ಜಿಎಸ್ಸೆಸ್ ನೆನಪು — ಅವರ ಒಂದು ‘ಸ್ಪೆಷೆಲ್‘ ಕವನ ಮತ್ತು ಡಾ. ಜಿ. ಎಸ್. ಶಿವಪ್ರಸಾದ್ ಅವರ ’ಶ್ರದ್ಧಾಂಜಲಿ’

ರಾಷ್ಟಕವಿ ಜಿ ಎಸ್ ಶಿವರುದ್ರಪ್ಪನವರು ಕಣ್ಮರೆಯಾಗಿ ಇಂದಿಗೆ ಸರಿಯಾಗಿ ಎರಡು ವರ್ಷಗಳಾದವು. ಈ ಸಂದರ್ಭದಲ್ಲಿ ಅವರ ಒಂದು ವಿಶಿಷ್ಟ ಕವನವನ್ನು ‘ಅನಿವಾಸಿ‘  ಪ್ರಕಟಿಸುತ್ತಿದೆ. ಎಷ್ಟೋ ತಂದೆಯರು ಮಕ್ಕಳಿಗೆ ಬಟ್ಟೆ ಹಣ ಇತ್ಯಾದಿ ಉಡುಗೊರೆ ಕೊಡುವದು ಸಾಮಾನ್ಯ. ಆದರೆ ಜಿಎಸ್ಸೆಸ್ ಅವರು ಮಗನಿಗೆ ಕೆಳಗಿನ ಕವನವನ್ನು ಸ್ಪೆಷೆಲ್ ಉಡುಗೊರೆಯಾಗಿ ಕೊಟ್ಟರು. ಕಳೆದ ಭಾನುವಾರದ ವರೆಗೆ ಇದು ಪ್ರಕಟವಾಗಿರಲಿಲ್ಲ.

GSS Photo Prasad cropped

 

 

 

 

 

Poem

 

 

 

 

 

 

 

 

 

 

 

 

(ಚಿತ್ರ: ಡಾ ಶಿವಪ್ರಸಾದ. ಹಕ್ಕುಗಳನ್ನು ಕಾದಿರಿಸಲಾಗಿದೆ)

 

(ಈ ಕವನವನ್ನು ಉಡುಗೊರೆಯಾಗಿ ಪಡೆದ ಮಗ ಶಿವಪ್ರಸಾದ ಹೇಳುತ್ತಾರೆ: ”ನಾನು ೨೦೦೯ ದೀಪಾವಳಿ ಸಮಯಕ್ಕೆ ಬೆಂಗಳೂರಿಗೆ ಭೇಟಿ ನೀಡೀದಾಗ ಅವರನ್ನು ಪರಿವಾರದೊಂದಿಗೆ ಬಂಡಿಪುರ ಹಾಗು ಉದಕಮಂಡಲ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದೆ. ಪ್ರವಾಸದಿಂದ ಬಂದ ನಂತರ ನಾನು ಇಂಗ್ಲಂಡಿಗೆ ಹೊರಡುವ ಮುನ್ನ ತಂದೆಯವರು ನನ್ನನ್ನು ಕೋಣೆಯೊಳಗೆ ಕರೆದು ತಾವು ಬರೆದ ’To Prasad ಸಫಾರಿ ನೆನಪಿಗೆ’ ಎಂಬ ಕವನವನ್ನು ನನಗೆ ಒಪ್ಪಿಸಿದರು. ಈ ಕವನಕ್ಕೆ ಒಂದು ಔಪಚಾರಿಕ (formal) ಶೀರ್ಷಿಕೆ ಇಲ್ಲವೆಂಬುದನ್ನು ಗಮನಿಸಬಹುದು. ಈ ಕವನ ಜಿಎಸ್ಸೆಸ್ ಅವರು ನನಗೆ ಕೊಟ್ಟ ವಿಶಿಷ್ಟವಾದ ಉಡುಗೊರೆ ಎಂದು ನಾನು ಭಾವಿಸಿದ್ದೇನೆ. GSS ಅವರ ಹಸ್ತಾಕ್ಷರಗಳನ್ನುಕೆಲವು ಆಪ್ತರು ಗುರುತಿಸಬಹುದು.)

