….ಬಾಳಿನಲ್ಲಿ ಹುಟ್ಟಿದ ಮೇಲೆ ಹೆಣ್ಣಾಗೋದು ತುಂಬಾ ಕಷ್ಟ – ರಾಂ ಬರೆದ ಲೇಖನ

ಆಗಿನ್ನೂ ಎಂ.ಬಿ.ಬಿ.ಎಸ್., ಮುಗಿಸಿ ಗೃಹ ವೈದ್ಯನಾಗಿದ್ದೆನಷ್ಟೆ. ಜೀವನದಲ್ಲಿ ಮೊದಲ ಬಾರಿಗೆ ದೇಶದ ರಾಜಧಾನಿ ದಿಲ್ಲಿಯನ್ನು ನೋಡುವ ಅವಕಾಶ ಬಂದೊದಗಿತ್ತು, ಅದೂ ಸರಕಾರಿ ಖರ್ಚಿನಲ್ಲಿ! ಯಾರಿಗುಂಟು ಯಾರಿಗಿಲ್ಲ? ದಿನಗಟ್ಟಲೆ ರೈಲಿನಲ್ಲಿ ಪ್ರವಾಸ ಮಾಡುವ ಉತ್ಸಾಹ ಬೇರೆ. ಹುಬ್ಬಳ್ಳಿ ಬಿಟ್ಟ ರೈಲು, ೩೬ ಗಂಟೆಗಳ ಬಳಿಕ ಆಗ್ರಾ ಛಾವಣಿಯಲ್ಲಿ ನಿಟ್ಟುಸಿರು ಬಿಟ್ಟು ನಿಂತಾಗ ಇನ್ನೇನು ದಿಲ್ಲಿ ಕೈಗೆಟುಕಿತಲ್ಲಾ ಎಂಬ ಸಂಭ್ರಮ. ಆದರೆ ಚಪ್ಪಾಳೆ ತಟ್ಟುತ್ತ , ‘ರಾಜ ಹಿಂದುಸ್ತಾನಿ’ ಸಿನೆಮಾದ “ಪರದೇಸಿ, ಪರದೇಸಿ” ಹಾಡುತ್ತಿದ್ದ, ಗಡಸು ದನಿ ಕಿವಿಗಪ್ಪಳಿಸಿದಾಗ ರುಚಿಯಾದ ಭೇಲ್ ತಿನ್ನುವಾಗ ಕಲ್ಲಿನ ಹರಳು ಅಗಿದು ಹಲ್ಲು ಮುರಿದಂತಾಯಿತು. ಸೀರೆ ತೊಟ್ಟ ನಪುಂಸಕರ  ಗುಂಪು ಡಬ್ಬಿಯಲ್ಲಿ ನುಗ್ಗಿ, ಹಣಕ್ಕೆ ಪೀಡಿಸುವುದು ಕಂಡು ನಮಗೆ ಕಸಿವಿಸಿ. ಕೊಡದ ಗಂಡಸರ ಕೆನ್ನೆ ಪೂಸುತ್ತ, ಕೊಡುವವರೆಗೂ ಸುತ್ತರಿದು ಚಪ್ಪಾಳೆ ತಟ್ಟುವುದನ್ನು ಎಂದೂ ಕಾಣದ ನಾವು ಕಕ್ಕಾಬಿಕ್ಕಿ. ಓಡಿ ಟಾಯ್ಲೆಟ್ ನಲ್ಲಿ ಅಡಗುವುದೇ; ಇಳಿದು ಇನ್ನೊಂದು ಡಬ್ಬಿ ಹೊಕ್ಕಿ ಕಾಯುವುದೇ? ಏನೂ ತಿಳಿಯದೇ ಕೊನೆಗೆ ಅವರ ಕೈ ನಮ್ಮ ಕೆನ್ನೆ ಸವರುವ ಮೊದಲೇ ಒಂದಷ್ಟು ಹಣ ಅವರ ಕೈಗೆ ತುರುಕಿದಾಗ, ಅವರು ತಲೆ ನೇವರಿಸಿ ಹರಸಿದಾಗ ಒಂಥರಾ  ನೆಮ್ಮದಿ; ಕಾಟ ತಪ್ಪಿತೆಂದೋ! ಹರಸಿಕೊಂಡೆನಲ್ಲಾ  ಎಂದೋ!

