ಎಚ್. ಎಸ್. ವೆಂಕಟೇಶಮೂರ್ತಿಯವರೊಡನೆ ಒಂದು ಆತ್ಮೀಯ ಸಂವಾದ- ಡಾ,ಪ್ರೇಮಲತ ಬಿ.

(ಯು. ಕೆ. ಕನ್ನಡ ಬಳಗದ ದೀಪಾವಳಿ ಸಂದರ್ಭದಲ್ಲಿ ಎಚ್. ಎಸ್. ವೆಂಕಟೇಶಮೂರ್ತಿ (HSV) ಅವರೊಡನೆ ಆತ್ಮೀಯ ಸಂವಾದವನ್ನು ಪ್ರೇಮಲತಾ ಅವರು ನಡೆಸಿಕೊಟ್ಟು ಸುಮಾರು  2 ವರ್ಷ ಕಳೆದಿವೆ. ಸಂವಾದ ಹಳೆಯದಾದರೂ ಅದು ತನ್ನ ಪ್ರಸ್ತುತತೆಯನ್ನು ಇನ್ನು ಉಳಿಸಿಕೊಂಡಿದೆ. ಇನ್ನು ಹಲವಾರು ವರ್ಷಗಳ ಬಳಿಕ ಓದಿದರೂ ಕೇಳಿದರೂ ಈ ಸಂವಾದ ಎಲ್ಲರ ಆಸಕ್ತಿ ಹಾಗೂ ಆಲೋಚನೆಯನ್ನು ಕೆರಳಿಸಬಹುದು. ಪ್ರೇಮಲತಾ ಅವರು ಕೇಳಿರುವ ಪ್ರಶ್ನೆಗಳು ಸಮರ್ಪಕವಾಗಿವೆ.

HSV ಅವರು ನಮಗೆ ತಿಳಿದಂತೆ ಒಬ್ಬಉತ್ತಮ ವಾಗ್ಮಿ. ಅವರು ಯಾವುದೇ ವಿಚಾರವನ್ನು ಹೇಳಬೇಕಾದರೆ ಅದನ್ನು ವಿಶ್ಲೇಷಿಸಿ, ಸರಳವಾಗಿ ಶುಧ್ಧ ಕನ್ನಡದಲ್ಲಿ ಎಲ್ಲರಿಗೂ ನಿಲುಕುವಂತೆ ಉಚಿತವಾದ ಉದಾಹರಣೆಗಳೊಂದಿಗೆ ವಿವರಿಸುವ ಶಕ್ತಿ ಹಾಗೂ ಪ್ರತಿಭೆಯನ್ನು ಪಡೆದುಕೊಂಡಿದ್ದಾರೆ. ಕೆಲವು ಪ್ರಶ್ನೆಗಳಿಗೆ ನೇರವಾಗಿ ಉತ್ತರ ಕೊಡದೆ, ತಮ್ಮ ಅಭಿಪ್ರಾಯವನ್ನು ಇತರರ ಮೇಲೆ ಹೇರದೆ ಪ್ರಶ್ನೆಯ ಸಂದರ್ಭವನ್ನು (Context) ಎತ್ತಿಕೊಂಡು ಅದಕ್ಕೆ ಹಿನ್ನೆಲೆ ನೀಡಿ ಪ್ರಶ್ನೆ ಕೇಳಿದವರೇ ಉತ್ತರವನ್ನು ಕಂಡುಕೊಳ್ಳುವ ಒಂದು ಅವಕಾಶವನ್ನು ಕಲ್ಪಿಸುತ್ತಾರೆ. ಇದು ಅವರ ಸಂವಾದದ ವಿಶೇಷ ಶೈಲಿ.

ಈ ಸಂವಾದದಲ್ಲಿನ ಕೆಲವು ಗಮನಾರ್ಹ ಮಾತುಗಳನ್ನು ಇಲ್ಲಿ ಪ್ರಸ್ತಾಪ ಮಾಡಲಾಗಿದೆ, ಅವು ಹೀಗಿವೆ;

ಪರಿಸರದಲ್ಲಿ ಯಾವ  ಭಾಷೆ ಇರುತ್ತೋ ಅದೇ ನಮ್ಮ ಭಾಷೆಯೂ ಆಗುತ್ತೆ.

 ಬಳಸಿದಷ್ಟೂ ವೃದ್ಧಿಯಾಗೋದು ಭಾಷೆ ಮತ್ತು ದೀಪ’.

ಮನೆಯ ಹಲವು ಕಿಟಕಿ ಬಾಗಿಲುಗಳನ್ನು ತೆಗೆದಾಗ ಹೇಗೆ ಹೆಚ್ಚು ಬೆಳಕು ಬರುತ್ತೊ ಹಾಗೆ ಬೇರೆ ಬೇರೆ ಭಾಷೆಗಳನ್ನು ಕಲಿಯೋದು.

