ಮೇಘ ಸಂದೇಶ — ಡಾ.ಸುದರ್ಶನ ಗುರುರಾಜರಾವ್ ಬರೆದ ಕವಿತೆ

ಮೇಘ ಸಂದೇಶcloud

ಭೂಮಿಗೂ ಬಾನಿಗೂ ಇರುತಿಹುದು ಬಲುನಂಟು
ಗಂಡಹೆಂಡಿರಿಗಿರುವ ನಂಟಿನಂತೆ
ಆಗಸದ ಬಿಸಿಲಿಗೆ ಭೂಮಿ ತಾ ನೀಡುತಿರೆ
ನೀರಿನಾವಿಯ ಸತತ ಪ್ರೀತಿಯಂತೆ

ಪ್ರೀತಿಪ್ರೇಮಗಳ ಸವಿವಿನಿಮಯದ ಫಲವಾಗಿ
ಉದಿಸಿರಲು ಮೋಡಗಳು ಮಕ್ಕಳಂತೆ
ಕ್ಷಣ ಕ್ಷಣಕು ಬದಲು ಮಾಡುತಲಿ ರೂಪಗಳ
ಹೋಲುತಿರೆ ಬೆಳೆಯುತಿಹ ಶಿಶುಗಳಂತೆ

ಆಗಸದಿ ಓಡುತಲಿ,ಏಳುತಲಿ ಬೀಳುತಲಿ
ಮೋಡಗಳು ಆಡಿರಲು ಮಕ್ಕಳಂತೆ
ಮಳೆಯ ಹನಿಗಳ ಸುರಿಸಿ ಭುವಿಗೆ ತಂಪೆರೆಯುವವು
ಅಳುತ ಮುದವನು ನೀಳ್ವ ಕಂದರಂತೆ

ಬಾಲ್ಯದಾವಸ್ಥೆಯಲಿ ಮಕ್ಕಳಾಟವು ಮನಕೆ
ತಂಪನೆರೆದಿರೆ ಬೇಸಿಗೆ ಮಳೆಯ ತೆರದಿ
ಬೆಂಡಾದ ಬಾಳ ಬೆಂಗಾಡಿನಲಿ ಸಂತಸದ
ಚಿಗುರನೊಡೆಸುತ ತಂದು ಸೋಜಿಗವ ಮುದದಿ

ಕಳೆದಿರಲು ಬಾಲ್ಯವದು ಮುಗ್ಢತೆಯು ಮರೆಯಾಗಿ
ಮೂಡುತಿರೆ ಮನದಲ್ಲಿ ಸ್ವಾರ್ಥದುರಿಯು
ಆಸೆಗಳಬೆನ್ನೇರಿ ಸಾಗುತಿರೆ ಜೀವನದಿ ಬೇಕುಗಳ
ಹಗ್ಗವನು ಹೊಸೆದು ದಿನವೂ

ಜೀವನದಿ ಪಾತ್ರಗಳು ಬದಲಾಗಿ ಹೋಗುತಿರೆ
ತಂದೆ ತಾಯಿಗಳಾಗಿ ಭುವಿಯ ಜಲವು
ಮನಕೆ ಮುದವನು ನೀಳ್ವ ಮೋಡಗಳೆ ಇಲ್ಲದಿಹ
ಬಿಸಿಲಿನಾಗಸವಾಗೆ ಮಕ್ಕಳಿರುವು

ಕಾಲಸರಿಯುತಲಿರಲು,ರೆಕ್ಕೆಗಳು ಬಲಿತಿರಲು
ಹಕ್ಕಿಗಳು ತಾವಾಗಿ ಹೊರಗೆ ಹಾರಿ
ಹೊಸ ಬಾಳು ಹೊಸಹಾದಿ ಬಯಸಿ ದೂರದಲೆಲ್ಲೋ
ಗೂಡು ಮಾಡಿರೆ ತಮ್ಮ ಜೊತೆಯ ಸೇರಿ

