ಡಾ.ಉಮಾ ವೆಂಕಟೇಶ್ ಬರೆದ ಲೇಖನ, “ಐತಿಹಾಸಿಕ ವೈಭವ ನಗರಗಳು: ವಿಜಯನಗರ ರಾಜಧಾನಿ ಹಂಪೆ ಭಾಗ ೧ – ದರೋಜಿ ಕರಡಿಧಾಮ”

ಹಂಪೆ ಎಂದರೆ ಹಲವರಿಗೆ ಹಲವು ಭಾವ. ಇತಿಹಾಸವೋ, ಕೃಷ್ಣದೇವರಾಯನೋ, ನೆತ್ತಿ ಸುಡುವ ಬಳ್ಳಾರಿಯ ಬಿಸಿಲೋ, ಹಂಪೆ ಕನ್ನಡ ವಿಶ್ವವಿದ್ಯಾನಿಲಯವೋ, ಹೀಗೇ ಏನೆಲ್ಲಾ ಹೊಳೆಯುತ್ತದೆ. ಅಲ್ಲಿನ ಮಂಟಪಗಳು ಹೇಳುವ ಕಥೆಗಳು, ಶಿಲ್ಪ ಕಲೆ ಉಸುರುವ ಪಿಸುಮಾತುಗಳು, ಕಲ್ಲುಗಳು ಹಾಡುವ ಆಲಾಪನೆ, ಕೀರ್ತನೆಗಳು… ಅಲ್ಲಿರುವ ವಾನರಗಳು, ಕರಡಿಗಳು, ಇತರೆ ಮೃಗ ಪಕ್ಷಿಗಳು, ಪ್ರಕೃತಿ ಸೌಂದರ್ಯ ಕೂಡ ಅಷ್ಟೇ ಇಷ್ಟವಾಗುತ್ತವೆ. ಇತ್ತೀಚೆಗೆ ಅವನ್ನೆಲ್ಲಾ ನೋಡಿ, ಆನಂದಿಸಿ ಬಂದ ಡಾ. ಉಮಾ ವೆಂಕಟೇಶ್ ತಮ್ಮ ಅನುಭವ, ಪ್ರವಾಸೀ ಕಥನವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಕಥನದ ಮೊದಲ ಭಾಗ ಇಗೋ ನಿಮ್ಮ ಮುಂದೆ! -ಸಂ.

