ತುಳಿದರೂ ಅಳಿಯದ ಆಕ್ಸ್ ಫರ್ಡಿನ ಕರಾಳ ಇತಿಹಾಸ – ಶ್ರೀವತ್ಸ ದೇಸಾಯಿ ಬರೆದ ಲೇಖನ

Oxford sightseeing
ಟೂರಿಸ್ಟ್ ಆಕ್ಸ್ ಫರ್ಡ್

ಇದೇ ಜುಲೈ ತಿಂಗಳಲ್ಲಿ ನಾನು ಆ ನಗರಕ್ಕೆ ಭೇಟಿಯಿತ್ತಾಗ ವಿದ್ಯಾಕೇಂದ್ರ, ಆಕರ್ಷಕ ಟೂರಿಸ್ಟ್ ಮ್ಯಾಗ್ನೆಟ್ ಎಂದು ಸುಪ್ರಸಿದ್ಧವಾದ ’ಆಕ್ಸಫರ್ಡ್ ” ಬ್ರಿಟಿಷ್ ಸಮ್ಮರ್’ (ಅಲ್ಲಿಯವರಿಗೆ Indian Summer!) ನಲ್ಲಿ ಕಂಗೊಳಿಸುತ್ತಿತ್ತು. ಊರ ಮಧ್ಯದಲ್ಲಿ ಒತ್ತಾಗಿ ಒಂದಕ್ಕೊಂದು ಹತ್ತಿಕೊಂಡಂತಿರುವ, ಹಾಗೂ ಪ್ರಸಿದ್ಧಿಗೆ ಪೈಪೋಟಿ ನಡೆಸುತ್ತಿರುವಂತೆ ಕಾಣುವ ಕಾಲೇಜುಗಳು, ಅವುಗಳ ಸುತ್ತ ನೆರೆದ ಇಂದಿನ, ಮತ್ತು ಮುಂದೆ ಅಲ್ಲಿ ಕಲಿಯಲು ಕನಸು ಕಾಣುತ್ತಿರುವ ವಿವಿಧ ದೇಶಗಳ ಯುವಜನರು, ಪ್ರೇಕ್ಷಣೀಯ ಸ್ಥಳಗಳನ್ನರಸಿ ಹೋಗುವ ಯಾತ್ರಿಕರ ಗುಂಪುಗಳು -ಇವೆಲ್ಲವುಗಳಿಂದ ಲವಲವಿಕೆಯ ವಾತಾವರಣವಿತ್ತು. ಕಾಲೇಜುಗಳ ಹೊರಾಂಗಣಕ್ಕೆ ಪ್ರವಾಸಿಗರಿಗೆ ಮುಕ್ತ ಪ್ರವೇಶವಿತ್ತು. ಗೇಟು ದಾಟಿದ ಕೂಡಲೆ ಒಂದು ಪೋರ್ಟರ್ಸ್ ಲಾಜ್, ಅದರ ಕಮಾನಿನಾಚೆ ಅಚ್ಚುಕಟ್ಟಾದ ಚೌಕಾದ ಹಸಿರು ಹುಲ್ಲಿನ ಲಾನ್; ಅದರಾಚೆ ಉದ್ದನೆಯ ಮೇಲ್ಛಾವಣಿಯಿರುವ ಕಾರಿಡಾರುಗಳು (cloisters), ಅವುಗಳ ಹಿಂದೆ ಪಾಠದ ಕೋಣೆಗಳು; ಹೆಚ್ಚು ಕಡಿಮೆ ಪ್ರತಿಯೊಂದು ಕಾಲೇಜಿನಲ್ಲೂ ಅದೇ ತರಹದ ದೃಶ್ಯ. ಅದನ್ನು ನೋಡಿದರೇನೇ ಒಂದು ತರದ ರೋಮಾಂಚನ!

