ಸಹಿಷ್ಣುತೆ ಮತ್ತು ಅಸಹಿಷ್ಣುತೆ – ಬರಹಗಳ ಗೊಂಚಲು

five minutes

ಇತ್ತೀಚಿನ ದಿನಗಳಲ್ಲಿ ಭಾರತೀಯ ಮೀಡಿಯಾದಲ್ಲಿ, ಫೇಸ್ಭುಕ್ಕು, ವಾಟ್ಸಾಪುಗಳ ತುಂಬ ಅಸಹಿಷ್ಣುತೆಯ ಹಾವಳಿ, ಯಾರಲ್ಲಿ ಸಹನೆಯೆದೆ, ಯಾರಿಗೆ ಸಹನೆಯಿಲ್ಲ ಎಂಬ ಬಿಸಿ ಚರ್ಚೆ.

ಭಾರತದ ಗಣತಂತ್ರ ದಿನಾಚರಣೆಯ ಸಮಯದಲ್ಲಿ ಈ ವಿಷಯದ ಚರ್ಚೆ ಬಹಳ ಮುಖ್ಯವಾಗುತ್ತದೆ. ನೂರಾರು ಭಾಷೆ, ಜಾತಿ, ಸಂಸ್ಕೃತಿಗಳ ಆಗರವಾಗಿರುವ, ಹಿಮದಿಂದ ಹಿಡಿದು ಮರಳುಭೂಮಿಯವರೆಗೆ ಭೂಮಿಯನ್ನು ಹೊಂದಿರುವ ಭಾರತ ರಾಜಕೀಯವಾಗಿ ಒಂದು ದೇಶವಾಗಿ ಅರವತ್ತು ವರ್ಷಗಳ ಮೇಲಾದರೂ ಇನ್ನೂ ಅಖಂಡವಾಗಿ ಉಳಿದಿದೆ. ಆದರೆ ಈ ಅಖಂಡತೆಯನ್ನು ಉಳಿಸಿಕೊಳ್ಳುವ, ಧಾರ್ಮಿಕತೆಯನ್ನು ರಾಜಕೀಯದಿಂದ ಬೇರ್ಪಡಿಸುವ, ಹಿಂದುಳಿದವರನ್ನು ಮುಖ್ಯವಾಹಿನಿಯಲ್ಲಿ ಒಂದು ಮಾಡುವ ಕಾರ್ಯ ದಶಕಗಳಲ್ಲಿ ಮುಗಿಯುವಂಥದಲ್ಲ. ಇದಕ್ಕೆ ರಾಜಕೀಯವಾಗಿ ಸಾಮಾಜಿಕವಾಗಿ ಜನರಲ್ಲಿ ತುಂಬ ಸಹನೆ ಬೇಕಾಗುತ್ತದೆ. ಆದರೆ ಜಾಗತಿಕ ವಿದ್ಯಮಾನಗಳು ಭಾರತದ ಮೇಲೆ ಅಗಾಧ ಪರಿಣಾಮ ಬೀರುತ್ತಿವೆ.

ಈ ಬಿಸಿವಿಷಯದ ಬಗ್ಗೆ `ಅನಿವಾಸಿ` ಜಾಲದಲ್ಲಿ ನಿಯಮಿತವಾಗಿ ಬರೆಯುವವರಿಗೆ `ಸಹಿಷ್ಣುತೆ ಮತ್ತು ಅಸಹಿಷ್ಣುತೆ`ಯ ಬಗ್ಗೆ ಬರೆಯಲು ಕೋರಲಾಯಿತು. ಚರ್ಚೆಗೆ ಬಂದ ಬರಹಗಳನ್ನು ಯಾವುದೇ ಬದಲಾವಣೆ ಇಲ್ಲದೇ ಇಲ್ಲಿ ಸಾದರಪಡಿಲಾಗಿದೆ.

೧. ಯಾರಿಗೆ ಬೇಕು ಈ ಮೂಟೆ? – ವಿನತೆ ಶರ್ಮ (ಚಿಂತನೆ)
೨. ಹೂವನ್ನಿರಿಸಿದೆನಯ್ಯ – ಶ್ರೀವತ್ಸ ದೇಸಾಯಿ (ಕವಿತೆ)
೩. `ಟೋಲೋ- ಇಂಟೋಲೋ` – ರಾಮಶರಣ (ಹರಟೆ)
೪. ಸರ್ವರೂ ಸುಖವಾಗಿರಲಿ, ಸರ್ವರಿಗೂ ಶಾಂತಿ ಸಿಗಲಿ – ಉಮಾ ವೆಂಕಟೇಶ್ (ಚಿಂತನೆ)
೫. ಭಕ್ತ ವಿಜಯ (೩-೦)  – ಗಿರಿಧರ ಸುಂದರರಾಜ ಹಂಪಾಪುರ (ಕವಿತೆ)
೬. ಸಹನಶೀಲತೆಗೆ ಉತ್ತರವೆಲ್ಲಿ? – ಅರವಿಂದ ಕುಲಕರ್ಣಿ (ಚಿಂತನೆ)
೭. `ಈಶ್ವರ ಅಲ್ಲಾ` – ಕೇಶವ ಕುಲಕರ್ಣಿ (ಪ್ರಾರ್ಥನಾ ಗೀತೆ)
೮. `ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನಗಳ ಈ ಬದುಕಿನಲಿ` – ಜಿ. ಎಸ್. ಎಸ್. ಪ್ರಸಾದ್ (ಚಿಂತನೆ)
೯. `Intolerance and fractals – a never ending saga of human suffering` – ಬಿ ಎಸ್ ಸತ್ಯಪ್ರಕಾಶ್  (ಚಿಂತನೆ)

————-

ಯಾರಿಗೆ ಬೇಕು ಈ ಮೂಟೆ? – ವಿನತೆ ಶರ್ಮ

ಇತ್ತೀಚಿನ ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ ಒಂದು ವೀಡಿಯೊಚಿತ್ರ. ಕರ್ನಾಟಕದ ಹಳ್ಳಿಯೊಂದರ ಜನರಿಗೆ ತೊಂದರೆ ಕೊಡುತ್ತಿದ್ದ ಕರಡಿಯೊಂದನ್ನ, ಅದು ಮತ್ತೆ ತನ್ನ ಒಪ್ಪತ್ತಿನ ಊಟ ಕದಿಯಲು ಬಂದಾಗ, ಅಟ್ಟಿಸಿಕೊಂಡು ಹೋಗಿ ಮನಬಂದಂತೆ ಹೊಡೆದು ಹಿಂಸಿಸಿ ಭಾಗಶಃ ಸಾಯುವಂತೆ ಗಾಯಗೊಳಿಸಿದ್ದರು. ಹಳ್ಳಿಗರಿಗೆ ಆ ಪಾಟಿ ಕೋಪ, ಆಕ್ರೋಶ, ಹಿಂಸಾ ಮನೋಭಾವ ಎಲ್ಲಿಂದ ಬಂತು? ತಮ್ಮೆಲ್ಲಾ ಭಾವನೆಗಳನ್ನು ಬಾಟಲಲ್ಲಿ ಅಡಗಿಸಿ ಮುಚ್ಚಳ ಬಡಿದಿದ್ದು ಆ ಎಲ್ಲಾ ತಾಪ, ಅದುಮಿಟ್ಟಿದ್ದ ತಲ್ಲಣ, ದುಗುಡ, ಆವೇಶ ಬೇಗುದಿಗಳನ್ನೂ ಒಮ್ಮೆಗೇ ಹರಿಯಬಿಟ್ಟರೇನೋ ಎನಿಸಿತು. ಇದೇ ರೀತಿಯ ತಲ್ಲಣ, ದುಗುಡ, ಅರಿಯಲಾರದ ದುಃಖ, ಏನೋ ಸಂಕಟ ನಮ್ಮನ್ನೆಲ್ಲ ಆವರಿಸಿಕೊಂಡುಬಿಟ್ಟಿದೆ! ಪ್ರಾಣಿಪಕ್ಷಿಪರಿಸರ, ಮಕ್ಕಳು-ಹೆಂಗಸರು, ಕೆಳಅಂತಸ್ತು ಜಾತಿವರ್ಗದವರು, ತಮಗಿಷ್ಟವಿಲ್ಲದ ಧರ್ಮದವರು, ತಮ್ಮ ಧರ್ಮದೊಳಗೇ ಇರುವ ಬೇರೆ ಪಂಗಡದವರು, ಕಪ್ಪುಜನಾಂಗ, ಬೇಕಿಲ್ಲದ ಭಾಷೆ, ಪೆಟ್ರೋಲಿಯಂ ಹೆಚ್ಚಿರುವ ದೇಶವ ಮಣಿಸಿ ಅವರ ಸಂಪನ್ಮೂಲಗಳನ್ನು ಆಕ್ರಮಿಸುವ ಧಾವಂತ, ಹಿಂದೆಂದೋ ಮಾಡಿದ ಅವರ ತಪ್ಪಿನ ಫಲ ಈಗ ಅಮಾಯಕ ಮೇಲೆ ಸೇಡಿನ ಬಾಂಬ್, … ಎಲ್ಲರ ಮೇಲೂ ಎಲ್ಲರಿಗೂ ಅಸಹನೆ. ಎಲ್ಲರಿಗೂ ಬೇಕಿದೆ ಮೇಲುಗೈ, ಹಿಡಿತ, ಆಳ್ವಿಕೆ, ಗೆದ್ದೆನೆಂಬ ಹುಸಿ ನಂಬಿಕೆ, ಕ್ಷಣಿಕ ವಿಜಯಕೇಕೆ. ನಾ ಹೊರಲಾರೆ ಈ ಮೂಟೆಯ. ನನಗದು ಬೇಡ. ಮೂಟೆಯಲ್ಲಿರುವ ದ್ವೇಷ, ಅಸಹಿಷ್ಣುತೆ, ಮಾರಕ ನಂಬಿಕೆ/ನಡವಳಿಕೆಗಳನ್ನ ಬಿಚ್ಚಿ ಮಣ್ಣಲ್ಲಿ ಹರಡಿ ಬೆರೆಸಿ ಅಲ್ಲೊಂದು ಪರ್ಮಕಲ್ಚರ್ ತೋಟ ಮಾಡಿ ಆ ಫ಼ುಕುಒಕಾನಂತೆ ಬದುಕುವ ಆಸೆ.

