“ನೆಟ್ಟಿ”ಗೇರಿದ ಪಠ್ಯ @ ನೆತ್ತಿಗೇರುವುದೇ? ಅಂತರ್ಜಾಲದಲ್ಲಿ ಕನ್ನಡ ಮಾಧ್ಯಮ ಶಾಲಾ ಪಠ್ಯಗಳು – ಸುದರ್ಶನ ಗುರುರಾಜರಾವ್ ಲೇಖನ

ನಾವು ಶಾಲೆಯಲ್ಲಿ ಓದುತ್ತಿರುವಾಗ ಒಂದು ತರಗತಿಯಿಂದ  ಉತ್ತೀರ್ಣರಾಗಿ ಇನ್ನೊಂದು ತರಗತಿಗೆ ಹೋಗುವುದರ ಜೊತೆಗೆ ಮುಂದಿನ ತರಗತಿಯ ಪಠ್ಯ ಪುಸ್ತಕಗಳ ಬೇಟೆಯೂ ಶುರುವಾಗುತ್ತಿತ್ತು. ಏಪ್ರಿಲ್ ಹತ್ತನೇ ತಾರೀಖು ನಮ್ಮ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಿ ಅಧಿಕೃತವಾಗಿ ಪಾಸಾಗಿದ್ದೇವೆಂದು ಘೋಷಣೆಯಾಗುತ್ತಿದ್ದಂತೆ ನಮಗಿಂತ  ಒಂದು ವರ್ಷ ಮುಂದಿನ ವಿದ್ಯಾರ್ಥಿಗಳೊಂದಿಗೆ ನಮ್ಮ ಮಾತುಕತೆ ಶಾಲಾ ಆವರಣದಲ್ಲೇ ಶುರುವಾಗುತ್ತಿತ್ತು. .

ಮುಂಚಿನ ಪರಿಚಯದ ಆಧಾರದ ಮೇಲೆ, ಪುಸ್ತಕಗಳನ್ನು ಜೋಪಾನವಾಗಿ ಬೈಂಡು  ಹಾಕಿ ಕಾಪಾಡಿಕೊಂಡಿದ್ದನೆಯೇ ಇಲ್ಲವೇ ಎಂಬ ಗಾಳಿಸುದ್ದಿಯ ಮೇಲೆ ಯಾರೊಂದಿಗೆ ವ್ಯವಹರಿಸುವುದೆಂಬ ಕಾರ್ಯಕಾರಿ ನಿರ್ಣಯ ಕೈಗೊಳ್ಳಲಾಗುತ್ತಿತ್ತು.  ಇನ್ನು ಮುಂದಿನ ಕ್ಲಾಸಿನ ವಿದ್ಯಾರ್ಥಿ ಹುಡುಗಿಯಾಗಿದ್ದರೆ ಅವರನ್ನು ನೇರವಾಗಿ ಮಾತುಕತೆಗೆ ಎಳೆಯಲು ಆಗದ ನಾವು ಅವರುಗಳ ಅಣ್ಣಂದಿರ ಮೂಲಕ ವ್ಯವಹಾರ ಕುದುರಿಸಿಕೊಳುತ್ತಿದ್ದೆವು.  ಪುಸ್ತಕ ಬೇಟೆಯ ದಂಡಿಗೆ img-5ಕೊರತೆಯಿಲ್ಲದಿದ್ದರೂ ಗಿರಾಕಿಗಳಿಗೂ ಒಂದು ಸ್ಥಾನ ಮಾನ ಇರುತ್ತಿತ್ತು. ಮಾತುಕತೆಗೆ ಮುಂಚೆಯೇ ಹಣ ತೋರಿಸಬಲ್ಲ , ಪುಸ್ತಕಕ್ಕೆ ತಕ್ಷಣ ಹಣ ಪಾವತಿಸಬಲ್ಲ, ಒಂದೆರೆಡು ದಿನಗಳಲ್ಲಿ ಕೊಡಬಲ್ಲ, ಒಂದೆರೆಡು ಕಂತುಗಳಲ್ಲಿ ಕೊಡಬಲ್ಲ, ಪುಸ್ತಕ ಕೊಂಡುಹೋಗಿ ಹಣ ಕೊಡಲಾಗದೆ ಪುನಃ ಜಪ್ತಿ ಮಾಡಿಸಿಕೊಂಡ ಇತಿಹಾಸವುಳ್ಳ ಇತ್ಯಾದಿ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಈ ಕೊಡು ಕೊಳ್ಳುವ ವ್ಯವಹಾರ ನಡೆಯುತ್ತಿತ್ತು. ಶಾಲೆಗಳು ಪ್ರಾರಂಭವಾಗಿ ೩-೪ ತಿಂಗಳು ಕಳೆದರೂ ಕೆಲವೊಮ್ಮೆ ಕೆಲವು ವಿಷಯಗಳ ಪಠ್ಯ  ಪುಸ್ತಕಗಳು ಸಿಗುತ್ತಲೇ ಇರಲಿಲ್ಲ !! ಬೆಂಗಳೂರಿನಿಂದ ಹರದಾರಿ ದೂರದ ಕೊಂಪೆಗಳಲ್ಲಿದ್ದ ನಮಗೆ ಎಷ್ಟೋ ಬಾರಿ ಪುಸ್ತಕಗಳು ಅಂಗಡಿಗಳಿಗೆ ಬಂದು ಖರ್ಚಾಗಿ ಹೋಗುತ್ತಿದ್ದುದೂ  ತಿಳಿಯುತ್ತಿರಲಿಲ್ಲ. ಈಗಿನಂತೆ ಜೆರಾಕ್ಸ್ ಸೌಲಭ್ಯವೂ ಸುಲಭವೂ, ಅಗ್ಗವೂ ಆಗಿ ದೊರಯದ ಕಾರಣ ಈ ಬಳಸಲ್ಪಟ್ಟ ಪುಸ್ತಕಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಅಷ್ಟಕ್ಕೂ ಉತ್ತಮವಾಗಿ ಕಾಯ್ದುಕೊಂಡ ಅವೇ ಪುಸ್ತಕಗಳು ಕಡಿಮೆ ಬೆಲೆಗೆ ಸಿಕ್ಕಿ ಒಂದೆರೆಡು ರೂಪಾಯಿ ಉಳಿದರೆ ಅದೂ  ಸಂತೋಷಕರವೇ ! ಐದು ಹತ್ತು ಪೈಸೆಗಳಿಗೂ ತತ್ವಾರ ಆಗಿದ್ದ ಅ ದಿನಗಳಲ್ಲಿ Tesco  ದ ಧ್ಯೇಯವಾಕ್ಯವಾದ every little helps ಎಂಬುದು ನಮ್ಮ ಅಳಿವು ಉಳಿವಿನ ವೇದವಾಕ್ಯವಾಗಿತ್ತೆನ್ನಿ. ಇಷ್ಟಾಗಿಯೂ ಆರು- ಏಳನೇ ತರಗತಿಯಲ್ಲಿ ಸಮಾಜ ಮತ್ತು ಕನ್ನಡದ ಪಠ್ಯಗಳು ಸಿಗದೇ ೨೦೦ ಹಾಳೆಯ ಲೇಖಕ್ ಪುಸ್ತಕವೊಂದರಲ್ಲಿ ಅದರ ನಕಲು ಮಾಡಿಕೊಂಡಿದ್ದೆ.