ಮೀಸೆ ಮೂಡಿ, ಒಂಟಿಯಾಗಿ ಅಪರಿಚಿತ ನಗರಕ್ಕೆ ಪ್ರಯಾಣ ಬೆಳೆಸಿದ್ದು ಪ್ರಥಮ ಬಾರಿ; ಹಿಜಡಾಗಳ ಮುಖಾ ಮುಖಿಯಾಗಿದ್ದೂ ಒಂದು ರೀತಿಯಲ್ಲಿ ಪ್ರಥಮ ಬಾರಿಯೇ. ನಮ್ಮೂರಲ್ಲಿ ಇಂಥವರ ಸಂಪರ್ಕ ಇಲ್ಲವೆಂದೇ ಹೇಳಬಹುದು. ಹಿಂದಿ ಸಿನೇಮಾಗಳಲ್ಲೇ ಈ ಜನಾಂಗದವರನ್ನು ನೋಡಿ ಅಭ್ಯಾಸ. ನಿಮಗೇ ಗೊತ್ತು ಹಿಂದಿ ಫಿಲಂಗಳ ವರಸೆ. ತದ ನಂತರ ಮುಂಬೈ ವಾಸದಲ್ಲೂ ರೈಲಲ್ಲಿ ಸುತ್ತುವಾಗ, ಟ್ರಾಫಿಕ್ ಸಿಗ್ನಲ್ ನಲ್ಲಿ ಟ್ಯಾಕ್ಸಿ ನಿಂತಾಗ; ಮುಖ ತಿರುಗಿಸಿಯೋ, ಕಿಟಕಿಯ ಗಾಜನ್ನು ಮೇಲೇರಿಸಿಯೋ, ಹಿಜಡಾಗಳ ಕಣ್ಣು ತಪ್ಪಿಸಿಕೊಂಡೇ ತಿರುಗಿದೆ.

ಇಂಗ್ಲೆಂಡಿಗೆ ಬಂದ ಮೇಲೆ, ಕಾಲದ ಪರಿಣಾಮ, ಕೆಲಸದಲ್ಲಿನ ಅನುಭವ ಇವೆಲ್ಲ ಸೇರಿ ಸಲಿಂಗ ಪ್ರೇಮಿಗಳ ಮೇಲೀನ ಮನೋಭಾವ ಬದಲಾಗಿದೆ.  ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಸತತವಾಗಿ ಪ್ರಮುಖ ವಾಹಿನಿಯಲ್ಲಿ ಬರುತ್ತಿರುವ LGBT ವಿಷಯಗಳು ದಿನ ದಿನಕ್ಕೂ ನಮ್ಮೆಲ್ಲರ ವಿಚಾರ ಪರಿಧಿಯನ್ನು ಹಿಗ್ಗಿಸುತ್ತಲೇ ಇವೆ. ಹಾಗಾಗೇ, ಈ ವರ್ಷ “ಲಿಫ್” (London Indian Film Festival) ಸಂಸ್ಥೆ LGBT ಚಳುವಳಿಯನ್ನು ಚಲನಚಿತ್ರೋತ್ಸವದ ವಿಷಯವನ್ನಾಗಿಸಿಕೊಂಡಿದ್ದು ಸಕಾಲಿಕ. ಇದರಲ್ಲಿ ಕನ್ನಡ ಚಿತ್ರವೂ ಇರುವುದು ಕಂಡು ಖುಷಿಯಾಯಿತು. ಶುಕ್ರವಾರ ಸಂಜೆಯ ಸಮಯ ಅನುಕೂಲಕರವು ಆಗಿತ್ತು. ಯಾವ ರಿವ್ಯೂ ನೋಡದೇ, ಗೆಳೆಯ ಕೇಶವನೊಂದಿಗೆ ಗಾಡಿ ಹತ್ತಿ ಹೊರಟೆ.

nanuavanall“ನಾನು ಅವನಲ್ಲ… ಅವಳು”, ಚಿತ್ರದ ಹೆಸರು. ಕಥೆ ಶುರುವಾಗುವುದು ಇರುಳಿನ ಬೆಂಗಳೂರಿನ ಬೀದಿಯಲ್ಲಿ, ಪೊಲೀಸರು ರಾತ್ರೆರಾಣಿಯರ ಬೇಟೆಯಾಡಿ ಠಾಣೆಗೆ ತರುವಲ್ಲಿಂದ. ಎಲ್ಲ ಸುವಾಸಿನಿಯರು ಮಂಗಳಮುಖಿಗಳೇ. ಅವರಲ್ಲೊಬ್ಬಳು ಶುಭ್ರ ಬಟ್ಟೆ ತೊಟ್ಟ ಸುಶಿಕ್ಷಿತಳು. ಹೆಸರೂ  ವಿದ್ಯಾ. ಅವಳ-ಪೊಲೀಸ್ ಇನ್ಸ್ಪೆಕ್ಟರ್ ನಡುವಿನ ಸಂವಾದ ಕಾಲವನ್ನು ರಿವರ್ಸ್ ಗೇರ್ ಗೆ ತರುತ್ತದೆ. ಕಥಾ ನಾಯಕ ಮಾದೇಶನ ಬಾಲ್ಯದಿಂದಲೂ ಹೆಣ್ಣಿಗ ಎಂದೇ ಚೇಷ್ಟೆಗೆ ಒಳಗಾದವನು. ವಾಲಿಬಾಲ್ ಬದಲು ಖೋ-ಖೋ ಕಡೆಗೇ ಅವನ ಒಲವು. ಕುಲಪುತ್ರ, ಅಪ್ಪನಿಗೆ ಮಗನ ಮೇಲೆ ಅಧಿಕ ನಿರೀಕ್ಷೆ. ಓದಿನಲ್ಲಿ ಚುರುಕು. ಆದರೆ ಗೋವಿಂದ ಒಬ್ಬನೇ ಅವನ ಗೆಳೆಯ. “ಯಾಕೋ ಹುಡಿಗಿ ತರ ನಡಿತೀಯಾ”, ಎಂದು ಆತ ಕೇಳಿದರೂ  ಹೇಳಿಕೊಳ್ಳದ ಸಂದಿಗ್ಧತೆ. ಮನೆಯಲ್ಲಿ ಅಕ್ಕನ ಬಟ್ಟೆ ತೊಟ್ಟು, ಮೇಕಪ್ ಮಾಡಿ ನಲಿದರೆ ಅಪ್ಪನಿಂದ ಕಪಾಳ ಮೋಕ್ಷ. ಧ್ವನಿಯೊಡೆದು, ಮೀಸೆ ಮೂಡಿದಂತೇ ಮಾದೇಶ ಮೂಡಿಯಾಗುತ್ತಾನೆ. ಪರೀಕ್ಷೆಯಲ್ಲಿ ನಪಾಸಾಗುತ್ತಾನೆ. ತನ್ನ ಮನದಿಚ್ಛೆಯನ್ನು ಗೋವಿಂದನಾದಿಯಾಗಿ ಯಾರೊಡನೆಯೂ ತೋಡಿಕೊಳ್ಳಲಾರ. ಹಳ್ಳಿಯ ವಾತಾವರಣದಲ್ಲಿ ಉಸಿರುಕಟ್ಟಿದಾಗ, ಹಿರಿ ಹರಿವಿನಾಸೆಯಿಂದ ಮನೆ ಬಿಟ್ಟು ಬೆಂಗಳೂರಿನಲ್ಲಿರುವ ಅಕ್ಕನ ಮನೆ ಸೇರುತ್ತಾನೆ. ಭಾವನ ಸಹಾಯದಿಂದ ಕೆಲಸ ಸೇರಿ ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸುತ್ತಾನೆ.

