ಯಾರಾದರೂ ದಕ್ಷಿಣ ಆಫ಼್ರಿಕಾದ ಬಗ್ಗೆ ಮಾತನಾಡಿದರೆ, ನಿಮ್ಮ ಮನದಲ್ಲಿ ಸುಳಿಯುವ ವಿಷಯವಾವುದು? ದಶಕಗಳ ಕಾಲ ಅಲ್ಲಿನ ಜನರನ್ನು ಶೋಷಿಸಿದ ವರ್ಣಬೇಧ ನೀತಿಯ ದೌಲತ್ತಿನ-ಆಳ್ವಿಕೆಯೇ? ಅಲ್ಲಿನ ಕ್ರಿಕೆಟ್ ತಂಡವನ್ನು ಬಹಿಷ್ಕರಿಸಿದ ಪ್ರಸಂಗವೇ? ನೆಲ್ಸನ್ ಮಂಡೆಲಾ ಹೆಸರೇ? ಇಲ್ಲಾ ಆ ದೇಶದ ಅಪೂರ್ವವಾದ ನಿಸರ್ಗ ಸೌಂಧರ್ಯವೇ? ಇವೆಲ್ಲಾ ಚಿತ್ರಗಳು ನಿಮ್ಮ ಮನದಲ್ಲಿ ಸುಳಿದರೆ ಆಶ್ಚರ್ಯವಿಲ್ಲ, ಕಾರಣ ಇವು ಸತ್ಯವಾದ ಸಂಗತಿಯ ನೈಜ ಚಿತ್ರಗಳು. ಇವೆಲ್ಲಕ್ಕಿಂತಲೂ ಭಾರತೀಯರ ಮನದಲ್ಲಿ ದಕ್ಷಿಣ ಆಫ಼್ರಿಕಾ ಎಂದೊಡನೆ ನೆನಪಾಗುವುದು, ಸರ್ ರಿಚರ್ಡ್ ಅಟೆನ್ಬರೋ ನಿರ್ಮಿಸಿ ನಿರ್ದೇಶಿಸಿದ ಅಪೂರ್ವ ಸಿನಿಮಾ ‘ಗಾಂಧಿಯಲ್ಲಿ’, ಭಾರತ ದೇಶದ ಪಿತಾಮಹನೆಂದು ಗೌರವಿಸಲ್ಪಡುವ ಮೋಹನದಾಸ್ ಕರಮಚಂದ್ ಗಾಂಧಿಯನ್ನು ರೈಲುಗಾಡಿಯ ಫ಼ಸ್ಟ್ ಕ್ಲಾಸ್ ಡಬ್ಬಿಯಿಂದ ಹೊರಗೆ ತಳ್ಳುವ ದೃಶ್ಯವಾಗಿದ್ದು, ಆ ಚಿತ್ರದ ದೃಶ್ಯ ನಮ್ಮ ಮನಗಳನ್ನು ಇಂದಿಗೂ ಕಾಡುತ್ತಲೇ ಇದೆ. ಒಮ್ಮೆ ನನ್ನ ಮಗ ಸಂಜು, “ಅಪ್ಪಾ ನಿಮಗಂತೂ ಈ ದೃಶ್ಯವನ್ನು ಎದುರಿಗೆ ನಿಂತು ನೋಡಿದ ನೆನಪು ಹಸಿರಾಗಿರಬಹುದಲ್ಲವೇ! ಎಂದು ಹಾಸ್ಯವಾಡಿದಾಗ, ನನಗೂ ವಯಸ್ಸಾಯಿತು ಎನ್ನಿಸಿದೆ!! ವಯಸ್ಸೇನೋ ಆಗಿದೆ, ಆದರೆ ವೃದ್ಧ ಎನ್ನುವ ಸ್ಥಿತಿಯನ್ನು ಇನ್ನೂ ತಲುಪಿಲ್ಲವೇನೋ ಎಂದು ನನ್ನ ಭಾವನೆ. ಅದೇನೇ ಇರಲಿ, ಭಾರತದ ಸ್ವಾತಂತ್ರ್ಯ ಚಳುವಳಿ ಜನ್ಮವೆತ್ತಿದ್ದು ದಕ್ಷಿಣ ಆಫ಼್ರಿಕಾದಲ್ಲೇ ಎನ್ನಬಹುದು.
ಈ ಎಲ್ಲಾ ದೃಶ್ಯಗಳ ಹಿನ್ನೆಲೆಯಲ್ಲಿ ದಕ್ಷಿಣ ಆಫ಼್ರಿಕಾ ದೇಶವು ನನ್ನ ಮಟ್ಟಿಗೆ ಇನ್ನೂ ಒಂದು ಭ್ರಮೆಯಾಗಿಯೇ ಉಳಿದಿತ್ತು. ನನ್ನಂತಹ ವರ್ಣೀಯನೊಬ್ಬನಿಗೆ ಸುಮಾರು ೨೦ ವರ್ಷಗಳ ಹಿಂದೆಯೇ ಈ ದೇಶಕ್ಕೆ ಭೇಟಿ ನೀಡಲು ಅನುಮತಿ ಸಿಕ್ಕಿತೇನೋ ನಿಜ, ಆದರೆ ಈಗ ಈ ದೇಶ ಹೇಗಿರಬಹುದು ಎನ್ನುವುದನ್ನು ಅಲ್ಲಿಗೆ ಹೋಗಿ ನೋಡಲೇ ಬೇಕೆಂಬ ಉತ್ಕಟವಾದ ಬಯಕೆಯೊಂದು ನನ್ನ ಮನದಲ್ಲಿ ಹೊತ್ತಿ ಉರಿಯುತ್ತಲೇ ಇತ್ತು. ನನ್ನಷ್ಟೇ ವಯಸ್ಸಿನ ಹಲವಾರು ಮಂದಿ, ೬೦ರ ದಶಕದಲ್ಲಿ ನೆಲ್ಸನ್ ಮಂಡೆಲಾ ವರ್ಣೀಯ ಬೇಧ ನೀತಿಯನ್ನು ಅಂತ್ಯಗೊಳಿಸಲು ಹುಟ್ಟುಹಾಕಿದ ಸ್ವತಂತ್ರ ಚಳುವಳಿ, ೮೦ರ ದಶಕಗಳಲ್ಲಿ ನಡೆದ ಕುಖ್ಯಾತ ಬೇಸಿಲ್ ಡಿ’ ಆಲಿವೆರಾ ಪ್ರಕರಣದಲ್ಲಿ, ಇಂಗ್ಲೀಷ್ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಅವನನ್ನು ದಕ್ಷಿಣಾ ಆಫ಼್ರಿಕಾ ಕ್ರಿಕೆಟ್ ಪಂದ್ಯಾವಳಿಯ ಪ್ರವಾಸಕ್ಕೆ ಆಯ್ಕೆ ಮಾಡದ ಬೂಟಾಟಿಕೆಯ ನಡವಳಿಕೆ, ಅದರಿಂದ ರೊಚ್ಚಿಗೆದ್ದು ಜನತೆ ತೋರಿದ ಪ್ರತಿಭಟನೆಗಳು, ಅದರ ಪರಿಣಾಮವಾಗಿ ಕಡೆಯಲ್ಲಿ ಆ ಪ್ರವಾಸವನ್ನೇ ರದ್ದುಗೊಳಿಸಲಾಗಿದ್ದ ಪ್ರಕರಣ, ಹೀಗೆ ಹಲವು ಹತ್ತು ಸಂಗತಿಗಳನ್ನು ಸುದ್ದಿ ಸಮಾಚಾರಗಳಲ್ಲಿ ಓದುತ್ತಲೇ ಬಂದಿರಬಹುದು. ಅಂತ್ಯದಲ್ಲಿ ನೆಲ್ಸನ್ ಮಂಡೆಲಾ ತಮ್ಮ ೩೦ ವರ್ಷಗಳ ಕಾರಾಗೃಹ ವಾಸವನ್ನು ಕೊನೆಗೊಳಿಸಿ, ರಾಬಿನ್ ದ್ವೀಪದ ಸೆರೆಮನೆಯಿಂದ ಹೊರಬಂದು, ಸ್ವತಂತ್ರ ದಕ್ಷಿಣ ಆಫ಼್ರಿಕ ಗಣರಾಜ್ಯದ ಪ್ರಥಮ ಅಧ್ಯಕ್ಷರಾದ ಸಂಗತಿ ಈಗ ಚರಿತ್ರೆಯ ಸುವರ್ಣಪುಟಗಳಲ್ಲಿ ಸೇರಿಹೋಗಿದೆ.