ಏಳೆಂಟು ಶತಮಾನಗಳಿಂದ ಎಂತೆಂಥ ದಾರ್ಶನಿಕರು, ಲೇಖಕರು, ಚಿಂತಕರು, ರಾಜಕಾರಣಿಗಳು, ವಿಜ್ಞಾನಿಗಳು ಇಲ್ಲಿ ವ್ಯಾಸಂಗ ಮಾಡಿ ಹೋಗಿರಬೇಡ? ಜಗತ್ತಿನ ವಿವಿಧ ದೇಶಗಳ ಭವಿತವ್ಯವನ್ನೇ ಕಟ್ಟಿದ ಪ್ರಧಾನಿಗಳು, ಯೋಧರು ಇವರೆಲ್ಲರನ್ನು ನೆನಸಬಹುದು. ಆ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಇತ್ತೀಚಿನ ಭಾರತೀಯರಲ್ಲಿ ಇಂದಿರಾ ಗಾಂಧಿ (ಸೋಮರ್ವಿಲ್ ಕಾಲೇಜು), ಮನಮೋಹನ ಸಿಂಗ (ನಫ್ಫೀಲ್ಡ್ ಕಾಲೇಜು) ಅಂಧ ಸಾಹಿತಿ, ಬರಹಗಾರ, ಪತ್ರಿಕೋದ್ಯಮಿಯಾದ ವೇದ ಮೆಹತಾ (ಬೇಲಿಯೋಲ್ ಕಾಲೇಜು) ಅವರು ಆಕ್ಸಫರ್ಡಿನ ಬೇರೆ ಬೇರೆ ಕಾಲೇಜುಗಳಲ್ಲಿ ಓದಿ ಮುಂದೆ ಪ್ರಸಿದ್ಧರಾದವರುಇಂದಿರಾ ಅವರಿಗೆ ಕಾರಣಾಂತರಗಳಿಂದ ಡಿಗ್ರೀ ಮುಗಿಸಲಾಗಲಿಲ್ಲವೆಂದು ಪ್ರತೀತಿ. ಇನ್ನು, ಕನ್ನಡಿಗರೇ ಆದ ಗಿರೀಶ ಕಾರ್ನಾಡರು (ಮಾಡಲೀನ್ ಕಾಲೇಜು) ಆಕ್ಸ್ಫರ್ಡಿನಲ್ಲಿ ಓದುವಾಗ ಡಿಬೇಟಿಂಗ್ ಯೂನಿಯನ್ನಿನ ಪ್ರಥಮ ಭಾರತೀಯನೆಂದು ಅಧ್ಯಕ್ಷರಾಗಿ ಚುನಾಯಿತರಾದುದು ಹೆಗ್ಗಳಿಕೆಯ ವಿಷಯ. ನಾನು ಶಾಲೆಯಲ್ಲಿದ್ದಾಗ ಕನ್ನಡಿಗನಿಗೆ ಸಂದ ಆ ಗೌರವದ ಸುದ್ದಿಯನ್ನು ಕೇಳಿ ನಮಗೆಲ್ಲ ಹೆಮ್ಮೆ. ಉಳಿದ ವಿದ್ಯಾರ್ಥಿಗಳಂತೆ ಇಡೀ ದಿನ ಊರೆಲ್ಲ ತಿರುಗಿ ರಾತ್ರಿ ಮರಳುವಾಗ ಕಾಲೇಜಿನ ಗೇಟು ಹಾಕಿತ್ತೆಂದು ಗೋಡೆ ಹತ್ತಿ ಒಳಗೆ ಬಂದೆನೆಂದು ವೇದ ಮೆಹತಾ ಬರೆದಿದ್ದಾನೆ, ಅದು ಹೇಗೆ? ಅಂಧನಾದರೂ ಆತನಿಗೆ ಡೋಮ್ ಮೋರಾಯಿಸ್ ನಂಥ ಮಿತ್ರರಿದ್ದರಲ್ಲವೆ? ಅವರ ಸಹಾಯ ಅವನಿಗೆ ಇತ್ತಂತೆ.

ಪಾದದಡಿಯಲ್ಲೇ ಇತಿಹಾಸ

ಬ್ರಾಡ್ ಸ್ಟ್ರೀಟ್ ಮಧ್ಯದಲ್ಲಿ ಗುರುತು ಚಿತ್ರ : ಲೇಖಕರದು
ಬ್ರಾಡ್ ಸ್ಟ್ರೀಟ್ ಮಧ್ಯದಲ್ಲಿ ಗುರುತು                          ಚಿತ್ರ : ಲೇಖಕರದು

