ಪೂರ್ವ-ಪಶ್ಚಿಮಗಳ ಮಿಲನ (EAST MEETS WEST) – ಡಾ. ಲಕ್ಷ್ಮೀನಾರಾಯಣ ಗುಡೂರ ಬರೆದ ವಿಶೇಷ ವರದಿ

ನವೆಂಬರ್ ೫ ರಂದು ಡಾರ್ಬಿಯಲ್ಲಿ ನಡೆದ ಕನ್ನಡ ಬಳಗ ಯು.ಕೆ. ಆಯೋಜಿತ ‘ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ’ ಸಮಾರಂಭದಲ್ಲಿ ಒಂದು ವಿಶೇಷವಿತ್ತು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ ‘ಈಸ್ಟ್ ಮೀಟ್ಸ್ ವೆಸ್ಟ್’ ಅಥವಾ ‘ಪೂರ್ವ ಪಶ್ಚಿಮಗಳ ಮಿಲನ’ ಎಂಬ ಸಾಹಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕನ್ನಡ ವೇದಿಕೆಯ ‘ಅನಿವಾಸಿ’ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ ತಮ್ಮದೊಂದು ಕವನವನ್ನು ಸಹೃದಯ ಸಭಿಕರ ಮುಂದೆ ಓದಿ, ಅದರ ಅನುವಾದವನ್ನೂ ಪ್ರಚುರಪಡಿಸಬೇಕಿತ್ತು. ಅಥವಾ, ಅವರು ಆ ಎರಡು ಭಾಷೆಗಳಿಂದ ಒಂದು ಕವನವನ್ನು ಆರಿಸಿಕೊಂಡು ಅದನ್ನು, ಮತ್ತದರ ಭಾಷಾಂತರವನ್ನು ಓದಬಹುದಿತ್ತು.  ಆ ಕವನಗಳನ್ನು ಬರೆದ ಬಗೆ, ಜಾಗತಿಕ ಸಾಹಿತ್ಯದಿಂದ ಒಂದನ್ನು ಆಯ್ಕೆ ಮಾಡಿದ್ದರಲ್ಲಿ ಅಡಗಿದ್ದ ಜಾಣ್ಮೆ, ಮತ್ತು ತರ್ಜುಮೆ ಮಾಡಿದ ರೀತಿಯಲ್ಲಿದ್ದ ವಿಸ್ಮಯ, ಭಾಷಾ ಮತ್ತು ವಿಷಯ ಜ್ಞಾನ – ಇವೆಲ್ಲಾ ‘ಪೂರ್ವ ಪಶ್ಚಿಮಗಳ ಮಿಲನ’ದ ಹಿಂದಿದ್ದ ಆಶಯಗಳು.

ಜೊತೆಗೆ, ನಮ್ಮ ಕನ್ನಡ ಕಿರಿಯ ಕಣ್ಮಣಿಗಳು ಇಂಗ್ಲಿಷ್ ಭಾಷೆಯಲ್ಲಿ ಬರೆಯುತ್ತಿರುವ ಸಾಹಿತ್ಯವನ್ನು ಹಂಚಿಕೊಂಡು, ಅದರ ಅನುವಾದವನ್ನ ಪ್ರಸ್ತುತಪಡಿಸಿ, ಕಿರಿ-ಹಿರಿಯರ ‘ಭಾಷಾಮಿಲನ’ವನ್ನು ಕೂಡ ನೋಡುವುದು ಸಾಧ್ಯವಾಗುವುದೇ ಎಂಬ ಒಂದು ಪ್ರಶ್ನೆಯಿತ್ತು. ಇವೆಲ್ಲಾ ಈಡೇರಿದವೇ ಎನ್ನುವುದನ್ನು ಡಾ. ಲಕ್ಷ್ಮೀನಾರಾಯಣ ಗುಡೂರ ರವರು ತಮ್ಮ ಲೇಖನದಲ್ಲಿ ಗುರ್ತಿಸಿದ್ದಾರೆ. ಅವರ ಅಪರೂಪದ ಪ್ರತಿಭೆಯನ್ನು ಬಳಸಿ ಅವರೇ ಸಂದರ್ಭಸೂಚ್ಯ ಚಿತ್ರಗಳನ್ನು ಕೂಡ ರೇಖೆಗಳಲ್ಲಿ ಮೂಡಿಸಿದ್ದಾರೆ. ಲಕ್ಷ್ಮೀನಾರಾಯಣರ ಲೇಖನದ ಜೊತೆಗೆ ‘ಈಸ್ಟ್ ಮೀಟ್ಸ್ ವೆಸ್ಟ್’ ಕಾರ್ಯಕ್ರಮದಲ್ಲಿ ಓದಿದ ಇಬ್ಬರು ಕಿರಿಯರ ಕವನಗಳು, ಅವುಗಳ ಭಾವಾನುವಾದಗಳು ಈ ಶುಕ್ರವಾರ ನಿಮ್ಮ ಮುಂದೆ ಇದೆ. – ಸಂ.

thumbnail_20161105_130606
ಕಾರ್ಯಕ್ರಮದಲ್ಲಿ ಹಾಜರಿದ್ದ ಕನ್ನಡ ಬಳಗದ ಸದಸ್ಯರು              ಲೇಖಕರು ಬಲ ತುದಿಯಲ್ಲಿ

 

ಪೂರ್ವ-ಪಶ್ಚಿಮಗಳ ಮಿಲನ (EAST MEETS WEST) ಕಾರ್ಯಕ್ರಮದ ವಿಶೇಷ ವರದಿ – ಡಾ. ಲಕ್ಷ್ಮೀನಾರಾಯಣ ಗುಡೂರ