ಬಸ್ಸಿನಲ್ಲಿ ಓಡಾಡುವಾಗ ತನ್ನಂತೇ ಗಂಡಿನ ದೇಹದಲ್ಲಿ ಬಂಧಿಯಾದ ಸೆಲ್ವಿನ್ ಪರಿಚಯವಾಗುತ್ತಾನೆ. ಈ ಗೆಳೆತನ, ಮಾದೇಶನನ್ನು ಸಮಾಜದಿಂದ ಮರೆಮಾಚಾಗಿರುವ ಇತರ ದೇಹ ಬಂಧಿ ಹೆಂಗಸರ ಲೋಕಕ್ಕೆ ಕರೆದೊಯ್ಯುತ್ತದೆ. ಸಮಯ ಸಿಕ್ಕಾಗೆಲ್ಲ ಹೆಂಗಸರಂತೇ ಸಿಂಗರಿಸಿಕೊಂಡು, ಒಬ್ಬರನ್ನೊಬ್ಬರು ಹೆಂಗಸರಂತೇ ಸಂಬೋಧಿಸಿಕೊಂಡು ಮೈ ಮರೆತು ನಕ್ಕು ನಲಿಯುವ ಅವಕಾಶ ಮಾದೇಶನಿಗೆ ಮುದ ಕೊಡುತ್ತದೆ.  ಅವನಲ್ಲಿ ಕೊನರೊಡೆದಿದ್ದ ಹೆಣ್ಣಾಗುವ ಆಸೆ ಮರವಾಗಿ ನಿಲ್ಲುತ್ತದೆ. ಎಂ.ಎ ಮುಗಿದಾಗ, ಮನೆಗೆ ಕರೆದೊಯ್ಯಲು ಬಂದ ಅಪ್ಪ-ಅಮ್ಮನ ಎದುರು ತನ್ನ ಭಾವನೆಗಳನ್ನು ಹೇಳಿಕೊಳ್ಳಲಾರ ಮಾದೇಶ. ಮನೆ ಬಿಟ್ಟು, ಸೆಲ್ವಿನ್ ನ ಕಾಲು ಹಿಡಿದು, ಹಿಜಡಾಗಳ ಗುಂಪು ಸೇರುತ್ತಾನೆ. ಹಿಜಡಾಗಳ ಬದುಕೆಷ್ಟು ದುರ್ಭರ, ಓದಿದ್ದೆಲ್ಲ ನಿಷ್ಪ್ರಯೋಜಕ ಎಂದೂ ಅವನಿಗರಿವು. ಆದರೆ ಆತ ಗಂಡಿನ ದೇಹದಲ್ಲಿ ಹೆಣ್ಣಾಗಿ ಸುಳ್ಳಿನ ಬದುಕು ಬಾಳಲಾರ. ಎಲ್ಲರ ನೆಮ್ಮದಿಗೆ ಮಾದೇಶ ಪುಣೆಗೆ ರವಾನೆಯಾಗುತ್ತಾನೆ. ಅಲ್ಲಿ ‘ನಾನಿ’ ಯ ಆಶ್ರಯದಲ್ಲಿ ‘ವಿದ್ಯಾ’ ಆಗಿ ತ್ರಿಶಂಕು ಆಗುತ್ತಾನೆ. ವಿದ್ಯಾ ನಿರ್ಭಯದಿಂದ ಹೆಣ್ಣಿನ ತೊಡುಗೆ ತೊಟ್ಟರೂ  ದೈಹಿಕವಾಗಿ ಗಂಡೇ. ಭಿಕ್ಷೆ ಬೇಡಿ, ಹಣ ಕೂಡಿಸಿ ‘ನಿರ್ವಾಣ’ (ಲಿಂಗ ವಿಹೀನ ಶಸ್ತ್ರ ಚಿಕಿತ್ಸೆ) ಪಡೆಯಬೇಕು. ವಿದ್ಯಾಗೆ ಚಡಪಡಿಕೆ, ಆದಷ್ಟು ಬೇಗ ‘ನಿರ್ವಾಣ’ ಹೊಂದಬೇಕೆಂದು. ನಾನಿಯ  ಮನವೊಲಿಸಿ ಹಿಂಗೇರಿಯಲ್ಲಿ ನಡೆಸುವ ನ್ಯಾಯ ಬಾಹಿರ ಕ್ಲಿನಿಕ್ ನಲ್ಲಿ ಚಿಕಿತ್ಸೆ ಮಾಡಿಸಿಕೊಂಡಾಗ ವಿದ್ಯಾಗೆ ಅನಿಸಿದ್ದು, “ಹೆಣ್ಣಾಗಿ ಹುಟ್ಟೋದು ಸುಲಭ, ಆದರೆ ಹುಟ್ಟಿದ ಮೇಲೆ ಹೆಣ್ಣಾಗೋದು ಕಷ್ಟ.”

