ಚೆಲುವು – ಕೇಶವ ಕುಲಕರ್ಣಿ ಬರೆದ ಕವಿತೆ

ಅದೇ ತಾನೆ ಹುಟ್ಟಿದ ತಮ್ಮನಿಗೆ ಇರುವುದು
ಇಷ್ಟು ವರ್ಷವಾದರೂ ನನಗೇಕೆ ಇಲ್ಲ
ಎಂದು ಅಮ್ಮನ ಮುಂದೆ ರಂಪ ಮಾಡಿ
ಇನ್ನಿಲ್ಲದಂತೆ ಬಯ್ಯಿಸಿಕೊಂಡಾಗ
ನನಗೆ ನಾಕು ವರ್ಷ

ಪಕ್ಕದ ಮನೆ ಹುಡುಗಿಯ ಬಿಳಿ ಜೋಳದ ಬಣ್ಣವನ್ನು
ಅಮ್ಮ ಎಲ್ಲರ ಮುಂದೆ ಹೊಗಳಿ
ನನ್ನ ನಸುಗಪ್ಪಿನ ಬಣ್ಣ ಎಲ್ಲ ಅಪ್ಪನದೇ ಎಂದು
(ಅದು ನನ್ನದೇ ತಪ್ಪು ಎನ್ನುವಂತೆ)
ಎಲ್ಲರ ಮುಂದೆ ಹಂಗಿಸಿಕೊಂಡಾಗ
ನನಗಿನ್ನೂ ಹತ್ತು ವೆರ್ಷ

ನನ್ನ ಸಪಾಟ ಎದೆಯನ್ನು
ಪುಸ್ತಕದಲ್ಲೋ ದುಪ್ಪಟದಲ್ಲೋ ಮುಚ್ಚಿಕೊಂಡು
ಒಂಟಿಯಿರುವಾಗ ಎರಡು ಸೇಬು ಇಟ್ಟುಕೊಂಡು
ಕನ್ನಡಿಯ ನೋಡಿಕೊಳ್ಳುವಾಗ
ನನಗೆ ಷೋಡಸದ ಹರೆಯ

ಸ್ಲೀವ್ ಲೆಸ್ ಹಾಕಿಕೊಂಡಾಗ ಕಪ್ಪು
ಕಂಕುಳ ಕಾಣದಂತೆ ಕೈಯೆತ್ತುವುದನ್ನು
ಸೀರೆ ಉಟ್ಟುಕೊಂಡಾಗ (ಸ್ವಲ್ಪವೇ ಬಂದ) ಡೊಳ್ಳು
ಹೊಟ್ಟೆ ಕಾಣದಂತೆ ಸೆರಗು ಮುಚ್ಚಿಕೊಳ್ಳುವುದನ್ನು
ಜೀನ್ಸು ಹಾಕಿದಾಗ ಸಪಾಟು
ನಿತಂಬ ಕಾಣದಂತೆ ಉದ್ದ ಶರ್ಟು ಹಾಕುವುದನ್ನು
ಇಪ್ಪತ್ತೈದಾಗುವಷ್ಟರಲ್ಲಿ
ರೂಢಿಯಾಗಿತ್ತು

ಮಗುವಾದ ಮೇಲೆ
ಕಪ್ಪು ನಿತಂಬದ ಮೇಲೆ
ಹೆಚ್ಚಾದ ಡೊಳ್ಳುಹೊಟ್ಟೆಯ ಮೇಲೆ
ಮೂಡಿದ ಬಿಳಿ ಗೆರೆಗಳನ್ನು
ಜೋತು ಬಿದ್ದ ಮೊಲೆಗಳನ್ನು
ಕಂಡಾಗಲೆಲ್ಲ ವಾಕರಿಕೆಯಲ್ಲೇ
ನಲವತ್ತಾಗುತ್ತ ಬಂತು

ಮೀಸೆ ಗಡ್ಡಗಳನ್ನು
ಕಾಲ ಕೂದಲನ್ನು
ಮೇಲಿಂದ ಮೇಲೆ ತೆಗೆಯುತ್ತ
ಕೂದಲಿಗೆ ಬಣ್ಣ ಬಳಿದುಕೊಳ್ಳುತ್ತ
ಫೇಸಿಯಲ್ಸು ಹೇರ್ ಸ್ಟೈಲು ಮಾಡಿಸಿಕೊಳ್ಳುತ್ತ
ನನಗೆ ಐವತ್ತು ವರ್ಷ ಆಗೇ ಹೋಯ್ತು

ಐದು ವರ್ಷದ ಮೊಮ್ಮಗುವನ್ನು
ಪಕ್ಕದಲ್ಲೇ ಮಲಗಿಸಿಕೊಂಡು
ಹಾಡು ಕಲಿಸಿ ಕತೆಯ ಹೇಳಿ
ಗಟ್ಟಿಯಾಗಿ ತಬ್ಬಿಕೊಂಡು
ಚಂದದೊಂದು ಮುತ್ತನಿತ್ತು
ಗುಡ್ ನೈಟ್ ಹೇಳಿದಾಗ
‘You are the most beautiful
girl in the world’ ಎಂದಿತು
ನನಗಾಗ ಅರವತ್ತು

