ವಿನ್ನೀ-ದ-ಫೂ (Winnie the Pooh) ಅನ್ನೋ ಕನಸುಗಾರ ವೇದಾಂತಿ: ಡಾ. ವಿನತೆ ಶರ್ಮ ಬರೆದ ಲೇಖನ

ಸಾಹಿತ್ಯ ಒಂದು ಭಾಷೆಯ ಚೌಕಟ್ಟನ್ನು ಮೀರಿ ಬೇರೆ ನೆಲೆಗಳಿಗೆ ಹರಿದು ಸಹೃದಯರ ಕೈ ಜಗ್ಗುವುದು ಬಲ್ಲ ವಿಷಯ. ‘ಪಂಚತಂತ್ರ’ ಕತೆಗಳು ಭಾರತದಲ್ಲಿ ಹುಟ್ಟಿ, ಬೆಳೆದು, ಮಧ್ಯಪ್ರಾಚ್ಯ ದೇಶಗಳಿಗೆ ಹೋಗಿ, ಅಮೇರಿಕ ಮತ್ತು ಯೂರೋಪ್ ದೇಶಗಳಲ್ಲಿ ಕೂಡ ನೆಲೆಸಿವೆ. ನೈಜೀರಿಯಾ ದೇಶದ ಚಿನುವ ಅಚೆಬೆ ಬರೆದ ‘ಥಿಂಗ್ಸ್ ಫಾಲ್ ಅಪಾರ್ಟ್’ ಕೃತಿ ಆಫ್ರಿಕಾ ಖಂಡವನ್ನು ದಾಟಿ, ಆಂಗ್ಲ ಭಾಷೆ ಮಾತನಾಡುವ ಎಲ್ಲ ದೇಶಗಳನ್ನು ಮೀಟಿ ಅಲ್ಲಾಡಿಸಿ, ಪ್ರಪಂಚದ ಅನೇಕ ಭಾಷಿಗರನ್ನು ಹಿಡಿದಿಟ್ಟಿದೆ. ಒಂದು ಭಾಷೆಯ ಸಾಹಿತ್ಯ ಬೇರೆ ಭಾಷಿಗರನ್ನು ಮುಟ್ಟಬಹುದಾದ ಬಗೆಗಳು ಯಾವುವು? ಹಾಗೆಯೇ, ದೊಡ್ಡವರನ್ನು ಮಕ್ಕಳ ಸಾಹಿತ್ಯ ಆಕರ್ಷಿಸುತ್ತದೆಯೇ? ಓದುಗರಾಗಿ ಅವರನ್ನು ಆ ಸಾಹಿತ್ಯ ಪ್ರಕಾರ ಹೇಗೆ ಸಮರ್ಥವಾಗಿ ದುಡಿಸಿಕೊಳ್ಳಬಹುದು? ಚಿಂತನೆಗಳ ಸಂತೆ ಶುಕ್ರವಾರದ ಈ ಲೇಖನ!

 ವಿನ್ನೀ-ದ-ಫೂ  (Winnie the Pooh) ಅನ್ನೋ ಕನಸುಗಾರ ವೇದಾಂತಿ

ಡಾ. ವಿನತೆ ಶರ್ಮ

 ಅದು ೨೦೦೨, ಫೆಬ್ರವರಿ ತಿಂಗಳು. ಸ್ಥಳ ಆಸ್ಟ್ರೇಲಿಯ ದೇಶ. ಹಿಂದಿನ ವರ್ಷವಷ್ಟೇ ಮತ್ತೆ ಯೂನಿವರ್ಸಿಟಿ ಓದಿಗೆ ಮರಳಿ, ಮಹಿಳೆ ಮತ್ತು ಶಿಕ್ಷಣ ವಿಷಯದಲ್ಲಿ ಒಂದು ಚಿಕ್ಕ ಥೀಸಿಸ್ ಬರೆದು ಮುಗಿಸಿದ್ದೆ. ೯ ತಿಂಗಳ ಕಾಲ ಅದೆಷ್ಟು ಪುಸ್ತಕಗಳನ್ನ ಓದಿದ್ದು, ಅದೆಷ್ಟು ಅಕಡೆಮಿಕ್ ಲೇಖನಗಳನ್ನ ಜಾಲಾಡಿದ್ದು. ಮಧ್ಯೆ ಮಧ್ಯೆ ಒಂದಷ್ಟು ಕವನಗಳು, ‘ಡೈಲಾಗ್’ ಗಳು ಹುಟ್ಟಿದ್ದವು. ನಾಟಕದ ಅರ್ಧ ಭಾಗ ಕೂಡ ಕಾಗದದ ಮೇಲೆ ಮೂಡಿತ್ತು. ಪೌಲೊ ಫ್ರೇರಿ, ಮಹಾಶ್ವೇತ ದೇವಿ ಸದಾ ನನ್ನ ಜೊತೆಯಲ್ಲಿದ್ದರು. ಅಂಟೋನಿಯೋ ಗ್ರಾಮ್ಶಿ, ಗಾಯತ್ರಿ ಸ್ಪಿವಾಕ್ ಮತ್ತು ‘ಸಬ್ ಆಲ್ಟರ್ನ್’ ಎಂಬ ಹೊಸ ಗರಿಗಳು ಹಾರಿ ಬಂದಿದ್ದವು.

