ವಸಂತಾಗಮನ – ಸರೋಜಿನಿ ಪಡಸಲಗಿ ಬರೆದ ಕವಿತೆ

ಈ ವಸಂತ ಋತುವಿನ ಕೊಡುಗೆ ಇದು. ಬಿ ಎಂ ಶ್ರೀ ಅವರ ಒಂದು ‘ಇಂಗ್ಲಿಷ್ ಗೀತ‘* ದ ಅನುವಾದ ಹೀಗೆ ಪ್ರಾರಂಭವಾಗುತ್ತದೆ: ‘’ವಸಂತ ಬಂದ, ಋತುಗಳ ರಾಜ ತಾ ಬಂದ,/ ಚಿಗುರನುತಂದ, ಹೆಣ್ಗಳ ಕುಣಿಸುತ ನಿಂದ”, ಎಂದು. ಇಲ್ಲಿ ವಸಂತಾಗಮನ ನೋಡಿ ಕುಣಿದು ಸರೋಜಿನಿಯವರು ಬರೆದ ಕವನವನ್ನು ಇನ್ನು ಓದಿ.

                   ವಸಂತಾಗಮನ

Cherry petals editedr

ಮಲ್ಲಿಗೆ ಯ ಮುಗುಳು ಹೊಯ್ದಾಡಿ ರೆಂಬೆ ಕೊಂಬೆಯ ಚಿಗುರು ತುಯ್ದಾಡಿ

ವಸಂತೋತ್ಸವದ ಸಂಭ್ರಮವ ಸಾರುತಿದೆ ಬನದರಳು ಚಲ್ಲಾಡಿ

 

ಹೂತ  ಮಾಮರದ  ಒಡಲಿಂದ  ಕೋಗಿಲೆಯ  ಕೂಜನ

ಪಂಚಮದಿಂಚರದ  ಸುಂದರ ಸುಮಧುರ  ಗಾಯನ

ಸೃಷ್ಟಿಯ  ಕಣಕಣದಿ ಕಾಣುತಿದೆ ವೈಭವದ ಚೈತ್ರಾಗಮನ

ಅಲ್ಲಿ ಹುಚ್ಚಾಗಿ ಮೈಮರೆತ ಮನದ ಮಯೂರ ನರ್ತನ ॥೧॥

 

yellow wild flower Bessacarr 2

ಹಸಿರು ಮಕಮಲ್ಲಿನ    ಮೆತ್ತನೆಯ ಹಾಸಿನಲ್ಲಿ

ಸುಳಿಗಾಳಿ  ಬಿಡಿಸುತಿದೆ ಬಣ್ಣ ಬಣ್ಣದ ಚಿತ್ತಾರ ವಲ್ಲಿ

ಅಲ್ಲೊಂದು ಕೆಂಪು ಇಲ್ಲೊಂದು ಹಳದಿ, ನೀಲ, ಗುಲಾಬಿ ನೋಡಲ್ಲಿ

ಬಾನ ಬಿಟ್ಟು ಇಂದ್ರಧನುಷ ಬಂದಿಳಿದಿದೆ ಧರೆಗೆ ಇಂದಿಲ್ಲಿ ॥೨॥

 

ಚಂದ್ರಮನ  ಚಂದ್ರಿಕೆಗೆ  ತಾರಕೆಯ ಮಿಸುನಿ ಬೆಳಕಿಗೆ

ಮಬ್ಬುಕವಿಸುತಿದೆ ಆಗಸದಿ ಸುಳಿವ ಕೋಲ್ಮಿಂಚು ಆಗಾಗ

ಅಂಬರದಿ ಮೆರೆವ ಆರ್ಭಟಕೆ, ರಮಣೀಯ ಭೀಭತ್ಸತೆಗೆ

ಕಂಪಿಸಿದ ಚದುರೆ ಅರಸಿದಳು ನಲ್ಲನೊಲುಮೆಯ ತೋಳಾಸರೆಗೆ ॥೩॥

 

Blue wild flower Farm

ಬಳಲಿ ಬೆಂಡಾದ ಭೂ ರಮೆಗೆ ಮೃದು ಮಧುರ ಸಿಂಚನ

ಹೆಜ್ಜೆ ಹೆಜ್ಜೆಗೆ  ಇಣುಕುತಿದೆ ಹೊಸ ಹೊಸತು ಈ ಚೇತನ

ಎಲ್ಲೆಲ್ಲೂ  ನವೋಲ್ಲಾಸ  ಶುರುವಾಗಿದೆ ಹೊಸ ಆವರ್ತನ

ಇದಲ್ಲವೇ  ಜೀವನದಿ  ಸಂಭ್ರಮದ  ವಸಂತಾಗಮನ ॥೪॥

 