ಐತಿಹಾಸಿಕ ವೈಭವ ನಗರಗಳು: ವಿಜಯನಗರ ರಾಜಧಾನಿ ಹಂಪೆ

ಭಾಗ ದರೋಜಿ ಕರಡಿಧಾಮ

ಡಾ. ಉಮಾ ವೆಂಕಟೇಶ್

dsc_0180
ಕರಡಿಧಾಮ

“ವಿಜಯನಗರವನ್ನು ಕೃಷ್ಣದೇವರಾಯನು ಆಳುತ್ತಿದ್ದ ಕಾಲದಲ್ಲಿ, ಅಲ್ಲಿಯ ವೈಭವ ಎಷ್ಟಿತ್ತೆಂದರೆ, ಅಲ್ಲಿನ ರಸ್ತೆಯ ಬದಿಯಲ್ಲಿ ಮುತ್ತು, ರತ್ನ, ಹವಳ ಮತ್ತು ವಜ್ರ-ವೈಢೂರ್ಯಗಳನ್ನು ಬಳ್ಳದಲ್ಲಿ ಅಳೆದು ಮಾರುತ್ತಿದ್ದರು” ಎನ್ನುವ ಸಾಲುಗಳನ್ನು ನನ್ನ ಮಾಧ್ಯಮಿಕ ಶಾಲೆಯ ಚರಿತ್ರೆ ಮತ್ತು ಕನ್ನಡ ಪಠ್ಯಪುಸ್ತಕಗಳಲ್ಲಿ ಜೋರಾಗಿ ಓದಿ ಮನದಟ್ಟು ಮಾಡುಕೊಳ್ಳುತ್ತಿದ್ದ ದಿನಗಳು ಇನ್ನೂ ನನ್ನ ಮನದಲ್ಲಿ ಅಚ್ಚೊತ್ತಿದಂತಿದೆ. ೧೯೬೯ನೆಯ ಇಸವಿಯಲ್ಲಿ, ನನ್ನ ತಂದೆ ಬಳ್ಳಾರಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಭೂಗರ್ಭಶಾಸ್ತ್ರಜ್ಞರಾಗಿ ಅಲ್ಲಿನ ಮ್ಯಾಂಗನೀಸ್ ಗಣಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಿನಗಳವು. ನನ್ನ ಚಿಕ್ಕಪ್ಪ ಮತ್ತು ಅವರ ಗೆಳೆಯ ನಮ್ಮ ಮನೆಗೆ ಬಳ್ಳಾರಿಗೆ ಬಂದಿದ್ದಾಗ, ನಾವೆಲ್ಲಾ ಹಂಪೆ ಮತ್ತು ಹೊಸಪೇಟೆಯ ತುಂಗಭದ್ರಾ ಅಣೆಕಟ್ಟನ್ನು ನೋಡಿ ಬಂದಿದ್ದೆವು. ಆಗ ನಾನಿನ್ನೂ ೭ ವರ್ಷದವಳು. ಅಲ್ಲಿಗೆ ಹೋಗಿದ್ದ ನೆನಪು ಮಸುಕುಮಸುಕಾಗಿದ್ದರೂ, ಹಂಪೆಯ ವಿರೂಪಾಕ್ಷ ದೇವಾಲಯ, ಸಾಸಿವೆ ಮತ್ತು ಕಡಲೆ ಕಾಳು ಗಣಪತಿ, ಉಗ್ರನರಸಿಂಹ, ಕಲ್ಲಿನ ರಥದ ಚಿತ್ರಗಳು ಹಸಿರಾಗಿದ್ದವೆನ್ನಬಹುದು. ಜೊತೆಗೆ ೭೦ರ ದಶಕದಲ್ಲಿ ನೋಡಿದ್ದ ಪ್ರಸಿದ್ಧ ಕನ್ನಡ ಚಲನಚಿತ್ರ “ಕೃಷ್ಣದೇವರಾಯ”ದ ಹಲವಾರು ದೃಶ್ಯಗಳು ಮತ್ತು ಹಾಡುಗಳನ್ನು ಇನ್ನೂ ಮರೆತಿಲ್ಲ. ಹಾಗಾಗಿ ನಮ್ಮ ಮಕ್ಕಳೂ ಕೂಡಾ ಕರ್ನಾಟಕದ ಗತವೈಭವಗಳನ್ನು ಹೊತ್ತ, ನಮ್ಮ ಚರಿತ್ರೆಯನ್ನು ಹೇಳುವ ಹಂಪೆಯನ್ನು ಒಮ್ಮೆ ನೋಡಲೆಂದು ಬಹಳ ಆಸೆ ಇತ್ತು. ಈ ಬಾರಿ ಬೆಂಗಳೂರಿಗೆ ಹೋದಾಗ, ಹೊರಗೆ ಕರೆದುಕೊಂಡು ಹೋಗದಿದ್ದರೆ ನಾವು ಬರುವುದಿಲ್ಲ ಎಂದು ಮಕ್ಕಳು ಪಟ್ಟು ಹಿಡಿದದ್ದು ಒಳ್ಳೆಯದೇ ಆಯಿತು. ಸರಿ ನಾನು ಕಾರ್ಡಿಫ಼್ ನಗರದಲ್ಲಿ ನಮ್ಮ ಮನೆಯಲ್ಲೇ ಕುಳಿತು, ಗೂಗಲ್ ಕೃಪೆ ಮತ್ತು ನೆರವಿನಿಂದ ಅಲ್ಲಿನ ಎಲ್ಲಾ ವಿಷಯಗಳನ್ನು ಸಂಗ್ರಹಿಸಿ ಹೋಟೆಲ್ ಮತ್ತು ಪ್ರಯಾಣಗಳನ್ನು ೬ ತಿಂಗಳು ಮುಂಚಿತವಾಗಿ ಬುಕ್ ಮಾಡಿಬಿಟ್ಟೆ.