 ಎಲ್ಲವನ್ನು ಎರಡೂ ಬಗಲಿನಲ್ಲಿಟ್ಟುಕೊಂಡು ಪಿಎಚ್.ಡಿ ಓದನ್ನು ಆರಂಭಿಸಿದ್ದೆ. ಆ ಫೆಬ್ರವರಿ ತಿಂಗಳಲ್ಲಿ ಅವರು ವಿನ್ನೀ-ದ-ಪೂ ನನ್ನ ಕೈಗಿತ್ತರು. ಅವರು ಮಗುವಾಗಿದ್ದಾಗ ಅವರ ತಾಯಿ ಆ ಪುಸ್ತಕವನ್ನ ಅವರಿಗೆಂದು ಕೊಂಡು, ತಮ್ಮ ಪುಟಾಣಿಗೆ ಓದುತ್ತಿದ್ದರಂತೆ. ಆ ಮಧುರ ನೆನಪಿನ ಪುಸ್ತಕವನ್ನು ನನಗೆ ಕೊಟ್ಟು ಅವರು ಹೇಳಿದ್ದು, ‘ರೀಡ್ ದಿಸ್ ಫಾರ್ ಎ ಚೇಂಜ್”.the-original

ಓದಿದೆ. ವಿನ್ನೀ-ದ-ಫೂ ಎನ್ನುವ ಕನಸುಗಾರ, ಮತ್ತವನ ಸ್ನೇಹಿತರ ಪ್ರಪಂಚ ನನ್ನದರೊಳಗೆ ಸೇರಿಕೊಂಡುಬಿಟ್ಟಿತು. ಅಥವಾ, ನಾನವರ ಲೋಕಕ್ಕೆ ಹಾರಿ ಲೇಡಿಬರ್ಡ್ ಆಗಿ ಮರದ ಕೊಂಬೆಯ ಮೇಲೆ ಶಾಶ್ವತವಾಗಿ ಕೂತು ಬಿಟ್ಟೆ ಎನ್ನಲೇ!

 ಎ.ಎ. ಮಿಲ್ನ್ (A.A.Milne) ಎಂಬ ಆಂಗ್ಲ ಲೇಖಕ ತನ್ನ ಮಗ ಕ್ರಿಸ್ಟೊಫರ್ ರಾಬಿನ್, ಮತ್ತವನ ಆಟಿಕೆಯಾದ ಮುದ್ದು ಕರಡಿಯ ಸುತ್ತ ಹೆಣೆದಿರುವ ಈ ಕತೆಗಳು ಜೀವ ತಾಳಿದ್ದು ಇಂಗ್ಲೆಂಡಿನ ಸಸೆಕ್ಸ್ ಪ್ರಾಂತ್ಯದಲ್ಲಿರುವ ಆಶ್ದೌನ್ ಅರಣ್ಯದಲ್ಲಿ. ಫೂ  ಬೇರ್ ಮತ್ತವನ ಸಂಗಾತಿಗಳು (ಕತ್ತೆ, ಮೊಲ, ಹಂದಿಮರಿ, ಕಾಂಗರೂ, ಗೂಬೆ, ಹುಲಿಮರಿ) ನಡೆಸುವ ಏನೆಲ್ಲಾ ಸಾಹಸಗಳು, ರಂಪಾಟಗಳು, ರೋಚಕ ತಲೆನೋವುಗಳು, ಏಳುಬೀಳುಗಳು, ಜೊತೆಗೆ ಅವರುಗಳು ಕೊಡುವ ಒಳನೋಟಗಳು, ಜೀವನದೃಷ್ಟಿಗಳು… ಎಲ್ಲವೂ ಆ ಅರಣ್ಯ ಪ್ರದೇಶದ ‘ಹಂಡ್ರೆಡ್ ಏಕರ್ ವುಡ್’ ನಲ್ಲಿಯೇ ನಡೆಯುವುದು. ಆಹಾ, ಎಂಥ ಅದ್ಭುತ ಲೋಕವದು!

 ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ
ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ

 ಫೂ ಬೇರ್ (Pooh Bear) ಹುಟ್ಟಿನ ಬಗ್ಗೆ ಕೂಡ ಒಂದು ಸ್ವಾರಸ್ಯವಾದ ಹಿನ್ನಲೆಯಿದೆ. ಪುಟ್ಟ ಕ್ರಿಸ್ಟೊಫರ್ ರಾಬಿನ್ ಲಂಡನ್ ಝೂಗೆ ತಪ್ಪದೆ ಭೇಟಿ ಕೊಡುತ್ತಿದ್ದನಂತೆ. ಅಲ್ಲಿದ್ದ ಕೆನಾಡಾದ ಕಪ್ಪು ಕರಡಿ ‘ವಿನ್ನಿ’ಯ ಹೆಸರು (ಆ ಕರಡಿ ಕೆನಾಡಾದ ವಿನ್ನಿಪೆಗ್ ಪ್ರಾಂತ್ಯದ್ದು) ಮತ್ತು ಅವನ ಕುಟುಂಬದವರು ಒಮ್ಮೆ ರಜಾದಿನಗಳಲ್ಲಿ ಭೇಟಿಯಾಗಿದ್ದ ‘ಫೂ ” ಎಂಬ ಹಂಸಪಕ್ಷಿಯ ಹೆಸರನ್ನು ಸೇರಿಸಿ ತನ್ನ ಮುದ್ದು ಟೆಡ್ಡಿಯನ್ನು ವಿನ್ನೀ-ದ-ಫೂ ಎಂದು ಕರೆದನಂತೆ.ಇದಕ್ಕೂ ಮುಂಚೆ ಅವನ ಮುದ್ದು ಟೆಡ್ಡಿಯ ಹೆಸರು ಎಡ್ವರ್ಡ್ ಆಗಿತ್ತು. ಹುಡುಗ ಕ್ರಿಸ್ಟೊಫರ್ ನ ಬಳಿ ಇದ್ದ ಇತರ ಆಟಿಕೆ ಪ್ರಾಣಿಗಳಾದ ಪಿಗ್ಲೆಟ್, ಇಯೋರ್, ಟಿಗ್ಗರ್, ಕಾಂಗ ಮತ್ತು ರೂ (ಅಮ್ಮ-ಮಗನ ಜೋಡಿ) ಫೂ ಬೇರ್ ನ ಕತೆಗಳಲ್ಲಿ ಬರುತ್ತಾರೆ. ಲೇಖಕ ಮಿಲ್ನ್ ಕಾಲ ಕ್ರಮೇಣ ಮತ್ತೆರಡು ಪಾತ್ರಗಳನ್ನ – ರಾಬಿಟ್ ಮತ್ತು ಔಲ್ – ಸೇರಿಸಿದರಂತೆ. ನಡು ನಡುವೆ ಮತ್ತಷ್ಟು ಪಾತ್ರಗಳು – ಉದಾಹರಣೆಗೆ, ಹೆಫಲಮ್ಪ್ ಎಂಬ ಆನೆಮರಿ – ಬರುತ್ತವೆ. ಕ್ರಿಸ್ಟೊಫರ್ ನ ಆ ಮುದ್ದು ಆಟಿಕೆ ಕರಡಿ ವಿನ್ನೀ-ದ-ಫೂ  ನ್ಯೂ ಯಾರ್ಕ್ ಪಟ್ಟಣದ ಸಾರ್ವಜನಿಕ ಗ್ರಂಥಾಲಯದ ಪ್ರದರ್ಶನದಲ್ಲಿದೆ.winnie-the-pooh-with-friends

