ಶ್ರೀಮತಿ ಸುಧಾ ಮೂರ್ತಿ ಅವರೊ೦ದಿಗೆ ಒ೦ದು ಸ೦ಭಾಷಣೆ: ಡಾ. ದಾಕ್ಷಾಯಣಿ

%e0%b2%ae%e0%b3%82%e0%b2%b2-%e0%b2%9a%e0%b2%bf%e0%b2%a4%e0%b3%8d%e0%b2%b0-thehindu-com
Photo from thehindu.com

ಸುಧಾ ಮೂರ್ತಿ!! ಭಾರತ ದೇಶದಲ್ಲಿ, ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಸಾಮಾಜಿಕ ಬದಲಾವಣೆ/ಸುಧಾರಣೆ, ಶಿಕ್ಷಣ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಅವರ ಹೆಸರು ಚಿರಪರಿಚಿತ ಹಾಗೂ ಅಪ್ಯಾಯಮಾನ. ಅವರ ಹೆಸರು ಅವಕಾಶವಂಚಿತರಾದ ಸಾವಿರಾರು ಹೆಣ್ಣುಮಕ್ಕಳ ಮನಸ್ಸಿಗೆ ನೆಮ್ಮದಿ ತರುತ್ತಿದೆ.  ಹಾಗೆಯೇ, ಕನ್ನಡ ಸಾಹಿತ್ಯ ಪ್ರಿಯರಿಗೂ ಅವರು ಸಾಕಷ್ಟು ಪರಿಚಯವಿದ್ದಾರೆ. ಬೆಂಗಳೂರಿನಲ್ಲಿರುವ ಪ್ರಸಿದ್ಧ ಮಾಹಿತಿ ತಂತ್ರಜ್ಞಾನದ ಸಂಸ್ಥೆ ಇನ್ಫೋಸಿಸ್ ನ ಮತ್ತೊಂದು ಭಾಗವಾದ ಇನ್ಫೋಸಿಸ್ ಫೌಂಡೇಶನ್ ನ ಜೀವನಾಡಿ ಶ್ರೀಮತಿ ಸುಧಾ ಮೂರ್ತಿಯವರು. ಅವರು ಸೆಪ್ಟೆಂಬರ್ ೧೭ರಂದು ಇಂಗ್ಲೆಂಡಿನ ಉತ್ತರ ಭಾಗದಲ್ಲಿ ನಡೆದ ವೀರಶೈವ ಬಳಗದ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಆ ಸಂದರ್ಭದಲ್ಲಿ ಅವರನ್ನು ಅನಿವಾಸಿಗೆಂದು ವಿಶೇಷವಾಗಿ ಸಂದರ್ಶಿಸಿದವರು ಅನಿವಾಸಿ ಬಳಗದ ಡಾ. ದಾಕ್ಷಾಯಣಿ. ಶ್ರೀಮತಿ ಸುಧಾ ಮೂರ್ತಿಯವರು ಡಾ.ದಾಕ್ಷಾಯಣಿಯವರ ಜೊತೆ ಹಂಚಿಕೊಂಡಿರುವ ಮಾತುಗಳನ್ನು ತಪ್ಪದೆ ಈ ಸಂದರ್ಶನದಲ್ಲಿ ಓದಿ. – ಸಂ

 ಶ್ರೀಮತಿ ಸುಧಾ ಮೂರ್ತಿ ಅವರೊ೦ದಿಗೆ ಒ೦ದು ಸ೦ಭಾಷಣೆ

ಡಾ. ದಾಕ್ಷಾಯಣಿ

ಇ೦ಗ್ಲೆ೦ಡಿನ ಉತ್ತರ ದಿಕ್ಕಿನಲ್ಲಿರುವ ಡಾರ್ಲಿ೦ಗ್ಟನ್ ಅನ್ನುವ ಪಟ್ಟಣದ ಬಳಿ ಈ ವರ್ಷದ ವೀರಶೈವ ಬಳಗದ ಸಭೆ ಸೇರಿತ್ತು. ಹೆಸರಿಗೆ ವೀರಶೈವ ಬಳಗವಾದರೂ, ಇದು ಪ್ರಾ೦ತೀಯ ಕನ್ನಡಿಗರ ಸಭೆಯೆ೦ದು ಹೇಳಬಹುದು. ನಮಗೆಲ್ಲ ತಿಳಿದ ಹಾಗೆ ಈ ಧರ್ಮಕ್ಕೆ ಜಾತಿಯ ಮತ್ತು ಭಾಷೆಯ ಕಟ್ಟಳೆಯಿಲ್ಲ. ಈ ಬಾರಿಯ ಸಭೆಗೆ ಬೇರೆ, ಬೇರೆ ಭಾಷೆಯ ಭಾರತೀಯರು ಸಹ ಆಗಮಿಸಿದ್ದರು. ಇದಕ್ಕೆ ಕಾರಣ, ಮುಖ್ಯ ಅಥಿತಿಯಾಗಿ ಆಗಮಿಸಿದ್ದ, ಶ್ರೀಮತಿ ಸುಧಾ ಮೂರ್ತಿ ಅವರು.

 ಮೂರ್ತಿ ದ೦ಪತಿಗಳ ಹೆಸರು ಮತ್ತವರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಭಾರತೀಯರಿಗೆಲ್ಲ ಚಿರಪರಿಚಿತ. ಇನ್ಫ಼ೊಸಿಸ್ ಫ಼ೌ೦ಡೆಷನ್ ನ ಮುಖ್ಯ ಕಾರ್ಯದರ್ಶಿಯಾಗಿ ತಮ್ಮನ್ನು ಸ೦ಪೂರ್ಣವಾಗಿ ತೊಡಗಿಸಿಕೊ೦ಡು, ಸಾಮಾನ್ಯ ಜನರೊಡನೆ ಅತಿ ಸಾಮಾನ್ಯಳಾಗಿ ಬೆರೆತು, ತಮ್ಮ ಸರಳತೆಗೆ ಮತ್ತು ಸೌಜನ್ಯಕ್ಕೆ ಹೆಸರುವಾಸಿಯಾದ ಮಹಿಳೆ ಸುಧಾಮೂರ್ತಿ. ಇವರು ಬರಹಗಾರ್ತಿಯೂ ಹೌದು. ಕನ್ನಡದಲ್ಲಿ ಮತ್ತು ಇ೦ಗ್ಲಿಷ್ ನಲ್ಲಿ ಬಹಳಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಪ್ರಪ೦ಚದಾದ್ಯ೦ತ ಪ್ರಯಾಣಿಸಿ, ತಮ್ಮ ಉಪನ್ಯಾಸಗಳಿ೦ದ ಕೇಳುಗರ ಮನ ಗೆದ್ದಿದ್ದಾರೆ.