ಇಂತಿಪ್ಪ, ಈ ಸೀನಿಯರ್ ವಿದ್ಯಾರ್ಥಿಗಳೊಂದಿಗಿನ ನಮ್ಮ ಈ  ಚೌಕಾಸಿಯೊಂದಿಗೆ  ಬೇಸಿಗೆ ರಜೆಯ ಆಚರಣೆಗೆ ಶ್ರೀಕಾರ ಹಾಡಲಾಗುತ್ತಿತ್ತು.

ನನ್ನ ಮುಂದಿನ ತರಗತಿಯಲ್ಲಿದ್ದ ವಿರುಪಿ, ಪಾಂಡಿ, ಸತೀಶ, ಹೋಟ್ಲು ಮಂಜ, ಉಜಿನಪ್ಪ, ಗೋವಿಂದ ,ಬಾಬು, ದೇವರಾಜಪ್ಪ, ತಿಪ್ಪೇಸ್ವಾಮಿಯೇ ಮೊದಲಾದವರ ಬಳಿ ಮಾತಾಡಿ ಅವರ ಮನೆಗಳಿಗೆ ಎಡತಾಕಿ, ಅಳೆದು ಸುರಿದು, ಹಗ್ಗ ಜಗ್ಗಾಟ ನಡೆಸಿ, ಅವರುಗಳಿಂದ ‘ ಕೊಡುವುದಿಲ್ಲ ಹೋಗೆಂ’ಬ ಧಮಕಿಗಳಿಗೆ ಒಳಗಾಗಿ ಕೆಲವೊಮ್ಮೆ ಗೆದ್ದು, ಕೆಲವೊಮ್ಮೆ ಸೋತು,ಅಷ್ಟಿಷ್ಟು  ಕೆಲವೊಮ್ಮೆ ಮೋಸಹೋಗಿ, ಮತ್ತೆ ಕೆಲವೊಮ್ಮೆ ಮರುಳು ಮಾಡಿ, ಬೇರೆ ಯಾವುದೋ ಆಸೆ ತೋರಿಸಿ ವ್ಯವಹಾರ ಮುಗಿಸಿ ಎಲ್ಲ ಪುಸ್ತಕಗಳೊಂದಿಗೆ ಮನೆ ಸೇರಿದರೆ ಅಲ್ಲಿಗೆ ಪಾಂಡವ ಅಶ್ವಮೇಧವೂ ನಮ್ಮ ವಿಜಯೋತ್ಸವಕ್ಕೆ ಸಮವಿರುತ್ತಿರಲಿಲ್ಲ. ವರುಷ ಪೂರ್ತಿ ನಾನು ಕೂಡಿಟ್ಟುಕೊಂಡ ಹಣಕ್ಕೆ ವರುಷದ ಕೊನೆಗೆ ನಮ್ಮ ತಾಯಿ ಕೊಡುತ್ತಿದ್ದ ೫ ರೂಪಾಯಿ ಸೇರಿ ಸ್ವಲ್ಪ ಬಂಡವಾಳ ಇಟ್ಟುಕೊಂಡು ಹೋಗುತ್ತಿದ್ದ ನನಗೆ ಸ್ವಲ್ಪ ಆದ್ಯತೆ ಇತ್ತು ಎಂದೇ ಹೇಳಬೇಕು. ಮಾರುವವರಿಗೂ ಹಣ ಸಿಕ್ಕರೆ ಅವರ ಪುಸ್ತಕಗಳಿಗೂ ದಾರಿಯಾದೀತೆಂಬ ಯೋಚನೆ ಅವರಿಗೆ!

