ಕೆ.ವಿ. ಸುಬ್ಬಣ್ಣ ಮತ್ತು ನೀನಾಸಂ ಎಂಬ ‘ ತಳಮಟ್ಟದ ಬೆರಗಿನ ಲೋಕ’ – ಡಾ. ವಿನತೆ ಶರ್ಮ

K V Subbanna
ಕೆ ವಿ ಸುಬ್ಬಣ್ಣ (ಚಿತ್ರ: ನೀನಾಸಂ ಜಾಲ)

ಫೇಸ್ ಬುಕ್ ನಲ್ಲಿ ಬಂದ ಸಂದೇಶವೊಂದು ಹೇಳಿತ್ತು – ರಂಗ ತಂಡವೊಂದು ಕೆ.ವಿ. ಸುಬ್ಬಣ್ಣರವರ ಸ್ಮರಣ ನಾಟಕೋತ್ಸವನ್ನು ಹಮ್ಮಿಕೊಂಡಿದೆ ಎಂದು. ಹಾಗೆ ಕೆಲ ವಿವರಗಳನ್ನು ಓದುತ್ತಾ ಹೋದೆ. ಬೆಂಗಳೂರೂ ಸೇರಿದಂತೆ ಕರ್ನಾಟಕ ರಾಜ್ಯದ ಅಲ್ಲಲ್ಲಿ ಸುಬ್ಬಣ್ಣರವರನ್ನು ನೆನೆಸಿಕೊಳ್ಳುತ್ತಾ ಹಲವಾರು ಸಾಹಿತ್ಯ, ಸಂಸ್ಕೃತಿ ಮತ್ತು ನಾಟಕ ಸಂಬಂಧಿತ ಚಟುವಟಿಕೆಗಳನ್ನು ಈ ಜುಲೈ ತಿಂಗಳ ಕಡೆಯರ್ಧದಲ್ಲಿ ನಡೆಸಲಾಗಿತ್ತು. ದುಂಡನೆ ಚುಕ್ಕಿಗಳಿಟ್ಟು ಗೆರೆ ಎಳೆದು ಅವನ್ನು ಒಂದಕ್ಕೊಂದು ಬೆಸೆದು ಅದ್ಭುತ ಚಿತ್ತಾರಗಳನ್ನು ಸೃಷ್ಟಿಸಿದ ನೀನಾಸಂ ಕುರಿತು ಇರುವ ನೆನಪುಗಳ ಅಂಗಳ ಕಣ್ಣ ಮುಂದೆ ಬಂದು ಕುಳಿತೆ ಬಿಟ್ಟಿತು, ಹಠ ಹಿಡಿದ ಮುದ್ದು ಮಗುವಿನ ಪರಿ.

 

ಮಲೆನಾಡಿನ ಹೆಗ್ಗೋಡು ಎಂಬ ಪುಟ್ಟ ಹಳ್ಳಿ ಕೊಳಲಾಗಿದ್ದು,ಎಂದೆಂದಿಗೂ ಬತ್ತದ ಚೈತನ್ಯದ ಚಿಲುಮೆ ಕೆ.ವಿ. ಸುಬ್ಬಣ್ಣನವರು ಆ ಕೊಳಲೂದಿದ ಮಾಂತ್ರಿಕನಾಗಿದ್ದು,ಆ ಕೊಳಲ ಗಾನದಿಂದ ಹುಟ್ಟಿದ ರಂಗ ಪ್ರಯೋಗಗಳು, ಚಲನಚಿತ್ರಲೋಕದ ದಿಗ್ಗಜರು ಈ ಪ್ರಪಂಚಕ್ಕೆ ಕೊಟ್ಟ ಅಪರೂಪದ ರತ್ನಗಳನ್ನ ಅವರು ನಮಗೆಲ್ಲಾ ಉಣ ಬಡಿಸಿದ ಪರಿ,ಸಾಹಿತ್ಯದ ಮಾತುಕತೆಗಳು, ಕಲೆ ಮತ್ತು ಸಂಸ್ಕೃತಿ ಸಂಭ್ರಮಗಳು, ಜೀವನ ಸಮಷ್ಟಿ,ದೃಷ್ಟಿಕೋನಗಳ ಕ್ರಿಯಾವಾದಗಳು … ಒಂದೇ ಎರಡೇ! ಆ ಸಣ್ಣ ಹಳ್ಳಿ ಹೆಗ್ಗೋಡಿನಲ್ಲಿ ಸುಬ್ಬಣ್ಣನವರು ಮತ್ತವರ ಗೆಳೆಯರು ಸೃಷ್ಟಿಸಿದ ಲೋಕಕ್ಕೆ ಯಾವ ಹೆಸರನ್ನು ತಾನೇ ಇಡುವುದ? ಆ ಲೋಕಕ್ಕೆ ನೀನಾಸಂ ಮತ್ತು ಹೆಗ್ಗೋಡು ಎಂಬ ಎರಡೇ ಪದಗಳು ಸಾಕಲ್ಲವೇ! ಮತ್ತೇನು ಗುರುತು,ಲಾಂಛನ ಬೇಕು? ಎಲ್ಲವೂ ತನ್ನಷ್ಟಕ್ಕೆ ತಾನೇ ಅನಾವರಣಗೊಳ್ಳುತ್ತದೆ.

ಇಂಟಿಮೇಟ್ ಥಿಯೆಟರ್ (ಬಲಗಡೆ) ಮತ್ತು ನೀನಾಸಂ ಗ್ರಂಥಾಲಯ (ಎಡಗಡೆ) - ಪ್ರತೀಕ್ ಮುಕುಂದ ತೆಗೆದ ಚಿತ್ರ
ಇಂಟಿಮೇಟ್ ಥೇಟರ್ ಮತ್ತು ಗ್ರಂಥಾಲಯ (ಚಿತ್ರ:  ಪ್ರತೀಕ್ ಮುಕುಂದ)

