ಮಾತುಗಳು – ಕೇಶವ ಕುಲಕರ್ಣಿ ಬರೆದ ಕವನ

ಮಾತುಗಳು – ಕೇಶವ ಕುಲಕರ್ಣಿ ಬರೆದ ಕವನ

images

(ಕೇಶವ್ ಕುಲಕರ್ಣಿ ಅವರು ಬರೆದ ‘ಮಾತುಗಳು’ ಎಂಬ ಈ ಕವನ ಬಹಳ ನಿಗೂಢ ಹಾಗೂ ಅರ್ಥಗರ್ಭಿತವಾಗಿದೆ. ಇದನ್ನು ಒಂದು ಸುತ್ತು ಓದಿದ ಕೂಡಲೇ ಗ್ರಹಿಸುವುದು ಸುಲಭವಲ್ಲ. ಪದ್ಯದಲ್ಲಿ ಅಡಗಿರುವ Metaphor ಕೂಡ ಒಮ್ಮೆಗೆ ಮೇಲೆದ್ದು ತೋರುವುದಿಲ್ಲ. ಈ ಕವನವನ್ನು ಗ್ರಹಿಸುವುದಕ್ಕೆ ಒಂದೆರಡು ಬಾರಿಯಾದರೂ ಓದಬೇಕು.

ಕೇಶವ್ ತಿಳಿಸಿದ ಹಾಗೆ ಈ ಕವನದಲ್ಲಿ ಅವರು ವಿಶೇಷ ಶೈಲಿಯನ್ನು ಬಳಸಿಕೊಂಡಿದ್ದಾರೆ. ಇದು ಒಂದು ಉತ್ತಮ ಪ್ರಯೋಗ. ಇದನ್ನು ‘ಪದ ಸರಣಿ’ (Chain Verse) ಎಂದು ಗುರುತಿಸಬಹುದು. ಈ ಒಂದು ಬರವಣಿಗೆಯ ಶೈಲಿಯಲ್ಲಿ  ಕವನದಲ್ಲಿನ ಒಂದು ಚರಣದ (Paragraph)  ಕೊನೆಯ ಸಾಲಿನಲ್ಲಿ ಕಾಣುವ ಪದ ಮುಂದಿನ  ಚರಣದ  ಮೊದಲನೆ ಪದವಾಗಿ ಮೂಡುತ್ತದೆ. ಉದಾಹರಣೆಗೆ ಮೊದಲ ಚರಣದ  ಕೊನೆ ಸಾಲಿನ  ‘ಮಡಕೆ’ ಮುಂದಿನ ಚರಣದ ಮೊದಲನೇ ಸಾಲಿನಲ್ಲಿ ‘ಮಡಕೆಗಳು’ ಎಂದು ಮೂಡುತ್ತದೆ. ಹಾಗೆ ಎರಡನೆ ಚರಣದ ಕೊನೆ ಸಾಲಿನಲ್ಲಿ ಕಾಣುವ ‘ಧೂಳು’ ಮೂರನೇ ಚರಣದ ಮೊದಲನೆ ಸಾಲಿನಲ್ಲಿ ‘ಧೂಳುಗಳು’ ಎಂದು ರೂಪುಗೊಂಡಿದೆ.  ಮೂರು, ನಾಲ್ಕು ಸಾಲಿನ ಈ ಒಂದು  ವಿಶೇಷ ಕಾವ್ಯ ಶೈಲಿ ಬಹಳ ಪುರಾತನವಾದದ್ದು! ಈ ಶೈಲಿಯಲ್ಲಿ ಬರೆದ ಕವನಗಳು  ಬಹಳ ವಿರಳ. ಫ್ರೆಂಚ್, ಜರ್ಮನ್ ಹಾಗೂ ಇಂಗ್ಲೀಷ್ ಸಾಹಿತ್ಯದಲ್ಲಿ  ಈ ಶೈಲಿಯನ್ನು ಕೆಲವು ಬರಹಗಾರರು ಅಳವಡಿಸಿಕೊಂಡಿದ್ದಾರೆ. ಕನ್ನಡ ಸಿನಿಮಾ ಸಾಹಿತಿ ಚಿ. ಉದಯ ಶಂಕರ್ ಅವರು ತಮ್ಮ  ಕೆಲವು ರಚನೆಯಲ್ಲಿ ಈ ಶೈಲಿಯನ್ನು ಬಳಸಿಕೊಂಡಿರುವ  ವಿಚಾರ ಕೆಲವರಿಗೆ ಮಾತ್ರ ತಿಳಿದಿರಬಹುದು.

‘ಮಾತು ಮನೆ ಕೆಡುಸ್ತು (ಮಡಕೆ) ತೂತು ಒಲೆ ಕೆಡುಸ್ತು’ ಎಂಬ ಗಾದೆ ಈ ಕವನಕ್ಕೆ ಸ್ಫೂರ್ತಿ ಒದಗಿಸಿರಬಹುದು !

