ಬೆಟ್ಟ ಗುಡ್ಡಗಳು ಪರ್ವತಗಳು ಕೈ ಬೀಸಿ ಕರೆದಾಗ … ಡಾ. ವಿನತೆ ಶರ್ಮ

ಡಾ ವಿನತೆ ಶರ್ಮ ನಮ್ಮ ವೇದಿಕೆಯ ಸದಸ್ಯರಿಗೆ ಈಗಾಗಲೇ ಪರಿಚಿತರು. ಮನೋವಿಗ್ಯಾನದಲ್ಲಿ ಡಾಕ್ಟರೇಟ್VinateVinate Portarait ಪದವಿ ಪಡೆದ ವಿನುತೆ ಅವರ ಆಸಕ್ತಿ ಇರುವುದು ಶೈಕ್ಷಣಿಕ ಕ್ಷೇತ್ರದಲ್ಲಿ. ಈಗಾಗಲೇ ಆ ವಿಷಯದಲ್ಲಿ ನಮಗೆ ಉತ್ತಮ ಲೇಖನವನ್ನು ನೀಡಿರುವ ವಿನುತೆ ಅವರ ಮತ್ತೊಂದು ಹವ್ಯಾಸ ಪರ್ವತಾರೋಹಣವೆಂದರೆ ನಿಮಗೆಲ್ಲಾ ಅಚ್ಚರಿಯಾಗಬಹುದಲ್ಲವೇ! ಅವರ ಈ ಲೇಖನದಲ್ಲಿ ಅವರು ಇದುವರೆಗೆ ಕೈಗೊಂಡ ಇಂತಹ ಪ್ರವಾಸಗಳ ಒಂದು ಅತ್ಯುತ್ತಮ ಚಿತ್ರವನ್ನು ಈ ಲೇಖನದ ಪದಜಾಲದಲ್ಲಿ ಬಂಧಿಸಿ ನಮ್ಮ ಮುಂದಿಟ್ಟಿದ್ದಾರೆ ”ಬೆಟ್ಟ ಗುಡ್ಡಗಳು ಪರ್ವತಗಳು ಕೈ ಬೀಸಿ ಕರೆದಾಗ” ಎನ್ನುತ್ತ, ಈ ಲೇಖನದಲ್ಲಿ.

ಕನ್ನಡ ಚಲನ ಚಿತ್ರ ‘ಕಾಕನ ಕೋಟೆ’ ಯಲ್ಲಿ ಬರುವ ಒಂದು ಹಾಡು – ನೇಸರ ನೋಡು ನೇಸರ ನೋಡು; ಮೂಡಾಣಾ ಬೈಲಿಂದ ಮೇಲಕ್ಕೆ ಹಾರಿ, ದೂರಾದಾ ಮಲೆಯಾ ತಲೆಯನ್ನೇ ಏರಿ; ನೇಸರ ನೋಡು ನೇಸರ ನೋಡು.”

ಆ ರೀತಿ ಮೂಡಣದಿಂದ ಹಾರುವ ಸೂರ್ಯನನ್ನು ಬೆಳ್ಳಂ ಬೆಳಿಗ್ಗೆ ನಾನು ನೋಡುವ ಸಂದರ್ಭಗಳು ಕಡಿಮೆ!  ಪಡುವಣಕ್ಕೆ ಇಳಿಯುವ ಸೂರ್ಯನನ್ನು ನೋಡಿ,  ಕ್ಯಾಮೆರಾದಲ್ಲಿ ಅವನನ್ನು ಹಿಡಿಯುವುದೇ ಹೆಚ್ಚು. ಅತ್ಯಂತ ಪ್ರೀತಿಯದು ಎಂದರೆ ಬೆಟ್ಟ ಗುಡ್ಡ ಪರ್ವತಗಳನ್ನು ಹತ್ತುತ್ತಾ “ದೂರಾದಾ ಮಲೆಯಾ ತಲೆಯನ್ನೇ ಏರಿ; ನೇಸರ ನೋಡು ನೇಸರ ನೋಡು”ವುದು.

ದೂರಾದಾ ಮಲೆಯನ್ನೇರಿ ನೇಸರವನ್ನು ನೋಡುವುದು, ಪ್ರಕೃತಿಯಲ್ಲಿ ಒಂದಾಗಿ ನನ್ನ ಸುತ್ತಲಿನ ಜೀವ/ಜೀವನವನ್ನು ವೀಕ್ಷಿಸುವುದು, ತನ್ಮಯತೆಯಿಂದ ಕೂತು ಸುತ್ತಲಿನ ಪ್ರಶಾಂತ ಮೌನ ಗೀತೆಯನ್ನು ಅಂತರಾಳಕ್ಕೆ ತೆಗೆದುಕೊಂಡು ಹೋಗಿ ನನ್ನ ಚೈತನ್ಯಕ್ಕೆ ಒಂದಷ್ಟು ಕಾವು ಕೊಡುವುದು – ಇವೆಲ್ಲವೂ ನನ್ನ ಪ್ರೀತಿಯ ಅನುಭವಗಳು. ಆಗಾಗ ಮಾತಿನ ಮಧ್ಯದಲ್ಲಿ ನಾನು ಹೇಳುವಂತೆ “ಬೆಟ್ಟ ಗುಡ್ಡ ಪರ್ವತಗಳು ನನ್ನನ್ನು ಕೈ ಬೀಸಿ ಕರೆಯುತ್ತವೆ.” ರೇಗಿಸಿದ, ಕೋಪಿಸಿಕೊಂಡ, ದುಃಖ ಹಂಚಿಕೊಂಡ, ಜೊತೆಯಲ್ಲಿ ನಕ್ಕ, ತಬ್ಬಿಕೊಂಡು ಮುತ್ತಿಟ್ಟ, ಸರಸ ಸಲ್ಲಾಪ ನಡೆಸಿದ, ಸ್ನೇಹ/ಪ್ರೀತಿ, ಕಾಳಜಿ/ಕರುಣೆ, ಬಾಂಧವ್ಯ/ತಾಯ ಕರುಳು ಎಂಬೆಲ್ಲಾ ಭಾವನೆಗಳನ್ನು ನಾನು ಆಗಾಗ ನದಿಗಳೊಡನೆ, ಸಮುದ್ರಗಳ ಜೊತೆ ಮತ್ತು ಬೆಟ್ಟಗಳೊಡನೆ  ಹಂಚಿಕೊಳ್ಳುತ್ತೀನಿ. ನಾನು ನೋಡಿದ, ಹತ್ತಿದ, ನಡೆದ, ಬೆಕ್ಕಸಬೆರಗಾದ, ತಲೆತಗ್ಗಿಸಿದ, ಕುತ್ತಿಗೆ ನೋಯುವ ಹಾಗೆ ತಲೆಯೆತ್ತಿ ನೋಡಿದ, ಸುಸ್ತಾದ, ಪ್ರೀತಿಸಿದ, ಮಾತನಾಡಿಸಿದ ಬೆಟ್ಟ ಗುಡ್ಡಗಳು, ಪರ್ವತಗಳ ಜಾದೂ ಬಗ್ಗೆ ಅಕ್ಷರಗಳಲ್ಲಿ ಹಿಡಿದಿಡುವುದು ಇಲ್ಲಿ ನನ್ನ ಪ್ರಯತ್ನ.