ಈ ಮೇಲಿನ ಮಾತುಗಳನ್ನು ಗಮನಿಸಿದಾಗ ಈ ವಿಚಾರಗಳು ಹೊಸತೇನು ಅಲ್ಲ ಆದರೆ ಅದನ್ನು ಹೇಳುವ ರೀತಿ ಬಹಳ ಸೊಗಸಾಗಿದೆ, ಎಷ್ಟು ನಿಜ! Very convincing! – ಸಂ )

***

ಎಚ್. ಎಸ್. ವೆಂಕಟೇಶಮೂರ್ತಿಯವರೊಡನೆ ಒಂದು ಆತ್ಮೀಯ ಸಂವಾದ- ಡಾ. ಪ್ರೇಮಲತ ಬಿ.

ಕನ್ನಡ ಬಳಗದ   ದೀಪಾವಳಿ ಕಾರ್ಯಕ್ರಮಗಳು 18-19/10/2014 ರಂದು ಚೆಸ್ಟರ್ ಫೀಲ್ದ ನ ವೈಂಡಿಂಗ್ ವ್ಹೀಲ್ ಸಭಾಂಗಣದಲ್ಲಿ ನಡೆಯಿತು. ವಿಶೇಷ ಅತಿಥಿಗಳಾಗಿ ಬಂದಿದ್ದ ಪ್ರಸಿಧ್ಧ ಮತ್ತು ವಿಶಿಷ್ಟ ಸಾಹಿತಿಗಳಾದ ಹೆಚ್.ಎಸ್.ವಿ.ಯವರೊಡನೆ ಒಂದು ಕಿರು ಸಂದರ್ಶನ ನಡೆಯಿತು.

ನಮ್ಮ ಈ ಅನಿವಾಸಿಯ ಪ್ರಥಮ ಸಭೆಯ ಅಧ್ಯಕ್ಷತೆಯನ್ನು ವಹಿಸಿ ನಮ್ಮೆಲ್ಲರಲ್ಲಿ  ಹೆಮ್ಮೆ ತಂದ ಕವಿ ಇವರು. ಇತ್ತೀಚೆಗೆ ಇವರ ರಾಮಾಯಣಕ್ಕೆ ಸಂಬಂಧಿಸಿದ ಮಹಾಕೃತಿ ಕೂಡ ಬಿಡುಗಡೆಯಾಗಿದೆ. ’ತೆರೆದಷ್ಟೂ ಬಾಗಿಲು…..’ ಎನ್ನುವ  ಅಂಕಣವನ್ನು  ಅವಧಿ ದಿನಪತ್ರಿಕೆಯಲ್ಲಿ ಇವರು ಬರೆಯುತ್ತಿದ್ದು, ಯಾವುದು ಕಾವ್ಯ, ಅದರ ಬೆಳವಣಿಗೆ ಇತ್ಯಾದಿ ಕುರಿತು ಘನತರವಾದ ಪ್ರಬುದ್ಧ ಬರವಣಿಗೆಯ ಸರಣಿ ಬರಹದಲ್ಲಿ ತೊಡಗಿದ್ದಾರೆ. ಸರಳತೆ, ಪ್ರಬುದ್ಧತೆ ಮತ್ತು ನೈಜತೆಯನ್ನು ತುಂಬಿದ ಕವಿ ಮತ್ತು ಹೃದಯವಂತ ಕನ್ನಡಿಗರಿವರು. ’ಅನಿವಾಸಿ’ಗೆಂದೇ ಈ ಸಂದರ್ಶನವನ್ನು ಮಾಡಿದ್ದು.

ಈ ಸಂದರ್ಶನದ ಒಂದು ತುಣುಕನ್ನು ಯು ಟ್ಯೂಬಿ ನಲ್ಲಿ ನೋಡಬಹುದು. https://www.youtube.com/watch?v=zTJtHv599-Q

ಈ ಸಂದರ್ಶನವನ್ನು ರೆಕಾರ್ಡ್ ಮಾಡಿ, ಪರಿಷ್ಕೃತಗೊಳಿಸಿ, ಯು ಟ್ಯೂಬಿಗೇರಿಸಿದವರು ಡಾ. ಶ್ರೀವತ್ಸ ದೇಸಾಯಿಯವರು.

