೫೦ ವರ್ಷದ ಇಲ್ಲಿಯ ಜೀವನ – ರಾಮಮೂರ್ತಿ ಬೇಸಿಂಗ್ಸ್ಟೊಕ್

ಈಗ:

1ನಮ್ಮ ೫೦ ನೆ ವರ್ಷದ wedding anniversary ಯನ್ನು ನಮ್ಮ ಇಬ್ಬರು ಮಕ್ಕಳು ಬಹಳ ಸಂಭ್ರಮದಿಂದ ಆಚರಿಸದರು. ಅಗಸ್ಟ್ ೧೫ ಭಾರತಕ್ಕೆ ಸ್ವತಂತ್ರ ಬಂದ ದಿನ ಇರಬಹುದು, ಆದರೆ ಆ ದಿನ ನನ್ನ ಸ್ವಾತಂತ್ರ ಕಳೆಯಿತು ಅಂತ ಕೆಲವರು ಪಿಸುಗುಟ್ಟಿದ್ದು ನನ್ನ ಕಿವಿಗೊ ಬಿತ್ತು ಅನ್ನಿ!!

ನಮಗೆ ಮಕ್ಕಳಿಂದ ಒಂದೇ ಒಂದು ಮೆಸೇಜ್ ಸುಮಾರು ೨ ತಿಂಗಳ ಹಿಂದೆ, ನೀವಿಬ್ಬರು ನಮ್ಮ ಜೊತೆ ೩ ದಿನ ಇರುತ್ತೀರ ಆದರೆ ಎಲ್ಲಿ ಏನು ಅಂತ ಕೇಳಬೇಡಿ ನಾವು ಎಲ್ಲ arrangements ಮಾಡುತ್ತೇವೆ. ಸರಿ, ಹಿಂದಿನ ದಿನ ನಮ್ಮ ಮಗ ಮತ್ತು ಸೊಸೆ ಇಬ್ಬರು ದುಬೈ ಇಂದ ಬಂದರು, ಮಾರನೆ ದಿನ ೧೦ ಗಂಟೆಗೆ ಟ್ಯಾಕ್ಸಿ ಬಂತು ಎಲ್ಲಿಗೆ ಹೋಗ್ತೀವಿ ಅಂತ ನಾವು ಕೇಳಲಿಲ್ಲ ಅವರು ಹೇಳಲಿಲ್ಲ. ಸ್ಟೇಷನ್ ನಲ್ಲಿ ತಿಳೀತು ಲಂಡನ್ ಅಂತ. ವಾಟರ್ಲೂನಲ್ಲಿ ನಮ್ಮ ಮಗಳು ಅಳಿಯ ಇಬ್ಬರು ನಮ್ಮನ್ನು ಸ್ವಾಗತಿಸದರು.

The Hoxton ನಲ್ಲಿ ನಮ್ಮ ೩ ದಿನದ ವಾಸ ಅಂತ ತಿಳೀತು. ನಾಬ್ಬರು ಸಸ್ಯಾಹಾರಿಗಳು, ಅದರಲ್ಲೂ ನನ್ನ ಪತ್ನಿ ಸೀತು ಸ್ವಲ್ಪ fussy ಅಂತ ಹೇಳಿದರೆ ಏನು ತಪ್ಪಿಲ್ಲ. ಸುಪ್ರಸಿದ್ದ ಲಂಡನ್ ಹೋಟೆಲ್ The Savoy ನಲ್ಲಿ ನಮ್ಮಊಟಕ್ಕೆ ( champagne lunch) ಏರ್ಪಾಡು ಆಗಿತ್ತು. ನಮ್ಮ ಮಗಳು ಹೋಟೆಲ್ ಗೆ ಫೋನ್ ಮಾಡಿದಾಗ menu ವಿಚಾರ ಬಂತು. “ನಮ್ಮ ತಂದೆ ಪರವಾಗಿಲ್ಲ ಎಲ್ಲ ತಿಂತಾರೆ ಆದರೆ ನಮ್ಮ ತಾಯಿಗೆ chips ಅಂದರೆ ಬಹಳ ಇಷ್ಟ, ಅದು ಮಾಡುತ್ತೀರ ?” ಪಾಪ Savoy ನವರಿಗೆ ಚೇತರಿಸಿಕೊಳ್ಳುವುದಕ್ಕೆ ಕೆಲವು ನಿಮಿಷಗಳು ಬೇಕಾಯಿತು ಅಂತ ಕಾಣತ್ತೆ , ಇದುವರೆಗೂ ಅವರನ್ನ ಯಾರೋ ಚಿಪ್ಸ್ ಕೇಳಿರಲ್ಲಿಲ್ಲ “let me talk to the chef ” ಅಂತ ಹೇಳಿ ಕೆಲವು ನಿಮಷದ ನಂತರ ಬಂದು “chef will be pleased to accommodate your special request” ಹೇಳಿದಳಂತೆ. ಯಾರೋ ಇಲ್ಲಿ ಚಿಪ್ಸ್ ಕೇಳಿರಲ್ಲಿಲ್ಲ ಅಂತ ಅವರೆಲ್ಲಾ ಮಾತನಾಡಿ ನಕ್ಕಿರಬೇಕು. ಆದರೆ ಒಂದು ಮಾತು ಹೇಳಬಲ್ಲೆ ಈ ಚಿಪ್ಸ್ ತಿಂದಮೇಲೆ, Savoy ನಲ್ಲಿ ಮಾಡುವ ಹಾಗೆ ಇನ್ನಾರು ಇಷ್ಟು ರುಚಿಯಾಗಿ ಮಾಡಲಾರು. ವಿಪರೀತ ಬೆಲೆ ಇರಬಹುದು ಆದರೆ ಅದರ ಮಜಾ ಇನ್ನೆಲ್ಲಿ ?