ನಗರಗಳಲ್ಲಿದ್ದ ನಮ್ಮ ಕೆಲವು ನೆಂಟರ ಮಕ್ಕಳಿಗೆ ಈ ಗೋಜಲು-ಪರಿಪಾಟಲುಗಳು ಇರಲಿಲ್ಲ. ಖಾಸಗೀ ಶಾಲೆಯಾದ ಕಾರಣ ಅವರಿಗೆ ಹೇಗೋ ಪುಸ್ತಕಗಳು ಹೊಂದಿಕೆಯಾಗಿಬಿಡುತ್ತಿದ್ದವು. ಆಂಗ್ಲಮಾಧ್ಯಮವೂ ಸಹ! ನೋಟು ಪುಸ್ತಕಗಳು ಕೂಡಾ ಅವರಿಗೆ ಸಲೀಸಾಗಿ ಸಿಗುತ್ತಿದ್ದವು. ನಾವು ಅವರುಗಳ ಮನೆಗೆ ಹೋದಾಗ ಅವರ ಹಿಂದಿನ ಕ್ಲಾಸಿನ ಪುಸ್ತಕಗಳನ್ನು ಪಡೆದು ಬರೆಯದ ಹಾಳೆಗಳನ್ನು ಜೋಪಾನವಾಗಿ ಹರಿದು ಸೇರಿಸಿ ದಪ್ಪ ದಾರ ದಬ್ಬಳಗಳಿಂದ ಅವುಗಳನ್ನು ಹೊಲಿದು ತರುತ್ತಿದ್ದೆವು. ಅವರೂ ಅವುಗಳನ್ನು ಕೊಡುವಷ್ಟು ಧಾರಾಳಿಗಳಾಗಿದ್ದರು. ಈಗ ಕಾಲ ಬದಲಾಗಿದೆ. ಮೊದಲ ಹಂತವೆಂಬಂತೆ ಎಲ್ಲ ಸರಕಾರೀ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಕಾಲ ಕಾಲಕ್ಕೆ ತಲುಪದ ವಿಳಂಬ ನೀತಿ ಇಂದಿಗೂ ಒಂದು ಜಾಡ್ಯವೇ ಆದರೂ ಪುಸ್ತಕ ಸಿಗುವುದರ ಭರವಸೆಯಂತೂ ಇದೆ. ಆದರೆ ಹೊರಗಡೆಯ ಮಾರಾಟವನ್ನು ನಿಷೇಧಿಸಿರುವ ಕಾರಣ ಕಾಸುಕೊಟ್ಟರೂ ನಿಮಗೆ ಪುಸ್ತಕಗಳು ಸಿಗಲಾರವು.

ಎರಡನೆ ಹಂತದಲ್ಲಿ ಈ ಪಠ್ಯಗಳನ್ನು ಅಂತರ್ಜಾಲದಲ್ಲಿ ಏರಿಸುತ್ತೇವೆಂದು ಕಳೆದ ಐದು ವರುಷಗಳಲ್ಲಿ ಹೇಳುತ್ತಾ ಮೂಗಿಗೆ ತುಪ್ಪ ಹಚ್ಚಿ ಕೂಡಿಸಿದ್ದ ಕರ್ನಾಟಕ  ಘನವೆತ್ತ ಸರಕಾರ ಕೊನೆಗೂ ಆ ಕೆಲಸ ಮಾಡಿದೆ. ಕರ್ನಾಟಕದಲ್ಲಿ ಕಲಿಸಲ್ಪಡುವ ಎಲ್ಲ ಭಾಷಾ ಮಾಧ್ಯಮಗಳ ಎಲ್ಲ ವಿಷಯಗಳ ಪಠ್ಯ ಪುಸ್ತಕಗಳನ್ನು “ನೆಟ್ಟಿ” ಗೆ ಏರಿಸಿದೆ.  ಕನ್ನಡ ಮಾಧ್ಯಮದ ಪುಸ್ತಕಗಳು ಈಗ ಸಮಗ್ರವಾಗಿ ಒಂದು ಕಡೆ ಲಭ್ಯವಾಗಿವೆ. ಕನ್ನಡದ ಮಟ್ಟಿಗೆ ಇದೊಂದು ಸಕಾರಾತ್ಮಕವಾದ, ಧನಾತ್ಮಕವಾದ ಬೆಳವಣಿಗೆ. ಹಾಗೆಂದು ಕನ್ನಡ ಪಠ್ಯಗಳನ್ನು ಅಂತರ್ಜಾಲದಲ್ಲಿ ದೊರೆಯುವಂತೆ ಮಾಡುವ ಕೆಲವು ಪ್ರಯತ್ನಗಳು ಹಿಂದೆ ನಡೆದಿದ್ದವು. ಅಮೇರಿಕಾದ, ಕನ್ನಡಕ್ಕೆ ಮಿಡಿಯುವ ಕೆಲವು ಜೀವಗಳು ಸ್ಕ್ಯಾನ್ ಮಾಡಿದ ಕೆಲವು ಪುಸ್ತಕಗಳ,  ಬಿಡಿ ಹಾಳೆಗಳನ್ನು ಒಂದೆಡೆ ಸೇರಿಸಿ ಆಸಕ್ತರಿಗೆ ಕೊಡಮಾಡುವ ಕೆಲಸ ಮಾಡಿದ್ದರು. ಸರಳತೆಯ, ಸಮಗ್ರತೆಯ ನಿಟ್ಟಿನಿಂದ ಇವು ಹೆಚ್ಚು ಪ್ರಯೋಜನಕಾರಿಯಾಗುವಲ್ಲಿ ಸೋತವು. ನಾನು ಸಹಾ ಭಾರತದಲ್ಲಿ ಪುಸ್ತಕಗಳಿಗಾಗಿ ಹಲವಾರು ಬಾರಿ ಪ್ರಯತ್ನಿಸಿ ಸೋತಿದ್ದೆ . ಇನ್ನು ಆ ಚಿಂತೆ ಇಲ್ಲ!