ಪ್ರೇಮಲತ –  ನಮಸ್ಕಾರ ಎಚ್, ಎಸ್.ವಿ ಯವರಿಗೆ. ನೀವು ಕಥೆ-ಪ್ರಬಂಧಗಳಿಂದ ಶುರುಮಾಡಿ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಬರೆದಿದ್ದೀರಿ. ಆದ್ರೆ ನೀವು ಕಥನ-ಕವನಗಳನ್ನ ಪ್ರಧಾನ ಮಾಧ್ಯಮ ಮಾಡಿಕೊಳ್ಳೋದಕ್ಕೆ ಏನಾದ್ರೂ ಕಾರಣಗಳಿವೆಯೇ? ಉದಾಹರಣೆಗೆ, ಸಾಹಿತ್ಯ ಪ್ರಕಾರಗಳಲ್ಲಿ ಆ ಮಾಧ್ಯಮಕ್ಕಿದ್ದ ಕೊರತೆ?

ಹೆಚ್.ಎಸ್.ವಿ.- ೧೯೫೦ ರಲ್ಲಿ ಅಡಿಗರಿಂದ ನವ್ಯಸಾಹಿತ್ಯದ ಉದಯವಾದ ಮೇಲೆ ಹಳೆ ಸಾಹಿತ್ಯ ಪ್ರಕಾರಗಳು ಹಿಂದೆ ಬಿದ್ದವು. ಸಾನೆಟ್ ಗಳ ರಚನೆ, ಭಾವಗೀತೆಗಳ ರಚನೆ, ಕಥನ-ಕವನಗಳು ಇವನ್ನು ಬರೆಯುವವರು ವಿರಳವಾದ್ರು. ೧೯೭೦ ರ ವೇಳೆಗೆ ಈ ಕಳೀತಾ ಇದ್ದ ಪ್ರಕಾರಗಳ ಪುನರುತ್ಥಾನದ ಸಂಕಲ್ಪ ತೊಟ್ಟೆ.

ಮಾಸ್ತಿ, ಎಕ್ಕುಂಡಿ, ಗೋವಿಂದ ಪೈ, ಕಡೆಂಗೋಡ್ಲು ಶಂಕರಭಟ್ಟರು ಕಥನ-ಕವನಗಳನ್ನು ಬರೆದಿದ್ದರು. ರಾಜರತ್ನಂ ಇನ್ನಿತರರ ನಂತರ ಮಕ್ಕಳ ಸಾಹಿತ್ಯಕ್ಕೂ ಕೊರತೆ ಇತ್ತು. ೧೯೭೭ ರಲ್ಲಿ  ನನ್ನ ಸಿಂದಾಬಾದನ ಆತ್ಮಕತೆ-೩ ನೀಳ್ಗತೆಗಳನ್ನು ಒಳಗೊಂಡ ಕಥನ-ಕವನ ಹೊರಬಂತು.

ಪ್ರೇಮಲತ– ಹೋದಿಗೆರೆ, ಹೊಳಲ್ಕೆರೆ, ಚಿತ್ರದುರ್ಗದ ಹಿನ್ನೆಲೆ ಇರೋ ನಿಮ್ಮ ಕೆಲವು  ಬರಹದಲ್ಲಿ ಜಾನಪದ ಮತ್ತು ಯಕ್ಷಗಾನದ ಪ್ರಭಾವ ಇದೆ. ಆದ್ರೆ ಬೆಂಗಳೂರಿನ ಆಡುನುಡಿಯನ್ನು ಕೂಡ ನೀವು ಇನ್ನಿಲ್ಲ ಅನ್ನುವಂತೆ ಉಪಯೊಗಿಸಿದ್ದೀರಿ. ಇದು ಅಳವಡಿಕೆ ತಂತ್ರನೇ ಅಥವಾ ಪರಿಸರದ ಪ್ರಭಾವವೇ?

ಹೆಚ್.ಎಸ್.ವಿ.- ವಸ್ತು ಯಾವ ಭಾಷೆಯನ್ನು ಅಪೇಕ್ಷಿಸುತ್ತೆ ಅನ್ನೋದರ ಮೇಲೆ ನನ್ನ ಬರವಣಿಗೆ ಅವಲಂಬಿಸುತ್ತೆ. ಅನೇಕ ಭಾಷಾವಲಯಗಳು ನಮ್ಮ ಮನಸ್ಸಲ್ಲಿ ಜಾಗೃತವಾಗಿರುತ್ತವೆ. ’ಏಕಂ ಸತ್” ಅನ್ನೋದ್ರಲ್ಲಿ ನನಗೆ ನಂಬಿಕೆಯಿಲ್ಲ, ’ಆನೇಕಂ ಸತ್” ಅನ್ನೋದೆ ನಿಜ. ಕನ್ನಡದಲ್ಲಿ ಅನೇಕ ತರದ ಕನ್ನಡಗಳಿವೆ. ಧಾರವಾಡ ಕನ್ನಡ, ದಾವಣಗೆರೆ ಕನ್ನಡ, ಮೈಸೂರು ಕನ್ನಡ ಹೀಗೇ ಹಲವು ತರದ ಕನ್ನಡದಲ್ಲಿ ಬರೀಬಹುದು. ನವೋದಯಕ್ಕಿಂತ ಮೊದಲು, ಕುವೆಂಪು ಅವರು ’ಕನ್ನಡವೊಂದೇ ಸತ್ಯ’ ಅಂತ ಹೇಳಿದ್ದಾರೆ. ಒಂದು ಕನ್ನಡ ಮಾಡ್ಬೇಕು ಅಂತ ಬೇಂದ್ರೆ ಕೂಡ ಕರೆ ಕೊಟ್ಟರು. ಆದ್ರೆ ಬೇಂದ್ರೆಯವರ ಧಾರವಾಡ ಕನ್ನಡ ಮಿಶ್ರಿತ ಕವನಗಳು ಜನಪ್ರಿಯವಾದಂತೆ ಸಂಸ್ಕೃತ  ಕವನಗಳು ಜನಪ್ರಿಯವಾಗಲಿಲ್ಲ.