ಹೀಗೆ ಮೂರು ದಿನ ಲಂಡನ್ನಿನಲ್ಲಿ ಕಳೆದು ಎಲ್ಲ ಕಡೆ ಚೆನ್ನಾಗಿ ಸುತ್ತಿ Bend it like Beckham musical ನೋಡಿ ಆನಂದಿಸಿದೆವು. ಇಲ್ಲಿ ಬಹಳ ಹಳೇ ಕಾಲದ Pub ಗಳು ಇವೆ. ಇವುಗಳನ್ನು(ಕೆಲವು ಮಾತ್ರ!) ಭೇಟಿ ಮಾಡಿ. ಆಕ್ಸಫ಼ರ್ಡ್ ರಸ್ತೆ ಹತ್ತಿರ ಒಂದು ಸೊಗಸಾದ ರೋಟಿ ಚಾಯ್ ಅನ್ನುವ ಕೆಫೆ ಇದೆ. ಇಲ್ಲಿ ತಿಂಡಿ ಚೆನ್ನಾಗಿರುತ್ತೆ.

ಸರಿ, ಮನೇಗೆ ಬಂದಮೇಲೆ ನಮಗೆ ಒಳ್ಳೇ ಪ್ರೆಸೆಂಟ್ ಇತ್ತು. ನಮ್ಮ ಅಳಿಯ, ಟೋನಿ , ಈಗ ಸುಮಾರು ೬ ತಿಂಗಳಿಂದ pottery ಕಲಿತ ಇದ್ದಾನೆ. ಅಲ್ಲಿ ಒಂದು ಗಣೇಶನ ಮೂರ್ತಿ ಅದಕ್ಕೆ ತಾನೆ ಫ್ರೇಮ್ ಹಾಕಿದ್ದಾನೆ. ಒಟ್ಟಿನಲ್ಲಿ ಈ ಕೆಲವು ದಿನಗಳು ಬಹಳ ಚೆನ್ನಾಗಿತ್ತು

ಸರಿ, ಇದು ಈಗಿನ ಕಥೆ.

೫೦ ವರ್ಷದ ಹಿಂದೆ ಏನಾಯ್ತು ಅಂತ ಕೇಳಿ (ಇಷ್ಟ ಇದ್ದರೆ).

ಆಗ:

ನೀವು ಈಚೆಗೆ, ಅಂದರೆ ಸುಮಾರು ಹದಿನೈದು ವರ್ಷಗಳ ಹಿಂದೆ ಬಂದಿದ್ದರೆ,  ತುಂಬಾ ಪುಣ್ಯವಂತರು. ಏಕೆ ಅಂದರೆ, ನೀವು ಬರೋ ಹೊತ್ತಿಗೆ ಎಲ್ಲ ಪ್ರಾಬ್ಲಮ್ ಗಳೂ ಮುಕ್ಕಾಲು ಭಾಗ ಸಾಲ್ವ್ ಆಗಿತ್ತು.

ಉದಾಹರಣೆಗೆ,
• Race Relations Act ಜಾರಿಗೆ ಬಂದು ಅನೇಕ ವರ್ಷಗಳಾಗಿತ್ತು, ಅದ್ದರಿಂದ ಕೆಲಸದಲ್ಲಿ ತೊಂದರೆ ಕಡಿಮೆ
• ಮನೆಗಳು ಬಾಡಿಗೆ ಅಥವಾ ಕ್ರಯಕ್ಕೆ ಸಿಗತ್ತೆ
• ನಿಮ್ಮ ಮಕ್ಕಳ ಶಾಲೆಯಲ್ಲಿ ದೀಪಾವಳಿ ಆಚರಿಸುತ್ತಾರೆ
• ನಿಮ್ಮ ಮಕ್ಕಳಿಗೆ ಸಂಗೀತ ಅಥವಾ ನೃತ್ಯ ಪಾಠಕ್ಕೆ ಏನೂ ತೊಂದರೆ ಇಲ್ಲ
• ನಿಮ್ಮ ಮನೇಗೆ ಬೇಕಾದ ಸಾಮಾನುಗಳು -ಅಕ್ಕಿ, ಬೇಳೆ ತರಕಾರಿ ಎಲ್ಲ ಕಡೇ ಧಾರಾಳವಾಗಿ ಸಿಗುತ್ತೆ
• Do you speak English? ಅಂತ ಯಾರು ಕೇಳಲ್ಲ,
• ನಾನು ಸಸ್ಯಾಹಾರಿ ಅಂದರೆ ಯಾರಿಗೋ ಶಾಕ್ ಆಗೋಲ್ಲ,
• ಬೇಕಾದಷ್ಟು ದೇವಸ್ಥಾನಗಳು ಇದೆ