ಈ ವರ್ಷದ ಯು.ಕೆ. ಕನ್ನಡ ಬಳಗದ ದೀಪಾವಳಿ ಕಾರ್ಯಕ್ರಮಕ್ಕೆ ನಾನು ಹೋಗಲು ನಿರ್ಣಯಿಸಿದ್ದಕ್ಕೆ ಕೊಡಬಹುದಾದ ಕಾರಣಗಳಲ್ಲಿ ಒಂದು – ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ ಯು.ಕೆ. (KSSVV UK) ಏರ್ಪಡಿಸಿದ್ದ ಕವಿಗೋಷ್ಠಿ. ಅದಕ್ಕವರು ಕೊಟ್ಟ East Meets West (“ಪೂರ್ವ-ಪಶ್ಚಿಮಗಳ ಮಿಲನ”) ಅನ್ನುವ ಹೆಸರು ಕೇಳಿಯೇ ಸ್ವಲ್ಪ ಕುತೂಹಲ ಉಂಟಾಗಿತ್ತು. ನಂತರ ಕಾರ್ಯಕ್ರಮ ಪಟ್ಟಿ ಬಂದಾಗ ಅದರಲ್ಲಿನ ಕಾರ್ಯಕ್ರಮದ  ವಿವರ, ಮುಖ್ಯ ಅತಿಥಿ ಕ್ಯಾಥಿ ಗ್ರಿಂಡ್ರಾಡ್ (Cathy Grindrod) ಅವರ ಹೆಸರು ನೋಡಿದ ಮೇಲಂತೂ ಸ್ವಲ್ಪ ಹೆಚ್ಚೇ ಆಸಕ್ತಿ ಮೂಡಿತ್ತೆನ್ನಬಹುದು.

daffodil-quest
ಹಾಸ್ಯಚಿತ್ರ ಕೃಪೆ: ಡಾ. ಲಕ್ಷ್ಮೀನಾರಾಯಣ ಗುಡೂರ್

ಶನಿವಾರ ೦೫.೧೧.೨೦೧೬ ರಂದು ಬೆಳಗ್ಗೆ ನಾವಿರುವ ಪ್ರೆಸ್ಟನ್ (Preston, UK) ಊರಿನಿಂದ ಹೊರಡುವ ವೇಳೆಗೆ ಬಿದ್ದಿದ್ದ ಬಿಸಿಲಿನಿಂದಲೇ ಅರ್ಧ ಮನಸ್ಸಿಗೆ ಖುಷಿ. ಕನ್ನಡ ಬಳಗ ಕಾರ್ಯಕ್ರಮ ನಡೆಯುವ ಸ್ಥಳ (venue) ‘ನದಿಬದಿಯ ಕೇಂದ್ರ’ (Riverside Centre) ಗೆ ಹೋಗಿ ಮುಟ್ಟಿದಾಗ ೧೦-೪೫. ಮುಖ್ಯ ಕಾರ್ಯಕ್ರಮದ ಸ್ವಾಗತ ಭಾಷಣ ಇತ್ಯಾದಿ ಮುಗಿದು ಪಕ್ಕದ ಚಿಕ್ಕ ಕಟ್ಟಡಕ್ಕೆ ಬಂದು ಕುಳಿತೆವು. ಸುತ್ತ ಕುಳಿತವರ ಕಡೆ ಕಣ್ಣು ಹಾಯಿಸಿದಾಗ ಕಂಡದ್ದು ಮಕ್ಕಳು-ದೊಡ್ಡವರ ಆಸಕ್ತ ಮುಖಗಳು. ಕಾರ್ಯಕ್ರಮ ಹೆಚ್ಚು ಕಡಿಮೆ ಸಮಯಕ್ಕೇ ಶುರುವಾಯ್ತು. ಡಾರ್ಬಿಶೈರಿನ ಮೊದಲ ರಾಜ ಕವಯಿತ್ರಿ (poet laureate 2005-7) ಕ್ಯಾಥಿ ಗ್ರಿಂಡ್ರಾಡ್, ಇಲ್ಲಿನ ರಿವಾಜಿನಂತೆ ವೇಳೆಗೆ ಸರಿಯಾಗಿ ಹಾಜರಿದ್ದರು. ಆಸ್ಟ್ರೇಲಿಯಾದಿಂದ ಬಂದು ಈಗ ಇಂಗ್ಲೆಂಡಿನಲ್ಲಿ ನೆಲೆಸಿರುವ, ‘ಅನಿವಾಸಿ’ ಯಾ ಸಂಪಾದಕಿ ವಿನತೆ ಶರ್ಮ ಕಾರ್ಯಕ್ರಮವನ್ನು ನಡೆಸಿ ಕೊಡುವ ಹೊಣೆ ಹೊತ್ತಿದ್ದರು. ಅವರೊಂದಿಗೆ ವೇದಿಕೆಯ ಮೇಲೆ ಕಸಾಸಾವಿವೇದಿಕೆಯ ಮಾನನೀಯ ಸದಸ್ಯರಾದ ಶ್ರೀ ಶ್ರೀವತ್ಸ ದೇಸಾಯಿ, ಜಿ ಎಸ್ ಶಿವಪ್ರಸಾದ್ ಹಾಗೂ ತಾಂತ್ರಿಕ ನಿರ್ವಾಹಕರ ಹೊಣೆಗಾರಿಕೆಯಲ್ಲಿ ರಾಮಶರಣ ಲಕ್ಷ್ಮೀನಾರಾಯಣ ಸಹ ಇದ್ದರು.thumbnail_20161105_132556

ಜಿ ಎಸ್ ಶಿವಪ್ರಸಾದ್ ಅವರು ಮುಖ್ಯ ಅತಿಥಿ ಕ್ಯಾಥಿ ಗ್ರಿಂಡ್ರಾಡ್ ಅವರ ಪರಿಚಯ ಮಾಡಿಕೊಡುವುದರೊಂದಿಗೆ ಕಾರ್ಯಕ್ರಮದ ಪ್ರಾರಂಭವನ್ನು ಘೋಷಿಸಿದರು. ಕಾರ್ಯಕ್ರಮದ ಸಾರಥ್ಯ ವಹಿಸಿದ್ದ ವಿನತೆ ಶರ್ಮ, ಕಲಾಪದ ರೂಪು-ರೇಷೆಗಳನ್ನು ಕೊಟ್ಟು, ಪ್ರತಿಯೊಬ್ಬ ಕವಿಯ ಸಮಯ ಪರಿಧಿಯನ್ನು ವಿವರಿಸಿದರು. ಎಂಟು ಕವನಗಳನ್ನು ಆರಿಸಲಾಗಿದ್ದು, ಆಯಾ ಕವಿಗಳು ಸ್ವತಃ ಕಾವ್ಯವಾಚನ ಮಾಡುವುದಾಗಿಯೂ, ಅದಕ್ಕೂ ಮುನ್ನ ತಾವು ಒಂದು ನಿಮಿಷದ ‘ಸಿಹಿ-ಹನಿ’ (short and sweet) ಕವಿಪರಿಚಯ ಮಾಡಿ ಕೊಡುವುದಾಗಿಯೂ ವಿನತೆ ಶರ್ಮ ಸಾರಿದರು. ಪ್ರತಿ ಕವಿಯ ಸರದಿಯ ಬಳಿಕ ಮುಖ್ಯ ಅತಿಥಿ ಕವನದ ಬಗೆಗಿನ ತಮ್ಮ ಅನಿಸಿಕೆಗಳನ್ನು ಹೇಳುವವರಿದ್ದರು.

