ವಿದೇಶ-ಸ್ವದೇಶ ಮತ್ತು ವ್ಯತ್ಯಾಸ – ಪ್ರೇಮಲತಾ ಬರೆದ ಲೇಖನ

ವಿದೇಶಕ್ಕೆ ಸ್ವ-ಇಚ್ಚೆಯಿಂದ ಬಂದು ನೆಲೆನಿಂತ ಮೇಲೆ ಅನಿವಾಸಿಗೆ ಸ್ವದೇಶದ ಬಗ್ಗೆ ಹಂಬಲವೇಕೆ? ಆಗಿಂದಾಗ ವಿದೇಶದ ಈ ಬದುಕಿನ ಬಗ್ಗೆ ಮನಸ್ಸಿನಲ್ಲಿ ಅತೃಪ್ತಿ ಏಕೆ? ಈ ಪ್ರಶ್ನೆಗಳು ಸಹಜವಾದರೂ ಗೊಂದಲಕ್ಕೀಡು ಮಾಡುವಂಥವು. ಇದರ ಬಗ್ಗೆ ಸುದೀರ್ಘವಾಗಿ ವಿಚಾರ ಮಾಡಿ ಉತ್ತರ ಹುಡುಕುವ ಪ್ರಯತ್ನ ಇದು. ಅನಿವಾಸಿಗಳು ಎಲ್ಲರೂ ಓದಲೇಬೇಕಾದ ಲೇಖನವನ್ನು ಬರೆದಿದ್ದಾರೆ ಡಾ ಪ್ರೇಮಲತಾ ಅವರು.

ವಿದೇಶ-ಸ್ವದೇಶ ಮತ್ತು ವ್ಯತ್ಯಾಸ

ವಿದೇಶದಲ್ಲಿ ಬದುಕಿರುವವರು ಸ್ವದೇಶವನ್ನು ನೆನೆದು ಕೊರಗುವುದು ಸಾಮಾನ್ಯ.ಇಲ್ಲಿಗೆ ಬರುವಾಗಿನ ಹೊಸ ಬದುಕಿನ ಆಸೆ, ನಿರೀಕ್ಷೆಗಳು ಕೈಗೂಡಿದಂತೆ, ಕನಸುಗಳು ಕರಗಿದಂತೆ, ಉತ್ಸಾಹ ತಣಿದಂತೆ ಕಾಲ ಕೂಡ ಕರಗುತ್ತದೆ. ತಮ್ಮ ಊರಿನ ನೆನಪು, ತಾರುಣ್ಯದ ದಿನಗಳು, ಪೂರ್ವದ ದಿನಗಳು ಆಗಾಗ ಕಾಡಬಹುದು.

ಏನನ್ನು ಸಾಧಿಸಲು ಇಲ್ಲಿಗೆ ಬರುತ್ತೇವೋ, ಅಷ್ಟನ್ನು ಸಾಧಿಸಿದ ನಂತರ ಮುಂದೇನು ಎಂಬ ಪ್ರಶ್ನೆ ಕೆಲವರನ್ನು ಕಾಡಬಹುದು. ಮಕ್ಕಳು ಬೆಳೆದಂತೆ, ಸಂಸ್ಕೃತಿಗಳ ತಾಕಲಾಟಗಳು ಎದುರಾಗುತ್ತವೆ. ಕಾಲ ಸರಿದಂತೆ, ನಮ್ಮ ಊರಿನಲ್ಲೂ ಪರಿಸ್ಠಿತಿಗಳು ಬದಲಾಗುತ್ತವೆ. ಇಷ್ಟದವರ ಕಷ್ಟ-ಸುಖಗಳಲ್ಲಿ ಭಾಗಿಯಾಗುವುದು ನಿಲ್ಲುತ್ತದೆ. ನಮ್ಮ ಮಕ್ಕಳಿಗೆ ರಜೆಯಿದ್ದಾಗ ಅಲ್ಲಿನ ಮಕ್ಕಳಿಗೆ ರಜೆಯಿರುವುದಿಲ್ಲ. ನಾವು ಅನಿವಾರ್ಯವಾಗಿ ಈ ಪರಿಸ್ಥಿತಿಗೆಗಳಿಗೆ ಬಗ್ಗಿ ಬದಲಾದಂತೆ, ನಮ್ಮ ಒಡಹುಟ್ಟಿದವರು ಕೂಡ ಬದಲಾಗುತ್ತಾರೆ . ಮುಂದುವರೆದ ವಿದೇಶದಲ್ಲಿ ಎಲ್ಲೋ ಒಂದು ಕಡೆ ಮಕ್ಕಳು ಸುಖವಾಗಿದ್ದಾರೆ ಎನ್ನುವ ಸಮಧಾನದಲ್ಲಿ, ಹಿರಿಮೆಯಲ್ಲಿ ತಂದೆ ತಾಯಿಗಳು ಸುಖ ಪಟ್ಟು, ದೂರಸರಿದ ಒಡಲಿನ ಕರುಳ ಬಳ್ಳಿಗಳ ದೂರ ಸಂಬಂಧದಲ್ಲಿ ರಾಜಿಯಾಗುತ್ತಾರೆ. ಒಂಟಿತನಕ್ಕೆ ಒಗ್ಗಿಕೊಳ್ಳಲು ಹೆಣಗುತ್ತಾರೆ. ಕೊನೆಗಾಲಕ್ಕೆ ಇತರೆ ನೆಂಟರ, ಗೆಳೆಯರ ಮೊರೆಹೊಗುತ್ತಾರೆ. ಕಾಲಕ್ರಮೇಣ ನಮ್ಮ ಸಂಭಂದದ ಒಂದು ಕೊಂಡಿ ಜೀವಿಸಿದ್ದೂ ಕಡಿದುಹೋಗುತ್ತದೆ.

ಈ ಪರಿಸ್ಥಿತಿಯಲ್ಲಿ ನಮ್ಮಲ್ಲಿ ಆಗಾಗ ವಿದೇಶಿ ವಾಸದ ಬಗ್ಗೆ ದ್ವಂದ್ವಗಳು ಹುಟ್ಟದೇ ಇರುವುದಿಲ್ಲ.

ವಿದೇಶಕ್ಕೆ ಸ್ವ-ಇಚ್ಚೆಯಿಂದ ಬಂದು ನೆಲೆನಿಂತು ಸ್ವದೇಶದ ಬಗ್ಗೆ ಹಂಬಲವೇಕೆ ಅಥವಾ ವಿದೇಶದ ಈ ಬದುಕಿನ ಬಗ್ಗೆ ಆಗಾಗ ಅತೃಪ್ತಿ ಏಕೆ ಹೊಗೆಯಾಡುತ್ತದೆ? ಎಂಬ ಪ್ರಶ್ನೆ ಉದ್ಭವವಾಗುವುದು ವಿಚಾರಕ್ಕೆ ಎಡೆಮಾಡಿ ಕೊಡುತ್ತದೆ ಮತ್ತು ಉತ್ತರ ಹುಡುಕಲು ಜನರನ್ನು ಪ್ರೇರೇಪಿಸುತ್ತದೆ. ಉತ್ತರ ಹುಡುಕುವವರು ತಮಗೆ ಅನ್ವಯವಾಗುವ ಭಿನ್ನ ಉತ್ತರಗಳನ್ನು ಕಂಡುಕೊಂಡಿದ್ದಾರೆ. ಇವೆರಡನ್ನೂ ಮಾಡದ ದೊಡ್ಡ ಜನ-ಮಂದೆಯೇ ನಮ್ಮ ನಡುವೆ ಇದೆ. ಅವರಿಗೆ ಮೇಲಿನ ಯಾವ ತಾಕಲಾಟಗಳೂ ಇಲ್ಲ!.

ಆರ್ಥಿಕ ಅನುಕೂಲಕ್ಕಾಗಿ ವಿದೇಶಕ್ಕೆ ಬಂದಿರುವ ಜನ ಬಹಳಿದ್ದಾರೆ. ಆದರೆ, ಅದಕ್ಕೆ ಭಿನ್ನವಾಗಿ ಅನುಕೂಲವಂತರ ಮನೆಯಲ್ಲಿ ಹುಟ್ಟಿ, ತುಂಬು ಬದುಕು ಬದುಕುವ ಎಲ್ಲ ಅವಕಾಶಗಳನ್ನು ಬಿಟ್ಟು, ಅಪಾರ ಆಸ್ತಿ-ಪಾಸ್ತಿಯನ್ನು ಹಿಂದಿಟ್ಟು ಇಲ್ಲಿಗೆ ಬಂದವರೂ ಇದ್ದಾರೆ.ಸಮಾಜದಲ್ಲಿ ಸ್ಥಾನ-ಮಾನ ಗಳಿಕೆಗಾಗಿ ವಿದೇಶಕ್ಕೆ ಬಂದವರೂ ಇದ್ದಾರೆ. ಇನ್ನು ಕೆಲವರು ಸಮಾಜದಲ್ಲಿ ತಮಗೆ ಅಂಟಿಕೊಂಡ ತಮಗೆ ಬೇಡವಾದ ಬಿರುದು-ಬಾವಲಿಗಳಿಂದ ದೂರವಾಗಲು ಪಲಾಯನಗೈದಿದ್ದಾರೆ. ಇನ್ನು ಕೆಲವರು ತಮ್ಮ ಪ್ರತಿಭೆಗೆ ಮುಂದುವರಿದ ಈ ದೇಶಗಳಲ್ಲಿ ಹೆಚ್ಚು ಅವಕಾಶವಿರುವುದನ್ನು ಅರಿತು ಮುಂದಿನ ತರಬೇತಿ ಗಳಿಸಲು-ಇಲ್ಲಿ ಸಲ್ಲಲು ಪಣತೊಟ್ಟು ಬಂದಿದ್ದಾರೆ. ಇನ್ನು ಕೆಲವರು ಇಲ್ಲಿನ ಜೀವನ ಕ್ರಮಗಳಿಗೆ ಮಾರು ಹೋಗಿ, ’ಬದುಕಿದರೆ ಪಾಶ್ಛಿಮಾತ್ಯ ದೇಶಗಳಲ್ಲಿ’ ಎಂಬ ಶ್ರದ್ದೆಯಿರುವವರು ! ಅನ್ವೇಷಣೆ ಮನುಷ್ಯನ ಪ್ರೇರಣೆ.