ಈ ದೇಶದ ಪ್ರಧಾನ ಮಂತ್ರಿ ಆಗಿದ್ದ Sir Herald McMillan ೧೯೬೦ರಲ್ಲಿ ಇಲ್ಲಿ ಜನಗಳಿಗೆ ಹೇಳಿದಂತೆ  “You never had it so good” ಇದು ನಿಮಗೆ ಅನ್ವಯಿಸುತ್ತೆ ಈಗ.

2ಮಹಾಯುದ್ದ ಮುಗಿದು ಕೇವಲ ಇಪ್ಪತ್ತು ವರ್ಷ ಆಗಿತ್ತು ನಾನು ಬಂದಾಗ. ಲಂಡನ್ ಕೆಲವು ಭಾಗದಲ್ಲಿ ಇನ್ನು ಮನೆಗಳು ಪಾಳು ಬಿದ್ದದನ್ನು ನೋಡಿದ್ದೇನೆ. ನಮ್ಮ ಮೊದಲನೇ ಮನೆ, ಅಂದರೆ ಫ್ಲಾಟ್ ಇಲ್ಫ಼ರ್ಡ್ ನಲ್ಲಿ ಗ್ಯಾಂಟ್ಸ್ ಹಿಲ್ ಹತ್ತಿರ. ವಾರಕ್ಕೆ ೭ ಪೌಂಡ್ ಬಾಡಿಗೆ. ಅಂದ ಹಾಗೆ, Estate agent ನಿಮ್ಮ ಬಣ್ಣ ನೋಡಿ ಅಥವಾ ಐರಿಶ್ ಜನಗಳಿಗೆ ಮನೆ ಇಲ್ಲ ಅಂತ ಸುಳ್ಳು ಹೇಳಿದ್ರೆ ಏನು ಆಶ್ಚರ್ಯ ಇರಲಿಲ್ಲ, (not illegal). ಕೆಲವು ಕೆಲಸಗಳನ್ನ ಬಿಳಿ ಜನಗಳಿಗೆ ಮಾತ್ರ ಇತ್ತು. ಬ್ಯಾಂಕ್ ನಲ್ಲಿ ಮತ್ತು ಸಿಟಿಯಲ್ಲಿ, ಈಗ ನೋಡಿ, ನಮ್ಮಂಥವರು ಇಲ್ಲದೇ ಇರುವ ಜಾಗವೇ ಇಲ್ಲ.

ಏನು ಹೇಳಬಲ್ಲೆ ಅಂದರೆ, ಈಗಿನ ಇಂಗ್ಲೆಂಡ್ ೧೯೬೫ ಇಂಗ್ಲೆಂಡ್ ಬೇರೆ ಬೇರೆ ದೇಶಗಳು, ಅಷ್ಟೊಂದು ಬದಲಾವಣೆ ಆಗಿದೆ.

೧೯೬೫/೬೬ ರ ಸಂಸಾರದ ಬಗ್ಗೆ ಕೆಲವು ಮಾತನ್ನು ಹೇಳಬಹುದು. ನೋಡಿ ಅಗ ನನಗೆ ಸುಮಾರು ವರ್ಷಕ್ಕೆ £೧೪೦೦(ತಿಂಗಳಿಗಲ್ಲ!) Average National earnings ಆವಾಗ ಇದ್ದಕ್ಕಿಂತ ಕಡಿಮೆ ಇತ್ತು. ನಮ್ಮ ಸ್ನೇಹಿತರು ಇಬ್ಬರು ವೈದ್ಯರು ಆವಾಗ ತಾನೆ ಇಲ್ಲಿಗೆ ಬಂದಿದ್ದರು. ಪಾಪ ಅವರು ವಾರಕ್ಕೆ ೯೦ ಗಂಟೆ ಕೆಲಸ ಮಾಡಿ ಕೇವಲ £೧೦೦೦ ಸಂಬಳ !! ಆದರೆ ವಾರಕ್ಕೆ £೫ ನಮ್ಮ ದಿನಸಿಗೆ ಸಾಕಾಗಿತ್ತು. ಆವಾಗ decimal currency ಬಂದಿರಲ್ಲಿಲ್ಲ, ಹಳೆ ದುಡ್ಡು ೧೨ ಪೆನ್ಸ್ ಒಂದು ಶಿಲ್ಲಿಂಗ್, ೨೦ ಶಿಲ್ಲಿಂಗ್ ಒಂದು ಪೌಂಡ್. ಲಂಡನ್ ಟ್ಯೂಬ್ ನಲ್ಲಿ ೪ ಪೆನ್ನಿಗೆ ಎಲ್ಲಿ ಬೇಕಾದರು ಸುತ್ತಬಹುದಾಗಿತ್ತು