Tipu_Drop
ಟಿಪ್ಪು ಡ್ರಾಪ್ (CC)

nandiಎಲ್ಲಿಂದ ಶುರು ಹಚ್ಚಿಕೊಳ್ಳುವುದು ಎಂದುಕೊಂಡರೆ ತಕ್ಷಣಕ್ಕೆ ನೆನಪುಗಳ ಸರದಲ್ಲಿ ನಾನು ನಾನು ಎಂದು ಓಡೋಡಿ ಬರುವುದು ನಮ್ಮ ಬೆಂಗಳೂರಿನ ಬದಿಯ ನಂದಿ ಬೆಟ್ಟ. ಚಿಕ್ಕಂದಿನಲ್ಲಿ ಕುಟುಂಬದವರೊಡನೆ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಹೋದದ್ದು; ನಂತರ ಕಾಲೇಜಿನಲ್ಲಿ ಎನ್ ಸಿಸಿ ಕೆಡೆಟ್ ಆಗಿದ್ದಾಗ ಬೆಟ್ಟವನ್ನು ಹತ್ತಿದ್ದು – ಎರಡೂ ಬಹು ಭಿನ್ನವಾದ, ಆದರೆ ಮುದ ಕೊಡುವ ನೆನಪುಗಳು. ಬೆಟ್ಟ ಹತ್ತಿ, ಗಾಂಧೀ ಭವನ, ಹೂ ತೋಟ ಎಲ್ಲವನ್ನೂ ನೋಡಿ, ಬೆಟ್ಟದ ಮೇಲಿನ ಆ ವಿಶಾಲ ಬಂಡೆ ಮೈದಾನಗಳ ಉದ್ದ ಅಗಲ ಓಡಾಡಿದಾಗ ನನ್ನ ಪ್ರಪಂಚ ಅಲ್ಲೇ ಆ ಕ್ಷಣಕ್ಕೆ ಆ ಬಂಡೆಗಳಿಗೆ ಅಪ್ಪಿ ನಿಂತ ಭಾವನೆ. ಕಿವಿಯೊಳಗೆ, ತಲೆ ಕೂದಲಿನ ಒಳಗೆ ಬೆಟ್ಟದ ಮೇಲಿನ ಗಾಳಿ ನುಗ್ಗಿದಾಗ ಅದನ್ನು ಹಿಡಿದು ಆಕಾಶಕ್ಕೆ ಹಾರಿಬಿಡುವ ಆಸೆ. ಮೇಲಿಂದ ಕಾಣುವ ನಂದಿಯ ಭಟರನ್ನು ದ್ರುಷ್ಟಿಸಿದಾಗ ಅವರೆಲ್ಲರ ಕೈಗಳನ್ನು ಹಿಡಿದುಕೊಂಡು ಹಾರುವ ಬೆಟ್ಟಗಳ ಸಾಲನ್ನು ಆಕಾಶದಲ್ಲಿ ಬರೆಯುವ ತವಕ. ನನ್ನ ಕಲ್ಪನೆಯ ಕೈಗಳಲ್ಲಿ ದೊಡ್ಡದೊಂದು ಬಲೂನ್ ಇತ್ತು. ನಾನು ಆ ಬೆಟ್ಟದ ಮೇಲೆ ಹಕ್ಕಿಯಂತೆ ಹಾರುತ್ತಾ, ಬೆಟ್ಟದೊಡನೆ ಮಾತನಾಡಿದೆ – “ನಂದಿ, ನಿನ್ನ ಭುಜಗಳ ಆ ವಿಸ್ತಾರ, ಎಷ್ಟೇ ಎಗರಿ ಕುಣಿದರೂ ಅಲ್ಲಾಡದ ನಿನ್ನ ಬೆನ್ನು. ಆ ಗಂಡುಗಲಿ ಶಿವನೇ ಧನ್ಯ.”  ಟಿಪ್ಪು ಡ್ರಾಪ್ ಗೆ ಬಂದಾಗ ಎಲ್ಲಿಲ್ಲದ ಕೂತೂಹಲ. ತನ್ನ ವಿರುದ್ಧ ಸಂಚು ಮಾಡಿದವರನ್ನೂ, ಶತ್ರುಗಳನ್ನೂ, ಅಪರಾಧಿಗಳನ್ನೂ ಆಗಾಗ ಇಲ್ಲಿಗೆ ತಂದು ಅವರನ್ನು

ಬೆಟ್ಟದ ಮೇಲಿಂದ ಆಳದ ಕಮರಿಗೆ ತಳ್ಳುವ ಪರಪಾಠ ಟಿಪ್ಪುವಿಗೆ ಇತ್ತು ಎಂಬುದರ ಬಗ್ಗೆ ನಾನಾ ಕತೆಗಳನ್ನು ಕೇಳಿ, ಓದಿದ್ದದ್ದನ್ನು ಸ್ವತಹ ಕಣ್ಣಿಂದ ನೋಡುವಾಗ ಇಷ್ಟೇನಾ ಅನ್ನಿಸಿಬಿಟ್ಟಿತ್ತು. ಬೆಟ್ಟದ ತುದಿಯಲ್ಲಿ ನಿಂತು ಕೆಳಗೆ ಬಗ್ಗಿ ನೋಡಿ, “ಹೂಂ, ಅಷ್ಟೇನೂ ಆಳದ ಕಮರಿಯಲ್ಲ, ಆದರೆ, ತಳ್ಳಿದರೆ ತಲೆ ಒಡೆಯುವುದು ಸಾಧ್ಯ,” ಎಂದುಕೊಂಡು, ಅಲ್ಲಿಂದ ಬೆಟ್ಟದ ಗೋಡೆಯನ್ನು ಹಿಡಿದು ಕೆಳಗೆ ಇಳಿಯುವ ಯೋಚನೆಯನ್ನು ಜೊತೆಯಿದ್ದವರ ಹತ್ತಿರ ಹೇಳಿದಾಗ “ಮುಂದಿನ ಸಾರಿ ಬಂದಾಗ ಹಗ್ಗ ತಂದು ಸರಿಯಾದ ಕ್ರಮದಲ್ಲಿ ಆರೋಹಣ, ಅವರೋಹಣ ಮಾಡೋಣ” ಎಂದು ತೀರ್ಮಾನಕ್ಕೆ ಬಂದೆವು.