ಜುಲೈ ತಿಂಗಳ ೨೪ರ ರಾತ್ರಿ ೧೦ ಗಂಟೆಗೆ ಬೆಂಗಳೂರಿನ ಕಂಟೋನ್ಮೆಂಟ್ ಅಥವಾ ದಂಡು ನಿಲ್ದಾಣದಿಂದ ಹೊರಟ ಹಂಪೆ ಎಕ್ಸಪ್ರೆಸ್ ರೈಲಿನಲ್ಲಿ ಸಂಸಾರ ಸಮೇತ ಹೊಸಪೇಟೆಯತ್ತ ಪ್ರಯಾಣ ಬೆಳೆಸಿದೆವು. ರಾತ್ರಿ ಕಳೆದು ಬೆಳಗಿನ ೮ ಗಂಟೆಯ ಸಮಯಕ್ಕೆ ಹೊಸಪೇಟೆ ತಲುಪಿದ ನಾವು ಈ ಮೊದಲೆ ನಾನು ಬುಕ್ ಮಾಡಿದ್ದ ಅಲ್ಲಿನ ಉತ್ತಮ ದರ್ಜೆಯ ಹೋಟೆಲ್ ಎನಿಸಿದ “ಮಲ್ಲಿಗೆ”ಯತ್ತ ಆಟೋಗಳಲ್ಲಿ ನಡೆದೆವು. ೬೯ರ ಇಸವಿಯಲ್ಲಿ ಹೊಸಪೇಟೆ ಇದ್ದ ರೀತಿ ಮತ್ತು ಸ್ಥಿತಿ ನನಗೆ ಅಷ್ಟಾಗಿ ನೆನಪಿಲ್ಲ. ಹಾಗಾಗಿ ಈ ಬಾರಿ ನೋಡಿದ್ದೆ ಗೊತ್ತು. ನಗರದ ಪರಿಸ್ಥಿತಿ, ಶುಚಿತ್ವವೇನೂ ಅಷ್ಟು ಸರಿಯಿಲ್ಲ. ಕರ್ನಾಟಕದಲ್ಲಿ ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದ ನನಗೆ, ನನ್ನ ಪತಿಗೆ ಇದೇನೂ ಹೊಸದಲ್ಲ. ನಮ್ಮ ಮಕ್ಕಳಿಗೆ ಸ್ವಲ್ಪ ಗಾಬರಿಯಾಯಿತು. ಆದರೆ ಒಮ್ಮೆ ಮಲ್ಲಿಗೆ ಹೋಟೆಲ್ ಬಳಿ ತಲುಪಿದಾಗ ಸ್ವಲ್ಪ ಆಶ್ಚರ್ಯವೇ ಆಯಿತು. ಹೋಟೆಲ್ ಆಸು-ಪಾಸು ಮತ್ತು ಆವರಣಗಳು ಬಹಳ ಚೆನ್ನಾಗಿದೆ. ಹೋಟೆಲಿನ ಹಲವಾರು ಭಾಗಗಳನ್ನು ಹೊಸದಾಗಿ ಕಟ್ಟಿ ಬಹಳ ಓರಣವಾಗಿ ಇಟ್ಟಿದ್ದಾರೆ. ನೋಡಿ ನಮಗೆಲ್ಲಾ ಸಮಾಧಾನವಾಯಿತು. ನಮ್ಮ ಕೋಣೆಗಳೂ ಕೂಡಾ ಅಚ್ಚುಕಟ್ಟಾಗಿದ್ದು, ಪಾಶ್ಚಿಮಾತ್ಯ ಹೋಟೆಲಿನಲ್ಲಿರುವಂತೆ ಎಲ್ಲಾ ಸೌಲಭ್ಯಗಳೂ ಇವೆ. ಹೋಟೆಲಿನ ರೆಸ್ಟೋರೆಂಟಿನಲ್ಲಿ ಉತ್ತಮ ಗುಣಮಟ್ಟದ ಊಟ-ತಿಂಡಿಗಳೂ ಲಭ್ಯವಿದ್ದು, ನಮ್ಮ ಮಕ್ಕಳು ಬಹಳ ಖುಷಿಯಾಗಿ ಎಲ್ಲವನ್ನೂ ತಿಂದು ತೃಪ್ತಿಪಟ್ಟರು ಎನ್ನಬಹುದು. ರಾತ್ರಿಯ ಪ್ರಯಾಣದ ಆಯಾಸವನ್ನು ಒಂದು ಸಣ್ಣ ನಿದ್ದೆ ತೆಗೆದು ಪರಿಹರಿಸಿಕೊಂಡನಂತರ, ಪುಷ್ಕಳವಾದ ಮದ್ಯಾನ್ಹದ ಭೋಜನವನ್ನು ಪೂರೈಸಿದ ನಾವು, ಹೋಟೆಲಿನ ಸ್ವಾಗತ ಡೆಸ್ಕಿನಲ್ಲಿದ್ದ ಅವರದೇ ಪ್ರವಾಸ ವಿಭಾಗದಲ್ಲಿ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ವ್ಯವಸ್ಥೆಯ ಬಗ್ಗೆ ವಿಚಾರಿಸಿದೆವು.

ಅದೃಷ್ಟವಶಾತ್ ಮಲ್ಲಿಗೆ ಹೋಟೆಲಿನೊಂದಿಗೆ ಸಹಭಾಗಿತ್ವದಲ್ಲಿ ಆ ಏರ್ಪಾಡೂ ಇದೆ ಎಂದು ತಿಳಿದ ನಾವು, ಆ ಮಧ್ಯಾನ್ಹ ಅಲ್ಲಿಯೇ ಹತ್ತಿರದಲ್ಲಿರುವ ದರೋಜಿ ಕರಡಿ ಧಾಮ ಮತ್ತು ತುಂಗಭಧ್ರಾ ಅಣೆಕಟ್ಟುಗಳನ್ನು ನೋಡಲು ನಿರ್ಧರಿಸಿದೆವು. ಉತ್ತಮ ಮಟ್ಟದ ಟೊಯೋಟಾ ಕ್ವಾಲಿಸ್ ಕಾರಿನಲ್ಲಿ ಕುಳಿತು ಹಂಪೆಯ ಪ್ರವಾಸವನ್ನು ಆರಂಭಿಸಿದ ನಮಗೆ, ಹೊಸಪೇಟೆಯಿಂದ ಹೊರಬಿದ್ದ ತಕ್ಷಣವೇ, ಸುತ್ತಲೂ ಹಸಿರಿನ ದರ್ಶನವಾಗಿ ನೆಮ್ಮದಿಯೆನಿಸಿತು.