 ವಿನ್ನೀ-ದ-ಫೂ  ಕತೆಗಳ ಗುಚ್ಛ ಜನ್ಮ ತಾಳಿದ್ದು ೧೯೨೬ರಲ್ಲಿ. ಈ.ಎಚ್.ಶೆಪರ್ಡ್ ರ ಪೆನ್ಸಿಲ್ ನಿಂದ ಹೊರ ಹೊಮ್ಮಿದ ಚಿತ್ರ ನಿದರ್ಶನಗಳು ಅಜರಾಮರ. ಆ ಕಥಾ ಗುಚ್ಛದ ನಂತರ ಮಿಲ್ನ್ ಇನ್ನೂ ಹಲವಾರು ಪುಸ್ತಕಗಳನ್ನು ಬರೆದರು – ರಿಟರ್ನ್ ಟು ದ ಒನ್ ಹಂಡ್ರೆಡ್ ಏಕರ್ ವುಡ್, ವೆನ್ ವಿ ವರ್ ವೆರಿ ಯಂಗ್, ನೌ ವಿ ಆರ್ ಸಿಕ್ಸ್ ಪುಸ್ತಕಗಳು ಮಿಲ್ನ್ ರ ಕವಿ ಹೃದಯವನ್ನು ಬಿಚ್ಚಿಡುತ್ತವೆ. ೧೯೩೦ ರಿಂದಾಚೆಗೆ ಈ ಕತೆಗಳನ್ನು ಅಮೆರಿಕ, ಬ್ರಿಟನ್ ದೇಶಗಳ ಟೆಲಿವಿಷನ್ ಗೆ ತಂದದ್ದು ಸ್ಟೀವನ್ ಸ್ಲೆಸಿಂಜರ್ (೧೯೩೦) ಮತ್ತು  ವಾಲ್ಟ್ ಡಿಸ್ನಿ ಸಂಸ್ಥೆ (೧೯೬೧). ಡಿಸ್ನಿ ಸಂಸ್ಥೆ ಹೊಸ ಚಿತ್ರಗಳನ್ನು, ಬಣ್ಣಗಳನ್ನು ಅಳವಡಿಸಿ ಹೊಸ ವಿನ್ಯಾಸದಲ್ಲಿ ಅದೇ ಕತೆಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದೂ ಅಲ್ಲದೆ, ವಿಡಿಯೋ ಮತ್ತು ಡಿ ವಿ ಡಿ ಗಳನ್ನೂ ತಂದು ಲಕ್ಷಾಂತರ ಮಕ್ಕಳು ಫೂ ಬೇರ್ ಕತೆಗಳನ್ನು ಪರದೆಯ ಮೇಲೆ ನೋಡುವಂತೆ ಮಾಡಿದೆ (https://www.youtube.com/watch?v=xHYvpXe75b8 ). ಹಾಡುಗಳು, ಆಡಿಯೋ, ರೇಡಿಯೋ, ರಂಗರೂಪಾಂತರ ಮುಂತಾದ ವಿಧ ವಿಧವಾದ ಅಳವಡಿಕೆಗಳಲ್ಲೂ ಅವು ಮೂಡಿ ಬಂದಿವೆ. ಅವನ ಹೆಸರಿನಲ್ಲಿ ಸಂಘ ಸಂಸ್ಥೆಗಳೂ ಇವೆ. (http://www.letssingit.com/?a=www_player&special_id=zv9p2sq )