hsv-interview
ಛಾಯಾ ಚಿತ್ರ-ಡಾ.ಶ್ರೀವತ್ಸ ದೇಸಾಯಿ

 

ಪ್ರೇಮಲತ– ಪ್ರಾಥಮಿಕ ಶಿಕ್ಷಣವನ್ನು  ಕನ್ನಡದಲ್ಲಿ ಪಡೆದಿರೋ ಜನ, ಪ್ರಪಂಚದ ಯಾವುದೇ ಮೂಲೆನಲ್ಲಿದ್ರೂ, ಸಾಹಿತ್ಯವನ್ನು ಭಾಷೆಯನ್ನು ಉಳಿಸೋಕೆ ಪ್ರಯತ್ನ ಮಾಡೋದು ನಿಮ್ಮ ಗಮನಕ್ಕೆ ಬಂದಿರಬಹುದು. ನೀವು ಬಹಳಷ್ಟು ಮಕ್ಕಳ ಸಾಹಿತ್ಯ ಬರೆದಿದ್ಡೀರಿ. ಭಾಷೆ ಮತ್ತು ಸಾಹಿತ್ಯನ ಉಳಿಸೋಕೆ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಬೇಕು ಅನ್ನೋ ಜನದ ನಿಲುವು ನಿಮಗೆ ಸರಿ ಅನ್ನಿಸುತ್ತಾ?

ಹೆಚ್.ಎಸ್.ವಿ. -ಆರಂಭದಲ್ಲಿ ನಾವು ಯಾವುದನ್ನು ಅನುಕರಣೆಯಿಂದ ಕಲೀತೀವೋ ಅದೇ ನಮ್ಮ ಭಾಷೆಯಾಗುತ್ತೆ. ಅಂತರಂಗದ ದ್ರವ್ಯವಾಗುತ್ತೆ. ದಂಡಿ ಹೇಳ್ತಾನೆ, ಭಾಷೆಯಿಲ್ಲದಿದ್ರೆ ಇಡೀ ಜಗತ್ತು ಅಂಧಕಾರದಲ್ಲಿ ಮುಳುಗುತ್ತೆ ಅಂತ.

ಭಾಷೆ ಸಹಜವಲ್ಲ. ಅಂದ್ರೆ ಹುಟ್ಟಿನಿಂದ ಬಂದದ್ದಲ್ಲ. ಅಳು-ನಗುವಿನಂತಲ್ಲ. ಅನುಕರಣೆಯಿಂದ ಬರುವಂತದ್ದು. ಇದು ಶಿಕ್ಷಣದಿಂದ ಮಾತ್ರ ಬರುವಂತದ್ದಲ್ಲ. ಪರಿಸರದಲ್ಲಿ ಯಾವ  ಭಾಷೆ ಇರುತ್ತೋ ಅದೇ ನಮ್ಮ ಭಾಷೆಯೂ ಆಗುತ್ತೆ. ಆ ಭಾಷೆಯಲ್ಲೆ ನಾವು ಚಿಂತಿಸೋದು, ಕನಸು ಕಾಣುವುದು.

ಪ್ರೇಮಲತ– ಕಾಲ ಬದಲಾಗಿದೆ. ಸಾಮೂಹಿಕ  ಮಾಧ್ಯಮಗಳಲ್ಲಿ  ಮತ್ತು ಜನಪ್ರಿಯ ಎಲೆಕ್ಟ್ರಾನಿಕ್  ಉಪಕರಣಗಳಲ್ಲಿ ಕನ್ನಡದ ಬಳಕೆ ಸಲೀಸಾದರೆ, ಹೆಚ್ಚಾದರೆ ಕನ್ನಡ ಇನ್ನಷ್ಟು ಕಾಲ ಉಳಿಯುತ್ತೆ ಅನಿಸುತ್ತಾ?