ಈ ನಿಗೂಢ ಕವನವನ್ನು ಓದುಗರು ತಮ್ಮದೇ ಆದ ದೃಷ್ಟಿ ಕೋನಗಳ ಮೂಲಕ ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿ ಕೊಳ್ಳಬಹುದು. ನಿಮ್ಮೆಲ್ಲರ ಪ್ರತಿಕ್ರಿಯೆಗಳ ಬಳಿಕ ಕೇಶವ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಲ್ಲಿ……. “ಮಾತುಗಳು” ಕವನವನ್ನು  ಓದಿ ಮತ್ತೆ ಓದಿ…. ಚರ್ಚೆ ಮಾಡೋಣ – ಸಂ)

 

ಮಾತುಗಳು
ಬಿದ್ದಿವೆ ಮೂಲೆಯಲ್ಲಿ
ಮಡಕೆಗಳ ಒಳಗೆ

ಮಡಕೆಗಳು
ನಾರಿವೆ ಗವ್ವೆನುವ
ಧೂಳು ಕುಡಿದು

ಧೂಳುಗಳು
ಹಾರಿವೆ ಗಾಳಿ ಬೀಸಿ
ಮನೆ ತುಂಬ

ಮನೆ
ಸೋತಿದೆ ಸೋರಿ
ಕಂಬ ಒದ್ದೆಯಾಗಿ

ಕಂಬಗಳು
ಟೊಳ್ಳಾಗಿವೆ ಒಳಗೆ
ಹೊರಗೆಲ್ಲ ಗಾಯಗಳು

ಗಾಯಗಳು
ಬಿರಿದಿವೆ ರಕ್ತಮಾಂಸ
ಗೆದ್ದಲು ಮುಗಿಬಿದ್ದಿವೆ

ಗೆದ್ದಲುಗಳು
ತಿನ್ನುತ್ತವೆ (ಒಂದು ದಿನ) ಮಡಕೆಯಲ್ಲಿ
ಬಿದ್ದ ಮಾತುಗಳ

9 thoughts on “ಮಾತುಗಳು – ಕೇಶವ ಕುಲಕರ್ಣಿ ಬರೆದ ಕವನ

  1. ಕೇಶವ ಕುಲಕರ್ಣಿಯವರ ವಿವರಣೆಗೆ ಸ್ವಾಗತ. ಪದ್ಯವನ್ನ ಪ್ರತಿ ಓದುಗನೂ ತನ್ನದೇ ರೀತಿಯಲ್ಲಿ ,ಕವಿಯ ಆಶಯಕ್ಕೆ ಧಕ್ಕೆ ಬರದಂತೆ ಅರ್ಥೈಸಬಹುದು.ಈ ಸವಲತ್ತು ಗದ್ಯಕ್ಕಿಲ್ಲವೇನೋ ಎಂಬನಿಸಿಕೆ. ಇಲ್ಲಿ ಕೇಶವ ಅವರು ಪ್ರತಿಯೊಬ್ಬರ ಅನಿಸಿಕೆಗಳನ್ನು ಸುಂದರವಾಗಿ ವಿಶ್ಲೇಷಿಸಿದ್ದಾರೆ ,ಧನ್ಯವಾದಗಳು.ಅವರು ಹೇಳುವಂತೆ ಕವಿತೆಯ ಬಗ್ಗೆ ಈ ಥರದ ಸಂವಾದ ನಿಜಕ್ಕೂ ಕವಿಗೆ ತರುವ ಖುಷಿ ಹೇಳಲಸದಳ .ನಾವು ಬರೆದ ಸಾಲುಗಳಿಗೆ ನಮಗೆ ಹೊಸ ಹೊಸ ಅರ್ಥ ಗೋಚರಿಸಿದರೆ ಆಶ್ಚರ್ಯವೇನಿಲ್ಲ. ಕೇಶವ ಕುಲಕರ್ಣಿಯವರೇ ನಿಮ್ಮ ಬರಲಿರುವ ಇನ್ನಷ್ಟು ಕವಿತೆಗಳ ನೀರೀಕ್ಷೆ .
    ಸರೋಜಿನಿ ಪಡಸಲಗಿ

    Liked by 3 people

  2. ಈ ಪುಟ್ಟ ಕವನಕ್ಕೆ ಇಷ್ಟೊಂದು ಆತ್ಮೀಯ ಮತ್ತು ಅರ್ಥಪೂರ್ಣ ಸಂವಾದ ಓದಲು ಸಿಗುತ್ತೆ ಎಂದು ಖಂಡಿತ ಅಂದುಕೊಂಡಿರಲಿಲ್ಲ. ಓದಿ ಪ್ರತಿಕ್ರಿಯ ಬರೆಯಲು ಸಮಯ ಕೊಟ್ಟ ಎಲ್ಲರಿಗೂ ಚಿರಋಣಿ.

    ಪ್ರಸ್ತುತ ಸಂಪಾದಕರಾದ ಪ್ರಸಾದವರು ತುಂಬ ಉಪಯುಕ್ತ ಮಾಹಿತಿ ನೀಡಿ ಕವನ ಓದುವಂತೆ ಪ್ರೇರೇಪಿಸಿರದಿದ್ದರೆ ಈ ಕವನಕ್ಕೆ ಇಷ್ಟು ಚಂದದ ಪ್ರತಿಕ್ರಿಯೆಗಳು ಬರುತ್ತಿರಲಿಲ್ಲ ಅನಿಸುತ್ತದೆ.

