”ನೋಡ್ರೀ ಹೀಂಗ ಧಾರವಾಡದಾವ್ರದು ಬಲೇ ತೂಕದ ಮಾತ ಹ್ಞಾಂ?” – ಶ್ರೀವತ್ಸ ದೇಸಾಯಿ ಬರೆದ ಲೇಖನ

[ಉತ್ತರ ಕರ್ನಾಟಕದ  ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರ ಬಿಂದು ಧಾರವಾಡ ನಗರದ ಹೆಮ್ಮೆಯ ಪುತ್ರ ಡಾ ಶ್ರೀವತ್ಸ ದೇಸಾಯಿ ಅವರು ತಮ್ಮ ನೆಚ್ಚಿನ ನಗರವನ್ನು ನಮಗೆ ಮರು-ಪರಿಚಯ ಮಾಡಿ ಕೊಡುವ ಪ್ರಯತ್ನವನ್ನು ಮಾಡಿದ್ದಾರೆ.

ಧಾರವಾಡದ ಭಾಷೆ, ಕವಿಗಳು, ಕಲಾವಿದರು, ಅಲ್ಲಿನ ಸಂಸ್ಕೃತಿ ಇವುಗಳ ಬಗ್ಗೆ ಬಹಳ ಪ್ರೀತಿಯಿಂದ, ಕಾಳಜಿಯಿಂದ, ಹೆಮ್ಮೆಯಿಂದ ಎಳೆ ಎಳೆಯಾಗಿ ಚಿತ್ತಾರಗಳನ್ನು ನಮ್ಮ ಮುಂದೆ ತೆರೆದು ಇಟ್ಟಿದ್ದಾರೆ. ಲೇಖನಕ್ಕೆ ಸಂಬಂಧ ಪಟ್ಟ ವಿಡಿಯೋಗಳಿಗೆ ಸಂಪರ್ಕ ಕಲ್ಪಿಸಿ ಬರಹಕ್ಕೆ ಇನ್ನೊಂದು ಆಯಾಮವನ್ನು ಕೊಟ್ಟಿದ್ದಾರೆ. ಕಳೆದ ಕೆಲವು ದಶಕಗಳನ್ನು ಇಂಗ್ಲೆಂಡಿನಲ್ಲಿ ಕಳೆದಿದ್ದರೂ ಅವರ ಈ ಬರವಣಿಗೆಯಲ್ಲಿ ‘ಧಾರವಾಡದ ಕನ್ನಡ’ ಶೈಲಿ’ ಹಾಗೂ ಅ ಸೊಗಡನ್ನು ಗುರುತಿಸಬಹುದು. ದೇಸಾಯಿ ಅವರು ಕೆಳಗೆ ಹೇಳಿರುವಂತೆ   “ನಮ್ಮ ಆಡುಮಾತು, ನಮ್ಮ ಡಿಎನ್ಎ (DNA) ದಲ್ಲಿದೆಯಲ್ಲವೆ? ನಾವು ನಮ್ಮ ಹುಟ್ಟೂರಿಂದ ಸಾವಿರಾರು ಮೈಲು ದೂರ ಬಂದು ನೆಲಸಿದ್ದರೇನಂತೆ. ನಮ್ಮ ಅಕ್ಸೆಂಟ್ ಪೂರ್ತಿ ಬಿಟ್ಟು ಹೋಗಿರುವುದಿಲ್ಲ. ಆ ದ್ವಂದ್ವ ಹೆಲಿಕ್ಸ್ (double helix DNA) ದಲ್ಲಿ ಒಂದು ಸರಪಳಿ ಮೂಲ ಅಕ್ಸೆಂಟಿನ ಛಾಪು ಇಟ್ಟುಕೊಂಡಿರುತ್ತದೆ! Very true indeed! ಧಾರವಾಡದ  ಸಾಂಸ್ಕೃತಿಕ ಸಿರಿವಂತಿಕೆಯ ಬಗ್ಗೆ ಆಲೋಚಿಸುತ್ತ ಆ ವಿಶಿಷ್ಟತೆಗೆ ಕಾರಣವೆನಿರಬಹುದು ಎಂಬ ಪ್ರಶ್ನೆ ಯನ್ನು ಹುಟ್ಟುಹಾಕಿದ್ದಾರೆ.  ಅದಕ್ಕೆ ಸಮಂಜಸ ಉತ್ತರ ಸಿಗಲಾರದು. ಅದು ಏನೇ ಇರಲಿ ದೇಸಾಯಿಯವರ ಧಾರವಾಡವನ್ನು ನೋಡೋಣ ಬನ್ನಿ… (ಸಂ) ]

ಈಗ ತಾನೆ ನನ್ನ ಊರಾದ ಧಾರವಾಡಕ್ಕೆ ಭೆಟ್ಟಿಕೊಟ್ಟು ಮರಳಿ ಮನೆಗೆ, ಯು ಕೆ (ಯುನೈಟೆಡ್ ಕಿಂಗಡಂ) ಗೆ ಬಂದಿರುವೆ. ಊರಿಗೆ ಹೋದಾಗಲೆಲ್ಲ ಸವಿಯುವದು ಊರಿನ ಪಕ್ವಾನ್ನ ತಿಂಡಿಗಳಷ್ಟೇ ಅಲ್ಲ, ಅಲ್ಲಿಯ ಮಾತಿನ ಸೊಗಡನ್ನೂ ಸಹ. ಇಲ್ಲಿ ದಿನನಿತ್ಯ ಅದರ ಬಳಕೆಯಿಲ್ಲದ್ದರಿಂದ ಅದರ ಧ್ವನಿಯೂ ಮರೆಯಲಿಕ್ಕೆ ಆರಂಭವಾಗಿರುತ್ತದೆ. ನಮ್ಮ ಮಾತಿನ ಶೈಲಿಯೂ ಬದಲಾಗಿರುತ್ತದೆ. ಅದಕ್ಕೇ ಹೋದಕೂಡಲೆ ಅಲ್ಲಿಯವರು ನಮ್ಮನ್ನು ಒಮ್ಮೆಲೆ NRIಗಳು ಎಂದು ಗುರುತಿಸುವದು!

gbs
ಜಾರ್ಜ್ ಬರ್ನಡ್ ಶಾ (’ನೆಟ್ ಚಿತ್ರ)

ನಮ್ಮ ಆಡುಭಾಷೆ ನಮ್ಮನ್ನು ಪ್ರತಿನಿಧಿಸುತ್ತದೆ; ಅದು ನಮ್ಮ ಗುರುತೂ ಆಗಿರುತ್ತದೆ. ಐರ್ಲ್ಯಾಂಡಿನಲ್ಲಿ  ಹುಟ್ಟಿದ ಇಂಗ್ಲಿಷ್ ನಾಟಕಕಾರ ಜಾರ್ಜ್ ಬರ್ನಡ್ ಶಾ ಬರೆದ ’ಪಿಗ್ಮೇಲಿಯನ್’ ದಲ್ಲಿ ಪ್ರೊಫೆಸರ್ ಹಿಗ್ಗಿನ್ಸ್ ಜಂಬ ಕೊಚ್ಚಿಕೊಳ್ಳುವದು ಹೀಗೆ:You can spot an Irishman or a Yorkshireman by his brogue. I can place any man within six miles. I can place him within two miles in London. Sometimes within two streets.’ (ಐರಿಷ್ ಅಥವಾ ಯಾರ್ಕ್ ಶೈರ್ ವಾಸಿಯನ್ನು ಆತ ಮಾತಾಡುವ ಶೈಲಿಯಿಂದಲೇ ನೀವು ಗುರುತಿಸಬಲ್ಲಿರಿ. ನಾನು ಯಾವ ಮನುಷ್ಯನ ಹುಟ್ಟೂರನ್ನು ಆತನ ಮಾತಿನಮೇಲೆಯೇ ಆರು ಮೈಲೊಳಗೆ ಗುರುತಿಸುವೆ. ಲಂಡನ್ ವಾಸಿಯಾದರೆ ಎರಡು ಮೈಲು ಅಂತರದಲ್ಲಿ, ಯಾಕೆ, ಒಮ್ಮೊಮ್ಮೆಯಂತೂ ಅವನು ವಾಸಮಾಡುತ್ತಿರ ಬಹುದಾದ ಎರಡರಲ್ಲೊಂದು ಓಣಿಯನ್ನೂ ಊಹಿಸಬಲ್ಲೆ!) ಇದು ಉತ್ಪ್ರೇಕ್ಷೆಯೇನೋ ಸರಿ. ಬರ್ನಾಡ್ ಶಾ ಆಗ ಬದುಕಿದ್ದ ಭಾಷಾಧ್ವನಿ ಪ್ರವೀಣ (phonetician) ಹೆನ್ರಿ ಸ್ವೀಟನ ಪ್ರಭಾವಕ್ಕೊಳಗಾಗಿರಬಹುದು. ಆದರೆ ನಮ್ಮ ಆಡುಭಾಷೆಯನ್ನು ಅಷ್ಟು ಸುಲಭವಾಗಿ ಮರೆಮಾಚಲಾರೆವು. ಜೊತೆಗೆ ಆ ಪ್ರದೇಶದ ಸಂಸ್ಕಾರವೂ ನಮ್ಮ ನರ-ನಾಡಿಗಳಲ್ಲಿ ಬೆರೆತಿರುತ್ತದೆಯಲ್ಲವೆ?