ನೀನಾಸಂನ ಕಿರು ಪರಿಚಯ: ೧೯೪೯ರಲ್ಲಿ ಹೆಗ್ಗೋಡಿನ ಸುತ್ತ ಮುತ್ತಲಿನ ಹಳ್ಳಿಗಳ ಕೃಷಿಕರಲ್ಲಿ ಕೆಲವರು ತಮಗಿದ್ದ ರಂಗಾಸಕ್ತಿಗೆ, ನಾಟಕಗಳ ಬಗ್ಗೆ ತಮಗಿರುವ ತುಂಬು ಪ್ರೀತಿಗೆ ಒಂದು ಖಚಿತ ಸಾಂಸ್ಥಿಕ ರೂಪ ಕೊಟ್ಟು ಶ್ರೀ ನೀಲಕಂಠೇಶ್ವರ ನಾಟ್ಯ ಸಂಘವೆಂಬ ಸಂಸ್ಥೆಯನ್ನು ಆರಂಭಿಸಿದರು. ಸ್ಥಳೀಯ ದೇವರಾದ ನೀಲಕಂಠೇಶ್ವರನ ಹೆಸರೇ ಸಂಸ್ಥೆಗೂ ಕೂಡ. ಕೃಷಿ ಕೆಲಸ ಮುಗಿಸಿ ಬಂದು ಸಂಜೆ, ರಾತ್ರಿ ಹೊತ್ತಿನಲ್ಲಿ ನಾಟಕಗಳನ್ನು ಬೆಳೆಸಿ ಹಳ್ಳಿಗರಿಗೆ ಅವುಗಳ ರಸದೌತಣವನ್ನು ಬಡಿಸುತ್ತಿದ್ದರು. ಅವರುಗಳ ಮೇಲೆ ಭಾರತದ ಸ್ವಾತಂತ್ರ್ಯ ಹೋರಾಟದ ಚಳವಳಿಗಳ ಪ್ರಭಾವವೂ ಸಾಕಷ್ಟಿತ್ತು. ಅವರಲ್ಲಿ ಒಬ್ಬರು ಕೆ.ವಿ. ಸುಬ್ಬಣ್ಣ. ಸಂಸ್ಥೆ ಬೆಳೆಯುತ್ತ ಹೋದ ಹಾಗೆ ಸುಬ್ಬಣ್ಣನವರು ನಾಟಕಗಳು ಕನ್ನಡಿಗಳ ಹಾಗೆ- ಜನರ ಜೀವನದ ದಿನನಿತ್ಯದ ಆಗುಹೋಗುಗಳನ್ನು, ನಮ್ಮೆಲ್ಲರ ಬದುಕುಗಳ ಮೇಲೆ ನಾನಾ ರೀತಿಯ ಪ್ರಭಾವಗಳನ್ನು ಬೀರುವ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಮತ್ತು ಧಾರ್ಮಿಕ ಅಂಶಗಳನ್ನು ಅವಲೋಕಿಸುವ ಶಕ್ತಿ ನಾಟಕಗಳಿಗೆ ಇದೆ ಎಂದು ಗುರುತಿಸಿದ್ದರು. ಜನಸಾಮಾನ್ಯರಿಗೆ ಸುಲಭವಾಗಿ ಎಟುಕುವ ನಾಟಕಗಳಿಂದ ಸಾಮಾಜಿಕ ಬದಲಾವಣೆ, ನ್ಯಾಯ, ಅರಿವು, ಜಾಗೃತಿಗಳನ್ನ ಅವರಿಗೆ ತಲುಪಿಸಬಹುದು ಅನ್ನುವ ಆಶಯವೂ ಇತ್ತು. ಆ ಹಂತದಲ್ಲಿ ನಾಟಕಗಳ, ಅವುಗಳ ಕಥಾ ಹಂದರಗಳ, ಅದರ ಮೂಲಕ ಹಾಗೇ ಜೀವನದೃಷ್ಟಿಗಳನ್ನು ಸುತ್ತುವರಿದ ಹಲವಾರು ಬೌದ್ಧಿಕ ಚರ್ಚೆಗಳು, ಕಮ್ಮಟಗಳು, ಸಾಹಿತ್ಯಸಂಬಂಧ ಕೆಲಸಗಳು ನಡೆಯಲಾರಂಭಿಸಿದ್ದು ಆಶ್ಚರ್ಯವೇನಿಲ್ಲ. ೧೯೬೦ ರಲ್ಲಿ ಅಕ್ಷರ ಪ್ರಕಾಶನ ಹುಟ್ಟಿಕೊಂಡಿತು. ಕರ್ನಾಟಕದ ಸಾಹಿತ್ಯ ಪ್ರಿಯರಿಗೆ ಅಕ್ಷರ ಪ್ರಕಾಶನ ಕೊಟ್ಟಿರುವ ಕೊಡುಗೆ ಅಮೂಲ್ಯ.

 

ಸಂಸ್ಥೆ ನೀನಾಸಂ ಎಂದು ಗುರುತಿಸಿಕೊಳ್ಳತೊಡಗಿದ ಹಾಗೆ ಕನ್ನಡ ನಾಡಿನ ಎವರೆಸ್ಟ್ ಶಿಖರದಂತಹ ಕೋಟ

ಜರ್ಮನಿಯ ಹೆಸರಾಂತ ರಂಗ ನಿರ್ದೇಶಕ ಫ್ರಿಟ್ಜ್ ಬೆನೆವಿಟ್ಜ್ - ವಿನತೆ ಶರ್ಮ ತೆಗೆದ ಚಿತ್ರ
ಜರ್ಮನಿಯ ಹೆಸರಾಂತ ನಿರ್ದೇಶಕ ಪ್ರಿಟ್ಸ್ ಬೆನೆವಿಟ್ಸ್

ಶಿವರಾಮ ಕಾರಂತರ ಹೆಸರಿನಲ್ಲಿ ರಂಗಮಂದಿರವೂ ಸಿದ್ಧವಾಯಿತು. ರಂಗಮಂದಿರವು ಶಿವರಾಮ ಕಾರಂತರ ಯಕ್ಷಗಾನ ಪ್ರಯೋಗಗಳನ್ನು, ಬಿ.ವಿ.ಕಾರಂತರ ‘ಪಂಜರ ಶಾಲೆ’, ಸುಬ್ಬಣ್ಣರ ‘ಸಂಗ್ಯಾ ಬಾಳ್ಯಾ’ ನಾಟಕಗಳನ್ನು ಮುಡಿಗೇರಿಸಿಕೊಂಡಿತು. ನಾಟಕಗಳ ಜೊತೆಗೆ ಸಾಹಿತ್ಯ ಕೃಷಿ, ಚಲನಚಿತ್ರಗಳ ಅವಲೋಕನ ಕಮ್ಮಟಗಳು ಮೊಳಕೆಯೊಡೆದವು. ಕನ್ನಡಿಗರಿಗೆ ಪ್ರಪಂಚದ ಅತ್ಯುತ್ತಮ ಚಲನ ಚಿತ್ರಗಳನ್ನು ಉಣಬಡುವ ಯೋಜನೆ ಕಾರ್ಯರೂಪಕ್ಕೆ ಬಂದಿತು.

