ಹಂಪೆ ಪ್ರವಾಸ- ಭಾಗ ೩

(ಪ್ರವಾಸ ಸಾಹಿತ್ಯ / ಪ್ರವಾಸ ಕಥನ ಹೇಗಿರಬೇಕು ಎಂಬ ಪ್ರಶ್ನೆ ಬಂದಾಗ ಅದು ದಿನಚರಿ ಯಾಗಿರಬೇಕೇ?, Personal anecdote ಗಳಿಂದ ಕೂಡಿರಬೇಕೇ?, ಮಾಹಿತಿಗಳಿಂದ ತುಂಬಿರಬೇಕೇ?  ಅಥವಾ ಒಂದು virtual reality  ಅನುಭವ  ತರುವಂತಿರಬೇಕೇ ? ಹೀಗೆ ಅನೇಕ ಆಲೋಚನೆಗಳು, ಅಭಿಪ್ರಾಯಗಳು ಮೂಡುವುದುಂಟು. ಹಾಗೆ ನೋಡಿದರೆ ಪ್ರವಾಸ ಸಾಹಿತ್ಯ ಬಹಳ ಪುರಾತನವಾದದ್ದು. ಹಿಂದೆ ಪ್ರವಾಸ ಕಥನಗಳು ದಿನಚರಿಯಾಗಿ ಮೊದಲುಗೊಂಡು ಚೀನಾ ದೇಶದ ಸಾಂಗ್ ರಾಜವಂಶದಲ್ಲಿ  ವೃದ್ಧಿಗೊಂಡಿತು. ಹಾಗೆ ೧೮ನೇ ಶತಮಾನದಲ್ಲಿ Captain James cook Diaries (1874)  ಪ್ರಸಿದ್ಧವಾಯಿತು. ಈ ಹಂತದವರೆಗೆ ಪ್ರವಾಸ ಕಥನ ಒಂದು ದಿನಚರಿಯ ಸ್ವರೂಪವನ್ನು ಪಡೆದುಕೊಂಡಿತ್ತು. ಮುಂದೆ ಪ್ರವಾಸ ಸಾಹಿತ್ಯ ಮೇಲೆ ಪ್ರಸ್ತಾಪಿಸಿದ ಹಲವು ಅಂಶಗಳನ್ನು ಒಳಗೊಂಡು ಓದುಗರಿಗೆ ಕುಳಿತಲ್ಲೇ ಪ್ರಪಂಚವನ್ನು ಪರಿಚಯಿಸುವ ಒಂದು ಹಂತವನ್ನು ತಲುಪಿದೆ. ಲೇಖಕರು ತಮ್ಮದೇ ಆದ ಅನುಭವಗಳನ್ನು, ಲಘುಹಾಸ್ಯವನ್ನು ಹಾಗು ವಿವರಣೆಗಳನ್ನು ತರುವುದರ ಮೂಲಕ ಪ್ರವಾಸ ಕಥನ ಇನ್ನು ಸ್ವಾರಸ್ಯಕರವಾಗುತ್ತದೆ ಎಂಬುದಕ್ಕೆ ಉಮಾ ಅವರ ಹಂಪೆ ಪ್ರವಾಸ ಕಥನ  ಉತ್ತಮ ನಿದರ್ಶನ.

ಲ್ಯಾಟಿನ್ ತತ್ವ ಸಿದ್ಧಾಂತಿ ಸಂತ ಆಗಸ್ಟಿನ್ ಆಫ್ ಹಿಪ್ಪೋ ಪ್ರವಾಸದ ಬಗ್ಗೆ ಹೇಗೆ ಹೇಳಿದ್ದಾನೆ;

 ‘The World is a book and those who do not travel, read only a page’

ಉಮಾ ಅವರು ಪ್ರವಾಸ ಪ್ರಿಯರು. ಅವರ ಮತ್ತು ಅವರ ಪತಿಯ ವೃತ್ತಿಯ ಬದ್ಧತೆಗಳಿಂದ ಹಲವಾರು ದೇಶಗಳಿಲ್ಲಿ ನೆಲಸಿ ಹಾಗೆ ಪ್ರವಾಸ ಕೈಗೊಂಡಿರುವುದಲ್ಲದೆ ಅವರ ಅನುಭವಗಳನ್ನು ಇತರರೊಡನೆ ಹಂಚಿ ಕೊಂಡಿರುವುದು ಶ್ಲಾಘನೀಯ. ಮೇಲಿನ ಸಂತರ ಹೇಳಿಕೆಯ ಹಿನ್ನೆಲೆಯಲ್ಲಿ ಉಮಾ ಅವರು  ತಮ್ಮ ಬದುಕಿನ ಪುಸ್ತಕದಲ್ಲಿ ಹಲವಾರು ಪುಟಗಳನ್ನು ತಿರುವಿದ್ದಾರೆ. – ಸಂ)

***

 

hampi-3

” ಹಂಪೆ ಇದುವೆ ನೃತ್ಯಶಿಲ್ಪ ಕಲೆಯ ಬೀಡಿದು” –  – ಉಮಾ ವೆಂಕಟೇಶ್ ಅವರ ಪ್ರವಾಸಕಥನ

ಮೊದಲ ದಿನದ ಅಡ್ಡಾಟ ಅಷ್ಟೇನೂ ನಮಗೆ ಆಯಾಸವಾಗಿರಲಿಲ್ಲ. ಹಾಗಾಗಿ ಎರಡನೆಯ ದಿನ ಬೆಳಿಗ್ಗೆ ಬೇಗನೆ ಎದ್ದು ನಾವೆಲ್ಲಾ ತಯಾರಾಗಿ, ಹೋಟೆಲಿನ ರೆಸ್ಟೋರೆಂಟಿನಲ್ಲಿ ಗಡದ್ದಾಗಿ ಬೆಳಗಿನ ತಿಂಡಿಯನ್ನೂ ತಿಂದು, ಹಂಪೆಯನ್ನು ನೋಡಲು ಸಿದ್ಧವಾಗಿದ್ದೆವು. ಸರಿ ನಮ್ಮ ಕಾರಿನ ಡ್ರೈವರ್ ತನ್ನ ಜೊತೆಯಲ್ಲಿ ಒಬ್ಬ ಗೈಡನ್ನೂ ಹಿಡಿದುಕೊಂಡೇ ಬಂದಿದ್ದ. ನಮಗೆ ಇನ್ನೂ ಕೆಲಸ ಸುಲಭವಾಯಿತು. ಸರಿ ವಾಹನವನ್ನೇರಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪೆಯನ್ನು ನೋಡಲು ಹೊರಟೆವು.