ಸರೋಜಿನಿ  ಪಡಸಲಗಿ

ಲೇಖಕಿ ’ಅನಿವಾಸಿ”ಯನ್ನು ತಪ್ಪದೆ ಓದಿ ಇತ್ತೀಚೆಗೆ ಕಮೆಂಟ್ಸ್ ಮಾಡುತ್ತಿರುತ್ತಾರೆ. ಸರೋಜಿನಿಯವರು ಬೆಂಗಳೂರಿನಲ್ಲಿದ್ದರೂ ಒಬ್ಬ ಅನಿವಾಸಿ ಮಗನ ತುಡಿತವನ್ನರಿತಿರುವವರು.

*  “Spring”, by Thomas Nashe

(ಚಿತ್ರ ಕೃಪೆ: ಶ್ರೀವತ್ಸ ದೇಸಾಯಿ)

7 thoughts on “ವಸಂತಾಗಮನ – ಸರೋಜಿನಿ ಪಡಸಲಗಿ ಬರೆದ ಕವಿತೆ

 1. ವಸಂತಾಗಮನದ ಮೇಲಿನ ಕವನ ಮತ್ತು ರಸಿಕರ ಪ್ರತಿಕ್ರಿಯೆಗಳು ಒಂದು ರೀತಿಯಿಂದ ಪ್ರಸ್ತಾವನೆಯ ಔಚಿತ್ಯದತ್ತ ಗಮನ ಸೆಳೆದಿವೆ. ಉಮಾ ಅವರು ”ಇಲ್ಲಿಯ ಪುಷ್ಪಗಳ ಸುಂದರತೆಗೆ ಮನಸೋತರೂ, ಮಾವಿನ ಚಿಗುರು, ಮಲ್ಲಿಗೆಯ ಕಂಪು ಮನಸ್ಸನ್ನು ಇನ್ನೂ ಆವರಿಸಿದೆ” ಎಂದು ತಮ್ಮೂರನ್ನು ನೆನಸುತ್ತಾರೆ. ಸ್ಟಾರ್ಲಿಂಗ್ ಗಳ ಕಲರವಕ್ಕಿಂತ ಕೋಗಿಲೆಯ ಪಂಚಮದಿಂಚರಕ್ಕೆ ಹಾತೊರೆಯುತ್ತಾರೆ. ಪ್ರೇಮಲತಾ ಅವರು ”ಈ ದೇಶದ ಪ್ರಕೃತಿಯ ರಮ್ಯತೆ ನಮ್ಮನ್ನೇಕೆ ಕವನ ಬರೆಯಲು ಪ್ರೇರೇಪಿಸಲಿಲ್ಲ?” ಎಂದು ಉದ್ಗಾರ ತೆಗೆಯುತ್ತಾರೆ. ಸುದರ್ಶನ ಅವರು ಜೋರಾಗಿ ಓದಿಕೊಂಡು ಕುಣಿಕುಣಿದು ಬರುವ ವಸಂತನ ಲಾಸ್ಯಕ್ಕೆ ಮನಸೋತಿದ್ದಾರೆ. ಸರೋಜಿನಿಯವರ ಊರಿನ ವಸಂತದದ ವರ್ಣನೆಗೆ ಇಲ್ಲಿಯ ಚೆರಿ ಬ್ಲಾಸಂ, ಮತ್ತು ವೈಲ್ಡ್ ಫ್ಲಾವರ್ ಚಿತ್ರಗಳು. ಬಿಎಂ ಶ್ರೀಯವರ ಕವನದಂತೆ ಪೂರ್ವ-ಪಶ್ಚಿಮಗಳ ಸಮ್ಮಿಳನ ಇಲ್ಲಿದೆ. ಅಂತೂ ವಸಂತದ ಪ್ರಕೃತಿಯ ಸೌಂದರ್ಯ, ಕವನದ ಸ್ಫೂರ್ತಿ (’Spring’) ನಮ್ಮೆಲ್ಲರ ಮನಸ್ಸನ್ನು ಸೂರೆಗೊಂಡಿದೆ. ಅವರ ಯತ್ನ ಸಫಲವಾಗಿದೆ!

