ಕಿರಿಕ್ ಪಾರ್ಟಿ ಚಿತ್ರ ವಿಮರ್ಶೆ

kirik-party-1

(ಕನ್ನಡ ಚಲನ ಚಿತ್ರಗಳನ್ನು ಕೆಲವು ವರ್ಷಗಳ ಹಿಂದೆ ಲಂಡನ್ ಮತ್ತು ಬರ್ಮಿಂಗ್ ಹ್ಯಾಮ್ ನಗರಗಳಲ್ಲಿ ಆಗೊಮ್ಮೆ ಈಗೊಮ್ಮೆ ಪ್ರದರ್ಶಿಸಲಾಗಿತ್ತು. ಕನ್ನಡ ಬಳಗ ಈ ಚಟುವಟಿಕೆಗಳಿಗೆ ಪ್ರಚಾರ ಒದಗಿಸಿ ಕೆಲವು ಸ್ಥಳೀಯ ಕನ್ನಡಿಗರು ಸೇರಿ ವೀಕ್ಷಿಸುತ್ತಿದ್ದೆವು. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಯಶಸ್ವಿಯಾಗಿರುವ ಕನ್ನಡ ಚಿತ್ರಗಳು, ಇಲ್ಲಿಯ ಅನಿವಾಸಿ Distributor ಗಳ ಸಹಕಾರದಿಂದ ಯು.ಕೆಯ ಹಲವಾರು ನಗರಗಳಲ್ಲಿ ಪ್ರದರ್ಶನವಾಗುತ್ತಿವೆ. ಕೆಲವು ಪ್ರಿಮಿಯರ್ ಶೋ ಗಳಿಗೆ ಸಿನಿಮಾದ ಹಿರೋಗಳು ಬಂದು ಭಾಗವಹಿಸುವ ಮಟ್ಟವನ್ನು ತಲುಪಿದ್ದೇವೆ.

ಕನ್ನಡ ಚಿತ್ರಗಳಿಗೆ  ಧಿಡೀರನೆ ಒಂದು ಹೊರದೇಶದ  ಮಾರುಕಟ್ಟೆ ದೊರಕಿದೆ. ಈ ಹೊಸ ಬೆಳವಣಿಗೆ ಚಿತ್ರ ನಿರ್ಮಾಪಕರಿಗೆ ಆರ್ಥಿಕ ಸುಭದ್ರತೆಯನ್ನು ಕೊಟ್ಟಿರುವುದಲ್ಲದೆ ನಿರ್ದೇಶಕರಿಗೂ ಮತ್ತು ಕಲಾವಿದರಿಗೂ ಹುರುಪು ಪ್ರೋತ್ಸಾಹ ಗಳನ್ನು ಒದಗಿಸಿ ಉತ್ತಮ ಚಿತ್ರಗಳನ್ನು ಹೊರತರುವ ಅವಕಾಶ ಕಲ್ಪಿಸಿದೆ. ಇದರಿಂದ ಅನಿವಾಸಿ ಕನ್ನಡಿಗರಿಗೆ ಅವರ ತಾಯ್ನಾಡಿನ ಭಾಷೆ , ನೋಟ ಮತ್ತು ಬದುಕನ್ನು ಬೆಳ್ಳಿ ತೆರೆಯ ಮೇಲೆ ಅನುಭವಿಸುವ ಅವಕಾಶ ಒದಗಿದೆ. ಈ ಚಿತ್ರಗಳ ಮೂಲಕ ತಮ್ಮ ಮಕ್ಕಳಿಗೆ ಅನಾಯಾಸವಾಗಿ ಕನ್ನಡವನ್ನು ಪರಿಚಯಿಸುವ ಅವಕಾಶ ಲಭ್ಯವಾಗಿದೆ. ಜೊತೆಗೆ ಇಂಗ್ಲಿಷ್ ಟೈಟಲ್ಗಳನ್ನು  ಒದಗಿಸಿರುವುದರಿಂದ ಯುವ ಪೀಳಿಗೆ ಈ ಚಿತ್ರಗಳನ್ನು ನೋಡಲು ಅನುಕೂಲವಾಗಿದೆ. ಕೆಲವು ನಿರ್ದೇಶಕರು ತಮ್ಮ ಚಿತ್ರಕ್ಕೆ ಬಂಡವಾಳದ ಭಾಗವನ್ನು ಅನಿವಾಸಿ ಕನ್ನಡಿಗರಿಂದ ಹೊಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಈ ಮೇಲಿನ ಬೆಳವಣಿಗೆಗಳು ಕನ್ನಡ ಚಿತ್ರರಂಗವನ್ನು ಸಂವೃದ್ಧಿಗೊಳಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸೋಣ.

ಕಿರಿಕ್ ಪಾರ್ಟಿ ಎಂಬ ಚಿತ್ರ ಕರ್ನಾಟಕದಲ್ಲಿ ಹೌಸ್ ಫುಲ್ ವೀಕ್ಷಣೆ ಪಡೆದು ಜನಪ್ರಿಯವಾಗಿದೆ. ಈ ಚಿತ್ರ ಕಳೆದ ೨-೩ ವಾರಗಳಲ್ಲಿ ಯು.ಕೆ ಆದ್ಯಂತ ಹಲವು ಪ್ರದರ್ಶನಗಳನ್ನು ಕಂಡಿದ್ದು ಇದರ ಯಶಸ್ಸಿನ ಹಿನ್ನೆಲೆ ವಿಮರ್ಶಿಸುವ ಕಾರ್ಯವನ್ನು ವೈಶಾಲಿ ದಾಮ್ಲೆ  ಮತ್ತು ಕೇಶವ್ ಕುಲಕರ್ಣಿಯವರು ಕೈಗೊಂಡು ನಮ್ಮ ಜೊತೆ ಹಂಚಿಕೊಂಡಿದ್ದಾರೆ.ವೈಶಾಲಿ ನಮ್ಮ ‘ಅನಿವಾಸಿ’ ಗೆ ಸೇರಿಕೊಂಡ ನೂತನ ಪ್ರತಿಭೆ. ಮೂಲತಃ ಧರ್ಮಸ್ಥಳದವರಾಗಿದ್ದು ಮಂಗಳೂರಿನಲ್ಲಿ MBBS ಮುಗಿಸಿ ಕಳೆದ ಹತ್ತು ವರ್ಷಗಳಿಂದ ಇಲ್ಲಿ ನೆಲಸಿ ಸೈಕ್ಯಾಟರಿ ತಜ್ಞರಾಗಿ ಮ್ಯಾನ್ ಚೆಸ್ಟರ್ ನಲ್ಲಿ ವೃತ್ತಿ. ಪತಿ ಅನಿಲ್ ಮತ್ತು ಮಕ್ಕಳಾದ ಧಾತ್ರಿ ಮತ್ತು ಧೃತಿಯೊಂದಿಗೆ ಮ್ಯಾನ್ ಚೆಸ್ಟರ್ನಲ್ಲಿ ವಾಸವಾಗಿದ್ದಾರೆ. ಇವರಿಗೆ ಅನಿವಾಸಿ ಪರವಾಗಿ ತುಂಬು ಹೃದಯದ ಸ್ವಾಗತ. – ಸಂ)

