ಮ್ಯಾಂಚೆಸ್ಟರಿನಲ್ಲಿ ನಡೆದ ಕನ್ನಡ ಹಾಸ್ಯ ಕವಿಗೋಷ್ಠಿ – ಸುಹಾಸ ಕರ್ವೆ ವರದಿ

Gangavati Pranesh
ಗಂಗಾವತಿ ಪ್ರಾಣೇಶ

ಅಲ್ಪಪ್ರಾಣ, ಮಹಾಪ್ರಾಣ  ಉಪಯೋಗಿಸಿ  ಅಲ್ಪಮತಿಗೆ   ತೋಚಿದಷ್ಟು, ಕಲ್ಪಿಸಿದಷ್ಟು  ಬರೆದ  ಕವನಗಳ  ಕವಿಗೋಷ್ಟಿಗೆ ವಿಮರ್ಶಕರಾಗಿ  ‘ಪ್ರಾಣೇಶ’ ಎಂಬ  ಮಹಾಕಲಾವಿದ   ಲಭಿಸಿದ್ದು   ಕವಿತೆಗಳ  ಕಲ್ಪಿತ   ಭಾವಗಳಿಗೆ    ‘ಪ್ರಾಣ’   ದೊರಕಿದ್ದೇ   ಸೈ!!

‘ಪ್ರಾಣೇಶ’   ಅವರ   ಮಾತು, ಅವರ   ಶೈಲಿ. ಅವರ   ವಿಮರ್ಶೆ   ಎಷ್ಟು   ಪ್ರಭಾವ   ಬೀರಿದೆ   ಎಂದರೆ, ಪ್ರತಿಯೊಂದು ಸಾಲಿನಲ್ಲಿ   ‘ಪ್ರಾಣ’ಕ್ಕೆ  ಅನುಗುಣವಾದ   ಶಬ್ದಗಳನ್ನು   ನನ್ನ   ಲೇಖನಿ   ಹುಡುಕುತ್ತಿದೆ, ತವಕಿಸುತ್ತಿದೆ.   ಪ್ರಾಣೇಶರವರ   ಶೈಲಿಯಲ್ಲಿ   ಹೇಳುವುದಾದರೆ,  “ಸಾಕೋಪಾ, ಇಷ್ಟಸರ್ತಿ ‘ಪ್ರಾಣ’ ‘ಪ್ರಾಣ’  ಅಂತ   ಬರದ್ರ   ನನ್ನ   ಹೆಸರ   ಬರೆ   ‘ಈಶ’ ಅಂತ   ಉಳದೊಕೈತ್ ನೋಡು!!!”

ಡಾ|| ರಾಮಾಶರಣರವರು ಕಾರ್ಯಕ್ರಮವನ್ನು ತುಂಬಾ ಚಾಕಚಕ್ಯತೆಯಿಂದ ನಿರೂಪಿಸಿದರು. ಮಹಾಕಲಾವಿದನ ಪಕ್ಕದಲ್ಲಿ ಕೂತು, ಆಂಗ್ಲ ಅಧಿಕಚಾಲ್ತಿಯಲ್ಲಿರುವ ನಿಮ್ಮ ಉದ್ಯೋಗ ಹಾಗೂ ಈ ಕಾಲದಲ್ಲಿ, ‘ಸಕಾಲ’ದಲ್ಲಿ ‘ಸೂಕ್ತ’ ಕನ್ನಡ ಶಬ್ದಗಳನ್ನು ಪ್ರಯೋಗಿಸಿದ್ದು ನಿಜಕ್ಕೂ ಶ್ಲಾಘನೀಯ.

ಕಾರ್ಯಕ್ರಮ ಆರಂಭವಾಗಿದ್ದು ನಮ್ಮ ವೇದಿಕೆಯ ಕಿರು-ಪರಿಚಯದೊಂದಿಗೆ. ನಮ್ಮ ವೇದಿಕೆಗೆ ಪಿತೃ ಸಮಾನರಾದ ಕೈ. ಡಾ|| ರಾಜಾರಾಮ ಕಾವಳೆರವರಸ್ಮರಿಸಿ, ಅವರ ಲೇಖನಿಯ ‘ಸತಿಯ ಹಾಡು’ ಕವಿತೆಯನ್ನು ಡಾ|| ಉಮಾರವರು ಮೂಲ ಭಾವಕ್ಕೆ ನ್ಯಾಯ ದೊರಕಿಸಿ ‘ಪ್ರತಿಭಾ’ವಂತ ಸಾಹಿತಿಗೆ ಸೊಗಸಾದ’ಸಂಗೀತ’ ನೀಡಿದಂತೆ ಓದಿದರು. ಪ್ರಾಣೇಶರವರು ಕವಿತೆಯನ್ನು ಭಾವಗೀತೆಗೆ ಹೋಲಿಸಿದ್ದು ಅದಕ್ಕೆ ಸಿಕ್ಕ ನಿಜ ಬಹುಮಾನ.