ನಮ್ಮ ಕರ್ನಾಟಕದಲ್ಲಿಯೂ ಜಿಲ್ಲೆ ಜಿಲ್ಲೆಗೂ ಬದಲಾಗುವ ಸೊಲ್ಲು. ಇದೇ ”ಅನಿವಾಸಿ” ಯಲ್ಲಿ ಹಿಂದೆರಡು ವಾರಗಳ ಕೆಳಗೆ ಜಿ ಎಸ್ ಪ್ರಸಾದರ ಕಿರುನಾಟಕದಲ್ಲಿ (http://wp.me/p4jn5J-1lx) ಮಂಡ್ಯದ ಕನ್ನಡದ ಛಾಯೆ ಕಂಡಿರಿ. ಹಾಗೆಯೇ ಧಾರವಾಡದ್ದು ಇನ್ನೂ ಸ್ಪೆಷಲ್. ”ಸಾಮಾನ್ಯವಾಗಿ ಅದನ್ನು ಯು ಕೆ (ಉತ್ತರ ಕರ್ನಾಟಕ) ಭಾಷೆ ಅಂತ ಒಮ್ಮೊಮ್ಮೆ ಕರೆದರೂ, ಧಾರವಾಡ, ವಿಜಾಪುರದ ಕನ್ನಡದಲ್ಲಿ ಒಂದಿಷ್ಟು ಸಾಮ್ಯವಿದ್ದರೂ ಧಾರವಾಡ ಕನ್ನಡಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ,” ಎನ್ನುತ್ತಾರೆ ಅದೇ ಊರಲ್ಲಿ ಹುಟ್ಟಿ ಸತತವಾಗಿ ಅದೇ ಊರಲ್ಲಿ ಅರವತ್ತೆಂಟು ವರ್ಷಗಳನ್ನು ಕಳೆದ ಸುರೇಶ್ ಕುಲಕರ್ಣಿಯವರು. ನಾಲ್ಕು ಐದು ಮಾಧ್ಯಮಗಳಲ್ಲಿ ಧಾರವಾಡದ ಬಗ್ಗೆ ಬರೆದು, ಸಿನಿಮಾ ಮಾಡಿ, ರೇಡಿಯೋ ಬ್ರಾಡ್ ಕಾಸ್ಟ್ ಮಾಡಿ ಧಾರವಾಡದ ಬಗ್ಗೆ ಅಧಿಕಾರವಾಣಿಯಿಂದ ಮಾತಾಡಬಲ್ಲವರಲ್ಲಿ ಸುರೇಶ್ ಒಬ್ಬರು. ಈಗ ಕೆಲವೇ ದಿನಗಳ ಹಿಂದೆ ಬಿ.ಬಿ. ಸಿ ಯವರೊಡನೆ ಒಂದು ಸಾಕ್ಷ್ಯ ಚಿತ್ರಕ್ಕೆ ಸಹಕರಿಸಿದವರು. ”ಧಾರವಾಡದ ಕನ್ನಡ ಮಾತಿನಲ್ಲಿ ಬಹಳಷ್ಟು ಭಾಷೆಗಳ ಶಬ್ದಗಳು ಕೂಡಿಕೊಂಡಿವೆ. ಕರ್ನಾಟಕದ ಈ ಭಾಗವು ವಿಜಾಪುರದ ಆದಿಲ್ ಶಾಹಿಯವರ ವಶದಲ್ಲಿದ್ದುದರಿಂದ ಉರ್ದು, ನಂತರ ಬಂದ ಪೇಶ್ವೆಯವರ ಆಳ್ವಿಕೆಯಿಂದಾಗಿ ಮರಾಠಿ, ಇದಲ್ಲದೆ ತನ್ನದೇ ಆದ ದೇಸಿ ಆಡುಮಾತು ಇವೆಲ್ಲವುಗಳ ಮಿಶ್ರಣ ಧಾರವಾಡದ ಕನ್ನಡಕ್ಕೆ ಒಂದು ಸೊಗಡನ್ನು ಕೊಟ್ಟಿದೆ. ಅದನ್ನು ಕೇಳಿಯೇ ಅನುಭವಿಸಬೇಕೆಂದು” ಉತ್ಸಾಹದಿಂದ ಅವರು ಹೇಳುತ್ತಾರೆ. ಅವರ ಕಣ್ಣಲ್ಲಿ ಆ ಮಿಂಚು; ದನಿಯಲ್ಲಿ ಕೆಚ್ಚು! ಈಗಿನ ದಿನಗಳಲ್ಲಿ ಎಲ್ಲ ಊರುಗಳಂತೆ ಬದಲಾಗುತ್ತಿರುವ ಧಾರವಾಡ ತನ್ನ ಹಳೆತನ್ನು, ಒರಿಜಿನಾಲಿಟಿಯನ್ನು ಕಳೆದುಕೊಳ್ಳುವದನ್ನು ಕಂಡು ಮರುಗುತ್ತಾರೆ. ಹಳೆಯ ರಸ್ತೆ, ಮಕಾನು ಮಾಯವಾಗುತ್ತಿವೆ. ಹಿಂದೆ ಎಲ್ಲೆಲ್ಲೂ ಕಾಣುತ್ತಿದ್ದ ಧಾರವಾಡದ ’ಚಾಳಿ’ನಲ್ಲಿಯ (ಒಂದೇ ಬಗೆಯ ಮನೆಗಳ ಸಾಲು) ಅವಿಭಕ್ತ ಕುಟುಂಬದಂತಿದ್ದ ಜೀವನದ ದಾಖಲೆ ಪುಸ್ತಕ-ಬರವಣಿಗೆಯಲ್ಲಿ ಆಗುವ ಮೊದಲೇ ಕಣ್ಮರೆಯಾಗುತ್ತಿದೆ ಎಂದು ಅವರಿಗೆ ಅಸಮಾಧಾನ. ಧಾರವಾಡಕ್ಕೆ ಒಬ್ಬಮಹಾರಾಷ್ಟ್ರದ ಪು. ಲ. ದೇಶಪಾಂಡೆ ಸಿಕ್ಕಿದ್ದರೆ ಮರಾಠಿಯ ’ಬಟಾಟ್ಯಾಚೀ ಚಾಳ್” ನಂತೆ ಅವು ಪ್ರಸಿದ್ಧವಾಗುತ್ತಿದ್ದವು ಎಂದು ಅವರ ಅಭಿಪ್ರಾಯ!