*              *                    *                   *                         *                         *                   *

ಶ್ರದ್ಧಾಂಜಲಿ

ದೀಪವಿರದ ದಾರಿಯಲ್ಲಿ
ಭರವಸೆಯ ದೀಪವಿರಿಸಿ
ಸೋತು ನಿಂತ ಹೆಜ್ಜೆಗಳಿಗೆ
ಹೆಸರನಿಟ್ಟು, ಉಸಿರಕೊಟ್ಟು

ವೈಚಾರಿಕತೆಯ ತೈಲವನಿರಿಸಿ
ಜ್ಞಾನವೆಂಬ ಹಣತೆ ಹಚ್ಚಿ
ಪ್ರೀತಿ ಕರುಣೆಯಂಬ ಶಿಲೆಗೆ
ಕಾವ್ಯವೆಂಬ ಹೂವ ಮುಡಿಸಿ

ಸಮಾನತೆಯ ಮಂತ್ರ ಹಿಡಿದು
ಜಾತಿಯೆಂಬ ಕಳೆಯ ತೆಗೆದು
ಹಮ್ಮು ಬಿಮ್ಮು ಕಿತ್ತು ಎಸೆದು
ಅನುಕಂಪೆಯ ಹೃದಯ ತೆರೆದು

ನೋವು ನಲಿವುಗಳ ಕಣಿವೆ ಹಾದು
ಕಾಣದ ಕಡಲಿಗೆ
ಹಂಬಲಿಸಿ ಹಾತೊರೆದು
ನೀಲಿಯಲಿ ಕರಗಿ ನಮ್ಮೆಲ್ಲ ತೊರೆದು

ಸಾಹಿತ್ಯದ ಸಂಪುಟಗಳಲಿ
ಕನ್ನಡಿಗರ ಹೃದಯದಲ್ಲಿ
ಮಧುರ ಗೀತೆ ಸ್ವರಗಳಲ್ಲಿ
ಅಮರರಾಗಿ ಉಳಿದಿರಿಲ್ಲಿ.

                  –    ಡಾ. ಜಿ. ಎಸ್. ಶಿವಪ್ರಸಾದ್

 

 

 

 

8 thoughts on “ಜಿಎಸ್ಸೆಸ್ ನೆನಪು — ಅವರ ಒಂದು ‘ಸ್ಪೆಷೆಲ್‘ ಕವನ ಮತ್ತು ಡಾ. ಜಿ. ಎಸ್. ಶಿವಪ್ರಸಾದ್ ಅವರ ’ಶ್ರದ್ಧಾಂಜಲಿ’

  1. ಮೇಲಿನ ಕವನಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಎಲ್ಲರಿಗು ಹಾಗು ಜಿ ಎಸ ಎಸ ಅಭಿಮಾನಿಗಳಿಗೂ ಧನ್ಯವಾದಗಳು

    Like

  2. ಕೊನೆಯ ಚರಣದಲ್ಲಿ ಮೂಡಿಬರುವ ಭಾವನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾಡು ಕಾಡಾಗಿದೆ, ಕಾಡಲ್ಲಿ ನಾಡಿನ/ ಬದುಕಿನ ಒರತೆ ಇನ್ನೂ ಒಸರುತಿದೆ. ರವಿ ಕಾಣದ್ದನ್ನು ಇಲ್ಲಿ ಕವಿ ಕಂಡಿದ್ದಾನೆ.

    Like

  3. ಅವರದೇ ಜಾಡಿನಲ್ಲಿ ಮೂಡಿಬಂದ ಕವಿತೆ. ಈ ಕ್ರಿಸ್ಮಸ್ ಸಮಯದಲ್ಲಿ ಹಚ್ಚಿಟ್ಟ ಮೋಂಬತ್ತಿಯದಲ್ಲದಿದ್ದರೂ ಬೆಳಗುವ ದೀಪ. ಚೆನ್ನಾಗಿದೆ.