 ಮೊದಲಿನ ಎರಡು ಕವನಗಳು ಬಾಲಕವಿಗಳದ್ದು – ೧೩ ವರ್ಷ ವಯಸ್ಸಿನ ಅಮೋಘ ರಾಮಶರಣ್ (An ode to food) ಹಾಗೂ ೧೧ರ ಸಿಯಾ ಕುಲಕರ್ಣಿ (The Griff). ಅಮೋಘ ತನ್ನ ಕವನವನ್ನು ಊಟದಂಥ ಹಗುರ ವಿಷಯದಿಂದ ಶುರು ಮಾಡಿ, ಜಗತ್ತಿನ ಜನರ ಬಡತನದಂಥ ಗಂಭೀರ ವಿಷಯದೊಂದಿಗೆ ಮುಗಿಸುತ್ತಾನೆ – ಮನುಷ್ಯನಿಗೆ ಇರುವುದರಲ್ಲಿ ತೃಪ್ತಿ ಇರಬೇಕೆಂಬ ಸಂದೇಶದೊಂದಿಗೆ. ಈ ಕವನದ ಕನ್ನಡ ಅನುವಾದವನ್ನು ಅಮೋಘನ ತಂದೆ ಡಾ. ರಾಮಶರಣ ಲಕ್ಷ್ಮೀನಾರಾಯಣ ಓದಿದರು.

 ಸಿಯಾ ಕುಲ್ಕರ್ಣಿಯ ಕವನ ಗಹನವಾದ ವಿಷಯದೊಂದಿಗೆ ಶಬ್ದಗಳ ಮೂಲಕ ಆಟವಾಡುತ್ತದೆ. ಮೇಲ್ನೋಟಕ್ಕೆ ಸರಳವಾದ ಮಗುವಿನ ಕತ್ತಲೆಯ ಬಗೆಗಿನ ಭಯವೇ ಮುಖ್ಯ ವಿಚಾರವೆನಿಸಿದರೂ, ಅಲ್ಲಿರುವ ಭಾವನೆಗಳನ್ನು ವಯಸ್ಕ ಜೀವನದ ಯಾವುದೇ ಭಯಕ್ಕೂ ಹೊಂದಿಸಿ ನೋಡಬಹುದಾಗಿದೆ.

 ಕೇಶವ ಕುಲಕರ್ಣಿಯವರ ಯತ್ನ ಕನ್ನಡದ ಡಾ. ಜಿ ಎಸ್ ಶಿವರುದ್ರಪ್ಪನವರ “ಗೋಡೆಗಳು” ಕವನವನ್ನು ಇಂಗ್ಲಿಷಿಗೂ, ಇಂಗ್ಲಿಷಿನ “Instants” (ಸ್ಪ್ಯಾನಿಷ್ ಮೂಲ – ಹೋಹಿ ರುಇಸ್ ಬೋರ್ಗೆಸ್ ರ ರಚನೆ) ಅನ್ನು ಕನ್ನಡಕ್ಕೂ ತರುವುದು. ಮೊದಲನೇ ಕವನ “The Walls” ಇಬ್ಬರು ವ್ಯಕ್ತಿಗಳ ಸಂಬಂಧದಲ್ಲಿ ಒಮ್ಮೆಲೇ ಬೆಳೆದು ಅಡ್ಡ ನಿಲ್ಲುವ, ಸಂಬಂಧಗಳನ್ನು ಹಾಳುಗೆಡವುವ ಕಾಲ್ಪನಿಕ ಗೋಡೆಗಳ ಚಿತ್ರಣ ನೀಡುತ್ತದೆ. ಎರಡನೆಯದ್ದು, ಜೀವನವನ್ನು ಒಂದು ವೇಳೆ ರಿವೈಂಡ್ ಮಾಡುವ ಹಾಗಿದ್ದಿದ್ದರೆ ಏನೆಲ್ಲಾ ಮಾಡುತ್ತಿದ್ದೆ ಎನ್ನುವ ಕವಿಯ ಕಲ್ಪನೆಯ ಮೂಲಕ, ನಮ್ಮ-ನಿಮ್ಮ ಕನಸನ್ನು ಕೆದಕುತ್ತದೆ. ಆದರೆ, ಕೊನೆಗೆ ವಾಸ್ತವಿಕತೆಗೆ ತಂದು ನಿಲ್ಲಿಸುತ್ತದೆ.

ಡಾ. ಜಿ ಜಯರಾಂ ತಮ್ಮ ಕವನದ ಮೂಲಕ ವಿವಿಧ ಎಡೆಗಳಲ್ಲಿ ಶಾಂತಿಯನ್ನು ಹುಡುಕುವ ಯತ್ನ ಮಾಡುತ್ತಾರೆ. ನಮ್ಮ ಪ್ರಿಯರನ್ನು ಅಂತ್ಯದಲ್ಲಿ ಕೊನೆಯ ಬಾರಿಗೆ ಬೀಳ್ಕೊಡುವ ಸ್ಥಳದಲ್ಲಿ ಪರಮಶಾಂತಿಯಿದೆ ಎಂದು ಅಭಿಪ್ರಾಯಪಡುತ್ತಾರೆ.