    `ನಿಮ್ಮೆಲ್ಲರ ಪ್ರತಿಕ್ರಿಯೆಗಳ ಬಳಿಕ ಕೇಶವ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಲ್ಲಿ…` ಎಂದು ಕೊನೆಗೊಂದು ಬಾಂಬು ಸಿಡಿಸಿ ನಾನು ಬರೆಯುವಂತೆ ಅಜ್ಞಾಪಿಸಿದ್ದಾರೆ. ತುಂಬ ಥ್ಯಾಂಕ್ಸ್.

    ಚಿ.ಉದಯಶಂಕರ್ ಬರೆದ `ಬಾನಲ್ಲೂ ನೀನೇ…` ಕೇಳದ ಕನ್ನಡಿಗರಿದ್ದಾರೆಯೇ? ಆ ಹಾಡಿನ ನುಡಿಯಲ್ಲಿ, `ಹೂವಲ್ಲಿ ನಿನ್ನ ಮೊಗವನ್ನು ಕಂಡೆ
    ಮೊಗದಲ್ಲಿ ನಿನ್ನ ನಗುವನ್ನು ಕಂಡೆ…`
    ಎಂದು ಪದಸರಣಿ ಹಾಡು ಹೆಣದಿಲ್ಲವೇ? ಇಂಗ್ಲೀಷ್ ಭಾಷೆಯಲ್ಲೂ ಇಂಥ ಪ್ರಯೋಗಗಳಿವೆ, ಅದಕ್ಕೆ Chain Verse ಅನ್ನುತ್ತಾರೆ. ಕನ್ನಡ ವ್ಯಾಕರಣಿಕರು ಅದಕ್ಕೆ ಏನೆನ್ನುತ್ತಾರೋ ನನಗೆ ತಿಳಿಯದು. ನಾನು ಅದಕ್ಕೆ ಪದಸರಣಿ ಪದ್ಯ ಎನ್ನುವ ಹೆಸರು ಕೊಟ್ಟಿದ್ದೇನೆ. ನನ್ನ ಕವನಕ್ಕೆ ಇದೇ ಸ್ಪೂರ್ತಿ. ಇದು ಯಾವುದೇ ಕವನದ ಅನುವಾದವಲ್ಲ, ಭಾವಾನುವಾದವೂ ಅಲ್ಲ.

    ಪ್ರತಿಕ್ರಿಯಿಸಿದ ಎಲ್ಲರೂ ಕವನವನ್ನು ತುಂಬ ಚೆನ್ನಾಗಿ ವಿಶ್ಲೇಷಿಸಿದ್ದಾರೆ. ದೇಸಾಯಿ, ಪಡಸಲಗಿ, ಉಮಾ, ತುಂಬೆ ಮತ್ತು ಪ್ರಸಾದ್ ಅವರು ಕವಿತೆಯ ಪ್ರತಿಮೆಗಳಿಂದ ಅದ್ಭುತ ಅರ್ಥಗಳನ್ನು ಹೊರತೆಗೆದಿದ್ದಾರೆ. ಇಲ್ಲಿ ನಾನು ವಿವರಿಸುವುದು ಏನೂ ಇಲ್ಲ.

    ಈ ಕವಿತೆಯ ಬಗ್ಗೆ ಸ್ವಲ್ಪ ಹೇಳುವುದಾದರೆ ಹೀಗೆ: ಮೇಲೆ ಹೇಳಿದಂತೆ ಇದೆ ಪದಸರಣಿ ಪದ್ಯ. ಚಿಕ್ಕ ಚಿಕ್ಕ ಮೂರು ಸಾಲಿನ ಮುಕ್ತಕ ಸಾಲಿನ ಚರಣಗಳು. ಚರಣದ ಕೊನೆಯ ಸಾಲಿನ ಪದ ಹಿಡಿದು ಮುಂದಿನ ಚರಣ ಶುರುಮಾಡುವುದು. ಕವಿತೆ ಕೊನೆಯಾಗುವುದು, ಮೊದಲ ಚರಣದ ಶಬ್ದದಲ್ಲೇ! ಅಲ್ಲಿಗೆ ಒಂದು ಗಿರಿಕಿ ಹೊಡೆದಂತೆ. ಸರ್ಕಲ್ ಕಂಪ್ಲೀಟ್! ಹೀಗೆ ಮಾಡುವ ಉದ್ದೇಶ: ಒಂದು ಕ್ರಿಯೆಯಿಂದ ಇನ್ನೊಂದು ಕ್ರಿಯಯಾಗುತ್ತದೆ, ಅಲ್ಲಿಂದ ಇನ್ನೊಂದು…