ಕಾಲ್ನಡಿಗೆಯಲ್ಲೇ ಈ ಊರನ್ನು ಸುತ್ತುವ ಜನರಲ್ಲಿ ಅದೆಷ್ಟು ಜನರಿಗೆ ಊರ ಮಧ್ಯದಲ್ಲಿಯ ಬ್ರಾಡ್ ಸ್ಟ್ರೀಟ್ ನ ಒಂದು ತುದಿಯಲ್ಲಿ ರಸ್ತೆಯ ಮಧ್ಯದಲ್ಲೇ ದುಂಡು ಹಾಸುಗಲ್ಲುಗಳಿಂದ ರಚಿಸಿದ ಕತ್ತರಿ, ಯಾ ಶಿಲುಬೆಯ ಗುರುತು ಕಂಡೀತೋ? ಅದರ ಬದಿಯಲ್ಲಿ, ಸೈಕಲ್ಲ ಮೇಲೆ ಹಾದು ಹೋಗಿ, ಅಥವಾ ನಡೆಯುವಾಗ ಗೊತ್ತಾಗದೆ ಅದನ್ನು ಕಾಲಲ್ಲಿ ತುಳಿದೇ ಹೋಗುವ ಜನರನ್ನು ನೋಡಿದ್ದೇನೆ. ಅದು 1555 ಮತ್ತು 1556ರಲ್ಲಿ ಧರ್ಮಬಲಿಗೆ ತುತ್ತಾದ ಮೂವರು ಕ್ರೈಸ್ತ ಧರ್ಮ ಗುರುಗಳು ಜೀವ ತೆತ್ತ ಸ್ಥಳವನ್ನು ಸೂಚಿಸುತ್ತದೆ. 1555 ರಲ್ಲಿ ಹುತಾತ್ಮರಾದ ನಿಕೋಲಸ್ ರಿಡ್ಲಿ, ಮತ್ತು ಹ್ಯೂ ಲಾಟಿಮರ್ ಕ್ರೈಸ್ತ ಬಿಷಪ್ ಆಗಿದ್ದರೆ, 1556ರಲ್ಲಿ ಅಗ್ನಿಗಾಹುತಿಯಾದವನು ಆರ್ಚ್ ಬಿಷಪ್ ಥಾಮಸ್ ಕ್ರಾನ್ಮರ್. ಈ ಮೂವರ ಹೆಸರುಗಳನ್ನು ರಸ್ತೆಗೆ ತಾಗಿದ ಬೇಲಿಯೋಲ್ ಕಾಲೇಜಿನ ಗೋಡೆಯ ಮೇಲಿನ ಸ್ಮಾರಕ ಫಲಕದಲ್ಲಿ ಕೆತ್ತಿದ್ದಾರೆ ಮತ್ತು ಆ ದಾರುಣ ದೃಶ್ಯವನ್ನು ನೆನಪಿಸಿ ಕೊಡುತ್ತದೆ. ಆಗಿನ ಐತಿಹಾಸಿಕ ಘಟನೆಗಳಗೆ ಸಂಬಂಧಿಸಿದ ಪಳೆಯುಳಿಕೆಗಳನ್ನು ಪಕ್ಕದಲ್ಲೇ ಇರುವ ಸೇಂಟ್ ಮೈಕಲ್ ಚರ್ಚಿನಲ್ಲಿಯ ವಸ್ತು-ಸಂಗ್ರಹಾಲಯದಲ್ಲಿಟ್ಟಿದ್ದಾರೆ. ಅವುಗಳನ್ನು ನೋಡಿದವರಿಗೆ ಮೈನವಿರೇಳುವುದರಲ್ಲಿ ಸಂದೇಹವಿಲ್ಲ. ಆದರೆ ಪಕ್ಕದಲ್ಲೇ ಸೇಂಟ್ ಜೈಲ್ಸದಲ್ಲಿ, ಆ ಮೂವರ ಸ್ಮಾರಕ ಶೃಂಗದ ಮೆಟ್ಟಲುಗಳ ಮೇಲೆ ಕುಳಿತು ಸಾಂಡ್ವಿಚ್, ಮತ್ತು ಐಸ್ಕ್ರೀಮ್ ತಿನ್ನುವ ಟೂರಿಸ್ಟ್ ಜನರಿಗೆ, ಯುವಕರಿಗೆ ಆ ನರಬಲಿಯ ಅರಿವು ಇದ್ದಂತೆ ಕಾಣುವದಿಲ್ಲ!

ಐತಿಹಾಸಿಕ ಹಿನ್ನೆಲೆ:

_Henry_VIII_of_England_
Henry VIII (CC)

ಸ್ಥೂಲಕಾಯದ, ಆರು ಜನರನ್ನು ರಾಣಿಯರ ಪತಿದೇವನೆಂದು ಕುಪ್ರಸಿದ್ಧನಾದ ಇಂಗ್ಲಂಡಿನ ಎಂಟನೆಯ ಹೆನ್ರಿ ಮಹಾರಾಜನಿಗೆ ಮೊದಲ ಹೆಂಡತಿ ಕ್ಯಾಥರಿನ್ ರಾಣಿಯನ್ನು ತ್ಯಜಿಸಿ, ಆನ್ ಬೊಲಿನ್ನನ್ನು ಮದುವೆಯಾಗಿ ರಾಣಿಯನ್ನಾಗಿ ಮಾಡಬೇಕಾಗಿತ್ತು. ಆಗ ಭಿನ್ನಮತದ ರೋಮನ್ ಕಾಥಲಿಕ್ ಪೋಪನೊಂದಿಗೆ ಈ ವಿಷಯದಲ್ಲಿ ವೈಷಮ್ಯವುಂಟಾಗಿ ಕ್ಯಾಥಲಿಕ್ ಚರ್ಚಿನಿಂದ ಹೊರಬಿದ್ದದ್ದಷ್ಟೇ ಅಲ್ಲ, ಆಂಗ್ಲ ಚರ್ಚನ್ನು ಸಹ ರೋಮಿನ ಆಧಿಪತ್ಯದಿಂದ ಬಿಡಿಸಿದ. ಆಗಿಂದ ಪ್ರಾರಂಭವಾಗಿತ್ತು ಇಂಗ್ಲಿಷ್ ಪ್ರೋಟೆಸ್ಟಂಟ್ ಧರ್ಮಸುಧಾರಣೆ (Reformation) ಯುಗ. ಈ ಧರ್ಮ-ಸುಧಾರಣೆಯ ಮುಂಚೂಣಿಯಲ್ಲಿದ್ದವರೇ ಆ ಮೂರು ಜನ ಹುತಾತ್ಮರು. ಹೆನ್ರಿಗೆ ಬೇಕಾದವರು. ಆದರೆ ಹೆನ್ರಿಯ ನಂತರ ಪಟ್ಟಕ್ಕೇರಿದ ಇಂಗ್ಲಡಿನ ರಾಣಿ ”ರಕ್ತಸಿಕ್ತ’  ಮೇರಿ I (”Bloody Mary”) ಕ್ಯಾಥಲಿಕ್ ಧರ್ಮದ

