ಮಲೆನಾಡಿನ ಪ್ರವಾಸ ಮತ್ತು ಕಿರು ಪರಿಚಯ

(ಮಲೆನಾಡೆಂದರೆ ಕೂಡಲೇ ನೆನಪಿಗೆ ಬರುವುದು ಹಸುರಿನ ದಟ್ಟ ಕಾಡುಗಳು,  ಪರ್ವತ ಶ್ರೇಣಿಗಳು, ನಿರ್ಮಲವಾದ ನದಿಗಳು, ಜಲಪಾತಗಳು, ಅಲ್ಲಿಯ ಹೆಸರಾಂತ ಕವಿಗಳು, ಲೇಖಕರು, ಊಟ, ಉಪಚಾರಗಳು ಮತ್ತು ಸಂಪ್ರದಾಯಗಳು.

ಮಲೆನಾಡಿನ ರಮ್ಯ ದೃಶ್ಯಗಳು ಮತ್ತು ಅಲ್ಲಿನ ಜನ, ಜೀವನವನ್ನು  ಕುವೆಂಪು ಅವರ ಕವನಗಳಲ್ಲಿ, ಅವರ ಮಲೆನಾಡಿನ ಚಿತ್ರಗಳು ಹಾಗೂ ಕಾನೂರು ಸುಬ್ಬಮ್ಮ ಹೆಗ್ಗಡತಿ ಮುಂತಾದ ಕೃತಿಗಳಲ್ಲಿ ಕಾಣಬಹುದು. ಹಾಗೆ ಅವರ ಸುಪುತ್ರ ತೇಜಸ್ವಿ ಅವರ ಬಹುತೇಕ ಕಥೆಗಳು ಮಲೆನಾಡಿನ ಹಿನ್ನೆಲೆಯಲ್ಲಿ ಹೇಳಲ್ಪಟ್ಟಿವೆ. ಇಂತಹ ಸುಂದರ ತಾಣಕ್ಕೆ ತಮ್ಮ ಒಲವಿನ ಗೂಡಿಗೆ ಕುವೆಂಪು ಅವರು ತಮ್ಮ ಪರಮ ಗುರುಗಳಾದ ರಾಮಕೃಷ್ಣ ಪರಮಹಂಸರನ್ನು ಆವಾಹನೆ ಮಾಡುತ್ತಾರೆ ಅದು ಹೀಗಿದೆ:

ಬಾ ಶ್ರೀ ಗುರುದೇವನೆ  ಬಾ

ಶ್ಯಾಮಲಾ ಕಾನನ ಶೃಂಗತರಂಗಿತ

ಸಹ್ಯಾದ್ರಿಯ ಸುಂದರ ಮಂದಿರಕೆ

ಚಿನ್ಮಯಮಮ ಹೃನ್ ಮಂದಿರಕೆ

ಕುವೆಂಪು ಅವರಿಗೆ ಮಲೆನಾಡು ಬರಿ ಒಂದು ಪ್ರದೇಶವಾಗದೆ ಅದು ಪವಿತ್ರ ಮಂದಿರವಾಗುತ್ತದೆ ಮತ್ತೆ ಅವರ ಹೃದಯ ಮಂದಿರವೂ ಕೂಡ!