    ಈ ಕವಿತೆಯಲ್ಲಿ `ಮಾತ`ನ್ನು ತೆಗೆದುಹಾಕಿಬಿಟ್ಟರೆ, ಇಡೀ ಪದ್ಯ ಒಂದು ಹಾಳುಮನೆಯ ಚಿತ್ರವನ್ನು ಕಟ್ಟಲು ಪ್ರಯತ್ನಿಸಿದೆ – ಲೈಕ್ ಅ ಪೇಂಟಿಂಗ್. ಆದರೆ ಕವಿತೆಗೆ `ಮಾತುಗಳು` ಸೇರಿ ಇಡೀ ಕವಿತೆಯ ಅರ್ಥವೇ ಬದಲಾಗುತ್ತದೆ. ಕವಿತೆಯಲ್ಲಿ `ಮಾತು` ಇರುವುದುದರಿಂದ ಮುಂದೆ ಬರುವ ಎಲ್ಲ ವರ್ಣನೆಗಳು ಪ್ರತಿಮೆಗಳಾಗಿ ಬಿಡುತ್ತವೆ.

    ಇಲ್ಲಿರುವ ಪ್ರತಿಮೆಗಳಿಗೆ (ಮಡಕೆ, ಗೆದ್ದಲು, ಕಂಬ, ಗಾಳಿ ಇತ್ಯಾದಿ) ಇದೇ ಅರ್ಥ ಎಂದು ಇಲ್ಲ. ಪ್ರತಿಕ್ರಿಯೆಸಿದ ಎಲ್ಲರೂ ಅರ್ಥಗಳನ್ನು ಚೆನ್ನಾಗಿ ಹೆಕ್ಕಿ ತೆಗೆದಿದ್ದೀರಿ.

    ದೇಸಾಯಿ: `ಮೇಲಿನ ಕವಿತೆಯನ್ನು ಓದಿದಾಗ ಅದರೊಂದಿಗೆ ಬಂದ ಚಿತ್ರದಲ್ಲಿಯ ಹಾಳುಬಿದ್ದ ಮನೆಯೊಳಗೆ ಹೊಕ್ಕಂತಾಯಿತು.` ಕವಿತೆ ಓದಿದ ಮೇಲೆ ಒಂದು ಪಾಳುಬಿದ್ದ ಮನೆ ಹೊಕ್ಕು ಬಂದ ಭಾವನೆ ಬಂದರೆ ಕವಿತೆ ಗೆದ್ದಂತೆ!

    ಪಡಸಲಗಿ: `ಮನದ ಮಡಕೆಯ ಮೂಲೆಯಲ್ಲಿ ,ಅಹಂ ,ಅಸಹನೆ , ಕೋಪ ತಾಪ ಗಳಡಿಯಲ್ಲಿ ಸಿಕ್ಕು ಕೊಳೆತು ನಾರಿವೆ. ಆ ದುರ್ಗಂಧ ,ಧೂಳು ಹಾರಾಡಿ ಕಣ್ಣು ಕುರುಡಾಗಿಸಿ ,ಕಿವಿ ಕಿವುಡಾಗಿಸಿ,ವ್ಯಕ್ತಿತ್ವವನ್ನೇ ಹಾಳುಗೆಡವಿ ,ಜೀವನದ ಆಧಾರಸ್ತಂಭ ಗಳಾದ ಪ್ರೀತಿ ,ವಿಶ್ವಾಸಗಳನ್ನೇ ಟೊಳ್ಳಾಗಿಸಿದಾಗ ಬಿರಿದ ಮನದಾಳದಿಂದ ಸೋರುವ ನೋವಿಗೆ ಮುಗಿಬಿದ್ದ ದುಃಖದ ಗೆದ್ದಲು ಮನವನ್ನ ಅಸಹಾಯಕತೆಯ ಮೌನದತ್ತ ನೂಕಿ,ಮನಃಶಾಂತಿಯನ್ನ ಹಾಳುಗೆಡವದಿದ್ದೀತೆ ? ಈ ಗೆದ್ದಲಿಗಿಂತ ಬಲವಾದ ಅಹಂನ ಗೆದ್ದಲು ಪ್ರೀತಿ ವಿಶ್ವಾಸಗಳನ್ನೇ ತಿಂದು ಹಾಕಿ ಮನದ ಮಡಕೆಯನ್ನ ಬರಿದು ಮಾಡಿ ಬಾಳೆಂಬ ಮನೆಯನ್ನು ಬೀಳು ಹೊಯ್ಯುವುದರಲ್ಲಿ ಸಂಶಯವೇ ? ಕವನದ ಆರಂಭದಲ್ಲಿರುವ ಹಾಳುಮನೆ ಈ ಗೆದ್ದಲು ಹಿಡಿದ ಜೀವನವೇ ಅಲ್ಲವೇ?` ಪ್ರತಿಮೆಗಳು ಹೊರಡಿಸುವ ಅರ್ಥಗಳು ಅಪಾರ.