ನಾವೇಕೆ ಇಲ್ಲಿಗೆ ಬಂದಿದ್ದೇವೆ ಎನ್ನುವ ಪ್ರಶ್ನೆಗೆ ಉತ್ತರಗಳು ತುಂಬಾ ಇವೆ. ಅವೇನೇ ಇದ್ದರೂ ಕೊರಗು ಹುಟ್ಟಿರುವುದು ಅವರು ವಿದೇಶಕ್ಕೆ ಬಂದ ಕಾರಣವನ್ನು/ಗುರಿಯನ್ನು ಮುಟ್ಟಿದ ಮೇಲೆ! ಅಥವ ಅವರ ಗುರಿ ತೀರದ ದಾಹವಾಗಿ ಕೊನೆ ಕಾಣದಾದಾಗ. ಅಥವಾ ಅವರ ಲೆಕ್ಕಾಚಾರ ತಪ್ಪಿ ಅದು ಇನ್ನೇನೋ ವಿಧಿಯಾಗಿ ಕಾಡಿದಾಗ!

ವಿದೇಶದ ಅನುಭವ ಜನಗಳಿಗೆ ನಾನಾ ವಿಧದಲ್ಲಿ ಆಗಬಹುದು.ಅದರಲ್ಲಿ ಹಲವರಿಗೆ ನಿರಾಸೆಯಾದರೆ ಇನ್ನು ಕೆಲವರಿಗೆ ಭ್ರಮನಿರಸನವನ್ನು ತರಬಹುದು.ಆದರೆ ವಿಜಯ ದುಂದುಭಿಗಳನ್ನು ಊದುವವರನ್ನೇ ನಾವು ಹೆಚ್ಚು ನೋಡುವುದು ವಿಶೇಷ!

ವಿದೇಶಗಳಿಗೆ ಪ್ರವೇಶ!

ನೆನಪಿಡಿ. ವಿದೇಶಕ್ಕೆ ಬರುವ ನಮ್ಮ ಜನ ಬುದ್ದಿವಂತರು. ಮುಂದೆಬರಬೇಕೆನ್ನುವ ಸಧೃಡ ಮನೋಬಲದ ಜನ. ಇವರಲ್ಲಿ ವಿಶೇಷ ಗುಣಗಳಿಲ್ಲದಿದ್ದಲ್ಲಿ ಇಲ್ಲಿ ಸಲ್ಲದ ಕಾರಣ, ತಮ್ಮ ಅನುಕೂಲಗಳನ್ನು ಮೆಟ್ಟಿನಿಂತು ದುಡಿಯಲು ಇವರು ತಯಾರು. ಪ್ರತಿಭಾವಂತರ ತಂಡ ಅಂತಲೇ ಅನ್ನಬಹುದು.

ನಮ್ಮ ದೇಶದ ಭ್ರಷ್ಚಾಚಾರದ ಅರಿವಿರುವ ವಿದೇಶಗಳು ನಮ್ಮನ್ನು (ಅಗ್ನಿ) ಪರೀಕ್ಷೆಗಳಿಗೆ ಒಳಪಡಿಸಿ,ಶುದ್ದೀಕರಿಸಿ ನಂತರ ಒಳಸೇರಿಸುವುದು ಮತ್ತು ಅದಕ್ಕೆ ತಲೆ ತಿನ್ನುವ ಕಾಗದಪತ್ರಗಳನ್ನು ಕೇಳುವುದು ನಡೆದು ಬಂದ ಪದ್ದತಿ. ಇಲ್ಲಿ ನ್ಯಾಯ ಎಲ್ಲರಿಗೂ ದೊರೆಯದೆ ಹೋಗುವ ಸಾದ್ಯತೆಯಿದೆ. ಈ ಹಂತದಲ್ಲೇ ಹಲವರಿಗೆ, ಕೊರಗುಗಳು ಹುಟ್ಟಬಹುದು.

ವಿದೇಶ ವಾಸ

ಮೊದಲ ೨೫-೩೦ ವರ್ಷ ನಮ್ಮ ದೇಶದಲ್ಲಿ ಬೆಳೆದು, ಓದಿ, ಕನಸು ಕಟ್ಟಿ, ಮದುವೆ ಇತರೆ ನಾನಾ ರೀತಿಯ ಸ್ವದೇಶಿತನವನ್ನು ಮೈಗೂಡಿಸಿಕೊಂಡು ಸ್ವದೇಶಕ್ಕೆ ಒಗ್ಗಿಕೊಂಡ ಮೇಲೆ ಪರದೇಶ ವಾಸ ದೊಡ್ಡ ಬದಲಾವಣೆ. ಸ್ವಂತ ಇಷ್ಟಕ್ಕೆ ಅಂತಲೇ ಬಂದರೂ ತಾಯಿಮನೆಯಂತೆ ತಾಯಿದೇಶವನ್ನು ತೊರೆದು ಬಂದ ಕೊರಗು ಒಂದೆಡೆ ಮನೆಮಾಡಿರುತ್ತದೆ.

ಕೆಲಸ ಕೊಡುವ ಜನರಿಗೆ ನಾವು ಬೇಕಿದ್ದರೂ, ಜನ ಸಾಮಾನ್ಯರು ನಮ್ಮನ್ನು ’ಹೊಟ್ಟೆ ಹೊರೆಯಲು ಬಡದೇಶಗಳಿಂದ ಬಂದ ಜನರೆಂಬ’ ಧೋರಣೆಯಿಂದ ನೋಡುವುದು ಸರ್ವ ವೇದ್ಯ. ಸೂಕ್ಷ್ಮ ಸಂವೇದನೆಯಿದ್ದಲ್ಲಿ ಇದನ್ನು ಗ್ರಹಿಸುವುದು ಕಷ್ಟವೇನಲ್ಲ.

ನಮ್ಮ ಕೆಲಸದ ಗೋಡೆಗಳ ಮಧ್ಯೆ ನಾವು ಸಮಾನವಾದರೂ, ಆಳದಲ್ಲಿ ಈ ತಿಳಿವು ನಮಗಿರುವುದು ಅಗತ್ಯ ಕೂಡ. ದೊಡ್ಡ ತತ್ವ ಮತ್ತು ಕಾನೂನುಗಳ ರಕ್ಷಣೆಯಿಲ್ಲದಿದ್ದಲ್ಲಿ ಪರದೇಶದ ಬದುಕು ಕಷ್ಟವಾಗಬಹುದಿತ್ತು. ಬ್ಯಾಂಕುಗಳಲ್ಲಿ ನಮ್ಮ ಮೊತ್ತ ದೊಡ್ಡದಿದ್ದರೂ, ನಮ್ಮ ವಿದ್ಯೆ, ಹಣಬಲ, ಬುದ್ದಿಬಲದಲ್ಲಿ ನಾವು ಮುಂದಿದ್ದರೂ ಈ ಪರದೇಶಿ ಎಂಬ ಸುಪ್ತ ಪ್ರಜ್ಞೆಯನ್ನು ಪೂರ್ಣ ನಿವಾಳಿಸಲು ಸಾದ್ಯವಿಲ್ಲ.

ಈ ಎಲ್ಲ ಸತ್ಯಗಳು ನಮಗೆ ಮಾತ್ರ ಸೀಮಿತವೆ?

ಇಲ್ಲಿನ ದೂರದರ್ಶನದಲ್ಲಿ ‘ ಡೌನ್ ಅಂಡರ್’ ( Down Under) ಎಂಬ ಕಾರ್ಯಕ್ರಮವನ್ನು ನೋಡಿದ್ದೀರ?

ಸಾಮಾನ್ಯವಾದ ರೂಪು, ಬಣ್ಣ, ಭಾಷೆ, ಧರ್ಮ, ಮತ್ತು ಊಟಗಳೆಲ್ಲವನ್ನು ಹೊಂದಿದ್ದು ಇಲ್ಲಿಂದ ಆಸ್ಟ್ರೇ ಲಿಯಕ್ಕೆ ಹೋದ ಜನ ತಮ್ಮ ತಾಯ್ನೆಲವನ್ನು ನೆನೆದು, ಸಂಬಧಿಕರನ್ನು ನೆನೆದು ಗೋಳೋ ಎಂದು ಅಳುತ್ತಾರೆ. ಕೊರಗುತ್ತಾರೆ. ಹಿಂತಿರುಗುತ್ತಾರೆ. ಅಲ್ಲಿಯೇ ತಮ್ಮಂತೆ ಬಂದ ಜನ ಸಿಕ್ಕಲ್ಲಿ ಬೆರೆತು, ಕಷ್ಟ –ಸುಖ ಹೇಳಿಕೊಂಡು ನಿಟ್ಟುಸಿರಿಡುತ್ತಾರೆ.

ಸ್ವ-ಇಚ್ಹೆಯಿಂದಲೇ ಬಂದರೂ, ”ಇರುವುದೆಲ್ಲವ ಬಿಟ್ಟು ಇರದುದರೆಡೆ’’ ಮನವು ತುಡಿಯುವುದು, ಕೊರಗುವುದು ಸಹಜ. ಕೊರಗಕೂಡದು ಎಂಬುದು ಅವರವರಿಗೆ ಹಾಕಿಕೊಂಡ ಕಟ್ಟಳೆ. ’ನಾವೆಲ್ಲಿದ್ದರೂ ಸುಖ ಕಾಣಬಲ್ಲೆವು ಎನ್ನುವವರು’ ಈಗಾಗಲೇ ಮತ್ತೊಂದನ್ನು ಅರಸಿ ಪರದೇಶಿಗಳೇಕಾದರು ? ಎನ್ನುವುದನ್ನು ಕೇಳಿಕೊಳ್ಳಬೇಕು.

ಯಾಕೆಂದು ನೋಡೋಣ.

