ತಾಜಾ ಮಹಲ್ – ಸುದರ್ಶನ ಗುರುರಾಜರಾವ್ ಬರೆದ ಕವಿತೆ

ದಿನ ರಾತ್ರಿಯು ಸ್ವಪ್ನದಲ್ಲಿ
ಮಮತಾಜಳು ನಗೆಯ ಚೆಲ್ಲಿ
ತಾಜಮಹಲು ಬಳಿಗೆ ನೀನು ಬಾರೊ ಎನ್ನುತ
ಆಗ್ರಹವನು ಮಾಡಲಾಗಿ
ನಿಗ್ರಹವನು ವಿಜಯ ನೀಗಿ
ಒಂದು ದಿನ ಹೊರಡಲೆಂದು ಸಿದ್ಧನಾಗುತ

ಮಡದಿಗದನು ಹೇಳದಂತೆ
ಹೆಜ್ಜೆ ಕಳ್ಳ ಬೆಕ್ಕಿನಂತೆ
ಇಡುತ ತನ್ನ ಗಂಟು ಮೂಟೆ ಕಟ್ಟತೊಡಗಿದ

ವಿಜಯನ ನಡವಳಿಕೆ ಕಂಡು
ಮಡದಿ ಅನುಮಾನಗೊಂಡು
ಅವನ ಬೆನ್ನ ಬಿಡದೆ ಹಿಂದೆ ಸುತ್ತ ತೊಡಗಲು
ಇರಿಸು ಮುರಿಸು ಮಾಡಿಕೊಂಡು
ಗುಟ್ಟು ಜತನ ಕಾಯ್ದುಕೊಂಡು
ಸಮಜಾಯಿಶಿ ವಿಜಯ ಮನದೆ ಹೊಸೆದುಕೊಳ್ಳಲು

ಎಲ್ಲಿಗೀಗ ತಮ್ಮ ಪಯಣ
ಎನ್ನ ನಯನದಲ್ಲಿ ನಯನ
ಇಟ್ಟು ನಿಜವ ನುಡಿಯಿರೆಂದು ಜೋರು ಮಾಡಲು

ಕಛೇರಿ ಕೆಲಸ ನನಗೆ ಉಂಟು
ದೂರದೂರಿಗೆಂದು ಗಂಟು
ಕಟ್ಟುತಿರುವೆ ಬರಲು ವಾರ ಬೇಕು ಎನ್ನುತ
ಹೊರಟು ನಿಂತ ವಿಜಯ ಅಂದೆ
ಕರೆದೊಯ್ಯುವೆ ನಿನ್ನ ಮುಂದೆ
ಎನುತ ರಮಿಸಿ ಮಡದಿಯನ್ನು ಬೀಳುಕೊಳ್ಳುತ

ದೂರದಲ್ಲಿ ತಾಜಮಹಲು
ಕಣ್ಣಳತೆಗೆ ಕಾಣುತಿರಲು
ವಿಜಯ ತಾನೆ ಶಹಜಹಾನನಂತೆ ಬೀಗುತ
ಅಂಗಿಹೋಗಿ ಕುರ್ತವಾಯ್ತು
ತಲೆಗೆ ಗರಿಯ ಪೇಠ ಬಂತು
ಕೈಯ್ಯಲೊಂದು ಚೆಂಗುಲಾಬಿ ಹೂವು ಹಿಡಿಯುತ

ಕೊಟ್ಟ ಭಾಷೆ ಮೀರದಂತೆ
ಬಂದೆ ನಿನ್ನ ಅಣತಿಯಂತೆ
ನಿನ್ನ ಒಲವು ನನಗೆ ಈಗ ಬೇಕು ಎನ್ನುತ

ಮಮತಾಜಳ ಬಳ್ಳಿ ನಡುವ
ಬಳಸೆ ಕೈಯ್ಯ ಚಾಚಿದನವ
ಪಕ್ಕದಿ ಮಲಗಿದ್ದ ಸೀತೆ ಮುಖಕೆ ತಾಕಲು
ನಿದ್ರೆಯಲ್ಲಿ ಮಾತ ಕೇಳಿ
ಬಳಿಕ ಮುಖಕೆ ಹಸ್ತ ತಗುಲಿ
ಮಗ್ಗುಲು ಬದಲಿಸಿದ ಸೀತೆ ಎಚ್ಚರಾಗಲು