dsc_0159
ತೆಂಗು, ಸೂರ್ಯಕಾಂತಿ ಬೆಳೆ

ತೆಂಗು, ಕಬ್ಬು, ಬಾಳೆ ಮತ್ತು ಸೂರ್ಯಕಾಂತಿ ಬೆಳೆಗಳಿಂದ ಮೈದುಂಬಿದ ಹೊಲ-ತೋಟಗಳು, ಬಣ್ಣಬಣ್ಣದ ಹಕ್ಕಿಗಳ ಚಿಲಿಪಿಲಿಗುಟ್ಟುವಿಕೆಯಿಂದ ತುಂಬಿದ ಹಸಿರಿನ ರಾಶಿ, ನೀಲಿ ಆಗಸಗಳು ನಮ್ಮ ಕ್ಯಾಮೆರಾದಲ್ಲಿ ಸೆರೆಯಾಗತೊಡಗಿದವು.

dsc_0138
ಬಾಳೆ ಮೈದುಂಬಿದ ಹೊಲ-ತೋಟಗಳು

ಕಿಂಗ್-ಫ಼ಿಷರ್ (ಮೀಂಚುಳ್ಳಿ), ಬಾನಾಡಿಗಳು, ಬಿಳಿಕೊಕ್ಕರೆ, ನೀಲಿ ಮತ್ತು ಕಂದು ಹೆರಾನ್, ಪಚ್ಚೆವರ್ಣದ ಗಿಳಿಸಂಕುಲ ಹೀಗೆ ಹಲವು ಹತ್ತು ಬಗೆಯ ಪಕ್ಷಿಗಳು ನಮ್ಮ  ಮನವನ್ನು ತಣಿಸಿದೆವು. ತುಂಗಭದ್ರ ನಾಲೆಯ ಅಕ್ಕಪಕ್ಕದಲ್ಲಿ ಹಳ್ಳಿಯ ಜನ ಪಾತ್ರೆ-ಬಟ್ಟೆಗಳನ್ನು ಸ್ವಚ್ಛಗೊಳಿಸುತ್ತಿದ್ದನ್ನು ಕಂಡ ನನ್ನ ಮಕ್ಕಳಿಗೆ ತಾವೊಂದು ಬೇರೆಯ ಯುಗದಲ್ಲಿರುವಂತೆ ಭಾಸವಾಯಿತು. ಚಿಕ್ಕಂದಿನಿಂದ ಈ ಚಟುವಟಿಕೆಗಳನ್ನು ನೋಡಿ, ಮಾಡುತ್ತಾ ಬೆಳೆದ ನಮಗೆ ಇದು ಸಾಮಾನ್ಯ ದೃಶ್ಯ! ನಮ್ಮ ಕಾರಿನ ಡ್ರೈವರ್ ನಮ್ಮೊಡನೆ ಕನ್ನಡದಲ್ಲಿ ನಿರಾಳವಾಗಿ ಹರಟುತ್ತಾ ನಮಗೆ ಅಲ್ಲಿನ ಆಗುಹೋಗುಗಳ ಸಂಪೂರ್ಣ ಮಾಹಿತಿಯನ್ನು ಎಡೆಬಿಡದೆ ನೀಡುತ್ತಿದ್ದ. ಸುಮಾರು ೪೦ ನಿಮಿಷಗಳ ಪ್ರಯಾಣದ ನಂತರ, ಒಮ್ಮೆಗೆ ಕಲ್ಲು, ಬೆಟ್ಟಗುಡ್ಡಗಳಿಂದ ಆವೃತವಾದ, ನಿರ್ಜನವಾದ ಕರಡಿಧಾಮದೊಳಕ್ಕೆ ಆಗಮಿಸಿದೆವು. ರಾಜ್ಯ ಅರಣ್ಯ ಇಲಾಖೆಯ ಪ್ರವೇಶದ್ವಾರದಲ್ಲಿ ಸಹಿ ಮಾಡಿ, ಪ್ರವೇಶ-ದರದ ಹಣವನ್ನು ಪಾವತಿ ಮಾಡಿದ ನಂತರ ನಮ್ಮನ್ನು ಒಳಬಿಟ್ಟರು. ಇಲ್ಲಿ ಕಾಲುನಡಿಗೆಯಲ್ಲಿ ಹೋಗಲು ಅನುಮತಿಯಿಲ್ಲ. ಕಾಡುಪ್ರಾಣಿಗಳಿಗೆ ಮಾತ್ರಾ ಮೀಸಲಾದ ಪ್ರದೇಶ. ಹಾಗಾಗಿ ವಾಹನಗಳಲ್ಲಿ ಅಲ್ಲಿಯ ಉನ್ನತ ಪ್ರದೇಶವೊಂದರಲ್ಲಿ ಕಟ್ಟಿದ ವೀಕ್ಷಣ-ಗೋಪುರದವರೆಗೂ ಹೋಗಿ, ಅಲ್ಲಿ ನಿಂತು ಕರಡಿಗಳನ್ನು ದೂರದಿಂದ ನೋಡುವ ವ್ಯವಸ್ಥೆ ಮಾಡಿದ್ದಾರೆ.