ಸುರೇಶ ಕುಲಕರ್ಣಿಯವರು ಸಹ ನಾನು ಕಲಿತ ಮಾಳಮಡ್ಡಿಯ ಕೆ ಇ ಬೋರ್ಡ್ ಶಾಲೆಯ ವಿದ್ಯಾರ್ಥಿ. ಅವರಂತೆಯೇ ಧಾರವಾಡದಲ್ಲಿಯೇ ಹುಟ್ಟಿ ಬೆಳೆದ ಶ್ರೀಮತಿ ಕಮಲಾ ಸಿಡೇನೂರರು ಸಹ. ಅವರು ಒಬ್ಬ ಸಂಗೀತಾಸಕ್ತರು. ತಡವಾಗಿಯಾದರೂ (ಮದುವೆಯ ನಂತರ!)  ಶಾಸ್ತ್ರೀಯ ಸಂಗೀತದ ತಾಲೀಮು ಉಂಟು. ಧಾರವಾಡ ಆಕಾಶವಾಣಿಯಲ್ಲಿ ಮೇಲಿಂದ ಮೇಲೆ ತಮ್ಮ ಹಾಡುಗಾರಿಕೆಯನ್ನು ಬಿತ್ತರಿಸಿದ್ದಷ್ಟೇ ಅಲ್ಲ, ಇತ್ತೀಚೆಗೆ ಲೇಖನಗಳನ್ನು ಬರೆದಿದ್ದಾರೆ.  ಒಗಟುಗಳ ಮೇಲೆ ತಾವೇ ಬರೆದ  ಧ್ವನಿಸುರುಳಿಯನ್ನು ಇಲ್ಲಿ (OGATU audio) ಕೇಳ ಬಹುದು.

keb-schoo-edited-and-reducedl
ಅಂದು ಬಿಡುಗಡೆ ಮಾಡಿದ DVDಯ ಹೊದಿಕೆ

ನಾವೆಲ್ಲ ಬಹಳಷ್ಟು ನಮ್ಮಶಾಲೆಯ ’ಹಳೇ ವಿದ್ಯಾರ್ಥಿಗಳು” (KEBOSA), ಕಳೆದ ತಿಂಗಳು (ಡಿಸೆಂಬರ್ 18 ರಂದು) ನಮ್ಮ 80 ವರ್ಷ ಹಳೆಯ “ಮಾಳಮಡ್ಡಿಯ ಮಹಾಸಾಲಿ” (ಶಾಲೆ)’ ಯ ‘ಗುರುವಂದನ’ ಆಚರಣೆಯಲ್ಲಿ ಪಾಲ್ಗೊಂಡಿದ್ದೆವು. ಸರಿಯಾದ ಹೆಸರು: K E Board’s High School. ಅತ್ಯಂತ ವಿಜೃಂಭಣೆಯಿಂದ ನಡೆದ ಆ ಸಮಾರಂಭದಲ್ಲಿ ಅಚ್ಚ ಧಾರವಾಡ ಕನ್ನಡ ಅಕ್ಸೆಂಟ್ (accent) ನನ್ನ ಕಿವಿ-ಎದೆಯನ್ನು ಭರ್ ಪೂರ್ ತುಂಬಿತು. ಧಾರವಾಡದ ಆಡು ಭಾಷೆಯ  ಅಚ್ಚ ಕನ್ನಡದ  ನ ಸೊಗಡು, ಬೆಡಗು ಅದರ ಜನಪದದ  ನಡೆ ನುಡಿ ಒಳಗೆ ಹಾಗೇ ಹಾಸು ಹೊಕ್ಕಾಗಿದೆ ಎಂದು ನನ್ನ ಎಣಿಕೆ. ನಾನು ಚಿಕ್ಕವನಿದ್ದಾಗಿನ ಒಂದುಸಂಗತಿ ನೆನಪಾಗುತ್ತದೆ. ಆಗ ನಮ್ಮನೆಗೆ ಬೆಣ್ಣೆ ಕೊಡಲು ಒಬ್ಬ ಹೆಣ್ಮಗಳು ಹಳ್ಳಿಯಿಂದ ಬರುತ್ತಿದ್ದಳು. ಆ ದಿನ ಶ್ರಾವಣ ಶುಕ್ರವಾರ, ಅಮ್ಮ ಆಕೆಗೆ ಕುಂಕುಮ ಕೊಟ್ಟಾಗ, ಅಲ್ಲಿನ ರೂಢಿಯಂತೆ ಆಕೆ ಗಂಡನ ಹೆಸರನ್ನ ಒಗಟು ಹಾಕಿ ಹೇಳಿದ್ದನ್ನು ಕೇಳಿ ದಂಗಾದೆ. ಅವಳು ಅನಕ್ಷರಸ್ಥೆ, ಶಿಕ್ಷಿತಳಲ್ಲ. ಆದರೆ ಅವಳ ತಾನೇ ಕಟ್ಟಿದ ಒಗಟಿನಲ್ಲಿ ಅದೆಷ್ಟು ಕಾವ್ಯಮಯ ಸಾಹಿತ್ಯ ಸಿರಿ ಅಡಗಿತ್ತು! ಕೇಳಿ– “ವನವಾಗಿ ಬಂದೆ ವನದಾಗಿನ ಹಕ್ಕಿ ಆಗಿ ಬಂದೆ, ಬೀಸೋ ತಂಗಾಳ್ಯಾಗಿ ಬಂದೆ, ಗಾಳ್ಯಾಗಿನ ಗಂಧಾಗಿ ಬಂದೆ, ಹರಿಯೋ ನೀರಾಗಿ ಬಂದೆ, ಮರದಾಗ ಮಲ್ಲಿಗೆಯಾಗಿ ಬಂದೆ,  ಮುಗುಳಾಗಿ ಬಂದೆ, ಚೈತ್ರದ ಚಿಗುರಾಗಿ, ನನ್ನರಸನ ಹೆಂಡತಿಯಾಗಿ ಅವನ ಮನಿ ಮನಾ ಬೆಳಗಾಕ ಬಂದೆ!” ನಾನು ಅದನ್ನು ಕೇಳಿ ಮಂತ್ರಮುಗ್ಧನಾದೆ.

ಧಾರವಾಡದ ಇನ್ನೊಂದು ಸಾಂಸ್ಕೃತಿಕ  ವೈಶಿಷ್ಟ್ಯವೆಂದರೆ ಕ್ವಾಟಿಯ ಆಟ”. ’ಕ್ವಾಟಿ” ಅಂದರೆ ಕೋಟೆ. ದಸರೆ ಮುಗಿದು ದೀಪಾವಳಿಯ ಆದಿಯಲ್ಲಿ ಹೆಣ್ಣುಮಕ್ಕಳು ಸಂಭ್ರಮದಿಂದ ಭಾಗವಹಿಸುವ ಧಾರವಾಡ ಜಿಲ್ಲೆಯ ಪ್ರಸಿದ್ಧ ಆಟ ಅದು. ಬೇಸಾಯದ ಕೆಲಸ ಜೋರು ಆಗ. ದಣಿದ ಬಸವನ ಕೃತಜ್ಞಾರ್ಥ ಅನ್ನಿ , ಜೊತೆಗೆ ಮನಕ್ಕೆ ಮುದವೀಯುವ ಆಟ, ಹಾಡು, ಹಸೆ,ನೃತ್ಯ. ಗೋವತ್ಸ ದ್ವಾದಶಿಯಂದು ಮಣ್ಣಿನ ಏಳು ಸುತ್ತಿನ ಕೋಟೆಯನ್ನು ಕಟ್ಟಿ ಅದರ ಮಧ್ಯ ಮಣ್ಣಿನ ಬಸವಣ್ಣನನ್ನು ಒಬ್ಬರು ತಟ್ಟೆಯಲ್ಲಿಟ್ಟುಕೊಂಡು ಕೂಡಿಸಿ ಆ ಗಲ್ಲಿಯಲ್ಲಿಯ ಎಲ್ಲ ಹೆಣ್ಣುಮಕ್ಕಳು ದಿನಾಲೂ ಅಂದರೆ ನೀರು ತುಂಬುವ ಹಬ್ಬದಿಂದ ಕಡೆ ಪಂಚಮಿ ವರೆಗೂ, ಬೆಳಿಗ್ಗೆ, ಸಂಜೆ ಕ್ವಾಟಿ ಆಡಲು ಹೋಗುವರು. ಒಂದೆರಡು ಮಕ್ಕಳಿಗೆ, ರಾಧಾ, ಕೃಷ್ಣ, ರಾಮ ಸೀತೆ ಈ ಥರ ವೇಷ ಹಾಕಿ ಮೆರವಣಿಗೆಯಲ್ಲಿ ಸಾಲಾಗಿ ಕೋಲು ಹಾಕುತ್ತ ಹಾಡು ಹೇಳುತ್ತ ನೀರು ಕುಡಿಸಲು ಬಸವನನ್ನು ದಿನಾಲೂ ಒಬ್ಬೊಬ್ಬರ ಮನೆಗೆ ನೀರು ಕುಡಿಸಲು ಒಯ್ಯುವುದು, ಅಲ್ಲಿ ಆ ಮಕ್ಕಳಿಗೆ ಏನಾದರೂ ತಿಂಡಿ ಆ ಮನೆಯವರು ಕೊಡುವ ಪದ್ಧತಿ. ಮಧ್ಯಾಹ್ನ ಎಲ್ಲರೂ ತಮ್ಮ ತಮ್ಮ ಮನೆಯಿಂದ ಏನಾದರೂ ಊಟ ತಂದು, ತಿನ್ನುವುದು. ಕೊನೆಯದಿನ ಅಂದರೆ ಕಡೆಪಂಚಮಿ ದಿನ ಏನಾದರೂ ವಿಶೇಷ ಅಡುಗೆ ಮಾಡಿ ಕೋಟೆ ಹಾಕಿದ ಮನೆಯಲ್ಲಿ ಬಸವನಿಗೆ ನೈವೇದ್ಯ ಮಾಡಿ ಹಂಚಿಕೊಂಡು ತಿನ್ನುವರು. ವೆಂಕಟೇಶ್ ಪಾರಿಜಾತ, ಕೃಷ್ಣನ ಕೋಲಿನಾಟದ ಹಾಡುಗಳನ್ನು ಹಾಡುವರು. ಅದರ ಬಗ್ಗೆ ಕಮಲಾ ಅವರು ತಯಾರಿಸಿದ ವಿಡಿಯೋವನ್ನು ಇಲ್ಲಿ ನೋಡಿ.