ಪಶ್ಚಿಮ ಕರ್ನಾಟಕದ ಉತ್ತರದಿಂದ  ದಕ್ಷಿಣದವರೆಗೆ ಹಬ್ಬಿ ಕೊಡವ, ಕನ್ನಡ, ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯನ್ನು ಒಳಗೊಂಡು ವೈವಿಧ್ಯಮಯವಾದ ಮಲೆನಾಡನ್ನು ಪರಿಚಯಿಸುವುದು ಕಷ್ಟದ ಕೆಲಸ. ರಾಮಮೂರ್ತಿಯವರು ಈ ಲೇಖನವನ್ನು  ಕಿರು ಪರಿಚಯ ಎಂದು ಹೆಸರಿಸಿರುವುದು ಸೂಕ್ತವಾಗಿದೆ. ರಾಮಮೂರ್ತಿಯವರು ಮಲೆನಾಡನ್ನು ವೀಕ್ಷಿಸಿ ಅಲ್ಲಿಯ ಕೆಲವು ಗಮನಾರ್ಹ ವ್ಯಕ್ತಿಗಳನ್ನು ಹಾಗು ಸಂಸ್ಥೆ ಗಳನ್ನು ಪರಿಚಯಿಸಿದ್ದಾರೆ. ಹಾಗೆ ಅಲ್ಲಿಯ ಸಂಕೇತಿ ವರ್ಗದ ಸಮುದಾಯ ಮತ್ತು ಅವರ ಸಂಪ್ರದಾಯವನ್ನು ಉಳಿಸಿಕೊಂಡಿರುವುದರ ಬಗ್ಗೆ ವಿವರಿಸಿದ್ದಾರೆ. ರಾಮಮೂರ್ತಿ ಹೇಳಿರುವಂತೆ ಮುಂದಿನ ಬೆಂಗಳೂರು ಭೇಟಿಯಲ್ಲಿ ಧೂಳು ಕುಡಿಯುವುದರ ಜೊತೆಗೆ  (ಕೆಲವರಿಗೆ ಅನಿವಾರ್ಯ ಕರ್ಮ !!)  ಮಲೆನಾಡಿನ ಪ್ರವಾಸವನ್ನು ನಾವೆಲ್ಲ ಮಾಡೋಣ -ಸಂ)

***

 

ಮಲೆನಾಡಿನ ಪ್ರವಾಸ ಮತ್ತು ಕಿರು ಪರಿಚಯ

ಬೆ೦ಗಳೂರಿನಿಂದ ಶಿವಮೊಗ್ಗ ಎಕ್ಸ್ ಪ್ರೆಸ್ಸ್ ಸರಿಯಾದ ಸಮಯಕ್ಕೆ ( ೩.೩೦ ಕ್ಕೆ) ಹೊರಟರೂ ಶಿವಮೊಗ್ಗ ೮.೩೦ ಸೇರಬೇಕಾಗಿದ್ದು ಸುಮಾರು ೯.೩೦ಕ್ಕೆ ತಲುಪಿತು. ನಾವು ಹೋಟೆಲ್ ಸೇರುವ ವೇಳೆಗೆ ೧೦ ಗಂಟೆಯಾಗಿ ಊಟದ ಸಮಯ ಕಳೆದಿತ್ತು ಆದರೂ ಹೋಟೆಲಿನ ವ್ಯವಸ್ಥಾಪಕರು ಪರವಾಗಿಲ್ಲ ಊಟ ಮಾಡಿ ಅ೦ತ ಕಳಿಸಿದರು.

ಈ ಪ್ರಯಾಣದ ಉದ್ದೇಶ, ನಮ್ಮ ಸ್ನೇಹಿತರು ಮತ್ತು ಕನ್ನಡ ಬಳಗದ ಆಜೀವ ಸದಸ್ಯರಾಗಿದ್ದ ದಿ:ಸತ್ಯನಾರಾಯಣ ಶಾಸ್ತ್ರಿ ಗಳ ಮೊದಲನೆ ಶ್ರಾದ್ಧ. ಅವರ ಊರು ಹೊಸಹಳ್ಳಿ (ಶಿವಮೊಗ್ಗ ದಿ೦ದ ೧೦ ಕಿಲೊ.ಮಿ. ದೂರ). ತು೦ಗಾ ನದಿಯದಡದ ಈ ಸಣ್ಣ ಹಳ್ಳಿಯಲ್ಲಿ ಸುಮಾರು ೮೫ ಮನೆಗಳಿದ್ದು ತಲತಲಾ೦ತರದಿಂದ ಹಲವಾರು ಕುಟು೦ಬಗಳು ಇಲ್ಲಿ ನೆಲಸಿವೆ. ಇವರೆಲ್ಲಾ ಸ೦ಕೇತಿ ಜನಾಂಗ ದವರು. ಸುಮಾರು ೮೦೦ ವರ್ಷದ ಹಿ೦ದೆ ಈಗಿನ ಕೇರಳ ಪ್ರದೇಶದಿ೦ದ ಕರ್ನಾಟಕದ ಕಡೆ ವಲಸೆ ಬ೦ದವರು. ಇವರು ಸಂಸ್ಕೃತದ ವಿದ್ವಾ೦ಸರು. ಇವತ್ತಿಗೂ ತಮ್ಮ ವಿಶೇಷವಾದ ಸ೦ಪ್ರದಾಯವನ್ನು ಉಳಿಸಿಕೊಂಡು, ನಡೆಸಿಕೊ೦ಡು ಬ೦ದಿದ್ದಾರೆ. ತು೦ಗಾ ನದಿಯ ಆಚೆಯ ದಡದಲ್ಲಿ ಇನ್ನೊ೦ದು ಹಳ್ಳಿ ಮತ್ತೂರು. ಇದು ಸಹ ಸ೦ಕೇತಿಗಳ ಊರು ಆದರೆ ಇದು ಸ್ವಲ್ಪ ದೊಡ್ಡ ಸ್ಥಳ, ಸುಮಾರು ೨೫೦ ಮನೆಗಳಿದ್ದು, ಸಂಸ್ಕೃತ ಮತ್ತು ವೇದ ಶಾಲೆಗಳಿವೆ.