ಬಹಳ ಪ್ರಸಿದ್ಧಿ ಪಡೆದ ಮಹಿಳೆ, ಯಾವ ರೀತಿಯಲ್ಲಿ ಅವರೊಡನೆ ಸ೦ಭಾಷಿಸಬೇಕು, ಎನ್ನುವ ಆತ೦ಕ ಅವರನ್ನು ಭೇಟಿಮಾಡಿದ ಕ್ಷಣಮಾತ್ರದಲ್ಲಿ ಕರಗಿ ಹೋಯಿತು. ” ನಾವೆ೦ತ ದೊಡ್ಡವರು, ಯಾವುದೂ ನಮ್ಮದಲ್ಲ” ಎನ್ನುವ೦ತಹ ಉದಾರತೆ ಇವರದು. ಇವರ ಸ೦ದರ್ಶನ ಮಾಡಬೇಕೆ೦ದು ನಾವು ಆ ದಿನಕ್ಕೆ ಮೊದಲೆ ಅವರ ಅಪ್ಪಣೆಯನ್ನು ಪಡೆದಿರಲಿಲ್ಲ. ಹಿ೦ಜರಿಕೆಯಿ೦ದಲೆ ವಿನ೦ತಿ ಮಾಡಿಕೊ೦ಡೆ, ತಕ್ಷಣ ಒಪ್ಪಿಗೆ ಕೊಟ್ಟರು. ನಮ್ಮ ಡಾ. ದೇಸಾಯಿಯವರು, ಅನಿವಾಸಿಯ ಬಗ್ಗೆ ಅವರಿಗೆ ತಿಳಿಸಿ, ನಮ್ಮ ಅ೦ಕಣದಿ೦ದ ಹೊರಬ೦ದ ಪುಸ್ತಕವನ್ನು ಕೊಟ್ಟರು. ಸಭೆಗೆ ಬ೦ದ ಪ್ರತಿಯೊಬ್ಬ ವ್ಯಕ್ತಿಯ ಬಳಿ ಸಮಾಧಾನದಿ೦ದ ಮಾತನಾಡಿ, ಅವರ ಅನಿಸಿಕೆಗಳನ್ನು ಕೇಳಿ ಬ೦ದವರೆಲ್ಲರ ಮೆಚ್ಚಿಗೆಗೆ ಪಾತ್ರರಾದರು. ಸಭೆಯನ್ನು ಉದ್ದೇಶಿಸಿ ಆಡಿದ ಮಾತಿನಲ್ಲಿ ಪ್ರಸ್ತುತ ವಿಷಯಗಳು, ಹಾಸ್ಯ, ಮು೦ದೆ ಮಾಡಬೇಕಾದ ಕೆಲಸ ಇನ್ನೂ ಮು೦ತಾದ ವಿಷಯಗಳನ್ನು ತಿಳಿಸಿ ತಮಗಿರುವ ಅಪಾರ ಜ್ಞಾನದ ಪರಿಚಯದ ಜೊತೆಗೆ, ಅವರು ಉತ್ತಮ ಭಾಷಣಗಾರ್ತಿ ಸಹ ಎನ್ನುವುದನ್ನು ನಮಗೆ ಮನವರಿಕೆ ಮಾಡಿಕೊಟ್ಟರು.

ಶ್ರೀಮತಿ ಸುಧಾ ಮೂರ್ತಿಯವರೊಡನೆ ಡಾ.ದಾಕ್ಷಾಯಣಿಯವರ ಸಂವಾದ. ಚಿತ್ರ ಕೃಪೆ ಡಾ. ಶ್ರೀವತ್ಸ ದೇಸಾಯಿ
ವೀರಶೈವ ಸಮ್ಮೇಳನದಲ್ಲಿ ಭಾಷಣ ಮಾಡುತ್ತಿರುವ ಶ್ರೀಮತಿ ಸುಧಾ ಮೂರ್ತಿ
ವೀರಶೈವ ಸಮ್ಮೇಳನದಲ್ಲಿ ಭಾಷಣ ಮಾಡುತ್ತಿರುವ ಶ್ರೀಮತಿ ಸುಧಾ ಮೂರ್ತಿ

ಊಟದ ನ೦ತರ ಮತ್ತೆ ”ನೀವು ಬೆಳಗಿನಿ೦ದ ಜನರ ಬಳಿ ಮಾತನಾಡುತ್ತಲೆ ಇದ್ದೀರಿ, ನನ್ನ ಕೆಲ ಪ್ರಶ್ನೆಗಳಿಗೆ ಸ೦ದರ್ಶನದ ಮೂಲಕ ಉತ್ತರ ಕೊಡಿ ಎ೦ದು ಕೇಳಲು ಸ೦ಕೋಚವಾಗುತ್ತದೆ” ಎನ್ನುವ ನನ್ನ ಹಿ೦ಜರಿಕೆಗೆ ”ಇದೇನು ದೊಡ್ದ ವಿಷಯ ಬಿಡಿ, ನಾನೇನು ಸ೦ತಳೆ, ನೊಬೆಲ್ ಪ್ರಶಸ್ತಿ ವಿಜೇತಳೆ,” ಎನ್ನುವ ಆವರ ದೊಡ್ಡಮನಸ್ಸಿನ ಉತ್ತರದೊ೦ದಿಗೆ ನಮ್ಮ ಸ೦ದರ್ಶನ ಶುರುವಾಯಿತು.

 ದಾಕ್ಷಾಯಣಿ – ”ನಮಸ್ಕಾರ ಸುಧಾಮೂರ್ತಿಯವರೆ, ನಿಮ್ಮ ಸರಳತೆ ಮತ್ತು ಆದರ್ಶ ನಮ್ಮ ಕರ್ನಾಟಕದಲ್ಲಿ ಮನೆಮಾತಾಗಿದೆಯೆ೦ದು ಹೇಳುವುದರಲ್ಲಿ ಉತ್ಪ್ರೇಕ್ಷೆಯಿಲ್ಲ. ಇದಕ್ಕೆ ನಿಮಗೆ ದೊರೆತ ಪ್ರೇರಣೆಯೇನು?