ಮುಂದೆ ಒಂದೇ ದಿನದಲ್ಲಿ ದೇವರಾಯನದುರ್ಗ, ಶಿವಗಂಗೆ ಬೆಟ್ಟಗಳನ್ನೂ ಹತ್ತಿದಾಗ ಬೇರೆ ಬೇರೆ ಕಥೆಗಳನ್ನು ಪ್ರವೇಶಿಸಿದ ಭಾವನೆ. ದುರ್ಗದ ಮೇಲೆ ದೀಪ ಹಚ್ಚುವ ಕಲ್ಲಿನ ಹಣತೆಯನ್ನು ಮುಟ್ಟಿದಾಗ ಅಲ್ಲೇ ನಿಂತು ಸಂಜೆಯಾದಾಗ ಸಾವಿರ ದೀಪಗಳನ್ನು ಹಚ್ಚಿ ಆ ಬೆಳಕಿನ ಲೋಕದ ವೈಭವಕ್ಕೆ ಸಾಕ್ಷಿಯಾಗುವ ಕನಸು. ಶಿವಗಂಗೆಯ ಮೇಲೆ ನಿಂತು ತಾನು ಕಮರಿಗೆ ಹಾರಿ ಸಾಯುವ ಮುನ್ನ ಹೊಯ್ಸಳವಂಶದ ಕುಡಿಗಾಗಿ ಹಾರೈಸಿದ ರಾಣಿ ಶಾಂತಲೆಯ ಮನಸ್ಥಿತಿಯನ್ನು ಕಲ್ಪಿಸಿಕೊಂಡು ” ಹಾ ಪ್ರಪಂಚವೇ, ಮಕ್ಕಳಾಗದಿದ್ದರೆ ಹೆಣ್ಣಿಗೆ ಬದುಕುವ ಹಕ್ಕು, ಜೀವಿಸುವ ಆಸೆಯೇ ನಶಿಸಿ, ಜೀವವನ್ನೇ ಬಿಡುವ ಹಾಗೆ ಪ್ರೇರೇಪಿಸುವ, ತ್ಯಾಗ ಮಾಡುವ ಈ ಪರಿಯ ಸಮಾಜವನ್ನು ನಿರ್ಮಿಸಿದವರ್ಯಾರು,” ಎಂಬ ಪ್ರಶ್ನೆ. ಬೆಟ್ಟವನ್ನು ಕೇಳಿ ನೀನ್ಯಾಕೆ ಶಾಂತಲೆಯನ್ನು ನುಂಗಿದೆ. ಉಹೂ, ಮಾತಾಡಲ್ಲ, ಹೋಗು, ಎಂಬ ಮುನಿಸು, ದುಃಖ. ಬೇಗ ಬೇಗ ಬೆಟ್ಟದ ಬೆನ್ನಿನ ಮೇಲೆ ಓಡಿ ಓಡಿ ಕೆಳಗಿನ ನನ್ನ ಕ್ಷೇಮ ಜಗತ್ತನ್ನು ತಲುಪಿ ಅಳುವನ್ನು ನುಂಗಿಕೊಳ್ಳುವ ಪ್ರಯತ್ನ.

ಮೈಸೂರಿನ ಚಾಮುಂಡಿ ಬೆಟ್ಟವನ್ನು ಹತ್ತಿ ಸುತ್ತಲಿನ ಹಳ್ಳಿಗಳನ್ನೂ, ಕೆರೆಗಳನ್ನೂ ನೋಡುವಾಗ ಅದೇನೋ ಭಿನ್ನತೆ ಕಾಣಿಸಿತ್ತು – ದೂರದ ಆ ಅರಮನೆ, ಅಲ್ಲಿ ನೋಡು ಮೈಸೂರ ಮೃಗಾಲಯ, ಆ ಕಡೆ ಇರುವುದೇ ಕಾವೇರಿ ನದಿ, ಮುಂದೆ ಸಾಗಿದರೆ ಶ್ರೀರಂಗ ಪಟ್ಟಣ, ಆ ಕಡೆ ಹೋದರೆ ನಾಗರಹೊಳೆ ದಾರಿ, ಆ ಕಡೆ ಬಂದರೆ ಬಂಡೀಪುರಕ್ಕೆ ಹಾದಿ, ಎಲ್ಲಾ ಕಡೆ ಕಾಣುವ ಕೋತಿಗಳು … ಇವೆಲ್ಲಾ ಬೆಂಗಳೂರಿನ ಹುಡುಗಿಗೆ ಅಚ್ಚರಿಯನ್ನು ಹುಟ್ಟಿಸಿ, ಮೈಸೂರಿನ ಜನಜೀವನದಲ್ಲಿ ಒಡೆಯರ ಮತ್ತು ಚಾಮುಂಡಿ ಬೆಟ್ಟದ ಪ್ರಭಾವ ಎಷ್ಟಿದೆ ಅನ್ನಿಸಿತ್ತು.

Western Ghats2
”ಬೆಳ್ಳನೆ ಪಿಸುಮಾತು” Photo by the Author

ಆ ಎಲ್ಲದರ ನಡುವೆ ಮೇಕೆದಾಟು ಪ್ರದೇಶದಲ್ಲಿ ಕಾವೇರಿ ಪಕ್ಕದ ಬೆಟ್ಟಗಳನ್ನು ಹತ್ತಿದ್ದು, ಕನಕಪುರ ರಸ್ತೆಯ ಆಚೆಈಚೆ ಇರುವ ಗುಡ್ಡಗಳನ್ನು ಸುತ್ತಿದ್ದು ನೆನಪಿನಂಗಳದಲ್ಲಿ ಸವಿಯಾಗಿವೆ. ಆಗಾಗ ಪಶ್ಚಿಮ ಘಟ್ಟಗಳಿಗೆ ಹೋಗುವುದು, ಅಲ್ಲಿ ಇಲ್ಲಿ ಟ್ರೆಕಿಂಗ್ ಹೋಗುವುದು ನಡೆದು ಪಶ್ಚಿಮಘಟ್ಟಗಳ ಮೋಡಿ ಗಾಢವಾಗಿ ಆವರಿಸಿತ್ತು. ಘಟ್ಟಗಳಲ್ಲಿನ ಜೀವಜಾಲದ ವೈವಿಧ್ಯತೆಯಷ್ಟೇ ಅಲ್ಲ, ಘಟ್ಟಗಳ ಪದರುಗಳಲ್ಲಿ ಮಟ್ಟಿನ ಮಣಿಗಳಂತೆ ಇದ್ದ ಮಲೆನಾಡಿನ ಸುಂದರ ಹಳ್ಳಿಗಳು ಆ ಕಾಲದಲ್ಲಿ ಹುಚ್ಚು ಹಿಡಿಸಿದ್ದವು. ಜೊತೆಗೆ ಬಾಲ್ಯದಿಂದಲೂ ಓದಿದ್ದ ಕನ್ನಡದ ಕವಿಗಳ ಬಣ್ಣನೆ, ಎಂ ಕೆ ಇಂದಿರಾ, ಕುವೆಂಪು, ತೇಜಸ್ವಿ, ಶಿವರಾಮ ಕಾರಂತರ ಕೃತಿಗಳು, ಅವರು ಸೃಷ್ಟಿಸಿದ ಪಾತ್ರಗಳು, ಪರಿಸರ, ಮೋಹಕತೆ, ಸಂಸ್ಕೃತಿ, ಆಹಾರ ವೈವಿಧ್ಯತೆ, ಇವೆಲ್ಲವೂ ರಾಗತಾಳ ಪಲ್ಲವಿ ಎಲ್ಲವನ್ನೂ ಸೇರಿಸಿ ಪಶ್ಚಿಮ ಘಟ್ಟಗಳೆಂಬ ಶಾಶ್ವತ ಸ್ವಪ್ನಲೋಕವನ್ನೇ ನನ್ನ ಆತ್ಮದಲ್ಲಿ ಅಚ್ಚು ಹಾಕಿದ್ದವು. ಎರಡು ವರ್ಷಗಳ ಹಿಂದೆ (2013) ಒಂದು ವಾರ ಪೂರ್ತಿ ಘಟ್ಟಗಳ ಊರುಗಳನ್ನು ಸುತ್ತಿದಾಗ ಅದೇ ಕಾದಂಬರಿಗಳು, ಪಾತ್ರಗಳು ಮರುಜೀವ ಪಡೆದಿದ್ದವು. ಆ ಹಸಿರು ಪದರು, ಶೋಲ ಕಾಡುಗಳು, ನದಿಗಳು, ಹಲಸಿನ ಹಣ್ಣು, ನೇಂದ್ರ ಬಾಳೆ, ಘಮ್ಮನೆ ಅಡಿಕೆ, ಹಚ್ಚ ಹರಿಸಿನ ತೋಟಗಳು, ನೋಡಿದ ತರತರದ ಹಾವುಗಳು; ಕಾಡುಗಳು; ಆನೆಹುಲ್ಲಿನ ಹಸಿರು ಜಮಖಾನಾದಲ್ಲಿ ನನ್ನನ್ನೇ ಸುತ್ತಿಕೊಂಡು ಉರುಳಿಕೊಂಡು ಹೋಗುವ ಯೋಚನೆಯನ್ನು ಕಾರ್ಯಗತವಾಗಿಸಿದ್ದೂ ನಿಜ!  -ಸ್ವರ್ಗವೇ ಸರಿ!