ಹೆಚ್.ಎಸ್.ವಿ.- ಬಳಸಿದಷ್ಟೂ ವೃದ್ಧಿಯಾಗೋದು ಭಾಷೆ ಮತ್ತು ದೀಪ. ಅದಕ್ಕೆಂದೇ ’ಹಚ್ಚೇವು ಕನ್ನಡದ ದೀಪ’ ಅಂತ ಹೇಳೋದು. ಹೆಚ್ಚು ಹೆಚ್ಚು ರೀತಿಯಲ್ಲಿ ಬಳಸಿದಷ್ಟೂ ಕನ್ನಡದ ವೃದ್ಧಿ ಯಾಗುತ್ತೆ.

ಮಕ್ಕಳಿಗೆ ಒಟ್ಟಿಗೇ ಹಲವು ಭಾಷೆಗಳನ್ನು ಕಲಿವ ಶಕ್ತಿಯಿದೆ. ಕಲಿವಾಗ ತಪ್ಪು ಮಾಡುವ ಚಿಂತೆ ಮಕ್ಕಳಿಗಿಲ್ಲ. ಹಿರಿಯರಲ್ಲಿ ಅವಮಾನದ ಅಂಜಿಕೆ ಇರೋದರಿಂದ  ಭಾಷೆ ಕುಂಠಿತವಾಗುತ್ತೆ. ಇಲ್ಲಿನ ಮಕ್ಕಳ ಪರಿಸರದಲ್ಲಿ ಅವರು ಇಂಗ್ಲೀಷ್ ಕಲೀಲಿ ಅದರ ಜೊತೆ ಕನ್ನಡವನ್ನು ಕೂಡ ಹೇಳಿಕೊಡಿ. ಮಕ್ಕಳಿಗೆ ಭಾಷೆ ಭಾರ ಆಗೋದಿಲ್ಲ. ಮನೆಯ ಹಲವು ಕಿಟಕಿ ಬಾಗಿಲುಗಳನ್ನು ತೆಗೆದಾಗ ಹೇಗೆ ಹೆಚ್ಚು ಬೆಳಕು ಬರುತ್ತೊ ಹಾಗೆ ಬೇರೆ ಬೇರೆ ಭಾಷೆಗಳನ್ನು ಕಲಿಯೋದು.

ಮಾತೃ ಭಾಷೆ ಅಂದ್ರೆ ಅಮ್ಮ ಮಾತಾಡೋ ಭಾಷೆ ಅಲ್ಲ. ಎಷ್ಟೋ ಬಾರಿ ಇದು ಪರಿಸರದ ಭಾಷೆಯಾಗಿಬಿಡತ್ತೆ

ಮಾಸ್ತಿಯವರ ಮನೆ ಮಾತು ತಮಿಳು ಆದ್ರೆ ಬೀದಿ ಮಾತು ಕನ್ನಡ. ಬೇಂದ್ರೆ ಯವರ ಮನೆ ಮಾತು ಮರಾಠಿ. ಪುತಿನ ಅವರ ಮನೆ ಮಾತು ತಮಿಳು. ನಾ. ಕಸ್ತೂರಿಯವರು ಮಲೆಯಾಳಂ ನಲ್ಲಿ ಬರೀಲಿಲ್ಲ. ಸಿದ್ಧಯ್ಯ ಪುರಾಣಿಕರು ಹೈದ್ರಾಬಾದ್ ಕರ್ನಾಟಕದಲ್ಲಿದ್ರು ಬರೆದದ್ದು ಕನ್ನಡದಲ್ಲಿ. ಪ್ರಜ್ಞೆ ಮತ್ತು ಪರಿಸರ ಎರಡು ಅವಿಚ್ಛಿನ್ನ ಭಾಗಗಳು. ಅನಂತಮೂರ್ತಿಯವರು ಇದನ್ನೆ ಹೇಳ್ತಾರೆ. ನಿಮ್ಮ ಈ ವಾತಾವರಣದಲ್ಲಿ ನೀವು ಹಾಲುಡಿಸಿದಂತೆ ಕನ್ನಡ ಕಲಿಸೋದು. ನೀವು ಕೊಟ್ಟಷ್ಟು ಅವರಿಗೆ ದಕ್ಕುತ್ತೆ.

ಪ್ರೇಮಲತ– ಕನ್ನಡ ಸಾಹಿತ್ಯಕ್ಕೆ ನಿಮ್ಮ ಕೊಡುಗೆ ಅದ್ಭುತವಾದ್ದು. ನಿಮ್ಮ ಮುಂದಿನ ರಚನೆ-ಬರವಣಿಗೆ ಏನು ಅಂತ ಕೇಳಬಹುದಾ?