ಹಲವಾರು ವರ್ಷಗಳು ಯೋಚಿಸಿ, ಹಲವಾರು ಪ್ರವಾಸದ ಪುಸ್ತಕಗಳನ್ನು ಪಠಿಸಿ, ಇಂಟರನೆಟ್ ತಾಣಗಳಲ್ಲಿ ಹುಡುಕಿ ಎಲ್ಲವನ್ನೂ ಓದಿ ತಿಳಿದುಕೊಂಡ ಮೇಲೆ, ನಾನು, ನನ್ನ ಪತ್ನಿ ಸೀತು ಈಗ ದಕ್ಷಿಣ ಆಫ಼್ರಿಕೆಗೆ ಭೇಟಿ ನೀಡಲು ಸಮಯ ಸೂಕ್ತವಾಗಿದೆ ಎಂದು ನಿರ್ಧರಿಸಿದೆವು. ಈ ದೇಶದ ಹಿನ್ನೆಲೆಯ ಬಗ್ಗೆ ಸಾಕಷ್ಟು ತಿಳಿದುಕೊಂಡ ನಂತರ ಕಡೆಗೆ Titan Holidays ಎನ್ನುವ ಪ್ರವಾಸ ಉದ್ಯಮದವರು ಆಯೋಜಿಸಿರುವ ಎರಡು ವಾರಗಳ ದಕ್ಷಿಣ ಆಫ಼್ರಿಕದ ಪ್ರವಾಸವನ್ನು ನಾವು ಆರಿಸಿದೆವು. ಈ ಪ್ರವಾಸದಲ್ಲಿ ಏನೇನು ನೋಡಬೇಕು ಎನ್ನುವ ಸ್ಥಳಗಳ ಪಟ್ಟಿಯ ಬಗ್ಗೆ ನಮಗೆ ಈಗಾಗಲೆ ಒಳ್ಳೆಯ ಕಲ್ಪನೆ ಇತ್ತು.
ನಾವಿಬ್ಬರೂ ಕಟ್ಟಾ ಸಸ್ಯಾಹಾರಿಗಳು, ಇದರಿಂದ ಹಲವಾರು ಪ್ರಶ್ನೆಗಳೇಳುತ್ತವೆ ಅಲ್ಲದೇ ನಮ್ಮ ಪ್ರವಾಸದ ಬಗ್ಗೆ ಸಾಕಷ್ಟು ತಲೆನೋವೂ ಕೂಡಾ. ಆದರೆ ಕಡೆಯಲ್ಲಿ ತಾಜ್ ಟೂರ್ ಮತ್ತು ಸ್ಟಾರ್ ಟೂರ್ ಪ್ರವಾಸದ ಆಯೋಜಕರು ಸಸ್ಯಾಹಾರಿಗಳಾದರೆ ಯಾವ ಸಮಸ್ಯೆಯೂ ಇಲ್ಲಾ, ನಾವು ಕೊಂಡೊಯ್ಯುವ ಬಹುತೇಕ ಪ್ರವಾಸಿಗರು ಸಸ್ಯಾಹಾರಿ ಭಾರತೀಯರೇ ಆದ್ದರಿಂದ, ನಿಮ್ಮ ಶಾಖಾಹಾರ ಭೋಜನವನ್ನು ನಿಮಗೆ ಒದಗಿಸುತ್ತೇವೆ ಎಂದು ತಿಳಿಸಿ ನಮ್ಮ ಮನಸ್ಸಿನ ಆತಂಕಕ್ಕೆ ತೆರೆ ಎಳೆದರು. ಜೊತೆಗೆ ಟೈಟನ್ ಹಾಲಿಡೇಸ್ ಕಂಪನಿ, ನಮ್ಮ ಏರಲೈನ್ ಸೌತ್ ಆಫ಼್ರಿಕನ್ ಏರವೇಸ್ ಕೂಡಾ ಜೈನರ ಸಸ್ಯಾಹಾರವನ್ನು ವಿಮಾನದಲ್ಲಿ ನಮಗೆ ಒದಗಿಸುತ್ತಾರೆ, ಭಯಪಡುವ ಕಾರಣವಿಲ್ಲ ಎಂದು ನಮಗೆ ಆಶ್ವಾಸನೆ ನೀಡಿದರು. ಈ ಜೈನರ ಆಹಾರವೇನೋ ನನಗೆ ಗೊತ್ತಿಲ್ಲ, ನಾನೆಂದೂ ಇಂತಹ ಕೋರಿಕೆಯನ್ನು ಮುಂದಿಟ್ಟವನೂ ಅಲ್ಲ. ಯಾವುದೇ ಆಹಾರದ ಮೇಲೆ, ಇದು ಸಸ್ಯಾಹಾರ ಎಂಬ ಲೇಬಲ್ ಇದ್ದರೆ ನನಗೆ ಸಾಕು, ಆದರೆ ನನ್ನ ಹೆಂಡ್ತಿ ಸೀತುಗೆ ಮಾತ್ರಾ ಬಹಳಷ್ಟು ಶರತ್ತುಗಳಿವೆ. ಆಹಾರದಲ್ಲಿ ಮೊಟ್ಟೆ, ಚೀಸ್ ಇರಕೂಡದು. ಜೊತೆಗೆ ಬಹಳ ಖಾರವಿದ್ದರೆ ಅವಳು ತಿನ್ನುವುದಿಲ್ಲ. ಹೀಗೆ ಅವಳ ಬೇಕು ಬೇಡಗಳ ಪಟ್ಟಿ ಬೆಳೆಯುವುದರಿಂದ ಜೀವನ ತುಂಬಾ ಕಷ್ಟ! ಕೊನೆಗೆ ನಮ್ಮ ಪ್ರವಾಸದ ಗುಂಪಿನಲ್ಲಿದ್ದ ೩೦ ಸದಸ್ಯರಲ್ಲಿ, ನಾನು ಮತ್ತು ಸೀತು ಇಬ್ಬರೇ ಸಸ್ಯಾಹಾರಿಗಳಾಗಿದ್ದೆವು. ಅಲ್ಲಿದ್ದವರಲ್ಲಿ ಹಲವರಂತೂ, ನೀವು ಹೇಗೆ ನಿಭಾಯಿಸುತ್ತೀರೋ ಎಂದು ನಮಗಿಂತ ಹೆಚ್ಚಿನ ಆತಂಕ ವ್ಯಕ್ತಪಡಿಸಿದ್ದರು.
ಇದೆಲ್ಲಾ ಇರಲಿ, ಟೈಟನ್ ಹಾಲಿಡೇಸ್ ಕಂಪನಿಯವರು ನಮ್ಮನ್ನು ಮನೆಯಿಂದ ಕರೆದುಕೊಂಡು, ಲಂಡನ್ನಿನ ಹೀಥ್ರೋ ವಿಮಾನ ನಿಲ್ದಾಣಕ್ಕೆ ಬಿಟ್ಟರು. ಅಲ್ಲಿ ಸೌತ್ ಆಫ಼್ರಿಕನ್ ಏರ್ವೇಸ್ ವಿಮಾನದಲ್ಲಿ ೧೧ ತಾಸುಗಳು ಕುಳಿತು ಜೋಹಾನೆಸ್ಬರ್ಗ್ ಕಡೆಗೆ ಹಾರಿದೆವು. ಯು.ಕೆ ಮತ್ತು ದಕ್ಷಿಣ ಆಫ಼್ರಿಕ ನಡುವೆ ಕೇವಲ ಎರಡೇ ಗಂಟೆಗಳ ಸಮಯದ ವ್ಯತ್ಯಾಸವಿರುವುದರಿಂದ, ಜೆಟ್ ಲಾಗ್ ಸಮಸ್ಯೆ ನಿಮ್ಮನ್ನು ಅಷ್ಟಾಗಿ ಕಾಡುವುದಿಲ್ಲ. ಮರುದಿನ ನಾವು ಮುಂಜಾನೆ ಜೋಹಾನೆಸ್ಬರ್ಗ್ ವಿಮಾನ ನಿಲ್ದಾಣದಲ್ಲಿ ಇಳಿದಾಗ, ನಮ್ಮ ಪ್ರವಾಸ ಕಂಪನಿಯ ಮ್ಯಾನೇಜರ್ ಜೀನ್ ಟೈಲರ್, ಪ್ರವಾಸದುದ್ದಕ್ಕೂ ನಮಗೆ ಸಸ್ಯಾಹಾರದ ಭೋಜನವನ್ನು ಏರ್ಪಾಡು ಮಾಡಿದ್ದೇನೆ ಎಂದು ಹೇಳಿದಾಗ, ನಮ್ಮ ಮನಸ್ಸಿನ ಆತಂಕ ಸ್ವಲ್ಪಮಟ್ಟಿಗೆ ದೂರವಾದರೂ, ಮುಂದೆ ನೋಡೋಣ ಆ ಏರ್ಪಾಡು ಹೇಗಿರುತ್ತೆ ಅಂತ!
ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ ವಲಸೆಯ ಅಧಿಕಾರಿಗಳು ಬಿಳಿಯರಾಗುತ್ತಾರೆ ಎನ್ನುವುದು ನಮ್ಮ ಕಲ್ಪನೆ. ಆದರೆ ಜೋಹಾನಸ್ಬರ್ಗಿನ ವಿಮಾನ ನಿಲ್ದಾಣದಲ್ಲಿ ವಲಸೆಯ ಅಧಿಕಾರಿಗಳೆಲ್ಲಾ ಕೇವಲ ವರ್ಣೀಯರೇ ಆಗಿದ್ದು, ಒಂದೇ ಒಂದು ಬಿಳಿಯ ಮುಖವೂ ನಮಗೆ ಕಾಣಿಸಲಿಲ್ಲ. ಇದೇನು ಇಲ್ಲಿ ವರ್ಣಬೇಧ ನೀತಿ ವ್ಯತಿರಿಕ್ತವಾಗಿದೆಯೇನು ಎಂದು ನಾನು ಆಶ್ಚರ್ಯಪಟ್ಟೆ! ನಮ್ಮ ಹೋಟೆಲಿಗೆ ಹೋಗುವ ಮೊದಲು, ಈ ನಗರದಲ್ಲಿ ಅರ್ಧದಿನ ಸುತ್ತಾಡಿದಾಗ, ವರ್ಣಬೇಧನೀತಿಯ ರಾಜ್ಯಭಾರದ ಯುಗ ಮುಗಿದ ನಂತರವೂ ಈ ದೇಶ ಸಧ್ಯದಲ್ಲಿ ಇನ್ನೂ ಎದುರಿಸುತ್ತಿರುವ ಸಮಸ್ಯೆಗಳನ್ನು ನಮಗೆ ಎತ್ತಿ ತೋರಿಸಿತು. ನಿರುದ್ಯೋಗಿ ಯುವಕರ ಗುಂಪುಗಳು ಇಲ್ಲಿನ ಪಾರ್ಕುಗಳಲ್ಲಿ ಟೆಂಟ್ ಹಾಕಿಕೊಂಡು ಕಾಲಕಳೆಯುತ್ತಿರುವುದನ್ನು ಕಂಡಾಗ, ನಮಗೆ ಇಲ್ಲಿನ ಪರಿಸ್ಥಿತಿಯ ಬಗ್ಗೆ ಅರಿವಾಯಿತು. ಯಾವುದೇ ರೀತಿಯ ವಿದ್ಯಾಭ್ಯಾಸ ಮತ್ತು ಕೌಶಲ್ಯವಿಲ್ಲದ ಯುವಜನತೆ, ದೂರದ ಹಳ್ಳಿ-ಊರುಗಳಿಂದ ಬಂದು, ಈ ಪಟ್ಟಣದಲ್ಲಿ ಬಿಡಾರ ಹೂಡಿರುವುದು, ಇಲ್ಲಿನ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ ಎಂದು ತಿಳಿದುಬಂತು.

ಈ ನಗರದ ಪ್ರವಾಸದಲ್ಲಿ, ಇಲ್ಲಿನ ಬೆಟ್ಟದ ತುದಿಯಲ್ಲಿ ಬೋವರ್ ಸಾಹಸಿಗರಿಗಾಗಿ ಸ್ಮಾರಕಗಳ ಭೇಟಿಯನ್ನು ಸೇರಿಸಿದ್ದಾರೆ. ಆ ರಾತ್ರಿ ಸಾಂಡಟನ್ ಎನ್ನುವ ಸ್ಥಳದಲ್ಲಿ ತಂಗಿದ್ದೆವು. ಮಾರನೆಯ ದಿನ ಬೆಳಿಗ್ಗೆ ಇಲ್ಲಿರುವ ಪ್ರಸಿದ್ಧವಾದ ಕ್ರೂಗರ್ ರಾಷ್ಟ್ರೀಯ ಉದ್ಯಾನಕ್ಕೆ ಹೋಗುವ ಬಸ್ ಒಂದನ್ನು ಹಿಡಿದು ಹತ್ತಿದೆವು. ಈ ಪ್ರವಾಸದ ದಾರಿಯು ಒಂದು ವಿಹಂಗಮ ಮಾರ್ಗವಾಗಿದ್ದು, ಇಲ್ಲಿ ಉದ್ದಕ್ಕೂ ರಮ್ಯ-ರಮಣೀಯ ದೃಶ್ಯಗಳನ್ನು ನೋಡಬಹುದು. ಈ ದೇಶದ ರಸ್ತೆಗಳಲ್ಲಿ ಯಾವ ಹಳ್ಳಗುಂಡಿಗಳೂ ಇಲ್ಲ. ನೀವು ಹಳ್ಳಿಯಲ್ಲಿರಲಿ, ಅಥವಾ ಪಟ್ಟಣದಲ್ಲಿರಲಿ, ರಸ್ತೆಗಳು ಸೊಗಸಾಗಿವೆ. ಉದಾಹರಣೆಗೆ ನಾವು ಸುಮಾರು ೧೦೦೦ ಸಂಖ್ಯೆಗಿಂತಲೂ ಕಡಿಮೆ ಜನಸಂಖ್ಯೆ ಇರುವ Pilgrim’s rest ಎನ್ನುವ ಸಣ್ಣ ಹಳ್ಳಿಯೊಂದನ್ನು ಸಂದರ್ಶಿಸಿದೆವು. ಈ ಹಳ್ಳಿಯು ಹಿಂದೆ ಚಿನ್ನದ ಗಣಿಗಾರಿಕೆಗೆ ಕೇಂದ್ರವಾಗಿತ್ತು. ಈ ಸಣ್ಣ ಹಳ್ಳಿಯನ್ನೂ ಕೂಡಾ ಬಹಳ ಅಚ್ಚುಕಟ್ಟಾಗಿಟ್ಟಿದ್ದಾರಲ್ಲದೇ, ಇಲ್ಲಿ ಹಳೆಯ ಕಟ್ಟಡಗಳನ್ನು ಸೊಗಸಾಗಿ ನಿರ್ವಹಿಸುತ್ತಿದ್ದು, ಜ್ಞಾಪಕ ವಸ್ತುಗಳನ್ನು ಮಾರುವ ಸಣ್ಣ ಅಂಗಡಿಗಳನ್ನೂ ಕೂಡಾ ಇಟ್ಟಿದ್ದಾರೆ ಎನ್ನುವುದು ಮೆಚ್ಚುಗೆಯ ಅಂಶ. ನಮ್ಮ ಭಾರತದಲ್ಲಾದರೂ, ಪ್ರವಾಸಿಗಳ ಪ್ರದೇಶಗಳಲ್ಲಿ ಯಾವ ವ್ಯವಸ್ಥೆಯೂ ಸರಿ ಇರುವುದಿಲ್ಲ. ಕೆಲವೆಡೆ ಹಲವು ಸಣ್ಣಪುಟ್ಟ ಮೂಲಭೂತ ಸೌಕರ್ಯಗಳನ್ನು ಕೂಡಾ ಒದಗಿಸಿರುವುದಿಲ್ಲ. ದಕ್ಷಿಣ ಆಫ಼್ರಿಕೆಯಲ್ಲಿ ಎಲ್ಲಾ ಕಡೆಯಲ್ಲಿರುವಂತೆ, ಕ್ರೂಗರ್ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ Hazy View ಎನ್ನುವ ನಮ್ಮ ಹೋಟೆಲ್ ಬಹಳ ಆರಾಮವಾಗಿತ್ತು. ಇಲ್ಲಿನ ಉದ್ಯಾನವನದಲ್ಲಿರುವ ಪ್ರಾಣಿಗಳನ್ನು ನೋಡಬೇಕಾದರೆ, ಮುಂಜಾನೆ ೫ ಗಂಟೆಗೆ ಎದ್ದು ಸಫ಼ಾರಿಯನ್ನು ಪ್ರಾರಂಭಿಸಬೇಕು. ಸುಮಾರು ೬ ಜೀಪುಗಳ ಒಂದು ಸೇನೆ, ಅದರ ಸುರಕ್ಷತೆಗೊಬ್ಬ ರೇಂಜರ್ ಇರುವ ಈ ಪ್ರಾಣಿದರ್ಶನ ಪ್ರವಾಸ, ಮದ್ಯಾನ್ಹದ ಊಟದ ಒಂದು ವಿರಾಮ ಬಿಟ್ಟರೆ, ಪೂರಾ ದಿನ ಇರುತ್ತದೆ. ಈ ಸಫ಼ಾರಿಯ ಪ್ರವಾಸವು ೩ ರಾತ್ರಿಗಳ ತಂಗು, ಮತ್ತು ಪ್ರತಿ ದಿನವೂ ಮುಂಜಾನೆ ಅಥವಾ ಸಂಜೆಯ ವೇಳೆಯ ಸಫ಼ಾರಿಯನ್ನು ಒಳಗೊಂಡಿರುತ್ತದೆ. ಈ ಮೂರು ದಿನಗಳ ಯಾತ್ರೆಯಲ್ಲಿ ನಿಮಗೆ Big 5 ಎಂದು ಕರೆಯಲ್ಪಡುವ ಆನೆ, ಸಿಂಹ, ಹಿಪ್ಪೋಪೊಟಾಮಸ್, ರೈನೋಸಿರಾಸ್, ಮತ್ತು ಕಾಡೆಮ್ಮೆಗಳ ದರ್ಶನವಾಗುವುದೋ ಅಥವಾ ಇಲ್ಲವೋ, ಆದರೂ ಅವು ಹತ್ತಿರದಿಂದ ನೋಡಲು ಸಿಕ್ಕುವುದೋ ಇಲ್ಲವೋ, ಅದು ನಿಮ್ಮ ಅದೃಷ್ಟ! ನಮಗಂತೂ ಕತ್ತೆಕಿರುಬಗಳ ಗುಂಪು, ಜಿಂಕೆಯೊಂದನ್ನು ಬೇಟೆಯಾಡಿ, ಅದನ್ನು ತಮ್ಮ ಮರಿಗಳಿಗೆ ತಿನ್ನಿಸುತ್ತಿದ್ದ ದೃಶ್ಯ ಕಾಣಸಿಕ್ಕಿತು. ನಾವೂ ಕೂಡಾ ಈ ಕ್ರೂಗರ್ ಉದ್ಯಾನವನದ ಒಳಗಿರುವ ಪ್ರವಾಸಿಗರ ಗುಡಿಸಿಲಿನಲ್ಲೇ ಇರಬೇಕಾಗಿತ್ತು ಅಂತ ಈಗನ್ನಿಸುತ್ತೆ. ಈ ರಾಷ್ಟ್ರೀಯ ಉದ್ಯಾನವನ, ಕರ್ನಾಟಕದಲ್ಲಿರುವ ನಮ್ಮ ನಾಗರಹೊಳೆಯಂತೆ ಹಚ್ಚಹಸಿರಾಗಿಲ್ಲ. ಇದು ಸುಮಾರು 2000 Sq. kilometers ಪ್ರದೇಶವನ್ನು ಆಕ್ರಮಿಸಿದ್ದು, ಇದನ್ನು 1926ರಲ್ಲಿ ಸ್ಥಾಪಿಸಲಾಯಿತು.