ಮುಂದೆ ಅವೆಲ್ಲದರ ಜೊತೆ ಜೊತೆಗೆ ಸಾಥ್ ಕೊಟ್ಟದ್ದು ಎಲ್ಲದರ ಜೊತೆ ಬೆರೆತು ಹೋಗಿದ್ದ ಒಳ ಹರಿವು- ಕಲೆ, ಸಾಂಸ್ಕೃತಿಕ ಅವಲೋಕನ, ವಿಮರ್ಶೆ, ಚರ್ಚೆ ಮತ್ತು ಹಂಚಿಕೆ. ರಾಜ್ಯದ ರಾಜಧಾನಿಯಿಂದ ಅಷ್ಟೇ ಅಲ್ಲ, ನಗರದಿಂದ ದೂರವಾಗಿ, ಗ್ರಾಮೀಣ ಪ್ರದೇಶದಲ್ಲಿ ಮಲೆನಾಡಿನ ಕೃಷಿಕ ಸಮುದಾಯವೊಂದು ಇಂತಹ ವಿಶ್ವಮಟ್ಟದ ಗುಣವುಳ್ಳ ಅಪರೂಪದ ಮತ್ತು ಅಷ್ಟೇ ವಿಶಿಷ್ಟವಾದ ಪ್ರಯೋಗಗಳನ್ನು ಕೈಗೆತ್ತಿಕೊಂಡದ್ದು ನೀನಾಸಂನ ಹೆಗ್ಗುರುತು. ಇದೇ ಕಾರಣಕ್ಕಾಗಿ ದೂರದ ಅಮೇರಿಕಾದ ಫೋರ್ಡ್ ಫೌಂಡೇಶನ್ ಅವರನ್ನು ಹುಡುಕಿಕೊಂಡು ಬಂತು; ಕರ್ನಾಟಕ ರಾಜ್ಯ ಸರ್ಕಾರ ಕೂಡ ಕೈ ಸೇರಿಸಿ ಗೌರವ ಪಡೆದುಕೊಂಡಿತು. ಭಾರತದ, ವಿಶ್ವದ ಹೆಸರಾಂತ ರಂಗ ನಿರ್ದೇಶಕರುಗಳು ನೀನಾಸಂಗೆ ಬಂದು, ಉಳಿದು ರಂಗ ವಿದ್ಯಾರ್ಥಿಗಳೊಡನೆ ತಮ್ಮ ಪ್ರತಿಭೆಯನ್ನು ಹಂಚಿಕೊಂಡರು. ದೇಶ ವಿದೇಶಗಳಿಂದ ಚಲನಚಿತ್ರಗಳ ವಿಮರ್ಶಕಾರರು ಪ್ರತಿ ಶಿಬಿರಕ್ಕೂ ಭೇಟಿ ಕೊಟ್ಟು ಶಿಬಿರಾರ್ಥಿಗಳ ಜೊತೆ ಸಂವಾದಿಸಿದರು. ರಂಗಕಲೆಗೆ ಸಂಬಂಧಪಟ್ಟ, ಚಲನಚಿತ್ರ ವಿಮರ್ಶೆಗೆ ಸಂಬಂಧಿಸಿದ ಹಾಗೆ, ಮತ್ತು ಸಾಹಿತ್ಯದ ಹಲವಾರು ಬೇರುಗಳುಳ್ಳ, ಅನೇಕ ಉತ್ತಮೋತ್ತಮ ಚಲನಚಿತ್ರಗಳನ್ನ ಹೊಂದಿದ ಅಪರೂಪದ ಗ್ರಂಥಾಲಯ ಕೂಡ ಮತ್ತೊಂದು ಮೈಲಿಗಲ್ಲು.

ನೀನಾಸಂ ಕಛೇರಿ - ಶ್ರದ್ಧ ನೆಲಮಂಗಲ ತೆಗೆದ ಚಿತ್ರ
ನೀನಾಸಂ ಕಛೇರಿ (ಚಿತ್ರ: ಶ್ರದ್ಧ ನೆಲಮಂಗಲ)

ನೀನಾಸಂನ ಮೈಲಿಗಲ್ಲುಗಳ ಜೊತೆ ನಡೆದಾಗ: ೧೯೮೦ ರ ಆದಿಯಲ್ಲಿ ಆರಂಭವಾದ ನೀನಾಸಂ ರಂಗಶಾಲೆ ಪ್ರತಿ ವರ್ಷ ಆಯ್ದ ಅಭ್ಯರ್ಥಿಗಳಿಗೆ ಹತ್ತು ತಿಂಗಳುಗಳ ಕಾಲ ರಂಗಕಲಿಕೆಯನ್ನು ನೀಡಿ ಅವರನ್ನು ರಂಗಕೃಷಿಕರಾಗಿ ತಿದ್ದಿ ತೀಡುತ್ತಿದೆ. ತಮ್ಮ ರಂಗಕಲೆಯ ವಿದ್ಯಾಭ್ಯಾಸದ ಸಮಯದಲ್ಲಿ ಅವರುಗಳು ೨, ೩ ನಾಟಕಗಳನ್ನು ಕೈಗೆತ್ತಿಕೊಂಡು, ತಯಾರಿ ಮಾಡಿಕೊಂಡು ಕರ್ನಾಟಕದಾದ್ಯಂತ ‘ತಿರುಗಾಟ’ ವೆಂಬ ಹೆಸರಿನಲ್ಲಿ ಆ ನಾಟಕಗಳನ್ನು ಪ್ರದರ್ಶಿಸುತ್ತಾರೆ. ೧೯೮೬ ರಿಂದ ೧೯೯೨ ರವರಗೆ ಪ್ರತಿ ವರ್ಷ ನಾನು ಕೂಡ ‘ತಿರುಗಾಟ’ ದ ಕೆಲ ನಾಟಕಗಳನ್ನು ನೋಡಿ ಆನಂದಿಸಿದ್ದೀನಿ. ಆಗ ನೀನಾಸಂನ ಕನ್ನಡ ರಂಗಭೂಮಿಯ ಹೆಸರಾಂತ ನಟರನ್ನು, ನಾಟಕಕಾರರನ್ನು, ನಿರ್ದೇಶಕರನ್ನು, ರಂಗಸಜ್ಜಿಕೆಯ ವಿನ್ಯಾಸದಲ್ಲಿ, ವೇಷಭೂಷಣಗಳ ವಿನ್ಯಾಸದಲ್ಲಿ, ಬೆಳಕಿನ ವಿನ್ಯಾಸದಲ್ಲಿ ಆಗಲೇ ಹೆಸರು ಮಾಡಿದ್ದ, ನಂತರ ಪ್ರಸಿದ್ಧಿಗೆ ಬಂದ ಹಲವರನ್ನು ನೋಡಿದ್ದು ಭಾರಿ ರೋಮಾಂಚನವನ್ನು ಉಂಟುಮಾಡಿತ್ತು. ನೀನಾಸಂನ ಅಂದಿನ ವಿದ್ಯಾರ್ಥಿಗಳಲ್ಲಿ ಎಷ್ಟೋ ಮಂದಿ ಇಂದು ಕರ್ನಾಟಕದಾದ್ಯಂತ ಹೆಸರು ಮಾಡಿರುವ ಕಲಾವಿದರು.