——————–

ಹೂವನ್ನಿರಿಸಿದೆನಯ್ಯ – ಶ್ರೀವತ್ಸ ದೇಸಾಯಿ

೧೯೪೭ರ ಸಮಯದಲ್ಲಿ ಹುಟ್ಟಿದ ನಾನು
ಗಾಂಧೀಯ ಗರಡಿಯಲಿ ಪಳಗಿದವ
ಅಜ್ಜನ ಮನೆಯಲ್ಲಿ ಕೈತುತ್ತಿಗೆ ಅಹಿಂಸೆಯ ಮೊಸರು!
ಅಂದು – ಸಹಿಷ್ಣುತೆಯ ಮೂರ್ತಿ ತಾತನೂ ಹುತಾತ್ಮ!
‘Show the other cheek’ ಎನ್ನುವ
ಸಹನೆಯ ಮತವನ್ನೂ ಆಗಲೇ ಮಣ್ಣು ಮಾಡಿದರು

ಈಗ- ನ್ಯೂಯಾರ್ಕ್, ಲಂಡನ್, ಪ್ಯಾರಿಸ್,
ಭಾರತ, ಪುಣೆ, ಧಾರವಾಡ
ಬಾಂಬು, ಗುಂಡು, ರಕ್ತಪಾತ

ಮಿಡ್ ನೈಟ್ ಮತ್ತು ‘ಫ್ಲಾವರ್ ಪಾವರ‘ ಮಕ್ಕಳು ನಾವು
ತಾತನ ಮೂರ್ತಿಗೆ ಅಲ್ಲ, ಬಂದೂಕಿನ ನಳಿಕೆಯಲ್ಲಿ ಹೂವನ್ನೇರಿಸಬಲ್ಲೆನೆ?

———————-

`ಟೋಲೋ- ಇಂಟೋಲೋ` – ರಾಮಶರಣ

ಬಾಜಿ ರಾವ್ ಮಸ್ತಾನಿ ನೋಡ್ಕೊಂಡು ಗುರ್ಯ, ಬಸ್ಯಾನ ಜೋಡಿ ಬಿಎಮ್ಡಬ್ಲ್ಯೂ ಮಿನಿಯಲ್ಲಿ ಝುಮ್ಮನೆ ಬರ್ತಾ ಇದ್ದ. ಇಬ್ಬರ ನಡುವೆ ಜೋರಾಗಿ ಚರ್ಚೆ ನಡೀತಾ ಇತ್ತು. ಗುರ್ಯಾ, ನಟಿಯರ ಚಂದದ ಡ್ರೆಸ್ಸು, ರಣವೀರ್ ಸಿಂಹನ ದೇಹ ಕಟ್ಟು, ವೇಷ ಭೂಷಣ, ಸೆಟ್ಟು ಎಲ್ಲ ನೋಡಿ ಚಿತ್ರಕ್ಕೆ ಫೈವ್ ಸ್ಟಾರ್ ಕೊಟ್ಟ. ಹೂರಣ ಇಲ್ಲದ, ಹೋಗಲಿ ಸರಿಯಾದ ಡೈಲಾಗೂ ಇಲ್ಲದ ಸಿನೆಮಾ ನೋಡಿ ಬೇಸತ್ತಿದ್ದ ಬಸ್ಯಾನಿಗೆ ಗುರ್ಯಾನ ಸಿನೆಮಾ ಗುಣಗಾನ ಕೇಳಿ ಮೈ ಉರಿದು ಹೋಯ್ತು. “ಏ, ಸಾಕ್ಮಾಡೋ ಗುಲಾಬಿ ಅಂಗಿಯೋನೆ, ಥರ್ಡ್ ಕ್ಲಾಸ್ ಸಿನೆಮಾ, ಅಂಥಾ ಪರಿ ಏನೈತಿ ಅದ್ರಾಗs. ಎಂಥಾ ಛೊಲೋ ಕತೀನ ಹ್ಯಾಂಗ ಕೊಲಿ ಮಾಡ್ಯಾನ ಭನ್ಸಾಲಿ”, ಎಂದ. “ಯಾಕ್ ಸೆಟಗೊಂಡಿಲೇ, ನಿಮ್ಮ ಜಾತ್ಯಾರ ಮಂದೀನ ಅಸೈ ಮಾಡ್ಯರ ಅಂತೇನೂs?” ಗುರ್ಯ ಕೆಣಕಿದ. ಗುರ್ಯ, ಬಶೀರ ಬಾಲ್ಯದ ಗೆಳೆಯರು. ಎಲ್ಲಾರೂ ಬಶೀರನ್ನ ಬಸ್ಯಾ ಎಂದೇ ಕರಿಯೂ ವಾಡಿಕಿ. ಧರ್ಮದ ಅಂತರ ಇವರ ಗೆಳೆತನಕ್ಕೆ ಅಡ್ಡಿ ಬರದಿದ್ರೂ, ಇತ್ತೀಚಿನ ವಿದ್ಯಮಾನಗಳು ಅವರ ನಡುವೆ ಸಾಕಷ್ಟು ಚಕಮಕಿ ಮೂಡಿಸಿದ್ವು. ಇಬ್ಬರನ್ನು ಟಾಲರೆನ್ಸ್ – ಇಂಟಾಲರೆನ್ಸ್, ಯಿನ್-ಯಾನ್ ಮಾದರಿಯಲ್ಲಿ ಬುಗುರಿ ಆಡಿಸುತ್ತಿತ್ತು. ಗುರ್ಯಾನ ಸೆಕ್ಸುಯಾಲಿಟಿ ಬಗ್ಗೆ ಬಸ್ಯಾ ಚುಚ್ಚೂದೂ; ಉಗ್ರಗಾಮಿಗಳ ದಾಳಿಯಾದಾಗೆಲ್ಲ ಬಸ್ಯಾ ಗೇಲಿಗೊಳಗಾಗೂದೂ ಈಗೀಗ ಅತಿರೇಕಕ್ಕೆ ಹೋಗ್ಲಿಕ್ಕ ಹತ್ತಿತ್ತು.

ಬಸ್ಯಾ ಮುಖ ದಪ್ಪಗಾಗಿಸಿಕೊಂಡು ಕುಂತಿದ್ದ. ಮುಂದೆ ಹೋಧಾಂsಗ, ಸೈಕಲ್ ಸವಾರನಿಂದಾಗಿ ವೇಗ ಕಮ್ಮಿಯಾಗಿದ್ದಕ್ಕs ಗುರ್ಯಾ ಗುರ್ ಅಂಥ ಒಂದು ಬೆರಳಿನ ಸಲಾಮ್ ಹೊಡೆದು ನಾಲ್ಕಾರು ಬೈಗುಳ ಚಿಮುಕಿಸಿದ. “ರಸ್ತಿ ಇರೂದ ಗಾಡಿ ಹೋಗಾಕ, ಇಕೋ ವಾರಿಯರ್ ಸೈಕಲ್ ಹೊಡ್ಯೋರಿಗಲ್ಲ,” ಅಂತ ಚೀರಾಡಿದ. ಸಿಕ್ಕಿದ್ದೇ ಚಾನ್ಸ್ ಅಂತ ಬಸ್ಯಾ, “ಹಂಗ್ಯಾಕ್ ಇಂಟೊಲರೆನ್ಟ್ ಗತಿ ಸೈಕಲ್ ಹೊಡ್ಯೋರ್ ಮ್ಯಾಲ ವದರಾಡ್ತೀ ಲೇ, ಎಲ್ಲರಿಗೂ ರಸ್ತಿ ಮ್ಯಾಲ್ ಹೋಗೂ ಹಕ್ ಐತಿ,” ವಾಗ್ದಾಳಿ ಮಾಡಿದ. ಗುರ್ಯಾ ಇಂಗು ತಿಂದ ಮಂಗನ್ಹಂಗ ಬಾಯ್ಮುಚ್ಚಿದ.