Capture+_2016-06-04-21-44-33ತಮಿಳುನಾಡು ಸರಕಾರದ ಶಿಕ್ಷಣ ಪ್ರಾಧಿಕಾರವು ಕನ್ನಡ ಪುಸ್ತಕಗಳನ್ನುಅಂತರ್ಜಾಲದಲ್ಲಿ  ಮೊದಲು ಬಿಡುಗಡೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾದ  ಸಂಸ್ಥೆ. ಬಣ್ಣದ ಚಿತ್ರ, ಸರಳತೆ, ವಿಷಯ ವಿಸ್ತಾರ, ನಿರೂಪಣೆಯಿಂದ ಗುಣಮಟ್ಟದ ಪಠ್ಯಗಳನ್ನು ಕೊಡಮಾಡಿದೆ. ಒಂದನೇ ತರಗತಿಯಿಂದ ೧೨ ನೇ ತರಗತಿಯವರೆಗೆ ಎಲ್ಲಾ ವಿಷಯಗಳ ಪುಸ್ತಕಗಳು ಕನ್ನಡ, ತೆಲುಗು, ಮಲೆಯಾಳಂ ಹಾಗೂ ತಮಿಳು ಮಾಧ್ಯಮದಲ್ಲಿ ದೊರೆಯುತ್ತವೆ. ಮೊದಲು ವರ್ಷದ ಪೂರ್ಣ ಪಠ್ಯ ಲಭ್ಯವಿತ್ತು . ಈಗ ಸೆಮಿಸ್ಟರ್ ಪದ್ಧತಿಯಲ್ಲಿ ಎರೆದು ಮೂರು ಭಾಗಗಳಾಗಿ ವಿಂಗಡಿಸಿ ವಿಭಜಿಸಿದ ಕಾರಣ ಸ್ವಲ್ಪ ಅವ್ಯವಸ್ಥೆ ಅನಿಸುತ್ತದೆ.  ಮೊದಲು ಕನ್ನಡ ಭಾಷಾ ಭಾರತಿ ಪಠ್ಯ ವೂ ಇತ್ತು. ಈಗ ಭಾಷಾ ಭಾರತಿ ಆರನೆ ತರಗತಿಯಿಂದ ಮಾತ್ರ ಲಭ್ಯ. ಇದೂ ಸಹಾ ಒಂದು ಕೊರತೆ! ಆದಾಗ್ಯೂ ಇದೊಂದು ಬಲು ಉಪಯೋಗಿಯಾದ ಪ್ರಯತ್ನ. ನನ್ನ ಮಕ್ಕಳಿಗೆ ಕನ್ನಡವನ್ನು ಇದರ ಸಹಾಯದಿಂದ ಕಲಿಸುತ್ತಿದ್ದೇನೆ. ೧೨ನೇ ತರಗತಿಯ ಕನ್ನಡ ಪುಸ್ತಕದಲ್ಲಿ ಪೂರ್ಣಚಂದ್ರ ತೇಜಸ್ವಿಯವರ “ಕೃಷ್ಣೇಗೌಡನ ಆನೆ” ಕಥೆ ಇದೆ. ಧರೆಗಿಳಿಸಿಕೊಂಡು ಓದಿ.

NCERT ಅವರ ಜಾಲತಾಣದಲ್ಲಿಯೂ ಪಠ್ಯಗಳಿವೆ. ಹಿಂದೀ, ಇಂಗ್ಲೀಶು, ಉರ್ದು ಮಾಧ್ಯಮದ ಈ ಪಠ್ಯಗಳು ಕನ್ನಡ ಕಲಿಕೆಗೆ ಸಹಕಾರಿಯಾಗಿಲ್ಲ.  ೬-೮ ವರುಷಗಳಿಂದ ಇದು ಚಾಲ್ತಿಯಲ್ಲಿದ್ದರೂ ಪ್ರಾಂತೀಯ ಭಾಷೆಗಳನ್ನು ಕಡೆಗಣಿಸಲಾಗಿತ್ತು.  ಭಾರತದ ಅಧಿಕೃತ ಭಾಷೆಗಳಲ್ಲಿ ಕಲಿಕಾಸಾಮಗ್ರಿಗಳು ದೊರೆಯುವಂತೆ ಮಾಡಲು ಕೇಂದ್ರಸರಕಾರದ “ಭಾರತವಾಣಿ “ ಎಂಬ ಮಹತ್ವಾಕಾಂಕ್ಷಿ  ಯೋಜನೆಯ ಸಹಯೋಗದಲ್ಲಿ ಕನ್ನಡ ಪುಸ್ತಕಗಳು ಕರ್ನಾಟಕದಿಂದ ಕಡೆಗೂ  ಬೆಳಕು ಕಂಡಿವೆ ಹಾಗೂ ಇದನ್ನು ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಎಲ್ಲ ವಿಷಯದ ಪುಸ್ತಕಗಳು ಇವೆ. ಕನ್ನಡಿಗರಾದ ಬೇಳೂರು ಸುದರ್ಶನ ಅವರ ತಂಡವು ಶ್ರದ್ಧೆ ಪ್ರೀತಿಗಳಿಂದ ನಮಗೆ ಕೊಡಮಾಡಿದ್ದಾರೆ.

