ಅವತ್ತು…. – ಬಿ ಪ್ರೇಮಲತಾ ಬರೆದ ಕವನ

ಅವತ್ತು…

ಗಂಟೆಹೊಡೆದ ಗಲಿಬಿಲಿಯಲಿ ಎಚ್ಚೆತ್ತಿತು

ಚದುರಂಗಿ ಚಂದ್ರಪ್ಪನ ಗಲಾಟೆ ವಟಾರ

“ನಾರಾಯಣೋ ನಮಸ್ತುತೆ…” ಎನ್ನುವಲ್ಲಿಗೆ

ತುಂಡಾಯ್ತು ಕಲ್ಲೇಶಿಯ ಬೆಳಗಿನ ಪ್ರಾರ್ಥನ !

 

ಕನಸು ಕಟ್ಟಿ ಎಳೆದೆಳೆದು ದಣಿದ ಮನ

ವಾರಾಂತ್ಯ ಕಳೆದು,ಕೆಲಸದ ದಿನ ಪ್ರಫುಲ್ಲ

ಕನಸಕನ್ಯೆಯ ದರುಶನಕೆ ಸಡಗರ

ಆತುರಾತುರದಿ  ಚಡಪಡಿಸಿ  ಸನ್ನದ್ಧ !

 

ಚೆಂಗನೆಗೆದು ಕನ್ನಡಿಯಲಿ ಇಣಿಕಿದಾಗ

ಕಂಡದ್ದು ಅವಳ ಬಟ್ಟಲು ಕಣ್ಣ

“ಆಯ್ಯೋ..” ಎನ್ನುವಲ್ಲಿ ಕತ್ತರಿಸಿತು

ಗಡ್ಡ ಕೆರೆವಾಗ ಇವನ ಮುದ್ದುಗಲ್ಲ !

 

ಕಾಲೇಜು ಕಳೆದು ದೊರೆತಾಗ ಕೆಲಸ

ಕ್ರಾಪು ತೀಡಿ ಹೊರಟಿದ್ದ ಯುವ ಗುಮಾಸ್ತ !

ವರ್ಷಗಳು ಕಳೆವಲ್ಲಿ ಬೋರಾಯ್ತು

ಟೇಬಲ್ಲಿಗಂಟಿದ ಕೆಲಸದ ಏಕತಾನ !

 

ಆಗಲ್ಲಿ ಕಾಲಿಟ್ಟಳು ಮಿಸ್ ನಳಿನ

ಕಂಪ್ಯೂಟರ್ ತಘ್ನೆಯಿವಳದು ಹಾಲು ಬಣ್ಣ

ಆಕೆ ನಕ್ಕಾಗ ಹೂವರಳಿದವು ಕಲ್ಲೇಶಿಯ

ಕೊರಡು ಮರದ ಟೇಬಲ್ಲಿನ ತುಂಬ !

 

ಹೂ ದಳಗಳವು ಅವಳ ಚೂಪು ಬೆರಳು

ಕಂಪ್ಯೂಟರಿನ ಗುಂಡಿಗಳನೊತ್ತಿದಾಗೆಲ್ಲ

ಹಿತವಾಗಿ ನೊಂದು ಮಿಡಿಯಿತು

ಬಿಸಿಯೇರಿ ಕಲ್ಲೇಶಿಯ ಮೈಯೆಲ್ಲ !

 

ಹಗುರ ಹೆಜ್ಜೆ ತೇಲಿಬಂತು ತನ್ನೆಡೆಗೆ

ಕಂಡಾಯ್ತು ಇವನ ಹ್ರುದಯ ನಗಾರಿ

ಕರೆಯಬಹುದೇ ಕಾಫಿಗೆ/ಕ್ಯಾಂಟೀನಿಗೆ

ಹೇಳಿಬಿಡಲೇ ಕೇಳುವ ಮುನ್ನ ‘ನಾನ್ ರೆಡಿ’ !

 

‘ಹಲೋ ’ ಎನ್ನುವಲ್ಲಿ ನೀರಾದ ಕಲ್ಲೇಶಿ

ವಯ್ಯಾರದ ಕಣ್ಣ ಕೊಂಕಿಸಿ, ದನಿಯ ಬಾಗಿಸಿ

ತಾಕೀತು ಮಾಡಿ ಎಂದಳು “ಬರಲೇಬೇಕು ತಪ್ಪದೆ”

ಕೈಯಲ್ಲಿಡುತ ಮದುವೆಯ ಕರೆಯೋಲೆ !!!

 

…………ನಂತರ

ಖಾಲಿಯಾದ ಮನದಲಿ ಚಳಿ ಕುಳಿರ್ಗಾಳಿ

ವಿವರ್ಣನವ ಅವಳ್ಯಾ ರೋ, ಒಲವೆಲ್ಲೋ

ಮುಖವನಿಟ್ಟು ಅತ್ತುಬಿಡುವ ತವಕ ಮಡಿಲಲ್ಲಿ

ಸ್ಪ ಷ್ಟ ವಾದಂತೆ  ಅಕ್ಷಿಯಲಿ ವಟಾರದ ವರಲಕ್ಷ್ಮಿ!!