ಇದರಂತೆಯೇ ಪ್ರತಿ ಉತ್ಸವ, ಕಾರ್ಯಕ್ರಮಕ್ಕೂ ತನ್ನದೇ ವಿಶಿಷ್ಟತೆ. ಮದುವೆಲೀ ಹೇಳೋ ಒಗಟುಗಳು, ಉರುಟಣೆ ಹಾಡು, ಬೀಗತಿ ಹಾಡು ಒಂದೇ ಎರಡೇ ಹೆಜ್ಜೆ ಹೆಜ್ಜೆಗೂ ಹಾಡು ಹಸೆ. ಮುಗಿಯದ ಸಂಭ್ರಮ ನನ್ನೂರಿನದು ಮತ್ತು ನಾನ್ನೂರವರದು.

ಮನೆ, ಮಾತು, ಶಾಲೆ.

dharwad-pedhaನಾನು ಹುಟ್ಟಿದ ಧಾರವಾಡದ ನಮ್ಮ ಮನೆ ಈಗ ಇಲ್ಲ. ಆದರೆ ಶಾಲೆ ಇದೆ. ಕಾರ್ಯ್ಕ್ರಮದಂದು ಶಾಲೆಗೆ ಹೋದೊಡನೆ ಅದೆಷ್ಟು ನೆನಪುಗಳು! ಆಟವಾಡಿದ್ದು; ಪಾಠ ಕಲಿತದ್ದು; ಎಡವಿ ಬಿದ್ದದ್ದು; ಗುರುಗಳಿಗೆ ಹೆದರಿ ಕೂತದ್ದು! ಧಾರವಾಡ ಪೇಢೆ. ಇವೆಲ್ಲ ಮಿತ್ರರೊಂದಿಗೆ ಹಂಚಿಕೊಂಡದ್ದಾಯಿತು. ಧಾರವಾಡ ಭಾಷೆಗೆ ದ ರಾ ಬೇಂದ್ರೆಗಿಂತ ಉತ್ತಮ ರಾಯಭಾರಿ ಬೇರಿಲ್ಲ. ಅವರ ಭಾಷಣಗಳನ್ನು ಹೊರಗಡೆ ಮತ್ತು ನಮ್ಮ ಶಾಲೆಯಲ್ಲಿಯೂ ಕೇಳಿದ್ದೆ. ಒಮ್ಮೆ ತಮ್ಮದೇ ಶೈಲಿಯಲ್ಲಿ ’ಅನ್ನ ಬಕಾಸುರ ರಾಜ್ಯದಲ್ಲಿ’ ಕವಿತೆ ಓದಿದ್ದು ಮರೆಯುವಂತಿಲ್ಲ. ಎಲ್ಲರಿಗೂ ಗೊತ್ತಿರುವುದರಿಂದ ಅವರ ಮಾತಿನ ಬಗ್ಗೆ ಇನ್ನು ಹೆಚ್ಚು ಹೇಳುವುದಿಲ್ಲ. ಉತ್ತರ ಕರ್ನಾಟಕದ ಕನ್ನಡ ಹಾಡುಗಳನ್ನು ಅನೇಕ ಜನ ಹಾಡಿದ್ದರೂ ನನ್ನ ಅಭಿಪ್ರಾಯದಲ್ಲಿ ಅವುಗಳನ್ನು ನಮ್ಮದೇ ಶಾಲೆಯ ವಿದ್ಯಾರ್ಥಿನಿಯಾದ ವಿದುಷಿ ಸಂಗೀತಾ ಕಟ್ಟಿಯವರಂತೆ ಹಾಡುವುದನ್ನು ನಾನು ಕೇಳಿಲ್ಲ. ಮಾಸಲೆಗೆ (ಸ್ಯಾಂಪಲ್) ಇಲ್ಲಿ ಕೇಳಿ:

ಧಾರವಾಡದ ಮಣ್ಣಿನ ವೈಶಿಷ್ಟ್ಯವೋ, ಮಲೆನಾಡ ಸೆರಗಿನ ಆ ಸೃಷ್ಟಿಯ ಸಿರಿಯೋ, ಹಸಿರೋ ಏನು ಕಾರಣವೋ ಗೊತ್ತಿಲ್ಲ ಎಲ್ಲ ಮಾತುಗಳೂ ಸಾಹಿತ್ಯಿಕವಾಗಿಯೇ, ಕಾವ್ಯಮಯವಾಗಿಯೇ ಕೇಳ್ತವೆ ನನ್ನ ಕಿವಿಗೆ! ಧಾರವಾಡದ ಮಣ್ಣಿನ ವಾಸನೆಯ ಸಾಹಿತ್ಯವನ್ನು ಅಲ್ಲಿನ ಆಡುಭಾಷೆಯಲ್ಲಿಯೇ ನೀಡಿದ ಬರಹಗಾರ್ತಿ ಸುನಂದಾ ಬೆಳಗಾಂವಕರರನ್ನು ನೆನೆಯದಿರಲಾಗದು. ಅಲ್ಲಿಯೇ ಹುಟ್ಟಿ ಬೆಳೆದ ಸಾಹಿತಿಗಳು ಅಗಣಿತ. ಅಂತೆಯೇ ವಲಸೆ ಬಂದವರೂ ಧಾರವಾಡದ ಗಾಳಿಯಲ್ಲಿ ಕೃಷಿ ಮಾಡಿ ಸಾಹಿತ್ಯಿಕ ಸಿರಿವಂತಿಕೆ ಹೆಚ್ಚಿಸಿದವರೂ ಅಗಣಿತ. ಬೇಂದ್ರೆಯವರ ಸಮಕಾಲೀನರಾದ ಕವಿಗಳಲ್ಲಿ ಬೆಟಗೇರಿ ಕೃಷ್ಣಶರ್ಮ (ಕಾವ್ಯನಾಮ ’ಆನಂದಕಂದ’) ಒಬ್ಬರು. ಅವರ ನಂತರದ ಕವಿಗಳಲ್ಲಿ ಕಂಡು ಬರುವ ಆಂಗ್ಲ ಪ್ರಭಾವ ಅವರ ಕವನಗಳಲ್ಲಿ ಇಲ್ಲ. ಕನ್ನಡಕ್ಕೆ ಅವರ ಸಾಹಿತ್ಯದ ಕೊಡುಗೆ ಸಣ್ಣದಲ್ಲ. ಆದರೆ ಅವರಿಗೆ ಸಲ್ಲ ಬೇಕಾದ ಮನ್ನಣೆ ಸಿಗಲಿಲ್ಲ ಎನ್ನಬಹುದು. ಧಾರವಾಡದ ಕನ್ನಡದಲ್ಲಿ ಅವರು ಬರೆದ ಸುಂದರ ’ನಲ್ವಾಡು’ಗಳಲ್ಲಿಯ ಕೆಲ ಭಾವಗೀತೆಗಳನ್ನು ಕೇಳಲು ಬಾಳಪ್ಪ ಹುಕ್ಕೇರಿಯ ನಾಲಗೆ ಹೇಳಿ ಮಾಡಿಸಿದ್ದಂತಿತ್ತು!