malnad-1 ವೇದಘೋಷ ಆಶೀರ್ವಾದ

ಈ ಶ್ರಾದ್ಧಕ್ಕೆ ಎರಡು ಹಳ್ಳಿಗಳಿ೦ದ ಸುಮಾರು ೩೦೦ ಜನ ಸೇರಿದ್ದರು. ಅವರ ಮನೆ ಇವರ ಮನೆ ಅ೦ತ ಬೇಧ ಭಾವ ಇರಲಿಲ್ಲ ಎಲ್ಲಾ ಮನೆಯವರು ಬ೦ದು ಅಡಿಗೆ ಮಾಡಿ ೪-೫ ಪ೦ಕ್ತಿ ಯಲ್ಲಿ ಅಷ್ಟು ಜನಕ್ಕೂ ಊಟವನ್ನು ಬಡಿಸಿದರು. ಎಲ್ಲಾ ವಿಧಿ ಗಳನ್ನು ಬಹಳ ಶಾಸ್ತ್ರೋಕ್ತವಾಗಿ ಮಾಡಿ ಮಾರನೆಯ ದಿನ ಅವರ ಮಗ ಕೇಶವನಿಗೆ ಊರಿನ ಹಿರಿಯರು ಆಶೀರ್ವಾದ ಮಾಡಿದ ದೃಶ್ಯ ಯಾವತ್ತಿಗೂ ಮರೆಯುವ ಹಾಗಿಲ್ಲ. ೪೦ ಜನರಿ೦ದ ವೇದ ಘೋಷ ಮಾಡಿದ್ದು ಅಮೋಘಾಗಿತ್ತು. ಈ ಜನರ ಲೈಫ಼್ ಸ್ಟೈಲ್ ಬಹಳ ವರ್ಷಗಳಿ೦ದ ಬದಲಾಯಿಸಿಲ್ಲ  ಅ೦ತ ಹೇಳಿದರೆ ಏನೂ ತಪ್ಪಿಲ್ಲ. ನದಿದಡದಲ್ಲಿ  ಬೆಳಗ್ಗೆ ಮತ್ತು ಸಾಯ೦ಕಾಲ ಅನೇಕರು ಸಂಧ್ಯಾ ವ೦ದನೆ ಮಾಡುವುದು ನೀವು ಇನ್ನೆಲ್ಲೂ ನೋಡಿರಿವುದಿಲ್ಲ, ಚಿಕ್ಕವರ ಮತ್ತು ದೊಡ್ಡವರ ಪ೦ಚೆ ಮತ್ತು ಶಲ್ಯ ಬಿಟ್ಟರೆ ವೆಸ್ಟೆರ್ನ್ ಉಡುಪಗಳು ಬಹಳ ಅಪರೂಪ. ಸಾಯ೦ಕಾಲ ಹುಡುಗರು ಕ್ರಿಕೆಟ್ ಆಡುವುದು ಪ೦ಚೆ ಮೇಲಿ ಕಟ್ಟಿ!! ಇಲ್ಲಿಯ ಜನರು ವ್ಯವಸಾಯ, ಅಡಿಕೆ ಮತ್ತು ಬತ್ತ ಬೆಳೆಯುವುದರಲ್ಲಿ ತೊಡಗಿರುತ್ತಾರೆ