ನಂತರ ಬಂದ ಡಾ. ಪ್ರಸಾದ್ ಎರಡು ಕವನಗಳನ್ನು ಪ್ರಸ್ತುತಪಡಿಸಿದರು – Let go, Mother let go ಹಾಗೂ Snowscape. ಡಾ. ಪ್ರಸಾದ್ Let go, Mother let go ಕವನದಲ್ಲಿ ತಾಯಿಯ ಪ್ರೀತಿಯನ್ನು ಅರಿವಿನಲ್ಲಿ ಇಟ್ಟುಕೊಂಡೇ, ಜೀವನದಲ್ಲಿ ಗುರಿ ಸಾಧಿಸುವ ಆಸೆಯಿಂದ ಗೂಡು ಬಿಟ್ಟು ಹಾರಲೇಬೇಕಾದ ಮಗುವಿನ ಕೋರಿಕೆಯನ್ನು ಚಿತ್ರಿಸುತ್ತಾರೆ. ಹೊರಗೆ ಹೋದರೂ ಮತ್ತೆ ತಾಯಿಯ ಬೆಚ್ಚನೆಯ ಪ್ರೀತಿಯ ಮಡಿಲಿಗೆ ಬಂದೇ ಬರುವ, ಜೊತೆಯಲ್ಲಿ ಯಶಸ್ಸಿನ ಗರ್ವವನ್ನು ತರುವ ಮಗುವಿನ ಆಸೆಯನ್ನು ವಿವರಿಸುತ್ತಾರೆ.  ಎರಡನೆಯ ಕವನ Snowscapeನಲ್ಲಿ ಚಳಿಗಾಲದ ಸೌಂದರ್ಯದ, ಹಿಮಮಾನವನ (snowman) ಜೀವನದ ಚಿತ್ರಣ ಕೊಡುತ್ತಾರೆ. ಚಳಿಗಾಲ ಕಳೆದು ಬಿಸಿಲು ಬಂದಂತೆ ಹಿಮಮಾನವ ಕರಗಿ ನೀರಾಗಿ ಹರಿದು ಹೋಗುವುದನ್ನು ಮಾನವನ ಕ್ಷಣಿಕ ಜೀವನಕ್ಕೆ ಹೋಲಿಸುತ್ತಾರೆ.

ಶ್ರೀವತ್ಸ ದೇಸಾಯಿ, ತಮ್ಮ ಬಾಲ್ಯದ ಪುಸ್ತಕದಲ್ಲಿದ್ದ ಡಾಫೋಡಿಲ್ ಹೂವನ್ನು ನೋಡುವ ಛಲದಿಂದ ರಾಣಿಯ ನಾಡಿಗೆ ಬಂದ ಕನಸಿನ ರಹಸ್ಯದ ಗಂಟನ್ನು ತಮ್ಮ “ಹೂವನ್ನರಸಿ” ಬಂದ ಕನಸುಗಾರನ ರೂಪದಲ್ಲಿ ಬಿಚ್ಚಿಡುತ್ತಾರೆ. ಒಮ್ಮೆ ಇಲ್ಲಿ ಬಂದ ಮೇಲೆ, ಇಲ್ಲಿಯ ಕರ್ಮಭೂಮಿಯಲ್ಲಿ ಉಳಿದು ಹೋದ ವಾಸ್ತವಿಕತೆಯಲ್ಲಿಯೂ ಇಲ್ಲೇ ಒಂದು ಸ್ವರ್ಗ ರಚಿಸಿಕೊಂಡಿರುವ ಆಸೆ ವ್ಯಕ್ತಪಡಿಸುತ್ತಾರೆ.

 “ದೀಪಗಳ ಸೇತು” ವಿನತೆ ಶರ್ಮ ಅವರ ರಚನೆ. ದೊಡ್ಡ ಮನೆಯಲ್ಲಿನ ಹಬ್ಬದ ಬೆಳಕು, ಪಟಾಕಿಯ ಸದ್ದು, ಗೆಜ್ಜೆಯ ನಾದ, ರೇಷ್ಮೆ ಲಂಗದ ಸರ ಸರ, ರಸ್ತೆಯಲ್ಲಿ ಹೋಗುವ ಪುಟ್ಟಿಯ, ಚಿಂದಿ ಚೀಲ ಹೊರುವ ಹುಡುಗನ ಕಣ್ಣುಗಳಲ್ಲಿ ಕನಸುಗಳನ್ನು, ಆಸೆಯನ್ನು ಬಡಿದೆಬ್ಬಿಸುತ್ತದೆ. ಆದರೆ, ದ್ವೀಪಗಳಂತಾಗಿರುವ ಮಾನವರ ಮಧ್ಯೆ ಬಿದ್ದು ಹೋಗಿರುವ ಸೇತುವೆಗಳ necessityಯನ್ನು ಎತ್ತಿ ತೋರುತ್ತದೆ. ಎಂದಾದರೂ ನಾವೇ ಈ ಸೇತುವೆಗಳಾಗಿ ಮತ್ತೆ ಮನುಷ್ಯರನ್ನು ಜೋಡಿಸಬಹುದೇ ಎಂಬ ಆಶಾವಾದವನ್ನು ವ್ಯಕ್ತಪಡಿಸುತ್ತಾರೆ ಕವಯಿತ್ರಿ ಶರ್ಮ.

boy-and-girl
ಹಾಸ್ಯಚಿತ್ರ ಕೃಪೆ: ಡಾ. ಲಕ್ಷ್ಮೀನಾರಾಯಣ ಗುಡೂರ್

ಇನ್ನು ಕೊನೆಯಲ್ಲಿ ಬಂದ ಅನ್ನಪೂರ್ಣ ಆನಂದ್ ಅವರು, ಇದುವರೆಗೆ ಕವನ ಓದಿದ ಕವಿ/ಕವಯಿತ್ರಿಯರಿಗಿಂತ ಭಿನ್ನವಾದದ್ದನ್ನು ಮಾಡುವರೆಂದು ಕಾರ್ಯನಿರ್ವಾಹಕಿ ವಿನತೆ ಶರ್ಮ ಘೋಷಿಸಿದರು. ಅನ್ನಪೂರ್ಣ ಅವರು ಆರಿಸಿಕೊಂಡಿದ್ದು ಟಿ ಪಿ ಕೈಲಾಸಂ ಅವರ “ತಿಪ್ಪಾರಳ್ಳಿ ಬಲು ದೂರ” ಕವನವನ್ನು. ಆ ಕವನದ ಹಿನ್ನೆಲೆ ಕೊಡುತ್ತ, ಅದರ ಇನ್ಸ್ಪಿರೇಷನ್ ಆದ “It’s a long way to Tipperary” ಹಾಡನ್ನು ಹಾಡಿದ್ದಲ್ಲದೇ, ಅದೇ ರಾಗದಲ್ಲಿ ಕೈಲಾಸಂ ಅವರ ರಚನೆಯನ್ನೂ ಹಾಡಿ ತೋರಿಸಿದರು.