ಮಂಗಳಮುಖಿಗಳ ಲೋಕದಲ್ಲಿ ನಿರ್ವಾಣ ಆದ ಮೇಲೆ ಮೈ ಮಾರಿ ಸಂಪಾದಿಸಬೇಕೆಂಬುದು ಅಲಿಖಿತ ನಿಯಮ. ವಿದ್ಯಾವಂತ ವಿದ್ಯಾಗೆ  ಮೈ ಮಾರುವುದು ಸುತಾರಾಂ ಮನಸಿಗೆ ಒಗ್ಗೋದಿಲ್ಲ. ಬಾಲ್ಯದ ಪ್ರೇಮ ಗೋವಿಂದನ ಸೇರೋದೇ ಅವಳ ಜೀವನದ ಪರಮ ಉದ್ದೇಶ. ಕಾಡಿ-ಬೇಡಿ, ನಾನಿಯ ಪರವಾನಿಗೆ ಪಡೆದು ಬೆಂಗಳೂರಿಗೆ ಬಂದಿಳಿದ ವಿದ್ಯಾಗೆ ಅಕ್ಕ-ಅಮ್ಮನ ಸಹಾನುಭೂತಿ ಸಿಕ್ಕರೂ, ಸ್ವೀಕಾರ ಗಗನ ಕುಸುಮವಾಗಿ ಗೋಚರಿಸಿದಾಗ ನನ್ನ ಕಣ್ಣು ತುಂಬಿ ಬಂತು. ವಿದ್ಯಾ ಎಷ್ಟು ಕಷ್ಟ ಪಟ್ಟರೂ ಸಮಾಜದ ಪೂರ್ವಾಗ್ರಹಿತ ನಂಬಿಕೆಗಳಿಗೆ ಬಲಿಯಾಗಿ ನಿರುದ್ಯೋಗಿಯಾಗುತ್ತಾಳೆ. ನೋಟರಿಯ ಮೊರೆ ಹೊದರೂ, ನ್ಯಾಯ ಬಾಹಿರ ಚಿಕಿತ್ಸೆಯ ಪುರಾವೆಯಿಲ್ಲದೇ ಮಾದೇಶನೇ ವಿದ್ಯಾ ಎಂದೂ ತೋರಿಸಲಾಗದ ಸಂಕಷ್ಟ. ಮತ್ತೆ ಹಾದಿಗೆ ಬಿದ್ದ ವಿದ್ಯಾ ಪೊಲೀಸರ ಅತಿಥಿಯಾಗುತ್ತಾಳೆ. ಸಹನೆಯಿಂದ ಅವಳ ಕಥೆ ಕೇಳಿದ ಅಧಿಕಾರಿ ಅವಳಿಗೆ ಘನತೆಯ ದಾರಿಗೆ ಮಾರ್ಗದರ್ಶಿಯಾಗುತ್ತಾನೆ.