 ಫೂ ಬೇರ್ ಒಬ್ಬ ನಿಷ್ಕಪಟ, ಸರಳ, ಕೆಲವೊಮ್ಮೆ ಸ್ವಲ್ಪ ಮೊದ್ದು ಸ್ವಭಾವದವ. ಅವನು ಮಕ್ಕಳನ್ನು, ದೊಡ್ಡವರನ್ನು ಗೆದ್ದಿದ್ದು ಅದೇ ಬೆಪ್ಪುತನದಿಂದ, ಅದೇ ನೈಜ ಮುಗ್ಧತೆಯಿಂದ. ಅವನ ನಿಧಾನಿಕೆಯಲ್ಲಿ ಅದೆಷ್ಟು ಅರಿವಿದೆ, ಹರಿವಿದೆ, ಜಾಣ್ಮೆಯಿದೆ, ಸ್ನೇಹವಿದೆ, ವಿವೇಚನೆಯಿದೆ! ಒಮ್ಮೊಮ್ಮೆ ಅವನ ಸ್ನೇಹಿತರಿಗೆ ಅವನು ಕೋಪ ತರಿಸಿ ಅವರು ಹಾರಾಡುವಂತೆ ಮಾಡಿದರೂ ಕಡೆಗೆ ಅವರು ಅವನ ಒಳ ಪ್ರಜ್ಞೆಯನ್ನು, ವಿವೇಕವನ್ನು ಮನಸಾರೆ ಒಪ್ಪಿಕೊಳ್ಳುತ್ತಾರೆ. ಪಿಗ್ಲೆಟ್ ಗಂತೂ ಫೂ  ಬೇರ್ ಇಲ್ಲದೆ ಜೀವನವಿಲ್ಲ. ಟಿಗ್ಗರ್ ಹೆಸರಿಗೆ ತಕ್ಕಂತೆ ಹುಲಿಮರಿಯಾಗಿ ಎಷ್ಟೆಷ್ಟೆ ಕುಣಿದಾಡಿದರೂ ಅವನ ಒಳ ಮನಸ್ಸಿಗೆ ಗೊತ್ತು – ಆಗೋ ಅಲ್ಲಿದ್ದಾನೆ ಫೂ  ಬೇರ್, ನನ್ನನ್ನು ವಾಸ್ತವಕ್ಕೆ ಮರಳಿ ತರುವ ನಿಧಾನಸ್ಥ, ಎಂದು. ಜಾಣ ರಾಬಿಟ್ ಮತ್ತು ಬುದ್ಧಿ ಹೇಳುವ ಔಲ್ ಗಳು ಎಷ್ಟೇ ಫೂ ಬೇರ್ ನ ಎಮ್ಮೆತನವನ್ನು ದೂರ ಸರಿಸಿದರೂ ಅವನ ಆ ‘ಈ ಕ್ಷಣದಲ್ಲಿ ಅಡಗಿರುವ ನಾನೆಂಬ ಅರಿವು’ ಎನ್ನುವ ಕೋಮಲ ಸ್ವಭಾವ ಅವರನ್ನು ಅವನ ಹತ್ತಿರಕ್ಕೆ ಎಳೆದು ತರುತ್ತದೆ.

 ಆ ನಿಧಾನಸ್ಥ ಅತ್ಯುತ್ತಮ ಕನಸುಗಾರ ಕೂಡ. ಅವನು ಹೇಳುವ ಮಾತುಗಳು, ಕಟ್ಟುವ ಪದ್ಯಗಳು, ಆಗಾಗ ಅನುರಣಿಸುವ ‘ಹಮ್’ ಗಳು ಓದುಗರ ಮುಖದಲ್ಲಿ ಮಂದಹಾಸವನ್ನು ಮೂಡಿಸುತ್ತವೆ. ಕತೆಗಳನ್ನು ಕೇಳುತ್ತಿರುವ ಚಿಕ್ಕ ಮಕ್ಕಳು ಕೇಕೆ ಹಾಕಿ ನಗುತ್ತಾರೆ, ಆ ಪದ್ಯಗಳನ್ನು ಮತ್ತೆ ಓದಿ ಎಂದು ದೊಡ್ಡವರನ್ನು ಪೀಡಿಸುತ್ತಾರೆ.

 ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ
ಚಿತ್ರ ಕೃಪೆ: ಡಾ.ಶ್ರೀವತ್ಸ ದೇಸಾಯಿ

 ಫೂ ನ ‘ಏನೂ ಮಾಡದ – ಡುಯಿಂಗ್ ನಥಿಂಗ್’ ಎಂಬ ಮನಸ್ಥಿತಿ ಮಕ್ಕಳಲ್ಲಿ ಕಿಲಿಕಿಲಿ ನಗು ಹುಟ್ಟಿಸಿದರೆ, ದೊಡ್ಡವರಲ್ಲಿ ಅಚ್ಚರಿ, ಹೊಟ್ಟೆಕಿಚ್ಚು ಕೂಡ ಉಂಟಾಗುತ್ತದೆ! ಅವನು ಮತ್ತು ಪಿಗ್ಲೆಟ್  ಜೊತೆಗೂಡಿ ಹೋಗುವ ನಡಿಗೆಗಳು, ತಮಗೆ ತಿಳಿಯದೆ ತೊಡಗಿಸಿಕೊಳ್ಳುವ ಪ್ರಕ್ರಿಯೆಗಳು – ವಾಹ್, ಅದೆಷ್ಟು ಮೃದುವಾಗಿ ಮಿಲ್ನ್  ಜೀವನದ ಬಗ್ಗೆ ವ್ಯಾಖ್ಯಾನಿಸುತ್ತಾರೆ! ಕ್ರಿಸ್ಟೊಫರ್ ರಾಬಿನ್ ನಕ್ಕು ಆಗಾಗ ಉದ್ಗರಿಸುವ ‘ಸಿಲ್ಲಿ ಓಲ್ಡ್ ಬೇರ್’ ನಾವು ಮನ ಸೋಲುವಂತೆ ಮಾಡುತ್ತಾನೆ.the-original-2