ತಮ್ಮ ಮನೆ,ಊರು, ಸಂಸ್ಕೃತಿ, ಭಾಷೆ ಯಾವುದನ್ನೂ ತೊರೆಯದೆ ಇರುವುದರಲ್ಲೇ ಎಲ್ಲ ಸಂತೋಷ, ಅರ್ಥಗಳನ್ನು ಕಂಡುಕೊಂಡು, ನಮ್ಮ ಅತಿರೇಕದ, ಭ್ರಷ್ಟಾಚಾರದ ಸಮಾಜಕ್ಕೆ ಅಪಾರ ಕೊಡುಗೆಗಳನ್ನು ನೀಡಿದ ಮಹಾನುಭಾವರು ಎಲ್ಲ ದೇಶಗಳಲ್ಲಿರುವಂತೆ ನಮ್ಮ ದೇಶದಲ್ಲೂ ಇದ್ದಾರೆ. ಇವರ ಮುಂದೆ ನಾವು ಅಲ್ಪರು. ಪಲಾಯನದಲ್ಲಿ ಹಣ, ಸುಖ, ಘನತೆ ಅವಕಾಶ ಮತ್ತು ಸೌಕರ್ಯಗಳನ್ನು ಹುಡುಕಿಬಂದು ನೆಲೆನಿಂತವರು. ಇವರಲ್ಲಿ ಆಂತರ್ಯವನ್ನು ಹುಡುಕಿಕೊಳ್ಳ ಎದೆಗಾರಿಕೆ ಕೆಲವರಿಗೆ ಮಾತ್ರ ಇದೆ. ಒಪ್ಪಿಕೊಳ್ಳುವುದರಲ್ಲಿ ಯಾವ ಸಂಕೋಚಗಳ ಅಗತ್ಯವಿಲ್ಲ.

ಪರದೇಶದಲ್ಲಿ ಕೊರಗು ಸಹಜ. ನಾವು ಮಾತ್ರ ಕೊರಗೇ ಇಲ್ಲದಂತೆ ಬದುಕಿದ್ದೇವೆ ಎಂಬುದು ಅವರವರಿಗೆ ಇರುವ ಸಂವೇದನೆಗಳನ್ನು ಸಂಬಧಿಸಿದ ವಿಚಾರ. ಕೊರಗನ್ನು ಕಳೆದುಕೊಳ್ಳಲು ಮಾಡುವುದು ಮಾತ್ರ ’ಮನುಷ್ಯ ಪ್ರಯತ್ನ”.

 ನಾವೇಕೆ ಸ್ವದೇಶಕ್ಕೆ ಮರಳುವುದಿಲ್ಲ?

ಈ ದೇಶಕ್ಕೆ ಬಂದ ಹೊಸತರಲ್ಲಿ ನಮಗಿಂತ ೩೦-೪೦ ವರ್ಷಗಳ ಹಿಂದೆಯೇ ಬಂದ ಹಲವರ ಜೊತೆ ಒಡನಾಟ ಬೆಳೆಯಿತು.

ಇವರು ಬಹಳ ಸಿರಿವಂತ ಕುಟುಂಬಗಳಿಂದ ಬಂದವರು. ವಿದ್ಯೆ ತಲಮಾರುಗಳಿಂದ ಇವರಿಗೆ ದೊರೆತಿತ್ತು .ಇವರ ಕಾಲದಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆಯುವುದು ನಮ್ಮ ದೇಶದಲ್ಲಿ ಕಷ್ಟವಿರಲಿಲ್ಲ. ವಿದೇಶಗಳಿಗೆ ಬರಲು, ಪ್ರಯಾಣ ದುಬಾರಿಯಾಗಿತ್ತು. ಕೆಲಸ ಸುಲಭವಾಗಿ ದೊರೆತರೂ ಬದುಕು ಮಾತ್ರ ಒಂಟಿಯಾಗುತಿತ್ತು. ಇವರನ್ನು ನಮ್ಮ ದೇಶದ ಜನರು ದೇವತೆಗಳಂತೆ ಕಂಡಿದ್ದರೆ ಅಚ್ಚರಿಯಿರಲಿಲ್ಲ.

ಪರದೇಶದ ಚಳಿಯ ವಾತಾವರಣದಲ್ಲಿ, ಒಂಟಿಯಾಗಿ ಬದುಕಿ, ಅಲ್ಪ ಸಂಬಳದಲ್ಲಿ ಬದುಕಿ, ೩-೪ ವರ್ಷಗಳಿಗೊಮ್ಮೆ ಭಾರತಕ್ಕೆ ಹಿಂತಿರುಗೆ ಇವರು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ!

ಆಚಾರವಂತ ಮನೆಗಳಿಂದ ಬಂದ ಈ ಕೆಲವರು, ರಾತ್ರಿಗಳಲ್ಲಿ ನಿದ್ದೆ ಕಳಕೊಂಡಿದ್ದುಂಟು. ಕನಸಿನಲ್ಲಿ ಬೆವರಿ, ಬೆಳಿಗ್ಗೆ ಭಾರತಕ್ಕೆ ಹಿಂತಿರುಗುವ ಮನಸ್ಸು ಮಾಡಿದ್ದುಂಟು! ಊಟ, ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ಪೂರಕ ವಾತಾವರಣವಿಲ್ಲದೆ, ಮಕ್ಕಳಿಗೆ ಏನನ್ನು ಕಲಿಸುವುದು ಎಂದು ದ್ವಂದ್ವಗಳನ್ನು ಅನುಭಸಿದ್ದುಂಟು. ಈ ವರ್ಗಕ್ಕೆ, ಪರದೇಶದಲ್ಲಿ ಬದುಕುವ ತಾಪತ್ರಯ ಯಾಕೆ ಬೇಕಿತ್ತು ?

ನೇರವಾಗಿ ಕೇಳಿಯೂ ಇದ್ದೇನೆ. ಉತ್ತರಕ್ಕಾಗಿ ಕೆಲವರು ತಡಕಾಡುವುದನ್ನು ಕಂಡಿದ್ದೇನೆ. ಇನ್ನು ಕೆಲವರು ಹಳೆಯ ದಿನಗಳಿಗೆ ಜಾರಿ, ಅನುಭವಿಸಿದ ಒಂಟಿತನ, ಹೆದರಿ ನಡುಗಿದ ಘಟನೆಗಳನ್ನು ನನಗೆ ಹೇಳಿದ್ದಾರೆ. ಒಂದು ಘಟನೆಯಂತೂ ವಿಷಾದ ಮೂಡಿಸಿದೆ.

ಈ ಕುಟುಂಬ ಹಲವರಂತೆ ಆರ್ಥಿಕ ಉತ್ತಮತೆಯನ್ನು ಅರಸಿ ಬಹಳ ಹಿಂದೆಯೇ ಇಲ್ಲಿಗೆ ಬಂದು ನೆಲೆ ನಿಂತಿತ್ತು. ಇವರ ದಿನಗಳಲ್ಲಿ ಮತ್ತೊಬ್ಬ ಭಾರತೀಯನನ್ನು ರಸ್ತೆಯಲ್ಲಿ ಕಾಣುವುದು ದುರ್ಲಭವಾಗಿತ್ತು.ಈ ಮಾನಸಿಕ ಒತ್ತಡ ಸ್ವಂತ ಜೈಲುವಾಸದ ಶಿಕ್ಷೆಯಾಗಿ ಬದುಕನ್ನು ಬವಳಿಸಿತ್ತು. ಇವರಿದ್ದ ಜಾಗದಲ್ಲಿ ಇನ್ನೊಬ್ಬ ಭಾರತೀಯನನ್ನು ಭೇಟಿಯಾಗುವುದು ಬಹಳ ಕಷ್ಟಕರವಾಗಿತ್ತು. ಯಾರನ್ನಾದರು ನೋಡಿದರೆ ನಿಜವಾಗಿ ಸಿಹಿ ಸವಿದಂತಿತ್ತು.

ಇವರಿಗೆ ಒಂದು ದಿನ ರಸ್ತೆಯಲ್ಲಿ ಇನ್ನೊಬ್ಬ ಅಪರಿಚಿತ ಭಾರತೀಯನ ದರ್ಶನವಾಯ್ತು. ನಗೆಯ ವಿನಿಮಯವಾಯ್ತು. ಮರುಕ್ಷಣ ಒಬ್ಬರ ಕೈಯನ್ನೊಬ್ಬರು ಹಿಡಿದು ಧಾರಾಕಾರ ಕಣ್ಣೀರು ಸುರಿಸಬೇಕೆ? ಮಾತು ಹೊರಟಿದ್ದು ಆಮೇಲೆ!

ಮೇಲಿನ ಘಟನೆ ಬಹಳ ಹಿಂದೆ ಬಂದ ತಲೆಮಾರು ಅನುಭವಿಸಿದ ಒಂಟಿತನದ ಒತ್ತಡಗಳ ಪರಮಾವಧಿಯಾಗಿರಬಹುದು. ಇದನ್ನೆಲ್ಲ ಅನುಭವಿಸುವುದನ್ನು ಬಿಟ್ಟು ವಾಪಸ್ಸು ಯಾಕೆ ಹೋಗಲಿಲ್ಲ? ಅಂತ ನಾನು ಕೇಳದೆ ಬಿಟ್ಟಿಲ್ಲ. ಕೆಲವರು ವಾಪಸ್ಸು ಹೋದದ್ದುಂಟು. ಮತ್ತೆ ಕೆಲವರು ಬೇರೆ ದೇಶಗಳಿಗೆ ಹೋದದ್ದುಂಟು. ಇನ್ನು ಕೆಲವರು ಹೋಗಿ ಹಿಂತುರುಗಿ ಬಂದದ್ದುಂಟು.

ಮತ್ತೆ ಕೆಲವರು, ’ಇಷ್ಟೆಲ್ಲ ಕಷ್ಟ ಪಟ್ಟು,ಸಾಧಿಸಿ ನೆಲೆನಿಂತಮೇಲೆ ಅದನ್ನೆಲ್ಲ ನೀರಲ್ಲಿ ಹೋಮಮಾಡಿ ಹೊರಟು ಹೋಗಲಾಗದೆ ಇಲ್ಲೇ ಉಳಿದು ಕಾಲ ತಂದ ಎಲ್ಲ ಬದಲಾವಣೆಗಳನ್ನು ನೋಡಿ ನಿಟ್ಟುಸಿರಿಟ್ಟಿದ್ದುಂಟು!.

ಹಲವು ದಶಕಗಳನ್ನು ಕಳೆದರೂ ಇಲ್ಲಿ ಪರಿಪೂರ್ಣ ಸಲ್ಲದೆ, ಮರಳಿ ಹೋದರೆ ಅಲ್ಲಿಯೂ ಸಲ್ಲದೆ ಹೋದವರಾಗಿ ಉಳಿದವರು ಕಾಲಮಿಂಚುವ ಮುನ್ನ ಹಿಂತಿರುಗಿ ಹೋಗುವಂತೆ ನಮಗೆ ಸಲಹೆ ನೀಡಿದ್ದೂ ಉಂಟು!