  Like

  • ಶ್ರೀವತ್ಸ ದೇಸಾಯಿಯವರೇ ,ನಿಜವಾಗಿಯೂ ಅನಿವಾಸಿ ಬಳಗದ ಸಹೃದಯಿ ಓದುಗರ ಹೇಳಿಕೆಗಳಿಗೆ ಹೇಗೆ ಧನ್ಯವಾದ ಹೇಳಬೇಕು ಗೊತ್ತಾಗ್ತಿಲ್ಲ.ನನ್ನ ವಸಂತಾಗಮನ ರಂಗು ರಂಗಾಗಿರುವುದು ನಿಮ್ಮ ಚಿತ್ರಗಳಿಂದ ಅಂತ ನನ್ನನಸಿಕೆ.ನಿಮಗೆ ಧನ್ಯವಾದಗಳು,.,ಅಭಿನಂದನೆಗಳು.ನಿಮ್ಮೆಲ್ಲರ ಪ್ರತಿಕ್ರಿಯೆ ಇನ್ನಷ್ಟು ,ಮತ್ತಷ್ಟು ಬರೆಯಲು ಸ್ಫೂರ್ತಿಯಾಗುತ್ತಿದೆ.ಇನ್ನೊಮ್ಮೆ ಧನ್ಯವಾದಗಳು
   ಸರೋಜಿನಿ ಪಡಸಲಗಿ

   Like

 2. ಸಮಯೋಚಿತ ಕವನ. ಇಂಗ್ಲೆಂಡಿನ ವಾಸಿಗಳಿಗೆ ತಮ್ಮ ಸುತ್ತ ಬದಲಾಗುತ್ತಿರುವ ಪ್ರಕೃತಿಯತ್ತ ಮತ್ತೆ ಕಣ್ಣು ಹರಿಸಲು ಪ್ರೇರೇಪಿಸುವ ರಮ್ಯತೆ ಇದರಲ್ಲಿದೆ. ಅದು ಅರಳಿಯ ಕೆಂಪೇ ಇರಬಹುದು, ಹೊಂಗೆಯ ತಿಳಿ ಹಸಿರೇ ಇರಬಹುದು ಅಥವಾ ಇಲ್ಲಿನ ಪ್ರಕೃತಿ ಸಿರಿಯೇ ಇರಬಹುದು ಎಲ್ಲೆಡೆ ಇದರ ಆಗಮನ ಸುಂದರ. ಸರೋಜಿನಿಯವರ ಪ್ರತಿ ಪದದಲ್ಲಿ ಕವಿಯ ಮನ ಇಣುಕುತ್ತದೆ. ಇಲ್ಲಿನ ಪ್ರಕೃತಿ ನಮ್ಮನ್ನು ಯಾವ ಕವನವನ್ನು ಬರೆಯಲು ಪ್ರೇರೇಪಿಸಿಲ್ಲವೇಕೆ?

  Like

  • ಸುದರ್ಶನ ರಾವ, ಪ್ರೇಮಲತಾ ಅವರಿಗೆ ನನ್ನ ಅನಂತ ಧನ್ಯವಾದಗಳು.ನನ್ನ ಅಲ್ಪಪ್ರಯತ್ನವನ್ನ ಶ್ಲಾಘಿಸಿರುವುದು ನಿಮ್ಮ ಸಹೃದಯತೆ.ಪ್ರೇಮಲತಾ ಅವರೇ ಸೃಷ್ಟಿಯ ರಮ್ಯತೆ ಒಂದು ಕಿನ್ನರಲೋಕಕ್ಕೆ ಕರೆದೊಯ್ಯುವುದಂತೂ ಖಂಡಿತ .ಅಲ್ವಾ?
   ಸರೋಜಿನಿ ಪಡಸಲಗಿ

   Like

 3. ಲಯಬದ್ದವಾದ ಸುಂದರ ರಚನೆ. ಜೋರಾಗಿ ಓದಿಕೊಂಡರೆ ಕುಣಿಕುಣಿದು ಬರುವ ವಸಂತನ ಲಾಸ್ಯ ಕವನದ ಪದಗಳಲ್ಲಿದೆ.