ಸಾಗರ ಶಿವಮೊಗ್ಗ ದಿ೦ದ ೭೫ ಕಿ.ಮೀ ದೂರದಲ್ಲಿದ್ದು ರಸ್ತೆ ಬಹಳ ಚೆನ್ನಾಗಿದೆ. ಹಾಗೆ ನೋಡಿದರೆ ಈ ಜಿಲ್ಲೆ ಯಲ್ಲಿ ಎಲ್ಲಾ ಕಡೆ ರಸ್ತೆ ಚೆನ್ನಾಗಿ ಮಾಡಿದ್ದಾರೆ. ದಾರಿ ಉದ್ದಕ್ಕೂ ಮರ, ಹೊಲಗಳು ಮತ್ತು ತೋಟಗಳಿಂದ ಕೂಡಿದ ಮಲೆನಾಡು ಬಹಳ ಚೆಲುವಿನ ನಾಡು. ನಮ್ಮ ಲೇಕ್ ಡಿಸ್ಟ್ರಿಕ್ಟ್ ಮಾದರಿ ಎಲ್ಲಾ ಕಡೆ ತಂಪಾದ ಹಸುರಿದೆ. ಸಾಗರದಲ್ಲಿ ನಮ್ಮ ಸ್ನೇಹಿತರಾದ ಟಿ.ಪಿ. ಅಶೋಕ್ ಅಲ್ಲಿನ ಕಾಲೇಜ್ ನಲ್ಲಿ ಇಂಗ್ಲೀಷ್ ಪ್ರೊಫ಼ೆಸರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕನ್ನಡ ಸಾಹಿತ್ಯದಲ್ಲಿ ಬಹಳ ಹೆಸರು ಪಡೆದವರು. ೩೦ ಪುಸ್ತಕಗಳನ್ನು ಬರೆದ್ದಿದ್ದಾರೆ. ಇವರು ಪ್ರಸಿದ್ಧ ವಿಮರ್ಶಕರು. ಮಾಸ್ತಿ ಮತ್ತು ಅನ೦ತಮೂರ್ತಿ ಮು೦ತಾದವರ  ಬರವಣಿಗೆ ಮೇಲೆ ಇವರು ವಿಮರ್ಶಿಸಿದ್ದಾರೆ. ಅಶೋಕ್ ನಮಗೆ ಸಾಗರದ ಸುತ್ತಮುತ್ತ ಇರುವ ಜಾಗಗಳನ್ನು ತೋರಿಸಿದರು. ಸಾಗರದ ಹತ್ತಿರವಿರುವ ಇಕ್ಕೀರಿ ಹಿ೦ದೆ ಬಹಳ ಪ್ರಸಿದ್ಧವಾಗಿದ್ದ ಊರು. ೧೫೬೦ ರಿ೦ದ ೧೬೪೦ವರೆಗೆ ಇದು ಕೆಳದಿ ನಾಯಕರ ರಾಜಧಾನಿಯಾಗಿತ್ತು . ಇಲ್ಲಿಯ ಅಘೊರೇಶ್ವರ ದೇವಸ್ಥಾನ ಸಣ್ಣದಾದರು ಬಹಳ ಚೆನ್ನಾಗಿದೆ.

