“ಕನ್ನಡಕ್ಕೊಬ್ಬನೇ ಕೈಲಾಸಮ್” ಎಂದ ಚೆಲ್ಟನಮ್ ದೀಪಾವಳಿಯ ಸಮಾರಂಭ 2015! ವರದಿ ಡಾ ಉಮಾ ವೆಂಕಟೇಶ್

‘ಚೆಲ್ಟ್’ ಎಂಬ ಸಣ್ಣದೊಂದು ನದಿಯ ಹೆಸರನ್ನಾಧಾರಿಸಿ ತನ್ನ ಹೆಸರನ್ನು ಪಡೆದ ಚೆಲ್ಟನಮ್, ಇಂಗ್ಲೆಂಡಿನ ಪ್ರಸಿದ್ಧ ಖನಿಜ ಜಲದ ಊಟೆಗಳು ಮತ್ತು ಚೆಲುವಿನ ಕಾಟ್ಸವೋಲ್ಡ್ ಬೆಟ್ಟಗಳಿಗೆ ಎಷ್ಟು ಪ್ರಸಿದ್ಧವೋ, ಅಷ್ಟೇ ಕುದುರೆ ರೇಸಿನ ಪಂದ್ಯಗಳು, ಜಾಝ್ ಸಂಗೀತದ ಹಬ್ಬ, ಸಾಹಿತ್ಯ ಮೇಳ, ವಿಜ್ಞಾನ ಮೇಳ ಹಾಗೂ ಆಹಾರ ಮತ್ತು ಪಾನೀಯ ಮೇಳಗಳಿಗೂ ಸಹಾ ಪ್ರಸಿದ್ಧವಾದ ಸ್ಥಳ. 13ನೆಯ ಶತಮಾನದಿಂದಲೂ ಬ್ರಿಟಿಷರ ಚರಿತ್ರೆಯಲ್ಲಿ ತನ್ನ ಮಹತ್ವದ ಸ್ಥಾನವನ್ನು ಉಳಿಸಿಕೊಂಡೇ ಬಂದಿರುವ ಈ ಸಣ್ಣ ನಗರವು ತನ್ನ Regency ವಾಸ್ತುವಿನ್ಯಾಸ, ಕಲೆ ಮತ್ತು ಸಂಸ್ಕೃತಿಗಳ ಆಗರವೆನಿಸಿದೆ.

Cheltenham_Municiapl_Offices
Municipal Offices  Photo:   CC Wiki

 

 

 