೧೯೭೦ ರ ಹಿಂದೆ ಹುಟ್ಟಿದ್ರೆ ಭಾರತದಲ್ಲಿ Afghan Snow ಅಂತ ಕ್ರೀಂ ನಿಮಗೆ ಗೊತ್ತಿರಬೇಕು. ಇದು ಹೆಂಗಸರ
( ಕೆಲವು ಗಂಡಸರು ಸಹ ) ಬ್ಯೂಟಿ ಏಡ್. ಅಂಗಡಿಲಿ ಸ್ನೋ ಅಂತಿದ್ದರು ೧೯೬೬ ಜೂನ್ ನಲ್ಲಿ ನನ್ನ ಪತ್ನಿ ಸೀತು ಇಲ್ಲಿಗೆ ಬಂದಳು. ಅವಳನ್ನು ಇಂಪ್ರೆಸ್ ಮಾಡುವುದಕ್ಕೆ ನಾನು ಎರಡು ದಿನದ ಹಿಂದೆ Timothy Whites (ಈಗ Boots) ಹೋಗಿ ಸ್ನೋ ಕೇಳಿದೆ. ಪಾಪ ಆಕೆ ಈ ಹುಡುಗನಿಗೆ (ಹುಡುಗನೆ, ನನಗೇನು ಅಷ್ಟೇನು ವಯಸ್ಸು ಆಗಿರಲ್ಲಿಲ್ಲ!) ಏನೂ ಗೊತ್ತಿಲ್ಲ ಅಂತ ತಿಳಿದು, “I am sorry, you can’t buy snow, to see snow you must wait until winter” ಅಂದಳು. ನಾನು ಬಿಡಲಿಲ್ಲ, ಇಲ್ಲ ನೋಡಿ ಇದು ಸಣ್ಣ ಬಾಟಲ್ನಲ್ಲಿ ಬರತ್ತೆ, ಹೆಂಗಸರು ಇದನ್ನು ಮುಖಕ್ಕೆ ಹಚ್ಚುತ್ತಾರೆ ಅಂದೆ. ಅನಂತರ ಅವಳಿಗೆ ಗೊತ್ತಾಯಿತು “Foundation Cream” ಬೇಕು ಅಂತ. ಇದೆ ರೀತಿ ಅನೇಕ ಪ್ರಸಂಗಗಳು ಆಗಿದೆ. ಅಂಗಡಿಲಿ Match box ಕೇಳಿದರೆ ಅವನಿಗೆ ಅರ್ಥ ಆಗಲ್ಲಿಲ್ಲ, ಇದು Box of Matches, ಬೆಂಕಿಪೊಟ್ಟಣ.

ಆ ಸಮಯದಲ್ಲಿ ರಾಜಕೀಯ ಪರಿಸ್ಥಿತಿ ನಮಗೆ ಅಷ್ಟೇನು ಸರಿ ಇರಲಿಲ್ಲ, ಕೆಲವು racist ಪಂಗಡಗಳು ಇದ್ದವು (National Front), ಲಂಡನ್ ನಗರದ ಕೆಲವು ಕಡೆ ಬಹಳ ಹಾವಳಿ ಇತ್ತು. ಈಗ East ಲಂಡನ್ ಬಹಳ “upmarket” ಆಗ ಆ ಕಡೆ ಹೋಗುವುದಕ್ಕೆ ಹೆದರಿಕೆ ಆಗ್ತಾ ಇದ್ದ ಕಾಲ.