  Like

 4. ಸರೋಜಿನಿ ಅವರ ವಸಂತಾಗಮನದ ಕವನವನ್ನೋದಿ, ಇಲ್ಲಿ ಈಗ ತಾನೇ ಪ್ರಾರಂಭವಾಗಿರುವ ವಸಂತ ಋತುವಿನ ಸೌಂಧರ್ಯದ ಸವಿ ಹೆಚ್ಚಾಗಿದೆ. ಬ್ರಿಟನ್ನಿನ ಡಾಫ಼ೋಡಿಲ್ಸ್, ಮ್ಯಾಗ್ನೋಲಿಯಾ, ಟುಲಿಪ್ ಪುಷ್ಪಗಳ ಸುಂದರತೆಗೆ ಮನಸೋತರೂ, ಮಾವಿನ ಚಿಗುರು, ಮಲ್ಲಿಗೆಯ ಕಂಪು ಮನಸ್ಸನ್ನು ಇನ್ನೂ ಆವರಿಸಿದೆ. ರಾಬಿನ್, ಸ್ಟಾರಲಿಂಗ್ ಪಕ್ಷಿಗಳ ಕಲರವ ಹಿತ್ತಲಲ್ಲಿ ಕೇಳಿದರೂ, ಮಾಮರನ ಕೊಂಬೆಯಲ್ಲಿ ಕುಳೀತು ಕುಹೂ ಕುಹೂ ಹಾಡುವ ಮಧುರ ಕೋಗಿಲೆಯ ಇಂಪನ್ನು ಹುಚ್ಚು ಮನ ಇನ್ನೂ ಬಯಸುತ್ತಲೇ ಇದೆ. ಸರೋಜಿನಿ ಅವರ ವಸಂತ ಋತುವಿನ ವರ್ಣನೆ ಮನಸ್ಸನ್ನು ೩ ದಶಕಗಳ ಹಿಂದಕ್ಕೆ ಕರೆದೊಯ್ದಿತು. ಕನ್ನಡ ನಾಡಲ್ಲಿದ್ದರೂ, ನಮ್ಮ ಅನಿವಾಸಿ ಬಳಗದ ಸದಸ್ಯರ ಮನಗಳಿಗೆ ಹತ್ತಿರವಾಗಿರುವ ಸರೋಜಿನಿ ಅವರು ಉತ್ತಮ ಕವನವನ್ನು ನಮ್ಮ ಜಾಲಜಗುಲಿಗೆ ಬರೆದು ಕೊಟ್ಟಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ಅನಿವಾಸಿ ಕನ್ನಡಿಗರ ಕನ್ನಡ ಹುಮ್ಮಸ್ಸನ್ನು ನೂರ್ಮಡಿಗೊಳಿಸಿದ್ದಾರೆ. ಈ ಕವನ ಹಿಂದೆ ೬೦ರ ದಶಕದಲ್ಲಿ ಬಿಡುಗಡೆಯಾಗಿ ತೆರೆಕಂಡಿದ್ದ
  “ಕಲಾವತಿ“ ಎಂಬ ಕನ್ನಡ ಚಲನಚಿತ್ರದಲ್ಲಿ ಅಳವಡಿಸಿದ್ದ ಕನ್ನಡದ ರಾಷ್ಟ್ರಕವಿ ಕುವೆಂಪು ಅವರ “ಕುಹೂ ಕುಹೂ ಎನ್ನುತ ಹಾಡುವ ಕೋಗಿಲೆ“ ಎಂಬ ಸುಂದರ ಕವನದ ನೆನಪಾಯಿತು.
  ಉಮಾ ವೆಂಕಟೇಶ್

  Like

  • ಒಲುಮೆಯ ಉಮಾ ಅವರೇ, ನಿಮ್ಮ ಮನಗಳಿಗೆ ಹತ್ತಿರವಾಗಿರುವ ಸರೋಜಿನಿಗೆ ನಿಮ್ಮ ಹೇಳಿಕೆಯಿಂದ ಮನ ತುಂಬಿ ಬಂದಿದೆ‌ .ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.ನಿಸರ್ಗ ಎಲ್ಲಿದ್ದರೂ ನಿತ್ಯನೂತನ ,ಅಪೂರ್ವ ಲಾವಣ್ಯಮಯಿ.ಹಕ್ಕಿಗಳ ಇಂಚರ. ಮನಕೆ ತಂಪು.,ಕಿವಿಗೆ ಇಂಪು, .ಆದರೂ ಕೋಗಿಲೆಯ ಪಂಚಮದಿಂಚಲ ಯಾಕೋ ಮೈಮರೆಸುತ್ತದೆ.ವಸಂತದಲ್ಲಿ ಸೃಷ್ಟಿಯ ರಮ್ಯತೆ ಹುಚ್ಚು ಹಿಡಿಸುತ್ತದೆ‌ ನೀವು ಹೇಳಿದ ‘ಕಲಾವತಿ’ ಚಿತ್ರದ ಗೀತೆಗೆ ನನಗೆ ಒಂದನೇ ಬಹುಮಾನ ಸಿಕ್ಕಿತ್ತು.ನಿಮ್ಮ ಆ ನೆನಪು ನನ್ನ ನಾಲ್ಕು ದಶಕಗಳ ಹಿಂದೆ ಕರೆದೊಯ್ತು.ಉಮಾ ಅವರೇ ನಿಮಗೆ ನನ್ನ ಹೃದಯಾಳದ. ಧನ್ಯವಾದಗಳು
   ಸರೋಜಿನಿ ಪಡಸಲಗಿ

   Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.