ಇಂತಹದೊಂದು ಸುಂದರ ನಗರದಲ್ಲಿ, ಈ ವರ್ಷದ ದೀಪಾವಳಿಯನ್ನು ಯು.ಕೆ ಕನ್ನಡ ಬಳಗದ ಪ್ರಸ್ತುತ ಕಾರ್ಯದರ್ಶಿ ಆನಂದ್ ಕೇಶವಮೂರ್ತಿ ಅವರು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಚೆಲ್ಟನಮ್ಮಿನ ಆಲ್ ಸೈಂಟ್ಸ್ ಅಕಾಡೆಮಿಯಲ್ಲಿ ಇದೇ ಅಕ್ಟೋಬರ್ ತಿಂಗಳ 31ರ ಬೆಳಿಗ್ಗೆ ಸುಮಾರು 11 ಗಂಟೆಗೆ ಸದಸ್ಯರು Poojaಒಟ್ಟುಗೂಡಿ ದೀಪಾವಳಿಯನ್ನು ಎಂದಿನಂತೆ ಲಕ್ಷ್ಮಿ ಪೂಜೆ ಮತ್ತು ಪ್ರಾರ್ಥನೆಯಿಂದ ಪ್ರಾರಂಭಿಸಿದರು. ಬೆಳಗಿನ ನೋಂದಣಿ ಮುಗಿಯುತ್ತಿದ್ದ ಹಾಗೆ, ಸ್ವಾದಿಷ್ಟವಾದ ಭೋಜನದ. ನಂತರ ಬಳಗದ ಎಳೆಯ ಸದಸ್ಯರಾದ ಯಶ್ ಮತ್ತು ರಿಯಾ ಮಂಕರಗೋಡ್ ಅವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಅಂದಿನ ಕಾರ್ಯಕ್ರಮ ಮೊದಲಾಯಿತು. ಮಾಮೂಲಿನಂತೆ ಬಳಗದ ಅಧ್ಯಕ್ಷ ಡಾ ಜಯರಾಮ್ ತಮ್ಮ ಚಿಕ್ಕ ಮತ್ತು ಚೊಕ್ಕವಾದ ಭಾಷಣ ಮುಗಿಸಿದರು. ಕನ್ನಡ ಬಳಗದ ಆಶ್ರಯದಲ್ಲಿ ತನ್ನ ಸಾಹಿತ್ಯದ ಚಟುವಟಿಕೆಗಳನ್ನು, ತನ್ನದೇ ಆದ “ಅನಿವಾಸಿ” ಎಂಬ ತಕ್ಕ ಹೆಸರಿನ ಜಾಲ-ಜಗುಲಿಯಲ್ಲಿ ನಡೆಸಿಕೊಂಡು ಬಂದಿರುವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ, ಯು.ಕೆ.ಯ ಸಂಪಾದಕೀಯದ ಸದಸ್ಯರಲ್ಲಿ ಒಬ್ಬರಾದ ಡಾ ಉಮಾ ವೆಂಕಟೇಶ್, ಹಲವಾರು ಕಂಪ್ಯೂಟರ್ ಚಿತ್ರಗಳ ಸಹಾಯದಿಂದ, ಅಲ್ಲಿ ನೆರದಿದ್ದ ಬಳಗದ ಸದಸ್ಯರಿಗೆ ತಮ್ಮ ವೇದಿಕೆಯ ಚಟುವಟಿಕೆಗಳ ಬಗ್ಗೆ ಒಂದು ಸಣ್ಣ ನಿರೂಪಣೆ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಬಳಗದ ಕನ್ನಡಿಗರು ಕನ್ನಡದಲ್ಲಿ ಬರೆಯುವ ಹವ್ಯಾಸವನ್ನು ಮುಂದುವರೆಸಿ ಪ್ರೋತ್ಸಾಹಿಸಲು ಮನವಿ ಮಾಡಿಕೊಂಡರು.,m

ಮದ್ಯಾನ್ಹದ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ನಡೆಸಿಕೊಟ್ಟ ಡಾ ಮೋಹನ್ ಹೊಸಳ್ಳಿ ಅವರು, ತಮ್ಮದೇ ಆದ ಒಂದು ಶೈಲಿಯಲ್ಲಿ, ಆಗಾಗ್ಗೆ ಕನ್ನಡದ ರಸಪ್ರಶ್ನೆಗಳು ಮತ್ತು ಅಂತಾಕ್ಷರಿಗಳ ನೆರವಿನಿಂದ ಅಲ್ಲಿ ನೆರದಿದ್ದ ಪ್ರೇಕ್ಷಕರ ಗಮನವನ್ನು ತಮ್ಮೊಡನೆ ಭದ್ರವಾಗಿ ಹಿಡಿದಿಟ್ಟು, ಅವರಿಗೆ ಬೇಸರ ಬರದಂತೆ ನೋಡಿಕೊಂಡರು. ಯು.ಕೆ ಕನ್ನಡ ಬಳಗದ ಸ್ಥಳೀಯ ಹಿರಿಯ ಮತ್ತು ಕಿರಿಯ ಕಲಾವಿದರಿಂದ ವಿವಿಧ ಮನೋರಂಜೆನೆ ಕಾರ್ಯಕ್ರಮಗಳು ನಡೆದವು. ಅವುಗಳಲ್ಲಿ ಕನ್ನಡ ಬಳಗದ ಯಾರ್ಕಶೈರ್ ಚಾಪ್ಟರಿನ ಸದಸ್ಯರಾದ ಸವಿತಾ ಸುರೇಶ್, ಹರೀಶ್ ಚಿಕ್ಕಣ್ಣ ಮತ್ತು ತಂಡದವರ ಜಾನಪದ ಗೀತೆಗಳು, ಅಲ್ಲಿಯವರೇ ಆದ ಡಾ ಸುಮನಾ ನಾರಾಯಣ್ ಮತ್ತು ಅವರ ಗುಂಪಿನ ಸದಸ್ಯರ ಅತ್ಯಾಕರ್ಷಕ ಜಾನಪದ ನೃತ್ಯ, ಅರುಣ್ ಕುಕ್ಕೆ ಮತ್ತು ತಂಡದ ಹಾಡುಗಳು, ಪ್ರೇಕ್ಷಕರ ಮನಸೆಳೆದವು. ಡಾರ್ಬಿ ಕನ್ನಡ ಅಭಿಮಾನಿಗಳು ಕನ್ನಡ ಚಿತ್ರಗೀತೆಗಳನ್ನಾಧರಿಸಿ ಸೂತ್ರದ ಗೊಂಬೆಗಳುನಡೆಸಿಕೊಟ್ಟ “ಬೊಂಬೆ ಆಟ” ರಂಜನೀಯವಾಗಿತ್ತು. ಸ್ಪಷ್ಟವಾದ ಕನ್ನಡ ಉಚ್ಚಾರಣೆಯಿಂದ ಕೂಡಿದ ಕು. ರುಜಾಲಾಳ ಹಾಡು ನೆರದಿದ್ದವರನ್ನು ಆಶ್ಚರ್ಯಚಕಿತರನ್ನಾಗಿಸಿತು.