***

‘ಕಿರಿಕ್ ಪಾರ್ಟಿ’  ಖಂಡಿತವಾಗಿಯೂ ಒಂದು ಶ್ಲಾಘನೀಯ ಪ್ರಯತ್ನ – ವೈಶಾಲಿ ದಾಮ್ಲೆ

img_5162

 

 

 

ಜಗದ ವಿದ್ಯಮಾನಗಳೆಲ್ಲ ಬೆಳಗ್ಗೆದ್ದರೆ ಬೆರಳ ತುದಿಗೇ ತಲುಪುವ ಯುಗ ಇದಾದ್ದರಿಂದ, ಕರ್ನಾಟಕದಲ್ಲಿ ‘ಕಿರಿಕ್ ಪಾರ್ಟಿ’ ಎಂಬ ಸಿನೆಮಾ ಬಿಡುಗಡೆ ಆದದ್ದು, ಹೌಸ್ ಫುಲ್ ಪ್ರದರ್ಶನಗಳನ್ನು ಕಾಣುತ್ತಿರುವುದು ಇತ್ಯಾದಿ ಸುದ್ದಿಗಳು ಕಳೆದೊಂದು ತಿಂಗಳಿಂದ ದಿನಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ದಿನವೂ ಕಣ್ಣಿಗೆ ಬೀಳುತ್ತಿವೆ. ಇದೇನಪ್ಪಾ ‘ಕಿರಿಕ್ ಪಾರ್ಟಿ’ ಅಂತ ಕುತೂಹಲದಿಂದ ಇದರ ಬಗ್ಗೆ ಒಂದು ಸ್ವಲ್ಪ ಓದಿಯೂ ಇದ್ದೆ. ಇಂತಹ ‘ಕಿರಿಕ್ ಪಾರ್ಟಿ’ ನಮ್ಮೂರಿನಲ್ಲೇ ಪ್ರದರ್ಶನ ಕಾಣುತ್ತಿದೆ ಎಂದು ಒಂದು ವಾರದ ಹಿಂದೆ ತಿಳಿಯಿತು. ”ಸಿನೆಮಾ ನೋಡಿ ಬರೋಣವೇ” ಎಂದು ನನ್ನವರು ಕೇಳಿದಾಗ ”ನಮಗೆ ಇಷ್ಟವಾಗುತ್ತದೆ ಅಂತೀರಾ? ಅದೇನೋ ಕಾಲೇಜು ಹುಡುಗರ ಕಥೆಯಂತೆ” ಅಂತ ಅನುಮಾನ ವ್ಯಕ್ತಪಡಿಸಿದ್ದೆ. ”ಇಲ್ಲಿ ನಮಗೆ ಕನ್ನಡ ಸಿನೆಮಾಗಳನ್ನು ನೋಡಲು ಸಿಗುವುದೇ ಅಪರೂಪ. ಚೆನ್ನಾಗಿದೆ ಅಂತ ಓದಿದೆ. ಚಿತ್ರೀಕರಣ ಬೇರೆ ನಮ್ಮೂರಲ್ಲಿ, ಅದೂ ಮನೆ ಪಕ್ಕದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ನಡೆದಿದೆ, ನೋಡಿ ಬರೋಣ ಬಾ” ಎಂದು ಇವರೆಂದಾಗ ಸರಿ ಎಂದು ಒಪ್ಪಿದ್ದೆ. ಇನ್ನು, ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ನಮ್ಮೂರಿನವನು, ಮುಂಚೆಯೂ ಕೆಲವು ಒಳ್ಳೆಯ ಚಿತ್ರಗಳನ್ನು ಕೊಟ್ಟವನು ಎಂಬ ಕಾರಣವೂ ಇತ್ತೆನ್ನಿ. ಅಂತೂ ಮೊನ್ನೆ ಶನಿವಾರದ ಸಂಜೆ ನಮ್ಮ ದೊಡ್ಡ ಮಗಳೊಂದಿಗೆ ‘ಕಿರಿಕ್ ಪಾರ್ಟಿ’ ನೋಡಲು ಹೊರಟೆವು.

ಚಿತ್ರದ ನಾಯಕ ಕರ್ಣ ಇಂಜಿನಿಯರಿಂಗ್ ವಿದ್ಯಾರ್ಥಿ. ಅವನು ಹಾಗೂ ಅವನ ಗೆಳೆಯರ ಗುಂಪೇ ‘ಕಿರಿಕ್ ಪಾರ್ಟಿ’. ಕಾಲೇಜು ಜೀವನದ ಹಲವು ಮುಖಗಳನ್ನು ಈ ಚಿತ್ರ ಹಂತ-ಹಂತವಾಗಿ, ಹಾಸ್ಯ, ಪ್ರೇಮ ಮತ್ತು ಕ್ರೌರ್ಯಗಳ ಮಿಶ್ರಣದೊಂದಿಗೆ ಪರಿಚಯಿಸುತ್ತದೆ. ಕಾಲೇಜು ಜೀವನದ, ಅದರಲ್ಲೂ ಹಾಸ್ಟೆಲ್ ಜೀವನದ ಅನುಭವ ಇರುವ ಎಲ್ಲರಿಗೂ ಈ ಚಿತ್ರ ಯಾವುದಾದರೂ ಒಂದು ರೀತಿಯಲ್ಲಿ ಬಹಳ ಹತ್ತಿರದ್ದೆನಿಸುತ್ತದೆ. ಇದರಲ್ಲಿ ಬರುವ ಒಂದಲ್ಲ ಒಂದು ದೃಶ್ಯದೊಂದಿಗೆ ನಮ್ಮ ಕಾಲೇಜು ಜೀವನದ ಘಟನೆಗಳು ತಾಳೆಯಾಗುತ್ತವೆ ಅನಿಸುತ್ತದೆ. ವೃತ್ತಿಪರ ಕಾಲೇಜುಗಳಿಗೆ ಪ್ರವೇಶ ಪಡೆದ ತಕ್ಷಣ ಪ್ರಪಂಚವನ್ನೇ ಗೆದ್ದವರಂತೆ,ಕಾಲೇಜು- ಹಾಸ್ಟೆಲ್ ಗಳ ನೀತಿ-ನಿಯಮಗಳ ಪರಿವೆಯೇ ಇಲ್ಲದಂತೆ ಇರುವ ಹುಡುಗ-ಹುಡುಗಿಯರನ್ನೆಲ್ಲ ನಾವು-ನೀವೆಲ್ಲರೂ ನೋಡಿದ್ದೇವೆ. ಇಂತಹ ‘ಕಿರಿಕ್ ಪಾರ್ಟಿ’ ಯ ಹುಡುಗರ ಯೋಚನೆಗಳು, ಅವರ ಜೀವನ ಮೌಲ್ಯಗಳು ಹೇಗೆ ಕಾಲ-ಕ್ರಮೇಣ ಬದಲಾಗುತ್ತವೆ, ಅವರು ಹೇಗೆ ತಮ್ಮನ್ನು ತಾವು ಕಂಡುಕೊಂಡು ಜವಾಬ್ದಾರಿಯುತ ನಾಗರಿಕರಾಗಿ ಬದಲಾಗುತ್ತಾರೆ ಎಂಬುದನ್ನು ಈ ಚಿತ್ರ ಬಹಳ ಪರಿಣಾಮಕಾರಿಯಾಗಿ ತೋರಿಸುತ್ತದೆ. ಚಿತ್ರದ ನಾಯಕ ಕರ್ಣನ ಈ ರೂಪಾಂತರಕ್ಕೆ ಕಾರಣರಾಗುವವರು ಅವನ ಸಹಪಾಠಿಗಳಾದ ಸಾನ್ವಿ ಹಾಗೂ ಆರ್ಯ.