7 thoughts on “ಚೆಲುವು – ಕೇಶವ ಕುಲಕರ್ಣಿ ಬರೆದ ಕವಿತೆ

  1. ಮನುಶ್ಯನ ಚೆಲುವು ಕೇವಲ ಚರ್ಮದಿಂದಲ್ಲ. ಚರ್ಮದ ಹಿಂದಿನ ಮನದ ಸೌಂಧರ್ಯ ಅನಂತವಾದದ್ದು. ಕೇವಲ ಮುಗ್ಧ ಮನಸ್ಸಿನ ಮಗುವೊಂದು ಅದನ್ನು ಆರಾಧಿಸಬಲ್ಲದು ಎನ್ನುವ ಸತ್ಯವನ್ನು ಕೇಶವ್ ತಮ್ಮ ಕವನದಲ್ಲಿ ವ್ಯಕ್ತಪಡಿಸಿದ್ದಾರೆ. ಸುಂದರವಾದ ಜೀವನವನ್ನು ಸವಿಯಲು ಚೆಲುವಾದ ಮನಸ್ಸಿರಬೇಕು ಅಷ್ಟೇ!
    ಉಮಾ ವೆಂಕಟೇಶ್

    Liked by 1 person

  2. ತಿಳುವಳಿಕೆ ಬಂದಾಗಿನಿಂದ ತನ್ನ ದೇಹ, ಬಾಹ್ಯ ರೂಪ ಇದರ (ಲ್ಲಿಲ್ಲದ) ಸೌಂದರ್ಯಕ್ಕೇ ಪ್ರಾಧಾನ್ಯತೆ ಕೊಡುತ್ತ ಹೋಗುವವಳಿಗೆ ನಿಜವಾದ ಚೆಲುವು, ಅಂತರಂಗ ಸೌಂದರ್ಯ, (ಮಕ್ಕಳ) ಪ್ರೀತಿಯೇ ಎಂದು ಮನವರಿಕೆ ಆಗುವಷ್ಟರಲ್ಲಿ ಆರು ದಶಕಗಳೇ ಸಂದು ಹೋಗಿರುತ್ತವೆ! Truth is beauty, beauty is truth ಎಂಬ ’ಅಜ್ಜಿಕಾಲದ’ ಸತ್ಯವನ್ನು ಹೊಸ ಶೈಲಿಯಲ್ಲಿ ಕವಿ ನಿರೂಪಿಸಿದ್ದಾರೆ. (ಮೇಲೆ ಒಬ್ಬ ವಿಮರ್ಶಕಿ ಬರೆದಂತೆ) ಕಾಲ ಸರಿದಂತೆ ತನ್ನ ಕುಂದು, ಅವಲಕ್ಷಣಗಳೆ ದೊಡ್ಡದಾಗಿ ಕಾಣುತ್ತ ನಡೆದಾಗ ದೂರವಾದ ಆ ಸತ್ಯ ಮೊಮ್ಮಗುವಿನ ಒಂದೇ ಮಾತಿನಲ್ಲಿ ಅರಿವಾಗುತ್ತದೆ. ಅಭಿನಂದನೆಗಳು

    Liked by 1 person

  3. ಜೀವನದಲ್ಲಿ ಇಲ್ಲದ್ದನ್ನೇ ಹುಡುಕುತ್ತಾ ,ಕೊರತೆ ,ಅವಮಾನಗಳನ್ನ ಅನುಭವಿಸುತ್ತ ,ಹುಳುಕು ,ಅವಲಕ್ಷಣಗಳನ್ನ ಮುಚ್ಚುತ್ತ ಸಾಗಿದರೂ ,ಒಂದು ಹಂತದಲ್ಲಿ ಹೇಸಿಕೆ ಎನಿಸಿದರೂ ತ್ಯಾಪೆ ಹಚ್ಚುತ್ತ ಸಾಗುವ ಜೀವನ ಸಾರ್ಥಕ್ಯ ಕಾಣುವದು ಬಾಳ ಸಂಜೆಯಲ್ಲಿಯೇ.ಬಾಳಿನ ಅರ್ಥ ತಿಳಿಯುವದೇ ಆಗ ಅಲ್ಲವೇ?ಈ ಬದುಕು ಅಗಮ್ಯ ,ಅನೂಹ್ಯ.ಅದಕೇ ಅಲ್ಲವೇ.”beautiful girl”ಅಂತ ಹೇಳಿ ಬದುಕಿನ ಹಾಸು ಇನ್ನೂ ಚಾಚಿದೆ ಎಂಬ ಆಶೆಯ ಹೊನಲು .ಮಗುವಿನಂಥ ನಿಷ್ಕಾಮ ,ನಿರಪೇಕ್ಷ ,ನಿಷ್ಕಲ್ಮಷ ಪ್ರೀತಿಯಲ್ಲಿಯೇ ಬದುಕಿನ ಸವಿಯಾದ ಚಲುವು ಅಡಗಿದೆ ಎಂದು ಸಾರುವ ಚಂದದ ಕವನ.ನಿಮ್ಮದೇ ಶೈಲಿಯಲ್ಲಿ ಜೀವನದ ಅನಂತ ಸತ್ಯವನ್ನು ಸುಂದರವಾಗಿ ಬಿಂಬಿಸಿದ್ದೀರಿ ಕೇಶವ ಕುಲಕರ್ಣಿಯವರೇ.
    ಸರೋಜಿನಿ ಪಡಸಲಗಿ

    Liked by 2 people

  4. ಚೆನ್ನಾಗಿದೆ. ಬದುಕನ್ನು ಸಣ್ಣಮಕ್ಕಳ ಕಣ್ಣಿಂದ ನೋಡಿದರೆ ಎಲ್ಲವೂ ಚೆಲುವೇ. ಅದರಲ್ಲೇ ಮಕ್ಕಳ ಚೆಲುವೂ…

    Like

Leave a comment

This site uses Akismet to reduce spam. Learn how your comment data is processed.