ಅಂದಿನ ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಎಂದರೆ, ಈ ಬಾರಿ ಅಮೆರಿಕೆಯ ನ್ಯೂಜರ್ಸಿಯಿಂದ ಆಗಮಿಸಿದ್ದ ಹವ್ಯಾಸಿ ಮನರಂಜನೆಯ ತಂಡವಾದ “ಕಲಾತರಂಗದ” ಕಲಾವಿದರು ಪ್ರದರ್ಶಿಸಿದ, ಕನ್ನಡ ನಾಟಕ ಜಗತ್ತಿನ ಪ್ರಹಸನ ಪ್ರಪಿತಾಮಹ, ಟಿ.ಪಿ.ಕೈಲಾಸಮ್ ಅವರ ಅತ್ಯಂತ ಜನಪ್ರಿಯ ನಾಟಕಗಳಲ್ಲಿ  ಒಂದಾದ “ನಮ್ ಕಂಪ್ನಿ” ಮತ್ತು “ಬಂಡವಾಳವಿಲ್ಲದ ಬಡಾಯಿ” ಎಂದರೆ ಅಚ್ಚರಿಯೇನಿಲ್ಲ. ಈಗ ಜನಗಳಲ್ಲಿ ಮನೆಮಾತಾಗಿರುವ ಕಂಗ್ಲೀಷನ್ನು, ನಲವತ್ತರ ದಶಕದಲ್ಲೇ ತಮ್ಮ ನಾಟಕಗಳಲ್ಲಿ ಸುಲಲಿತವಾಗಿ ಬಳಸಿ ಮೆರೆಸಿದ ಅಪ್ರತಿಮ ನಾಟಕಕರ್ತೃ. ಸುಮಾರು 80ರ ದಶಕದಲ್ಲಿ, ಮೈಸೂರಿನ ಹೆಸರಾಂತ ನಾಟಕ ತಂಡ “ಸಮತೆಂತೋ” ಅವರು ಪ್ರದರ್ಶಿಸಿದ್ದ ನಮ್ ಕಂಪ್ನಿ ನಾಟಕ ನೋಡಿದ್ದ ನನಗೆ, ಮತ್ತೊಮ್ಮೆ ಅದನ್ನು ನೋಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯವೆನಿಸಿತ್ತು. ಅಮೆರಿಕೆಯ ಮೂರು ಭಿನ್ನ ರಾಜ್ಯಗಳಾದ ನ್ಯೂಯಾರ್ಕ್, ನ್ಯೂ ಜರ್ಸಿ ಮತ್ತು ಕನೆಟಿಕಟ್ ನಿವಾಸಿಗಳಾಗಿದ್ದುಕೊಂಡು, ತಮ್ಮ ಹವ್ಯಾಸದಿಂದ ತ್ರಿವೇಣಿ ಸಂಗಮದಂತೆ ಒಂದುಗೂಡಿ, ಈ ನಾಟಕಗಳನ್ನು ಪ್ರಸ್ತುತಿ ಪಡಿಸಿದ ಕಲಾತರಂಗದ ಕಲಾವಿದರು ನಿಜಕ್ಕೂ ಪ್ರತಿಭಾವಂತರು.Kailasam Drama