ಒಂದಲ್ಲ, ಎರಡಲ್ಲ, ಹಲವಾರು ಸ್ವರ್ಗಗಳನ್ನು ನಾವು ಮನುಷ್ಯರು ಕಲ್ಪಿಸಿಕೊಳ್ಳಬಹುದಲ್ಲವೇ! ಅದಕ್ಕೇನೋ ದುಡ್ಡು ಕೊಡಬೇಕಿಲ್ಲವಲ್ಲ! ಅಂತಹ ಮತ್ತೊಂದು ಪರ್ವತಗಳ ಸ್ವರ್ಗವೆಂದರೆ ಹಿಮಾಲಯ ಶ್ರೇಣಿಗಳು. ಅಹ! ಅದೇನು ಸೌಂದರ್ಯ, ಅದೇನು ಹಿರಿಮೆ, ಠೀವಿ, ಅದೇನು ಗಾಂಭೀರ್ಯ, ಹಿಮಾಲಯಕ್ಕೆ ಹಿಮಾಲಯವೇ ಸಾಟಿ!

ಘನವಾದ ಪರ್ವತಗಳ ಸಾಲುಗಳನ್ನು ಕಣ್ತುಂಬಾ ತುಂಬಿಕೊಂಡು ಜೊತೆಗೆ ಪರ್ವತಗಳ ಕಡಿದಾದ ಇಕ್ಕಟ್ಟಿನ ರಸ್ತೆಗಳಲ್ಲಿ ಇರುವೆಯಂತೆ ಸರಿಯುವ ಬಸ್ಸು ಲಾರಿಗಳನ್ನೂ ನೋಡಿ ನೋಡಿ ಸಾಕಾಗಿ, ಥೂ ಇದೇನಪ್ಪಾ ಎಂದು ಬೈದುಕೊಂಡದ್ದೂ ಇತ್ತು. ಪಕ್ಕದ ಆಳವಾದ ಕಣಿವೆಗಳಲ್ಲಿ ಹಿಂದೆಂದೂ ನೋಡಿರದ ರಭಸದಿಂದ ಹರಿಯುವ ಹಿಮನದಿಗಳನ್ನು ನೋಡಿ ಬೆದರಿ ನಮ್ಮ ಬಸ್ಸಿನಲ್ಲಿದ್ದ ಎಲ್ಲರ “ಜೈ ಬದ್ರಿನಾಥಾ, ಜೈ ಕೇದಾರನಾಥ್,  ಜೈ ವೈಷ್ಣೋದೇವಿ” ಎಂಬ ಘೋಷಣೆಗಳಿಗೆ ನಾನೂ ಕೋರಸ್ ಕೊಟ್ಟಿದ್ದೆ. ವೈಷ್ಣೋದೇವಿ ಪರ್ವತವನ್ನು ಮೆಟ್ಟಿಲು ಬಳಸಿ ಹತ್ತುತ್ತಾ ಹೋದಾಗ ಆ ಗುಹೆ ಇಲ್ಲೇ ಎಲ್ಲೋ ಕೆಳಗೆ ಇರಬಾರದಾಗಿತ್ತೆ ಅನ್ನಿಸಿತ್ತು. ವೈಷ್ಣೋದೇವಿಯನ್ನು ನೋಡಿಲು ರಾತ್ರಿಯಿಡೀ ನಡೆದು, ಮೆಟ್ಟಿಲು ಹತ್ತಿ, ಜೊತೆಗಿದ್ದ ಕುಟುಂಬ/ಬಳಗದವರೊಡನೆ ಮಾತಾಡಿದ್ದು, ನಕ್ಕಿದ್ದು, ದಾರಿಗುಂಟಾ ಅದುಇದು ತಿಂದು ಬಾಯಾಡಿಸಿದ್ದು, ಜೈ ಮಾತಾಜಿ ಎಂದು ಜೈಕಾರ ಹಾಕಿದ್ದು, ಬೆಳಗಿನ ಜಾವ ಆ ಕೊನೆಯಿಲ್ಲದ ಕ್ಯೂನಲ್ಲಿ ಉಶ್ಶಪ್ಪಾ ಎಂದು ಕೂತಿದ್ದು – ಒಂದೇ, ಎರಡೇ ನೆನಪುಗಳು! ತಲೆಮೇಲೆ ತಮ್ಮ ತೂಕಕ್ಕಿಂತಲೂ ಹೆಚ್ಚಿನ ಸಾಮಾನು ಹೊರುವ ಬಡ ಘೂರ್ಕ ಜನರಿಗೆ ಎಂದು ಬೆಂಗಳೂರಿನಿಂದ ಅಮ್ಮ ಸಂಗ್ರಹಿಸಿದ್ದ ಹಳೆಬಟ್ಟೆಗಳನ್ನು, ಹಾಸಿಗೆ ಹೊದಿಕೆಗಳನ್ನೂ, ಪಾತ್ರೆಗಳನ್ನೂ ಅವರಿಗೆ ಕೊಟ್ಟಾಗ ಅವರ ಮುಖದ ದೊಡ್ಡ ನಗು ಈಗಲೂ ನನ್ನ ನೆನಪಿನ ಚೀಲದಲ್ಲಿ ಭದ್ರವಾಗಿದೆ.