bharatavaniCapture+_2016-06-04-21-46-56ಇಲ್ಲಿ ಎಲ್ಲ ಪುಸ್ತಕಗಳನ್ನು PDF ಆವೃತ್ತಿಯಲ್ಲಿ ನೋಡಬಹುದು , electronic ಸ್ಲೇಟುಗಳಲ್ಲಿ, ಮಡಿಲಲ್ಲಿ ಮಗುವಾಗಿ ಮಡಿಸಿಕೊಂಡು ಮಲಗುವ, ಬಿಚ್ಚಿಕೊಂಡು ಆಡುವ ಗಣಕ ಯಂತ್ರಗಳಲ್ಲಿ ಧರೆಗಿಳೀಸಿಕೊಂಡು ಶೇಖರಿಸಿಡಬಹುದು, ಓದಬಹುದು, ಕಲಿಯಬಹುದು, ಕಲಿಸಬಹುದು!!

ಕರ್ನಾಟಕದ ಈ ಪುಸ್ತಕಗಳನ್ನು ಕರ್ನಾಟಕದ “ಕಣಜ” ದಲ್ಲೂ ಇವುಗಳನ್ನು ಪಡೆಯಬಹುದಾಗಿದೆ. ಆದರೆ, not for  copy  ಎಂಬ ನೀರಿನ ಕಲೆ ಕಡುಕಪ್ಪಾಗಿ ಕಾಣುವ ಕಾರಣದಿಂದ ಕಿರಿಕಿರಿ ಯಾಗುತ್ತದೆ. ಭಾರತವಾಣಿಯಲ್ಲಿ ಈ ತೊಂದರೆಯಿಲ್ಲ.  ಭಾರತವಾಣಿ ಎಂಬ ದೂರದೃಷ್ಟಿಪೂರ್ಣ, ಬಹುತ್ವಾಕಾಂಕ್ಷಿ  ಯೋಜನೆಯ ಒಳಹೊಕ್ಕು ಒಮ್ಮೆ ನೋದಿಬನ್ನಿ. Capture+_2016-06-04-21-48-03ಇಡೀ ಭಾರತದ ಭಾಷೆಗಳಲ್ಲಿರುವ ಜ್ಞಾನ ಗಂಗೆಯನ್ನು ಒಂದೆಡೆ ಸೇರಿಸುವ ಸಾಗರದೋಪಾದಿ ಯೋಜನೆ. ನಿಘಂಟು, ಪಠ್ಯಗಳು, Capture+1_2016-06-04-21-48-25ಜೊತೆಗೆ ಕನ್ನಡದ ವಿಶ್ವಕೋಶ ಸಹಾ ಇಲ್ಲಿ ಲಭ್ಯ! ಮಹಾರಾಷ್ಟ್ರ ಸರಕಾರದ ಕನ್ನಡದ ಪಠ್ಯಗಳು ಸಹ ಇಲ್ಲಿ ಲಭ್ಯ  ಇವೆ. ಎಲ್ಲ ತರಗತಿಯ ಎಲ್ಲ ಪುಸ್ತಕಗಳು ಇನ್ನೂ ಇಲ್ಲ. ಆದರೆ ಗುಣಮಟ್ಟದ ದೃಷ್ಟಿಯಿಂದ ತಮಿಳುನಾಡಿನ ಪುಸ್ತಕಗಳಿಗಿಂತ ಉತ್ತಮವಾದುವು. ಭಾರತವಾಣಿ ಬೆಳೆಯುತ್ತಾ ಹೋದಂತೆ ನಮ್ಮ ಆಯ್ಕೆಯ ಸಾಧ್ಯತೆಗಳು ವಿಸ್ತಾರವಾಗುತ್ತವೆ. ಬಹು ಮಾಧ್ಯಮ ಜ್ಞಾನವಾಹಿನಿಯೂ ಅಭಿವ್ರುದ್ಧಿಗೊಳ್ಳುತ್ತಿದೆ ಎಂದು ಕೇಳಿ ಬಲ್ಲೆ. ಕನ್ನಡದ ಉಳಿವು ಬೆಳವಣಿಗೆಗೆ ಆದ ಸಹಾ ಸಹಾಯಕವಾಗಬಹುದು; ಕಾಯಬೇಕು.

ಕನ್ನಡದ ಮೊದಲ ರಾಷ್ಟ್ರಕವಿ ಹಿರಿಮೆಯ ಶ್ರೀ ಗೋವಿಂದಪೈ ಅವರ  ‘ ತಾಯೆ ಬಾರಾ ಮೊಗವ ತೋರ ಕನ್ನಡಿಗರ ಮಾತೆಯೇ’ ಎಂಬ ಹಾಡಿನಲ್ಲಿ

 

ಎನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ

ಮೃಗದ  ಸೇಡು  ನಮ್ಮ ಪಾಡು ಪರರ ನುಡಿಗೆ ಮಿಡುಕುವ

ಕನ್ನಡ ಕಸ್ತೂರಿಯನ್ನ ಹೊಸತು ಸಿರಿಂ ತೀಡದೆನ್ನ

ಸುರಭಿ ಎಲ್ಲಿ? ನಿನದನ್ನ ನವಶಕ್ತಿಯನೆಬ್ಬಿಸು

ಹೊಸ ಸುಗಂಧದೊಸಗೆಯಿಂದ  ಜಗದಿ ಹೆಸರ ಹಬ್ಬಿಸು

ಎನ್ನುವ  ಮಾತುಗಳಿವೆ.