 

“ಇಬ್ಬರು ಅಕ್ಕ-ತಂಗಿಯರು ಹಂಪೆ ನೋಡಲು ಬಂದಿದ್ದರಂತೆ. ಬಿಸಿಲಲ್ಲಿ ಅಡ್ಡಾಡಿ ಸುಸ್ತಾದಾಗ ಬೇಸತ್ತು, ಅಯ್ಯೋ ಈ ಹಂಪೆಗೆ ಬರುವ ಬದಲು, ಕೊಂಪೆಗೆ ಹೋಗಿದ್ದರೆ ಮೇಲಾಗಿತ್ತು ಎಂದರಂತೆ”, ತಕ್ಷಣವೇ ಇಬ್ಬರೂ ದೊಡ್ಡ ಕಲ್ಲುಬಂಡೆಗಳಾಗಿ ನಿಂತುಬಿಟ್ರು ಅಂತ ನಮ್ಮ ಜೊತೆಯ ಗೈಡ್ ಹೇಳಿದ. ಅದೇ ಜೋಡಿ ಕಲ್ಲುಗಳನ್ನೇ ಇವತ್ತು ಅಕ್ಕ-ತಂಗಿಯರ ಕಲ್ಲು ಅಂತ ಹೇಳ್ತಾರೆ ಎಂದು ತನ್ನ ಕಥೆಯನ್ನು ಮುಂದುವರೆಸಿದ್ದ. ನನ್ನ ಮಕ್ಕಳಿಗೆ ಇದು ಬಹಳ ತಮಾಷೆಯಾಗಿ ಕಂಡುಬಂತು. ಇಬ್ಬರೂ ನಗುವನ್ನು ಮರೆಮಾಚುವ ಪ್ರಯತ್ನ ನಡೆಸಿದ್ದರು. ಈ ೨೧ನೆಯ ಶತಮಾನದಲ್ಲಿ, ಈ ಕಥೆ ಕೇಳಿದಾಗ ನಗು ಬಂದರೆ ಆಶ್ಚರ್ಯವೇನಿಲ್ಲ. ಈ ಪ್ರದೇಶವೇ ಕಲ್ಲುಬಂಡೆಗಳಿಂದ ತುಂಬಿದ ಗುಡ್ಡುಗಾಡಿನ ಪ್ರದೇಶ. ಅಲ್ಲಿರುವ ಜೋಡಿಕಲ್ಲುಗಳಿಗೆ ನಮ್ಮವರು ಬಹಳ ಚಾಕಚಕ್ಯತೆಯಿಂದ ಕಟ್ಟಿರುವ ಕಥೆ ಕೇಳಿದಾಗ, ನಮ್ಮಲ್ಲಿರುವ ಅಂತಹುದೇ ಅನೇಕ ಕಥೆಗಳು ಜ್ಞಾಪಕಕ್ಕೆ ಬರುತ್ತವೆ. ಹಂಪೆಯನ್ನು ಸಮೀಪಿಸುತ್ತಿದ್ದಂತೆ ನನ್ನ ಮೈಯಿನ ರೋಮಗಳು ನಿಮಿರಿ ನಿಂತಿದ್ದವು.

 

ಕಳೆದ ೨೫ ವರ್ಷಗಳಲ್ಲಿ, ರೋಮಿನಲ್ಲಿರುವ ಅದ್ಭುತವಾದ ಕಟ್ಟಡಗಳು, ಶಿಲ್ಪಕಲೆಗಳನ್ನು ಕಂಡ ನನಗೆ, ನಮ್ಮದೇ ದೇಶದ, ಸಂಸ್ಕೃತಿಯ ಒಂದು ರಾಜಧಾನಿಯನ್ನು ಕಂಡಾಗ, ಇಂತಹ ಭಾವನೆ ಉದ್ಭವಿಸುವುದು ಸಹಜವೇ! ವಿರೂಪಾಕ್ಷ ದೇವಾಲಯದ ಎತ್ತರವಾದ ಗೋಪುರವನ್ನು ದೂರದಿಂದಲೇ ಕಂಡಾಗ, ಹಳೆಯ ಕನ್ನಡ ಚಲನಚಿತ್ರ ಶ್ರೀ ಕೃಷ್ಣದೇವರಾಯದಲ್ಲಿ, ಸುಂದರ ನಟಿ ಭಾರತಿ ಚಿನ್ನಾಂಬೆಯಾಗಿ, “ಶರಣು ವಿರೂಪಾಕ್ಷ ಶಶಿಶೇಖರ” ಎನ್ನುವ ಹಾಡಿಗೆ ಸುಂದರವಾಗಿ ನರ್ತಿಸಿರುವ ದೃಶ್ಯ ನೆನಪಿಗೆ ಬಂತು. ಕರ್ನಾಟಕದಲ್ಲಿ ಹುಟ್ಟಿ ಬೆಳೆದ ನಮ್ಮ ಮನಗಳಲ್ಲಿ ಉಂಟಾಗುವ ಭಾವನೆ ನಮ್ಮ ಮಕ್ಕಳಲ್ಲಿ ಕಂಡುಬರುವುದಿಲ್ಲ. ವಿಜಯನಗರ ಸಾಮ್ರಾಜ್ಯದ ವೈಭವದ ಬಗ್ಗೆ ಅವರಿಗೆಲ್ಲಾ ಸಾಕಷ್ಟು ಕೊರೆದಿದ್ದೆ. ಆದರೂ ಅವರ ಮುಖಗಳಲ್ಲಿ ನಮ್ಮಷ್ಟು ಉತ್ಸಾಹವಿರಲಿಲ್ಲ.

 

ವಾಹನದಿಂದಿಳಿದ ನಂತರ ನಮ್ಮ ಗೈಡ್, “ಸರ್ ಇವತ್ತು ಕೇವಲ ಹಂಪೆಯ ದೇವಾಲಯಗಳನ್ನು ನೋಡೋಣ. ನಾಳೆ ಇಲ್ಲಿನ ಆಡ್ಯಳಿತ ಮತ್ತು ಸಾಂಸ್ಕೃತಿಕ ಕಟ್ಟಡಗಳನ್ನು ನೋಡಬಹುದು,” ಎಂದು ಸಲಹೆ ಇತ್ತ. ಸರಿ ಒಂದೇ ದಿನದಲ್ಲಿ ಅಲ್ಲಿನ ಬಿಸಿಲಿನಲ್ಲಿ ನಾವು ಎಲ್ಲವನ್ನೂ ನೋಡುವುದು ಅಸಾಧ್ಯ ಎಂದು ಈಗಾಗಲೇ ನಮಗೆ ಅರಿವಾಗಿತ್ತು. ಯೂರೋಪಿನ ಚಳಿಯ ಹವಾಮಾನದಲ್ಲಿ ಜೀವನ ನಡೆಸಿದ ನಾವು, ಈಗ ಉತ್ತರ ಕರ್ನಾಟಕದ ಧಗೆಯನ್ನು ತಡೆದುಕೊಳ್ಳುವುದು ಸ್ವಲ್ಪ ಪ್ರಯಾಸವೇ ಸರಿ! ನಮ್ಮ ಸುತ್ತಾಟ ಸಾಸಿವೆ ಕಾಳಿನ ಗಣಪತಿಯ ವಿಗ್ರಹದಿಂದ ಪ್ರಾರಂಭವಾಯಿತು. ಆ ಭವ್ಯ ವಿಗ್ರಹವನ್ನು ಸಾಸಿವೆಯ ವ್ಯಾಪಾರಿಯೊಬ್ಬ ಕೆತ್ತಿಸಿದ ಎಂದು ತಿಳಿದು ಬಹಳ ಆಶ್ಚರ್ಯವಾಯಿತು. ಕಲ್ಲಿನ ಮಂಟಪವೊಂದರಲ್ಲಿ ಗಂಭೀರವಾಗಿ ಕುಳಿತ ಗಣಪನಿಗೆ ಇಂದು ಯಾವ ಪೂಜೆಯಿಲ್ಲ. ಆದರೂ ಗತಕಾಲದ ವೈಭವದ ಪ್ರತೀಕವಾಗಿ ಅಲ್ಲೇ ಕುಳಿತ ಆ ಪ್ರತಿಮೆಯನ್ನು ನೋಡಿ ನನ್ನ ಮಕ್ಕಳಿಗೂ ಬಹಳ ಸಂತೋಷವಾಯಿತು. ಗಣಪತಿ ವಿದೇಶಗಳಲ್ಲೂ ಬಹಳ ಜನಪ್ರಿಯ ದೇವರು. ಅವನ ಚಿತ್ರಗಳನ್ನು ವಿದೇಶದ ತರುಣರ ಟಿ ಶರ್ಟುಗಳ ಮೇಲೆ ಇರುವುದನ್ನು ನೋಡಿದ ನೆನಪು. ಅಂದ ಹಾಗೆ ಈಗ ಕೆಲವು ವರ್ಷಗಳ ಹಿಂದೆ ಪ್ಯಾರೀಸ್ ನಗರದ ನೈಟ್ ಕ್ಲಬ್ ಒಂದರಲ್ಲಿ, ಗಣಪನ ಚಿತ್ರವನ್ನು ತೂಗುಹಾಕಿದ್ದನ್ನು ಕಂಡ ನಮ್ಮ ಭಾರತೀಯ ಪ್ರವಾಸಿಗರು ಕೋಪಗೊಂಡು ಅಲ್ಲಿಯೇ ಜಗಳವಾಡಿದ್ದ ಸುದ್ದಿಯನ್ನೂ ಓದಿದ್ದೆ. ಬ್ರಹ್ಮಚಾರಿಯಾದ ಗಣಪನ ಚಿತ್ರವನ್ನು, ನೈಟ್ ಕ್ಲಬ್ಬಿನಲ್ಲಿ ನೋಡುವುದು ಸ್ವಲ್ಪ ಅಭಾಸದ ಮಾತೇ ಸರಿ! ಸಧ್ಯ ಸಲ್ಮಾನ್ ರಶ್ದಿ ತನ್ನ Satanic verses ಪುಸ್ತಕದಲ್ಲಿ ಮೊಹಮದ್ದನ ಬಗ್ಗೆ ಬರೆದ ಒಂದು ಪದವನ್ನೇ ಆಧಾರವಾಗಿಟ್ಟುಕೊಂಡು ಕ್ರೋಧಗೊಂಡ, ಇರಾನ್ ದೇಶದ ಮುಸ್ಲಿಮ್ ತೀವ್ರವಾದಿಗಳಂತೆ, ಫ಼ತ್ವ ಹಾಕಲಿಲ್ಲ! ಹಿಂದುಗಳಲ್ಲಿ ಅಷ್ಟೊಂದು ಮೂಲಭೂತವಾದಿತ್ವ ಕಂಡುಬರದಿರುವುದು ನೆಮ್ಮದಿಯ ಸಂಗತಿ!