‘ಉಳಿದವರು ಕಂಡಂತೆ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’,  ‘ಸಿಂಪಲ್ ಆಗ್ ಒಂದು ಲವ್ ಸ್ಟೋರಿ’ ಇತ್ಯಾದಿ ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲೂ ತನ್ನ ನಟನಾ ಕೌಶಲದಿಂದ ಮಿಂಚಿದ್ದಾನೆ. ಹೊಸಬರಾದ ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತಾ ಹೆಗ್ಡೆ ತಮ್ಮ ಮುಗ್ಧತೆಯಿಂದ ಮನಸೂರೆಗೊಳ್ಳುತ್ತಾರೆ. ಅಜನೀಶ್ ಲೋಕನಾಥರ ಸಂಗೀತ ನೆನಪಿನಲ್ಲುಳಿಯುವಂತಿದೆ

ಇದಲ್ಲದೆ, ಕೆಲವು ಗಂಭೀರ ವಿಷಯಗಳನ್ನೂ ಚಿತ್ರ ಸಂಕ್ಷಿಪ್ತವಾಗಿ ಪರಿಗಣಿಸುತ್ತದೆ. ನಮ್ಮ ಮಡಿವಂತಿಕೆಯ ಸಮಾಜದಲ್ಲಿ ವೇಶ್ಯಾವೃತ್ತಿ ಶೀತ-ಜ್ವರಗಳಷ್ಟೇ ಸಾಮಾನ್ಯವಾಗಿದ್ದರೂ, ಜನರ ಕೆಂಗಣ್ಣಿಗೆ ಗುರಿಯಾಗುವುದು ವೇಶ್ಯೆ ಮಾತ್ರ, ಅವಳ ಅಸಹಾಯಕತೆಯನ್ನು ದುರ್ಬಳಕೆ ಮಾಡುವ ಗಂಡಸರಲ್ಲ ಎನ್ನುವುದು ಗೊತ್ತಿರುವ ವಿಚಾರವೇ ಆಗಿದ್ದರೂ ಇದನ್ನು ಮತ್ತೆ ಪರದೆಯ ಮೇಲೆ ಕಂಡು, ಕಣ್ಣು ಮಂಜಾಗಿದ್ದು ಸುಳ್ಳಲ್ಲ. ವೇಶ್ಯೆಯೊಬ್ಬಳಿಗೆ ಸಹಾಯ-ಹಸ್ತ ನೀಡುವ ಸಾನ್ವಿ ಹಾಗೂ ಕರ್ಣ, ಅವರಿಂದಾಗಿ, ಅವಳೊಂದು ಸಾಮಾನ್ಯ ಜೀವನ ನಡೆಸುವಂತೆ ಆಗುವ ಘಟನೆ ಮನಮಿಡಿಯುವಂತಿತ್ತು. ಹೆತ್ತವರಿಗೆ ತಮ್ಮ ಮಕ್ಕಳು ಉತ್ತಮ ನಾಗರಿಕರಾಗಿ ಬದುಕಬೇಕು ಎಂಬ ನಿರೀಕ್ಷೆ ಇರುವುದು ಎಷ್ಟು ಸಹಜವೋ, ಬೆಳೆಯುವ ವಯಸ್ಸಿನಲ್ಲಿ ಅವರು ಸಮಾನ-ವಯಸ್ಕರ ಪ್ರಭಾವಕ್ಕೊಳಗಾಗುವುದೂ ಅಷ್ಟೇ ಸಹಜ. ಈ ಹಂತದಲ್ಲಿ ಯುವಕ-ಯುವತಿಯರು ದಾರಿ ತಪ್ಪಿದರೆ, ಎಡವಿ ಬಿದ್ದರೆ, ಹೆತ್ತವರು ಹಾಗೂ ಅಷ್ಟೇ ಮುಖ್ಯವಾಗಿ ಶಿಕ್ಷಕರು ತಮ್ಮ ಘನತೆ-ಗೌರವಕ್ಕೆ ಧಕ್ಕೆ ಬಂತೆಂದು ಅವರನ್ನು ತಿರಸ್ಕರಿಸದೆ, ತಿಳಿಹೇಳಿ ಮುಕ್ತ ಮನಸ್ಸಿನಿಂದ ಅವರನ್ನು ಸ್ವೀಕರಿಸಿದರೆ, ಪರಿಣಾಮ ಒಳ್ಳೆಯದಾಗಬಹುದು ಎಂಬ ಸಂದೇಶವನ್ನೂ ಮನಮುಟ್ಟುವಂತೆ ನೀಡುತ್ತದೆ. ಇನ್ನು, ‘ಮಾಡರ್ನ್’ ಆಗುವ ಭರದಲ್ಲಿ, ಹುಡುಗರಿಗಿಂತ ನಾವೇನು ಕಮ್ಮಿ ಎಂದು ಹುಡುಗಿಯರೂ ಈಗ ಮದ್ಯ ಹಾಗೂ ಮಾದಕ ದ್ರವ್ಯಗಳನ್ನು ಸೇವಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈ ‘ಮಾಡರ್ನ್’ ವರ್ತನೆಗಳಿಂದ ಅನಾಹುತಗಳೇನಾದರೂ ಸಂಭವಿಸಿದರೆ, ಹುಡುಗರನ್ನು ನೋಡುವ  ದೃಷ್ಟಿಯಿಂದ ಸಮಾಜ ಹುಡುಗಿಯರನ್ನು ಕಾಣುವುದಿಲ್ಲ, ಜನರ ಕಣ್ಣಿನಲ್ಲಿ ಅವರು ಎಂದಿಗೂ ತಪ್ಪಿತಸ್ಥರಾಗಿಯೇ ಇರುತ್ತಾರೆ ಎಂಬ ಕಠೋರ ಸತ್ಯವನ್ನೂ ಬಹಳ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.