ಸುಬ್ಬಣ್ಣರು ಪುಣೆಯ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಚಲನಚಿತ್ರ ಅವಲೋಕನ ಕೋರ್ಸ್ ಕೋರ್ಸ್ ಮುಗಿಸಿದ್ದೆ ಬಂದು, ಅಂತಹದೇ ಕೋರ್ಸ್ ಗೆ ಹೆಗ್ಗೋಡಿನಲ್ಲಿ ಚಾಲನೆ ಕೊಟ್ಟರು. ೧೯೭೩ರಲ್ಲಿ ನೀನಾಸಂ ಚಿತ್ರ ಸಮಾಜವೆಂಬ ಮತ್ತೊಂದು ಬೆರಗಿನ ಲೋಕ ಹುಟ್ಟೇಬಿಟ್ಟಿತು. ೧೯೭೭ರಲ್ಲಿ ಮೊದಲ ಚಲನಚಿತ್ರ ಹಬ್ಬದ ಜನ್ಮವಾಯಿತು. ೧೯೮೦ರ ಉಳಿದರ್ಧ ಭಾಗದಲ್ಲಿ ಆರಂಭವಾದ ಚಲನಚಿತ್ರ ಅವಲೋಕನ ಕೋರ್ಸ್ ವರ್ಷದಿಂದ ವರ್ಷಕ್ಕೆ ತನ್ನ ಗುಣಮಟ್ಟದಿಂದ ಪ್ರಸಿದ್ಧಿಯಾಯಿತು. ಹತ್ತು ದಿನಗಳ ಕಾಲ ಹೆಗ್ಗೋಡಿನಲ್ಲಿದ್ದುಕೊಂಡು ಪ್ರಪಂಚದ ಅತ್ಯುತ್ತಮ ಚಲನ ಚಿತ್ರಗಳನ್ನು ನೋಡಿ, ಸಹೃದಯತೆಯಿಂದ ಅವುಗಳ ಬಗ್ಗೆ ನಡೆಯುವ ಮಾತುಕತೆಯಲ್ಲಿ, ವಿಮರ್ಶೆಗಳಲ್ಲಿ ಮತ್ತು ಅವಲೋಕನದಲ್ಲಿ ಪಾಲ್ಗೊಳ್ಳುವ ಸುವರ್ಣಾವಕಾಶಕ್ಕಾಗಿ ನೂರಾರು ಮಂದಿ ಹಾತೊರೆದರು. ಚಿತ್ರಗಳ ಜೊತೆ ಅವುಗಳಲ್ಲಿದ್ದ ಸಂಭಾಷಣೆ, ಚಿತ್ರಕತೆ ಮುಂತಾದವನ್ನು ನೋಡುಗರಿಗೆ ಸುಬ್ಬಣ್ಣ ಮತ್ತು ತಂಡದವರು ಕನ್ನಡದಲ್ಲಿ ಒದಗಿಸುವ ಪ್ರಯತ್ನ ಮಾಡಿದ್ದರಿಂದ ಕೃಷಿಕ ಸಮುದಾಯದ ಹಳ್ಳಿಗರಿಗೆ ನಾನಾ ಭಾಷೆಗಳಲ್ಲಿದ್ದ ಆ ಚಲನಚಿತ್ರಗಳನ್ನು ನೋಡುವುದು ಸಾಧಾರಣ ಅಭ್ಯಾಸವಾಯಿತು. ಕನ್ನಡದ ಗ್ರಾಮೀಣ ಮಣ್ಣಿನಲ್ಲಿ ನಡೆದ ಇಂತಹ ತಳಮಟ್ಟದ ಪ್ರಯೋಗಗಳು ನೀನಾಸಂ ಸಂಸ್ಥೆಯ ಬೇರುಗಳು ಮತ್ತು ತಳಪಾಯ.

ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಕೆ.ವಿ. ಸುಬ್ಬಣ್ಣನವರ ಬಗ್ಗೆ ಮತ್ತು ಅವರ ನೀನಾಸಂ ರಂಗ ಪ್ರಯೋಗಗಳ

ನೀನಾಸಂ ರಂಗಶಾಲೆಯ ವಿದ್ಯಾರ್ಥಿಗಳ ಕುಶಲ ಕಲೆ - ಪ್ರತೀಕ್ ಮುಕುಂದ ತೆಗೆದ ಚಿತ್ರ
ನೀನಾಸಂ ವಿದ್ಯಾರ್ಥಿಗಳ ಕುಶಲ ಕಲೆ (ಚಿತ್ರ: ಪ್ರತೀಕ್ ಮುಕುಂದ)

ಬಗ್ಗೆ ಸುದ್ದಿ ಮತ್ತು ವಾರ ಪತ್ರಿಕೆಗಳಲ್ಲಿ ಓದಿದ್ದೆ. ಆಗಲೇ ಹೆಗ್ಗೋಡಿಗೆ ಹೋಗಿ ಚಲನಚಿತ್ರ ಮೆಚ್ಚುಗೆಯ (ಫಿಲ್ಮ್ ಅಪ್ರಿಸಿಯೇಷನ್ ಕೋರ್ಸ್) ಶಿಬಿರದಲ್ಲಿ ಪಾಲ್ಗೊಳ್ಳುವ ಒಂದು ಅವಕಾಶ ಸಿಕ್ಕೇ ಬಿಟ್ಟಿತ್ತು. ಆ ಸಂದರ್ಭದಲ್ಲಿ ಮತ್ತು ಆನಂತರದ ಕೆಲ ವರ್ಷಗಳಲ್ಲಿ ಸುಬ್ಬಣ್ಣವರ ಹೊಸ ಯತ್ನಗಳು ಮತ್ತು ನೀನಾಸಂನ ಬೆಳವಣಿಗೆಯ ಬಗ್ಗೆ ಆಸಕ್ತಿ ವಹಿಸಿದ್ದೆ. ನೀನಾಸಂ ಸಂಸ್ಥೆಯ “ಮಾತುಕತೆ” ಪತ್ರಿಕೆಯನ್ನು ಸುಬ್ಬಣ್ಣನವರು ತಪ್ಪದೆ ಕೆಲ ವರ್ಷಗಳ ತನಕ ನನಗೆ ತಲುಪಿಸಿದ್ದರು. ಆಗಾಗ್ಗೆ ಪತ್ರ ಮುಖೇನ “ಹೇಗಿದ್ದೀರ, ಈಗ ಏನನ್ನ ಓದುತ್ತಿದ್ದೀರಾ, ನಮ್ಮ ನೀನಾಸಂನಲ್ಲಿ ಈಗ ಇದನ್ನು ಮಾಡುತ್ತಿದ್ದೀವಿ …” ಎಂದೆಲ್ಲಾ ಕೇಳಿ ಹೇಳುತ್ತಿದ್ದರು.