 

hampi-2ಸುತ್ತಲೂ ಕೇವಲ ಗುಡ್ಡ ಬಂಡೆಗಳೇ. ಅಲ್ಲಲ್ಲಿ ಬೆಳೆದ ಹಳದಿ ಗಂಟೆ ಹೂವಿನ ಗಿಡಗಳು, ಕತ್ತಾಳೆ, ಭೂತಾಳೆ, ಪಾಪಾಸುಕಳ್ಳಿ ಪೊದೆಗಳು ಸಾಸಿವೆ ಕಾಳಿನಗಣಪತಿಯ ವೈಭವಕ್ಕೆ ಸಾಕ್ಷಿಯಾಗಿ ನಿಂತಿವೆ. ಹಂಪೆಯ ಬಿಸಿಲಿನ ಹವಾಮಾನದಲ್ಲಿ, ಈ ಗಿಡಗಳೇ ಬೆಳೆಯಲು ಸಾಧ್ಯ ಎಂದು ಸಸ್ಯಶಾಸ್ತ್ರ ಓದಿರುವ ನನಗೆ ಚೆನ್ನಾಗಿ ಗೊತ್ತು. ಸರಿ ಅಲ್ಲಿ ಹಲವು ಫೋಟೋಗಳನ್ನು ಕ್ಲಿಕ್ಕಿಸಿ, ಮುಂದೆ ಬಂಡೆಗಳನ್ನೇರುತ್ತಾ, ಗೈಡ್ ಹೇಳುವ ಚರಿತ್ರೆಯ ಹಲವಾರು ಕುತೂಹಲ ವಿಷಯಗಳನ್ನು ಕೇಳುತ್ತಾ ಮುನ್ನಡೆದೆವು. ದಾರಿಯುದ್ದಕ್ಕೂ ಅಲ್ಲಲ್ಲೇ ಇದ್ದ ವಿಜಯ ಗೋಪುರಗಳನ್ನು ನೋಡುತ್ತಾ, ಅದರ ಕಂಬಗಳ ಮೇಲೆ ರಾಜರು ನಡೆಸಿದ ದಂಡಯಾತ್ರೆಗಳನ್ನು ಸಮರ್ಥಿಸುವ ಹಲವಾರು ಕೆತ್ತನೆಯ ಶಿಲ್ಪಗಳನ್ನು ನೋಡುತ್ತಾ ಹೋದೆವು. ಬಹಳಷ್ಟು ಕಂಬಗಳ ಮೇಲೆ, ಚೀನಾ ದೇಶದ ಜನರ ಚಿತ್ರಗಳಿವೆ. ನಮ್ಮ ಗೈಡ್, ಸಾರ್ ಚೀನಾ ದೇಶದ ವ್ಯಾಪಾರಿಗಳು ತಮ್ಮ ರೇಷ್ಮೆ, ಕುದುರೆಗಳನ್ನು ಮಾರಲು ವಿಜಯನಗರ ಸಾಮ್ರಾಜ್ಯಕ್ಕೆ ಬರುತ್ತಿದ್ದ ದಾಖಲೆಯಿದು ಎಂದು ವಿವರಿಸಿದ. ನಮ್ಮ ವಿಜಯನಗರದ ವೈಭವದ ಬಗ್ಗೆ ಅಷ್ಟೊಂದು ದೂರದಲ್ಲಿದ್ದ ಚೀನಿಯರಿಗೂ ತಿಳಿದಿತ್ತು ಎನ್ನುವುದನ್ನು ಕೇಳಿ ನಮ್ಮ ಮಕ್ಕಳಿಗೆ ಸ್ವಲ್ಪ ಆಘಾತವೇ ಆಯಿತು. ಟೆಲಿಫೋನ್, ಇಂಟರ್ನೆಟ್, ಫ಼್ಯಾಕ್ಸ್, ಟೆಲಿವಿಶನ್ ಇಲ್ಲದ ಆ ಯುಗದಲ್ಲೂ, ಜನಗಳಿಗೆ ಸುದ್ದಿ ತಲುಪುತ್ತಿತ್ತು ಅನ್ನುವ ವಿಷಯ ನಿಜಕ್ಕೂ ಆಶ್ಚರ್ಯದ ಸಂಗತಿಯೇ ಸರಿ!

 