ಡಾ|| ದೇಸಾಯಿ ಅವರು ತುಂಬಾ ಅಚ್ಚುಕಟ್ಟಾಗಿ, ಇಂಗ್ಲೆಂಡ್ನಲ್ಲಿ ಸಹಜವಾಗಿ ಪೇಚಿಗೆ ಬೀಳುವಂತಹ ಸಂಗತಿಯ ಆಧಾರಿಸಿ ಬರೆದ ‘ಏನ್ರೀ!!’, ಎಲ್ಲ ಶ್ರೋತ್ರರಿಗೆಹೋ! ಹೋ! ಹೌದಲ್ಲವೇ ಎಂಬ ಸಹಜ ಭಾವನೆ ಮೂಡಿಸಿದಂತಹ ಕವಿತೆ. ‘ಪ್ರಾಣೇಶ-ಮಂಗಣ್ಣರು’ ತುಂಬಾ ಸೊಗಸಾಗಿ ಮೂಡಿಬಂದು, ಕೇಳುಗರಲ್ಲಿಸಹಜ ನಗು ಅರಳಿಸಿತು.

ಡಾ|| ಹಂಪಾಪುರ ಬರೆದ ಚಿಕ್ಕ-ಚೊಕ್ಕ ಕವಿತೆ ಈ ಕಾಲದ ಸಣ್ಣ ಕವಿತೆಗಳ ಅಗತ್ಯತೆಯನ್ನು ಎತ್ತಿ ತೋರಿಸಿತು. ಪ್ರಾಣೇಶರವರು ಕೂಡ ಈ ಮಾತಿಗೆ ಸೈಎಂದಿದ್ದು, ಡಾ|| ಹಂಪಾಪುರ ಅವರಿಗೆ ‘ಬೆನ್ನು ತಟ್ಟಿದ’ ಅನುಭವ ನೀಡಿತು ಎಂದರೆ ಅತಿಶಯೋಕ್ತಿಯಾಗಲಾರದು.

ವೈದ್ಯನ ವ್ಯಥೆಯನ್ನು ಡಾ|| ರಾಮಶರಣರವರು ಓದಿದಾಗ ನಮ್ಮಂತಹ ವೈದ್ಯರಲ್ಲದವರಿಗೆ ಅವರ ಮನೋವ್ಯಥೆಗಳ ಬಗ್ಗೆ ಪರಿಚಯವಾಯಿತು. ‘ಆರಾಮಹರಾಮ್ ಹೈ’ ಎಂಬ ಹಿಂದಿ ನಾಣ್ಣುಡಿಯನ್ನು ತುಂಬಾ ಚಾಣಕ್ಷವಾಗಿ ಬರೆದಿದ್ದಾರೆ ಡಾ|| ರಾಮಶರಣರವರು.

ಡಾ|| ಕೇಶವರವರು ಬರಲು ಅನಿವಾರ್ಯ ಕಾರಣಗಳಿಂದ ತಡವಾಯಿತು. ಅವರು ಬರೆದ ‘ಫೇಸ್ ಬುಕ್’ ಕವಿತೆ  ಡಾ|| ರಾಮಶರಣರವರು ತುಂಬಾ ಸೊಗಸಾಗಿ ಡಾ|| ಕೇಶವ ಅವರು ದೈಹಿಕವಾಗಿ ಅಲ್ಲಿರದಿದ್ದರೂ ತಾರ್ಕಿಕವಾಗಿ ಅಲ್ಲಿರುವಂತೆ ಓದಿದರು. ಇಂದಿನ ಆನ್‌ಲೈನ್ ಅಂಟನ್ನು ಭಾರೀ ಸೊಗಸಾಗಿ ವರ್ಣಿಸಿದ್ದಾರೆಈ ಕವಿತೆಯಲ್ಲಿ.

ಡಾ|| ಶಿವಪ್ರಸಾದ ಬರೆದ ‘ಸ್ಕಾಚ್ ವಿಸ್ಕೀ’ ಸುರಪಾನ ಮಾಡುವವರಿಗೆ ನೀಡಿದ ಹಸಿರು ನಿಶಾನೆ ಹಾಗೆ. ತುಂಬಾ ಸೊಗಸಾಗಿ ಮೂಡಿಬಂದ ಈ ಕವಿತೆ,ಹೆಂಡತಿಯನ್ನು ಚೆಲುವಾಗಿಸುವ ಪ್ರಾಣೇಶರ ಸೂಚನೆ ಸಭಿಕರನ್ನು ಬಹುಸಮಯದವರೆಗೆ ನಗೆಹೊನಲಲ್ಲಿ ತೇಲಾಡಿಸಿತು!!