 

6 thoughts on “ಅವತ್ತು…. – ಬಿ ಪ್ರೇಮಲತಾ ಬರೆದ ಕವನ

  1. ಅಯ್ಯೋ ಪಾಪ ನನಸಾಗಲಿಲ್ಲವೇ ಕಲ್ಲೇಶಿಯ ಕನಸು.
    ಕನಸುಗಳು ಕೆಲವೊಮ್ಮೆ ವಾಸ್ತವಕ್ಕಿಂತ ಚಂದವೆನಿಸಬಹುದು ಆದರೆ ನಿರಾಶೆಯ ಅಗತ್ಯವಿಲ್ಲ.
    ನಾಳೆ ರಾತ್ರಿ ಹೊಸ ಕನಸಷ್ಟೇ ಅಲ್ಲ, ನಾಳೆ ದಿನ ಹೊಸ ಗೆಳತಿಯ ಆಗಮನವೂ ಸಹ ಕಾದಿರಬಹುದು.
    ಮತ್ತೊಂದು ವಿಡಂಬನೆಯ ಕವನ ಪ್ರೇಮಲತಾರವರಿಂದ.

    Like

  2. ಎಳೆಯ ಯುವ ಹೃದಯಗಳಲ್ಲಿ ಮೂಡುವ ಆಕರ್ಷಣೆಯ ,ಪ್ರೇಮಾಂಕುರದ ಸಹಜ ,ಸುಂದರ ಚಿತ್ರಣ ಪ್ರೇಮಲತಾ ಅವರೇ.ಒಲವಿನ ಕನಸುಗಳ ಹೆಣೆಯುವಲ್ಲಿ ಮಗ್ನನಾದ ಕಲ್ಲೇಶಿಗೆ ,ನಳಿನ ನಗು ನಗುತ್ತ ಲಗ್ನಪತ್ರಕೆಯಿತ್ತಾಗ ಹೃದಯ ಭಗ್ನವಾದ ಕಲ್ಲೇಶಿಗೆ ಪಾಪ ! ಅನ್ನಲೇ? ಮತ್ತೆ ಕನಸಿನ ಕನ್ಯೆಯ ಕನಸುಗಳಲ್ಲಿ ಮುಳುಗಿದನಾ?ಬೇಗ ವಠಾರದ ವರಲಕ್ಷ್ಮಿಯ ಅಕ್ಷಿ ಆತನ ಮೇಲೆ ಬೀಳಲಿ .ಸಹಜ ,ಸುಂದರ ಕಲ್ಪನೆ ಪ್ರೇಮಲತಾ ಅವರೇ.
    ಸರೋಜಿನಿ ಪಡಸಲಗಿ

    Liked by 2 people

  3. ಪ್ರೆಮಲತಾ ಅವರ ಹಿಂದಿನ ಕವನದ ಮಿಸ್ ಜಮುನಳ ‘ಹಿಂದಿನ ಅವತಾರ’ ಇರಬೇಕು ಮಿಸ್ ನಳಿನ! ಅವಳು ಹಿಂದೆ ಬಿಟ್ಟು ನಡೆದ ಭಗ್ನಹೃದಯಿಗಳ ಸಾಲಲ್ಲಿ ಬೇವರ್ಸಿ ಕಲ್ಲೇಶನೂ ಒಂದು ಅಂಕಿಯೇನೋ. ಆ ಕವನದಲ್ಲಿಯಂತೆಯೇ ವ್ಯಂಗ, ನಾಟಕೀಯತೆ, ಕ್ಲೈಮ್ಯಾಕ್ಸ್ , anticlimax ತುಂಬಿದ ಕವನ. ಈ ಕಲೆಯಲ್ಲಿ ಸಿದ್ಧಹಸ್ತರು ಪ್ರೇಮಲತಾ. ಹೀಗೆಯೇ ಇನ್ನಷ್ಟು ‘ಅವತಾರ’ಗಳನ್ನೂ ಕಾತುರತೆಯಿಂದ ಎದುರುನೋಡುವೆ!

    Liked by 1 person

  4. ಪ್ರೇಮಲತಾರ ಕವನದ ಕಲ್ಲೇಶಿಯ ಚಿತ್ರ, ೮೦ರ ದಶಕದ ವಠಾರಗಳಲ್ಲಿ ಕಂಡು ಬರುತ್ತಿದ್ದ ಒಂದು ಸಾಮಾನ್ಯ ಸಂಗತಿಯಾಗಿತ್ತು. ಅದರಲ್ಲೂ ಆಫ಼ೀಸುಗಳಲ್ಲಿ ನಡೆಯುತ್ತಿದ್ದ ಪ್ರೇಮಕಥೆಗಳ ಒಂದು ದೃಶ್ಯವಾಗಿತ್ತು. ನಮ್ಮ ಕನ್ನಡ ಸಿನಿಮಾಗಳಲ್ಲಿ ಈ ವಿಷಯವನ್ನು ಬಹಳ ಪರಿಣಾಮಕಾರಿಯಾಗಿ ಬಳಸಿಕೊಂಡು ಉತ್ತಮವಾದ ಚಿತ್ರಗಳನ್ನು ತಯಾರಿಸಿದ್ದಾರೆ. ಕಲ್ಲೇಶಿ ಮನಸಿನಲ್ಲೇ ಮಂಡಿಗೆ ತಿನ್ನುತ್ತಿರುವಷ್ಟರಲ್ಲೇ, ಮಿಸ್ ನಳಿನ ಅವನ ಕೈಗೆ ಲಗ್ನ ಪತ್ರಿಕೆ ಕೊಟ್ಟಿದ್ದು ನಿಜಕ್ಕೂ ಕ್ಲಾಸಿಕ್ !
    ಉಮಾ ವೆಂಕಟೇಶ್