    Like

  4. ನನ್ನ ಅಣ್ಣ, ವಾದಿರಾಜ, ಎರಡು ವರುಷದ ಹಿಂದೆ ಬರೆದ ಕವನ (ಸ್ವಲ್ಪ ಮಾರ್ಪಾಡುಗಳೊಂದಿಗೆ).

    ಎದೆ ತುಂಬಿ ಬರೆದಿರಿ ಅಂದು ನೀವು
    ಮನವಿಟ್ಟು ಓದುವೆವು ಇಂದೂ ನಾವು
    ನಿಮ್ಮಕ್ಕರ ದೀಪಗಳು ನಮಗೆ ಬಹುಮಾನ
    ಭಾವಹಕ್ಕಿಕೇಳೀತೇ ಬಿರುದು ಸಮ್ಮಾನ?

    ಎಲ್ಲೋ ಹುಡುಕಿದೆ ಇಲ್ಲದ ಭಾವವ
    ಮಂಸ ಖಂಡಗಳ ಗುಡಿಯೊಳಗೆ
    ಇಲ್ಲೇ ಇರುವ ಪ್ರೀತಿ ಪ್ರೇಮಗಳು
    ಸಿಕ್ಕಿತು ನಿಮ್ಮ ಕಾವ್ಯದೊಳಗೆ

    ಮನಮನದಲಿ ದೀಪವ ಬೆಳಗಿಸಿ
    ಹೊತ್ತು ಹೊತ್ತಿಗೆ ಕವನವ ಬಡಿಸಿ
    ಜೀವಭಾವವ ತಬ್ಬಿದಾತ!
    ನಿಮಗೆ ಬೇರೆ ಹೆಸರು ಬೇಕೇ?
    ಕವಿ ಅಂದರೆ ಅಷ್ಟೇ ಸಾಕೆ?

    ಯಾವ ಹಾಡು ಹಾಡಲಿ?
    ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲಿ?
    ಹಚ್ಚಿ ಇಟ್ಟ ಹಣತೆ
    ಶಾಂತವಾದ ಗಳಿಗೆಯಲಿ?

    ಕಾಣದ ಕಡಲಿಗೆ ಹಂಬಲಿಸಿತೇ ಮನ?
    ಕಂಡರಿಯದ ಕಡಲನು ಕೂಡಿದೆ ಪ್ರಾಣ

    ಹಣತೆ ಹಚ್ಚುತ್ತೇವೆ ನಾವೂ
    ಶೃದ್ಧಾಂಜಲಿ ಎಂಬ ಭ್ರಮೆಯಿಂದಲ್ಲ
    ಶತಶತಮಾನಗಳು ನಿಮ್ಮ ಕಾವ್ಯದ ಹಣತೆ
    ಬೆಳಗುತಿರಲಿ ಎಂಬಾಸೆಯಿಂದ