ಇಲ್ಲಿಗೆ ಆರಿಸಿದ ಕವನಗಳ ಮುಕ್ತಾಯವಾಯಿತು. ಇದಾದ ಮೇಲೆ ಮುಖ್ಯ ಅತಿಥಿ ಕ್ಯಾಥಿ ಗ್ರಿಂಡ್ರಾಡ್ ಅವರ ಸಮಯ. ಅವರು, poet laureate ಆದಾಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.

thumbnail_20161105_130553
ಮುಖ್ಯ ಅತಿಥಿ ಕ್ಯಾಥಿ ಗ್ರಿಂಡ್ರಾಡ್

ಅಲ್ಲದೆ, ಕಾವ್ಯರಚನೆಯ ಉಪಯುಕ್ತ ಮುತ್ತುಗಳನ್ನು (pearls) ಹಂಚಿದರು. ತಮ್ಮ ಹಲವಾರು ಕವನಗಳನ್ನು ಓದಿದರು. ಕೇಳುಗರನ್ನು ಮೆದುವಾದ, ನಿಧಾನಗತಿಯ ಕವನದಿಂದ ಹಿಡಿದು ಕ್ಷಿಪ್ರಗತಿಯ ಹಾಡಿನವರೆಗೆ ವಿವಿಧ ವೇಗಗಳಲ್ಲಿ ರೋಲರ್ ಕೋಸ್ಟರ್ ಪ್ರಯಾಣ ಮಾಡಿಸಿದರು.  “Home” ಕವನದಲ್ಲಿಯ ಪುಸ್ತಕಪ್ರಿಯ ಹುಡುಗಿಯಿಂದ ಹಿಡಿದು, “Mr Hartley & sons” ನ ಹಾರ್ಡ್-ವರ್ಕಿಂಗ್ ಕುಟುಂಬದ ಹೊಲಿಗೆ ಅಂಗಡಿಯ ಮೂಲಕ, The Nailmakers ನ “work hard, party harder” ಕೆಲಸಗಾರರವರೆಗೆ ಸಮಾಜದ ವಿವಿಧ ಮುಖಗಳ ಪರಿಚಯ ಮಾಡಿಸಿದರು. ಒಟ್ಟಿನಲ್ಲಿ ಹೇಳುವುದಾದರೆ, East meets West ಕವಿಗೋಷ್ಟಿಯನ್ನು ಶೃಂಗಾರೋಹಣ ಮಾಡಿಸಿ ಮುಗಿಸಿದರು.

nailmakers
ಮುಖ್ಯ ಅತಿಥಿ, ಕವಿಯಿತ್ರಿ ಕ್ಯಾಥಿ ಗ್ರಿಂಡ್ರಾಡ್ ರ The Nailmakers ನ “work hard, party harder” – ಹಾಸ್ಯಚಿತ್ರ ಕೃಪೆ: ಡಾ. ಲಕ್ಷ್ಮೀನಾರಾಯಣ ಗುಡೂರ್

ಕೊನೆಯಲ್ಲಿ ಕ್ಯಾಥಿ ಗ್ರಿಂಡ್ರಾಡ್ ಅವರ ಕವನ ಸಂಕಲನ ಪುಸ್ತಕವನ್ನು ಕೊಳ್ಳುವ ಅವಕಾಶವೂ ಇತ್ತು. ಕೊಂಡವರಿಗೆ ಪುಸ್ತಕದಲ್ಲಿ ಅವರ ಹಸ್ತಾಕ್ಷರವೂ ದೊರೆಯಿತು.thumbnail_20161105_132538

ಕಾರ್ಯಕ್ರಮ ಶ್ರೀವತ್ಸ ದೇಸಾಯಿಯವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.

ಒಟ್ಟಿನಲ್ಲಿ ಹೇಳುವುದಾದರೆ, ಕಸಾಸಾವಿವೇ ಆಯೋಜಿಸಿದ East meets West (ಪೂರ್ವ-ಪಶ್ಚಿಮಗಳ ಮಿಲನ) ನಿರೀಕ್ಷೆಗೆ ತಕ್ಕಂತೆ ಒಳ್ಳೆಯ ಕಾರ್ಯಕ್ರಮವಾಗಿ ಮೂಡಿಬಂದಿತು.  ಎಲ್ಲರ ಕವನಗಳೂ ಕೇಳುಗರನ್ನು ಒಂದಲ್ಲ ಒಂದು ರೀತಿ ತೃಪ್ತಿ ಪಡಿಸಿದರೂ, ಮೊದಲಿಬ್ಬರು ಬಾಲಕವಿಗಳ ಪ್ರಯತ್ನಗಳು ಶ್ಲಾಘನೀಯವೆಂದೇ ಹೇಳಬೇಕು.  ಶ್ರೀ ಕೇಶವ ಕುಲಕರ್ಣಿ ಮಧ್ಯ ಹೇಳಿದಂತೆ “Poetry is lost in translation” ಅನ್ನುವ ಭಯವೇನೂ ಈ ಕಾರ್ಯಕ್ರಮದಲ್ಲಿ ಕಾಡಲಿಲ್ಲ.