ಮೋಡಗಳು ಚೆದುರಿದಾ ಆಕಾಶದಂತಾಯ್ತು
ಗಂಡ ಹೆಂಡಿರುಗಳಾ ಮನೆಯು- ಮನವು
ಮೇಘಗಳ ಬರುವಿಕೆಗೆ ಇರುವಿಕೆಗೆ ಕಾದಿರುವ
ಧರೆಯಂತೆ ಪರಿತಪಿಸಿ ಅವರು ದಿನವೂ

ಮೇಘಗಳೆ ಬಾರದಿಹ ಹನಿಗಳೇ ಸುರಿಯದಿಹ
ಬಾಳಿನಲಿ ನೆನಪುಗಳೆ ಮೋಡವಾಗಿ
ಮಳೆನಿಂದ ಬಳಿಕವೂ ಮರದಿಂದ ತೊಟಿಯುತಿಹ
ಹನಿಯಂತೆ ತಂಪೆರೆದು ಗೂಢವಾಗಿ!!

                        ಡಾ.ಸುದರ್ಶನ ಗುರುರಾಜರಾವ್.

5 thoughts on “ಮೇಘ ಸಂದೇಶ — ಡಾ.ಸುದರ್ಶನ ಗುರುರಾಜರಾವ್ ಬರೆದ ಕವಿತೆ

  1. ನಿಮ್ಮ ಕವಿತೆಯನ್ನು ಓದುತ್ತಿದ್ದರೆ ನನಗೆ ಕೆ ಎಸ್ ಎನ್ ನೆನಪಾಗುತ್ತಾರೆ. ನಿಮ್ಮ ಶಬ್ದಭಾಂಡಾರ ಮತ್ತು ಭಾಷೆಯ ಮೇಲಿರುವ ಹಿಡಿತ ಈ ಕವಿತೆಯನ್ನು ಸಫಲಗೊಳಿಸಿದೆ. ಛಂದಸ್ಸು ಅಲ್ಲಲ್ಲಿ ಕೈಕೊಟ್ಟರೂ ಪರವಾಗಿಲ್ಲ. ತುಂಬ ಆಪ್ತ ಕವಿತೆ. ಜೋರಾಗಿ ಓದಿದರಂತೂ ಮೈನವಿರೇಳಿಸುವ ಭಾಷೆ.

    Like

  2. ಪ್ರಕೃತಿಯಿಂದಿಗೆ ಮಾನವನ ಸಂಬಂಧ ಬಲು ನಿಕಟವಾದದ್ದು. ನನ್ನ ಶಾಲೆಯ ಕನ್ನಡ ಪಠ್ಯ ಪುಸ್ತಕದಲ್ಲಿ “ ಮೇಘಗಳು“ ಬಗ್ಗೆ ಒಂದು ಸುಂದರವಾದ ಲಲಿತ ಪ್ರಬಂಧವನ್ನು ಓದಿದ ನೆನಪು ಇನ್ನೂ ನನ್ನ ಮನದಲ್ಲಿ ಹಸಿರಾಗಿದೆ. ನನ್ನ ನೆನಪಿನ ಪ್ರಕಾರ ಈ ಪ್ರಬಂಧದ ಲೇಖಕ ಕನ್ನಡ ಸಾಹಿತ್ಯದ ಪ್ರಖ್ಯಾತ ಸಾಹಿತಿ ಮತ್ತು ಲಲಿತ ಪ್ರಬಂಧಗಳನ್ನು ಜನಪ್ರಿಯಗೊಳಿಸಿದ ಮಾನ್ಯ ಶ್ರಿ. ಎ. ಎನ್. ಮೂರ್ತಿ ರಾವ್ ಅವರು. ಆ ಪ್ರಬಂಧದಲ್ಲಿ ಮೇಘಗಳೊಡನೆ, ಬದಲಾಗುವ ಅವುಗಳ ಸ್ವರೂಪಗಳೊಡನೆ, ನಮ್ಮ ಮನದ ಭಾವನೆಗಳನ್ನು ಜೋಡಿಸುವ ಒಂದು ಸುಂದರ ಪ್ರಯತ್ನವನ್ನು ಮಾಡಿದ್ದಾರೆ, ನಮ್ಮ ಸ್ನೇಹಿತ ಸುದರ್ಶನ್ ಅವರು ಸಹಾ ತಮ್ಮ ಕವನದಲ್ಲೂ ಅದೇ ರೀತಿಯ ಪ್ರಯೋಗ ನಡೆಸಿರುವುದು ನನಗೆ ಕಂಡು ಬಂದಿದೆ. ಕ್ಷಣ ಕ್ಷಣಕ್ಕೂ ಬದಲಾಗುವ ಮೇಘಗಳಂತೆ, ನಮ್ಮ ಬಾಳಿನ ವಿವಿಧ ಹಂತಗಳಲ್ಲಿ ನಾವೂ ಬದಲಿಸುತ್ತೇವೆ. ನಮ್ಮ ಜೀವನದ ಪಾತ್ರಗಳೂ ಬದಲಿಸುತ್ತವೆ ಎನ್ನುವುದನ್ನು ಸುಂದರವಾಗಿ ವರ್ಣಿಸಿದ್ದಾರೆ.