ನಮ್ಮ ಕಾಲ

ಕಳೆದ ದಶಕದಲ್ಲಿ ಆದ ಬದಲಾವಣೆಗಳು ಬಹಳ. ಒಂದೇ ಕಾಲೇಜಿಗೆ ಸೇರಿದ, ಒಂದೇ ತರಗತಿಯಲ್ಲಿ ಓದುತಿದ್ದ ೨೫-೩೦ ಜನ ಒಟ್ಟಿಗೆ ಇಲ್ಲಿಗೆ ಬಂದಿರುವುದುಂಟು! ಕೆಲಸಗಳಲ್ಲಿ ಹಲವು ಭಾರತೀಯ ಸಹೋದ್ಯೋಗಿಗಳಿದ್ದು ಮುಖ ಕಂಡರೂ ಕಾಣದಂತೆ ನಡೆವ ಅನುಕೂಲಗಳೂ ನಮಗುಂಟು!

ನಮ್ಮ ದೇಶದಲ್ಲಿ ವಿದೇಶಕ್ಕೆ ಹೋಗುವುದು ಈಗ ಅತಿ ವಿಶೇಷವಾದ ವಾರ್ತೆಯೇನಾಗಿ ಉಳಿದಿಲ್ಲ.ಇನ್ನು ಆರ್ಥಿಕತೆಯ ವಿಚಾರ. ಇದೀಗ ನಮ್ಮ ದೇಶದಲ್ಲಿ ಜನರ ಬಳಿ ಹಣವಾಡುತ್ತಿದೆ. ಅದಕ್ಕಿಂತ ಹೆಚ್ಚಾಗಿ ಹಣದ ಬಗೆಗಿನ ಧೋರಣೆಗಳು ಬದಲಾಗುತ್ತಿವೆ. ಇನ್ನೂ ಹೆಚ್ಚಾಗಿ, ಸಣ್ನ ವಯಸ್ಸಿನವರಿಗೆ ಬೇಗ ದುಡಿಯುವ ಅವಕಾಶ ಸಿಕ್ಕು, ದೇಶದ ಪರಿಸ್ಥಿತಿ ಬದಲಾಗುತ್ತಿರುವ ಭಾವವಿದೆ. ಕಡಿಮೆ ಮಕ್ಕಳು ಮತ್ತು ದುಡಿವ ಇಬ್ಬರು ಪೋಷಕರಿಂದ ಮಕ್ಕಳಿಗೆ ಹೆಚ್ಚು ಸೌಕರ್ಯಗಳು ದೊರೆತು ಅವರ ಮನೋಭಾವಗಳು ಹೆಚ್ಚು ವಿದೇಶಿಯರನ್ನು ಹೋಲುತ್ತಿದೆ!

ನಾವು ಇನ್ನೂ ಏಕೆ ಇಲ್ಲಿದ್ದೇವೆ?

ಭಾರತದ ಜನಕೋಟಿಯ ಬಳಿ ದುಡ್ಡಿನ ಗಂಟು ಹೆಚ್ಚುತ್ತಿದ್ದಂತೆ ಯಾವ ಸಂದೇಹಗಳಿಗೂ ಕೊರತೆಯಿಲ್ಲದೆ ಎಲ್ಲ ದೇಶದ ವ್ಯಾಪಾರಿಯೂ ಸ್ಪರ್ದೆಗಿಳಿದು ಭಾರತಕ್ಕೆ ಲಗ್ಗೆಯಿಟ್ಟಿದ್ದಾರೆ. ಜೋರು ವ್ಯಾಪಾರ ನಡೆಸಿದ್ದಾರೆ. ಇದರಿಂದಾಗಿ ಇಲ್ಲಿ ದೊರೆಯುವುದೆಲ್ಲ ಈಗ ಅಲ್ಲಿಯೂ ದೊರೆಯಹತ್ತಿದೆ.

ಅಷ್ಟಿರಲಿ, ಅಲ್ಲಿನ ಸಿರಿವಂತ ಮಕ್ಕಳು ಬೇರೆ ದೇಶಗಳಿಗೆ ವ್ಯಾಪಾರ ಕೊಡಬಲ್ಲವರಾಗಿದ್ದಾರೆ!. ಆದರೆ, ಮೂಲಭೂತ ಸೌಕರ್ಯಗಳಿಗೆ ಮಾತ್ರ ಭರ್ಜರಿ ಕೊರತೆ ಹಾಗೇ ಉಳಿದಿದೆ. ರಾಜಕಾರಣಿಗಳಿಂದ, ಅಡಳಿತದಿಂದ ಆಗಬೇಕಾದ ಕಡೆ ಯಾವ ಸುಧಾರಣೆಗಳೂ ಆಗುತ್ತಿಲ್ಲ. ಪರಮ ಸ್ವಾರ್ಥದ ರಾಜಕಾರಣ ನಮ್ಮಲ್ಲಿ ಸುಧಾರಿಸೀತೆ?.

ಆಲ್ಲಿನ ಆ ಕಟು ವಾತಾವರಣ ಬದಲಾಗದಿರುವುದು ಮಿಕ್ಕಂತೆ ದೇಶ ಸುಧಾರಣೆಯಾಗಲು ಅಡ್ಡಿಯಾಗಿ ಹಾಗೇ ಉಳಿದಿದೆ. ನಾವು ವಿದೇಶ ವಾಸಿಗಳೇ ಆಗಿ ಉಳಿಯಲು ಇದೊಂದು ದೊಡ್ಡ ಕಾರಣ.

ಕಾಲ ತರುವ ಬದಲವಣೆಗಳಲ್ಲಿ ಕಳೆದು ಹೋಗುವ ಸಂಭಂದಗಳು, ಕೊಂಡಿಗಳನ್ನು ಮತ್ತೆ ಕೂಡಿಸಲಾಗದೆ, ಇಲ್ಲಿಯೇ ತ್ರಿಶಂಕು ಸ್ವರ್ಗವನ್ನು ಸೃಷ್ಟಿಸಿಕೊಂಡು ಬದುಕುವ ಅನಿವಾರ್ಯತೆಯನ್ನು ಎದುರಿಸುವುದು ಇನ್ನೊಂದು ಮುಖ್ಯ ಕಾರಣ.

“ಬಾರಕ್ ಓಬಾಮನ ಪೋಶಕರು ಅಮೆರಿಕೆಗೆ ಹೋಗಿ ಕಷ್ಟ ಅನುಭವಿಸದಿದ್ದಲ್ಲಿ ಒಬಾಮನಿಗೆ ಅವಕಾಶವೆಲ್ಲಿರುತಿತ್ತು?” ನಾವಿಲ್ಲಿರುವುದು ನಮ್ಮ ಮಕ್ಕಳಿಗಾಗಿ ಎನ್ನುವ ಬಹುಮಂದಿ ಇಲ್ಲಿಯೇ ಭದ್ರವಾಗಿ ನೆಲಕಚ್ಚಿದ್ದಾರೆ.

“ನಮ್ಮನ್ನೇನು ಆರತಿಯೆತ್ತಿ-ಕುಂಕುಮವನ್ನಿಟ್ಟು ಕರೆದಿದ್ದರಾ, ನಾವಾಗಿ,ಹಾಗಾಗಿ ಇಲ್ಲಿದ್ದು ಕಳೆದದ್ದೇನು, ಉಳಿದದ್ದೇನು ಎಂದು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ!” ಎನ್ನುವ ಕಟು ಧೋರಣೆಯನ್ನುಳ್ಳವರಿದ್ದಾರೆ.

ಮತ್ತೆ ಕೆಲವರು ಕುಟುಂಬ ರಾಜಕಾರಣಗಳಿಂದ ದೂರ ಉಳಿಯಲು, ಅತ್ತೆ ಮಾವಂದಿರಿಂದ ದೂರವಿರಲು ಉಳಿದವರೂ ಇದ್ದಾರೆ! ಅತಿ ಕೆಲವರು ತಮ್ಮ ಮತ್ತು ತಮ್ಮ ಮಕ್ಕಳ ಆರೋಗ್ಯದ ಕಾರಣ ಈ ದೇಶವೇ ಉತ್ತಮ ಎಂದು ಉಳಿದಿದ್ದಾರೆ.

ಸಾಂಪ್ರದಾಯಿಕ ಕುಟುಂಬಗಳಲ್ಲಿ ಜನಿಸಿ ಇಲ್ಲಿಗೆ ಬಂದು, ಅಪಾರವಾಗಿ ಕಲಿತ ತಮ್ಮ ವಿಚಾರಧಾರೆಯನ್ನು ಪ್ರೀತಿಯ ಮಕ್ಕಳಿಗೆ ವರ್ಗಾಯಿಸಲು ಅಭೂತಪೂರ್ವ ಪ್ರಯತ್ನಗಳನ್ನು ಮಾಡಿ ಸಾಧಿಸಿದವರಿದ್ದಾರೆ, ನಿರಾಶರಾದವರಿದ್ದಾರೆ, ಹತಾಶರಾದವರಿದ್ದಾರೆ.ಸಾಕಷ್ಟು ದುಡಿವ ನೊಗಕ್ಕೆ ಕತ್ತು ಕೊಟ್ಟು, ಜೀವವನ್ನೆಲ್ಲ ಅರೆದು, ಈ ಅವಧಿಯಲ್ಲಿ ಕಳೆದುಕೊಂಡ ತಂದೆ ,ತಾಯಿ ಬಂದು ಬಳಗವನ್ನು ನೆನೆದು, ನಾವು ಇಲ್ಲಿದ್ದು ನಿಜಕ್ಕೂ ಸಾಧಿಸಿದ್ದೇನು? ನಮ್ಮ ಮಕ್ಕಳನ್ನು ಓದಿಸಿದ್ದು ಮಾತ್ರವೆ? ಭಾರತದಲ್ಲೇ ಉಳಿದ, ನನ್ನ ಸಹಪಾಟಿಗಳು ಅದನ್ನೂ ಮಾಡಿ, ಸಂಬಧಗಳನ್ನು ಉಳಿಸಿಕೊಂಡು, ಕಾಣುವ ಸಂತೃಪ್ತಿಯ ಮುಂದೆ, ಇಲ್ಲಿ ಸೇರಲಾಗದ ನಮ್ಮ ದ್ವಂದ್ವಮಯ ಬದುಕು ನಿಜವೇ ಎಂದು ಮರುಗಿದವರಿದ್ದಾರೆ, ನಮ್ಮ ಸಂಸ್ಕೃತಿಯನ್ನು, ಭಾಷೆಯನ್ನು ತಿಳಿಯದ ಮಕ್ಕಳ ಜೊತೆ ಬದುಕುತ್ತಾ, ನಮ್ಮ ಬೇರನ್ನೇ ಕೀಳಿರಿಮೆಯಿಂದ ಕಾಣುವ ಮಕ್ಕಳಿಗಾಗಿ ಇದೆಲ್ಲ ಮಾಡುತ್ತಾ ಇಲ್ಲಿ ಉಳಿದೆನೇ? ಅಥವ ನನ್ನ ಸ್ವ- ಸ್ವಪ್ರತಿಷ್ಠೆಗೆ ತೆತ್ತ ಬೇಲೆಯೇ? ಅಂತ ವಿಚಾರಕ್ಕೆ ಬಿದ್ದವರೂ ಇದ್ದಾರೆ.