-ಡಾ. ಲಕ್ಷ್ಮೀನಾರಾಯಣ ಗುಡೂರ

 

ಇಬ್ಬರು ಕಿರಿಯರ ಕವನಗಳು, ಅವುಗಳ ಭಾವಾನುವಾದ :

  1. An ode to food – ಅಮೋಘ ರಾಮಶರಣ್ / ಆಹಾರಕ್ಕೊಂದು ಹಾರ – ಡಾ. ರಾಮಶರಣ ಲಕ್ಷ್ಮೀನಾರಾಯಣ

An ode to food

Food is the best

Better than the rest

From fruit to cake

And bread that’s been baked

 

The variety is endless

And the taste can be fabulous

Things like noodles and rice

You won’t need to think twice

 

But let us remember about

Those who always have to sleep out

For they don’t have the luxury

To eat muffins or curry

 

So just be grateful too

Others don’t have it easy as you

And while you eat to your heart’s content

Remember they don’t have so much as a tent

-Amogha Ramasharan

ಆಹಾರಕ್ಕೊಂದು ಹಾರ

ಆಹಾರವೇ ಅತ್ತ್ಯುತ್ತಮ

ಅದೇ ಎಲ್ಲಕ್ಕಿಂತ ಗರಿಮ

ಹಣ್ಣಿಂದ ಕೇಕಿನವರೆಗೆ

ಹದವಾಗಿ ಸುಟ್ಟ ರೊಟ್ಟಿ ಉದರ ಸೇರುವವರೆಗೆ

 

ಅದೆಷ್ಟು ಬಗೆ! ಅದೆಷ್ಟು ರೀತಿ!

ಬಣ್ಣಿಸಲಾರದಷ್ಟು ರುಚಿ

ಶಾವಿಗೆಯೇನು! ಅನ್ನವೇನು!

ಯೋಚಿಸುತ್ತಲೇ ನಿಂತೆಯೇನು?

 

ಆದರೆ ನೆನಪಿನಲ್ಲಿಡು

ಯಾರಿಗಿಲ್ಲ ತಮ್ಮದೇ ಮಾಡು

ಇಲ್ಲ, ಆ ಅನಿವಾಸಿಗಳಿಗೆ ಐಷಾರಾಮ

ಚಾಪೆ ಚಪ್ಪರವಿಲ್ಲ, ದೂರ  ಕಜ್ಜಾಯ ಮೃಷ್ಠಾನ್ನ

 

ಸ್ಮರಿಸು ನೀಡಿದವರ ಋಣ

ಕೆಲವರ ಬಾಳಿನ್ನೂ ಕಠಿಣ

ಧನ್ಯನಾಗಿರುವಾಗ ಉಂಡು-ತೇಗಿ

ಮನದಲ್ಲಿರಲಿ ನೆಲೆಯಿರದ ಬೈರಾಗಿ!

ಡಾ. ರಾಮಶರಣ ಲಕ್ಷ್ಮೀನಾರಾಯಣ

 

2. The Griff – ಸಿಯ ಕುಲಕರ್ಣಿ / ಅಮಾನುಷ  (ಭೀಕರ) – ಡಾ. ಶ್ರೀವತ್ಸ ದೇಸಾಯಿ

The Griff

outstretched, long, spindly fingers reach out to grab me,

embrace me, envelope me, consume me.

 

The moon, a shimmering silver coin ripples in a sea of blue,

so harmless and fragile, so calm and peaceful.

 

A hazardous layer of gravelly pellets,

littered with stones, caked on moss, iced with danger.

 

The hazy sun sinks behind a solid wall of earth,

my last hope, fading behind an ancient barrier.

 

Darkness grows rapidly, seeping into every corner, every crevice,

it feeds off fear, my fear.

 

The little light left disappears,

quickly merging into a blatant gloom.

 

I’m suddenly blinded by the absence of light,

black spots dance in the corners of my eyes.

 

Murky silhouettes resolve into swirling shadows, they mock me, taunt me.

Blackness engulfs me.

Blackness immerses me.

Blackness.

  – Sia Kulkarni

 

ಅಮಾನುಷ  (ಭೀಕರ)

ಅದರ ಉದ್ದನೆಯ ಬೆರಳುಗಳು ನನ್ನತ್ತ ಬರುತ್ತಿವೆ

ನನ್ನ ಸುತ್ತುವರಿದು ನನ್ನನ್ನಪ್ಪಿ ಕಬಳಿಸುವಂತಿದೆ

ನೀಲಸಾಗರದಲ್ಲಿ ತೇಲುವ ಬೆಳ್ಳಿಕಾಸಿನ ಚಂದಮ

ಎಂಥ ಭಿದುರ, ಎಷ್ಟು ಶಾಂತಿ!

ಕುಸಿಯುವ ನೆಲದ ಮೇಲೆ ಹರಡಿವೆ ಹರಳು-ಕಲ್ಲುಗಳ

ಮೇಲೆ ಹೆಪ್ಪುಗಟ್ಟಿದ ಭೀತಿಯ ಪಾಚಿ
ಮಸುಕು ಸೂರ್ಯಾಸ್ತ ಗಟ್ಟಿಮಣ್ಣಗೋಡೆಯಾಚೆ

ಒಂದು ಪುರಾತನ ಭಿತ್ತಿಯ ಹಿಂದವನ ಅಸ್ತಮನ

ಮೂಲೆ-ಮೂಲೆಯಲಿ, ಬೆಟ್ಟ ಕೊರಕಲುಗಳಲ್ಲಿ ನುಸುಳುವ ದಟ್ಟ ಕತ್ತಲೆ

ನನ್ನದೇ ಅಂಜಿಕೆಗಳ ಕಬಳಿಸಿ ಕೊಬ್ಬಿ ಕೂತಿದೆ!

ಮಂದ ಬೆಳಕಿನ ಕೊನೆಯ ಕಿರಣಗಳೂ ಕಾಣೆ

ಕಾಣದ ಕಾಂತಿ ಮಂಕು ಹಿಡಿಸಿದೆ

ಬೆಳಕೆಲ್ಲ ನಂದಿ ಕುರುಡನಾದೆ.

ಕಣ್ಣಂಚಿನಲಿ ಕುಣಿಯುವ ಕಪ್ಪು ಚುಕ್ಕೆಗಳು

ಕತ್ತಲೆಯಲಿ ಸುತ್ತುವ ನೆರಳುಚಿತ್ರಗಳ

ರಿಂಗಣ ಹಂಗಿಸುತ್ತಿದೆ, ನನ್ನನ್ನು ರೇಗಿಸುತ್ತಿದೆ!