ಪ್ರತಿದಿನ ಮದ್ಯಾನ್ಹ ೩-೫ ಗಂಟೆಗಳ ಸಮಯದಲ್ಲಿ, ಇಲ್ಲಿ ಅರಣ್ಯ ಇಲಾಖೆಯವರು ಇಡುವ ಬಾಳೆ, ಬೆಲ್ಲ, ಮೆಕ್ಕೆಜೋಳದ ಊಟವನ್ನು ಸವಿಯಲು ಬರುತ್ತವೆ. ಈ ಪ್ರಾಣಿಗಳು ಅದೃಷ್ಟವಿದ್ದರೆ ಕಾಣಸಿಗುತ್ತವೆ ಎಂದೂ ನಮ್ಮ ಡ್ರೈವರ್ ನಮ್ಮನ್ನು ಎಚ್ಚರಿಸಿದ್ದ. ಸರಿ ವಾಚ್-ಟವರಿನ ಮೇಲ್ಭಾಗದಲ್ಲಿ ನಿಂತು, ನಮ್ಮ ಕ್ಯಾಮೆರಾ ಮತ್ತು ದುರ್ಬೀನನ್ನು ಹಿಡಿದು ಕರಡಿ ದರ್ಶನಕ್ಕೆ ಕಾದು ನಿಂತೆವು. ಈ ಮಧ್ಯದಲ್ಲಿ ನಮ್ಮ ಸುತ್ತಲೂ ನವಿಲಿನ ಕೇಕೆಯ ಶಬ್ದ ನಮ್ಮ ಕಿವಿಗಳನ್ನು ತುಂಬಿಬಿಟ್ಟಿತ್ತು. ಆದರೆ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಮಕ್ಕಳು ನವಿಲುಗಳ ಒಂದೇ ಒಂದು ದರ್ಶನಕ್ಕೆ ತವಕಿಸುತ್ತಿದ್ದರು. ಒಮ್ಮೆಲೆ ಒಂದು ದೊಡ್ಡ ಗುಂಪು ತಮ್ಮ ಗಂಭೀರವಾದ ನಡಿಗೆಯಲ್ಲಿ ಓಲಾಡುತ್ತಾ, ತಮ್ಮ ಬಣ್ಣಬಣ್ಣದ ಗರಿಗಳನ್ನು ಬೀಸುತ್ತಾ ಅಲ್ಲಿದ್ದ ಬಂಡೆಗಳ ಮೇಲೆ ಪ್ರತ್ಯಕ್ಷವಾದಾಗ, ನಮ್ಮ ಮನಸ್ಸೂ ಕೂಡಾ ಆ ಗರಿಗಳಂತೆ ಕೆದರಿ, ಕುಣಿದು, ನಮ್ಮ ಕೈಯಲ್ಲಿದ್ದ ಕ್ಯಾಮೆರಾಗಳು ಸದ್ದಿಲ್ಲದೇ ನಿರಂತರವಾಗಿ ಕ್ಲಿಕ್ಕಿಸಿದವು. ಅಷ್ಟರಲ್ಲೇ ನನ್ನ ಮಗಳು ದುರ್ಬೀನಿಂದ ನಮಗಷ್ಟೇ ಕೇಳುವಂತೆ “ಅಮ್ಮ, ಎದುರಿನ ಬಂಡೆಯ ಕಡೆಗೆ ನೋಡಿ, ಮೂರು ಕರಡಿಗಳಿವೆ” ಎಂದು ಆದೇಶಿಸಿದಳು. ನಮ್ಮ ಉತ್ಸಾಹಕ್ಕೆ ಪಾರವೇ ಇಲ್ಲ. ಕೇವಲ ಮೃಗಾಲಯಗಳಲ್ಲಿ ಕರಡಿಗಳನ್ನು ನೋಡಿದ್ದ ನಮಗೆ ಅವನ್ನು ಈ ಸ್ವಾಭಾವಿಕ ಪರಿಸರದಲ್ಲಿ ಕಂಡಾಗ ಬಹಳ ಸಂತೋಷವೆನಿಸಿತು.