೧೯೮೬ರಲ್ಲಿ ನಾನು ಈ ಕೋರ್ಸ್ ನಲ್ಲಿ ಪಾಲ್ಗೊಂಡಿದ್ದು. ಅದೊಂದು ಹೊಸ ಲೋಕವೇ ಸೈ. ಅದೆಂತಹ ಅದ್ಭುತ ಸಿನಿಮಾಗಳು! ಅಕಿರೋ ಕುರೋಸಿವ ಅಲ್ಲೇ ಅವತರಿಸಿದ್ದು (ನನ್ನ ಮಟ್ಟಿಗೆ); ಬೈಸಿಕಲ್ ಥೀವ್ಸ್, ಬಿಗ್ ಸಿಟಿ ಬ್ಲೂಸ್ ಮುಂತಾದ ಜೀವನಕ್ಕೆ ಕನ್ನಡಿ ಹಿಡಿಯುವ ಪರದೇಶದ ಸಿನಿಮಾಗಳು ಅಲ್ಲೇ ಕಂಡದ್ದು. ನಮ್ಮ ಸತ್ಯಜಿತ್ ರೇರ ಚಲನಚಿತ್ರ ‘ಪಥೇರ್ ಪಾಂಚಲಿ’ ಯ ಕಗ್ಗಂಟು ಸ್ವಲ್ಪ ಬಿಡಿಸಿಕೊಂಡಿತು. ಇಂಗ್ರಿಡ್ ಬರ್ಗ್ಮನ್ ನ ಲೋಕ ಬಾ ಎಂದು ಕರೆಯಿತು. ಮೈಯೆಲ್ಲಾ ಕಣ್ಣಾಗಿ ಕಿವಿಯಾಗಿ ಭಾಗವಹಿಸಿದ ಚರ್ಚೆಗಳಿಗೆ ಮೂಕ ಸಾಕ್ಷಿಯಾಗಿದ್ದೆ. ತಡ ರಾತ್ರಿ ತೋರಿಸಿದ ಕೆಲ ಅತ್ಯದ್ಭುತ ಚಿತ್ರಗಳನ್ನು ನಿದ್ದೆ ತಡೆಯಲಾರದೆ ಮನಸ್ಸಿಲ್ಲದ ಮನಸ್ಸಿನಿಂದ ಬಿಟ್ಟುಕೊಟ್ಟಿದ್ದೆ. ನಂತರ ಹಪಹಪಿಸಿದ್ದೆ. ಕೋರ್ಸ್ ಗೆ ಆಗಮಿಸುತ್ತಿದ್ದ ಅತಿರಥ ಮಹಾರಥರನ್ನು ನೋಡಿ ಓಹೋ ಇವರೇನಾ ಅವರು ಎಂದುಕೊಳ್ಳುತ್ತಿದ್ದೆ. ಅವರಲ್ಲಿ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ ನ ಸತೀಶ್ ಬಹಾದುರ್, ಶ್ಯಾಮಲಾ ವನರಸೆ ಕೂಡ ಇದ್ದರು. ಜರ್ಮನಿಯ ಬ್ರೆಕ್ಟ್ ನಾಟಕಗಳಿಗೆ ಹೆಸರಾದ ರಂಗ ನಿರ್ದೇಶಕ ಫ್ರಿಟ್ಜ್ ಬೆನೆವಿಟ್ಜ್ ಅಲ್ಲಿದ್ದರು. ನನ್ನ ಸ್ಕಾಲರ್ಶಿಪ್ ಹಣವನ್ನು ಜೋಪಾನವಾಗಿ ಕೂಡಿಟ್ಟುಕೊಂಡು ಅದೇ ವರ್ಷ ತಾನೇ ಕೊಂಡಿದ್ದ ನನ್ನ ಎಸ್ ಎಲ್ ಆರ್ ಕೆಮರಾದಲ್ಲಿ ಬೆನೆವಿಟ್ಜ್ ರ ಕೆಲ ಫೋಟೋಗಳನ್ನ ತೆಗೆದಿದ್ದೆ. ಒಂದನ್ನು ಸುಬ್ಬಣ್ಣವರು ಬಹುವಾಗಿ ಮೆಚ್ಚಿಕೊಂಡಿದ್ದರು ಎಂದು ನೆನಪು. ಆ ಫೋಟೋ ಈ ಲೇಖನದ ಜೊತೆ ಇದೆ.

೧೯೯೧ ರಲ್ಲಿ ಸುಬ್ಬಣ್ಣರಿಗೆ ರಾಮೋನ್ ಮ್ಯಾಗ್ಸೆಸೆ ಗೌರವ ಸಿಕ್ಕಿತು. ೧೯೪೯ರಿಂದ ಆರಂಭವಾದ ನೀನಾಸಂನ ಚಟುವಟಿಕೆಗಳಿಗೆ ಅನವರತ ನೀರೆರೆದು ಪೋಷಿಸಿ, ಬೆಳೆಸಿ ಅದಕ್ಕೆ ನಾನಾ ರೀತಿಯ ಹೊಸತನದ ಟೊಂಗೆಗಳನ್ನು ಜೋಡಿಸಿ ಜನಸಾಮಾನ್ಯರಿಗೆ ಆ ಹೆಮ್ಮರದ ಹಣ್ಣುಗಳನ್ನು ಉಣ ಬಡಿಸಿದ್ದಕ್ಕಾಗಿ ಆ ಗೌರವ ಪ್ರಶಸ್ತಿ. ಸುಬ್ಬಣ್ಣರ ಸಾಧಕತನಕ್ಕೆ ಅದು ಮತ್ತೊಂದು ಗುರುತಾಯಿತು. ಹೆಗ್ಗೋಡಿನ ನೀನಾಸಂಗೆ ಮತ್ತಷ್ಟು ಹಿಗ್ಗು. ಆ ಪ್ರಶಸ್ತಿಯ ಹಣವನ್ನು ಅವರು ಅದೇ ವರ್ಷ (೧೯೯೧-೯೨) ಶುರುವಾದ ನೀನಾಸಂ ಪ್ರತಿಷ್ಠಾನದ ಬೆಳವಣಿಗೆಗೆಂದು ಮುಡಿಪಿಟ್ಟರು. ಪ್ರತಿಷ್ಠಾನವು ಕರ್ನಾಟಕ ರಾಜ್ಯಾದ್ಯಂತ ಸಾಹಿತ್ಯ ಮತ್ತು ಸಾಂಸ್ಕೃತಿಕ ಶಿಬಿರಗಳನ್ನು, ಕೋರ್ಸ್ಗಳನ್ನೂ ನಡೆಸುತ್ತಿದೆ. ಹಾಗಾಗಿ ಮತ್ತಷ್ಟು ಗ್ರಾಮೀಣ ಪ್ರದೇಶಗಳನ್ನು, ಜನರನ್ನು ತಲುಪಲು ಸಾಧ್ಯವಾಗಿದೆ. ಅದೇ ವರ್ಷ ಚಲನಚಿತ್ರ ಅವಲೋಕನ ಕೋರ್ಸ್ ನಿಲ್ಲಿಸಿ, ಸಂಸ್ಕೃತಿ ಕೋರ್ಸ್/ ಶಿಬಿರವನ್ನು ಆರಂಭಿಸಲಾಯಿತು. ಈ ಸಾಂಸ್ಕೃತಿಕ ಶಿಬಿರವು ಸಂಸ್ಕೃತಿ, ಕಲೆ, ಸಂಗೀತ, ಸಾಹಿತ್ಯ ಮತ್ತು ಸಂವಾದದ ಎಲ್ಲವುಗಳ ಮೇರು ಪರ್ವತ, ಒಂಥರದ ವಿಶ್ವಕೋಶ.

ವಿದ್ಯಾರ್ಥಿಗಳ ಕಲೆ
ವಿದ್ಯಾರ್ಥಿಗಳ ಕಲೆ

ಸುಬ್ಬಣ್ಣರ ನಂತರ ಮತ್ತಷ್ಟು ಮೆರುಗು ಕೊಟ್ಟಂತೆ ಅವರ ಮಗ ಕೆ.ವಿ.ಅಕ್ಷರರವರು ನೀನಾಸಂ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಕೆ.ವಿ ಅಕ್ಷರ ರಾಷ್ತ್ರೀಯ ರಂಗ ಶಾಲೆಯ ಮತ್ತು ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾನಿಲಯದ ಪದವೀಧರ. ಸ್ವತಃ ಅಕ್ಷರರವರು ನಾಟಕ ಕರ್ತೃ, ನಟ ಮತ್ತು ವಿಮರ್ಶಾಕಾರರು. ನೀನಾಸಂನ ಖಚಾಂಚಿಯಾಗಿರುವ ಅಕ್ಷರರವರು ಆ ಬೃಹತ್ ಹಡಗಿನ ಚುಕ್ಕಾಣಿಯನ್ನು ಹಿಡಿದು ಸಮರ್ಥವಾಗಿ ಮುನ್ನಡೆದಿದ್ದಾರೆ.