ಇನ್ನೈದು ನಿಮಿಷದಲ್ಲಿ ಗುರ್ಯಾನ ಮನಿ ಬಂತು. ದಾರೀಲಿ ನಡೆದ ಜಗಳ ಮರೆತು ಪಾವ್ಲೋವ್ ನ ನಾಯಿಗತೆ ಒಳ ಬಂದು ಟಿವಿ ಮುಂದೆ ಕುಕ್ಕರ್ಸಿದ್ರು. ಬಿಬಿಸಿಯಲ್ಲಿ ಸಿರಿಯಾದಲ್ಲಿ ಆಗುತ್ತಿರುವ ನರ ಮೇಧದ ಸುದ್ದಿ. ಬೇಜಾರಾಗಿ ಚಾನಲ್ ಬದಲಿಸಿದರೆ ಡೊನಾಲ್ಡ್ ಟ್ರಂಪ್ ಮುಸ್ಲೀಮರನ್ನು ಒಳ ಬಿಡಬಾರದೆಂದು ಹೇಳಿದ್ದರ ಬಗ್ಗೆ ಚರ್ಚೆ. ಸುಸ್ತಾಗಿ ಫೇಸ್ ಬುಕ್ಕಿಗೆ ಹೋದರೆ, ಮೊನ್ನೆ ನಡೆದ ಮಾಲ್ಡಾ ದೊಂಬಿಯನ್ನು ತಿರುಚಿ ಹೇಳುತ್ತಿರುವ ಸೆಕ್ಯುಲರ್ ಪ್ರೆಸ್ ನ ವಿರುದ್ದ ಲೈಕ್ ಹಾಕಿ ಎಂದು ಆಗ್ರಹಿಸೂ ‘ಗೆಳೆಯರ’ ಹಾವಳಿ.

ಇದೆಲ್ಲ ನೋಡಿ, ಯಾವುದು ಟೋಲೋ, ಇನ್ಯಾವುದು ಇನ್ಟೋಲೋ ಎಂದು ಅರೀದೇ; ಗುರ್ಯಾ – ಬಸ್ಯಾ ಕಕ್ಕಾವಿಕ್ಕಿಯಾಗಿ ಒಬ್ಬರನ್ನೊಬ್ಬರು ಮಿಕಿ-ಮಿಕಿ ನೋಡುತ್ತಾ ಕುಳಿತರು.

——————–

ಸರ್ವರೂ ಸುಖವಾಗಿರಲಿ, ಸರ್ವರಿಗೂ ಶಾಂತಿ ಸಿಗಲಿ – ಉಮಾ ವೆಂಕಟೇಶ್

ಮಾನವ ಚಂದ್ರನ ಮೇಲೆ ಹೆಜ್ಜೆಯಿಟ್ಟ ಮಹತ್ವದ ೬೦ರ ವೈಜ್ಞಾನಿಕ ದಶಕದಲ್ಲಿ ಜನಿಸಿದ ನನ್ನ ಬಾಲ್ಯದ ದಿನಗಳು, ಮೈಸೂರಿನಂತಹ ಸುಂದರ, ಶಾಂತ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವೆನಿಸಿದ ನಗರದಲ್ಲಿ ಕಳೆಯಿತು. ಗಲಭೆ ಮತ್ತು ಪ್ರಕ್ಷುಬ್ಧತೆಯ ವಾತಾವರಣದ ಅನುಭವ ಬಹಳ ಕಡಿಮೆಯೇ ಎನ್ನಬಹುದು. ಧರ್ಮದ ಹೆಸರಿನಲ್ಲಿ, ಜಾತಿಯ ನೆರಳಿನಲ್ಲಿ ನಡೆದ ಗಲಾಟೆಗಳ ನೆನಪು ಇಲ್ಲವೇ ಇಲ್ಲ. ವಿವಿಧ ಮತೀಯರು ಪರಸ್ಪರ ಶಾಂತಿಯಿಂದ ಜೀವಿಸುತ್ತಿದ್ದ ದಿನಗಳವು. ಸ್ವಾತಂತ್ರ್ಯದ ನಂತರ ನಡೆದ ೪೦ರ ಮತೀಯ ಗಲಭೆಯ ಬಗ್ಗೆ ಶಾಲೆಯ ಚರಿತ್ರೆಯ ಪಠ್ಯಪುಸ್ತಕ ಮತ್ತು ಮನೆಯಲ್ಲಿ ಅಜ್ಜ ಅಜ್ಜಿ ಹಾಗೂ ತಂದೆತಾಯಿಯರ ಮಾತುಗಳಲ್ಲಿ ಕೇಳಿದ್ದೇ ಹೊರತು, ಸ್ವತಃ ಎಂದೂ ಕಂಡ ನೆನಪಿಲ್ಲ. ಸಹಿಷ್ಣುತೆ ಮತ್ತು ಅಸಹಿಷ್ಣುತೆ ಪದಗಳ ಚರ್ಚೆಯೇ ಅಪರೂಪವಾಗಿತ್ತು.

ವರ್ಷಗಳು, ದಶಕಗಳು ಕಳೆದಂತೆ, ವೃತ್ತಪತ್ರಿಕೆಗಳು, ರೇಡಿಯೋ ಮತ್ತು ದೂರದರ್ಶನದ ಮಾಧ್ಯಮಗಳು ಉದಯಿಸಿದೊಡನೆ, ಮಾನವ ಸಮಾಜದ ಕುರೂಪ ಮುಖಗಳ ಪರಿಚಯವಾಗಲು ಪ್ರಾರಂಭಿಸಿತು. 80ರ ದಶಕದಲ್ಲಿ ನಡೆದ ಸಿಖ್ ಜನಾಂಗದ ಆಕ್ರೋಶಪೂರಿತ ಗಲಭೆ, ಹಿಂಸಾಚಾರಗಳ ಕರಾಳ ದಿನಗಳು, 90ರ ದಶಕದ ಹಿಂದು-ಮುಸ್ಲಿಮ್ ಸಮುದಾಯಗಳ ಹಿಂಸಾಚಾರ ಘಟನೆಗಳು ನಿಧಾನವಾಗಿ ನಮ್ಮ ಸಮಾಜದ ಅಸಹಿಷ್ಣುತೆಯೆಂಬ ಮುಖವನ್ನು ತೋರಿಸತೊಡಗಿತು. ಭಾರತದಲ್ಲಿರುವ ಜಾತೀಯ ಪದ್ಧತಿಯ ಕುರೂಪ ಪದ್ಧತಿಯ ನಡುವೆ ಬೆಳೆದರೂ, ಪ್ರಾಣಹರಣದಂತಹ ಕ್ರೂರ ಕಾರ್ಯಕ್ಕೆಡೆಗೊಡಬಹುದಾದ ಮಾನವನ ಸ್ವಭಾವದ ಪರಿಚಯವಿರಲಿಲ್ಲ. ಮಾಧ್ಯಮದ ಕಪಿಮುಷ್ಟಿಯ ಹಿಡಿತ ಜಗತ್ತಿನ ಮೇಲೆ ಬಲವಾಗುತ್ತಿರುವ ಈ ಸಮಯದಲ್ಲಿ, ಜಗತ್ತಿನ ಮೂಲೆಮೂಲೆಯಲ್ಲೂ ನಡೆಯುತ್ತಿರುವ ಮತಾಂಧರ ಆಕ್ರೋಶ ಮತ್ತು ಹಿಂಸಾಚಾರದ ಪ್ರವೃತ್ತಿಯ ಘಟನೆಗಳು, ನಮ್ಮಲ್ಲಿ ಹುದುಗಿರುವ ಪ್ರಾಣಿ ವರ್ತನೆಯನ್ನು ಹೆಚ್ಚುಹೆಚ್ಚಾಗಿ ಪ್ರಚಾರ ಮಾಡುತ್ತಿರುವಂತಿದೆ. ಪ್ರತಿ ದಿನ ಪ್ರಪಂಚದಲ್ಲಿ ಯಾವುದಾದರೂ ಒಂದು ಮೂಲೆಯಲ್ಲಿ ನಡೆಯುವ ಮತೀಯ ಗಲಭೆ, ಪ್ರಾಣಹರಣದ ಘಟನೆ ಸಧ್ಯದಲ್ಲಿ ಸಹಿಷ್ಣುತೆ ಮತ್ತು ಅಸಹಿಷ್ಣುತೆ ಎಂಬ ಪದಗಳ ಬಳಕೆ ಮತ್ತು ಅವುಗಳ ಮಹತ್ವವನ್ನು ಎತ್ತಿಹಿಡಿಯುತ್ತಿವೆ.