ಸರಳ, ಸುಂದರ, ಸಶಕ್ತವಾದ ಕನ್ನಡ ಭಾಷೆ ತನ್ನ ಜನರಿಂದಲೇ ಅವಗಣನೆಗೆ ಒಳಗಾಗಿ ಅಳಿವು ಉಳಿವಿನ ಹೋರಾಟದಲ್ಲಿ ನಲುಗುತ್ತಿರುವಾಗ ಇದೊಂದು ಆಶಾದಾಯಕವಾದ  ಬೆಳವಣಿಗೆ. ತಾಂತ್ರಿಕ ಯುಗದ ಪಾಶ್ಚಾತ್ಯೀಕರಣದ ಹೊಡೆತಕ್ಕೆ ಸಿಕ್ಕಿ ಬಳಲಿರುವ ಭಾಷೆಗೆ ಇದು ಒಂದು ತಾತ್ಕಾಲಿಕವಾದ ಶಕ್ತಿ ನೀಡುವ ಸೂಜಿಮದ್ದು.

ಉಪಸಂಹಾರ:

Capture+_2016-06-04-21-43-29ಇಲ್ಲಿಗೆ ಎರಡು ವರುಷಗಳ ಹಿಂದೆ ನನ್ನ ಪ್ರೌಢಶಾಲಾ ಶಿಕ್ಷಕರೊಬ್ಬರ ಭೇಟಿ ಮಾಡಿದ್ದೆ. ನಾವು ಮಕ್ಕಳಾಗಿ, ವಿದ್ಯಾರ್ಥಿಗಳಾಗಿ ಅಂದು ನಾವು ಪಡುತ್ತಿದ್ದ ಪರಿಪಾಟಲುಗಳನ್ನು  ಅವರು ಮೆಲುಕುಹಾಕಿದರು.’’ ಅಂದು ನಿಮಗೆ ಕಲಿಯುವ ಆಸೆಯಿತ್ತು, ಜ್ಞಾನದ ಹಸಿವಿತ್ತು. ನಿಮ್ಮ ಆ ಅವಶ್ಯಕತೆಗಳನ್ನು ಪೂರೈಸುವ ಸೌಲಭ್ಯವಾಗಲಿ, ಆರ್ಥಿಕ ಶಕ್ತಿಯಾಗಲೀ ನಮಗಿರಲಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನು, ಪೆನ್ಸಿಲ್ ಸೈಕಲ್ ,ಊಟ, ಬಟ್ಟೆ ಎಲ್ಲವೂ ಉಚಿತವಾಗಿ  ದೊರೆಯುತ್ತದೆ. ಆದರೆ ಕಲಿಯುವಂತ ಹಸಿವೆ ಅವರಲ್ಲಿ ನಮಗೆ ಕಾಣುವುದಿಲ್ಲ’’.  

ಅವರಾಗ ಹೇಳಿದ ಎರಡು ಮಾತುಗಳು ಆಗಾಗ  ನನ್ನ ಮನಃ ಪಟಲದಲ್ಲಿ ಹಾಯ್ದುಹೋಗುತ್ತಿರುತ್ತವೆ.  

ಕನ್ನಡಕ್ಕೆ ಕುರಿತಾದ ಈ ಹೊಸ ಬೆಳವಣಿಗೆಯೂ ಹಸಿವಿಲ್ಲದವನಿಗೆ ಬಡಿಸಿದ ಮೃಷ್ಠಾನ್ನವಾಗದಿದ್ದರೆ ಸಾಕು. ಅಂಗೈಯಲ್ಲಿ ಅರಮನೆಯಿದ್ದರೇನು ಭಾಗ್ಯ? ಕನ್ನಡದ ಮಕ್ಕಳು ಅನುಭವಿಸುವ ಅದೃಷ್ಟವಿಲ್ಲದ ”ಭೋಗ ಅಭಾಗ್ಯ”ರಾಗದಿದ್ದರೆ ಸಾಕು..

ನೇರವಾಗಿ ‘’ನೆಟ್ಟಿ’’ ಗೆ ಏರಿದ ಕನ್ನಡ , ತನ್ನ ಮಣ್ಣಿನ ಋಣವಿರುವ ಕನ್ನಡ ಕೂಸುಗಳ ನೆತ್ತಿಗೇರುವುದೇ ಎಂಬುದು ಯಕ್ಷ ಪ್ರಶ್ನೆ

 

ಗೋವಿಂದ ಪೈ ಗಳ ಈ ಸಾಲುಗಳೊಂದಿಗೆ ಕನ್ನಡದ ವೈಭವಕ್ಕೆ ಹಾತೊರೆಯುತ್ತಾ,,,

‘’ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ

ನೀಗದಂತೆ  ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ

ನಮ್ಮೆದೆಯಂ ತಾಯೆ ಬಲಿಸು

ಎಲ್ಲರ ಬಾಯಲ್ಲಿ ನೆಲೆಸು

ನಮ್ಮ ಮನನೊಂದೆ ಕಲಸು

ಇದನೊಂದನೆ ಕೋರುವೆ

ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ? ‘’

——————————————————–

‘’ನೆಟ್ಟಿ’’ಗೇರ್ದ ನುಡಿಯು ನೆತ್ತಿಗೇರಲದು ಅಸಾಧ್ಯವೇ ?