ಗುಡ್ಡದಾರಿಯಲ್ಲಿ ನಡೆಯುತ್ತಾ ಹೋದಂತೆ, ಸುತ್ತಲೂ ಇರುವ, ಆದರೆ ಬಹಳಷ್ಟು ಪಾಳುಬಿದ್ದ ದೇವಾಲಯ ಮತ್ತು ಇತರ ಕಟ್ಟಡಗಳನ್ನು ಕಂಡಾಗ, ಅಂದಿನ ವೈಭವದ ಒಂದು ಸಣ್ಣ ಝಲಕು ಸಿಗುತ್ತದೆ. ಆ ಗುಡ್ಡಗಳ ಹಿನ್ನೆಲೆಯಲ್ಲಿ ಮೆರೆಯುವ ತೆಂಗಿನ ತೋಟಗಳನ್ನು, ಅದರ ಹಸಿರನ್ನು ಕಂಡಾಗ, ತುಂಗಭದ್ರ ನದಿಯ ನೀರಿನ ಮಹತ್ವವೆಷ್ಟು ಎನ್ನುವುದನ್ನು ತಿಳಿಯಬಹುದು. ದಾರಿಯಲ್ಲಿ ಹೋಗುವಾಗ, ಅಲ್ಲೇ ಇದ್ದ ಬಂಡೆಗಳ ಮೇಲೆ ಇದ್ದ ಪಟ್ಟಿಯೊಂದನ್ನು ತೋರಿಸುತ್ತಾ, “ಇಲ್ಲಿಯೇ ಸೀತಾದೇವಿ, ರಾವಣ ತನ್ನನ್ನು ಅಪಹರಿಸಿ ಎತ್ತಿಕೊಂಡು ಹೋಗುತ್ತಿದ್ದಾಗ, ಅವಳು ಹರಿದುಹಾಕಿ ಎಸೆದ ಸೀರೆಯ ಒಂದು ಭಾಗ ಇಲ್ಲಿ ಬಂಡೆಯ ಮೇಲೆ ಹಾಯ್ದು ಹೋಗಿದೆ”, ಎಂದು ಗೈಡ್ ತೋರಿಸಿದ. ಮನೆಯಲ್ಲಿ ಬಾಲ್ಯದಿಂದ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಓದುತ್ತಾ, ಕೇಳುತ್ತಾ ಬೆಳೆದ ನಮಗೆ, ಈ ವಿಷಯ ಅಷ್ಟೇನೂ ಹೊಸದಲ್ಲ. ಆದರೆ ನಮ್ಮ ಮಕ್ಕಳಿಗೆ, ಪೌರಾಣಿಕ ಕಥೆಯ ಬಗ್ಗೆ ನಮ್ಮ ಜನರು ಇಷ್ಟೊಂದು ನಿಖರವಾಗಿ ಹೇಳುತ್ತಿದ್ದಾರಲ್ಲ ಎಂದು ಚಕಿತಗೊಂಡರು. ಇದರಲ್ಲಿ ಆಶ್ಚರ್ಯವೇನು? ಪ್ರಪಂಚದ ಅತ್ಯುತ್ತಮವಾದ ಎರಡು ಭವ್ಯ ಕಾವ್ಯಗಳಲ್ಲಿ ಒಂದಾದ, ರಾಮಾಯಣದ ಪ್ರಸಂಗಗಳು ನಮ್ಮ ಸಂಸ್ಕೃತಿಯಲ್ಲಿ ಎಷ್ಟೊಂದು ಹಾಸುಹೊಕ್ಕಿವೆ ಎಂದರೆ, ಅವನ್ನು ನಮ್ಮ ಜನರು ನಿತ್ಯ ಜೀವನದಲ್ಲಿ ಆದಷ್ಟೂ ಹೊಂದಿಸಿಕೊಂಡಿದ್ದಾರೆ. ಸೀತೆಯ ದುಃಖ ತಮ್ಮದೇ ಎಂದು ತಿಳಿಯುವ ನಮ್ಮ ಮಹಿಳೆಯರು, ಇಂದಿಗೂ ಸೀತಾ-ಪರಿತ್ಯಾಗದ ಪ್ರಸಂಗವನ್ನು ಓದಿದಾಗ, ಅಥವಾ ನಾಟಕ ಸಿನಿಮಾಗಳಲ್ಲಿ ಕಂಡಾಗ ಅಳುವುದನ್ನು ಅನೇಕಬಾರಿ ನಾನು ನೋಡಿದ್ದೇನೆ!

 

ಅಲ್ಲಲ್ಲೇ ಬಂಡೆಗಳ ಮೇಲೆ ಕೆತ್ತಿರುವ ಶಾಸನಗಳ ಬಗ್ಗೆ ಕೇಳುತ್ತಾ ಹೋದೆವು. ಕಡೆಗೆ ವಿರೂಪಾಕ್ಷ ದೇವಾಲಯದ ಭವ್ಯ ಗೋಪುರ ನಮ್ಮ ದೃಷ್ಟಿಗೆ ಬಿತ್ತು. ಸುಮಾರು ೭ನೆಯ ಶತಮಾನದಿಂದಲೂ ಇರುವ ಈ ದೇವಾಲಯ, ವಿಜಯನಗರದ ಅರಸರ ಸಮಯದಲ್ಲಿ, ಒಂದು ಭವ್ಯವಾದ ದೇವಾಲಯ ಮತ್ತು ಸುತ್ತಮುತ್ತ ಭವ್ಯ ಕಟ್ಟಡಗಳ ಒಂದು ಸಂಕೀರ್ಣವಾಗಿ ರೂಪುಗೊಂಡಿತಂತೆ. ವಿಜಯನಗರದ ಅರಸ ೨ನೆಯ ದೇವರಾಯನ ಕಾಲದಲ್ಲಿ ನಿರ್ಮಿತವಾದ ಈ ದೇವಸ್ತಾನ, ಇಂದು UNESCO ಸಂಸ್ಥೆಯ ಪರಂಪರೆಯ ಸ್ಥಳವೆಂಬ ಗೌರವ ಪಡೆದಿದೆ. ಹಾಗಾಗಿ, ದೇವಾಲಯದ ಸುತ್ತಮುತ್ತಾ ಯಾವ ಅಂಗಡಿ ಮುಂಗಟ್ಟುಗಳೂ ಇಲ್ಲ. ಹಿಂದಿದ್ದ ಎಲ್ಲಾ ವ್ಯಾಪಾರ ಕಟ್ಟಡಗಳನ್ನು ತೆಗೆದು ಹಾಕಿದ್ದಾರೆ. ಆದರೇನು, ಬರುವ ಜನಗಳ ಕೈಯಿನ ಹೂವು, ಹಣ್ಣು ತೆಂಗಿನಕಾಯಿಗಳನ್ನು ಕಿತ್ತು ಪರಾರಿಯಾಗುವ ಮಂಗಗಳ ಹಿಂಡನ್ನಂತೂ ಯಾರೂ ತೆಗೆದುಹಾಕಲು ಸಾಧ್ಯವಿಲ್ಲ! ವಾಲಿ, ಸುಗ್ರೀವ ಮತ್ತು ಹನುಮಂತರ ಪ್ರತಿನಿಧಿಗಳಾಗಿ ಇಲ್ಲಿರುವ ಕಪಿಗಳು, ರಾಮಾಯಣದ ಕಥೆಯ ಪ್ರತೀಕವಾಗಿ ಇಲ್ಲಿ ಇನ್ನೂ ಓಡಾಡುತ್ತಾ, ತಮ್ಮ ನೆಲೆ ಕಂಡುಕೊಂಡಿವೆ!

 