Mary I (CC)
Mary I (CC)

ಅನುಯಾಯಿಯಾಗಿದ್ದಳು. ತನ್ನ ಧರ್ಮದಲ್ಲಿ ನಂಬಿಕೆಯಿಲ್ಲದವರನ್ನು ಹಿಂದು ಮುಂದು ನೋಡದೆ ಗಲ್ಲಿಗೇರಿಸುವದರಲ್ಲಿ ಹಿಂಜರಿಯದವಳು, ಮತ್ತು (ಬ್ಲಡಿ ಮೇರಿ) ಎಂಬ ಖ್ಯಾತಿ ಪಡೆದಿದ್ದಳು. ನಿಜವಾಗಿಯೂ ಒಂದು ವರ್ಷದಲ್ಲಿ, ಅವಳ ಕ್ರೂರ ತಂದೆಗಿಂತ ಕಡಿಮೆ ಜನರನ್ನೇ ಅವಳು ಕೊಲ್ಲಿಸುತ್ತಿದ್ದಳು! ಈ ಮೂವರು ಅವಳ ವಾಮದೃಷ್ಟಿಗೆ ಬಿದ್ದುದು ಅವರ ದುರ್ದೈವ. ಅವರನ್ನು ಬಂಧಿಸಿ ಲಂಡನ್ ಟಾವರಿನಲ್ಲಿಟ್ಟು, ನಂತರ ಆಕ್ಸ್ ಫರ್ಡಿನಲ್ಲಿ ವಿಚಾರಣೆಗೆ ಗುರಿಮಾಡಿ, ಪಾಷಂಡಿಗಳೆಂದು ಸಾಬೀತು ಮಾಡಿ ಸೆಪ್ಟೆಂಬರ್ 1555ರಲ್ಲಿ ಮರಣ ಶಿಕ್ಷೆ ಕೊಡಲಾಯಿತು.