ಬೇಕೇ ಬೇಕು ನೀನಾಸಂ: ಮಲೆನಾಡ ಮೂಲೆಯ ಸುಂದರ ಹಳ್ಳಿಯೊಂದರಲ್ಲಿ ಕುಳಿತು ವಿಶ್ವ ಗುಣಮಟ್ಟದ ನಾಟಕಗಳನ್ನು ಹಳ್ಳಿಗರಿಗೆ ಕೊಡುವ ಕಲ್ಪನೆ ಮೂಡುವುದು, ಅದನ್ನು ಸಾಧ್ಯವಾಗಿಸುವುದು ಸಾಮಾನ್ಯದ ಮಾತಲ್ಲ. ಹಲವಾರು ವಿದೇಶಿ ಭಾಷೆಗಳ ಅತ್ಯುತ್ತಮ ಚಲನಚಿತ್ರಗಳನ್ನು ಹಳ್ಳಿಯಲ್ಲಿ ಕುಳಿತು ನೋಡಿ ಅವುಗಳ ಬಗ್ಗೆ ಸಂವಾದಗಳನ್ನು ನಡೆಸುವ ಕನಸು ಯಾರಿಗಿತ್ತು? ಅಂತಹ ಕಲ್ಪನೆಯಾದರೂ ಯಾರಿಗೆ ಹೊಳೆದಿತ್ತು? ಹೊಳೆದರೂ ಅದನ್ನು ನಿಜವಾಗಿಸುವ ಸಾಹಸದ ಎದೆಗಾರಿಕೆ ಎಲ್ಲಿತ್ತು? ಸಾಮಾನ್ಯ ವರ್ಗದ ಜನ ದಿನವೆಲ್ಲಾ ಕೃಷಿ ಕೆಲಸ ಮಾಡಿ ಸಂಜೆ, ರಾತ್ರಿ ನಾಟಕ ತಯಾರಿ ಇಲ್ಲಾ ಸತ್ಯಜಿತ್ ರೇ ಅಥವಾ ಕುರೋಸಿವ ಮಾಡಿದ ಸಿನಿಮಾ ನೋಡಲು ಹೊರಡುವ ಹಾದಿಯ ಕನಸ ಕಂಡವರು ಕೆ.ವಿ.ಸುಬ್ಬಣ್ಣ.

ಆ ಕನಸಷ್ಟೇ ಮಾತ್ರವಲ್ಲ ನಿಜವಾಗಿದ್ದು. ನಮ್ಮಗಳ ಸಾಮಾನ್ಯ ಜನರ ಸಮಾಜವನ್ನು ಹೈಜಾಕ್ ಮಾಡುವ “ಹೈ

ಶಿವರಾಮ ಕಾರಂತ ರಂಗ ಮಂದಿರ - ಶ್ರದ್ಧ ನೆಲಮಂಗಲ ತೆಗೆದ ಚಿತ್ರ
ಶಿವರಾಮ ಕಾರಂತ ರಂಗಮಂದಿರ (ಚಿತ್ರ: ಪ್ರತೀಕ್ ಮುಕುಂದ)

ಸೊಸೈಟಿ” ಜನರು ಮೇಕ್-ಅಪ್ ಹಾಕಿ, ಗುಂಡು ಸೇವಿಸುತ್ತಾ, ಸಿಗರೇಟ್ ಸೇದುತ್ತಾ, ರಾತ್ರಿಯೆಲ್ಲಾ ಕುಳಿತು ಹುರುಳಿಲ್ಲದ ಬಾಯಿ ಬಡುಕತನದ ಶಬ್ದಗಳನ್ನಾಡುತ್ತಾ ಮಾಡುತ್ತಿದ್ದ “ನಮ್ಮ ಸಂಸ್ಕೃತಿ, ಕಲೆ, ಸಾಹಿತ್ಯದ ವಿಮರ್ಶೆ” ಯನ್ನು ಅವರ ಕಬಂಧ ಬಾಹುಗಳಿಂದ ಬಿಡಿಸಿ ಅವನ್ನು ಸಾಮಾನ್ಯ ಜನರಿಗೆ ತಲುಪಿಸಿದ ಕೀರ್ತಿ ಸುಬ್ಬಣ್ಣರವರದು ಮತ್ತು ನೀನಾಸಂನದ್ದು. ಈ ಕಳೆದ ಮೂರು ದಶಕಗಳಲ್ಲಿ ಮತ್ತು ಇನ್ನೂ ಹೆಚ್ಚುತ್ತಾ ಬಂದಿರುವ ಯುವ ಜನತೆ ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತಗಳ ಮಾತುಕತೆಗಳನ್ನು ಅವರದ್ದಾಗಿಸಿಕೊಂಡು ಅವುಗಳ ಮೂಲಕ ಜೇವನ ದೃಷ್ಟಿಯ ಬಗ್ಗೆ ತಮ್ಮಲ್ಲಿರುವ ವಿಮರ್ಶಾತ್ಮಕ ‘ಒಳಗಣ್ಣನ್ನು’ ತೆರೆದಿಟ್ಟಿರುವುದು ಇಂತಹ ನೀನಾಸಂನಿಂದ.

ದೇಶದ, ರಾಜ್ಯದ ಹೆಸರಾಂತ ಸಾಹಿತಿಗಳಷ್ಟೇ ಅಲ್ಲ, ವಿಮರ್ಶಕರು, ಕೇಳುಗರು, ವಿದ್ಯಾರ್ಥಿಗಳು, ಶಿಕ್ಷಕರು, ನಾಟಕಕಾರರು, ಕಲಾವಿದರು ಎಲ್ಲಾ ವರ್ಗದವರು, ಆಸಕ್ತಿಯಿರುವ ಎಲ್ಲ ಜನರು ಹೆಗ್ಗೋಡಿನತ್ತ ಮುಖ ಮಾಡಿದ್ದು ನೀನಾಸಂನ ನಿಜವಾದ ಸಾಧನೆ. ‘ನಗರಗಳಲ್ಲೇ ಎಲ್ಲ ನಡೆಯುವುದು, ಹಳ್ಳಿಗಳಲ್ಲಿ ಏನೂ ಇಲ್ಲ’ ಎನ್ನುವ ಭ್ರಮೆಯ ಗುಳ್ಳೆಯನ್ನು ಒಡೆದು ಹೆಗ್ಗೋಡು ಮತ್ತು ನೀನಾಸಂ ಎಂದರೆ ನಗರದವರು ‘ಇರಿ ಸ್ವಲ್ಪ, ನಾವೂ ಕೂಡ ಬರುತ್ತೀವಿ ಪ್ಲೀಸ್’, ಎಂದು ಹಳ್ಳಿ ದಾರಿಯಲ್ಲಿ ನಡೆದುಹೋಗುವಂತೆ ಮಾಡಿದ್ದು ಸುಬ್ಬಣ್ಣರವರು. ಅವರ ಕೊಳಲಿಂದ ಹೊರಹೊಮ್ಮಿದ ನೀನಾಸಂ ರಾಗ ಹಾಗೆಯೇ ಎಂದೆಂದೂ ಹರಿಯುತ್ತಲೇ ಇರಲಿ.