    ಉಮಾ: `ಹಾಳು ಬಿದ್ದ ಮನೆ, ಈ ಸ್ಥಳದಲ್ಲಿ ನಡೆದಿರಬಹುದಾದ ಒಂದು ದುರಂತವನ್ನು ಪ್ರತಿಬಿಂಬಿಸುವಂತಿದೆ. ಒಮ್ಮೆ ಗಲಗಲ ಸದ್ದಿನ ಮಾತುಗಳಿಂದ ತುಂಬಿದ್ದ ಮನೆ, ಅಲ್ಲಿ ನಡೆದ ದುರ್ಘಟನೆಯಲ್ಲಿ ನಾಶವಾದ ಮನೆಯ, ಮತ್ತು ಮನಗಳ ದುಃಖವನ್ನು ವರ್ಣಿಸುತ್ತಿದೆ.` ಎಂಥ ಅದ್ಭುತ ವಿಚಾರ!! ನಿಮ್ಮ ಈ ಯೋಚನೆ ಕವುತೆ ಇನ್ನೊಂದು ಆಯಾಮ ಕೊಡಬಲ್ಲಷ್ಟು ಶಕ್ತವಾಗಿದೆ!

    ಪ್ರೇಮಲತಾ: ಇದು ಅನುವಾದವಲ್ಲ, ಭವಾನುವಾದವೂ ಅಲ್ಲ.

    ವಿಜಯ್: `My understanding of poem is talking / communication is important in families / homes. Mistrust and break down in communication will lead to slow deterioration of family , family become the talk of town , outsiders take advantage of the situation ( invasion by white ants) and final distraction of individuals.` ಕನ್ನಡದಲ್ಲಿಲ್ಲದಿದ್ದರೂ ಸರಿ, ಇಂಗ್ಲೀಷಿನಲ್ಲಾದರೂ ಸರಿ. ಪ್ರತಿಕ್ರಿಯೆ ಬರೆದಿದ್ದೀರಿ. ನಿಮ್ಮ ವಿವರಣೆ ತುಂಬ ಚೆನ್ನಾಗಿದೆ. ಮಾತಿಲ್ಲದೇ ಸಂಹವನ (ಕಮ್ಯೂನಿಕೇಷನ್) ಇಲ್ಲ. ಆದರೆ ಮಾತೇ ಎಲ್ಲವನ್ನೂ ಕೊಲ್ಲಬಲ್ಲಷ್ಟು ಶಕ್ತ ಕೂಡ.

    ಪ್ರಸಾದ್: `‘ಮಡಕೆ’ ಅನ್ನುವುದು ಜನರ ತಲೆಗಳ ಸಂಕೇತ ಎನ್ನ ಬಹುದು. ಕವನದಲ್ಲಿನ ‘ಮನೆ’ ಒಬ್ಬ ವ್ಯಕ್ತಿಯ ಅಥವಾ ಸಮುದಾಯ, ಸಮಾಜ ಇವುಗಳ symbolic representation ಇರಬಹುದು. ಮಾತು ಮತ್ತು ಅದರ ಪರಿಣಾಮಗಳು ಚಕ್ರಗತಿಯಲ್ಲಿ ಕೊನೆಯಿಲ್ಲದೆ ಸಾಗುತ್ತದೆ ಎಂಬ ಅಂಶವು ಅಡಗಿರಬಹುದು.` ನೀವು ಈ ಪ್ರತಿಮೆಗಳನ್ನು ಬಿಡಿಸಿರುವ ರೀತಿ ಕವನಕ್ಕೆ ಹೊಸ ಆಯಾಮ ಕೊಡುತ್ತದೆ.

    ಕವಿತೆಗೆ ಈ ತರಹದ ಸಂವಾದವಾದರೆ ಕವಿಯ ಖುಷಿಗೆ ಮೇರೆಯೇ ಇಲ್ಲ. ನಿಮ್ಮ ಪ್ರೋತ್ಸಾಹ ಇನ್ನೂ ಹೊಸ ಕವಿತೆಗಳನ್ನು ತರಲಿದೆ, ಎಚ್ಚರ್! 🙂

    Liked by 2 people

    • ಕೇಶವ್ ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಮಾತುಗಳು ನಿಜಕ್ಕೂ ಬಹಳ ಅರ್ಥಗರ್ಭಿತವಾದ ಸಾಲುಗಳು. ನೀವು ಹೇಳಿರುವಂತೆ, ಕನ್ನಡ ಚಲನಚಿತ್ರರಂಗದ ಅಪ್ರತಿಮ ಸಾಹಿತಿ ದಿ. ಚಿ. ಉದಯಶಂಕರ ಅವರ ಗೀತೆಗಳಲ್ಲಿ, ಇಂತಹ ಬಹಳಷ್ಟು ಪ್ರಯೋಗಗಳಿವೆ. ಆ ಹಾಡುಗಳನ್ನು ಕೇಳುವಾಗ ನಾವು ಅದಕ್ಕೆ ಗಮನ ಕೊಟ್ಟಿರುವುದಿಲ್ಲ. ಈ ರೀತಿಯ ಸಂದರ್ಭದಲ್ಲಿ ಮತ್ತೊಂದು ಕವನವನ್ನು ಓದಿ ವಿಶ್ಲೇಷಿಸುವಾಗ ಅದು ನಮ್ಮ ಗಮನಕ್ಕೆ ಬರುತ್ತೆ. ಉತ್ತಮ ವಿಚಾರ ಲಹರಿಯನ್ನು ಹರಿಸಿದ ಕವನ. ಹೀಗೆ ಮುಂದೆಯೂ ಕವನಗಳನ್ನು ನಮಗೆ ತಲುಪಿಸಿ.
      ಉಮಾ ವೆಂಕಟೇಶ್