ತಂಡದ ಕಲಾವಿದರನ್ನು ಪ್ರದರ್ಶನಕ್ಕೆ ಮುಂಚೆಯೇ ಒಮ್ಮೆ ಭೇಟಿ ಮಾಡಿ ಅವರ ಬಗ್ಗೆ ಅಲ್ಪಸ್ವಲ್ಪ ಮಾಹಿತಿ ಪಡೆದಿದ್ದೆ. ತಂಡದ ಸದಸ್ಯರುಗಳಾದ ಶ್ರೀ. ಸತ್ಯನಾರಾಯಣ, ಶ್ರೀಮತಿ. ವಸುಧಾ, ಶ್ರಿ.ಬ.ರಾ.ಸುರೇಂದ್ರ, ಶ್ರೀ. ಮಲ್ಲಿ ಸಣ್ಣಪ್ಪನವರ್, ಕು.ಸುಷ್ಮಾ ನಾರಾಯಣ್, ಶ್ರೀ. ಸುಘೋಷ್ ನಾರಾಯಣ್ ಮತ್ತು ಶ್ರೀ.ಕೃಷ್ಣಮೂರ್ತಿ ವೆಂಕಟರಾಮನ್ ಇವರೆಲ್ಲರೂ ವೃತ್ತಿಪರರು. ಆದರೆ ತಮ್ಮ ನೆಚ್ಚಿನ ಹವ್ಯಾಸವಾದ ನಾಟಕವನ್ನು ಕೇಂದ್ರವನ್ನಾಗಿಸಿಕೊಂಡು ಕನ್ನಡದ ಪ್ರಸಿದ್ಧ ನಾಟಕಗಳನ್ನು ವಿವಿಧ ಸ್ಥಳಗಳಲ್ಲಿ ಪ್ರದರ್ಶಿಸುವ ಅಭ್ಯಾಸವುಳ್ಳವರು. ಕೈಲಾಸಮ್ ಕನ್ನಡದ ಸೊಗಡೇ ಬೇರೆ. ಇಂಗ್ಲೀಷಿನೊಂದಿಗೆ ಕನ್ನಡವನ್ನು ಬೆರಸಿ ಬರೆದ ಅವರ ಸಂಭಾಷಣೆಗಳನ್ನು ಕೇಳಿ ಪಡೆಯುವ ಆನಂದವನ್ನು ಅನುಭವಿಸಿಯೇ ತಿಳಿಯಬೇಕು. ಆ ಆನಂದವನ್ನು ನಮಗೆ ಒದಗಿಸಿದ ಕಲಾತರಂಗದ ಕಲಾವಿದರು ಕೈಲಾಸಮ್ ಅವರ “ಬಂಡವಾಳವಿಲ್ಲದ ಬಡಾಯಿ” ನಾಟಕವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿ ನಮ್ಮೆಲ್ಲರ ಮನವನ್ನೂ ಸೂರೆಗೊಂಡರು.

ಇದಾದ ನಂತರ ಕಾಲಾಯ ತಸ್ಮೈ ನಮಃ ಎಂಬಂತೆ, ಅಂದಿನಿಂದ ಇಂದಿನವರೆಗೆ ಕಾಲಕ್ಕನುಗುಣವಾಗಿ ಬದಲಾಗಿರುವ ಸಮಾಜ ಮತ್ತು ಪ್ರಾಕೃತಿಕ ಬದಲಾವಣೆಗಳ ಸುತ್ತಮುತ್ತಾ ಹೆಣೆದ ಮೂರು ಹಾಸ್ಯಮಿಶ್ರಿತ ಸನ್ನಿವೇಶಗಳಾದ ೧. ಕಾಲಕ್ಕೆ ತಕ್ಕಂತೆ ನಲಿದಾಡು, ೨. ನಿತ್ಯಾನಂದ ಮಹಾತ್ಮೆ ಮತ್ತು ೩. ಐ.ಟಿ ಟೆಕ್ನಾಲಜಿ ಹೈಬ್ರಿಡ್ ಪ್ರಪಂಚ ಎನ್ನುವ ಹೆಸರಿನ ಮೂರು ಪ್ರಹಸನಗಳನ್ನು “ನಮ್ಮ ನಮ್ಮಲ್ಲಿ” ಕಾರ್ಯಕ್ರಮದ ಮೂಲಕ ಬಳಗದ ಶ್ರೋತೃಗಳನ್ನು ರಂಜಿಸಿ ನಗೆಯಲ್ಲಿ ಮುಳುಗಿಸಿದ ಕಲಾತರಂಗದ ಕಲಾವಿದರು ನಮ್ಮ ಮನಗಳಲ್ಲಿmalli ಅಮೆರಿಕನ್ನಡಿಗರ ಛಾಪನ್ನು ಒತ್ತಿದರೆನ್ನಬಹುದು. ಅವರ ಕಾರ್ಯಕ್ರಮದ ಅಂತ್ಯದಲ್ಲಿ, ಕಲಾತರಂಗದ ಕಲಾವಿದ ಶ್ರೀ. ಬ.ರಾ. ಸುರೇಂದ್ರ ಅವರು ಯು.ಕೆ ಕನ್ನಡ ಬಳಗವನ್ನು ಕುರಿತು ರಚಿಸಿದ ಕವನವೊಂದನ್ನು ಎಲ್ಲರ ಮುಂದೆ ವಾಚಿಸಿ, ಕಟ್ಟುಹಾಕಿದ್ದ ಅದರ ಫಲಕವನ್ನು ಅಧ್ಯಕ್ಷ ಡಾ ಜಯರಾಮ್ ಅವರಿಗೆ ಸಮರ್ಪಿಸಿ, ತಮ್ಮ ಸೌಜನ್ಯಿಕೆಯನ್ನು ಮೆರೆದರು.