ನನ್ನ ಸುತ್ತ  ಕತ್ತಲೆ

ನಾನು ಮಿಂದ ಈ ಅಂಧಕಾರ

ಎತ್ತೆತ್ತಲೂ ಕತ್ತಲೆ,

ಕಗ್ಗತ್ತಲೆ!

  –  ಡಾ. ಶ್ರೀವತ್ಸ ದೇಸಾಯಿ

 

 

 

 

7 thoughts on “ಪೂರ್ವ-ಪಶ್ಚಿಮಗಳ ಮಿಲನ (EAST MEETS WEST) – ಡಾ. ಲಕ್ಷ್ಮೀನಾರಾಯಣ ಗುಡೂರ ಬರೆದ ವಿಶೇಷ ವರದಿ

  1. ಡಾಕ್ಟರ್ ಲಷ್ಮಿನಾರಾಯಣರಿಗೆ
    ನಮಸ್ಕಾರ.
    ನಮ್ಮೆಲ್ಲರ ಮೆಚ್ಚಿಗೆಯಾದ ಅನಿವಾಸಿ ಸದಸ್ಯರು ವಂದು ವಿಶೇಷ ಈಸ್ಟ್ ಮೀಟ್ಸ್ ವೆಸ್ಟ್ ಕಾರ್ಯಕ್ರಮದ ಬಗ್ಗೆ ನೀವು ಬರೆದ ವರದಿ ಬಹಳ ಚೆನ್ನಾಗಿದೆ .
    ಅದರಲ್ಲಿ ನಿಮ್ಮ ಡ್ರಾಯಿಂಗ್ ಕಲೆ, ಕನ್ನಡ ಸಾಹಿತ್ಯದಲ್ಲಿರುವ ಅಭಿರುಚಿ ,ಹೆಮ್ಮೆ ಎದ್ದು ಕಾಣಿದವು. ನೀವು ಇಲ್ಲಿಯ ವರೆಗೆ ಎಲ್ಲಿ ಅಡಗಿದ್ದರಿ ಎಂದು ಮನೋಭಾವ
    ಬರುತ್ತಿದೆ! ಖಂಡಿತವಾಗಿ ನಿಮ್ಮ ಪ್ರೇರಣೆ, ಸಹಕಾರ,ಸಲಹೆ, ಕೆ.ಸ್.ಸ್.ವಿ.ವಿ.ಯಲ್ಲಿ ಸೇರಿಕೆಯಿಂದ ಅನಿವಾಸಿ ಇನ್ನೂ ಹೆಚ್ಚಿಗೆ ಪ್ರಗತಿಯಾಗುವದು .
    ಡಾಕ್ಟರ್ ಪ್ರಸಾದರು ಹೇಳಿದ ಹಾಗೆ ನಿಮಗೆ ಅನಿವಾಸಿಯ ಬಾಗಿಲು ಸದಾ ತೆರದೆ ಇಟ್ಟಿದೆ.
    ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.

    ಅರವಿಂದ ಕುಲ್ಕರ್ಣಿ

    Liked by 1 person

  2. ಮೇಲೆ ಲಕ್ಷ್ಮೀನರಾಯಣ ಅವರು ತಮ್ಮ ವ್ಯಾಪಕವಾದ ವರದಿಯಲ್ಲಿ ಉಲ್ಲೇಖಿಸಿದಂತೆ ಡಾರ್ಬಿ ಕವಯಿತ್ರಿ ಕ್ಯಾಥಿ ಗ್ರಿಂಡ್ರಾಡ್ ಕೊಟ್ಟ ಆರು ಅಣಿಮುತ್ತುಗಳಲ್ಲಿ ಒಂದು: poetry is painting pictures in words; there is no poetry but in ‘things’! ಮೇಲೆ ಪ್ರಕಟಿಸಿದ ಕವನಗಳನ್ನು ಓದಿದಾಗ
    ಯುವ ಕವಿಗಳಿಬ್ಬರೂ ಅದನ್ನು ಮೊದಲೇ ಅರಿತಂತೆ ತೋರುತ್ತದೆ! ಎರಡನೆಯ ಕವನವನ್ನು, ಆ ’thing’ ಅನ್ನು ಅನುವಾದ ಮಾಡುತ್ತಿದ್ದಂತೆ ಅದು ನನಗೆ ಇನ್ನೂ ಮನದಟ್ಟವಾಯಿತು.

    Like

  3. ಲಕ್ಷ್ಮೀನಾರಾಯಣ ಅವರೇ,
    ನಿಮ್ಮ ಈ ವಿಶೇಷ ವರದಿಗೆ ಕೃತಜ್ಞತೆಗಳು. ನೀವು ಹೀಗೇ ಹೆಚ್ಚು ಹೆಚ್ಚು ಬರೆಯುತ್ತಿರಬೇಕು ಎಂದು ನನ್ನ ಕೋರಿಕೆ. ‘ಅನಿವಾಸಿ’ಯ ಬಳಗಕ್ಕೆ ನಿಮ್ಮ ರೇಖಾಚಿತ್ರ ಕಲೆ ಮತ್ತು ಪ್ರತಿಭೆ ಮತ್ತಷ್ಟು ಸಿಕ್ಕಲಿ.
    ರಾಮ್ ಮತ್ತು ಶ್ರೀವತ್ಸ, ನೀವುಗಳು ಮಾಡಿರುವ ಅಮೋಘನ ಮತ್ತು ಸಿಯಾಳ ಕವನಗಳ ಭಾವಾನುವಾದ ತುಂಬಾ ಅರ್ಥಪೂರ್ಣವಾಗಿದೆ. ಈ ಕಾರ್ಯಕ್ರಮದಲ್ಲಿ ನಿಜವಾದ ಒಂದು ಭಾಷಾ ಮತ್ತು ಸಾಂಸ್ಕೃತಿಕ ನಡುಕ್ಷೇತ್ರ (interface) ಒದಗಿತು ಎಂದೆನಿಸಿತು.
    ವಿನತೆ