ಬಾಳಪ್ಪ ಹುಕ್ಕೇರಿ (1911-1992)

ಬಾಳಪ್ಪ ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಮುರಗೋಡ. ಮೊದಲಿನಿಂದಲೂ ಸಂಗೀತದಲ್ಲಿ ಆಸಕ್ತಿ. ಮಹಾರಾಷ್ಟ್ರದಲ್ಲಿ ಅಭಂಗಗಳು, ಕಾಶಿಯಲ್ಲಿ ದೋಹಾಗಳು, ಉತ್ತರ ಭಾರತದಲ್ಲಿ ಠುಮ್ರಿಗಳನ್ನು ಹಾಡಿ ಜನಪ್ರಿಯರಾದವರು. ಆದರೂ ಇಲ್ಲಿಯ ಜಾನಪದ ಶೈಲಿಯ ಹಾಡುಗಳನ್ನು ಹಾಡಿ ಕನ್ನಡಿಗರ ಮನದಲ್ಲಿ ಮನೆಮಾಡಿದರು. ಜಾನಪದ ಕ್ಷೇತ್ರದ ಸೋಬಾನ, ಕುಟ್ಟುವ, ಬೀಸುವ ಹಾಡುಗಳು, ಲಾವಣಿಗಳು ಇವರ ಕಂಠಶ್ರೀಯಿಂದ ಹೊಮ್ಮಿದವು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಜೇಲು ಕಂಡರು. ಕನ್ನಡವೇ ಉಸಿರು ಎಂದು ಕನ್ನಡಕ್ಕೇ ಜೋತು ಬಿದ್ದು ಎಂದೆಂದಿಗೂ ಕನ್ನಡವಾಗಿದ್ದು-‘ಮೊದಲು ಮಾನವನಾಗ“ ಎಂದು ಸಾರಿದವರು ಬಾಳಪ್ಪನವರು. ಅವರು ಹಾಡಿದ ಆನಂದಕಂದ ಅವರ ರಚನೆ ’ನಾನು ಸಂತೀಗಿ ಹೋಗಿನ್ನಿ’ ಯನ್ನು ಕೇಳಿರಿ.


ಧಾರವಾದ ಮತ್ತು ಸಂಗೀತ

sidenur-book-resizedಧಾರವಾಡದ ಮಣ್ಣಿನಲ್ಲಿ ಏನೋ ವೈಶಿಷ್ಟ್ಯ. ಅದು ಸಾಹಿತಿಗಳನ್ನು ಹುಟ್ಟಿಸಿ, ಪೋಷಿಸಿದ್ದಲ್ಲದೆ ಸಂಗೀತಗಾರರನ್ನೂ ಆಕರ್ಷಿಸಿತು. ಹಿಂದುಸ್ತಾನಿ ಸಂಗೀತದ ನಾಲ್ಕೈದು ’ಘರಾಣೆ’ಯ ಪಂಡಿತರು ಇಲ್ಲಿ ಹೆಸರುವಾಸಿಯಾದರು. ಕೆಲ ಹಸ್ತಿಗಳು ಇತ್ತೀಚಿನ ವರ್ಷಗಳಲ್ಲಿ ಗತಿಸಿ ಹೋದರೂ ಈ ಕಲೆ ಇಲ್ಲಿ ಇನ್ನೂ ಸಮೃದ್ಧವಾಗಿದೆ. ನನ್ನಂತೆ ಅನಿವಾಸಿಯಾದವರು ಇಲ್ಲಿಯ ಮೂಲದವರಾದ ಸಂಗೀತಾ ಕಟ್ಟಿ, ನಚಿಕೇತ ಯಕ್ಕುಂಡಿ, ಪ್ರವೀಣ ಗೋಡಖಿಂಡಿ ಇವರ ಸಂಗಿತ ಕಚೇರಿಗಳು ಅಮೆರಿಕಾ, ಯು ಕೆಯಂಥ ಹೊರ ದೇಶಗಳಲ್ಲಿ ಆದಾಗ ಮನ:ಪೂರ್ತಿ ಕೇಳಿ, ಎದೆಯಲ್ಲಿ ತುಂಬಿಸಿಕೊಂಡು ಸಂತೋಷಪಡುತ್ತೇವೆ. ಈ ಸಂಗೀತ ಪರಂಪರೆಯ ಹುಟ್ಟು, ಬೆಳವಣಿಗೆಯ ಇತಿಹಾಸವನ್ನು ಸಂಕ್ಷಿಪ್ತವಾಗಿ ತಿಳಿಸುವ ಒಂದು ಪುಸ್ತಕ (ಧಾರವಾಡದ ರಾಮಚಂದ್ರ ಸಿಡೆನೂರ ಬರೆದುದು) ದೊರಕಿತು. ಅದರಲ್ಲಿ ಕೆಲ ಅಪರೂಪದ ಮೊದಲು ಜನವಿದಿತವಾಗದ ಸ್ವಾರಸ್ಯಕರ ಸಂಗತಿಗಳನ್ನು ಓದಿ ರುಚಿಸಿದೆ. (ಉದಾ: ಬಡೇ ಗುಲಾಂ ಅವರನ್ನು ಮೀರಿಸಿದ ಧಾರವಾಡದ ಯುವ ಕಲಾವಿದೆ (ಮನ್ಸೂರ, ಪುಟ 21)). ಇಲ್ಲಿಯ ಸಂಗೀತದ ಬಗ್ಗೆ ಈ ಚಿಕ್ಕ ಲೇಖನದಲ್ಲಿ ಇನ್ನೂ ಹೆಚ್ಚಿಗೆ ಬರೆಯಲು ಆಸ್ಪದವಿಲ್ಲ.

ಧಾರವಾಡ ಮತ್ತು ‘ಯು.ಕೆ.’

dna
DNA

“You can take an Indian out of India, but you can never take India out of an Indian”. ಇದು ಯಾವ ಭಾರತೀಯನಿಗೂ ಅಷ್ಟೇ ಅಲ್ಲ, ಕನ್ನಡಿಗನಿಗೂ, ಅನ್ವಯಿಸುತ್ತದೆ. ನಾವು ಆಡುವ ಮಾತು, ನಮ್ಮ ಆಡುಮಾತು, ನಮ್ಮ ಡಿಎನ್ಎ (DNA) ದಲ್ಲಿದೆಯಲ್ಲವೆ? ನಾವು ನಮ್ಮ ಹುಟ್ಟೂರಿಂದ ಸಾವಿರಾರು ಮೈಲು ದೂರ ಬಂದು ನೆಲಸಿದ್ದರೇನಂತೆ. ನಮ್ಮ ಅಕ್ಸೆಂಟ್ ಪೂರ್ತಿ ಬಿಟ್ಟು ಹೋಗಿರುವುದಿಲ್ಲ. ಆ ದ್ವಂದ್ವ ಹೆಲಿಕ್ಸ್ (double helix DNA) ದಲ್ಲಿ ಒಂದು ಸರಪಳಿ ಮೂಲ ಅಕ್ಸೆಂಟಿನ ಛಾಪು ಇಟ್ಟುಕೊಂಡಿರುತ್ತದೆ. ಎರಡನೆಯದು ನಮ್ಮ ಪರಿಸರದ ಪ್ರಭಾವದಿಂದ ಬದಲಾಗಿರುತ್ತದೆ. ಅದಕ್ಕೇ ಅನಿವಾಸಿ ಹೆಣ್ಣು ಮಕ್ಕಳು ಊರಿಗೆ ಹೋದಾಗ ತಾವು ಸ್ಥಳಿಯರಂತೆ ವರ್ತಿಸಿದರೂ ಸೀರೆಯ ಅಂಗಡಿಯವನ ಕಣ್ಣಿನ ಮೇಲೆ ಉಣ್ಣೆ ಸವರಲಾಗುವದಿಲ್ಲ! (ಆಂಗ್ಲ ಮಾತನ್ನು ಕನ್ನಡೀಕರಿಸಿದರೆ ಹೀಗಿರುತ್ತದೆ). ಇಲ್ಲಿ ವಿದೇಶದಲ್ಲಿ ನೆಲಸಿದ ಮೇಲೆ, ಇಲ್ಲಿಯ ಸಂಸ್ಕಾರ, ಮಾತು ವಿಚಾರಗಳನ್ನೂ ಬರಮಾಡಿಕೊಳ್ಳಲೇ ಬೇಕಲ್ಲವೆ? ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ. ನಮ್ಮ ಆಡುಮಾತು ಹೇಗೇ ಇರಲಿ, ನಾಲ್ಕು ಜನರ ಮುಂದೆ ನಾವು ಮಾತನಾಡ ಬೇಕಾದರೆ ನಮ್ಮ ಮಾತು ಹೇಗಿರಬೇಕು? ಕೆಳಗೆ ನೋಡಿ.