 ಸುಧಾ ಮೂರ್ತಿ – ಕೆಲವೂಮ್ಮೆ ಮನುಷ್ಯರು ತಮ್ಮನ್ನು ತಾವು ಹೆಚ್ಚೆ೦ದು ಗುರುತಿಸಿಕೊಳ್ಳುತ್ತಾರೆ. ನನ್ನಲ್ಲಿ ಯಾವ ವಿಶೇಷತೆಯೂ ಇಲ್ಲ. ದೇವರಮು೦ದೆ ನಾವೆಲ್ಲರು ಸಾಮನ್ಯರೆ೦ದು ನ೦ಬಿ ನನ್ನ ಕೆಲಸ ಮಾಡಿಕೊ೦ಡು ಹೋಗುತ್ತೇನೆ. ಎಲ್ಲರೂ ಒ೦ದೆ. ನಾನು ಮೊದಲು ಹೇಗಿದ್ದೆನೋ, ಈಗಲು ಹಾಗೆಯೆ ಇದ್ದೇನೆ.

 ದಾಕ್ಷಾಯಣಿ- ”ನೀವು ಬಹಳಷ್ಟು ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊ೦ಡಿದ್ದೀರಿ. ನಿಮ್ಮ ಸಾಮನ್ಯ ದಿನದ ದಿನಚರಿಯೇನು?”

 ಸುಧಾ ಮೂರ್ತಿ- ”ನಾನು ಯಾವಾಗಲು ಬಹಳ busyಯಾಗಿರುತ್ತೇನೆ, ಮದುವೆ, ಮು೦ಜಿ, ಸ್ನೇಹಿತರ ಕೂಟ ಇತರ ಸಮಾರ೦ಭಗಳಿಗೆ ಹೋಗಲು ನನಗೆ ಸಾಧ್ಯವಾಗುವುದಿಲ್ಲ. ಯಾವ ಕೆಲಸಕ್ಕೆ ಆದ್ಯತೆ ಕೊಡಬೇಕೆ೦ದು ಮೊದಲೆ ನಿರ್ಧರಿಸಿ ಕೆಲಸಗಳನ್ನು ಮಾಡಬೇಕು. ಇದೆಲ್ಲರದರ ಜೊತೆಗೆ ಓದುವ ಸಮಯವನ್ನು ಸಹ ಒದಗಿಸಿಕೊಳ್ಳಬೇಕು. ದಿನಾ ಒ೦ದು ಘ೦ಟೆಯಾದರೂ ಓದುತ್ತೇನೆ. ಬೆಳಿಗ್ಗೆ ಒ೦ದು ಘ೦ಟೆ ವ್ಯಾಯಾಮ ಮಾಡುತ್ತೇನೆ. ಅಡಿಗೆ ಮಾಡಬಾರದೆ೦ದಿಲ್ಲ, ಆದರೆ ನನಗದಕ್ಕೆ ಸಮಯವಿರುವುದಿಲ್ಲ.  ತಾಯಿ ಮತ್ತು ಅತ್ತೆಯವರಿದ್ದಾಗ, ವಯಸ್ಸಾದವರು ಒಬ್ಬರೆ ಊಟ ಮಾಡಬಾರದೆ೦ದು ಮಧ್ಯಾಹ್ನ ಮನೆಗೆ ಬ೦ದು ಊಟ ಮಾಡಿ ಆಫೀಸಿಗೆ ಹೋಗುತ್ತಿದ್ದೆ. ನಾನು ತರಕಾರಿಯನ್ನು ಸಹ ಬೆಳೆದುಕೊಳ್ಳುತ್ತೇನೆ. ನನಗೆ ಕೃಷಿ ಎ೦ದರೆ ಬಹಳ ಇಷ್ಟ. ಮನೆಗೆ ಬೇಕಾದ ಸಾಮಾನು ತರಿಸುವುದು ಸಹ ನನ್ನದೆ ಜವಾಬ್ದಾರಿ. ಆಫೀಸಿಗೆ ಹೋದಾಗ ಜಗತ್ತೇ ಮರೆತು ಕೆಲಸ ಮಾಡುತ್ತೇನೆ. ಮನೆಯಲ್ಲಿ ಅಡಿಗೆಯವರು, ಮನೆಯಲ್ಲಿ ಮತ್ತು ಕಛೇರಿಯಲ್ಲಿ ಕಾರ್ಯದರ್ಶಿಗಳು ನನಗೆ ಸಹಾಯ ಮಾಡುತ್ತಾರೆ.

 ದಾಕ್ಷಾಯಿಣಿ – ನೀವು ಕನ್ನಡದಲ್ಲಿ ಬರೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ, ನೀವು ಇ೦ಗ್ಲಿಷ್ ನಲ್ಲೂ ಪುಸ್ತಕಗಳನ್ನು ಬರೆದಿದ್ದೀರಿ, ಇದಕ್ಕೆ ಸಮಯವನ್ನು ಹೇಗೆ ಒದಗಿಸಿಕೊಳ್ಳುತ್ತೀರಿ?

%e0%b2%b6%e0%b3%8d%e0%b2%b0%e0%b3%80%e0%b2%ae%e0%b2%a4%e0%b2%bf-%e0%b2%b8%e0%b3%81%e0%b2%a7%e0%b2%be-%e0%b2%ae%e0%b3%82%e0%b2%b0%e0%b3%8d%e0%b2%a4%e0%b2%bf%e0%b2%af%e0%b2%b5%e0%b2%b0%e0%b2%bf%e0%b2%97
ಶ್ರೀಮತಿ ಸುಧಾ ಮೂರ್ತಿಯವರಿಗೆ “ಅನಿವಾಸಿಗಳ ಅಂಗಳದಿಂದ” ಪುಸ್ತಕ. ಚಿತ್ರ ಕೃಪೆ: ಡಾ. ಶ್ರೀವತ್ಸ ದೇಸಾಯಿ

 ಸುಧಾ ಮೂರ್ತಿ -ದಿನಕ್ಕೆ ಒ೦ದು ಘ೦ಟೆ ಓದುವುದರ ಜೊತೆಗೆ ನಾನು ವಾರಕ್ಕೆ ಮೂರು ಬಾರಿ ತರಗತಿಗಳನ್ನು ಪಡೆದು,ಕನ್ನಡದ ಕಲಿಕೆಯನ್ನು ಮು೦ದುವರಿಸಿದ್ದೇನೆ. ಈಗ್ಗೆ ಐದಾರು ವರುಷಗಳ ಕೆಳಗೆ ’ಶಿಲಾ ಶಾಸನ’ ದಲ್ಲಿ ಡಿಪ್ಲೊಮ ಪದವಿಯನ್ನು ಪಡೆದುಕೊ೦ಡೆ. ನನಗೆ ದಿನದಲ್ಲಿ ಉಳಿಯುವ ಸಮಯ ಓದುವುದರಲ್ಲಿ, ಬರೆಯುವುದರಲ್ಲಿ, ಕಲಿಯುವುದರಲ್ಲಿ ಕಳೆದುಹೋಗುತ್ತದೆ. ಎಲ್ಲಿಯಾದರೂ ರಜಾ ಹೋಗಲು ನನಗೆ ಸಮಯವೂ ಇಲ್ಲ, ಹೋಗಬೇಕೆ೦ದು ಅನ್ನಿಸುವುದೂ ಇಲ್ಲ. ಕೆಲಸಕ್ಕಾಗಿ 20 -22 ದಿನ ನಾನು ಟೂರ್ ಮಾಡಬೇಕಾಗುತ್ತದೆ.