    Like

  5. ಶಾಲಾಕಾಲೇಜಿನ ದಿನಗಳಿಂದ ಓದಿ, ಕೇಳಿ, ಸವಿದ ಜಿ.ಎಸ್.ಎಸ್ ಕವನಗಳು ನಮ್ಮ ನೆನಪಿನಿಂದ ಮರೆಯಾಗುವುದಿಲ್ಲ. ಕನ್ನಡದ ನೆಚ್ಚಿನ ಕವಿಯ ಜೀವನದ ಆದರ್ಶಗಳು, ಜೀವನದ ಮೌಲ್ಯಗಳು ಅವರು ಮರೆಯಾದ ನಂತರವೂ ಕನ್ನಡಿಗರ ಮನದಲ್ಲಿ ಅವರ ಕವನಗಳ ಮೂಲಕವೇ ತಾನೇ ನಿಲ್ಲುವುದು. ಅಂತೆಯೇ ಜಿ.ಎಸ್.ಎಸ್ ಅವರ ಜೀವನದ ತಿರುಳು ಸಹಾ ಅವರ ಕವನಗಳಲ್ಲೇ ಅಡಗಿವೆ. ಅವರ ಸವಿನೆನಪಿನಲ್ಲಿ ಬರೆದ ಕವನದಲ್ಲಿ, ಶಿವಪ್ರಸಾದರು ಜಿ.ಎಸ್.ಎಸ್ ಪದ್ಯಗಳ ಪದಗಳನ್ನು ಸೇರಿಸಿ ಸಾಲುಗಳನ್ನು ಹೆಣೆದ ವೈಖರಿ ಸೊಗಸಾಗಿದೆ. ಜಿ.ಎಸ್.ಎಸ್ ಅವರಿಗೆ ತಕ್ಕ ಶ್ರಧ್ಹಾಂಜಲಿ. ಇನ್ನು ಬಂಡಿಪುರದ ವನ್ಯಧಾಮವನ್ನು ಕುರಿತು ಬರೆದ ಜಿ.ಎಸ್.ಎಸ್ ಕವನದಲ್ಲಿ ಪ್ರಕೃತಿಯ ಬಗ್ಗೆ ಅವರಿಗಿದ್ದ ಪ್ರೀತಿ ಪ್ರೇಮಗಳು ಮತ್ತು ಕಾಳಜಿ ಕಂಡುಬರುತ್ತದೆ. ಅವರ ಹಸ್ತಾಕ್ಷರದಲ್ಲೇ ಇರುವ ಈ ಕವನ ನಮ್ಮ ನೆನಪಲ್ಲೂ ಸದಾ ಉಳಿಯುತ್ತದೆ. “ಮಾನವ ಗೌರವಿಸುವ ಮೌಲ್ಯಗಳೆಲ್ಲಾ ಕಾಡಿನಲ್ಲಿ ಸುರಕ್ಷಿತವಾಗಿವೆ“ ಎನ್ನುವ ಕವಿಯ ಮನದ ನೆಮ್ಮದಿಯ ಭಾವನೆ ನಮ್ಮ ಮನಗಳಲ್ಲೂ ಹಾಯುತ್ತದೆ.
    ಉಮಾ ವೆಂಕಟೇಶ್

    Like

  6. ಎಂದಿನಂತೆ ಮೇಲೆ ಸರಳವಾಗಿ ಕಂಡ ಸಾಲುಗಳ ಗರ್ಭದಲ್ಲಿ ಮಾನವ ಮೌಲ್ಯಗಳನ್ನು ಕಾಣುವ ಕವಿ – ಜೀವನೋತ್ಸಾಹದ ಜಿಂಕೆ, ಮತ್ತದರ ಮುಗ್ಧತೆ, ದಿವ್ಯ ನಿರ್ಲಕ್ಷತೆ, (ಅಲಕ್ಷ್ಯವಲ್ಲ), ಮೂರ್ತಿವಂತ ಪೌರುಷತೆ, ಸೌಂದರ್ಯೋಪಾಸನೆ, ಇತ್ಯಾದಿ — ಅವುಗಳು ಮಾನವನಲ್ಲೇ ಕಾಣುತ್ತಿಲ್ಲವಲ್ಲ ಎಂಬ ವ್ಯಂಗದೊಂದಿಗೆ ಮುಗಿಯುವ ಅಪರೂಪದ ಕವನ ಅಪರೂಪದ ಕೊಡುಗೆಯಾಗಿದೆ. ಅದನ್ನು ಸ್ವೀಕರಿಸಿದ ಚಿರಂಜೀವರು, ನಮಗೆ ಅದರ ಸವಿಯುಣಿಸಿದ್ದಕ್ಕೆ ಧನ್ಯವಾದಗಳು. ಜಿಎಸ್ಸೆಸ್ ಅವರ ಹಸ್ತಾಕ್ಷರದಲ್ಲೆ ಅದನ್ನು ನೋಡಿ ಓದಿದ್ದೇ ಮೈ ಮೇಲೆ ನವಿರೇಳಿಸುತ್ತದೆ. ಜೊತೆಗೆ ಅವರ ಕವಿತೆಗಳನ್ನೇ ನೆನೆದು ಹೆಣೆದು ಅವರಿಗೆ ಹಾಕಿದ ಮಾಲೆಯ ಶ್ರದ್ಧಾಂಜಲಿ ನಮ್ಮ ಈ ‘ಅನಿವಾಸಿ‘ಗೆ‘ ದೊರೆಕಿದ್ದು ಇನ್ನೂ ಸ್ಪೆಷಲ್!