ಮೂರು ರಾತ್ರಿಗಳನ್ನು ಕ್ರೂಗರ್ ನ್ಯಾಶನಲ್ ಪಾರ್ಕಿನಲ್ಲಿ ಕಳೆದ ಮೇಲೆ, ಪೂರ್ವ ಕೇಪ್ ಪ್ರದೇಶದಲ್ಲಿರುವ, ಪೋರ್ಟ್ ಎಲಿಝಬೆತ್ ಬಂದರಿಗೆ ವಿಮಾನದಲ್ಲಿ ಹಾರಿದೆವು. ಈ ನಗರಕ್ಕೆ ಹಿಂದೆ ಇಲ್ಲಿಯ ಗವರ್ನರನ ದಿವಂಗತ ಪತ್ನಿಯ ಹೆಸರನ್ನಿಡಲಾಗಿದೆ. ಮರುದಿನ ಕೇಪ್ ಟೌನಿನ ಎರಡು ದಿನಗಳ ನಮ್ಮ ಪ್ರವಾಸ ಪ್ರಾರಂಭವಾಯಿತು. ಈ ಪ್ರಯಾಣದ ದಾರಿಯನ್ನು Garden Route ಎಂದು ಕರೆಯುತ್ತಾರೆ. ಈ ಪ್ರವಾಸದಲ್ಲಿ ನಮ್ಮ ಬಸ್ ಮಾರ್ಗವು ಸಿಟ್ಸ್ಕಾಮ ನ್ಯಾಶನಲ್ ಪಾರ್ಕ್ (Tsitskamma National Park) ಮತ್ತು ಸ್ಟಾರ್ಮ್ ನದಿಗಳ (Storm River) ಮೂಲಕ ಹಾಯ್ದು, ಕಡೆಗೆ ನಿಸ್ನ ಎನ್ನುವ ಒಂದು ಸುಂದರವಾದ ಪಟ್ಟಣವನ್ನು ತಲುಪಿತು. ಮಾರ್ಗ ಮಧ್ಯದಲ್ಲಿ ಅತ್ಯುತ್ತಮ ಪ್ರಕೃತಿ ದೃಶ್ಯವಿದ್ದೆಡೆಯಲ್ಲಿ ಬಸ್ ನಿಲ್ಲಿಸಲಾಗುತ್ತಿತ್ತು. ಹೀಗಾಗಿ ಈ ಪ್ರವಾಸದಲ್ಲಿ ಪ್ರಕೃತಿ ಸೌಂಧರ್ಯವನ್ನು ನಾವು ಮನಸಾರೆ ಸವಿದೆವು. ಆದರೆ ಮಧ್ಯದಲ್ಲಿ ಅತಿ ಕ್ಲಿಷ್ಟವಾದ ಕರಾವಳಿಯ ಸಾಲಿನಲ್ಲಿ ಬಂಡೆಗಳಿಂದ ಕೂಡಿದ ಸುಮಾರು ಎರಡು ಕಿಲೋಮೀಟರ್ ದೂರದ ಹಾದಿ, ಮತ್ತು ಬಹಳವಾಗಿ ಜೀರ್ಣಗೊಂಡಿರುವ ಒಂದು ತೂಗು ಸೇತುವೆಯ ಮೂಲಕ ನಾವು ನಡೆಯಬೇಕಾಯಿತು. ಈ ಪ್ರಯತ್ನ ಸ್ವಲ್ಪ ಕಷ್ಟವೆನಿಸಿದರೂ ಕೂಡಾ, ಅಲ್ಲಿನ ಸುಂದರ ರಮಣೀಯ ದೃಶ್ಯಗಳು ನಮ್ಮ ಪ್ರಯತ್ನವನ್ನು ಸಾರ್ಥಕಗೊಳಿಸಿದವು.
ಮರುದಿನ ಬೆಳಿಗ್ಗೆ, ಫ಼ೆದರ್-ಬೆಡ್ ಅಭಯಾರಣ್ಯವನ್ನು ಸಂದರ್ಶಿಸಲು ನೀವು ನೈಸ್ನ ಲಗೂನ್ (Knysna lagoon) ಅಥವಾ ಕಡಲ್ಕೊಳದಿಂದ ದೋಣಿಯಲ್ಲಿ ಕುಳಿತು ಹೋಗಬೇಕು. ಅಲ್ಲಿ ಸುಮಾರು ೭೦೦ ಮೀಟರ್ ಎತ್ತರದ ಬೆಟ್ಟದ ಮೇಲೆ ಒಂದು ಟ್ರಾಲಿಯಲ್ಲಿ ಕುಳೀತು ನಿಮಗೆ ಮನತೃಪ್ತಿಯಾಗುವ ರೀತಿಯಲ್ಲಿ, ಅಲ್ಲಿನ ಅರಣ್ಯವನ್ನು ಅನ್ವೇಶಿಸಲು ಅವಕಾಶವಿದೆ. ನಂತರ ಮಾರನೆಯ ದಿನ, ನೈಸ್ನ ಪ್ರದೇಶವನ್ನು ಬಿಟ್ಟು ಗಾರ್ಡನ್ ಮಾರ್ಗದಲ್ಲಿ ಪ್ರವಾಸವನ್ನು ಮುಂದುವರೆಸಿದೆವು. ಮಾರ್ಗಮಧ್ಯದಲ್ಲಿ ಹಸಿರಿನಿಂದ ಸಮೃದ್ಧವಾದ ಕರಾವಳಿಯನ್ನು, ಶುಷ್ಕವಾದ ಕ್ಲೈನ್ ಕಾರೂ ( Klein Karoo) ಪ್ರದೇಶದಿಂದ ಬೇರ್ಪಡಿಸುವ (Oudtshoorn mountain) ಆಡ್ಷೂರ್ನ್ ಪರ್ವತವನ್ನು ದಾಟಿ, ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ಆಸ್ಟ್ರಿಚ್ ಫ಼ಾರ್ಮ್ ಅನ್ನು ತಲುಪಿದೆವು. ಪ್ರವಾಸಿಗರನ್ನು ಆಕರ್ಷಿಸುವ ಸರ್ವ ಸರ್ವ ಸಾಧನಗಳೂ ಇಲ್ಲಿವೆ. ಇದನ್ನೇ ನಾವು ಹಿಂದೆ ನಮ್ಮ ಚೈನಾ ಪ್ರವಾಸದಲ್ಲೂ ನೋಡಿದ್ದೆವು! ಅಲ್ಲಂತೂ ಉದಾಹರಣೆಗೆ, ಅವರ ಚಹಾ ಪ್ಯಾಕೆಟ್ ಮಾರುವ ಮೊದಲು, ನಿಮಗೆ ಚಹಾ ಸವಿದು ರುಚಿ ನೋಡಲು ಅವಕಾಶ ಮಾಡಿಕೊಡುತ್ತಾರೆ. ಚೀನಿಯರು ಜಾಣರು! ಈ ಪ್ರತಿಯೊಂದು ಪ್ರಯತ್ನವೂ ಪ್ರವಾಸಿಗರಿಗೆ ತಮ್ಮ ಸರಕುಗಳನ್ನು ಮಾರಲು ಮಾಡಿರುವ ಒಂದು ಚಾಣಾಕ್ಷ ಉಪಾಯವಾಗಿದೆ. ಈ ಆಸ್ಟ್ರಿಚ್ ಪಕ್ಷಿಯ ಫ಼ಾರ್ಮಿನಲ್ಲಿ, ಈ ಪಕ್ಷಿಯ ರೆಕ್ಕೆಗಳನ್ನು ಬಳಸಿ ತಯಾರಿಸಿರುವ ಸಾಮಾನುಗಳು ಮತ್ತು ಈ ಪಕ್ಷಿಗಳನ್ನು ಸೇರಿಸಿ ತೋರಿಸುವ ಒಂದು ಪ್ರದರ್ಶನದ ಜೊತೆಗೆ, ಈ ಪಕ್ಷಿಯ ಮೇಲೆ ಕುಳಿತು ಸವಾರಿ ಮಾಡುವ ಅವಕಾಶ ಸಹಾ ನಿಮಗೆ ಲಭ್ಯವಿದೆ.