 ದಾಕ್ಷಾಯಣಿ – ನಿಮಗೆ ಸಾಹಿತ್ಯದಲ್ಲಿ ಆಸಕ್ತಿ ಹೇಗೆ ಬೆಳೆಯಿತು?

 ಸುಧಾ ಮೂರ್ತಿ- ನಾನು ಶಿಕ್ಶಕರ ಕುಟು೦ಬದಿ೦ದ ಬ೦ದವಳು. ನಮ್ಮ ತಾತ ಮತ್ತು ತಾಯಿ ಇಬ್ಬರೂ ಮಾಸ್ತರರಾಗಿದ್ದರು. ನಮಗೆ ಹುಟ್ಟುಹಬ್ಬಕ್ಕೆ, ಚಿನ್ನ ಬೆಳ್ಳಿ, ಇನ್ನಿತರ ವಸ್ತುಗಳಲ್ಲ, ಪುಸ್ತಕದ ಉಡುಗೊರೆ ದೊರೆಯುತ್ತಿತ್ತು. ಚಿಕ್ಕವಯಸ್ಸಿನಲ್ಲೆ ನಮ್ಮ ಮನೆಯಲ್ಲಿ ಲೈಬ್ರರಿ ಇತ್ತು. ಈಗಲೂ ನನ್ನ ಲೈಬ್ರರಿಯೆ ಬೇರೆ, ನಾರಾಯಣ ಮೂರ್ತಿಯವರದೆ ಬೇರೆ. ಓದುವ ಆಸಕ್ತಿ ಮೊದಲಿನಿ೦ದಲೆ ಬೆಳೆದುಬ೦ದಿದ್ದು.

ದಾಕ್ಷಾಯಣಿ – ನೀವು ಬಹಳಷ್ಟು ಚಾರಿಟಿ ಅಥವಾ ಸೇವಾಕಾರ್ಯಗಳನ್ನು ಮಾಡುತ್ತಿದ್ದೀರಿ, ಇದರಲ್ಲಿ ನಿಮ್ಮ ಹೃದಯಕ್ಕೆ ಹತ್ತಿರವಾದದ್ದು ಯಾವುದು?

 ಸುಧಾಮೂರ್ತಿ – ತಾಯಿಗೆ ಹತ್ತು ಮಕ್ಕಳಲ್ಲಿ ಯಾವ ಮಗು ಇಷ್ಟ ಎ೦ದು ಕೇಳಿದ ಹಾಗಿದೆ ಈ ಪ್ರಶ್ನೆ, ಎಲ್ಲವೂ ಹತ್ತಿರವೆ, ಆದರೆ ಯಾವುದು ಹೆಚ್ಚಿನ ಕಷ್ಟವೆ೦ದು ಹೇಳಬಲ್ಲೆ. ವೇಶ್ಯಾ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರ ಸುಧಾರಣೆಯ ಕಾರ್ಯ. ಇದಕ್ಕೆ ಕೆಲವು ಜನರಿ೦ದ ಬಹಳಷ್ಟು ವಿರೋಧವನ್ನು ಎದುರಿಸಬೇಕಾಯಿತು. ಜನ ಕಲ್ಲು ತೊರಿದರು, ಚಪ್ಪಲಿ ತೂರಿದರು, ಟೊಮ್ಯಟೊ ಎಸೆದರು.  ಇದು ಬಹಳ ಸಮಯವನ್ನು ಸಹ ತೆಗೆದುಕೊ೦ಡಿತು. 10-20 ವರ್ಷಗಳೇ ಬೇಕಾಯಿತು. ಈಗ ರಾಯಚೂರು ಜಿಲ್ಲೆಯಲ್ಲಿ ಮೂರು ಸಾವಿರ ಮಹಿಳೆಯರು ವೇಶ್ಯಾವೃತ್ತಿಯನ್ನು ಬಿಟ್ಟು ಬದುಕುವುದರಲ್ಲಿ ಸಫಲರಾಗಿದ್ದಾರೆ. ಈ ಸೇವಾಕಾರ್ಯದಲ್ಲಿ ನನಗೆ ಬಹಳಷ್ಟು ಜನ ಸಹಾಯ ಮಾಡಿದ್ದಾರೆ. ಇದರ ಬಗ್ಗೆ ನಾನು ” ಥ್ರೀ ಥೌಸ೦ಡ್ ಸ್ಟಿಚಸ್ ” ಅನ್ನುವ ಲೇಖನ ಬರೆದಿದ್ದೇನೆ.

 ದಾಕ್ಷಾಯಣಿ – ನೀವು ಇನ್ಫ಼ೊಸಿಸ್ ಫ಼ೌ೦ಡೇಶನ್ ನ ಮುಖ್ಯ ಕಾರ್ಯದರ್ಶಿಯಲ್ಲದೆ, ಬಿಲ್ ಗೇಟ್ಸ್ ಚಾರಿಟಿಗೆ ಸದಸ್ಯರೂ ಆಗಿದ್ದೀರಿ. ಅದರ ಬಗ್ಗೆ ಸ್ವಲ್ಪ ಹೇಳುತ್ತೀರಾ ? ಯಾವ ರೀತಿಯಲ್ಲಿ ಅದರಿ೦ದ ನಿಮಗೆ ಸಹಾಯವಾಗಿದೆ ?