ಸ್ಲೋ ಮೋಷನ್ ಮೂವಿಯಂತೆ
ಗಾಳಿಯಲ್ಲಿ ತೇಲುವಂತೆ
ಕಾಲು ಕೈಯ್ಯನಾಡಿಸುತ್ತ ಮಡದಿಗೊದೆಯಲು
ಮೊದಲು ಮಾತು ಕೇಳುತಿತ್ತು
ಇದೇನಿಂಥ ಒದೆತ ಬಿತ್ತು
ಎಂದು ಸೀತೆ ನಿದ್ರೆಯಿಂದ ಎದ್ದು ನೋಡಲು

ಹಾವ ಭಾವ ಮಾಡಿಕೊಂಡು
ಜೊ.. ವಾ..ದಾ ಕಿ.ಯಾ ಎಂದು
ಕನಸು ಕಾಣುತಿದ್ದ ವಿಜಯ ತನಗೆ ಕಾಣಲು
ಮಮತಾಜಳ ಹೆಸರು ಕೇಳಿ
ಕೆಟ್ಟ ಕುತೂಹಲವು ಕೆರಳಿ
ಕನಸಿನಾಟವನ್ನು ಸೀತೆ ಗಮನಿಸುತಿರಲು

ಸಿಟ್ಟು ಪಿತ್ತ ನೆತ್ತಿಗೇರಿ
ಸದ್ದು ಮಾಡದೊಳಗೆ ಸೇರಿ
ಚೊಂಬಿನಲ್ಲಿ ನೀರ ತಂದು ಮೇಲೆ ಸುರಿಯಲು
ಕೋಪ ತಣ್ಣಗಾಗದಿರಲು
ಮತ್ಸರವದು ಎದೆಯ ಸುಡಲು
ಖಾಲಿ ಚೊಂಬಿನಿಂದ ತಲೆಗೆ ಹಾಕಿ ಕುಕ್ಕಲು

ಕನಸೆ ನಿಜವು ಎಂದುಕೊಂಡು
ರಸದನುಭವ ಮನದಿ ಉಂಡು
ನಲಿಯುತಿದ್ದ ವಿಜಯ ಧಿಗ್ಗನೆದ್ದು ಕೂಡಲು
ನಿಶೆಯು ಜರ್ರನೆಂದು ಇಳಿದು
ವಾಸ್ತವತೆಯು ಮನದಿ ಸುಳಿದು
ಕಣ್ಣನುಜ್ಜಿಕೊಂಡು ತಲೆಯನೆತ್ತಿ ನೋಡಲು

ಮಮತಾಜಳ ಜಾಗದಲ್ಲಿ
ಮಡದಿ ಮುಖವು ಕಂಡಿತಲ್ಲಿ
ಕೆಂಡದಂಥ ಕಣ್ಣ ದೃಷ್ಟಿ ಕಂಡು ನಲುಗುತ
ಮೂತಿಯನ್ನು ತಿವಿಸಿಕೊಂಡು
ಮಂಗ ಮುಖವ ಮಾಡಿಕೊಂಡು
ತಡಬಡಾಯಿಸಿ ಮಾತನಾಡೆ ತಾನು ತೊದಲುತ

ಕದ್ದು ಹಾಲು ಕುಡಿದ ಬೆಕ್ಕು
ಮನೆಯಾಕೆಯ ಕೈಗೆ ಸಿಕ್ಕು
ಥಳಿಸಿಕೊಂಡು ನೀರ ಮೇಲೆ ಸುರಿಸಿಕೊಂಡೊಲು
ಕನಸಿನ ಸವಿ ಮಂಡಿಗೆ
ನನಸಿನ ಬಿಸಿ ತುಪ್ಪವಾಗೆ
ಬಾಯಿ ಸುಟ್ಟ ಬೆಕ್ಕಿನಂತೆ ಮೂತಿಮಾಡಲು

