ಎನ್ನರಸ – ಪ್ರೇಮಲತ ಬರೆದ ಕವಿತೆ

ಕಣ್ಣ ಮೀಟಿ, ಕರವ ಚಾಚಿ

ಕರೆದೆ ನೀನನ್ನೆಲ್ಲಿಗೆ?

ಕಾಮನಂತೆ ಬಾಣ ಬಿಟ್ಟು

ಕೊಂದಿಹೆ ನನ್ನೊಂದೇಟಿಗೆ!

ಮಧುವನೀರಿ, ಭ್ರುಂಗವೇರಿ

ಸೌಗಂಧದ ಸಿರಿ ನಾಡಿಗೆ

ಬೆಚ್ಚಗಿನ ಎದೆಯ ತೆರೆದು

ಭಾವನೆಗಳ ಹೂ ಮೆತ್ತೆಗೆ!

ಬೊಗಸೆ ತುಂಬ ಮೊಗೆವ ಸಿಹಿ

ಮೃದು ಮಂದಹಾಸ ಸವಿನುಡಿ

ಪದಗಳೊಡನೆ ಲಾಸ್ಯವಾಡಿ

ತೋರಿ ಶೃಂಗಾರದ ಕನ್ನಡಿ!

ಕಣ್ಣ ಮುಚ್ಚಿ, ಕನಸ ತೆರೆಸಿ

ಕಾರ್ಯಮುಖಿ ಬದುಕ ಕೆಡೆಸಿ

ಮನಸ ತುಂಬ  ಬಣ್ಣಕೇಳಿ

ಗರಿಕೆದರಿದ ಹಕ್ಕಿ ರಂಗವಲ್ಲಿ!

ಅಂಗ ಸಂಗ  ಮಧುರ ಬಂಧ

ಕಣ್ರೆಪ್ಪೆಯ ಮಿಟುಕಿಗೆ

ಕರಗದಿರು ,ಹೋಗದಿರು

ಎನ್ನರಸ ನೀನಲ್ಲವೆ.. ‘ಕಲ್ಪನೆ’!!!

 

 

12 thoughts on “ಎನ್ನರಸ – ಪ್ರೇಮಲತ ಬರೆದ ಕವಿತೆ

  1. ಆಕಾಶದಲ್ಲಿ ಮೈಕ್ರೊಲೈಟ್ನಲ್ಲಿ ತೇಲಾಡುತ್ತಿರುವವನನ್ನು ಧಡಕ್ಕನೆ ಧರೆಗೆ ಬೀಳಿಸಿದ್ದಾರೆ ಪ್ರೇಮಲತಾ ಅವರು.., ಈ ಕವನಕ್ಕೆ ಸಂಗೀತಜೊತೆಗೂಡಿಸಿದರೆ ಹೇಗಿರಬಹುದು ಎಂಬ ಯೋಚನೆಯೂ ಬಂತು . ಸುಂದರವಾದ ಕವನ . ಪ್ರೇಮಲತಾ ಅವರಿಗೆ ಅಭಿನಂದನೆಗಳು.

    Like

  2. ಸ್ವರ್ಗದಿಂದ ಧರೆಗೆ ಬಿದ್ದ ನಹುಷನಂತಾದೆ ಈ ಕವನ ಓದಿ!!

    ಪ್ರೇಮಲತಾ ಇನ್ನಲ್ಲಿಗೋ ಕರೆದೊಯ್ಯುತ್ತಾರೆ ಎಂದು ಓದಿಸಿಕೊಂಡು ಹೋಗುವ ಕವನ ಕಲ್ಪನೆಯ ಪರಿಕಲ್ಪನೆಯಲ್ಲಿ ಕೊನೆಯಾಗುವುದು ಒಮ್ಮೆಗೇ ಹತ್ತಾರು ಭಾವಗಳನ್ನು ಗಕ್ಕನೆ ಮೂಡಿಸಿಬಿಡುತ್ತದೆ!!
    ಚಂದವಾದ ಕವನ

    Like

  3. ಕಲ್ಪನೆಯ ಸೆಳೆತ ಇನಿಯನ ಕರೆಯಷ್ಟೇ ಪ್ರಬಲ. ಕಾರ್ಯಮುಖಿ ಬದುಕಲ್ಲಿ ಸರಸ, ಶೃಂಗಾರ, ಹಿತವನ್ನು ತುಂಬಬಲ್ಲ ಈ ಕಲ್ಪನೆಗಳಿಲ್ಲದ ಬದುಕು ಬದುಕಲ್ಲ. ಕಲ್ಪನೆಗಳಿಲ್ಲದ ಬರಹ ಮೂಲ ಸಾಹಿತ್ಯವೂ ಆಗುವುದಿಲ್ಲ. ಈ ಕಲ್ಪನೆಗಳ ರಾಜನ ಶೃಂಗಾರದಲ್ಲಿ ಮೈಮರೆವಂತೆಯೇ ಗಕ್ಕನೆ ಇಹಲೋಕದ ಕರೆಗೆ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಕಲ್ಪನೆಗಳ ಆಯಾಮದ ಮೊಟಕನ್ನೂ ನಾವು ಎದುರಿಸಬೇಕಲ್ಲವೇ?

    ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

    Like

    • ಇದೊಂದು ಚೆಂದದ ಬರಹ. ಗಮನ ಸೆಳೆಯುವ ಪ್ರಯತ್ನ.  ಕೊಂಚ ಮನ ಸೆಳೆಯುವಂಥದು ಕೂಡ.
      ಬೇಂದ್ರೆಯವರ ಕವಿತೆಯನ್ನು ನೆನೆಯುವಂತೆ ಮಾಡಿತು. ಪದಗಳ ಭಾರದಲ್ಲಿ ಭಾವ ಲಯವಾಗದಂತೆ ಕತೆ ಕಟ್ಟಿ ಓದುಗರಿಗೆ ದಾಟಿಸುವ ಕೆಲಸ ಸುಲಭವಲ್ಲ. ಚೆನ್ನಾಗಿ ಬರ್ದಿದೀರ ಪ್ರೇಮಲತ.  ಕವಿತೆ ಅಮೂರ್ತವಾದಷ್ಟೂ ಸುಂದರ ಎಂಬುದು ನನ್ನ ಅಭಿಮತ.  ಕೊನೆಯ ಸಾಲನ್ನು cut ಮಾಡಿ, ಅದನ್ನೇ ಈ ರಚನೆಯ ತಲೆಬರಹವಾಗಿಸಿದರೆ ಹೇಗಿರಬಹುದು?
      ಭ್ರಂಗವೇರಿ ಎಂಬುದನ್ನು ನಾನು ಭ್ರಂಗ ಹಾರಿ ಎಂದು ಓದಿಕೊಂಡಾಗ ಆ ಸಾಲು ಬೇರೆಯದೇ ಅರ್ಥದಲ್ಲಿ ಹೊಳೆಯಿತು.
      ನನ್ನ ಕಮೆಂಟಿನಲ್ಲಿ ಉದ್ಧಟತನ ಕಂಡರೆ ಕ್ಷಮಿಸಬೇಕು. ಅನಿವಾಸಿ ತಾಣವಾದ್ದರಿಂದ ಇದನ್ನು ಹೇಳುವುದು ಸಾಧ್ಯವಾಯಿತು. ಇದೀಗ ನನ್ನ ದೇಶದಲ್ಲಿ ಏನು ಹೇಳಿದರೂ sedition charge ನ ಭಯ!!!

      Like

      • ಧನ್ಯವಾದ ಪುನರ್ವಸು ಅವರಿಗೆ.
        ಎಲ್ಲ ಬಗೆಯ ಪ್ರತಿಕ್ರಿಯೆಗಳಿಗೆ ಸ್ವಾಗತ. ಭ್ಹಯದ ನೆರಳಿಲ್ಲದೆ ಕಲ್ಪನಾ ಲೋಕದ ಭ್ರುಂಗ ಸವಾರಿ ಮಾಡಿ ಬನ್ನಿ!

        Like

  4. “ಭೃಂಗದಾ ಬೆನ್ನೇರಿ ಬಂತು ಕಲ್ಪನಾ-ವಿಲಾಸ“ ಎನ್ನುವ ಕವಿತೆಯ ನೆನಪಾಯಿತು ನನಗೆ. ಯಾಕೆಂದು ತಿಳಿಯದು. ಬಹುಶಃ ಪ್ರೇಮಲತಾರ ಕವನದಲ್ಲಿ ಭೃಂಗವನೇರಿ, ಮಧುವನ್ಹೀರಿ ಎನ್ನುವ ಸಾಲುಗಳನ್ನೋದಿ ಈ ಸಾಲುಗಳು ನೆನಪಿಗೆ ಬಂದಿರಬಹುದು. ಕಲ್ಪನೆಯ ಶೃಂಗಾರವನ್ನು, ತಮ್ಮ ಪದಗಳ ವೇಗದಲ್ಲಿ ಕಟ್ಟಿಡುವ ಸಾಹಸ ಪ್ರೇಮಲತಾರದು. ಮನಸ್ಸನ್ನು ನಿಶ್ಚಿತವಾಗಿ ಮಧುಮಯ ಪ್ರೇಮಲೋಕಕ್ಕೆಳೆದೊಯ್ಯುವಲ್ಲಿ ಯಶಸ್ವಿಯಾಗುತ್ತದೆ. ಎಲ್ಲಾ ವಯಸ್ಸಿನ ಮನಗಳನ್ನೂ ತಟ್ಟುತ್ತದೆ. ವೃದ್ಧರು ತಮ್ಮ ಹರಯವನ್ನೂ, ಹರಯದ ಮನಗಳು ತಮ್ಮ ಶೃಂಗಾರಭರಿತ ಪ್ರಣಯಲೋಕವನ್ನು ಕಲ್ಪಿಸಿಕೊಳ್ಳುವುದರಲ್ಲಿ ಮಗ್ನರಾಗುತ್ತಾರೆಂಬುದರಲ್ಲಿ ಸಂದೇಹವಿಲ್ಲ! ಸುಂದರ ಕವನ!
    ಉಮಾ ವೆಂಕಟೇಶ್