‘ಚಟ ಮಾಡುವವರಿಗೆ ಮಾತ್ರ’ ಎಂಬಂತೆ ಬರೆದ ಸುಹಾಸ ಕರ್ವೆ ಅವರ ಕವಿತೆ, ಇನ್ನೂ ಹೇಗೆ ಮೊನಚಾಗಿಸಬಹುದು ಎಂಬ ಪ್ರಾಣೇಶರ ವಿಮರ್ಶೆ ‘ಮರಎತ್ತರವಿದ್ದರೂ ಬೇರು ಭೂಮಿಯಲ್ಲೇ’ ಎಂಬಂತೆ ಅವರ ಸಹಜತೆಗೆ ಸಾಕ್ಷಿಯಾಗಿತ್ತು.

ಕಾರ್ಯಕ್ರಮ ಪ್ರಾಣೇಶರವರ ಕವಿತೆಗಳ ಬಗ್ಗೆ ಅಭಿಪ್ರಾಯ, ಕೆಲವು ಚುಟುಕು ಕವಿತೆಗಳು ಹಾಗೂ ಸೊಗಸಾದ ಮಾತಿನ ಶೈಲಿಯಿಂದ ಇನ್ನಷ್ಟು ಅರಳಿತು.

ಕಾರ್ಯಕ್ರಮದ ವಂದನೆಯನ್ನು ಡಾ|| ದಾಕ್ಷಾಯಣಿ ಚಿಕ್ಕದಾಗಿ ತುಂಬಾ ಸೊಗಸಾಗಿ ನಿರ್ವಹಿಸಿದರು. ನಮ್ಮ ಪರಿಶ್ರಮ, ಕಾರ್ಯದ ಶ್ಲಾಘನೆಯನ್ನು ಮುಕ್ತಕಂಠದಿಂದ ಹೊಗಳಿದ ಪ್ರಾಣೇಶ ಮತ್ತು ಮಹಾಮನಿ ಅವರಿಗೆ ನಮ್ಮೆಲ್ಲರ ಕೃತಜ್ಞತೆ.

ಈ ಬಾರಿಯ ಯುಗಾದಿ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಎಂದರೆ ‘ಅನಿವಾಸಿಗಳ ಅಂಗಳದಿಂದ’ ಪುಸ್ತಕದ ಬಿಡುಗಡೆ ಸಮಾರಂಭ. ಅವಿರತ ಶ್ರಮದಿಂದಈ ‘ಹೊತ್ತಿಗೆ’ಯನ್ನು  ಸರಿಯಾದ ‘ಹೊತ್ತಿಗೆ’ ಪ್ರಕಾಶಿಸಲು ಸಾಧ್ಯವಾಯಿತು. ಪ್ರತಿಯೊಬ್ಬರೂ ತಮ್ಮ ಲೇಖನಿ ರೂಪದಲ್ಲಿ ನೀಡಿದ ಕೊಡುಗೆ ಪುಸ್ತಕರೂಪದಲ್ಲಿ ಹೊರಬಂದಾಗ ಎಲ್ಲರ ಮುಖದಲ್ಲೂ ಒಂದು ಪರಿಪೂರ್ಣತೆಯ ಭಾವ ಗೋಚರಿಸುತಿತ್ತು.