ಮಂಚದಿಂದ ಇಳಿಯಿರೆಂದು
ಹರುಕು ಚಾಪೆಯೊಂದ ತಂದು
ಕಲ್ಲಿನಂಥ ದಿಂಬು ಕೊಡುತ ಹೊರಗೆ ನೂಕಲು
ಜಗುಲಿ ಮೇಲೆ ವಿಜಯ ಮಲಗಿ
ಚಳಿಗೆ ದೇಹ ನಡುಗಿ ನಲುಗಿ
ಹರುಷಗೊಂಡ ಸೊಳ್ಳೆ ಅಲ್ಲಿ-ಇಲ್ಲಿ ಕಚ್ಚಲು

ಉರಿತ ಕೆರೆತ ತಾಳದಾಗಿ
ಕೊರೆವ ಚಳಿಯ ಸಹಿಸದಾಗಿ
ಜಗುಲಿಮೇಲೆ ತಕತಕನೆ ವಿಜಯ ಕುಣಿಯಲು
ಕರೆಯಿರಿ ಮಮತಾಜಳನ್ನು
ಓಡಿಸಲಿ ಸೊಳ್ಳೆಗಳನು
ಕಾಯುತಿರುವೆ ನಿಮ್ಮ ಸರಸ ನೋಡಿ ತಣಿಯಲು!!

ಇರುವ ಸುಖವ ಬಿಟ್ಟುಕೊಟ್ಟು
ಸಿಗದ ರಾಣಿಗಾಸೆಪಟ್ಟು
ಮರುಳು ಹಿಡಿದ ತನ್ನ ಬುದ್ಧಿ ಶಪಿಸಿಕೊಳ್ಳುತ
ಮಮತಾಜಳ ಮುಖವೆ ಕಾಣೆ
ಸೀತೆ ನೀನೆ ನನ್ನ ಜಾಣೆ
ಬಾಗಿಲನ್ನು ತೆಗಿಸೆ ರಮಿಸಿ ತಾಜಾ ಮಾಡುತ

ಬಾಗಿಲನ್ನು ಬಿಡದೆ ಬಡಿದ
ಕಿಟಕಿಯಲ್ಲಿ ಕೈಯ್ಯ ಮುಗಿದ
ಮಹಲಿನೊಳಗೆ ಬಿಟ್ಟುಕೊಳಲು ಕಾಡಿ ಬೇಡಿದ
ಅಷ್ಟರಲ್ಲಿ ಬೆಳಕು ಹರಿದು
ಸೀತೆ ಕೋಪ ತಾಪ ಇಳಿದು
ಗಂಡ ಹೆಂಡಿರವರ ಜಗಳ ಸೂರ್ಯ ಮುಗಿಸಿದ.

(ಕನ್ನಡ ಬಳಗ, ಯುಕೆ, ಯ ಯುಗಾದಿ ಸಮಾರಂಭದ `ಹಾಸ್ಯಕವಿಗೋಷ್ಠಿಯಲ್ಲಿ ಓದಬೇಕಾಗಿದ್ದ ಕವನ, ಸಮಯಾಭಾವದಿಂದ ಓದಲಾಗಲಿಲ್ಲ)

 