kirik-party-image-3ವ್ಯಂಗ್ಯ ಚಿತ್ರ – ಕೃಪೆ ಲಕ್ಷ್ಮೀನಾರಾಯಣ ಗುಡೂರ್

ಆದರೆ, ಚಿತ್ರದಲ್ಲಿ ಹಿಂಸೆ-ಕ್ರೌರ್ಯಗಳ ವೈಭವೀಕರಣ ಸ್ವಲ್ಪ ಜಾಸ್ತಿಯೇ ಇತ್ತು ಎಂದು ನನಗನ್ನಿಸಿತು. ಅಲ್ಪಪ್ರಾಣ- ಮಹಾಪ್ರಾಣಗಳು ಕನ್ನಡ ಭಾಷೆಯ ಅವಿಭಾಜ್ಯ ಅಂಗ ಎಂದು ನಂಬಿರುವ ನನಗೆ, ‘ಗರ್ಬಕೋಶ’, ‘ಚಕ್ರವ್ಯೂಹವನ್ನು ಬೇದಿಸಿದ ಅಬಿಮನ್ಯು’ ‘ಕರ್ಣ ಕರೀದಿಸಿದ ಕಾರು’ ಇತ್ಯಾದಿ ಭಾಷಾದೋಷಗಳು ಸಿಹಿ ಅವಲಕ್ಕಿಯೊಳಗಿನ ಕಲ್ಲಿನಂತೆ ಎತ್ತಿ ಕಾಣಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ಇನ್ನು, ಕುಡಿತ ಹಾಗೂ ಸಿಗರೇಟು ಸೇವನೆಯ ದೃಶ್ಯಗಳ ಪ್ರಮಾಣವಂತೂ ಉಸಿರುಗಟ್ಟಿಸುವಂತಿತ್ತು. ನಾನು ಮೊದಲು ಹೇಳಿದಂತೆ, ಕಾಲೇಜು ಜೀವನದಲ್ಲಿ ಕುಡಿತ, ಸಿಗರೇಟುಗಳೊಂದಿಗೆ ‘ಎಕ್ಸ್ ಪೆರಿಮೆಂಟ್’ ಮಾಡುವ ಹಲವರನ್ನು ನಮ್ಮಲ್ಲಿ ಬಹಳಷ್ಟು ಜನ ಕಂಡಿದ್ದೇವಾದರೂ, ಇವೆಲ್ಲ ಕಾಲೇಜು ಜೀವನದ ಅನಿವಾರ್ಯ ವಿಷಯಗಳು, ರಾತ್ರಿ ಹೊತ್ತು ಹಾಸ್ಟೆಲ್ ಗೆ ಬಂದು ಎಲ್ಲರೂ ಮಾಡುವುದೇ ಇದನ್ನು, ಅದೇನೂ ದೊಡ್ಡ ವಿಷಯವಲ್ಲಎಂಬಂತೆ ಬಿಂಬಿಸಿದ್ದನ್ನು ನೋಡಿ, ನನ್ನೊಳಗಿನ ಸಂಪ್ರದಾಯಸ್ಥ ತಾಯಿ ಜಾಗೃತಳಾಗಿದ್ದಳು. ‘Where do we draw the line between what is acceptable and what is not’ ಎಂದು ನಿಷ್ಕರ್ಷಿಸುತ್ತಲೇ ನಾನು ಸಿನೆಮಾ ಮಂದಿರದಿಂದ ಹೊರಬಂದೆ.

ಒಟ್ಟಿನಲ್ಲಿ, ಕನ್ನಡ ಸಿನೆಮಾ ಜಗತ್ತಿನಲ್ಲಿ ಉತ್ತಮ ಚಿತ್ರಗಳು ಬರುತ್ತಿರುವುದು ಸ್ವಾಗತಾರ್ಹ.

ಇತ್ತೀಚಿನ ಕನ್ನಡ ಸಿನೆಮಾಗಳ ಕೀಳು ಹಾಸ್ಯ, ಮುಜುಗರ ಬರಿಸುವ ಸಂಭಾಷಣೆ, ಅರ್ಥವಿಲ್ಲದ ಸಾಹಿತ್ಯ ಇತ್ಯಾದಿಗಳಿಂದ ಬೇಸತ್ತಿದ್ದ ಕನ್ನಡಾಭಿಮಾನಿಗಳು ಮತ್ತೆ ಚಿತ್ರಮಂದಿರಗಳತ್ತ ಹೋಗುವಂತೆ ಪ್ರೇರೇಪಿಸುತ್ತಿರುವ ಚಿತ್ರಗಳು ಈಗ ಮತ್ತೆ ಮೂಡಿಬರುತ್ತಿರುವುದು  ತುಂಬಾ ಸಂತೋಷದ ವಿಷಯ. ಈ ನಿಟ್ಟಿನಲ್ಲಿ ‘ಕಿರಿಕ್ ಪಾರ್ಟಿ’ ಖಂಡಿತವಾಗಿಯೂ ಒಂದು ಶ್ಲಾಘನೀಯ ಪ್ರಯತ್ನ. ಚಿತ್ರದ ಎರಡನೇ ಹಂತ ಸ್ವಲ್ಪ ದೀರ್ಘವೆನಿಸಿದರೂ,  ಎಲ್ಲಿಯೂ ನೀರಸತೆಯ ಭಾವ ಕಾಡದಂತೆ, ಕೆಲವು ಅನಿರೀಕ್ಷಿತ ಬೆಳವಣಿಗೆಗಳೊಂದಿದೆ ಪ್ರೇಕ್ಷಕರ ಮನಸ್ಸನ್ನು ಸೆರೆಹಿಡಿಯುವಲ್ಲಿ ಚಿತ್ರ ಯಶಸ್ವಿಯಾಗಿದೆ. ನಮ್ಮ-ನಿಮ್ಮೆಲ್ಲರನ್ನೂ ನೆನಪಿನಂಗಳದಲ್ಲೊಂದು ವಾಕ್ ಮಾಡಿಸಿ ಬರುತ್ತದೆ, ಮುಖದಲ್ಲೊಂದು ನಗು ಮೂಡಿಸುತ್ತದೆ.  ಕಾಲೇಜು ಜೀವನದ ಉತ್ಸಾಹ, ಅಲ್ಲಿಯ ಆಗು-ಹೋಗುಗಳು, ಕಾಲೇಜು ವಿದ್ಯಾರ್ಥಿಗಳ ದೃಷ್ಟಿಯಿಂದ ನೋಡಿದರೆ ಬಹಳ ಚೆನ್ನಾಗಿ ಚಿತ್ರಿತವಾಗಿವೆ.  ಸದಭಿರುಚಿಯ, ನಾವೆಲ್ಲರೂ  ಕುಟುಂಬದೊಡನೆ ಕುಳಿತು ನೋಡಬಹುದಾದ ಇನ್ನಷ್ಟು ಸಿನೆಮಾಗಳು ಕನ್ನಡದಲ್ಲಿ ಮೂಡಿಬರುತ್ತವೆ ಎಂದು ಆಶಿಸೋಣ. ಕನ್ನಡದ ಪ್ರತಿಭೆಗಳು ನಟಿಸಿರುವ, ನಿರ್ಮಿಸಿರುವ, ಒಳ್ಳೆಯ ಚಿತ್ರಗಳು ಬಂದಾಗ ಕೊಂಕು ನುಡಿಯುವುದನ್ನು ಬಿಟ್ಟು, ಅವುಗಳನ್ನು ಪ್ರೋತ್ಸಾಹಿಸೋಣ. ಹೀಗಾದರೆ, ಕನ್ನಡ ಚಿತ್ರರಂಗ ಡಾಕ್ಟರ್ ರಾಜ್, ಡಾಕ್ಟರ್ ವಿಷ್ಣುವರ್ಧನ್ ರವರ ಕಾಲದಲ್ಲಿ ಇದ್ದಂತೆ ಮತ್ತೆ ಉತ್ತುಂಗಕ್ಕೇರುವ ದಿನ ಬರಬಹುದು.