ತಮ್ಮ ಪ್ರೀತಿಯ ಮಕ್ಕಳು ಬದುಕನ್ನರುಸುತ್ತಾ ಹಾರಿ ಹೋದಮೇಲೆ ಪರದೇಶದಲ್ಲಿ ಬೆದರು ಬೊಂಬೆಗಳಂತೆ ನಿಂತು ವಿಧಿಯಿಲ್ಲದೆ ಅಲ್ಲಿಲ್ಲಿ ಓಡಾಡಿಕೊಂಡು ’ವಿಧಿಯ’ ಕೈಗೆ ತಮ್ಮನ್ನೊಪ್ಪಿಸಿಕೊಂಡವರಿದ್ದಾರೆ.

ಮುಂದುವರೆದ ವಿದೇಶ ಅನ್ನುವ ಹುರುಪಿಂದ ಇಲ್ಲಿಗೆ ಬಂದು, ನಿಂದನೆ, ತಿರಸ್ಕಾರಗಳಿಗೆ ತುತ್ತಾಗಿ ಅರೆ-ಬರೆ ಕೀಳಿರಿಮೆ ಬೆಳೆಸಿಕೊಂಡು , ಹೊಸತಾದ ಕಷ್ಟ-ಒತ್ತಡಗಳಿಗೆ ತುತ್ತಾಗಿ, ’ನಾನೆಷ್ಟೊಂದು ಸಾಧಿಸಿದೆ” ಎಂಬ ಸಂತಸ ಅನುಭವಿಸಿದ ಮಂದಿ ”ಬೆಷ್ಟ್ ಆಫ್ ಬೋತ್ ಸಿಗಲ್ಲ” ಎನ್ನುವ ಸಮಾಧಾನಕ್ಕೆ ಬಂದಿದ್ದಾರೆ

ಇದನ್ನು ಒಪ್ಪದ ಮಂದಿ, ಭಾರತದ ಆರ್ಥಿಕ ಹವಾ ಬದಲಾದ ಕೂಡಲೇ, ಈ ದೇಶದಲ್ಲಿ ಗಳಿಸಿದ ಹಣ, ಪದವಿ ಅನುಭವ ಎಲ್ಲವನ್ನು ಹೊತ್ತು ನಮ್ಮ ದೇಶಕ್ಕೆ ಮರಳಿ ಮತ್ತೆ ಹೊಂದಾಣಿಕೆಗೆ ಪ್ರಯತ್ನಿಸಿದ್ದಾರೆ.

ಮುಂದುವರೆದ ದೇಶಗಳಿಗೆ ಗುಳೆ ಬರುವುದು ಸಹಜವಾದರೂ, ನಮ್ಮ ದೇಶದ,ನಮ್ಮ ಬಾಲ್ಯದ,ನಮ್ಮ ಮನೆಯ,ನಮ್ಮ ಜನರ ನೆನಪಿನಲ್ಲಿ ಕೊರಗನ್ನು ಅನುಭವಿಸುವುದು ವಿದೇಶಿಗರ ಪಾಲಿಗೆ ಸತ್ಯ. ನನ್ನ ಅಭಿಪ್ರಾಯದಲ್ಲಿ ಅದರ ವ್ಯತ್ಯಾಸವೇ ಗೊತ್ತಿಲ್ಲದವರು ಭಾವರಹಿತರು. ಅದನ್ನು ತಿರಸ್ಕರಿಸುವವರು ಪಲಾಯನವಾದಿಗಳು. ಈ ದ್ವಂದ್ವ ಇರಬಾರದೆನ್ನುವವರು ಮೈಮರೆತವರು. ವಿದೇಶ-ಸ್ವದೇಶ ಮತ್ತು ಅದರ ವ್ಯತ್ಯಾಸಗಳನ್ನು ಎಲ್ಲರಿಂದ ಅಪ್ಪಿಕೊಳ್ಳಲು ಸಾದ್ಯವಿಲ್ಲ. ಆದರೆ ಅದರ ಇರುವನ್ನೇ ಒಪ್ಪಿಕೊಳ್ಳಲಾರದಾದರೆ, ಅವರು ನಿಶ್ಚಿಂತರು!!!

  ಪ್ರೇಮಲತ ಬಿ.

 

7 thoughts on “ವಿದೇಶ-ಸ್ವದೇಶ ಮತ್ತು ವ್ಯತ್ಯಾಸ – ಪ್ರೇಮಲತಾ ಬರೆದ ಲೇಖನ

  1. ಪ್ರೇಮಲತ ಅವರ ವಿಶ್ಲೇಷಣೆ ಕ್ಲಿನಿಕಲ್, psychosocial analysis ಎನ್ನ ಬಹುದು. ಕೂಲಂಕಷವಾಗಿ ವಿಚಾರ ಮಾಡಿ ಎಲ್ಲ ಅನಿವಾಸಿಗಳ ಮನದಲ್ಲಿ ಒಮ್ಮಿಲ್ಲೊಮ್ಮೆ ಏಳುವ ದ್ವಂದವನ್ನು ವೈಚಾರಿಕ ಲೇಖನದಲ್ಲಿ ಬಿಚ್ಚಿಟ್ಟಿದ್ದಾರೆ. ಪ್ರಸಾದ ಅವರು ಅಂದಂತೆ ಇದನ್ನೆ ನಾನೂ ಸಹ ಉಳಿದವರಂತೆ ಕವನದಲ್ಲಿ ವ್ಯಕ್ತ ಮಾಡಿದರೂ ಇಷ್ಟು didactic ಆಗಿ ಅಳೆದಿದ್ದಿಲ್ಲ. ಅದು ಕವನದಲ್ಲಿ ಆಗುವ ಕೆಲಸವಲ್ಲ. ಮೇಲೆ ಹಲವರು ಬರೆದಂತೆ, ಪ್ರೇಮಲತ ಅವರು ವಿಭಿನ್ನ ಅನಿವಾಸಿಗಳೊಡನೆ ಮಾಡಿದ ಸಂವಾದದಲ್ಲಿ ಹೊರಬಂದಂತೆ, ಜನ ಅವರವರು ವಲಸೆ ಬಂದ ಕಾಲದ ಪ್ರಕಾರ ಸಮಸ್ಯೆಗಳನ್ನು ಎದುರಿಸುತ್ತಾರೆ. ಅರವತ್ತರ ದಶಕದವರ ಸಮಸ್ಯೆಗಳೇ ಬೇರೆ, ಇತ್ತೀಚಿನವರ ಅನುಭವವೇ ಬೇರೆ. (೧೯ ನೂರಾ) ಎಪ್ಪತ್ತರ ದಶಕದಲ್ಲಿ ಬಂದ ನಾನೂ ಸಹ ಮರಳಿ ಹೊರಟವನೆ. ಅಕಸ್ಮಾತ್ತಾಗಿ ಕವಲು ದಾರಿ ಹಿಡಿದೆ. ಕೆಲ ಸಮಯದ ನಂತರ ಮಕ್ಕಳ ಭವಿತವ್ಯಕ್ಕೆ ನಾವು ಹೆಚ್ಚು ಬೆಲೆ ಕೊಡಲು ಶುರುಮಾಡುತ್ತೇವೆ. ಅವರು ನಮ್ಮೊಂದಿಗೆ ಮರಳಿ ನಮ್ಮಂತೆ ಅಲ್ಲಿಯ ವಾತಾವರಣವನ್ನು ಎದುರಿಸಿಯಾರೆ? ಬಂಧು ಬಳಗದಲ್ಲಿ ಎಷ್ಟು ಜನರು ಉಳಿದಿದ್ದಾರೆ ಇತ್ಯಾದಿ ಪ್ರಶ್ನೆಗಳು ಅದಕ್ಕೆ ಅಡ್ಡ ಬರುತ್ತವೆ. ನಾನು ನೋಡಿದ ಪ್ರಕಾರ ಪ್ರತಿಯೊಬ್ಬರ ಪರಿಸ್ಥಿತಿಯೂ ಬೇರೆಯೇ. ಎರಡೋ, ಮೂರೋ formula ಕೊಟ್ಟು ಇದರಂತೆ ನಿಮ್ಮ ಮುಂದಿನ ಜೀವನ ಬಿಡಿಸಿಕೊಳ್ಳಿ ಎಂದು ಹೇಳಲು ಆಗುವದಿಲ್ಲ. ಇಂಥ ವಿಚಾರ ಪ್ರಚೋದಕ ಲೇಖಗಳು ಉಪಯುಕ್ತ. ಅನಿವಾಸಿಯಲ್ಲಿ ಇದರ ಪ್ರಕಟನೆ ಸಮಯೋಚಿತವೇ. ಈ ಚರ್ಚೆಗೆ ಅವಕಾಶ ಕೊಟ್ಟ ಲೇಖಕಿಗೆ, ಪ್ರತಿಕ್ರಿಯಿಸಿದ ಓದುಗರಿಗೆ ಧನ್ಯವಾದಗಳು. ಅಪ್ಪಟ ಗಾಂಧಿವಾದಿ ಹಿರಿಯರ ನೆರಳಲ್ಲಿ ಬೆಳೆದ ನಾನು ನನ್ನ ಮಟ್ಟಿಗೆ ಹೇಳುವದೆಂದರೆ, ಈ ಚರ್ಚೆಯನ್ನು ಪ್ರಾರಂಭಿಸಿದ ಕೇಶವ ಕುಲಕರ್ಣಿಯವರ ಕವನದಲ್ಲಿ ಬರೆದಂತೆ, ಇಲ್ಲಿಗೆ ಬಂದು ”ನಾನು ಗಾಂಧಿಯನ್ನು ಕೊಲ್ಲಲಿಲ್ಲ” ಅನ್ನುವ ಧೈರ್ಯವಿದೆ!