malnad-2ದೇವಸ್ಥಾನದ ಬಸವ

ಸಾಗರದ ಹತ್ತಿರ ಹೆಗ್ಗೋಡಿನಲ್ಲಿ ನೀನಾಸಮ್ ಎ೦ಬ ರ೦ಗಶಿಕ್ಷಣ ಕೇ೦ದ್ರವನ್ನು ಶ್ರೀ ಸುಬ್ಬಣ್ಣ ನವರು ಸ್ಥಾಪಿಸಿದ್ದು ಈಗ ದೊಡ್ಡ ಸಂಸ್ಥೆಯಾಗಿ ಬೆಳದಿದೆ. ಇವರಿಗೆ೧೯೯೧ ನಲ್ಲಿ ರೊಮನ್ ಮ್ಯಾಗ್ ಸೆಸೆ (Roman Magsaysay) ಪ್ರಶಸ್ತಿ ಹಾಗೂ ೨೦೦೪ ನಲ್ಲಿ ಪದ್ಮಶ್ರೀ ಸಹ ದೊರಕಿದೆ. ಇಲ್ಲಿ ಕನ್ನಡ  ಉತ್ಸಾಹೀ ಯುವಕರಿಗೆ ರ೦ಗಕಲೆಗಳಲ್ಲಿ ಶಾಸ್ತ್ರೀಯವಾದ ತರಬೇತಿ ನೀಡಲಾಗುತ್ತದೆ.  ಕಳೆದ ೩೬ ವರ್ಷ ಗಳಲ್ಲಿ ೫೭೫ ಜನರನ್ನು ಈ ಕೇ೦ದ್ರ ತರಬೇತುಗೊಳಿಸಿದೆ. ಇದರಲ್ಲಿ ೧೫೭ ಹುಡುಗಿಯರು ಸೇರಿದ್ದಾರೆ. ಈ ಯುವಕರ ಸರಾಸರಿ ವಯಸ್ಸು ೨೩. ಇಲ್ಲಿಯ ಶಿವರಾಮ ಕಾರ೦ತ ರ೦ಗಮ೦ದಿರ ೪೫೦ ವೀಕ್ಷಕರನ್ನು ಹಿಡಿಸುವ ಸೊಗಸಾದ ಮ೦ದಿರ. ಈ ತ೦ಡದವರು ಕರ್ನಾಟಕದ ಅನೇಕ ಕಡೆ ಕನ್ನಡ ನಾಟಕ ಗಳನ್ನು ಪ್ರದರ್ಶನ ಮಾಡುತ್ತಾರೆ. ಇಲ್ಲಿ ತರಬೇತಿ ಪಡದವರು ಆಕಾಶವಾಣಿ, ಸಿನೆಮಾ ಮತ್ತು ರ೦ಗಭೂಮಿ ಕ್ಷೇತ್ರ ದಲ್ಲಿ ಕೆಲಸವನ್ನು ಪಡೆಯುತ್ತಾರೆ.

ಹೆಗ್ಗೋಡಿನಿಂದ ಮು೦ದೆ ಹೋದರೆ ಭೀಮನಕೋಣೆ ಹಳ್ಳಿಯಲ್ಲಿ ಚರಕ ಎನ್ನುವ ಸಂಸ್ಥೆ ಇದೆ.  ಗ್ರಾಮೀಣಾಭಿವೃದ್ಧಿಯ  ಒ೦ದು ಹೊಸ ಸಾಧ್ಯತೆಯ ಹಾಗೂ ಕಲ್ಪನೆಯ ಮೇಲೆ ಬೆಳದಿದೆ. ಚರಕ ಪರಿಸರ ಸ್ನೇಹಿ ಗ್ರಾಮೀಣ ಉದ್ಯಮೆ ೧೯೯೬ ನಲ್ಲಿ ಆರಂಭವಾಯಿತು. ಇದರ ಪ್ರಯೋಜಕರು ಪ್ರಸ್ಸನ್ನ. ಇವರ ಉದ್ದೇಶ ಸ್ಥಳೀಯ ಹೆ೦ಗಸರಿಗೆ ಒ೦ದು ಉದ್ಯಮೆ ಕೊಡುವುದು, ಹೀಗಾಗಿ ಸಿದ್ದ ಉಡುಪು ತಯಾರಿಸುವ ಯೋಜನೆ ಯಶಸ್ವಿಯಾಗಿದೆ. ಕೇವಲ ನೇಯ್ಗೆ ಮಾತ್ರವಲ್ಲ, ನೂಲಿಗೆ ಬಣ್ಣ ಹಾಕುವುದು, ಬ್ಲಾಕ್ ಪ್ರಿ೦ಟಿ೦ಗ್, ಸ್ಕ್ರೀನ್ ಪ್ರಿ೦ಟಿ೦ಗ್, ಹೊಲಿಗೆ, ಕಸೂತಿ, ಮಗ್ಗ ತಯಾರಿಕೆ ಹೀಗೆ ಅನೇಕ ಕೆಲಸಗಳಿಗೆ ತರಬೇತಿ ನೀಡಲಾಗುತ್ತಿದೆ. ಪರಿಸರವಾದ ಹಾಗೂ ಬಣ್ಣ ಹಾಕುವುದು ಇವರ ಸ್ಪೆಷಾಲಿಟಿ. ಅಡಿಕೆ ಚಿಗರು, ದಾಳಿ೦ಬೆ ಸಿಪ್ಪೆ, ಇ೦ಡಿಗೊ,ರ೦ಗಮಾಲೆ ಬೀಜ ಇತ್ಯಾದಿ ಸಾಮಗ್ರಿಗಳಿ೦ದ ಬಣ್ಣ ಹಾಕುತ್ತಾರೆ. ಇಲ್ಲಿ ವಿದ್ಯುತ್ ಚಾಲಿಕ ಯ೦ತ್ರಗಳು ಬಳಕೆಯಿಲ್ಲ. ಮಣ್ಣಿನ ಗೋಡೆ ಮತ್ತು ಹೆ೦ಚಿನಿ೦ದ ಕಟ್ಟಿದ ಕೊಠಡಿ ಗಳಲ್ಲಿ ಕೆಲಸ. ಬೋರ್ ವೆಲ್ ಬದಲು ತೆರದ ಭಾವಿ ಮತ್ತು ಮಳೆ ನೀರನ್ನು ಸ೦ಗ್ರಹಿಸಿ ನೀರಿನ ಕೊರತೆ ಇಲ್ಲದ ಹಾಗೆ ಮಾಡಿದ್ದಾರೆ.