ಈ ಸ್ಥಳಗಳನ್ನು ನೋಡಿದ ನಾವು, ಮುಂದೆ ಕೇಪ್ ಟೌನಿಗೆ ವಾಪಸಾಗಿ, ಅಲ್ಲಿನ ಬಾನ್ಟ್ರೈ ಕೊಲ್ಲಿ ಪ್ರದೇಶದಲ್ಲೇ ಪ್ರಸಿದ್ಧವಾಗಿರುವ, ಪ್ರೆಸಿಡೆಂಟ್ ಹೋಟಲಿನಲ್ಲಿ ನಾಲ್ಕು ದಿನಗಳ ನಮ್ಮ ವಾಸಕ್ಕೆ ಆಗಮಿಸಿದೆವು. ಸ್ವತಂತ್ರ ದಕ್ಷಿಣ ಆಫ಼್ರಿಕಾ ದೇಶದ ಮೊದಲ ಅಧ್ಯಕ್ಷರಾದ ದಿ. ನೆಲ್ಸನ್ ಮಂಡೆಲಾ ತಮ್ಮ ಪದವಿಯನ್ನು ವಹಿಸಿಕೊಂಡ ನಂತರ ಉದ್ಘಾಟಿಸಿದ ಈ ಹೋಟೆಲ್, ಇಲ್ಲಿನ ಕೊಲ್ಲಿ ಪ್ರದೇಶದಲ್ಲಿ ಬಹಳ ಜನಪ್ರಿಯವಾದ ಹೋಟೆಲ್ ಎನಿಸಿದೆ. ಕೇಪ್-ಟೌನ್ ಪಟ್ಟಣದ ಹಿನ್ನೆಲೆಯಲ್ಲಿರುವ ಪ್ರಸಿದ್ಧ ಟೇಬಲ್-ಟಾಪ್ ಪರ್ವತವು, ಲಯನ್ಸ್ ಹೆಡ್ ಮತ್ತು ಡೆವಿಲ್ಸ್ ರಾಪ್ ಜೊತೆಗೂಡಿ, ಈ ಪಟ್ಟಣವನ್ನು ಸುಂದರವಾಗಿ ಸುತ್ತುವರೆದಿದೆ ಎನ್ನಬಹುದು.
ನಾವೆಲ್ಲರೂ ನಮ್ಮ ಮಾಧ್ಯಮಿಕ ಶಾಲೆಯ ಭೂಗೋಳ ಪಾಠದಲ್ಲಿ (ನಿಮ್ಮಲ್ಲಿ ಹಲವರು ಮೇಲ್ವರ್ಗದ ಇಂಗ್ಲೀಷ್

ಮಾಧ್ಯಮದ ಶಾಲೆಗೆ ಹೋಗಿ ಅಲ್ಲಿ ಚರಿತ್ರೆ ಮತ್ತು ಭೂಗೋಳವನ್ನು ಕಲಿತಿರಬಹುದು), ನಮ್ಮ ಟೀಚರ್ ವರ್ಣಿಸಿದ್ದ ಕೇಪ್ ಆಫ಼್ ಗುಡ್ ಹೋಪ್ (Cape Of Goodhope) ಅಥವಾ ಗುಡ್-ಹೋಪ್ ಭೂಶಿರದ ಬಗ್ಗೆ ಕಲಿತಿರುವ ನೆನಪಿರಬಹುದು. ಈ ಕೇಪ್ ತುದಿಯೇ ದಕ್ಷಿಣ ಆಫ಼್ರಿಕಾದ ಅತ್ಯಂತ ದಕ್ಷಿಣದ ಕೊನೆಯಾಗಿದ್ದು, ಇಂಗ್ಲೇಂಡಿನಿಂದ ಬರುತ್ತಿದ್ದ ಹಡಗುಗಳೆಲ್ಲಾ ಈ ಗುಡ್ ಹೋಪ್ ಭೂಶಿರವನ್ನು ದಾಟಿ. ನಂತರ ಭಾರತದ ಕಡೆಗೆ ಪ್ರಯಾಣಿಸಬೇಕಾಗಿತ್ತು. ಈ ಪಾಠವನ್ನು ಕಲಿಯುತ್ತಿದ್ದ ಸಮಯದಲ್ಲಿ, ಒಂದು ದಿನ ನಾವು ಈ ಅತ್ಯಾಕರ್ಷಕವಾದ ಪ್ರದೇಶವನ್ನು ನೋಡುತ್ತೇವೆ ಎನ್ನುವ ವಿಶ್ವಾಸ ಒಂದು ಎಳ್ಳು ಕಾಳಿನಷ್ಟೂ ಇರಲಿಲ್ಲ ಅಲ್ಲವೆ! ನಿಮಗೇನಾದರೂ ಇತ್ತೋ ಏನೋ, ಆದರೆ ನನಗಂತೂ ಸ್ವಲ್ಪವೂ ಇರಲಿಲ್ಲ! ಈ ಸ್ಥಳದಲ್ಲಿ ನಿಂತಾಗ, ನನಗೆ ಕೋಲಾರದ ಬಳಿ ಇರುವ ಕೈವಾರವೆಂಬ ಸಣ್ಣ ಹಳ್ಳಿಯ ಆ ಶಾಲೆ, ಮತ್ತು ನಮಗೆ ಭೂಗೋಳ ಕಲಿಸಿದ ಟೀಚರ್ ನೆನಪಾಗಿ, ನಾನು ಬಹಳ ಭಾವುಕನಾದೆ ಎನ್ನಬಹುದು. ಇಲ್ಲಿಂದ ವಾಪಸ್ ಮರಳುವಾಗ, ಮಾರ್ಗಮಧ್ಯದಲ್ಲಿರುವ ದಕ್ಷಿಣ ಆಫ಼್ರಿಕಾದ ನೌಕಾದಳದ ನೆಲೆ ಸೈಮನ್ಸ್ ಟೌನಿಗೂ ಭೇಟಿ ಇತ್ತೆವು.
ಇದರ ಹತ್ತಿರದಲ್ಲೇ, ಸಣ್ಣ ಪೆಂಗ್ವಿನ್ ಪಕ್ಷಿಗಳಿರುವ ಒಂದು ಜಾಗವಿದೆ. ನಾವೇನಾದರೂ ಸುಮ್ಮನೆ ಈ ಪಕ್ಷಿಗಳನ್ನು ಹೋಗಿ ನೋಡಬಹುದು ಎಂದು ಕೊಂಡಿದ್ದರೆ, ಅದು ಮೂರ್ಖತನ. ಇಲ್ಲಿ ಪ್ರವಾಸೋದ್ಯಮವನ್ನು ಎಷ್ಟು ಸೊಗಸಾಗಿ ಬೆಳೆಸಿದ್ದಾರೆಂದರೆ, ಈ ಪಕ್ಷಿಗಳನ್ನು ನೋಡುವುದಕ್ಕೂ ಟಿಕೆಟ್ ಪಡೆದು ಪ್ರವೇಶಿಸಬೇಕು! ಇಲ್ಲಿಯವರೆಗೆ ನಾವು ನೋಡಿದ ಪ್ರತಿಯೊಂದು ಪಟ್ಟಣ ಮತ್ತು ಹಳ್ಳಿಗಳಂತೆ, ಕೇಪ್ ಟೌನ್ ಪಟ್ಟಣ ಕೂಡಾ, ಅತ್ಯಂತ ಸ್ವಚ್ಛವಾಗಿದೆ. ಇಲ್ಲಿನ ಸಮುದ್ರದುದ್ದಕ್ಕೂ ಇರುವ ಪಥದಲ್ಲಿ, ಮುಂಜಾನೆ ಮತ್ತು ಸಂಜೆ ಕಾಲ್ನಡಿಗೆ ನಿಜಕ್ಕೂ ಅತ್ಯಂತ ಮೋಹಕವಾದದ್ದು, ಮತ್ತು ಪ್ರವಾಸಿಗರು ಇದನ್ನು ತಪ್ಪದೇ ಮಾಡಬೇಕು ಎನ್ನುವುದು ನನ್ನ ಅಭಿಮತ! ನಿಮ್ಮ ದೈಹಿಕ ಸಾಮರ್ಥ್ಯವನ್ನು ಆಧಾರಿಸಿ ನೀವು ಇಲ್ಲಿ ಮೈಲುಗಟ್ಟಲೆ ಸಮುದ್ರದ ದಂಡೆಯ ಮೇಲೆ ನಡೆಯಲು ಅವಕಾಶವಿದೆ. ಆದರೆ ಈ ಪಟ್ಟಣದ ಅತ್ಯಂತ ಪ್ರಮುಖ ಮತ್ತು ಸ್ವಾರಸ್ಯವಾದ ಸ್ಥಳವೆಂದರೆ, ಹಿಂದೆ ದಿ. ನೆಲ್ಸನ್ ಮಂಡೆಲಾರನ್ನು ಸುಮಾರು ೩೦ ವರ್ಷಗಳ ಕಾಲ ಸೆರೆ ಇಟ್ಟಿದ್ದ, ರಾಬೆನ್ ದ್ವೀಪದಲ್ಲಿರುವ ಸೆರೆಮನೆಯಾಗಿದೆ. ಇಲ್ಲಿನ V&A ದಂಡೆಯಿಂದ, ದಿನವೂ ಅನೇಕ ದೋಣಿಗಳು ಪ್ರವಾಸಿಗರನ್ನು ಮತ್ತೊಂದು ಆ ದ್ವೀಪದ ದಡಕ್ಕೆ ಕರೆದೊಯ್ದು, ಅಲ್ಲಿಂದ ಒಂದು ಬಸ್ಸಿನಲ್ಲಿ ಆ ಸೆರೆಮನೆಗೆ ಕರೆದೊಯ್ಯುತ್ತವೆ. ಈ ಸೆರೆಮನೆಯಲ್ಲಿರುವ 6*8 ಅಳತೆಯ ಕೋಣೆ, ಅಲ್ಲಿರುವ ಕೇವಲ ಒಂದು ಕಂಬಳಿ ಮತ್ತು ಒಂದು ಸಣ್ಣ ಪಾತ್ರೆಯನ್ನು ನೋಡಿದ ಪ್ರತಿಯೊಬ್ಬ ವ್ಯಕ್ತಿಯ ಕಣ್ಣಲ್ಲೂ ನೀರೂರಿ, ಅವರು ಭಾವುಕರಾಗುವುದು ಸಹಜ. ಈ ಸೆರೆಮನೆಯಲ್ಲಿ ೧೮ ವರ್ಷಗಳ ಕಾಲ ವಾಸವಿದ್ದು, ಅಲ್ಲಿನ ಕ್ವಾರಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಅಗೆಯುವ ಕೆಲಸ ಮಾಡಿದ ನೆಲ್ಸನ್ ಮಂಡೆಲಾರ ಜೀವನದ ಗಾಥೆ, ಚಿರಸ್ಮರಣಿಯವಾದದ್ದು. ದಕ್ಷಿಣ ಆಫ಼್ರಿಕಾವನ್ನು ವರ್ಣಬೇಧ ನೀತಿಯ ದೌಲತ್ತಿನ ಕಬಂಧ ಬಾಹುಗಳಿಂದ ಬಿಡಿಸಲು ಆತ ಮಾಡಿದ ತ್ಯಾಗವನ್ನು ಮತ್ತೆಲ್ಲೂ ಕಾಣುವುದು ಅಪರೂಪ. ನಮ್ಮ ದೇಶವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿಗೊಳಿಸಲು, ನಮ್ಮ ಭಾರತದ ಪಿತಾಮಹ ಗಾಂಧಿಯ ಸತ್ಯಾಗ್ರಹ ಮತ್ತು ಅಹಿಂಸಾ ಚಳುವಳಿಯೊಂದೇ ಇದಕ್ಕೆ ಸಾಟಿಯಾಗಬಲ್ಲುದು!