ಹೆಚ್.ಎಸ್.ವಿ.- ತಿಳಿಗನ್ನಡದಲ್ಲಿ ಪಂಪನ ’ಆದಿಪುರಾಣ” ಬರೀಬೇಕು ಅಂತಿದೆ. ’ಬುದ್ಧಸ್ಮಿತ’ ಅನ್ನೋ ಬುದ್ಧನ ಬಗೆಗಿನ ಮಹಾಕಾವ್ಯವೊಂದನ್ನು ರಚಿಸೋ ಕನಸಿದೆ.ಆದ್ರೆ ಏನು ಬರೀತೀನೆ ಅನ್ನೋದು ನಿಜಕ್ಕು ಅಸ್ಪಷ್ಟ ಮತ್ತು ನಿಗೂಢ!

ಪ್ರೇಮಲತ– ಹೊರದೇಶದ ಕನ್ನಡಿಗರಾದ ನಾವು, ಕನ್ನಡ ಉಳಿಸೋಕೆ ಮಾಡೋ ಪ್ರಯತ್ನಗಳ ಬಗ್ಗೆ ನಿಮ್ಮ ಸಲಹೆ ಏನು?

ಹೆಚ್.ಎಸ್.ವಿ.- ನಿಮಗಿರೋ ಕನ್ನಡದ ಅಭಿಮಾನ ಬೆಂಗಳೂರಿನವರಿಗಿಲ್ಲ. ನನ್ನ ಸಲಹೆ ಇಷ್ಟೆ, ಕನ್ನಡದಲ್ಲಿ ಮಾತಾಡಿ, ಕನ್ನಡದಲ್ಲಿ ಕೆಲಸಮಾಡಿ. ಇಲ್ಲಿ ಎಲ್ಲ ಚಟುವಟಿಕೆಗಳನ್ನು ಕನ್ನಡದಲ್ಲಿ ಮಾಡ್ತಿರೋದನ್ನು ನೋಡಿ ನನಗೆ ತುಂಬ ಆಶ್ಚರ್ಯ. ಕನ್ನಡದಲ್ಲಿ ಮಾತಾಡಿ ಕನ್ನಡದಲ್ಲಿ ಕೆಲಸಮಾಡ್ತಾ ಹೋಗಿ, ಕನ್ನಡ ಖಂಡಿತಾ ಉಳಿಯುತ್ತದೆ.

*              *               *                *            *

ಸಂದರ್ಶನದ ಒಂದು ತುಣುಕನ್ನು ಯು ಟ್ಯೂಬಿ ನಲ್ಲಿ ನೋಡಿ:

 

5 thoughts on “ಎಚ್. ಎಸ್. ವೆಂಕಟೇಶಮೂರ್ತಿಯವರೊಡನೆ ಒಂದು ಆತ್ಮೀಯ ಸಂವಾದ- ಡಾ,ಪ್ರೇಮಲತ ಬಿ.