***

`ಪ್ರೇಮಲೋಕ`ದಿಂದ `ಕಿರಿಕ್ ಪಾರ್ಟಿ`- ಕೇಶವ್ ಕುಲಕರ್ಣಿ

೧೯೮೭:

ನಾನಿನ್ನೂ ಕಾಲೇಜಿಗೆ ಕಾಲಿಟ್ಟಿರಲಿಲ್ಲ. `ಈ ನಿಂಬೆಹಣ್ಣಿನಂಥ ಹುಡುಗಿ ಬಂತು ನೋಡೋ`, `ಚಲುವೆ ಒಂದು ಕೇಳ್ತೀನಿ, ಇಲ್ಲ ಅಂದೇ (ಅನ್ನದೇ ಅಲ್ಲ) ಕೊಡ್ತೀಯಾ?`, `ನೋಡಮ್ಮಾ ಹುಡುಗಿ ಕೇಳಮ್ಮಾ ಸರಿಯಾಗಿ`,  ಎಂದು ಮಾತಾಡುವಂಥ ವಾಕ್ಯಗಳ ಹಾಡು ಕಿವಿಗೆ ಬಿದ್ದವು. ಚಿ ಉದಯ ಶಂಕರ್ ಅವರ ಸರಳಿತ ಸುಲಲಿತ, ವಿಜಯ ನಾರಸಿಂಹ ಅವರ ಕ್ಲಿಷ್ಟಪದಗಳ ಹಾಡುಗಳನ್ನು ಕೇಳಿ ಬೆಳೆದ ನನಗೆ ಮೊದಮೊದಲು ಸ್ವಲ್ಪ ಕಸಿವಿಸಿಯೇ ಆಯಿತು. We all resist change. ಆದರೆ ಸ್ವಲ್ಪೇ ದಿನಗಳಲ್ಲಿ ಹಾಡುಗಳು ಹುಚ್ಚು ಹಿಡಿಸಿದವು, ಬಾಯಿಪಾಠ ಆದವು. ಹೊಸಪರಿಭಾಷೆಯ ಸಾಹಿತ್ಯ ಮತ್ತು ಸಂಗೀತದ ಹೊಸತನ ಮಲಗಿದ್ದ ಕನ್ನಡ ಚಿತ್ರಸಂಗೀತವನ್ನು ಬಡಿದೆಬ್ಬಿಸಿತು. ಇನ್ನೂ ಕಾಲೇಜಿನ ಮೆಟ್ಟಿಲು ಹತ್ತಿಲ್ಲದಿದ್ದರೂ ಕಾಲೇಜಿಗೆ ಹೋಗುವ ಅಣ್ಣ ಇದ್ದ, ಬಳಗದ ಜನ ಇದ್ದರು, ಗೆಳೆಯರ ಅಣ್ಣ ತಂಗಿಯರಿದ್ದರು. ಎಲ್ಲರ ಬಾಯಲ್ಲೂ `ಪ್ರೇಮಲೋಕ`ದ ಹಾಡುಗಳೇ. ಈ ಸಿನೆಮಾ ಮಹತ್ವದ್ದಾಗುವುದು ಬರೀ ಹಾಡುಗಳಿಂದಲ್ಲ. ಹಾಡುಗಳ ಮೂಲಕ ಸಿನೆಮಾದ ಕತೆ ಹೇಳುವ, ಕಾಲೇಜು ಬದುಕಿನ ಪ್ರೇಮವನ್ನು ಪಡ್ಡೆ ಹುಡುಗರ ದೃಷ್ಟಿಯಿಂದ ತೋರಿಸಿತು. ಸಿನೆಮಾ ಯಾವಾಗ ನಮ್ಮೂರಿಗೆ ಬರುತ್ತೋ ಎಂದು ಕಾದಿದ್ದೇ ಕಾದಿದ್ದು. ಕಾಲೇಜಿನ ಬಗ್ಗೆ ಅದೇ ಮೊದಲ ಸಿನೆಮಾ ಏನಲ್ಲ. ಆದರೆ ಪ್ರೇಮಲೋಕ ಕನ್ನಡ ಕಮರ್ಷಿಯಲ್ ಚಿತ್ರದ ಒಂದು ಮಹತ್ವದ ಮೈಲುಗಲ್ಲಯಿತು. ಕಾಲೇಜ್ ಲೈಫನ್ನು ಬೆಳ್ಳಿಪರದೆ ಮೇಲೆ ಅಜರಾಮರವಾಗಿಸಿತು. ತುಂಡುಲಂಗದ ಜೂಹಿ ಚಾವ್ಲಾ ಹುಡುಗರ ಎದೆಯಲ್ಲಿ ಭದ್ರವಾದರು. ತುಟಿಗೆ ತುಟಿಯಿಟ್ಟು ಮುತ್ತನಿತ್ತು ಹುಡುಗರಿಗೆ ಹುಚ್ಚುಹಿಡಿಸಿದರು.

೨೦೧೬-೨೦೧೭:

ಫಾಸ್ಟ್ ಪಾರ್ವರ್ಡ್ ೨೦ ಇಯರ್ಸ್. `ಬೆಳಗೆದ್ದು ಯಾರ ಮುಖವ ನಾನು ನೋಡಿದೆ`, `ಸಾರ್, ತಿರ್ಬೋಕಿ ಜೀವನಾ ನಮ್ಮದಲ್ಲ`, ಎನ್ನುವ ಹಾಡುಗಳು ಕನ್ನಡಿಗರ ಫೋನುಗಳಲ್ಲಿ ಗುಣಗುಣಿಸುತ್ತಿದೆ. ಈಗ ಕೆಲ ವರ್ಷದಿಂದ ಯೋಗರಾಜ ಭಟ್ಟರು ಕನ್ನಡ ಹಾಡುಗಳನ್ನು ಬರೆಯುವ ಶೈಲಿಯನ್ನೇ ಬದಲಾಯಿಸಿದರು (ಹಳೆಪಾತ್ರೆ ಹಳೆಕಬಣ ಹಳೆ ಪೇಪರ್ ತರ ಹೋಯಿ). ಅಲ್ಲಿಂದ ಶುರುವಾದ ಟ್ರೆಂಡು `ಕಿರಿಕ್ ಪಾರ್ಟಿ`ಯಲ್ಲಿ ಮುಂದುವರೆದಿದೆ.

ಮತ್ತೆ ಕಾಲೇಜು ಲೈಫು. ಮತ್ತೊಂದು ಪ್ರೇಮಲೋಕ ಎಂದುಕೊಂಡರೆ ಅದು ಶುದ್ಧ ಸುಳ್ಳು. ಇಲ್ಲಿ ಪ್ರೇಮವಿದೆ, ಆದರೆ ಅದೇ ಮುಖ್ಯ ಎಳೆ ಅಲ್ಲ. ಇಂಜಿನಿಯರಿಂಗ್ ಕಾಲೇಜಿದೆ ಎಂದ ಮಾತ್ರಕ್ಕೆ `ಥ್ರಿ ಇಡಿಯಟ್ಸ್` ನ ನಕಲು ಆಗಿಲ್ಲ, ಎಲ್ಲಿಯೂ ಪ್ರೀಚ್ ಮಾಡುವುದೇ ಇಲ್ಲ. ಹುಡುಗಿಯರು ತುಂಡುಲಂಗ ಹಾಕುವುದಿಲ್ಲ, ಎದೆಸೀಳು ತೋರಿಸುವುದಿಲ್ಲ.  ತುಟಿಗೆ ತುಟಿಯಿಟ್ಟು ಮುತ್ತನಿಡುವುದಿಲ್ಲ. ಆದರೆ ಸಿನೆಮಾ ಬಾಕ್ಸಾಫೀಸನ್ನು ದೋಚುತ್ತಿದೆ.