ಕನ್ನಡ ಬಳಗದ ಅಧ್ಯಕ್ಷರಾದ ಡಾ ಜಯರಾಮ್ ತಾವೇ ಸ್ವತಃ ರಚಿಸಿದ ಸ್ವಾಮಿ ವಿವೇಕಾನಂದರ ರೇಖಾಚಿತ್ರವನ್ನು ಸದಸ್ಯರ ಮುಂದೆ ಹರಾಜಿಗಿಟ್ಟು, ಅದರಿಂದ ಸಂಗ್ರಹಿಸಿದ ಹಣವನ್ನು ಕನ್ನಡ ಬಳಗದ ದತ್ತಿ ಕಾರ್ಯಕ್ರಮಕ್ಕೆ ದಾನವಿತ್ತರು. ಒಟ್ಟಿನಲ್ಲಿ ಉತ್ತಮವಾದ ಸ್ಥಳ, ಚೊಕ್ಕವಾದ ಭೋಜನ ಮತ್ತು ರಂಜನೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಚೆಲ್ಟನಾಮ್ ದೀಪಾವಳಿ, ಬಹಳ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಆಕರ್ಷಿಸಿರಲಿಲ್ಲವಾದರೂ, ಅಂದು ಅಲ್ಲಿ ನೆರದಿದ್ದವರಿಗೆ ಉತ್ತಮ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು ಎನ್ನಬಹುದು.

(All other photos: Dr Rajaram Cavale)

ಡಾ ಉಮಾ ವೆಂಕಟೇಶ್       

 

4 thoughts on ““ಕನ್ನಡಕ್ಕೊಬ್ಬನೇ ಕೈಲಾಸಮ್” ಎಂದ ಚೆಲ್ಟನಮ್ ದೀಪಾವಳಿಯ ಸಮಾರಂಭ 2015! ವರದಿ ಡಾ ಉಮಾ ವೆಂಕಟೇಶ್

  1. ಲೇಖನಕ್ಕೆ ಪೂರಕವಾದ ಚಿತ್ರಗಳನ್ನು ಒದಗಿಸಿದ ರಾಜಾರಾಮ್ ಕಾವಳೆ ಅವರಿಗೆ ಧನ್ಯವಾದಗಳು.
    ಉಮಾ ವೆಂಕಟೇಶ್

    Like

  2. ಇದು ವರದಿಯಾದರೂ ಬರಲಾಗದಿದ್ದವರಿಗೆ ಆ ದಿನದ ಆಗುಹೋಗುಗಳ ಪರಿಚಯವನ್ನು ಶಬ್ದಗಳಲ್ಲಿ ಕೊಟ್ಟಿದೆ. ಜೊತೆಗೆ ಚಿತ್ರಗಳೂ ಪೂರಕವಾಗಿವೆ. ಅದರ ಹಿಂದಿನ ಪರಿಶ್ರಮವನ್ನು ಮೆಚ್ಚಲೇ ಬೇಕು.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.