ನುಡಿದರೆ …

ನನ್ನ ಹೋದ ವಾರದ ಪ್ರವಾಸ ಧಾರವಾಡದಿಂದ ಅದರ ಉತ್ತರಕ್ಕೆ ವಿಜಯಪುರಕ್ಕೆ (ಹಿಂದಿನ ಹೆಸರು ವಿಜಾಪುರ) ಕೊಂಡೊಯ್ದಿತು. ಅನುಭಾವಿ ಕವಿ ಮಧುರಚೆನ್ನ (ಇಟ್ಟ ಹೆಸರು ಚೆನ್ನಮಲ್ಲಪ್ಪ ಹಲಸಂಗಿ) ಅವರ ಸಮಾಧಿ ಇಟಗಿ ತಾಲುಕಿನ ಹಲಸಂಗಿಯಲ್ಲಿದೆ. ಅಲ್ಲಿಯೂ ಒಂದು ಗೆಳೆಯರ ಗುಂಪು ಇತ್ತು. ಸಿಂಪಿ ಲಿಂಗಣ್ಣ, ಧೂಳಾ ಸಾಹೇಬ, ರೇವಪ್ಪ ಕಾಪಸೆಯಲ್ಲದೆ ಮೇಲಿಂದ ಮೇಲೆ ಬರುತ್ತಿದ್ದ ಬೇಂದ್ರೆಯವರೂ ಅದರಲ್ಲಿ ಎಣಿಕೆಯಾಗುತ್ತಿದ್ದರು. ಇವರೆಲ್ಲರೂ ಶ್ರೀ ಅರಬಿಂದೋ ಅವರ ಪ್ರಭಾವಕ್ಕೊಳಗಾದವರು. ನಾನು ಅಲ್ಲಿಯೂ ಉತ್ತರ ಕರ್ನಾಟಕದ (ಯು ಕೆ) ಕನ್ನಡ ಮಾತಿನ ಸವಿಯುಂಡೆ. ಮಾತು ಹೇಗಿರ ಬೇಕು? ಮಧುರಚೆನ್ನರ ಮೊಮ್ಮಗ ಜಗದೇವ (ಜಗದೀಶ) ಅವರ ಬಾಯಿಂದಲೇ ಕೇಳಿ!


”ನೋಡ್ರೀ ಹೀಂಗ ಧಾರವಾಡದಾವ್ರದು ಬಲೇ ತೂಕದ ಮಾತ  ಹ್ಞಾಂ?

 

   ಫೋಟೋಗಳು,ಲೇಖನ: ಶ್ರೀವತ್ಸ ದೇಸಾಯಿ

ಕೃಪೆ:

ಈ ಚಿಕ್ಕ ಲೇಖನಕ್ಕೆ ಸಲಹೆ, ಸಹಾಯ ಕೊಟ್ಟವರಾದ:

ಶ್ರೀಮತಿ ಮತ್ತು ಶ್ರೀ ಸಿಡೆನೂರ, ಧಾರವಾಡ

ಶ್ರೀ ಸುರೇಶ ಕುಲಕರ್ಣಿ, ಧಾರವಾಡ

ಶ್ರೀಮತಿ ಸರೋಜಿನಿ ಪಡಸಲಗಿ, ಬೆಂಗಳೂರು

ಡಾ ವಿನತೆ ಶರ್ಮಾ, ಯಾರ್ಕ್, ಯು ಕೆ

 

 

 

15 thoughts on “”ನೋಡ್ರೀ ಹೀಂಗ ಧಾರವಾಡದಾವ್ರದು ಬಲೇ ತೂಕದ ಮಾತ ಹ್ಞಾಂ?” – ಶ್ರೀವತ್ಸ ದೇಸಾಯಿ ಬರೆದ ಲೇಖನ

  1. ಶ್ರೀವತ್ಸರಿಗೆ
    ಅನಂತ ಧನ್ಯವಾದಗಳು. ನೀವು ನನ್ನ ಅಚ್ಚು ಮೆಚ್ಚಿನ ಹುಟ್ಟಿದ ಊರಾದ ಧಾರವಾಡದ ಬಗ್ಗೆ ಬರೆದ ಲೇಖನ ನನಗೇ ಹಲವಾರು ಮಾಹಿತಿಗಳು ಅರ್ಥ ಮಾಡಿಸಿತು.
    ನೀವು ಆಳವಾಗಿ ಅಭ್ಯಾಸಿಸಿ ಧಾರವಾಡದ ವೈಶಿಷ್ಟತೆ,ಮಾತು,ನಡೆ,ಸಂಗೀತ ಬಗ್ಗೆ ಧಾರ್ವಾಡ್ಡ್ ಭಾಷಾದಲ್ಲಿ ಬರೆದಿವಿರಿ. ಮನಸ್ಸು ೭೦ ವರುಷಗಳ ಹಿಂದಿನ ಘಟನೆಗಳಿಗೆ ಓಡಿತು.
    ೧೯೫೬ರಲ್ಲಿ ಸ್.ಸ್.ಲ್.ಸಿ. ಪಾಸಾಗಿನಿಂದ ಇಲ್ಲಿಯ ವರೆಗೆ ಪ್ರತಿ ೧-೨ ವರುಷಗಳಿಗೊಮ್ಮೆ ನಾನು ನನ್ನ ಬಾಲ್ಯದ ಗೆಳೆಯರೊಂದಿಗೆ ಭೆಟ್ಟಿಯಾಗಿ,ಅಚ್ಚ ಧಾರವಾದದ ಕನ್ನಡದಲ್ಲಿ
    ಚಕ್ಕಂದ ಹರಟೆ,ಬೈಗುಳೊಂದಿಗೆ ವೇಳೆ ಕಳೆಯುತ್ತಿರುವೆ.ನಿಮ್ಮ ಲೇಖನದಲ್ಲಿ ನನ್ನ ಹಳೆಯ ಗೆಳೆಯರ ಬಗ್ಗೆ ಬರೆದಿರುವಿರಿ. ಓದಿ ಅಭಿಮಾನ,ಆನಂದವಾಯಿತು.
    ಪ್ರತಿಕ್ರಿಯೆ ಕಳುಹಿಸಲು ತಡವಾದುದಕ್ಕೆ ಕ್ಷಮೆ ಕೋರುವೆ.