7 thoughts on ““ನೆಟ್ಟಿ”ಗೇರಿದ ಪಠ್ಯ @ ನೆತ್ತಿಗೇರುವುದೇ? ಅಂತರ್ಜಾಲದಲ್ಲಿ ಕನ್ನಡ ಮಾಧ್ಯಮ ಶಾಲಾ ಪಠ್ಯಗಳು – ಸುದರ್ಶನ ಗುರುರಾಜರಾವ್ ಲೇಖನ

  1. ಕನ್ನಡದ ಬಗ್ಗೆ ಕಟ್ಟಾಭಿಮಾನ ಇರುವ ನಿಮ್ಮಿಂದ ಬಂದ ಈ ಮಾಹಿತಿಪೂರ್ಣ ಲೇಖನ ಚೆನ್ನಾಗಿದೆ. ಬರಹದಲ್ಲಿನ ಬಿಚ್ಚು ಮನ್ನಸ್ಸು ಮೆಚ್ಚಬೇಕಾದ್ದು.

    Like

  2. ಸುದರ್ಶನ ಅವರೇ ,ತುಂಬ ಮಾಹಿತಿಪೂರ್ಣ ಉಪಯುಕ್ತ ಲೇಖನ.ಪಠ್ಯಪುಸ್ತಕಗಳನ್ನ ನೆಟ್ಟಿಗೇರಿಸಿದ್ದಾರೆ ಅಂತ ಗೊತ್ತಿತ್ತು.ಆದರೆ ಇಷ್ಟು ಮಾಹಿತಿ ಇರಲಿಲ್ಲ.ನಾವು ಪುಸ್ತಕಗಳನ್ನು ಅರ್ಧಬೆಲೆ ,ಇನ್ನೂ ಚನ್ನಾಗಿದ್ದರೆ ಮುಕ್ಕಾಲು ಬೆಲೆ ಅಂತ ಎಲ್ಲ ಚೌಕಾಶಿ ಮಾಡಿ ನಮ್ಮ ಮುಂದಿನತರಗತಿಯ ವಿದ್ಯಾರ್ಥಿಗಳಿಂದ ಕೊಳ್ಳುವ ಪರಿಪಾಟಲು ಈಗಿಲ್ಲ.ಎಲ್ಲ ಬೆರಳಂಚಿನಲ್ಲೇ ಲಭ್ಯ.ಆದರೆ ನನಗನಿಸುವ ಮಟ್ಟಿಗೆ ಓದುವ ಹಸಿವು ಕಡಿಮೆ.ಬರೀ ಅಂಕಗಳಿಗೋಸ್ಕರ ಓದು.ಒಂದನೇ ಕ್ಲಾಸ್ಗೇಗೇನೇ ಎಷ್ಟು ವಿಷಯಗಳು!ಮಕ್ಕಳು ಗೊಂದಲದಲ್ಲಿ.ಪಠ್ಯಪುಸ್ತಕ ಕೈಲಿ ಹಿಡಿದುಓದುವಾಗಿನ ಏಕಾಗ್ರತೆ ನೆಟ್ಟಿನಲ್ಲಿಓದುವಾಗ ಬರುವುದು ಕಷ್ಟ.ಪದವಿ ಕ್ಲಾಸ್ಗಗಳಿಗೆ ಸಹಾಯವಾಗಬಹುದು.ಇನ್ನು ಕನ್ನಡ ಮಾತನಾಡಲೇ ಕಟ್ಟುಪಾಡು ಇರುವಾಗ ಮಗು ಕನ್ನಡ ಎಷ್ಟು ಕಲೀತೀತು??ನೋಡೋಣ.ನೆಟ್ಟಿಗೇರಿದ ಪಠ್ಯ ನೆತ್ತಿಗೇರಿ ನಮ್ಮ ಕನ್ನಡವನ್ನ ಉಳೀಸೀತಾ?ಹೊರ ದೇಶಗಳಲ್ಲಿರುವವರಿಗೆ ಖಂಡಿತ ಸಹಾಯಕಾರಿ.ಅನೇಕ ಮಾಹಿತಿ ಒದಗಿಸುವ ,ನಮ್ಮ ಭಾಷೆಯ ಬಗ್ಗೆ ಆಳವಾದ ಕಳಕಳಿಯಿರುವ ಸುಂದರ ಲೇಖನ.ಅಭಿನಂದನೆಗಳು ಸುದರ್ಶನ ಅವರೇ.
    ಸರೋಜಿನಿ ಪಡಸಲಗಿ.