೧೯೬೮ ನಲ್ಲಿ Enoch Powell ಅನ್ನುವ ಬಹಳ ಪ್ರಸಿದ್ಧ Conservative MP “Rivers of Blood” ಅನ್ನುವ ಭಾಷಣ ಬಹಳ ಜನಕ್ಕೆ, ರಾಜಕಾರಣಿಗಳಿಗೂ ತುಂಬಾ ತಲೆನೋವು ತಂದಿತ್ತು. ಆತನ ಪ್ರಕಾರ, ಸರ್ಕಾರ immigration ನಿಲ್ಲಿಸದೆ ಹೋದರೆ ಈ ದೇಶದಲ್ಲಿ ಬೇರೆ ಪಂಗಡದಲ್ಲಿ ಹೋರಾಟ ಆಗುತ್ತೆ ಮತ್ತು ರಕ್ತಪಾತವಾಗುತ್ತೆ . ಈತ ಬಹಳ ದೊಡ್ಡ ವಿದ್ವಾಂಸ, ೨೬ ನೆಯ ವಯಸ್ಸಿಗೆ ಗ್ರೀಕ್ ಮತ್ತು ಲ್ಯಾಟಿನ್ ಪ್ರೊಫೆಸರ್, ಯುದ್ದದ ಸಮಯದಲ್ಲಿ ೨೯ ನೆ ವರ್ಷಕ್ಕೆ ಬ್ರಿಗೇಡಿಯರ್, ಇಂತಹ ಪ್ರಚಂಡ ಬುದ್ದಿವಂತ. ಆದರೆ ಇವರ ಭಾಷಣ ಪ್ರಧಾನ ಮಂತ್ರಿ ಟೆಡ್ ಹೀತ್ ಅವರಿಗೆ ಹಿಡಸಲಿಲ್ಲ. Enoch Powell ಅವರನ್ನು ಮಂತ್ರಿ ಕೆಲಸದಿಂದ ತೆಗೆದು ಹಾಕಿದ್ದರು. ಸುಧಾರಣೆಗಳು ಇಲ್ಲಿಂದ ಶುರು ಆಯಿತು ಅಂದರೆ ತಪ್ಪಿಲ್ಲ. ಕೆಲವು ವರ್ಷದಲ್ಲಿ Race Relations Act ಜಾರಿಗೆ ಬಂತು ಬಹಳ ರಿಫ಼ಾರ್ಮ್ಸ್ ಆಯಿತು.

೧೯೭೦ ರಿಂದ ಇನ್ನೂ ನಮ್ಮ ಕನ್ನಡದವರು ಬರುವುದಕ್ಕೆ ಶುರು ಆಯಿತು. ೯೦% ವೈದ್ಯರು. ೧೯೮೩ ರಲ್ಲಿ ಕನ್ನಡ ಬಳಗ ಶುರು ಆಯಿತು, ಅವಾಗ ಕೆಲವರ ಪರಿಚಯ. ಆದರೆ ೧೯೮೮ ರಲ್ಲಿ ಡಾ. ಭಾನುಮತಿ ಅವರ ನೇತೃತ್ವದಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಸಮಯದಲ್ಲಿ ಇಲ್ಲಿನ ಕನ್ನಡಿಗರು ಒಂದು ಮನೆತನದವರಾದರು ಎಂದರೆ ತಪ್ಪಲಾಗದು ಈ ೪೦/೫೦ ವರ್ಷದಲ್ಲಿ ಇಲ್ಲಿಯ ಜನಗಳ “perception” ತುಂಬಾ ಬದಲಾಯಿಸಿದೆ. ೧೦೦ ವರ್ಷದ ಹಿಂದೆ ಈ ದೇಶ ಪ್ರಪಂಚದ ಮುಕ್ಕಾಲು ಭಾಗವನ್ನು ಆಳಿದ್ದರೂ ಶೇಕಡಾ ೯೦ ಜನರಿಗೆ ಇದರಿಂದ ಏನು ಸುಖ ಇರಲ್ಲಿಲ್ಲ. ಇಲ್ಲಿ working class ಜನಗಳು ಬಹಳ ಕಷ್ಟ ಪಟ್ಟಿದ್ದಾರೆ. ಈಗ Equality and Dignity of labour ಈ ದೇಶದಲ್ಲಿ ಇರುವ ಹಾಗೆ ಅನೇಕ ಕಡೆ ಇಲ್ಲ. ಒಂದು ಹೆಮ್ಮೆಯ ವಿಚಾರ, ಭಾರತದಿಂದ ಬಂದು ಇಲ್ಲಿ ನೆಲಸಿದವರು ಬಹಳ ಒಳ್ಳೆ ಹೆಸರು ತಂದಿದ್ದಾರೆ. ನೋಡಿ, ನಮ್ಮ ಮಕ್ಕಳು ಶಾಲೆಯಲ್ಲಿ ಎಷ್ಟು ಮುಂದೆ ಇದ್ದಾರೆ, ನಮ್ಮವರು ಬಹಳ ಜನ ಉನ್ನತ  ಸ್ಥಾನದಲ್ಲಿ ಕೆಲಸ ಮಾಡಿ ಹೆಸರು ಗಳಿಸಿದ್ದಾರೆ.