      Liked by 1 person

  3. ೧೨ನೆ ಶತಮಾನದಲ್ಲಿ ಬಸವಣ್ಣನವರು ನಮ್ಮ ಮಾತುಗಳು ಹೇಗಿರಬೇಕು ಎಂಬುದರ ಬಗ್ಗೆ ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ; ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಹಾಗೆಯೇ ‘ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ’ ಎಂದು ಹೇಳುತ್ತಾ
    ಸಂಕ್ರಾಂತಿಯ ಹಬ್ಬವನ್ನು ಕಳೆದವಾರ ಆಚರಿಸಿದ್ದೇವೆ. ಹೀಗೆ ನಾವು ಆಡುವ ಮಾತುಗಳು ಇತರರಿಗೆ ಹಿತವಾಗಿರಬೇಕು ಎಂಬ ಸಂದೇಶವನ್ನು ಶತಮಾನಗಳಿಂದ ಹೇಳಿಸಿಕೊಂಡು ಮತ್ತೆ ಕೇಳಿಸಿ ಕೊಳ್ಳುತ್ತಾ ಬಂದಿದ್ದೇವೆ. ಆದರೆ ನಮ್ಮ ಮಾತುಗಳು ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಅಥವಾ ಅರಿವಿಲ್ಲದೆ ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನ ಮಾಡಿ ಅಥವಾ ಬರಿ ಹರಟೆ ಗಾಸಿಪ್ ಗಳಿಗಾಗಿ ಮಾತನ್ನು ಉಪಯೋಗಿಸಿದಾಗ ಅದರಿಂದ ಆಗುವ ಪರಿಣಾಮಗಳು ಹಲವಾರು. ಬಹುಶಃ ಕೇಶವ್ ಅವರು ಈ ಹಿನ್ನೆಲೆಯನ್ನು ಇಟ್ಟುಕೊಂಡು “ಮಾತುಗಳು ಎಂಬ ಕವನವನ್ನು ಬರೆದಿದ್ದರೆ ಎಂಬುದು ನನ್ನ ಅನಿಸಿಕೆ. ‘ಮಡಕೆ’ ಅನ್ನುವುದು ಜನರ ತಲೆಗಳ ಸಂಕೇತ ಎನ್ನ ಬಹುದು. ಕವನದಲ್ಲಿನ ‘ಮನೆ’ ಒಬ್ಬ ವ್ಯಕ್ತಿಯ ಅಥವಾ ಸಮುದಾಯ, ಸಮಾಜ ಇವುಗಳ symbolic representation ಇರಬಹುದು. ಮಾತು ಮತ್ತು ಅದರ ಪರಿಣಾಮಗಳು ಚಕ್ರಗತಿಯಲ್ಲಿ ಕೊನೆಯಿಲ್ಲದೆ ಸಾಗುತ್ತದೆ ಎಂಬ ಅಂಶವು ಅಡಗಿರಬಹುದು. – ಪ್ರಸಾದ್

    Liked by 1 person

  4. Sorry for commenting in English as I do not have Kannada script.
    It is a beautiful thought provoking poem from Keshav. My understanding of poem is talking / communication is important in families / homes. Mistrust and break down in communication will lead to slow deterioration of family , family become the talk of town , outsiders take advantage of the situation ( invasion by white ants) and final distraction of individuals. Lot of message in it I think. Well done Keshav

    Liked by 1 person

  5. ಕೇಶವ್ ಅವರ ಗೂಡಾರ್ಥ ತುಂಬಿದ “ಮಾತುಗಳು“ ಕವನ ನಿಜಕ್ಕೂ ಅರ್ಥಗರ್ಭಿತವಾಗಿದೆ. ಇಲ್ಲಿ ಮಾತುಗಳನ್ನು ಮುಖ್ಯ ವಿಷಯವನ್ನಾಗಿಟ್ಟುಕೊಂಡು ಬರೆದಿದ್ದರೂ, ನನ್ನ ಮಟ್ಟಿಗೆ ಈ ಕವನದಲ್ಲಿ ಹಾಳು ಬಿದ್ದ ಮನೆ, ಈ ಸ್ಥಳದಲ್ಲಿ ನಡೆದಿರಬಹುದಾದ ಒಂದು ದುರಂತವನ್ನು ಪ್ರತಿಬಿಂಬಿಸುವಂತಿದೆ. ಒಮ್ಮೆ ಗಲಗಲ ಸದ್ದಿನ ಮಾತುಗಳಿಂದ ತುಂಬಿದ್ದ ಮನೆ, ಅಲ್ಲಿ ನಡೆದ ದುರ್ಘಟನೆಯಲ್ಲಿ ನಾಶವಾದ ಮನೆಯ, ಮತ್ತು ಮನಗಳ ದುಃಖವನ್ನು ವರ್ಣಿಸುತ್ತಿದೆ. ಇದು ನನ್ನ ವಿಷ್ಲೇಷಣೆ! ಕೇಶವ್ ನಿಮ್ಮ ಅವಕಾಡೋ ಹಣ್ಣಿನ ಕವನದಂತೆ, ಇದೂ ಮಾರ್ಮಿಕವಾದ ಕವನ. ಇದರ ವಿಷ್ಲೇಷಣೆಯನ್ನು ನಿಮ್ಮ ಲೇಖನಿಯಲ್ಲೇ ಓದಿದರೆ ಮೇಲು. ಶೈಲಿ ಚೆನ್ನಾಗಿದೆ.
    ಉಮಾ ವೆಂಕಟೇಶ್