    Liked by 1 person

  3. ಸುದರ್ಶನ್ ಅವರೆ ನಮ್ಮ ಶಾಲಾ ದಿನಗಳಲ್ಲಿ ಪಠ್ಯ ಪುಸ್ತಕ ಕೊಂಡು, ಅದಕ್ಕೆ ರಟ್ಟು ಹಾಕಿ ಸಿದ್ಧತೆ ನಡೆಸುತ್ತಿದ್ದ ದಿನಗಳು ನೆನಪಾದವು. ಆಗ ಸಂಪನ್ಮೂಲಗಳ ಕೊರತೆ ಇದ್ದರೂ, ಕನ್ನಡ ಕಲಿಯುವ ಹುಮ್ಮಸ್ಸು ಹೇರಳವಾಗಿತ್ತು. ಈಗ ಸಂಪನ್ಮೂಲ ಹೇರಳವಾಗಿದ್ದು, ಹುರುಪಿನ ಕೊರತೆಯಿದೆ. ಇಂದಿನ ಯುವ ಪೀಳಿಗೆಗೆ ಕೊರತೆ ಏನೆಂಬುದೇ ತಿಳಿದಿಲ್ಲ. ಈಗಂತೂ ಕಂಪ್ಯೂಟರ್ ಮತ್ತು ಇಂಟರನೆಟ್ ಮಾಧ್ಯಮದಲ್ಲಿ ಮಾಹಿತಿ ಆಸ್ಪೋಟನೆಯಾಗಿ, ಮಕ್ಕಳಿಗೆ ಏನನ್ನು ಪಠಿಸಬೇಕು ಎನ್ನುವ ಸಂದಿಗ್ಧ ಪರಿಸ್ಥಿತಿ ಒದಗಿದೆ. ಒಂದು ರೀತಿಯಲ್ಲಿ ಅವರ ಸ್ಥಿತಿ ಕಷ್ಟಕರವಾದದ್ದು. ಅವರು ತಲೆಗಳಲ್ಲಿ ಎಷ್ಟು ತಾನೆ ತುಂಬಿಕೊಳ್ಳಬಹುದು ? ಆದರೆ ನಮ್ಮ ಸುಂದರ ಭಾಷೆಯನ್ನು ಅಲ್ಪಸ್ವಲ್ಪವಾದರೂ ಕಲಿತು ಉಳಿಸಿದರೆ ಅದೇ ಪುಣ್ಯ. ಈಗಂತೂ ಅವರು ಅಂಗಡಿಗೆ ಹೋಗದೇ ಮನೆಯಲ್ಲೇ ಎಲ್ಲವನ್ನೂ ಕಲಿಯಬಹುದು. ಇರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಮುಂದುವರೆಯಲಿ ಎಂದು ಆಶಿಸೋಣ.
    ಉಮಾ ವೆಂಕಟೇಶ್

    Liked by 1 person

  4. ಎಂದಿನಂತೆ ಸುದರ್ಶನ ಅವರ ಮಾಹಿತಿಪೂರ್ಣ ಲೇಖನ! ಮೊದಲ ಭಾಗದಲ್ಲಿ ನನ್ನ ಚಿಕ್ಕಂದಿನ ಶಾಲೆಯ ಅನುಭವವನ್ನೇ ಬರೆದಂತಿದೆ. ಪುಸ್ತಕ ದೊರಕಿಸಿ, ಬೈಂಡು ಮಾಡಿಸಿ”ನಾಯಿ ಕಿವಿಯ’ ಪುಟದಂಚುಗಳನ್ನು ಸರಿಪಡಿಸಲು ಬೈಂಡರ್ ಅಂಚುಗಳಿಗೆ ಗಿಲಟಿನ್ ಮಾಡುವಾಗ ಕೆಲ ಅಕ್ಷರಗಳನ್ನು ಕಳೆದುಕೊಂಡರೂ, ಅಥವಾ ಬಿಗಿಯಾಗಿ ಹೊಲಿದಿದ್ದರಿಂದ ಪುಟಗಳನ್ನು ಪೂರ್ತಿ ಬಿಚ್ಚಲಾರದೆ ಮಧ್ಯದಲ್ಲಿ ಸಾಲಿನ ಕೊನೆಯ ಪದಗಳು ಸರಿಯಾಗಿ ಕಾಣದಿದ್ದರೂ, ನಾವು ತಕರಾರು ಮಾಡುತ್ತಿದ್ದಿಲ್ಲ. ಸಿಕ್ಕಿದ್ದೇ ಪುಣ್ಯ ಎಂದು ಸಂತೋಷದಿಂದಿರುತ್ತಿದ್ದೆವು. ಈಗಿನ ಮಕ್ಕಳು ಎಷ್ಟು ಅದೃಷ್ಟವಂತರು, ಉಚಿತವಾಗಿ ಸಿಗಬೇಕಂದರೆ. ತಂತ್ರಜ್ಞಾನ ಕಲಿಯಲು ಅನುಕೂಲ ಮಾಡಿದೆ. ಈಗ ಥ್ರೀ ಡೈಮೆಷನ್ನಿನಲ್ಲಿ ಅನಾಟಮಿ ಕಲಿಯುವ ಮೆಡಿಕಲ್ ವಿದ್ಯಾರ್ಥಿಗಳಿಗೆ ನಮ್ಮಂತೆ ರೆಟ್ಟೆಯ ಎಲುಬಿನ spiral grooveನಲ್ಲಿ Radial nerve relations ಉರು ಹಾಕುವ ಪ್ರಮೇಯವಿಲ್ಲ ಎಂದುಕೊಂಡಿದ್ದೇನೆ. ಪಠ್ಯ ಪುಸ್ತಕಗಳನ್ನು ನೆಟ್ಟಿಗೇರಿಸುವದು ಶ್ಲಾಘನೀಯ. ಇದರ ಮಾಹಿತಿ ಕೊಟ್ಟದ್ದಕ್ಕೆ ಕೃತಜ್ಞತೆಗಳು,. ಆದರೆ ಅವುಗಳ URL ಕೊಟ್ಟಿದ್ದರೆ ಇನ್ನೂ ಉಪಯೋಗವಾಗುತ್ತಿತ್ತು. ನನಗೆ ಪಠ್ಯ ಪುಸ್ತಕಗಳು ಸಿಗಲಿಲ್ಲ. ಅದನ್ನು(URLs) ಸರಿಯಾದ ಜಾಗದಲ್ಲಿ ಲೇಖನದಲ್ಲೇ ಎಡಿಟ್ ಮಾಡಿ ಹಾಕುತ್ತೀರಾ?

    Like

Leave a reply to shrivatsadesai Cancel reply

This site uses Akismet to reduce spam. Learn how your comment data is processed.