ಮನ ಸೋಲುವಂತೆ ಮಾಡಿರುವುದು ಕತೆಗಾರ ಮಿಲ್ನ್ ಎಂಬುದನ್ನು ನಾವು ದೊಡ್ಡವರು ಗುರ್ತಿಸುತ್ತೇವೆ. ಆ ‘ಸಿಲ್ಲಿ ಓಲ್ಡ್ ಬೇರ್’ ಹೇಳುವ ಮಾತುಗಳಿಗೆ ಒಮ್ಮೊಮ್ಮೆ ಮೊದಲಿಲ್ಲ, ಕೊನೆಯಿಲ್ಲ; ಇಂಗ್ಲಿಷ್ ಭಾಷೆಯಲ್ಲಿರುವ ಪದಗಳ ಅಕ್ಷರಗಳು ಕೆಲವೊಮ್ಮೆ ಹಿಂದು ಮುಂದು, ಉಲ್ಟಾ ಪಲ್ಟಾ, ಚೆಲ್ಲಾಪಿಲ್ಲಿ. ಕೆಲವೊಂದು ಪದಗಳ ಗುಚ್ಛದಲ್ಲಿ ಪ್ರತಿಯೊಂದು ಪದ ದೊಡ್ಡ ಅಕ್ಷರದಿಂದ (capital letter) ಆರಂಭವಾಗುವುದು ಮತ್ತಷ್ಟು ಆಸಕ್ತಿ ಹುಟ್ಟಿಸುತ್ತದೆ. ಈ ವಿಶೇಷತೆಯನ್ನು ಮಕ್ಕಳು ಕೂಡ ಗುರ್ತಿಸುತ್ತಾರೆ. ಯಾಕೆ ಬೇಕು ಅಷ್ಟೆಲ್ಲಾ ಫಜೀತಿ ಎಂದು ಫೂ ಬೇರ್ ಹೇಳುವುದು ‘ಓಹ್ ಬಾದರ್’. ಯಾರಾದರೂ “ಸಂಗೀತ ಮತ್ತು ಬದುಕು…” ಎಂದು ಮಾತು ಆರಂಭಿಸಿದರೆ ಪಟ್ಟನೆ ಫೂ ಹೇಳುವುದು “ಅವೆರಡೂ ಒಂದೇ”. ಇಂತಹ ಉದ್ಗಾರಗಳು,  ಅವನ ‘ಹಮ್’ ಕಾರ ತಕ್ಷಣ ಮಕ್ಕಳ ಹೃದಯಕ್ಕೆ ಹತ್ತಿರವಾಗಿ ಬಿಡುತ್ತವೆ.

 ಫೂ ಹೇಳುವಂತೆ ಕವಿತ್ವ, ಕಾವ್ಯ ಕಟ್ಟುವುದು ಮತ್ತು ಹಮ್ ಗಳು ನಾವು ಗಳಿಸುವುದಲ್ಲ; ಅವು ನಮ್ಮನ್ನು ಪಡೆಯುತ್ತವೆ. ಅವು ನಮ್ಮನ್ನು ಎಲ್ಲಿ ಹುಡುಕುತ್ತವೋ ಅಲ್ಲಿ ನಾವು ಹೋಗುವುದಷ್ಟೇ ನಾವು ಮಾಡಬೇಕಿರುವುದು. ಆದರೆ ತೀಕ್ಷ್ಣ ಬುದ್ಧಿಯ, ಸ್ವಲ್ಪ ಸಿಡುಕಿನ ರಾಬಿಟ್ ಅದರಲ್ಲಿ ಅಷ್ಟೊಂದು ಅರ್ಥವಿಲ್ಲ ಅನ್ನುತ್ತಾನೆ. ಫೂನ ಉತ್ತರ, “ಅರ್ಥವಿಲ್ಲ, ಹೌದು. ಆದರೆ ನಾನು ಆ ಮಾತನ್ನು ಶುರು ಮಾಡಿದಾಗ ಅರ್ಥವಿತ್ತೇನೋ. ಮಾತು ಹೊರಡುತ್ತಿದ್ದಾಗ ಮಧ್ಯ ದಾರಿಯಲ್ಲಿ ಅದಕ್ಕೇನೋ ಆಗಿಬಿಟ್ಟಿತು”.

ಹೌದಲ್ಲ, ನಮ್ಮ ಜೀವನದ ಎಲ್ಲಕ್ಕೂ ನಾವು ಅರ್ಥ ಕಟ್ಟಲು ಪ್ರಯತ್ನಿಸುತ್ತೀವಿ. ಒಮ್ಮೆಮ್ಮೆ ಅದರಲ್ಲೇ ಕಳೆದುಹೋಗುವ ಅಪಾಯವುಂಟು. ಅರ್ಥ ಕಳೆದು ಹೋಗುವ ಕ್ಷಣದ, ಅರ್ಥ ಅನಗತ್ಯ ಎಂಬುದನ್ನು ಗುರ್ತಿಸುವವರು ನಾವಾದರೆ?! ನಾವೇ ನಾವಾಗಿ ನಮ್ಮ ಅಂತರಾಳಕ್ಕೆ ಇಳಿದು ಅಲ್ಲಿ ತಾನೇ ತಾನಾಗಿರುವ ಅರ್ಥವನ್ನು ನೋಡಿಬಿಟ್ಟರೆ!!unabridged