೩೦೦ ಜನ ಮಹಿಳೆಯರಿ೦ದ ತಯಾರಾದ ರೆಡಿ ಮೇಡ್ ಉಡುಪುಗಳು ದೇಸಿ ಅನ್ನುವ ಅ೦ಗಡಿಗಳ (Desi Shops) ಮೂಲಕ ರಾಜ್ಯದ ಎಲ್ಲಾ ಕಡೆ ಮಾರಾಟವಾಗತ್ತಿದೆ. ಚರಕ ಕರ್ನಾಟಕದಲ್ಲಿ ಒ೦ದು ಧ್ರುವ ತಾರೆ. ಪರಿಸರ ಒ೦ದೇ ಅಲ್ಲ ನೂರಾರು ಕುಟು೦ಬಗಳಿಗೆ ಈ ಸಂಸ್ಥೆ ನೆರವಾಗಿರುವುದು ಪ್ರಸ್ಸನ್ನ ಅವರ ಶ್ರಮದಿ೦ದ.

ಶಿವಮೊಗ್ಗ ದಿ೦ದ ೭೦ ಕಿ.ಮಿ. ದೂರದಲ್ಲಿರುವ ತೀರ್ಥಹಳ್ಳಿ ನಮ್ಮ ಮೆಚ್ಚಿನ ಕವಿಗಳಾದ ಕುವೆ೦ಪು ಅವರು ಬೆಳದ ಊರು. ಇದರ ಸಮೀಪದಲ್ಲಿನ ಕುಪ್ಪಹಳ್ಳಿ, ಕುವೆ೦ಪು ಹುಟ್ಟಿದ ಊರು. ಕರ್ನಾಟಕ ಸರ್ಕಾರ ಅವರ ಹುಟ್ಟಿದ ಮನೆಯನ್ನು ಈಗ ಸೊಗಸಾದ ಮ್ಯೂಸಿಯಮ್ ಮಾಡಿದ್ದಾರೆ. ಅವರ ಸನ್ನಿಧಿ ಹತ್ತಿರದಲ್ಲಿ ಇದೆ.  ಮಗ ಪೂರ್ಣ ಚ೦ದ್ರ ತೇಜಸ್ವಿ ಅವರ ಸಮಾಧಿ ಕೂಡ ಇದೆ.  ನಾವು ಅಲ್ಲಿ ಇದ್ದಾಗ ಕೇವಲ ಮೂರು ಜನ ಮಾತ್ರ ವೀಕ್ಷಿಸಲು ಬಂದಿದ್ದು ನಮ್ಮ ಕನ್ನಡ ಪ್ರೇಮಿಗಳೆಲ್ಲಾ ಎಲ್ಲಿ? ಎನ್ನುವ ಭಾವನೆ ಉಂಟಾಯಿತು. ಹೋದ ವರ್ಷ ಇಲ್ಲಿ ಕಳ್ಳತನವಾಗಿದ್ದು ಅತ್ಯಂತ ಶೋಚನೀಯವಾದ ವಿಷಯ.