dsc_0190
ಸ್ಲಾತ್ ಕರಡಿ ದರ್ಶನ

ನಮ್ಮ ರಾಜ್ಯದಲ್ಲಿ ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ವಾಸಿಸುವ ಈ ಸ್ಲಾತ್ ಕರಡಿಗಳು ರಾತ್ರಿಯಲ್ಲಿ ಚಟುವಟಿಕೆಯಾಗಿರುವ ಕೀಟಭಕ್ಷಕಗಳಾಗಿವೆ. ರಾಮಾಯಣದಲ್ಲಿ ರಾಮ ಸೀತೆಯನ್ನು ಹುಡುಕುತ್ತಾ ಬಂಡಾಗ, ಇಲ್ಲಿಯೇ ಆನೆಗೊಂದಿಯಲ್ಲಿ ವಾನರ ಸೈನ್ಯದ ಜೊತೆಗೆ, ಕರಡಿವೀರ ಜಾಂಬವಂತನನ್ನೂ ಭೇಟಿಯಾದನೆಂದು ಹೇಳುತ್ತಾರೆ. ಹಾಗಾಗಿ ಇಲ್ಲಿ ಕರಡಿಗಳನ್ನು ಬಹಳ ಭಯಭಕ್ತಿಗಳಿಂದ ನೋಡುವ ಸಂಪ್ರದಾಯವಿದೆ. ಇಲ್ಲಿಯ ಗಣಿಗಳಲ್ಲಿ ನಡೆಯುವ ಆಕ್ರಮ ಗಣಿಗಾರಿಕೆಯ ಫಲವಾಗಿ, ಕರಡಿಗಳ ಸಂಖ್ಯೆಗೆ ಧಕ್ಕೆಯಾಗಿ ಈ ಕರಡಿಧಾಮವನ್ನು ೧೯೯೪ರಲ್ಲಿ ಪ್ರಾರಂಭಿಸಲಾಗಿದೆ. ಈ ಅರಣ್ಯಧಾಮದಲ್ಲಿ ಕರಡಿಗಳ ಜೊತೆಗೆ ಹುಲಿ, ಚಿರತೆ, ಚುಕ್ಕೆ-ಜಿಂಕೆ, ಮಾನಿಟರ್ ಹಲ್ಲಿ, ನಕ್ಷತ್ರ ಆಮೆ, ಮುಂಗುಸಿಗಳೂ ಕಾಣಸಿಗಬಹುದು. ಅಲ್ಲಲ್ಲೇ ಹಲವಾರು ಬಣ್ಣದ ಹಲ್ಲಿಗಳು, ಚಿಟ್ಟೆಗಳು ನಮ್ಮ ಕಣ್ಣಿಗೆ ಬಿದ್ದವು.

dsc_0197
ಬಣ್ಣಬಣ್ಣದ ಗರಿಗಳ ನವಿಲುಗಳ ಗುಂಪು
dsc_0235
ಬಣ್ಣದ ಹಲ್ಲಿ

ನಮ್ಮ ಮನಸ್ಸಿಗೆ ತೃಪ್ತಿಯಾದಷ್ಟು ನೋಡಿದ ನಂತರ, ಅಲ್ಲೇ ಕುಳಿತಿದ್ದ ಡ್ರೈವರ್ ಸಾರ್ ನೀವು ತುಂಗಭದ್ರ ಅಣೆಕಟ್ಟಿಗೆ ಹೋಗಬೇಕೆಂದರೆ ಈಗಲೇ ಹೊರಡಬೇಕು ಎಂದು ಎಚ್ಚರಿಸಿದಾಗ, ನಾವು ಅರೆಮನಸ್ಸಿನಿಂದಲೇ, ಕರಡಿಗಳ ದಿಕ್ಕಿನಿಂದ ನಮ್ಮ ದೃಷ್ಟಿಯನ್ನು ತೆಗೆದು ಕಾರಿನೆಡೆ ನಡೆದೆವು.

dsc_0177
ಬಣ್ಣದ ಚಿಟ್ಟೆಗಳು

ಮಾಧ್ಯಮಿಕ ಶಾಲೆಯಲ್ಲಿ ಕನ್ನಡದ ವರ-ಕವಿ ದ.ರಾ. ಬೇಂದ್ರೆ ಅವರ “ಕರಡಿ-ಕುಣಿತ” ಎಂಬ ಪದ್ಯವನ್ನು ಬಾಯಿಪಾಠ ಮಾಡಿ ಗುನುಗುತ್ತಿದ್ದ ನನ್ನ ಮನ ಆ ದಿನಗಳತ್ತ ಓಡಿತು.