    Liked by 1 person

  6. ” ಮಾತುಗಳು ಬಿದ್ದಿವೆ ಮೂಲೆಯಲ್ಲಿ ಮಡಕೆಗಳ ಒಳಗೆ ” ಎಷ್ಟು ಸುಂದರ ಅಭಿವ್ಯಕ್ತಿ !! ನಿಜ , ಮನದ ಮೂಲ ಮಾತುಗಳಾದ ವಾತ್ಸಲ್ಯ ,ಮಮತೆ ,ಅಂತಃಕರುಣ ,ದಯೆ ,ಮಾಯೆ ಎಲ್ಲ ಸಂಕುಚಿತಗೊಂಡ ಮನದ ಮಡಕೆಯ ಮೂಲೆಯಲ್ಲಿ ,ಅಹಂ ,ಅಸಹನೆ , ಕೋಪ ತಾಪ ಗಳಡಿಯಲ್ಲಿ ಸಿಕ್ಕು ಕೊಳೆತು ನಾರಿವೆ. ಆ ದುರ್ಗಂಧ ,ಧೂಳು ಹಾರಾಡಿ ಕಣ್ಣು ಕುರುಡಾಗಿಸಿ ,ಕಿವಿ ಕಿವುಡಾಗಿಸಿ,ವ್ಯಕ್ತಿತ್ವವನ್ನೇ ಹಾಳುಗೆಡವಿ ,ಜೀವನದ ಆಧಾರಸ್ತಂಭ ಗಳಾದ ಪ್ರೀತಿ ,ವಿಶ್ವಾಸಗಳನ್ನೇ ಟೊಳ್ಳಾಗಿಸಿದಾಗ ಬಿರಿದ ಮನದಾಳದಿಂದ ಸೋರುವ ನೋವಿಗೆ ಮುಗಿಬಿದ್ದ ದುಃಖದ ಗೆದ್ದಲು ಮನವನ್ನ ಅಸಹಾಯಕತೆಯ ಮೌನದತ್ತ ನೂಕಿ,ಮನಃಶಾಂತಿಯನ್ನ ಹಾಳುಗೆಡವದಿದ್ದೀತೆ ? ಈ ಗೆದ್ದಲಿಗಿಂತ ಬಲವಾದ ಅಹಂನ ಗೆದ್ದಲು ಪ್ರೀತಿ ವಿಶ್ವಾಸಗಳನ್ನೇ ತಿಂದು ಹಾಕಿ ಮನದ ಮಡಕೆಯನ್ನ ಬರಿದು ಮಾಡಿ ಬಾಳೆಂಬ ಮನೆಯನ್ನು ಬೀಳು ಹೊಯ್ಯುವುದರಲ್ಲಿ ಸಂಶಯವೇ ? ಕವನದ ಆರಂಭದಲ್ಲಿರುವ ಹಾಳುಮನೆ ಈ ಗೆದ್ದಲು ಹಿಡಿದ ಜೀವನವೇ ಅಲ್ಲವೇ? ಆಧುನಿಕ ಕುಟುಂಬ ಜೀವನಕ್ಕೆ ಹಿಡಿದ ಕನ್ನಡಿ ಈ ಸುಂದರ ಕವನ. ಇದು ನನ್ನನಿಸಿಕೆ.ತಪ್ಪಾ ?
    ಕೇಶವ ಕುಲಕರ್ಣಿಯವರ ಶೈಲಿ ಮನಸೆಳೆಯುವಂತಿದೆ . ಅಭಿನಂದನೆಗಳು ಕೇಶವ ಕುಲಕರ್ಣಿಯವರೇ.
    ಸರೋಜಿನಿ ಪಡಸಲಗಿ.