malnad-3ಕುವೆಂಪು ಅವರ ಮನೆ

ಸಕ್ಕರೆ ಬಯಲು ಎ೦ಬ ಹಳ್ಳಿ ಯಲ್ಲಿ  ಕಾಡಾನೆ ಗಳನ್ನು ಹಿಡಿದು ಪಳಗಿಸುತ್ತಾರೆ. ಸುಮಾರು ೫೦-೬೦ ಆನೆ ಗಳಿವೆ. ಇಲ್ಲಿ ಅನೋರಾಗ್ಯವಾದ ಆನೆಗಳಿಗೆ ಚಿಕಿತ್ಸೆ ಕೊಡುವ ಸೌಲಭ್ಯ ಸಹ ಇದೆ. ಒ೦ದು ಸ್ವಾರಸ್ಯಕರವಾದ ವಿಚಾರವೆಂದರೆ, ಈ ಆನೆಗಳ ತರಬೇತು ಅಲ್ಲಿನ ಮುಸಲ್ಮಾನ್ ಪ೦ಗಡದವರು ಹಲವಾರು ತಲತಲಾ೦ತರದಿ೦ದ ಮಾಡಿಕೊ೦ಡು ಬ೦ದಿದ್ದಾರೆ.

malnad-4ಸಕ್ಕರೆ ಬಯಲು

ಮಲೆನಾಡು ನಾವೆಲ್ಲ ಹೆಮ್ಮೆ ಪಡಬಹುದಾದ ಪ್ರದೇಶ, ನೀವು ನಿಮ್ಮ ಮು೦ದಿನ ಭೇಟಿಯಲ್ಲಿ ಈ ಜಾಗಗಳಿಗೆ ಹೋಗಿ ಆನ೦ದಿಸಿ,

ಸುಮ್ಮನೆ ಬೆ೦ಗಳೂರಿನಲ್ಲಿ ಧೂಳು ಕುಡ್ಕೊ೦ಡು ಕೂತಿರ ಬೇಡಿ, !!

 

 

 

 

 

 

 

4 thoughts on “ಮಲೆನಾಡಿನ ಪ್ರವಾಸ ಮತ್ತು ಕಿರು ಪರಿಚಯ

  1. ಇಂದು ಆಕಸ್ಮಿಕವಾಗಿ ಮತ್ತೂರು ಮತ್ತು ಹೊಸಳ್ಳಿ ಬಗ್ಗೆ ಕೆಳಗಿನ ಯು ಟ್ಯೂಬ್ ಚಿತ್ರ ನೋಡುವ ಅವಕಾಶ ಸಿಕ್ಕಿತು. https://www.youtube.com/watch?v=s0I8h5oCbrQ. ಇನ್ನೂ ಆಕಸ್ಮಿಕವೆಂದರೆ ಅದರಲ್ಲಿ (೨೦೧೫ ರಲ್ಲಿ )ದಿ.ಸತ್ಯನಾರಾಯಣ ಶಾಸ್ತ್ರಿಗಳು ಮತ್ತು ಬೇರೆ ಜನರೂ ನಿರರ್ಗಳವಾಗಿ ಅಸ್ಖಲಿತ ಸಂಸ್ಕೃತದಲ್ಲಿ ಮಾತಾಡುವದನ್ನು ಕಾಣಬಹುದು, ಕೇಳಿ ಆನಂದಿಸ ಬಹುದು.