ಮನಬಲ್ಲ ಮಾನವ ಕುಣಿದಾನ, ಕುಣಿಸ್ಯಾನ

ಪ್ರಾಣದ ಈ ಪ್ರಾಣಿ ಹಿಂದಾs

ಕರಡೀಯ ಹೆಸರೀಲೆ ಚರಿತಾರ್ಥ ನಡಿಸ್ಯಾನ

ಪರಮಾರ್ಥ ಎಂಬಂತೆ ಬಂದಾನ

“ಪ್ರಾಣಿ ಶಕ್ತಿಯನ್ನು, ತನ್ನ ಬುದ್ದಿಶಕ್ತಿಯಿಂದ ಪಳಗಿಸಿ ತನ್ನ ಹೊಟ್ಟೆಪಾಡಿಗೆ ಪರಮಾರ್ಥದ ವೇಶವನ್ನು ತೊಡಿಸಿದ್ದಾನೆ”.

ಕೇವಲ ಮಾನವ ತನ್ನ ಹೊಟ್ಟೆಪಾಡಿಗಾಗಿ ಈ ಪ್ರಾಣಿಯನ್ನು ಹಿಡಿದು ಪಳಗಿಸಿ, ಅದಕ್ಕೆ ಮೂಗುದಾರ ಹಾಕಿ, ಕುಣಿಸಿ ಜೀವನ ಸವೆಸುವ ರೀತಿ ನನಗೆ ಹೀನಾಯವೆನಿಸಿತು. ಸ್ವಚ್ಚಂದವಾಗಿ ಅರಣ್ಯದಲ್ಲಿ ಓಡಾಡಿಕೊಡಿರುವ ಈ ವನ್ಯಮೃಗ, ಸರಳುಗಳ ಹಿಂದೆ ಮೃಗಾಲಯದಲ್ಲಿ ಶತಪಥ ತಿರುಗುವ ರೀತಿಯೂ ಸರಿಯಲ್ಲ. ತಮ್ಮದೇ ಪರಿಸರದಲ್ಲಿ ಜೀವಿಸುವ ಈ ಮೃಗದ ಜನ್ಮಸಿದ್ಧ ಹಕ್ಕನ್ನು ಈ ದರೋಜಿ-ಕರಡಿಧಾಮದಲ್ಲಿ ಕಂಡು ಹಿಗ್ಗಿದ ನನ್ನ ಮನ, ರಾಜ್ಯ ಅರಣ್ಯ ಇಲಾಖೆಗೆ ಭೇಷ್ ಎಂದು ಬೆನ್ನುತಟ್ಟಿತು.

  ಚಿತ್ರಗಳು: ಡಾ. ಉಮಾ ವೆಂಕಟೇಶ್

3 thoughts on “ಡಾ.ಉಮಾ ವೆಂಕಟೇಶ್ ಬರೆದ ಲೇಖನ, “ಐತಿಹಾಸಿಕ ವೈಭವ ನಗರಗಳು: ವಿಜಯನಗರ ರಾಜಧಾನಿ ಹಂಪೆ ಭಾಗ ೧ – ದರೋಜಿ ಕರಡಿಧಾಮ”

 1. ಹಂಪಿ ಹೊಸಪೇಟೆ ಎಂದರೆ ಬಿಸಿಲಿನ ಬರಡು ಎಂದು ನಂಬಿದ್ದ ನನಗೆ ಕರಡಿ ಧಾಮದ ಹಸಿರು, ನವಿಲು ಮತ್ತು ಕಾಡುಪ್ರಾಣಿಗಳು ಮನೆ ಮಾಡಿಕೊಂಡಿರುವುದು ಸಾಕಷ್ಟು ಅಚ್ಚರಿ ಹಾಗು ಕುತೂಹಲವನ್ನು ತಂದಿದೆ. ವನ್ಯ ಪ್ರಾಣಿಗಳೆಂದರೆ ಮೈಸೂರು ಮತ್ತು ಮಲೆನಾಡಿನ ಪ್ರದೇಶ ಜ್ಞಾಪಕಕ್ಕೆ ಬರುವುದುಂಟು. ಕರ್ನಾಟಕ ದಲ್ಲಿ ಪ್ರವಾಸ ಮಾಡಲು ನಾನು ಕಾತರನಾಗಿದ್ದರೂ ಒಳ್ಳೆ ವಸತಿ ಸೌಕರ್ಯದ ಬಗ್ಗೆ ಸ್ವಲ್ಪ ಅಳುಕಿನಿಂದ ಒಂದು ರೀತಿ ನಿರ್ಲಕ್ಷ ಮನೋಭಾವದಿಂದ ಕೈ ಬಿಟ್ಟಿದ್ದೇನೆ. ನಿಮ್ಮ ಲೇಖನದಿಂದ ಹೊಸ ಆಸೆ ಮೂಡಿಬಂದಿದೆ. ಕವನ ಸಾಹಿತ್ಯದ ನಂತರ ನನಗೆ ಹತ್ತಿರವಾದದ್ದು ಪ್ರವಾಸ ಕಥನಗಳು. ಎರಡನೇ ಭಾಗವನ್ನು ಕಾತರದಿಂದ ನಿರೀಕ್ಷಿಸುತ್ತಿದ್ದೇನೆ.