ಧರ್ಮಬಲಿ

ಮೂವರೂ ಹುತಾತ್ಮರಿಗೆ ಬೈಬಲ್ಲಿನ ನಿಜವಾದ ಬೋಧನೆಯಲ್ಲಿ ಅಚಲ ಶ್ರದ್ಧೆಯಿತ್ತು. ಅವರನ್ನು ಬಂಧಿಸಿಟ್ಟ ಬೊಕಾರ್ಡೊ ಕಾರಾಗ್ರಹ, ಊರಿನ ಉತ್ತರದ ಸೆಂಟ್ ಮೈಕೆಲ್ ಇಗರ್ಜಿಗೆ ಹೊಂದಿದ್ದ ನಾರ್ಥ್ ಗೇಟಿನಲ್ಲಿತ್ತು. ಈಗ ಅಲ್ಲಿಯ ಮ್ಯೂಜಿಯಂನಲ್ಲಿ, ಅಂದು ಅವರು ಹೊರಬಿದ್ದ ಬಾಗಿಲನ್ನು ಇಂದಿಗೂ ನೋಡಬಹುದು. ಕ್ರಾನ್ಮರ್ ಸುಧಾರಿಸಿ, ಸಂಪಾದಿಸಿದ ಕ್ರಿಸ್ತ ಮತದ ಚರ್ಚುಗಳಲ್ಲಿ ಇಂದಿಗೂ ಉಪಯೋಗಿಸುವ Book of Book_of_common_prayer_1549Common Prayer ಸ್ತೋತ್ರಪುಸ್ತಕ, ಗಂಟೆ, ಅವರು ಜೇಲಿನ ಕಿಡಕಿಗಳ ಮೂಲಕ, ಹಗ್ಗದಿಂದ ಹೊರಗೆ ಇಳಿ ಬಿಟ್ಟು ಜನರಿಂದ ಭಿಕ್ಷೆ ಬೇಡುತ್ತಿದ್ದ ಮರದ ಪೆಟ್ಟಿಗೆ, ಮತ್ತು ಶೀಲಾ-ನ-ಗಿಗ್ (Sheela-na-gig) ಎಂಬ ಬೀಭತ್ಸ ಕಲ್ಲಿನ ಕೆತ್ತನೆ, ಇವೆಲ್ಲ ಅಲ್ಲಿಯೇ ಇವೆ. ಊರಿನ ಉತ್ತರದ ಗೇಟಿನ ಹೊರಗಿನ ಕಂದರದಲ್ಲಿ ಸುಡುಗಂಬದ ವ್ಯವಸ್ಥೆ. 1555ನೇ ಇಸವಿಯ ಅಕ್ಟೋಬರ್ 16 ರಂದು ಜೀವಂತ ದಹನ. ಜನಸಮುದ್ದಯ ನೋಡುತ್ತಿದೆ. ಅಷ್ಟೇ ಅಲ್ಲ, ಇನ್ನೆರಡು ತಿಂಗಳಲ್ಲಿ ಅದೇ ಗತಿಯನ್ನು ಅನುಭವಿಸಲಿರವ ಕ್ರಾನ್ಮರ್ ಮೇಲಿಂದ ಅದನ್ನು ನೋಡಲು ನಿಲ್ಲಿಸಿದ್ದರೆಂದು ಹೇಳುತ್ತಾರೆ! ವಯೋವೃದ್ಧ ಲ್ಯಾಟಿಮರ್ಗೆ ಮರಣ ಬೇಗ ಬಂತು. ಆದರೆ ರಿಡ್ಲಿಯ ತಮ್ಮ, ಅಣ್ಣನ ಕತ್ತಿನ ಸುತ್ತ ಸಿಡಿಮದ್ದನ್ನು ಕಟ್ಟಿದ್ದರೂ ಆತನ ಸುತ್ತ ಒಟ್ಟಿದ ಕಟ್ಟಿಗೆಗಳು ಹಸಿಯಾಗಿದ್ದರಿಂದ, ಕೆಳಭಾಗವಷ್ಟೇ ಮೊದಲು ಸುಟ್ಟಿದ್ದರಿಂದ ಆತನ ಪ್ರಾಣ ಬೇಗ ಹೋಗಲಿಲ್ಲ. ದೇವರೇ ನನ್ನ ಮೇಲೆ ಕರುಣೆಯಿರಲಿ ಎಂದು ಬೇಡಿಕೊಂಡ. ಪಕ್ಕದಲ್ಲಿದ್ದ ಲ್ಯಾಟಿಮರ್, ”ಧೈರ್ಯಗೆಡಬೇಡ, ತಮ್ಮಾ. ನಾವಿಂದು ದೇವರ ದಯೆಯಿಂದ ಎಂಥ ಮೋಂಬತ್ತಿ ಹಚ್ಚೇವೆಂದರೆ ಇಂಗ್ಲೇಂಡಿನಲ್ಲಿ ಅದು ಎಂದೂ ನಂದುವದಿಲ್ಲ!” ಎಂದು ಧೈರ್ಯ ತುಂಬಿದ. ಕೊನೆಗೆ ಯಾರೋ ಮತ್ತೆ ಬೆಂಕಿ ತಂದು ಚಿತೆಯ ಮೇಲ್ಭಾಗಕ್ಕೆ ಅಗ್ನಿಸ್ಪರ್ಷವಾದನಂತರವೇ ಅವನೂ ಅಸುನೀಗಿದನು.

ರಿಡ್ಲಿಮತ್ತು ಲಾಟಿಮರ್ ಅವರ ದಹನ (CC)
ರಿಡ್ಲಿ ಮತ್ತು ಲಾಟಿಮರ್ ಅವರ ದಹನ (CC)

ಮರು ವರ್ಷ ಆರ್ಚ್ ಬಿಷಪ್ ಕ್ರಾನ್ಮರ್ ಪರರ ಒತ್ತಾಯಕ್ಕೊಳಗಾಗಿ ತನ್ನ ಪ್ರೊಟೆಸ್ಟಂಟ್ ನಂಬಿಕೆಗಳನ್ನು ಬಹಿರಂಗವಾಗಿ ಹಿಂದೆಗೆಯಲು (Recantation) ಸಿದ್ಧವಾದ. ಮೊದಲೇ ಪ್ರಕಟನೆಯಾದ ಆ ಕಾಗದಕ್ಕೆ ಸಹಿಯೂ ಹಾಕಿದ್ದ. ಆ ದಿನ ಅದನ್ನು ಚರ್ಚಿನ ಪಲ್ಪಿಟ್ ಮೇಲೆ ನಿಂತು ಅದನ್ನು ಬಹಿರಂಗವಾಗಿ ಓದಬೇಕು. ಕೊನೆಯ ಘಳಿಗೆಯಲ್ಲಿ ಮನಸ್ಸು ಬದಲಾಯಿಸಿ, ಅದಕ್ಕೆ ತಾನು ಒಪ್ಪುವದಿಲ್ಲ ಎಂದ ಕೂಡಲೆ ಹಾಹಾಕಾರದ ಮಧ್ಯೆ ಅವನನ್ನು ಎಳೆದು ಅದೇ ಸ್ಥಳಕ್ಕೆ ಎಳೆ ತಂದು ಅವನನ್ನೂ ಬಲಿ ಕೊಟ್ಟರು. ತಾನು ಸಹಿ ಮಾಡಿದ ಬಲಗೈಯನ್ನು ಮೊದಲೇ ಬೆಂಕಿಯಲ್ಲಿಟ್ಟು, ”ದೇವರೇ, ನನ್ನ ಆತ್ಮವನ್ನು ಸ್ವೀಕರಿಸು. ಅಕೋ, ನನ್ನ ಆಗಮನಕ್ಕೆ ದೇವನ ಬಲಗಡೆ ನಿಂತ ಕ್ರೈಸ್ತ ನನ್ನನ್ನು ಬರಮಾಡಿಕೊಳ್ಳುತ್ತಿದ್ದಾನೆ” ಎಂದು ಅನ್ನುತ್ತ ಅವನೂ ಅಗ್ನಿಗಾಹುತಿಯಾದ.