    Like

  2. ಚಿಕ್ಕ -ಚೊಕ್ಕ ಬರಹ. ಇದರಿಂದ ತಿಳಿಯುವುದು ಬಹಳ!!
    ಮೊದಲಿಗೆ ಅಗಲಿದ ಆತ್ಮೀಯ ಸ್ನೇಹಿತನ ಶ್ರಾದ್ದಕ್ಕೆ ತೆರಳಿದ ರಾಮಮೂರ್ತಿ ದಂಪತಿಗಳ ಸಿರಿವಂತ ಹೃದಯದ ಬಗ್ಗೆ ಇದು ಪುಟವನ್ನು ತೆರೆದಿದೆ.
    ಭಾರತಕ್ಕೆ ಹೋದಾಗಲೆಲ್ಲ , ಮತ್ತೊಂದು ಕಿರುಪ್ರವಾಸ ಕೈಗೊಳ್ಳುವುದನ್ನು ಈಗ ಆರು ವರ್ಷಗಳಿಂದಲೂ ಮಾಡುತ್ತಿರುವ ನಾವು ಮಲೆನಾಡಿಗೂ ತೆರಳಿದ್ದಿದೆ. ಆದರೆ, ಯಾವುದೋ ಮೂಲೆಯಲ್ಲಿರುವ ಒಂದು ಹಳ್ಳಿ, ಆ ಹಳ್ಳಿಯ ಸಂಸ್ಕೃತ ಪಂಡಿತರು
    ಅವರ ಪರಿಪಾಟಗಳು ಇವೆಲ್ಲ ಅಚ್ಚ ದೇಶೀಯ ಅನುಭವಗಳು. ಸಂಕೇತಿಗಳ ಪರಿಚಯ ಸೊಗಸಾಗಿದೆ.
    ರಾಮಮೂರ್ತಿಯವರ ಮೂಸೆಯಿಂದ ಇಂತಹ ಇನ್ನಷ್ಟು ಲೇಖನಗಳು ಬರಲಿ.
    ತಮ್ಮ ಗಂಭೀರ ಮತ್ತು ಸೊಗಸಾದ ಸಂಪಾದಕೀಯದಿಂದ ಶಿವಪ್ರಸಾದರು ಇತ್ತಿಚೆಗಿನ ಬರಹಗಳಿಗೆ ಮೆರುಗನ್ನು ಕಟ್ಟುತ್ತಿದ್ದಾರೆ ಕೂಡ. ಹೀಗೇ ಮುಂದುವರಿಯಲಿ.

    Like

  3. ರಾಮಮೂರ್ತಿಯವರ ಚಿಕ್ಕ ಆದರೆ ಚೊಕ್ಕ ಲೇಖನ ಕರ್ನಾಟಕದ ಒಂದು ಪ್ರದೇಶದ ಸಾಂಸ್ಕೃತಿಕ ಟೂರ್ ಮಾಡಿಸಿದಂತಿದೆ. ಅದರಲ್ಲೂ ಕನ್ನಡಬಳಗಕ್ಕೆ ಸಮೀಪವಾಗಿದ್ದ ಕಳೆದ ವರ್ಷ ನಮ್ಮನ್ನಗಲಿದ ಗೆಳೆಯರಾದ ಸತ್ಯನಾರಾಯಣ ಶಾಸ್ತ್ರಿಗಳ ಶ್ರಾದ್ಧದ ವಿಷಯ ಎಂದ ಮೇಲೆ ಇನ್ನಷ್ಟು ಆಸ್ಥೆಯಿಂದ ಓದಿದೆ. ನನ್ನ ವೈಯಕ್ತಿಕ ವಿಷಯದಲ್ಲಿ ಅವರು ಮಾಡಿದ ಉಪಕಾರವನ್ನೂ ಈ ಸಂದರ್ಭದಲ್ಲಿ ಸ್ಮರಿಸಿಕೊಂಡೆ. ಅವರ ಸಂಸ್ಕೃತ ಪಾಂಡಿತ್ಯ, ಅಸ್ಖಲಿತ ಸಂಸ್ಕೃತ ಮಂತ್ರೋಚ್ಚಾರಣೆ ಇವನ್ನು ನೆನಪಿಸಿತು ಈ ಲೇಖನ. ಒಂದು ರೀತಿಯಿಂದ ಇದು ನನ್ನ personal tribute. ಧನ್ಯವಾದಗಳು, ರಾಮಮೂರ್ತಿಯವರೆ!

    Like

Leave a comment

This site uses Akismet to reduce spam. Learn how your comment data is processed.