ಜಗತ್ತಿನ ಜೀವರಾಶಿಯಲ್ಲಿ ತನ್ನ ಬುದ್ದಿಮತ್ತೆಯ ಕಾರಣದಿಂದ ಎಲ್ಲರಿಗಿಂತ ಹೆಚ್ಚು ಉತ್ಕೃಷ್ಟ ಎನ್ನಿಸಿಕೊಂಡು, ಜೀವಜಾಲದ ಏಣಿಯಲ್ಲಿ ಉತ್ತುಂಗ ಮೆಟ್ಟಿಲಿನಲ್ಲಿರುವ ಮಾನವ, ತಾನೇ ಸೃಷ್ಟಿಸಿಕೊಂಡ ಕೃತಕ ಧರ್ಮ, ಮತ, ಜಾತಿಗಳ ನಡುವೆ ಸಿಲುಕಿ, ಕುರುಡನಂತೆ ವರ್ತಿಸುತ್ತಿರುವುದು ದುರದೃಷ್ಟದ ಸಂಗತಿ. ವಿದ್ಯಾವಂತರಾದರೂ, ಧರ್ಮದ ಹೆಸರಿನಲ್ಲಿ ನಡೆಸುವ ದುಷ್ಕೃತ್ಯಗಳು, ಅನಾಚಾರಗಳು ತಪ್ಪಿಲ್ಲ. ತರುಣರನ್ನು ಅಡ್ಡದಾರಿಗೆಳೆಯುವ ಧರ್ಮಗುರುಗಳು, ರಾಜಕೀಯ ಧುರೀಣರು, ತಮ್ಮ ಮನಬಂದಂತೆ ಮುನ್ನಡೆಯುತ್ತಿರುವ ಸಧ್ಯದ ಕರಾಳ ಪರಿಸ್ಥಿತಿಯಲ್ಲಿ, ಸಹಿಷ್ಣುತೆ ಮತ್ತು ಅಸಹಿಷ್ಣುತೆ ಪದಗಳ ಅರ್ಥವೇ ನಮಗೆ ತಿಳಿಯದಾಗಿದೆ. ಇದೇ ನಾಗರೀಕ ಮಾನವ ಸಮಾಜದ ಏಳಿಗೆಯೇ? ವೈಜ್ಞಾನಿಕವಾಗಿ ಉತ್ತುಂಗವನ್ನೇರಿ ಮೆರೆಯುತ್ತಿರುವ ನಾವು, ಪರಸ್ಪರರನ್ನು ಗೌರವಿಸುವ ರೀತಿನೀತಿಗಳನ್ನೇ ಮರೆತಿದ್ದೇವಲ್ಲ! ಕ್ರಿಸ್ತ, ಗಾಂಧಿ, ಪೈಗಂಬರರ ಬೋಧನೆಗಳು ಕೇವಲ ಪುಸ್ತಕದಲ್ಲಿರುವ ಶಬ್ದಗಳಾಗಿಯೇ ಉಳಿದಿವೆ.

ಎರಡನೆಯ ಮಹಾಯುದ್ಧದ ಸಮಯದಲ್ಲಿ ಯಹುದಿಗಳ ಮೇಲೆ ನಡೆದ ಅತ್ಯಾಚಾರ ಮತ್ತು ದುಷ್ಕೃತ್ಯಗಳನ್ನು ಮರೆಯುವ ಪ್ರಯತ್ನ ನಡೆಯುತ್ತಿರುವಂತೆಯೇ, ಇದೀಗ ಮುಸ್ಲಿಮ್ ಬಾಂಧವರ ಮೇಲೆ, ಅದೇ ಧರ್ಮದ ಮತಾಂಧರು ಮತ್ತು ಉಗ್ರಗಾಮಿಗಳು ನಡೆಸುತ್ತಿರುವ ಭೀಕರ ಹತ್ಯೆಗಳ ಹಿನ್ನೆಲೆಯಲ್ಲಿ, ಇಸ್ಲಾಂ ಧರ್ಮದ ವಿರುದ್ಧವಾಗಿ ಇಡೀ ಜಗತ್ತೇ ದನಿಯೆತ್ತಿ, ಅವರ ವಿರುದ್ಧ ಅವಮಾನಕರವಾಗಿ ಹೀನಾಯದ ನುಡಿಗಳನ್ನು ಆಡುತ್ತಿರುವ ಪರಿಸ್ಥಿತಿ ನಿಜಕ್ಕೂ ದುರದೃಷ್ಟಕರ. ಇದು ಅಸಹಿಷ್ಣುತೆಯ ಒಂದು ಪರಮಾವಧಿಯೆನ್ನಬಹುದು. ಮುಸ್ಲಿಮ್ ಎಂದೊಡನೆ ಅವನು ಅಥವಾ ಅವಳು ಕೇಡಿ, ಕೊಲೆಗಾರರು, ಬಾಂಬ್ ಸಿಡಿಸುವವರು ಎನ್ನುವ ಭಾವನೆ ಜನರಲ್ಲಿ ಮೂಡಿದೆ. ಹಿಂದುಗಳು ಬಹಳ ಸನಾತನಿಗಳು, ಶಾಂತಪ್ರಿಯರು ಎಂದು ಹೊಗಳಿಕೊಂಡು ತಿರುಗುವ ನಾವು, ಹಲವು ಮದ್ಯಪ್ರಾಚ್ಯ ದೇಶಗಳೆಂದರೆ ಕೊಲೆಗಡುಕರು ಎಂಬ ಅಭಿಪ್ರಾಯ ತಳೆದಿದ್ದೇವೆ. ತಮ್ಮ ಮಕ್ಕಳ ಮುಂದೆ, ಅವರ ಎಳೆಯ ಮನಗಳಲ್ಲಿ ಇಂತಹ ವಿಷಪೂರಿತ ಭಾವನೆಯ ಬೀಜಗಳನ್ನು ಬಿತ್ತುತ್ತಿರುವ ವಿದ್ಯಾವಂತ, ವೃತ್ತಿಪರ ಜನರು, ಸಹಿಷ್ಣುತೆಯೆಂಬ ಪದವನ್ನೇ ಶಬ್ದಕೋಶದಿಂದ ತೆಗೆದುಹಾಕುತ್ತಿದ್ದಾರೆ. ಇಂತಹ ಪರಿಸರದಲ್ಲಿ ಬೆಳೆಯುತ್ತಿರುವ ಇಂದಿನ ತರುಣರಿಗೆ ಭವಿಷ್ಯದಲ್ಲಿ ಸಹಿಷ್ಣುತೆಯ ಅರ್ಥವೇ ಗೊತ್ತಿರುವುದಿಲ್ಲ. ಮತ್ತೊಮ್ಮೆ ಜಗತ್ತಿಗೆ ಗಾಂಧಿ, ಕ್ರಿಸ್ತನಂತಹ ಮಹಾನ್ ಜೀವಿಗಳ ಅಗತ್ಯವಿದೆ. ಇಂತಹ ಮಹಾನ್ ವ್ಯಕ್ತಿಗಳ ಮಾರ್ಗದರ್ಶನವಿಲ್ಲದೇ, ನಮ್ಮ ಮನುಕುಲ ದ್ವೇಷ, ರೋಷಗಳಂತಹ ದಳ್ಳುರಿಗೆ ಸಿಕ್ಕಿ ನಲುಗುವುದರಲ್ಲಿ ಸಂಶಯವಿಲ್ಲ. ವಿಶ್ವಮಾನವ ಎಂಬ ತತ್ವವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಇಲ್ಲವಾದಲ್ಲಿ ಮಾನವ ತನ್ನ ನಾಶಕ್ಕೆ ತಾನೇ ಕಾರಣನಾಗುವ ಕಾಲವೇನೂ ದೂರವಿಲ್ಲ.

ॐ सर्वे भवन्तु सुखिनः
सर्वे सन्तु निरामयाः ।
सर्वे भद्राणि पश्यन्तु
मा कश्चिद्दुःखभाग्भवेत् ।
ॐ शान्तिः शान्तिः शान्तिः ॥

ಸರ್ವರೂ ಸುಖವಾಗಿರಲಿ, ಸರ್ವರಿಗೂ ಶಾಂತಿ ಸಿಗಲಿ, ಸರ್ವರೂ ಸಂತೋಷವಾಗಿರಲಿ, ಯಾರಿಗೂ ಕಷ್ಟಗಳು ಬಾರದಿರಲಿ ಎನ್ನುವ ಮಹಾನ್ ತತ್ವವನ್ನು ಸಾರುವ ನಾವು, ನಮ್ಮ ಧರ್ಮದ ಜನಾಂಗ ಇದನ್ನು ಪಾಲಿಸುವುದು ಉಚಿತವಾಗಿದೆ!