vidya“ನಾನು ಅವನಲ್ಲ…ಅವಳು”, ಸರವಣನಾಗಿ ಹುಟ್ಟಿ ವಿದ್ಯಾ (ಲಿವಿಂಗ್ ಸ್ಮೈಲ್ ವಿದ್ಯಾ ಎಂದೇ ಪ್ರಸಿದ್ಧಿ) ಆದ ಮಹಿಳೆಯ ಜೀವನ ಚರಿತ್ರೆ ಆಧಾರಿತ ಚಿತ್ರ. ನಮ್ಮ ಕಣ್ಣಿಗೆ ಕಾಣದ ಮಂಗಳಮುಖಿಗಳ ಲೋಕದ ಪರಿಚಯ ಸಫಲವಾಗಿ ಮಾಡಿ ಕೊಡುತ್ತದೆ. ಅವರ ಶೋಷಿತ ಬದುಕಿನ ಪದರುಗಳನ್ನು ಸುಲಿದಿಡುತ್ತ ಹೋಗುತ್ತದೆ. ನಮ್ಮ ಪೂರ್ವಾಗ್ರಹಕ್ಕೆ, ಆಷಾಢಭೂತಿ ಮನೋಭಾವಕ್ಕೆ ಕನ್ನಡಿ ಹಿಡಿಯುತ್ತದೆ. ನ್ಯಾಯ ವ್ಯವಸ್ಥೆಯಲ್ಲಿರುವ ತೊಡರುಗಳ ಅನುಭವವಾದಾಗ ವಿದ್ಯಾಳೊಟ್ಟಿಗೆ ಪ್ರೇಕ್ಷಕನೂ ತಬ್ಬಿಬ್ಬಾಗುತ್ತಾನೆ. ಮಂಗಳಮುಖಿಗಳಿಗೆ ದಿನ ನಿತ್ಯ ಎದುರಾಗುವ  ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಸಮಾನತೆ ಪದೇ ಪದೇ ಮನ ಕಲಕುತ್ತದೆ.

ಸಿನಿಮೀಯ ಕೋನಗಳಿಂದಲೂ ಈ ಚಿತ್ರ ಸಕ್ಸಸ್. ನಿರ್ದೇಶಕ ಲಿಂಗದೇವರು ಸತತ ಪರಿಶ್ರಮ ಪಟ್ಟು ಬಿಗಿದಾದ ಚಿತ್ರಕಥೆ ಬರೆದಿದ್ದಾರೆ. ವಿದ್ಯಾಳ ಒಪ್ಪಿಗೆ ಪಡೆದು, ಆಕೆಯ ಸಹಾಯವಿಲ್ಲದಿದ್ದರೂ  ಮಂಗಳಮುಖಿಗಳ ಲೋಕ ಹೊಕ್ಕು, ಎಂದೂ ನಟಿಸದ ಮಂಗಳಮುಖಿಗಳಿಂದ ಅವರ ಮನೆಗಳಲ್ಲೇ ಚಿತ್ರೀಕರಣ ಮಾಡಿದ್ದೊಂದು ಸಾಧನೆಯೇ ಸೈ. ಸಡಿಲವಾಗದ ನಿರೂಪಣೆ ಎಲ್ಲೂ ಭಾವೋತ್ಕಾರಕ್ಕೆ ಒಳಪಡುವುದಿಲ್ಲ. ಚಿತ್ರದುದ್ದಕ್ಕೂ ಅಳವಡಿಸಿರುವ ರೈಲಿನ ಪ್ರವಾಸಗಳು ವಿದ್ಯಾಳ  ಜೀವನ ಪ್ರವಾಸಕ್ಕೆ ಪ್ರತಿಮೆ. ರೈಲಿನಂತೇ  ಮಂಗಳಮುಖಿಗಳು ಹಾಸು ಹೊಕ್ಕಾಗಿದ್ದಾರೆ ಭಾರತೀಯರ ಜೀವನದಲ್ಲಿ. ಮಂಗಳಮುಖಿಗಳ ಬಗ್ಗೆ ಉತ್ತರ ಹಾಗೂ ದಕ್ಷಿಣ ಭಾರತೀಯರ ನಡೆವಳಿಕೆಗಳ ನಡುವಿನ ಭಿನ್ನತೆಯನ್ನೂ  ಲಿಂಗದೇವರು ರೈಲಿನಲ್ಲಿ ಮಾರ್ಮಿಕವಾಗಿ ತೋರಿಸಿದ್ದಾರೆ. ಅನೂಪ್ ಸೀಲಿನ್ ಅವರ ಸಂಗೀತ, ದೃಶ್ಯಗಳನ್ನು ಮಾಲೆಯಾಗಿ ಹಿಡಿದಿಡುವ ಬಳ್ಳಿಯಾಗಿದೆ. ಚಪ್ಪಾಳೆ, ಹಿಮ್ಮೇಳ, ಪೂರಕವಾದ ಕಂಠ ಚಿತ್ರಕ್ಕೆ ಮೆರಗು ನೀಡಿವೆ. ಸಂಚಾರಿ ವಿಜಯ್ ಮಾದೇಶ/ವಿದ್ಯಾ ಪಾತ್ರದಲ್ಲಿ ಪ್ರಬುದ್ಧ ಅಭಿನಯ ನೀಡಿದ್ದಾರೆ. ಭಾವನೆಗಳನ್ನು ನಾಜೂಕಾಗಿ ವ್ಯಕ್ತಿಸಿದ್ದಾರೆ, ಅತಿರೇಕವಿಲ್ಲದೇ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದ ಹೈಲೈಟ್, ಎಂದೂ ನಟಿಸದ ಮಂಗಳಮುಖಿಗಳ ಅಭಿನಯ.