5 thoughts on “ತಾಜಾ ಮಹಲ್ – ಸುದರ್ಶನ ಗುರುರಾಜರಾವ್ ಬರೆದ ಕವಿತೆ

  1. ಸುದರ್ಶನ ಅವರ ನೆಚ್ಚಿನ ನಾಯಕ ವಿಜಯ್ ಮತ್ತೊಮ್ಮೆ ಕನಸಿನ ಮಂಡಿಗೆ ಸವಿಯಲು ಹೋಗಿ, ಮಡದಿಯಿಂದ ಪೆಟ್ಟು ತಿಂದಿದ್ದಾನೆ. ಮೊನ್ನೆ ಯುಗಾದಿ ಸಮಾರಂಭ್ಹದಲ್ಲಿ, ವಾಗ್ಮಿ ಗಂಗಾವತಿ ಪ್ರಾಣೇಶ ಅವರ ಮಾತಿನಲ್ಲಿ ಹೇಳಬೇಕೆಂದರೆ, ವಿಜಯ ಮತ್ತು ಸೀತೆಯ ಮದುವೆಗೆ ಈಗಾಗಲೇ ೫ ವರ್ಷವಾದರೂ ಆಗಿರಲೇ ಬೇಕು. ಹಾಗಾಗಿ ವಿಜಯನ ಪರಿಸ್ಥಿತಿ ತಿರುಕನ ಕನಸಿನಲ್ಲಿ ತಿರುಕ ರಾಜ್ಯಭಾರ ಮಾಡಿದಂತಿದೆ. ಪತಿಪತ್ನಿಯ ನಡುವಿನ ಮಧುರ ಸಂಬಂಧದ ಸೂಕ್ಷ್ಮತೆಯನ್ನು ಬಹಳ ನವಿರಾಗಿ ಚಿತ್ರಿಸಿರುವ ಈ ಕವನ, ನಿಜಕ್ಕೂ ಕವಿಯ ಹಾಸ್ಯಪ್ರಜ್ನೆ ಮತ್ತು ಚತುರತೆಯನ್ನು ತೋರಿಸಿದೆ. ಭಲೇ ಸುದರ್ಶನ್!
    ಉಮಾ ವೆಂಕಟೇಶ್

    Like

  2. ಸುದರ್ಶನ ರಾವ್ ಅವರ ತಾಜಾಮಹಲದ ನಾಯಕ ವಿಜಯ ಕನಸು ರಮ್ಯ. ಸಾಮ್ರಾಟನಾಗಿ, ಅತ್ತ ಇತ್ತ ಮನ ಹಾರಬಿಟ್ಟು, ಮಮತಾಜಳ ಪ್ರೀತಿಗೆ ಹಾತೊರೆಯುವಾಗ ಧೊಪ್ಪನೇ ಜಾರಿ ಬಿದ್ದು ಹೆಂಡತಿಯ ಕೈಲಿ ಕುಟ್ಟಿಸಿಕೊಂಬ ವಿಜಯ ಎಲ್ಲರ ಪ್ರತಿನಿಧಿ ಅಲ್ಲವೆ? ಕನಸು ಕಾಣಲು ಎಲ್ಲರಿಗೂ ಹಕ್ಕಿದೆ. ಜೀವನವೇ ಕನಸಲ್ಲವೇ? ಕನಸಿನ ಸಾಮ್ರಾಜ್ಯದ ಒಡೆಯರ್ ನಾವ್. ಕನಸೇ ಇಲ್ಲದಿದ್ದರೆ ಜೀವನ ನಿಸ್ಸಾರ ಈ ಕವನದಲ್ಲಿ ಹಾಸ್ಯ, ತತ್ವಜ್ಞಾನ ಸಮ್ಮಿಳಿತವಾಗಿ ತುಂಬಾ ಮನೋಜ್ಞವಾಗಿದೆ. ಅಸೂಯೆಯಲ್ಲಿ ಕುದಿದರೂ ಸೀತೆ ವಿಜಯನನ್ನ ಮತ್ತೆ ಸ್ವೀಕರಿಸಿ, ಜೀವನ ಇಷ್ಟೇ ಅಂತ ಸಾರಿದ್ದಾಳೆ. ಹಾಸ್ಯದೊಂದಿಗೇ ಸುಂದರ ಸಂದೇಶವನ್ನು ಕವಿ ಬೀರಿದ್ದಾರೆ. ಸುದರ್ಶನ ರಾವ್ ಅವರೇ ಅಭಿನಂದನೆಗಳು
    ಸರೋಜಿನಿ ಪಡಸಲಗಿ