ಹುತಾತ್ಮರಿಗೊಂದು ಸ್ಮಾರಕ
ಹುತಾತ್ಮರಿಗೊಂದು ಸ್ಮಾರಕ  (Photo by Author)

ಧರ್ಮ, ಮತ್ತು ರಾಜಕಾರಣಗಳು ಕೂಡಿದರೆ ಆಗುವದೇ ಸ್ಫೋಟಕ ಮಿಶ್ರಣ. ಅಂದಿಗೂ ಸರಿ, ಇಂದಿಗೂ ಸಹ, ಧರ್ಮದ ಹೆಸರಿನಲ್ಲಿ ಅತ್ಯಾಚಾರ, ನರಹತ್ಯೆ ನಡೆಯುತ್ತಿತ್ತು, ನಡೆಯುತ್ತಿದೆ!

ಶ್ರೀವತ್ಸ ದೇಸಾಯಿ.

 

9 thoughts on “ತುಳಿದರೂ ಅಳಿಯದ ಆಕ್ಸ್ ಫರ್ಡಿನ ಕರಾಳ ಇತಿಹಾಸ – ಶ್ರೀವತ್ಸ ದೇಸಾಯಿ ಬರೆದ ಲೇಖನ

  1. ದೇಸಾಯಿಯವರೇ,

    ತಡವಾಗಿ ಪ್ರತಿಕ್ರಿಯೆ ಮಾಡುತ್ತಿರುವದಕ್ಕೆ ಕ್ಷಮೆಯಿರಲಿ. ನಿಮ್ಮ ಲೇಖನಿಯಲ್ಲಿರುವ ಶಕ್ತಿ ಅಪಾರ. ಇತಿಹಾಸದ ಯವ್ಯಾವುದೋ ಪುಟಗಳನ್ನು ಎಲ್ಲೆಲ್ಲಿಂದಲೋ ಜೋಡಿಸಿ ಉಣಬಡಿಸುತ್ತೀರಿ. ಈ ಕತೆಯಂತೂ ನನಗೆ ದೇವರಾಣೆ ಗೊತ್ತಿರಲಿಲ್ಲ. ಇತ್ತೀಚಿಗಷ್ಟೇ ಮಗನ ಜೊತೆ ಸೇರಿ ಷಡ್ಡರಸಿಯರ ಹೆಣ್ರಿ ಬಗ್ಗೆ ತಿಳಿದಿಕೊಂಡಿದ್ದೆ. ಈ ರಕ್ತಸಿಕ್ತ ಮೇರಿಗೂ ಆಕ್ಸ್-ಫರ್ಡಿನ ರಸ್ತೆಯಲ್ಲಿ ಬೇಕಂತ ಮಾಡಿರುವ ಹೊಂಡಕ್ಕೂ ಇರುವ ಕತೆ ತುಂಬ ಚೆನ್ನಾಗಿ ಹೇಳಿದ್ದೀರಿ. ಎತ್ತಣ ಮಾಮರ, ಎತ್ತಣ ಕೋಗಿಲೆ; ಎತ್ತಣ ಮೇರಿ, ಎತ್ತಣ ರಸ್ತೆ; ಅತ್ತಣ ಆಕ್ಸ್-ಫರ್ಡು-ಎತ್ತಣ ಕನ್ನಡ.

    Like

  2. ಸುದರ್ಶನ್ ಇಂದಿರಾಳ ತಂದೆ ಜವಹರಲಾಲ್ ನೆಹ್ರೂ ಅವರು ಕೇಂಬ್ರಿಜ್ಜಿನಿಂದ ಪದವಿ ಪಡೆದಿದ್ದರು.
    ಉಮಾ ವೆಂಕಟೆಶ್

    Like

    • ಇಲ್ಲ,ಅದೂ ಸಹ gentleman’s honor ಎಂಬ certification (ಪ್ರಮಾಣ)ಅಷ್ಟೇ. ಅದು ಕೇಂಬ್ರಿಡ್ಜ್ ನಲ್ಲಿ ಅವರು ವ್ಯಾಸಂಗ ಮಾಡಿದರು ಎಂಬುದರ ಗುರುತಾಗಿ ಮಾತ್ರ. ಪದವಿಗೆ ಅವಶ್ಯಕತೆ ಇರುವ ಅನುಸಂಧಾನಿಕ ಕ್ರಿಯೆಗಳನ್ನಾಗಲೀ,ಪರೀಕ್ಷೆಗಳನ್ನಾಗಲೀ ಜವಹರಲಾಲ್ ಪಾಸು ಮಾಡಲಿಲ್ಲ. ಕೇಂಬ್ರಿಡ್ಜ್ ಪದವಿ ಪ್ರಣೀತ ಎಂದು ಬಿಂಬಿಸಲಾಯಿತಷ್ಟೇ.