  1. ಭಾಷೆಯ ಮಹತ್ವದ ಬಗ್ಗೆ ಎಚ್. ಎಸ್. ವಿ ಅವರ ಚಿಂತನೆಯನ್ನು ಈ ಸಂದರ್ಶನದಲ್ಲಿ ಕೇಳಿದಾಗ, ನಮ್ಮ ಅನೇಕ ಅನಿವಾಸಿ ಕನ್ನಡಿಗರು ಅವರ ಮಕ್ಕಳಿಗೆ ನಮ್ಮ ಭಾಷೆಯನ್ನು ಕಲಿಸದೆ ಎಷ್ಟು ದೊಡ್ಡ ತಪ್ಪನ್ನು ಮಾಡ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಒಟ್ಟಿಗೆ ಹಲವಾರು ಭಾಷೆಗಳನ್ನು ಸುಲಲಿತವಾಗಿ ಕಲಿಯುವ ಸಾಮರ್ಥ್ಯವಿರುವ ಮಕ್ಕಳೇ ನಮ್ಮ ಭಾಷೆಯ ದೀಪವನ್ನು ಹಚ್ಚಿ ಬೆಳಗುವ ಭರವಸೆಯ ಜ್ಯೋತಿಗಳು ಎನ್ನುವುದು ಇಲ್ಲಿ ವ್ಯಕ್ತವಾಗಿವೆ. ಒಂದು ಸಂಸ್ಕೃತಿಯ ಸಾರವನ್ನೆಲ್ಲ ತನ್ನಲ್ಲಿ ಹೀರಿ ಅಡಗಿಸಿಕೊಂಡಿರುವ ಭಾಷೆಯ ಅವಸಾನವಾದರೆ, ಒಂದು ಸಂಸ್ಕೃತಿಯ ಅವಸಾನವಾಗುತ್ತದೆ ಎನ್ನುವುದನ್ನು ನಮ್ಮವರು ತಿಳಿದ ಕ್ಷಣವೇ, ಕನ್ನಡದ ಭವಿಷ್ಯ ಉಜ್ವಲವಾಗುತ್ತದೆ. ಈ ಸಂದರ್ಶನ ನಡೆದ ಸಮಾರಂಭದಲ್ಲಿ ಎಚ್. ಎಸ್. ವಿ ಅವರನ್ನು ಮುಖತಃ ನೋಡಿ ಮಾತನಾಡುವ ಸುವರ್ಣವಕಾಶವನ್ನು ಬಳಸಿಕೊಂಡ ನನಗೆ, ಅವರ ಆಳವಾದ ಜ್ನಾನ ಮತ್ತು ಪಾಂಡಿತ್ಯಗಳು ನಿಜಕ್ಕೂ ಆಳವಾದ ಪರಿಣಾಮವನ್ನು ಬೀರಿದವು ಎನ್ನಬಹುದು. ಇಂದಿನ ಕನ್ನಡ ಸಾಹಿತ್ಯಲೋಕದ ಅತ್ಯುತ್ತಮ ಸಾಹಿತಿ ಎನಿಸಿಕೊಂಡ ಎಚ್.ಎಸ್.ವಿ ಅವರ ಸಂದರ್ಶನ ಬಹಳ ಸಮರ್ಪಕ ಮತ್ತು ಸಕಾಲಿಕವಾಗಿದೆ. ಇದನ್ನು ಉತ್ತಮವಾಗಿ, ಅಚ್ಚುಕಟ್ಟಾಗಿ ನಡೆಸಿಕೊಟ್ಟ ಪ್ರೇಮಲತಾರಿಗೆ ದನ್ಯವಾದಗಳು.
    ಉಮಾ ವೆಂಕಟೇಶ್

    Like

  2. “ಅನೇಕ ಭಾಷಾವಲಯಗಳು ನಮ್ಮ ಮನಸ್ಸಲ್ಲಿ ಜಾಗೃತವಾಗಿರುತ್ತವೆ. … ’ಆನೇಕಂ ಸತ್” ಅನ್ನೋದೆ ನಿಜ”, … “ಬಳಸಿದಷ್ಟೂ ವೃದ್ಧಿಯಾಗೋದು ಭಾಷೆ ಮತ್ತು ದೀಪ- ಹೆಚ್.ಎಸ್.ವಿ.ಯವರ ಈ ಮಾತುಗಳು ಎಷ್ಟು ನಿಜ! ಸಂದರ್ಶನ ಬಹಳ ಪ್ರಸ್ತುತ. ವಿನತೆ ಶರ್ಮ

    Like

  3. ಎಚ್.ಎಸ್.ವೆಂಕಟೇಶ್ ಮೂರ್ತಿಯವರೊಂದಿಗಿನ ಪ್ರೇಮಲತಾ ಅವರ ಸಂದರ್ಶನ ಆತ್ಮೀಯವಾದಂತೆ ಚಿಕ್ಕದಾದರೂ ಮೌಲಿಕವಾಗಿದೆ .ಭಾಷೆ ಸಹಜವಲ್ಲ ,ಅಳು ನಗುವಿನಂತೆ ,ಅನುಕರಣೆಯಿಂದ ಬರುವಂಥದು ” ಎಷ್ಟು ನಿಜವಲ್ಲ ! ” ನಾವು ಕನಸು ಕಾಣುವದೂ ಕೂಡ ನಮ್ಮ ಮಾತೃ ಭಾಷೆಯಲ್ಲಿಯೇ ” ನಿಜ ವಿಚಾರ ಮಾಡಲೂ ,ಕನಸು ಕಾಣಲೂ ಭಾಷೆ ಬೇಕಲ್ಲ !? . ಎಷ್ಟು ಸಹಜ ಸುಂದರ ಹೇಳಿಕೆ ! ಕನ್ನಡ ಭಾಷೆಯ ಬಗ್ಗೆ ಅಭಿಮಾನವಿರಲಿ ಆದರೆ ಅಂಧಾಭಿಮಾನ ಬೇಡ ಎನಿಸುತ್ತದೆ.ಬೇರೆ ಬೇರೆ ಭಾಷೆಗಳನ್ನು ಕಲಿತಂತೆ ಜ್ಞಾನ, ತಿಳುವಳಿಕೆ ಹೆಚ್ಚುವುದು ಸಹಜ ತಾನೇ ? ಅದನ್ನೂ ಕೂಡ ಎಚ್ಎಸ್.ವಿಯವರು ತಾವರೆಯ ಬಾಗಿಲು ತೆರೆದಂತೆ ನವಿರಾಗಿಯೇ ,ಸುಂದರವಾಗಿಯೇ ಬಿಂಬಿಸಿದ್ದಾರೆ.ತಾವರೆಯ ಬಾಗಿಲು ತೆರೆದಂತೆ ತಾವರೆ ದೊಡ್ಡದಾಗುತ್ತಲೇ ,ಸುಂದರವಾಗುತ್ತಲೇ ಹೋಗುತ್ತದೆ.ತೆರೆದಷ್ಟೂ ಬಾಗಿಲು.ಅಂದರೆ ಗಾಳಿ ,ಬೆಳಕಿಗೆ ಪ್ರವೇಶ ,ಜ್ಞಾನಾಭಿವೃದ್ಧಿಗೆ ಅವಕಾಶ.ಚಿಕ್ಕ ಸಂವಾದದಲ್ಲಿಯೇ ಎಷ್ಟೊಂದು ವಿಚಾರಗಳು. ತುಂಬ ಸುಂದರ ಸಂವಾದ ಪ್ರೇಮಲತಾ ಅವರೇ.ಎಚ್ ಎಸ್.ವಿಯವರೊಂದಿಗಿನ ತಮ್ಮ ಹಳೆಯ ಸಂದರ್ಶನವನ್ನು ಪ್ರಕಟಿಸಿ ನಮ್ಮ ಕೇಳದಂಥವರಿಗೆ ಆ ಸಂವಾದದ ಆನಂದದ , ವಿಚಾರಗಳ ಮಥನದ ಅವಕಾಶ ಕೊಟ್ಟ “ಅನಿವಾಸಿ ” ಬಳಗಕ್ಕೆ ಧನ್ಯವಾದಗಳು.ಅಭಿನಂದನೆಗಳು ಪ್ರೇಮಲತಾ ಅವರೇ.
    ಸರೋಜಿನಿ ಪಡಸಲಗಿ.