ಗೊಮುಖದಲ್ಲಿ ಗಂಗೆ: “ಬಾಲೆ ಬಾರೆ ಮೊಗವ ತೋರೆ ಗಂಗೆ” Photo by the author

ನನಗೆ ಹಿಮಾಲಯದ ಪರಿಚಯ ಸರಿಯಾಗಿ ಆಗಿದ್ದು ನಾನು ಮೊದಲ ಪ್ರವಾಸದಲ್ಲಿ ಗಂಗೋತ್ರಿಯಿಂದ ಗೋಮುಖಕ್ಕೆ ನಡೆದಾಗ; ಎರಡನೇ ಪ್ರವಾಸದಲ್ಲಿ ಯಮುನೋತ್ರಿ ಮತ್ತು ಕೇದಾರನಾಥಗಳಿಗೆ ಕಾಲ್ನಡಿಗೆ ಕೈಗೊಂಡಾಗ. ಗಂಗೋತ್ರಿಯಿಂದ ಗೋಮುಖಕ್ಕೆ ನಡೆಯುತ್ತಾ, ಪರ್ವತಗಳನ್ನು ಏರುತ್ತಾ ಹೋದಂತೆ ಪಕ್ಕದಲ್ಲಿ ಮೈಕೈ ತುಂಬಿಕೊಂಡು ಹರಿಯುತ್ತಿದ್ದ ಗಂಗೆ, ಯಮುನೆಯರೆಲ್ಲಾ ಬರುಬರುತ್ತಾ ಸಣ್ಣಗಾಗಿಬಿಟ್ಟರು. ಗಂಗೊತ್ರಿಯಿಂದ ಹೊರಟು ಗೋಮುಖಕ್ಕೆ ಇನ್ನೂ ಅರ್ಧ ದಾರಿ ಇದೆ ಎನ್ನುವಷ್ಟರಲ್ಲೇ ಹಸಿರು ಮಾಯವಾಗಿ ಬರೇ ಬೂದು ಬಣ್ಣದ, ಅಲ್ಲಲ್ಲಿ ಕಾಣಿಸುವ ಪೊದರುಗಳ ಕಣಿವೆಗಳು ಯಾ ಸುತ್ತುವರೆದ ಹಿಮ ಶಿಖರಗಳು. ನಡುವೆ ಹರಿವ ಬಾಲಕಿ ಗಂಗೆ. ಇದೇನಪ್ಪ, ಹಸಿರಿಲ್ಲದ, ಹೆಚ್ಚಿನ ಆಕ್ಸಿಜನ್ ಇಲ್ಲದ ಈ ಪ್ರದೇಶ ನಿಜಕ್ಕೂ ಹಿಮಾಲಯವೇ ಅನ್ನಿಸಿತ್ತು. ಜೊತೆಗೆ ದೊಡ್ಡ ದೊಡ್ಡ ಗ್ಲೇಸಿಎರ್ ಗಳು, ಆಗಾಗ ನದಿಯಲ್ಲಿ ಹರಿದು ಬರುತ್ತಿದ್ದ ದೊಡ್ಡ ದೊಡ್ಡ ಹಿಮ ಬಂಡೆಗಳು. ಹಿಮದ ಗೋಡೆಗಳಿಂದ ಹಠಾತ್ತಾಗಿ ಕೆಳ ಕುಸಿಯುತ್ತಿದ್ದ ಬ್ರುಹಾದಾಕಾರದ ತುಣುಕುಗಳು. ಗೋಮುಖವನ್ನು ತಲುಪಿ ಗವಿಯಿಂದ ಹೊರಗೆ ಬರುತ್ತಿದ್ದ ಎಳೆ ಬಾಲಕಿ ಗಂಗೆಯನ್ನು ಮೊದಲ ಬಾರಿ ನೋಡಿದಾಗ ರೋಮಾಂಚನ. ಅದೇಕೋ ಏನೋ, ಗವಿಯೊಳಗೆ ಸಾಗಿ, ಅವಳೊಡನೆ ಕೂತು ಎರಡೂ ಪಾದಗಳನ್ನು ಜೋಡಿಸಿ, ದುಂಡನೆ ಐದು ಕಲ್ಲುಗಳನ್ನು ಹೊಂದಿಸಿಕೊಂಡು ಅವಳೊಡನೆ ಕಾಲ್ಮೆಲಿನ ಐದು ಕಲ್ಲಾಟವನ್ನು ಆಡುವ ಅಸೆಯಾಗಿಬಿಟ್ಟಿತ್ತು. ಅವಳ ಮುಗ್ಧತೆಯನ್ನು, ಎಳೆತನವನ್ನು, ಯಾವುದರ ಪರಿವೆಯೂ ಇಲ್ಲದೆ ತನ್ನ ಪಾಡಿಗೆ ತಾನು ತಾಯ ಗರ್ಭದಿಂದಲೇ ಎಂಬಂತೆ ನಿದಾನವಾಗಿ, ಶಾಂತವಾಗಿ ಗವಿಯಿಂದ ಹೊರಬರುವ ಅವಳ ಜನ್ಮವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವಾಗ ಅವಳೊಡನೆ ನನ್ನ ಮಾತು.

ಗೋಮುಖವನ್ನು, ಆ ರಮಣೀಯ ಸೌಂದರ್ಯವನ್ನು, ಹಿಮ ನೀರ್ಗಲ್ಲ ಗೋಡೆಗಳು, ಶಿಖರಗಳನ್ನು ಬಿಡುವ ಮನಸ್ಸೇ ಇರಲಿಲ್ಲ. ಅಲ್ಲಿಂದಾಚೆ ಇರುವ ಏರು ಪರ್ವತಗಳಿಗೆ ಹೋಗಿ ಅಲ್ಲಿನ ಗಂಗೆಯನ್ನು, ಹೂ ಕಣಿವೆಯನ್ನು ನೋಡುವ ಆಸೆ ಪೂರೈಸದೇ ನಿರಾಸೆಯಾಗಿತ್ತು.