7 thoughts on “ಕೆ.ವಿ. ಸುಬ್ಬಣ್ಣ ಮತ್ತು ನೀನಾಸಂ ಎಂಬ ‘ ತಳಮಟ್ಟದ ಬೆರಗಿನ ಲೋಕ’ – ಡಾ. ವಿನತೆ ಶರ್ಮ

  1. ನೀನಾಸಂ ಅನುಭವವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ. ಸುಬ್ಬಣ್ಣನ ಕೆಲಸವನ್ನು ಅವರ ಮಗ ಅಕ್ಷರ ಸಾಂಗವಾಗಿ ಮುಂದುವರೆಸುತ್ತಿರುವುದು ಶ್ಲಾಘನೀಯ.

    Like

  2. ನಾಟಕಗಳೆಂದರೆ `ಮುತ್ತೈದೆಗೆ ಕುತ್ತು ಐದು` ತರಹದ ಕಂಪನ್ನಿ ನಾಟಕಗಳೇ ಎಂದು ಕೊಂಡಿದ್ದ ನನಗೆ, ಅದೇ ರಂಗಮಂದಿರದಲ್ಲಿ ನೀನಾಸಂ ತಿರುಗಾಟದ ಬ್ರೆಕ್ಟನ `ಪುಂಟಿಲ` ನೋಡಿ ನಾಟಕದ ಹೊಸರುಚಿಯನ್ನೇ ಹಿಡಿಸಿದವರು ಸುಬ್ಬಣ್ಣ. ಅಲ್ಲಿಂದ ಶುರುವಾದ ನನ್ನ ನಾಟಕ ನೋಡುವ ಪಯಣ ಇಂಗ್ಲಂಡಿಗೆ ಬರುವವರೆಗೂ ಮುಂದುವರೆದಿತ್ತು. ನೀನಾಸಂ ತಿರುಗಾಟದ ಯಾವ ನಾಟಕವನ್ನೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಮುಂದೆ ಮೈಸೂರಿಗೆ ಬಂದಾಗ `ರಂಗಾಯಣ`ದಲ್ಲಿ ಅದೇ ತರಹದ ನಾಟಕಗಳನ್ನು ನೋಡುವ ಅವಕಾಶ ಒದಗಿ ಬಂತು.

    ಎಂಬಿಬಿಎಸ್ ಮಾಡುವಾಗ ನನ್ನ ರೂಮ್-ಮೇಟ್ ಹೆಗ್ಗೋಡಿನವನು. ಅವನು ಸುಬ್ಬಣ್ಣನವರೆ ವ್ಯಕ್ತಿತ್ವದ ಬಗ್ಗೆ, ನೀನಾಸಂನಲ್ಲಿ ನಡೆಯುವ ಚಟುವಟಿಗೆಗಳ ಬಗ್ಗೆ ಹೇಳುತ್ತಿದ್ದರೆ ಬಾಯಿ ಬಿಟ್ಟು ಕೇಳುತ್ತಿದ್ದೆ. ನನಗೆ ನಾಟಕದಲ್ಲಿ, ಸಿನ್ನೆಮಾದಲ್ಲಿ ತುಂಬ ಆಸಕ್ತಿ ಇದ್ದರೂ, ಹೆಗ್ಗೋಡಿಗೆ ಹೋಗುವ ಕನಸು ಕನಸಾಗೇ ಉಳಿಯಿತು.

    ನಿಮ್ಮ ಲೇಖನ ತುಂಬ ಸೊಗಸಾಗಿದೆ. ಗೊತ್ತಿರದ ಕೆಲವು ವಿಷಯಗಳು ತಿಳಿದವು. ತುಂಬ ಥ್ಯಾಂಕ್ಸ್!

    Like

  3. Photo credits: Shraddha Nelamangala took the photographs of Shivarama Karantha Ranga Mandira & Ninasam office. The other three of Ninasam are by Pratik Mukunda.
    Thank you very much for your encouraging comments.

    Like

  4. ಎಪ್ಪತ್ತರ ದಶಕದಲ್ಲೇ ಅನಿವಾಸಿಯಾದ ನಾನು ಇಂಥ ಅಪರೂಪದ ಅದ್ಭುತ ವ್ಯಕ್ತಿ, ಆತನ ಮಹತ್ಕಾರ್ಯ, ಕಟ್ಟಿದ ಸಂಸ್ಥೆ ಇದರ ನಿಕಟ ಸಂಪರ್ಕದ ಅವಕಾಶವೇ ಸಿಗದಿದ್ದು ನನ್ನ ದುರ್ದೈವವೇ ಎಂದುಕೊಳ್ಳುತ್ತೇನೆ. ಆದರೆ ಆ ಲೋಕದ ಸಜೀವ ಚಿತ್ರ ಬಿಡಿಸಿ ಪರಿಚಯಿಸಿದ, ಅಲ್ಲಿದ್ದು ರಸಹೀರಿ ಪುಷ್ಟರಾದ ವಿನತೆಯವರಿಗೆ ಧನ್ಯವಾದಗಳು. ಈ ಸಂಸ್ಥೆ ಕನ್ನಡಿಗರ ಹೆಮ್ಮೆಯಲ್ಲವೆ? ಹೆಗ್ಗೋಡಿನ ಪಕ್ಕದ ಹಳ್ಳಿಯ್ಯಲ್ಲೆ ಹುಟ್ಟಿ ಬೆಳೆದವರೊಂದಿಗೆ ನೆನ್ನೆ ತಾನೆ ಮನಸ್ಫೂರ್ತಿಇದರ ಬಗ್ಗೆ ಮಾತಾಡುತ್ತಿದ್ದಾಗ ಬೆಂಗಳೂರಿನಿಂದ ಹೆಗ್ಗೋಡಿಗೆ ಡೈರೆಕ್ಟ್ ಬಸ್ ಇದೆಯೆಂದರು! ಕರ್ನಾಟಕ ಅಷ್ಟೇ ಅಲ್ಲ, ವಿಶ್ವದ ನಕಾಶೆಯಲ್ಲೂ ಅದರ ಗುರುತಿರುವಾಗ ಇದು ಆಶ್ಚರ್ಯವಲ್ಲವೇನೋ! ಲೇಖನವನ್ನು ಮತ್ತೆ ಮತ್ತೆ ಓದುವಂತಿದೆ.