——————-

ಭಕ್ತ ವಿಜಯ (೩-೦)  – ಗಿರಿಧರ ಸುಂದರರಾಜ ಹಂಪಾಪುರ

ಅಸಹಿಷ್ಣುತೆ benign benevolence ನಲ್ಲಿ ಬೆಳೆಯುತ್ತಿದ್ದ
“ಬುಜಿ”ಗಳ ಸಂಕಟದ ಪರರಾಟ.
ಮೋಡಿಹಾಕಿದ ಮೋಡಿಗಾರನ ವರ್ಷಸ್ಸನ್ನು ಅಳಿಸಲು
ಹಾಕಿದ ಒಂದು ಡಿಸೈನರ್ ರಾಜಕೀಯದ ದೊಂಬರಾಟ
ಜ್ಞಾನವಿಲ್ಲದ “ಪಿಟೀ”ಲುಗಳ ಕೂಗಾಟ

ಅಂದು ನಾವು ಕೂಪ ಮಂಡೂಕಗಳು
ರೋಮಿಳೆಯು ಬರೆದ ಇತಿಹಾಸ ಓದುತ್ತಿದ್ದವರು
ಇಂದು ಅಂತರ್ಜಾಲದ ಸರ್ವಜ್ಞಾನ ಸಂಪನ್ನರು
ನಮ್ಮನ್ನು ಬಲ್ಲೋರು ಯಾರಿಹರು?
ನಮ್ಮನ್ನು ಗೆಲ್ಲೋರು ಯಾರಿಹರು?
ಎಂದು ಹಾರಾಡುತ್ತಿದ್ದ ಬುಜಿಗಳಿಗೆ
ಇಂದು ಜ್ಞಾನ – ದರ್ಶನ ಮಾಡಿಸುವ ಪಾರಂಗತರು
ಸುಡೋ ಜ್ಞಾನದ ಪ್ರಭಾವಕ್ಕೊಳಗಾಗದವರು
ವರ್ಚುಯಲ್ ಜಗತ್ತಿನ ಒಡೆಯರು, ಬಂಡಾಯಗಾರರು
ಮೇಲಾಗಿ ಭಕ್ತರು, ರಾಷ್ಟ್ರಭಕ್ತರು

ಶ್ರೀಮಂತನ ಮಾರಾಟದ ಬಂಡಿಯನ್ನು
flip ಮಾಡುವ ಜನಶಕ್ತಿ
ದಿಲ್ ಇಲ್ಲದೇ ಮಾತನಾಡುವ ವ್ಯಕ್ತಿಯನ್ನು
ಬಾಜಿಗೆ ಎಳೆದು ಬೀಳಿಸುವ ಯುಕ್ತಿ
ಇತಿಹಾಸದ ಜ್ಞಾನವಿಲ್ಲದ ನಾಟಕಕಾರನ
ಅಂಕದ ಪರದೆಯನ್ನು ಎತ್ತುವ ಶಕ್ತಿ
ನೋಡಿ ಸ್ವಾಮೀ ಹೀಗಿದೆ ಭಕ್ತಿಯ ಶಕ್ತಿ

ಭಕ್ತನ ವಿಜಯ ಅತಿಶಯೋಕ್ತಿ ಏನಲ್ಲಾ,ಗೊತ್ತಿಲ್ಲ ವೇ
Don’t underestimate the power of a common man.

(Notes:
1. There were three victories that bhaktas secured recently, people deleting flipcart app, bajirao overtaking dilwale and Karnad apologizing for his knowledge on kempegowda.
2. Dr. Romila Thapara well known history professor whose history of india is denounced by Bhakts
3. Benevolence – the quality of being well meaning; kindness, kind-heartedness, big-heartedness, goodness, goodwill, benignity, compassion, consideration, thoughtfulness, decency, public-spiritedness, social conscience, charity, charitableness, altruism, humanity, humanitarianism, philanthropism)

————————-

ಸಹನಶೀಲತೆಗೆ ಉತ್ತರವೆಲ್ಲಿ? – ಅರವಿಂದ ಕುಲಕರ್ಣಿ

ಪ್ರತಿನಿತ್ಯ ವಾರ್ತಾಪತ್ರಿಕೆ, ಟೆವಿಯಲ್ಲಿ ಹಿಂಸೆ, ಕೊಲೆ, ಲೈಂಗಿಕ ಅತ್ಯಾಚಾರಗಳ ಸುದ್ದಿ ಮುಖಪುಟಗಳಲ್ಲಿ ನಾವೆಲ್ಲರು ಓದಿ ಮನಸ್ಸಿಗೆ ಅಸಮಾಧಾನ ಪಡುತ್ತಲಿರುವೆವು. ಇಂತಹ ಸಮಾಚಾರಗಳನ್ನು ನಮ್ಮೆಲ್ಲರ ಮಕ್ಕಳು ಓದಿ ಕೇಳಿ ಮನಸ್ಸಿನ ಮೆಲೆ ವಿಪರೀತ ಪರಿಣಾಮವಾಗುವದರಲ್ಲಿ ಸಂದೇಹವಿಲ್ಲ. ಹೀಗಾಗಿ ಕೆಲವು ಅಸ್ಠಿರವಾಗಿರುವ ಮಕ್ಕಳು ಹಾಗು ಹರೆಯದ ಜನರ ಮನಸ್ಸು ಅಲ್ಲೊಲ ಕಲ್ಲೊಲಗಳಿಂದ ಯಾವುದು ಹಿತ ಯಾವದು ಅಹಿತ ಎಂಬ ವಿಚಾರ ಮಾಡುವ ಪರಿಸ್ಥಿತಿಯಿಲ್ಲದೆ ದುರ್ಮಾಗಕ್ಕೆ ಮರಳು ಹೊಗಿ ಅತ್ಯಾಚಾರ, ಹಿಂಸೆ, ಕೊಲೆ ಮಾಡಲು ಹಿಂಜರಿಯುವದಿಲ್ಲ.

ಸಹಿಷ್ಣುತೆ ಅಸಹಿಷ್ಣುತೆ ಮಾನವನ ತಲೆತಲಾಂತರಗಳಿಂದ ನಿತ್ಯ ಆಚರಣೆಗಳಲ್ಲಿ ಅನ್ವಯಿಸಿಗೊಂಡು ಬಂದಿರುವವು. ಐತಿಹಾಸಿಕ ಮರೆಯಲಾರದ, ಸಹಿಸಲಾರದ, ಘಟನೆಗಳನ್ನು ನೆನೆದಾಗ್ಯೆ ಜಾಗತಿಕ ಮಹಾಯುದ್ಧಗಳು, ಹಲವಾರು ಬಾಂಬ್ ಸ್ಪೋಟಗಳು, ಶಾಲೆಗಳಲ್ಲಿ ಚಿಕ್ಕಮಕ್ಕಳನ್ನು ಗುಂಡು ಹಾಕಿ ಕೊಲ್ಲುವ ಅತ್ಯಾಚಾರಗಳು ಏಲ್ಲರನ್ನು ದುಃಖಪಡಿಸುತ್ತಲೆ ಬಂದಿರುವವು. ಹೀಗಿದ್ದರೂ ನಮ್ಮೆಲ್ಲರ ಪುರ್ವಜರು ಸಾರ್ಥಕ, ನೆಮ್ಮದಿ, ಸುಖದ ಜೀವನ ಸಾಗಿಸಿಕೊಂಡು ಬಂದದ್ದನ್ನು ಕಂಡಿದ್ದುಂಟು. ಆಗಿನ ಕಾಲದಲ್ಲಿ ಹಳೆಯ ಪೀಳಿಗೆಯವರು ಸಂತೃಪ್ತಿ, ಸಹನಶೀಲತೆಗಳಿಂದ ಜೀವನ ಸಾಗಿಸುವುದೇ ಆದ್ಯ ಕರ್ತವ್ಯವೆಂದು ಪರಿಗಣಿಸಿ, ಸುಖ, ದುಃಖಗಳು ನಾಣ್ಯದ ಎರಡು ಮುಖಗಳೆಂದು ಒಪ್ಪಿಕೊಂಡು ಶ್ರದ್ದೆ, ವಿಶ್ವಾಸಗಳಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚಿನ ಹೊಸ ಪೀಳಿಗೆಗಳ ಬಗ್ಗೆ ವಿಚಾರಿಸಿದಾಗ್ಯೆ ಎಲ್ಲರೂ ಆಧುನಿಕ ಯಂತ್ರಯುಗದಲ್ಲಿ ಏಲಿಗಳ ಸ್ಪರ್ಧೆದಲ್ಲಿ ಸಿಲುಕಿ ಪೇಚಾಟ ಪಡುತ್ತಿರುವದು ಕಂಡುಬರುವದು. ಇವೆಲ್ಲ ಉದ್ಭವಿಸಲು ಹಲವಾರು ಕಾರಣಗಳುಂಟು. ಸ್ವಂತ ಜೀವನ ಸಾಗಿಸುವ ಹಂಬಲ, ಹೆಚ್ಚಿಗೆ ಹಣ ಗಳಿಸುವ ಆಶೆ, ಯಾಂತ್ರಿಕ ಯುಗದಲ್ಲಿರುವ ಸಲಕರಣೆ, ಜೀವನದಲ್ಲಿ ಹೆಚ್ಚಿನ ಸ್ಥಾನಮಾನ, ಬೆಳಿಸುವ ಹವ್ಯಾಸ, ಸ್ಪರ್ಧೆ, ಕುಟುಂಬದಲ್ಲಿ ಮಡದಿ ಮಕ್ಕಳೊಂದಿಗೆ ಸರಸ, ಮಾತುಕತೆಗಳಿಗೆ ವೇಳೆಯ ಅಭಾವಗಳು ಮೂಲ ಕಾರಣವೆಂದು ನನ್ನ ವಿಚಾರ. ಹೀಗಾಗಿ ಕೆಲವರು ಜೀವನದಲ್ಲಿ ನಿರಾಸೆ, ಅಸಹಿಷ್ಣುತೆ, ಅಸಂತೃಪ್ತಿಗಳಿಂದ ಮನಸ್ಸು ಅಲ್ಲೋಲ ಕಲ್ಲೋಲವಾಗಿ ಕುಹುಕು, ಸೇಡು ತೀರಿಸಿಕೊಳ್ಳುವ ವಿಚಾರಗಳು ತಲೆದೋರುವವು. ಆಗ್ಯೆ ಅವರು ಮನಸ್ಸು ಅಸ್ಠಿರವಾಗಿ ತಮ್ಮ ಜೀವನವೇ ಬೇಜಾರು ಬಂದು ಆತ್ಮಹತ್ಯೆ, ಪರರನ್ನು ಹಿಂಸೆ, ಕೊಲ್ಲುವ ಪ್ರಯತ್ನ ಮಾಡಲು ಹವಣಿಸುವರು. ಅವರಿಗೆ ಉಳಿದ ಜನರ ಪ್ರಗತಿ, ಸಂತೃಪ್ತ ಜೀವನ ಸಾಗಿಸುವದನ್ನು ಅಸೂಯೆಯಿಂದ, ಅಸಹನಶೀಲತೆ ಉದ್ಭವಿಸುವವು. ಇಂಥ ಮನೋವಿಕಾರಗಳಿಂದ ಬಳಲಿತ್ತಿರುವ ಜನರನ್ನು ಹೇಗೆ ಪರಿವರ್ತನ ಮಾಡಬೇಕು? ಇದು ಜಠಿಲ ಸಮಸ್ಯೆಯಾಗಿದೆ. ಕೆಲವು ಜನರು ಜೀವನದಲ್ಲಿ ಅವಶ್ಯವಾಗಿರುವ ಮನೆ, ಹಣ, ಸ್ಠಿರ ವ್ಯಯಸಾಯ, ಕುಟುಂಬಗಳಿದ್ದರೂ ದುರಾಸೆ, ಹೊಟ್ಟೆಕಿಚ್ಚು, ಪರರೊಂದಿಗೆ ತುಲನೆ ಮಾಡುವ ಪ್ರವೃತ್ತಿಗಳಿಂದ ಅಸೂಯೆ, ಅಸಂತೃಪ್ತಿ ತಲೆದೊರುವವು. ಇವೇ ಅಸಹಿಷ್ಣುತೆಗೆ ಮೂಲ ಕಾರಣ.

ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಪ್ರೀತಿ, ವಿಶ್ವಾಸ, ಸಮಂಜಸ ಅಚಾರ ವಿಚಾರಗಳೊಂದೊಗೆ ಪಾಲನ ಪೋಷಣೆ ಮಾಡಿದಲ್ಲಿ ಮಕ್ಕಳು ಉತ್ತಮ ನಾಗರಿಕರಾಗಿ ಒಳ್ಳೆ ಮಾರ್ಗಕ್ಕೆ ತಲಪುವರು. ಇದರ ತದ್ವಿರುದ್ಧವಾಗಿ ಚಿಕ್ಕಂದಿಂದಲೆ ಇರಲು ಮನೆಯಿಲ್ಲದೇ ಬೀದಿ ಪಾಲಾಗಿ, ಗುಂಡುಗಳ ಸುರಿಮಳೆ, ಅಸಂತೋಷದ ವಾತವರಣೆಗಳಿಂದ ಮಕ್ಕಳು ಜೀವನ ಸಾಗಿಸಿದಲ್ಲಿ ದುರ್ಮಾರ್ಗಕ್ಕೆ ಬಲೆ ಬೀಳುವದು ನಿಸಂದೇಹ. ಈ ಮುಖ್ಯ ಸಮಸ್ಯೆಗಳಿಗೆ ಜಗತ್ತಿನ ಯಎಲ್ಲ ಹಿರಿಯ ರಾಜಕಾರಣಿಯರು ಮಹತ್ವ ನೀಡಿ ಬೇಗನೆ ಜಾಗತೀಕ ಶಾಂತತೆಯ ಮಹಾಕಾರ್ಯಕ್ರಮ ಯಶಸ್ವಿಗೊಳಿಸಿ ಜಗತ್ತಿನ ಕಲ್ಯಾಣ ಮಾಡಲು ಪ್ರಯತ್ನಿಸಬೇಕು.

——————-

`ಈಶ್ವರ ಅಲ್ಲಾ` ಒಂದು ಪ್ರಾರ್ಥನಾ ಗೀತೆ – ಕೇಶವ ಕುಲಕರ್ಣಿ

ಈಶ್ವರ ಅಲ್ಲಾ ನಿನ್ನಯ ಜಗದಿ
ದ್ವೇಷವಿದೇಕೆ ಛಲವೇಕೆ? ।ಪ!
ನಿನ್ನಯ ಮನವು ಆಲದ ಮರವು
ಮನುಜನ ಮನವು ತೃಣವೇಕೆ? ।ಅ.ಪ।

ಅಡಿಗಡಿಗೊಂದು ಗಡಿಗಳು ಏಕೆ
ನಿನ್ನದೇ ಅಲ್ಲವೇ ಜಗವೆಲ್ಲಾ?
ನೇಸರ ನಮ್ಮನು ಸುತ್ತುತಲಿದ್ದರೂ
ಕತ್ತಲೆ ನಮ್ಮಯ ಬದುಕೆಲ್ಲಾ
ಭೂಮಿಯ ಸೀರೆಯ ಅಂಚಿನ ತುಂಬ
ಮನುಜನ ರಕುತದ ಕಲೆ ಏಕೆ? (೧)

ಕಿವಿಗಪ್ಪಳಿಸಿವೆ ಹಾಹಾಕಾರ
ಒಲುಮೆಯ ಮಾತು ಕೇಳಿಸದು
ಚೂರ್ಚೂರಾದವು ಸಾವಿರ ಕನಸು
ಜೋಡಿಪರಾರೋ ಕಾಣಿಸದು
ಮನ ಬಾಗಿಲಿಗೆ ಬಿದ್ದಿದೆ ಬೀಗ
ಬೀಗಕೆ ಹಿಡಿದಿದೆ ತುಕ್ಕೇಕೆ? (೨)

(ಜಾವೇದ್ ಅಖ್ತರ್ 1947-EARTH ಚಿತ್ರಕ್ಕೆ ಬರೆದು, ಎ ಆರ್ ರೆಹಮಾನ್ ಸಂಗೀತ ನೀಡಿದ ಹಾಡಿದು, ಕನ್ನಡ ಭಾವಾನುವಾದ, ಅದೇ ಧಾಟಿಯಲ್ಲಿ ಹಾಡಬಹುದು)

———————————

`ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನಗಳ ಈ ಬದುಕಿನಲಿ` – ಜಿ. ಎಸ್. ಎಸ್. ಪ್ರಸಾದ್

ದೇಶ, ಭಾಷೆ ಸಂಸ್ಕೃತಿ, ಸಂಪತ್ತು ಮತ್ತು ಆರ್ಥಿಕ ಮಟ್ಟ ಹೀಗೆ ಅನೇಕ ಮಜಲುಗಳಲ್ಲಿ ವಿಭಜನೆಯಾಗಿರುವ ನಮ್ಮ ಸಮಾಜದಲ್ಲಿ ಇತರರ ವಿಭಿನ್ನತೆಯನ್ನು ಅರಿತು, ಭಿನ್ನಭಿಪ್ರಾಯಗಳನ್ನು ಬಗೆಹರಿಸಿಕೊಳುತ್ತಾ ಇತರರ ಮೌಲ್ಯಗಳನ್ನು, ಭಾಷೆ ಸಂಸ್ಕೃತಿಯನ್ನು ಗೌರವಿಸುತ್ತ ಪ್ರೀತಿಯಿಂದ ಸಹಬಾಳ್ವೆ ನಡೆಸುವುದೇ ಸಹಿಷ್ಣುತೆ. ಸಂಸಾರ ನಮ್ಮ ಸಮಾಜದ ಒಂದು ಮೂಲಭೂತವಾದ ಹಾಗು ಚಿಕ್ಕ ಘಟಕ ಹಾಗು ಸುಭದ್ರ ತಳಹದಿ. ಇಂತಹ ಒಂದು ಸಣ್ಣ ಘಟಕದಲ್ಲಿಯೂ ಕೂಡ ವ್ಯಕ್ತಿ ಸಂಬಂಧಗಳ ನಡುವೆ ಭಿನ್ನಭಿಪ್ರಾಯ ಉಂಟಾಗಿ ಗಂಡ ಹೆಂಡಿರಲ್ಲಿ ಸಾಮರಸ್ಯವಿಲ್ಲದೆ ವಿವಾಹ ವಿಚ್ಛೆದನವಾಗಿ ಅದರ ಸಾಮಾಜಿಕ ಪರಿಣಾಮಗಳನ್ನು ನಾವು ಕಂಡಿದ್ದೇವೆ. ಇದೆ ಒಂದು ಅಸಹಿಷ್ಣುತೆ ಒಂದು ಸಂಸಾರವನ್ನು ಒಡೆಯಬಹುದು, ಒಂದು ಭಾಷೆ ಧರ್ಮ ಹಾಗು ಸಂಸ್ಕೃತಿಯನ್ನು ನಾಶ ಪಡಿಸಬಹುದು. ಲೊಭ, ಮೊಹ, ಮದ ಮತ್ಸರ ಎಂಬ ಹಲವಾರು ದುರ್ಗುಣಗಳು ಹಾಗು ದುರಾಲೋಚನೆಗಳು ಕಳೆಗಳಂತೆ ನಮ್ಮ ಮನಸ್ಸಿನಲ್ಲಿ ಅಗ್ಗಾಗೆ ಮೂಡುವುದು ಸಹಜ ಹಾಗು ಅನಿವಾರ್ಯ. ಆದರೆ ಅದನ್ನು ಹತ್ತಿಕ್ಕೆ ವಿವೇಚಿಸಿ ಮೇಲೇರುವುದೇ ಸಹಿಷ್ಣುತೆ. ಇದು ಮನುಷ್ಯನಿಗೆ ಹಲವಾರು ಯುಗಗಳ ವಿಕಾಸದಿಂದ (process of evolution)ಲಭ್ಯವಾಗಿರುವ ಒಂದು ವಿಶೇಷ ಗುಣ.