ಮಂಡೆಲಾರ ಸೆರೆಮನೆ ವಾಸದ ಕಡೆಯ ದಿನಗಳಲ್ಲಿ, ಅಂದಿನ ದಕ್ಷಿಣ ಆಫ಼್ರಿಕಾದ ಸರ್ಕಾರಕ್ಕೆ ತಮ್ಮ ಆಳ್ವಿಕೆಯ ದಿನಗಳು ಇನ್ನು ಕಡೆಗೊಳ್ಳುವ ಸಮಯ ಹತ್ತಿರವಾಯಿತು ಎಂದು ಅರಿವಾದಾಗ, ಮಂಡೆಲಾರನ್ನು, ಕ್ವಾರಿಯ ಪರಿಶ್ರಮದ ಕಾರ್ಯದಿಂದ ಮುಕ್ತಿಗೊಳಿಸಿ, ಕೇವಲ ತೋಟದ ಕೆಲಸಕ್ಕೆ ವರ್ಗಾಯಿಸಿದ್ದರಂತೆ. ಇದಕ್ಕೆ ಹೋಲಿಸಿದರೆ, ಬ್ರಿಟಿಷರು ನಮ್ಮ ಮಹಾತ್ಮಾ ಗಾಂಧಿಯನ್ನು, ಉತ್ತಮ ಸೌಲಭ್ಯಗಳಿದ್ದ ಸೆರೆಮನೆಯ ಕೋಣೆಯಲ್ಲಿ ಇರಿಸಿದ್ದರು. ಆ ಸಮಯದಲ್ಲಿ ಸರೋಜಿನಿ ನಾಯ್ಡು ಅವರು, ಬ್ರಿಟಿಷ್ ಸರ್ಕಾರ ಗಾಂಧಿಯನ್ನು ಸೆರೆಮನೆಯ ಐಷೋರಾಮದಲ್ಲಿ ಅವರ ಬಡತನವನ್ನು ಪಾಲಿಸಿಡಲು ತುಂಬಾ ದುಬಾರಿಯ ವೆಚ್ಚ ಮಾಡುತ್ತಿದೆ ಎಂದು ದೂರಿದ್ದರಂತೆ! ಪಾಪ ನೆಲ್ಸನ್ ಮಂಡೆಲಾರಿಗೆ ಇಂತಹ ಸವಲತ್ತುಗಳೆಂದೂ ದೊರೆಯಲಿಲ್ಲ! ತಮ್ಮ ವಿರುದ್ಧ ಸೆರೆಮನೆಯಲ್ಲಿ ಕೊಡುತ್ತಿದ್ದ ಕಿರುಕುಳಗಳು ಮತ್ತು ಅಮಾನುಷ ವರ್ತನೆಯ ಬಗ್ಗೆ ಆತ ಒಮ್ಮೆಯೂ ದೂರಲಿಲ್ಲ, ಹಾಗೂ ತಮ್ಮ ಕೈಯ್ಯಲ್ಲಿ ಅಧಿಕಾರ ಸಿಕ್ಕಾಗ ಬಿಳಿಯರ ವಿರುದ್ಧ ಆತ ಯಾವ ದ್ವೇಷ ಮತ್ತು ಪ್ರತೀಕಾರಗಳನ್ನೂ ಸಾಧಿಸಲಿಲ್ಲ. ಇದು ನಿಜಕ್ಕೂ ಒಂದು ಅಪರೂಪದ ಗುಣವಲ್ಲವೆ! ಈ ಸೆರೆಮನೆಯ ಪ್ರವಾಸದ ಒಂದು ವೈಶಿಷ್ಟ್ಯವೆಂದರೆ, ಇಲ್ಲಿನ ಮಾರ್ಗದರ್ಶಿಗಳೆಲ್ಲಾ ಇಲ್ಲೇ ಒಮ್ಮೆ ವಾಸವಾಗಿ, ಈ ಸೆರೆಮನೆಯಲ್ಲಿ ನಡೆಯುತ್ತಿದ್ದ ಕ್ರೌರ್ಯದ ಬಗ್ಗೆ ಪ್ರತ್ಯಕ್ಷದರ್ಶಿಗಳಾಗಿ ಅನುಭವವಿರುವ ಮಾಜಿ ವಾಸಿಗಳು ಹಾಗೂ ರಾಜಕೀಯ ಕೈದಿಗಳು ಎನ್ನುವುದು ಕುತೂಹಲದ ಸಂಗತಿ.