3 thoughts on “ಮ್ಯಾಂಚೆಸ್ಟರಿನಲ್ಲಿ ನಡೆದ ಕನ್ನಡ ಹಾಸ್ಯ ಕವಿಗೋಷ್ಠಿ – ಸುಹಾಸ ಕರ್ವೆ ವರದಿ

  1. ಸುಹಾಸ್ ಕರ್ವೆ ಅವರ ವರದಿ ನೂತನ ಶೈಲಿಯಲ್ಲಿದ್ದು ಹಾಸ್ಯ ಗೋಷ್ಠಿಗೆ ಒಂದು ಮೆರುಗನ್ನೇ ನೀಡಿದೆ. ಪ್ರಾಣೇಶರ ವಾಖ್ಝರಿಯ ಪರಿಣಾಮ ಅವರ ಮೇಲಾದಂತಿದೆ. ಹಾಸ್ಯದ ಲೇಪನವನ್ನು ಬಳಸಿ, ಅಂದಿನ ಕವಿಗೋಷ್ಟಿಯಲ್ಲಿ ನಡೆದ ಚಟುವಟಿಕೆಗಳನ್ನು ನಿಜಕ್ಕೂ ಆಸಕ್ತಿಪೂರ್ಣವಾಗಿ ವಿವರಿಸಿದ್ದಾರೆ. ಈ ಸಮಾರಂಭ ತಪ್ಪಿಸಿಕೊಂಡವರಿಗೂ ಅದರ ಬಗ್ಗೆ ಉತ್ತಮ ಅನುಭವ ನೀಡುವಲ್ಲಿ ಯಶಸ್ವಿಯಾಗಿದೆ. ಮುಂದೂ ಅವರ ಲೇಖನಿಯಲ್ಲಿ ಇಂತಹ ವರದಿಗಳು, ಕವನಗಳು ಬರುತ್ತಿರಲಿ ಎಂದು ಆಶಿಸುವೆ.
    ಉಮಾ ವೆಂಕಟೇಶ್

    Liked by 1 person

  2. ಅನಿವಾಸಿ ಬಳಗದ ಯುಗಾದಿ ಆಚರಣೆಯ ಒಂದೊಂದೇ ವರದಿಗಳನ್ನು ಓದುತ್ತಿರುವಂತೆ ,ಅಲ್ಲಿನ ಸಂಭ್ರಮದ,ಭರ್ಜರಿ ಆಚರಣೆಯ ಕಲ್ಪನೆ ಬರುತ್ತದೆ.ಅನಿವಾಸಿ ಬಳಗದವರ ಅವಿನಾಭಾವ ಸಂಬಂಧಗಳಿಂದ ಮನ ಮುದಗೊಳ್ಳುತ್ತದೆ.ಸುಹಾಸ ಕರ್ವೆಯವರೇ ನಿಮ್ಮ ಶೈಲಿ ತುಂಬಾ ಚೆನ್ನಾಗಿ, ಕಣ್ಣಿಗೆಕಟ್ಟುವಂತಿದೆ.ಆ ಹಾಸ್ಯಕವನಗಳನ್ನ ಅನಿವಾಸಿ ಜಾಲ ಜಗುಲಿಯಲ್ಲಿ ಹಾಕಿದರೆ ದೂರಿರುವ ನಾವೂ ಓದಿ ಆನಂದಿಸಬಹುದೆಂಬಾಸೆ.ಕನ್ನಡ ಬಳಗದ ಬಗ್ಗೆ ನಿಜಕ್ಕೂ ಹೃದಯ ತುಂಬಿ ಬರುತ್ತದೆ.ನನ್ನೊಲವಿನ ಜೀವಗಳೇ ನಿಮಗೇನು ಹಾರೈಸಲಿ?ಈ ನಿಮ್ಮ ಅನಿವಾಸಿ ಕನ್ನಡಬಳಗ ಯಾವಾಗಲೂ ಹಸಿರಾಗಿರಲಿ.ಕರ್ವೆಯವರೇ ಅಭಿನಂದನೆಗಳು.
    ಸರೋಜಿನಿ ಪಡಸಲಗಿ.

    Liked by 1 person

  3. ಹಾಸ್ಯ ಕವಿಗೋಷ್ಠಿಗೆ ತಕ್ಕಂತೆ ತಮ್ಮ ನವಿರು ಹಾಸ್ಯದ ಶೈಲಿಯಲ್ಲಿ ಸುಹಾಸ ಕರ್ವೆಯವರ ವರದಿ ಆ ದಿನದ ನಡಾವಳಿಯನ್ನು ಸುಂದರವಾಗಿ ನಿರೂಪಿಸಿದೆ. ಸುಹಾಸ ಅವರ ಕವನ ಸಹ ಆ ಹಾಸ್ಯಬ್ರಹ್ಮನ ಅವಗಾಹನೆಗೆ ಬಂದು ಬೆನ್ನು ಚಪ್ಪರಿಸಿಕೊಂಡದ್ದಕ್ಕೆ ಅಭಿನಂದನೆಗಳು. ಅವರಂಥ ಯುವಕರು ಸೇರಿ ನಮ್ಮ ಕನ್ನಡಬಳಗಕ್ಕೆ ಬೆಂಬಲಕೊಡಲೆಂದು ಹಾರೈಸುವೆ. ಕಳೆದ ವಾರವೂ ನೋಡಿದ ಲಕ್ಷ್ಮಿನಾರಾಯಣ ಅವರ ಕಾರ್ಟೂನ್ ಬಹಳೇ ಸುಂದರವಾಗಿದೆ.

    Like

Leave a comment

This site uses Akismet to reduce spam. Learn how your comment data is processed.