ಇಪ್ಪತ್ತು ವರ್ಷಗಳಲ್ಲಿ ಎಷ್ಟೊಂದು ಬದಲಾಗಿದೆ!

ಮಲಯಾಳಂನಲ್ಲಿ ಕಾಲೇಜ್ ಜೀವನದ ಬಗ್ಗೆ ಅದ್ಭುತ ಸಿನೆಮಾಗಳನ್ನು ಮಾಡಿದ್ದಾರೆ. ಅದರಲ್ಲಿ ಸುಮಾರು ಸಿನೆಮಾಗಳು ಕನ್ನಡಕ್ಕೂ ಬಂದಿದೆ. `ಅಟೋಗ್ರಾಫ್`, `ಪ್ರೇಮಂ` ಉದಾಹರಣೆಗಳು. `ಕಿರಿಕ್ ಪಾರ್ಟಿ` ಅದಕ್ಕೊಂದು ಉತ್ತರ ಕೊಟ್ಟಿದೆ.

ಯಾವುದೇ ಬೋಧನೆ ಅಥವಾ ಉಪದೇಶದ ಹಂಗಿಲ್ಲದೇ ಒಂದು ದೊಡ್ಡ ಸೋಷಿಯಲ್ ಮೆಸೇಜನ್ನು ಹುಳ ಬಿಡುತ್ತದೆ ಈ ಚಿತ್ರ. ಈ ಲಾಸ್ಟ್ ಬೆಂಚ್ ಹುಡುಗರು ಮಾತೆತ್ತಿದರೆ ಕುಡಿಯುತ್ತಾರೆ, ಸೇದುತ್ತಾರೆ, ಬ್ಯಾಟು-ಸ್ಟಂಪು ಹಿಡಿದು ಹೊಡೆದಾಡಿಕೊಳ್ಳುತ್ತಾರೆ, ಸಸ್ಪೆಂಡಾಗುತ್ತಾರೆ, ಫೇಲಾಗುತ್ತಾರೆ, ಆನ್ಸರ್ ಪತ್ರಿಕೆಯನ್ನೇ ಕದ್ದು ಹಾಸ್ಟೇಲಿನಲ್ಲಿ ಕುಡಿಯುತ್ತ ಸೇದುತ್ತ ಜ್ಯೂನಿಯರುಗಳನ್ನು ಜಾನುವಾರುಗಳಂತೆ ಅಳಿಸುತ್ತ ಉತ್ತರ ಬರೆಯುತ್ತಾರೆ. ಆದರೆ ಈ ಹುಡುಗರ ಬಗ್ಗೆ ಯಾರೂ ಒಂದೇ ಒಂದು ಕೆಟ್ಟ ಮಾತು ಹೇಳುವುದಿಲ್ಲ.

ಆದರೆ ಹುಡುಗಿ, ಕುಡಿದು ಕುಣಿಯುತ್ತ ಅಕಸ್ಮಾತ್ತಾಗಿ ಬಿದ್ದು ಸತ್ತರೆ ಆ ವೀಡಿಯೋ ಮನೆ ಮನೆಯನ್ನೂ ತಲುಪಿ ಹುಡುಗಿಯ ಜನರ ಬಾಯಿಚಪಲದ ವಸ್ತುವಾಗುತ್ತಾಳೆ.  ತಂದೆಯ ಕಣ್ಣಲ್ಲಿ ಮಗಳು ನಿಷ್ಕೃಷ್ಟವಾಗುತ್ತಾಳೆ. ನಗಿಸುತ್ತ, ಎಪಿಸೋಡಿಕ್ ಆಗಿ ಕತೆ ಹೇಳುತ್ತ, ಎರಡೂವರೆ ಗಂಟೆ ಕಾಲೇಜು ಮತ್ತು ಕಾಲೇಜ್ ಹಾಸ್ಟೇಲಿನಲ್ಲಿ ನಮ್ಮನ್ನು ಕರೆದೊಯ್ಯುತ್ತಾರೆ.

ಬದಲಾಗುತ್ತಿರುವ ಸಮಾಜಕ್ಕೆ, ಎಲ್ಲರ ಕೈಯಲ್ಲಿ ಮೊಬೈಲ್ ಇರುವ ಜನಾಂಗಕ್ಕೆ ಈಗ ಮನರಂಜನೆ ಎಂದರೆ ಮರ ಸುತ್ತಿ ಕುಣಿಯುವ ಹಾಡುಗಳಲ್ಲ, ತುಂಡುಲಂಗದ ಹುಡುಗಿಯರಲ್ಲ, ಕ್ಯಾಬರೆಗಳಲ್ಲ. ಒಂದು ಚಿಕ್ಕ ಕತೆ, ಚಂದದ ಚಿತ್ರಕತೆ, ಅದಕ್ಕೊಪ್ಪುವ ಹಾಡುಗಳು, ಒಂದಿಷ್ಟು ನಗು, ಸ್ವಲ್ಪವೇ ಅಳು, ದಿನಾ ಮಾತಾಡುವಂಥ ಸಂಭಾಷಣೆ, ಸುಪ್ತವಾಗಿ ಹರಿಯುವ ಒಂದು ಮೆಸೇಜು ಇದ್ದರೆ ಜನ ಸಿನೆಮಾ ಹಾಲಿಗೆ ಬರುವಂತೆ ಮಾಡಬಹುದು ಎನ್ನುವುದಕ್ಕೆ ಈ ಸಿನೆಮಾ ಉದಾಹರಣೆ.

ಈ ಸಿನೆಮಾ ಏನು ಧಿಡೀರ್ ಎಂದು ಆದದ್ದಲ್ಲ. ಇದೇ ರಕ್ಷಿತ್ `ಉಳಿದವರು ಕಂಡಂತೆ` ಎನ್ನುವ `ರೋಶೋಮಾನ್` ತರಹದ ಸಿನೆಮಾ ಮಾಡಿದವರು. ಕಳೆದ ಕೆಲ ವರ್ಷ ಕನ್ನಡದಲ್ಲಿ ಹೊಸ ಹುಡುಗರು ವಿಭಿನ್ನ ಸಿನೆಮಾಗಳನ್ನು ಮಾಡುತ್ತಿದ್ದಾರೆ, ಅಷ್ಟೇ ಅಲ್ಲ, ಚೆನ್ನಾಗಿ ದುಡ್ಡು ಕೂಡ ಮಾಡುತ್ತಿದ್ದಾರೆ. `ರಂಗಿತರಂಗ`, `ಆಟಗಾರ`, `ಲೂಸಿಯಾ`, `ಯು ಟರ್ನ್`, ಕೆಲವು ಉದಾಹರಣೆಗಳು.

ಈ ಸಿನೆಮಾ, ಕಾಲೇಜು ಬರೀ ಪ್ರೇಮಿಸುವುದನ್ನು ಕಲಿಸುವುದಿಲ್ಲ, ನಗುವುದನ್ನು, ಗೆಳೆಯರನ್ನು, ವೈರಿಗಳನ್ನು, ಕುಡಿಯುವುದನ್ನು, ಸೇದುವುದನ್ನು, ವಿರಹವನ್ನು ಕಲಿಸುತ್ತದೆ ಎಂದು ಹದವಾಗಿ ಹೇಳುತ್ತದೆ, ಕಡೆಬೆಂಚಿನ ಹುಡುಗರ ದೃಷ್ಟಿಕೋನದಿಂದ.