 ಫೂ ಬೇರ್ ನ ಅಚ್ಚುಮೆಚ್ಚಿನ ಜೇನುತುಪ್ಪದ ಬಗ್ಗೆ ಮಾತನಾಡುತ್ತಾ ಅವ ಇಡೀ ವಿಶ್ವದ ಬಗ್ಗೆ ಚಿಂತಿಸುತ್ತಾನೆ. ಕ್ರಿಸ್ಟೊಫರ್  ರಾಬಿನ್ ಒಮ್ಮೆ ಅವನನ್ನು ಈ ಪ್ರಪಂಚದಲ್ಲಿ ನಿನಗೆ ತುಂಬಾ ಇಷ್ಟವಾದದ್ದು ಏನು ಎಂದು ಕೇಳಿದಾಗ, ವೆಲ್ ಎಂದು ಫೂ  ಸುಮ್ಮನಾಗುತ್ತಾನೆ. ‘ಜೇನುತುಪ್ಪ ತಿನ್ನುವುದು ತುಂಬಾ ಇಷ್ಟವಾದದ್ದು; ಆದರೂ, ಅದನ್ನು ತಿನ್ನುವ ಮುನ್ನ ಒಂದು ಘಳಿಗೆಯಿತ್ತಲ್ಲಾ, ಆ ಘಳಿಗೆ ತಿನ್ನುವ ಕ್ರಿಯೆಗಿಂತಲೂ ಚೆನ್ನಿತ್ತಲ್ಲಾ, ಆದರೆ ಅದು ಆ ಘಳಿಗೆ ಏನೆಂದು ಅವನಿಗೆ ತಿಳಿದಿರಲಿಲ್ಲ’ – ಇಂತಹ ದಾರ್ಶನಿಕ ತತ್ವದ ಮಾತುಗಳನ್ನು ‘ಫೂ ಬೇರ್ ನೀಡುವ ಜೀವನದ ಒಳದೃಷ್ಟಿ, ಗಾಢವಾದ ತತ್ವಜ್ಞಾನ’ ಎಂದು ಬೆಂಜಮಿನ್ ಹೊಫ್ ಹೇಳುತ್ತಾರೆ. ಅದನ್ನೇ ಆಧರಿಸಿ ಅವರೂ ಕೂಡ ಟಾಓ ಆಫ್ ಫೂ  (Taoism) ಮುಂತಾದ ಪುಸ್ತಕಗಳನ್ನು, ಜಾನ್ ವಿಲಿಯಮ್ಸ್ ಫೂ ಅಂಡ್ ದ ಫಿಲಾಫರ್ಸ್ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ. ಇಬ್ಬರೂ ಆ ಕತೆಗಳಲ್ಲಿ ಪಾಶ್ಯಾತ್ಯ ದಾರ್ಶನಿಕತೆ ಮತ್ತು ವೇದಾಂತ ಅಡಗಿದೆ ಎನ್ನುತ್ತಾರೆ. ಪ್ರಸಿದ್ಧ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಫೂ  ಬೇರ್ ಮತ್ತವನ ಸ್ನೇಹಿತರನ್ನೊಳಗೊಂಡ ಅನೇಕ ಚರ್ಚೆಗಳೂ ನಡೆಯುತ್ತವೆ. ಫೂ ಬೇರ್ ನ ಕತೆಗಳನ್ನಾಧರಿಸಿ ಕಾರ್ಪೊರೇಟ್ ವಲಯಗಳಲ್ಲಿ, ಮ್ಯಾನೇಜ್ಮೆಂಟ್ ತರಬೇತಿಗಳಲ್ಲಿ ಸೂಕ್ತ ಚಟುವಟಿಕೆಗಳನ್ನು ಕೂಡ ನಡೆಸುತ್ತಾರೆ.

 ಫೂ  ನ ಈ ಮಾತು – “ನೀ ದೂರ, ಬಲು ದೂರ ಹೇಗೆ ಹೋಗತ್ತೀ? ನೀ ಯಾರೆಂದು ನಿನಗೆ ಅರಿವಿಲ್ಲವೆಂದರೆ?”,  ಕತೆಗಳಲ್ಲಿ ಬರುವ ಹಾಡುಗಳು, ದಾರ್ಶನಿಕ ಮಾತುಗಳು, ಚಿಂತನೆ, ವಿಮರ್ಶೆ, ವ್ಯಾಖ್ಯಾನಗಳು ವಿನ್ನೀ-ದ-ಫೂ ಮತ್ತವನ ಸ್ನೇಹಿತರ ಪಾತ್ರಗಳು ನಮ್ಮ ಜೀವನವನ್ನು ಒರೆ ಹಚ್ಚಿ ನೋಡುವಂತೆ ಪ್ರೇರೇಪಿಸುತ್ತವೆ. ಅಷ್ಟರ ಮಟ್ಟಿಗೆ ಅವರೆಲ್ಲರೂ ತತ್ವ ಜ್ಞಾನಿಗಳೇ!!

ಎಲ್ಲಕ್ಕೂ ಒಂದು ಚೌಕಟ್ಟು, ಭೂಮಿಕೆಯನ್ನು ಒಡ್ಡಿಕೊಳ್ಳುವ ಪ್ರಮೇಯವನ್ನೇ, ಕಾರಣವನ್ನೇ ಬಿಟ್ಟು ಬದುಕುವ ಫೂ ಬೇರ್ ನಿಜಕ್ಕೂ ಒಬ್ಬ ವೇದಾಂತಿಯೇ ಹೌದು ಎನಿಸಿಬಿಡುತ್ತದೆ. ನನ್ನೊಳಗೆ ಅಡಗಿರುವ ಫೂ ಬೇರ್ ಎಲ್ಲಿ ಎನ್ನುವ ಹುಡುಕಾಟ ಆರಂಭವಾಗುತ್ತದೆ.

 ಡಾ. ವಿನತೆ ಶರ್ಮ

7 thoughts on “ವಿನ್ನೀ-ದ-ಫೂ (Winnie the Pooh) ಅನ್ನೋ ಕನಸುಗಾರ ವೇದಾಂತಿ: ಡಾ. ವಿನತೆ ಶರ್ಮ ಬರೆದ ಲೇಖನ

  1. ಪ್ರಿಯ ವಿನತೆ ಅವರಿಗೆ
    ನಮಸ್ಕಾರ.
    ನಿಮ್ಮ ವಿನ್ನೋ ದಿ ಫೂ ಲೇಖನ ಓದಿ ನಾವು ನಮ್ಮ ಮಕ್ಕಳು ಚಿಕ್ಕವರಿದ್ದಾಗ್ಯೆ ( ಅಂದರೆ ಸುಮಾರು 35-40 ವರುಷಗಳ ಹಿಂದಿನ ಮಾತು) ಅವರಿಗೆ ಪದೇ ಪದೇ ಓದಿ ಹೇಳಿದ್ದುದು ಜ್ಞಾಪಕಕ್ಕೆ ಬಂದಿತು. ಕೇವಲ ಕಥೆ ರೂಪದಲ್ಲಿ ಮಾತ್ರ ತಿಳಿದಿದ್ದಿತು .ನೀವು ಇದರ ಬಗ್ಗೆ ಕುತೂಹಲ ಕೆರಳಿಸುವ ವಿಷ್ಯಗಳನ್ನು ಮಾರ್ಮಿಕವಾಗಿ ಚಿತ್ರಿಸಿರಿವಿರಿ..
    ಈಗ ಮತ್ತೊಮ್ಮೆ ನಮ್ಮ ಮಮ್ಮೊಕ್ಕಳೊಂದಿಗೆ ಈ ಕಥೆ ಓದಿ ನಲಿಯೋಣ ಎಂದು ಆಸೆಯಾಗುತ್ತಿದೆ. ಈ ಪ್ರೇರಣೆಗೆ ಕಾರಣರಾದ ನಿಮಗೆ ಅನಂತ ಕೃತಜ್ಞತೆಗಳು.