    Like

  2. ಪ್ರೇಮಲತಾ ಈಗ ೨೦ ವರ್ಷಗಳ ಹಿಂದೆ ನಮ್ಮವರು ತಮ್ಮ ಸಂಶೋಧನಾ ಕ್ಷೇತ್ರದಲ್ಲಿನ ಒಂದು ಅತ್ಯಂತ ಪ್ರಮುಖ ಪ್ರಯೋಗದಲ್ಲಿ ಭಾಗಿಯಾಗಿ ಕಾರ್ಯನಿರ್ವಹಿಸಲು ಬ್ರಿಟನ್ನಿಗೆ ಬರುವ ನಿರ್ಧಾರವನ್ನು ಕೈಗೊಂಡಾಗ, ಆ ನಿರ್ಧಾರದಲ್ಲಿ ಶೈಕ್ಷಣಿಕ ಮತ್ತು ವೈಗ್ನಾನಿಕ ಆಶೋತ್ತರಗಳಷ್ಟೇ ನಮ್ಮ ಮನದಲ್ಲಿದ್ದದ್ದು. ಆದರೆ ಇಲ್ಲಿಗೆ ಬಂದ ನಂತರ, ಇಲ್ಲಿನ ವ್ಯವಸ್ಥೆ, ಮತ್ತು ಶಿಸ್ತುಗಳು, ನಮ್ಮ ಮಕ್ಕಳ ಮುಂದಿನ ವಿಧ್ಯಾಬ್ಯಾಸದ ಭವಿಶ್ಯ ಎಲ್ಲವೂ ನಾವು ಇಲ್ಲಿಯೇ ನೆಲಸುವ ನಮ್ಮ ನಿರ್ಧಾರವನ್ನು ಗಟ್ಟಿ ಮಾಡಿತು. ಆ ದಿಶೆಯಲ್ಲಿ ನಾವು ಸಫಲರಾಗಿದ್ದೇವೆ. ಇಲ್ಲಿ ನಮ್ಮವರ ಒಡನಾಟ, ಸಂಸ್ಕೃತಿ ಎಲ್ಲವೂ ಒಂದು ಮಟ್ಟದಲ್ಲಿ ನಮಗೆ ಸಮಾಧಾನ ಮತ್ತು ಸಂತೋಷಗಳನ್ನೇ ನೀಡಿವೆ ಎನ್ನುತ್ತೇನೆ. ಪ್ರತಿ ಬಾರಿ ಭಾರತಕ್ಕೆ ಹೋದಾಗ ಅಲ್ಲಿನ ದೈನಂದಿನ ಜೀವನದ ಸಮಸ್ಯೆಗಳನ್ನು ಕಂಡಾಗ, ನಾವು ತೆಗೆದುಕೊಂಡ ನಿರ್ಧಾರ ಸರಿ ಎನ್ನಿಸಿದೆ. ಇದು ನಮ್ಮ ಅನುಭವ. ಮೂಲತಹ ವಿಗ್ನಾನದ ಹಿನ್ನೆಲೆಯಲ್ಲಿ ಬಂದ ನಮಗೆ, ವಿಘ್ಯಾನದಲ್ಲಿ ಪ್ರಗತಿಯನ್ನು ಅರಸಿ ಅದರಲ್ಲಿ ಯಶಸ್ಸನ್ನು ಪಡೆದ ನಂತರ, ಮಾನವನಿಗೆ ಸೀಮೆಯ ಎಲ್ಲೆಗಳಿರುವ ಅವಶ್ಯಕತೆಯಿಲ್ಲ ಎನ್ನಿಸಿದೆ. ಕೇವಲ ನಾವಷ್ಟೇ ಅಲ್ಲ, ಪ್ರಪಂಚದ ಎಲ್ಲಾ ದೇಶಗಳಿಂದ
    ವಲಸೆ ಬಂದವರು, ಇಂದು ಎಲ್ಲೆಡೆ ಕಂಡುಬರುತ್ತಾರೆ. ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ನಾವು ಮುಂದುವರೆಸಲು ಇಲ್ಲಿ ಯಾವ ಅಡ್ಡಿಯೂ ಇರುವಂತೆ ನನಗಂತೂ ಕಂಡುಬಂದಿಲ್ಲ. ನಾವು ಭಾರತದಲ್ಲಿ ಕಳೆದ ಉತ್ತಮ ದಿನಗಳು ನಮ್ಮ ಹೃದಯಕ್ಕೇ ಹತ್ತಿರವಾಗೇ ಇರುತ್ತದೆ. ಅದಕ್ಕೇ ಅಲ್ಲವೇ ನಾವು “ಅನಿವಾಸಿ“ ಹೆಸರಿನ ಈ ಜಾಲ-ಜಗುಲಿಯಲ್ಲಿ ನಮ್ಮ ನಮ್ಮ ಅನುಭವಗಳನ್ನು ವಿನಿಮಯಮಾಡಿಕೊಳ್ಳುತ್ತಿರುವುದು?
    ಉಮಾ ವೆಂಕಟೇಶ್

    Like

  3. ಪ್ರೇಮಲತಾ,
    ನೀವು ಹೇಳಿರುವ ಹಾಗೆ ವಿದೇಶಕ್ಕೆ ಹೋಗಿ ಅಲ್ಲಿಯೇ ನೆಲೆ ನಿಲ್ಲುವುದು ನಾನಾ ಕಾರಣಗಳಿಗಾಗಿ. ಹೆಚ್ಚು ಕಡಿಮೆ ಹಾಗೆ ನೆಲೆ ನಿಲ್ಲುವವರು ಸಧೃಡ ಮನೋಬಲದ ಜನ – ಎಂತಾದರೂ ಸರಿ ಇಲ್ಲೇ ಇದ್ದು, ಈಜಿ ಬದುಕುತ್ತೀನಿ ಎಂಬ ನಿರ್ಧಾರದ ಬುಡ ಹಲವೊಮ್ಮೆ ಅಲುಗಿ ಅಲ್ಲಾಡಿದರೂ ತನ್ನ ಮರಕ್ಕೆ ಮತ್ತೊಂದಷ್ಟು ಮಣ್ಣು ನೀರನ್ನು ಹಾಕಿ ಪೋಷಿಸುವ ಪ್ರಯತ್ನದಲ್ಲಿ ಬಹಳಷ್ಟು ಜನರ ಜೀವನ ಮುಗಿದೇ ಹೋಗಬಹುದು.
    ಆದರೆ ನನ್ನಂತಹವರಿಗೆ ವಿದೇಶದಲ್ಲಿರುವುದಕ್ಕೆ “ಮುಂದೆ ಬರಬೇಕು” ಎನ್ನುವುದು ಕಾರಣವಲ್ಲ. ನಾನು ಭಾರತದಿಂದ ಹೊರಡುವ ಹಲವಾರು ವರ್ಷಗಳ ಹಿಂದೆ ನನ್ನ ಸ್ವಂತ ಇಚ್ಚೆಯಿಂದ ಸಾಮಾಜಿಕ ಬದಲಾವಣೆ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವಳು. ಭಾರತದಿಂದ ಹೊರಟು (ಬಿಟ್ಟಲ್ಲ) ಶಿಕ್ಷಣದ ವಿಷಯದಲ್ಲಿ ಪಿ ಹೆಚ್ ಡಿ ಮಾಡಬೇಕು ಎಂದು ನಾನು ಆಲೋಚಿಸಿದಾಗ ನನ್ನ ಕಾರಣಗಳು ಬಹಳ ಭಿನ್ನವಾಗಿದ್ದವು. ಈಗ “ಮುಂದುವರೆದ” ರಾಷ್ಟ್ರಗಳು ಎಂದು ಕರೆಸಿಕೊಂಡು ಪ್ರಪಂಚದ ಇತರೆ ಅನೇಕ ದೇಶಗಳನ್ನು ನೇರವಾಗಿ ಮತ್ತು ಪರೋಕ್ಷವಾಗಿ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವ ಅಂತಹ ಒಂದು ಪಾಶ್ಚಾತ್ಯ ದೇಶಕ್ಕೆ ಹೋಗಿ ಅಲ್ಲಿನ ಕ್ಯಾಪಿಟಲಿಸ್ಟ್ ವ್ಯವಸ್ಥೆ ಯಲ್ಲಿ ಶಿಕ್ಷಣವನ್ನು ಹೇಗೆ ಹಂಚುತ್ತಿದ್ದಾರೆ ಮತ್ತು ನಮ್ಮ ಭಾರತದ ಶಿಕ್ಷಣ ವ್ಯವಸ್ಥೆಯ ಮೇಲೆ, ಸಮಾಜದ ಮೇಲೆ ಅದು ಹೇಗೆ, ಯಾವ ರೀತಿಯ ಪ್ರಭಾವ, ಪರಿಣಾಮಗಳನ್ನು ಬೀರುತ್ತಿದೆ ಎನ್ನುವು ಪ್ರಶ್ನೆಗೆ ನಾನು ಉತ್ತರ ಹುಡುಕುತ್ತಾ ಹೋದೆ. ಆ ನನ್ನ ಹುಡುಕಾಟ ನನಗೆ ವ್ಯಯಕ್ತಿಕ ಮಟ್ಟದಲ್ಲಿ ಬಹಳಷ್ಟು ಸಾರ್ಥಕತೆಯನ್ನು ತಂದು ಕೊಟ್ಟಿದೆ.
    ದೂರದ ಬ್ರಿಟನ್ ನಿಂದ ನಾನು ಓದುತ್ತಿದ್ದ ಸ್ಥಳಕ್ಕೇ (ಆಸ್ಟ್ರೇಲಿಯ) ಬಂದ ಬಿಳಿಯನೊಬ್ಬನನ್ನು ಯಾವುದೇ ಪರಸ್ಪರ ನಿರೀಕ್ಷೆ, ಅಪೇಕ್ಷೆ, ನಿಬಂಧನೆಗಳಿಲ್ಲದೆ ಮದುವೆಯಾಗಿ, ಅರ್ಧ ಬಿಳಿ ಅರ್ಧ ಭಾರತೀಯ ಬಣ್ಣವಿರುವ ಮಕ್ಕಳನ್ನು ಪಡೆದು, ಆ ಮೂವರನ್ನು ಗುಳೆ ಎಬ್ಬಿಸಿ ಭಾರತಕ್ಕೆ, ಬೆಂಗಳೂರಿನಲ್ಲಿ – ಒಂದಲ್ಲ, ಎರಡು ಬಾರಿ – ಜೀವನ ಮಾಡಲು ಹೋದವಳು ನಾನು. ಎರಡೂ ಬಾರಿ ಮಕ್ಕಳ ಆರೋಗ್ಯ ಬಿಗಡಾಯಿಸಿದಾಗ ಗಾಬರಿಸಿಕೊಂಡು ಮತ್ತೆ ಅವರು ಹುಟ್ಟಿದ ದೇಶಕ್ಕೆ ವಾಪಸ್ ಹೋದೆವು. ಅಲ್ಲಿಂದ ಈಗ ಬ್ರಿಟನ್ ಗೆ ಬಂದಿರಲು ಕಾರಣ ಕೂಡ ಮಕ್ಕಳದೇ – ಅವರಿಗೆ ಕಡೆ ಪಕ್ಷ ಒಂದು ಕಡೆಯ ಕುಟುಂಬದ ನೇರ ಪರಿಚಯ ಮತ್ತು ನಂಟು ಗಟ್ಟಿಯಾಗಿರಲಿ ಎನ್ನುವುದು.