    Liked by 1 person

  5. ಕೆ.ವಿ.ಸುಬ್ಬಣ್ಣ ,ಹೆಗ್ಗೋಡು ,ನೀನಾಸಂ ಈ ಮೂರೂ ಹೆಣೆದುಕೊಂಡು ನಿರ್ಮಿಸಿದ ಅದ್ಭುತ ಕಿನ್ನರ ಲೋಕದ ಅಂದದ ಚಿತ್ರಣದ ಉತ್ಕೃಷ್ಟ ,ಮಾಹಿತಿಪೂರ್ಣ ಲೇಖನ ವಿನತೇ ಅವರೇ.ನೀನಾಸಂ ಬಗ್ಗೆ ಅಲ್ಲಿ ,ಇಲ್ಲಿ ಸಾಕಷ್ಟು ಓದಿ ತಿಳಿದಿದ್ದರೂ ಒಂದೇ ಕಡೆ ಇಷ್ಟೆಲ್ಲಾ ವಿಷಯಗಳನ್ನ ತಿಳಿಸುವ ನಿಮ್ಮ ಪರಿ ಸ್ತುತ್ಯ.ಚಲನ ಚಿತ್ರಗಳಂತೆ ಮಾಯಾಲೋಕವನ್ನ ನಿರ್ಮಿಸಿ ,ಪ್ರೇಕ್ಷಕರನ್ನು ಕನಸಿನ ಲೋಕಕ್ಕೆ ಕರೆದೊಯ್ಯದೇ ನಿತ್ಯ ಜೀವನಕ್ಕೆ ಕನ್ನಡಿ ಹಿಡಿಯುವ ನಾಟಕಗಳು ಜನಕ್ಕೆ ಹೆಚ್ಚು ಹತ್ತಿರವೋ ಏನೋ.ಈ ಆಶಯದ ಮೇಲೆಯೇ ಬೆಳೆದ ನೀನಾಸಂ ,ಕೆ.ವಿ.ಸುಬ್ಬಣ್ಣನವರ ಸಾಧನೆ ಕಲ್ಪನೆಗೂ ಎಟುಕದ್ದು.ಮಲೆನಾಡಿನ ಹಳ್ಳಿ ಹೆಗ್ಗೋಡಿನ ಕೃಷಿಕರ ನಾಟಕಗಳ ಸಂಘ ,ಕೆ.ವಿ. ಸುಬ್ಬಣ್ಣನವರ ಕನಸಿನ ಕೂಸು ದೇಶ ,ವಿದೇಶಗಳನ್ನು ತನ್ನತ್ತ ಸೆಳೆದು ಬೃಹದಾಕಾರವಾಗಿ ಬೆಳೆದು ,ಭಾರತ ಜೀವಿಸುತ್ತಿರುವುದು ಹಳ್ಳಿಗಳಲ್ಲಿಎಂಬಎಂಬುದನ್ನು ಸಿದ್ಧ ಮಾಡಿದೆ.ಇಂಥ ವೈಶಿಷ್ಟ್ಯಪೂರ್ಣ ,ಸಂಗ್ರಹಯೋಗ್ಯ ಲೇಖನ ನೀಡಿದ್ದಕ್ಕೆ ಧನ್ಯವಾದಗಳು ವಿನತೆಯವರೇ.
    ಸರೋಜಿನಿ ಪಡಸಲಗಿ

    Liked by 2 people

  6. ಭಲೆ ವಿನುತೆ ಅವರೆ. ಕರ್ನಾಟಕದಲ್ಲಿ ರವೀಂದ್ರನಾಥ್ ಟಾಗೂರ್ ಅವರು ನಿರ್ಮಿಸಿದ ಶಾಂತಿನಿಕೇತನವನ್ನು ನೆನಪಿಸುವ ಕೆ.ವಿ. ಸುಬ್ಬಣ್ಣ ಅವರ “ನೀನಾಸಂ“ ಸಾಧನೆಗಳ ಬಗ್ಗೆ ಪ್ರತ್ಯಕ್ಷದರ್ಶಿ ಅನುಭವವನ್ನಾಧರಿಸಿ ಬರೆದಿರುವ ನಿಮ್ಮ ಲೇಖನವನ್ನು ಮೆಚ್ಚಬೇಕಾದ್ದೇ!. ೭೦ರ ದಶಕದಲ್ಲಿ ಶಾಲಾ ದಿನಗಳಿಂದ ಹಿಡಿದು, ೮೦-೯೦ ದಶಕಗಳಲ್ಲೂ ಕೆ.ವಿ ಸುಬ್ಬಣ್ಣನವರ ಈ ಪ್ರಚಂಡ ರಂಗಮಂಟಪದ ಬಗ್ಗೆ ಅನೇಕ ಲೇಖನಗಳು, ಸಾಕ್ಷ್ಯಚಿತ್ರಗಳು ಮತ್ತು ಹಲವು ಮಿತ್ರರ ಸ್ವಯಂ ಅನುಭವದ ಮೂಲಕ ಓದಿ, ಕೇಳಿ ತಿಳಿದುಕೊಂಡಿದ್ದೆ. ನಮ್ಮ ಕುಟುಂಬದಲ್ಲಿ ನನ್ನ ಚಿಕ್ಕಪ್ಪ ಒಬ್ಬರು ಉತ್ತಮ ನಾಟಕ ನಟರು. ಅವರು ನೀನಾಸಂ ಬಗ್ಗೆ ಅನೇಕ ಬಾರಿ ಅತ್ಯುತ್ತಮವಾದ ವಿಮರ್ಷೆ ನೀಡಿದ್ದರು. ಆದರೆ ನೀವು ನೀನಾಸಂ ಜನ್ಮವೆತ್ತಿದ್ಡರಿಂದ ಹಿಡಿದು, ಇಂದಿನವರೆಗೆ ಎಲ್ಲವನ್ನೂ ಉತ್ತಮವಾಗಿ ಕ್ರೋಢೀಕರಿಸಿ ಈ ಲೇಖನವನ್ನು ನಮಗೆ ನೀಡಿದ್ದೀರಿ. ೮೦ರ ದಶಕದಲ್ಲಿ ನಿಮ್ಮಂತೆ ಈ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವ ಆದಮ್ಯ ಉತ್ಸಾಹ ನನಗಿತ್ತು. ಆದರೆ ಇತರ ಅಡಚಣೆಗಳ ಕಾರಣದಿಂದ ಆ ಕನಸುಗಳು ನನಸಾಗಲಿಲ್ಲ. ಆದರೆ ಮುಂದೆ ನಾನು ಬೆಂಗಳುರಿಗೆ ಭೇಟಿ ಇತ್ತಾಗ, ಹೆಗ್ಗೋಡಿಗೆ ಹೋಗಿ, ಈ ರಂಗಮಂಟಪಕ್ಕೆ ಭೇಟಿ ನೀಡುತ್ತೇನೆ. ನಿಮ್ಮ ಲೇಖನ ನನಗೆ ಉತ್ಸಾಹವಿತ್ತಿದೆ. ಧನ್ಯವಾದಗಳು.
    ಉಮಾ ವೆಂಕಟೇಶ್

    Liked by 3 people

Leave a comment

This site uses Akismet to reduce spam. Learn how your comment data is processed.