    Liked by 2 people

  7. ಕೇಶವ ಕುಲಕರ್ಣಿ ಅವರಿಂದ ಗೂಡಾರ್ಥದ ಕವನ ಬಂದದ್ದು ಇದೇ ಮೊದಲ ಸಲ ಅಲ್ಲ. ಇದೇ ಜಗುಲಿಯಲ್ಲಿ ಹಿಂದಕ್ಕೆ ಪ್ರಕಟವಾದವು: (೧) https://anivaasi.com/2015/06/01/gandhi/
    (೨) ಅವೋಕಾಡೋ ಹಣ್ಣುಗಳು: Nov 2015
    ಅದೇ ತರ ಇಂದಿನ ಮೇಲಿನ ಕವನವನ್ನು ಅರ್ಥೈಸುವದು ಸುಲಭವಲ್ಲ . ”ನಿಶ್ಶಬ್ದ ಸಾನೆಟ್ ’”ಬ್ರಹ್ಮಜ್ಞಾನ” (ನೋಡಿ) ಬರೆದ ಎ.ಕೆ. ರಾಮಾನುಜನ್ ಅಂದಂತೆ:

    ”ಪದ್ಯದ ಮಾತು ಬೇರೆ
    ಅದು ಕುದುರಿ ಬಿಟ್ಟರಂತೂ
    ಅಪಾರ್ಥ ಮಾಡಿಕೊಂಡರೆ
    ಅದೂ ಒಂದು ತರಹದ ಅರ್ಥವೇ ಅನ್ನಿಸಿಬಿಡುತ್ತೆ.”

    ಮೇಲಿನ ಕವಿತೆಯನ್ನು ಓದಿದಾಗ ಅದರೊಂದಿಗೆ ಬಂದ ಚಿತ್ರದಲ್ಲಿಯ ಹಾಳುಬಿದ್ದ ಮನೆಯೊಳಗೆ ಹೊಕ್ಕಂತಾಯಿತು. ಹಿಂದೆ ಅಲ್ಲಿ ಆಡಿದ ಮಾತಿನ ಅಲೆಗಳು ಇನ್ನೂ ಸುತ್ತಿತ್ತಿವೆಯೇ? ಮಾತು ಮನೆಕೆಡಿಸಿತೆ?
    ಕಳೆದ ವಾರದ ನನ್ನ ಲೇಖನದಲ್ಲಿ ಮಾತು ಹೇಗಿರಬೇಕೆಂದು ಗಲಗಲಿಯವರಿಂದ ಕೇಳಿದಿರಿ. ಈ ಕವನದಲ್ಲಿ ನನಗನಿಸಿದಂತೆ ಮಾತು ಹೇಗಿರಬಾರದು ಎಂದು ಸಾರಿ ಸಾರಿ ಹೇಳಿದಂತಿದೆ!
    ”ಮಾತುಗಳು ಮಡಕೆಯೊಳಗೆ ಕೂತಿರಬಾರದು. ಕೊಳತು ನಾರುತಿರಬಾರದು. ಮಡಕೆ ಹುಲಿಯಂತಿರದೆ ಹೊರಗೆ ಬಂದು ಎದುರಿಸಬೇಕು.ಧೂಳಾಗ ಮುಳುಗಿ,ಗಾಳ್ಯಾಗ ಹಾರಿರಬಾರದು.ಮನಿ ಕಂಬಕ್ಕ ಬೆಂಬಲ ಕೊಡಬೇಕು. ಅದರ ಹಂತೇಲ್ಲಿ ನಿಂತ ಜಂತಿಗೆ ಹತ್ತಿದ ಗೆದ್ದಲಿಯಾಗಬಾರದು. ಸಣ್ಣಾಗಿ ಗೆದ್ದಲಿ ತಿಂದು ಟೊಳ್ಳುಮಾಡಿ, ಹುಣ್ಣು ಮಾಡಿರ ಬಾರದು. ಹುಣ್ಣಾಗ ಹುಳ ಹತ್ತಿ, ಸುಳ್ಲ ಸುಳ್ಳ ಮನಿ ಹಾಳ ಮಾಡ ಬಾರದು.” ಎಂದೋ ಆಡಿದ ಮಾತುಗಳು ಕೇಳಿದವರ ಮನಸ್ಸಿನಲ್ಲಿ ಉಳಿದು, ಒಳಗೊಳಗೆ ಕೊರೆಯುತ್ತ ಎಷ್ಟೋ ಸಮಯದ ನಂತರ ಹೊರಬಂದು ವಿಷ ಹರಡಿ ಮನೆ-ಮನೆತನಗಳನ್ನೇ ಹಾಳು ಮಾಡ್ಯಾವು. ನನಗ ತಿಳಿದದ್ದು ಇಷ್ಟು. ಹ್ಞಾಂ, ಇನ್ನೊಂದು ನೆನಪಾತು. ಈ ಪದ ಸರಣಿ ಕವಿತಾದ ಹಂಗ ಆರಂಭದ ಶಬ್ದದಿಂದ ಮುಂದ ಹೋಗಿ ಕೊನೆಯಲ್ಲಿ ಮತ್ತ ಮೊದಲಿನ ಶಬ್ದಕ್ಕ ಬಂದ ನರ್ಸರಿ ರೈಮ್ “There is a hole in my bucket, dear Henry …” ನೆನಪಾತು. ನನ್ನ ತಿಳುವಳಿಕೆಯಲ್ಲೂ ಒಂದು ತೂತಿದೆ, ಕಾಣಸ್ತದ!

    Liked by 1 person

Leave a comment

This site uses Akismet to reduce spam. Learn how your comment data is processed.