ಇತ್ತೀಚಿನ ದಶಕಗಳಲ್ಲಿ ನಮ್ಮ ಧಾರ್ಮಿಕ ಚಿಂತನೆಗಳು, ಆಚರಣೆಗಳು ಹಾಗು ಕೆಲವರ ಮುಕ್ತ ಬದುಕಿನ ಶೈಲಿಯಿಂದಾಗಿ ಸಾಕಷ್ಟು ಸಂಘರ್ಷಣೆಗಳು ಉಂಟಾಗಿ ವ್ಯಕ್ತಿ ಸಂಭಂದಗಳು, ವಿಶ್ವಾಸಗಳು ಕುಸಿಯುತ್ತಿವೆ. ವೈಜ್ಞಾನಿಕ ಪ್ರಗತಿ, ಸ್ತ್ರೀ ಸಮಾನತೆ, ಪ್ರಜಾಪ್ರಭುತ್ವ ಆಡಳಿತ, ಅಭಿವ್ಯಕ್ತ ಸ್ವಾತಂತ್ರ ಹಾಗು ವೈಚಾರಿಕ ಚಿಂತನೆಗಳೊಡನೆ ಸಮಾಜ ಮುನ್ನಡೆಯುವ ವೇಳೆಯಲ್ಲಿ, ಅಂಧಶ್ರದ್ಧೆ, ಮೂಢನಂಬಿಕೆಗಳನ್ನು ಬಂಡವಾಳಮಾಡಿಕೊಂಡು ಎಳೆಮಸ್ಸುಗಳನ್ನು ಕದಡಿ ಭಯೊತ್ಪಾದನೆಯನ್ನು ಪ್ರಚೋದಿಸುತ್ತ ಧರ್ಮ ಹಾಗು ದೇವರ ಹೆಸರಲ್ಲಿ ಕೊಲೆ, ಸುಲಿಗೆ ನಡೆಸುವುದನ್ನು ಯಾವ ಧರ್ಮವು ಸಮರ್ಥಿಸಿಕೊಳಲ್ಲು ಸಾಧ್ಯವಿಲ್ಲ.”ದಯವಿಲ್ಲದ ಧರ್ಮ ಅದಾವುದಯ್ಯ’ ಎಂದು ಪ್ರಶ್ನಿಸಬೇಕಾಗಿದೆ. ನಮ್ಮ ಧರ್ಮಾಚರಣೆಗಳು (ಬೇಕಾದವರಿಗೆ) ನಮ್ಮ ವೈಯುಕ್ತಿಕ ಬದುಕಿನ ವಿಚಾರಗಳಷ್ಟೇ ಗೌಪ್ಯವಾಗಿರಬೇಕು. ಆದನ್ನು ಬೀದಿಗೆಳದು ಪ್ರದರ್ಶಿಸಿ ಉತ್ಕ್ರುಷ್ಟತೆಯನ್ನು ಅಳೆಯುವ ಪ್ರಯತ್ನ ಮಾಡಿದಾಗ ಘರ್ಷಣೆಗಳು ಹಾಗು ಅಸಹಿಷ್ಣುತೆ ಉಂಟಾಗಬಹುದು. ಎಲ್ಲ ಧರ್ಮಗಳನ್ನು ಕಾಲಕ್ಕೆ ತಕ್ಕಂತೆ ಮರು ವ್ಯಾಖ್ಯಾನ ಮಾಡುವುದರಿಂದ ಅದು ಸರ್ವರಿಗು ಮನವಿಯಾಗಿ ಪ್ರಸ್ತತತೆಯನ್ನು ಉಳಿಸಿಕೂಳ್ಳುವಂತಾಗಬಹುದು. ನಾಸ್ತಿಕವಾದ ಹಾಗು ವಿವಿಧ ಲೈಂಗಿಕ ಮನೋಧರ್ಮಗಳ ನಿಲುವುಗಳನ್ನು ಕೊಡ ಒಪ್ಪಿಕೊಳ್ಳಬೇಕು. ಅಸಹಿಷ್ಣುತೆ ವಿನಾಶಾಕಾರಿ, ಸಹಿಷ್ಣುತೆಯಿಂದ ವಿಶ್ವ ಶಾಂತಿ, ನಮ್ಮ ನಿಮ್ಮ ಅಸ್ಥಿತ್ವ!

ಕೊನೆಯದಾಗಿ ಈ ಮೇಲಿನ ವಿಚಾರಗಳ ಚಿಂತನೆಯ ಹಿನ್ನೆಲೆಯಲ್ಲಿ ರಾಷ್ಟ್ರಕವಿ ಜಿ ಎಸ್ ಎಸ್ ಅವರ ಕವನದ ಸಾಲು ’ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನಗಳ ಈ ಬದುಕಿನಲಿ’ ಎಂಬುದು ಬಹಳ ಸಮಂಜಸ ವಾಗಿದೆ. ಕೆಲವರು ತಮ್ಮ ಬದುಕಿನುದ್ದಕ್ಕೂ ಮೇಲು ಕೀಳುಗಳ ಹೊರಾಟದ ಹಾದಿಯನ್ನು ತುಳಿಯುವವರಿಗೆ ಜಿ ಎಸ್ ಎಸ್ ಅವರ ’ಹಣತೆ’ ಎಂಬ ಕವನದ ಸಾಲುಗಳು ’ಹಣತೆ ಆರಿದ ಮೇಲೆ ನೀನು ಯಾರೋ ಮತ್ತೆ ನಾನು ಯಾರೋ’ ಎಂಬುದು ಕೆಲವರ ಅರ್ಥಹೀನ ಬದುಕಿಗೆ ಕನ್ನಡಿ ಹಿಡಿದಂತಿದೆ.

————————–

Intolerance and fractals – a never ending saga of human suffering: ಬಿ ಎಸ್ ಸತ್ಯಪ್ರಕಾಶ್

According to Oxford English Dictionary, intolerance is defined as, “unwillingness to accept views, beliefs, or behaviour that differ from one’s own.”

Suman owns a fast food joint that sells hot idlis and everyone loves to eat at her place. Darth Vader and his friends believe that idlis should not be eaten because idlis are considered very sacred where they come from and should not be eaten. Now, Suman’s business would get seriously hurt if Darth tries to enforce his views on the rest of the population. Obviously, Suman won’t be happy with this and will protest. But is it right for Darth to say Suman is intolerant of his views? If Darth thinks idlis should not be eaten, then that’s clearly his problem and he should not be enforcing it upon others as long as it does not hurt him. Unfortunately, Darth’s views about idlis are so strong that it is impossible for him to imagine anyone eating idlis; so he feels a great crime is being carried out, that Suman is deliberately selling idlis and he must stop this sacrilege at any cost. So what should Suman do?

Why do we find it difficult to accept views, beliefs or behaviour that differ from our own? We are not born with any particular view no matter where and when we are born; at least not the kind of religious, sectarian and racial intolerance that have become a norm across the world. True, we are born with instincts: to cry when we are hungry, to scream if we are in pain, to smile when we see a familiar face. But our cerebrum at birth is pretty much a clean state. Most infants wouldn’t like to be lifted by an unfamiliar face but they would soon get accustomed to uncles, aunts and baby sitters. So what’s the problem?

At birth our brain is highly plastic but becomes less so as we grow. In the process of an infant becoming a child, a teenager and an adult, an individual builds a world view based on the environment in which they grow. In those critical years of development, a model of how the world works develops and gets crystallized into our brain. Slowly we begin to think that it is not just a model but truth by which we ought to live. This model becomes the cornerstone of stability and integrity of our lives and reaches a point where it becomes unchallengeable. It is, therefore, natural that when faced with a view that contradicts our model we tend to resist it. But it doesn’t have to be that way.

One way to circumvent this problem is to enrich our lives and the lives of our children by giving the opportunity to learn as many different views of the world is possible. People who have lived in different cultures and travelled the world are known to be more tolerant but that’s not a luxury everyone can afford. Another approach is to instil the idea that our world view is not unique, others can and will have a different model and that we should respect theirs. This, of course, is easily said than done because what someone strongly believes in, as Darth does, could have an undesirable consequence to someone else’s life.

Having spent a whole week thinking about what I should write, it struck me the other day that intolerance is analogous to a well-known pattern in physics, mathematics and biology called fractals – patterns that are self-similar on different scales. Although the word intolerance today has a specific political and social meaning, it is actually the foundation of our lives and we breath it all the time. With our spouse, children, pets, colleagues, the driver in front of me, my fellow traveller, …, the list is endless. We have a problem with everyone around us but at different degrees and scales. Some stay with us for no more than an instant but others could haunt us for days and years. Our intolerance affects us more than it does others.