  Liked by 2 people

 2. ಇತಿಹಾಸ ,ಪುರಾಣ ಕಾಲದಿಂದಲೂ ಹಂಪೆ ಸಿರಿವಂತ ನಾಡೇ‌ . ಮುತ್ತು ರತ್ನಗಳನ್ನ ಬಳ್ಳದಿಂದ ಅಳೆದು ಮಾರಿದ ನಾಡು ,ಸಂಗೀತ ವಾಸ್ತು ಶಿಲ್ಪದಲ್ಲಿಯೂ ಅಪ್ರತಿಮವೇ.ಶಿಲೆಯಲ್ಲಿ ಸರಿಗಮ ನುಡಿಸುವ ಸಂಗೀತದ ಬೀಡು .ಈಗ ಅದಕ್ಕೆ ಕಲಶವಿಟ್ಟಂತೆ. ಕರಡಿ ,ಜಿಂಂಕೆ ,ನವಿಲು , ಆಮೆ , ಮುಂತಾದವುಗಳ ಜೊತೆಗೆ ಹುಲಿ ಚಿರತೆ ಮುಂತಾದ ವನ್ಯಜೀವಿಗಳ ಸ್ವಚ್ಛಂದ ವಿಹಾರಕ್ಕೆ.ಅನುಕೂಲವಾಗುವ ಧಾಮಗಳ ವ್ಯವಸ್ಥೆ ಮಾಡಿ ದೆ. ಅದನ್ನ ಸ್ವತಃ ಮಕ್ಕಳೊಂದಿಗೆ ನೋಡಿ ರಮ್ಯವಾಗಿ ತಮ್ಮ ಅನುಭವಗಳ ಲೇಖನ ಬರೆದ ಉಮಾ ಅವರ ಲೇಖನ ರೋಚಕವಾಗಿದೆ‌ .ಅಭಿನಂದನೆಗಳು ಉಮಾ ಅವರೇ
  ಸರೋಜಿನಿ ಪಡಸಲಗಿ

  Liked by 3 people

 3. ಕಳೆದವಾರದ ’ವಿನ್ನಿ’ ಕರಡಿಯ ಆಟಪಾತಗಳ ನಂತರ ಈ ವಾರ ’ನಮ್ಮೂರ’ ಕಡಿಗಳ ಬಗ್ಗೆ ಈ ಪ್ರವಾಸ ಲೇಖನ ನಾನು ಕಂಡಿ ಧಾಮದ ಪರಿಚಯ ಮಾಡಿಸಿತು. ನಾನು ಕಳೆದ ಸಲ ಆ ಪ್ರದೇಶಕ್ಕೆ ಹೋದಾಗ ಅದು ಇದ್ದ ನೆನಪಿಲ್ಲ. ಈಗ ಕರಡಿಗಳು ಅಲ್ಲಿ ಸ್ವಚ್ಛಂದವಾಗಿ ಜೀವಿಸುತ್ತಿರುವದು ಒಳ್ಳೆಯ ಸುದ್ದಿಯೇ. ನಾನು ಶಾಲೆಗೆ ಹೋಗುವ ದಿನಗಳಲ್ಲಿ ಮನೆಯಂಗಳದಲ್ಲಿ ಕುಣಿಸುತ್ತಿದ್ದ ಕರಡಿಯಷ್ಟೇ ನೆನಪು. ನಂತರ ಒಂದೆರಡು ಸಲ ಸರ್ಕಸ್ಸಿನಲ್ಲಿ, ಮೃಗಾಲಗಲಲ್ಲಿ. ಈಗ ತಾನೆ ವನ್ಯ ಮೃಗ ಸಂರಕ್ಷಣೆಯ ಮಹತ್ವ ಅರಿವಾಗಿ ಇಂಥ ಪ್ರಾಯೋಜನೆಗಳು ನಡೆಯುತ್ತಿದ್ದುದು ಸ್ತುತ್ಯ ಕಾರ್ಯ. ತಮ್ಮ ಮುಂದಿನ ಪೀಳಿಗೆಗೆ ಅವುಗಳ ದರ್ಶನ ಮಾಡಿಸಿ ಅವರು ಹಿಗ್ಗಿದ್ದನ್ನು ವರ್ಣಿಸಿ, ಹೀಗೆ ಸ್ವಾರಸ್ಯಕರವಾಗಿ ಬರೆದ ಈ ಲೇಖಕಿಯ ಮುಂದಿನ ಪ್ರವಾಸಕಥನವನ್ನು ನಿರೀಕ್ಷಿಸುವೆ.

  Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.