IMG-20160716-WA0000.jpg
ನಿರ್ದೇಶಕ ಲಿಂಗದೇವರೊಡನೆ (ಮಧ್ಯದಲ್ಲಿರುವವರು) ಲೇಖಕ ರಾಂ (ಲೇಖಕರ ಬಲಗಡೆ)

ಒಟ್ಟಿನಲ್ಲಿ, ನನ್ನ ದೃಷ್ಟಿಕೋನ ಬದಲಾಯಿಸುವುದರಲ್ಲಿ “ನಾನು ಅವನಲ್ಲ-ಅವಳು” ಸಾರ್ಥಕವಾಗಿದೆ. ನಿಜ ಕಥೆಯನ್ನಾಧರಿಸಿದರೂ ಎಲ್ಲೂ ಸಾಕ್ಷ್ಯಚಿತ್ರವೆನ್ನಿಸದೇ ಶಕ್ತಿಯುತ ಸಂದೇಶ ನೀಡುವ ಪಕ್ವ ಪ್ರಯತ್ನ ಈ ಚಿತ್ರ. ದೇಶ, ಲಿಂಗ, ವಯಸ್ಸಿನ ಮಿತಿ ಇಡದೇ ಪ್ರತಿಯೊಬ್ಬರೂ  ನೋಡಲೇಬೇಕಾದ ಚಿತ್ರವೆಂಬುದು ನನ್ನನಿಸಿಕೆ.

ವಿದ್ಯಾ ಇಂದು ರಂಗಕರ್ಮಿಯಾಗಿ, ಇತರೇ  ಮಂಗಳಮುಖಿಗಳ ಉನ್ನತಿಯ ಹೋರಾಟಕ್ಕೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಇವರಂಥ ಸಮಾಜ ಸೇವಕರ ನಿರಂತರ ಪ್ರಯತ್ನದ ಫಲವಾಗಿ ಇತ್ತೀಚೆಗೆ ಭಾರತದ ಉನ್ನತ ನ್ಯಾಯಾಲಯ ಮಂಗಳಮುಖಿಗಳಿಗೂ ಸಮಾನ ಹಕ್ಕುಗಳಿವೆ ಎಂದು ತೀರ್ಪು ನೀಡಿತು.  ತಮ್ಮ ಜೀವನಗಾಥೆಯನ್ನು ಬರೆದ ಲಿವಿಂಗ್ ಸ್ಮೈಲ್ ವಿದ್ಯಾ,”ನಾನು ಅವನಲ್ಲ-ಅವಳು”ಚಿತ್ರದ ನಿರ್ದೇಶಕ ಲಿಂಗದೇವರು ನಮ್ಮ ದೃಷ್ಟಿಕೋನಕ್ಕೆ ಹೊಸ ಆಯಾಮ ನೀಡಿದ್ದಕ್ಕೆ ಕೃತಜ್ಞತೆಗಳು.

 

 

4 thoughts on “….ಬಾಳಿನಲ್ಲಿ ಹುಟ್ಟಿದ ಮೇಲೆ ಹೆಣ್ಣಾಗೋದು ತುಂಬಾ ಕಷ್ಟ – ರಾಂ ಬರೆದ ಲೇಖನ

  1. ಪ್ರಿಯ ರಾಮಶರಣ ಅವರಿಗೆ,
    ಧನ್ಯವಾದಗಳು. ನಿಮ್ಮಲೇಖನ ಓದುಗರ ಹೃದಯ ತಲಪುವದರಲ್ಲಿ ಸಂದೇಹವಿಲ್ಲ. ನೀವು ವಿವರವಾಗಿ ಚಿತ್ರಿಸಿದ ,ವಿಮರ್ಶಿಸಿದ ಲೇಖನ ಓದಿ ಈ ಚಿತ್ರಪಟವನ್ನು ಬೇಗನೆ ನೋಡಬೇಕೆಂದು ಲವಲಕಿಯಾಗಿದೆ. ಈಗಿನ ಸಮಾಜದಲ್ಲಿ “ಹಿಜಡಾ” ಪಂಗಡ ಬಗ್ಗೆ ಹಿಂದಿನ ಕಾಲದಲ್ಲಿ ಪ್ರಚಲಿತವಾಗಿದ್ದ ಅಶ್ಲೀಲ ,ಕೀಳ ವಿಚಾರಗಳು ಬದಲಾಗುತ್ತಿದೆ. ಯಿಂತಹ ಚಿತ್ರಪಟಗಳು ಇನ್ನೂ ಹೆಚ್ಚಿಗೆ ಹಿಜಡಾ ಪಂಗಡದವರ ಬಗ್ಗೆ ಅನುಕಂಪ,ಸಹಾನುಭೂತಿ ಬೆಳೆಯಲು ಯತ್ನಿಸಿದ್ದುದು ಶ್ಲಾಘನೀಯದು. ಒಟ್ಟಿನಲ್ಲಿ ವಿಶಾಲ ಮನೋವೃತ್ತಿ ನಮ್ಮ ಸಮಾಜದಲ್ಲಿ ನೆಲಿಸಿದಲ್ಲಿ ಜನರಲ್ಲಿ ಸೌಹಾರ್ದತೆ ಬೆಳೆಯುವದು.
    ವಿಶ್ವಾಸಿ
    ಅರವಿಂದ