    Like

  3. ಕೆಲವರಿಗೆ ಒಳ್ಳೆ ಹಾಸ್ಯ ಪ್ರಜ್ಞೆ ಒದಗಿರುತ್ತದೆ, ಇನ್ನು ಕೆಲವರಿಗೆ ಒಳ್ಳೆ ಕಾವ್ಯ ಪ್ರಜ್ಞೆ ಲಭ್ಯವಾಗಿರುತ್ತದೆ.
    ಕೆಲವರಿಗೆ ಇವೆರಡು ಇದ್ದು ಅದನ್ನು ಅಭಿವ್ಯಕ್ತ ಗೊಳಿಸುವ ಒಂದು ಅಪೂರ್ವ ಪ್ರತಿಭೆ ಇರುವುದು ವಿರಳ
    ಸುದರ್ಶನ್ ಅವರು ಈ ಕೊನೆ ಗುಂಪಿಗೆ ಸೇರಿದವರು ಎನ್ನುವುದು ನನ್ನ ಅನಿಸಿಕೆ

    Like

  4. “ನಡೆದ‘ಘಟನೆ ಚಿಕ್ಕದಾದರೂ ಕಾವ್ಯರೂಪದಲ್ಲಿ ಅದನ್ನು (೯೯ ಸಾಲುಗಳ)ಲ್ಲಿ ಕವಿ ಬರೆದ ರೀತಿ ಅದರಲ್ಲಡಗಿದ ಹಾಸ್ಯಕ್ಕೆ ಇನ್ನೂ ಮೆರಗು ಕೊಡುತ್ತದೆ. ಇದನ್ನೇ ಒಂದು ವ್ಯಂಗಚಿತ್ರದಲ್ಲೂ ಬರ್ಯಬಹುದು. ಅದನ್ನು ನೋದಿ ನಕ್ಕು ಆನಂದಿಸುವ ಭಾವನೆ ಬೇರೆ. ಸುದೀರ್ಘ ಪ್ರಾಸ-ಲಯಬದ್ಧ ಪದ್ಯಗಳಲ್ಲಿ ಅದನ್ನು ಓದಿದಾಗ ಆಗುವ ಅನುಭವವೇ ಬೇರೆ. ಕಾರ್ಟೂನಿನಲ್ಲಿ ‘ಶಹಾಜಹಾನ್‘ ನಗೆಗೀಡಾದ ವಸ್ತು. ಈ ಕವನದಲ್ಲಿ ವಿಜಯನ ಬಗೆಗೆ ಮರುಕವೂ ಉಂಟಾಗುತ್ತದೆ.ಸುದರ್ಶನರ ಬರವಣಿಗೆಯಲ್ಲಿ ವಿಜಯ ಓದುಗನ ಅನುಕಂಪವನ್ನೂ ಗಳಿಸಿದ್ದಾನೆ.ಇದು ಎರಡು ನಿಮಿಷದಲ್ಲಿ ವೇದಿಕೆ ಮೇಲೆ ನಿಂತು ಕಾವ್ಯಗೋಷ್ಠಿಯಲ್ಲಿ ಓದಿದಾಗ ಮನಮುಟ್ಟುತ್ತಿರಲಿಲ್ಲ.ಅಭಿನಂದನೆಗಳು.

    Like

  5. ಗಂಡಸಿನ ಚಂಚಲ ಚಿತ್ತವನ್ನು ಹಾಸ್ಯಮಾಡುತ್ತ ಒಂದರ ಜೊತೆ ಒಂದು ಪ್ಯಾರ ಬರೆದು ದೊಡ್ಡ ಸರಮಾಲೆಯನ್ನೆ ಮಾಡಿ ತೊಡಿಸಿದ್ದೀರಿ. ಮತ್ತೆ ಕೆಲವರು ಮೊನಚಾದ ಒಂದು ಗುದ್ದನ್ನು ನೀಡಿ ಅಷ್ಟೇ ಹೇಳಿಬಿಡುತ್ತಾರೆ. ಲೋಕೋ ಭಿನ್ನ ರುಚಿಃ. ಕನ್ನಡಿಗರಾದ ನಾವು ಇಷ್ಟು ದೂರವಿದ್ದು ಕನ್ನಡದಲ್ಲಿ ಬರೆವ ಎಲ್ಲ ಪ್ರಯತ್ನಗಳೂ ಪ್ರಶಂಸಕಾರಿ.

    Like

Leave a comment

This site uses Akismet to reduce spam. Learn how your comment data is processed.