10 thoughts on “೫೦ ವರ್ಷದ ಇಲ್ಲಿಯ ಜೀವನ – ರಾಮಮೂರ್ತಿ ಬೇಸಿಂಗ್ಸ್ಟೊಕ್

  1. ವಿಭಿನ್ನವಾದ ವಿಷಯವಸ್ತು ಇರುವ ಬರಹ. ತುಂಬ ಚೆನ್ನಾಗಿದೆ. ಕೃಷ್ಣೇಗೌಡರ ಅಭಿಪ್ರಾಯ ಸಹ ಹೊಸ ಬೆಳವಣಿಗೆ.
    ರೇಸಿಸಂ ಸಹ ಅಸಹಿಷ್ಣುತೆಯ ಒಂದು ಮುಖವೇ. ಭಾರತೀಯರಾದ ನಮಗೆ ಎರಡು ತೊಡಕುಗಳಿವೆ. ಒಂದು, ಬಿಳಿಯರ ತಾವು ಸರಿ ಎಂಬ ಮೇಲರಿಮೆ, ಉದ್ಧಟತನ ಧೋರಣೆಗಳ ಜತೆಗೆ ಸೆಣೆಸುವುದು, ಎರಡನೆಯದು ಅವರೇ ಬಿತ್ತಿದ ಕೀಳರಿಮೆಯನ್ನು ಅಂತರಾಳದಲ್ಲಿ ಇಟ್ಟುಕೊಂಡು, ನಮ್ಮತನದ ಅರಿವಿರದೆ, ಗರ್ವವಿರದೆ ಮಿಡುಕುವುದು. ಇದರ ಮೇಲೆ ಬದುಕಿಗೆಂದು ಕಟ್ಟಿಕೊಂಡ ನಮ್ಮ ಅವಶ್ಯಕತೆಗಳ ಕೋಟೆಗಳಲ್ಲಿ ಬಂದಿಯಾಗಿ ಬಿಡಲಾಗದ, ಹಿಡಿದುಕೊಳ್ಳಲಾಗದ ದ್ವಂದ್ವದಲ್ಲಿ ಚಡಪಡಿಸುವುದು. ತಲೆಮಾರುಗಳ ಈ ಪಯಣ ಬದಲಾವಣೆಗಳನ್ನು ಎಲ್ಲೋ ಯಾವಾಗಲೋ ತರುತ್ತದೆ. ಸಾಗಿದೆ ಸಂಗ್ರಾಮ!!!

    Like

  2. ಪ್ರೀತಿಯ ರಾಮಮೂರ್ತಿ ಅವರಿಗೆ,ನಮಸ್ಕಾರ.
    ತುಂಬಾ ಚೇತೋಹಾರಿಯಾದ ಬರವಣಿಗೆಯಲ್ಲಿ ಅರ್ಧ ಶತಮಾನ ಹಿಂದಕ್ಕೆ ಒಂದು ಚಂದ ಪ್ರವಾಸ ಕರೆದೊಯ್ದೊದ್ದೀರಿ.ಅನುಭವಿಸುವಾಗ ಅದೆಷ್ಟು ಕಷ್ಟವಾದರೂ ನೆನಪಿಸಿಕೊಳ್ಳುವಾಗ ಸವಿಸವಿಯಾಗಿ ಬರುವ ಜೀವನಾನುಭವಗಳು ಒಬ್ಬೊಬ್ಬರಿಗೂ ಅನನ್ಯ. ನಿಮ್ಮ ಬರವಣಿಗೆಗೆ,ಅನುಭವಗಳಿಗೆ ಅದರದೇ ಒಂದು ರುಚಿಯಿದೆ.ದಯವಿಟ್ಟು ಬರೆಯುತ್ತಿರಿ.ನಮಗೆ ಓದಿನ ಸುಖ ನೀಡುತ್ತಿರಿ.

    ಅಂದ ಹಾಗೆ ನಿಮ್ಮ ವಿವಾಹದ ಸುವರ್ಣ ಮಹೋತ್ಸವವೂ ಆತ್ಮೀಯವಾಗಿ ನಡೆದಿದೆ. ನಮ್ಮ ಪ್ರಿತಿಯ ಶುಭಾಶಯಗಳು.

    Like

  3. ಪ್ರೀತಿಯ ರಾಮಮೂರ್ತಿ ಅವರಿಗೆ,ನಮಸ್ಕಾರ.
    ತುಂಬಾ ಚೇತೋಹಾರಿಯಾದ ಬರವಣಿಗೆಯಲ್ಲಿ ಅರ್ಧ ಶತಮಾನ ಹಿಂದಕ್ಕೆ ಒಂದು ಚಂದ ಪ್ರವಾಸ ಕರೆದೊಯ್ದೊದ್ದೀರಿ.ಅನುಭವಿಸುವಾಗ ಅದೆಷ್ಟು ಕಷ್ಟವಾದರೂ ನೆನಪಿಸಿಕೊಳ್ಳುವಾಗ ಸವಿಸವಿಯಾಗಿ ಬರುವ ಜೀವನಾನುಭವಗಳು ಒಬ್ಬೊಬ್ಬರಿಗೂ ಅನನ್ಯ. ನಿಮ್ಮ ಬರವಣಿಗೆಗೆ,ಅನುಭವಗಳಿಗೆ ಅದರದೇ ಒಂದು ರುಚಿಯಿದೆ.ದಯವಿಟ್ಟು ಬರೆಯುತ್ತಿರಿ.ನಮಗೆ ಓದಿನ ಸುಖ ನೀಡುತ್ತಿರಿ.