    Like

  5. There is never an ideal or perfect partner, perhaps in imaginations or in Bollywood. Good build up and let down!

    Like

  6. ಕಾರ್ಯಮುಖಿಯ ಬದುಕ ಕೆಡಿಸಿತೆ ಈ ಕಲ್ಪನೆಯ ರಾಸಲೀಲೆ?
    ಸು೦ದರವಾದ ಶೃ೦ಗಾರದ ಕವಿತೆ ಪ್ರೇಮಲತನಿ೦ದ.
    ಪದಗಳೊಡನೆ ಲಾಸ್ಯವಾಡಿ, ಒದುಗರನ್ನು ಹೊಸ ಲೋಕಕ್ಕೆ ಆಹ್ವಾನಿಸಿದ್ದಾರೆ ಕವಿಯಿತ್ರಿ.

    ದಾಕ್ಷಾಯಣಿ

    Like

  7. ಕಾರ್ಯಮುಖಿಯ ಬದುಕ ಕೆಡಿಸಿತೆ ಈ ಕಲ್ಪನೆಯ ರಾಸಲೀಲೆ?
    ಸು೦ದರವಾದ ಶೃ೦ಗಾರದ ಕವಿತೆ ಪ್ರೇಮಲತನಿ೦ದ.
    ಪದಗಳೊಡನೆ ಲಾಸ್ಯವಾಡಿ, ಒದುಗರನ್ನು ಹೊಸ ಲೋಕಕ್ಕೆ ಆಹ್ವಾನಿಸಿದ್ದಾರೆ ಕವಿಯಿತ್ರಿ.

    ದಾಕ್ಷಾಯಣಿ

    Like

  8. ಎನ್ನರಸ ಶೃಂಗಾರ ರಸ ಭರಿತ ಸುಂದರ ಕವನ.ಒಂದು ನೋಟಕ್ಕೇ ಸೋತು ಹೋದಳಾಕೆ.ಅವಳ ಇನಿಯ ಕರೆದದ್ದಾದರೂ ಎಲ್ಲಿಗೆ? ಸೌಗಂಧದ ಸಿರಿನಾಡಿಗೆ, ಭಾವನೆಗಳ ಹೂ ಮೆತ್ತೆಗೆ! ರಮ್ಯ ಕಲ್ಪನೆ.ಭಾವನೆಗಳು ಗರಿ ಕೆದರಿದಾಗ, ಕಣ್ಣ ಮಿಟುಕಿಗೇ ತನ್ನರಸ ಮರೆಯಾಗುವುದನ್ನ ಸಹಿಸದ ಅವಳು,’ಹೋಗದಿರು ಎನ್ನರಸ’ಎಂಬ ಪರಿ!! ರಂಗಿನ ಚಿತ್ತಾರ.ಪ್ರೇಮಲತಾ ಅವರೇ ಅಭಿನಂದನೆಗಳು
    ಸರೋಜಿನಿ ಪಡಸಲಗಿ

    Like

  9. ಪ್ರೇಮಲತ ಬರೆದ ಪ್ರೇಮ-ಶೃಂಗಾರ ಭರಿತ ಕವನ!. ಓದುತ್ತಿದ್ದಂತೆ ಮನಸ್ಸು ಆ ಕಲ್ಪನೆಯ ಕುದುರೆಯ ಬೆನ್ನೇರಿ ನಾಗಾಲೋಟದಲ್ಲಿ ಹೋಗುತ್ತಿದ್ದಂತೆ ಕೊನೆಯ ಸಾಲಿನಲ್ಲಿ ಗಕ್ಕನೆ ಬ್ರೇಕ್ ಹಾಕಿಬಿಡುತ್ತದೆ. ಸುಂದರ ಕಸೂತಿಯ ಟ್ಯಾಪೆಸ್ಟ್ರಿಯಂತಿದೆ.

    Like

Leave a comment

This site uses Akismet to reduce spam. Learn how your comment data is processed.