    ಇಲ್ಲಿ ಇಂಗ್ಲೆಂಡಿನಲ್ಲಿ ಎಲ್ಲರೂ ಕೇಳುತ್ತಾರೆ – ಆಸ್ಟ್ರೇಲಿಯ ಬಿಟ್ಟು ಇಲ್ಲಿಗೆ ಯಾಕೆ ಬಂದಿರಿ ಎಂದು. ಕಾಲ ಕಳೆದಂತೆ ನನಗೆ ಅನ್ನಿಸುತ್ತಿರುವುದು ನಾನು, ನನ್ನ ಕುಟುಂಬ ವಲಸೆ ಹಕ್ಕಿಗಳ ಒಂದು ಗುಂಪು. ಸ್ವಲ್ಪ ಕಾಲ ಅಲ್ಲಿ, ಗೂಡು ಮಾಡಲು ಇಲ್ಲಿ, ಬೆಚ್ಚಗಿರಲು ಅಲ್ಲಿ, ನನ್ನ ಬೇರುಗಳಿಗಾಗಿ ಎಂದು ಮತ್ತಲ್ಲಿ … ಹೀಗೆ ವಲಸೆ ಹೋಗುವ ಕಾಲಘಟ್ಟದಲ್ಲಿ ನಾವಿದ್ದೇವೆ.
    ಆದರೆ ನನ್ನ ಆತ್ಮಕ್ಕೆ ಮಾತ್ರ ನನ್ನ ಮನೆ ಅಲ್ಲೇ – ಬೆಂಗಳೂರಿನಲ್ಲೇ.
    A genetic memory or a primal biological instinct or a personal socio-cultural belongingness!

    Like

  4. ಪ್ರೇಮಲತಾ ಅವರೇ
    ನಿಮ್ಮ ಸ್ವದೇಶೀ -ವಿದೇಶಿ ಲೇಖನವನ್ನು ಬಹಳ ಮುತುವರ್ಜಿಯಿಂದ ಓದಿದೆ. ಈ ಹಿಂದೆ ಇದೇ ವಿಚಾರದ ಬಗ್ಗೆ ನಾನು, ದಾಕ್ಷಾಯಿಣಿ ಮತ್ತು ಶ್ರೀವತ್ಸ ಕವನವನ್ನು ಬರೆದು ಕೈ ತೊಳೆದುಕೊಂಡಿದ್ದೆವು. ನೀವು ಈ ವಿಷಯದ ಬಗ್ಗೆ ಧೀರ್ಘವಾಗಿ ಹಾಗೂ ಗಾಢವಾಗಿ ಆಲೋಚಿಸಿ ಒಂದು Scholarly and very objective ಆದ ಬರವಣಿಗೆಯಲ್ಲಿ ತೊಡಗಿ ಹೊರನಾಡ ಕನ್ನಡಿಗರಿಗೆ ಬಹಳ ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸಲು ಅವಕಾಶ ಮಾಡಿ ಕೊಟ್ಟಿದ್ದೀರಿ. ಕೇಶವ್ ಅವರ ಕೆಲವು ಮೂಲಭೂತ ಪ್ರಶ್ನೆ ಗಳ ಮೂಲಕ ಈ ಚರ್ಚೆ ಮೊದಲುಗೊಂಡಿದೆ. ೧೨ನೆ ಶತಮಾನದಲ್ಲಿ ಬಸವೇಶ್ವರರು ’ಇಹ-ಪರ’ ಇವುಗಳ ಬಗ್ಗೆ ಚಿಂತಿಸುತ್ತ ’ಇಲ್ಲಿ ಸಲ್ಲುವರು ಅಲ್ಲಿಯೋ ಸಲ್ಲುವರು’ ಎಂದು ನುಡಿದಿದ್ದಾರೆ. ಹಾಗೆಯೆ ದಾಸರು ’ಅಲ್ಲಿ ಇದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ’ ಎಂದು ಹಾಡಿದ್ದಾರೆ. ಅದೇ ಒಂದು ’ಇಹ-ಪರ’ ಕಲ್ಪನೆ ನಮ್ಮ ಕಾಲಕ್ಕೆ developing and developed world ಗಳಾಗಿ ನಾವು ಕಾಣಬಹುದು. We tend to believe there is always a better place/world to live out there.

    ವಲಸೆ ಹೋಗುವುದು ಬಹಳ Basic biological instinct ಎನ್ನುವುದನ್ನು ನಾವು ಗಮನಿಸ ಬೇಕಾದ ವಿಚಾರ. ಇದು ಮನುಷ್ಯನನ್ನು ಒಳಗೊಂಡು ಇತರ ಪ್ರಾಣಿ ಪಕ್ಷಿಗಳು ವಲಸೆ ಹೋಗುವುದು ಸಾಮನ್ಯ. ನಮ್ಮ ಪೂರ್ವಜರು ಒಂದು ಪ್ರಾದೇಶಿಕ ಆಯಾಮದಲ್ಲಿ ( ಹಳ್ಳಿಯಿಂದ ಪಟ್ಟಣಕ್ಕೆ) ವಲಸೆ ಮಾಡಿದ್ದರೆ ನಾವು ಒಂದು ಭಾಷೆ, ಸಂಸ್ಕೃತಿ, ದೇಶಗಳ ಆಯಾಮವನ್ನು ದಾಟಿ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಎದುರಿಸುತ್ತ ಬಂದಿದ್ದೇವೆ. It is very relative I suppose. ಹಲಾವಾರು ಪೀಳಿಗೆಗಳ ಬಳಿಕ ಮನುಷ್ಯ ಚಂದ್ರ ಗ್ರಹದಲ್ಲೊ ಅಥವ ಮಂಗಳ ಗ್ರಹದಲ್ಲೋ ವಲಸೆ ಮಾಡುವ ಸಾಧ್ಯತೆಗಳಿವೆ!

    ವಲಸೆಗಳಿಂದ ದ್ವಂದ್ವಗಳು ಉದ್ಭವಿಸಿದರೂ ಅದಕ್ಕೆ ತಕ್ಕ Adjustments and Adaptation ಮಾಡಿಕೊಂಡು ಮುಂದುವರೆಯುವುದು ಮನುಷ್ಯನಿಗೆ ಇರುವ ಒಂದು ದೊಡ್ಡ ಸಾಮರ್ಥ್ಯ. ಈ ದ್ವಂದ್ವಗಳು ಎಷ್ಟರಮಟ್ಟಿಗೆ ’ಸಮಸ್ಯೆ’ ಎನ್ನುವುದು ನಮ್ಮ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಮೇಲೆ ಹಾಗು ನಾವು ತೊರದೆ ಸಂಬಂಧಗಳ ಮೇಲೆ ಆಧರಿಸಿರಬಹುದು ಎಂದು ನನ್ನ ಅನಿಸಿಕೆ.

    ನಿಮ್ಮ ಲೇಖನವನ್ನು ಓದಿದ ಮೇಲೆ ನಾನು ಪಲಾಯನ ವಾದಿಯೊ?’ ಮೈಮರೆತವನೊ? ಅಥವ ನಿಶ್ಚಿಂತರ ಗುಂಪಿಗೆ ಸೇರಿದವನೊ? ಎಂಬುದರ ಬಗ್ಗೆ ವಿಮರ್ಶೆ ಮಾಡಿಕೊಂಡು ’ಉತ್ತರ ಸಿಗದೆ ಕುಳಿತವರ’ ಗುಂಪಿಗೆ ಸೇರಿಬಿಟ್ಟೀದ್ದೇನೆ!