    “ಕಳೆದಿರಲು ಬಾಲ್ಯವದು ಮುಗ್ಢತೆಯು ಮರೆಯಾಗಿ
    ಮೂಡುತಿರೆ ಮನದಲ್ಲಿ ಸ್ವಾರ್ಥದುರಿಯು
    ಆಸೆಗಳಬೆನ್ನೇರಿ ಸಾಗುತಿರೆ ಜೀವನದಿ ಬೇಕುಗಳ
    ಹಗ್ಗವನು ಹೊಸೆದು ದಿನವೂ“

    ಈ ಮೇಲಿನ ಸಾಲುಗಳಲ್ಲಿ ಮಾನವನು ಬಾಲ್ಯದ ಮುಗ್ಧತೆಯನ್ನು ಕಳೆದುಕೊಂಡ ಬಳಿಕೆ, ಮನದಲ್ಲಿ ಸಹಜವಾಗಿ ಉಧ್ಭವಿಸುವ ಆಸೆಗಳ ಬೆನ್ನೇರಿ ಸಾಗುವ ಪರಿ, ಕೇವಲ ಬೇಕುಗಳನ್ನೇ ಹಿಂಬಾಲಿಸುವ ಮಾನವನ ಜೀವನ ಹಲವೊಮ್ಮೆ ಈ ಯಾನದಲ್ಲೇ ಕೊನೆಗೊಳ್ಳುತ್ತದೆ ಎನ್ನುವುದು ನಿಜಕ್ಕೂ ಒಂದು ವಿಪರ್ಯಾಸವಲ್ಲವೇ!
    ಉಮಾ ವೆಂಕಟೆಶ್