    Sent from my iPad

    Like

  2. ಹಿಜಡಾಗಳ ,ಶಿಖಂಡಿಗಳ ಬಗ್ಗೆ ಮೊದಲಿನಿಂದಲೂ ಮಾಹಿತಿ ಇದ್ದರೂ ಸಮಾಜ ಅವರನ್ನ ನೋಡುವ ರೀತಿ ಒಂಥರಾನೇ.ಮಂಗಳಮುಖಿಯರ ವರ್ತನೆಯೂ ಮುಜುಗರಪಡಿಸುವಂಥದೇ ನಾ ನೋಡಿದ ಹಾಗೆ.ನಮ್ಮಲ್ಲಿ ಅಂದರೆ ಬೆಂಗಳೂರುನಲ್ಲಿಯಂತೂ ,ಸಿಗ್ನಲ್ ಗಳಲ್ಲಿ ವಾಹನ ನಿಂತರೆ ಸಾಕು .,ಮುತ್ತಿ ,ದುಡ್ಡಿಗೆ ಪೀಡನೆ‌ .ಕೊಟ್ಟರೆ ಕೆನ್ನೆ ನೇವರಿಕೆ ಇಲ್ಲವಾದರೆ ಪಕ್ಕದಲ್ಲಿ ಕುಳಿತ ನಮ್ಮಂಥ ಮಹಿಳೆಯರ ಮುಂದೆ ಕೈಯಾಡಿಸುವುದು ಏನೇನೋ.(ಉತ್ತರದಲ್ಲಿ ಹೇಗೋ ನಾ ಅರಿಯೆ) ಆದರೆ ಇದೆಲ್ಲ ಅವರ ಹೊಟ್ಟೆ ಪಾಡಿಗೆ ,ಜೀವನ ನಿರ್ವಹಣೆಗೆ ಅಂತ ನೆನೆದು ಕಣ್ಣು ಒದ್ದೆಯಾದದ್ದೂ ಇದೆ‌ .ಮನದ ಮೂಲೆಯಲ್ಲಿ ಅನುಕಂಪ ಸೆಲೆಯೊಡದದ್ದಿದೆ .ಈಗ ಸರ್ಕಾರ ಅವರತ್ತ ಗಮನ ಹರಿಸುತ್ತಿದೆಯಾದರೂ ,ಸಾಕ್ಷರತೆ ,ಮೂಲಭೂತ ಸೌಕರ್ಯಗಳು ಹೆಚ್ಚಬೇಕು.ಲಿವಿಂಗ ಸ್ಮೈಲ ವಿದ್ಯಾನಂಥ ವರ ಪ್ರಯತ್ನ. ಫಲಕಾರಿಯಾಗಲಿ ಅಂತ ನನ್ನ ಹಾರೈಕೆ.ಮಂಗಳಮುಖಿಯರ ಜೀವನದ ಎಳೆ ಎಳೆ ಬಿಡಿಸಿಟ್ಟ ಆ ಚಿತ್ರವನ್ನ ಯಾಕೆ ನೋಡಲಿಲ್ಲಾಂತ ರಾಂ ಶರಣ ಅವರ ಲೇಖನ ಓದಿದ ಮೇಲೆ ಯೋಚಿಸುತ್ತಿದ್ದೇನೆ.ಮಂಗಳಮುಖಿಯರಿಗೆ ಬೇಕಾಗಿರುವುದು ಬರೀ ಕರುಣೆ ,ಅನುಕಂಪ ಅಲ್ಲ ಇನ್ನೂ ಹೆಚ್ಚು ಅನಿಸುತ್ತಿದೆ.ಇಂಥ ಲೇಖನ ನೀಡಿದ್ದಕ್ಕೆ ಧನ್ಯವಾದಗಳು ರಾಂ ಶರಣ್ ಅವರೇ
    ಸರೋಜಿನಿ ಪಡಸಲಗಿ