    ಅರವಿಂದ ಕುಲ್ಕರ್ಣಿ

    Like

  2. ಧಾರವಾಡ ’ಹರಟಿ ಕಟ್ಟಿ’ (ಜಗುಲಿ) ಗೆ ಬಂದು ಶಾಮಿಲ್ ಆಗಿ, ರಂಗೇರಿಸಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಋಣಿ. ನಿಮ್ಮೆಲ್ಲರ ’ನಾಕಾಣಿ’ಯಿಂದ ಇದಕ್ಕ ಇನ್ನಷ್ಟು ಕಳೆ ಬಂತು.ನೀವೆಲ್ಲ ಬರಹಗಾರರು-ಕವಿಗಳು ಅಂದ ಮೇಲೆ ನೀವೂ ಬರೆಯುವವರೇ. ಸ್ಫೂರ್ತಿ ಬೇಕಲ್ಲ? ಧಾರವಾಡ ಫೇಡೆ ಒಳಗ ಹಾಕ್ ಧಂಗ ಬೇಂದ್ರೆ ಹಾಡು ಬಾಯಿಂದ ಹೊರಕ್ಕಾಕ್ಕತಾವಂತ ಈಗಾಗಲೆ ಕೇಳಿದೆ. ನಾನು ವೇಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾಗ ನಾನು ಕೇಳಿದ ಅಲ್ಲಿಯವರ ಪ್ರತೀತಿ ಹೀಗಿದೆ: ”ಈ ವೆಲ್ಷ್ ಜನ ಪ್ರಪಂಚದ ಯಾವದೇ ಮೂಲೆಗೆ ಹೋಗಲಿ, ಮೂವರಿಗಿಂತ ಹೆಚ್ಚಾದ ಕೂಡಲೆ ಈ ಮೂರು- ಒಂದು Rugby ಗುಂಪು, ಒಂದು Welsh Choir, ಮತ್ತೊಂದು Eisteddfod (ಐಸ್ಟೆಡ್ವೋಡ್ – ಅವರ ಭಾಷೆಯಿಂದ ’ಬೈಠಕ” ಎಂದು ಅನುವಾದ ಮಾಡಬಹುದು) ಅಂದರೆ ಕಾವ್ಯ-ಗಾಯನ ಗೋಷ್ಠಿ ಪ್ರಾರಂಭ ಮಾಡಿ ಬಿಡುತ್ತಾರೆ” ಎಂದು! (ಈಗದು ಹೆಮ್ಮರವಾಗಿ ಬೆಳೆದಿದೆ). ಈ ಮಾತು ಧಾರವಾಡದವರಿಗಷ್ಟೇ ಅಲ್ಲ ಉಳಿದವರಿಗೂ ಅನ್ವಯಿಸುತ್ತದೆ, ಬಹುಶಃ! ನಿಮ್ಮಲ್ಲೆಲ್ಲ ಗುಪ್ತವಾಗಿ ಇರೋ ನೀರು ತುಂಬಿದ ಫುಗ್ಗಾಕ್ಕ (balloon) ಸೂಜಿ ಚುಚ್ಚೇನಿ. ಹಿಂಗ ನಿಮ್ಮದೂ ಮಹಾಪೂರ ಹರಿಯಲಿ!

    Liked by 1 person

  3. ಎಲ್ಲಾರಿಗೂ ಅವ್ರವ್ರ ಊರು ಭಾಷೆ ಛಂದ. ನನಗೂ ಹಂಗ, ಧಾರವಾಡದ ಕನ್ನಡ ಧಾರವಾಡ ಫೇಡೇಕ್ಕಿಂತ ಇಷ್ಟ. ನಾ ಪಿಜಿ ಮಾಡ್ಲಿಕ್ಕೆ ಮೈಸೂರಿಗೆ ಹೋದಾಗಿಂದ ಆ ಭಾಷಾ ಕಿವಿಮ್ಯಾಲೆ ಬೀಳೂದು ಕಡಿಮ್ಯಾಗಿ ನನ ಕಿವಿ ಮಂದ ಆಗ್ಯಾವ. ಹುಬ್ಬಌ ಧಾರವಾಡದಾಗ ನಾನು ಕಂಡಷ್ಟು ನಾಟಕ, ಕೇಳಿದಷ್ಟು ಸಂಗೀತ (ಹಿಂದುಸ್ತಾನಿ ಮತ್ತ ದಾಸ ಸಂಗೀತ), ನೋಡಿದಷ್ಟು ಸಿನೆಮಾ, ಕೇಳಿದಷ್ಟು ಜೋಕು ಮತ್ತು ಬೈಗುಳಗಳು, ಇದುವರೆಗೂ ಇನ್ನೆಲ್ಲೂ ಪಡೆದಿಲ್ಲ. ನಾನು ಹು-ಧಾ ಗೆ ಚಿರಋಣಿ. ದೇಸಾಯಿ ನನ್ನ ಮನಸಿನ್ಯಾಗ ಇರೂದನ್ನ ಬರದಾರ, ಆದ್ರ ನನಗೆ ಅವರಷ್ಟು ಛಂದ ಬರೀಲಿಕ್ಕೆ ಬರೂದುಲ್ಲ, ಅದ್ ಮಾತ್ರ ಖರೆ. ದೇಸಾಯಿ ಸರ, ಇನ್ನೂ ಧಾರವಾಡದ ಬಗ್ಗೆ ಭಾಳ ಕೇಳೂದದ, ಮ್ಯಾಲಿಂದ ಮ್ಯಾಲ ಬರೀರಿ. ಆಷ್ಟ ಯಾಕ, ಧಾರವಾಡದ ಬಗ್ಗೆ ಒಂದು ಧಾರಾವಾಹೀ ಬರೀರಿ. – ಕೇಶವ

    Liked by 1 person

    • ಸರ್ ಕೇಶವ್ ಅವ್ರೆ, ನೀವೂ ಧಾರವಾಡದ್ ಮಂದಿ, ನಿಮ್ಮ ಭಾಷ ಬಗ್ಗೆ ಇನ್ನೊಂದ್ ಲೇಖನ ಬರೀರಲ್ಲ! ಚಲೋ ಬರೀತೀರಿ.
      ಉಮಾ ವೆಂಕಟೇಶ್

      Like

      • ಉಮಾ ಅವರೇ, ನಮ್ಮ ಧಾರವಾಡ ಭಾಷೆನ ಎಷ್ಟ ಛಂದ ಮಾತಾಡ್ತೀರಲಾ ನೀವು !! ಹೌದು ನೀವು ಹೇಳಿದ್ಹಾಂಗ ಕೇಶವ ಸರ್ ಕಡಿಂದ ಧಾರವಾಡ ಭಾಷಾದ ಲೇಖನ ಅಪೇಕ್ಷಾ ಭಾಳ ಅದ.
        ಸರೋಜಿನಿ ಪಡಸಲಗಿ

        Liked by 1 person

        • ಸರೋಜಿನಿ ಅವ್ರೆ, ಧಾರ್ವಾಡಾದಾಗ್ ಐದ್ ವರ್ಷ ಇದ್ನಲ್ಲ, ಅದ್ರ ಪ್ರಭಾವ ಇನ್ನೂ ಐತ್ರಿ. ಐದ್ ವರ್ಶ್ದಾಗ ಚಲೋ ಮಾತ್ನಾಡ್ಲಿಕ್ಕ ಕಲಿತ್ದಿದ್ದೆ. ನನ್ನ ಸ್ನೇಹಿತ್ರೂ ಹೀಗಾ ಅನ್ತಿದ್ರೂ! ಈಗ್ಲೂ ಧಾರ್ವಾಡಕ್ಕ್ ಹೋದ್ರ, ಅದೇ ಶೈಲಿಲ ಮಾತ್ನಾಡ್ತೀನಿ.
          ಉಮಾ

          Like

  4. ಧಾರವಾಡದ ಭಾಷೆಗೆ ಅದರದೇ ಆದ ಸೊಬಗಿದೆ ಎಂದು ಕೇಳಿ ಗೊತ್ತಿತ್ತು; ಹಿಂದೊಮ್ಮೆ ಫೇಡಾ ತಿನ್ನುವುದು, ಬೇಂದ್ರೆಯವರ ಕವನಗಳನ್ನ ಕೇಳುವುದು ಮೆಚ್ಚಿನದಾಗಿತ್ತು. ಈಗ ದೇಸಾಯಿಯವರ ಲೇಖನ ಮತ್ತು ಅವರು ಪರಿಚಯಿಸಿರುವ ಸಂಪನ್ಮೂಲಗಳಿಂದ ಧಾರವಾಡದ ಬಗ್ಗೆ ಮತ್ತಷ್ಟು ತಿಳುವಳಿಕೆ ಬಂತು. ಚಂದದ ಬರಹ!