ಬದಲಾಗುತ್ತಿರುವ ಹಿಂದೀ ಸಿನೆಮಾ ಸಂಗೀತದಂತೆಯೇ ಕನ್ನಡ ಸಂಗೀತವೂ ಬದಲಾಗುತ್ತಿದೆ. ಸಂಗೀತದಂತೆ ಸಿನೆಮಾ ಸಾಹಿತ್ಯವೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹೊಸಕಾಲಕ್ಕೆ ಹೊಸಹುಡುಗರು ಹೊಸ ರೀತಿಯಲ್ಲಿ ಕತೆ ಹೇಳುತ್ತಿದ್ದಾರೆ, ಹೊಸ ರೀತಿಯಲ್ಲಿ ಹಾಡುತ್ತಿದ್ದಾರೆ. ಸಿನೆಮಾದಲ್ಲಿ ಕ್ಲೀಷೆಯಾಗಿರುವ ಸೀನುಗಳನ್ನು ಧಿಕ್ಕರಿಸಿ ಸೀನುಗಳನ್ನು ಹೆಣೆಯುತ್ತಿದ್ದಾರೆ.  ಇಂಗ್ಲಂಡಿಗೂ ಸಿನೆಮಾ ರಿಲೀಸ್ ಮಾಡಿ ನಮಗೆಲ್ಲ ಮುದನೀಡಿದ್ದಾರೆ. ಖುಷಿಯಾಗುತ್ತದೆ.

***

6 thoughts on “ಕಿರಿಕ್ ಪಾರ್ಟಿ ಚಿತ್ರ ವಿಮರ್ಶೆ

 1. ವೈಶಾಲಿಯವರಿಗೆ

  ನಮಸ್ಕಾರ. ನೀವು ಕಿರಿಕ್ ಪಾರ್ಟಿ ಚಲನ ಚಿತ್ರದ ವಿಮರ್ಶೆ ಬಲು ಚೆನ್ನಾಗಿದೆ. ನೀವು ಡಾಕ್ಟರ್ ಆಗಿದ್ದರು ಕನ್ನಡದ ಬಗ್ಗೆ ಇರುವ ಅಭಿಮಾನ ನಿಮ್ಮ ಬರಹದಲ್ಲಿ ಎದ್ದು ತೋರುವದು. ಡಾಕ್ಟರ್ ಪ್ರಸಾದರು ಬರೆದ ಹಾಗೆ,ನಿಮ್ಮಂತಹ ಹೊಸ ಪೀಳಿಗೆಯ ಬರೆಹಗಾರರ ಅವಶ್ಯಕತೆ ನಮ್ಮ ಅನಿವಾಸಿ ವೃಂದಕ್ಕೆ ಇದೆ. ನಿಮ್ಮಲ್ಲಿ ಅಡಗಿರುವ ಕನ್ನಡ ಸಾಹಿತ್ಯದಲ್ಲಿರುವ ಆಸಕ್ತಿ,ಅಭಿಮಾನ,ಉಳಿದ ಕನ್ನಡಿಗರೊಂದಿಗೆ ಹಂಚಬೇಕಾದರೆ ಅನಿವಾಸಿಗೆ ಸೇರಿಕೊಂಡು ,ಕವಿತೆ,ಹರಟೆ,ಲೇಖನ ಬರೆಯಬಹುದಲ್ಲವೇ?
  ಮುಂಬರುವ ಕೆ.ಬಿ. ಯುಗಾದಿ ಹಬ್ಬದ ಕಾರ್ಯಕ್ರಮಕ್ಕೆ ಬಂದಲ್ಲಿ ಅನಿವಾಸಿ ವೃಂದದ ಸದಸ್ಯರನ್ನೆಲ್ಲ ಭೆಟ್ಟಿಯಾಗಲು ಸಾಧ್ಯವಿದೆ.
  ವಿಸ್ವಾಸಿ
  ಡಾಕ್ಟರ್ ಅರವಿಂದ

  Like

 2. ಪುರುಷ ಪ್ರಧಾನವಾದ ಸಮಾಜದಲ್ಲಿ ಸ್ತ್ರೀ ವಾದವನ್ನು ಎತ್ತಿಹಿಡಿಯುತ್ತ ಕಾಲೇಜು ದಿನಗಳ ಆಗುಹೋಗುಗಳನ್ನು ಪೋಣಿಸಿ ಯುವಜನಕ್ಕಾಗಿಯೇ ಮಾಡಿರುವಂಥ ಈ ಚಿತ್ರ ದಲ್ಲಿ ಹೇಳಿಕೊಳ್ಳುವಂತಹ ಕಥೆ ನನಗೆ ತೋರಲಿಲ್ಲ. ಎರಡನೇ ಅರ್ಧ ತೀರಾ ನಿಧಾನ ಗತಿಯಲ್ಲಿ ಸಾಗಿ ಕುಡಿತ ಬಡಿತ ಧೂಮಪಾನ ಇತ್ಯಾದಿಗಳನ್ನು ವೈಭವಿಕರಿಸಲಾಗಿದೆ. ಇಲ್ಲಿ ಎಷ್ಟರ ಮಟ್ಟಿಗೆ ಕಾಲೇಜಿನ ನಿಜ ಜೀವನವನ್ನು ನಿರೂಪಿಸಿಲಾಗಿದೆ ಎಂಬುದರ ಬಗ್ಗೆ ನನಗೆ ಸಂದೇಹವಿದೆ. ಇತ್ತೀಚಿನ ದಿನದಲ್ಲಿ ಕಾಣುವ ಅಶ್ಲೀಲ ಸಂಭಾಷಣೆ ಮಾತು ಲೈಂಗಿಕ ದೃಶ್ಯಗಳಿಂದ ಮುಕ್ತವಾಗಿದೆ ಎಂಬ ಹೆಗ್ಗಳಿಕೆಯನ್ನು ಬಿಟ್ಟರೆ ಇನ್ನೇನು ವಿಶೇಷ ನನಗೆ ಕಾಣಲಿಲ್ಲ! ಕಾಲೇಜು ದಿನಗಳು ಪುರಾತನ ಅನುಭವದಂತೆ ಕಾಣುವ ನನಗೆ ಈ ಚಿತ್ರಕ್ಕೆ ಸ್ಪಂದಿಸುವುದು ಸ್ವಲ್ಪ ಕಷ್ಟವೇ ಆಯಿತು. ಒಟ್ಟಾರೆ ಈ ಚಿತ್ರ ಯುವಪೀಳಿಗೆಗೆ ಖುಷಿ ಮತ್ತು ಸಂತೋಷವನ್ನು ನೀಡಿದ್ದರೆ, ನಿರ್ದೇಶಕರು ಕಲಾವಿದರು ತಮ್ಮ ಕಾರ್ಯದಲ್ಲಿ ಸಫಲವಾಗಿದ್ದಾರೆ ಎನ್ನ ಬಹುದು.