    Like

  7. ಜಿಎಸ್ ಎಸ್ ಕವಿತೆ ಚಿಕ್ಕದಾಗಿ ಸರಳವಾಗಿದ್ದರೂ ಕೊನೆಯಲ್ಲಿ ಬರುವ ಐರನಿ/ ವ್ಯಂಗ್ಯ ಕರುಳು ಕೊಯ್ಯುತ್ತದೆ. ಯಾವುದೇ ಆಡಂಬರವಿಲ್ಲದೇ ಕವಿತೆ ಕಟ್ಟುವ ಕಲೆ ಕಲಿಯಬೇಕೆಂದಿದ್ದರೆ ಜಿ ಎಸ್ ಎಸ್ ಕವಿತೆಗಳು ಮಾರ್ಗದರ್ಶಿ ಎನ್ನುವುದಕ್ಕೆ ನಿದರ್ಶನದಂತಿದೆ ಈ ಸರಳ ಸುಂದರ ಕವನ.

    ಜಿ ಎಸ್ ಎಸ್ ಅವರ ಕವಿತಗಳಿಂದಲೇ ತಂದೆಯ ನೆನಪಿಗೆ ಬರೆದ ಕವನ ನನಗೆ ತುಂಬ ಇಷ್ಟವಾಯಿತು ಪ್ರಸಾದವರೇ.

    Like

  8. ನಮ್ಮ ನೆಚ್ಚಿನ ಕವಿಯ ಬದುಕಿನ ಒಂದು ಅಪ್ಯಾಯಮಾನ ಸಾಹಿತ್ಯ ಕ್ಷಣದ ಇಣುಕು ನೋಟದೊಂದಿಗೆ ಸಂದ ಈ ಶ್ರದ್ದಾಂಜಲಿ ನಿಜಕ್ಕೂ
    ವಿಶೇಷ.
    ಬಂಡೀಪುರಕ್ಕೆ ಹೋದಾಗ ನಮ್ಮ ಸಾಮಾನ್ಯ ಕಣ್ಣುಗಳಿಗೆ ಕಾಣುವ ಅದೇ ಪ್ರಾಣಿಗಳಲ್ಲಿ ಜಿ.ಎಸ್. ಎಸ್. ಕಂಡ ಮೌಲ್ಯಗಳು ಅವರ ಕವಿ ಹ್ರುದಯದ ಉತ್ತುಂಗಕ್ಕೆ ಸಾಕ್ಶಿ. ಡಾ. ಪ್ರಸಾದರು ಈ ಕಾವ್ಯ ಕೊಡುಗೆಗೆ ಕವನದ ರೂಪದಲ್ಲೇ ಉತ್ತರ ನೀಡಿ ಈ ಸಂದರ್ಭವನ್ನು ಅಮರಗೊಳಿಸಿದ್ದಾರೆ.ಜಿ.ಎಸ್.ಎಸ್. ರ ಕಾವ್ಯ ಸ್ಪೂರ್ತಿ, ಬದುಕಿನ ಉದಾತ್ತ ನಂಬಿಕೆಗಳು ನಮ್ಮೆಲ್ಲರಿಗೂ ದಾರಿ ದೀಪವಾಗಲಿ.

    Like

Leave a comment

This site uses Akismet to reduce spam. Learn how your comment data is processed.