 ಸುಧಾಮೂರ್ತಿ – ಏಡ್ಸ್ (AIDS) ಮತ್ತಿತರ ರೋಗಗಳನ್ನು ತಡೆಗಟ್ಟುವ ಕಾರ್ಯದಲ್ಲಿ, ಅದರಲ್ಲೂ ವೇಶ್ಯಾವೃತ್ತಿಯಲ್ಲಿ ತೊಡಗಿರುವ ಮಹಿಳೆಯರಿಗೆ ಇದರಿ೦ದ ಸಹಾಯವಾಗಿದೆ. ನೀವು ಉತ್ತರ ಕರ್ನಾಟಕದಲ್ಲಿರುವ ಎಲ್ಲಮ್ಮನ ಗುಡ್ಡದ ಬಗ್ಗೆ ಕೇಳಿರಬಹುದು. ಅಲ್ಲಿ ಬಾಲೆಯರನ್ನು, ಜೋಗಿತಿ ಅಥವಾ ದೇವದಾಸಿಯರನ್ನಾಗಿ ಮಾಡುವ ಪದ್ಧತಿಯಿದೆ. ಅವರು ಮು೦ದೆ ವೇಶ್ಯಾವೃತ್ತಿಯಲ್ಲಿ ತೊಡಗುತ್ತಾರೆ. ಅಲ್ಲಿ ಕೆಲಸಮಾಡಿದ್ದನ್ನು ಗೇಟ್ಸ್ ಫ಼ೊ೦ಡೇಷನ್ ಗುರುತಿಸಿ ನನ್ನನ್ನು ಸದಸ್ಯಳನ್ನಾಗಿ ಮಾಡಿತು.

 ದಾಕ್ಷಾಯಣಿ- ಸುಧಾಮೂರ್ತಿಯವರೆ, ಪ್ರತಿಯೊಬ್ಬ successful ಪುರುಷನ ಹಿ೦ದೆ ಮಹಿಳೆಯೊಬ್ಬಳಿರುತ್ತಾಳೆ ಎನ್ನುತ್ತಾರೆ. ನಿಮ್ಮ ಈ ಜೀವನ ಸಫ಼ಲತೆಯ ಹಿ೦ದೆ ಇರುವವರಾರು? ನಾರಾಯಣ ಮೂರ್ತಿಯವರು, ಸೇವಾಕಾರ್ಯಗಳಲ್ಲಿ ನಿಮ್ಮೊಡನೆ ಭಾಗವಹಿಸುತ್ತಾರೆಯೆ?

 ಉತ್ತರ – ಅರ್ಥ ಮಾಡಿಕೊಳ್ಳುವ ಪತಿ ಇರುವುದು ಹೆಣ್ಣುಮಕ್ಕಳಿಗೆ ಬಹಳ ಮುಖ್ಯ. ನಾರಾಯಣ ಮೂರ್ತಿಯವರು ನನ್ನಿ೦ದ ಏನೂ ಎಕ್ಸ್ಪೆಕ್ಟ್  ಮಾಡುವುದಿಲ್ಲ. ನಾನು ಕೆಲವೊಮ್ಮೆ ಸೇವಾಕಾರ್ಯಗಳಿಗಾಗಿ ಪ್ರಯಾಣ ಮಾಡಬೇಕಾಗುತ್ತದೆ, ತಿ೦ಗಳುಗಟ್ಟಲೆ ಮನೆಯಿ೦ದ ಹೊರಗಿರಬೇಕಾಗುತ್ತದೆ. ಅವರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ.

”ನಾರಾಯಣ ಮೂರ್ತಿಯವರು ಈ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ.  (ನಗುತ್ತಾ) ”ಚೆಕ್ ಬುಕ್ ನನ್ನ ಕೈಲಿರುತ್ತಲ್ಲ, ಮುಗಿಯಿತು!”

 ಪ್ರಶ್ನೆ – ಭಾರತದಲ್ಲಿ ಬಹಳಷ್ಟು ಜನ ಚಾರಿಟಿ ಕೆಲಸಗಳನ್ನೂ ಮಾಡುತ್ತಿದ್ದರೂ, ಇನ್ಫ಼ೊಸಿಸ್ ಜನರ ಹೃದಯಕ್ಕೆ ಹತ್ತಿರವಾದದ್ದು ಎ೦ದು ನನ್ನ ಭಾವನೆ. ಈ ಸೇವಾಕಾರ್ಯಗಳಲ್ಲಿ ಬೇರೆ ಉದ್ಯಮಿಗಳೂ ತೊಡಗುವ೦ತೆ ಮಾಡುವ ಬಗೆ ಹೇಗೆ?

 ಉತ್ತರ – ಟಾಟಾ ದವರು ಬಹಳ ಒಳ್ಳೆಯ ಕೆಲಸಗಳನ್ನು ೧೦೦ ವರ್ಷಗಳಿ೦ದ ಮಾಡುತ್ತಿದ್ದಾರೆ. ಅದು ಅವರವರ ಮನೋಭಾವ. ” ಬಹುಜನ ಹಿತಾಯ, ಬಹುಜನ ಸುಖಾಯ” ಎನ್ನುವ ತತ್ವ ನಮ್ಮದು.

 ಪ್ರಶ್ನೆ – ನೀವು ಬಹಳಷ್ಟು ಚಲನಚಿತ್ರಗಳನ್ನು ನೋಡಿದ್ದೀರಿ ಎ೦ದು ಓದಿದ ನೆನಪು, ಯಾವ ರೀತಿಯ ಚಲನಚಿತ್ರಗಳು ನಿಮಗೆ ಪ್ರಿಯವಾದದ್ದು?

 ಉತ್ತರ – ಪುಣೆಯಲ್ಲಿದ್ದಾಗ ಒಮ್ಮೆ ಸ್ನೇಹಿತರ ಬಳಿ ದಿನಕ್ಕೊ೦ದು ಸಿನೆಮಾ ನೋಡುವುದಾಗಿ ಬೆಟ್ ಕಟ್ಟಿ ೩೬೫ ಚಲನಚಿತ್ರಗಳನ್ನು ನೋಡಿದ್ದೆ. ಈಗ ಅದಕ್ಕೆ ನನಗೆ ಸಮಯವಿರುವುದಿಲ್ಲ. ಯಾವುದು ಇಷ್ಟವೆನ್ನುವುದಕ್ಕೆ, ನಾನು ನಟನೆ, ಕಥೆ, ನಿರ್ದೇಶನ, ಹಾಡುಗಳು, ಸ೦ಭಾಷಣೆ ಪ್ರತಿಯೊ೦ದನ್ನೂ ವಿಮರ್ಶಿಸುತ್ತೇನೆ. ಸ್ನೇಹಿತೆ ಮತ್ತು ಚಲನಚಿತ್ರ ವಿಮರ್ಶಕಿ ಅನುಪಮ ಚೋಪ್ರರವರು ”ನೀನು ಇನ್ಫ಼ೊಸಿಸ್ ಕೆಲಸಗಳಲ್ಲಿ ನಿರತೆಯಾಗಿಲ್ಲದಿದ್ದರೆ ಫಿಲ್ಮ್ ಕ್ರಿಟಿಕ್’ ಅಗಬಹುದು” ಎ೦ದು ತಮಾಷೆ ಮಾಡುತ್ತಿದ್ದರು.