    ಡಾಕ್ಟರ ಅರವಿಂದ ಕುಲ್ಕರ್ಣಿ

    Liked by 1 person

  2. ನಿಮ್ಮೆಲ್ಲರಿಗೂ ಕೃತಜ್ಞತೆಗಳು.
    ಡಾ.ದೇಸಾಯಿ, ಸರಿಯಾಗೇ ಗುರ್ತಿಸಿದ್ದೀರಿ. ವಿನ್ನೀ ದ ಫೂ ಬೇರ್ ಯಾವಾಗ ಕಾಣಿಸಿಕೊಂಡ ಎನ್ನುವುದರ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ಆದರೂ ಅವನ ಕತೆಗಳು ೧೯೨೬ ರಲ್ಲಿ ಪ್ರಕಟಗೊಂಡು ಪ್ರಸಿದ್ಧಿಯಾದವು ಅನ್ನುವುದು ನಿಜ. ಹಾಗಾಗಿ ಬ್ರಿಟನ್ ನ ರಾಣಿ ಎಲಿಜಬೆತ್ ಕೂಡ ಈ ವರ್ಷ ತಮ್ಮ ೯೦ರ ಹುಟ್ಟುಹಬ್ಬವನ್ನು ಆಚರಿಸುತ್ತಾ ತಮ್ಮ ಮರಿಮಗ ಜಾರ್ಜ್ ಜೊತೆಗೆ ಫೂ ಬೇರ್ ನ ೯೦ನೇ ವರ್ಷದ ಸಡಗರವನ್ನೂ ಸಹ ಹಂಚಿಕೊಂಡಿದ್ದಾರೆ.

    Liked by 1 person

  3. ವಿನುತೆ ಅವರ ಈ ಲೇಖನ ನನ್ನನ್ನು ೯೦ರ ದಶಕದ ಮಧ್ಯಭಾಗಕ್ಕೆ ಎಳೆದೊಯ್ಯಿತು. ನನ್ನ ಮಕ್ಕಳು ಅದರಲ್ಲೂ ಮಗಳು ಈ ವಿನ್ನಿ ದಿ ಪೂ ಕರಡಿಯ ಮಹಾ ದೊಡ್ಡ ಅಭಿಮಾನಿ. ಅವಳೊಡನೆ ಕುಳಿತು ವಾಲ್ ಡಿಸ್ನಿ ತಯಾರಿಸಿದ ಚಿತ್ರಗಳನ್ನು ನೋಡಿದಾಗ, ನಾನು ಮಗುವೇ ಆಗುತ್ತಿದ್ದೆ. ಸರಳ ಮತ್ತು ಮುಗ್ಧತೆಯ ಆ ಕಥೆಯ ಹಿಂದೆ ಇಷ್ಟೊಂದು ದೊಡ್ಡ ತತ್ವಜ್ನಾನ ಅಡಗಿದ್ದ ಅರಿವಿರಲಿಲ್ಲ. ಟಿಗರ್ ಎಂಬ ಸಿನಿಮಾವನ್ನೂ ನೋಡಿ ಆನಂದಿಸಿದ್ದೆ. ಈಗಲೂ ನನ್ನ ಮಕ್ಕಳು ಕ್ರಿಸ್ಮಸ್ ರಜೆಯಲ್ಲಿ ಈ ಸಿನಿಮಾಗಳನ್ನು ನೋಡಿ ಆನಂದಿಸುತ್ತಾರೆ. ಅವರ ಜೊತೆಗೆ ನಾನೂ ಕೂಡ ಮತ್ತೊಮ್ಮೆ ಅದೇ ಅನುಭವದಲ್ಲಿ ಮುಳುಗಿ ನನ್ನನ್ನು ಮರೆಯುವೆ. ವಿನುತೆ ಉತ್ತಮವಾದ ಲೇಖನ. ಪುಸ್ತಕವನ್ನು ಓದಿಲ್ಲ. ಕೇವಲ ವಾಲ್ ಡಿಸ್ನಿಯ ವರ್ಣರಂಜಿತ ಚಿತ್ರದ ಪುಸ್ತಕ ನೋಡಿದ್ದೇನೆ. ನಿಮ್ಮ ಲೇಖನ ನೋಡಿದ ಮೇಲೆ ಪುಸ್ತಕವನ್ನು ಓದುವ ಮನಸಾಗಿದೆ.
    ಉಮಾ ವೆಂಕಟೇಶ್