    ಅಂದ ಹಾಗೆ ನಿಮ್ಮ ವಿವಾಹದ ಸುವರ್ಣ ಮಹೋತ್ಸವವೂ ಆತ್ಮೀಯವಾಗಿ ನಡೆದಿದೆ. ನಮ್ಮ ಪ್ರೀತಿಯ ಶುಭಾಶಯಗಳು.

    Liked by 1 person

    • ರಾಮಮೂರ್ತಿ ಅವರೆ, ನಮ್ಮ ಕರ್ನಾಟಕದ ಖ್ಯಾತ ವಾಗ್ಮಿ ಪ್ರೊಫ಼ೆಸರ್ ಕೃಷ್ಣೇಗೌಡ ಅವರು ನಮ್ಮ ಅನಿವಾಸಿಯ ಲೇಖನವನ್ನು ಓದಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಅನಿವಾಸಿ ಜಾಲ-ಜಗುಲಿಗೆ ಒಳ್ಳೆಯ ಪ್ರೋತ್ಸಾಹದ ಮುನ್ನಡೆ.
      ಉಮಾ ವೆಂಕಟೇಶ್

      Liked by 1 person

  4. ಇಂದಿಗೂ ಅಂದಿಗೂ ಹೋಲಿಸಿ ಬರೆದಿರುವ ಲೇಖನ ಓದಿ ಖುಷಿ ಆಯಿತು. ನಾವು ಅಂದು ಹುಟ್ಟಿ, ಇಂದು ನಿವೃತ್ತರಾದವರಷ್ಟು ಲಕ್ಕಿ ಅಲ್ಲ ಒಂದರ್ಥದಲ್ಲಿ; ಆದರೆ ಬಂದಾಗ ನಿಮ್ಮಷ್ಟು ನಾವು ಕಷ್ಟ ಪಟ್ಟಿರಲಿಕ್ಕಿಲ್ಲ. ರೇಸಿಸಂ ಮೊದಲಿನಷ್ಟು ಮೇಲ್ಪದರಲ್ಲಿ ಕಾಣ ಬರದಿದ್ದರೂ ಒಳ ಪ್ರವಾಹ ಇಂದಿಗೂ ಕಡಿಮೆಯಿಲ್ಲ. ಭಾರತವೂ ಈಗ ತುಂಬಾ ಬದಲಾಗಿದೆ, ಬದಲಾಗುವ ವೇಗವೂ ಅತಿಯಾಗಿದೆ. ಯಾವುದೂ ಇಂದಿನ ಮಾಹಿತಿ ಯುಗದಲ್ಲಿ ನಿಂತ ನೀರಾಗಿರುವುದಿಲ್ಲ ಎಲ್ಲೂ.

    Liked by 1 person

    • ರಾಮಶರಣ್ ನಿಮ್ಮ ಮಾತುಗಳು ನೂರಕ್ಕೆ ನೂರು ಸತ್ಯ. ಬ್ರಿಟಿಷರು ಹೊರ ನೋಟಕ್ಕೆ ಒಳ್ಲೆಯ ಲೇಪನ ಹಚ್ಚಿ, ಸಕ್ಕರೆ ಮಾತಾಡುವುದರಲ್ಲಿ ನಿಸ್ಸೀಮರು. ಅವರದೇ ಭಾಷೆಯಲ್ಲಿ ಹೇಳುವುದಾದರೆ ಇಲ್ಲಿ “Institutional racism” ಇನ್ನೂ ಸಮೃದ್ಧವಾಗಿದೆ. ಜೀವನ ಎಲ್ಲಾ ರಂಗಗಳಲ್ಲೂ ರಾರಾಜಿಸುತ್ತಿದೆ ಎನ್ನಬಹುದು.
      ಉಮಾ ವೆಂಕಟೇಶ್

      Like

  5. ರಾಮಮೂರ್ತಿಯವರ ಬರಹವನ್ನು ಓದಿ ಇತಿಹಾಸದ ಹಾದಿಯಲ್ಲಿ ನಡೆದು ಬಂದಂತಾಯಿತು. ನಿಮ್ಮ ಅನುಭವ ಮತ್ತು ಅದನು ಹಂಚಿಕೊಳ್ಳುವ ರೀತಿ ತುಂಬ ಇಷ್ಟವಾಯಿತು. ನಿಮ್ಮಿಂದ ಇಂಥಹುದೇ ಇನ್ನಷ್ಟು ಲೇಖನಗಳು ಮೂಡಿಬರಲಿ.- ಕೇಶವ

    Like

  6. I think I can say I experienced some similar experiences in Australia when I went there in early 2001. There are still divisions based on colour, race. And, for every ‘Indian’ need such as groceries and veges, we had to travel to Sydney. People said vegetarian food included fish and chicken. My Aussie friends were amazed to eat my vegetarian cooking. If I wore any jewellery to university they would think I was going to a party. Sadly, deep racism still is openly practised in cities like Brisbane and Perth! That way, UK society has progressed a lot.