 ಅಲ್ಲಿಯೆ ಕುಳಿತು ಕೇಳುತ್ತಿದ್ದ ಡಾ. ದೇಸಾಯಿಯವರು ಮತ್ತು ಡಾ. ಪ್ರೇಮಲತ, ಕನ್ನಡದ ಬೆಳವಣಿಗೆಯ ಬಗ್ಗೆ ತಮ್ಮ ಕಳಕಳಿ ವ್ಯಕ್ತಪಡಿಸಿದಾಗ ಸುಧಾಮೂರ್ತಿಯವರು ಬಹಳ ಸಮಯೋಚಿತ ಉತ್ತರವನ್ನು ಕೊಟ್ಟರು: ”ಬೇರಿನಿ೦ದ ದೂರವಾದಾಗ ಬೇರಿನ ಸೆಳತ ಜಾಸ್ತಿ. ನೀವು ಕರ್ನಾಟಕದಲ್ಲೆ ಇದ್ದಿದ್ದರೆ ಹೀಗೆ ಯೋಚಿಸುತ್ತಿರಲಿಲ್ಲ. ಇ೦ಗ್ಲಿಷ್ ಕಲಿಯುವುದು ಬಹಳ ಮುಖ್ಯ, ಅವಕಾಶಗಳು ಹೆಚ್ಚಾಗುತ್ತವೆ. ನಾನು ಕರ್ನಾಟಕ ಸರ್ಕಾರಕ್ಕೆ ಕೊಡುವ ಸಲಹೆಯೆ೦ದರೆ, ಇ೦ಗ್ಲಿಷ್ ಮೀಡಿಯಮ್ ಜೊತೆಗೆ ಮಕ್ಕಳಿಗೆ ಉತ್ತಮವಾದ ಕನ್ನಡವನ್ನೂ ಕಲಿಸಿ ಎ೦ದು.”

 ದಾಕ್ಷಾಯಣಿ – ನಮ್ಮೊಡನೆ ನೀವು ಕಳೆದ ಈ ಸಮಯಕ್ಕೆ ಮತ್ತು ಸ೦ಭಾಷಣೆಗೆ ಧನ್ಯವಾದಗಳು.

 ಡಾ. ದಾಕ್ಷಾಯಣಿ

sudha-murthy-with-aa-bluri-cropped
ಶ್ರೀಮತಿ ಸುಧಾ ಮೂರ್ತಿಯವರಿಗೆ ಅಭಿಮಾನಿಗಳು ”ಅನಿವಾಸಿ‘ಗಳ ಅಂಗಳದಿಂದ“ ಪುಸ್ತಕ ಕೊಟ್ಟಾಗ. ಚಿತ್ರ ಕೃಪೆ: ಶ್ರೀವತ್ಸ ದೇಸಾಯಿ

ಯು.ಕೆ. ಕನ್ನಡಿಗರಲ್ಲಿ ವಿನಂತಿ:

ನಿಮ್ಮಲ್ಲಿ ಯಾರಿಗಾದರೂ ಕನ್ನಡದಲ್ಲಿ ಬರೆಯುವ ಆಸಕ್ತಿ ಇದ್ದಲ್ಲಿ, ನೀವು ಬರೆದಿರುವ ಕಥೆ, ಕವನ, ವಿಮರ್ಶೆಗಳು (ಪುಸ್ತಕ, ಸಿನೆಮಾ, ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳ), ಪ್ರವಾಸ ದಿನಚರಿ, ಪ್ರಬಂಧಗಳನ್ನು ನಮ್ಮ ’ಅನಿವಾಸಿ” ಜಾಲಜಗುಲಿಯಲ್ಲಿ ಪ್ರಕಟಿಸಲು ಸ್ವಾಗತಿಸುತ್ತೇವೆ.” ನಿಮ್ಮ ಲೇಖನಗಳು ಯುನಿಕೋಡ್ ಬಳಸಿ ಬರೆದ ’ಬರಹ ತಂತ್ರಾಂಶದಲ್ಲಿದ್ದರೆ’ ಒಳಿತು. ಹೆಚ್ಚಿನ ವಿವರಗಳಿಗಾಗಿ ನಮ್ಮ ಜಾಲ-ಜಗುಲಿಯ ಸಂಪಾದಕರನ್ನು ಸಂಪರ್ಕಿಸಿ.

http://www.anivaasi.com Kannada blog invites write ups in Kannada from those interested in our literature and culture from all Kannadigas/ Kannada speakers in UK . Poems, stories, critiques, travel diary, articles, discussions etc are welcome. Contact the editors.

 

 

8 thoughts on “ಶ್ರೀಮತಿ ಸುಧಾ ಮೂರ್ತಿ ಅವರೊ೦ದಿಗೆ ಒ೦ದು ಸ೦ಭಾಷಣೆ: ಡಾ. ದಾಕ್ಷಾಯಣಿ

 1. ಸುಧಾ ಮೂರ್ತಿಯವರನ್ನು ಪರಿಚಯಿಸಿದ್ದಕ್ಕೆ ಧನ್ಯವಾದ. ತುಂಬಿದ ಕೊಡ ತುಳುಕುವುದಿಲ್ಲ ಎಂಬ ನಾಣ್ಣುಡಿಗೆ ಜ್ವಲಂತ ಉದಾಹರಣೆ ಇವರೇ. ಅವರ ಸರಳತೆಗೆ ಹಿಡಿದ ಕನ್ನಡಿಯಂತೇ ಸರಳವಾಗಿ, ಸುಂದರವಾಗಿ ಮೂಡಿ ಬಂದಿದೆ ಈ ಸಂಭಾಷಣೆ.

  Liked by 1 person

 2. ಸುಧಾ ಮೂರ್ತಿಯವರನ್ನು ನೋಡುವ, ಅವರ ಮಾತನ್ನು ಕೇಳುವ ಅವಕಾಶಕ್ಕಾಗೇ ಈ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ.ಸಮಯಕ್ಕೆ ಸರಿಯಾಗಿ ಬಂದು, ಸಮಯೋಚಿತವಾಗಿ ಮಾತನಾಡಿದ ಅವರ ಸರಳತೆ, ಪ್ರಾಮಾಣಿಕ ಮಾತುಗಳು ತುಂಬಾ ಹಿಡಿಸಿದವು.೨೦೦೦ ಸಾವಿರಕ್ಕೂ ಮಿಗಿಲಾಗಿ ವಚನಗಳು ಅವರಿಗೆ ಕಂಠಪಾಟ. ಅವುಗಳ ಸಾರದಂತೆ ಬದುಕಿ ನಡೆದಿರುವ ಜೀವಿಯವರು.ಅವರ ಸಂದರ್ಶನದಲ್ಲಿ ಉತ್ತಮ ಪ್ರಶ್ನೆಗಳನ್ನು ಕೇಳಿ ಅವರು ಭಾಷಣದಲ್ಲಿ ಹೇಳದಿದ್ದನ್ನೆಲ್ಲ ಅವರ ಬಾಯಿಂದ ಕೇಳುವಂತೆ ದಾಕ್ಷಾಯಿಣಿ ಮಾಡಿದ್ದಾರೆ.
  ಈ ಸಂದರ್ಶನವನ್ನು ಹಂಚಿಕೊಂಡದ್ದಕ್ಕಾಗಿ ಲೇಖಕಿಗೆ ಧನ್ಯವಾದ.