    Liked by 2 people

  4. ವಿನತೆ ಶರ್ಮ ಅವರ ಇಂದಿನ ಲೇಖನ ನಿಜಕ್ಕೂ ವಿಚಾರಗಳ ಸಂತೆಯೇ . ವಿನ್ನಿ – ದ- ಫೂನ ಪ್ರತಿ ಕ್ರಿಯೆ ಮಾತುಗಳಲ್ಲಿ ತತ್ವಜ್ಞಾನ , ದಾರ್ಶನಿಕತೆ ಅಡಗಿರುವುದು ಕಂಡು ಬರುತ್ತದೆ ,ವಿನತೆಯವರ ಲೇಖನ ಓದಿದಾಗ .ಮಕ್ಕಳ ಕತೆ ಪುಸ್ತಕವಾದರೂ ಇಷ್ಟು ಆಳವಾದ ಗಹನ ವಿಚಾರಗಳಿರುವುದರಿಂದ ದೊಡ್ಡವರು ತಮ್ಮ ದೃಷ್ಟಿಕೋನದಿಂದ ಅದನ್ನ ಅರ್ಥೈಸಬಹುದೇನೋ .ನಮ್ಮ ಪಂಚತಂತ್ರ ಕತೆಗಳೂ ಹಾಗೇ ಅಲ್ವೆ? ಫೂ ಹೇಳುವ ,ಜೇನು ತುಪ್ಪ ತಿನ್ನುವದಕ್ಕಿಂತ ಮೊದಲಿನ ಘಳಿಗೆ ಸುಂದರ .ಎಷ್ಟು ನಿಜವಲ್ಲ !!.ಯಾವದೇ ಸಿಹಿ ಗಳಿಗೆ ,ಘಟನೆಗಳ ನೀರೀಕ್ಷೆಯಲ್ಲಿರುವ ಆನಂದ ಆದನ್ನ ಅನುಭವಿಸುವಾಗ ಇರಲ್ಲ .ಅದೇ ರೀತಿ ಫೂ ಹೇಳುವ ನಾನು ಮಾತು ಆರಂಭಿಸಿದಾಗ ಅರ್ಥ ಇತ್ತೇನೋ ಎಂಬ ಮಾತು !! ಅದ್ಭುತ ನಾನು ಈ ವಿನ್ನಿ ದ ಫೂ ಪುಸ್ತಕ ಓದಿಲ್ಲ ,ಅದರ ಕಲ್ಪನೆಯೂ ಇರಲಿಲ್ಲ. ಈಗ ವಿನತೆಯವರ ಲೇಖನ ಓದಿದ ಮೇಲೆ ಆ ಪುಸ್ತಕ ಓದದಿರಲಾರೆ ಎನಿಸುತ್ತಿದೆ.ತುಂಬಾ ವಿಚಾರ ಪೂರ್ಣ , ಸುಂದರ ಲೇಖನ ನೀಡಿದ್ದಕ್ಕೆ ಧನ್ಯವಾದಗಳು ಮತ್ತು ಅಭಿನಂದನೆಗಳು ವಿನತೆಯವರೇ
    ಸರೋಜಿನಿ ಪಡಸಲಗಿ

    Liked by 3 people

  5. ಇಂದು ವಿನ್ನಿ ದ ಫೂ ದ ಮೊದಲ ಪುಸ್ತಕದ ಪ್ರಕಟಣೆ ( 14-10-1926)ಯ 90 ನೆಯ ವರ್ಷಾಬ್ದಿ ಅಂದ ಮೇಲೆ ಇದು ಸಮಯೋಚಿತ ಲೇಖನ.

    Liked by 2 people

  6. ನಾನೀ ದೇಶಕ್ಕೆ ಬಂದ ಮೇಲೆಯೇ ವಿನ್ನೀ, ಈಯೋರ್, ಟಿಗ್ಗರ್, ಕಾಂಗ-ರೂ, ರಾಬಿಟ್ ಇವೆಲ್ಲವುಗಳ ಪರಿಚಯವಾಯಿತು, ಅದೂ ಸ್ವಲ್ಪ ಸ್ವಲ್ಪ ಅಷ್ಟೇ. ಅವುಗಳ ಲೋಕವನ್ನು ನಮ್ಮ ಮೊಮ್ಮಕ್ಕಳು ಬಂದ ಮೇಲೆಯೇ ನಮ್ಮ ಮಕ್ಕಳು ಸಹ ಆಳವಾಗಿ ಹೊಕ್ಕಿದ್ದಲ್ಲದೆ, ನನ್ನಿಂದ ಆಗಾಗ ಹಣಿಕಿ ಹಾಕಿಸಿದ್ದಾಯಿತು. ಆದರೆ ವಿನತೆಯವರ ಈ ಚಿಕ್ಕ ಆದರೆ ಸಂಕೀರ್ಣ ಲೇಖನ ಓದಿದ ಮೇಲೆಯೇ ಆ ಭವ್ಯ ಸುಂದರ ಲೋಕದ ಅರಿವಾಗಿದೆ. ಈ ಮೊದಲು ನನಗೆ ಅವುಗಳಲ್ಲಡಗಿದೆ ದಾರ್ಶನಿಕತೆಯ ಕಲ್ಪನೆಯಿದ್ದಿಲ್ಲ. ಮುಂದಿನ ಸಲ ಅವರಿಗೆ ಈ ಪುಸ್ತಕಗಳನ್ನೋದುವಾಗ ಇನ್ನೂ ಹೆಚ್ಚು ಲಕ್ಷ್ಯ ಕೊಟ್ಟೇನು. ಅದರಲ್ಲಿ ವಾಸಿಸುವ ವಿನ್ನಿಯ ಮಾಯಾಲೋಕದಲ್ಲಿ ಮುಳುಗುವ ಹಂಬಲ ಹುಟ್ಟಿಸಿದ್ದಕ್ಕೆ ಧನ್ಯವಾದಗಳು. ಮುಂದಿನ ಸಲ ಲಂಡನ್ ಝೂಗೆ ಹೋದಾಗ ಆ ಕಂಚಿನ ಕರಡಿ ಮರಿಯನ್ನು ಮತ್ತೆರಡು ಸಲ ನೇವರಿಸಿ ಬರುವೆ!

    Liked by 2 people

Leave a comment

This site uses Akismet to reduce spam. Learn how your comment data is processed.