  ನನ್ನ ಅಭಿಪ್ರಾಯಗಳು ಅದೇನೆಯಿದ್ದರೂ ವೈಶಾಲಿ ಮತ್ತು ಕೇಶವ್ ಅವರು ಒಂದು ಉತ್ತಮವಾದ ವಿಮರ್ಶೆಯನ್ನು ಒದಗಿಸಿದ್ದಾರೆ. ವ್ಯಾವಸಾಯಿಕ ಪತ್ರಕರ್ತರು ಬರೆದ ವಿಮರ್ಶೆಯಷ್ಟೇ ಉತ್ಕೃಷ್ಟವಾಗಿದೆ. ಕನ್ನಡ ದಿನಪತ್ರಿಕೆಯಲ್ಲಿ ಓದಿದ ಸಿನಿಮಾ ವಿಮರ್ಶೆಯನ್ನು ನೆನಪಿಗೆ ತರುವಂತಿದೆ.

  Like

 3. ” ಕಿರಿಕ್ ಪಾರ್ಟಿ’ ಚಿತ್ರದ ವಿಶ್ಲೇಷಣೆ ,ವೈಶಾಲಿ ಹಾಗೂ ಕೇಶವ ಕುಲಕರ್ಣಿ ಇಬ್ಬರದೂ ತಮ್ಮದೇ ರೀತಿಯಲ್ಲಿ ವಿಶೇಷವಾಗಿವೆ .ವೈಶಾಲಿಯವರು ಬದಲಾಗುತ್ತಿರುವ ಯುವಜನಾಂಗದ ಬದುಕ ರೀತಿಯ ಬರೆದರೆ ,ಕೇಶವ ಕುಲಕರ್ಣಿಯವರು ಸಿನಿಮಾರಂಗ ತುಳಿಯುತ್ತಿರುವ ಬದಲಾವಣೆಯ ಹಾದಿಯನ್ನ ಪ್ರಸ್ತಾಪಿಸಿದ್ದಾರೆ. Change is law of life ಎಂಬುದು ಇಬ್ಬರ ಬರಹದಲ್ಲೂ ನಿರ್ವಿವಾದವಾಗಿದೆ .,ಏಕಮತದಿಂದ ವ್ಯಕ್ತವಾಗಿದೆ ಎಂಬೆಣಿಕೆ. ಹಳೆಯ ಸಿನಿಮಾಗಳನ್ನ ನೋಡಿದರೆ ಒನಪು ,ಒಯ್ಯಾರ , ಒಂದೊಂದು ಕಡೆ ಅಸಹಜ ಎನ್ನುವಷ್ಟರ ಮಟ್ಟಿಗೆ ಇತ್ತೇನೋ ! ಆಮೇಲೆ ಉಡುಗೆ ತೊಡುಗೆಯ ಬದಲಾವಣೆ ಕಂಡದ್ದಾಯ್ತು.ಈಗ ಹುಡುಗ ಹುಡುಗಿಯರ ಬಿಂದಾಸ್ ವರ್ತನೆ.ಹೀಗೇ ಒಂದೊಂದು ಆಕರ್ಷಣೆಯ ಬಿಂದುಗಳಾಗ್ತಾ ಬಂದಿವೆ ಎಂಬೆಣಿಕೆ. ಸಮಾಜದ ಕನ್ನಡಿ ಸಿನಿಮಾಗಳೋ ,ಸಿನಿಮಾದ ಅನುಕರಣೆ ನಿತ್ಯ ಜೀವನದಲ್ಲೋ ಕಾಣೆ.ಒಟ್ಟಾರೆ ಮನರಂಜನೆಯೇ ಗುರಿಯಾಗಿದ್ದರೋ ಅಲ್ಲಲ್ಲಿ ಸಂದೇಶಗಳಿರರ್ತವೆ .ಅದನ್ನು ಇಬ್ಬರೂ ಲೇಖಕರ ವಿಮರ್ಶೆ ಬಿಂಬಿಸುವದನ್ನು ಕಾಣಬಹುದಾಗಿದೆ, ಅದೂ ಸುಂದರ ಶೈಲಿಯಲ್ಲಿ.ಕನ್ನಡ ಚಿತ್ರಗಳ ಭವಿಷ್ಯದ ಕಾಳಜಿ ಎಲ್ಲರನ್ನೂ ಚಿಂತನೆಗೆ ಹಚ್ಚುವಂತಿದೆ.ಸುಂದರ , ಮೌಲ್ಯಭರಿತ ವಿಶ್ಲೇಷಣೆಗೆ ವೈಶಾಲಿ ದಾಮ್ಲೆ ಹಾಗೂ ಕೇಶವ ಕುಲಕರ್ಣಿಯವರಿಗೆ ಅಭಿನಂದನೆಗಳು.
  ಸರೋಜಿನಿ ಪಡಸಲಗಿ

  Liked by 1 person

 4. ಜನರ ಮೆಚ್ಚುಗೆಯನ್ನು ಅಷ್ಟೇ ಅಲ್ಲದೆ ಗಲ್ಲಾ ಪೆಟ್ಟಿಗೆಯ ಝಣ ಝಣವನ್ನೂ ಗಳಿಸಿದ ಇತ್ತೀಚಿನ ಒಂದು ಸಿನಿಮಾದ ಮೇಲೆ ಎರಡು ಒಳ್ಳೆಯ, ಆದರೂ ವಿಭಿನ್ನವಾದ ವಿಮರ್ಶೆಗಳು ಇಲ್ಲಿವೆ. ಒಂದು ಸಿನಿಮಾವನ್ನು ವಸ್ತುನಿಷ್ಠವಾಗಿ ನೋಡಿ ಅಳೆದದ್ದು. ಎರಡನೆಯದು ಅದರೊಂದಿಗೆ ಕನ್ನಡ ಚಿತ್ರರಂಗ ಎರಡು ದಶಕಗಳಲ್ಲಿ ’ನಡೆದು ಬಂದ ದಾರಿ’ಯ ಹಿನ್ನೆಲೆಯಲ್ಲಿ ನೋಡಿ ಮತ್ತು ಉಳಿದ ಭಾಷೆಯ ಸಿನಿಮಾಗಳೊಡನೆಯೂ ತುಲನೆ ಮಾಡಿದ ಮೌಲಿಕ ಬರಹ. ಆದರೆ ಎರಡರಲ್ಲೂ ಪ್ರೇಕ್ಷಕ ವೀಕ್ಷಿಸಿ ತನ್ನದೇ ರೀತಿಯಲ್ಲಿ ಪ್ರತಿಕ್ರಿಯಿಸಿದ ರೀತಿಯ ಭಿನ್ನತೆ ಮತ್ತು ಸಾಮ್ಯತೆ ಸ್ವಾರಸ್ಯಕರ. ಕೊನೆಯಲ್ಲಿ ಇಬ್ಬರೂ ಬರಹಗಾರರು ಕನ್ನಡ ಸಿನಿಮಾದ ಭವಿತವ್ಯದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದನ್ನು ಸ್ವಾಗತಿಸಲೇ ಬೇಕು. ’’ಅನಿವಾಸಿ” ಅಂಗಳದಲ್ಲಿ ಮೊದಲ ಬಾರಿ ಪದಾರ್ಪಣೆ ಮಾಡಿದ ವೈಶಾಲಿ ದಾಮ್ಲೆಯವರಿಗೆ ಸುಸ್ವಾಗತ.

  Liked by 1 person

 5. Watched it here in Bengaluru. I felt you must be under 30 or so to enjoy. Some one “oldie” like me can’t help thinking how the boundaries have changed for a student these days! No wonder it is a hit in England with all the young(er) IT crowd there.

  Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.