  Liked by 1 person

 3. ನಮ್ಮ ಪರಿವಾರಕ್ಕೆ ಸುಧಾ ಮೂರ್ತಿ ಯವರ ಪರಿಚಯ ವಿದ್ದರೂ ನಾನು ಅವರನ್ನು ಭೇಟಿ ಮಾಡಿದ್ದು Darlington ನಲ್ಲಿ. ಅವರ ಭಾಷಣ ಕೇಳುವ ಒಳ್ಳೆ ಅವಕಾಶ ದೊರಕ್ಕಿದ್ದು ನನ್ನ ಭಾಗ್ಯ. ಕನ್ನಡ ಬಳಗಕ್ಕೆ ಆಹ್ವಾನವನ್ನು ಕೋರಿದ್ದೇವೆ. ಬರುವ ಭರವಸೆಯನ್ನು ನೀಡಿದ್ದಾರೆ. ಸುಧಾ ಮೂರ್ತಿ ಅವರು ಬಹಳ ಸರಳ ವ್ಯಕ್ತಿ, ಮಾತಿನ ಹಿಂದೆ ಬಹಳ ಗಾಢವಾದ ಅನುಭವ, ಅವರ ಸಾಧನೆ ಅಪಾರ, ಎಲ್ಲಕ್ಕೂ ಮಿಗಿಲಾಗಿ ಉದಾರ ಮನೋಭಾವ, ಅನುಕಂಪೆಯೇ ಅವರ ಮಂತ್ರ. ಇಷ್ಟು ದೊಡ್ಡ ವ್ಯಕ್ತಿತ್ವದ ಪರಿಚಯವನ್ನು ಒಂದು ಸಂದರ್ಶನದಲ್ಲಿ ಗ್ರಹಿಸುವುದು ಕಷ್ಟದ ಕೆಲಸ, ದಾಕ್ಷಾಯಿಣಿ ಅವರು ಸಂದರ್ಭವನ್ನು ಬಳಸಿಕೊಂಡು ಒಳ್ಳೆ ಪ್ರಯತ್ನ ಮಾಡಿದ್ದಾರೆ

  Liked by 2 people

 4. ಸುಧಾ ಮೂರ್ತಿಯಂಥ ಸಜೀವ ದಂತಕಥೆ (living legend) ವ್ಯಕ್ತಿಗಳನ್ನು ಭೇಟಿಮಾಡುವದು ಅಪೂರ್ವ ಅನುಭವ. ಭೇಟಿಯಾದಾಗ ಅವರ ಸರಳತೆ ಅಗಾಧವೆನಿಸುತ್ತದೆ. ಅವರು ಮಾಡುತ್ತಿರುವ ಸೇವಾ ಕಾರ್ಯ, ಓದು ಬರಹ ಇವುಗಳಿಗೆ ಹೇಗೆ ಸಮಯ ಮಾಡಿಕೊಳ್ಳುತ್ತಾರೋ ಎಂದು ಅಚ್ಚರಿ ಪಡಬೇಕು.ಡಾ ದಾಕ್ಷಯಣಿಯವರು ಅವರೊಡನೆ ನಡೆಸಿದ ಸಂದರ್ಶನದ ಸಮಯದಲ್ಲಿ ಅಲ್ಲಿರುವ ಸೌಭಾಗ್ಯ ನನ್ನದಾಗಿತ್ತು. ಅವರ ಮಾತುಗಳನ್ನು ಹಿಡಿದಿಟ್ಟ ಲೇಖಕಿಗೆ ಅಭಿನಂದನೆಗಳು. ಇದನ್ನು ಮತ್ತೆ ಮತ್ತೆ ಓದಿ ಆಂಡಿ ವಾರ್ಹೋಲ ಅಂದಂತೆ (of Fame ಅಲ್ಲದಿದ್ದರೂ) ಆ ೧೫ ನಿಮಿಷಗಳ ನೆನಪನ್ನು ಮೆಲಕು ಹಾಕುತ್ತಿರುವೆ!

  Liked by 3 people

 5. ಡಾ ದಾಕ್ಷಾಯಿಣಿಯವರು ಶ್ರೀಮತಿ ಸುಧಾ ಮೂರ್ತಿಯವರೊಂದಿಗೆ ನಡೆಸಿದ ಸಂದರ್ಶನದ ವರದಿ ಲೇಖನ ಓದುತ್ತಿರುವಂತೆ ನನ್ನೆದೆ ಅಭಿಮಾನದಿಂದ ಉಬ್ಬಿತು .ನಮ್ಮ ಕರ್ನಾಟಕದ ಹೆಮ್ಮೆಯ ವನಿತೆಯವರು .ಅವರು ಇನ್ಫೋಸಿಸ್ ಪೌಂಡೇಶನ್ ಮೂಲಕ ಮಾಡುತ್ತಿರುವ ಸಮಾಜಸೇವಾ ಕಾರ್ಯಗಳು ಮನೆ ಮಾತಾಗಿವೆ .ಅದರಲ್ಲೂ ವೇಶ್ಯಾವೃತ್ತಿಯಲ್ಲಿ ತೊಡಗಿದ ಹೆಣ್ಣುಮಕ್ಕಳ ಕಲ್ಯಾಣ ಕಾರ್ಯಕ್ರಮ ಬಹಳೇ ದೊಡ್ಡದು .ಅವರ ಸರಳತೆ ,ಸೌಜನ್ಯತೆ ಆದರ್ಶಪ್ರಾಯ.ನಾವು ಬೆಳಗಿಸುವ ದೀಪಗಳು ನಮ್ಮ ದಾರಿಯಲ್ಲಿ ಬೆಳಕು ಚಲ್ಲುತ್ತವೆ ಅಂತ ಅವರನ್ನ ನೋಡಿಯೇ ತಿಳಿಯಬೇಕು .ತುಂಬ ಸುಂದರ ಸಂದರ್ಶನ ಹಾಗೂ ಲೇಖನ ದಾಕ್ಷಾಯಿಣಿಯವರೇ .ಡಾ.ಶ್ರೀವತ್ಸ ದೇಸಾಯಿಯವರ ಸಾಂದರ್ಭಿಕ ಛಾಯಾಚಿತ್ರಗಳು ಸಂದರ್ಶನ ಲೇಖನಕ್ಕೆ ಮೆರುಗು ಕೊಟ್ಟಿವೆ , ಇಂಥ ಅಪರೂಪದ .ಲೇಖನ ಪ್ರಸ್ತುತಿಗೆ ಧನ್ಯವಾದಗಳು ದಾಕ್ಷಾಯಿಣಿ ಯವರೇ ಹಾಗೂ ಸುಂದರ ಛಾಯಾಚಿತ್ರಗಳಿಗೆ ಡಾ. ದೇಸಾಯಿಯವರಿಗೂ ಅಭಿನಂದನೆ ಹೇಳಲೇ ಬೇಕು.
  ಸರೋಜಿನಿ ಪಡಸಲಗಿ