    Liked by 2 people

  7. ರಾಮಮೂರ್ತಿ ಅವರೆ, ೨೦ ವರ್ಷಗಳ ಹಿಂದೆ ಇದ್ದಂತೆ ಬ್ರಿಟನ್ ಈಗಿಲ್ಲ. ಕಾರ್ಡಿಫ಼ಿನಂತಹ ಸಣ್ಣ ನಗರವೇ ಬಹಳಷ್ಟು ಬದಲಾಯಿಸಿದೆ ಎಂದು ನನ್ನ ಅಭಿಪ್ರಾಯ. ಇನ್ನು ನಿಮ್ಮ ಅರ್ಧ ಶತಮಾನದ ಹಿಂದಿನ ಬ್ರಿಟನ್ನಿನ ಬಗ್ಗೆ ಓದಿದಾಗ, ನಾವೆಲ್ಲೋ ನಮ್ಮ ಸೌರವ್ಯೂಹದ ಮತ್ತೊಂದು ಗ್ರಹದಲ್ಲಿದ್ದಂತೆ ಅನುಭವವಾಯಿತು. ಸವಾಯ್ ಹೋಟೇಲಿನ ಜನಕ್ಕೆ ಈಗ ಸಸ್ಯಾಹಾರಿಗಳು ಭೇಟಿಕೊಡುವುದು ಅಪರೂಪವಿಲ್ಲ. ಸೀತು ಕೇಳಿದ ಆಲೂಗೆಡ್ಡೆ ಚಿಪ್ಸ್ ಕೋರಿಕೆ ಮಾತ್ರಾ ಸ್ವಲ್ಪ ಅವರಿಗೆ ತಬ್ಬಿಬ್ಬಾಗಿರಬೇಕು. ನೀವು ೬೦ರ ದಶಕದಲ್ಲಿ ಬೂಟ್ಸ್ ಅಂಗಡಿಯಲ್ಲಿ “ಸ್ನೋ“ ಕೊಡಿ ಎಂದು ಕೇಳಿದಂತೆ. ನಿಮ್ಮದೇನು ತಪ್ಪಿಲ್ಲ. ನಮ್ಮಮ್ಮನೂ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದ ಕ್ರೀಮನ್ನು ಸ್ನೋ ಎಂದೇ ಕರೆಯುತ್ತಿದ್ದರು. ಆಫ಼್ಘನ್ ಸ್ನೋ ನೋಡುತ್ತಲೇ ಬೆಳೆದವರು ನಾವೂ ಕೂಡಾ! ನಿಮ್ಮ ಅನುಭವದ ಭಂಢಾರ ಬಹಳ ಶ್ರೀಮಂತವಾಗಿದೆ. ನಮ್ಮೊಡನೆ ಆಗಾಗ ಹಂಚಿಕೊಳ್ಳಿ. ನಮ್ಮ ಅನಿವಾಸಿ ತರುಣರಿಗೆ ಇದನ್ನೆಲ್ಲಾ ಓದಿ, ಸ್ವಲ್ಪ ಅವರ ಅನುಭವವೂ ಶ್ರೀಮಂತವಾಗಲಿ.
    ಉಮಾ ವೆಂಕಟೇಶ್

    Liked by 1 person

  8. ರಾಮಮೂರ್ತಿಯವರೆ,
    ನಿಮ್ಮ ಅನುಭವದ ವರದಿ ಸ್ವಾರಸ್ಯಕರವಾಗಿದೆ. ನಾವು ಇತ್ತೀಚೆಗೆ ೧೫ ವರ್ಷಗಳ ಹಿಂದಷ್ಟೇ ಬಂದವರು. ಹಾಗಾಗಿ ನಿಮ್ಮ ಆಗಿನ ಅನುಭವಗಳು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ನಿಮ್ಮ ನೆನಪಿನಲ್ಲಿ ಇಂತಹ ನೂರು ಅನುಭವಗಳಿರಬಹುದು. ಅವನ್ನೆಲ್ಲ ಓದಲು ನಮಗೆ ಬಹಳ ಕುತೂಹಲವಿದೆ. ಅವನ್ನೆಲ್ಲ ಲೇಖನಗಳ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ನೀವು ಬಂದ ಕಾರಣ, ಆಗಿನ ಭಾರತ, ಇಲ್ಲಿ ಮಾಡಿಕೊಂಡ ಹೊಂದಾಣಿಕೆಗಳನ್ನೆಲ್ಲ ಬರೆದರೆ ಒಂದು ಪುಸ್ತಕವನ್ನೇ ಬರೆಯಬಹುದೇನೋ! ಕನಿಷ್ಠ ಪಕ್ಷ ಬರಹಗಳ ಒಂದು ಸರಣಿಯಲ್ಲಾದರೂ, ನಾವು ಅನಿವಾಸಿಯ ಮೂಲಕ ಓದುವ ಅವಕಾಶ ಮಾಡಿಕೊಡಿ.

    Liked by 2 people

Leave a comment

This site uses Akismet to reduce spam. Learn how your comment data is processed.