    Liked by 1 person

  5. “ಕನ್ನಡದ ಪುಲ್ಲೆನಗೆ ಪಾವನ ತುಲಸಿ, ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ, ಕನ್ನಡದ ನೆಲದ ಕಲ್ಲೆನಗೆ ಶಾಲಗ್ರಾಮಶಿಲೆ, ಕನ್ನಡಂ ದೈವಮೈ“
    ಈ ಮೇಲಿನ ಸಾಲುಗಳನ್ನು ತಮ್ಮ ಕವನದಲ್ಲಿ ಬರೆದು ಕನ್ನಡದ ಪ್ರಜ್ನೆಯನ್ನು ಮೆರೆದ ಕನ್ನಡ ಸಾಹಿತ್ಯ ಲೋಕದ ಹಿರಿಯ ವ್ಯಕ್ತಿ ಶ್ರೀಮಾನ್ ಸಾಲಿ ರಾಮಚಂದ್ರ ರಾಯರ ರಕ್ತವನ್ನು ಹಂಚಿಕೊಂಡಿರುವ ದೇಸಾಯಿ ಅವರ ಲೇಖನಿಯಲ್ಲಿ, ಅವರ ಊರಿನ ಹಿರಿಮೆ ಗರಿಮೆಗಳು ಇಷ್ಟೊಂದು ಸೊಗಸಾಗಿ ಮೂಡಿಬಂದಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ! ಈಗ ೩೦ ವರ್ಷಗಳ ಹಿಂದೆ, ನನ್ನ ಪಿ.ಎಚ್.ಡಿ ಪದವಿಯ ಅಧ್ಯಯನಕ್ಕೆ, ಮೈಸೂರಿನಿಂದ ಧಾರವಾಡಕ್ಕೆ ಹೋದಾಗ ಅಲ್ಲಿಯ ಕನ್ನಡದ ಸೊಗಡು ನನಗೂ ಪರಿಚಯವಾಯಿತು. ಮೊದಮೊದಲಲ್ಲಿ ಸ್ವಲ್ಪ ಹಿಂಜರಿದರೂ, ಆ ಊರು ಬಿಡುವ ಸಮಯಕ್ಕೆ ಆ ಕನ್ನಡದಲ್ಲಿ ಸಂಭಾಷಿಸಲು ಕಲಿತಿದ್ದೆ. ಕನ್ನಡ ಸಾಹಿತ್ಯ ಲೋಕದ ಅನೇಕ ದಿಗ್ಗಜಗಳನ್ನು ಕನ್ನಡಕ್ಕೆ ಕೊಡುಗೆಯಾಗಿತ್ತಿರುವ ಧಾರವಾಡದ ಭಾಷೆಯಲ್ಲಿ ಅಲ್ಲಿನ ಮಣ್ಣಿನ ವಾಸನೆ ಭರಪೂರವಾಗಿ ಹೊಮ್ಮುತ್ತದೆ. ಹಿಂದಿ, ಮರಾಠಿ, ಮತ್ತು ಹಲವಾರು ಉರ್ದು ಶಬ್ದಗಳನ್ನೂ ಸೇರಿಸಿ ತನ್ನ ಸೊಗಡನ್ನು ಬೀರುವ ಕನ್ನಡ ನಿಜಕ್ಕೂ ಸೊಗಸು. ಭಾರತೀಯ ಶಾಸ್ತ್ರೀಯ ಸಂಗೀತದ ಹಿರಿಯ ತಲೆಗಳಾದ ಭೀಮಸೇನ ಜೋಷಿ, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಇಂದಿನ ತರುಣ ಪೀಳಿಗೆಯ ಪ್ರತಿಭೆ ಸಂಗೀತಾ ಕಟ್ಟಿ ಅವರ ಸಂಗೀತದಲ್ಲಿ ಕೇಳಬಹುದು ಧಾರವಾಡದ ಕನ್ನಡದ ಸೊಬಗನ್ನು. ಧಾರವಾಡದ ಮಂದಿ ಹೊರದೇಶಕ್ಕೆ ಹೋದರೂ, ಅವರ ಕನ್ನಡದಲ್ಲಿ ಸಂಭಾಷಿಸುವುದನ್ನು ಬಿಟ್ಟಿಲ್ಲ. ಯು.ಕೆ ಕನ್ನಡ ಬಳಗದಲ್ಲಿ ಆ ಭಾಷೆಯ ಸೊಗಡನ್ನು ಇನ್ನೂ ಕೇಳಬಹುದು. ದೇಸಾಯಿ ಅವರ ಮಾತಿನಲ್ಲೇ ಹೇಳುವುದಾದರೆ, ನೀವು ಧಾರವಾಡದ ಮಂದಿಯನ್ನು ಅಂಟಾರ್ಟಿಕಾಗೆ ಕರೆದೊಯ್ದರೂ ಸರಿ, ಅಲ್ಲಿಯೂ ಅವರ
    ಭಾಷೆಯನ್ನು ಅವರು ಬಿಡರು! ಅವರ ಡಿ ಎನ್ ಯೆ ದ್ವಂದ್ವ ಸುರುಳಿಯಲ್ಲಿ, ಕನ್ನಡದ ಸೊಗಡು ಬಹಳ ದೃಢವಾಗಿ ಬೇರೂರಿದೆ.
    ಉಮಾ ವೆಂಕಟೇಶ್

    Liked by 1 person

    • Thank you, Naina. Narrowly missed on my recent Dharwad visit. ಬಾಯಿ ತುಂಬಾ ಧಾರ್ವಾಡ್ ಮಾತಾಡ ಬಹುದಿತ್ತಲ್ಲ!ಅದು ನೀವು ತಂದ ಫೇಡೆನ!

      Like

  6. ಧಾರವಾಡದ ತುಂಬ ಚೆಂದದ ಚಿತ್ರಣ.ನಾನು ಧಾರವಾಡಕ್ಕೆ ವಲಸಿಗಳಾಗಿ ಬಂದರೂ ,ಅಚ್ಚ ಧಾರವಾಡದವಳೇ ಆಗಿಬಿಟ್ಟಿದ್ದೇನೆ.ಈಗ ಧಾರವಾಡ ಬಿಟ್ಟು ಬೆಂಗಳೂರುಗೆ ಬಂದಿದ್ದರೂ , ನಾನು ಧಾರವಾಡಿಗಳೇ.ಯಾವಾಗಲಾದರೂ ಧಾರವಾಡಕ್ಕೆ ಹೋದಾಗ ಪಕ್ಕ ಬಿಚ್ಚಿದ ಹಕ್ಕಿಯಾಗಿ ಬಿಡ್ತೇನೆ.ಹಾಗಿದೆ ನಮ್ಮ ಧಾರವಾಡ.ಶ್ರೀವತ್ಸ ದೇಸಾಯಿಯವರ ಲೇಖನ ನಮಗೆ ಗೊತ್ತಿಲ್ಲದ ಅನೇಕ ವಿಷಯಗಳ ಅನಾವರಣ ಮಾಡಿದೆ.ನಮ್ಮ ಧಾರವಾಡದ ಬಗ್ಗೆ ಓದಿ ಎದೆ ಹೆಮ್ಮೆಯಿಂದ ಬೀಗುತ್ತದೆ.ಅವರ ವ್ಯವಸ್ಥಿತವಾದ , ತರ್ಕಬದ್ಧವಾದ ಅಭ್ಯಾಸ ,ಪ್ರತಿಯೊಂದು ವಿಷಯದ ಬಗ್ಗೆ ದೇಸಾಯಿಯವರಿಗಿರುವ ಆಳವಾದ ಆಸಕ್ತಿ , ರುಚಿಯನ್ನ ಎತ್ತಿ ತೋರಿಸಿದೆ.ಅವರೂ ಧಾರವಾಡಿಗರೇ ಅಲ್ಲವೆ ? ಧಾರವಾಡದ ಹಿರಿಮೆ ,ಗರಿಮೆಯನ್ನ ಮೆರೆಸಿದ ಲೇಖನ , ನಮ್ಮೆದೆ ಹೆಮ್ಮೆಯಿಂದ ಬೀಗುವಂತೆ ಮಾಡಿದ ಬರಹ .ಶ್ರೀವತ್ಸ ದೇಸಾಯಿಯವರೇ ,ಧನ್ಯವಾದಗಳು , ಅಪರೂಪದ ಬರಹಕ್ಕೆ ಅಭಿನಂದನೆಗಳು.
    ಸರೋಜಿನಿ ಪಡಸಲಗಿ

    Liked by 1 person

Leave a comment

This site uses Akismet to reduce spam. Learn how your comment data is processed.