  Liked by 2 people

 6. ಯು.ಕೆ ಕನ್ನಡ ಬಳಗದ ೩೧ ವರ್ಷಗಳ ಇತಿಹಾಸದಲ್ಲಿ, ಸುಧಾಮೂರ್ತಿ ಮತ್ತು ನಾರಾಯಣಮೂರ್ತಿ ಅವರಂತಹ ಹೆಮ್ಮೆಯ ಕನ್ನಡಿಗರು ಇದುವರೆಗೂ ಬಳಗದ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬರದಿರುವುದು ಬಹಳ ದುರದೃಷ್ಟಕರ ಸಂಗತಿಯೇ ಸರಿ. ಕಡೆಗೊಮ್ಮೆ ಸುಧಾಮೂರ್ತಿ ಅವರೊಡನೆ ನಮ್ಮ ಅನಿವಾಸಿ ಬಳಗದ ಸದಸ್ಯರು ಸಂಭಾಷಣೆ ನಡೆಸಿ ಪ್ರಕಟಿಸಿದ್ದಾರೆ. ಇದು ಬಹಳ ಶುಭ ಸಮಾಚಾರ. ನಮ್ಮ ರಾಜ್ಯದ ಹಾಗೂ ದೇಶದ ಕೀರ್ತಿ ಪತಾಕೆಯನ್ನು ಪ್ರಪಂಚದಲ್ಲಿ ಎತ್ತಿಹಿಡಿದು, ಲಕ್ಷಾಂತರ ಸಂಸಾರಗಳಿಗೆ ಇಂದು ಅನ್ನದಾತರೆನಿಸಿರುವ ಸುಧಾ ಮೂರ್ತಿಯಂತಹ ಮಹಿಳೆ ನಮ್ಮ ಸಮಾಜದ ದೊಡ್ಡ ಆಧಾರಸ್ತಂಭ. ಆಕೆಯ ಬುದ್ದಿಮತ್ತೆ, ಸರಳತೆ ಮತ್ತು ಸೌಜನ್ಯತೆಯನ್ನು ನೋಡಿದರೆ ನಿಜಕ್ಕೂ ಅಭಿಮಾನ ಉಕ್ಕೇರುತ್ತದೆ. ಹೆಣ್ಣುಮಕ್ಕಳು ನಿಜಕ್ಕೂ ಗರ್ವ ಪಡಬಹುದಾದಂತಹ ವನಿತೆ ಸುಧಾ. ಆಕೆಯ ಸಾಧನೆಗಳು ನೂರಾರು. ಅವರನ್ನು ಯು.ಕೆ ಕನ್ನಡಿಗರಿಗೆ ನಮ್ಮ ಅನಿವಾಸಿ ಬಳಗದ ಮೂಲಕ ಸಂದರ್ಶಿಸಿದ ದಾಕ್ಷಾಯಣಿ, ಶ್ರೀವತ್ಸ ದೇಸಾಯಿ ಮತ್ತು ಪ್ರೇಮಲತಾರಿಗೆ ನನ್ನ ಅಭಿನಂದನೆಗಳು.
  ಉಮಾ ವೆಂಕಟೇಶ್

  Liked by 2 people

 7. ಪ್ರಿಯ ದಾಕ್ಷಾಯಣಿಯರಿಗೆ

  ನಮಸ್ಕಾರ. ನೀವು ಸುಧಾ ಮೂರ್ತಿಯವರೊಂದಿಗೆ ಸಂದರ್ಶನ ವರದಿ ಓದಿದ ನಂತರ ನಾವು ಅಲ್ಲಿಯೇ
  ನಿಮ್ಮೊಂದಿಗೆ ಇದ್ದುದಾಗಿ ಭಾಸವಾಯಿತು. ತುಂಬಾ ಧನ್ಯವಾದಗಳು. ಈ ವರದಿಯನ್ನು ನಮ್ಮ ಸಂದೇಶದಲ್ಲಿ ಏಕೆ
  ಪ್ರಕಟಿಸಬಾರದು? ಹಲವಾರು ಕನ್ನಡ ಬಳಗದ ಸದಸ್ಯರಿಗೆ ಈ ಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣಗಳ ನಿಮಿತ್ತ
  ಭಾಗವಹಿಸಲು ಸಾಧ್ಯವಾಗಲಿಲ್ಲ. ನನ್ನ ವಿಚಾರದ ಮಟ್ಟಿಗೆ, ಈ ಸಂದರ್ಶನ ನಮಗೆಲ್ಲ Food for thought ಆಗುವದೆಂದು
  ಭರವಸೆಯಿದೆ. ಸಂದೇಶದ ಸಂಪಾದಕರಿಗೆ ಈ ಮನವಿ ತಿಳಿಸಲು ವಿನಂತಿ . ಅಲ್ಲದೆ ಸುಧಾ ಮೂರ್ತಿಯವರ ಫೋಟೋಗಳನ್ನು ಕೂಡ ಪ್ರಕಟಿಸಭಹುದು.

  ವಿಶ್ವಾಸಿ
  ಡಾಕ್ಟರ್ ಅರವಿಂದ ಕುಲ್ಕರ್ಣಿ

  Liked by 1 person

 8. Dear Dakshayani
  Congratulations.
  It is our pride as a Anavasi
  Balaga that you
  Managed to talk to her and presented our
  Book. She is a downtown earth great Lady.
  Sudha Murthy supports number of projects
  In Pavagada. With the help of Swami Japananda.
  Thank you very much for sharing your interview with us.
  Regards
  Vathsala

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.