    Like

  4. ಚಿಕ್ಕ ಸಂದರ್ಶನವಾದರೂ ಭಾಷೆಯ ಬಗ್ಗೆ ಅವರಾಡಿದ ಮಾತುಗಳು ಚಿಂತನೆಗೆ ಹಚ್ಚುವಂತೆ ಮಾಡುತ್ತವೆ. ಪ್ರಶ್ನೆಗಳು ತುಂಬಾ ಪ್ರಚಲಿತವಾಗಿವೆ ಕೂಡ. ಧನ್ಯವಾದಗಳು. – ಕೇಶವ

    Like

  5. ಇದೊಂದು ನಿಜಕ್ಕೂ ಆತ್ಮೀಯ ಸಂವಾದ. ವಿಡಿಯೋ ತುಣುಕಿನಲ್ಲಿ ಅದನ್ನು ಕಂಡಿದ್ದೇವೆ. ಹೆಚ್ ಎಸ್ ವಿಯವರ ಕವಿತ್ವ, ಪಾಂಡಿತ್ಯ, ವ್ಯಕ್ತಿತ್ವದ ಬಗ್ಗೆ ಎಲ್ಲರೂ ಓದಿದ್ದಾರೆ, ತಿಳಿದಿದ್ದಾರೆ.. ಇದರಲ್ಲಿ ಪ್ರೇಮಲತ ಅವರು,”ತಾವರೆಯ ಬಾಗಿಲೊಳಗೆ’ (’ಅವಧ” ಅಂಕಣ ನೋಡಿ, ಓದಿ) ಹೊಕ್ಕ ತುಂಬಿಯಂತೆ ಮಕರಂದವನ್ನು ಕೆದಕಿ ಎತ್ತಿ, ಎದೆ ತುಂಬ ಹೀರಿ ಹೊರಸೂಸಿದ್ದಾರೆ. ಅದರಿಂದಾಗಿ ಸಂದರ್ಶನವನ್ನು ಅಂದು ಕೇಳಿಸಿಕೊಳ್ಳಲಾಗದವರಿಗೂ (ನನ್ನ ಸುದೈವ, ನಾನಿದ್ದೆ ಅಲ್ಲಿ ಅಂದು!) ಅದನ್ನು ಬಿತ್ತರಿಸಿ”ಪರಾಗಸ್ಪರ್ಷ’ ಮಾಡಿಸಿದ್ದಾರೆ. ಸಂಪಾದಕರು ಮೇಲೆ ಹೇಳಿದಂತೆ ಮೌಲಿಕ ವಿಚಾರಗಳು, ಲಕ್ಷ್ಯ ಕೊಡಬೇಕಾದ ಅಭಿಪ್ರಾಯಗಳು.

    Like

Leave a comment

This site uses Akismet to reduce spam. Learn how your comment data is processed.