    Liked by 1 person

  4. ಅನಿವಾಸಿ ಕನ್ನಡ ಬಳಗದ ವೈಶಿಷ್ಟ್ಯಪೂರ್ಣ ,ವೈವಿಧ್ಯಪೂರ್ಣ ಕಾರ್ಯಕ್ರಮಗಳ ವರದಿ ,ಬರಹಗಳನ್ನ ಓದಿ ಮನ ಮೆಚ್ಚುಗೆಯಲ್ಲಿ ಮುಳುಗಿ ಹೋಗಿದೆ. ರಚನಾತ್ಮಕ ,ಕ್ರಿಯಾಶೀಲತೆಗೆ ಎಲ್ಲಿ ಹೋದರೂ ಕುಂದಿಲ್ಲ , ಯಾವ ಸೀಮೆ , ದೇಶ ಅದನ್ನು ಕಟ್ಟಿ ಹಾಕಲಾರದು ಅನ್ನುವದನ್ನು ನಿಮ್ಮ ಕನ್ನಡ ಬಳಗ .ಸಿದ್ಧ ಮಾಡಿದೆ . ಹೇಗೆ ನನ್ನ ಅಭಿನಂದನೆ ,ಧನ್ಯವಾದಗಳನ್ನ ಹೇಳಲಿ ತಿಳಿಯಲಾಗಿದೆ . ‘ ಪೂರ್ವ -ಪಶ್ಚಿಮ ಮಿಲನ ‘ ಕಾರ್ಯಕ್ರಮದ ವಿಸ್ತೃತ ವಿವರಣೆಯ ಲೇಖನ ಲಕ್ಷ್ಮಿನಾರಾಯಣ ಗುಡೂರ ಅವರ ಲೇಖನಿಯಿಂದ ಮೂಡಿದ್ದನ್ನ ಓದಿದ್ದೇ ನನ್ನ ಹೃದಯ ತುಂಬಿ ಬರೆಯಲು ಪ್ರೇರೇಪಿಸಿತೆಂದರೆ ತಪ್ಪೇನಿಲ್ಲ .ಅವರಿಗೆ ನನ್ನ ಅನಂತ ಧನ್ಯವಾದಗಳು .ಹೀಗೇ ನಿಮ್ಮ ಕನ್ನಡ ಬಳಗ ಬೆಳೆದು ,ಬೆಳಗಲಿ ಎಂಬುದು ನನ್ನ ತುಂಬು ಹೃದಯದ ಹಾರೈಕೆ .ಎಲ್ಲ ಸದಸ್ಯ ಬಾಂಧವರಿಗೆ ನನ್ನ ಶುಭೇಚ್ಛೆಗಳು.
    ಸರೋಜಿನಿ ಪಡಸಲಗಿ .

    Liked by 2 people

  5. ಈಸ್ಟ್ ಮೀಟ್ಸ್ ವೆಸ್ಟ್ ಕಾರ್ಯಕ್ರಮದ ವರದಿಯನ್ನು ಡಾ ಗುಡೂರ್ ಅವರು ಚೆನ್ನಾಗಿ ಸಂಗ್ರಹಿಸಿ ಬರೆದಿದ್ದಾರೆ. ಅನಿವಾಸಿ ವೇದಿಕೆಯು ಇಂಗ್ಲೀಷ್ ಕವಿಯತ್ರಿಯನ್ನು ಕನ್ನಡ ಬಳಗದ ಈ ಕಾರ್ಯಕ್ರಮದಲ್ಲಿ ಆಹ್ವಾನಿಸಿ, ನಮ್ಮ ವೇದಿಕೆಯನ್ನು ಪ್ರಗತಿಯ ಮುಂದಿನೆ ಮಜಲಿಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಇದೊಂದು ಉತ್ತಮವಾದ ಪ್ರಯತ್ನ. ನಮ್ಮ ಬಳಗದ ತರುಣರನ್ನು ಈ ವೇದಿಕೆಯಲ್ಲಿ ಸೇರಿಸಲು ಮಾಡಿದ ಒಂದು ಉತ್ತಮ ಪ್ರಯತ್ನವಿದು. ಈ ಸಭೆಯಲ್ಲಿ ಪ್ರಸ್ತುತ ಪಡಿಸಿದ ಪ್ರತಿಯೊಂದು ಕವನವನ್ನು ಚೆನ್ನಾಗಿ ವಿಷ್ಲೇಷಿಸಿ ಈ ವರದಿಯನ್ನು ಆಸಕ್ತಿಪೂರ್ಣವಾಗಿಸಿದ್ದಾರೆ. ಧನ್ಯವಾದಗಳು ಡಾ ಗುಡೂರ್ ಅವರಿಗೆ.
    ಉಮಾ ವೆಂಕಟೇಶ್

    Liked by 2 people

  6. ಲಕ್ಷ್ಮೀನಾರಾಯಣ ಅವರೇ
    ನಿಮ್ಮ ಪರಿ ಪೂರ್ಣ ವರದಿಗಾಗಿ ಧನ್ಯವಾದಗಳು . You have not only grasped the gist of poems well but have also enriched the report with suitable drawings. You are an all rounder indeed!. ಅನಿವಾಸಿ ವೇದಿಕೆಗೆ ಸ್ವಾಗತ. ನಮ್ಮ ಕನ್ನಡ ಬಳಗದ ಸಂದೇಶ ಸಂಪಾದಕೀಯ ಮಂಡಳಿಗೆ ಮುಂದೆ ಸೇರಬಹುದ. ಅಂದ ಹಾಗೆ ಶ್ರೀವತ್ಸ ಅವರ ಅನುವಾದ ಬಹಳ ಚೆನ್ನಾಗಿ ಮೂಡಿಬಂದಿದೆ. ಸಿಯಾಳ ಇಂಗ್ಲಿಷ್ ಕವನ ಕನ್ನಡದ ಅನುವಾದದ ಜೊತೆಗೆ ಇನ್ನು ಸೊಗಸಾಗಿದೆ ಹಾಗೂ ಅರ್ಥಪೂರ್ಣವಾಗಿದೆ

    Liked by 1 person

Leave a comment

This site uses Akismet to reduce spam. Learn how your comment data is processed.