ಕಪಿಗಳನ್ನು ಆಕರ್ಷಿಸುವ ಯಾವುದೇ ಪದಾರ್ಥಗಳೂ ನಮ್ಮ ಬಳಿ ಇರಲಿಲ್ಲ. ಮಕ್ಕಳಿಗೆ ಕಪಿಗಳ ಚಟುವಟಿಕೆ ನೋಡಲು ಕುತೂಹಲವಾಗಿದ್ದರೂ, ಅದರ ಜೊತೆ ರೇಬಿಸ್ ವ್ಯಾಧಿಯ ಭಯವೂ ಸೇರಿತ್ತು! ವಿಜ್ಞಾನದ ಅರಿವಿದ್ದವರಿಗೆ, ರಾಮಾಯಣ ಕಥೆಯ ಸವಿಯನ್ನು ಬಹಳ ಹೊತ್ತು ಸವಿಯಲು ಸಾಧ್ಯವಿಲ್ಲ! ದೇವಾಲಯವನ್ನು ಪ್ರವೇಶಿಸುವ ಮೊದಲು, ಗೋಪುರದ ಮೇಲಿನ ಶಿಲ್ಪಕಲೆಯನ್ನು ಎಲ್ಲರೂ ಸವಿದೆವು. ಅಂದಿನ ನೃತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರತಿನಿಧಿಸುವ ಈ ಶಿಲ್ಪಕೆತ್ತನೆಯ ವಾಸ್ತುಶಿಲ್ಪಿ ಲಕ್ಕಣ್ಣ ದಂಡೇಶ ಎನ್ನುವ ವಿಷಯವನ್ನು ನಮ್ಮ ಗೈಡ್ ತಿಳಿಸಿದ. ೧೪ನೆಯ ಶತಮಾನದ ಹೊತ್ತಿಗೆ, ವಿಜಯನಗರ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ, ಇಲ್ಲಿ ಎಲ್ಲವೂ ಅತ್ಯುತ್ತಮ ಸ್ಥಿತಿಯಲ್ಲಿತ್ತು. ೧೬ನೆಯ ಶತಮಾನದಲ್ಲಿ, ಬಹಮನಿಯ ಮುಸ್ಲಿಮ್ ದೊರೆಗಳು ಯುದ್ಧದಲ್ಲಿ ಜಯಿಸಿದಾಗ, ದೇವಾಲಯಗಳನ್ನು ನಾಶಪಡಿಸಿ, ಹಂಪೆಯ ವೈಭವಕ್ಕೆ ಮುಕ್ತಾಯ ಹಾಡಿದ್ದರು. ಮುರಿದು ಬಿದ್ದ ಗುಡಿಗೋಪುರ, ವಿಗ್ರಹಗಳನ್ನು ಕಂಡಾಗ, ನಿಜಕ್ಕೂ ನೋವಾಗುತ್ತದೆ. ಜೊತೆಗೆ, ಧರ್ಮದ ಹೆಸರಲ್ಲಿ ಮಾನವ ನಡೆಸಬಹುದಾದ ಹೀನಕೃತ್ಯಗಳನ್ನು ನೋಡಿದಾಗ ಹೇಸಿಗೆಯೆನಿಸುತ್ತದೆ. ಹಂಪೆಯಲ್ಲಿ ಮುಸ್ಲಿಮ ಸೇನೆ ನಡೆಸಿದ ಈ ಕೃತ್ಯಗಳ ನಡುವೆ, ವಿರೂಪಾಕ್ಷ ದೇವಾಲಯ ಯಾವ ಹಾನಿಯೂ ಆಗದಂತೆ ಉಳಿದದ್ದಾದರೂ ಹೇಗೆ? ಇದರ ಬಗ್ಗೆ ಚರಿತ್ರಕಾರರ ನಡುವೆ ಬಹಳ ಭಿನ್ನಾಭಿಪ್ರಾಯಗಳಿವೆ ಎಂದು ನಮ್ಮ ಗೈಡ್ ಹೇಳಿದ. ದೇವಾಲಯದ ದ್ವಾರದಲ್ಲೇ ನಿಂತು ಎಲ್ಲರನ್ನೂ ಸ್ವಾಗತಿಸುವ ಆನೆ ಲಕ್ಷ್ಮಿ, ಎಲ್ಲರ ಗಮನ ಸೆಳೆಯುತ್ತದೆ. ದುಡ್ಡು ಕೊಟ್ಟವರ ತಲೆಯ ಮೇಲೆ ಸೊಂಡಿಲಿಟ್ಟು ಆಶೀರ್ವದಿಸುವ ವೈಖರಿ ನಿಜಕ್ಕೂ ನಗೆ ತರುವ ವಿಷಯ. ದುಡ್ಡಿನ ಮಹಿಮೆ ಆನೆಗೂ ತಿಳಿದಿದೆ!

 

ಭವ್ಯವಾದ ದೇವಾಲಯದ ಪ್ರಾಕಾರದಲ್ಲಿ ಪ್ರಭುತ್ವ ನಡೆಸುವ ಕಪಿ ಹಿಂಡು, ಅಲ್ಲಿಯೇ ಸುಮ್ಮನೆ ಕುಳಿತಿದ್ದ ಮಹಿಳೆಯ ಜಡೆಯಲ್ಲಿ ಆಕೆ ಮುಡಿದಿದ್ದ ಹೂವನ್ನು ಕಿತ್ತು ತಿಂದ ದೃಶ್ಯ ನಮಗೆ ವಿನೋದವೆನಿಸಿತು! ದೇವಾಲಯದ ಛಾವಣಿಯಲ್ಲಿರುವ ಶಿಲ್ಪಕಲೆಯ ಭವ್ಯತೆ ಎಂತಹವರನ್ನಾದರೂ ಮೂಕಗೊಳಿಸುತ್ತದೆ. ವಿರೂಪಾಕ್ಷ ದೇವಾಲಯದ ಹೊರಗೆ ಎರಡೂ ಬದಿಯಲ್ಲಿರುವ ಕಟ್ಟಡಗಳ ಅವಶೇಶವನ್ನು ತೋರಿಸುತ್ತಾ ನಮ್ಮ ಗೈಡ್, “ನೋಡಿ ಸಾರ್, ಇದೇ ಅಂದಿನ ವಿಜಯನಗರದ ವ್ಯಾಪಾರಿಗಳು ಕೂತು ವ್ಯಾಪಾರ ಮಾಡುತ್ತಿದ್ದ ಸ್ಥಳ ಎಂದು ತೋರಿಸಿದ. ಮುತ್ತು, ರತ್ನ ಹವಳಗಳನ್ನು ಬಳ್ಳದಲ್ಲಿ ಅಳೆದು ಮಾರುತ್ತಿದ್ದರಂತೆ! ಇಂದು ಆ ವೈಭವವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ! ಅಂದಿನ ವೈಭವಪೂರಿತ ರಸ್ತೆಯಲ್ಲಿ, ಇಂದು ನಮ್ಮ ಜನ ಪ್ಲಾಸ್ಟಿಕ್ ಚೀಲಗಳನ್ನು ಹಿಡಿದು ನಡೆದಾಡುವುದನ್ನು ನೋಡಿದಾಗ, ಕಾಲದ ಮಹಿಮೆಯ ಬಗ್ಗೆ, ಚರಿತ್ರೆಯ ಮಹತ್ವದ ಬಗ್ಗೆ ಮತ್ತು ಬದಲಾದ ನಮ್ಮ ದೇಶ ಮತ್ತು ಸಮಾಜಗಳ ಬಗ್ಗೆ ಮನಯೋಚಿಸಲು ತೊಡಗುತ್ತದೆ!

 

ಮುಂದೆ ನಮ್ಮನ್ನು ಅಚ್ಯುತರಾಯನ ದೇವಾಲಯ ಮತ್ತು ದೇವಾಲಯ ಸಂಕೀರ್ಣಕ್ಕೆ ಕರೆದೊಯ್ದ ಗೈಡ್, “ಸಾರ್ ಈ ದೇವಾಲಯ ವಿರೂಪಾಕ್ಷ ದೇವಾಲಯ ಮತ್ತು ಅದರ ಸುತ್ತಮುತ್ತಲ ಕಟ್ಟಡಗಳಿಗಿಂತ ಬಹಳ ಸುಂದರವಾಗಿದೆ, ಆದರೆ ಮುಸ್ಲಿಮರು ಇದರ ಮೇಲೆ ದಾಳಿ ಇಟ್ಟಾಗ, ಬಹಳ ನಷ್ಟಮಾಡಿದ್ದಾರೆ,” ಎಂದು ತಿಳಿಸಿದ. ಅದನ್ನು ಮುಖತಃ ನೋಡಿದಾಗ ಆ ಮಾತು ನಿಜವೆನಿಸಿತು. ೧೫೩೪ರಲ್ಲಿ, ವಿಜಯನಗರ ಸಾಮ್ರಾಜ್ಯ ಪತನವಾಗುವ ಮುನ್ನ ನಿರ್ಮಿಸಿದ ಈ ದೇವಾಲಯ, ಗಂಧಮಾದನ ಮತ್ತು ಮಾತುಂಗ ಪರ್ವತಗಳ ನಡುವೆ ಇರುವ ಕಣಿವೆಯಲ್ಲಿದೆ. ವೈಷ್ಣವ ಸಂಪ್ರದಾಯದಲ್ಲಿ ನಿರ್ಮಿಸಿರುವ ಈ ಸಂಕೀರ್ಣದ ಮುಖ್ಯ ದೇವತೆ ವಿಷ್ಣು. ದೇವಾಲಯದ ಒಳಗಿನ ಭವ್ಯ ಕಂಬಗಳ ಕೆತ್ತನೆ, ಹಂಪೆಯಲ್ಲಿ ಇನ್ನೆಲ್ಲೂ ಇಲ್ಲಾ!

