರ ಭಾವಗಳಸುಕೋಮಲ ದೇಹದ ಒಡತಿ .ಅದು ಪ್ರಕೃತಿಯ ಕೊಡುಗೆ .ಹಾಗೆಂಂದು ,ಅಬಲೆಯಲ್ಲ,ಬುದ್ಧಿಯಲ್ಲೂ ಹಿಂದಲ್ಲ.ಈಗ ಸುಧಾರಣೆಯಾಗಿದ್ದರೂ ಅದೂ ಮೇಲ್ನೋಟಕ್ಕೆನೋ ಎಂಬನಿಸಿಕೆ.ಇದೆಲ್ಲ ಮೂಲಭೂತವಾಗಿ ಬದಲಾಗಲು ಇನ್ನೂ ಎಷ್ಟು ತೆರೆಮರೆಯ ಪ್ರತಿಭೆಗಳು ಶ್ರಮಿಸಬೇಕೋ ? ಆದರೂ ಒಂದಾಸೆ ಬಂದೀತು ಆ ಕಾಲ , ಕಾಯೋಣ ಆ ಶಕ್ತಿಗಳಿಗೆ.ತುಂಬ ಸುಂದರ ವಿಚಾರಾತ್ಮಕ ಲೇಖನಗಳು ಉಮಾ ಅವರೇ ಹಾಗೂ ಶ್ರೀವತ್ಸ ದೇಸಾಯಿಯವರೇ .ಇಂತಹ ಲೇಖನ ನೀಡಿದ್ದಕ್ಕೆ ಧನ್ಯವಾದಗಳು
  ಸರೋಜಿನಿ ಪಡಸಲಗಿ.

  Liked by 2 people

 4. Interesting article Uma. Once back home I will try to watch this film. A lot of progress is made in the US and indeed in the UK, but I find the situation here in India is quite depressing as everything seems to be based on caste. I read a news item in DH last week that a tenant was evicted when the landlord found out that he is a Dalit!
  People in India should think twice before complaining about descrimination of any kind any where.
  Ramamurthy

  Liked by 2 people

 5. ಉಮಾ ಮತ್ತು ದೇಸಾಯಿ ಬರೆದ ಲೇಖನ ಓದಿದ ಮೇಲೆ ಈ ಸಿನೆಮಾ ನೋಡಲೇಬೇಕಲ್ಲ! ಬರಹವೇ ಇಷ್ಟು ಜೋರಾಗಿರಬೇಕಾದರೆ ಇನ್ನು ಸಿನೆಮಾ ಹೇಗಿರಬೇಡ?

  ಇತ್ತೀಚೆ ನಾನು ಓದಿ ಮುಗಿಸಿದ ೨೦೧೬ ರ ಬುಕರ್ ಬಹುಮಾನ ಪಡೆದ ಪಾಲ್ ಬೆಟಿ ಬರೆದ `ಸೆಲ್ ಔಟ್` ಕಾದಂಬರಿಯ ನೆನಪಾಯಿತು. (https://en.wikipedia.org/wiki/The_Sellout_(book))

  ವರ್ಣೀಯತೆ, ಧರ್ಮೀಯತೆ, ಜಾತೀಯತೆ, ಲೈಂಗಿಕತೆಯ ಒಂದೊಂದೇ ಗೋಡೆಗಳನ್ನು ನಿಧಾನವಾಗಿ ಬೀಳಿಸುತ್ತಿದೆ ಹೊಸ ಯುಗ. ನಾನು ಚಿಕ್ಕವಾನಾಗಿದ್ದಾಗ ಇದ್ದಷ್ಟು ಜಾತೀಯತೆ ಈಗಿಲ್ಲ ಭಾರತದಲ್ಲಿ. ನಾನು ಕೇಳಿರುವಂತೆ ಓದಿರುವಂತೆ ವರ್ಣಬೇಧ ಕೂಡ ಅಗಾಧವಾಗಿ ಕಡಿಮೆಯಾಗಿದೆ. ಒಬ್ಬ ಕರಿಯ ಅಮೇರಿಕದ ಅಧ್ಯಕ್ಷನಾಗಬಲ್ಲ. ಒಬ್ಬ ಮಹಿಳೆ ಭಾರತದ ಪ್ರಧಾನಿಯಾಗಬಲ್ಲಳು.

  ಇಂಥ ಒಂದು ಕ್ರಾಂತಿ ಶುರುವಾಗುವುದು ಇಂಥ ಗೊತ್ತಿಲ್ಲದ ಹೂತುಹೋದ ಇತಿಹಾಸದ ಪುಟಗಳಲ್ಲೇ!

  ಎಲ್ಲ ಗಂಡಸರೂ ಹರಟೆ ಹೊಡೆಯುತ್ತ ಕೂತಾಗ, ತಲೆ ಮೇಲೆ ಸೆರೆಗು ಎಳೆದುಕೊಳ್ಳದೇ ಅಡುಗೆಮನೆಯಿಂದ ನಡುಮನೆಗೆ ಬಂದ ಮೊದಲ ಹೆಂಗಸು –

  ಪಕ್ಕದ ಕೇರಿಯ ನೂರ್ ಉನ್ನಿಸಾ ಮಾಡಿದ ಬಿರಿಯಾನಿ ತಿಂದು ಅವಳನ್ನು ಮದುವಯಾಗಿ ಜಾತಿಭ್ರಷ್ಟನಾದ ಮೊದಲ ಹಿಂದು-

  ದೇವಸ್ಥಾನದ ಒಳಗೆ ಹೋದರೆ ರಕ್ತಕಾರಿಕೊಂಡು ಸತ್ತರೂ ಪರವಾಗಿಲ್ಲ, ಅದೇನಾಗಿ ಬಿಡುತ್ತೋ ನೋಡೇ ಬಿಡೋಣ ಎಂದು ಎಲ್ಲ ಮಡಿ ಬ್ರಾಹ್ಮಣರ ನಡುವೆಯೇ ದೇವಸ್ಥಾನದ ಒಳ ಹೊಕ್ಕ ಮೊದಲ ಹರಿಜನ –

  ಯಾರು ಏನಾದರೂ ಅಂದು ಕೊಳ್ಳಲಿ ಎಂದು ತಾನು ಮೆಚ್ಚಿದ ಹುಡುಗನನ್ನು ತಂದೆ-ತಾಯಿ ಮುಂದೆ ನಿಲ್ಲಿಸಿ, ತಾನು ಮದುವೆಯಾದರೆ ಇದೇ ಹುಡುಗನನ್ನೇ ಮದುವೆಯಾಗುವುದು ಎಂದು ಹೇಳಿದ ಮೊದಲ ಹುಡುಗ –

  ಎಲ್ಲ ಹಿಡನ್ ಫಿಗರುಗಳೇ! ತೆರೆಮರೆಯ ಕ್ರಾಂತಿಕಾರಿಗಳೇ!! ಇವರಿಲ್ಲದಿದ್ದರೆ ಇವತ್ತು ನಾವು ಹೀಗೆ ಬದುಕಲು ಸಾಧ್ಯವಾಗುತ್ತಿರಲಿಲ್ಲ.

  Liked by 3 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.