ಇಲ್ಲಿನ ಟೇಬಲ್ ಪರ್ವತದ ಮೇಲೆಕ್ಕೆ ಕೇಬಲ್ ಕಾರಿನಲ್ಲಿ ಕುಳಿತು ಶಿಖರವನ್ನು ತಲಪುವ ಅವಕಾಶ ನಮಗೆ ದಕ್ಕಲಿಲ್ಲ. ದುರದೃಷ್ಟವಶಾತ್ ಪರ್ವತದ ಮೇಲೆ ತಗ್ಗಿನ ಮೋಡಗಳು ಕವಿದಿದ್ದ ಕಾರಣ, ಕೇಬಲ್ ಕಾರಿನ ಕಂಪನಿಯವರು ಅದರ ಕಾರ್ಯಾಚರಣೆಯನ್ನು ರದ್ದುಗೊಳಿಸಿದ್ದರು. ಒಟ್ಟಿನಲ್ಲಿ ಹೇಳಬೇಕೆಂದರೆ ದಕ್ಷಿಣ ಆಫ಼್ರಿಕಾ ಅನುಪಮ ಪ್ರಕೃತಿ ಸೌಂಧರ್ಯವನ್ನು ಹೊಂದಿರುವ ದೇಶವಾಗಿದೆ. ನೀವೇನಾದರೂ ಈ ಸುಂದರ ನಾಡಿನ ಪ್ರಕೃತಿಯನ್ನು ಸವಿಯಬೇಕೆನ್ನುವ ಉದ್ದೇಶ ಹೊಂದಿದ್ದರೆ, ಈಗಲೆ ನಿಮ್ಮ ಪ್ರವಾಸದ ಟಿಕೆಟನ್ನು ಬುಕ್ ಮಾಡಿಬಿಡಿ.ಇಲ್ಲಿನ ಪ್ರವಾಸದಲ್ಲಿ ನಿಮಗೆ ದೊರೆಯುವ ಆದರಾತಿಥ್ಯಗಳು ಬಹಳ ಉತ್ತಮ ಮಟ್ಟದ್ದಾಗಿರುತ್ತದೆ. ಪ್ರವಾಸದ ಕಂಪನಿಗಳು ಇಲ್ಲಿ ಕೇಪ್ ಟೌನಿನ ಸುತ್ತಮುತ್ತಲಿನ ಪಟ್ಟಣಗಳ ಸಾಂಸ್ಕೃತಿಕ ಪ್ರವಾಸವನ್ನು ಏರ್ಪಡಿಸುತ್ತಾರೆ. ಅಲ್ಲಿನ ಸ್ಥಳೀಯ ಜನ ಸಮುದಾಯದೊಡನೆ ಮಾತನಾಡಿದಾಗ, ಅವರೊಂದಿಗೆ ದೀರ್ಘಕಾಲ ಬಿಳಿಯರು ನಡೆಸಿದ ವರ್ಣದ್ವೇಷ ನೀತಿಯ ದಬ್ಬಾಳಿಕೆಯ ಬಗ್ಗೆ ಪ್ರಸ್ತುತದಲ್ಲಿ ಯಾವುದೇ ರೀತಿಯ ದ್ವೇಷವನ್ನೂ ಹೊಂದಿದಂತೆ ಕಾಣಬರಲಿಲ್ಲ. ಅವರಲ್ಲಿ ಯಾರೂ ನಮ್ಮೊಡನೆ ಬಿಳಿಯ ಜನರ ಬಗ್ಗೆ ಮಾತನಾಡಿದಾಗ ತಮ್ಮ ಮನದಲ್ಲಿರಬಹುದಾದ ಹಗೆತನದ ಭಾವನೆಗಳನ್ನು ವ್ಯಕ್ತಪಡಿಸಲಿಲ್ಲ. ಇದು ಒಂದು ರೀತಿಯಲ್ಲಿ ಮಂಡೆಲಾನಂತಹ ಸದ್ವ್ಯಕ್ತಿಯ ಪ್ರಭಾವವಿರಬಹುದೇನೋ ಎಂದು ನನ್ನ ಅನಿಸಿಕೆ! ಆದರೇನು, ಮಂಡೆಲಾ ಅಧಿಕಾರವನ್ನು ತೊರೆದ ಬಳಿಕ, ಅಲ್ಲಿನ ಸರ್ಕಾರದಲ್ಲಿ ಲಂಚಗುಳಿತನ ಬಹಳ ವ್ಯಾಪಕವಾಗಿದ್ದು, ಇದು ದೇಶದ ಪ್ರಗತಿಗೆ ತಡೆಯೊಡ್ಡಿದೆಯೆಂದು ಎಲ್ಲರ ಅಭಿಪ್ರಾಯವಾಗಿದೆ. ಕಾಲಾನಂತರದಲ್ಲಿ ಇಲ್ಲಿನ ಜನತೆ ಈ ಲಂಚಗುಳಿತನದ ಪ್ರತಿಬಂಧಕವನ್ನೂ ದಾಟಿ, ತಮ್ಮ ದೇಶವನ್ನು ಎಲ್ಲಾ ರಂಗಗಳಲ್ಲೂ ಮುನ್ನಡೆಸುತ್ತಾರೆ ಎನ್ನುವುದು ನನ್ನ ಮನದ ನಂಬಿಕೆ.
ಅಂದ ಹಾಗೆ ಈ ಪೂರಾ ಪ್ರವಾಸದಲ್ಲಿ, ನಾನು ನನ್ನ ಹೆಂಡತಿ ಸೀತು ಹೇಗೆ ಸಸ್ಯಾಹಾರಿಗಳಾಗೆ ಇದ್ದೆವು ಎಂದು ನಿಮ್ಮ ಮನದಲ್ಲಿ ಶಂಕೆ ಏಳಬಹುದು! ನನಗೆ ವಯಕ್ತಿಕವಾಗಿ ಯಾವ ಸಮಸ್ಯೆಯೂ ತಲೆದೋರಲಿಲ್ಲ, ಆದರೆ ಸೀತುವಿನ ಬಗ್ಗೆ ಅವಳನ್ನೇ ನೀವು ಕೇಳಬೇಕು. ನನ್ನ ಪ್ರವಾಸದ ಸಮಯದಲ್ಲಿ ಅಲ್ಲಿನ ಹಲವಾರು ಫ಼ೋಟೊಗಳನ್ನು ನಾನು ಫ಼ೇಸ್ ಬುಕ್ಕಿನಲ್ಲಿ ಪ್ರಕಟಿಸಿದಾಗ, ನನ್ನ ಹಲವಾರು ಗೆಳೆಯರು ಕೇಳಿದ ಪ್ರಶ್ನೆಯೇನು ಗೊತ್ತೇ? ಅಲ್ಲಿ ಅನ್ನ ಸಾರು ಸಿಗುತ್ತಾ ಎಂದು? ಅನ್ನ ಏನೋ ಸಿಗತ್ತೆ, ಆದರೆ ಸಾರು ಸಿಕ್ಕಲ್ಲ! ನಾವೆಲ್ಲಾ ಎರಡು ವಾರ ಸಾರಿಲ್ಲದೆ ಬದುಕಬಹುದಲ್ವೇ! ನಾವು ಅಂದ್ರೆ ನಮ್ಮಲ್ಲಿ ಬಹುತೇಕ ಮಂದಿ ನಿಭಾಯಿಸಬಹುದು ಅಂತ ನಾನು ಹೇಳ್ತಿರೋದು ಅಷ್ಟೇ!
ಒಂದು ಸ್ವಾರಸ್ಯಕರ ಲೇಖನ. ಆಫ್ರಿಕ ಏಂದರೆ ಕಗ್ಗತ್ತಲ ಖಂಡ ಎಂದು ಭಾವಿಸಿದವರಿಗೆ ಇದು ಕಣ್ಣು ತೆರೆಸುವಂತಿದೆ. ನಿರೂಪಣೆ ಚೆನ್ನಾಗಿದೆ. ಬಹಳಷ್ಟು ವಿಷಯಗಳು ಅಡಕವಾಗಿದೆ. ಲೇಖನ ಓದಿದವರಿಗೆ ಅಲ್ಲಿಗೆ ಹೋಗಬೇಕೆಂಬ ಕುತೂಹಲ ಮೂಡಿಸುವಲ್ಲಿ ಅವರು ಸಫಲರಾಗಿದ್ದಾರೆ. ಸಸ್ಯಾಹಾರಿಗಳೂ ಧೈಯವಾಗಿ ಅಲ್ಲಿಗೆ ಹೋಗಿಬರಬಹುದು ಎಂಬ ಸಂಗತಿ ನನ್ನಂತಹ ಅನೇಕರನ್ನು ಪ್ರೇರೇಪಿಸಬಹುದು.
ಆನಂದ
LikeLike
ಕೂತ ಕಡೆಯೇ, ಓದುತ್ತಾ ಇದ್ದ ಹಾಗೇ ನಾನೂ ಕೂಡ ದಕ್ಷಿಣ ಆಫ್ರಿಕಾ ದೇಶದ ಪ್ರವಾಸ ಮಾಡಿದಂತಾಯಿತು. ಸೊಗಸಾದ ಲೇಖನ. ನಿಮ್ಮಿಂದ ಹೀಗೇ ಮತ್ತಷ್ಟು ಲೇಖನಗಳು ಬರಲಿ ಎಂದು ನನ್ನ ಆಶಯ.
LikeLike
ರಾಮೂರ್ತಿಯವರ ದಕ್ಷಿಣ ಆಫ್ರಿಕಾದ ರಮ್ಯ ಪ್ರವಾಸ ಕಥನ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ.ದಕ್ಷಿಣ ಆಫ್ರಿಕಾ ಎಂದೊಡನೆ ಅಲ್ಲಿನ ವರ್ಣಭೇದ ನೀತಿ ,ನೆಲ್ಸನ್ ಮಂಡೇಲಾರ ಅವಿರತ ಹೋರಾಟ ,ಗಾಂಧಿಯವರಿಗಾದ ಅಪಮಾನ ,ನಮ್ಮ ಸ್ವಾತಂತ್ರ್ಯಹೋರಾಟದ ಹುಟ್ಟು ,ಅಲ್ಲಿಯ ರಮಣೀಯ ಸೃಷ್ಟಿ ಸೌಂದರ್ಯ ಎಲ್ಲ ಪುಂಖಾನು ಪುಂಖವಾಗಿ ಗರಿಗೆದರಿ ಮನದಂಗಳದಲ್ಲಿ ಸುಳಿಯಲಾರಂಭಿಸುತ್ತವೆ.ಅವನ್ನೆಲ್ಲ ,ತಮ್ಮ ಪ್ರವಾಸದ ಪೂರ್ವಭಾವಿ ತಯಾರಿ,ಸಸ್ಯಾಹಾರಿಗಳು ಪಡುವ ಪಾಡು ಎಲ್ಲವನ್ನೂ ಮನದಲ್ಲಚ್ಚೊತ್ತುವಂತೆ ಸುಂದರ ಶೈಲಿಯಲ್ಲಿ ಮೂಡಿಸಿದ್ದಾರೆ.ಜೊತೆಗೇ ನಮ್ಮನ್ನು ನಮ್ಮ ಶಾಲಾ ದಿನಗಳಲ್ಲಿಯ ಕಲಿಕೆಯತ್ತ ಒಂದುಕ್ಷಣ ಕರೆದೊಯ್ಯುತ್ತಾರೆ.ಸೃಷ್ಟಿಯ ರಮಣೀಯ. ವರ್ಣಮಯ ವರ್ಣನೆ ದ.ಆಫ್ರಿಕಾದ ಪ್ರವಾಸದತ್ತ ನಮ್ಮನ್ನೂ ಸೆಳೆದರೆ ಅಚ್ಚರಿಯೇನಿಲ್ಲ.ಸರಳ ಶೈಲಿಯ ,ಯಥಾವತ್ತ ನಿರೂಪಣೆಯ ,ಮಾಹಿತಿಪೂರ್ಣ ಪ್ರವಾಸ ಕಥನಕ್ಕೆ ಧನ್ಯವಾದಗಳು ರಾಮಮೂರ್ತಿಯವರೇ.