 

ಇಷ್ಟು ಹೊತ್ತಿಗಾಗಲೇ, ಮದ್ಯಾನ್ಹದ ಸೂರ್ಯ ನೆತ್ತಿಗೇರಿದ್ದ. ಎಲ್ಲರೂ ಬೆವರಿ ಬಸವಳಿದಿದ್ದೆವು. ನಮ್ಮ ಪರಿಸ್ಥಿತಿ ನೋಡಿದ ಗೈಡ್, “ಸಾರ್ ನೀವು ಇಂಗ್ಲೆಂಡಿನಲ್ಲಿ ಚಳಿಯಲ್ಲಿದ್ದು, ಇಲ್ಲಿಯ ಸೌಮ್ಯಹವಾಮಾನವನ್ನೂ ತಡೆದುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ, ನಡೆಯಿರಿ ತುಂಗಭದ್ರೆಯ ದಡದಲ್ಲಿರುವ ಪುರಂದರದಾಸರ ಮಂಟಪಕ್ಕೆ ಹೋಗೋಣ,” ಎಂದು ನಮ್ಮನ್ನು ತುಂಗೆಯ ದಡಕ್ಕೆ ಕರೆದೊಯ್ದ. ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ, ಪುರಂದರದಾಸರ ಹೆಸರನ್ನು ಕೇಳದ ಕನ್ನಡಿಗರಿದ್ದಾರೆಯೇ? ದಾಸ ಸಂಪ್ರದಾಯದ ಕೀರ್ತಿಪತಾಕೆಯನ್ನು ಉತ್ತುಂಗಕ್ಕೇರಿಸಿದ ಪುರಂದರ ದೇವರನಾಮಗಳನ್ನು ಸವಿಯದ ಮನಗಳಿಲ್ಲ! ಈಗ ೪೦ ವರ್ಷಗಳ ಹಿಂದೆ ಬಾಲ್ಯದಲ್ಲಿ ಇಲ್ಲಿಗೆ ಬಂದಾಗ, ಇದೇ ಮಂಟಪದಲ್ಲಿ ಕುಳಿತು, ತುಂಗೆಯ ತಂಪಾದ ನೀರಿನ ಪಕ್ಕದಲ್ಲಿ ನಮ್ಮ ತಾಯಿ ತಯಾರಿಸಿದ್ದ ಸವಿಯಾದ ಹುಳಿಯನ್ನ ಮೊಸರನ್ನ ನೆನಪು ಇನ್ನೂ ನೆನಪಿದೆ. ಆದರೆ ಈ ಬಾರಿ ನಮ್ಮ ಬುಟ್ಟಿಯಲ್ಲಿ ಅಂತಹ ಯಾವ ಖಾದ್ಯವೂ ಇರಲಿಲ್ಲ. ಕೇವಲ ಬಾಳೆ ಹಣ್ಣು ತಿಂದೇ ಸಂತೃಪ್ತರಾಗಬೇಕಾಯಿತು. ಮಂಟಪ ನದಿಯ ಪಕ್ಕದಲ್ಲೇ ಇದೆ. ತುಂಗಭದ್ರೆಯ ಪ್ರವಾಹ ಬಂದಾಗ, ಮಂಟಪ ನೀರಲ್ಲಿ ಮುಳುಗುತ್ತದೆ ಎಂದು ಗೈಡ್ ಹೇಳಿದ. ನದಿಯ ನೀರು ಗಂಭೀರವಾಗಿ ಹರಿದಿತ್ತು. ಆ ತಂಪಾದ ನೀರಿನಲ್ಲಿ ಕಾಲನ್ನಿಟ್ಟು ಕುಳಿತಾಗ, ವಿಜಯನಗರದ ಅರಸರು ಇದೇ ಜಾಗದಲ್ಲಿ ಓಡಾಡಿದ್ದರು ಎನ್ನುವುದನ್ನು ನೆನೆದು ಮನಸ್ಸು ರೋಮಾಂಚನವಾಯಿತು! ನದಿಯ ನೀರಲ್ಲಿ ಈಜಾಡುತ್ತಿದ್ದ ಕಪ್ಪುಕೊಕ್ಕರೆಗಳನ್ನು ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಪ್ರಯಾಸ ನಡೆಸಿದ್ದೆ. ಪುರಂದರದಾಸರು ಇಲ್ಲೇ ಸಮಾಧಿಹೊಂದಿದ್ದರು ಎನ್ನುತ್ತಾರೆ. ಅವರ ಪ್ರತಿಮೆಯೊಂದೇ ಇಂದು ನಮಗೆ ದೊರೆಯುವ ಸಾಕ್ಷಿ!

 

ಮಂಟಪದಲ್ಲಿ ಕುಳಿತಿದ್ದ ಇತರ ಪ್ರವಾಸಿಗಳು ಬಹಳ ಗದ್ದಲ ನಡೆಸಿದ್ದರು. ಆ ಜಾಗದಲ್ಲಿ ಯಾರೂ ಮೂತ್ರವಿಸರ್ಜನೆ ಮಾಡಬಾರದು ಎನ್ನುವ ನಿಯಮವನ್ನು ಅನೇಕರು ಪಾಲಿಸುವ ಗೋಜಿಗೆ ಹೋಗಿರಲಿಲ್ಲ. ಅದನ್ನು ಕಂಡ ನನ್ನ ಪತಿ, ಕೋಪಗೊಂಡು ಒಬ್ಬ ವ್ಯಕ್ತಿಯನ್ನು ಬೈದಾಗ, ಅವನ ಪರಿವಾರವೆಲ್ಲಾ ನಮ್ಮೊಡನೆ ಜಗಳಕ್ಕೆ ಬಂದಾಗ, ಪರಿಸ್ಥಿತಿ ಬಿಗಡಾಯಿಸಿತು. ಅಲ್ಲಿಯೇ ಇದ್ದ ಪೋಲೀಸ್ ಮಧ್ಯೆ ಪ್ರವೇಶಿಸಿ ಜಗಳ ನಿಲ್ಲಿಸುವ ಪ್ರಯತ್ನ ಮಾಡಿದ. ಅದರ ಬದಲು, ಆ ಕೆಲಸ ಮಾಡುವ ವ್ಯಕ್ತಿಯನ್ನು ಯಾವ ತರಾಟೆಗೂ ತೆಗೆದುಕೊಳ್ಳಲಿಲ್ಲ ಎನ್ನುವುದು ವಿಶಾದನೀಯ, ನಮ್ಮ ಸಮಾಜ ಮತ್ತು ವ್ಯವಸ್ಥೆ ಕೆಟ್ಟಿರುವುದಕ್ಕೆ ಇದಕ್ಕಿಂತ ಒಂದು ನಿದರ್ಶನ ಬೇಕಿಲ್ಲ! ಪ್ರಪಂಚದ ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿಗಳನ್ನು ಹೊಂದಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ನಾವು, ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ಥಳವನ್ನು ಶುಚಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿಲ್ಲ! ಇದು ಎಂತಹ ಆಭಾಸ! ಯೂರೋಪಿನಲ್ಲಿರುವ ಪ್ರಾಚೀನ ಕಟ್ಟಡಗಳನ್ನು ಎಷ್ಟು ಸುವ್ಯವಸ್ಥಿತವಾಗಿಟ್ಟಿದ್ದಾರೆ ಎನ್ನುವುದನ್ನು ನೋಡಿರುವ ನಮ್ಮ ಮಕ್ಕಳಿಗೆ, ಇದು ತೀರಾ ಆಘಾತಕಾರಿಯಾಗಿತ್ತು ಎಂದು ಹೇಳಲೇಬೇಕಿಲ್ಲ! ಈ ಘಟನೆಯಿಂದ ನಾಚಿಕೆಗೊಂಡ ನಮ್ಮ ಗೈಡ್, ಸಾರ್ ಇದನ್ನು ದಿನನಿತ್ಯ ನೋಡುತ್ತೇವೆ. ನಮ್ಮ ಜನಕ್ಕೆ ಮಾನಮರ್ಯಾದೆ ಇಲ್ಲ! ನಡಿಯಿರಿ ವಿಜಯ ವಿಠಲನ ದೇವಸ್ಥಾನಕ್ಕೆ ಹೋಗೋಣ ಎಂದು ಅಲ್ಲಿಂದ ಕಾಲುತೆಗೆದ.