ಮುಂದಿನ ಬಾರಿಯ ಹಿಮಾಲಯ ಪ್ರವಾಸದಲ್ಲಿ ಚಾರಣ ಕಾಲ್ನಡಿಗೆಯಿಂದ ಹತ್ತಿದ ಯಮುನೋತ್ರಿ! ಇಡೀ ಗುಂಪಿನಲ್ಲಿ ನಾನು ಮತ್ತು ನಮ್ಮ ಕುಟುಂಬದ ಪರಿಚಯದ ೬೫ ರ ಲಲಿತಮ್ಮ (ನನ್ನ) ಟೀಚರ್ , ಇಬ್ಬರೇ ಯಮುನೋತ್ರಿಯನ್ನು ನಡಿಗೆಯಿಂದ, ಒಂದೇ ದಿನದಲ್ಲಿ ಹತ್ತುವ/ಇಳಿಯುವ ನಿರ್ಧಾರ ಮಾಡಿದಾಗ ಎಲ್ಲರೂ ಬೈದಿದ್ದೇ  ಬೈದಿದ್ದು. ಸಣ್ಣ ಕಾಷ್ಠದ, ಬಿಳಿಸೀರೆಯ ಲಲಿತಮ್ಮ ಟೀಚರ್ ಬೆಳ್ಳಗಿನ ಹಂಸದಂತೆ ಹಾರಿ ಹಾರಿ ನಡೆದೇ ಬಿಟ್ಟರು, “ಎ ಬಾರೆ ನೀನು, ನಾನು ನಿಧಾನವಾಗಿ ಹೋಗ್ತಾ ಇರ್ತೀನಿ” ಎನ್ನುತ್ತಾ! ನಾನೊಬ್ಬಳೆ ದಾರಿಯಲ್ಲಿ ಸಿಗುವ ಕುದುರೆ ಪ್ರಯಾಣಿಗರನ್ನು, ಯಾತ್ರಾರ್ಥಿಗಳನ್ನು ಬೆನ್ನ ಮೇಲೆ ಹೊತ್ತು ಪರ್ವತ ಹತ್ತುತ್ತಿದ್ದ ಘೂರ್ಕ ಜನರನ್ನು ನೋಡಿ ಮುಂದೆ ಸಾಗುತ್ತಾ, ಆಗಾಗ ನಿಂತು ಕಣಿವೆಯಾ ಹಸಿರನ್ನು, ಬಣ್ಣಬಣ್ಣದ ಹೂಗಳನ್ನೂ, ಆಳದಲ್ಲಿ ಹರಿಯುತ್ತಿದ್ದ ಯಮುನೆಯನ್ನೂ ಕ್ಯಾಮೆರಾದಲ್ಲಿ ಹಿಡಿಯುತ್ತಿದ್ದೆ. ಸರಿಯಾಗಿ ಆಕ್ಸಿಜನ್ ಸಿಗಲಿಲ್ಲವೆಂದೋ, ಗಂಟಲು ಹೊಟ್ಟೆ ಎರಡೂ ಒಣಗಿ ಹಸಿದೂ ಎಂದೋ ಏನೋ ಮೇಲಿನ ದೇವಸ್ಥಾನ ತಲುಪುವಷ್ಟರಲ್ಲಿ ಮೈಯಲ್ಲಿ ಉಸಿರೇ ಇರಲಿಲ್ಲ. ಲಲಿತಮ್ಮ ಟೀಚರ್ “ಏನೇ, ಎಷ್ಟು ಹೊತ್ತು ಅಂತಾ ಕಾಯೋದು ನಿನಗೆ. ಬಿಸಿ ಕುಂಡದಲ್ಲಿ ಸ್ನಾನ ಮಾಡೋಣ ಬಾ, ನಂತರ ದೇವರ ದರ್ಶನ,” ಎಂದರು, ಶಿವನೋ, ಯಮನೂ, ಯಮುನೆಯೊ – ಯಾರೂ ಬೇಕಿರಲ್ಲಿಲ್ಲ ಆಗ – “ಕುಡಿಯಲು ನೀರು ಕೊಡಿ,” ಅಂದಿದ್ದಷ್ಟೇ. ನನಗೆ ನೀರು ಕೊಟ್ಟು ಅವರು ಸ್ನಾನಕ್ಕೆ ಹೋದರೆ ನಾನು ಅಲ್ಲೇ ಕೂತು ಹಿಮದಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು, ಸಣ್ಣದಾಗಿ ಹರಿಯುತ್ತಿದ್ದ ಯಮುನೆಯನ್ನು ನೋಡಿ ಆನಂದಿಸಿ, ಸ್ವಲ್ಪ ಡೀಪ್ ಬ್ರೀತಿಂಗ್ ಮಾಡಿ ಶ್ವಾಸಕೋಶಗಳಿಗೆ ಪುನರ್ಜನ್ಮ ಕೊಟ್ಟೆ! “ಯಮುನಮ್ಮಾ, ಸ್ನಾನ ಮಾಡಿ ಶುಚಿಯಾಗದೆ ಬಂದ್ಯಾ ಅಂತ ಕೇಳಬೇಡ ಕಣಮ್ಮಾ, ನೀರು ಕುಡಿಯದೆ ಪರ್ವತ ಹತ್ತಿ ಬಂದಿದೀನಿ ನೋಡು, ಅದನ್ನೇ ಒಪ್ಪಿಕೊ,” ಅಂದು ಯಮುನೆಗೆ ಸ್ವಲ್ಪ ಪೂಸಿ ಹೊಡೆದೆ.

ಹಾಗೆ ಕೇದಾರಕ್ಕೆ ನಡೆಯುವಾಗ ಮೊದಲ ಬಾರಿಗೆ ಹಿಮ ಸುರಿದಾಗ ಅದು ನಿಜವೋ, ಹಿಮವೋ, ಆಕಾಶದಿಂದ ಯಾರೋ ಅಗೋಚರವಾಗಿ ಸುರಿದ ಹೂ ಮಳೆಯೋ ತಿಳಿಯದೆ ಚಕಿತವಾಗಿ ಕುಣಿದಿದ್ದೆ. ಮೇಲಿದ್ದ ಎತ್ತರದ ಶಿಖರದ ಮುಖ ದೊಡ್ದದಾಗಿ ಹಿಮದ ಉಸಿರನ್ನೆಳೆದುಕೊಂಡು ಲಘುವಾಗಿ ಒಂದು ಹಗುರವಾದ ಉಫ್ ಉಸಿರನ್ನು ಬಿಟ್ಟ ಹಾಗೆ ನನ್ನ ಮುಖದ ಮೇಲೆ ಬಿದ್ದ ಆ ಹಿಮದ ಹಿತವಾದ ಮಳೆ ಆಗ ಒಂದು ಅದ್ಭುತ ಅನುಭವ. ಇದ್ದಕ್ಕಿದ್ದಂತೆ ಎಲ್ಲಿಂದಲೋ ತೆವಳಿ ಬಂದ ಆಕಾಶದ ತುಣುಕುಗಳು, ಮೋಡಗಳು ಮೈಮನಸ್ಸುಗಳನ್ನು ಆವರಿಸಿ ಕಚಗುಳಿ ಇಟ್ಟು, ಮುತ್ತ ಕೊಟ್ಟು ಅದೇನೋ ಅವಸರ ಎಂಬಂತೆ ಹಾರಿಹೋಗುತ್ತಿದ್ದವು. ಬದುಕಿ ಬಾಳಿದರೆ ಇದೆ ಈ ಹಿಮಾಲಯದಲ್ಲೇ, ಈ ಹಿಮವತ್ ಪರ್ವತಗಳಲ್ಲೇ ಎಂದು ನಿರ್ಧಾರವನ್ನೂ ಮಾಡಿಬಿಟ್ಟೆ. ಇದಕ್ಕಿಂತಲೂ ಬೇರೆ ಜೀವನವುಂಟೆ ಎಂದೆನಿಸಿಬಿಟ್ಟಿತ್ತು.

ಅದೇ ಚಕಿತತೆ, ಪರ್ವತಗಳ ಮೇಲಿನ ಮೋಹ ನನ್ನನ್ನು ಬಿಟ್ಟೇ ಬಿಟ್ಟಿಲ್ಲ. ಕೆಲ ವರ್ಷಗಳ ನಂತರ ಯೂರೋಪಿನ ಆಲ್ಪ್ಸ್ ಪರ್ವತಗಳ ಮೇಲೆ – ಬೇರೆ ಬೇರೆ ದೇಶಗಳ ಸರಹದ್ದುಗಳಲ್ಲಿ – ನಡೆದಾಡಿದಾಗ, ಹಿಮದಲ್ಲಿ ಜಾರಿ ಆಟವಾಡಿದಾಗ, ಪುನಃ ಅವುಗಳು ಪುಂಗಿ ಊದಿ ಮೋಡಿ ಮಾಡಿದ್ದವು. ಆ ದಿನಗಳಲ್ಲಿ ನಾನು ಬ್ಯಾಕ್ ಪ್ಯಾಕ್  ಹೆಗೆಲಿಗೇರಿಸಿಕೊಂಡು ಯುರೋಪ್ ಸುತ್ತಿದ್ದು. ಅಲ್ಲೆಲ್ಲಾ ಟೆಂಟ್ ಹೊಡೆದುಕೊಂಡು ನೆಲದ ಮೇಲೆ ಕುಳಿತು ಚಿಕ್ಕ ಸ್ಟೋವ್ ಇಟ್ಟುಕೊಂಡು ಅಡುಗೆ ಮಾಡಿದ್ದೂ, ಮಲಗಿ ಆಕಾಶ ನೋಡಿದ್ದು, ಬೇಕಾದಷ್ಟು ನಡೆದಿದ್ದು, ಹತ್ತಿದ್ದು. ಒಮ್ಮೆ ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಇಟಲಿ ದೇಶಗಳು ಸೇರುವ ಸರಹದ್ದಿನಲ್ಲಿ ಶಿಖರದ ಮೇಲೆ ನಿಂತಾಗ ಭರ್ರನೆ ಬೀಸುತ್ತಿದ್ದ ಗಾಳಿಗೆ ನಾನು ಹಾಕಿಕೊಂಡಿದ್ದ ಎಲ್ಲಾ ಬಟ್ಟೆಗಳ ಪದರುಗಳು ಬಲೂನಿನಂತೆ ಊದಿಕೊಂಡು ನಾನೂ ಹಾರಿ marypoppins3ಹೋಗುವವಳಿದ್ದೆ!! ಅದರ ಫೋಟೋ ನೋಡಿದರೆ ಈಗಲೂ ನಗು – “ಹಾಗೆ ಹಾರಿ ಹಾರಿ ಹಿಮಾಲಯಕ್ಕೆ ಹೋಗುವ ಹಂಚಿಕೆಯಿತ್ತಾ,” ಎಂದು ಜೀಬೀ ಛೇಡಿಸುತ್ತಾರೆ. ಅದೇನೋ ಗೊತ್ತಿಲ್ಲ, ಆದರೆ ಆ ಎಲ್ಲ ಶಿಖರಗಳ ಕೈ ಹಿಡಿದು ಆಕಾಶದಲ್ಲಿ ಪರ್ವತಗಳ ರಂಗೋಲಿಯನ್ನು ಬರೆಯುವ ಆಸೆಯಂತೂ ಆಗಿತ್ತು ಅಂತ ನನ್ನ ಉತ್ತರ!