      Like

  3. ಮಾಹಿತಿ ಪೂರ್ಣ ಲೇಖನ. ಚೆನ್ನಾಗಿದೆ. ನಾನಿನ್ನೂ Oxford ಗೆ ಹೋಗಿಯೇ ಇಲ್ಲ!

    ಇಂದಿರಾಗಾಂಧಿಯವರು ಕಾರಣಾಂತರಗಳಿಂದ ತಮ್ಮ ಪದವಿ ವ್ಯಾಸಂಗ ಮುಗಿಸಲಿಲ್ಲ ಎಂದಿದ್ದೀರಿ. ಅವಳೇ ಅಲ್ಲ, ಆ ವಂಶದ ಯಾರೂ ಪದವೀಧರರಲ್ಲವೇ ಅಲ್ಲ ಎಂಬುದು ಆಶ್ಚರ್ಯ ಆದರೂ ಸತ್ಯ.

    Like

  4. ನಾನು ವರ್ಷ ೨೦೦೦ದಲ್ಲಿ ಇಂಗ್ಲೆಂಡಿಗೆ ಹೊಗಿದ್ದೆ. ಆಗ ಡಾ. ದೇಸಾಯಿಯವರು ನಮಗೆ ಆಕ್ಸ್ಫರ್ಡಿನ ದರ್ಶನ ಮಾಡಿಸಿದ್ದರು. ಈ ಲೇಖನದಲ್ಲಿ ಬರೆದ ಎಲ್ಲ ವಿಚಾರಗಳನ್ನು ತಿಳಿಸಿ ಹೇಳಿದ್ದರು. ಕ್ರಾನ್ಮರ್ ಅವರು ಬ್ರಾಡ್ ರಸ್ತೆಯ ನಡುವೆ ಕ್ರಾಸ್ ಮಾಡಿದ ಸ್ಥಳದಲ್ಲಿ ಹುತಾತ್ಮರಾದ ವಿಚಾರವನ್ನು ತಿಳಿಸಿದ್ದರು . ಸೈಂಟ್ ಮಿಕೆಲ್ಸ್ ಚರ್ಚಿನ ಮೇಲೆಯೂ ಕರೆದುಕೊಂಡು ಹೊಗಿದ್ದರು. ಆಲಿಸ್ ಕ್ಯಾಂಡಿ ಶೋಪನ್ನು ತೋರಿಸಿದ್ದರು. ಈ ಲೇಖನ ಓದಿದಾಗ ಮತ್ತೆ ಅಲ್ಲಿಗೆ ಹೋಗಿಬಂದ ಅನುಭವ ಆಯಿತು . ಡಾ ದೇಸಾಯಿಯವರಿಗೆ ನಮ್ಮ ಧನ್ಯವಾದಗಳು

    Like

  5. ಪ್ರತಿಕ್ರಿಯೆ ಬರೆದ ನಿಮ್ಮಿಬ್ಬರಿಗೂ ಧನ್ಯವಾದಗಳು. ನಾನು ಮೊದಲ ಸಲ ಬೆರಗುಗಣ್ಣಿನಿಂದ ಆ ಶಿಲುಬೆಯನ್ನು ಕಂಡದ್ದು ಈ ದೇಶಕ್ಕೆ ಬಂದ ಹೊಸತರಲ್ಲಿ, ೪೦ ವರ್ಷಗಳ ಹಿಂದೆ. ಆಗ ರಸ್ತೆಯ ಮಧ್ಯದಲ್ಲಿ ಅದು ಕಂಚು ಅಥವಾ ಹಿತ್ತಾಳೆ ಲೋಹದ್ದು ಎಂದು ನೆನಪಿದೆ. ಕಾಲಧರ್ಮ, ಈಗ ಬದಲಿಸಿದ್ದಾರೆ ಎಂದು ಕಾಣುತ್ತದೆ. ಚರ್ಚುಗಳು ಅನುಯಾಯಿಗಳನ್ನಷ್ಟೇ ಅಲ್ಲ, ಛತ್ತಿನ ಮೇಲಿನ ಸೀಸೆಯನ್ನೂ ಕಳೆದುಕೊಳ್ಳುವ ಕಾಲವಿದು! ಪ್ರೇಮಲತಾ ಅವರೇ, ನಿಮ್ಮ ಕೇಂಬ್ರಿಜ್ ಲೇಖನವನ್ನು ಎದುರುನೋಡುವೆ. ಆಕ್ಸ್ಫಾರ್ಡ್ ಆದಮೇಲೆ ಕೇಂಬ್ರಿಜ್ಜಿನ ಹೆಸರು ಜೊತೆಗೆ ಕೇಳಿಸುತ್ತದೆ.