ಸರೋಜಿನಿ ಪಡಸಲಗಿ
LikeLiked by 1 person
ರಾಮಮೂರ್ತಿಯವರು ಅತ್ಯಂತ ಸ್ವಾರಸ್ಯಕರ ಪ್ರವಾಸ ಕಥನವನ್ನು ಹೆಣೆದಿದ್ದಾರೆ. ಪ್ರವಾಸದಲ್ಲಿ ನೋಡಿದ ಸ್ಥಳಗಳ ಸುಂದರ ವರ್ಣನೆಯಷ್ಟೇ ಅಲ್ಲ, ಪ್ರವಾಸ ಪೂರ್ವ ಸಿದ್ಧತೆ, ಸಸ್ಯಾಹಾರಿಗಳ ‘ಗೋಳು‘ (ಈ ಪಟ್ಟಿಯಲ್ಲಿ, ನಮ್ಮದೂ ಹೆಸರು ಯಾವಾಗಲೂ!), ಅಲ್ಲಿಯ ಜನಜೀವನ ಹಾಗು ಸ್ವಾತಂತ್ರ್ಯ ನಂತರದ ದೇಶದ ಪರಿಸ್ಥಿತಿ, ಇವೆಲ್ಲವುಗಳ ವರ್ಣನೆ ಇನ್ನೂ ಹೆಚ್ಚು ಮನಸ್ಸಿಗೆ ನಾಟುತ್ತವೆ. ಗುಡ್ ಹೋಪಿನ ಘಟನೆಯಂತೂ ಅವರನ್ನು ಭಾವುಕರನ್ನಾಗಿ ಮಾಡುತ್ತಿದ್ದಂತೆಯೇ ನನ್ನಬಾಲ್ಯದ ಭೂಗೋಲ ಪಾಠಕ್ಕೆ ಕರೆದೊಯ್ಯಿತು. ನೆಲ್ಸನ್ ಮಂಡೇಲಾರ ಕಾರಾಗ್ರಹದ ವಿಷಯ ಅವರು ಸೆರೆಮನೆಯಿಂದ ಹೊರಬಂದ ಕೂಡಲೇ ಕೊಟ್ಟ ಪತ್ರಿಕಾ ಗೋಷ್ಠಿಯ live ಟಿ ವಿ ಬಿತ್ತರಣೆಯನ್ನುಈ ದೇಶದಲ್ಲಿದ್ದಾಗ ಆತುರದಿಂದ ನೋಡಿದ್ದನ್ನು ನೆನಪಿಗೆ ತಂದಿತು. ೩೦ ವರ್ಷಗಳ ಬಂಧಿ ಹೊರಬಂದೊಡನೇ ಕಿಕ್ಕಿರಿದು ನೆರೆದಿದ್ದ ಹಲವಾರು ಪತ್ರಿಕಾಕರ್ತರ ಸವಾಲುಗಳನ್ನು ಲೀಲಾಜಾಲವಾಗಿ ಎದುರಿಸಿ ಉತ್ತರಕೊಟ್ಟ ಘಟನೆ ನನ್ನ ಮನಃಪಟಲದ ಮೇಲೆ ಇನ್ನೂ ಇದೆ. ಈ ಲೇಖನ ನನಗೂ ಆ ದೇಶದ ಪ್ರವಾಸವನ್ನು ಕೈಕೊಳ್ಳುವ ಆಸೆ ಹುಟ್ಟಿಸಿದೆ. ಈ ವರ್ಣಮಯ ಚಿತ್ರಣ ರೂಪಗೊಳ್ಳಲು ಶ್ರಮಿಸಿದವರನ್ನ ಅಭಿನಂದಿಸಲೇ ಬೇಕು. ”ಮತ್ತೆ ಪ್ರವಾಸ ಮಾಡಿ, ಮತ್ತೆ ಬರೆಯಿರಿ” ಎಂದು ರಾಮಮೂರ್ತಿಯವರನ್ನು ಕೇಳಿಕೊಳ್ಳೋಣವೇ?
LikeLike
ದಕ್ಷಿಣ ಆಫ಼್ರಿಕೆಯ ಚರಿತ್ರೆಯ ಕರಾಳ ದಿನಗಳ ಬಗ್ಗೆ ತಿಳಿಯದಿರುವವರು ಬಹಳ ವಿರಳವೆನ್ನಬಹುದು. ನಮ್ಮ ಮತ್ತು ನಮ್ಮ ಹಿಂದಿನ
ಪೀಳಿಗೆಯವರೆಲ್ಲರೂ, ಅಲ್ಲಿನ ಜನ ವರ್ಣನೀತಿಯ ವಿರುದ್ಧ ನಡೆಸಿದ ಹೋರಾಟದ ಬಗ್ಗೆ ಮಾಹಿತಿ ಇರುವವರೆ ಅಲ್ಲವೇ! ನೆಲ್ಸನ್ ಮಂಡೆಲಾರಂತಹ ಧೀಮಂತ ನಾಯಕನ ನೇತೃತ್ವದಲ್ಲಿ ನಡೆದ ಚಳುವಳಿಯ ಬಗ್ಗೆ ರೇಡಿಯೋ ಮತ್ತು ವೃತ್ತಪತ್ರಿಕೆಗಳಲ್ಲಿ ಓದಿದ ನೆನಪು ಇನ್ನೂ ಹಸಿರಾಗಿಯೇ ಇದೆ. ಆ ದೇಶದ ಪ್ರಕೃತಿ ಸೌಂಧರ್ಯ, ಅಲ್ಲಿನ ಸಂಪನ್ಮೂಲಗಳ ಜೊತೆಗೆ, ಅಲ್ಲಿನ ಸಾಮಾಜಿಕ, ರಾಜಕೀಯ ಮತ್ತಿತರ ಸಮಸ್ಯೆಗಳ ಬಗ್ಗೆಯೂ ಓದಿದ್ದು ನೆನಪಿದೆ. ಅಂತಹ ದೇಶವನ್ನು ಭೇಟಿ ಮಾಡಲು ಇಂದು ಜನ ನಾ ಮುಂದು ತಾ ಮುಂದು ಎಂದು ಹೋಗುತ್ತಿರುವುದೂ ನಿಜ. ಅಂತಹ ಭೇಟಿಯನ್ನು ನಮ್ಮ ಅನಿವಾಸಿ ಬಳಗದ ಹಿರಿಯ ಸದಸ್ಯ ರಾಮಮೂರ್ತಿ ಮತ್ತು ಅವರ ಪತ್ನಿ ಸೀತು ಅವರು ನೀಡಿರುವ ಬಗ್ಗೆ, ರಾಮಮೂರ್ತಿ ಅವರು ಬಹಳ ಸ್ವಾರಸ್ಯಕರವಾಗಿ ಬಣ್ಣಿಸಿ ಬರೆದಿದ್ದಾರೆ. ಈ ಲೇಖನ ಓದಿದವರಿಗೆ, ಆ ದೇಶಕ್ಕೆ ಖಂಡಿತವಾಗಿ ಹೋಗಬೇಕೆನ್ನುವ ಚಪಲವನ್ನೂ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು. ಮಂಡೆಲಾ ಅವರನ್ನು ಸುಮಾರು ಮೂರು ದಶಕಗಳ ಕಾಲ ಸೆರೆ ಇಟ್ಟಿದ್ದ, ಅಲ್ಲಿನ ರಾಬಿನ್ ದ್ವೀಪದ ಸೆರೆಮನೆಯ ಬಗ್ಗೆ ಓದಿದಾಗ, ಕಣ್ಣುಗಳು ತೇವವಾಗುವುದು. ತನ್ನ ದೇಶದ ಸ್ವಾತಂತ್ರಕ್ಕಾಗಿ ಆತ ಪಟ್ಟ ಕಷ್ಟಗಳು ನಿಜಕ್ಕೂ ಸ್ಮರಣೀಯ. ಇಂದಿನ ಯುವ ಪೀಳಿಗೆ ಅದನ್ನು ಸದಾ ನೆನೆದು, ಆ ದೇಶವನ್ನು ಮುಂದುವರೆಸುತ್ತಾರೇನೋ! ಒಟ್ಟಿನಲ್ಲಿ ಮಾಹಿತಿಪೂರ್ಣ ಲೇಖನ. ತಮ್ಮ ದೃಷ್ಟಿಯಿಂದ, ಸ್ವತಃ ಅನುಭವಿಸಿ ಬರೆದ ಈ ಲೇಖನ ನಮ್ಮ ಓದುಗರ ಮನ ಮುಟ್ಟುತ್ತದೆ ಎಂದು ನನ್ನ ನಂಬಿಕೆ.
ಉಮಾ ವೆಂಕಟೇಶ್
LikeLiked by 1 person