ಅಂತಹ ಆಸೆ ಕೆನಡಾದ ಹಿಮ ತುಂಬಿದ ರಾಕೀಸ್ ಪರ್ವತ ಶ್ರೇಣಿಯನ್ನು ನೋಡಿದಾಗ ಬರಲಿಲ್ಲ. ಬದಲಿಗೆ ಹಿಮ ಪರ್ವತಗಳಲ್ಲದೆ ದಕ್ಷಿಣ ಫ್ರಾನ್ಸ್ ನ ಲಂಗ್ವಾದೊಕ್, ಲೊಆರ್, ಆರ್ದೆಶ್ ಪ್ರದೇಶಗಳ ಬೆಟ್ಟಗಳನ್ನು ನದಿಗಳನ್ನೂ ಕಂಡಾಗ ಹಿಮ ಬೇಡಪ್ಪಾ, ಇಲ್ಲೇ ಈ ಹಿತವಾದ ಹವಾಮಾನದಲ್ಲಿ ಗೂಟ ಹೊಡೆದುಕೊಂಡು ಇದ್ದುಬಿಡುವ ಎಂದಿತ್ತು ಚಪಲಚಿತ್ತ. ಇನ್ನು ಇಂಗ್ಲೆಂಡಿನ ಲೇಕ್ ಡಿಸ್ಟ್ರಿಕ್ಟ್ ನ ಬೆಟ್ಟಗಳನ್ನು ಹತ್ತಿದ್ದು ಅಲ್ಲಿನ ಸೊಬಗನ್ನು ಆಸ್ವಾದಿಸಲು ಬರುವ ನೂರಾರು ಜನರ ಸಿದ್ಧತೆಗಳನ್ನು ನೋಡಿ ಅಚ್ಚರಿಪಟ್ಟದ್ದು ಈಗ ಹಳತಾಗಿ ನಾನೂ ಆ ಜನರ ಪಟ್ಟಿಯಲ್ಲಿ ಸೇರಿಕೊಂಡಿದ್ದೀನಿ.

ಒಮ್ಮೆ ಗೆಳತಿಯೊಬ್ಬಳು ನನ್ನನ್ನ ಕೇಳಿದ್ದಳು – ಮಗು ಹುಟ್ಟಿದ ಮೇಲೆ ನೀನು ತುಂಬಾ ಆಸೆಯಿಂದ ಮಾಡಬೇಕು ಅಂತಿರುವುದೇನು? ನಾನೆಂದಿದ್ದೆ – “ಮಗು ಬೆಳೀತಾ ಇರುವಾಗ ಅವಳ/ಅವನ ಜೊತೆಯಲ್ಲಿ ಪ್ರಪಂಚದ ಪರ್ವತಗಳ ಪ್ರವಾಸ ಕೈಗೊಂಡು ಅವುಗಳನ್ನ ಹತ್ತಬೇಕು ಅಂದೇ ನನ್ನ ಆಸೆ.” ಸದ್ಯಕ್ಕಂತೂ ನಾನಿನ್ನೂ ನೋಡದ ದಕ್ಷಿಣ ಅಮೇರಿಕಾದ, ನ್ಯೂಜ್ಹೀಲ್ಯಾಂಡ್ ನ ಪರ್ವತಗಳು, ಆಫ್ರಿಕಾದ ಕಿಲಿಮಾನ್ಜೆರೋ, ಭಾರತದ ಅರುಣಾಚಲದ ಮತ್ತು ಎವರೆಸ್ಟ್ ಪರ್ವತಗಳನ್ನು ನೆನೆಸಿಕೊಂಡು “ಒಂದಲ್ಲಾ ಒಂದು ದಿನ ನಿಮ್ಮನ್ನೆಲ್ಲಾ ನೋಡಲು ಬರುತ್ತೀನಿ,” ಎಂದು ಸಂದೇಶ ಕಳಿಸುತ್ತಾ ಇದ್ದೀನಿ.

8 thoughts on “ಬೆಟ್ಟ ಗುಡ್ಡಗಳು ಪರ್ವತಗಳು ಕೈ ಬೀಸಿ ಕರೆದಾಗ … ಡಾ. ವಿನತೆ ಶರ್ಮ

 1. ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. Yes, it is a spiritual experience for me.

  Like

 2. ನಿಮ್ಮಲೇಖನ ಓದಿದ ಮೇಲೆ ಗುಡ್ಡ ಬೆಟ್ಟಗಳನ್ನು ಏರುವ ಆಸೆ ಮೂಡುತ್ತಿದೆ. ನಿಮ್ಮ ಬರಹದಲ್ಲಿರುವ ಆಪ್ತತೆ ತುಂಬ ಇಷ್ಟವಾಯಿತು. ಇಂಥಾ ಒಳ್ಳೇ ಲೇಖನವನ್ನು ಉಣಬಡಿಸಿದ್ದಕ್ಕೆ ತುಂಬ ಧನ್ಯವಾದಗಳು.