    Like

  3. ಮೊದಲಿನಿಂದಲೂ ನಿಸರ್ಗ ಮಾನವನಿಗೆ ಬದುಕಿಗೆ ಕನ್ನಡಿ ಹಿಡಿದರೂ ಕವಿಗೆ ಸ್ಫೂರ್ತಿಯನ್ನೂ ಕೊಟ್ಟಿದೆ. ಆಶಾವಾದಿಯನ್ನಾಗಿ ಮಾಡಿದೆ. ‘ಆ’ ಮಹಾಕಾವ್ಯದಲ್ಲಿ ಮೋಡ ಸಂದೇಶವಾಹಕ (‘ದೂತ’) ಮಾತ್ರ ಆಗಿದ್ದರೆ ಇಲ್ಲಿ ಸಂದೇಶವನ್ನೇ ಕೊಡುತ್ತಿದೆ. ಆಗಸದ ಕ್ಯಾನ್ವಸ್ಸಿನಲ್ಲಿ ಬಣ್ಣ ಬಣ್ಣದ ಚಿತ್ರಗಳನ್ನು ತುಂಬುವ ಮೋಡಗಳಲ್ಲಿ ಈ ಕವಿ ಮೂರು ‘ಪರ್ವ’ಗಳನ್ನು ಗುರುತಿಸುತ್ತಾರೆ: ಹಿಂದು-ಇಂದು-ಮುಂದಿನಂತೆ. ಪ್ರೀತಿಯ ಆವಿ- ನಲಿದಾಡುವ ಚೈತನ್ಯದ ಬದುಕು-ಕೊನೆಗೆ ಬರೀ ನೆನಪುಗಳು, ಹುಟ್ಟು-ಬದುಕಿನಂತೆ. ಸುಂದರವಾದ ಕವನ. ಇದರಲ್ಲಿ ‘ಅಳುತ ಮುದವನು ನೀಳ್ವ ಕಂದರಂತೆ’, ‘ಮೇಘಗಳ ಬರುವಿಕೆಗೆ ಇರುವಿಕೆಗೆ ಕಾದಿರುವ ಧರೆಯಂತೆ ಪರಿತಪಿಸಿ ಅವರು’ ಈ ಅಂದದ ಅನುಭವದ ಸಾಲುಗಳನ್ನು ಹೆತ್ತ ಕರುಳಲ್ಲವೇ ಬರೆಸುವುದು? ಇಂದಿನ ಸುಂದರ ಬದುಕಿನಲ್ಲಿ ಸಂತೋಷ ಪಟ್ಟು ಬಾಳಿದರೆ, ನಾಳೆ ”ಮೇಘಗಳೆ ಬಾರದಿಹ ಹನಿಗಳೇ ಸುರಿಯದಿಹ ದಿನಗಳು” ಬಂದರೆ ನೆನಪುಗಳೆ ಮೋಡವಾಗಿ, ಮಳೆಯ ನಂತರದ ಮರದ ಕೆಳಗಿನ ಹನಿಗಳಾದರೂ ಆಗಬಲ್ಲವು, ಎನ್ನುವುದೇ ಇಂದಿನ ಮೇಘಗಳ ಸಂದೇಶವೋ? ವರ್ಣನೆಗಳ ಮಧ್ಯದಲ್ಲಿ, ವಿಚಾರದ ಮಿಂಚೂ ಹೊಳೆಯುತ್ತಿದೆ.

    Like

  4. ಸುಂದರವಾದ ಪ್ರಕ್ರುತಿದತ್ತ ಸೋಜಿಗದ ವರ್ಣನೆಯೊಂದಿಗೆ ಕವನ ಶುರುವಾಗಿದೆ. ಅದಕ್ಕೆ ತಕ್ಕನಾದ ಚಿತ್ರವೂ ಇದೆ. ಪ್ರಕ್ರುತಿಯನ್ನು ಮನುಜನ ಬದುಕಿನೊಂದಿಗೆ ಹೋಲಿಸುವ ಪ್ರಯತ್ನ ಸಾಗುತ್ತದೆ. ಇಲ್ಲಿ ಪ್ರಕ್ರುತಿಯನ್ನು ಸಾಮಾನ್ಯ ಬದುಕಿಗೆ ಅಳವಡಿಸುವ/ಬಗ್ಗಿಸುವ ಪ್ರಯತ್ನವಿದೆ.
    ಅಥವ ಬದುಕಿನ ಬದಲಾವಣೆಗಳನ್ನು ಪ್ರಕ್ರುತಿಯಲ್ಲಿ ಕಾಣುವ ತಾಕಲಾಟವಿದೆ. ಪ್ರಕ್ರುತಿಯಲ್ಲಿ ಹೊಂದಾಣಿಕೆ ಬಹಳ ಕಡಿಮೆಯಲ್ಲವೆ? ಮನುಷ್ಯ ಅಥವ ಕವಿ ಕಾಣುವ ಅರ್ಥಗಳು ನೂರಾರು. ಅದನ್ನು ಚೆನ್ನಾಗಿ ಚಿತ್ರಿಸಿದ್ದೀರಿ.

    Like

Leave a comment

This site uses Akismet to reduce spam. Learn how your comment data is processed.