 

hampi-6ವಿಜಯವಿಠಲನ ದೇವಸ್ಥಾನ ಮತ್ತು ಅದರ ಸುತ್ತಮುತ್ತಲಿನ ಶಿಲ್ಪಕಲೆ ಪ್ರಸಿದ್ಧವಾದದ್ದು. ಜಗತ್ಪ್ರಸಿದ್ಧ ಕಲ್ಲಿನ ರಥವಿರುವುದೂ ಅಲ್ಲಿಯೆ! ಸರಿ ನಾವೆಲ್ಲಾ ಕಾಲೆಳೆಯುತ್ತಾ ಹೋದೆವು. ದೇವಾಲಯದ ಭವ್ಯ ಪ್ರಾಂಗಣಕ್ಕೆ ಕಾಲಿಟ್ಟೊಡನೆ, ನಮ್ಮ ಆಯಾಸವೆಲ್ಲಾ ಓಡಿಹೋಯಿತು. ಹಂಪೆಯ ವಾಸ್ತುಶಿಲ್ಪದ ಭವ್ಯತೆಯ ಪ್ರತೀಕವೆನಿಸಿದ ಈ ದೇವಾಲಯದ ದೃಶ್ಯವನ್ನು ನೋಡಿಯೇ ತಿಳಿಯಬೇಕು. ೧೫ನೆಯ ಶತಮಾನದಲ್ಲಿ ನಿರ್ಮಿಸಿರುವ ಈ ದೇವಾಲಯದಲ್ಲಿರುವ ಕಲ್ಲಿನ ರಥ, ಹಂಪೆಯ ವಾಸ್ತುಶಿಲ್ಪದ ಲಾಂಛನವೆನಿಸಿದೆ. ಭವ್ಯವಾದ ಗ್ರಾನೈಟ್ ಶಿಲೆಯ ಸ್ತಂಭಗಳಿಂದ ಕೂಡಿದ ಈ ದೇವಾಲಯ ಹಜಾರಗಳು, ಅಂದಿನ ವೈಭವದ ಪ್ರತೀಕವೇ ಸರಿ! ಈ ಸ್ತಂಭಗಳಿಂದ ಹೊರಹೊಮ್ಮುವ ಸಪ್ತಸ್ವರಗಳು ಪ್ರವಾಸಿಗರ ಮುಖ್ಯ ಆಕರ್ಷಣೆ. ಆದರೆ ಸ್ತಂಭಗಳನ್ನು ಈಗ ಯಾರೂ ಮುಟ್ಟುವಂತಿಲ್ಲ. ಪ್ರಸಿದ್ಧ ಕನ್ನಡ ಚಲನಚಿತ್ರ ಶ್ರೀ ಕೃಷ್ಣದೇವರಾಯದಲ್ಲಿ, ರಾಜನರ್ತಕಿ ಚಿನ್ನಾದೇವಿಯ ನರ್ತನವನ್ನು ಇಲ್ಲಿಯೇ ಚಿತ್ರೀಕರಿಸಲಾಗಿದೆ ಎನ್ನುತ್ತಾರೆ!

 

hampi-5ಅದ್ಭುತವಾದ ಶಿಲ್ಪಕಲೆಯ ಪ್ರತೀಕವಾದ ಕಲ್ಲಿನ ರಥವನ್ನು ೧೬ನೆಯ ಶತಮಾನದಲ್ಲಿ, ಕೃಷ್ಣದೇವರಾಯನ ಕಾಲದಲ್ಲಿ ನಿರ್ಮಿಸಿದ್ದರು. ಅರಸನು ಒರಿಸ್ಸಾದಲ್ಲಿರುವ ಪ್ರಸಿದ್ಧ ಕೋನಾರ್ಕ್ ದೇವಾಲಯದಲ್ಲಿರುವ ಕಲ್ಲಿನ ರಥವನ್ನು ನೋಡಿದ್ದನಂತೆ. ಆ ಕಲೆಗೆ ಬೆರಗಾಗಿ, ತಾನೂ ಅಂತಹುದೇ ರಥವನ್ನು ನಿರ್ಮಿಸುವ ನಿರ್ಧಾರ ಮಾಡಿದನಂತೆ. ನಾವು ಶಾಲೆಯಲ್ಲಿದ್ದಾಗ, ಭೂಮಿ ನಾಶವಾಗುವ ಮುಂಚೆ, ಹಂಪೆಯ ಕಲ್ಲಿನ ರಥ ಓಡುತ್ತಂತೆ”, ಎಂದು ನನ್ನ ಸಹಪಾಠಿಗಳು ಹೇಳುತ್ತಿದ್ದ ಮಾತು ನೆನಪಿಗೆ ಬಂದು ನಾನು ಅಲ್ಲಿಯೇ ಒಮ್ಮೆ ಮುಗುಳ್ನಕ್ಕೆ. ವಾಸ್ತವದಲ್ಲಿ ಈ ಕಲ್ಲಿನ ರಥವೂ ಒಂದು ಗುಡಿ. ಆದರೆ ಅದಕ್ಕೆ ರಥದ ಆಕಾರವನ್ನು ಕೊಟ್ಟಿದ್ದಾರೆ. ಸುಮಾರು ೫೦೦ ವರ್ಷಗಳ ಹಿಂದೆ ನಿರ್ಮಿತವಾಗಿರುವ ಈ ರಥವನ್ನು, ಅದರ ಮೂಲ ಸ್ಥಲದಿಂದ ಇಲ್ಲಿಯವರೆಗೂ ಯಾರೂ ಸರಿಸಿಲ್ಲ!