    Like

  5. “ಜನನಿ ಜನ್ಮಭೂಮಿಷ್ಚ ಸ್ವರ್ಗಾದಪೀ ಗರೀಯಸೆ“ ಎಂಬ ಮಾತುಗಳನ್ನು ಕೇಳುತ್ತಲೇ ಬೆಳೆದವರು ನಾವೆಲ್ಲಾ. ಆದರೆ ದೇಶದಲ್ಲಾದ ಪರಿಸ್ಥಿತಿಯ ಬದಲಾವಣೆಗಳ ಪರಿಣಾಮವಾಗಿ. ಮಹತ್ವಾಕಾಂಕ್ಷಿ ಜನವರ್ಗ ವಿದೇಶಕ್ಕೆ ವಲಸೆ ಬರುವುದು ಪ್ರಾರಂಭವಾಗಿ ದಶಕಗಳೇ ಕಳೆದಿವೆ. ಇಲ್ಲಿ ಬಂದು ನೆಲೆ ನಿಂತಮೇಲೂ, ನಮ್ಮ ಹುಟ್ಟುನಾಡಿನ ಬಗ್ಗೆ ಆಗಾಗ ಮನದಲ್ಲಿ ವಿಚಾರದಲೆಗಳು ಏಳುವುದು ಮಾನವ ಸಹಜ ಸ್ವಭಾವ. “ದೂರದ ಬೆಟ್ಟ ನುಣ್ಣಗೆ“ ಎನ್ನುವ ಮಾತುಗಳು ಅನೇಕರ ಪಾಲಿಗೆ ನಿಜವಾಗಬಹುದು. ಆದರೆ ವಿದೇಶದ ಪರಿಸರಕ್ಕೆ ಹೊಂದಿಕೊಂಡು, ಇಲ್ಲಿ ತಮ್ಮ ತಮ್ಮ ವೃತ್ತಿರಂಗಗಳಲ್ಲಿ ಯಶಸ್ಸನ್ನು ಪಡೆದವರು ಭಾರತಕ್ಕೆ ಮರಳಿಹೋಗುವ ಬಗ್ಗೆ ಯೋಚಿಸುವುದು ಕಡಿಮೆಯೇ ಎಂದು ನನ್ನ ಅಭಿಪ್ರಾಯ. ಈಗ ನಮ್ಮ ದೇಶದಲ್ಲಿರುವ ಸಮಸ್ಯೆಗಳಿಗೆ ನಾವು ಪರಕೀಯರು. ಈಗ ಮರಳಿದರೆ ಆ ಪರಿಸರದಲ್ಲಿ ನಾವು ಹೊಂದಿಕೊಳ್ಳುವುದು ಸುಲಭವಲ್ಲ. ಅಲ್ಲಿನ ಸಾಮಾಜಿಕ ಬದಲಾವಣೆಗಳು ಹಲವೊಮ್ಮೆ ನಮ್ಮನ್ನು ಬೆಚ್ಚಿಬೀಳುವಂತೆ ಮಾಡುತ್ತವೆ. ಅನೇಕಬಾರಿ ”Reverse cultural shock” ಎನ್ನುವಂತಹ ಅನುಭವಗಳಾಗಿವೆ. ನಾವು ಬಿಟ್ಟಾಗಿನ ಭಾರತ ಈಗಿಲ್ಲ. ಹಾಗಾಗಿ ನಮ್ಮವರನ್ನು ಕಾಣಲು ಆಗಾಗ ಹೋಗಿಬರುವುದೇ ಮೇಲು ಎಂದು ನನ್ನ ಭಾವನೆ. ಇದು ಕೇವಲ ನನ್ನ ಭಾವನೆ. ಈ ವಿಚಾರಪೂರ್ಣ ಲೇಖನದಲ್ಲಿ ಪ್ರೇಮಲತಾ ಈ ವಿಷಯವನ್ನು ಬಹಳ ಆಳವಾಗಿ ಯೋಚಿಸಿ, ಜನಾಭಿಪ್ರಾಯಗಳನ್ನು ಕಲೆಹಾಕಿ, ಅದನ್ನು ಮಥನ ಮಾಡಿ ನಮ್ಮ ಮುಂದಿಟ್ಟಿದ್ದಾರೆ. ಪ್ರತಿಯೊಬ್ಬರ ಅನುಭವವೂ ಭಿನ್ನವಾಗಿರುತ್ತದೆ. ಪ್ರತಿಯೊಬ್ಬರ ಪರಿಸ್ಥಿತಿಗಳೂ ಬೇರೆಯೇ! ಆದ್ದರಿಂದ ಈ ವಿಚಾರವನ್ನು ಪ್ರತಿ ವ್ಯಕ್ತಿಯೂ ವಿಭಿನ್ನವಾಗಿಯಾಗಿಯೇ ಯೋಚಿಸುತ್ತಾನೆ(ಳೆ). ಪ್ರೇಮಲತಾರ ಆಳವಾದ ವಿಷ್ಲೇಷಣೆ ನಿಜಕ್ಕೂ ಶ್ಲಾಘನೀಯವೆನ್ನಬಹುದು. ನಮ್ಮ ಪ್ರತಿಯೊಬ್ಬ ಸದಸ್ಯನೂ(ಳೂ) ಈ ವಿಷಯಕ್ಕೆ ಸ್ಪಂದಿಸಿ ತಮ್ಮ ಅಭಿಪ್ರಾಯವನ್ನು ಮುಂದಿಡುತ್ತಾರೆ ಎಂದು ಆಶಿಸುತ್ತೇನೆ. ಭಲೇ ಪ್ರೇಮಲತಾ. ಕ್ಲಿಷ್ಟವಾದ, ಆದರೆ ಸಾಮಾನ್ಯವಾದ ನಮ್ಮ ಮನಸ್ಸಿನ ವಿಚಾರವೊಂದನ್ನು ನಮ್ಮ ಮುಂದಿಟ್ಟು ನಮ್ಮ ಮನಸ್ಸಿನ ಜೇನುಗೂಡಿಗೆ ಲಗ್ಗೆ ಇಟ್ಟಿದ್ದೀರಿ. “ನೋಡು ಬಾ ನೋಡು ನಮ್ಮೂರ“ ಸರಣಿಗೆ , ಅದಕ್ಕೆ ಪೂರಕವಾಗಿ ಇಂತಹದೊಂದು ಸರಣಿಯ ಲೇಖನವನ್ನು ನಾವು ಪ್ರಾರಂಭಿಸಬಹುದು ಎಂದು ನನ್ನ ಅನಿಸಿಕೆ.
    ಉಮಾ ವೆಂಕಟೇಶ್

    Like

  6. No stones left unturned ಅಂತಾರಲ್ಲಾ, ಹಾಗಿದೆ ಈ ಲೇಖನ. ತಾವು ಗಮನಿಸಿದ ವಿದ್ಯಮಾನಗಳನ್ನು ಕೂಲಂಕುಷವಾಗಿ ವಿಶ್ಲೇಷಿಸಿ,ವಿಭಾಗಿಸಿ ವಿಸ್ತಾರವಾದ, ವಿಶಿಷ್ಟವಾದ ವಿವರಣೆ ನೀಡಿರುವ ವಿಶೇಷವಾದ ಲೇಖನ.
    ಪ್ರೇಮಲತಾ ಒಂದು ಅದ್ಭುತವಾದ ಪ್ರತಿಭೆ. ಪರಕೀಯ ನೆಲೆಯಲ್ಲಿ, ಅವರೇ ವಿವರಿಸಿದ ಕಾರಣಗಳಿಗೆ, ತೆರೆಮರೆಯಲ್ಲಿ ಮಲಗಿರುವ ಅವರ ಅರ್ಧ ಅನಾವರಣಗೊಂಡಿರುವ ಪ್ರತಿಭೆಯನ್ನು ಇಲ್ಲಿ ಕಾಣಬಹುದು .
    ಬಹಳ ವಿಚಾರಪೂರ್ಣ ಲೇಖನ. ಭಾಷೆಯ ಶ್ರೀಮಂತಿಕೆ, ಉಪಮೆಗಳು ಸಹ ಚೆನ್ನಾಗಿ ಮೂಡಿಬಂದಿವೆ. ಇದನ್ನು ಅನುಭವಗಳ ಸರಣಿಮಾಲೆಯಾಗಿ ಬೆಳೆಸಬಹುದು. ಸಾಮಾನ್ಯ ಕಾರಣಗಳ ಜತೆ ಜತೆಗೆ ್ರತಿಯೊಬ್ಬರದೂ ಒಂದು ಅವರದ್ದೇ ಆದ ವಿಶಿಷ್ಟ ಕಾರಣಗಳೂ ಇರುತ್ತವೆ. ಅವುಗಳನ್ನು ಕ್ರೋಢೀಕರಿಸಿದರೆ ಸಮಸ್ಯೆಗಳ ಪರಿಹಾರವನ್ನು ಹುಡುಕಬಹುದೇನೋ!!

    Like

  7. ಅನಿವಾಸಿಗಳ ಜಗುಲಿಯಲ್ಲಿ ಇಂಥಹ ಒಂದು ದೀರ್ಘವಾದ ಲೇಖನ ಬಂದು ತುಂಬ ಕಾಲವಾಗಿತ್ತು. ಬಹುಷಃ ಈ ಜಾಲದ ಮೊದಲ ವೈಚಾರಿಕ ಲೇಖನವಿದು. ನಿಮ್ಮ ಲೇಖನ ತುಂಬ ಅಚ್ಚುಕಟ್ಟಾಗಿ ಮೂಡಿಬಂದಿದೆ. ಎಲ್ಲಿಯೂ ಭಾವಾವೇಶವಿಲ್ಲದೇ ವೈಚಾರಿಕ ಚಿತ್ತದಿಂದ ವಿಭಾಗ ಮಾಡಿ ನಿಮ್ಮ ವಿಚಾರಗಳನ್ನು ಬರೆದಿದ್ದೀರಿ.

    ನಾವೇಕೆ ಈ ಭೂಮಿಗೆ ಬಂದಿದ್ದೇವೆ? ನಾವೇಕೆ ಬದುಕಬೇಕು? ನಾವು ಹೇಗೆ ಬದುಕಬೇಕು? ನಾವು ಎಲ್ಲಿ ಬದುಕು ಮಾಡಬೇಕು? ಎನ್ನುವ ಉತ್ತರವಿಲ್ಲದ ಪ್ರಶ್ನೆಗಳನ್ನು ಮನುಷ್ಯ ಜೀವನದ ವಿವಿಧ ಘಟ್ಟಗಳಲ್ಲಿ ಕೇಳುತ್ತಲೇ ಇರುತ್ತಾನೆ(ಳೆ). ಆಯಾ ಕಾಲಕ್ಕೆ ತಕ್ಕಂತೆ ಮನಸ್ಸಿಗೆ ಸಮಾಧಾನ ಕೊಡುವ ಸಮಜಾಯಿಸಿಗಳನ್ನು ಹುಡುಕುತ್ತಲೇ ಇರುತ್ತಾನೆ(ಳೆ).

    ಇನ್ನು ಏನನ್ನೋ ಸಾಧಿಸುತ್ತೇನೆ ಎನ್ನುವ ಉತ್ಸಾಹದಲ್ಲಿ ನಮ್ಮ ಜನರನ್ನು, ನಮ್ಮ ಭಾಷೆಯನ್ನು, ನಮ್ಮ ನಾಡನ್ನು ಬಿಟ್ಟು ಸಾವಿರಾರು ಮೈಲಿ ದೂರ ಬಂದ ನಮ್ಮ ಪಾಡು ಇದು. ನಿಮ್ಮ ವಿಶ್ಲೇಷಣೆ ನಮ್ಮ ಒಳ ಬದುಕಿನ ಮಜಲುಗಳನ್ನು ಪದರು ಪದರಾಗಿ ಬಿಡಿಸುತ್ತದೆ.

    ಈ ಲೇಖನದ ಪ್ರತಿಕ್ರಿಯೆಗಳನ್ನು ನಾನು ಕಾತರದಿಂದ ಕಾಯುತ್ತಿದ್ದೇನೆ.

    – ಕೇಶವ

    Like

Leave a comment

This site uses Akismet to reduce spam. Learn how your comment data is processed.