    Like

  6. ಇತ್ತೀಚೆಗೆ ಆಕ್ಸಫ಼ರ್ಡಿಗೆ ಹೋದಾಗ ಅವರು ಬರೆದ ಬ್ರಾಡ್ ಸ್ಟ್ರೀಟ್ ರಸ್ತೆಗೆ ಹೋಗಿದ್ದೆ. ಆದರೆ ರಸ್ತೆಯ ಮಧ್ಯದಲ್ಲಿರುವ ಆ ಶಿಲುಬೆ ನಾನು ನೋಡಿರಲಿಲ್ಲ. ಆ ಶಿಲುಬೆಯ ಹಿಂದಿನ ಇತಿಹಾಸವಂತೂ ನನಗೆ ಖಂಡೀತಾ ಗೊತ್ತಿರಲಿಲ್ಲ. ದೇಸಾಯಿ ಅವರು ಎಂದಿನಂತೆ ತಮ್ಮ ಲೇಖನವನ್ನು ಅತ್ಯಂತ ಚೊಕ್ಕವಾಗಿ ಬರೆದು, ಸ್ಥಳ ಪುರಾಣದೊಂದಿಗೆ ನಮಗೆ ಉತ್ತಮವಾದ ಮಾಹಿತಿಯನ್ನು ಒದಗಿಸಿದ್ದಾರೆ. ಇಂದು ಸಾವಿರಾರು ವಿದ್ಯಾರ್ಥಿಗಳು ಮತ್ತು ಬುದ್ದಿಜೀವಿಗಳು ನಡೆದಾಡುವ, ಪ್ರಪಂಚದ ಅತ್ಯುನ್ನತ ವಿದ್ಯಾಕೇಂದ್ರವಾದ ಆಕ್ಸಫ಼ರ್ಡಿನ ಇತಿಹಾಸದಲ್ಲಿ ರಕ್ತಸಿಕ್ತ ಕಲೆಗಳು ಬಹಳಷ್ಟಿವೆ ಎನ್ನುವುದು ದೇಸಾಯಿ ಅವರ ಈ ಲೇಖನದಿಂದ ತಿಳಿದು ಬಂತು. ಧರ್ಮದ ಹೆಸರಿನಲ್ಲಿ ನಡೆಯುವ , ನಡೆಯುತ್ತಿದ್ದ ಅತ್ಯಾಚಾರಗಳು ಇನ್ನೂ ನಡೆಯುತ್ತಲೇ ಇವೆ. ಧನ್ಯವಾದಗಳು ದೇಸಾಯಿ ಅವರ ಈ ಉತ್ತಮ ಲೇಖನಕ್ಕೆ.
    ಉಮಾ ವೆಂಕಟೇಶ್

    Like

  7. ದೇಸಾಯಿಯವರ ಲೇಖನಿಯಿಂದ ಇಂಗ್ಲೆಂಡಿನ ಇತಿಹಾಸದ ಬಗ್ಗೆ ಇನ್ನೊಂದು ಲೇಖನ. ಪ್ರತಿ ಊರಿನ ಬಗ್ಗೆ ಅಂತರ್ಜಾಲದಲ್ಲಿ ಅದಮ್ಯ ವಿಷಯಗಳಿದ್ದರೂ, ಹೀಗೆ ಲೇಖನಗಳು ಬರದಿದ್ದರೆ, ನಾವು ಆ ಊರುಗಳನ್ನು ನೋಡಲು ಹೋದಾಗ ಕೆಲವು ವಿಚಾರಗಳ ಬಗ್ಗೆ ಗಮನ ನೀಡದೆ ಹೋಗುವ ಸಾದ್ಯತೆ ಬಹಳ. ಇದೇ ವರ್ಷ ನಾವು ಕೇಂಬ್ರಿಡ್ಜ್ ಗೆ ಹೋಗಿದ್ದೆವು. ಈ ಸ್ಥಳಕ್ಕೂ ಇರುವ ಹಿರಿಮೆ ಗರಿಮೆಗಳು ಬಹಳ. ಕಳಂಕಗಳೂ ಇವೆ. ಇತಿಹಾಸವನ್ನು ಕೆದಕಿ, ಅಧ್ಯಯನ ಮಾಡಿ ಇಂತಹ ಕೂಲಂಕುಶ ಲೇಖನವನ್ನು ಬರೆದ ದೇಸಾಯಿಯವರ ಪ್ರಯತ್ನ ಶ್ಲಾಘನೀಯ.

    Like

Leave a comment

This site uses Akismet to reduce spam. Learn how your comment data is processed.