I am not arguing that we should tolerate all “nonsense”. But it is important to take a step back and ask ourselves why we shouldn’t. That step should go far enough and shake some of the founding principles of our existence, by that I mean human beings in general and not just a specific individual. In other words, let us place ourselves in their position, just for a minute, and try to comprehend their point of view. Sometimes even such a thought could us, repel us to even consider such a thought. However, just a thought cannot hurt us if we don’t have to entertain it for too long. May be, just may be, we might at least appreciate, even if we cannot accept their view. That alone could enrich our lives, we can become better people not because we accept what others do but because we understand why they do it, which could in turn help in finding solutions to live in harmony. After all that’s what we all aspire.

———————————————

8 thoughts on “ಸಹಿಷ್ಣುತೆ ಮತ್ತು ಅಸಹಿಷ್ಣುತೆ – ಬರಹಗಳ ಗೊಂಚಲು

  1. ಕಡಿಮೆ ಸಮಯದಲ್ಲಿ ಅನಿವಾಸಿಯ ಬೆಂಬಲಿಗರನ್ನು ಬಡಿದೆಚ್ಚರಿಸಿ, ಜ್ವಲಂತ ವಿಷಯದ ಬಗ್ಗೆ ಬರಿಸಿದ ಸಾಹಸ ಮಾಡಿದ್ದಕ್ಕೆ, ಕೇಶವ್ ಗೆ ಅಭಿನಂದನೆ, ಧನ್ಯವಾದ. ಬರಹಗಳ ವೈವಿಧ್ಯತೆ ಮುದಗೊಟ್ಟಿದೆ. ಹೊಸಬರನ್ನು ಹುರಿದುಂಬಿಸಿದ ಸಾಹಸ. ಸಹಿಷ್ಣುತೆಯ ಬಗ್ಗೆಯೇ ಎಲ್ಲರೂ ಬರೆದಿರುವುದುದು ಗಮನೀಯ; ಮಾನವ ಮನೋಧರ್ಮಕ್ಕೆ ಹಿಡಿದ ಕನ್ನಡಿ.

    Liked by 2 people

  2. Reblogged this on Vinathe Sharma-Actionable Space and commented:
    Nine people living in the UK connected by one language – Kannada. They wrote on the theme ‘tolerance/intolerance’. Their written pieces were published on the language group’s website. To mark yet another Indian Republic Day being ‘celebrated’ on January 26. The occasion of postcolonial India being unified with states and union territories, embracing the ‘then’ popular “unity in diversity” slogan.

    Liked by 2 people

  3. ಉತ್ತಮ ಪ್ರಯತ್ನಮತ್ತು ವಿವಿಧ ಬರಹಗಳು. ದೊಡ್ಡದೊಂದು ವಿಚಾರದ ಬಗ್ಗೆ ಒಂದೇ ಬಗೆಯ ಅಭಿಪ್ರಾಯಗಳು
    ಇಂತವು ಮತ್ತೆ ಬರಲಿ

    Liked by 2 people

  4. ವಿಧವಿಧದ ಅಭಿಪ್ರಾಯಗಳು ಮತ್ತು ಅನುವಾದಗಳು. ಲೇಖಕರೆಲ್ಲ ಬಹಳ ಗಹನವಾದ, ಪ್ರಸ್ತುತ ವಿಷಯಗಳನ್ನು ಚರ್ಚಿಸಿ ಅವರವರ ಅನಿಸಿಕೆಗಹಳನ್ನು ಹಾಸ್ಯಮಯವಾಗಿ ಕಾವ್ಯಮಯವಾಗಿ ಒದುಗರ ಮು೦ದಿಟ್ಟಿದ್ದೀರಿ. ಸಹನೆ, ತಾಳ್ಮೆ ಬಹಳ ವೈಯುಕ್ತಿಕ ವಿಷಯ ಕೂಡ. ದಿನನಿತ್ಯದ ನಮ್ಮ ಜೀವನದಲ್ಲಿ ನಾವು ನಮಗೆ ಅತಿ ಪ್ರಿಯರಾದವರ ಕೆಲವು ಆಸಕ್ತಿಗಳನ್ನೂ, ಅಭ್ಯಾಸಗಳನ್ನೂ ದೂರದೆ ಸಹಿಸಿಕೊಳ್ಳುತ್ತೇವೆ. ಆದೇ ರೀತಿಯ ಸಹನೆ ನಮ್ಮ ನೆರೆಹೊರೆಯವರ ಮೇಲೆ, ಸಹೋದ್ಯೊಗಿಗಳ ಮೇಲೆ ತೋರಿಸಿದಲ್ಲಿ ಬದುಕು ಸುಲಭವಾಗುವುದರಲ್ಲಿ ಸ೦ದೇಹವಿಲ್ಲ. ಲಘುವಾದ ವಿಚಾರಗಳ ಚರ್ಚೆಯೂ ಸೇರಿದ್ದರೆ, ಈ ವಿಷಯದ ಬರಹ ಸ೦ಪೋರ್ಣವಾಗುತ್ತಿತ್ತೆ೦ದು ನನ್ನ ಅಭಿಪ್ರಾಯ. ನನ್ನೀ ಕಾಮೆ೦ಟ್ ನ್ನು, ಸಹಿಷ್ಣುತೆಯ ಕೋನದಿ೦ದ ನೋಡುವಿರೆ೦ದು ನನ್ನ ಭಾವನೆ.

    ದಾಕ್ಷಾಯಿಣಿ

    Liked by 2 people

  5. ಹತ್ತಾರು ಜನ ಕೂಡಿದಲ್ಲಿ ಅತೃಪ್ತಿ, ಅಸೂಯೆ, ಅಸಹನೆಗಳು ನಲಿದಾಡುವ ಮಾನವರಲ್ಲಿ ಅಶಿಷ್ಣುತೆ ಅಪರೂಪದ ಸಂಗತಿಯಲ್ಲ. ಬಹುರಾಷ್ಟ್ರ ಸಂಸ್ಕೃತಿಯ ಇಂದಿನ ಸಮಾಜದಲ್ಲಿ ಅಸಹಿಷ್ಣುತೆ ತಾಂಡವ ನೃತ್ಯವಾಡುತ್ತಿರುವುದೂ ಆಷ್ಚರ್ಯಕರವೇನಲ್ಲ. ಆದರೆ ಈ ಭಾವನೆ ಎಲ್ಲೆ ಮೀರಿದಲ್ಲಿ ಅಪಾಯ ಖಂಡಿತಾ. ದ್ವೇಷ ಒಮ್ಮೆ ಮನೆಮಾಡಿದರೆ ಅದನ್ನು ಕಿತ್ತೊಗೆಯುವುದು ಅಸಾಧ್ಯದ ಮಾತು. ವಿವಿಧ ಧರ್ಮಗಳ ನಡುವೆ ಈ ಭಾವನೆ ಈಗಾಗಲೇ ಬೀಡು ಬಿಟ್ಟಿದೆ. ಇದನ್ನು ಈಗಲೆ ಬುಡ ಸಮೇತ ಕಿತ್ತೊಗೆಯದಿದ್ದಲ್ಲಿ, ಹೆಮ್ಮರವಾಗಿ ಬೆಳೆದು, ನಮ್ಮನ್ನು ನುಂಗುವುದರಲ್ಲಿ ಸಂಶಯವಿಲ್ಲ. ತಂದೆತಾಯಿಯರ ಜವಾಬ್ದಾರಿ , ಶಿಕ್ಷಕರ ಭೋಧನೆ ಈಗ ಇಮ್ಮಡಿಯಾಗಬೇಕು. ಸಹಿಷ್ಣುತೆಯನ್ನು ಕಡ್ಡಾಯವಾಗಿ ಬೋಧಿಸಿ, ಮಕ್ಕಳಲ್ಲಿ ಸ್ನೇಹ ಸುಶೀಲ ಭಾವನೆಯನ್ನು ಬೆಳಸದಿದ್ದರೆ, ಸಮಾಜ ದಿಕ್ಕೆಟ್ಟು ಹೋಗುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ. ಅನಿವಾಸಿಗಳು ಈ ದಿಕ್ಕಿನಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ವರ್ತಿಸಿದರೆ ಕ್ಷೇಮ!
    ಉಮಾ ವೆಂಕಟೇಶ್

    Liked by 2 people

  6. ಒಂಬತ್ತು ಜನ ಯು ಕೆ ಕನ್ನಡಿಗರು ದಾಖಲೆಯ ಅವಧಿಯಲ್ಲಿ ಒಂದೇ ವಿಷಯದ ಬಗ್ಗೆ ಇಷ್ಟೊಂದು ಬರೆದು ಈ ವಿಷಯದ ಬಗ್ಗೆ ಅರಿವನ್ನು ವಿಸ್ತರಿಸಿದ್ದೀರಿ. ಚಿಂತನೆಗಳು, ವಿಚಾರಗಳು, ಹರಟೆ ಮತ್ತು ಕವನಗಳ ರೂಪದಲ್ಲಿ ಇರುವ ಈ ಬರಹಗಳು ಹಿಂತನೆಗೆ ಹಚ್ಚುತ್ತವೆ.

    Liked by 1 person

Leave a comment

This site uses Akismet to reduce spam. Learn how your comment data is processed.