 

ಇಷ್ಟೆಲ್ಲಾ ನೋಡುವಷ್ಟರಲ್ಲಿ ಸಂಜೆಯಾಯಿತು. ಸೂರ್ಯನ ಪ್ರಖರತೆ ತಣಿದಿತ್ತು. ಆದರೆ ನಮ್ಮ ಕಾಲುಗಳು ದಣಿದಿದ್ದವು. ಮುಂದಿನ ಭಾಗವನ್ನು ನಾಳೆ ನೋಡುವ ಎನ್ನುವ ನಿರ್ಧಾರ ಮಾಡಿ, ಅಲ್ಲಿಂದ ವಾಪಸ್ ನಮ್ಮ ಹೋಟೆಲಿಗೆ ನಡೆದೆವು. ಬಹುದಿನಗಳಿಂದ ಹಂಪೆ ನೋಡುವ ನನ್ನ ಮನಸ್ಸಿನ ಹಂಬಲ ಕಡೆಗೂ ಈಡೇರಿತ್ತು. ನಮ್ಮ ರಾಜ್ಯದ ಹೆಮ್ಮೆಯ ಪ್ರತೀಕವಾದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯ ವೈಭವವನ್ನು ನನ್ನ ಮಕ್ಕಳು ನೋಡಲಿ ಎನ್ನುವ ಆಸೆ ಇತ್ತು. ಮಕ್ಕಳೂ ಖುಶಿ ಪಟ್ಟರು. ಬೆಂಗಳೂರಿನ ಗದ್ದಲ, ಮಾಲಿನ್ಯ ನೋಡಿ ಸುಸ್ತಾಗಿದ್ದ ಮಕ್ಕಳಿಗೆ, ಇದೊಂದು ಅನನ್ಯ ಅನುಭವ! ಈಗಂತೂ ಹಂಪೆಯಲ್ಲಿ “ಹಂಪೆ ಉತ್ಸವ, ಕನ್ನಡ ವಿಶ್ವವಿದ್ಯಾಲಯ, ಪುರಂದರದಾಸರ ಪುಣ್ಯತಿಥಿ,” ಹೀಗೆ ಹಲವು ಹತ್ತು ಬಗೆಯ ಭವ್ಯ ಸಮಾರಂಭಗಳನ್ನು ನಮ್ಮ ಕರ್ನಾಟಕ ಸರ್ಕಾರ ನಡೆಸಿಕೊಂಡು ಬರುತ್ತಿದೆ. ಆ ದೃಶ್ಯಗಳನ್ನು ನೋಡಲೆಂದು ನಾವು ಆ ಸಮಯದಲ್ಲಿ ಹೋಗುವ ಸಾಧ್ಯತೆಗಳು ಕಡಿಮೆ. ಆದರೇನು, ಆ ಸ್ಥಳವನ್ನು ನೋಡುವುದು ಮುಖ್ಯ. ಇಲ್ಲಿಗೆ ರಸ್ತೆ, ರೈಲಿನ ಸಂಪರ್ಕವನ್ನು ಸಮಾಧಾನಕರವಾಗಿ ಕಲ್ಪಿಸಿದ್ದರೂ, ಇನ್ನೂ ಹೆಚ್ಚಿನ ಸೌಲಭ್ಯಗಳ ಅವಶ್ಯಕತೆಯಿದೆ. ಈಗಂತೂ ವಿದೇಶಿ ಪ್ರವಾಸಿಗರು ಇಲ್ಲಿ ಮುಗಿಬೀಳುತ್ತಾರೆ. ಹಲವು ಹತ್ತು ಉತ್ತಮ ದರ್ಜೆಯ ಹೋಟೆಲುಗಳಂತೂ ಇವೆ. ಪಂಚತಾರಾ ಮಾದರಿಯ ಈ ಹೋಟೆಲುಗಳನ್ನು, ನದಿಯ ಆಚೆ ತೀರದಲ್ಲಿ, ಆನೆಗೊಂದಿ ಪ್ರದೇಶದಲ್ಲಿ ನಿರ್ಮಿಸಿದ್ದಾರೆ ಎಂದು ಕೇಳಿದೆವು. ಇಲ್ಲಿಗೆ ವಿಮಾನದಲ್ಲಿ ಬರಲು ಸೌಲಭ್ಯವಿಲ್ಲ. ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರು ಮಾತ್ರಾ!

 

ವಿಜಯನಗರದ ಗತವೈಭವದ ಚಿತ್ರಗಳನ್ನು ನಮ್ಮ ಮನಗಳಲ್ಲಿ ಮತ್ತು ಕ್ಯಾಮೆರಾದಲ್ಲಿ ಸೆರೆಹಿಡಿದದ್ದೇ ಸಮಾಧಾನಕರವಾದ ವಿಚಾರ. ಪ್ರತಿ ವರ್ಷ ನವೆಂಬರ್ ೧ನೆಯ ತಾರೀಖು, ನಮ್ಮ ಆಕಾಶವಾಣಿಯಿಂದ ಪ್ರಸಾರವಾಗುತ್ತಿದ್ದ ಜನಪ್ರಿಯ ಕನ್ನಡ ಚಲನಚಿತ್ರಗೀತೆ, “ಅಪಾರ ಕೀರ್ತಿಗಳಿಸಿ ಮೆರೆವ ಭವ್ಯನಾಡಿದು, ಕರ್ನಾಟವಿದುವೆ ನೃತ್ಯಶಿಲ್ಪ ಕಲೆಯ ಬೀಡಿದು”, ಎಂದು ಪಿ.ಬಿ.ಶ್ರೀನಿವಾಸರ ಸುಮಧುರ ಕಂಠವಾಣಿಯಲ್ಲಿ ಕೇಳುತ್ತಿದ್ದ ಹಾಡನ್ನು ಗುನುಗುತ್ತಲೇ ನಾನು ಹೋಟೆಲ್ ತಲುಪಿದೆ.

 

 

One thought on “ಹಂಪೆ ಪ್ರವಾಸ- ಭಾಗ ೩

  1. ಉಮಾ ಅವರು ತಮ್ಮ ಹಂಪೆಯ ಪ್ರವಾಸದ ಕೊನೆಯ ಭಾಗವನ್ನೂ ಅಷ್ಟೇ ಸ್ವಾರಸ್ಯಕರವಾಗಿ ಮುಂದುವರೆಸಿದ್ದಾರೆ. ಎಷ್ಟೇ ಹಂಪೆ, ಶಿಲ್ಪಗಳ ಸೌಂದರ್ಯ, ವಾಸ್ತು ಶಿಲ್ಪ ಕಲೆ, ಚಾರಿತ್ರಿಕ ಮಾಹಿತಿ ಇವೆಲ್ಲವನ್ನು ಈ ಮೊದಲೇ ಓದಿ, ಕೇಳಿ, ನೋಡಿ ಅನುಭವಿಸಿದ್ದರೂ ಒಬ್ಬೊಬ್ಬರ ವೈಯಕ್ತಿಕ ಅನುಭವದಲ್ಲೂ ಒಂದು ಭಿನ್ನತೆ ಇರುತ್ತದೆಯಲ್ಲವೆ? ಯುದ್ಧಕ್ಕಿಂತ ’ಪ್ರವಾಸಸ್ಯ ವಾರ್ತಾ ರಮ್ಯಾ’ ಅನ್ನಬಹುದು! ಸಂತ ಅಗಸ್ಟಿನ್ ಹೇಳಿದ ಇನ್ನೊಂದು ಮಾತು ಅಂದರೆ ’He that is jealous is not in love”. ನನ್ನ ಉತ್ತರ: “Because we love Hampi so much that we are jealous of the shoppers who witnessed gems measured in bushels!”. ನಾನು ಹಂಪಿಗೆ ಹೋಗಿ ದಶಕಗಳೇ ಕಳೆದಿವೆ. ಮತ್ತೊಮ್ಮೆ ಹಂಪೆ ಪ್ರವಾಸ ಮಾಡುವ ಇಚ್ಛೆ ತಂದಿತು ಈ ಬರಹ!

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.