  – ಕೇಶವ

  Like

 3. ಕಳೆದ ವಾರ ಕಂಪ್ಯೂಟರ್ ಕೈಕೊಟ್ಟು ನನ್ನ ಹಿನ್ನುಣಿಕೆಯನ್ನು ಇಂಗ್ಲೀಷಿನಲ್ಲಿ ಬರೆಯಬೇಕಾಯ್ತು. ಇವತ್ತು ಸಿರಿಗನ್ನಡ ಮತ್ತೊಮ್ಮೆ ನನ್ನ ಗಣಕಯಂತ್ರದಲ್ಲಿ ಮುದ್ದಾಗಿ ನುಡಿಯಲು ಶುರುಮಾಡಿದೆ. ವಿನುತೆ ಅವರ ಬೆಟ್ಟ ಗುಡ್ಡ, ಪರ್ವತಗಳನ್ನೇರಿದ ಸಾಹಸ ಕಥೆ ನನ್ನ ಮೈಯಲ್ಲಿ ರೋಮಾಂಚನವನ್ನೆಬ್ಬಿಸಿತು. ನಾನೂ ಮೈಸೂರಿನ ನಿವಾಸಿ, ಹಾಗಾಗಿ ಅವರ ಲೇಖನದ ಮೊದಲಲ್ಲಿ ಹೆಸರಿಸಿದ ಸ್ಥಳಗಳು ನನ್ನ ಮನದಲ್ಲಿ ಹಸಿರಾಗಿವೆ. ಕಾಲೇಜಿನಲ್ಲಿದ್ದಾಗ ತೇನಸಿಂಗನ ಆತ್ಮಕಥೆ ಓದಿದ್ದೆ. ತಕ್ಷಣವೇ Mountaineering ಹವ್ಯಾಸವನ್ನು ಬೆಲೆಸಿಕೊಳ್ಲಬೇಕೆಂಬ ಸ್ಫೂರ್ತಿ ಸಿಕ್ಕಿತ್ತು. ಆದರೆ ಅದು ಅಷ್ಟು ಸುಲಭವಲ್ಲ. ಕಡೆಗೊಮ್ಮೆ ಸಸ್ಯಶಾಸ್ತ್ರ ವಿದ್ಯಾರ್ಥಿಯಾಗಿ ಪಷ್ಚಿಮ ಘಟ್ಟಗಳನ್ನು ಏರುವ, ನಂತರ ಹಿಮಾಲಯದ ಮಡಿಲಲ್ಲಿರುವ ಕಠಮಂಡು, ಕೇದಾರ ನಾಥವನ್ನೇರುವ ಅವಕಾಶ ಸಿಕ್ಕು ಆ ಕ್ಷಣಗಳನ್ನು ಮನಃಪೂರ್ತಿಯಾಗಿ ಸವಿದಿದ್ದೆ. ವಿನುತೆ ಅವರ ಅನುಭವ ನಿಜಕ್ಕೂ ಆ ನೆನಪುಗಳನ್ನು ತಾಜಾಗೊಳಿಸಿತು. ಲೇಖನದ ಮೊದಲಲ್ಲಿ ಅವರು ಬರೆದ “ ನೇಸರ ನೋಡು ನೇಸರಾ ನೋಡು“ ಈ ಲೇಖನಕ್ಕೆ ಮಹತ್ವದ ಸೊಬಗನ್ನು ನೋಡಿದೆ. ಇಂತಹ ಅನುಭವವನ್ನು ನೀಡಿದ ವಿನುತೆ ಅವರಿಗೆ ಧನ್ಯವಾದಗಳು .
  ಉಮಾ ವೆಂಕಟೇಶ್

  Like

 4. It is a wonderful article by Vinute. Reader can start dreaming too of climbing these fantastic mountains she describes in her article. I have already started thinking Why not!
  Uma

  Like

 5. ವಿನತೆಯವರ ಈ ಲೇಖನ ಕೆಲವರಲ್ಲಿಯಾದರೂ ನಾವೆಲ್ಲಾ ಗುಣಗುಣಿಸಿದ ಆ Sound of Music ಚಿತ್ರದ ಸಾಲುಗಳನ್ನು ನೆನಪಿಗೆ ತರ ಬಹುದು: Climb ev’ry mountain
  Ford ev’ry stream
  Follow ev’ry rainbow
  Till you find your dream.
  ನನ್ನನ್ನೋಳಗೊo ಡು ಎಲ್ಲರಿಗೂ ಆ ಕನಸು; ಆದರೆ ಅದನ್ನು ಸ್ವಲ್ಪ ಮಟ್ಟಿಗಾದರೂ ಕೈಗೂಡಿಸಿಗೊoಡವರು ವಿನತೆ ಅಂಥ ಕೆಲವೇ ಜನರು, ತಮ್ಮ ಸಾಮರ್ಥ್ಯದಿಂದ, ಆಸಕ್ತಿ ಮತ್ತಿ ಸಮಯಸಾಧನೆಯಿಮ್ದ. ಆ ಚಿತ್ರದ ಮರಿಯಾ ಗುಡ್ಡವನ್ನರಸಿ ಅದರ ಮೇಲೆ ಓಡಿ ಹೋಗುವದು ಅವಳ ಆಧ್ಯಾತ್ಮದ ಗುರಿಯತ್ತ ಎಂದು ಓದಿದ್ದೆ. ಹಾಗೆಯೇ ನಮ್ಮನ್ನೂ ಆ ಎತ್ತರಕ್ಕೆ ಹೋಗಲು ಕರೆಯುತ್ತವೆ. ತಮ್ಮ ಅನುಭವಗಳ ಸುಂದರ ವರ್ಣನೆಯನ್ನಿತ್ತ ಲೇಖಕಿ ನಮ್ಮನ್ನೂ ಆ ಲೋಕಕ್ಕೆ ಎಳೆದೊಯ್ಯುತ್ತಾರೆ. ಎಷ್ಟೆಲ್ಲಾ ಗುಡ್ಡಗಳನ್ನು ಸುತ್ತಿದ್ದಾರೆ, ಜಗತ್ತಿನ ಅನೇಕ ಖಂಡಗಳಲ್ಲಿ! ಕೆಲವಾದರೂ ಸೂರ್ಯೋದಯ ಕಂಡಿದ್ದಾರೆ, ಅನೇಕ ಸೂರ್ಯಾಸ್ತಗಳು. ಆ ದೃಶ್ಯ, ಅನುಭವ, ಅದ್ವಿತೀಯ. ಇದರಲ್ಲಿ ‘ಬಾಲೆ, ಬಾರೆ ಮೊಗವ ತೋರೆ’, ‘ಬೆಳ್ಳನೆ ಪಿಸು ಮಾತು’ ಇತ್ಯಾದಿ ಕಾವ್ಯಮಯ ವರ್ಣನೆಯೂ ಇದೆ.
  ಅಷ್ಟೇ ಅಲ್ಲ, ಬೆಳೆಯುತ್ತಿರುವ ತನ್ನ ಮಗುವನ್ನು ಜೋತೆಗೆ ಸೇರಿಸಿ ‘ಪ್ರಪಂಚದ ಪರ್ವತಗಳನ್ನೆಲ್ಲಾ ಹತ್ತುವ ಕನಸ’ನ್ನು ಇಟ್ಟುಕೊಂಡಿದ್ದಾರೆ! ಅದಕ್ಕೆ ಬೇಕು ಆ ಪದ್ಯದ ಮುಂದಿನ ಸಾಲುಗಳಲ್ಲಿ ಹೇಳಿದಂತೆ:
  A dream that will need
  All the love you can give.
  ಅವರ ಈ ವೇದಿಕೆಗೆ ಅವರ ಮೊದಲ ಕೊಡುಗೆಯನ್ನು ಓದಿದವರಿಗೆ ಆ ಪ್ರೀತಿಯ ಪುರಾವೆ ಸಿಗುತ್ತದೆ!

  Like

 6. ಒಬ್ಬ ಅದ್ಭುತ ವ್ಯಕ್ತಿಯನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು
  -ವಸುಮತಿ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.