    Like

  3. ನಾವು ಬೆಳೆದಂತೆಲ್ಲ ನಮ್ಮ ಸುತ್ತಲಿನ ಪ್ರಚಲಿತ ವಿದ್ಯಮಾನಗಳು ನಮ್ಮ ದೃಷ್ಟಿಕೋನವನ್ನೇ ಬದಲಿಸುವಷ್ಟು ಶಕ್ತವಾಗಿರುತ್ತವೆ. ಶಿಖಂಡಿಗಳ ಬಗ್ಗೆ ಮಹಾಭಾರತದ ಕಾಲದಿಂದ ಉಲ್ಲೇಖವಿದ್ದರೂ ನಾವು ಚಿಕ್ಕವರಿದ್ದಾಗ `ನೇರ` ಜನರನ್ನು ಬಿಟ್ಟರೆ ಉಳಿದವರೆಲ್ಲ ಬದುಕಲು ನಾಲಾಯಕ್ಕಾದ ಜನರೆಂದೇ ಎಲ್ಲರ ಅಂಬೋಣ. ಅವರು ಅನುಭವಿಸುವ ಕೀಳರಿಮೆ, ಗೊಂದಲ ಇತ್ಯಾದಿಗಳ ಬಗ್ಗೆ ಕನಿಕರ ಕೂಡ ಇರದ ಪರಿಸ್ಥಿತಿ. ಸಮಾಜದಲ್ಲಿ ಸಲಿಂಗಿಗಳು, ಅಲಿಂಗಿಗಳು, ಶಿಖಂಡಿಗಳು ಎಲ್ಲ ಜನರಂತೆ ಸಾಮಾಜಿಕ ಬದುಕು ಮಾಡುವ ಕಾಲ ಇನ್ನೂ ಬಂದಿಲ್ಲವಾದರೂ ಇತ್ತೀಚೆ ಪ್ರಪಂಚದಲ್ಲೆಲ್ಲ ನಡೆಯುತ್ತಿರುವ ಸಲಿಂಗ ಚಳುವಳಿ, ಮುಖ್ಯವಾಹಿನಿಯಲ್ಲಿ ಅವರ ಬಗ್ಗೆ ಮಾಹಿತಿಗಳಿಂದಾಗಿ `ನೇರ` ಇರುವವರ ಮನೋಧರ್ಮ ಸ್ವಲ್ಪವಾದರೂ ಬದಲಾಗುತ್ತಿದೆ. ಕನ್ನಡದ ಈ ಚಿತ್ರ ಮಂಗಳಮುಖಿಯರ ಬದುಕನ್ನು ಬಿಡಿಬಿಡಿಯಾಗಿ ಎಲ್ಲಿಯೂ ಅತಿರೇಕಕ್ಕೆ ಒಯ್ಯದೇ ಮನಸ್ಸನ್ನು ತಾಗುತ್ತದೆ. ಚಿತ್ರಕತೆ, ನಿರ್ದೇಶನ ಮತ್ತು ಸಂಚಾರಿ ವಿಜಯ್ ಅಭಿನಯ, ವ್ಹಾ,ವ್ಹಾ! ಚಿತ್ರ ಮುಗಿದಾದ ಮೇಲೆ ನಿರ್ದೇಶಕರು ರೈಲಿನಲ್ಲಿ ಉತ್ತರ ಭಾರತೀಯರಿಗೂ ದಕ್ಷಿಣ ಭಾರತೀಯರಿಗೂ ಮಂಗಳಮುಖಿಯರನ್ನು ನಡೆಸಿಕೊಳ್ಳುವಲ್ಲಿ ಇರುವ ಅಂತರವನ್ನು ಹೇಳಿರದಿದ್ದರೆ ನನಗೆ ಆ ಸಂಕೇತ ಅರ್ಥವಾಗುತ್ತಿರಲಿಲ್ಲ. ತುಂಬ ತೂಕದ ಬರಹ. ತುಂಬ ಚೆನ್ನಾಗಿದೆ.

    Liked by 1 person

  4. ಹಿಂದೆ ನಾವು ಚಿಕ್ಕವರಿದ್ದಾಗ ಈ ಸಮಸ್ಯೆ taboo ವಿಷಯವಾಗಿತ್ತು. ಇದರ ಬಗ್ಗೆ ಚರ್ಚಿಸುವದಾಗಲಿ, ಮಂಗಳಮುಖಿಯರ (ಆಗ ಈ ಶಬ್ದವಾದರೂ ಇತ್ತೋ ಏನೋ, ನನಗೆ ಗೊತ್ತಿರಲಿಲ್ಲ) ಬದುಕಿನ ಬಗ್ಗೆ ವಿಶ್ಲೇಷಿಸುವುದಾಗಲಿ ಕಲ್ಪನಾತೀತವಾಗಿತ್ತು. ಈಗ ಈ ಕನ್ನಡ ಚಿತ್ರ ಎಲ್ಲೆಡೆಗೆ ಪ್ರದರ್ಶಿವುದು ಕೇಳಿ ನಾವು ’ಬೆಳೆದಿರುವದನ್ನು’ ತೋರಿಸುತ್ತದೆ. ರಾಂ ಅವರು ತಮ್ಮ ವೈಯಕ್ತಿಕ ದೃಷ್ಟಿ ಕೋನದಿಂದ ಬರೆದ ಪ್ರೌಢ ವಿಮರ್ಶೆ.” ಲಿವಿಂಗ್ ಸ್ಮೈಲ್ ವಿದ್ಯಾ’ ಅವರ ಬಗ್ಗೆ ಗೌರವ ಹುಟ್ಟಿದೆ. ನಾನು ಆ ದಿನ ಪರದೆಯ ಹತ್ತಿರದಲ್ಲೇ ಇದ್ದರೂ, ಕರೆ ಬಂದರೂ ಈ ಸಿನಿಮಾ ನೋಡುವ ಅವಕಾಶ ತಪ್ಪಿದ್ದಕ್ಕೆ ಖೇದವಾಗುತ್ತದೆ. ಡಿವಿಡಿ ಸಿಕ್ಕರೆ ನೋಡಲೇ ಬೇಕೆಂದು ’ಚಾಲೆಂಜ್’ ಮಾಡಿದ್ದಾರೆ.

    Like

Leave a comment

This site uses Akismet to reduce spam. Learn how your comment data is processed.