    Liked by 1 person

  5. ಪ್ರೇಮಲತಾ ಅವರೇ
    ಮಧ್ಯಮ ವರ್ಗದ ಕಲ್ಲೇಶಿ ತರಹ ಇರುವ ಹಲವಾರು ಪಡ್ಡೆ ಯುವಕರು ತಮ್ಮ ಜೀವನದಲ್ಲಿ ಬಂದು ಹೋಗುವ ಸುಂದರ ಯುವತಿಯರ ಬಗ್ಗೆ ಪ್ರೇಮದ ಕನಸನ್ನು ಕಾಣುವುದು ಸಹಜ. ಈ ಕನಸುಗಳು ಎಷ್ಟು ತಾತ್ಕಾಲಿಕ, ಮತ್ತು Fragile ಎಂಬುದು ನಿಮ್ಮ ಕವನದಲ್ಲಿ ಚನ್ನಾಗಿ ಮೂಡಿಬಂದಿದೆ.
    ನಿಮ್ಮ ಕವನದಲ್ಲಿನ Build up, Thrill , Climax ಹಾಗು ಲಘು ಹಾಸ್ಯ ಒಂದು ಸಿನೀಮ ನೋಡಿದ ಅನುಭವವನ್ನು ನೆನಪಿಗೆ ತರುವಂತಿದೆ. ಭಗ್ನ ಪ್ರೇಮಿ ಕಲ್ಲೇಶಿಗೆ ವಟಾರದ ವರಲಕ್ಷ್ಮಿ ಯಾದರೂ ಒಲಿಯಲಿ ಎಂದು ಹಾರೈಸುತ್ತೇನೆ!
    On a separate note… ಕಳೆದ ಎರಡು ತಿಂಗಳು ಅಮೇರಿಕ ಭಾರತ ಪ್ರವಾಸ , ನಿವೃತ್ತಿಯ (semi-retirement ) ಪೇಪರ್ ಕೆಲಸ, ಆಸ್ಪತ್ರೆ ಯಲ್ಲಿನ ಆನ್ ಕಾಲ್ ‘ಸಾಲಗಳ ‘ ಚುಕ್ತಿ , ನನ್ನ ಕವನ ಸಂಕಲನದ ಪ್ರಕಾಶನದ ಒತ್ತಡ ಹೀಗೆ ಅನೇಕ ಕಾರಣ ಗಳಿಂದ ಅನಿವಾಸಿ ಜಗುಲಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಈಗ ಹೆಚ್ಚಿನ ಸಮಯ ಒದಗಿ ಬಂದಿರುವುದು ಖುಷಿಯ ಸಂಗತಿ. ಓದು ಬರವಣಿಗೆಯಲ್ಲಿ ತೊಡಗುವ ಅವಕಾಶವನ್ನು ನಿರೀಕ್ಷಿಸುತ್ತಿದ್ದೇನೆ. ನನ್ನ ಕವನಗಳನ್ನು ಮೆಚ್ಚಿದ ಹಾಗು ಪ್ರತ್ರಿಕ್ರಿಯೆ ವ್ಯಕ್ತ ಪಡಿಸಿದ ಎಲ್ಲರಿಗು ತಡವಾಗಿಯಾದರೂ ಧನ್ಯವಾದಗಳು

    Liked by 1 person

  6. ಪ್ರಿಯ ಪ್ರೇಮಲತಾರಿಗೆ,
    ನಮಸ್ಕಾರ.
    ನಿಮ್ಮ ಕವನ odi Nanna ಮನಸ್ಸು ಸೂರೆಗೊಂಡಿತು. ನಕ್ಕು ನಲಿದೆ .ಬಾಲ್ಯದ ನನಹುಗಳು ಪುನಃ ಚೇತನ ತಂದವು.ಹೀಗೆಯೇ ನಮ್ಮನ್ನೆಲ್ಲ ನಗೆಸುತ್ತಿರಲಿ ಮುಂಬರುವ ನಿಮ್ಮ ಕವನಗಳು! Forgive for the mistakes.I am still eagar to learn Kannada tying.
    ಅರವಿಂದ

    Like

Leave a comment

This site uses Akismet to reduce spam. Learn how your comment data is processed.